Sunday, April 7, 2024

ಯಕ್ಷ ಪ್ರಶ್ನೆ 84 (Yaksha prashne 84)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 83 'ಲಜ್ಜೆ' ಎಂದರೇನು ?

ಉತ್ತರ - ಕೆಟ್ಟ ಕೆಲಸದಿಂದ ದೂರವಿರುವುದು.  

ಲಜ್ಜೆ ಎಂದರೆ ನಾಚಿಕೆ. ಇದನ್ನು ಅತ್ಯಂತ ಶ್ರೇಷ್ಠಗುಣ ಎಂದು ಗುರುತಿಸಲಾಗಿದೆ. ಯಾವ ವಿಷಯದಲ್ಲಿ ಅಥವಾ ಯಾವ ಸಮಯದಲ್ಲಿ ಇದನ್ನು ಬಳಸಿಕೊಂಡರೆ ನಮಗೆ ಹಿತವಾಗುವುದು? ಎಂಬುದು ಇಲ್ಲಿನ ಪ್ರಶ್ನೋತ್ತರದ ಆಶಯವಾಗಿದೆ. ಕೆಟ್ಟ ಕೆಲಸದಿಂದ ದೂರವಿರುವ ಸ್ವಭಾವವನ್ನು ಲಜ್ಜೆ ಎಂದು ಕರೆಯಲಾಗಿದೆ. ಹಾಗಾದರೆ ಕೆಟ್ಟದ್ದು ಯಾವುದು? ಒಳ್ಳೆಯದು ಯಾವುದು? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಆಗ ಮಾತ್ರ ಕೆಟ್ಟದ್ದರಿಂದ ದೂರವಿರಲು ಸಾಧ್ಯ. ಹಾಗಾದರೆ ಕೆಟ್ಟದ್ದನ್ನು ಗುರುತಿಸುವ ಬಗೆ ಹೇಗೆ?

ಒಂದು ದೃಷ್ಟಿಯಿಂದ ವಿಚಾರ ಮಾಡಿದರೆ ಯಾವುದೂ ಕೆಟ್ಟದ್ದಿಲ್ಲ. ಯಾವುದೂ ಒಳ್ಳೆಯದ್ದು ಇಲ್ಲ ಎನ್ನಬೇಕಾಗುತ್ತದೆ. ಹಾಲು ಒಳ್ಳೆಯದ್ದೋ ಕೆಟ್ಟದ್ದೋ? ಮಜ್ಜಿಗೆ ಒಳ್ಳೆಯದ್ದೋ ಕೆಟ್ಟದ್ದೋ? ಎಂದರೆ ಶರೀರದಲ್ಲಿ ತುಂಬಾ ಕಫ ಆಗಿದೆ ಅಂತಾದರೆ ಡಾಕ್ಟರು ಹಾಲನ್ನು ಕುಡಿಯಬೇಡಿ ಎನ್ನುತ್ತಾರೆ. ಶೀತಕಾಲದಲ್ಲಿ ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದಲ್ಲ; ಬೇಸಿಗೆಯ ಕಾಲದಲ್ಲಿ ಮಜ್ಜಿಗೆ ಕುಡಿದರೆ ಅಮೃತ ಕುಡಿದಂತಾಗುವುದು. ಇದು ಪದಾರ್ಥದ ವಿಚಾರವಾಯಿತು. ಇನ್ನು ಅಮೂರ್ತವಾದ ಕಣ್ಣಿಗೆ ಕಾಣದ ವಿಷಯಕ್ಕೆ ಬಂದಾಗ ಯಾವುದು ಎಲ್ಲಾ ಕಾಲದಲ್ಲೂ ಎಲ್ಲರಿಗೂ ಅಹಿತವನ್ನು ಉಂಟುಮಾಡುವುದೋ ಅದು ತಾನೆ ಕೆಟ್ಟದ್ದು! ಯಾವುದನ್ನು ಹಿಂಜರಿಕೆ ಇಲ್ಲದೇ ಮಾಡುವೆವೋ ಅದನ್ನು ಒಳ್ಳೆಯದು ಎನ್ನಬಹುದು. ಇದಕ್ಕೆ ವಿರುದ್ಧವಾದುದು ಕೆಟ್ಟದ್ದು. ಆದ್ದರಿಂದ ಇಂತಹ ಕೆಟ್ಟ ಕಾರ್ಯದಿಂದ ದೂರವಿರುವುದು. ಹೇಗೆಲ್ಲಾ ಕೆಟ್ಟದ್ದು ಸಂಭವಿಸಬಹುದು? ಎಂಬುದಕ್ಕೆ ಒಂದು ಸುಭಾಷಿತ ಹೀಗೆ ಹೇಳುತ್ತದೆ - ಸ್ವತಃ ಕಾರ್ಯವನ್ನು ಮಾಡುವವನು - ಕರ್ತಾ, ಇನ್ನೊಬ್ಬರಿಂದ ಮಾಡಿಸುವವನು - ಕಾರಯಿತಾ, ಇನ್ನೊಬ್ಬರು ಮಾಡುವಂತೆ ಪ್ರೇರಣೆ ಕೊಡುವವನು- ಪ್ರೇರಕ, ಬೇರೆಯವರು ಮಾಡುವ ಕಾರ್ಯವನ್ನು ಅನುಮೋದಿಸುವವನು - ಅನುಮೋದಕ, ಈ ನಾಲ್ವರೂ ಸುಕೃತದಲ್ಲಿ ಮತ್ತು ದುಷ್ಕೃತದಲ್ಲಿ ಫಲಭಾಗಿಗಳಾಗುತ್ತಾರೆ ಎಂದು. ಈ ನಾಲ್ಕೂ ಬಗೆಯಿಂದಲೂ ಕೆಟ್ಟದ್ದು ಆಗದಂತೆ ಇರುವುದನ್ನೇ ಇಲ್ಲಿ 'ಲಜ್ಜೆ' ಎಂದು ಕರೆಯಲಾಗಿದೆ.  

ಲಜ್ಜೆ ಎಂಬುದನ್ನು ಅಂತಃಕರಣದಲ್ಲಿರುವ ಒಂದು ವಿಶೇಷಗುಣ ಎಂದೂ ಗುರುತಿಸಿದ್ದಾರೆ. ಮಾಡುವ ಕಾರ್ಯ ಒಳ್ಳೆಯದ್ದಾದರೆ ನಮ್ಮ ಶರೀರದ ಎಲ್ಲಾ ಅಂಗಗಳನ್ನು ಪುಷ್ಟಿಗೊಳಿಸುತ್ತದೆ.ಇಂದ್ರಿಯಗಳಿಗೆ ಬಲವನ್ನು ಕೊಡುತ್ತದೆ. ಮನಸ್ಸಿಗೆ ಸಂತೋಷ ಸಿಗುತ್ತದೆ. ಇದರ ಪರಿಣಾಮವಾಗಿ ಶರೀರದಲ್ಲಿರುವ ಸಪ್ತಧಾತುಗಳೂ ಪ್ರಸನ್ನವಾಗುತ್ತವೆ. ಈ ಪ್ರಸನ್ನತೆಯೇ ನಮ್ಮಲ್ಲಿ ಭಗವಂತನನ್ನು ಕಾಣಲು ಸಹಾಯವಾಗುತ್ತದೆ "ಧಾತುಪ್ರಾಸಾದಾತ್ ಮಹಿಮಾನಮೀಶಮ್" ಎಂದು ಉಪನಿಷತ್ತು ಸತ್ಕಾರ್ಯದ ಪರಿಣಾಮವನ್ನು ಹೇಳುತ್ತದೆ. ಯಾವಾಗ ನಾವು ಕೆಟ್ಟ ಆಲೋಚನೆ, ಕೆಟ್ಟ ಬಯಕೆ ಮತ್ತು ಕೆಟ್ಟ ಕಾರ್ಯದಿಂದ ದೂರವಿರುತ್ತೇವೋ ಆಗ  ಸಹಜವಾಗಿಯೇ ಶರೀರವು ಸರ್ವಾಂಗಸುಂದರವಾಗುತ್ತದೆ. ಸಾಧನ ಸರಿಯಾಗಿದ್ದರೆ ಸಾಧ್ಯವನ್ನು ತಲುಪುವುದು ಕಷ್ಟವೇ ಆಗಲಾರದು. ಹಾಗಾಗಿ ಲಜ್ಜೆಯು ಸಾಧನವನ್ನು ಸಜ್ಜುಗೊಳಿಸಲು ಅತಿಮುಖ್ಯವಾದ ಗುಣ. ಭಗವದ್ಗೀತೆಯಲ್ಲಿ ಲಜ್ಜೆಯನ್ನು ದೈವೀಸಂಪತ್ತು ಎಂಬಷ್ಟರಮಟ್ಟಿಗೆ ಈ ಗುಣವನ್ನು ಕೊಂಡಾಡಿದ್ದಾರೆ.    

ಸೂಚನೆ : 7/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.