Sunday, April 28, 2024

ಕೃಷ್ಣಕರ್ಣಾಮೃತ - 12 ಹೊಳೆಯುವ ಈ ಮಣಿ ಯಾರಿಗೆ ಬೇಡ? (Krsnakarnamrta - 12 Holeyuva I Mani Yarige Beda?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ಸಣ್ಣಮಗುವೊಂದು ಏನಾದರೂ ತಪ್ಪನ್ನು ಮಾಡಿತೆಂದರೆ, ಕೆಲವರು ಅದರ ಮೇಲೆ ರೇಗಿಬಿಡುತ್ತಾರೆ. ಗದರಿಸಿದ್ದು ತಾಯಿಯೇ ಆದರೂ, ಮಿಕ್ಕವರೇ ಧಾವಿಸಿ ಬಂದು, "ಅಯ್ಯೋ, ಅದು ಏನೂ ಅರಿಯದ ಮಗು. ಅದನ್ನು ಸಿಡುಕುವೆಯಾ?" ಎಂದು ತಡೆಯುವುದೂ ಉಂಟು.

ಸುಲಕ್ಷಣಗಳಿಂದ ಕೂಡಿರುವ ಕೂಸನ್ನು 'ಮುದ್ದು' ಎನ್ನುತ್ತೇವೆಲ್ಲವೆ? ಮಗುವಿನಲ್ಲಿಯ ಎಳಸು, ಆ ಎಳೆತನದಲ್ಲಿಯ ಆಕರ್ಷಣೆಗಳಿಂದಾಗಿ ಮುದ್ದುತನವನ್ನು ನಾವಲ್ಲಿ ಕಾಣುತ್ತೇವೆ. ಅರಿಯದ ಕಂದನನ್ನು ಮುಗ್ಧಶಿಶುವೆನ್ನುತ್ತೇವಲ್ಲವೆ? ಮುದ್ದುಕೃಷ್ಣ, ಕಡುಮುದ್ದುರಂಗ - ಎಂದೆಲ್ಲ ಕೊಂಡಾಡುವುದಿಲ್ಲವೆ? ಇಂತಹ ಮುಗ್ಧತೆಯ ಚರಮಸೀಮೆಯೇ ಕೃಷ್ಣ.

ಚರಮಸೀಮೆಯೆಂದರೆ ಯಾವುದಕ್ಕಿಂತಲೂ ಆಚೆ ಏನೂ ಇಲ್ಲವೋ ಅದು; ಯಾವುದಕ್ಕೆ ಮಿಗಿಲಾದುದು ಇಲ್ಲವೋ ಅದು. ಎಂದರೆ ಸರ್ವಭೂಮಿಯನ್ನೂ ಯಾವುದು ಆಕ್ರಮಿಸಿರುವುದೋ ಅದು: ಅದನ್ನೇ ಸಾರ್ವಭೌಮವೆನ್ನುವುದೂ.

ಹೀಗೆ ಮೌಗ್ಧ್ಯದ (ಎಂದರೆ ಮುಗ್ಧತೆಯ) ವಿಷಯದಲ್ಲಿ ಸಾರ್ವಭೌಮನೆಂದರೆ ಕೃಷ್ಣನೇ.

ಹಾಗೆಂದು ಕೃಷ್ಣನು ಏನೂ ಅರಿಯದವನೇ? ಎಲ್ಲವನ್ನೂ ಬಲ್ಲವನೇ ಅವನು. ಎಲ್ಲಿ ಬೇಕೋ ಅಲ್ಲಷ್ಟೆ ತನ್ನ ಜ್ಞಾನವನ್ನು ತೋರಿಸಿಕೊಳ್ಳುವವನು. ಹೀಗೆ ಈತನಲ್ಲಿ ಸರ್ವಜ್ಞತ್ವವೂ ಇದೆ. ಅದರಲ್ಲೂ ಚರಮಸೀಮೆಯೇ.

ಸರ್ವಜ್ಞತ್ವ-ಮೌಗ್ಧ್ಯಗಳು ಎರಡು ಪರಸ್ಪರ-ವಿರುದ್ಧವಾದ ಕೋಟಿಗಳು (ಕೋಟಿ ಎಂದರೆ ತುದಿ). ಎಂದರೆ ಸರ್ವಜ್ಞನು ಮುಗ್ಧನಾಗಿರಲಾರ; ಮುಗ್ಧನು ಸರ್ವಜ್ಞನಾಗಿರಲಾರ. ಸರ್ವಜ್ಞನಾಗಿದ್ದೂ ಏನೂ ಅರಿಯದವನಂತಿರುವುದೂ ಮುಗ್ಧತ್ವದ ಒಂದು ಲಕ್ಷಣವೇ.

ಮುಗ್ಧತ್ವದಲ್ಲೆಂತೋ ಅಂತೆಯೇ ಸರ್ವಜ್ಞತ್ವದಲ್ಲೂ ಸಾರ್ವಭೌಮನೆಂದರೆ ಕೃಷ್ಣನೇ ಸರಿ. ತನ್ನ ಲೀಲೆಯಂತೆ, ಔಚಿತ್ಯಕ್ಕೆ ತಕ್ಕಂತೆ, ಹಾಗೂ ಹೀಗೂ ಇರಬಲ್ಲವನವನು.

ಕೃಷ್ಣನನ್ನು ಕೃಷ್ಣನೆಂಬ ಹೆಸರಿನಿಂದ ಸೂಚಿಸದೆ, "ಮಹಃ" ಎಂದು ಕರೆದಿದೆ, ಈ ಶ್ಲೋಕದಲ್ಲಿ. ಮಹಸ್ ಎಂದರೆ ಉಜ್ಜ್ವಲವಾದ ತೇಜಸ್ಸು. ಹೀಗಾಗಿ ಮುಗ್ಧತೆ-ಸರ್ವಜ್ಞತೆಗಳೆರಡರಲ್ಲೂ ಸಾರ್ವಭೌಮವೆನಿಸಿರುವುದು, ಈ ಕೃಷ್ಣನೆಂಬ ಮಹಸ್ಸು.

ನನ್ನ ಕಣ್ಣು ಆ ತೇಜಸ್ಸನ್ನು ತುಂಬಿಕೊಂಡಿದೆ. ಹಾಗೆ ಮಾಡುತ್ತಲೇ ಅದು ನಿರ್ವಾಣ-ಪದವನ್ನು ಹೊಂದಿದೆ, ಆಹಾ! ಎನ್ನುತ್ತಾನೆ, ಲೀಲಾಶುಕ.

ಸಾಧಾರಣವಾಗಿ ನಿರ್ವಾಣಪದ ಅಥವಾ ಸಮಾಧಿಸ್ಥಾನವನ್ನು ಪಡೆಯುವುದಕ್ಕೆ ಅತ್ಯಂತ-ವಿಶಿಷ್ಟವಾದ ಸಾಧನೆಯು ಬೇಕು. ಆದರೆ "ಎಲ್ಲ ಬಲ್ಲುದಾದರೂ ಏನೂ ಅರಿಯದ" ಈ ತೇಜಸ್ಸನ್ನು ಕಂಡ ನನ್ನ ಕಣ್ಣು ನಿರ್ವಾಣವನ್ನೇ ಹೊಂದುತ್ತಿದೆ.

ನಿರ್ವಾಣವೆನ್ನುವುದು ಪರಮಾನಂದದ ಸ್ಥಿತಿ; ಅದು ಸಿಕ್ಕಮೇಲಿನ್ನೇನು ಬೇಕು? ಆನಂದದ ಪರಾಕಾಷ್ಠೆಯೇ ಅದು. ಅದು ದೊರಕಿದಾಗ ಉಕ್ಕುವ ಉದ್ಗಾರವೇ "ಹಂತ!"

ಈಗ ಶ್ಲೋಕ:

ಸರ್ವಜ್ಞತ್ವೇ ಚ ಮೌಗ್ಧ್ಯೇ ಚ

ಸಾರ್ವಭೌಮಮ್ ಇದಂ ಮಹಃ |

ನಿರ್ವಿಶನ್ನಯನಂ ಹಂತ

ನಿರ್ವಾಣಪದಮ್ ಅಶ್ನುತೇ ||


ಕೃಷ್ಣ ಎಂಬ ಪದಕ್ಕೆ ಕಪ್ಪು ಎಂಬ ಒಂದು ಅರ್ಥವೂ ಇದೆ. ಇಂದ್ರನೀಲ ಎಂಬ ಮಣಿಯೊಂದುಂಟು. ಅದೂ ಕಪ್ಪೇ. ಆದ್ದರಿಂದ ಕೃಷ್ಣನನ್ನೇ ಒಂದು ಇಂದ್ರನೀಲಮಣಿಯೆಂದು ಕರೆದು ರೂಪಕವೆಂಬಂತೆ ಮಾಡಿರುವ ಶ್ಲೋಕವೊಂದು ಶ್ರೀಕೃಷ್ಣಕರ್ಣಾಮೃತದಲ್ಲುಂಟು.

ಮಣಿಗಳೆಂದರೆ ಅವುಗಳು ದೊರಕುವುದು ಗಣಿಗಳಲ್ಲಲ್ಲವೆ? ಹಾಗಾದರೆ ಈ ಕೃಷ್ಣನೆಂಬ ಇಂದ್ರನೀಲಮಣಿಯು ದೊರಕಿದುದು ಯಾವ ಗಣಿಯಲ್ಲಿ? ದೇವಕಿಯ ಜಠರವೇ ಆ ಆಕರ. ಆಕರವೆಂದರೆ ಗಣಿ (ಖನಿ). ಶ್ರೀಕೃಷ್ಣನು ದೇವಕೀಗರ್ಭಸಂಭೂತನಲ್ಲವೆ? ಹೀಗೆ ಅವಳ ಜಠರಾಕರವೇ ಈ ಮಣಿಯು ಹುಟ್ಟಿದೆಡೆ.

ಉತ್ತಮವಾದ ಮಣಿಯೆಂದರೆ ಅದಕ್ಕೆ ಉತ್ತಮವಾದ ಬೆಲೆಯನ್ನೇ ತೆತ್ತು ಕೊಂಡುಕೊಳ್ಳುವವರಿರಬಹುದಲ್ಲವೇ? ಹಾಗೆ ಇಲ್ಲಾರಾದರೂ ಕೊಂಡುಕೊಂಡರೇ? ಹೌದು. ಕೊಂಡವನು ಗೋಪಾಲಕನಾದ ನಂದ. ಆತನಿತ್ತ ಬೆಲೆ ಯಾವುದು? ನಿಜಸುತೆಯೇ (ನಿಜ ಎಂದರೆ ತನ್ನ) - ತನ್ನ ಮಗಳೇ - ಆ ಬೆಲೆ!. ಕೊಂಡುಕೊಂಡದ್ದು ಯಾರಿಂದ? ಆನಕದುಂದುಭಿಯಿಂದ. (ವಸುದೇವನ ಇನ್ನೊಂದು ಹೆಸರೇ ಆನಕದುಂದುಭಿ).

ಈ ಕೃಷ್ಣನೆಂಬ ಮಣಿ ಅಸಾಧಾರಣವಾದದ್ದು! ಆದ್ದರಿಂದ ಅದನ್ನು ಪಡೆದವ ಪುಣ್ಯಾತ್ಮನೇ ಸರಿ. ತೆರುವ ಬೆಲೆಗೆ ಪಣ್ಯವೆನ್ನುತ್ತಾರೆ. ಹೀಗಾಗಿ, ಈ ಪುಣ್ಯಾತ್ಮನ ಪಣ್ಯವೆಂದರೆ ತನ್ನ ಹೆಣ್ಣುಮಗಳೇ.

ಮುತ್ತಿನ ಹಾರವನ್ನು ಮಾಡುತ್ತಾರಲ್ಲಾ, ಅದರ ಮಧ್ಯಮಣಿಯು ಎದೆಯ ಮೇಲೆ ಬರುವುದಲ್ಲವೇ? ಅದನ್ನು ನಾಯಕಮಣಿಯೆನ್ನುತ್ತಾರೆ. ಆ ಮಣಿಯು ಸಾಧಾರಣವಾಗಿರದು. ಫಳಫಳ ಹೊಳೆಯುವ ಮಣಿಯದು. ಮುತ್ತಿನ ಹಾರದಲ್ಲಿ ಬೇರೆ ಬೇರೆ ಮುತ್ತುಗಳೆಲ್ಲ ಇರುತ್ತವಲ್ಲವೇ? ನಂದಗೋಕುಲದಲ್ಲಿಯ ಬೇರೆ ಬೇರೆ ಗೋಪಾಲಕರೇ ಆ ಮುತ್ತುಗಳು. ಆ ಮುತ್ತುಗಳ ಸಾಲೇ ಗೋಪಾಲಾವಲಿ. ಅಲ್ಲಿಯ ಮಧ್ಯಮಣಿಯೇ ನಮ್ಮ ತರಳ ಕೃಷ್ಣ. ತರಳನೆಂದರೆ ಹೊಳೆಯುವಂತಹ - ಎಂಬರ್ಥ. ಹೀಗೆ ಗೋವಳರ ನಡುವಿನಲ್ಲಿ ತಾನೂ ಒಬ್ಬನೆಂಬಂತಿದ್ದರೂ, ಶ್ರೀಕೃಷ್ಣನ ಮುದ್ದುತನ-ಮಹಾ ಕಾಂತಿಗಳು ಮತ್ತಾರಲ್ಲಿದ್ದಾವು?

ಅಷ್ಟೊಂದು ಸೊಗಸಾದ ಮಣಿಯೇ ಅದು? ಅದನ್ನು ಅಲಂಕಾರಕ್ಕೆ ಯಾರಾದರೂ ಬಳಸಿಕೊಂಡರೋ ಇಲ್ಲವೋ? ಎಂಬ ಪ್ರಶ್ನೆಯೇ? ಉತ್ತರವಿದೋ ಸಿದ್ಧ: ಗೋಪಿಕೆಯರು ಅದನ್ನು ಅಲಂಕಾರವಾಗಿ ಬಳಸಿಕೊಂಡರು.

ಇದು ಇಂತಹುದು - ಎಂಬುದಾಗಿ ಯಾವುದಾದರ ಬಗ್ಗೆ ಸ್ಪಷ್ಟವಾಗಿ ಹೇಳಲಾಗುವುದಾದರೆ ಅದನ್ನು "ಇದಮ್ ಇತ್ಥಮ್" ಎನ್ನುತ್ತೇವೆ; ಯಾವುದರ ಬಗ್ಗೆ ಹಾಗೆ ಹೇಳಲಾಗದೋ ಅದನ್ನು "ಕೋಽಪಿ" ಎನ್ನುವುದಾಗುತ್ತದೆ; ಅದು ಹೀಗಿದೆಯೆಂದು ಹೇಳಲಾಗದುದು - ಎಂದದರ ಅರ್ಥ. ಅನಿರ್ವಚನೀಯ ಎಂಬ ಪದಕ್ಕೂ ಅದೇ ಅರ್ಥ. ಎಂದರೆ ಅದೊಂದು ಅದ್ಭುತವಾದದ್ದು - ಎಂದೇ ಅರ್ಥ. ಯಾವ ಇಂದ್ರನೀಲಮಣಿಯೂ ಇಷ್ಟೊಂದು ಹಿರಿಮೆಯಿದ್ದುದಿಲ್ಲ, ಅಲ್ಲವೇ? ಅದಕ್ಕೇ ಇದನ್ನು ಕವಿಯು "ಯಾವುದೋ ಇಂದ್ರನೀಲಮಣಿ" ಎನ್ನುತ್ತಾನೆ.

ಆಹಾ ಅಷ್ಟೊಂದು ಸೊಗಸೇ ಈ ವಿಶಿಷ್ಟವಾದ ಇಂದ್ರನೀಲಮಣಿ! ನಮಗೂ ಬೇಕಲ್ಲಾ - ಎಂದು ಆಸೆಯಾಗುವುದಲ್ಲವೆ? ಲೀಲಾಶುಕನಿಗೂ ಆಸೆಯೇ. ನಮಗೆಲ್ಲ ಆ ಆಸೆಯಿರುವುದೆಂದು ಆತನೂ ಬಲ್ಲ. ಅದು ಭೌತಿಕವಾಗಿ ದೊರೆಯುವ ಮಣಿಯಲ್ಲವಲ್ಲವೆ? ಆದ್ದರಿಂದ ಅದು ನಮ್ಮ ಹೃದಯದೊಳಗೇ ಸ್ಥಿರವಾಗಿ ನಿಲ್ಲಲಿ! - ಎಂಬ ಆಶಯವನ್ನು ಕವಿ ವ್ಯಕ್ತಪಡಿಸುತ್ತಾನೆ.

ಅಂತರಂಗದೊಳಗೆ ಧರಿಸುವ ಈ ಮಣಿಯು ಎಂದೆಂದಿಗೂ ನಮ್ಮಲ್ಲಿಯೇ ಇರುವಂತಹುದು - ನಾವು ಪ್ರೀತಿಯಿಂದ ಕಾಪಿಟ್ಟುಕೊಂಡರೆ. ಅತ್ಯಂತ ಇಷ್ಟವಾದುದನ್ನು ಎದೆಗಪ್ಪಿ ಇಟ್ಟುಕೊಳ್ಳುವೆವಲ್ಲವೆ? ಆದರಿದನ್ನು ಎದೆಯೊಳಗೇ ನಮ್ಮ ಹೃದಂತರದಲ್ಲೇ ಸದಾ ಇಟ್ಟುಕೊಳ್ಳಬಹುದು!

ಬನ್ನಿ ಮಣಿಪ್ರಿಯರೇ, ಈ ಶ್ಲೋಕವನ್ನೂ ಹೃದಯದಲ್ಲಿ ಧರಿಸಿರಿ; ಈ ಅದ್ಭುತ ಮಣಿಯ ತಂಪಿನ ಸ್ಪರ್ಶವನ್ನು ಸದಾ ಅನುಭವಿಸಿರಿ.

ದೇವಕ್ಯಾ ಜಠರಾಕರೇ ಸಮುದಿತಃ, ಕ್ರೀತೋ ಗವಾಂ ಪಾಲಿನಾ /

ನಂದೇನಾನಕದುಂದುಭೇಃ ನಿಜಸುತಾ-ಪಣ್ಯೇನ ಪುಣ್ಯಾತ್ಮನಾ |

ಗೋಪಾಲಾವಲಿ-ಮುಗ್ಧಹಾರ-ತರಲೋ ಗೋಪೀಜನಾಲಂಕೃತಿಃ /

ಸ್ಥೇಯಾದ್ ವೋ ಹೃದಿ ಸಂತತಂ ಸ ಮಧುರಃ ಕೋಽಪೀಂದ್ರನೀಲೋ ಮಣಿಃ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 27/4/2024 ರಂದು ಪ್ರಕಟವಾಗಿದೆ.