Sunday, May 21, 2023

ವ್ಯಾಸ ವೀಕ್ಷಿತ - 38 ಕೆಣಕಿದುದೇಕೆ? – ಎಂಬ ಅರ್ಜುನಪ್ರಶ್ನೆಗೆ ಗಂಧರ್ವನ ಉತ್ತರ (Vyaasa Vikshita - 38 Kenakidudeke? - Emba Arjunaprashnege Gandharvana Uttara)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 

ತಮಗೆ ನಿಷ್ಕಾರಣವಾಗಿ ತೊಂದರೆ ಕೊಟ್ಟದ್ದೇಕೆ? - ಎಂಬುದಾಗಿ ಅರ್ಜುನನು ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡುತ್ತಾ, ಗಂಧರ್ವನು ಮುಂದುವರೆದನು:

ಅರ್ಜುನನೇ, ನಿನ್ನ ಆಚಾರ್ಯರಾದ ದ್ರೋಣರನ್ನು ನಾನು ಬಲ್ಲೆ. ಅವರು ತ್ರಿಲೋಕವಿಶ್ರುತರು (ಮೂರು ಲೋಕಗಳಲ್ಲೂ ಕೀರ್ತಿಯನ್ನು ಪಡೆದವರು). ನಿಮ್ಮ ವಂಶವರ್ಧಕರಾದ ಪಿತೃಗಳನ್ನೂ ಬಲ್ಲೆ: ಧರ್ಮ, ವಾಯು, ಇಂದ್ರ, ಹಾಗೂ ಅಶ್ವಿನೀದೇವತೆಗಳಿಬ್ಬರು, ಹಾಗೂ ಪಾಂಡು - ಈ ಆರು ಮಂದಿಯನ್ನೂ ಬಲ್ಲೆ. ದೇವತೆಗಳಲ್ಲೂ ಮನುಷ್ಯರಲ್ಲೂ ಸತ್ತಮರು ಇವರು (ಸತ್+ತಮ = ಸತ್ತಮ; ಅತ್ಯಂತ-ಶ್ರೇಷ್ಠರು). ಭ್ರಾತೃಗಳಾದ ನೀವುಗಳೂ ಅಷ್ಟೇ. ಎಲ್ಲರೂ ದಿವ್ಯಾತ್ಮರು, ಮಹಾತ್ಮರು; ಶಸ್ತ್ರಧಾರಿಗಳಲ್ಲೆಲ್ಲಾ ಶ್ರೇಷ್ಠರು; ಹಾಗೂ ಶೂರರು ಮತ್ತು ಸುಚರಿತ-ವ್ರತರು (ಒಳ್ಳೆಯ ನಡತೆಯೆಂಬುದನ್ನು ವ್ರತವಾಗಿ ಉಳ್ಳವರು). ನಿಮ್ಮಗಳ ಉತ್ತಮವಾದ ಮನೋಬುದ್ಧಿಗಳನ್ನೂ ನಾ ಬಲ್ಲೆ.

ಹಾಗಿದ್ದರೂ ನಿಮ್ಮನ್ನು ಕೆಣಕಿದೆನೆಲ್ಲವೇ, ಅದಕ್ಕೆ ಕಾರಣವಿಷ್ಟೆ: ತನ್ನ ಸ್ತ್ರೀಯೊಡನೆ ಇರುವಾಗ ಯಾವನೇ ಪುರುಷನಾಗಲಿ ಬೇರೆ ಯಾರಾದರೂ ತಿರಸ್ಕಾರ ಮಾಡಿದರೆ ಅವರನ್ನು ಕ್ಷಮಿಸ. ಅದರಲ್ಲೂ ಬಾಹುಬಲವೆಂಬುದು ತನಗೆ ಹೆಚ್ಚಾಗಿದ್ದಾಗ ಹಾಗಾಗುವುದು ಸಹಜ. ನಾವಾದರೋ ಗಂಧರ್ವರು; ರಾತ್ರಿಯ ವೇಳೆ ನಮ್ಮ ಬಲವು ಬಹಳವೇ ವೃದ್ಧಿಹೊಂದುವುದು. ಆ ಕಾರಣಕ್ಕೇ, ಓ ಅರ್ಜುನನೇ, ಪತ್ನಿಯೊಡಗೂಡಿದ್ದ ನನಗೆ ಕೋಪಾವೇಶವುಂಟಾದದ್ದು.

ಹಾಗಿದ್ದೂ ನೀನು ನನ್ನನ್ನು ಸೋಲಿಸಿದೆಯಲ್ಲವೆ, ತಾಪತ್ಯವರ್ಧನನೇ! (ಹಾಗೆಂದರೇನು? - ಎಂಬುದನ್ನು ಮುಂದೆ ಆತನೇ ವಿವರಿಸುತ್ತಾನೆ). ಅದೂ ಏಕೆನ್ನು, ಹೇಳುತ್ತೇನೆ. ಬ್ರಹ್ಮಚರ್ಯವೆಂಬುದು ಶ್ರೇಷ್ಠವಾದ ಧರ್ಮ (ಬ್ರಹ್ಮಚರ್ಯಂ ಪರೋ ಧರ್ಮಃ). ನಿನ್ನಲ್ಲಿ ಈಗದು ದೃಢವಾಗಿದೆ. ಆ ಕಾರಣಕ್ಕಾಗಿ ನಾನು ನಿನಗೆ ಸೋಲಬೇಕಾಯಿತು. ಯಾವ ಕ್ಷತ್ರಿಯನೇ ಆಗಿರಲಿ, ಆತನು [ವಿವಾಹವಾಗಿದ್ದು] ಕಾಮವೃತ್ತನಾಗಿದ್ದಲ್ಲಿ (ಎಂದರೆ ಕಾಮಪ್ರಧಾನವಾದ ನಡತೆಯುಳ್ಳವನಾಗಿದ್ದಲ್ಲಿ), ಅಂತಹವನು ನನ್ನೊಂದಿಗೇನಾದರೂ ರಾತ್ರಿಯ ಹೊತ್ತು ಯುದ್ಧಕ್ಕೆ ಬಂದಲ್ಲಿ, ಆತ ಉಳಿಯಲೇ ಆರ. ಆದರೆ ಗೃಹಸ್ಥನಾದ ಕ್ಷತ್ರಿಯನು ಒಂದು ವೇಳೆ ಹಾಗಿದ್ದರೂ ಬ್ರಹ್ಮಪುರಸ್ಕೃತನಾಗಿದ್ದರೆ, ಎಂದರೆ ವಿಪ್ರನೊಬ್ಬನನ್ನು ಮುಂದಿಟ್ಟುಕೊಂಡು ಮುನ್ನಡೆಯುತ್ತಿದ್ದಲ್ಲಿ, ರಾತ್ರಿಸಂಚಾರಿಗಳಾದವರನ್ನೆಲ್ಲರನ್ನೂ ಜಯಿಸಬಲ್ಲ. ಏಕೆಂದರೆ ಆತನ ಹೊಣೆಯನ್ನು ಆ ಪುರೋಹಿತನು ವಹಿಸಿಕೊಂಡಿರುವನು.

ಆದ್ದರಿಂದಲೇ ಓ ತಾಪತ್ಯನೇ, ಯಾವುದೇ ಶ್ರೇಯಸ್ಸನ್ನು ಬಯಸುವುದಾದಲ್ಲಿ, ಅಂತಹ ಕಾರ್ಯದಲ್ಲಿ ಪುರೋಹಿತರನ್ನು ನೇಮಿಸಬೇಕು. ಪುರೋಹಿತರಾದರೂ ಹೇಗಿರಬೇಕು, ತಿಳಿದುಕೋ. ಅವರು ದಾಂತಾತ್ಮರಾಗಿರಬೇಕು (ಎಂದರೆ ದಮವನ್ನು ಹೊಂದಿರಬೇಕು; ದಮವೆಂದರೆ ಇಂದ್ರಿಯಜಯ). ಷಡಂಗಗಳಿಂದ ಕೂಡಿದ ವೇದದಲ್ಲಿ ಅವರು ನಿರತರಾಗಿರಬೇಕು (ಷಡಂಗಗಳೆಂದರೆ ಷಟ್-ಅಂಗಗಳು, ಆರು ಅವಯವಗಳು. ವೇದಕ್ಕೆ ಆರು ಅಂಗಗಳು. ಅವು ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೌತಿಷ, ಹಾಗೂ ಕಲ್ಪ - ಎಂಬಿವು). ಅಲ್ಲದೇ ಅವರು ಶುದ್ಧರಾಗಿರಬೇಕು; ಸತ್ಯವಾದಿಗಳಾಗಿರಬೇಕು. ಧರ್ಮಾತ್ಮರಾಗಿರಬೇಕು; ಕೃತಾತ್ಮರಾಗಿರಬೇಕು (ಕೃತಾತ್ಮರೆಂದರೆ ಒಳ್ಳೆಯ ಸಂಸ್ಕಾರವನ್ನು ಹೊಂದಿರುವ ಮನಸ್ಸುಳ್ಳವರು).

ಇಂತಹ ಪುರೋಹಿತರು ಯಾವ ರಾಜನಿಗಿರುವರೋ, ಅಂತಹ ರಾಜನು ಜಯವನ್ನು ನಿಶ್ಚಯವಾಗಿ ಹೊಂದುವನು. (ಮರಣಾನಂತರ) ಸ್ವರ್ಗವನ್ನೂ ಹೊಂದುವನು. ಧರ್ಮಜ್ಞನೂ ವಾಗ್ಮಿಯೂ, ಶೀಲಸಂಪನ್ನನೂ ಶುದ್ಧನೂ ಆದ ಪುರೋಹಿತನಿದ್ದಲ್ಲಿ ಇವೆಲ್ಲವೂ ಉಂಟಾಗತಕ್ಕವೇ.

ಸೂಚನೆ : 21
/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.