Sunday, May 21, 2023

ಅಷ್ಟಾಕ್ಷರೀ​ - 35 ಪದ್ಮಪತ್ರಮಿವಾಂಭಸಾ (Astakshara Darshana 35 Padmaptramivambhasa)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯಾರಾದರೂ ಅತ್ತರೆ ಸಂತೋಷವಾಗುವುದೇ? ಅಳದಿದ್ದರೆ ದುಃಖವಾಗುವುದೇ? ವಿವೇಕಿಯೂ ಶಾಂತಸ್ವಭಾವದವನೂ ಆದವನು "ಸರ್ವೇಽಪಿ ಸುಖಿನಃ ಸಂತು" ಎಲ್ಲರೂ ಸುಖಿಗಳಾಗಿರಲಿ ಎಂದು ಆಶಿಸುತ್ತಾನೆ; ಅಷ್ಟೇ ಅಲ್ಲ, ಎಲ್ಲರೂ ನಿರಾಮಯರಾಗಿರಲೆನ್ನುತ್ತಾನೆ. ಆಮಯವೆಂದರೆ ರೋಗ. ರೋಗವಿಲ್ಲದವನು ನಿರಾಮಯ. ಅಲ್ಲಿಗದು, "ಯಾರಿಗೂ ಯಾವ ಕ್ಲೇಶವೂ ಬರದಿರಲಿ" ಎಂದು ಬಯಸುವುದೇ. ಇಷ್ಟಲ್ಲದೆ, ಎಲ್ಲರೂ ಒಳ್ಳೆಯದನ್ನೇ ಕಾಣಲಿ, ಯಾರಿಗೂ ದುಃಖವಾಗದಿರಲಿ - ಎಂದೂ ಇಚ್ಛಿಸುವುದೇ. ಪರರಿಗೆ ಕೇಡನ್ನರಸುವುದೇ?


ಅಳು ಬರುವುದು ದುಃಖದಿಂದಾಗಿ. ಹಾಗಿರಲು ಮತ್ತೊಬ್ಬರು ಅತ್ತರೆ ಸಂತೋಷಪಡುವವರುಂಟೇ? ಆದರೆ ಒಂದು ಸಂದರ್ಭದಲ್ಲಿ ಮಾತ್ರ ಅಳುವನ್ನು ಸ್ವಾಗತಿಸಲೇಬೇಕು: ಮಗು ಹುಟ್ಟಿದಾಗ. ಹುಟ್ಟಿದೊಡನೆ ಮಗುವೇನಾದರೂ ಅಳಲಿಲ್ಲವೋ, ಡಾಕ್ಟರೂ ಗಾಬರಿಪಡುವವರೇ. ಪ್ರಯತ್ನಪಟ್ಟಾದರೂ ಆಗ ಮಗುವನ್ನು ಬೇಗನೆ ಅಳಿಸಬೇಕು! ಮಗುವು ಅತ್ತ ಆ ಘಳಿಗೆಯಿಂದಲೇ ಅದರ ಶ್ವಾಸಕ್ರಿಯೆಯು ಆರಂಭವಾಯಿತೆಂಬ ಲೆಕ್ಕ. ಉಸಿರಾಟವೇ ಮೊದಲ ಕ್ರಿಯೆ.


ಈ ಕ್ರಿಯೆಯೇ ಜೀವವಿರುವುದರ ಲಕ್ಷಣವೂ: ಉಸಿರಾಟವು ಮುಗಿಯಿತೆಂದರೆ ಜೀವಿತವೇ ಮುಗಿಯಿತು! ಹೀಗೆ ಆ ಪ್ರಥಮಶ್ವಾಸದೊಂದಿಗೆ ಆರಂಭಗೊಂಡ ಜೀವನವು ಕೊನೆಗೊಳ್ಳುವುದು ಶ್ವಾಸಕ್ರಿಯೆಯು ಕೊನೆಗೊಂಡಾಗಲೇ. ಅಲ್ಲಿಗೆ, ಮನುಷ್ಯನು ಹುಟ್ಟಿದಾಗಿನಿಂದ ಸಾಯುವವರೆಗೆ ಸಕ್ರಿಯನೇ ಆಗಿರುತ್ತಾನೆ. ನಿದ್ದೆ- ಮೂರ್ಛೆಗಳಲ್ಲಿ ಸಹ ಉಸಿರಾಟವೆಂಬ ಕ್ರಿಯೆಯು ಮಾತ್ರ ವಿಶ್ರಾಂತಿಯಿಲ್ಲದೆ ಸಾಗುವುದೇ. 


ಹೀಗಾಗಿ, ನಿಷ್ಕ್ರಿಯರಾಗಿದ್ದಾರೆಂದು ಯಾರನ್ನನ್ನಲೂ ಸಾಧ್ಯವೇ ಇಲ್ಲ. ದೇಹದಿಂದಲೋ ಮನಸ್ಸಿನಿಂದಲೋ ಕ್ರಿಯಾಕಲಾಪಗಳು ಎಡೆಬಿಡದೆ ನಡೆಯುತ್ತಲೇ ಇರುತ್ತವೆ. ಯೋಗಶಾಸ್ತ್ರದ ದೃಷ್ಟಿಯಿಂದ ಹೇಳುವುದಾದರೆ, ನಮ್ಮ ಶ್ವಾಸಕ್ರಿಯಾಪ್ರಕಾರವೇ ದೇಹ-ಮನಸ್ಸುಗಳ ಕ್ರಿಯೆಗಳನ್ನು ನಿಯಂತ್ರಿಸುವುದು. ಆ ವಿಷಯವಂತಿರಲಿ.


ನಮ್ಮ ಚಿತ್ತ-ಶರೀರಗಳು ನಾವೆಚ್ಚರವಾಗಿರುವಾಗಲಂತೂ ಒಂದು ಕ್ಷಣವೂ ಸುಮ್ಮನಿರಲಾರವು. ಹೀಗಾಗಿ ಒಂದಿಲ್ಲೊಂದು ಕರ್ಮಗಳಲ್ಲಿ ಸರ್ವದಾ ನಾವು ವ್ಯಗ್ರರೇ. ಎಷ್ಟೋ ವೇಳೆ ನಾವು ಸಂಕಲ್ಪಪೂರ್ವಕವಾಗಿ ಮಾಡುತ್ತೇವೆಂಬುದು ಸಹ ಇರುವುದಿಲ್ಲ. ಪೂರ್ವವಾಸನಾನುಸಾರ, ನಮ್ಮ ನಿಯಂತ್ರಣವಿಲ್ಲದೆಯೇ, ಏನೇನೋ ಕರ್ಮಗಳು ನಮ್ಮಿಂದ ಘಟಿತವಾಗಿಬಿಡುವುದೂ ಉಂಟು. ಹೀಗಾಗಿ ನಾವು "ಅವಶ"ರಾಗಿಯೂ ನಾನಾಕರ್ಮಗಳನ್ನು ಮಾಡುತ್ತಿರುತ್ತೇವೆ. ಸಂಕಲ್ಪಪೂರ್ವಕವಾಗಿ ಮಾಡುವುದಂತೂ ಇದ್ದದ್ದೇ.


ಕೆಲವೊಮ್ಮೆ ನಮ್ಮ ಸಂಕಲ್ಪದಲ್ಲೇ ದೋಷಮೂಡುತ್ತದೆ. ಬಂಧುವೋ ಮಿತ್ರನೋ ಹೆಚ್ಚಾದ ಏಳ್ಗೆಯನ್ನು ಸಾಧಿಸಿದಾಗ ಉರಿದುಕೊಳ್ಳುವವರಿರುವುದಿಲ್ಲವೇ? ಯುಧಿಷ್ಠಿರನ ರಾಜಸೂಯಯಾಗದಲ್ಲಿ ಕಪ್ಪ-ಕಾಣಿಕೆಗಳನ್ನೆಣಿಸುವ ಕಾರ್ಯದಲ್ಲಿ ತೊಡಗಿದ ದುರ್ಯೋಧನನು ಅದೆಷ್ಟು ಕರುಬಿದನು, ಅದೆಷ್ಟು ಕೊರಗಿದನು! ಈ ಕರುಬಾಟ-ಕೊರಗಾಟಗಳು ಮಿತಿಮೀರಿದಲ್ಲಿ, ಬರೀ ಕೇಡು ಬಗೆಯುವುದಿರಲಿ, ಹತ್ಯೆಮಾಡಲೂ ಹೇಸದವರುಂಟು! ದುಷ್ಟಸಂಕಲ್ಪ: ನಿಕೃಷ್ಟಕಾರ್ಯ. ಆ ಯಾಗದ ವಿಷಯ ಬಿಡಿ. ಪಾಂಡವರು ಚಿಕ್ಕವರಾಗಿದ್ದಾಗಲೂ ಕೌರವರಿತ್ತ ಕಿರಿಕಿರಿಗಳೇನು ಕಿರಿದಾದವೇ? ದುರಾಲೋಚನೆಯ ದೂರಾಲೋಚನೆಗಳೂ ಸತತವಾಗಿದ್ದವೇ.


ದುಸ್ಸಂಕಲ್ಪಗಳಂತೆಯೇ ಸತ್ಸಂಕಲ್ಪಗಳೂ ಫಲಕಾರಿಯೇ: ಸತ್ಕಾರ್ಯಗಳಿಗವು ಪ್ರೇರಕ. ಶಿಬಿ-ದಧೀಚಿಗಳ ಮಹಾತ್ಯಾಗದ ಹಿಂದಿರುವ ಸಂಕಲ್ಪವೇನು ಸಾಮಾನ್ಯವಾದುದೇ? ಇವೆಲ್ಲದರ ಸಾರವೆಂದರೆ, ನಾವು ಮಾಡುವ ಕರ್ಮಗಳೆಲ್ಲಾ ಪುಣ್ಯಸಂಪಾದನೆಗೋ ಪಾಪಸಂಪಾದನೆಗೋ ಸದಾ ನಮ್ಮನ್ನು ಈಡುಮಾಡುತ್ತಿರತಕ್ಕವೇ - ನಮಗೆ ತಿಳಿದಿದ್ದರೂ, ತಿಳಿಯದಿದ್ದರೂ!


ಪಾಪದ ಬೀಜಕ್ಕೆ ದುಃಖವೇ ಫಲವಲ್ಲವೇ? ಹಾಗಾದರೆ ದುಃಖವು ಬೇಡವೆನ್ನುವರು ಪಾಪಸಂಕಲ್ಪಗಳೇ ಮೂಡದಿರುವಂತೇನನ್ನಾದರೂ ಮಾಡಬೇಕು. ಅಲ್ಲದೆ, ಸತ್ಸಂಕಲ್ಪಗಳಿದ್ದಾಗಲೂ ನಮ್ಮಿಂದ ಅಚಿಂತಿತ-ಪಾಪಕೃತ್ಯಗಳು ಘಟಿಸಿಬಿಡಬಹುದು! ಹಾಗಾಗುವುದಿದ್ದಲ್ಲಿ ಪಾಪಲೇಪವಾಗದಂತಾಗಲು ಏನಾದರೂ ಉಪಾಯವುಂಟೇ?


ಉಂಟೆನ್ನುತ್ತದೆ ಗೀತೆ, ಸುಂದರವಾದೊಂದು ಉಪಮೆಯೊಂದಿಗೆ: ಕಮಲದೆಲೆಗೆ ನೀರಂಟೀತೇ?  ಹಾಗೆಯೇ, ಪಾಪವಂಟದಂತಿರುವುದೂ ಶಕ್ಯ. ಹೇಗೆ? ಕರ್ಮಗಳನ್ನು ಬ್ರಹ್ಮದಲ್ಲಿಟ್ಟು, ಸಂಗವನ್ನು ತೊರೆದು, ಕರ್ಮ ಮಾಡಿದಲ್ಲಿ- ಎಂದಲ್ಲಿ ಹೇಳಿದೆ. 


ಈ ಗೀತೋಕ್ತಿಗೆ ನಾನಾವ್ಯಾಖ್ಯಾನಗಳಿದ್ದರೂ, ಯಾರೊಬ್ಬರೂ ಕೊಟ್ಟಿಲ್ಲದ ಸರಳಸುಂದರ ವಿವರಣೆಯೊಂದನ್ನು ಶ್ರೀರಂಗಮಹಾಗುರುಗಳು ಕೊಟ್ಟಿದ್ದರು. ಪೂರ್ಣಶ್ಲೋಕಕ್ಕೂ ಶ್ಲೋಕಸಂದರ್ಭಕ್ಕೂ ಸಲ್ಲುವ ಸಮಾಧಾನವದು; ಉಪಮೆಯ ಅಂತರಂಗದ ಸೊಬಗಿಗೆ ಹಿಡಿದ ಕನ್ನಡಿಯದು.


ಕಮಲದಳಕ್ಕೆ ನೀರಂಟದೇಕೆಂದರೆ, ಪದ್ಮಪತ್ರದಲ್ಲಿ ಒಂದು ಬಗೆಯ 'ಸ್ನೇಹ'ವಿರುತ್ತದೆ. "ಸ್ನೇಹ"ವೆಂಬುದಕ್ಕೆ ಜಿಡ್ಡು ಎಂಬರ್ಥವೂ ಉಂಟು; ನೀರಿನ ಅಂಟುಂಟಾಗದಂತೆ ಈ ಸ್ನೇಹವು "ಕಾಪಾಡುತ್ತದೆ". ಹಾಗೆಯೇ ಪಾಪಲೇಪವೇರ್ಪಡದಿರಲು ಬೇಕಾದುದೆಂದರೆ ಭಗವಂತನೊಂದಿಗಿನ ಸ್ನೇಹ. ಅದನ್ನಿಟ್ಟುಕೊಂಡವನಿಗೆ ಪಾಪಮಾತ್ರವೇನು, ಪುಣ್ಯಲೇಪವೂ ಏರ್ಪಡದು! ಸರ್ವ-ಸುಕೃತ-ದುಷ್ಕೃತ(=ಪುಣ್ಯ-ಪಾಪ)ಗಳನ್ನೂ ಮೀರಿರುವುದಲ್ಲವೇ ಬ್ರಾಹ್ಮೀಸ್ಥಿತಿ?: ಅದುವೇ ಜೀವನದ ಚರಮಲಕ್ಷ್ಯ.


ಆ ಸ್ಥಿತಿಯತ್ತ ಸಾಗಲು, ಕರ್ಮಗಳನ್ನು ನಾವು ಅನವರತ ಮಾಡುತ್ತಿದ್ದರೂ ಅವುಗಳಿಂದೇಳುವ ಪುಣ್ಯ-ಪಾಪಗಳ ಅಂಟು(ಕಗ್ಗಂಟು)ಗಳಿಂದ ತಪ್ಪಿಸಿಕೊಳ್ಳಲು ಸು(ಲಭ)ಮಾರ್ಗವೆಂದರೆ: ಭಗವಂತನೊಂದಿಗಿನ ಹಾರ್ದಸ್ನೇಹ!


ಸೂಚನೆ: 15/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.