Sunday, May 7, 2023

ಯಕ್ಷ ಪ್ರಶ್ನೆ37 (Yaksha prashne 37)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 36 ಎಲ್ಲಾ ಜನರಿಗೂ ಅತಿಥಿ ಯಾರು ?

ಉತ್ತರ - ಅಗ್ನಿ

ಯಕ್ಷನು ಇಲ್ಲಿ ಕೇಳುವ ಪ್ರಶ್ನೆಯು ಅಗ್ನಿಗೂ ಅತಿಥಿಗೂ ಇರುವ ಸಂಬಂಧವನ್ನು ಕುರಿತಾದದ್ದು. ನಾವೆಲ್ಲರೂ ಕೇಳಿದಂತೆ ನಮ್ಮ ಮನೆಗೆ ಯಾರು ಹೊರಗಡೆಯಿಂದ ಬರುತ್ತಾರೋ ಅವರನ್ನು ಅತಿಥಿ ಎಂದು ಕರೆದು ಅವರನ್ನು ಗೌರವಿಸುವ ರೂಢಿ ಬಂದಿದೆ. ಅಗ್ನಿಯು ಹೇಗೆ ಅತಿಥಿಯಾಗಬಲ್ಲದು? ಎಂಬುದು ಈ ಪ್ರಶ್ನೆಯ ಆಶಯವಾಗಿದೆ. 

ತಿಥಿ ಎಂದರೆ ಕಾಲದ ಗಣನೆಯ ಒಂದು ಮಾಧ್ಯಮ. ಕಾಲಕ್ಕೆ - ಗಣನೆಗೆ ಸಿಗುವ ವಿಷಯ ಎಂದರ್ಥ. ಪ್ರತಿಪತ್, ದ್ವಿತೀಯಾ ಇತ್ಯಾದಿಯಾಗಿ ಕಾಲವನ್ನು ವಿಭಾಗಿಸುತ್ತೇವೆ. ಇಲ್ಲಿ ಶ್ರೀರಂಗಮಹಾಗುರುಗಳು ಹೇಳಿದ ಮಾರ್ಮಿಕವಾದ ಮಾತು ಸ್ಮರಣೀಯ - "ಕಾಲಾತೀತವಾದ ವಿಷಯವನ್ನು ಹೊತ್ತುಕೊಂಡು ಬರುವವನೇ ಅತಿಥಿಯಪ್ಪ" ಎಂದು. ಕಾಲಾತೀತನಾದವನು ಭಗವಂತ. ಅವನನ್ನು ಯಾರು ತನ್ನೊಳಗೆ ಧರಿಸಿ ಬರುತ್ತಾರೋ ಅಂತವರು ಅತಿಥಿಗಳು. 'ಅತಿಥಿಃ ದೇವವತ್ ಪೂಜ್ಯಃ' ಎನ್ನುವಂತೆ ಅವರು ದೇವರಲ್ಲದೆ ಮತ್ತೇನೋ! ಯಾರು ದೇವರನ್ನು ಹೊತ್ತುಕೊಂಡಿರುವರೋ ಅವರು ಪೂಜ್ಯರು, ಅವರು ಅತಿಥಿಗಳು.ಇಲ್ಲಿ ಅಗ್ನಿಯನ್ನು ಅತಿಥಿಯೆಂದು ಕರೆಯಲು ಪ್ರಧಾನವಾಗಿ ಇದೇ ಕಾರಣ ಸಾಕಲ್ಲವೇ. 

ಅಗ್ನಿಯು ದೇವರ ಪ್ರತೀಕ. ಭವಂತನ ವರ್ಣ ಅರಿಶಿನ, ಅಗ್ನಿಯ ವರ್ಣವೂ ಅರಿಶಿನ. ಭಗವಂತ ಬೆಳಗುವ ಮತ್ತು ಬೆಳಗಿಸುವ ಸ್ವಭಾವದವ, ಅಗ್ನಿಯೂ ತಾನೂ ಬೆಳಗಿ ಮತ್ತೊಂದನ್ನು ಬೆಳಗಿಸುವುದೇ ಆಗಿದೆ. ಊರ್ಧ್ವದಲ್ಲಿ ಎಲ್ಲಕ್ಕಿಂತಲೂ ಮೇಲೆ ಇರುವವನು ಭಗವಂತನಾದರೆ, ಎಲ್ಲಕ್ಕಿಂತಲೂ ಮೇಲೆಕ್ಕೆ ಹೋಗುವ  ಸ್ವಭಾವದ್ದು ಅಗ್ನಿ. ಹೀಗೆ ಸರ್ವವಿಧದಲ್ಲೂ ಭಗವಂತನನ್ನು ಹೋಲುವ ಸ್ವಭಾವ ಅಗ್ನಿಯಷ್ಟು ಈ ಪ್ರಪಂಚದಲ್ಲಿ ಬೇರೊಂದಿಲ್ಲ. ದೇವತಾಪ್ರಸನ್ನತೆಗೆ ಕ್ಷಿಪ್ರ ಕಾರಣವಾಗಲ್ಲದು ಎಂಬ ಕಾರಣದಿಂದಲೇ ದೀಪದ ಆರಾಧನೆಯು ನಮ್ಮಲ್ಲಿ ಬಂದಿದೆ. ಭವಂತನನ್ನು ಪರಿಪೂರ್ಣವಾಗಿ ಧರಿಸಿರುವ ವಸ್ತುವೆಂದರೆ, ಅದೇ ಅಗ್ನಿ. ಇದು ತಾನೆ ಅತಿಥಿಪದಕ್ಕೆ ವಿಷಯವಾಗಲ್ಲದು. 

'ಆಗ್ನೀಷೋಮೌ ಆತ್ಮಭಾಗೌ' ಎಂಬಂತೆ ಈ ಸೃಷ್ಟಿಗೆ ಕಾರಣವೇ ಅಗ್ನಿ. ಅಗ್ನಿಯಿಂದಲೇ ಸಮಸ್ತ ಪ್ರಪಂಚವೂ ಸೃಷ್ಟಿಯಾದದ್ದು. ಸಮಸ್ತ ಸೃಷ್ಟಿಯಲ್ಲೂ ಅಗ್ನಿಯ ಅಂಶ ಇದ್ದೇ ಇದೆ. ಅಗ್ನಿಯು ಇಲ್ಲದಿದ್ದರೆ ಈ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಅಗ್ನಿಯು ಪಂಚಭೂತಗಳಲ್ಲಿ ಒಂದಾಗಿದೆ. ಆಯುರ್ವೇದದಲ್ಲಿ ಆರೋಗ್ಯವಂತನ ಲಕ್ಷಣವನ್ನು ಹೇಳುವಾಗ - ಯಾರಲ್ಲಿ 'ಸಮಾಗ್ನಿಃ- ಅಗ್ನಿಸಾಮ್ಯ ಅಥವಾ ಅಗ್ನಿತತ್ತ್ವದ ಸಮತೋಲನ ಇರುವುದೋ ಅವನನ್ನು ಸ್ವಸ್ಥ' ಎಂದು ಕರೆಯಬೇಕು ಎಂದು ಹೇಳುತ್ತದೆ. ತಿಂದ ಆಹಾರ ಪಚನವಾಗಬೇಕಾದರೆ ಅಗ್ನಿಯ ಸಹಾಯ ಬೇಕೇಬೇಕು. ಭಾರತೀಯರ ಜೀವನವು ಅಗ್ನಿಯಲ್ಲೇ ನಿಂತಿದೆ. ಭಾರತೀಯರ ಜೀವನ ಆರಂಭವಾಗುವುದೇ ಅಗ್ನಿಯಿಂದ. ಬ್ರಹ್ಮಚಾರಿಯಾದವನು ಅಗ್ನಿಕಾರ್ಯವನ್ನು ಮಾಡುವುದರ ಮೂಲಕ ಮತ್ತು, ಗೃಹಸ್ಥನಾದವನು ಪ್ರತಿನಿತ್ಯ ವೈಶ್ವದೇವ, ಅಗ್ನಿಹೋತ್ರಾದಿ ಕರ್ಮವನ್ನು ಮಾಡುವುದರ ಮೂಲಕ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಅವನಿಗೆ ಅಗ್ನಿಯ ಉಪಾಸನೆ ನಿತ್ಯಕರ್ತವ್ಯವಾಗಿದೆ. ಇಂತಹ ಅಗ್ನ್ಯುಪಾಸಕನನ್ನು ಶ್ರೇಷ್ಠನೆಂದು ವೇದ ಶಾಸ್ತ್ರಗಳು ಸಾರುತ್ತವೆ. ಯಾವತ್ತು ಇಂತಹ ಸಾಧಕರು ಮನೆಗೆ ಆಗಮಿಸುತ್ತಾರೋ ಆ ದಿನವೇ ಶ್ರಾದ್ಧವನ್ನು ಮಾಡಬಹುದು ಎನ್ನುವಷ್ಟರಮಟ್ಟಿಗೆ ಅವರ ಶ್ರೇಷ್ಠತ್ವವನ್ನು ಸಾರಿದ್ದಾರೆ. ಇಂತಹ ಶ್ರೇಷ್ಠವ್ಯಕ್ತಿಯೇ ನಿಜವಾದ ಅತಿಥಿಯಾಗಬಲ್ಲ. ಇದೇ ಅಗ್ನಿಗೂ ಅತಿಥಿಗೂ ಇರುವ ತಾತ್ತ್ವಿಕಸಂಬಂಧ.    

ಸೂಚನೆ : 7/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.