Thursday, May 25, 2023

ದೇವರು- ಒಂದು ಚಿಂತನೆ (Devaru-Ondu Cintane)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ 

(ಪ್ರತಿಕ್ರಿಯಿಸಿರಿ lekhana@ayvm.in)


ದೇವರಿದ್ದಾನೋ ಇಲ್ಲವೋ, ದೇವರು ವಸ್ತುಸ್ಥಿತಿಯೇ ಅಥವಾ ಕೇವಲ ಕಲ್ಪನೆಯೇ? ಅವನು ಇರುವುದಾದರೆ ನಮಗೆಲ್ಲ ಏಕೆ ಕಾಣಿಸಿಕೊಳ್ಳುವುದಿಲ್ಲ? ದೇವರ ಮೇಲಿನ ನಂಬಿಕೆ ಶ್ರೇಷ್ಠ, ಕನಿಷ್ಠ. ಹೀಗೆ ಸಾಗುತ್ತದೆ ಚರ್ಚೆ,ಭಾಷಣಗಳು. ದೇವರು ಎನ್ನುವ ವಿಷಯದ ಬಗ್ಗೆ ಶತ ಶತಮಾನಗಳ ಚರ್ಚೆ ಅವ್ಯಾಹತವಾಗಿ ನಡೆದಿದೆ, ನಡೆಯುತ್ತಲೇ ಇದೆ.

ಭಾರತೀಯರಲ್ಲಿ ಅಸಂಬದ್ಧವಾದ ಸಂಸ್ಕೃತಿ. ಜೀವನಕ್ಕೆ ಬೇಕಾದ ವಿಷಯಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ದೇವರು ಎಂದೆಲ್ಲ ಇಟ್ಟುಕೊಂಡು ಹಾಳಾಗಿ ಹೋಗುತ್ತಿದ್ದಾರೆ. ಹೊರದೇಶವರು ಆ ಹೆಸರೇ ಇಲ್ಲದೆಯೇ ಎಷ್ಟು ಮುಂದುವರಿದಿದ್ದಾರೆ. ನಾವು ದೇವರು, ಧರ್ಮ ಎಂದೆಲ್ಲ ಇಟ್ಟುಕೊಂಡು ಎಲ್ಲವೂ ಹಾಳಾಗಿ ಹೋಯಿತು. ಭಾರತೀಯರು ಯಾವುದರಲ್ಲಿ ಮುಂದೆ ಬಂದಿದ್ದಾರೆ ಹೇಳಿ? ಆ ದೇವರು ಎಂದು ಒಂದಿಟ್ಟುಕೊಂಡಿದ್ದರಿಂದಲೇ ಇಷ್ಟು ಅನರ್ಥವಾಯಿತು. ಎಂದೆಲ್ಲಾ ತಮ್ಮ ವಾದವನ್ನು ಮಂಡಿಸುವವರನ್ನು ನಾವು ಕಾಣುತ್ತೇವೆ.ಈ ಮಾತುಗಳು ಕಿವಿಗೆ ಇಂಪಾಗಿರುತ್ತೆ. "ಏತದಗ್ರೇ ಅಮೃತಮಿವ ಪರಿಣಾಮೇ ವಿಷೋಪಮಂ" ಎಂಬಂತೆ ಕೇಳಲು ಅಮೃತದಂತೆ ಎನ್ನಿಸಿದರೂ  ಪರಿಣಾಮದಲ್ಲಿ ವಿಷಮಯ.

ಹಲಸಿನ ಗಿಡವನ್ನೋ ತೆಂಗಿನ ಗಿಡವನ್ನೋ ಬೆಳೆಯುವಾಗ ಅದರಲ್ಲಿ ಕಾಣದ ಬೀಜವೊಂದಿದೆ ಅಂದುಕೊಂಡಿದ್ದರಿಂದಲೇ ಇಷ್ಟು ಪಂಚಾಯಿತಿಯಲ್ಲವೇ? ಅದನ್ನು ತೆಗೆದುಬಿಡಿ ಸ್ವಾಮಿ. ಅಂದಾಗ  ಯಾವುದು ಬೆಳೆಯಬೇಕು ಎಂಬುದು ಪ್ರಶ್ನೆಯಾಗುತ್ತದೆ. ಹಾಗೆ ದೇವರನ್ನು ಜೀವದ ಬೇರಾಗಿ, ಬೀಜವಾಗಿ ತಮ್ಮ ಅನುಭವದಿಂದ ಕಂಡ ಮಹರ್ಷಿಗಳ ನಿರ್ಣಯವೇ ಇಲ್ಲಿ ಪ್ರಮಾಣವಾಗುತ್ತದೆ.

ಜೀವನದಲ್ಲಿ ನಮ್ಮನ್ನು ಕಾಪಾಡಿಕೊಂಡು ಗುರಿಯವರೆಗೂ ತಲುಪಿಸಲೊಂದು ನೇತೃತ್ವ ಬೇಕಾಗುತ್ತದೆ. ಪ್ರಪಂಚದಲ್ಲಿ ಯಾವ ಕೆಲಸಕ್ಕಾದರೂ ಒಂದು ನೇತೃತ್ವವಿರಲೇ ಬೇಕಾಗುತ್ತದೆ. ದೇವರು ಎನ್ನುವ ವಿಷಯವನ್ನು ಮುಂದುವರೆಸಲು ಇದು ಭದ್ರವಾದ ಬುನಾದಿಯಾಗಿದೆ.

ಉದಾಹರಣೆಗೆ ಒಂದು ಉದ್ಯಮ ಪ್ರಾರಂಭವಾಗುತ್ತದೆ. ಅದಕ್ಕೊಂದು ಕಾರ್ಖಾನೆ. ಕಚೇರಿ, ಕೆಲಸಗಾರರು ಎಲ್ಲವೂ ಸೇರಿಕೊಳ್ಳುತ್ತದೆ. ಆ ಉದ್ಯಮ ಆರಂಭಿಸಿದ ಒಬ್ಬ ಪ್ರಧಾನ ನಿರ್ದೇಶಕ(MD) ಇರುತ್ತಾನೆ. ಅವನು ಇಲ್ಲಿ ಯಾವುದನ್ನು ತಯಾರಿಸಬೇಕು ಎನ್ನುವ ಆಶಯವನ್ನಿಟ್ಟುಕೊಂಡಿದ್ದಾನೋ ಅದನ್ನು ಜಾರಿಗೊಳಿಸಲು ಬೇಕಾದ ಕೆಲಸಗಾರರೇ ಅಲ್ಲಿ ಬೇಕಾಗುತ್ತಾರೆ. ಹಾಗೆ ಪ್ರಧಾನನಿರ್ದೇಶಕನ ಅಭಿಪ್ರಾಯವನ್ನು ನಡೆಸುವ ಇತರ ನಿರ್ದೇಶಕರು ಬೇಕಾಗುತ್ತಾರೆ. ಆ ನಿರ್ದೇಶಕರು ಪ್ರಧಾನ ನಿರ್ದೇಶಕನ  ಜೊತೆಯಲ್ಲಿ ಐಕ್ಯವನ್ನು ಸಂಪಾದಿಸಿಕೊಂಡಿರಬೇಕು. ಅವನ ಹೃದಯವನ್ನು ಅರ್ಥ ಮಾಡಿಕೊಂಡಿರಬೇಕು. ಅಂತಹ ಡೈರೆಕ್ಟರ್ ಗಳು ಸೇರಿ ಸಾವಿರಾರು ಜನರನ್ನು ಕೆಲಸಕ್ಕೆ ತೆಗೆದುಕೊಂಡರೆ ಆ ಉದ್ಯಮ ನಿರ್ಮಾಪಕನ ಅಭಿಪ್ರಾಯವನ್ನು ಅಷ್ಟೂ ಜನರಿಗೂ ತಲುಪಿ ಅವರೆಲ್ಲರೂ ಅದನ್ನು ನಿರ್ವಹಿಸುವಂತಿರಬೇಕು.

ಆ ಉದ್ಯಮ ದೊಡ್ಡದಾಗಿ ಬೆಳೆದು ಅದರಲ್ಲಿ ಸಾವಿರಾರು ಕೆಲಸಗಾರರು ಕೆಲಸಮಾಡುತ್ತಿದ್ದು ಅವರಿಗೆಲ್ಲಾ ನಿರ್ದೇಶಕನ ಪರಿಚಯ ಇಲ್ಲವೆಂದ ಮಾತ್ರಕ್ಕೆ ಆ ಉದ್ಯಮಕ್ಕೆ ಮೂಲವಾಗಿ ನಿರ್ದೇಶಕರೇ ಇಲ್ಲ ಎನ್ನಲಾಗುವುದೇ?  ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆ ಕೊಡುತ್ತಿದ್ದರು- ಮೈಸೂರಿನ ಕನ್ನಂಬಾಡಿ ಕಟ್ಟೆ ಅಣೆಕಟ್ಟು ಮೊದಲು ಶ್ರೀ ವಿಶ್ವೇಶ್ವರಯ್ಯನವರ ತಲೆಯಲ್ಲಿ ನಿರ್ಮಾಣವಾಯಿತು ಎಂದು. ಅವರ ತಲೆಯಲ್ಲಿ ಸಿಮೆಂಟ್, ಜಲ್ಲಿ, ಮರಳು ಏನೂ ಇಲ್ಲ. ಹಾಗೆಂದೇ ಈ ಮಾತಿಗೆ ಅರ್ಥವಿಲ್ಲ ಎನ್ನಬಹುದೇ? ಇಲ್ಲ. ಅವರ ತಲೆಯಲ್ಲಿ ಆ ಅಣೆಕಟ್ಟಿನ ಪ್ಲಾನ್ ಉಂಟಾಗದಿದ್ದರೆ ಅವರು ಅದನ್ನು ಹೀಗೆ ನಿರ್ಮಿಸಲಾಗುತ್ತಿರಲಿಲ್ಲ ಅಲ್ಲವೇ? ಹಾಗೆಂದು ಅಲ್ಲಿ ಸಿಮೆಂಟ್, ಮರಳಿನಿಂದ ಗಾರೆ ಕೆಲಸ ಮಾಡಿದವರಿಗೆಲ್ಲ ವಿಶ್ವೇಶ್ವರಯ್ಯನವರ ಪರಿಚಯ ಇರಬೇಕೆಂದೇನೂ ಇಲ್ಲ. ಹಾಗೆ ಪರಿಚಯ ಇಲ್ಲವೆಂದ ಮಾತ್ರಕ್ಕೆ ವಿಶ್ವೇಶ್ವರಯ್ಯ ಇರಲೇ ಇಲ್ಲ, ಅವರು ಈ ಅಣೆಕಟ್ಟನ್ನು ನಿರ್ಮಿಸಿಯೇ ಇಲ್ಲ ಎನ್ನಲಾದೀತೇ?

ದೇವರ ವಿಷಯವೂ ಹಾಗೇ. ಇಡೀ ಸೃಷ್ಟಿಯ ಹಿಂಬದಿಯ ಚೈತನ್ಯವಾಗಿ ಅವನು ಬೆಳಗುತ್ತಿದ್ದಾನೆ. ತನ್ನ ಆಶಯದಂತೆ ಸೃಷ್ಟಿ ನಡೆಯಲು ಬೇಕಾದಂತೆ ಅವನ ವಿಭೂತಿಗಳಾಗಿ ದೇವಾನುದೇವತೆಗಳ ಸ್ತೋಮವನ್ನೇ ಇಟ್ಟುಕೊಂಡಿದ್ದಾನೆ ಎಂಬುದು ಅವನನ್ನು, ಅವನ ಸೃಷ್ಟಿ ರಹಸ್ಯವನ್ನು  ತಮ್ಮ ತಪಸ್ಯೆಯಿಂದ ಕಂಡು ಅನುಭವಿಸಿದ ಈ ದೇಶದ ಮಹರ್ಷಿಗಳ ಮಾತು. ಅವನು ನಮ್ಮ ಇಂದ್ರಿಯಗಳೆಲ್ಲದರ ಹಿಂದಿನ ಶಕ್ತಿಯಾಗಿ ಇದ್ದೇ ಇದ್ದಾನೆ. ಅವನಿಲ್ಲ ಎನ್ನಲೂ ಸಹ ಅವನ ಶಕ್ತಿಯೇ ಉಪಯೋಗವಾಗುತ್ತಿದೆ. ನಮಗೆ ಅವನ ಪರಿಚಯವಿಲ್ಲ ಎಂದ ಮಾತ್ರಕ್ಕೆ ಅವನು ಇಲ್ಲವೇ ಇಲ್ಲ ಎನ್ನುವುದು ಮೂರ್ಖತನ. ಎಲ್ಲರ ತಲೆಯೂ ಅವನ ಶಕ್ತಿಯಿಂದಲೇ ಕೆಲಸ ಮಾಡುವುದು. ತಲೆಯನ್ನು ಸುಶಿಕ್ಷಿತವಾಗಿ ಬೆಳೆಸಿಕೊಂಡಾಗ ಅವನ ಆಶಯದಂತೆ ನೆಮ್ಮದಿಯ ಜೀವನ. ಅದಿಲ್ಲವಾದರೆ ಅವನ ಶಕ್ತಿಯನ್ನೇ ಹೇಗುಹೇಗೋ ಬಳಸಿ ಕಡೆಯಲ್ಲಿ ಆ ಶಕ್ತಿಯೇ ಇಲ್ಲ ಎಂಬ ಬೇಜವಾಬ್ದಾರಿತನದ ಮಾತು.

ನ ಶಕ್ಯಃ ಚಕ್ಷುಷಾ ದ್ರಷ್ಟುಂ ದೇಹೇ ಸೂಕ್ಷ್ಮತಮೋ ವಿಭು:- ನಮ್ಮಲ್ಲಿ ಸೂಕ್ಷ್ಮತಮವಾಗಿ ಬೆಳಗುತ್ತಿರುವ ಆ ಚೈತನ್ಯವನ್ನು ಬರಿಯ ನಮ್ಮ ಚರ್ಮ ಚಕ್ಷುಸ್ಸಿನಿಂದ ನೋಡಲಾಗದು ಎಂದು ಅವರೇ ಸಾರಿದ್ದಾರೆ. ಆದರೆ "ದೃಶ್ಯತೇ ಜ್ಞಾನಚಕ್ಷುರ್ಭಿ: ತಪಶ್ಚಕ್ಷುರ್ಭಿರೇವ ಚ"- ಜ್ಞಾನದ ಕಣ್ಣಿನಿಂದ, ತಪಸ್ಸಿನ ಕಣ್ಣಿನಿಂದ ಅವನನ್ನು ನೋಡಬಹುದು ಎಂದೂ ಪಕ್ಕದಲ್ಲೇ ಹೇಳಿದ್ದಾರೆ. ಅಂತಹ ತಪಸ್ಸು, ತತ್ಪರಿಣಾಮದಿಂದ ಲಭಿಸಿದ ಜ್ಞಾನದ ಕಣ್ಣಿನಿಂದ ನೋಡಲು, ನೋಡಿ ಅಮಿತವಾದ ಆನಂದವನ್ನು ಅನುಭವಿಸಲು ಸಾಧ್ಯ ಎಂಬ ಘೋಷಣೆ ಅವರದು. ಕಣ್ಣಿನ ದೃಷ್ಟಿಗೆ ಎಟುಕದ ಸೂಕ್ಷ್ಮವಾದ ಭೌತಿಕ ಪದಾರ್ಥವನ್ನು ನೋಡಬೇಕಾದರೆ ನಾವು ಸೂಕ್ಷ್ಮದರ್ಶಕವನ್ನು ಉಪಯೋಗಿಸಬೇಕಿದೆ. ಎಂದಮೇಲೆ ಅಭೌತಿಕವಾಗಿ, ಇಂದ್ರಿಯಾತೀತವಾಗಿ ಬೆಳಗುವ ದೇವರನ್ನು ಬರಿಗಣ್ಣಿಂದ ನೋಡಬಯಸಿದರೆ ಹೇಗೆ? ಅದಕ್ಕೆ ಬೇಕಾದ ತಪಸ್ಸಿನ ಕಣ್ಣುಗಳನ್ನು ಜ್ಞಾನಿಗಳ ಮಾರ್ಗದರ್ಶನದಿಂದ ಸಂಪಾದಿಸಿ ಅನುಭವಿಸಬೇಕಾದ ವಿಷಯವದು.

ನಾವು ದೇವರು ಇದ್ದಾನೆ ಎನ್ನಲಿ, ಇಲ್ಲ ಎನ್ನಲಿ ಅವನಿರುವುದು ವಸ್ತುಸ್ಥಿತಿ. ಶ್ರೀ ರಂಗಪ್ರಿಯ ಸ್ವಾಮಿಗಳು ತಮಾಷೆಯಾಗಿ ಹೇಳಿದಂತೆ-ಇಷ್ಟು ಜನ ನಾನಿಲ್ಲ ಎನ್ನುತ್ತಿದ್ದಾರಲ್ಲ ಎಂದು ಅವನೇನೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ವಿಶ್ವ ಚೈತನ್ಯ ಶಕ್ತಿಯಾಗಿ ಅವನು ಎಂದೆಂದೂ ಇದ್ದಾನೆ ಎಂಬುದು ಅವನನ್ನು ಸದಾ ಅನುಭವಿಸುತ್ತಿರುವ ಜ್ಞಾನಿಗಳ ಅನುಭವದ ಮಾತು. ನಮಗೆ ನೆಮ್ಮದಿ, ಆನಂದ, ಬೇಕೆಂದಾದರೆ ಜ್ಞಾನಿಗಳ ಮಾರ್ಗದರ್ಶನದಿಂದ ಅವನನ್ನು ನೋಡುವ ಪ್ರಯತ್ನ ಮಾಡಿ ಕೃತಾರ್ಥರಾಗಬಹುದು. ಹಾಗೆ ನಮ್ಮ ಮೂಲವನ್ನು ಮುಟ್ಟಿ ಬಾಳಿದಾಗ  ಪರಿಷ್ಕೃತವಾದ ಜೀವನ ನಮ್ಮದಾಗುತ್ತದೆ. ಇಲ್ಲವೇ ಇತರ ಪ್ರಾಣಿಗಳಂತೆ ಕೇವಲ ಭೌತಿಕ ಸುಖ ದುಃಖಗಳನ್ನಷ್ಟೇ ಅನುಭವಿಸುತ್ತಾ ಅಪರಿಷ್ಕೃತ ಜೀವನ ನಡೆಸುತ್ತಿರಬಹುದು. ನಮ್ಮ ಜೀವನದಲ್ಲಿ ಏನು ಬೇಕು ಎಂದು ನಾವೇ ತೀರ್ಮಾನಿಸಬೇಕು. ನಮ್ಮ ಪೂಜ್ಯ ಪೂರ್ವಜರು ಅರುಹಿದ ದೇವರು ಎಂಬ ಆ ಪರಮ ಸತ್ಯದತ್ತ ನಮ್ಮ ಮನಸ್ಸುಗಳು ಹರಿಯಲಿ ಎಂದು ಪ್ರಾರ್ಥಿಸೋಣ.

ಸೂಚನೆ: 25/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.