Sunday, May 21, 2023

ಯಕ್ಷ ಪ್ರಶ್ನೆ38 (Yaksha prashne 38)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 37 ಸನಾತನ ಧರ್ಮವು ಯಾವುದು ?

ಉತ್ತರ - ಅಮೃತ

ಯಕ್ಷನು ಕೇಳುವ ಈ ಪ್ರಶ್ನೆಯಲ್ಲಿ ಸನಾತನ, ಧರ್ಮ ಮತ್ತು ಅಮೃತ ಎಂಬ ಮೂರು ಶಬ್ದಗಳನ್ನು ವಿವೇಚಿಸಬೇಕಾಗಿದೆ. ಸನಾತನ ಮತ್ತು ಧರ್ಮ ಎಂಬ ಪದಗಳು ಇಂದು ಸ್ಥಾನಭ್ರಷ್ಟವಾಗಿರುವುದು ಕಂಡುಬರುತ್ತದೆ. ಪದವೆಂದರೆ ಸ್ಥಾನ. ಪ್ರತಿಯೊಂದು ಶಬ್ದವೂ ಯಾವುದೋ ಒಂದು ಸ್ಥಾನದಿಂದಲೇ ಉತ್ಪತ್ತಿಯಾಗುತ್ತದೆ ಎಂಬುದು ಸಂಸ್ಕೃತಭಾಷಾಶಾಸ್ತ್ರದ ಪರಿಭಾಷೆ. ಭಾರತೀಯ ಮಹರ್ಷಿಗಳ ಅಂತರಂಗದ ಸಾಧನೆಯ ಬಲದಿಂದ ಅವರ ಅಂತಃಪ್ರಪಂಚದಲ್ಲಿ ಗೋಚರವಾಗುವ ಶಬ್ದಗಳ ಸಾಲಿಗೆ ಸೇರುವಂತಹ ಉತ್ಕೃಷ್ಟವಾದ ಶಬ್ದಗಳಿವು. ಆ ನೇರದಲ್ಲಿ ಈ ಶಬ್ದಗಳ ನಿಷ್ಕರ್ಷೆಯನ್ನು ಮಾಡಬೇಕಾಗುತ್ತದೆ. 

'ಸನಾತನ' ಎಂಬ ಪದಕ್ಕೆ ಶ್ರೀರಂಗಮಹಾಗುರುಗಳು ಮಹಾಭಾರತದ ಈ ಶ್ಲೋಕವನ್ನು ಹೇಳುತ್ತಿದ್ದರು. " ಸ ಹಿ ಲೋಕಯೋನಿಃ ಅಮೃತಸ್ಯ ಪದಂ ಸೂಕ್ಷ್ಮಂ ಪರಾಯಣಮ್ ಅಚಲಂ ಹಿ ಪದಮ್ । ತ್ಸಾಂಖ್ಯಯೋಗಿಭಿಃ ಉದಾಹೃತಂ ತಂ ಬುದ್ಧ್ಯಾ ಯತಾತ್ಮಭಿರಿದಂ ಸನಾತನಮ್ ॥" ಎಂಬುದಾಗಿ. ಅಂದರೆ ಯಾವುದು ಈ ಲೋಕದ ಉತ್ಪತ್ತಿಗೆ ಮೂಲಕಾರಣವಾಗಿದೆಯೋ, ಶಾಶ್ವತವಾದ ಸ್ಥಾನವೋ, ಅತ್ಯಂತ ಸೂಕ್ಷ್ಮವೂ, ಎಲ್ಲಾ ಜೀವಿಗಳ ಪರಮಗತಿಯೂ, ಅಚಲವಾದದ್ದೋ, ಸಾಂಖ್ಯ ಮತ್ತು ಯೋಗಶಾಸ್ತ್ರ ಕೋವಿದರಿಂದ ತಿಳಿಯಲ್ಪಟ್ಟಿದ್ದೋ, ಅದು 'ಸನಾತನ' ಎಂದು. ಅಂದರೆ ಪರಬ್ರಹ್ಮಪದವಿಯನ್ನೇ 'ಸನಾತನ' ಎಂದು ಕರೆದಿದ್ದಾರೆ. ಇದೇ ಪರಮೋತ್ಕೃಷ್ಟ ಧ್ಯೇಯವೆಂದು ಸಾರುವ ಕಂಡೀಶನ್ ಏನುಂಟೋ ಅದನ್ನು 'ಸನಾತನಧರ್ಮ' ಎನ್ನಬಹುದು. ಭಾರತೀಯ ಋಷಿ ಮಹರ್ಷಿಗಳ ಅಂತರಂಗಭೂಮಿಯಲ್ಲಿ ಯಾವುದು ಗೋಚರವಾಗುವಂತಹದ್ದೋ ಅದು ತಾನೆ ಸನಾತನ ಧರ್ಮ. ಅದು ತಾನೇ ಶಾಶ್ವತ, ಅದು ತಾನೇ ಅಮರ- ಮರಣವಿಲ್ಲದ್ದು, ಅಮೃತವಾದುದು!. 

ಸನಾತನ, ಧರ್ಮ ಮತ್ತು ಅಮೃತ ಎಂಬ ಮೂರು ಪದಗಳನ್ನು ವಿಶ್ಲೇಷಿಸಿದರೂ ಕೊನೆಯಲ್ಲಿ ಒಂದೇ ಅರ್ಥವು ಭಾಸವಾಗುತ್ತದೆ. ಇಲ್ಲಿ ಯಕ್ಷನ ಪ್ರಶ್ನೆಯ ಆಶಯವಿಷ್ಟೇ - ನಮ್ಮೆಲ್ಲರ ಜೀವನದ ಗುರಿ ಯಾವುದು? ಎಂದು. ಅದಕ್ಕೆ ಉತ್ತರ ಅಮೃತತ್ವದ ಸಂಪಾದನೆ ಎಂದು. ಧರ್ಮ ಎಂಬ ಶಬ್ದವು ಇಂದು ಮತ ಎಂಬ ಅರ್ಥದಲ್ಲಿ ಬಳಕೆಯಾಗಿತ್ತಿದೆ. ಆದರೆ ಅದು ಹಾಗಲ್ಲ. 'ಧಾರಣಾತ್ ಧರ್ಮಃ' ಎಂದರೆ ನಮ್ಮನ್ನೆಲ್ಲವನ್ನೂ ಯಾವುದು ಧರಿಸಿದೆಯೋ ಅಥವಾ ನಮ್ಮನ್ನು ಹಿಡಿದುಕೊಂಡಿದೆಯೋ ಅದು ಧರ್ಮವಾಗುತ್ತದೆ. ಯಾವುದೋ ಬಗೆಯ ಕಂಡೀಶನ್ ಇರುವುದರಿಂದ ಈ ಜಗತ್ತು ನಿಂತಿದೆ. ಅದು ಈ ಬ್ರಹ್ಮಾಂಡವನ್ನು, ಈ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯವನ್ನು ನಿಯಂತ್ರಿಸುತ್ತಿದೆ. ಆ ಧಾರಕ ಅಥವಾ ನಿಯಂತ್ರಕ ಶಕ್ತಿಯನ್ನು 'ಧರ್ಮ' ಎಂದು ಕರೆಯಲಾಗುತ್ತದೆ. ಅದು ನಿತ್ಯವಾದುದು, ಶಾಶ್ವತವಾದುದು. ಅದಕ್ಕೆ ಮೃತಿ ಇಲ್ಲ. ಆದ್ದರಿಂದಲೇ ಅದು ಅಮರ-ಅಮೃತ. 

ನಮ್ಮ ದಿನನಿತ್ಯದ ಜೀವನವೂ ಇಂತಹದ್ದೇ ಒಂದು ಧಾರಕಶಕ್ತಿಯಿಂದ ನಡೆದುಕೊಂಡು ಬರುತ್ತಿದೆ. ಯಾವುದೋ ಒಂದು ಕಂಡೀಶನ್ ಇದ್ದರೆ ಶರೀರ ಹಾಗೇ ನಿಂತಿಕೊಳ್ಳಬಲ್ಲದು. ಕಣ್ಣು ನೋಡಬಲ್ಲದು. ಇವ್ವೆಲ್ಲದರ ಒಟ್ಟಾರೆಯಾದ ಪರಿವರ್ತಿತಗೊಳ್ಳಬಲ್ಲ ಸ್ಥಿತಿವಿಶೇಷದಿಂದ ಇದೇ ಶರೀರದಲ್ಲಿ ಅದಾವುದೋ ಧರ್ಮವನ್ನು ಅಂದರೆ ಸ್ಥಿತಿಯನ್ನು ಅನುಭವಿಸಬಹುದು. ಅದನ್ನೇ ಆನಂದ, ನೆಮ್ಮದಿ, ಶಾಂತಿ ಎಂದೆಲ್ಲಾ ಕರೆಯುತ್ತಾರೆ. ಇದು ಶಾಶ್ವತವಾದುದು, ಇದು ಸನಾತನವಾದುದು. ಪಾಪ-ಪುಣ್ಯಫಲಕ್ಕೂ ಮೀರಿದುದು, ಅಮೃತವಾದುದು, ನಾಶರಹಿತವಾದುದು. ಇದನ್ನೇ 'ಮೋಕ್ಷ' ಎಂದೂ ಕರೆಯುತ್ತಾರೆ. ಇದೇ ಪ್ರತಿ ಮಾನವನ ಜನ್ಮದ ಹಿಂದಿರುವ ರಹಸ್ಯವೂ ಹೌದು. ಇಂತಹ 'ಅಮರತ್ವವೇ ಸನಾತನ ಧರ್ಮ' ಎಂಬುದು ಯಕ್ಷಪ್ರಶ್ನೆಯ ಆಶಯವಾಗಿದೆ.    

ಸೂಚನೆ : 21/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.