ಮಹಾಭಾರತದ ಪ್ರಸಂಗ. ದುರ್ಯೋಧನಾದಿ ದುಷ್ಟರು ಪರಮ ಪಾವನೆಯಾದ ದ್ರೌಪದಿಯ ವಸ್ತ್ರಕ್ಕೆ ಕೈಹಾಕಿದಾಗ, ಗಂಡಂದಿರೆಲ್ಲ ಯಾವುದೋ ಧರ್ಮಪ್ರಜ್ಞೆಯ ಅಡ್ಡಗೋಡೆಯಿಂದ ಅಸಹಾಯಕರಾಗಿ ಕುಳಿತಿದ್ದಾರೆ. ಆಗ ಪೂಜ್ಯಳಾದ ದ್ರೌಪದಿ ತನ್ನೆಲ್ಲ ಭಾವಗಳನ್ನೂ ಒಟ್ಟುಗೂಡಿಸಿ ಸರ್ವಸಮರ್ಪಣ ಭಾವದಿಂದ "ಗೋವಿಂದಾ" ಎಂದು ಭಗವಂತನನ್ನು ಸಹಾಯಕ್ಕಾಗಿ ಅಂಗಲಾಚಿದಳು. ಹಸ್ತಿನಾವತಿ ಎಲ್ಲಿ? ದ್ವಾರಕೆ ಎಲ್ಲಿ? ಕೂಗಳತೆಯೇ, ಮಾರಳತೆಯೇ ಎನ್ನುತ್ತಾರೆ ದಾಸರು. ಅದು ಜೀವ ನದಿಯೊಂದು ರಭಸದಿಂದ ಸಮುದ್ರವನ್ನು ಸೇರುವ ಕೂಗು. ಅನ್ಯಥಾ ಶರಣಂ ನಾಸ್ತಿ ಎಂಬ ಸರ್ವ ಶರಣಾಗತ ಭಾವದ ಕೂಗು. ಆ ಕೂಗಿನಲ್ಲಿ ನಿನ್ನನ್ನು ಬಿಟ್ಟು ಇನ್ನಾವುದನ್ನೂ ನಾನು ನಿರೀಕ್ಷಿಸುತ್ತಿಲ್ಲವೆಂಬ ನಿಶ್ಚಯ. ಭಗವಂತನಲ್ಲಿ ಏಕಾಂತಿಕ ನಿಷ್ಠೆ. ಇಂದ್ರಿಯ, ಮನೋ ಬುದ್ಧಿಗಳೆಲ್ಲವೂ ಜೀವದೊಡನೆ ಸೇರಿ ಏಕಮುಖವಾಗಿ ಏಕಮಾತ್ರ ಬಂಧುವನ್ನಾಗಿ ಭಗವಂತನನ್ನು ಭಾವಿಸಿ ಕರೆದ ಕೂಗದು. ಅದು ನೇರವಾಗಿ, ಯಾವ ಅಡೆತಡೆಗಳೂ ಇಲ್ಲದೇ ಭಗವಂತನ ಹೃದಯವನ್ನು ಮುಟ್ಟಿದೆ. ವಸ್ತ್ರದಾನ ಮಾಡಿ ಅವಳನ್ನು ಆ ಕ್ಷಣದಲ್ಲಿ ಕಾಪಾಡಿದ್ದೂ ಆಗಿದೆ. ಆದರೆ ಮುಂದೊಂದು ಸಂದರ್ಭದಲ್ಲಿ ಶ್ರೀಕೃಷ್ಣನು ಹೃದಯಕ್ಕೆ ನಾಟಿದ ಆ ಕೂಗನ್ನು ನೆನಪಿಸಿಕೊಂಡು ಆಡುವ ಮಾತು ಅದೆಷ್ಟು ರೋಮಾಂಚಕಾರಿ!
ಗೋವಿಂದೇತಿ ಯದಾsಕ್ರಂದತ್ ಕೃಷ್ಣಾ ಮಾಂ ದೂರವಾಸಿನಂ|
ಋಣಮೇತತ್ ಪ್ರವೃದ್ಧಂ ಮೇ ಹೃದಯಾನ್ನಾಪಸರ್ಪತಿ ||
ಅವಳು ಅತ್ಯುನ್ನತವಾದ ಸ್ಥಾಯಿಯಲ್ಲಿ ಗೋವಿಂದಾ ಎಂದು ಕರೆದಳಲ್ಲಾ.. ಅದಕ್ಕೆ ಪ್ರತಿಯಾಗಿ ನಾನೇನೂ ಕೊಡಲಾರದೇ ಅವಳಿಂದ ಸಾಲ ತೆಗೆದುಕೊಂಡವನಂತೆ ಆಗಿ ಆ ಕೂಗು ಹೃದಯವನ್ನು ಸುತ್ತಿಕೊಂಡಿದೆ ಎಂದು ಶ್ರೀಕೃಷ್ಣನು ನೋಯುತ್ತಾನೆ.
ಅಂತಹ ಭಕ್ತಿಯ ಪರಾಕಾಷ್ಠೆಯಿಂದ ಬಂದ ಕೂಗು ಅವನಿಗೆ ಖಂಡಿತ ಕೇಳಿಸುತ್ತದೆ ಎಂಬುದು ಅನುಭವಿಗಳ ಮಾತು. ಹಾಗಾದರೆ ನಮ್ಮ ಕೂಗೇಕೆ ಅವನಿಗೆ ಕೇಳಿಸುತ್ತಿಲ್ಲ? ಕೇಳಿಸಿದ್ದರೆ ಅವನ ಅನುಗ್ರಹದ ಅನುಭವ ನಮಗೇಕೆ ಆಗುತ್ತಿಲ್ಲ? ಎಂದರೆ ಹಾಗೆ ಕರೆಯಲು ನಾವಿನ್ನೂ ಕಲಿತಿಲ್ಲ. ನಮ್ಮ ಕರಣಗಳೆಲ್ಲ ಅವನೆಡೆಗೆ ಹೋಗಲಾರದೇ ಕುಂಟುತ್ತವೆ. ನಮ್ಮ ಲೌಕಿಕ ಜೀವನದ ಅಂಟು ಬಲವಾಗಿದ್ದು ಹಾಗೆ ಶರಣಾಗತರಾಗಿ ಅವನನ್ನು ಕರೆಯಲು ಆಗುತ್ತಿಲ್ಲ. ನಾವು ಇಂದ್ರಿಯ ಶರಣರಾಗಿದ್ದೇವೆ. ಲೋಕಜೀವನದ ಬಗೆ ಬಗೆಯ ಆಕರ್ಷಣೆಗಳಿಗೆ ಶರಣಾಗತರಾಗಿದ್ದೇವೆ.
ನಿಸರ್ಗದಲ್ಲಿ ಗಲಾಟೆ, ಗೌಜುಗಳ ಮಧ್ಯೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳದಿರುವ ಪ್ರಸಂಗವೂ ಇದೆ. ಆದರೆ ಆಕಾಶವಾಣಿ ಅಥವಾ ದೂರದರ್ಶನದಲ್ಲಿ ಎಲ್ಲಿಂದಲೋ ಪ್ರಸಾರವಾಗುವ ಕಾರ್ಯಕ್ರಮಗಳು ನಮ್ಮ ಮನೆಯವರೆಗೂ ಬಂದು, ನಮ್ಮ ರೇಡಿಯೋ ಅಥವಾ ಟಿ.ವಿಯಲ್ಲಿ ಕೇಳುವಂತಾಗುತ್ತವೆ. ಏಕೆಂದರೆ ಅಲ್ಲೊಂದು ಸಜ್ಜು( tuning) ಇದೆ. ನಿಸರ್ಗದಲ್ಲಿ ಧ್ವನಿ, ದರ್ಶನಗಳು ಪ್ರಯಾಣ ಮಾಡಬಲ್ಲವು ಎಂಬ ವಿಜ್ಞಾನವರಿತು ಅದಕ್ಕೆ ತಕ್ಕ ಸಜ್ಜನ್ನು ಮಾಡಿದಾಗ ದೂರದರ್ಶನ, ಆಕಾಶವಾಣಿಯಲ್ಲಿ ನಾವು ಕೇಳುತ್ತಿರುವುದು ನಮ್ಮ ಅನುಭವದಲ್ಲೇ ಇದೆ. ಹಾಗೇ ಸರ್ವವ್ಯಾಪಿಯಾದ ಭಗವಂತನು ನಮ್ಮ ಕೂಗನ್ನು ಕೇಳಿ ಅದಕ್ಕೆ ಪ್ರತಿಕ್ರಿಯೆ ಕೊಡುವಂತಾಗಲೂ ಸಹ ನಮ್ಮಲ್ಲಿ ಒಂದು ಬಗೆಯ ಸಜ್ಜು-tuning ನ್ನು ಅಪೇಕ್ಷಿಸುತ್ತದೆ. ಆ tuning ದ್ರೌಪದಿಯಲ್ಲಿತ್ತು. ಅದು ಭಾಗವತ ಶ್ರೇಷ್ಠರಲ್ಲೆಲ್ಲ ಇದೆ. ಅಷ್ಟೇಕೆ ಆದಿಮೂಲಾ ಎಂದು ಗಜೇಂದ್ರನು ಕರೆದ ಕೂಗು ಸಹ ಅವನಿಗೆ ಕೇಳಿಸಿತ್ತಲ್ಲವೇ? "ಜಗದ್ಧಿತವನ್ನು ಕೋರುವ ಕೃಷ್ಣನನ್ನು ಸೇರಿಕೊಂಡು ಬಾಳಿ.ಅವನನ್ನು ಬಿಟ್ಟರೆ ಬೇರೆ ಗತಿಯಿಲ್ಲ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಹಾಗೆ ಅವನನ್ನು ಕರೆಯುವ ಸರ್ವ ಶರಣಾಗತ ಭಾವಸಮೃದ್ಧಿ ನಮಗೆಲ್ಲ ಬರಲಿ, ಅವನ ಅನುಗ್ರಹ ಧಾರೆಯು ನಮ್ಮೆಲ್ಲರಮೇಲೆ ಹರಿಯುವಂತಾಗಲಿ ಎಂದು ಆ ಸರ್ವೇಶ್ವರನನ್ನು ಪ್ರಾರ್ಥಿಸೋಣ.