Tuesday, October 15, 2019

ಹನುಮಂತನ ಆದರ್ಶ ಮತ್ತು ಅದರ ಫಲ (Hanumantana adarsha mattu adara phala)

ಲೇಖಕರು:  ವಾದಿರಾಜ ಪ್ರಸನ್ನ



ಶ್ರೀಮದ್ರಾಮಾಯಣದಲ್ಲಿ ನಡೆದ ಒಂದು ಪ್ರಸಂಗ ಹೀಗಿದೆ ಲಂಕಾಧೀಶನಾದ ರಾವಣನು ಮಾರುವೇಷದಲ್ಲಿ ಬಂದುಸೀತೆಯನ್ನು ಅಪಹರಿಸಿ ಕೊಂಡುಹೋಗಿ, ಅಶೋಕ ವನದಲ್ಲಿರಿಸಿ ಹತ್ತು ತಿಂಗಳುಗಳು ಕಳೆದಿತ್ತು. ಪ್ರಣಯ ಭಿಕ್ಷೆಯಾಚಿಸಿ, ಅದು ಕೈಗೂಡದೇ ರಾವಣನಿಗೆ ರೋಸಿಹೋಗಿತ್ತು. ಕುಪಿತನಾದ ರಾವಣನು ಇನ್ನು ಎರಡು ತಿಂಗಳುಗಳ ಕಾಲದ ವಾಯಿದೆಯನ್ನು ಕೊಟ್ಟು, ಒಪ್ಪದಿದ್ದರೆ ಅವಳನ್ನು ಕೊಂದು ತುಂಡು - ತುಂಡಾಗಿ ಕತ್ತರಿಸಿ ಹಸಿ ಮಾಂಸವನ್ನೇ ಬೆಳಗಿನ ಉಪಾಹಾರಕ್ಕೆ ಬಡಿಸಿ ಎಂದು ಕೋಪದಿಂದ  ಸೇವಕರಿಗೆ ಆಜ್ಞಾಪಿಸಿದನು.

ಸೀತೆಯೂ ಸಹ ರಾವಣನಂತಹ ನೀಚನನ್ನು ನೋಡಲೂ ಇಚ್ಚಿಸದೇ  ಒಣ ಹುಲ್ಲುಕಡ್ಡಿಯನ್ನು ಅಡ್ಡವಾಗಿಟ್ಟು ಹೀಗೆ ಹೇಳಿದಳು-“ ನನ್ನನ್ನು ತಿನ್ನಬಹುದು, ಆದರೆ ನನ್ನ ಪಾತಿವ್ರತ್ಯವನ್ನು ನೀನು ಕೆಡಿಸಲಾರೆ. ಅಲ್ಲದೇ ರಾಮನನ್ನೂ ನೀನು ಗೆಲ್ಲಲು ಸಾಧ್ಯವಿಲ್ಲದೇ ಅವನ ತೀಕ್ಷ್ಣವಾದ ಬಾಣಗಳಿಗೆ ಗುರಿಯಾಗಿ ಸರ್ವನಾಶವಾಗುತ್ತೀಯೆ! “

ಈ ಘಟನೆಯಿಂದ ವಿವಶಳಾಗಿ ಸೀತೆಯು ಪ್ರಾಣತ್ಯಾಗ ಮಾಡಿಕೊಳ್ಳಲು ನಿಶ್ಚಯಿಸಿದಳು. ತನ್ನ ನೀಳವಾದ  ತಲೆ ಕೂದಲನ್ನು ಮರಕ್ಕೆ ಬಿಗಿದು ಆತ್ಮಹತ್ಯೆಗೆ ಅನುವಾದಳು. ಇತ್ತ ಶ್ರೀ ರಾಮನ ದೂತನಾದ ಹನುಮಂತನು, ಸೀತೆಯನ್ನು ಅನ್ವೇಷಿಸುತ್ತಾ ಅಶೋಕ ವನಕ್ಕೆ ಬಂದನು. ಅವನು ಕಂಡ ಹೃದಯವಿದ್ರಾವಕವಾದ ಮೊದಲ ದೃಶ್ಯವೇ ಇದಾಗಿತ್ತು. ಸಮಯಪ್ರಜ್ಞೆಯಿಂದ ಹನುಮಂತನು, ಇದನ್ನು ಕ್ಷೋಭೆಯಿಲ್ಲದೆ  ಶಾಂತವಾಗಿ ಪರಿಹರಿಸುವುದು ಹೇಗೆಂದು ಕ್ಷಣಕಾಲ ಚಿಂತಿಸಿ, ಸೀತೆಯ ಮನಸ್ಸನ್ನು ತತ್ಕಾಲದಲ್ಲಿ ಶಾಂತಗೊಳಿಸಿ ತನ್ನ ಕೆಲಸ ಸಫಲಗೊಳಿಸಲು ಅನುವಾಗುವಂತೆ, ಅವಳ ಮನಸ್ಸು ತನ್ನತ್ತ ಸುಮುಖವಾಗಲು ಶ್ರೀ ರಾಮನ  ವಂಶಚರಿತೆಯನ್ನು ಸಂಕ್ಷಿಪ್ತವಾಗಿ, ಸುಶ್ರಾವ್ಯವಾಗಿ ಹಾಡಿದನು. ಹಾಗೆಯೇ ತಾನು ನೋಡುತ್ತಿರುವ ಸ್ತ್ರೀಯಲ್ಲಿ ಶ್ರೀರಾಮನು ತಿಳಿಸಿದ ಸೀತೆಯ ಆಕಾರ, ರೂಪ, ಮೈಬಣ್ಣ ಇತ್ಯಾದಿ ಲಕ್ಷಣಗಳನ್ನು ಇರುವುದನ್ನು ನಾನು ಕಂಡೆ ಎಂದು ಉದ್ಗರಿಸಿದ. ಸೀತೆಯು ಈ ಶಬ್ದಗಳು ಎಲ್ಲಿಂದ ಬರುತ್ತಿವೆಯಂದು ನೋಡುತ್ತಾ, ಪ್ರಾಣತ್ಯಾಗದಿಂದ ವಿಮುಖಳಾಗಿ ಕೆಳಗೆ ಇಳಿಯುತ್ತಾಳೆ. ಹನುಮಂತನು ಸೀತೆಯ ಸಮೀಪಕ್ಕೆ ಬಂದು ಶ್ರೀರಾಮನ ರಾಜಮುದ್ರಾ ಉಂಗುರವನ್ನು ಕೊಟ್ಟು, ತಾನು ಶ್ರೀರಾಮರ ದೂತ ಹನುಮಂತ ಎಂದು ತಿಳಿಸುತ್ತಾನೆ. ಮುಂದಿನ ಸುಖಾಂತ್ಯದ ಕತೆ ತಿಳಿದೇ ಇದೆ.  

ಈ ಘಟನೆ ನಡೆದು ಸಹಸ್ರಾರು  ವರ್ಷಗಳೆ ಸಂದಿವೆ. ಆದರೂ ಇಂದಿಗೂ ನಮ್ಮ ಕಥೆಯೇ ಆಗಿದೆ. ರಾವಣನು, ತನ್ನಲ್ಲಿರುವುದನ್ನು ಬಿಟ್ಟು ಬೇಡದ, ಕೈಗೆ ಸಿಗದ ಕಾಮನೆಗಳಿಗೆ ಬಲಿಯಾಗಿ ಧರ್ಮವನ್ನು ಮೀರುತ್ತಾನೆ. ನಮ್ಮ ಇಂದಿನ ಸಮಾಜದಲ್ಲೂ ಇಂತಹ ಪ್ರವೃತ್ತಿಯನ್ನು ಕಾಣುತ್ತೇವೆ. ರಾಮನು ರಾವಣನಂತಹ ಅಧರ್ಮಿಯನ್ನು ವಧಿಸಿ ಧರ್ಮವನ್ನು ಕಾಪಾಡುತ್ತಾನೆ. ಇನ್ನು ಸೀತೆಯಾದರೋ ಒಂದು ಪ್ರಕ್ಷುಬ್ದವಾದ ಸನ್ನಿವೇಶದಲ್ಲಿ ವಿಚಲಿತಳಾಗಿ ತಪ್ಪು ನಿರ್ಣಯಕ್ಕೆ ಬರುತ್ತಾಳೆ. ನಮ್ಮ ಜೀವನದಲ್ಲೂ ಇಂತಹ ಸನ್ನಿವೇಶಗಳು ಬರುವುದುಂಟು.ಆಗ ಸಮಯೋಚಿತವಾಗಿ ಹನುಮಂತನಿಂದ ಮಧುರವಾದ ರಾಮಚರಿತೆಯನ್ನು ಕೇಳಿ ಧೃತಿಯನ್ನು ಹೊಂದುತ್ತಾಳೆ. ರಾಮ ಸೇವೆಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಿಸಿಕೊಂಡ ಆಂಜನೇಯನು ಸಮಯಪ್ರಜ್ಞೆಯಿಂದ ತತ್ ಕ್ಷಣ ಆಗುವ ಅನಾಹುತವನ್ನು ತಪ್ಪಿಸಿದ.

ರಾಮಕಾರ್ಯಕ್ಕಾಗಿ ತನ್ನ ಜೀವನವನ್ನೇ ಮುಡುಪಿಟ್ಟಿದ್ದ ಹನುಮಂತನು ತನ್ನೆಲ್ಲ ಸೇವಾಕಾರ್ಯಗಳಲ್ಲಿಯೂ ಶ್ರೀರಾಮನನ್ನೇ ಆಧಾರವಾಗಿರಿಸಿಕೊಂಡಿದ್ದ. ಶ್ರೀರಾಮನುಭವಸಾಗರವನ್ನು ದಾಟಿಸುವ ಜಗದ್ಗುರುವಾದ್ದರಿಂದ ಅದನ್ನು ಪ್ರತಿಬಿಂಬಿಸುವಂತಹ ಬಾಹ್ಯ ಸಮುದ್ರವನ್ನು ದಾಟಿದ. ಅಲ್ಲಿ ಸೀತಾಮಾತೆಗೆ ಶ್ರೀರಾಮಸ್ಮರಣೆಯ ಮೂಲಕವೇ ಧೃತಿಯನ್ನೂ, ರಾಮನ ಆಗಮದ ನಿರೀಕ್ಷೆಯನ್ನೂ, ವಿಶ್ವಾಸವನ್ನೂ ಹೃದಯದಲ್ಲಿ ತುಂಬಿದ. ಹಾಗೆಯೇ ತನ್ನ ಯುದ್ಧ, ಲಂಕಾದಹನ, ಸಂವಾದಗಳ ಮೂಲಕ ರಾವಣನ ಮನಸ್ಸಿನಲ್ಲಿ ಆತಂಕವನ್ನೂ, ಶ್ರೀರಾಮನ ಶೌರ್ಯಪರಾಕ್ರಮಗಳ ಅಗಾಧತೆಯನ್ನೂ, ಧರ್ಮದ ಮೇಲ್ಮೆಯನ್ನು ಎತ್ತಿ ಹಿಡಿದ.

ಹೀಗೆ ಶ್ರೀರಾಮನ ಹೃದಯವನ್ನು ಮೈತುಂಬಿಕೊಂಡಿದ್ದ ಆಂಜನೇಯನು ಅದಕ್ಕನುಗುಣವಾಗಿಯೇ ವರ್ತಿಸಿ ಶ್ರೀರಾಮನ ಚರಿತೆಯನ್ನೂ, ರಸವನ್ನೂ ಓದುಗರ ಹೃದಯದಲ್ಲಿಯೂ ಬಿತ್ತುತ್ತಾನೆ. ಅಂತಹ ಆಚಾರ್ಯನಾಗಿದ್ದು, ರಾಮಭಕ್ತಿಯ ಆದರ್ಶವನ್ನು ಲೋಕದಲ್ಲಿ ಬಿಂಬಿಸಿದ ಮುಖ್ಯಪ್ರಾಣನಿಗೆ ನಮೋನ್ನಮಃ

ಸೂಚನೆ: 15/10/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.