Monday, October 7, 2024

ಕೃಷ್ಣಕರ್ಣಾಮೃತ 33 ಅಂಗನಾಲಿಂಗಿತ ಮೋಹಕ ಮಹಸ್ಸು Anganalingita Mohaka Mahassu

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅಸ್ತೋಕ-ಸ್ಮಿತ-ಭರಮ್ ಆಯತಾಯತಾಕ್ಷಂ

ನಿನ್ನ ತೇಜಃಸ್ವರೂಪವನ್ನು ಅದೆಂದು ಕಂಡಿಯೇನೋ? - ಎಂದು ಹಂಬಲಿಸುತ್ತಾನೆ, ಲೀಲಾಶುಕ. ಭಗವಂತನು ಎರಡು ಬಗೆಯಾಗಿ ತೋರುವುದುಂಟು. ಒಂದು, ಕೇವಲ ತೇಜೋರಾಶಿಯಾಗಿ; ಎರಡು, ತೇಜಃಸಂಪನ್ನವಾದ ಶರೀರವನ್ನು ತಾಳಿದವನಾಗಿ.

ಲೋಕದಲ್ಲಿ ಒಂದೇ ವಿಷಯವನ್ನೇ ಹೇಳಲು ಬಳಸುವ ಭಾಷೆ ಬಗೆಬಗೆಯಾಗಿರಬಹುದು. ಸುಂದರಿಯಾದ ತರುಣಿಯಿರುತ್ತಾಳೆ; ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವ ಸೌಂದರ್ಯ. ನ್ಯಾಯವಾಗಿ, ಅವಳ ಬಗ್ಗೆ ಹೇಳಬೇಕಾದರೆ, "ಅವಳು ಸುಂದರಿ" ಎಂದೋ, "ಅವಳಲ್ಲಿ ಸೌಂದರ್ಯವಿದೆ" ಎಂದೋ ಹೇಳಬೇಕು. ಇವೆರಡೂ ಪ್ರಕಾರಗಳನ್ನೂ ಬಿಟ್ಟು, "ಓ, ಸೌಂದರ್ಯವೆಂದರೇ ಅವಳೇ!" ಎಂದೋ "ಅವಳೇ ಸೌಂದರ್ಯವೆಂದರೆ" ಎಂದೋ ಹೇಳಿಬಿಡುವುದೂ ಉಂಟು. ಹೀಗೆ ನಾಲ್ಕು ಬಗೆಗಳಲ್ಲಿ ಒಂದೇ ವಿಷಯವನ್ನು ಹೇಳುವ ಪರಿಯುಂಟು. ಇದು ಕೇವಲ ಕಾವ್ಯಗಳಲ್ಲಲ್ಲದೆ, ಜನಗಳಾಡುವ ಭಾಷೆಯಲ್ಲಿಯೇ ಸಂದರ್ಭಾನುಸಾರ ಬರುವುದುಂಟು. ಅವುಗಳಲ್ಲಿ ಪರಸ್ಪರ ಸೂಕ್ಷ್ಮ-ಭೇದಗಳು ಒಂದಿಷ್ಟುಂಟೆಂಬುದೂ ನಿಜವೇ. ಸಂಸ್ಕೃತದಲ್ಲಿ ಸಾಹಿತ್ಯ-ಶಾಸ್ತ್ರವೆಂಬುದೊಂದಿದೆ. ಅದಕ್ಕೇ ಅಲಂಕಾರ-ಶಾಸ್ತ್ರವೆಂಬ ಹೆಸರೂ ಇದೆ. ಆ ಶಾಸ್ತ್ರದಲ್ಲಿ ಹೀಗೆ ಒಂದೇ ತಾತ್ಪರ್ಯದ ನಾಲ್ಕಾರು ಬಗೆಯ ನಿರೂಪಣೆಗಳಲ್ಲಿನ ಪರಸ್ಪರ-ಭೇದಗಳನ್ನು ವಿಸ್ತಾರವಾಗಿ ವಿವೇಚಿಸಲಾಗಿದೆ.

ಪ್ರಕೃತ-ಶ್ಲೋಕದಲ್ಲಿ ಶ್ರೀಕೃಷ್ಣನನ್ನು 'ಮಹಃ' ಎಂದು ಕರೆದಿದೆ. ಆ ಪದಕ್ಕೆ ತೇಜಸ್ಸು ಎಂಬ ಅರ್ಥವು ಪ್ರಸಿದ್ಧವಷ್ಟೆ. ಕೃಷ್ಣನನ್ನು ತೇಜಸ್ಸೆಂದರೂ, "ಆತನು ತೇಜೋಮಯವಾದ ಶರೀರವುಳ್ಳವನು" ಎಂದೇ ಅರ್ಥ. ಅರ್ಥಾತ್, "ಅವನು ಮಹಾ-ತೇಜಸ್ವಿ" ಎಂಬುದು ತಾತ್ಪರ್ಯವಾದರೂ, "ಅವನೇ ತೇಜಸ್ಸು" ಎಂದುಬಿಡುವುದುಂಟು. ಅರ್ಥಾತ್ ಶ್ರೀಕೃಷ್ಣನ ಶರೀರವು ತೇಜಸ್ಸಂಪನ್ನವಾಗಿದೆಯೆಂಬುದೇ ಇಲ್ಲಿಯ ತಾತ್ಪರ್ಯ.

"ಕೃಷ್ಣನು ತೇಜೋರಾಶಿ" ಎಂಬರ್ಥದಲ್ಲೇ ಹೇಳಿಲ್ಲವೆಂಬುದು ಹೇಗೆ ನಿಶ್ಚಯವಾಗುತ್ತದೆ? ಶ್ಲೋಕದ ಇತರ ಪದಗಳನ್ನು ನೋಡಿದರೆ ತಿಳಿದುಬರುತ್ತದೆ. ಶ್ಲೋಕದಲ್ಲಿ ಈ ವಿಶೇಷ್ಯಕ್ಕೆ ಐದು ವಿಶೇಷಣಗಳಿವೆ. 'ಮಹಃ' ಎಂಬುದಕ್ಕಿರುವ ಈ ಎಲ್ಲ ವಿಶೇಷಣಗಳೂ ಶ್ರೀಕೃಷ್ಣನ ಶರೀರಕ್ಕೇ ಅನ್ವಯಿಸತಕ್ಕವು.

ಯಾವ ವಿಶೇಷಣಗಳು? ಅವು ಯಾವ ವಿಶೇಷಗಳನ್ನು ಹೇಳುತ್ತವೆ? - ಎಂದು ಕೇಳಬೇಕಲ್ಲವೆ? ಅವುಗಳನ್ನು ಒಂದೊಂದಾಗಿ ಈಗ ನೋಡೋಣ.

ಸಾರಾಂಶವಾದದ್ದು "ತ್ರಿಭುವನ-ಸುಂದರಂ" ಎಂಬುದು. ಭುವನವೆಂದರೆ ಲೋಕ. ತ್ರಿ-ಲೋಕಗಳಲ್ಲೂ ಸುಂದರವಾದದ್ದೆಂದರೆ ಇದೇ. ಅರ್ಥಾತ್, ಮೂರು ಲೋಕಗಳನ್ನು ಹುಡುಕಿದರೂ, ಶ್ರೀಕೃಷ್ಣನಿಗೆ ಸಾಟಿಯೆನಿಸುವ ಸೌಂದರ್ಯ ಕಾಣಸಿಗದು.

ಸುಂದರವಾದ ವಸ್ತುವನ್ನು ಕಾಣಲು ಕಣ್ಣು ಹಂಬಲಿಸುತ್ತದೆ. ಭುವನ-ಸುಂದರವಾದದ್ದೆಂದರೆ ಕೇಳಬೇಕೇ? ಇನ್ನು ತ್ರಿಭುವನ-ಸುಂದರವೆಂದರಂತೂ ಹೇಳಲೇಬೇಕಿಲ್ಲ; ಕಣ್ಣು ಕಾತರವಾಗಿರುತ್ತದೆ. (ಬಹಳ ಮಂದಿ ಕಾತುರ – ಎಂಬ ಪದವನ್ನು ಬಳಕೆ ಮಾಡುತ್ತಾರೆ. ಹಾಗೊಂದು ಪದವೇ ಇಲ್ಲ, ಕನ್ನಡದಲ್ಲಿ! ಸಂಸ್ಕೃತದ ಕಾತರ ಮತ್ತು ಆತುರ – ಎಂಬ ಎರಡು ಪದಗಳನ್ನು ಮನಸ್ಸಿನಲ್ಲಿ ಬೆರೆಸಿಕೊಂಡ ಭ್ರಾಂತರು ಬಳಸುವ ಪದವಿದು).

ತೇಜಸ್ಸೆಂದರೇ ಕಣ್ಣನ್ನು ಸೆಳೆಯುವ ವಸ್ತು. ಅದರೊಂದಿಗೆ ಕಮನೀಯತೆಯೂ ಸೇರಿತೆಂದರೆ ಅದುವೇ "ತ್ರಿಭುವನ-ಸುಂದರಂ ಮಹಃ" ಎಂಬುದು; ಅಂತಹುದು ಕಣ್ಗಳನ್ನು ಕಾಡುವಂತಹುದೇ ಸರಿ. ಅಂತಹ ನಿನ್ನ ರೂಪವನ್ನು ನಾನು ಕಾಣುವಂತಾಗಲಿ - ಎಂಬುದೇ ಕವಿಯ ಕೋರಿಕೆ.

ಇಲ್ಲಿ ಚಿತ್ರಿತವಾಗಿರುವುದು ರಾಸ-ಕ್ರೀಡೆಯಲ್ಲಿ ತೊಡಗಿರುವ ಕೃಷ್ಣ. ಅಲ್ಲಿ ಪಾಲ್ಗೊಂಡ ಎಲ್ಲರಿಗೂ ಸಂತೋಷ-ಪ್ರದವಾದ ಈ ಸಂನಿವೇಶದಲ್ಲಿ ಯಾರ ವದನದಲ್ಲೂ ಸ್ತೋಕ-ಸ್ಮಿತವಿಲ್ಲ, ಎಂದರೆ ಮುಗುಳ್ನಗೆಯಿಲ್ಲ. ಮತ್ತೇನು? ಸ್ತೋಕವಲ್ಲದ ಎಂದರೆ ತುಂಬಿಬಂದ ಸ್ಮಿತ ಅಥವಾ ನಗೆ! ಸ್ತೋಕವೆಂದರೆ ಕಡಿಮೆ. ಅ-ಸ್ತೋಕವೆಂದರೆ ಅನಲ್ಪ. ಉಕ್ಕುತ್ತಿರುವ ಆನಂದವಿದ್ದಲ್ಲಿ ಬರೀ ಮುಗುಳ್ನಗೆಯೇ? ಭರ ಎಂದರೆ ಅತಿಶಯ. ಸ್ಮಿತ-ಭರವೆಂದರೆ ಹಸಿತದ ಉಲ್ಲಾಸ; ಅದುವೇ ಚಿಮ್ಮಿದೆ ಮುಖದಲ್ಲಿ.

ಇನ್ನಾತನ ಕಣ್ಣುಗಳೋ: ಅವಂತೂ ಆಯತಾಯತವಾಗಿವೆ, ಎಂದರೆ ಅಗಲಗಲವಾಗಿವೆ. ಕಣ್ಣು ದೊಡ್ಡದಾಗಿದ್ದರಲ್ಲವೇ ಸುಂದರವೆನಿಸುವುದು? ಜೊತೆಗೆ ನಯನಾನಂದಕಾರಿ-ವಸ್ತುವಿದ್ದಲ್ಲಿ ಅದನ್ನು ಕಾಣಲು ಕಣ್ಣು ಅಗಲಿಸದೆ ಮತ್ತೇನು? ಸುತ್ತಲೂ ಸುಂದರ-ವಸ್ತುಗಳಿದ್ದರಂತೂ ಇನ್ನೂ ಸರಿಯೇ.

ಆತನ ಸುತ್ತಲೂ ಇರುವ ಗೋಪಿಕೆಯರು ಸುಂದರಿಯರೆಂಬುದಷ್ಟೇ ಅಲ್ಲ. ಅವರೆಲ್ಲರೂ ಕೃಷ್ಣನನ್ನು ಪ್ರೀತಿಯಿಂದ ಕಾಣತಕ್ಕವರು. ಚಿಮ್ಮುವ ಸೌಂದರ್ಯದಿಂದ ಕೂಡಿದ, ಹಾಗೂ ಅದಕ್ಕಿಂತ ಮುಖ್ಯವಾಗಿ ಉಕ್ಕುವ ಪ್ರೀತಿಯುಳ್ಳ, ಆ ಗೋಪಿಕೆಯರ ಮಧ್ಯದಲ್ಲಿರುವ ಕೃಷ್ಣನ ಕಣ್ಣಿಗೇಕೆ ಸಂಕೋಚ? ಹೀಗಾಗಿ ಅದು ಆಯತಾಯತವೇ ಸರಿ.

ಕೃಷ್ಣನು ಸ್ವತಃ ಸುಂದರನೂ ಹೌದು, ಸುತ್ತಲಿನ ಸೌಂದರ್ಯವನ್ನು ಕಣ್ತುಂಬ ಕಂಡು ಆಸ್ವಾದಿಸುವವನೂ ಹೌದು. ಶಿವನು ಯೋಗಿ-ರಾಜನಾದರೆ ಕೃಷ್ಣನು ಭೋಗಿ-ರಾಜ: ವಾಸ್ತವವಾಗಿ ಇಬ್ಬರೂ ಎರಡೂ ಹೌದು.

ಹೀಗೆ, ಕೃಷ್ಣನ ಆಸ್ಯದಲ್ಲಿ ನಗುವಿನ ಲಾಸ್ಯ; ಹಾಗೂ ಸ್ವತಃ ಅಗಲವೂ, ಈಗ ಮತ್ತೂ ಅಗಲಿಸಿರುವುವೂ, ಆದ ಅಕ್ಷಿಗಳು - ಇಂತಹ ಆನನವುಳ್ಳ ಕೃಷ್ಣನ ರೂಪು ಯಾರ ಕಣ್ಣುಗಳನ್ನಾದರೂ ಸೆಳೆಯುವುದೇ.

ರಾಸ-ಕ್ರೀಡೆಯಲ್ಲಿ ಕೃಷ್ಣನ ಪಕ್ಕದಲ್ಲಿ ಗೋಪಿಕೆಯೊಬ್ಬಳು; ಹಲವು ಗೋಪಿಕೆಯರಿರುವರಲ್ಲವೇ? ಪ್ರತಿಯೊಬ್ಬ ಗೋಪಿಕೆಯ ಪಕ್ಕದಲ್ಲೂ ಕೃಷ್ಣನೊಬ್ಬನಿರುವನು! ಪಕ್ಕದಲ್ಲೇನು, ಆತನನ್ನು ಅಪ್ಪಿರುವವರೇ ಅವರು.

ವ್ರಜದ ಆ ನಾರಿಯರು ಬರೀ ಸ್ತ್ರೀಯರಲ್ಲ, ಅವರು ಅಂಗನೆಯರು. ಏನು ಹಾಗೆಂದರೆ? "ಯಾವಳ ಅಂಗಗಳು ಪ್ರಶಸ್ತವೋ ಅವಳೇ ಅಂಗನೆ" – ಎಂಬುದು ಆ ಪದದ ವ್ಯುತ್ಪತ್ತಿ. ದಾಸರೂ ಕೇಳಲಿಲ್ಲವೇ – "ಸುಂದರಾಂಗದ ಸುಂದರೀಯರ ಹಿಂದೆ-ಮುಂದೆಯಲ್ಲಿ" ಇರುವ ನಮ್ಮ ಕೃಷ್ಣನನ್ನು ಎಲ್ಲಿ ನೋಡಿದಿರಿ? - ಎಂದು?

ಇನ್ನು ಈ ವ್ರಜಾಂಗನೆಯರ ಅಪ್ಪುಗೆಯಾದರೂ ಎಂತಹುದು? ತಮ್ಮ ಸ್ತನಗಳಿಂದ ಆತನನ್ನು ನಿಃಶೇಷವಾಗಿ, ಎಂದರೆ ಸಂಪೂರ್ಣವಾಗಿ, ಅವರು ಮರ್ದಿಸಿರುವರು. ಪ್ರೀತಿ ಸುರಿಯುವ ಸುಂದರಾಂಗಿಯ ಗಾಢಾಲಿಂಗನವೆಂದರೆ ಅಂತರಂಗದಲ್ಲಿ ಆನಂದವಿರದೇ? ಆ ಹರ್ಷವಾದರೂ ಮೊಗದಲ್ಲಿ ತೋರಿಕೊಳ್ಳದೇ? ರಮಣೀಯತೆಯ ರಾಶಿಯೆಂಬುದು ನೇತ್ರಗಳಿಗೆ ಪಾತ್ರವಾದಾಗ ಆ ಸೊಬಗನ್ನು ಸೂರೆಗೊಳ್ಳಲು ಅಕ್ಷಿಗಳು ಅಗಲವಾಗಿಕೊಳ್ಳವೇ? ಹೀಗೆ ಮನಸ್ಸಿನ ಉಲ್ಲಾಸವು ಮುಖದಲ್ಲೂ, ಮುಖದ ವಿಕಾಸವು ನಯನಗಳಲ್ಲೂ ತೋರದಿರುವುವೇ?

ಕರಿಯನಾದರೂ ಕಾಂತಿಶಾಲಿಯೇ ನಮ್ಮ ಕೃಷ್ಣ. ಎಂತಹ ಕಪ್ಪು ಆತನದು? ಅದು ನೀಲ-ಮಣಿಯ ಕಪ್ಪು. ಮತ್ತು ಆ ಕಪ್ಪಾದ ಕಾಂತಿಯಾದರೂ ಶರೀರವನ್ನೆಲ್ಲ ವ್ಯಾಪಿಸಿರುವಂತಹುದೇ. ಬೆಳ್ಳಗಿರುವವರೇ ಬೆಡಗಿನವರೆಂದು ಭ್ರಮಿಸುವುದಲ್ಲ. ಕಪ್ಪಾದರೂ ಕಮನೀಯನಾಗಿ ಕಳೆಕಟ್ಟಿಲ್ಲವೇ ಗೊಲ್ಲರಲ್ಲೊಬ್ಬನಾದ ನಮ್ಮೀ ಕೃಷ್ಣ?

ಅಂತೂ ಈತನೂ ಸುಂದರ, ಸುತ್ತಲಿನ ಗೋಪಿಕೆಯರೂ ಸುಂದರಿಯರು. ಅವನಿಗೆ ಅವರಲ್ಲೂ, ಅವರಿಗೆ ಅವನಲ್ಲೂ ಪ್ರೀತಿಯುಕ್ಕಿದೆ. ಪ್ರೇಮ-ಭರಿತರ ವದನ ಆನಂದದ ಸದನ! ಸಮನಿಲ್ಲದ ಈ ಸುಂದರ-ಮೂರ್ತಿಯನ್ನು ಕಾಣಲು ಹಪಹಪಿಸುತ್ತಿವೆ, ಲೀಲಾಶುಕನ ಚೇತಸ್ಸೂ ಚಕ್ಷುಸ್ಸೂ.

ಅಸ್ತೋಕ-ಸ್ಮಿತ-ಭರಮ್ ಆಯತಾಯತಾಕ್ಷಂ /

ನಿಃಶೇಷ-ಸ್ತನ-ಮೃದಿತಂ ವ್ರಜಾಂಗನಾಭಿಃ |

ನಿಃಸೀಮ-ಸ್ತಬಕಿತ-ನೀಲ-ಕಾಂತಿ-ಧಾರಂ /

ದೃಶ್ಯಾಸಂ ತ್ರಿಭುವನ-ಸುಂದರಂ ಮಹಸ್ತೇ ||

ಸೂಚನೆ : 5/10/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.