Sunday, October 20, 2024

ವ್ಯಾಸ ವೀಕ್ಷಿತ 108 ಕ್ಷತ್ರಿಯ-ವೀರರ ಆರ್ಭಟೆ – ಬಲರಾಮನ ಭರ್ತ್ಸನೆ (Vyaasa Vikshita 108Ksatriya-vira Arbhaṭa – Balaramana Bharatasana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಸುಭದ್ರೆಯು ರೈವತಕಕ್ಕೆ ತೆರಳಿರುವುದನ್ನು ತಿಳಿದ ಅರ್ಜುನನು, ಸುಂದರವಾದ ರಥದಲ್ಲಿ ಸರ್ವಾಯುಧ-ಸಹಿತನಾಗಿಯೂ ಅವಳಿಗಾಗಿ ಹೊರಟಿರುವನಷ್ಟೆ. ಕನ್ಯೆಯೊಬ್ಬಳನ್ನು ಅಪಹರಿಸುವುದೆಂದರೆ ಹೋರಾಟವೂ ಸಂಭಾವ್ಯವೆಂದೇ ಎಣಿಸಿದ್ದ ಆತನು, ಸಾಕಷ್ಟೇ ಶಸ್ತ್ರಗಳೊಂದಿಗೆ ಹೊರಟಿದ್ದನು. ಎಷ್ಟೆಂದರೆ, ಕೊನೆಗೆ ಗೋಧಾ (ತೋಳಿಗೆ ಕಟ್ಟುವ ಚರ್ಮದ ಪಟ್ಟಿ) ಮತ್ತು ಅಂಗುಲಿತ್ರ (ಬೆರಳ್ಗೆ ಹಾಕಿಕೊಳ್ಳುವ ಚರ್ಮದ ಮುಚ್ಚಳ)ಗಳನ್ನೂ ಧರಿಸಿಕೊಂಡಿದ್ದನು.  ಅಂತೂ ಹೀಗೆಲ್ಲ ಸಿದ್ಧ-ಸಂನದ್ಧನಾಗಿಯೇ ಹೊರಟಿದ್ದಾನೆ, ಅರ್ಜುನ.


ಇತ್ತ ಸುಭದ್ರೆಯು ಪರ್ವತರಾಜನಾದ ರೈವತಕನಿಗೆ ಮೊದಲು ಅರ್ಚನೆಯನ್ನು ಮಾಡಿ, ಬಳಿಕ ಬೇರೆಲ್ಲ ದೇವತೆಗಳಿಗೂ ಅರ್ಚನೆಮಾಡಿದಳು. ಬ್ರಾಹ್ಮಣರಿಗೆ ಸ್ವಸ್ತಿವಾಚನವನ್ನು ಮಾಡಿದಳು. ಗಿರಿಗೆ ಪ್ರದಕ್ಷಿಣೆ ಮಾಡಿದಳು. ದ್ವಾರಕೆಯತ್ತ ಹೊರಟಳು. ಅವಳತ್ತ ರಭಸದಿಂದ ಸಾಗಿದ ಕಾಮಾರ್ತನಾದ ಅರ್ಜುನನು, ಸುಂದರಿಯಾದ ಅವಳನ್ನು ಬಲವಂತವಾಗಿ ರಥಕ್ಕೆ ಹತ್ತಿಸಿಕೊಂಡನು; ಹಾಗೂ ತನ್ನ ನಗರದತ್ತ ಪ್ರಯಾಣ ಮಾಡಿದನು.


ಸೈನಿಕರು ಈ ಸುಭದ್ರಾಹರಣವನ್ನು ಕಂಡರು. ಆಕ್ರೋಶಮಾಡುತ್ತಾ ದ್ವಾರಕಾ-ಪುರಿಯತ್ತ ಎಲ್ಲರೂ ಧಾವಿಸಿದರು. ಒಟ್ಟಿಗೇ ಎಲ್ಲರೂ ಸುಧರ್ಮಾ-ಸಭೆಗೆ ಹೋದರು. ಅರ್ಜುನನು ಮಾಡಿರುವ ಕಾರ್ಯವೆಲ್ಲವನ್ನೂ ಸಭಾ-ಪಾಲನಿಗೆ ತಿಳಿಸಿದರು. ಅವರ ಮಾತುಗಳನ್ನು ಕೇಳಿದ ಸಭಾ-ಪಾಲನು ಸಾಂನಾಹಿಕವಾದ ಭೇರಿಯನ್ನು, ಎಂದರೆ ಯುದ್ಧಕ್ಕೆ ಸಂನದ್ಧರಾಗಿರಿ - ಎಂಬುದನ್ನು ಸೂಚಿಸುವ ಮಹಾಘೋಷವುಳ್ಳ ಸ್ವರ್ಣಖಚಿತ-ನಗಾರಿಯನ್ನು, ಬಾರಿಸಿದನು. ಆ ಶಬ್ದದಿಂದ ಕ್ಷೋಭೆಗೊಂಡರು, ಭೋಜ-ವೃಷ್ಣಿ-ಅಂಧಕ-ವಂಶಗಳ ವೀರರು.


ತಮ್ಮ ಅನ್ನ-ಪಾನಗಳನ್ನೂ ತೊರೆದು ಅವರೆಲ್ಲರೂ ಎಲ್ಲೆಡೆಯಿಂದ ಬಂದು ಸೇರಿದರು. ಅಲ್ಲಿದ್ದ ನೂರಾರು ಸಿಂಹಾಸನಗಳಲ್ಲಿ ಮಂಡಿಸಿದರು. ಸುವರ್ಣ-ಖಚಿತವಾದ ಸಿಂಹಾಸನಗಳವು. ಅವುಗಳ ಮೇಲಿನ ಹಾಸುಗಳೂ ಬೆಲೆಬಾಳತಕ್ಕವು. ಜ್ವಲಿಸುವ ಅಗ್ನಿಯ ಕಾಂತಿಯುಳ್ಳ ಮಣಿಗಳನ್ನೂ ವಿದ್ರುಮಗಳನ್ನೂ ಅವುಗಳಲ್ಲಿ ಜೋಡಿಸಲಾಗಿತ್ತು. ಯಜ್ಞ-ವೇದಿಕೆಯಲ್ಲಿ ಅಗ್ನಿಗಳು ಬೆಳಗುವಂತೆ ವೃಷ್ಣಿವಂಶ-ಅಂಧಕವಂಶಗಳ ರಾಜರುಗಳು ಆ ಸಿಂಹಾಸನಗಳ ಮೇಲೆ ಉಪವಿಷ್ಟರಾದರು. ಅದೊಂದು ದೇವತಾ-ಸಮೂಹ ಎಂಬಂತಿತ್ತು. ಸೇವಕರಿಂದೊಡಗೂಡಿದ ಸಭಾಪಾಲನು ಅರ್ಜುನನು ಮಾಡಿರುವ ಕೃತ್ಯಗಳನ್ನು ಆಗ ತಿಳಿಸಿದನು. ಮದದಿಂದ ಕೆಂಪಡರಿದವು, ಆ ವೃಷ್ಣಿವೀರರ ಕಣ್ಣುಗಳು. ಅರ್ಜುನನ ವಿಷಯದಲ್ಲಿ ಅವರು ಕೆರಳಿದರು. ಅಹಂಕಾರದಿಂದ ಅರ್ಜುನನ ಮೇಲೆ ಎರಗಲು ಸಿದ್ಧರಾದರು.


ಅವರ ಆರ್ಭಟೆಗಳೇನು ಕಡಿಮೆಯೇ? "ರಥಗಳನ್ನು ಸಿದ್ಧಪಡಿಸಿರಿ, ಬೇಗ" "ಪ್ರಾಸಾಯುಧವನ್ನು ತನ್ನಿರಿ" "ಬೆಲೆಬಾಳುವ ಬಿಲ್ಲುಗಳನ್ನು ತನ್ನಿ" "ವಿಶಾಲವಾದ ಕವಚಗಳನ್ನು ತೆಗೆದುಕೊಂಡು ಬನ್ನಿ" - ಎಂದೆಲ್ಲ ಅರಚಿದರು. ರಥವನ್ನು ಸಿದ್ಧಪಡಿಸಿ - ಎಂದು ತಮ್ಮ ಸೂತರ ಮೇಲೆ, ಎಂದರೆ ಸಾರಥಿಗಳ ಮೇಲೆ, ಆಕ್ರೋಶಮಾಡಿದರು. ಸ್ವರ್ಣ-ಭೂಷಣವುಳ್ಳ ಕುದುರೆಗಳನ್ನು ಕೆಲವರು ತಮ್ಮ ರಥಗಳಿಗೆ ತಾವೇ ಜೋಡಿಸಿಕೊಂಡರು. ರಥಗಳನ್ನು ತರುವುದೇನು, ಕವಚಗಳನ್ನೂ ಧ್ವಜಗಳನ್ನೂ ಸಿದ್ಧಪಡಿಸುವುದೇನು – ಎಂದಾಗಿ, ಆ ನರವೀರರ ತುಮುಲ-ಧ್ವನಿಯು ಆಗ ಜೋರಾಯಿತು.


ವನಮಾಲೆಯನ್ನು ಧರಿಸಿದವನೂ ಕೈಲಾಸ-ಶಿಖರದಂತಿದ್ದವನೂ ನೀಲವಸ್ತ್ರ-ಧಾರಿಯೂ ಆದ ಬಲರಾಮನು ಮದಶಾಲಿಯಾಗಿ ಈ ಮಾತನ್ನು ಆಗ ಹೇಳಿದನು: ಅಪ್ರಜ್ಞರೇ (ಎಂದರೆ ಮೂರ್ಖರೇ), ಶ್ರೀಕೃಷ್ಣನು ಮೌನದಿಂದ ಕುಳಿತಿರಲು, ಆತನ ಅಭಿಪ್ರಾಯವೇನೆಂಬುದನ್ನೇ ಅರಿತುಕೊಳ್ಳದೆ, ನೀವುಗಳೇಕೆ ಸಂಕ್ರುದ್ಧರಾಗಿದ್ದೀರಿ, ವ್ಯರ್ಥವಾದ ಗರ್ಜನೆಗಳನ್ನು ಮಾಡುತ್ತಿರುವಿರಿ? ಮಹಾ-ಮತಿಯಾದ ಆತನು ಮೊದಲು ತನ್ನ ಅಭಿಪ್ರಾಯವನ್ನು ಹೇಳಲಿ - ಎಂದನು.

ಸೂಚನೆ : 20/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.