Saturday, November 10, 2018

ಕಾಮ: ತ್ಯಾಜ್ಯವೋ ಪೂಜ್ಯವೋ ? (Kama: Tyajyavo pujyavo?)

                           
                                                                                              ಲೇಖಕರು: ಡಾ. ಆರ್. ಮೋಹನ




'ಕಾಮ' ಅಂದಕೂಡಲೇ  ಮುಗುಳು ನಗೆಯಿಂದ ನುಣಿಚಿಕೊಳ್ಳುವರು ಕೆಲವರು. ಅವಶ್ಯವಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ  ತಿಳಿವಳಿಕೆ ನೀಡಬೇಕಾದ ವಿಷಯವೆಂದು ಇತರರು.  ನೀಚಭಾವದಿಂದ ಕಾಣುವರು ಕೆಲವರು. ಪರದೆಯಮೇಲಿನ  'ರೋಮ್ಯಾನ್ಸ್' ಗೆ ಪರ್ಯಾಯವಾಗಿ ಭಾವಿಸುವರು ಬಹುಮಂದಿ.            

ಕಾಮದಿಂದಲೇ ಸಮಾಜದ ಉಳಿವು ಅಳಿವು ಎರಡೂ ಸಾಧ್ಯ   
‘ಕಾಮ’  ಸೃಷ್ಟಿಸಹಜವಾದ ಒಂದು ವೇಗ. ಈ ವೇಗವು ಇಲ್ಲದಿದ್ದರೆ ಮನುಕುಲದ  ಉಳಿಯುವಿಕೆಯೇ ಪ್ರಶ್ನೆಯಾಗಿ ಉಳಿದುಬಿಡುವುದು. ಹುಟ್ಟಿನಿಂದಲೇ ಈ ವೇಗವು ನಮ್ಮಲ್ಲಿ ಗುಪ್ತವಾಗಿ ಅಡಗಿದ್ದು  ತಾರುಣ್ಯದಲ್ಲಿ ಸ್ತ್ರೀ-ಪುರುಷರ ಪರಸ್ಪರ ಆಕರ್ಷಣೆಯಾಗಿ ಇದರ ಅಭಿವ್ಯಕ್ತಿ ಎಂಬುದು ಚಿರಪರಿಚಿತವೇ ಆಗಿದೆ. ಈ ಆಕರ್ಷಣೆಯು ಸಮಾಜವು ಹಾಕಿಕೊಂಡ ಕಟ್ಟುಪಾಡು ಮತ್ತು ಜೀವನ ಮೌಲ್ಯಗಳಿಗೆ ಒಪ್ಪುವಂತಿದ್ದರೆ ನಮ್ಮ ವೋಟು ಇಲ್ಲವಾದರೆ ಧರ್ಮದೇಟು. ಇದು ಎಲ್ಲಾ ದೇಶ-ಜನಾಂಗ-ಪಶು-ಪಕ್ಷಿಗಳ  ಸಮಾಜಕ್ಕೂ ಸಮಾನವಾಗಿರುವ ಸತ್ಯ. ಆಯಾ ಸಮಾಜಗಳಲ್ಲಿನ ಸರಿ ತಪ್ಪುಗಳ ಚೌಕಟ್ಟುಗಳು ಬೇರೆ ಬೇರೆಯಷ್ಟೇ. 

ಪ್ರಾಚೀನ ಭಾರತದ ಮಹರ್ಷಿಗಳು ಕಾಮದ ಶಕ್ತಿ ಮತ್ತು ನಿಜ ಸ್ವರೂಪವನ್ನು ಚೆನ್ನಾಗಿ ಬಲ್ಲವರು. ಕಾಮದ ಮೂಲ ರೂಪವೆಂದರೆ ‘ಇಂದ್ರಿಯಗಳ ಬಯಕೆಯನ್ನೀಡೇರಿಸಬೇಕೆಂಬ ತೀವ್ರ ಚಾಪಲ್ಯ’. ಪರಿಸ್ಥಿತಿಗೆ ತಕ್ಕಂತೆ ಚಾಪಲ್ಯ  ನಾನಾ ರೂಪಗಳನ್ನು ತಾಳುತ್ತದೆ. ಈ ಅನಿಯಂತ್ರಿತ ಚಾಪಲ್ಯ ಎಲ್ಲಾ ಚೌಕಟ್ಟುಗಳನ್ನೂ ಮೀರಿ ಹೊರಹಾರಬಲ್ಲ ಕುದುರೆಯೆಂಬುದನ್ನೂ ತಿಳಿದಿದ್ದರು. ಆದ್ದರಿಂದ ಕುದುರೆಗೆ ಕಡಿವಾಣ ಹಾಕುವ ವ್ಯವಸ್ಥೆಯನ್ನೂ ಜೊತೆಯಲ್ಲೇ ಹೆಣೆದರು. ಅದು ಹೇಗೆ ? ಕಾರನ್ನು ವೇಗವಾಗಿ ಮುಂದೂಡಲು ಆಕ್ಸಲರೇಟರ್ ಇರುವಂತೆಯೇ ತಡೆಗೆ ಬ್ರೇಕ್ ಕೂಡ ಉಂಟು. ಬ್ರೇಕ್ ಇಲ್ಲವಾದರೆ ಆಕ್ಸಿಡೆಂಟ್ ಖಚಿತ. ಜೀವನವೆಂಬ ಗಾಡಿಯಲ್ಲಿ, ಕಾಮವೆಂಬ ವೇಗದ ನಿಯಂತ್ರಣಕ್ಕಾಗಿ ಬ್ರೇಕನ್ನ ಅಳವಡಿಸಿ ಅದರ ಬಳಕೆಯ ಶಿಕ್ಷಣವನ್ನೂ ನೀಡುತ್ತಿದ್ದರು. ಆ ಬ್ರೇಕ್ ಗೇ ಇಂದ್ರಿಯಜಯ ಎಂಬ ಹೆಸರು.  ಇಷ್ಟವಾದ ತಿಂಡಿ ಕಣ್ಣುಮುಂದಿದ್ದರೂ ಆರೋಗ್ಯಕ್ಕೆ ಹೊಂದದಿದ್ದಾಗ ‘ಬೇಡ’ ಎಂದು ಹೇಳುವ ದಾರ್ಢ್ಯವದು. ಮನಸೆಳೆವ ದೃಷ್ಯ ಕಣ್ಣುಮುಂದಿದ್ದರೂ ನಿಯಮವನ್ನು ಮೀರುವುದಿಲ್ಲ, ‘ನೋಡುವುದಿಲ್ಲ’ ಎಂಬ ಧೃತಿಯದು. ಹೀಗೆ ಇಂದ್ರಿಯಜಯಕ್ಕೆ ನಾನಾ ನಿದರ್ಶನಗಳು. ಆದರೆ ಕಂಡದ್ದೆಲ್ಲ ಬೇಡ ಬೇಡವೆಂದು ಮುಖ ತಿರುಗಿಸಿದರೆ, ಬ್ರೇಕ್ ಹೊಡೆಯಲು ಮಾತ್ರ ಬರುತ್ತೆ ಗಾಡಿ ಓಡಿಸಲಾರೆ ಎಂದಂತಾಯ್ತು. ಸಂತೇಬೀದಿಯಲ್ಲಿ ನಿಧಾನವಾಗಿ ಚಲಾಯಿಸಿ, ಹೆದ್ದಾರಿ ಬಂದಕೂಡಲೇ ೧೨೦ ಕಿ.ಮೀ ವೇಗದಲ್ಲಿ ಅನಾಯಾಸವಾಗಿ ಅಪಾಯ ಬಾರದಂತೆ ಓಡಿಸಲೂ ತಿಳಿದಿರಬೇಕು. ಅಂತೆಯೇ ಇಂದ್ರಿಯ ಬೇಡಿದರೂ ಬೇಡವೆಂದು ಹೇಳಲು ಸಮರ್ಥ, ಅನುಮತಿಯಿದ್ದಲ್ಲಿ ಭೋಗಿಸಲೂ ಸಿದ್ಧ ಎಂದಿದ್ದರೆ ಮಾತ್ರ ಜೀವನದಲ್ಲಿ ಒಂದು ‘ಬ್ಯಾಲನ್ಸ್’ ಇರುತ್ತದೆ. ಇದನ್ನು  ‘ಧರ್ಮ’ ಎಂದು ಕರೆದರು ನಮ್ಮ ಋಷಿಗಳು. 

ಅರ್ಥ ಸಂಪಾದನೆ - ಕಾಮ ಸೇವನೆಗೆ ಧರ್ಮದ ‘ಲೈಸೆನ್ಸ್’ ಬೇಕು  
ಭಾರತೀಯ ಜೀವನವ್ಯವಸ್ಥೆಯಲ್ಲಿ ಕಾಮ ಸೇವನೆ ಮತ್ತು ಅರ್ಥ ಸಂಪಾದನೆಗೆ ಲೈಸೆನ್ಸ್ ಕೊಡುವ ಮುನ್ನ ದೀರ್ಘಕಾಲ ಧರ್ಮದಲ್ಲಿ ತರಬೇತಿ ನೀಡುತ್ತಿದ್ದರು. ಅದೇ ಬ್ರಹ್ಮಚರ್ಯ-ಗುರುಕುಲವಾಸ.  ಅಲ್ಲಿ ಇಂದಿನ ಹಾಗೆ ಕೇವಲ ಪುಸ್ತಕಪಾಠ ಮಾತ್ರವಲ್ಲ. ತಪಸ್ಯೆಯಿಂದ ಮಸ್ತಕ ಬೆಳಗಿಸುವ ಪಾಠವೂ ಇತ್ತು. ಧರ್ಮ ಮೈಗೂಡಿಸುವ ಅಭ್ಯಾಸವಿತ್ತು. ಈ ತರಬೇತಿಯನ್ನು ಪೂರ್ಣಗೊಳಿಸಿದವನೇ “ಸ್ನಾತಕ “ಎಂಬ ಪದವಿಗೆ ಅರ್ಹ. ಇಂಥಹ ಧರ್ಮಿಷ್ಠ ಕಾಮಸೇವನೆಯಿಂದ ಮರ್ಯಾದೆಯನ್ನು ಮೀರುವುದಿಲ್ಲ. ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಧರ್ಮಾವಿರುದ್ಧೋಭೂತೇಷು ಕಾಮೋಸ್ಮಿ ಭರತರ್ಷಭ’ - ‘ನಾನು ಸ್ವತಃ ಕಾಮವೇ ಆಗಿದ್ದೇನೆ - ಧರ್ಮಕ್ಕೆ ಅವಿರೋಧವಾಗಿದ್ದಪಕ್ಷದಲ್ಲಿ’ ಎಂದು ಹೇಳಿದ್ದಾನೆ. ಈ ರೀತಿ ಧರ್ಮಸಂಪಾದನೆಯನಂತರ  ಅರ್ಥ -ಕಾಮಗಳನ್ನು ಸೇವಿಸಿದರೆ ವ್ಯಕ್ತಿಯು ಗೃಹಸ್ಥ ಜೀವನದಲ್ಲಿ ಉದಾರನಾಗಿ ಲೋಕಕಲ್ಯಾಣಕ್ಕಾಗಿ ಅರ್ಥ - ಕಾಮಗಳನ್ನು ಸೇವಿಸುತ್ತಾನೆ. ತನ್ನ ಸ್ವಾರ್ಥಕ್ಕಾಗಿ, ಇಂದ್ರಿಯಗಳ ಚಾಪಲ್ಯಕ್ಕಾಗಿ ಅಲ್ಲ. ಕಾಲವು ಉರುಳುತ್ತ ತಾರುಣ್ಯವು ಕಳೆದು ಮುಪ್ಪನ್ನು ಎದುರಿಸಿದಾಗ, ವೈರಾಗ್ಯದಿಂದ ಭೋಗವನ್ನು ತ್ಯಜಿಸಿ ತಪಸ್ಯೆಯನ್ನು ಆಶ್ರಯಿಸುತ್ತಾನೆ.  ಶರೀರವನ್ನು ಹಳೆಯ ಬಟ್ಟೆಯಂತೆ ನಿರಾತಂಕವಾಗಿ ತ್ಯಜಿಸುತ್ತಾನೆ. ಇದನ್ನು ವರ್ಣಿಸುತ್ತ ಕಾಳಿದಾಸನು ‘’ಶೈಶವೇ ಅಭ್ಯಸ್ತ ವಿದ್ಯಾನಾಂ, ಯೌವನೇ ವಿಷಯೈಷಿಣಾಮ್, ವಾರ್ಧಕೇ ಮುನಿವೃತ್ತೀನಾಮ್, ಯೋಗೇನಾಂತೇ ತನುತ್ಯಜಾಮ್’ ಎಂದು ಹೇಳಿದ್ದಾನೆ. 

ಈ ವಿಷಯ ಇಂದೂ ಪ್ರಸಕ್ತವೇ ?
ಈ ಹಳೆಯ ಕಾಲದ ಮಾತಿಂದೇತಕೆ ? ಕಾಮವೆಂಬ ವೇಗದಿಂದ ಕೂಡಿದ ಗಾಡಿಯನ್ನು ಇಂದೂ ನಾವೆಲ್ಲರೂ ಓಡಿಸುತ್ತಲೇ ಇದ್ದೇವೆ. ಸುಖದಾಯಕವೂ ಸುಭದ್ರವೂ ಆದ  ಜೀವನ ಪಯಣ ಬಯಸಿದ್ದಲ್ಲಿ ಈ ವಿಷಯ ಇಂದೂ ಪ್ರಸಕ್ತ.   ರಸ್ತೆಗಳಲ್ಲಾಗಲಿ, ಸಮಾಜದಲ್ಲಾಗಲಿ ಅಪಘಾತಗಳಿಗೆ ‘ತರಬೇತಿ ಪಡೆಯದ ಚಾಲಕರೇ’ ಕಾರಣ. ಇದು ಅಂದಿನಂತೆಯೇ ಇಂದೂ ಸತ್ಯ. ‘ಧರ್ಮ’ ವೆಂಬ ಲೈಸೆನ್ಸ್ ಇದ್ದರೆ ಕಾಮ ಪೂಜ್ಯ, ಇಲ್ಲವಾದರೆ ಅಪಘಾತಕ್ಕೆ ಆಹ್ವಾನವೆಂದು ಸರ್ವಥಾ ತ್ಯಾಜ್ಯ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.