Saturday, November 3, 2018

ದೇಹ ಮತ್ತು ದೇವಾಲಯ (Deha mattu devalaya)

ಲೇಖಕರು: ವಿದ್ವಾನ್ ಗಜಾನನ ಭಟ್ಟರೇವಣಕಟ್ಟಾ



ಭಗವಂತನ ಬೃಹತ್ಸೃಷ್ಟಿಯನ್ನು ಬ್ರಹ್ಮಾಂಡವೆಂದರೆ, ಅದರ ಸಂಕ್ಷಿಪ್ತ ಮಾದರಿಯಾದ ಮಾನವ ದೇಹವನ್ನು ಪಿಂಡಾಂಡವೆಂದಿದ್ದಾರೆ. ಮಹಾವಿಸ್ತಾರರೂಪವಾದ ವೃಕ್ಷದ ಎಲ್ಲ ಅಂಶಗಳೂ ಬೀಜದಲ್ಲಿ ಅಡಗಿರುವಂತೆ ಬ್ರಹ್ಮಾಂಡದಲ್ಲಿರುವ ಸಮಸ್ತ ತತ್ತ್ವಗಳೂ ಪಿಂಡಾಂಡದಲ್ಲಿ ಅಡಕವಾಗಿವೆ. ಜಡದೇಹದಲ್ಲಿ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಂಡ ಆ ಮಹಾಮನೀಷಿಗಳು ಭೌತಿಕ-ದೈವಿಕ-ಆತ್ಮಿಕವಾದ ಮೂರು ಸ್ತರದ ಸತ್ಯಗಳನ್ನು ಅರಿಯಲು ಅನುಗುಣವಾದ ಒಂದು ದಿವ್ಯಯಂತ್ರವನ್ನಾಗಿ ದೇಹವನ್ನು ಅವರು ಮನಗಂಡರು. ಅವರು ಕಂಡಂತೆ ಈ ದೇಹಯಂತ್ರವನ್ನು ವರ್ಣಿಸುವ ಪರಿ ಹೀಗಿದೆ.

ಎಂಬುದಾಗಿ ಸಾರಿದರು. ಈ ಮಾನವ ದೇಹವು ಸಮಗ್ರ ಸೃಷ್ಟಿಯನ್ನೂ ಹಾಗೆ ಸೃಷ್ಟಿಮೂಲದಲ್ಲಿ ಬೆಳಗುತ್ತಿರುವ ಪರಂಜ್ಯೋತಿಯನ್ನು ಅರ್ಥಮಾಡಿಕೊಳ್ಳಲು ಒಂದು ಸಾಧನವಾಗಿದೆ. ಲೋಕದಲ್ಲಿ ದೂರದ ವಸ್ತವಿನ ಅರಿವಿಗೆ ದೂರದರ್ಶಕವಿರುವಂತೆಸೂಕ್ಷ್ಮವೀಕ್ಷಣೆಗೆ ಸೂಕ್ಷ್ಮದರ್ಶಕವಿರುವಂತೆಎಲ್ಲ ಸತ್ಯ-ಋತಗಳನ್ನು ಅರಿಯಬಲ್ಲ ದೂರದರ್ಶಕವೂ ಸೂಕ್ಷ್ಮದರ್ಶಕವೂ ಪಾರದರ್ಶಕವೂ ನಮ್ಮ ದೇಹವೇ ಆಗಿದೆ. ಅದರ ಸಮಗ್ರ ಪರಿಚಯವನ್ನು ಸಾಮಾನ್ಯ ಬುದ್ಧಿಯ ಮಾನವನಿಗೂ ಅರಿವು ಮಾಡಿಕೊಡಲು ಈ ದೇಹದ ಒಂದು ಪ್ರತಿಕೃತಿಯಾಗಿ ದೇವಾಲಯವನ್ನು ರಚಿಸಿದರು. ಅಲ್ಲಿಂದಲೇ ಈ ದೇವಾಲಯ ಸಂಸ್ಕೃತಿ ಬೆಳೆದು ಬಂದಿತು. ಆದ್ದರಿಂದಲೇ ದೇಹೋ ದೇವಾಲಯಃ ಪ್ರೋಕ್ತಃ ಜೀವೋ ಹಂಸಃ ಸನಾತನಃ ಎಂಬ ಮಾತು ಬೆಳೆದು ಬಂತು. ಸದಾತನವಾದ ಪರಂಜ್ಯೋತಿಯ ದರ್ಶದ ನೆಲೆಯಾಗಿ ದೇಹವನ್ನು ಕಾಣಲಾಯಿತು.
ದಶದ್ವಾರಪುರಂ ದೇಹಂ ದಶನಾಡೀಮಹಾಪಥಮ್ | 
ದಶಭಿರ್ವಾಯುಭಿರ್ವ್ಯಾಪ್ತಂ ದಶೇಂದ್ರಿಯಪರಿಚ್ಛದಮ್ || 
ದೇಹಂ ವಿಷ್ಣ್ವಾಲಯಂ ಪ್ರೋಕ್ತಂ ಸಿದ್ಧಿದಂ ಸರ್ವದೇಹಿನಾಮ್ | 
ದೇಹಂ ಶಿವಾಲಯಂ ಪ್ರೋಕ್ತಂ ಸಿದ್ಧಿದಂ ಸರ್ವದೇಹಿನಾಮ್ ||

ನಮ್ಮ ಮುಖವನ್ನೇ ನಾವು ಕನ್ನಡಿಯಲ್ಲಿ ನೋಡಿ ಸಂತೋಷಪಡುತ್ತೇವೆ. ಅದೇ ರೀತಿ ನಮ್ಮನ್ನೇ ನಾವು ನೋಡುವುದು ಎಂದರೆ ಕೇವಲ ಹೊರಮೈಯನ್ನಲ್ಲ. ಈ ಹೊರ ಕವಚದ ಹಿಂದಿರುವ ಸೂಕ್ಷ್ಮ ಮತ್ತು ಪರರೂಪದವರೆಗೂ ನಮ್ಮನ್ನು ನಾವು ನೋಡಿಕೊಳ್ಳಬೇಕು. ಹಾಗೆ ನೋಡುವುದನ್ನು ಆತ್ಮಾವಲೋಕನವೆನ್ನಬಹುದು. ಈ ಆತ್ಮಾವಲೋಕನವನ್ನು ತನ್ನಲ್ಲೆ ತಾನು ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಎಲ್ಲರಿಗೂ ಆ ಸಾಮರ್ಥ್ಯವಿರುವುದಿಲ್ಲ. ಅದಕ್ಕಾಗಿ ಒಂದು ಸಂಸ್ಕಾರ ಕೊಟ್ಟಾಗ ಸಾಧ್ಯವಾಗುವುದು. ಅಂತಹ ಸಂಸ್ಕಾರ ದೇವಾಲಯದಿಂದ ದೊರಕಬಹುದಾಗಿದೆ. ಈ ದೇಹದ ಮೂಲಕ ಆತ್ಮಲೋಕನವನ್ನು ಮಾಡಿ ಆ ಅನುಭೂತಿಯನ್ನು ಪಡೆಯುವ ಉಪಾಯವಾಗಿ ಆಗಮಶಾಸ್ತ್ರವು ಪ್ರವರ್ತನೆಗೊಂಡಿತು. ಆಗತ-ಗತ-ಮತರೂಪವಾಗಿ ವಿಸ್ತಾರವಾದ ಈ ಶಾಸ್ತ್ರವು ಆರಾಧನೆ-ಉತ್ಸವ ಮೊದಲಾದ ವಿಧಾನಗಳಿಂದ ಒಡಲೊಳಗಿನ ಆನಂದವನ್ನು ಅನುಭವಿಸಲು ಸೇತುವಾಗಿದೆ. ಆತ್ಮಸ್ಥಾನದಲ್ಲಿ ಆಲಯದ ಅರ್ಚ್ಯಾಮೂರ್ತಿಯಿದ್ದು ತ್ರಿಗುಣಗಳ ಪ್ರತಿನಿಧಿಯಾಗಿ ತ್ರಿವರ್ಣದ ತೆರೆ ತೆರೆದು ದೇವದರ್ಶನ ಮಾಡಿಸುವಆ ಆನಂದದತ್ತ ದಿಗ್ದರ್ಶನ ನೀಡಬಲ್ಲ ಒಬ್ಬ ಅರ್ಚಕನಿರಬೇಕು. ಆಗ ಶಿಲೆಯೂ ಶಂಕರನಾಗುವುದು. ಈ ದೇವಾಲಯವು ನಮ್ಮನ್ನು ಭುವಿಯ ಜೀವನದಿಂದ ದಿವಿಯ ಆನಂದದೆಡೆಗೆ ಕೊಂಡೊಯ್ಯುವ ಸೇತುವೂ ಆಗಿದೆ. "ಅಭಿಜ್ಞಾನದ ಉಂಗುರವು ಇಲ್ಲದ್ದರಿಂದ ದುಷ್ಯಂತನಿಗೆ ರಸನಿಮಿಷ ವಿಷನಿಮಿಷವಾಯಿತು. ಮತ್ತೆ ಅಭಿಜ್ಞಾನ ದೊರೆತು ವಿಷನಿಮಿಷ ರಸನಿಮಿಷಕ್ಕೆ ತಿರುಗಿತು. ಹಾಗೆಯೇ ಭೂಮಿಯಲ್ಲಿದ್ದವರನ್ನು ವೈಕುಂಠಕೈಲಾಸಕ್ಕೆ ಕೊಂಡೊಯ್ಯುವ ಅಭಿಜ್ಞಾನವೇ ದೇವಾಲಯ. ಎಂಬ ಮಹಾಯೋಗಿ ಶ್ರೀರಂಗ ಮಹಾಗುರುವಿನ ಸಂದೇಶನುಡಿ ಮನನೀಯವಾದುದು.
ಈ ದೇಹಯಂತ್ರವನ್ನು ಗಮನಿಸಿದ ಯೋಗಿಗಳು ಇದರಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧಿ, ಆಜ್ಞಾ, ಸಹಸ್ರಾರವೆಂಬುದಾಗಿ ಏಳು ಕೇಂದ್ರಗಳನ್ನು ದರ್ಶನ ಮಾಡಿದರು. ಈ ಏಳು ಕೇಂದ್ರಗಳು ಏಳು ದ್ವಾರಗಳಂತೆ ಇದ್ದು ಒಳಗೆ ಬೆಳಗುವ ಪರಮಾತ್ಮನ ದರ್ಶನಕ್ಕೆ ದಾರಿ ಮಾಡಿ ಕೊಡುತ್ತವೆ. ಈ ಏಳು ಕೇಂದ್ರಗಳಲ್ಲಿ ಮೂರು ಕೇಂದ್ರಗಳು ಅತ್ಯಂತ ಮುಖ್ಯವಾದವುಗಳಾಗಿವೆ. ಅವುಗಳಲ್ಲಿ ಒಂದು ಅತ್ಯಂತ ಪ್ರಧಾನವಾದದ್ದು. ಹೀಗಿರುವ ಅಂತರಂಗದ ವ್ಯವಸ್ಥೆಯನ್ನು ಪ್ರತಿನಿಧಿಸಿ ದೇವಾಲಯದಲ್ಲಿಯೂ ಏಳು ದ್ವಾರ, ಮೂರು ದ್ವಾರ, ಒಂದು ದ್ವಾರರೂಪವಾದ ವ್ಯವಸ್ಥೆಯನ್ನು ಅಳವಡಿಸಿದರು.
ಬೆನ್ನುಮೂಳೆಯ ಪ್ರತಿನಿಧಿಯಾಗಿ ಒಂದು ಧ್ವಜಸ್ತಂಭ. ದೇವನ ಸನ್ನಿಧಿಯಲ್ಲಿ ಉಂಟಾಗುವ ಊರ್ಧ್ವಮುಖತೆಯ ಪ್ರತೀಕವಾಗಿ ಶಿಖರದಲ್ಲಿ ಒಂದು, ಮೂರು, ಐದು, ಏಳು ಕಲಶಗಳ ವ್ಯವಸ್ಥೆ. ದೇವಾಲಯದ ಸುತ್ತಲೂ ಭಿತ್ತಿಯಲ್ಲಿ ಕ್ರಮವಾಗಿ ಭೌತಿಕ, ದೈವಿಕ, ಆಧ್ಯಾತ್ಮಿಕವಾದ ಕೆತ್ತನೆಗಳು. ಅಂತರಂಗದಲ್ಲಿ ನಡೆಯುವ ಸದ್ಭಕ್ತಿಗಳ ಸಂಘರ್ಷ ಹಾಗೂ ಸತ್ ಶಕ್ತಿಗಳ ವಿಜಯದ ಕಥೆಗಳ ಕೆತ್ತನೆ. ಅರವತ್ನಾಲ್ಕು ವಿದ್ಯೆಗಳ ವಿವಿಧ ಕುರುಹುಗಳು ಇವೆಲ್ಲವೂ ಮಾನವ ದೇಹದ ಒಳ ರಚನೆಗೆ ಹೊಂದಿರುವಂತಹವುಗಳು. ಸ್ತಂಭಗಳ ಸಂಖ್ಯೆಯಾದರೂ ಇಪ್ಪತ್ನಾಲ್ಕು, ಮೂವತ್ತಾರು,ಅರವತ್ನಾಲ್ಕು, ತೊಂಬತ್ತಾರು, ನೂರೆಂಟು, ಸಾವಿರದೆಂಟು ಹೀಗೆ ಸೃಷ್ಟಿ ವಿಕಾಸದಲ್ಲಿರುವ ತತ್ತ್ವಗಳ ಪ್ರತಿನಿಧಿಯಾಗಿ ಬಂದಿದೆ. ಪಾದಗಳೇ ಮುಖದ್ವಾರ, ಜನನೇಂದ್ರಿಯವು ಧ್ವಜಸ್ತಂಭ, ಉದರವು ಬಲಿಪೀಠ, ಹೃದಯವು ನವರಂಗ, ಕೊರಳು ಸುಕನಾಸಿ, ಶಿರಸ್ಸು ಗರ್ಭಗೃಹ, ಭ್ರೂಮಧ್ಯದ ಆಜ್ಞಾಚಕ್ರಸ್ಥಾನವೇ ಮೂಲಬೇರಪೀಠ, ಇವುಗಳು ಆಸ್ತೃತರೂಪವಾದರೆ, ಲಂಬರೂಪದಲ್ಲಿ ಕಂಡಾಗ ಪಾದಗಳೇ ನಿಧಿಕುಂಭ, ನಾಳವೇ ಮೊಳಕಾಲು, ಬುನಾದಿಯೇ ತೊಡೆಗಳು, ಕಟಿ-ಉದರಗಳೇ ಕುಡ್ಯ(ಗೋಡೆ)ಗಳು, ಭುಜವೇ ವಲಭಿ, ಕರಗಳು ಪ್ರಾಕಾರ, ನಾಲಿಗೆ ಘಂಟೆ, ಹೃದಯವೇ ದೇವಮೂರ್ತಿ, ಕೊರಳೇ ವಿಮಾನ, ಶಿರಸ್ಸೇ ಶಿಖರ, ಬ್ರಹ್ಮರಂಧ್ರ(ಸಹಸ್ರಾರ)ವೇ ಕಲಶಗಳಾಗಿವೆ. ಇನ್ನು ತತ್ತ್ವಮಯವಾಗಿ, ಯೋಗಸಮನ್ವಯದ ಚಕ್ರಮಯವಾಗಿಯೂ ಸಾಮ್ಯತೆಯನ್ನು ಕಾಣಬಹುದಾಗಿದೆ. ಪಂಚಕೋಶಸಂಕ್ರಮಣದೃಷ್ಟಿಯಿಂದ ನೋಡಿದರೆ, ಹೊರಗಿನ ಪ್ರಾಕಾರ ಅನ್ನಮಯ, ಒಳಗಿನ ಪ್ರದಕ್ಷಿಣಪಥವು ಪ್ರಾಣಮಯ, ನವರಂಗ ಪರಿಧಿಯು ಮನೋಮಯ, ಅಂತಃಪ್ರದಕ್ಷಿಣಪಥವು ವಿಜ್ಞಾನಮಯ ಮತ್ತು ಗರ್ಭಗೃಹವು ಆನಂದಮಯವೆನಿಸಿದೆ.
ದೇವಾಲಯವು ಸನಾತನಾರ್‍ಯಭಾರತ ಮಹರ್ಷಿಗಳ ತಪಸ್ಸಿನ ಫಲಶ್ರುತಿಯಾಗಿದ್ದು ಯಜ್ಞ-ದಾನ-ತಪಸ್ಸು, ಋತ-ಸತ್ಯ-ಧರ್ಮ, ಅಭ್ಯುದಯ-ನಿಃಶ್ರೇಯಸ, ಪುರುಷಾರ್ಥಚತುಷ್ಟಯಗಳ ಮಾದರಿಯಲ್ಲಿ ವಿಭೂತಿಪೂಜಾರೂಪದಲ್ಲಿ ಹರಳುಗಟ್ಟಿದೆ. ಧರ್ಮ-ಬ್ರಹ್ಮ-ರಸಗಳೆಂಬ ಮಹಾತ್ರಿವೇಣಿಗಳಿಂದ ನಿರೂಪಿತವಾಗಿ ಕ್ಷೇತ್ರ-ತೀರ್ಥ-ಯಾತ್ರಾಮಯವಾಗಿ, ಜೀವನನ್ನು ದೇವನನ್ನಾಗಿಸುವ ಮಹೋನ್ನತ ಸಂಕಲ್ಪಹೊಂದಿದ ದೇವಾಲಯತತ್ತ್ವವು ದೇಶ-ಕಾಲಪರಿಚ್ಛಿನ್ನವಾದ ಪಿಂಡಾಂಡದಲ್ಲಿ ಅಪರಿಚ್ಛಿನ್ನವಾದ ಬ್ರಹ್ಮಾಂಡವನ್ನು ಕಾಣುವ ಪ್ರಯತ್ನವಾಗಿದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.