Saturday, November 17, 2018

ಆದರ್ಶ ಎಂದರೇನು? (Adarsha endarenu)

ಆದರ್ಶ ಎನ್ನುವ ಪದ ನಮಗೆಲ್ಲರಿಗೂ ಅತ್ಯಂತ ಪರಿಚಿತವಾಗಿರುವ, ನಿತ್ಯಜೀವನದಲ್ಲಿ ಬಳಕೆಯಲ್ಲಿರುವ ಪದ.ನಮ್ಮ ಜೀವನಕ್ಕೆ ಇವರು ಆದರ್ಶ ಎಂದು ಸಿನೆಮಾ ತಾರೆಯರನ್ನೋ,ಕ್ರೀಡಾ ಪಟುಗಳನ್ನೋ ,ದೇಶಭಕ್ತರನ್ನೋ,ರಾಜಕೀಯ ಧುರೀಣರನ್ನೋ ಅವರವರ ರುಚಿಗೆ ತಕ್ಕಂತೆ ಭಾವಿಸುವುದನ್ನು ನಾವು ನೋಡುತ್ತೇವೆ.
ಸಂಸ್ಕೃತ ಭಾಷೆಯ ಪದ. ಆ ಸಮನ್ತಾತ್ ದರ್ಶನ. ನಮಗೆ ನಮ್ಮನ್ನು ಸಮಗ್ರವಾಗಿ ಯಾವುದು ದರ್ಶನ ಮಾಡಿಸುತ್ತೋ ಅದು ಆದರ್ಶ. ಎದುರಿಗೆ ನಿಂತಾಗ ನಮ್ಮನ್ನು ನಮಗೆ ತೋರಿಸುತ್ತಾದ್ದರಿಂದ, ಕನ್ನಡಿಗೂ ಆದರ್ಶ ಎನ್ನುವುದುಂಟು.
ಆದರೆ ಆ ಸಮನ್ತಾತ್ ಎನ್ನುವಾಗ ನಮ್ಮ ಒಳ ಹೊರ ಪರಿಚಯವನ್ನು ಪೂರ್ಣವಾಗಿ ತೋರಿಸುವುದು ಎಂದಾಗುತ್ತದೆ. ಕನ್ನಡಿ ನಮ್ಮ ಹೊರ ರೂಪವನ್ನು ತೋರಿಸುತ್ತದೆ. ಆದರೆ ಯಾರ ದರ್ಶನದಿಂದ ಕೇವಲ ಭೌತಿಕವಾದ ಹೊರ ರೂಪವಷ್ಟನ್ನೇ ಅಲ್ಲದೇ  ನೈಜವಾಗಿ” ನಾನು” ಯಾರು ಎಂಬ ನಮ್ಮ ಒಳರೂಪವನ್ನೂ ನಾವು ನೋಡುವಂತಾಗುವುದೋ ಅವರನ್ನು ಆದರ್ಶ ಪುರುಷರು ಎಂದು ಭಾರತೀಯ ಋಷಿ ಸಮಾಜ ಕರೆದಿದೆ.
ಅಂತಹ ಜ್ಞಾನಿಗಳು ತಮ್ಮ ತಪಸ್ಯೆ,ಸಾಧನೆಗಳಿಂದ ತಮ್ಮ ನಿಜಸ್ವರೂಪವನ್ನು ತಿಳಿದು ಲೋಕದ ಅಂಕುಡೊಂಕಿನ ನಡೆಗೆ ವಿಚಲಿತರಾಗದೇ ಪರಮಾನಂದದಲ್ಲಿ ರಮಿಸುತ್ತಾರೆ. ಅವರ ದರ್ಶನ ಅವರೊಳಗಿನ ಸತ್ಯವನ್ನು ನಮಗೆ ಪರಿಚಯಿಸುತ್ತದೆ.ನಿರಂತರವಾಗಿ ಅವರ ಸಹವಾಸ,ಅನುಗ್ರಹಗಳು ನಮ್ಮೊಳಗಿನ ಸತ್ಯವನ್ನೂ ಕಂಡುಕೊಳ್ಳುವಂತೆ ಮಾಡುತ್ತದೆ.  ಎಲ್ಲರಲ್ಲೂ ಆ ಚೈತನ್ಯ ಶಕ್ತಿಯೇ ಬೆಳಗುತ್ತಿರುವುದು.ಅದೇ “ನಾನು” ಎಂಬುದಕ್ಕೆ ವಿಷಯ.ಅದರ ಪರಿಚಯವೇ ನನ್ನ ಪರಿಚಯ. ಯಾವ ಮಹಾತ್ಮರಿಂದ ಅಂತಹ “ನನ್ನನ್ನು” ತಿಳಿಯಬಹುದೋ ಅವರು “ಆದರ್ಶ” ಪದಕ್ಕೆ ನಿಜವಾಗಿ ಯೋಗ್ಯರು.
ಭಗವಂತನ ಅವತಾರವಾದ ರಾಮ,ಕೃಷ್ಣರೇ ಮೊದಲಾದವರು ನಮ್ಮ ಆದರ್ಶ ಎನ್ನುವ ಮಾತಿಗೂ ಇದೇ ಕಾರಣ. ಅವರ ಬಾಹ್ಯಜೀವನದ ನಡೆಗಳೂ ಆದರ್ಶವೇ. ಹೇಗೆ ಎಷ್ಟೇ ಕಷ್ಟ ನಷ್ಟಗಳಿದ್ದರೂ ಸಮಾಜದ ಹಿತಕ್ಕಾಗಿ ಅವರು ಬದುಕಿದರು ಎಂಬುದು ಹೊರ ಆದರ್ಶವಾದರೆ, ಅವರ ದರ್ಶನ, ಅವರ ಉಪದೇಶ, ನಮ್ಮನ್ನು ನಮ್ಮ ಅಂತರಂಗದ ದರ್ಶನಮಾಡಲು ಸಹಕಾರಿಯಾಗುತ್ತದೆ.  ಹಾಗೆಯೇ ಅಂತಹ ಸತ್ಯವನ್ನು ಕಂಡ  ಜ್ಞಾನಿಗಳು ಪ್ರತಿಷ್ಠಾಪಿಸಿದ ದೇವತಾ ಮೂರ್ತಿಗಳೂ ಸಹ, ನಿರಂತರ ಧ್ಯಾನ ಮಾಡುವುದರಿಂದ ನಮ್ಮ ಸ್ವರೂಪ ದರ್ಶನಕ್ಕೆ ಸಹಾಯ ಮಾಡುವುದರಿಂದ ಆದರ್ಶವಾಗುತ್ತದೆ. ಹೀಗೆ ಯಾವ ಯಾವುದು” ನಮ್ಮ “ ಸಮಗ್ರವಾದ ದರ್ಶನ ಮಾಡಿಸಲು ಸಹಕಾರಿಗಳಾಗುವುದೋ ಅವೆಲ್ಲವೂ ಆದರ್ಶವೇ.ಸದ್ಗುರುವಿನ ನಡೆ,ಉಪದೇಶ,ಆದೇಶ ನಿರ್ದೇಶಗಳೆಲ್ಲವೂ ಈ ದೃಷ್ಟಿಯಿಂದ ಆದರ್ಶವೇ.
ಈ ಶ್ರೇಷ್ಠವಾದ ಪದಗಳೆಲ್ಲವೂ ಬಾಳ ಒಳಬೆಳಕಿನಲ್ಲಿ ಸಂಚರಿಸಿದ ಮಹರ್ಷಿಗಳಿಂದ ಬಂದವುಗಳು. ತಾವು ಕಂಡು ಅನುಭವಿಸಿದ ಸತ್ಯ ದರ್ಶನವನ್ನು ಲೋಕವೆಲ್ಲವೂ ಕಾಣುವಂತಾಗಲಿ ಎಂಬ ಕರುಣೆಯಿಂದ ತಂದ ಪದಗಳು. ಪದ -ಪದಾರ್ಥವನ್ನು ಮುಟ್ಟುವಂತಿದ್ದರೆ ಅದರ ಬಳಕೆ ಅರ್ಥಪೂರ್ಣ.  ನಾವು ನಮ್ಮ ಸಂಕುಚಿತ ದೃಷ್ಟಿಯ ಜೀವನಗಳಲ್ಲಿ ಹಿರಿದಾದ ಪದಾರ್ಥವನ್ನು ಮುಟ್ಟುವ ಪದಗಳನ್ನೆಲ್ಲಾ ಕ್ಷುದ್ರವಾದ, ಸೀಮಿತವಾದ ಅರ್ಥದಲ್ಲಿ ಬಳಸುವುದಾಗುತ್ತಿದೆ.
ಈ ದೇಶದ ಅನುಭಾವಿಗಳು ತಂದ ಪದಗಳನ್ನು,  ಅದು ಯಾವ ಪದಾರ್ಥವನ್ನು ಉದ್ದೇಶಿಸಿ ಬಂದುದು ಎಂಬ ಚಿಂತನೆಯೇ ನಮಗೆ ಅವರು ನಡೆಸಿದ ನೆಮ್ಮದಿಯ ಜೀವನದ ದಾರಿದೀಪವಾಗಬಲ್ಲದುಆದರ್ಶದ ನೈಜ ಪರಿಚಯ ಮಾಡಿಸಿದ ಶ್ರೀರಂಗ ಮಹಾ ಗುರುಗಳಿಗೆ, ಅವರಿಂದ ಧರಿಸಿದ ವಿಷಯವನ್ನು ನಮ್ಮ ವರೆಗೂ ಹರಿಸಿದ  ದಿ |ಪೂಜ್ಯ ರಾಮಭದ್ರಾಚಾರ್ಯರಿಗೂ ಈ ಲೇಖನ ಸಮರ್ಪಿತವಾಗಲಿ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.