Saturday, January 26, 2019

ಸುಖಕ್ಕೊಂದು ಸೂಚ್ಯಂಕ (Sukhakkondu susanyanka)

                                                                                ಲೇಖಕರು: ನಾಗರಾಜ ಗುಂಡಪ್ಪ
ಶಿಕ್ಷಣ: ಎಮ್. ಟೆಕ್., ಕಂಪ್ಯೂಟರ್ ಇಂಜಿನಿಯರಿಂಗ್, ಮೈಸೂರು ವಿಶ್ವವಿದಾಯಲಯ.
ಹುದ್ದೆ: ಮಾಜಿ ಜನರಲ್ ಮ್ಯಾನೇಜರ, ವಿಪ್ರೋ ಟೆಕ್ನಾಲಜೀಸ್, ಹಾಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್


ಕಳೆದ 2-3 ದಶಕಗಳ ವಿದ್ಯಮಾನಗಳನ್ನು ಗಮನಿಸಿದರೆ, ಇದೊಂದು ಸೂಚ್ಯಂಕಗಳ (Index) ಯುಗವೆಂದು ಕರೆದರೆ ತಪ್ಪಾಗಲಾರದು. ರಾಷ್ಟ್ರೀಯ ಉತ್ಪನ್ನಾಂಕ(GDP) ಶೇರು ಮಾರುಕಟ್ಟೆಯ ಸೂಚ್ಯಂಕ (SENSEX, NIFTY) ಮುಂತಾಗಿ ಅನೇಕ ಸೂಚ್ಯಂಕಗಳು ಅರ್ಥವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಅತ್ಯಂತ ಕಡಿಮೆ ಹೂಡಿಕೆಯಿಂದ ಅತ್ಯಂತ ಹೆಚ್ಚು ಲಾಭವನ್ನು ಪಡೆಯುವಂತಹಾ (High ROI, Return-on-investment) ನಿಶ್ಚಯಗಳನ್ನು ಈ ಸೂಚ್ಯಂಕಗಳ ಬೆಂಬಲದಿಂದ ಕೈಗೊಂಡು ಅನೇಕರು ಭಾರೀ ಶ್ರೀಮಂತರಾಗಿದ್ದಾರೆ. ಈ High ROI ಚಿಂತನೆಯನ್ನು ನಾವು ಜೀವನಕ್ಕೆ ಅನ್ವಯಿಸಿಕೊಳ್ಳಬಹುದೇ? ಹೌದು ಎನ್ನುತ್ತದೆ ಮಹರ್ಷಿಗಳು ಕೊಟ್ಟಿರುವ ನೋಟ.

ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ, ಯಶಸ್ವಿಯಾಗಬೇಕಾದರೆ ನಿರಂತರ ಪ್ರಯತ್ನಶೀಲರಾಗಿರಬೇಕಾಗುತ್ತದೆ. ಈ ಪ್ರಯತ್ನವೇ ಜೀವನದಲ್ಲಿ ಹೂಡುವ ಬಂಡವಾಳವಾಗಿರುತ್ತದೆ. ಇಂತಹಾ ಪ್ರಯತ್ನಗಳಿಗೆ ಸಿಗುವ ಫಲಗಳು ಹಣ, ಅಧಿಕಾರ, ಕೀರ್ತಿ, ಸಂಪತ್ತು ಮುಂತಾಗಿ ಅನೇಕ ರೀತಿಯದಾದರೂ ಇವೆಲ್ಲವೂ ನ್ಯಾಯಯುತವಾಗಿದ್ದಾಗ ಒಂದು ಮಟ್ಟದ ತೃಪ್ತಿಯನ್ನು ಕೊಡುತ್ತದೆ ಮತ್ತು ಈ ತೃಪ್ತಿ ಅಥವಾ ಆನಂದಕ್ಕಾಗಿಯೇ ನಾವು ಪ್ರಯತ್ನವನ್ನು ಪಡುವುದು. ಹೀಗಾಗಿ ಜೀವನಕ್ಕೆ ಅನ್ವಯಿಸಿದಾಗ, ಪ್ರಯತ್ನವೇ ಬಂಡವಾಳವಾಗಿದ್ದು ಆನಂದವೇ ಫಲವಾಗಿರುತ್ತದೆ. ಯಾವ ಮಟ್ಟದ ಪ್ರಯತ್ನಕ್ಕೆ ಯಾವ ಮಟ್ಟದ ಆನಂದ ದೊರೆಯುತ್ತದೆ ಎಂದು ವಿಶ್ಲೇಷಣೆ ಮಾಡಿ, ಅತ್ಯಂತ ಹೆಚ್ಚು ಆನಂದ ದೊರೆಯುವ ಮಾರ್ಗದಲ್ಲಿ ಪರಿಶ್ರಮವನ್ನು ಹೂಡುವುದೇ ಜೀವನದಲ್ಲಿ ನಾವು ಕೈಗೊಳ್ಳಬಹುದಾದ ಅತ್ಯಂತ ಬುದ್ಧಿವಂತಿಕೆಯ High ROI ನಿರ್ಧಾರವಾಗಿರುತ್ತದೆ. ಈ ನಿರ್ಧಾರಕ್ಕೆ ಸಹಾಯಕವಾಗಿ ಏನಾದರೂ ಸೂಚ್ಯಂಕಗಳಿವೆಯೇ ಎಂದು ಕೇಳಿದರೆ, ನಮ್ಮ ಅದೃಷ್ಟವಶಾತ್ ಅಂತಹಾ ಸೂಚ್ಯಂಕಗಳನ್ನು ಮಹರ್ಷಿಗಳು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದಾರೆ - ಈ ಕೊಡುಗೆಯೇ ಆನಂದ ಮೀಮಾಂಸೆ.


ತೈತ್ತಿರೀಯೋಪನಿಷತ್ತಿನ ಆನಂದಮೀಮಾಂಸೆ ಅಧ್ಯಾಯವು ಆನಂದದ ಮಟ್ಟಗಳ ವಿಶ್ಲೇಷಣೆಯನ್ನು ನಿಖರವಾಗಿ ಮಾಡುತ್ತದೆ. ಅದು ಮಾನುಷಾನಂದ ಎಂದರೇನು ಎಂದು Define ಮಾಡಿ ಅದನ್ನು ಒಂದು Measuring Unit ಅಥವಾ index (ಸೂಚ್ಯಂಕ) ಆಗಿ ಇಟ್ಟುಕೊಂಡು ಉಳಿದ ಆನಂದದ ಮಟ್ಟಗಳನ್ನು ವಿವರಿಸುತ್ತದೆ. ಒಬ್ಬ ದೃಢಕಾಯನೂ, ಆರೋಗ್ಯವಂತನೂ, ಸುಖದ ಅಭಿಲಾಷೆಯೂ ಇರುವ ಯುವಕನ ಅಧೀನದಲ್ಲಿ ಸಕಲ ಭೋಗವಸ್ತುಗಳಿಂದ ಕೂಡಿದ ಭೂಮಂಡಲವೇ ಇದೆಯೆಂದುಕೊಳ್ಳೋಣ. ಅಂತಹ ಯುವಕನು ಏನೇನೆಲ್ಲಾ ಸುಖವನ್ನನುಭವಿಸಬಹುದೋ ಅದಷ್ಟನ್ನೂ ಸೇರಿಸಿದರೆ ಒಂದು ಮಾನುಷಾನಂದವಾಗುತ್ತದೆ. ಈ ಆನಂದದ ಮಟ್ಟಕ್ಕೆ ಹೋಲಿಸಿದರೆ, ಮನುಷ್ಯಗಂಧರ್ವರ ಆನಂದ ನೂರು ಪಟ್ಟು ಹೆಚ್ಚು ಎಂದು ಉಪನಿಷತ್ತು ಹೇಳುತ್ತದೆ. ಮನುಷ್ಯ ಗಂಧರ್ವರ ನಂತರ ದೇವಗಂಧರ್ವರು, ಪಿತೃಗಳು, ಆಜಾನಜಾನ ದೇವತೆಗಳು, ಕರ್ಮದೇವತೆಗಳು, ದೇವತೆಗಳು, ಇಂದ್ರ, ಬೃಹಸ್ಪತಿ, ಪ್ರಜಾಪತಿಯ ಆನಂದಗಳನ್ನು ವಿವರಿಸುತ್ತಾ ಪ್ರತಿ ಹಂತದವರ ಆನಂದವು ಹಿಂದಿನ ಆನಂದದ ಮಟ್ಟಕ್ಕಿಂತ ನೂರು ಪಟ್ಟು ಹೆಚ್ಚು ಎಂದು ಹೇಳಿ ಕೊನೆಯಲ್ಲಿ ಪ್ರಜಾಪತಿಯ ಆನಂದದ ನೂರು ಪಟ್ಟು ಹೆಚ್ಚು ಬ್ರಹ್ಮಾನಂದ ಎನ್ನುವಲ್ಲಿ ಆನಂದ ಮೀಮಾಂಸೆಯು ಸಮಾಪ್ತವಾಗುತ್ತದೆ. ಅಂದರೆ, ಮಾನುಷಾನಂದಕ್ಕಿಂತ ಸಹಸ್ರ ಕೋಟಿ ಪಾಲು ಹೆಚ್ಚು ಮಟ್ಟದ್ದು ಬ್ರಹ್ಮಾನಂದವೆಂಬುದು ಆನಂದ ಮೀಮಾಂಸೆಯ ಸಾರಾಂಶ. ಈ ಸಾರಾಂಶದ ಜೊತೆಗೇ ಋಷಿಗಳು ತಿಳಿಸಿರುವ ಅತ್ಯಂತ ಮುಖ್ಯವಾದ ಹಾಗೂ ಸಂತೋಷದ ಸಂಗತಿಯೆಂದರೆ, ಪ್ರತಿಯೊಬ್ಬ ಮನುಷ್ಯನೂ ಸಹಾ ತಪಸ್ಯೆಯ ಮೂಲಕ ಈ ಬ್ರಹ್ಮಾನಂದವನ್ನು ಹೊಂದಬಹುದು ಎನ್ನುವ ಸತ್ಯ.

ಹೀಗೆ ಯಾವುದೇ ಕ್ಷೇತ್ರದಲ್ಲೂ ಸಫಲತೆಗಾಗಿ ಅವಶ್ಯವಾದ ಪ್ರಯತ್ನವನ್ನು ಅಧ್ಯಾತ್ಮ ಕ್ಷೇತ್ರದಲ್ಲಿ ಹೂಡಿದರೆ, ಅದಕ್ಕೆ ಸಿಗುವ ಪ್ರತಿಫಲ ಸಹಸ್ರ ಕೋಟಿ ಪಾಲು ಹೆಚ್ಚಿನ ಬ್ರಹ್ಮಾನಂದವೇ ಆಗಿದೆ. ಈ ಬ್ರಹ್ಮಾನಂದವನ್ನು ಅನುಭವಿಸುವುದಕ್ಕೆ ಅಧಿಕಾರವನ್ನು ಹೊಂದಿರುವುದೇ ಮಾನವನ ವಿಶೇಷತೆಯಾಗಿರುವುದರಿಂದ, ಬ್ರಹ್ಮಾನಂದದಿಂದಲೇ ಮಾನವ ಜನ್ಮಕ್ಕೆ ಸಾರ್ಥಕತೆಯೂ ಸಹಾ ಆಗಿದೆ.

ಸೂಚನೆ: 
ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.