Saturday, January 5, 2019

ನಾನು ಚೆನ್ನಾಗಿರಬೇಕು ! (Nanu chennagirabeku)


ಎಲ್ಲರೂ ಚೆನ್ನಾಗಿರಬೇಕೆಂದೇ ಬಯಸುತ್ತಾರೆ.  ಆದರೆ ಈ ಚೆನ್ನು ಎನ್ನುವುದು ಏನು?  ಎಂಬುದನ್ನು ಅರ್ಥಮಾಡಿಕೊಂಡರೆ ಅದಕ್ಕನುಗುಣವಾಗಿ ಬಾಳಬಹುದು.  ಒಂದು ವೃಕ್ಷವನ್ನು ಗಮನಿಸಿದರೆ, ವೃಕ್ಷವಾಗಿ ವಿಕಾಸಕ್ಕೆ ಬೇಕಾದ ಸಮಸ್ತವನ್ನೂ ಬೀಜವು ತನ್ನಲ್ಲಿ ಗುಟ್ಟಾಗಿ ಇಟ್ಟುಕೊಂಡಿರುತ್ತದೆ.  ಆ ಬೀಜವನ್ನು ಭೂಮಿಯಲ್ಲಿ ಬಿತ್ತಿದರೆ ವಿಕಾಸದ ಪ್ರತಿ ಹಂತದಲ್ಲಿಯೂ ತನ್ನ ಆಶಯವನ್ನೇ ವಿಸ್ತರಿಸಿಕೊಳ್ಳುತ್ತದೆ.  ಮಾವಿನ ಬೀಜವು ಮಾವಿನ ವೃಕ್ಷವಾಗಿಯೇ ಬೆಳೆಯುತ್ತದೆ.  ಹಾಗೆ ಆದಾಗ ಅದರ ಬಾಳ್ವೆ ಚೆನ್ನಾಗಿ ಆಗಿದೆ ಎಂದು ಹೇಳಬಹುದು.  ಅಂದರೆ ಈ ಉದಾಹರಣೆಯಲ್ಲಿ ಬೀಜ, ಅದರ ವಿಕಾಸದ ಆಶಯ ಮತ್ತು ಅದರಂತೆಯೇ ಬೆಳೆಯುವುದು ‘ಚೆನ್ನು’ ಎನ್ನುವುದರ ಅರ್ಥ.

ಅಂತೆಯೇ ನಮ್ಮ ಜೀವನದ ಗುಟ್ಟೆಲ್ಲವೂ ಆತ್ಮದಲ್ಲಡಗಿದೆ.  ಆದ್ದರಿಂದ ಜೀವನದ ಪ್ರತಿ ಹೆಜ್ಜೆಯೂ ಆತ್ಮದ ಆಶಯವನ್ನು ವ್ಯಕ್ತಪಡಿಸುವಂತಿರಬೇಕು.  ಜೀವದ ಆಶಯಕ್ಕನುಗುಣವಾಗಿ ಬಾಳುವುದೇ ಸರಿಯಾದ ನಡೆ.  ಹಾಗಿಲ್ಲದಿದ್ದರೆ “ಬಿತ್ತಿದ್ದು ಮಾವು ಬಂದದ್ದು ಬೇವು” ಎಂದಾಗಿಬಿಡುತ್ತದೆ.

ವೃಕ್ಷದ ಕಾಂಡ, ಕೊಂಬೆ, ಎಲೆ ಎಲ್ಲವಕ್ಕೂ ನೀರು ತಲುಪಿಸಬೇಕಾದರೆ ಬೇರಿಗೆ ನೀರೆರೆಯಬೇಕು.  ಹಾಗೆಯೇ  ಜೀವನವೃಕ್ಷಕ್ಕೂ ಒಂದು ಬೇರಿದೆ.  ಆ ಕೇಂದ್ರವನ್ನು ಸ್ಪರ್ಷಿಸಿಕೊಂಡೇ ಎಲ್ಲ ಭಾಗಗಳಿಗೂ ನಾವು ಕೊಡುವಂತಹ ವಿಷಯಗಳು ಹರಿಯಬೇಕು. ಜೀವ ಅಥವಾ ಆತ್ಮವೇ ಆ ಕೇಂದ್ರವಾಗಿದೆ.  ಆತ್ಮಕ್ಕೆ ಮುಟ್ಟುವಂತೆ ಕೊಡದಿದ್ದರೆ ಅದರ ಬೆಳವಣಿಗೆಯಲ್ಲಿ ಅದರತನ, ಧರ್ಮ ಇರುವುದಿಲ್ಲ.  ಮೂಲವೇ ಬೆಳೆದುಕೊಂಡು ಎಲ್ಲೆಡೆಯಲ್ಲೂ ತನ್ನತನವನ್ನು ಮೆರೆಯುತ್ತಾ ಬರಬೇಕಾದರೆ ನಾವು ನಡೆಸುವ ಎಲ್ಲ ಕ್ರಿಯೆಗಳೂ ಆತ್ಮಮೂಲದಿಂದಲೇ ಹೊರಟು ಪುನಃ ಆತ್ಮಮೂಲವನ್ನೇ ತಲುಪುವಂತಿರಬೇಕು.


fig (source) - https://en.wikipedia.org/wiki/Ashvattha

ಮಾನವದೇಹವೂ ಒಂದು ವೃಕ್ಷವಾಗಿದೆ.  ಆದರೆ ಇದು ಮೇಲ್ಬೇರಾದ ಮತ್ತು ಕೆಳಗೊಂಬೆಯಾಗಿರುವ ವೃಕ್ಷ- “ಊರ್ಧ್ವಮೂಲಮಧಶ್ಯಾಖಮ್ ಅಶ್ವತ್ಥಂ ಪ್ರಾಹುರವ್ಯಯಮ್".  ಇದನ್ನು ಅವ್ಯಯವಾದ ಅಶ್ವತ್ಥವೆಂದು ಕರೆದಿದ್ದಾರೆ.  ಇದರ ಬೇರು ಮೆದುಳಿನಲ್ಲಿದೆ.  ಜೀವದ ಬೇರು ಇರುವುದು ಇಲ್ಲಿಯೇ.  ಎಲ್ಲ ಅವಯವಗಳಿಗೂ ಪ್ರಧಾನವಾದದ್ದು ಶಿರಸ್ಸು.  ಅಲ್ಲಿಂದಲೇ ನರನಾಡಿಗಳೂ, ಅಂಗಾಂಗಗಳೂ ಕೆಳಮುಖವಾಗಿ ಶಾಖೆಗಳ ರೂಪದಲ್ಲಿ ವಿಸ್ತಾರಗೊಂಡಿವೆ.  ಅಧೋಮುಖವಾದ ಜೀವನದಲ್ಲಿ  ಈ ಜೀವವು ಸದಾ ಚಂಚಲತೆಯಿಂದ ಕೂಡಿರುತ್ತದೆ.  ಇದನ್ನು ಮೊದಲಿಗೆ ಅರ್ಥಮಾಡಿಕೊಂಡವರು ಮಹರ್ಷಿಗಳು.

ನಾವು ಕಣ್ದೆರೆಯುವುದು ನಿದ್ರೆಯಿಂದ ಎಚ್ಚರಗೊಂಡಾಗ.  ಅಂದರೆ ಸಾಮಾನ್ಯರು ಬಾಹ್ಯಜೀವನಕ್ಕೆ ಹೆಜ್ಜೆಯಿಡುವುದು ನಿದ್ರೆಯ ಸ್ಥಿತಿಯಿಂದ.  ಆದರೆ ಆತ್ಮಸಾಕ್ಷಾತ್ಕಾರವಾಗಿರುವ ಜ್ಞಾನಿಗಳು ಹೊರಬರುವುದು ಅಜಾಢ್ಯನಿದ್ರೆಯೆಂದು ಕರೆಯಲ್ಪಡುವ ಯೋಗಸಮಾಧಿಯಿಂದ.    ಅದೇ ನಮ್ಮ ಬೀಜರೂಪ. 

ಜೀವ ಎನ್ನುವ ಪದವಿರುವುದರಿಂದ ಜೀವನ.  ಅಂತಹ ಜೀವದ ಆಶಯವನ್ನು ಬದಿಗಿಟ್ಟು ಕೇವಲ ಐಂದ್ರಿಯಿಕ ಜೀವನವನ್ನು ಮಾಡುವಂತಿಲ್ಲ.  ಅಲ್ಲಿ ಬಾಹ್ಯ ಬಾಳಾಟ ಮಾತ್ರ ಇರುವುದರಿಂದ ಅದನ್ನು ಜೀವನ ಎಂದೇ ಕರೆಯಲಾಗುವುದಿಲ್ಲ.  ಇನ್ನು ಅದನ್ನು ‘ಚೆನ್ನಾದ ಜೀವನ’ ಎನ್ನುವುದಾದರೂ ಹೇಗೆ?  ನಮ್ಮ ಜೀವನದ ವೃತ್ತದಲ್ಲಿ ವಿಕಾರ ಬರಕೂಡದು. ವಿಕಾರಗೊಳ್ಳದೆ ವಿಕಾಸವಾಗಬೇಕಾದರೆ ಮೂಲವನ್ನು ಬಿಟ್ಟು ಹಾಗೂ ಅದರ ಆಶಯವನ್ನು ಬಿಟ್ಟು ಅತ್ತಿತ್ತ ಜಾರುವಂತಿಲ್ಲ.  ಅಂತಹ ಜೀವನ ಮಾತ್ರ ಚೆನ್ನಾದ ಜೀವನವೆನ್ನಿಸಿಕೊಳ್ಳಬಲ್ಲುದು.

ಸತ್ಯವೂ ಶಿವವೂ ಸುಂದರವೂ ಆಗಿರುವ ಆತ್ಮವು ನಮ್ಮ ಜೀವನ ವೃಕ್ಷದ ಮೂಲವಾಗಿದ್ದು  ಸಮಸ್ತ ಸಾರವನ್ನೂ ಒಳಗೊಂಡಿರುವುದರಿಂದ ಅತ್ಯಂತ ಚೆನ್ನಾದ, ಪ್ರಕಾಶಮಯವಾದ ಮತ್ತು ಆನಂದಮಯವಾದ ನೆಲೆಯಾಗಿದೆ.  ಆದರ ಆಶಯವಾದರೋ ‘ಜೀವವು ಯೋಗವನ್ನು ಮರೆಯದೇ, ಅಂದರೆ ತನ್ನನ್ನು ಮರೆಯದೇ ಭೋಗವನ್ನು ಅನುಭವಿಸಲಿ ಎಂಬುದಾಗಿದೆ’ ಎಂದು ಜ್ಞಾನಿಗಳ ತೀರ್ಮಾನ.  ಅಂತಹ ಜೀವನವನ್ನು ನಡೆಸಲು ಬೇಕಾದ ಪುರುಷಾರ್ಥಮಯವಾದ ಬಾಳಾಟದ ವ್ಯವಸ್ಥೆಯನ್ನು ಋಷಿಗಳು ಯೋಜಿಸಿದ್ದಾರೆ.  ಅದರ ವಿಧಿವಿಧಾನದಂತೆ ಜೀವನ ನಡೆಸಿದರೆ, ಚೆನ್ನಾಗಿ ಬಾಳಿದಂತಾಗುವುದು.  ಏಕೆಂದರೆ ಅದು ಚೆನ್ನು ಎನ್ನುವುದರ ಮಾನದಂಡವಾಗಿರುವ ಭಗವಂತನಲ್ಲಿ ನಮ್ಮನ್ನು ನೆಲೆಗೊಳಿಸುತ್ತದೆ.   ಧರ್ಮ,ಅರ್ಥ,ಕಾಮ ಮತ್ತು ಮೋಕ್ಷಗಳೆಲ್ಲವೂ ದೊರೆತು ಬದುಕು ಸಾರ್ಥಕವಾಗುತ್ತದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.