ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
"ನವನೀತ ಚೌರ್ಯದ ರಹಸ್ಯ ಜ್ಞಾನಿಗಳಿಗೆ ಮಾತ್ರವೇ ವೇದ್ಯ, ಸಾಮಾನ್ಯರಿಗಲ್ಲ"
ಶ್ರೀಕೃಷ್ಣನ ಕಥಾಮೃತವು ಸರ್ವರಿಗೂ ಅತ್ಯಂತ ರಸ್ಯವೂ, ಹೃದ್ಯವೂ ಆಗಿರುವುದು.ಅದರಲ್ಲೂ ಆತನ ಬಾಲಲೀಲೆಗಳು ತುಂಟಮಕ್ಕಳನ್ನೂ ಆಕರ್ಷಿಸುವ ಅದ್ಭುತಕಥಾಭಾಗಗಳು. ಅಂತಹ ಪ್ರಸಂಗಗಳಲ್ಲಿ ಪ್ರಸಿದ್ಧವಾದದ್ದು ಕೃಷ್ಣನ ನವನೀತಚೌರ್ಯ. ಶ್ರೀಕೃಷ್ಣನು ಗೋಕುಲದ ಒಡೆಯನಾದ ನಂದಗೋಪನ ಮಗನಾಗಿ ಆತನ ಮನೆಯಲ್ಲಿ ಬೆಳೆದುದರಿಂದ ಮನೆಯಲ್ಲಿ ಹಾಲು, ಮೊಸರು, ಬೆಣ್ಣೆಗಳಿಗೆ ಯಾವ ಕೊರತೆಯೂ ಇರಲಿಲ್ಲ. ಗೋಕುಲದ ಎಲ್ಲ ಗೋಪಗೋಪಿಯರ ಪ್ರೀತಿಯ ಮುದ್ದು ಮಗುವಾಗಿದ್ದುದರಿಂದ ತನ್ನ ಮನೆಯಲ್ಲಾಗಲೀ ಇತರರ ಮನೆಗಳಲ್ಲಾಗಲೀ ಕೇಳಿದೊಡನೆಯೇ ಹಾಲು-ಬೆಣ್ಣೆ
ಸಿಗುವುದರಲ್ಲಿ
ಯಾವ ಅಡಚಣೆಯೂ ಇರಲಿಲ್ಲ. ಇಷ್ಟಿದ್ದರೂ ಅವನು ಕೆಲವೊಮ್ಮೆ ಕದ್ದು ತಿನ್ನುತ್ತಿದ್ದನಂತೆ!
ಇನ್ನೂ ವಿಚಿತ್ರವೆಂದರೆ ಈ ಕಳ್ಳತನದ ಕಥೆಯ ಅನುಸಂಧಾನದಿಂದ ’ಸಕಲ ಪಾಪಗಳ ಪರಿಹಾರ,
ಭಗವದ್ಭಕ್ತಿಯ ವೃದ್ಧಿ”ಯೆಂಬ ಫಲಶ್ರುತಿ ಬೇರೆ! ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ
ಕಳ್ಳತನದಿಂದಾಗುವ ಕೆಡುಕನ್ನು ತಿಳಿಸಿಕೊಡುವ ಪ್ರಯತ್ನವನ್ನು ಹಿರಿಯರೆಲ್ಲರೂ ಮಾಡುವುದು
ಮನೆಮನೆಗಳಲ್ಲಿಯೂ ನಡೆಯುತ್ತಿರುವ ಸಂಗತಿ. ಹೀಗಿರುವಾಗ ಕೃಷ್ಣನ ಚೌರ್ಯವನ್ನು ಮಾತ್ರ
ಕೊಂಡಾದುವುದೇಕೆ? ಅಂದು ಆತ ಬೆಣ್ಣೆ ಕದ್ದರೆ ಇಂದು ನಮ್ಮ ಮಗು ಬೇರೊಂದು ಪದಾರ್ಥವನ್ನು
ಕದಿಯಬಹುದು. ಅದು ತಪ್ಪೇ? ಎನ್ನುವ ಪ್ರಶ್ನೆ ಯಾರಿಗಾದರೂ ಏಳಬಹುದು.
ಸರಿ-ತಪ್ಪುಗಳ ನಿರ್ಣಯ:
ಯಾವುದೇ
ಕ್ರಿಯೆಯ ಸರಿ-ತಪ್ಪುಗಳ ನಿರ್ಣಯ ಅದರಿಂದಾಗುವ ಪರಿಣಾಮದಿಂದಲ್ಲವೇ? ಸಾಮಾನ್ಯ ಮಕ್ಕಳ
ಚೌರ್ಯವು ಸರಿಪಡಿಸದಿದ್ದರೆ ಕಾಲಕ್ರಮದಲ್ಲಿ ದುಷ್ಪರಿಣಾಮವನ್ನುಂಟುಮಾಡುವ ಸಾಧ್ಯತೆ
ಉಂಟು. ಆದರೆ ಕೃಷ್ಣನ ಚೌರ್ಯದಿಂದಾದ ಪರಿಣಾಮವು ಪಾಮರರಿಗೆ ಎಟುಕುವಂತದ್ದಲ್ಲ. ಆತನ
ಸ್ವರೂಪವನ್ನು ಅರಿತ ಜ್ಞಾನಿಗಳು ’ಅದು ಯಾವುದೇ ದುಷ್ಪರಿಣಾಮವನ್ನೂ ಮಾಡಲಿಲ್ಲ. ಹೊರತಾಗಿ
ಪ್ರಸನ್ನತೆಯನ್ನೇ ಉಂಟುಮಾಡಿತು’ ಎಂದು ಸಾರುತ್ತಾರೆ.
ಪ್ರಸನ್ನತೆ:
ಕೊಳಕುನೀರಿನಿಂದ
ಬಗ್ಗಡವನ್ನು ನೀಗಿಸಿದಾಗ ನೀರು ತಿಳಿಯಾಗಿ ಒಳಗಿರುವ ಪದಾರ್ಥವನ್ನು ಸ್ಪಷ್ಟವಾಗಿ
ತೋರಿಸುವುದು. ನಮ್ಮ ಮನಸ್ಸು ಸಹ ಕೊಳೆಯಿಂದ ತುಂಬಿದಾಗ ಒಳಗೆ ಬೆಳಗುವ ಪರಮಾತ್ಮನನ್ನು
ತೋರಿಸಲಾರದು. ಮನಸ್ಸುಶುದ್ಧಿಯಾದಾಗ ಇಂದ್ರಿಯಗಳ ವಿಕಾರವು ತೊಲಗಿ ಪ್ರಸನ್ನವಾಗಿ
ತಿಳಿನೀರಿನಂತೆ ಒಳಬೆಳಕನ್ನು ತೋರಿಸುವುದು ಖಂಡಿತ. ಜ್ಞಾನಿಗಳ ಮನಸ್ಸು ಆ ರೀತಿಯ
ಪ್ರಸನ್ನತೆಯಿಂದ ಕೂಡಿರುವುದು. ಆ ಪ್ರಸನ್ನಮನಸ್ಕರು ಯಾವುದೇ ವ್ಯಕ್ತಿಯನ್ನಾಗಲೀ,
ಪದಾರ್ಥವನ್ನಾಗಲಿ ಅನುಗ್ರಹಬುದ್ಧಿಯಿಂದ ನೆನೆದರೆ ಅವರ ಪ್ರಸನ್ನತೆಯು ಆ ವ್ಯಕ್ತಿಯ ಅಥವ
ಪದಾರ್ಥದ ಮೇಲೂ ಹರಿದು ಅದು ಅವರ ಮನಃಪ್ರಸಾದವಾಗುತ್ತದೆ. ಜ್ಞಾನಿಗಳು ತಮ್ಮ ಕಣ್ಣಿನಿಂದ
ಪದಾರ್ಥವನ್ನು ನೋಡಿದರೆ ಬರೀ ಪದಾರ್ಥವಾಗಿದ್ದದ್ದು ಪ್ರಸಾದವಾಗಿ ಪರಿಣಮಿಸುತ್ತದೆ. ಅವರ
ಸ್ಪರ್ಶವು ಒದಗಿಬಂದಾಗ ಅದು ಇನ್ನೂ ಹೆಚ್ಚಿನ ಮಟ್ಟದ ಪ್ರಸಾದವಾಗುವುದು. ಅವರೇನಾದರೂ
ತಾವು ಸ್ವೀಕರಿಸಿ ಶೇಷವನ್ನು ಇತರಿರಿಗೆ ದಯಪಾಲಿಸಿದರೆ ಅದು ಸರ್ವೋತ್ಕೃಷ್ಟವಾದ
ಪ್ರಸಾದವಾಗುತ್ತದೆ. ಇದು ಜ್ಞಾನಿಗಳಿಗೆ ಮಾತ್ರವೇ ವೇದ್ಯ, ಇತರರಿಂದ ಅರಿಯಲಾರದ್ದು.
ಭಗವಂತನನ್ನು ಅನುಭವಿಸುವ ಜ್ಞಾನಿಗಳೇ ಇಷ್ಟು ಪರಿಣಾಮವನ್ನುಂಟುಮಾಡಬಹುದಾದರೆ ಇನ್ನು
ಸಾಕ್ಷಾತ್ ಭಗವಂತನೇ ಇಳಿದು ಬಂದಾಗ ಆತನ ಚಟುವಟಿಕೆಗಳ ಪ್ರಭಾವವನ್ನು ಹೇಳುವುದೆಂತು?!
ಶ್ರೀಕೃಷ್ಣಾವತಾರದಲ್ಲಿ
ನಡೆದದ್ದು ಇಂತಹ ಅನುಗ್ರಹವೇ ಎಂಬುದು ಆತನ ಅವತಾರರಹಸ್ಯವನ್ನರಿತ ಶ್ರೀರಂಗಮಹಾಗುರುಗಳು
ನೀಡಿದ ವಿವರಣೆ. ತಾವಾಗಿ ಆತನಿಗೆ ಪ್ರೀತಿಯಿಂದ ಹಾಲು-ಬೆಣ್ಣೆಗಳನ್ನು ಕೊಟ್ಟವರಿಗೆ
ಅನುಗ್ರಹವಾಯಿತೆಂಬುದರಲ್ಲಿ ಸಂಶಯವಿಲ್ಲ. ಆದರೆ ಮೌಢ್ಯದಿಂದ ಕೆಲವೊಮ್ಮೆಕೊಡದಿದ್ದವರ
ಮನೆಯಿಂದ ಅವರನ್ನು ಅನುಗ್ರಹಿಸುವ ಸಲುವಾಗಿ ಪರಮಕರುಣೆಯಿಂದ ಕದ್ದು-ತಿಂದು
ಶೇಷಪ್ರಸಾದವನ್ನು ಅವರಿಗೆ ಉಣಿಸಿದ ಪರಮಕಾರುಣ್ಯಮೂರ್ತಿ ಅವನು.ಈ ಗುಟ್ಟನ್ನರಿಯದವರಿಗೆ
ಅದು ಬರೀ ಚೌರ್ಯ, ಅರಿತವರಿಗೆ ಪರಮಾನುಗ್ರಹದ ಕೃತ್ಯ. ಈ ಅನುಗ್ರಹಕೃತ್ಯದ ಅನುಸಂಧಾನದಿಂದ
ಅವನ ಪಾವನಸ್ಮರಣೆಯಲ್ಲಿ
ಮುಳುಗುತ್ತಿದ್ದ ಶ್ರೀರಂಗಪ್ರಿಯಶ್ರೀಗಳವರ
ಅನುಭವವಾಣಿಯೂ ಇದಾಗಿತ್ತು. ಆತನ ಪ್ರಸನ್ನತೆಯನ್ನು ನಮ್ಮಲ್ಲಿಯೂ ಹರಿಸುವುದರಿಂದಲೇ
ಪಾಪಪರಿಹಾರ ಹಾಗೂ ಭಗವದ್ಭಕ್ತಿಯವೃದ್ಧಿಗೆ ಕಾರಣವಾಗುವುದೆಂಬ ಫಲಶ್ರುತಿಯ ಗಾನ.
ಮೈಥಿಲೀ ರಾಘವನ್, ಬೆಂಗಳೂರು
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.