Saturday, February 29, 2020

ಧರ್ಮ ಎಂದರೇನು ? (Dharma Endarenu ?)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)





ಸೂಕ್ತಿ ಸಂಪದ - ೧. 

ಧರ್ಮಾತ್ ಅರ್ಥಃ ಪ್ರಭವತೇ ಧರ್ಮಾತ್ ಪ್ರಭವತೇ ಸುಖಮ್ |
ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ || ರಾಮಾಯಣ-೩.೯.೩೦
ಅರ್ಥ- ಧರ್ಮದಿಂದ ಅರ್ಥವು ಹುಟ್ಟುತ್ತದೆ. ಧರ್ಮದಿಂದ ಸುಖವು ಹುಟ್ಟುತ್ತದೆ. ಧರ್ಮದಿಂದ ಎಲ್ಲವೂ ಲಭಿಸುತ್ತದೆ. ಈ ಜಗತ್ತು ಧರ್ಮದ ಸಾರವಾಗಿದೆ.

ವಿವರಣೆ-ಈ ಜಗತ್ತೇ ಧರ್ಮದ ಸಾರ ಎಂದು ಹೇಳಿರುವುದರಿಂದ ಧರ್ಮಕ್ಕೆ ಅಷ್ಟು ಪ್ರಾಧಾನ್ಯ ಬಂತು. ಧರ್ಮ ಎಂಬ ಪದವು ಸಂಸ್ಕೃತದ 'ಧೃಞ್ ಧಾರಣಪೋಷಣಯೋಃ' ಎಂಬ ಮೂಲದಿಂದ ಬಂದಿದೆ. ಯಾವುದು ಎಲ್ಲವನ್ನು ಧರಿಸುವುದೋ ಮತ್ತು ಎಲ್ಲವನ್ನು ಪೋಷಿಸುವುದೋ ಅದಕ್ಕೆ ಧರ್ಮ ಎಂದು ಕರೆಯುತ್ತಾರೆ. ಈ ಜಗತ್ತನ್ನು ಧರ್ಮವು ಧರಿಸಿ ಪೋಷಿಸುವುದರಿಂದ ಧರ್ಮವೇ ಎಲ್ಲವೂ ಆಗಿದೆ. ಅದನ್ನೇ ಧರ್ಮ ಎಂಬ ಪದಕ್ಕೆ ಮೂಲತಃ ಭಗವಂತ ಎಂಬ ಅರ್ಥವನ್ನು ಶ್ರೀರಂಗ ಮಹಾಗುರುಗಳು ವಿಶೇಷವಾಗಿ ನೀಡಿದ್ದಾರೆ. ನಿಜವಾಗಿ ಧರ್ಮ ಎಂಬ ಪದವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಉಳಿದ ವಿಷಯ ಅರ್ಥವಾಗುತ್ತದೆ. 

ಭಗವಂತನಿಂದಲೇ ಸೃಷ್ಟವಾದ ಈ ಜಗತ್ತು ಅವನಿಂದಲೇ ಧರಿಸಲ್ಪಟ್ಟಿದೆ. ಆದ್ದರಿಂದ ಈ ಜಗತ್ತಿಗೆ ಅವನೇ ಪೋಷಕ ಎಂದರೆ ಅದರಲ್ಲಿ ಸೊಗಸು ಇದೆ. ಅರ್ಥ ಎಂಬ ಪದಕ್ಕೆ ಪದಾರ್ಥ ಅಥವಾ ವಸ್ತು ಎಂಬ ಅರ್ಥವನ್ನು ಇಲ್ಲಿ ಇಟ್ಟುಕೊಳ್ಳಬೇಕು. ಈ ನೇರದಲ್ಲಿ ಧರ್ಮದಿಂದ ಅರ್ಥವು ಹುಟ್ಟಿದೆ ಎಂಬ ವಾಕ್ಯಕ್ಕೆ ಭಗವಂತನಿಂದ ಈ ವಿಶಾಲವಾದ ಅರ್ಥರೂಪ ಪ್ರಪಂಚವು ಸೃಷ್ಟಿಯಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಮತ್ತು ಜೀವನದಲ್ಲಿ ಭಗವಂತನೇ ಸರ್ವಸ್ವ ಎಂದು ತಿಳಿದು ಸಾಗಿದಾಗ ಜೀವನಕ್ಕೆ ಒಂದು ಅರ್ಥ (ಸಾರ್ಥಕತೆ) ಸಿಗುವುದು. ಹೀಗೆ 'ಧರ್ಮ' ಎಂಬ ಪದಕ್ಕೆ ಸದಾಚಾರ, ಭಗವಂತನನ್ನು ಪಡೆಯಲು ಇರುವ ಸಾಧನ ಎಂಬೆಲ್ಲಾ ಅರ್ಥಗಳು ಇವೆ. ಆದರೂ ಧರ್ಮಪದಕ್ಕೆ ಭಗವಂತ ಎಂಬ ಅರ್ಥವನ್ನು ಇಟ್ಟುಕೊಂಡಾಗ ಮಾತ್ರ ಈ ಸೂಕ್ತಿಯು ಅರ್ಥವಾಗುತ್ತದೆ. "ಭಗವಂತನಿಂದ ಅರ್ಥಪ್ರಪಂಚವು ಹುಟ್ಟಿದೆ. ಭಗವಂತನಿಂದಲೇ ಸುಖವೂ ಲಭಿಸುತ್ತದೆ. ಆದ್ದರಿಂದ ಭಗವಂತನೇ ಸರ್ವಸ್ವ ಮತ್ತು ಈ ಸೃಷ್ಟಿ ಭಗವಂತ ಸಾರ" ಎಂಬ ಗಂಭೀರವಾದ ಅರ್ಥವು ಸಿಗುತ್ತದೆ. 

ಸೂಚನೆ: 29/02/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ದೇವರಿಗೆ ಪುಷ್ಪಸಮರ್ಪಣೆ (Devarige Puspasamarpaṇe)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)



ಮಾನಸ ಪೂಜೆಯಲ್ಲಿ ಸಮಾಧಿಪುಷ್ಪವನ್ನೂ, ಅದರ ವಿಸ್ತಾರವಾದ ಅಹಿಂಸಾ ಮುಂತಾದ ಎಂಟು ಚಿತ್ತವೃತ್ತಿಪುಷ್ಪಗಳನ್ನೂ ಸಮರ್ಪಿಸಿದನಂತರ ಆ ಪುಷ್ಪಗಳ ಪ್ರತೀಕವಾಗಿ ಹೊರಗಡೆಯ ಪುಷ್ಪಗಳನ್ನು ಭಗವಂತನಿಗೆ ಸಮರ್ಪಣೆ ಮಾಡುವುದು ಜ್ಞಾನಿಗಳ ಪೂಜಾವಿಧಾನ.

ಪುಷ್ಪಗಳಲ್ಲಿ ಪೂಜಾಯೋಗ್ಯ ಧರ್ಮಗಳು:
ಭಕ್ತಿಭಾವವಿಲ್ಲದ ಪೂಜೆ ಹೇಗೆ ಭಗವಂತನಿಗೆ ಅಪ್ರಿಯವೋ ಅಂತೆಯೇ ನಿರ್ಗಂಧವಾದ ಹಾಗೂ ದುರ್ಗಂಧದಿಂದ ಕೂಡಿದ ಹೂವುಗಳೂ ಭಗವಂತನಿಗೆ ಅಪ್ರಿಯ. ಆದ್ದರಿಂದ ಕಾಗದದಿಂದ ತಯಾರಿಸಿದ ಹೂವುಗಳನ್ನು ಹೊರಗಡೆಯ ಅಲಂಕಾರಕ್ಕೆ ಬಳಸಬಹುದೇ ಹೊರತು ಪೂಜೆಗಲ್ಲ. ಅನುಕೂಲವಿದ್ದಲ್ಲಿ ಅಲಂಕಾರಕ್ಕೂ ಸುವಾಸನೆಯಪುಷ್ಪಗಳನ್ನೇ ಉಪಯೋಗಿಸಬೇಕು. ಪ್ಲಾಸ್ಟಿಕ್‌ಪದಾರ್ಥವು ಪೂಜಾ-ವಿರುದ್ಧವಾದ ಧರ್ಮಗಳಿಂದ ಕೂಡಿದೆಯೆಂಬುದು ಶ್ರೀರಂಗಮಹಾಗುರುಗಳ ಸಂಶೋಧನೆಯಿಂದ ನಿರೂಪಿತವಾದಸತ್ಯ. ಆದ್ದರಿಂದ ಅದರಿಂದ ತಯಾರಿಸಲ್ಪಟ್ಟ  ಹೂವುಗಳನ್ನು ಬಳಸಲೇಬಾರದೆಂಬುದು ಅವರ ಆಶಯವಾಗಿತ್ತು.
ವೈಷ್ಣವಮೂರ್ತಿಗಳಿಗೆ ಬಿಳಿ ಹಾಗು ಸುವರ್ಣವರ್ಣದ ಹೂವುಗಳು, ಶೈವಮೂರ್ತಿಗಳಿಗೆ ಕೆಂಪು ವರ್ಣದ ಹೂವುಗಳು ಪ್ರಿಯವೆಂಬ ಮಾತಿನಂತೆ  ಬೇರೆಬೇರೆ ಹೂವುಗಳು ಬೇರೆಬೇರೆ ದೇವತೆಗಳ ಪೂಜೆಯಲ್ಲಿ ವಿಶೇಷವಾಗಿ ಉಪಯೋಗಿಸಲ್ಪಡುತ್ತಿವೆ. ಯಾವ ವರ್ಣ ಯಾವ ದೇವತಾ ಭಾವಕ್ಕೆ ನಮ್ಮನ್ನು ಏರಿಸಲು ಸಮರ್ಥವಾಗುತ್ತದೆಯೆಂಬ ವಿಜ್ಞಾನವನ್ನರಿತು ತಂದ ವ್ಯವಸ್ಥೆಯಿದು ಎಂಬಂಶವನ್ನೂ ಶ್ರೀರಂಗಮಹಾಗುರುಗಳು
ತೋರಿಸಿಕೊಟ್ಟರು.

ಕಮಲದ ವೈಶಿಷ್ಟ್ಯ:
ಗುಲಾಬಿ, ಜಾಜಿ, ಮಲ್ಲಿಗೆ, ಸಂಪಿಗೆ ಮುಂತಾದ ಎಲ್ಲ ಪುಷ್ಪಗಳೂ ಪೂಜಾಯೋಗ್ಯವಾದವುಗಳೇ ಆದರೂ ಕಮಲಪುಷ್ಪವು ನಾನಾಕಾರಣಗಳಿಂದ ಪೂಜೆಗೆ ಅತ್ಯಂತ ಪ್ರಶಸ್ತವಾದದ್ದೆಂದು ಜ್ಞಾನಿಗಳಿಂದ ಕೊಂಡಾಡಲ್ಪಟ್ಟಿದೆ. ಎಲ್ಲ ದೇವತೆಗಳ ಪೂಜೆಗೂ ಯೋಗ್ಯವಾಗಿರುವ ಪುಷ್ಪವಿದು. ಪರಮಾತ್ಮನನ್ನು ನೆನಪಿಸಿ ಆ ಭಾವಕ್ಕೆ ಏರಿಸುವ ಧರ್ಮವು ಉಳಿದೆಲ್ಲ ಪುಷ್ಪಗಳಿಗಿಂತ ಇದರಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಪ್ರಧಾನಕಾರಣ. ಯೋಗಿಗಳ ಅಂತರ್ದರ್ಶನಕ್ಕೆ ವಿಷಯರಾದ ದೇವತೆಗಳಿಗೆ ಆಸನ, ಕೈಯಲ್ಲಿನ ಆಭರಣ, ಅಂಗಾಂಗಗಳ ಸ್ವರೂಪ(ಹಸ್ತಪದ್ಮ, ಮುಖಪದ್ಮ, ನೇತ್ರಪದ್ಮ ಇತ್ಯಾದಿ) ಎಲ್ಲವೂ ಕಮಲವೇ. ಇದು ಅತಿಹೆಚ್ಚುಸಂಖ್ಯೆಯ ದಳಗಳಿಂದ ಕೂಡಿರುವುದರಿಂದ ಯೋಗಿಗಳ ಅಂತರಂಗಯಾತ್ರೆಯಲ್ಲಿ ಅತ್ಯುನ್ನತಮಟ್ಟದಲ್ಲಿನ ಸಹಸ್ರಾರಕಮಲದ ಪ್ರತೀಕವಾಗಿದೆ. ಕಮಲಪುಷ್ಪವು ಉದಯಸೂರ್ಯನ ಕಿರಣಗಳಿಂದ ಮೆಲ್ಲಗೆ ಅರಳುವ ಪರಿಯು ಸಮಾಧಿಯಿಂದ ಎಚ್ಚರಗೊಂಡು ನಿಧಾನವಾಗಿ ತೆರೆಯುವ ಒಬ್ಬ ಯೋಗಿಯ ಕಣ್ಣನ್ನು ಹೋಲುತ್ತದೆ. ತಾವರೆಯು ನೀರಿನಲ್ಲೇ ಇದ್ದರೂ ಹೇಗೆ ನೀರಿಗೆ ಅಂಟುವುದಿಲ್ಲವೋ ಅಂತೆಯೇ ಸಂಸಾರದಲ್ಲೇ ಇದ್ದರೂ ಪುಣ್ಯ-ಪಾಪಗಳ ಫಲವಾದ ಸುಖ-ದುಃಖಗಳಿಗೆ ಜ್ಞಾನಿಯು ಅಂಟಿಕೊಳ್ಳುವುದಿಲ್ಲವೆಂಬ ಜ್ಞಾನಿಯ ಗುಣಲಕ್ಷಣದ ಗುರುತಾಗಿದೆ ಕಮಲ.

ವರ್ಗೀಕರಣ:
ಗೊಬ್ಬರದಗುಂಡಿ, ಮಲಗಳಿಂದ ಕೂಡಿದ ಅಶುಚಿಸ್ಥಾನಗಳಲ್ಲಿ, ಸ್ಮಶಾನಭೂಮಿಗಳಲ್ಲಿ ಬೆಳೆದ ಹೂವುಗಳಲ್ಲಿ ಪೂಜಾಯೋಗ್ಯವಾದ ಧರ್ಮಗಳಿರುವುದಿಲ್ಲ. ತನ್ನ ಮನೆಯಲ್ಲಿ ತಾನೇ ನೀರುಹಾಕಿ ಬೆಳೆಸಿದ ಪುಷ್ಪಗಳು ಉತ್ತಮಕಲ್ಪ. 'ದೇವರಪೂಜೆಗಾಗಿ ಗಿಡ ಪುಷ್ಪಿಸಲಿ' ಎಂಬ ಮನೋಧಾರೆಯ ಜೊತೆಗೆ ಜಲಧಾರೆಯನ್ನು ಬಿಟ್ಟು ಬೆಳಸಿದಾಗ ಆ ಪುಷ್ಪಗಳಲ್ಲಿ ವಿಶೇಷಧರ್ಮಗಳು ಕೂಡಿಬರುತ್ತವೆ.
ಸೃಷ್ಟಿಯಲ್ಲಿ ತಾವಾಗಿಯೇ ಬೆಳೆದ ಪುಷ್ಪಗಳು ಮಧ್ಯಮಕಲ್ಪ, ಅಂಗಡಿಯಿಂದ ಕೊಂಡುಕೊಂಡದ್ದು ಅಧಮಕಲ್ಪ, ಯಾಚಿತವಾದದ್ದು ಅಧಮಾಧಮಕಲ್ಪ, ಕದ್ದುತಂದದ್ದು ಅದಕ್ಕಿಂತಲೂ ಕೆಲಮಟ್ಟದ್ದು ಎಂಬುದಾಗಿ ಜ್ಞಾನಿಗಳು ವರ್ಗೀಕರಿಸಿದ್ದಾರೆ.
ಪುಷ್ಪಗಳನ್ನು ತೊಳೆದು ಶುದ್ಧವಾದ ನೀರಿನಿಂದ ಮಂತ್ರಸಹಿತವಾಗಿ ಪ್ರೋಕ್ಷಿಸಿ ಭಕ್ತಿಪೂರ್ವಕವಾಗಿ ಪೂಜೆಗೆ ಉಪಯೋಗಿಸಬೇಕು.

ಸೂಚನೆ: 29/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Wednesday, February 26, 2020

மௌன அறிவுறையின் மகத்துவம் (Mauna arivuraiyin makattuvam)

மூலம் : ஸ்ரீசுப்ரமண்ய ஸோமயாஜி
தமிழாக்கம்: வனஜா
மின்னஞ்சல் : (lekhana@ayvm.in)



அது ஒரு ஆலமரம். அங்கு ஒரு வினோதமான காட்சி. குருவை சுற்றிலும் சீடர்கள் அமர்ந்திருக்கின்றனர். சீடர்கள் அனைவரும் முதியவர்கள். குருவோ இளைஞன். குரு  வாய்பேச்சின்றி உபதேசிக்கிறார். சீடர்களின் ஐயமனைத்தும் நீங்குகின்றதாம். இது சங்கரபகவத்பாதரின் தக்ஷிணாமூர்த்தி ஸ்தோத்திரத்தின் மொழிபெயர்ப்பு.

பொதுவாக குரு வயது முதிர்ந்தவராகவும் சீடர்கள் இளைஞர்களாகவும் இருப்பர். ஆயின் இங்கு அதற்கு எதிர்மறையாக உள்ளது. மற்றும் மௌனம்,  விமர்சனம் இரண்டும் ஒன்றாக இருப்பது எங்ஙனம்?  மௌனமாயிருத்தல் வேண்டும் , இல்லாவிடில்
தர்க்கம் அல்லது உவமைகளின் மூலம் விளக்க வேண்டும். அடுத்தது இன்னும் புதுமை! இவனின் வாய்பேச்சற்ற விளக்கத்தால் சீடர்களின் ஐயங்களனைத்தும்  நீங்கியதாம்! உலகில் பலமுறை வகைவகையான சொற்களால் தெளிவுபடுத்தினாலும்  புரியாத சந்தர்பங்களும் உண்டு. இங்கு இவன் பேசுவதே இல்லை. ஆயினும்

அவர்களின் ஐயங்கள் தீர்ந்தது எவ்வாறு? அனைத்தும் வியப்பல்லவா?
ஸ்ரீரங்கமஹாகுரு இவ்வாறு விளக்கினார். அங்கு குறிப்பிட்ட ஆலமரம் தேவவ்ருக்ஷம். அதன் அடிவாரத்தில் முதன்மை பொருளான பரமசிவன், தக்ஷிணாமூர்த்தி அமர்ந்திருக்கிறான். அவனே உலககுரு. அவன் காலங்களை கடந்தவன். காலங்களை இயக்குபவன். எனவே காலத்திற்குட்பட்ட  முதுமை அவனிடத்தில் இல்லை.  என்றும் இளமையுடனுள்ளான்.

சீடர்களோ காலத்திற்கு உட்பட்டு உன்னதமான பரம்பொருளின் தேடுதலில் முதுமை அடைந்துள்ளனர். சீடர்களுக்கு உன்னதமான சத்யத்தை குறித்த ஐயம் எழுகையில் எதிரில் அமர்ந்துள்ள சத்யமே வடிவான பரமசிவ மூர்த்தியை காண்கின்றனர். அவன் உட்பொருளின்(சத்யத்தின்) உச்சத்தில் அமர்ந்துள்ளான். அவனை கண்டவுடன் இவர்களின் புலன்களனைத்தும் அவனையே சார்ந்து அந்த உயர்ந்த சத்தியத்தின்பால் சென்றுள்ளன. அச்சத்தியத்தின் ஒளியால் வாழ்வின் அனைத்து ஐயங்களும் நீங்கியுள்ளன. சொற்கள் மிகக்குறுகிய சாதனம். தக்ஷிணாமூர்த்தியின் மௌனமே எல்லா உன்னத சத்தியங்களையும் அவர்களுக்கு தெளிவுபடுத்தியுள்ளது. படைப்பின் தொடக்கம் மற்றும் அதன் விரிவாக்கம் அனைத்தும் அவர்களின் அக கண்ணிற்கு புலப்பட்ட பின் அவர்களுக்கு எந்த ஐயமும் இல்லை.

அத்தகைய தக்ஷிணாமூர்த்தி நம் அனைவரின்  இருளை நீக்கி உள்ஒளியை பெருக்க  வேண்டுவோம்.

குறிப்பு: இக்கட்டுரை யின் கன்னட மூலம் AYVM blogs  ல் காணலாம்

ಸರ್ವಗಂಧನಿಗೆ ಗಂಧಸಮರ್ಪಣಾ ಪೂಜೆ (Sarvagandhanige Gandhasamarpana Pooje)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
ಪೂಜಾಕ್ರಮದಲ್ಲಿ ಪಂಚೋಪಚಾರಪೂಜೆ, ಶೋಡಶೋಪಚಾರಪೂಜೆ ಇತ್ಯಾದಿ ಅನೇಕ ವಿಧಾನಗಳುಂಟು. ಇವುಗಳಲ್ಲಿ ಪಂಚೋಪಚಾರ ಪೂಜಾವಿಧಾನದ ಅಂಗಗಳಾದ ಗಂಧ, ಪುಷ್ಪ, ಧೂಪ, ದೀಪ ನೈವೇದ್ಯ ಇವುಗಳನ್ನು ಕುರಿತ ಸಂಕ್ಷಿಪ್ತವಿವೇಚನೆಯನ್ನು ಮುಂದೆ ಮಾಡಲಾಗುವುದು.

ಸೃಷ್ಟಿತತ್ತ್ವಗಳಲ್ಲಿ ಪೃಥ್ವೀತತ್ತ್ವದ ವಿಶೇಷಲಕ್ಷಣ ಗಂಧ. ಹೊರಗೆ ನಮಗೆ ಸಿಗುವ ಗಂಧವು ಸ್ಥೂಲವಾದದ್ದು. ಆದರೆ ಸಗುಣವಾದ ಭಗವಂತನನ್ನು ಧ್ಯಾನಮಾಡುವವರಿಗೆ ಅಂತರಂಗದಲ್ಲಿ ತನ್ಮಾತ್ರೆಗಳ ಸ್ಥಾನವನ್ನು ದಾಟಿ ಮೇಲೇರಿದಾಗ ದಿವ್ಯಗಂಧದ ಆಘ್ರಾಣವಾಗುತ್ತದೆ ಎಂಬುದು ಜ್ಞಾನಿಗಳ ಅನುಭವ. ಆ ದೈವೀಕ್ಷೇತ್ರವನ್ನೂ ದಾಟಿ ಮೇಲೇರಿದಾಗ ಪರಮಾದ್ಭುತವಾದ ಬ್ರಹ್ಮಗಂಧದ ಅನುಭವವೂ ಆಗುವುದುಂಟು ಮತ್ತು ಮೇಲೆ ಹೇಳಿದ ಎಲ್ಲ ಗಂಧಗಳೂ ಭಗವಂತನ ವಿಸ್ತಾರಗಳೇ ಎಂಬುದು ಜ್ಞಾನಿಗಳು ಕಂಡರಿತ ಸತ್ಯ.

ಗಂಧೋಪಚಾರದಲ್ಲಿ ಸ್ಥೂಲವಾದ ಗಂಧವು 'ಭಗವಂತನ ಬ್ರಹ್ಮಗಂಧದ ಒಂದಂಶ' ಎಂಬುದನ್ನು ನೆನಪಿಸಿಕೊಂಡು ಆತನ ಮಹಿಮೆಯನ್ನು ಸ್ಮರಿಸುವುದು, 'ಅವನ ಪದಾರ್ಥವನ್ನು ಅವನಿಗೇ ಒಪ್ಪಿಸುತ್ತೇನೆ' ಎಂಬ ಭಾವದಿಂದ ಆತನಿಗೆ ಅರ್ಪಿಸುವುದು- ಇದೇ 'ಭಗವತ್ಸಮರ್ಪಣೆ' ಎನಿಸಿಕೊಳ್ಳುತ್ತದೆ. ಇಷ್ಟಲ್ಲದೆ ನಾವು ಕೊಡುವ ಗಂಧದಿಂದ ಆತನಿಗೆ ಆಗಬೇಕಾದದ್ದೇನಿದೆ?ಸಮರ್ಪಣೆಯಿಂದ ಯಾರಿಗೆ, ಏನು ಲಾಭ? ಮಾನಸಿಕವಾಗಿ ಗಂಧಸಮರ್ಪಣೆ ಮಾಡುತ್ತಾ ಧ್ಯಾನದಲ್ಲಿರಬಹುದಲ್ಲ, ಹೊರ ಪದಾರ್ಥದ ಸಮರ್ಪಣೆಯೇಕೆ? ಎನ್ನಬಹುದು.

'ದಾರಿತಪ್ಪಿದ ರಾಜಕುಮಾರನನ್ನು ರಾಜನಬಳಿ ಕರೆದೊಯ್ದರೆ ರಾಜಕುಮಾರನ ಜೊತೆಗೆ ಕರೆದೊಯ್ದವನಿಗೂ ರಾಜನ ದರ್ಶನವಾಗುವುದು. ಅಂತೆಯೇ ಎಲ್ಲೋ ಕಾಡಿನಲ್ಲಿ ಬೆಳೆದ ಮರವನ್ನು ಸದ್ಭಾವದಿಂದ ತಂದು ತೇಯ್ದು ಅದನ್ನು ಭಗವಂತನ ಪಾದಕ್ಕೆ ಸೇರಿಸಿದಾಗ ಆ ಕ್ರಿಯೆಯ ಮೂಲಕ ಸೇರಿಸಿದವನಿಗೂ ಭಗವದ್ಭಾವ-ತನ್ಮಯತೆ ಉಂಟಾಗುತ್ತದೆ' ಎಂದು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದರು.

ಮಾನಸಸಮರ್ಪಣೆಯಿಂದ ಪೂಜಕನಿಗೆ ಮಾತ್ರವೇ ಲಾಭ. ಆದರೆ ಜ್ಞಾನಿಯಾದವನು ಬ್ರಹ್ಮಭಾವದಲ್ಲಿ ಭಗವಂತನಿಗೆ ಅರ್ಪಿಸುವ ಗಂಧದಲ್ಲಿ ಆತನ ಬ್ರಹ್ಮಭಾವತರಂಗಗಳು ಬೆಸೆದುಕೊಳ್ಳುತ್ತದೆ. ಅಂತಹ ಗಂಧವು ದರ್ಶನ-ಸ್ಪರ್ಶಗಳ ಮೂಲಕ ಪ್ರಸನ್ನತೆಯನ್ನುಂಟುಮಾಡುವ ಪ್ರಸಾದವಾಗಿ ಪರಿಣಮಿಸುತ್ತದೆ. ಸ್ವೀಕರಿಸಿದವರನ್ನು ಭಗವದ್ಭಾವಕ್ಕೇರಿಸಿ ಪವಿತ್ರಗೊಳಿಸುತ್ತದೆ. ಇದರಿಂದ ಗಂಧವನ್ನೀಯುವ ವೃಕ್ಷವೂ ಪೂಜಾಸಾಮಗ್ರಿಯಾಗಿ ಧನ್ಯತೆಯನ್ನು ಪಡೆಯುತ್ತದೆ. 'ಮರ'ವು 'ಅಮರ'ವಾಗುತ್ತದೆ. ಆದ್ದರಿಂದ ಗಂಧಸಮರ್ಪಣೆಯ ಲಾಭ ಗಂಧದ ವೃಕ್ಷಕ್ಕೆ, ಪೂಜಕನಿಗೆ, ಪ್ರಸಾದಸ್ವೀಕರಿಸುವವರಿಗೆ ಇಷ್ಟೂ ಜನರಿಗೂ ಉಂಟು.

ಸುಗಂಧಗಳು:
ಮನಸ್ಸನ್ನು ಊರ್ಧ್ವಮುಖವಾಗಿ ಭಗವಂತನೆಡೆಗೆ ಹರಿಸುವ ಗಂಧವೇ ಸುಗಂಧ-ಭಗವಂತನಿಗೆ ಪ್ರಿಯ. ಇದನ್ನಾಧರಿಸಿ ಶ್ರೀಗಂಧವು ಅತ್ಯಂತ ಪ್ರಶಸ್ತವಾದದ್ದು ಎಂಬುದಾಗಿ ಜ್ಞಾನಿಗಳಿಂದ ಗುರುತಿಸಲ್ಪಟ್ಟಿದೆ. ಇದರ ವಾಸನೆ ಮನಸ್ಸನ್ನು ಭಗವಂತನೆಡೆ ಏರಿಸುವುದಲ್ಲದೆ ತಂಪು, ಹಿತವನ್ನುಂಟುಮಾಡುತ್ತದೆ. ಕೆಲವು ದೈಹಿಕ-ಮಾನಸಿಕ ರೋಗಗಳನ್ನು ಪರಿಹರಿಸುತ್ತದೆ. ಮೂರುಕ್ಷೇತ್ರಗಳಲ್ಲೂ (ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕ) ಸಹಕಾರಿಯಾಗುತ್ತದೆ. ಚಂದನ, ಸೀಬೇಮರ, ದೇವದಾರು ಇವುಗಳು ಶ್ರೀಗಂಧದಲ್ಲಿನ ಕೆಲವು ಅಂಶಗಳನ್ನು ಮಾತ್ರ ಸ್ವಲ್ಪಮಟ್ಟಿಗೆ ಹೊಂದಿರುತ್ತವೆ. ಶ್ರೀಗಂಧವು ಸಿಗದಿದ್ದಾಗ ಇವುಗಳನ್ನು ಬಳಸಬಹುದು.

ಗಂಧದ ವರ್ಣ:
ಶ್ರೀಗಂಧಕ್ಕೆ ಕೇಸರಿಯನ್ನು ಸೇರಿಸಿದಾಗ ಬರುವ ಸುವರ್ಣವರ್ಣವು ಸಕಲದೇವತಾಪ್ರಿಯವಾದದ್ದು. ರಕ್ತವರ್ಣದಗಂಧವು ಸೂರ್ಯ, ಗಣಪತಿಪೂಜೆಗೆ ವಿಶೇಷ. ಶ್ರೀಗಂಧ ಸಿಗದಿದ್ದಾಗ ಪೂಜೆಯನ್ನು ನಿಲ್ಲಿಸುವ ಅಗತ್ಯವಿಲ್ಲ, ಮಾನಸಿಕವಾಗಿ ಪೃಥ್ವೀತತ್ತ್ವವನ್ನೇ ಸಮರ್ಪಿಸಬಹುದೆಂಬುದು ಜ್ಞಾನಿಗಳ ಆದೇಶ.  

ಸೂಚನೆ: 25/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Saturday, February 22, 2020

ಪೂಜೆಯು ಭಗವಂತನಲ್ಲಿ ಸೇರಿಸುವ ಸೇತುವೆ (Pujeyu bhagavantanalli Serisuva setuve.)

    ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿlekhana@ayvm.in)


ಅಂತರಂಗ-ಬಹಿರಂಗ ಪೂಜೆಗಳೆರಡರಲ್ಲಿಯೂ  ಮನಸ್ಸು ಭಗವಂತ್‌ಸಂಬಂಧವನ್ನು ಹೊಂದಿರಬೇಕೆನ್ನುವುದೇ ಮುಖ್ಯ. ಇದನ್ನು ಸಾಧಿಸಲನುಗುಣವಾಗಿ ಜ್ಞಾನಿಗಳು ಪೂಜಾಸಿದ್ಧತೆಯನ್ನು ರೂಪಿಸಿದ್ದಾರೆ. 'ಪೂಜೆಯು ಜೀವ-ದೇವರನ್ನು ಸೇರಿಸುವ ಸೆತುವೆಯಾಗಬೇಕು' ಎನ್ನುವುದು ಶ್ರೀರಂಗಮಹಾಗುರುಗಳ ಸಂದೇಶ.

ಈ ನೇರದಲ್ಲಿ ನಮ್ಮನ್ನು ಸಿದ್ಧಪಡಿಸಿಕೊಳ್ಳುವ ಕ್ರಮ:- ೧. ಶರೀರಶುದ್ಧಿ: ಸ್ನಾನವೇ ಪೂಜಾಸಿದ್ಧತೆಯ ಮೊದಲಹಂತ.
ಪೂಜೆಯೆ ಉದ್ದೇಶಕ್ಕೆ ಬೇಕಾದ ಮನೋಲಯವನ್ನುಂಟು ಮಾಡುವ ಸ್ಥಿತಿಯೇ 'ಶುದ್ಧಿ'ಯೆನಿಸಿಕೊಳ್ಳುತ್ತದೆ.  ಶರೀರದಲ್ಲಿ ಮಲ-ಮೂತ್ರಗಳ ವೇಗಗಳು ಮನಸ್ಸು ಭಗವಂತನೆಡೆ ಹರಿಯಲು ತಡೆಯೊಡ್ಡುವುದರಿಂದ ಈ ಬಾಧೆಯನ್ನು ನೀಗಿಸಿಯೇ ಸ್ನಾನಮಾಡುವುದು ಒಳಿತು. ಆಹಾರಸೇವನೆಯು ಈ ವೇಗಗಳಿಗೆ ನಮ್ಮನ್ನೆಳೆಯುವುದರಿಂದಲೇ ಪೂಜೆಗೆ ನಿರಾಹಾರರಾಗಿರಬೇಕೆಂಬ ನಿಯಮ. ಆದರೆ ಪ್ರಕೃತಿಸೌಲಭ್ಯವಿಲ್ಲದಿದ್ದರೆ ಲಘುಪದಾರ್ಥವನ್ನು ಸೇವಿಸಿ ಪೂಜಾಯೋಗ್ಯವಾದ  ಸ್ಥಿತಿಯಲ್ಲಿರಬೇಕು.  

೨. ಮನಸ್ಸಿನ ಶುದ್ಧಿ(ಅರಿಷಡ್ವರ್ಗಗಳ ನಿವಾರಣೆ): ಶಾರಿರಿಕವಾದ ವೇಗಗಳು ಮನಸ್ಸಿನ ಸ್ಥಿತಿಯನ್ನು ಕೆಡಿಸುವಂತೆಯೇ ಕಾಮ(ಸಲ್ಲದ ಆಸೆಗಳು), ಕ್ರೋಧ(ಕಾಮವು ಈಡೇರದಿದ್ದಾಗ ಏರ್ಪಡುವ ವೇಗ), ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಮಾನಸಿಕವೇಗಗಳೂ ಮನೋಲಯಕ್ಕೆ ಅಡ್ಡಿಯನ್ನುಂಟುಮಾಡುತ್ತವೆ. ಮನಸ್ಸಿನ ತಂಪನ್ನು ಹಾಳುಮಾಡಿ ಪೂಜೆಗೆ ಸಲ್ಲದ ಉಷ್ಣವನ್ನೇರ್ಪಡಿಸುತ್ತವೆ.
ಆದ್ದರಿಂದಲೇ 'ಪೂಜೆಗೆ ಮುನ್ನ ಒಳ್ಳೆಯ ವಿಷಯಗಳ ಅನುಸಂಧಾನವಾಗಲಿ; ವೇಗಗಳುಂಟಾಗುವ ವಾತಾವರಣಾದಲ್ಲಿ ಪೂಜೆಯನ್ನಿಟ್ಟುಕೊಳ್ಳಬೇಡಿ' ಎಂಬ ಶಾಸ್ತ್ರಾದೇಶ. ಕೋಪದ ಪ್ರಸಂಗಗಳನ್ನುಂಟುಮಾಡುವ ಮಾತುಗಳನ್ನು ತಪ್ಪಿಸಬೇಕು. ದುಷ್ಟವೇಗಗಳಿದ್ದರೆ ಅವುಗಳ ನಿವಾರಣೆಗಾಗಿ ವಿಧಿಸಲ್ಪಟ್ಟಿರುವ ಆಚಮನ ಇತ್ಯಾದಿ ವಿಜ್ಞಾನಪೂರ್ಣವಾದ ಕರ್ಮಗಳನ್ನುಮಾಡಿ, ಅವುಗಳು ನಿವಾರಣೆಯಾಗುವವರೆಗೂ ಕಾದು, ನಂತರ ಪೂಜೆಯನ್ನಾಚರಿಸಬೇಕು. ಪೂಜೆಗಾಗಿ ಉಡುವ ಮಡಿಬಟ್ಟೆಗಳೂ ಮನಸ್ಸಿನ ಸುಸ್ಥಿತಿಗೆ ಪೋಷಕವೆಂಬ ಅಂಶವು ಮಹರ್ಷಿಗಳ ಅನ್ವೇಷಣೆಯಿಂದ ತಿಳಿದುಬಂದಿರುವ ಸತ್ಯ.
ಪೂಜೆಗೆ ಪದಾರ್ಥಗಳನ್ನು ಕೊಳ್ಳುವಾಗ ಅಥವ ಕೊಡುವಾಗ ಅನವಶ್ಯಕ ಲೆಕ್ಕಾಚಾರಮಾಡಿಸುವ ಲೋಭ, ಪೂಜೆಯಲ್ಲಿ ಅನಗತ್ಯವಾದ ಆಡಂಬರವನ್ನು ತೋರಿಸುವ ಮದ, ಜೊತೆಯಲ್ಲಿ ಹುಟ್ಟಬಹುದಾದ ಮಾತ್ಸರ್ಯ - ಈ ಎಲ್ಲವೇಗಗಳೂ ನೀಗಿದಾಗಮಾತ್ರವೇ ಶುದ್ಧಿ.

೩. ಭಾವಶುದ್ಧಿ: ಭಾವಶುದ್ಧಿಯೂ ಸಿದ್ಧತೆಯ ಮುಖ್ಯ ಅಂಗವಾಗಿದೆ. ನೈವೇದ್ಯದವೇಳೆಗೆ ಆ ಪದಾರ್ಥ ತನಗೆ ಇಷ್ಟವಾದದ್ದೆನ್ನುವ ಆಸೆ ತಲೆದೋರುವುದು, ಪಾಕತಯಾರಿಸುವಾಗ ಮನೆಯಲ್ಲಿ ಯಾರಿಗೆ ಯಾವುದು ಇಷ್ಟ ಮುಂತಾದ ಲೆಕ್ಕಾಚಾರಗಳು, ಯೋಚನಾಲಹರಿಗಳು! ಇತ್ಯಾದಿ ಯೋಚನೆಗಳೆಲ್ಲವೂ ಭಾವಶುದ್ಧಿಗೆ ಭಂಗ ತರುವಂತವು. ಅವಶ್ಯವಾಗಿ ತಡೆಯಲೇಬೇಕಾದವುಗಳು.
ಈ ಎಲ್ಲ ವೇಗಗಳನ್ನೂ ನಿವಾರಿಸಿಕೊಂಡು ತಂಪಾದ ವಾತಾವರಣದಲ್ಲಿ, ತಂಪಾದ ಮನಸ್ಸಿನೊಡನೆ, ತಂಪಾದ ಅಮೃತಮಯನಾದ ಭಗವಂತನನ್ನು ಪೂಜಿಸಬೇಕಾಗಿದೆ. ಹೀಗಾದಾಗ ಪೂಜೆಯು ನಮ್ಮನ್ನು ಭಗವಂತನಲ್ಲಿ ಸೇರಿಸುವ ಸೇತುವೆಯಾಗಬಲ್ಲದು.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

ಅವಿವೇಕಿ ರಾಜ ಪ್ರಜಾಪಾಲಕನಾಗಲಾರ ( Aviveki Raja Praja palakanagalara )

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀಮದ್ರಾಮಾಯಣದ ಒಂದು ಘಟನೆ. ಶ್ರೀರಾಮನಿಗೆ ಜೀವರೂಪವಾದ ಪತ್ನಿಯ ವಿಯೋಗ ಉಂಟಾಗಿದೆ. ರಾವಣಾಸುರನು ಸೀತೆಯನ್ನು ಅಪಹರಿಸಿದ್ದಾನೆ. ಸುಗ್ರೀವನ ಸಖ್ಯದಿಂದ ಸೀತಾನ್ವೇಷಣೆಯ ಮಹತ್ಕಾರ್ಯ ಸಾಧ್ಯವಾಗುತ್ತದೆ ಎಂಬುದಾಗಿ ಕಬಂಧನು ತಿಳಿಸಿರುತ್ತಾನೆ. ಇದಕ್ಕಾಗಿ ರಾಮನು ಸುಗ್ರೀವನ ಸಖ್ಯವನ್ನು ಮಾಡಲು ನಿರ್ಧರಿಸಿ ಸುಗ್ರೀವನಿದ್ದಲ್ಲಿಗೆ, ಋಷ್ಯಮೂಕಪರ್ವತಕ್ಕೆ ಬರುತ್ತಾನೆ. ಅಲ್ಲಿನ ಸುಗ್ರೀವ ಮೊದಲಾಗಿ ವಾನರರು- 'ವಾಲಿಯೇ ಈ ವೇಷದಿಂದ ಬಂದಿದ್ದಾನೋ!' ಎಂದು  ಭೀತರಾಗುತ್ತಾರೆ. ಆಗ ವಿವೇಕಿಯಾದ ಹನುಮಂತನು ಸುಗ್ರೀವನಿಗೆ ಹೀಗೆ ಧೈರ್ಯದ ಮಾತನ್ನು ಆಡುತ್ತಾನೆ- "ನ ಹಿ ಅಬುದ್ಧಿಂ ಗತೋ ರಾಜಾ ಸರ್ವಭೂತಾನಿ ಶಾಸ್ತಿ ಹಿ" ಅಂದರೆ ಬುದ್ಧಿ ಇಲ್ಲದ ರಾಜನು ಪ್ರಜೆಗಳನ್ನು ಪಾಲಿಸಲಾರ.

ಯಾವುದು ನಮಗೆ 'ಇದು ಹೀಗೆಯೇ' ಎಂಬ ಅರಿವನ್ನು ಮೂಡಿಸುವುದೋ ಅದಕ್ಕೆ 'ಬುದ್ಧಿ' ಎಂದು ಕರೆಯಲಾಗುತ್ತದೆ. ಒಂದು ವಿಷಯದಲ್ಲಿ ಇಂತಹ ನಿಶ್ಚಯವಾದ ಅರಿವು ಬರಬೇಕಾದರೆ ವಿವೇಕ ಇರಬೇಕಾಗುತ್ತದೆ. ಯಾವುದು ಸರಿ ಯಾವುದು ತಪ್ಪು, ಯಾವುದು ಜೀವನಕ್ಕೆ ಹೊಂದಿಕೊಳ್ಳುವಂತಹದ್ದು ಯಾವುದು ಹೊಂದದಿರುವಂತಹದ್ದು, ಕೆಟ್ಟದ್ದರಲ್ಲಿ ಅಪೇಕ್ಷೆ ಇಲ್ಲದಿರುವಿಕೆ ಒಳ್ಳೆಯದರಲ್ಲಿ ಉಪೇಕ್ಷೆ ಇಲ್ಲದಿರುವಿಕೆ. ಇದನ್ನು 'ವಿವೇಕ' ಎನ್ನುತ್ತಾರೆ. ಈ ವಿವೇಕದಿಂದಲೇ ಬುದ್ಧಿಗೆ ನಿಶ್ಚಯಿಸುವ ಸಾಮರ್ಥ್ಯ ಬರುತ್ತದೆ. ವಿವೇಕವು ಬುದ್ಧಿಯ ವಿಶೇಷಗುಣವಾಗಿದೆ. ವಿವೇಕವೇ ಇಲ್ಲದಿದ್ದಾಗ ಬುದ್ಧಿಗೆ ಅವಿವೇಕವೆಂಬ ಕತ್ತಲು ಆವರಿಸುತ್ತದೆ. ಅವಿವೇಕದಿಂದ ರಾಜನಾದವನು ಪ್ರಜೆಗಳನ್ನು ಪರಿಪಾಲಿಸಲು ಅರ್ಹನಾಗನು.

ರಾಜನಾದವನು ವಿವೇಕದಿಂದ ಕೂಡಿದ್ದರೆ ಪ್ರಜೆಗಳು ನೆಮ್ಮದಿಯಿಂದ ಇರುತ್ತಾರೆ. ಪ್ರಜೆಗಳಿಗೆ ರಾಜನೇ ಆದರ್ಶನಾಗಿರುತ್ತಾನೆ. ಅವನ ಪ್ರತಿಯೊಂದು ನಡೆ-ನುಡಿಗಳೂ ಜನರಿಂದ ಅನುಸರಿಸಲ್ಪಡುತ್ತವೆ. ಅದರಿಂದಲೇ 'ನಾವಿಷ್ಣುಃ ಪೃಥಿವೀಪತಿಃ' ಎಂಬ ಮಾತು ಬಂದಿದೆ. ವಿಷ್ಣು ಅಥವಾ ವಿಷ್ಣುವಿನ ಅಂಶ ಇಲ್ಲದವನು ರಾಜನಾಗಲಾರ. ಪ್ರಬುದ್ಧನಾದ ರಾಜನು ಮಾತ್ರ ರಾಜ್ಯವನ್ನು ಸಮೃದ್ಧವಾಗಿಸಬಲ್ಲ. ಶ್ರೀರಂಗಮಹಾಗುರುಗಳು ರಾಜನ ಬಗ್ಗೆ ಮಾರ್ಮಿಕವಾಗಿ ವಿವರಿಸುತ್ತಿದ್ದರು. "ನಾವಿಷ್ಣುಃ ಪೃಥಿವೀಪತಿಃ – ವಿಷ್ಣು ಎಂಬ ತತ್ತ್ವವು ಹೇಗೆ ವಿಶ್ವವನ್ನು ಆಳುತ್ತಿದೆಯೋ ಅದನ್ನನುಸರಿಸಿ ಅನುಕರಿಸುವವನೇ ಭಾರತೀಯ ಮನಸ್ಸೊಪ್ಪುವಂತಹ ಆದರ್ಶನಾದ ರಾಜನಾಗುವನು. ವಿಷ್ಣುತತ್ತ್ವವನ್ನು ಅನುಸರಿಸುವುದು ಋಷಿಯಲ್ಲದವನಿಗೆ ಸಾಧ್ಯವಾಗದ ವಿಷಯ. ಆದ್ದರಿಂದಲೇ 'ರಾಜರ್ಷಿ' ಶಬ್ದದಿಂದ ಇತಿಹಾಸ ಪುರಾಣಾದಿಗಳು ಅವನನ್ನು ಗುರುತಿಸುತ್ತಿವೆ" ಎಂದು.

ಸೂಚನೆ: 08/02/2020 ರಂದು ಈ ಲೇಖನ ಉದಯವಾಣಿ ಬಹುಮುಖಿ ಅಂಕಣದಲ್ಲಿ ಪ್ರಕಟವಾಗಿದೆ.

ಸ್ವಾಸ್ಥ್ಯದ ಅಂತರಾರ್ಥ (Svasthyada Antarartha)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)



ಸ್ವಾಸ್ಥ್ಯ ಎಂದರೆ ಆರೋಗ್ಯವಾಗಿರುವುದು ಎಂಬುದು ಸಾಮಾನ್ಯವಾದ ಅರ್ಥವಾಗಿರುತ್ತದೆ. ನೀರೋಗಃ ಆರೋಗ್ಯಃ | ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೈಹಿಕ ಹಾಗು ಮಾನಸಿಕವಾಗಿ ರೋಗ ಮುಕ್ತರಾಗಿ ಇರುವವರೇ ಸ್ವಸ್ಥರು. ಖಂಡಿತವಾಗಿಯೂ ಸತ್ಯದ ವಿಚಾರ. ನಮ್ಮ ಭಾರತದ ಋಷಿಮಹರ್ಷಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಶೋಧಿಸಿ ನಿರ್ಣಯಿಸಿದ ವಿಚಾರವೇನೆಂಬುದನನ್ನು ಒಮ್ಮೆ ಅವಲೋಕಿಸೋಣ. ಒಬ್ಬ ಜೀವಿಯು ನಾಲ್ಕು ಅಂಶಗಳಿಂದ ಕೂಡಿದವನಾಗಿರುತ್ತಾನೆ.

ಶರೀರೇಂದ್ರಿಯ ಸತ್ವಾತ್ಮ ಸಂಯೋಗೋಧಾರಿ ಜೀವಿತಂ |
ನಿತ್ಯಗಶ್ಚಾನುಬಂದಾಶ್ಚ ಪರ್ಯಾಯೈರಾಯುರುಚ್ಯತೆ ||

ಶರೀರ, ಇಂದ್ರಿಯ, ಮನಸ್ಸು, ಆತ್ಮ ಎಂಬುದೇ ಈ ನಾಲ್ಕು ಅಂಶಗಳು. ಇವುಗಳ ಸಾಮರ್ಥ್ಯ ಹಾಗೂ ವ್ಯಾಪ್ತತೆಯ ಅರಿವಿಗಾಗಿ ಒಂದು ಚಟುವಟಿಕೆ ಮಾಡೋಣ. ಒಂದು ಕೊಠಡಿಯಲ್ಲಿ ನಾವು ಬಂಧಿಯಾಗಿ ಕುಳಿತಿದ್ದೀವೆ ಎಂದೊಮ್ಮೆ ಭಾವಿಸೋಣ. ಶರೀರವು ತನ್ನ ಸಂಬಂಧಿಯಾದ ಹಾಗು ತನ್ನ ಸಂಪರ್ಕಕ್ಕೆ ಬಂದದ್ದನ್ನು ಮಾತ್ರ ಗ್ರಹಿಸಬಸಬಲ್ಲದು. ಉದಾಹರಣೆಗೆ, ಶೆಖೆ/ಚಳಿ ಅನುಭವ ಗ್ರಹಿಸಬಲ್ಲದು. ಹಸಿವೆ, ಬಾಯಾರಿಕೆ, ನಿದ್ರೆ, ಮಲ ಮೂತ್ರಾದಿ ವೇಗಗಳನ್ನು ಗ್ರಹಿಸಬಲ್ಲದು. ಇಂದ್ರಿಯವು ಅದರ ಮಿತಿಗೆ ಅನುಸಾರ, ಕೊಠಡಿಯ ವ್ಯಾಪ್ತಿಯೊಳಗಿರುವುದನ್ನು ಗ್ರಹಿಸಬಲ್ಲದು. ಮನಸ್ಸು, ಕೊಠಡಿ ವ್ಯಾಪ್ತಿಯ ಮೀರಿ, ಊಹಾ ಪೋಹಾದಿಗಳಿಂದ ತಿಳುವಳಿಕೆಯ ಆಧಾರದ ಮೇಲೆ ಇಂದ್ರಿಯಗಳಿಗಿಂತ ಅಧಿಕವಾಗಿ ಗ್ರಹಿಸಬಲ್ಲದು. ಆತ್ಮವು, ನಿತ್ಯ ಹಾಗು ಏಕತ್ವಗುಣವನ್ನು ಹೊಂದಿರುವಂತಹದ್ದು. ಅದಕ್ಕೆ ಪರಿಮಿತಿ ಇಲ್ಲ. ಈ ಆತ್ಮ ಎಲ್ಲಾ ವ್ಯಾಪ್ತಿ ಗಳನ್ನೂ ಮೀರಿ, ಪರಂ-ಆತ್ಮದ (ಪರಮಾತ್ಮನ/ಜ್ಞಾನದ) ಅನುಭವವನ್ನೇ ಪಡೆಯಬಲ್ಲದ್ದು. ಈ ನಾಲ್ಕರ ಸಮಂಜಸವಾದ ಸಹಕಾರ ಇದ್ದಾಗ ಉಂಟಗುವುದೇ ಸ್ವಾಸ್ಥ್ಯ ಎಂದು ಆಯುರ್ವೇದ ಶಾಸ್ತ್ರದ ಆರೋಗ್ಯ ಸೂತ್ರ.


ಈ ನಾಲ್ಕರಲ್ಲಿ ಒಗ್ಗಟ್ಟು ಏರ್ಪಡಲು ಏನು ಮಾಡಬೇಕು?  ಚರಕರು ಹೇಳುವಂತೆ, ಸದಾ ಸುಖಕರವಾದ ಚಿಂತನೆ ಮಾಡುತ್ತಾ, ಒಳ್ಳೆಯ ಮಾತುಗಳನ್ನಾಡುತ್ತಾ, ಸತ್ವ ವೃದ್ಧಿ ಕ್ರಿಯೆಗಳು, ಶುದ್ಧ ಜ್ಞಾನ, ತಪಸ್ಸು, ನಿರಂತರವಾದ ಯೋಗ ಸಾಧನೆಗಳನ್ನು ಯಾರು ಮಾಡುವರೋ, ಅವರಿಗೆ ರೋಗ ಬರುವುದಿಲ್ಲ. ನಾನು - ನಾನೆಂಬ ಅಹಂಕಾರ ತೊರೆದು 'ಎಲ್ಲರಲ್ಲೂ ಇರುವ ಆತ್ಮ ಆ ಪರಮಾತ್ಮನ ಅಂಶವೇ' ಎಂಬ ಭಾವ ನಮ್ಮದಾಗಬೇಕು. ಧಾತುಪ್ರಸಾದಾತ್ ಮಹಿಮಾನಮೀಶಂ – ಧಾತು ಪ್ರಸನ್ನತೆಯಿಂದ ಮಹಿಮವಂತನಾದ ಈಶನನ್ನು ಕಾಣಬಹುದಂತೆ. ಅದನ್ನೇ ಆಯುರ್ವೇದ ಶಾಸ್ತ್ರವು ಹೇಳುತ್ತಿದೆ. ಶ್ರೀರಂಗ ಮಹಾಗುರುಗಳು ಈ ವಿಚಾರವಾಗಿ ತಿಳಿಪಡಿಸಿದ್ದೇನೆಂದರೆ, ಸ್ವಾ- ಎಂದರೆ ಮೂಲತತ್ವ. ಪರಂಜೋತಿ. ಸ್ಥ- ಎಂದರೆ ಅದರಲ್ಲಿ ನೆಲೆ ನಿಂತವನು. ಆತನೇ ಸ್ವಸ್ಥ! ಎಂಬುದು ಅವರ ಸ್ಪಷ್ಠ ಅಭಿಪ್ರಾಯವಾಗಿತ್ತು. ಆಯುರ್ವೇದ ಶಾಸ್ತ್ರವು ಹೇಳುವ ಸ್ವಾಸ್ಥ್ಯದ ಸೂತ್ರದ ಗೂಡಾರ್ಥವೂ ಇದಾಗಿದೆ. ಸ್ವಾಸ್ಥ್ಯ ಹೊಂದಲು ಶರೀರದ ಎಲ್ಲಾ ಅಂಶಗಳೂ ಸಹಕರಿಸಬೇಕಾಗುತ್ತದೆ.

ಸಮದೋಷ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ |
ಪ್ರಸನ್ನಾತ್ಮೇಂದ್ರಿಯ ಮನಾಃ ಸ್ವಸ್ಥ ಇತ್ಯಭಿದೀಯತೇ ||

ದೋಷ(ವಾತ, ಪಿತ್ತ, ಕಫ) , ಅಗ್ನಿ, ಧಾತು, ಮಲ ಸಾಮ್ಯತೆಯನ್ನು ಹೊಂದಿರುವ ಒಡಲು, ಫೋಕಸ್ ಮಾಡಿರಿಸಿದಂತಹ ಲೆನ್ಸ್ ನಂತೆ. ಪರಂಜೋತಿಯ ಬೆಳಕಿನ ಅನುಭವವನ್ನು ಈ ಶರೀರರದಲ್ಲಿ ಹೊಂದಿದಾಗ ಪರಿಪೂರ್ಣ ಸ್ವಾಸ್ಥ್ಯ ಹೊಂದಬಹುದು.  ಇದರಿಂದ ಪರಮಾತ್ಮಾನುಭವದ  ಹೊಂಗಿರಣಗಳು ಮನಸ್ಸು, ಜ್ಞಾನೇಂದ್ರಿಯ, ಕರ್ಮೇಂದ್ರಿಯ ಹಾಗೂ ದೇಹದ ಕಣಕಣಕ್ಕೂ ತಲುಪುವಂತಾಗುತ್ತದೆ. ಗಾಢ ನಿದ್ರೆಯಿಂದ ದೇಹ, ಇಂದ್ರಿಯ, ಮನಸ್ಸು ಸುಖಿಸುವಂತೆ, ಪರಮಾತ್ಮನ ಅನುಭವವು ದೇಹೇಂದ್ರಿಯ ಮನಸ್ಸುಮಾತ್ರವಲ್ಲದೇ, ಆತ್ಮ ಪ್ರಸನ್ನತೆಯನ್ನೂ ಉಂಟುಮಾಡುವುದೇ ನಿಜವಾದ ಸ್ವಾಸ್ಥ್ಯ. ನಾವೆಲ್ಲರೂ ಆ ರೀತಿಯಾದ ಸ್ವಾಸ್ತ್ಯಪೂರ್ಣವಾದ ಬದುಕನ್ನು ಹೊಂದಲು ಪ್ರಯತ್ನಿಸೋಣ.

ಸೂಚನೆ: 22/02/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Friday, February 21, 2020

ಮಹಾಶಿವರಾತ್ರಿಯ ಆಚರಣೆ ಮತ್ತು ಬಿಲ್ವದ ವೈಶಿಷ್ಟ್ಯ (Mahashivaratriya Acarane Mattu bilvada vaishistya)

ಲೇಖಕರು: ಡಾ|| ಪುನೀತ್ ಕುಮಾರ್. ಪಿ.
ಮಿಂಚಂಚೆ (lekhana@ayvm.in)




ಮಹಾಶಿವರಾತ್ರಿಯನ್ನು ಶಿವನಿಗೆ ಪ್ರಿಯವಾಗಿ ಮಾಡಿಕೊಳ್ಳುವುದಕ್ಕೆ ಎರಡು ವಿಶೇಷ ಸಾಧನಗಳೆಂದರೆ, ಉಪವಾಸ ಮತ್ತು ಜಾಗರಣೆ. ಉಪವಾಸ ಎಂದಾಕ್ಷಣ ನಮಗೆ ನೆನಪಾಗುವುದು ಮಹಾಶಿವರಾತ್ರಿ, ಕೃಷ್ಣಾಷ್ಟಮಿ, ಸಂಕಷ್ಟ ಚತುರ್ಥಿ, ಏಕಾದಶಿ ವ್ರತಗಳು. ಶಿವರಾತ್ರಿ ಸಂದರ್ಭದಲ್ಲಿ ಉಪವಾಸದ ಆಚರಣೆಯು ಶಿವಪೂಜೆಗೆ ಹೆಚ್ಚು ಸಹಕಾರಿಯಾಗಿರುವ ಬಹುಮುಖ್ಯ ಆಚರಣೆ. ಅಂತರಂಗದಲ್ಲಿ ಉಪವಾಸ-ಧ್ಯಾನಗಳಿಂದ, ಬಹಿರಂಗದಲ್ಲಿ ಜಾಗರಣೆ-ಪೂಜೆಗಳಿಂದ ಪರಮಾತ್ಮನನ್ನು ಆರಾಧಿಸಬೇಕು. 'ಉಪವಾಸ' ಎಂದರೆ 'ಭಗವಂತನಿಗೆ ಹತ್ತಿರವಾಗಿ ಇರುವುದು' ಎಂಬ  ಹಿನ್ನೆಲೆಯನ್ನರಿತು ಆಚರಿಸಬೇಕು.

ಉಪವಾಸದ ಬಗೆಗಳಲ್ಲಿ ನಿರ್ಜಲ, ಸಜಲ, ನಿರಾಹಾರ, ಮಿತಾಹಾರ, ಫಲಾಹಾರ ಇತ್ಯಾದಿ ರೂಢಿಯಲ್ಲಿ ಕಾಣಬಹುದು. ಇವುಗಳಲ್ಲಿ ಯಥಾಶಕ್ತಿ ಆಚರಿಸಬೇಕು. ಇದರಿಂದ ದೇಹದ ಜೀರ್ಣಾಂಗಗಳಿಗೆ ಶ್ರಮ ಉಂಟಾಗದೆ ವಿರಮಿಸಲು ಸಹಾಯ ಮಾಡುವುದು. ಜೀರ್ಣಾಗ್ನಿಯನ್ನು ಚುರುಕುಗೊಳಿಸಿ, ಜೀರ್ಣಕ್ರಿಯೆಗಳಿಗೆ ಹೊಸ ತಿರುವು ತರುವುದು. ದೇಹದಲ್ಲಿ ಈಗಾಗಲೆ ಉಂಟಾಗಿರಬಹುದಾದ ಆಮ(Toxins)ವನ್ನು ಕರಗಿಸಿ ದೇಹವನ್ನು ಶುದ್ಧೀಕರಿಸುವುದು. ದೇಹದ ಮಾಂಸ, ಮೇದ(ಕೊಬ್ಬಿನ ಅಂಶ), ಬೊಜ್ಜು ದೋಷಗಳನ್ನು ನಿವಾರಿಸಿ ದೇಹ ದೃಢವಾಗುವುದು. ಶರೀರ ಲಘುವಾಗಿ, ಚಟುವಟಿಕೆಗಳಲ್ಲಿ ಕಾರ್ಯಕ್ಷಮತೆ ಹೆಚ್ಚಾಗುವುದು. ಉಪವಾಸದಿಂದ ಕಫ ಹಾಗು ಪಿತ್ತ ದೋಷಗಳು ನಿಯಂತ್ರಣಕ್ಕೆ ಬಂದು ಆರೋಗ್ಯದಲ್ಲಿ ಚೇತರಿಕೆ ಮೂಡುವುದು. ಇಂತಹ ದೇಹಸ್ಥಿತಿ ಶಿವಧ್ಯಾನಕ್ಕೆ ಅತ್ಯಂತ ಪೂರಕ.

ಮಹಾಶಿವರಾತ್ರಿಯು ಶಿಶಿರ ಋತುವಿನಲ್ಲಿ ಆಚರಿಸಲ್ಪಡುವ ಮಹಾಪರ್ವ. ಈ ಕಾಲಪರ್ವದಲ್ಲಿ ಸಹಜವಾಗಿಯೇ ಹಸಿವು ಕಡಿಮೆಯಾಗಲು, ದೇಹ ಬಲಹೀನವಾಗುವುದು. ವಾತ, ಪಿತ್ತ, ಕಫಗಳು ಕೆರಳುವ ಕಾಲ. ಹಾಗಾಗಿ ದೇಹದ ಜೀರ್ಣಶಕ್ತಿಯನ್ನು ಕಾಪಾಡಲು ಆರೋಗ್ಯದ ದೃಷ್ಟಿಯಿಂದ ಉಪವಾಸದ ಅಗತ್ಯ ಬಹುಮುಖ್ಯ. ಹಗಲಿನ ಸೂರ್ಯನ ಪ್ರಖರ ಬಿಸಿಲಿಗೆ ಹೆಚ್ಚಾಗಿ ಮೈಯೊಡ್ಡದೆ ಹಬ್ಬದ ಆಚರಣೆಯಲ್ಲಿ ತೊಡಗಬೇಕು.

ಉಪವಾಸ ಯಾರಿಗೆ ಉಂಟು, ಯಾರಿಗೆ ಇಲ್ಲ?
ಸ್ಥೂಲಕಾಯ, ಆಮದೋಷ ಇರುವವರು, ಜ್ವರದಿಂದ ಬಳಲುತ್ತಿರುವವರು, ಚರ್ಮರೋಗ ಪೀಡಿತರು, ಸರ್ಪಸುತ್ತು, ಕುರ, ತಲೆನೋವು, ದೃಷ್ಟಿದೋಷ, ಕೆಮ್ಮು-ದಮ್ಮು ರೋಗಿಗಳು ಉಪವಾಸವನ್ನು ಯಥಾಶಕ್ತಿ ಆಚರಿಸಬೇಕು. ಆರೋಗ್ಯವಂತರೂ ಉಪವಾಸವನ್ನು ಆಚರಿಸಬೇಕು. ಮಕ್ಕಳು, ವೃದ್ಧರು, ರೋಗಿಗಳು, ವಾತಪ್ರಕೃತಿ ದೇಹದವರು, ಜೀರ್ಣಾಂಗದ ಖಾಯಿಲೆ ಪೀಡಿತರು, ಮಧುಮೇಹಿಗಳು, ಬಲಹೀನರು, ಆಯಾಸ, ನೀರಡಿಕೆಯಿಂದ ಬಳಲುತ್ತಿರುವವರು ಉಪವಾಸವನ್ನು ಮಿತವಾಗಿ ಆಚರಿಸಿಕೊಳ್ಳಬೇಕು.
ಉಪವಾಸವನ್ನು ಆಚರಿಸಿದ ನಂತರದಲ್ಲಿ ಇಂದ್ರಿಯಶುದ್ದಿಯಾಗಿ, ದೇಹದ ದೋಷ ಹಾಗು ಮಲ ನಿವಾರಣೆಯಾಗವುದು. ಶರೀರ ಹಗುರವಾಗುವುದು. ಹಸಿವು, ನೀರಡಿಕೆ ಸಹಜವಾಗಿ ಮರಳುತ್ತವೆ. ಜಾಢ್ಯ ನಿವಾರಣೆಯಾಗಿ, ಉತ್ಸಾಹ ಹೆಚ್ಚಾಗುವುದು.

ರಾತ್ರಿಜಾಗರಣೆಯನ್ನು ಶಿವರಾತ್ರಿಯ ಕಾಲಘಟ್ಟದಲ್ಲಿ ಆಚರಿಸಿಕೊಂಡರೆ, ದೇಹದಲ್ಲಿ ಉಂಟಾಗಿರಬಹುದಾದ ಕಫದೋಷ ನಿವಾರಣೆಯಾಗುವುದಲ್ಲದೆ, ಪಿತ್ತವನ್ನು ಸರಿಹೊಂದಿಸಿ ಜೀರ್ಣಕ್ರಿಯೆಗಳನ್ನು ದೇಹ ಸರಾಗವಾಗಿ ನೆಡೆಸಿಕೊಳ್ಳುವುದು. ಶಿವರಾತ್ರಿಯ ಜಾಗರಣೆಯನ್ನು ಯಾವುದೊ ಅನಗತ್ಯ ವಿಷಯಗಳಿಗೆ ಸಮಯವನ್ನು ಪೋಲು ಮಾಡದೆ, ಭಗವಂತನ ಪೂಜೆ, ಧ್ಯಾನಗಳಿಗೆ ಮೀಸಲಾಗಿಟ್ಟು ಇಂದ್ರಿಯ ಜಯ ಸಾಧಿಸಿ ಶಿವನಲ್ಲಿ ನೆಲೆ ಹೊಂದಬೇಕು. ಗೀತಾಚಾರ್ಯನು ಸಾರುವ ಹಾಗೆ 'ಯಾ ನಿಶಾ ಸರ್ವಭೂತೇಷು ತಸ್ಯಾಂ ಜಾಗರ್ತಿ ಸಂಯಮೀ', ಜ್ಞಾನಿಯಾದವನು ಬೇರೆಲ್ಲಾ ಭೂತಗಳಿಗೆ ಕತ್ತಲಾದಾಗಲೂ ಬೆಳಕನ್ನು ಸದಾ ಕಾಣುವವನಾಗಿರುತ್ತಾನೆ. ಇಂತಹಾ ಪುಣ್ಯಕಾಲದಲ್ಲಿ ತಿಳಿದೋ ತಿಳಿಯದೆಯೋ ರಾತ್ರಿಜಾಗರಣೆ ಉಪವಾಸಗಳನ್ನು ಆಚರಿಸಿದರೆ, ಚಿತ್ತಶುದ್ಧಿಯಾಗುತ್ತದೆ ಎಂದು ಜ್ಞಾನಿಗಳು  ಅಭಿಪ್ರಾಯ ಪಟ್ಟಿದ್ದಾರೆ. ಶಿವಪುರಾಣದ ಬೇಡರ ಕಣ್ಣಪ್ಪನ ಕಥೆಯಂತೆ, ತಿಳಿಯದೇ ಶಿವಪೂಜೆ ನೆರವೇರಿಸಿ ಅರಿವಿಲ್ಲದೆಯೇ ಅವನಿಗೆ ಜ್ಞಾನೋದಯವಾಗುವಂತೆ.




ಬಿಲ್ವದ ವೈಶಿಷ್ಟ್ಯ
ಶಿವರಾತ್ರಿಯ ಪೂಜೆ ಎಂದಾಕ್ಷಣ ನಮ್ಮ ಮನ್ನಸ್ಸಿಗೆ ನೆನಪಾಗುವುದೇ ಬಿಲ್ವ ಪತ್ರೆಗಳು. ಬಿಲ್ವಪತ್ರೆ, ಎಕ್ಕ, ಗಣಿಗಿಲೆ, ಧತ್ತೂರೀ, ಬೃಹತೀ, ಜಪಾಕುಸುಮ(ಕೆಂಪು ದಾಸವಾಳ) ಶಿವಪೂಜೆಯಲ್ಲಿ ಬಳಸಲಾಗುವ ವಿಶೇಷ ಪತ್ರಪುಷ್ಪಗಳು. ಇವುಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದುದು ಬಿಲ್ವಪತ್ರ. 'ಅದರ ದರ್ಶನ, ಸ್ಪರ್ಶ, ಸಮರ್ಪಣೆಗಳು ಶಿವಸ್ಥಾನಕ್ಕೆ ನಮ್ಮನ್ನು ಏರಿಸುವ ಶಕ್ತಿಯಿರುವ ಪವಾಡ ಮೂಲಿಕೆ' ಎಂದು ಶ್ರೀರಂಗಮಹಾಗುರುಗಳು ಅಪ್ಪಣೆಕೊಡಿಸಿದ್ದರು.

ಬಿಲ್ವದ ಮರವು ದೃಡವಾಗಿ, ಎತ್ತರಕ್ಕೆ ಬೆಳೆಯುವ, ಶೀತೋಷ್ಣ ವಲಯದಲ್ಲಿ ನೋಡಸಿಗುವ ಮೈಯಲ್ಲಾ ಮುಳ್ಳುಗಳನ್ನು ಹೊತ್ತಿರುವ ಕಂದುಬಣ್ಣದ ಮರ. ಸುಮಾರು 20-30 ಅಡಿ ಎತ್ತರಕ್ಕೆ ಬೆಳೆದು, ಬೇಸಿಗೆಯಕಾಲಕ್ಕೆ ಹಣ್ಣುಗಳು ಪಕ್ವವಾಗುವುದು. ಇದರ ಕಾಂಡ ಸುಮಾರು 1.5 – 2 ಅಡಿ ಅಗಲವಾಗಿದ್ದು ಕಂದುಬಣ್ಣದ ತೊಗಟೆ ಇರುತ್ತದೆ. ಕೊಂಬೆಗಳು  ಮುಳ್ಳನ್ನು ಹೊತ್ತು ಎಲ್ಲಾ ದಿಕ್ಕುಗಳಿಗೆ ಚಾಚಿಕೊಂಡಂತಿರುತ್ತವೆ. ಎಲೆಗಳು  ಅಚ್ಚಹಸಿರು, ಮೂರು-ಮೂರು ಎಲೆಗಳು ಗುಂಪಾಗಿ(Trifoliate) ಸುಂದರವಾಗಿರುತ್ತವೆ. ಈ ಮೂರು ದಳಗಳು ಬ್ರಹ್ಮ, ವಿಷ್ಣು, ರುದ್ರ ದೇವರ ಸಂಕೇತ. ಸಾಧನೆಯಲ್ಲಿ ತ್ರಿಮೂರ್ತಿಗಳ ದರ್ಶನ, ಅನುಭವಗಳಿಗೆ ಸಹಕಾರಿ. ಮುಕ್ಕಣ್ಣನ ಮೂರು ಕಣ್ಣುಗಳಂತೆ. ಸೃಷ್ಟಿ ಸ್ಥಿತಿ ಲಯದ ಸಂಕೇತ.  ಸತ್ತ್ವ ರಜಸ್ ತಮೋ ಗುಣಗಳ ಪ್ರತೀಕವೂ ಆಗಿದೆ. ಬಿಲ್ವದ ಮರಗಳು ಸಾಮಾನ್ಯವಾಗಿ ಮಧ್ಯ ಹಾಗು ದಕ್ಷಿಣ ಭಾರತ, ಬರ್ಮಾ ದೇಶಗಳಲ್ಲಿ ನೋಡಸಿಗುತ್ತವೆ. ಇದರ ಎಲೆ, ತೊಗಟೆ, ಹಣ್ಣುಗಳು ಕಹಿ ಹಾಗು ಒಗಚು ರಸ ಹೊಂದಿದ್ದು, ಉಷ್ಣದ ವೀರ್ಯಶಕ್ತಿ ಇದರಲ್ಲಡಗಿದೆ. ಇದು ಕಫ ಮತ್ತು ವಾತ ದೋಷಗಳನ್ನು ನಿವಾರಿಸುತ್ತದ್ದೆ. ಅರ್ಧಪಕ್ವಬಿಲ್ವ ಆಮಶಂಕೆ ನಿವಾರಿಸುವುದು, ತೊಗಟೆ ಜ್ವರಕ್ಕೆ ಪಾಶುಪತಾಸ್ತ್ರ. ಎಲೆಯ ರಸ ಮಧುಮೇಹ ರೋಗ ನಿವಾರಕ.


ಬಿಲ್ವದ ಹಣ್ಣಿನಿಂದ ತಯಾರಿಸಿದ ಎಣ್ಣೆಯು ಕಿವಿನೋವು, ಕಿವಿಯ ಸೋಂಕು, ಕರ್ಣನಾದ(Tinnitus), ಕಿವುಡುತನಕ್ಕೆ ಪರಿಣಾಮಕಾರಿಯಾದ ಔಷಧವಾಗಿದೆ. ಇವೆಲ್ಲವೂ ಆಧಿಭೌತಿಕ ಪ್ರಯೋಜನಗಳಾದರೆ ಆಧ್ಯಾತ್ಮಿಕವಾಗಿ ಶಿವನ ಪೂಜೆಗೆ ಅತ್ಯಂತ ಸಹಕಾರಿಯಾಗಿದೆ.

ಹೀಗೆ  ಸದಾಶಿವನ ಪೂಜೆಯಲ್ಲಿ ವಿಶೇಷವಾಗಿರುವ ಬಿಲ್ವ, ಆರೋಗ್ಯದ ದೃಷ್ಟಿಯಲ್ಲಿ ಕೂಡ ದೇಹ-ಮನಸ್ಸುಗಳ ದೋಷ ನಿವಾರಣೆ ಮಾಡಿ, ಜೀವದ ಧ್ಯೇಯವಾದ ಶಿವನ ಸಾಯುಜ್ಯ ಹೊಂದಲು ತಾರಕವಾಗಿದೆ. ಹೀಗೆ ಶಿವರಾತ್ರಿಯ ದಿನ ಉಪವಾಸ, ಜಾಗರಣೆ, ಶಿವನ ಧ್ಯಾನ, ಪೂಜೆ, ಜಪ, ಕೀರ್ತನೆ, ದಾನ, ಹೋಮಗಳ ಆಚರಣೆಯಿಂದ ದೇಹದ ಒಳಗೂ ಹಾಗು ಹೊರಗೂ ಇರುವ ದುಷ್ಟ ಶಕ್ತಿಗಳ  ಸಂಹಾರ ಮಾಡಿಕೊಂಡು ಪರಮ ಕರುಣಾಳುವಾದ ರುದ್ರದೇವನ ಕೃಪೆಗೆ ಪಾತ್ರರಾಗೋಣ.

Thursday, February 20, 2020

ಶಿವರಾತ್ರಿ ಮಹೋತ್ಸವ (Shivaratri Mahotsava)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿlekhana@ayvm.in)

 
  
ಮೊದಲ ಮಾತು
ಭಾರತೀಯರ ಜೀವನಪದ್ಧತಿ ಅತಿ ವಿಶಿಷ್ಟವಾದದ್ದು. ಅದಕ್ಕೆ ಕಾರಣವಿಷ್ಟೆ- ಇವರ ಬದುಕು ಒಂದು ದಿನ ಹುಟ್ಟುವುದು ಇನ್ನೊಂದು ದಿನ ಸಾಯುವುದು ಮತ್ತು ಈ ಹುಟ್ಟುಸಾವುಗಳ ಮಧ್ಯೆ ಹಾಗೂಹೀಗೋ ಒಂದಷ್ಟು ದಿನ ಜೀವನವನ್ನು ಸವೆಸುವುದು ಇಷ್ಟೇ ಅಲ್ಲ. ಈ ಬದುಕಿಗೆ ಯಾವ ಅರ್ಥವೂ ಇಲ್ಲ. ಪಶುಗಳೂ ಇಂತಹ ಬದುಕನ್ನು ನಡೆಸುತ್ತವೆ. ಇದಕ್ಕಿಂತಲೂ ಭಿನ್ನವೂ ಇದರ ಜೊತೆಗೂಡಿದ್ದೂ ಆದ ಯಾವ ಅಂತರಂಗದ ಬದುಕುಂಟೋ ಅದೇ ನಿಜವಾದದ್ದು ಎಂದು ಸಾರಿದ ಭಾರತೀಯ ಮಹರ್ಷಿಗಳು ಇಂದ್ರಿಯ ತೃಪ್ತಿಯನ್ನು ಬಿಟ್ಟಿಲ್ಲ. ಆತ್ಮತೃಪ್ತಿಯನ್ನು ಮರೆತಿಲ್ಲ. ಇವೆರಡರ ಸಮನ್ವಯದ ಬಾಳಾಟವನ್ನೇ 'ಜೀವನ' ಎಂದರು. ಈ ಮಾನವಶರೀರವು ಇಹ ಮತ್ತು ಪರಗಳನ್ನು ಅತ್ಯಂತ ವ್ಯವಸ್ಥಿತವಾಗಿ ಅನುಭವಿಸಲೆಂದೇ ಭಗವಂತ ನಮಗೆ ಕೊಟ್ಟ ಅನುಗ್ರಹಯಂತ್ರ.  ಅನೇಕ ಜನ್ಮಗಳ ಪುಣ್ಯದಿಂದ ಮಾತ್ರ ಮಾನವಜನ್ಮವನ್ನು ಪಡೆಯಲು ಸಾಧ್ಯ. ಆದ್ದರಿಂದ ಈ ಜನ್ಮದಲ್ಲೇ ಈ ಜೀವಕ್ಕೆ ಉತ್ತಮ ಸಂಸ್ಕಾರವನ್ನು ಕೊಡುವುದರ ಮೂಲಕ ಜೀವವು ದೇವನಲ್ಲಿ ಒಂದಾಗಬೇಕು. ಅದಕ್ಕೆಂದೇ ಭಗವಂತ ನಮಗಾಗಿ ಕೊಟ್ಟ ಉತ್ತಮಕಾಲಘಟ್ಟವನ್ನೇ "ಹಬ್ಬ" "ಪರ್ವ" "ಮಹೋತ್ಸವ" ಇತ್ಯಾದಿ ಪದಗಳಿಂದ ಕರೆಯಲಾಗಿದೆ. ಇಂತಹ ವಿಶೇಷಕಾಲಘಟ್ಟಗಳಲ್ಲಿ 'ಶಿವರಾತ್ರಿ' ಎಂಬ ವಿಶಿಷ್ಟ ಪರ್ವವೂ ಒಂದಾಗಿದೆ.

ಇಂದಿನ ವಿಡಂಬನೆ
ಇಂದು ಈ ಶಿವರಾತ್ರಿಮಹೋತ್ಸವವನ್ನು ಭಯಂಕರವಾಗಿ ಆಚರಿಸಲಾಗುತ್ತಿದೆ. ಅದರ ಒಂದು ಝಲಕ್ಕನ್ನು ನೋಡುವುದಾದರೆ- ಇದು ರಾತ್ರಿ ಆಚರಿಸುವ ಹಬ್ಬ. ರಾತ್ರಿಯೆಲ್ಲಾ ಎಚ್ಚರವಾಗಿರುವ ಕಾಲ. ಅದಕ್ಕಾಗಿ ಜಾಗರಣೆ ಮಾಡಬೇಕು ಎಂಬಿಷ್ಟೇ ಅಂಶದಿಂದ ಜಾಗರಣೆಯನ್ನು ವಿದ್ಯುದ್ದೀಪದಿಂದ ರಾತ್ರಿಯನ್ನೇ ಹಗಲಾಗಿಸಿಕೊಂಡು ಬಗೆಬಗೆಯ ಆಟದಲ್ಲಿ ಕೂಟದಲ್ಲಿ ಕಾಲವನ್ನು ಕಳೆಯಲಾಗುತ್ತಿದೆ. ಜೂಜು ಮೋಜು ಮಸ್ತಿಯಲ್ಲೇ ಕಾಲಕಳೆಯುವ ಜನರು ಒಂದು ಕಡೆಯಾದರೆ ಉಪವಾಸ ಜಾಗರಣೆ ಇವೆಲ್ಲ ಮೂಢನಂಬಿಕೆಯ ಆಚರಣೆಗಳು ಎಂದು ಹೇಳುತ್ತಾ ಕಂಠಪರ್ಯಂತ ತಿಂದು ಗಡದ್ದಾಗಿ ನಿದ್ದೆ ಮಾಡಿ  ಸುಖವಾಗಿ ರಾತ್ರಿ ಕಳೆಯಿತು! ಎಂದು ಹೇಳುವವರು ಇನ್ನೊಂದು ಕಡೆ. ಅಷ್ಟು ಇಷ್ಟು ಭಗವಂತ, ಧರ್ಮ, ಎಂದೆಲ್ಲ ನಂಬಿದವರು ಸಾಧ್ಯವಾದಷ್ಟು ಉಪವಾಸದ ಹೆಸರಿನಲ್ಲಿ ಅಲ್ಪಸ್ವಲ್ಪ ತಿಂದು ತಿಳಿದಷ್ಟು ಪೂಜೆ ಮಾಡಿ ಈ ರಾತ್ರಿಯನ್ನು ಹಾಗೂಹೀಗೂ ಕಳೆದು ಶಿವರಾತ್ರಿಯನ್ನು ಆಚರಿಸಿದೆ ಎಂದು ಧನ್ಯಭಾವವನ್ನು ಅನುಭವಿಸುವವರು ಇನ್ನು ಹಲವರು. 'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್' ಅಷ್ಟೊ ಇಷ್ಟೊ ತಿಳಿದೋ ತಿಳಿಯದೋ ಧರ್ಮವನ್ನು ಆಚರಿಸುವುದು ಉತ್ತಮಪಕ್ಷವೇ. ಹಾಗಾದರೆ ಶಿವರಾತ್ರಿ ಎಂದರೇನು? ಈ ಆಚರಣೆಯಲ್ಲಿ ಮಹರ್ಷಿಗಳ ಕೊಡುಗೆ ಎನು? ಇದನ್ನು ಹೇಗೆ ಆಚರಿಸಬೇಕು? ಎಂಬಿತ್ಯಾದಿ ವಿಷಯಗಳನ್ನು ಶ್ರೀರಂಗಮಹಾಗುರುವಿನ ನೋಟದ ಜೊತೆ ತಿಳಿಯುವ ಪ್ರಯತ್ನ ಮಾಡೋಣ.

ಪುರಾಣಕಥಾ
ಒಮ್ಮೆ ಬ್ರಹ್ಮದೇವನು ವೈಕುಂಠಕ್ಕೆ ತೆರಳುತ್ತಾನೆ. ಆಗ ಶ್ರೀವಿಷ್ಣುವು ಶ್ರೀದೇವೀ ಭೂದೇವಿಯರಿಂದ ಸೇವೆಪಡೆಯುತ್ತಿದ್ದನು. ಬ್ರಹ್ಮದೇವನ ಆಗಮನವನ್ನು ಅಲಕ್ಷಿಸಿದ್ದನು. ಇದಕ್ಕೆ ಕೋಪಕೊಂಡ ಬ್ರಹ್ಮದೇವನು – ಅಯ್ಯಾ ! ಮಹಾವಿಷ್ಣುವೇ! ಈ ಸೃಷ್ಟಿಕರ್ತಾ ಬ್ರಹ್ಮನೇ ಬಂದರೂ ತಿರಸ್ಕಾರವೇ? ಎದ್ದೇಳು ! ನಾನು ನಿನ್ನ ಪಿತಾಮಹ ಬಂದಿದ್ದೇನೆ " ಎಂದ. ಅತ್ತ ಮಹಾವಿಷ್ಣುವು ತನ್ನ ಶಯನದಿಂದಲೇ –'ನಿನಗೆ ಮಂಗಳವಾಗಲಿ ! ನೀನೂ ಬಂದು ಈ ಆಸನದಲ್ಲಿ ಕುಳಿತುಕೊ" ಎಂದನು. ಆ ಕ್ಷಣದಲ್ಲಿ ಬ್ರಹನು ಇನ್ನಷ್ಟು ಕೋಪದಿಂದ- " ನಿನ್ನ ರಕ್ಷಕ ನಾನು. ಈ ಸೃಷ್ಟಿಗೇ ಕಾರಣ . ಇಷ್ಟಿದ್ದೂ ನನ್ನನ್ನು ಅಪಮಾನಿಸಿರುವೆಯಲ್ಲ " ಎಂದನು. ಆಗ ಮಹಾವಿಷ್ಣುವು " ನನ್ನ ನಾಭಿಕಮಲದಲ್ಲಿ ಹುಟ್ಟಿರುವುದರಿಂದ ನೀನು ನನ್ನ ಮಗ" ಎಂದನು. ಹೀಗೆ ನಾನು ಸೃಷ್ಟಿಕರ್ತಾ ಎಂದು ಬ್ರಹ್ಮನೂ, ನಾನು  ನಿನ್ನನ್ನೇ ಸೃಷ್ಟಿಸಿದ ತಂದೆ ಎಂದು ವಿಷ್ಣುವೂ ಹೀಗೆ ಇಬ್ಬರ ಮಧ್ಯೆ ವಿವಾದ ಆರಂಭವಾಯಿತು. ಬ್ರಹ್ಮನು ಪಾಶುಪತವನ್ನೂ ವಿಷ್ಣುವು ಮಾಹೇಶ್ವರಾಸ್ತ್ರವನ್ನೂ ಪ್ರಯೋಗಿಸಲು ಮುಂದಾದರು. ಇದರಿಂದ ದೇವಗಣ ಭಯಗ್ರಸ್ತವಾಯಿತು. ಹೆದರಿ ಕೈಲಾಸದಲ್ಲಿರುವ ಶಿವನ ಬಳಿ ಓಡಿದರು. ಈ ಮೊದಲೇ ವಿಷಯವನ್ನು ತಿಳಿದ ಶಿವನು "ನಾನು ಈ ವಿವಾದವನ್ನು ಪರಿಹರಿಸುವೆ"- ಶಿವಲಿಂಗತಯೋದ್ಭೂತಃ ಕೋಟಿಸೂರ್ಯಸಮಪ್ರಭಃ- ಎಂದು ಶಿವನು ತನ್ನ ಜ್ಯೋತಿರ್ಮಯರೂಪವನ್ನು ಪ್ರಕಟಪಡಿಸಿದನು. ಆಗ ಈ ಎರಡೂ ಅಸ್ತ್ರಗಳೂ ಲಿಂಗದಲ್ಲಿ ಲೀನವಾದವು. ಈ ಅವತಾರದ ದಿನವನ್ನೇ 'ಮಹಾಶಿವರಾತ್ರಿ' ಎಂದು ಕರೆಯಲಾಗಿದೆ. (ಈಶಾನಸಂಹಿತಾ) ಇದೊಂದು ಕೇವಲ ಕಥೆಯಲ್ಲ. ತಾತ್ತ್ವಿಕವಾದ ಹಿನ್ನೆಲೆಯೂ ಉಂಟು. ಅದನ್ನು ಮುಂದೆ ನೋಡೋಣ.

ಮಹಾಕಾಲನಿಗೆ ಯಾವುದು ಕಾಲ ?
ಮಹಾಕಾಲನಾದ ಶಿವನ ಆರಾಧನೆಗೆ ವಿಶೇಷವಾದ ಕಾಲ ಕೃಷ್ಣಪಕ್ಷದ ಚತುರ್ದಶೀ. ಪ್ರತಿಮಾಸದಲ್ಲೂ ಕೃಷ್ಣಪಕ್ಷದಲ್ಲಿ ಬರುವ ಚತುರ್ದಶಿಗೂ ಶಿವರಾತ್ರಿ ಎಂದೇ ಹೆಸರು. ಆದರೆ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಗೆ 'ಮಹಾಶಿವರಾತ್ರಿ' ಎಂದು ಕರೆಯಲಾಗುತ್ತದೆ. ಪ್ರತಿಯೊಂದು ತಿಥಿಯೂ ಒಂದೊಂದು ದೇವತೆಯ ಅಧಿಷ್ಠಾನವಾಗಿರುತ್ತದೆ. ಚತುರ್ಥಿಗೆ ಗಣೇಶ ಅಧಿಷ್ಠಾನ ದೇವತೆಯಾದಂತೆ ಚತುರ್ದಶಿಗೆ ಶಿವನು ಅಧಿಷ್ಠಾನ ದೇವನಾಗಿರುತ್ತಾನೆ. ಅಂದರೆ ಆಯಾ ತಿಥಿಯು ಆಯಾ ದೇವತೆಯ ಉಪಾಸನೆಗೆ ಪ್ರಶಸ್ತವಾದ ಕಾಲ ಎಂಬುದಾಗಿ ನಮ್ಮ ಪರಂಪರೆ ಸಾರಿದೆ. ಇದರಲ್ಲೂ ರಾತ್ರಿಯು ಶಿವನ ಉಪಾಸನೆಗೆ ಅತ್ಯಂತ ಶ್ರೇಷ್ಠವಾಗಿದೆ. ಶಿವನಿಗೂ ರಾತ್ರಿಗೂ ಸಂಬಂಧವಿದೆ. ಸತ್ತ್ವ-ರಜಸ್ಸು-ತಮಸ್ಸು ಎಂಬ ತ್ರಿಗುಣಗಳಿಗೆ ತ್ರಿಮೂರ್ತಿಗಳಲ್ಲಿ ಕ್ರಮವಾಗಿ ವಿಷ್ಣು-ಬ್ರಹ್ಮ-ಮಹೇಶ್ವರರು ಅಧಿಪತಿಯಾಗಿರುತ್ತಾರೆ. ಕಾಲದಲ್ಲೂ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಹೀಗೆ ಒಂದೊಂದು ಕಾಲಕ್ಕೂ ಒಂದೊಂದು ದೇವತೆಯ ಪ್ರಾಧಾನ್ಯವಿರುತ್ತದೆ. ರಾತ್ರಿಯಲ್ಲಿ ತಮಸ್ಸಿನ ಆಧಿಕ್ಯವಿರುವುದರಿಂದಗೆ ಶಿವನಿಗೆ ಪ್ರಾಧಾನ್ಯ.. ಶಿವನನ್ನು ಸಂಹಾರಕರ್ತಾ ಎಂದು ಕರೆಯಲಾಗುತ್ತದೆ. ಸ್ವಾಭಾವಿಕವಾಗಿ ರಾತ್ರಿಯು ಸಂಹಾರಕಾಲದ ಪ್ರತಿನಿಧಿ. ಇಂದ್ರಿಯಗಳನ್ನು ಸೆಳೆದುಕೊಳ್ಳುವ ಕಾಲ. ಜೀವಿಯು ಕರ್ಮಚೇಷ್ಟೆಗಳನ್ನೆಲ್ಲಾ ಬಿಟ್ಟು ಚೈತನ್ಯವನ್ನು ಉಪಸಂಹರಿಸಿಕೊಂಡು ನಿದ್ದೆಗೆ ಜಾರುವ ಕಾಲವಿದು. "ಯಸ್ಯಾಂ ಜಾಗೃತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ"(ಗೀತಾ..೬೯) ಎಂಬಂತೆ ಸಾಮಾನ್ಯ ಜೀವಿಯು ಜಾಡ್ಯನಿದ್ದೆಯಲ್ಲಿದ್ದರೆ ಮುನಿಯಾದವನು ಆಜಾಡ್ಯನಿದ್ರೆ –ಸಮಾಧಿಯಲ್ಲಿ ಮುಳುಗಿರುತ್ತಾನೆ. ಸಾಧಕನಿಗಿದು ಸಾಧನೆಗೆ ಪರ್ವಕಾಲವಾಗಿದೆ.

ಮನಸಸ್ಪತಿಯ ಜಾಗೃತವಾಗುವ ಪರ್ವ
ಶುಕ್ಲಪಕ್ಷದಲ್ಲಿ ಚಂದ್ರನು ವೃದ್ಧಿಹೊಂದುತ್ತಾ ಕೃಷ್ಣಪಕ್ಷದಲ್ಲಿ ಕ್ಷೀಣಿಸುತ್ತಾ ಹೋಗುತ್ತಾನೆ. ಚಂದ್ರನ ಪ್ರಭಾವ ಇಡೀ ಬ್ರಹ್ಮಾಂಡದ ಮೇಲೆ ಬೀರುತ್ತದೆ. ಅಲ್ಲದೇ ಚಂದ್ರನನ್ನು ಮನಸ್ಸಿಗೆ ಅಧಿಪತಿ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ. ಹಾಗಾಗಿ ಚಂದ್ರನ ವೃದ್ಧಿಕ್ಷಯಗಳು ನಮ್ಮ ಮನಸ್ಸಿನ ಮೇಲೂ ಪ್ರಭಾವವನ್ನು ಬೀರದಿರದು. ಈ ಕೃಷ್ಣಪಕ್ಷದ ರಾತ್ರಿಯು ವಿಶೇಷವಾದ ತಮಸ್ಸಿನ ಆವರಣವಾಗಿರುವುದರಿಂದ ಸಾಮಾನ್ಯ ಜೀವಿಯು ಜಾಡ್ಯನಿದ್ದೆಗೆ ಜಾರುವುದು ಸಹಜ. ಮತ್ತು ಈ ಗಾಢವಾದ ತಮಸ್ಸಿನ ಕಾಲವೇ ರಾಕ್ಷಸೀಶಕ್ತಿಗಳು ಪ್ರಬುದ್ಧರಾಗುವ ಸನ್ನಿವೇಶವಿರುತ್ತದೆ. ನೈತಿಕ ಸಾಮಾಜಿಕ ಅಪರಾಧಗಳು ಘಟಿಸುವ ಕಾಲವೂ ಇದೇ ಆಗಿದೆ. ಇದೇ ಕಾಲವು ತಮಸ್ಸಿನ ಅಧಿಪತಿಗೆ ಪ್ರಿಯವಾದದ್ದು. ಮಂದಮತಿಗಳು ಈ ಕಾಲವನ್ನು ನಿದ್ದೆಯಲ್ಲಿ ಕಳೆಯುತ್ತಾರೆ. ಪ್ರಾಜ್ಞರಾದವರು ಈ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಅವರಿಗಿದು ಸಂಧ್ಯಾಕಾಲ. ಮಧ್ಯರಾತ್ರಿಯನ್ನೂ ಸಂಧ್ಯಾಕಾಲಗಳಲ್ಲಿ ಒಂದೆಂದೂ ಇದು ಸಾಧನೆಗೆ ಅತ್ಯಂತ ಪ್ರಶಸ್ತ ಎಂದು ತೀರ್ಮಾನಿಸಲಾಗಿದೆ.  "ನಿಶಿ ಭ್ರಮಂತಿ ಭೂತಾನಿ ಶಕ್ತಯಃ ಶೂಲಭೃದ್ಯತಃ" – ಶಿವ ಮತ್ತು ಅವನ ಅನುಚರರು ಸಂಚರಿಸುವ ಕಾಲವೂ ಇದೇ ಆಗಿದೆ. " ಇಲ್ಲಿ ಶಿವನ ಸಹಚಾರಿಗಳಾಗಿ ಹೇಳಲ್ಪಟ್ಟಿರುವ ಭೂತಗಳು ಭಯ ಅಥವಾ ಬೀಭತ್ಸಗಳಿಗೆ ಕಾರಣರಾಗಿರುವ ಜೀವಿಗಳಲ್ಲ. ಜ್ಞಾನಿ ಭಕ್ತರಾದ ಪರಿವಾರಗಳು. ಆರಾಧಿಸುವವರಿಗೆ ಇಷ್ಟಾರ್ಥವನ್ನು ಅನುಗ್ರಹಿಸುವ ಶಕ್ತಿ ಇವುಗಳಿಗಿದೆ. ಅವು ಸಂಹಾರಕಾರ್ಯದಲ್ಲೂ ಶಿವನಿಗೆ ಸಹಾಯ ಮಾಡುತ್ತವೆ" ಎಂದು ಶ್ರೀರಂಗಮಹಾಗುರುಗಳು ವ್ಯಾಖ್ಯಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚತುರ್ದಶೀ ನಿರ್ಣಯ
"ಮಾಘಮಾಸಸ್ಯ ಕೃಷ್ಣಾಯಾಂ ಚತುರ್ದಶ್ಯಾಂ ಸುರೇಶ್ವರ!| ಅಹಂ ವತ್ಸ್ಯಾಮಿ ಭೂಪೃಷ್ಠೇ ರಾತ್ರೌ, ನೈವ ದಿವಾ ಕಲೌ ||" (ನಾಗರಖಂಡ) ಎಂಬ ವಚನಾನುಸಾರ ಮಾಘ ಕೃಷ್ಣ ಚತುರ್ದಶಿಯು ಮಹಾಶಿವರಾತ್ರಿ ಎಂದು ಪರಿಗಣಿತವಾಗಿದೆ. ಇನ್ನು ಕೆಲವು ಕಡೆ "ಫಾಲ್ಗುನಸ್ಯ ಚತುರ್ದಶ್ಯಾಂ ಕೃಷ್ಣಪಕ್ಷೇ ಸಮಾಹಿತಾಃ" (ಹೇಮಾದ್ರಿ ತೀರ್ಥಖಂಡ) ಎಂಬುದಾಗಿ ಫಾಲ್ಗುಣ ಮಾಸವನ್ನು ಸ್ವೀಕರಿಸಲಾಗುತ್ತದೆ. ಏನೇ ಆದರೂ ಚತುರ್ದಶಿಯು ಶಿವದೇವತಾತ್ಮಕವಾದ ತಿಥಿಯಾಗಿದೆ. ಈ ತಿಥಿಯ ನಿರ್ಣಯ ಹೇಗೆ?

೧."ಸರ್ವಾಪಿ ಶಿವರಾತ್ರಿಃ ಪ್ರದೋಷವ್ಯಾಪಿನ್ಯೇವ" (ನಿರ್ಣಯಾಮೃತ) "ಸೂರ್ಯಾಸ್ತದ ಅನಂತರ ಎರಡು ಘಂಟೆಯ ಕಾಲವೇ ಪ್ರದೋಷಕಾಲ. ಈ ಸಮಯದಲ್ಲಿ ಚತುರ್ದಶೀ ತಿಥಿಯು ಇರಬೇಕು. ೨.ಪ್ರದೋಷನಿಶೀಥೋಭಯವ್ಯಾಪ್ತಿಃ ಇತಿ ಮಾಧವಃ – ಪ್ರದೋಷ ಮತ್ತು ರಾತ್ರಿಯ ಎಂಟನೆ ಮುಹೂರ್ತದವರೆಗೆ ಚತುರ್ದಶೀ ಇರಬೇಕು.
೩. ಎರಡು ರಾತ್ರಿಯೂ ವ್ಯಾಪ್ತವಾಗಿದ್ದರೆ ಮಾರನೇ ದಿನವನ್ನೇ ಪರಿಗಣಿಸಬೇಕು.
೪.ಎರಡೂ ದಿನಗಳಲ್ಲಿಯೂ ತಿಥಿಯು ರಾತ್ರಿವ್ಯಾಪಿನಿಯಲ್ಲದಿದ್ದರೆ ಮಾರನೇ ದಿನವನ್ನೇ ಬಳಸಬೇಕು (ಹೇಮಾದ್ರಿ ಮತ್ತು ಕೌಸ್ತುಭ).
೫.ತ್ರಯೋದಶಿವಿದ್ಧವಾದ ಚತುರ್ದಶಿಯೇ ಶ್ರೇಷ್ಠ ಎಂಬುದಾಗಿ ಸ್ಕಂದಪುರಾಣ ಸಾರಿದೆ. ಈ ವ್ರತವು ಭಾನುವಾರ ಮತ್ತು ಮಂಗಳವಾರ ಹಾಗೂ ಶಿವ ಯೋಗದಿಂದ ಕೂಡಿದ್ದರೆ ಅತ್ಯಂತ ಶ್ರೇಷ್ಠ ಎಂಬುದಾಗಿ ತಿಳಿಯಬೇಕು.

ಶಿವನ ಸಂಖ್ಯೆ ಹನ್ನೊಂದು. ಚೈತ್ರಾದಿ ಮಾಸದಿಂದ ಮಾಘಮಾಸವು ಹನ್ನೊಂದನೇ ಮಾಸವಾಗಿದೆ. ಹಾಗಾಗಿ ಈ ಮಾಸವನ್ನು ಮಹಾಶಿವರಾತ್ರಿ ಎನ್ನಲಾಗಿದೆ. "ಸಾಧಕರ ಅಂತರರಂಗದಲ್ಲಿ ಯಾವಾಗ ವಿಶೇಷವಾಗಿ ಶಿವನ ಸಾಕ್ಷಾತ್ಕಾರ ಆಗುತ್ತದೆಯೋ ಆ ಕಾಲವನ್ನೇ ಆಚರಣೆಗೆ ಬಳಸಬೇಕು" ಎಂಬುದು ಶ್ರೀರಂಗಮಹಾಗುರುಗಳ ಅಂತರಂಗವಾಗಿತ್ತು.


ಉಪವಾಸ
ಉಪವಾಸವು ಈ ವ್ರತದಲ್ಲಿ ಬಹುಮುಖ್ಯವಾದ ಅಂಗ. ಆಹಾರದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದೇ ಉಪವಾಸ ಎಂಬರ್ಥವನ್ನು ಇಂದು ಎಲ್ಲಾ ಕಡೆ ಕಾಣುತ್ತೇವೆ. ಆದರೆ ಶ್ರೀರಂಗಮಹಾಗುರುಗಳು ಇದನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಿದ್ದರು. " ಉಪ-ಸಮೀಪೇ, ವಾಸ-ಇರುವುದು. ಅಂದರೆ ಭಗವಂತನ ಬಳಿ ಮನಸ್ಸನ್ನು ಸದಾ ಇರಿಸುವುದೇ ಉಪವಾಸವಪ್ಪ" ಎಂದು. ಉಪವಾಸಕ್ಕೆ ನಿಜವಾದ ಅರ್ಥ ಇದುವೇ . ಇಂತಹ ಸ್ಥಿತಿಗೆ ಆಹಾರವನ್ನು ಬಳಸದೇ ಇರುವುದೂ ಕಾರಣ ಎಂಬರ್ಥದಲ್ಲಿ ಉಪವಾಸ ಪದದ ಬಳಕೆ ಉಚಿತವಾಗುವುದು. "ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ"(ಗೀತಾ೨.೫೯) ಎಂಬ ಗೀತಾಚಾರ್ಯನ ಮಾತಿನಂತೆ ಆಹಾರವನ್ನು ಬಳಸದೇ ಇರುವುದು ವಿಷಯಲಾಲಸೆಯನ್ನು ದೂರಮಾಡುವುದು. ಆಗ ಇಂದ್ರಿಯನಿಗ್ರಹ ಮತ್ತು ಮನೋನಿಗ್ರಹ ಸುಲಭ. ನಿಗ್ರಹವೇ ಇಲ್ಲಿ ಮುಖ್ಯ ಉದ್ದೇಶವೇ ಹೊರತು ಕೇವಲ ಆಹಾರವನ್ನು ಬಳಸದಿರುವುದು ಎಂದೂ ಅಲ್ಲ. ಮತ್ತು ನಿಗ್ರಹವುಳ್ಳವನಿಗೆ ಹಸಿವು ಬಾಯಾರಿಕೆಗಳ ಪರಿವೆಯೇ ಇರದು. ಇಂತಹ ಕಂಡೀಶನ್ನು ಏನುಂಟು ಅದನ್ನೇ ಉಪವಾಸ ಎಂದು ಮಹರ್ಷಿಗಳು ಕರೆದಿದ್ದಾರೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗು ಅಶಕ್ತರಾದವರು ಭಗವಂತನ ಪೂಜೆಗೆ ತೊಡಕು ಉಂಟಾಗದ ರೀತಿಯಲ್ಲಿ ಆಹಾರವನ್ನು ಬಳಸಿದರೆ ತಪ್ಪಲ್ಲ ಎಂದು ಶಾಸ್ತ್ರಗಳು ವಿಧಿಸಿವೆ." ಉಪೋಷಿತೈಃ ಪೂಜಿತಃ ಸನ್ ನರಕಾತ್ ತಾರಯೇತ್ ತಥಾ"(ಗರುಡ) –ಈ ಉಪವಾಸವು ಎಲ್ಲಾ ಪಾಪಗಳನ್ನು ಪರಿಹರಿಸಿ ನಮ್ಮನ್ನು ಉದ್ಧಾರ ಮಾಡುವ ಉತ್ತಮವದ ವ್ರತಾಂಗವಾಗಿದೆ.

ಜಾಗರಣ
ಜಾಗರಣವು ಶಿವರಾತ್ರಿಯ ಇನ್ನೊಂದು ಮುಖ್ಯವಾದ ಅಂಗ. ಜಾಗರಣ ಎಂದರೆ ಎಚ್ಚರವಾಗಿರುವುದು. "ತಸ್ಯಾಂ ಜಾಗರಣಾದ್ರುದ್ರಃ ಪೂಜಿತೋ ಭುಕ್ತಿಮುಕ್ತಿದಃ" (ಗರುಡ) ಈ ದಿನ ಮಾಡಿದ ಜಾಗರಣವು ಇಹದಲ್ಲಿ ಭೋಗಕ್ಕೆ ಬೇಕಾದ ಸಂಪತ್ತನ್ನೂ, ಮತ್ತು ಪರದ ಭೋಗಕ್ಕೆ ಬೇಕಾದ ವೈರಾಗ್ಯವನ್ನೂ ಕೊಡುವುದಾಗಿದೆ. ಆದ್ದರಿಂದ ಈ ದಿನ ಮಾಡುವ ಜಾಗರಣಕ್ಕೆ ಅಷ್ಟೊಂದು ವಿಶೇಷತೆ ಇದೆ.  ಹಾಗಾದರೆ ಜಾಗರಣೆ ಎಂದರೆ ಕೇವಲ ನಿದ್ದೆ ಮಾಡದೆ ಎಚ್ಚರವಾಗಿರುವುದು ಎಂಬ ಅರ್ಥವಲ್ಲ. ನಮ್ಮ ಇಂದ್ರಿಯ, ದೇಹ, ಮನಸ್ಸು ಇವುಗಳನ್ನೆಲ್ಲಾ ಅತ್ಯಂತ ಪಟುವಾಗಿಸಿಕೊಂಡು ಅವುಗಳಿಂದ ಭಗವಂತನನ್ನು ಪೂಜಿಸಬೇಕು, ಸ್ತೋತ್ರಮಾಡಬೇಕು, ಧ್ಯಾನಿಸಬೇಕು ಎಂದರ್ಥ. ನಮ್ಮೆಲ್ಲಾ ಕರಣಕಳೆಬರಗಳನ್ನೆಲ್ಲವನ್ನೂ ಭಗವಂತನಿಗಾಗಿ ಮೀಸಲಿಡುವ ಪವಿತ್ರಕಾಲವೇ ಜಾಗರಣ. ಹೊರತು ಎಚ್ಚರವಾಗಿದ್ದುಕೊಂಡು ಇನ್ನಾವುದೋ ಬಹಿರ್ಮುಖವಾದ ವ್ಯಾಪಾರದಲ್ಲೋ, ಮೋಜು ಮಸ್ತಿನಲ್ಲೋ ಕಾಲಹರಣ ಮಾಡುವುದು ಜಾಗರಣ ಖಂಡಿತ ಆಗಲಾರದು. ಇದು ಭಗವಂತನಿಗೆ ಮಾಡುವ ಅಪಚಾರ. ಸ್ತ್ರೀಯರು ಪುರುಷರು ಎಲ್ಲಾ ಜಾತಿಜನಾಂಗದವರೂ ಎಲ್ಲರೂ ಈ ಜಾಗರಣವನ್ನು ಮಾಡಬಹುದು. ಇಲ್ಲಿ ಒಂದನ್ನು ಮಾತ್ರ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ವ್ರತ ನಿಯಮಗಳೆಲ್ಲವೂ ಯಾರು ಭಗವಂತನ ಮಡಿಲನ್ನು ಸೇರಿ ಈ ಸಂಸಾರಬಂಧನದಿಂದ ಮುಕ್ತಿ ಪಡೆಯಬೇಕು ಎಂದು ಅಪೇಕ್ಷಿಸುತ್ತಾರೋ ಅಂತಹವರಿಗೆ ಮಾತ್ರ ಎಂದು.

ಪೂಜಾವಿಧಾನ
ಶಿವರಾತ್ರಿಯ ದಿನ ಇಡೀ ರಾತ್ರಿ ಪೂಜೆಯನ್ನು ಮಾಡಬೇಕು. ನಾಲ್ಕೂ ಯಾಮಗಳೂ ಪೂಜಾ ಯೋಗ್ಯವಾದ ಕಾಲವಾಗಿವೆ. ಶಿವಲಿಂಗ ಅಥವಾ ಕಲಶದಲ್ಲಿ ಶಿವನನ್ನು ಆವಾಹಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು. "ಅಭಿಷೇಕಪ್ರಿಯಃ ಶಿವಃ" ಎಂಬಂತೆ ಅಭಿಷೇಕವು ಶಿವನಿಗೆ ಅತ್ಯಂತ ಶ್ರೇಷ್ಠ. ಹಾಗಾಗಿ ಮೊದಲನೆಯ ಯಾಮದಲ್ಲಿ ಹಾಲಿನಿಂದ, ಎರಡನೆ ಯಾಮದಲ್ಲಿ ಮೊಸರಿನಿಂದ, ಮೂರನೆ ಯಾಮದಲ್ಲಿ ತುಪ್ಪದಿಂದ ಮತ್ತು ನಾಲ್ಕನೆ ಯಾಮದಲ್ಲಿ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು. ಯಜುರ್ವೇದದಲ್ಲಿ ಬರುವ ರುದ್ರಾನುವಾಕ ಮಂತ್ರವನ್ನು ಅಭಿಷೇಕದ ಜೊತೆ ಪಠಿಸಬೇಕು. ಪಂಚಾಮೃತ, ಗಂಧ, ಕುಂಕುಮ, ಕರ್ಪೂರ, ತೀರ್ಥ, ಸುವರ್ಣತೀರ್ಥಗಳಿಂದ ಶಿವನಿಗೆ ಅಭಿಷೇಕ ಮಾಡಬೇಕು. ಎಕ್ಕೆ, ಕರವೀರ, ಬಿಲ್ವ ಬಕುಲ ಇವು ಶಂಕರನಿಗೆ ಪ್ರಿಯಕರ. ಇವುಗಳಲ್ಲೂ ಬಿಲ್ವಪತ್ರೆ ಅತ್ಯಂತ ಶ್ರೇಷ್ಠವಾಗಿದೆ. ಮೂರು ದಳಗಳು ತ್ರಿಮೂರ್ತಿಗಳ ಪ್ರತಿರೂಪ. "ಇದರ ದರ್ಶನ, ಸ್ಪರ್ಶ ಮತ್ತು ಸಮರ್ಪಣೆಗಳು ಶಿವಸ್ಥಾನಕ್ಕೆ ಏರಿಸಬಲ್ಲವು ಎಂಬುದನ್ನು ಶ್ರೀರಂಗಮಹಾಗುರುಗಳು ಪ್ರಯೋಗದೊಂದಿಗೆ ಪಾಠ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.  ಲಿಂಗಾಷ್ಟಕ, ಬಿಲ್ವಾಷ್ಟಕ ಮೊದಲಾದ ಸ್ತೋತ್ರಗಳಿಂದ ಶಿವನನ್ನು ಸ್ತುತಿ ಮಾಡಬೇಕು. ಶಿವ ಅಷ್ಟೋತ್ತರ ಅಥವಾ ಸಹಸ್ರನಾಮಗಳಿಂದ ಅರ್ಚನೆ, ಶಿವಕಥಾಶ್ರವಣ, ಭಜನ, ಶಿವನಾಮಸಂಕೀರ್ತನ, ಹೀಗೆ ಶಿವಮಯವಾಗಿ ಜಾಗರೂಕರಾಗಿ ರಾತ್ರಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಪಾರಣೆ (ವ್ರತಾಂತಭೋಜನ) ಮಾಡಿ ಶಿವರಾತ್ರಿವ್ರತವನ್ನು ಪೂರ್ಣಗೊಳಿಸಬೇಕು.

ಜಿಜ್ಞಾಸಾಪರಿಹಾರ
ಶಿವನು ತಮಸ್ಸಿಗೆ ಅಧಿದೇವತೆ, ಸಂಹಾರಕ ಅಂದರೆ ಕೊಲ್ಲುವವನು. ಹೀಗಿದ್ದೂ ಇಂತಹ ದೇವರನ್ನು ಪೂಜಿಸುವುದು ಮೂರ್ಖತನವಲ್ಲವೇ? ಇಂತಹ ದೇವರ ಪೂಜೆಯಿಂದ ಫಲವಾದರೂ ಏನು? ಮತ್ತು ಹಿಂದೆ ನೆನೆಪಿಸಿದ ಕಥೆಯ ತಾತ್ತ್ವಿಕವಾದ ಹಿನ್ನೆಲೆ ಏನು? ಎಂಬ ಮೊದಲಾದ ಪ್ರಶ್ನೆಗಳು ಓದುಗರ ಮನಸ್ಸಿನಲ್ಲಿ ಮೂಡುವುದು ಸಹಜ. ಈ ಸೃಷ್ಟಿಯಲ್ಲಿ ಸತ್ತ್ವ, ರಜಸ್ಸು ಮತ್ತು ತಮಸ್ಸು ಈ ಮೂರೂ ಗುಣಗಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಸಾಮರಸ್ಯ ಇರಲು ಸಾಧ್ಯ. ಒಬ್ಬ ಮನುಷ್ಯ ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲವೂ ಅವಿಶ್ರಾಂತವಾಗಿ ಕೆಲಸದಲ್ಲಿ ನಿರತನಾದರೆ ಆರೋಗ್ಯ ಕೆಡುವುದಿಲ್ಲವೇ? ಕಾಲಕಾಲಕ್ಕೆ ನಿದ್ದೆಯನ್ನು ಮಾಡಿ ಕೆಲಸವನ್ನು ಮಾಡಿದರೆ ಆರೋಗ್ಯವಾಗಿ ಬದುಕಬಹುದು. ಹಾಗೆಯೇ ಜೀವಿಗಳು ಕರ್ಮಫಲಗಳನ್ನು ಅನುಭವಿಸಿ ಬಳಲಿದಾಗ ವಿಶ್ರಾಂತಿ ಪಡೆಯಲು ಅವನು "ಮರಣ ರೂಪವಾದ ವಿಶ್ರಾಂತಿಯನ್ನು ಕರುಣಿಸುವ ಕರುಣಾಮಯನಾದ ದೇವನೇ ಆಗಿದ್ದಾನೆ. ಜಾಗೃತ್ತಿಗೆ ಹೇಗೆ ರಜಸ್ಸು ಕಾರಣವೋ. ಸಮಾಧಾನಕ್ಕೆ ಸತ್ತ್ವಗುಣ ಕಾರಣ. ನಿದ್ದೆಗೆ ತಮಸ್ಸು ಕಾರಣ. ಶಿವನ ಅನುಗ್ರಹದಿಂದಲೇ ನಾವು ನಿತ್ಯವೂ ಸುಖವಾಗಿ ನಿದ್ರಿಸುತ್ತಿದ್ದೇವೆ.ಯಾವುದೇ ಗುಣವು ವ್ಯತ್ಯಾಸವಾದರೂ ಸೃಷ್ಟಿಯಲ್ಲಿ ಏರುಪೇರು ಸಹಜ. ಒಬ್ಬ ಸಾಧಕನು ಈ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಈ ಮೂರೂ ಗುಣಗಳ ಅಧಿಷ್ಠಾನ ದೇವತೆಗಳ ಪ್ರಸಾದ ಅತಿಮುಖ್ಯ. ನಮ್ಮ ಜೀವನಕ್ಕೆ ಅಡ್ಡಿಪಡಿಸುವ ರಾಕ್ಷಸೀಸ್ವಭಾವನ್ನು ನಾಶಪಡಿಸುವುದು ಸಂಹಾರಕಾರ್ಯವಾದರೂ ಇದರಿಂದ ಜೀವಸಂಕುಲಕ್ಕೆ ಒಳಿತೇ. ಇಂತಹ ದೇವರನ್ನು ಪೂಜಿಸುವುದರಿಂದ ಜೀವಕ್ಕೆ, ಜೀವನಕ್ಕೆ ಹೊಸ ಉತ್ಸಾಹವನ್ನು ಕೊಡುತ್ತದೆ. ನಮ್ಮ ಮಹರ್ಷಿಗಳ ಯಾವ ಉದ್ಘೋಷವಿದೆಯೋ ಪುರುಷಾರ್ಥಮಯ ಬಾಳಾಟ ಇದೇ ಮಾನವನ ಚರಮ ಮತ್ತು ಪರಮ ಲಕ್ಷ್ಯ. ಇದನ್ನು ಪಡೆಯಲು ಶಿವರಾತ್ರಿಮಹೋತ್ಸವವು ಸಾಧನವಾಗಲಿ ಎಂದು ಶಂಕರನನ್ನು ಪ್ರಾಥಿಸಿ ಮಂಗಳ ಮಾಡುತ್ತೇನೆ.


ಸೂಚನೆ: 20/02/2020 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ. 

Wednesday, February 19, 2020

கம்பளியை விடு (Kampaliyai vitu)

மூலம்: Dr. ஸி.ஆர். ராமஸ்வாமி
தமிழாக்கம்: ஜானகி
மின்னஞ்சல்:  lekhana@ayvm.in
கிராமத்தில் ஓர் சலவை தொழிலாளி துணிகளை துவைக்க நதிக்கு எடுத்து செல்வது வழக்கம். ஒரு நாள் கம்பளம் ஒன்று கை நழுவி   நீரில் அடித்துச் சென்றது. 'ஐயோ, போய்விட்டதே' என இவனும் நீரில் குதித்து ஒருவாறு கம்பளத்தை பிடித்து விட்டான். ஆயினும் நீரின் வேகம் அதிகரித்ததால் கம்பளியுடன் இவனையும் இழுத்து செல்ல தொடங்கியது. கம்பளியா அல்லது உயிரா எனும் கேள்வி. அதை கைவிட்டாலொழிய கரை சேருவது முடியாது. கரையில் இவனுடைய நலம் விரும்பிகள் சிலர் "கம்பளியை விட்டு விடு. கரை சேர முயற்சி செய்" என கூவினர். சலவை தொழிலாளி கூறினான்: "நானும் அதற்குதான் முயற்சிக்கிறேன். ஆனால் நான் கைவிட்டாலும் அது என்னை விடுவதாக இல்லை! என்ன செய்வது?"

ஏனெனில் அவன் பிடித்திருந்தது கம்பளம் அல்ல. ஒரு கரடியை!! இவன் விட்டாலும் அது இவனை விடாத பரிதாப நிலை!!
சலவை செய்பவன் நிலை என்னவாயிற்றோ தெரியாது. ஆனால் நாமும் வாழ்க்கை வெள்ளத்தின் பிடியில் சிக்கித் தவிப்பது உறுதி. சில நேரங்களில் குறிக்கோளை மறந்து எதையோ பின்பற்றி காலத்தை வீணாக்குகிறோம். அக்கம் பக்கம் உள்ளவர்களும் அதற்கு உரமிட்டு வளர்க்கிறார்கள். மற்றொருபுறம் நம் நலம் விரும்பிகள் கூற்றும் நமக்கு ருசிப்பதில்லை. படிப்படியாக வாழ்க்கையில் சுழல்கள் போன்ற நிகழ்வுகளை கண்டு விழிப்புணர்வு ஏற்பட்டாலும் கரடியை போல் அவை நம்மை விடுவதில்லை.

இவ்வாறான சூழ்நிலைக்கு ஆளாகாமல் இருக்க வாழ்க்கையின் குறிக்கோளையும் அதை அடையும் சீரான பாதையையும் அறியவேண்டியது அவசியம். அவ்வாறான பாதையை தவத்தின் மூலம் கண்டறிந்து மிக்க இரக்க குணம் கொண்ட மகரிஷிகள் நமக்கு உபதேசித்தனர். அறம், பொருள், இன்பம், வீடு எனும் நான்கையும் உட்கொண்ட வாழ்க்கை முறைதான் அந்தப் பாதை என உரைத்தனர். பொருள், இன்பம் எனும் இரண்டை மட்டும் அடைய நினைத்தால்  ஆரம்பத்தில் அது கம்பளியைப் போல் தோன்றி முடிவில் கரடியாக மாறுவது திண்ணம். ஆனால் வீடுபேற்றை(மோக்ஷத்தை) குறிக்கோளாக மேற்கொண்டால் கரை சேர்வது உறுதி. அப்படியானால் வாழ்க்கையில் பொருள், இன்பம் இரண்டும் தேவையே இல்லை என்பது பொருள் அல்ல. ஆயினும் அவற்றை தர்மத்துடன் இணைத்து கடைபிடித்தால் கம்பளியும் கிடைத்து கரடியின் சித்திரவதையும் தப்பியது எனும்படி புலன்களின் இன்பத்தையும் அளித்து மோக்ஷத்திற்கும் வழி வகுக்கும். "பொருள், இன்பம் என்பவை முரட்டு பசுவை போன்றவை. அவற்றை கறக்க முயன்றால் உதைத்துவிடும். ஆனால்  அவற்றை தர்மம்-மோக்ஷம் என்ற கம்பங்களுக்கு கட்டி கறந்தால் அம்ருதத்தையே கறக்கும்" என யோகிகளில் தலை சிறந்து விளங்கிய ஸ்ரீரங்கமஹாகுரு அவர்கள் அருளியதை நினைவில் கொள்ளலாம்.

குறிப்பு : இக்கட்டுரை யின் கன்னட மூலம் AYVM blogs  ல் காணலாம்

The Month of Shraavana is Here

Kannada Article by: Vidwan Narasimha Bhat
English Rendering by: M R Bhashyam
(Respond to lekhana@ayvm.in)



The summer is ending. Water is scarce. Farmers look towards the heavens with an expectant gaze. The Chaataka Birds stare at the skies without an eyelid bat. Swans sway with an attractive gait. The nature is drawing its curtains to wade into the next phase. This is the end of parching summer heat. Neither there is sweat nor are there the scorching rays of the direct Sun.  He is changing his course and moving from north to south, the Dakshinaayana. Smiles begin to appear on the face of farmers. The Chaataka birds are joyous. Peacocks dance in anticipation. Dark clouds appear.  There is the roll of thunder and flashes of lightning.  Rain as droplets first and then in sheets is quenching the thirst. The Swans are flying to the placid waters of lake Manasa Sarovara. Paramahamsa saints open the petals of their heart's lotuses to dwell deep into the silence of their mental pools.   Sanyasins, the ascetics who have taken vow, begin their four-month long penance, the chaaturmaasya. The first lunar month of the rainy season, Shraavana, draws one and all from the humdrum of the outer life towards the serenity of the inner self. Shraavana is also the month which laces a garland of festivals from individual beads. The arrival of the month heralds the arrival of festivals, not one but many and more.

The wife has finished her vow-vrataa of Bhimana-Amaavaasya, dedicated to the worship of lord Shiva and Paarvati, on the new moon day and has arrived from the warm lap of her mother's house to her husband's home. Now is the time for both of them to fulfill many a joint vow.

The month is called Shraavana because in this month the star Shraavana concatenates with moon on the full-moon day.  The star's deity is Lord Vishnu and hence this month is most suited for the worship of Lord Vishnu. On the third day of the month, the people in Gujarat and elsewhere celebrate the festival of "Madhusrava - the Oozing nectar" which signifies the reunion of Paarvathi with lord Shiva.   The fifth day of the month is dedicated to the worship of serpents, Naagara-Panchami. The Naaga represents Kundalini – the power coiled like a serpent resident at the base of everyone's spine, the moolaadhaara. People who are in the know say that this is the most favorable and auspicious time for awakening this great inner energy.  Symbolically, idols of serpents, and sometimes real ones too, are formally worshipped by offering milk, curds, darbha grass, sandal-wood scent and flowers.  It is believed that people who worship the serpents thus, overcome the inner and outer fear of snakes.

The Friday prior to the full-moon day is dedicated to the goddess of wealth, Lakshmi.  Lakshmi, the cohort of Lord Vishnu, is worshipped to attain the eightfold internal and external riches. The twelfth day of the waning moon is dedicated to the worship of creation by planting the Darbha grass, "Pavitra-Aaraadhana". It symbolizes the injection of the seed of evolution into the nature's womb.

The full-moon day of this month, and the day on which the Shravana star occurs are reserved for Upaakarma, the auspicious day to initiate one to schooling in Vedas or to resume after a break. This day is also celebrated as "Rakshaa Bandhan – Bond of Protection" in many parts of India.  On this day, women tie a golden colored bracelet bundled with rice colored with turmeric and consecrated by hymns – Akshata, to the wrist of the king for his well- being and the state's safety. Sisters also tie an amulet to their brothers for their protection. The day after the Upaakarma is reserved for chanting Gayatri Mantra to atone for the sin of mis-study, false study or non- study of the Vedas.

The most sacred festival of this month is on the eighth day of the waxing moon in the star Rohini, the day of incarnation of lord Vishnu as Krishna, at midnight. Is there a better time for the lord to choose other than when the world is engulfed in darkness and is at its darkest hour? This is another point in the cycle of life, identified by our sages to help us cross the ocean of time and to discover light.

To summarize, in the words of Shri SriRanga Mahaguru, festivals are boons granted by the Lord in Time and discovered by our sages to propel us   through the pleasures of our senses towards the joy of our inner souls, and the month of Shraavana has many of them.

Note: The Kannada version of this article can be viewed at  AYVM blogs

Tuesday, February 18, 2020

ಪೂಜಾ ವೈವಿಧ್ಯಗಳು (Pujaa vaividhyagalu)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ: lekhana@ayvm.in)


ಸ್ವಾರ್ಥಪೂಜೆ, ಪರಾರ್ಥಪೂಜೆ

ಸ್ವಾರ್ಥಪೂಜೆಯೆನ್ನುವುದು ಅವರವರ ಉದ್ಧಾರಕ್ಕಾಗಿ ಮಾಡುವ ಕ್ರಿಯೆಯಾದ್ದರಿಂದ ಸರ್ವರಿಗೂ ಅದಕ್ಕೆ ಅಧಿಕಾರವುಂಟು. ಮನೆಗಳಲ್ಲಿ ಶಿವಲಿಂಗ, ಸಾಲಿಗ್ರಾಮ, ದೇವತಾಮೂರ್ತಿಗಳು ಮುಂತಾದವುಗಳಿಗೆ ಪೂಜಿಸಬಹುದು. ಮನೆಯ ಹಿರಿಯರು ಈ ಪೂಜೆಯನ್ನು ಕೈಗೊಂಡು ನಡೆಸುವುದು, ಇತರರು ಸ್ಥಳಶುದ್ದಿ, ಪೂಜೆಗೆ ಬೇಕಾದ ಸಲಕರಣಗಳನ್ನು ಒದಗಿಸುವುದು ಇತ್ಯಾದಿಕಾರ್ಯಗಳನ್ನು ನಿರ್ವಹಿಸುವುದು ನಮ್ಮ ದೇಶದಲ್ಲಿ ರೂಢಿಯಲ್ಲಿದೆ. ಇದಲ್ಲದೆ ಅವರವರ ಆತ್ಮಸಾಧನೆಗಾಗಿ ಸ್ತೋತ್ರ-ಧ್ಯಾನಾದಿಗಳನ್ನು ಎಲ್ಲರೂ ಪ್ರತ್ಯೇಕವಾಗಿಯೇ ಮಾಡುಬೇಕು.

ಪರಾರ್ಥಪೂಜೆಯೆನ್ನುವುದು ಹೆಚ್ಚು ಜವಾಬ್ದಾರಿಯ ಕೆಲಸ. ವಿಶೇಷವಾದ ಜ್ಞಾನ-ಕಲೆಗಳುಳ್ಳವನೇ ಇದನ್ನು ನಿರ್ವಹಿಸಲು ಸಮರ್ಥನಾಗುತ್ತಾನೆ. ಆತನು ಭಗವತ್‌ಸಾಕ್ಷಾತ್ಕಾರವನ್ನು ಮಾಡಿಕೊಂಡಿರಬೇಕು. ಮುಂದೆ ಅದರಿಂದಾದ ಆನಂದವನ್ನೂ ಸೇರಿಸಿ ಪೂಜೆಯನ್ನು ಮಾಡಬೇಕು. ಅಂತಹ ಪೂಜೆಯಿಂದ ಆತನು ಅದನ್ನು ವೀಕ್ಷಿಸುವವರಮೇಲೆ ತನ್ನ ಜ್ಞಾನಾನಂದಗಳ ಪ್ರಭಾವವನ್ನು ಬೀರುತ್ತಾನೆ.  ಭಗವಂತನ ಪ್ರಸನ್ನತೆಯನ್ನು ನಾನಾ ರೀತಿಯಲ್ಲಿ ಇತರರಿಗೆ ವಿತರಣೆಮಾಡುವ ಹೊಣೆಗಾರಿಕೆಯಿಂದ ಕಾರ್ಯವೆಸಗಬೇಕಾಗಿದೆ. ಅಷ್ಟು ಸಾಮರ್ಥ್ಯದಿಂದಕೂಡಿದ ಜ್ಜಾನಿಯಾದವನನ್ನು ದೇವಾಲಯಗಳಲ್ಲಿ ಅರ್ಚಕನಾಗಿ ನೇಮಿಸುವುದು ಮಹರ್ಷಿಗಳು ಬೆಳಸಿದ ವಿಧಾನ. ಸರ್ವರಿಗೂ ಸುಲಭವಾಗಿ ಉತ್ಕೃಷ್ಟ ಫಲ ದೊರೆಯುವಂತಾಗಲಿ ಎಂಬುದು ಈ ವ್ಯವಸ್ಥೆಯಹಿಂದಿರುವ ಉದ್ದೇಶ.


ಅಂತರಂಗ(ಮಾನಸ)ಪೂಜೆ-ಬಾಹ್ಯಪೂಜೆ

ಅಂತರಂಗ ಪೂಜೆಯೆನ್ನುವುದು ಹೊರಸಾಮಗ್ರಿಗಳಾವುದನ್ನೂ ಬಳಸದೆ ಮಾನಸಿಕವಾಗಿ ಮಾತ್ರವೇ ನಡೆಸುವ ಪೂಜೆ. ಭಗವಂತನ ಮೂರ್ತಿಯನ್ನು ಏಕಾಗ್ರತೆಯಿಂದ ಧ್ಯಾನ ಮಾಡುವುದು ಇದರ ಪ್ರಧಾನ ಅಂಗ. ಅದರ ವಿಸ್ತಾರವಾಗಿ ಮಾನಸಿಕವಾಗಿಯೇ ಗಂಧ, ಪುಷ್ಪ ಇತ್ಯಾದಿಗಳನ್ನು ದೇವರಿಗೆ ಅರ್ಪಿಸುವುದು. ಸೃಷ್ಟಿಯ ಪದಾರ್ಥಗಳೆಲ್ಲವೂ ತನಗಾಗಿ ಎಂಬ ಭಾವನೆಯಿಲ್ಲದೇ ಭಗವಂತನಿಂದ ವಿಸ್ತಾರವಾದ ಅವುಗಳನ್ನು ಅವನಿಗೇ ಸಮರ್ಪಿಸುವ ಮನೋಭಾವವು ಇಲ್ಲಿ ಪ್ರತಿಫಲಿಸುತ್ತದೆ.

ಬಾಹ್ಯಪೂಜೆಯು ಹೊರ ಸಾಮಗ್ರಿಗಳನ್ನು-ಧೂಪ, ದೀಪ, ನೈವೇದ್ಯ ಇತ್ಯಾದಿಗಳನ್ನು-ಆಶ್ರಯಿಸಿ ನಡೆಸುವ ಕ್ರಿಯೆ. ಅಂತರಂಗಪೂಜೆಗೆ ಹೊರಸಿದ್ಧತೆಗಳು ಹೆಚ್ಚಿಲ್ಲವಾದ್ದರಿಂದ ಸುಲಭಸಾಧ್ಯವೆಂದು ಕಂಡರೂ ಮನಸ್ಸು ಅತ್ಯುನ್ನತ ಮಟ್ಟಕ್ಕೆ ಏರಬೇಕಾಗಿರುವುದರಿಂದ ಇದು ಸಾಮಾನ್ಯರಿಗೆ ಸುಲಭವಲ್ಲ. ಶಂಕರಭಗವತ್‌ಪಾದರು 'ಮಣಿಸನ್ನಿಭನಾದ ಆತ್ಮಲಿಂಗವನ್ನು ಶರೀರವೆಂಬಪುರದ ಹೃದಯ ಕಮಲದಲ್ಲಿ ಆರಾಧಿಸುತ್ತೇನೆ. ಶ್ರದ್ಧಾನದಿಯ ಪರಿಶುದ್ಧವಾದ ಮನಸ್ಸೆಂಬ ಜಲದಿಂದ ಅಭಿಷೇಕವನ್ನು ಮಾಡುತ್ತೇನೆ. ಸಮಾಧಿಯೆಂಬ ಪುಷ್ಪದಿಂದ ಪೂಜಿಸುತ್ತೇನೆ' ಮುಂತಾಗಿ ಸ್ತುತಿಸುತ್ತಾರೆ. ಇದು ಅವರಂತವರಿಗೆ ಮಾತ್ರವೇ ಎಟುಕುವಂತದ್ದು.

ಬಾಹ್ಯಪೂಜೆಯು ಸಾಮಾನ್ಯರಿಗೂ ಸುಲಭಸಾಧ್ಯ. ಆದರೆ 'ಬಾಹ್ಯಪೂಜೆಯು ಬಾಹ್ಯದಲ್ಲಿ ಪ್ರಾರಂಭವಾಗಿ, ಬಾಹ್ಯದ ಉದ್ದೇಶದೊಂದಿಗೆ, ಬಾಹ್ಯದಲ್ಲೇ ಕೊನೆಗೊಂಡರೆ ಅಂತಹ ಪೂಜೆಗೆ ಬೆಲೆಯಿಲ್ಲ' ಎಂಬ ಶ್ರೀರಂಗಮಹಾಗುರುಗಳ ಎಚ್ಚರಿಕೆಯು ಇಲ್ಲಿ ಸ್ಮರಣೀಯವಾಗಿದೆ. ಬಾಹ್ಯಪೂಜೆಯು ಮನಸ್ಸನ್ನು ಒಳಗೆ ಎಳೆಯುವಂತಾಗಬೇಕು. ದೇವೀಸ್ತೋತ್ರದಲ್ಲಿ ಬರುವ 'ಬಾಹ್ಯಪೂಜಾ ಪರಾಙ್ಮುಖೀ'ಯೆಂಬ ವಾಕ್ಯ ಸ್ಮರಣೀಯವಾಗಿದೆ. ಯಾವರೀತಿಯ ಪೂಜೆಯೇ ಆದರೂ ಭಗವಂತನಲ್ಲಿ ಪ್ರೀತಿಯೇ ಪೂಜೆಗೆ ಮುಖ್ಯಸಾಧನ.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Saturday, February 15, 2020

ನಮ್ಮೊಳಗಿನ ಇಲಿಯ ಕಥೆ. (Nammolagina iliya kathe.)

ಲೇಖಕರು:  ಡಾ || ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
ಋಷಿಗಳೊಬ್ಬರು ಹೊಳೆಯಲ್ಲಿ ಅರ್ಘ್ಯವನ್ನು ಬಿಡುತ್ತಿದ್ದರು. ದಿಢೀರನೆ ಹದ್ದೊಂದು ಆಕಾಶದಲ್ಲಿ ತಲೆಯಮೇಲೆ ಹಾದು  ಹೋಯಿತು. ಅದರ ತೀಕ್ಷ್ಣವಾದ ಹಿಡಿತವನ್ನು ತಪ್ಪಿಸಿಕೊಂಡು ಕೆಳಕ್ಕೆ ಬಿದ್ದ ಇಲಿಯೊಂದು ಋಷಿಗಳ ಕೈಸೇರಿತು. ಪರಮ ಕರುಣಾಳುವಾದ ಋಷಿಗಳು ಬೆದರಿ ಬಿಮ್ಮನಾದ ಇಲಿಯನ್ನು ಸಂರಕ್ಷಿಸುವುದಾಗಿ ಮಾತುಕೊಟ್ಟು, ತಮ್ಮ ಮಂತ್ರಶಕ್ತಿಯಿಂದ ಇಲಿಯನ್ನು ಸಣ್ಣ ಹುಡುಗಿಯನ್ನಾಗಿ ಪರಿವರ್ತಿಸಿದರು. ಆಕೆಯನ್ನು ಸಾಕು ಮಗಳಾಗಿ, ಬೆಳೆಸಿ ಪೋಷಿಸುತ್ತಾ ಬಂದರು. ಅನೇಕ ವರ್ಷಗಳು ಕಳೆದು, ಯುವತಿಯಾದ ತನ್ನ ಮಗಳಿಗೆ ವಿವಾಹ ಮಂಗಳವನ್ನು ಕೈಗೊಳ್ಳಬೇಕೆಂದು ಯೋಗ್ಯ ವರಾನ್ವೇಷಣೆ ಪ್ರಾರಂಭಿಸಿದರು. ತಮ್ಮ ತಪಶಕ್ತಿಯಿಂದ  ಸೂರ್ಯನನ್ನು ಆಹ್ವಾನಿಸಿ, ಮಗಳನ್ನು "ತೇಜಸ್ವಿಯೂ ಲೋಕಪ್ರಕಾಶಕನೂ ಆದ ಸೂರ್ಯನನ್ನು ಮದುವೆಯಾಗುವೆಯಾ?" ಎಂದು ಕೇಳಿದರು . ಮಗಳು ಒಪ್ಪಲಿಲ್ಲ. "ಈತನನ್ನ ನೋಡಲೂ ಸಾಧ್ಯವಿಲ್ಲ ನನ್ನಿಂದ ! ಕಣ್ಣೇ ಕುಗ್ಗಿಹೋಗುತ್ತಿದೆ " ಎಂದಳು. ಸೂರ್ಯನು ಋಷಿಗಳಿಗೆ ಸಲಹೆ ನೀಡಿದ-  "ಮೇಘಗಳ ರಾಜ ನನ್ನನ್ನೂ ಆವರಿಸುವನು. ನಂಗಿಂತಲೂ ಶ್ರೇಷ್ಠ.  ಆತನನ್ನು ವರಿಸಿರಿ". ಮೇಘರಾಜ ಬಂದ. ಹುಡುಗಿಯಾದರೋ ಒಪ್ಪಲಿಲ್ಲ. ವಾಯುದೇವನು ಮತ್ತಷ್ಟು ಬಲಿಷ್ಠನು.  ಮೇಘವನ್ನೂ ಅಟ್ಟಿಬಿಡುತ್ತಾನೆಂದು ವಾಯು ಭಗವಂತನನ್ನು ಕರೆತಂದಾಯಿತು. "ಇವನು ನಿಲ್ಲುವುದೇ ಇಲ್ಲವಲ್ಲಪ್ಪ !" ಎಂದು ಕುಂಟುನೆಪ ಹುಡುಕಿದಳು ಮಗಳು. ವಾಯುದೇವನನ್ನೂ ತಡೆದು ನಿಲ್ಲಿಸುವ ಪರ್ವತರಾಜನನ್ನು ತೋರಿಸಿ ಮದುವೆಯಾಗುವೆಯಾ ಎಂದು ಕೇಳಿದರು ಋಷಿಗಳು. ಮಗಳು ಸರ್ವಥಾ ಒಪ್ಪಲಿಲ್ಲ. ಮುಗುಳು ನಗೆಯ ನಕ್ಕ ಪರ್ವತರಾಜ ಹೇಳಿದ" ನಂಗಿಂತಲೂ ಬಲಶಾಲಿ ಒಬ್ಬನೇ ! ಅವನು ಮೂಷಕ ರಾಜ, ನನ್ನನ್ನೂ ಕೊರೆದು ಬಿಡುತ್ತಾನೆ ! ಆತನೇ ಸೂಕ್ತ ವರ ". ಮೂಷಕ ರಾಜ ಬರುತ್ತಿದ್ದಂತೆಯೇ ಮಗಳು ನಾಚಿದಳು. "ಅಪ್ಪ ನಾನು ಒಪ್ಪಿದ್ದೇನೆ. ನನಗೂ ಸಮಾನವಾದ ಒಂದು ರೂಪ ಕೊಡು" ಎಂದು ಕೇಳಿದಳು. ಋಷಿಗಳು ಮಂತ್ರಶಕ್ತಿಯಿಂದ ಆಕೆಯನ್ನು ಪುನಃ ಇಲಿಯನ್ನಾಗಿ ಮಾಡಿಸಿ ಕಳುಹಿಸಿಕೊಟ್ಟರು.

ಈ ಕಥೆಯು ನಮ್ಮ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಯಾವುದೋ ಕರ್ಮವಿಶೇಷದಿಂದ ನಮಗೆ ಈ ಮನುಷ್ಯಜನ್ಮವು ಸಿಕ್ಕಿತು. ಈ ಮಾನುಷಶರೀರದಲ್ಲಿ ಬೆನ್ನುಮೂಳೆಯೆಂಬ ಪರ್ವತರಾಜನಿದ್ದಾನೆ. ಅದರೊಳ್ ಸಂಚರಿಪ ಪ್ರಾಣರೂಪವಾದ ದೇವನಿದ್ದಾನೆ. ಆ ಪ್ರಾಣವು ಊರ್ಧ್ವಕ್ಕೇರಿದಾಗ ಬೆಳಗುವ ಜ್ಞಾನಸೂರ್ಯನೂ ಉಂಟು. ಅಮೃತರಸಧಾರೆಯನ್ನು ಸುರಿಸುವ ಸನ್ನಿವೇಶವೂ ಇದೆ. ಇವು ತಪಸ್ಸಿನಿಂದ ಅಂತರಂಗದಲ್ಲಿ ಅನುಭವಿಸಬಹುದಾದ ಅತ್ಯಂತ ಆನಂದದಾಯಕ ಸಂಗತಿಗಳೆಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಆದರೆ ಇವರೆಲ್ಲರನ್ನೂ ತಿರಸ್ಕರಿಸಿ ನಮ್ಮೊಳಗಿರುವ ಮೂಷಕನು ಮೂಷಕತ್ತ್ವವನ್ನು  ವರಿಸುತ್ತದೆ. "ಮುಷ್" ಎಂಬ ಧಾತುವು ಕಳ್ಳತನವೆಂಬ ಅರ್ಥವನ್ನು ಕೊಡುತ್ತದೆ. ನಮ್ಮಲ್ಲಿರುವ ಇಂದ್ರಿಯಗಳೇ ಆ ಕಳ್ಳಮೂಷಕರು. ಕಾಣಬಾರದ್ದನ್ನು ಕದ್ದು ನೋಡುವ ಕಣ್ಣು; ಕೇಳಬಾರದ್ದನ್ನು ಕದ್ದುಕೇಳುವ ಕಿವಿ; ಅಭೋಜ್ಯವನ್ನೂ ಚಾಪಲ್ಯದಿಂದ ತಿಂದುಹಾಕುವ ನಾಲಗೆ; ಸಂಯಮವನ್ನು ಹಾಳುಮಾಡಿ ಮೂಷಕಗಳು ನಮ್ಮನ್ನು ಒಳ ಆನಂದದ ಅನುಭವದಿಂದ ವಂಚಿಸುತ್ತವೆ. ಆದರೆ ವಿಘ್ನನಿವಾರಕನಾದ ಗಣೇಶ ಇವುಗಳನ್ನು ಪತ್ತೆಹಚ್ಚಿ, ಬಂಧಿಸಿ ವಶದಲ್ಲಿ ಇಟ್ಟುಕೊಳ್ಳುತ್ತಾನೆ. ಹಾಗಾದರೇನೇ ಎಲ್ಲ ಪೂಜೆ-ತಪ-ಜಪಗಳು ಫಲಿಸುವುದು. ಈ ಕಾರಣದಿಂದ ಗಣಪತಿಗೆ ಆದ್ಯಪೂಜೆ. ಈ ಗಣೇಶನು ನಮ್ಮ ಬಾಳನ್ನು ಸಾರ್ಥಕಗೊಳಿಸಲಿ !.


ಸೂಚನೆ: 15/02/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಯಲ್ಲಿ ಪ್ರಕಟವಾಗಿದೆ.

ದೇವತಾಪೂಜೆ - ಸಂಕ್ಷಿಪ್ತ ವಿವೇಚನೆ (Deevataapuje - Sanksipta vivechane)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್  
(ಮಿಂಚಂಚೆ: lekhana@ayvm.in)


ಪ್ರಪಂಚದ ಎಲ್ಲ ಜನಾಂಗದವರೂ ಅವರವರ ಮತಾನುಸಾರವಾಗಿ ಪೂಜೆಯನ್ನು ಮಾಡುವುದುಂಟು. ಪೂಜೆಗೆ ಪ್ರತಿಯೊಂದು ಜನಾಂಗದಲ್ಲೂ ಅವರದೇ ಆದ ಹೆಸರು, ವಿಧಾನಗಳುಂಟು. ಪ್ರಕೃತ ಲೇಖನವು ಭಾರತೀಯ ಮಹರ್ಷಿಗಳಿಂದ ರೂಪಿಸಲ್ಪಟ ಪೂಜಾವಿಧಾನದ ಕೆಲವು ಅಂಶಗಳನ್ನು ವಿವೇಚಿಸುವುದಾಗಿದೆ.

'ಪೂಜಾ' ಪದದ ವಿವರಣೆ
ಪೂಜೆಯೆನ್ನುವ ಪದ ದೇವರಿಗೆ ಆತನ ಸ್ತೋತ್ರಸಹಿತವಾಗಿ ಮಾಡುವ ಪುಷ್ಪ ಸಮರ್ಪಣೆ, ಗಂಧ ಸಮರ್ಪಣೆ ಇತ್ಯಾದಿ ಉಪಚಾರಗಳನ್ನು ಸೂಚಿಸುತ್ತದೆ. ಈ ಪದ ಜೀವಿಗೆ ಭಗವಂತನ ತಾದಾತ್ಮ್ಯವನ್ನು ಉಂಟುಮಾಡುವ ಕ್ರಿಯೆಯನ್ನು ಸೂಚಿಸುತ್ತದೆ. ಇದಕ್ಕೆ ಆರಾಧನೆ ಎಂಬ ಪದವನ್ನೂ ಬಳಸುವುದುಂಟು. ಆರಾಧನೆಯೆಂದರೆ 'ರಾಧ ಸಂಸಿದ್ಧೌ'-ಎಲ್ಲಾ ವಿಧದಿಂದಲೂ ಪೂರ್ಣಸಿದ್ಧಿಯನ್ನು ಪಡೆಯಲು ನಡೆಸುವ ಕ್ರಿಯೆ.


ಪೂಜೆಯ ಉದ್ದೇಶ
ಒಬ್ಬ ಜ್ಞಾನಿಯಾದವನು ಸಂಸಾರಚಕ್ರದಿಂದ ಬಿಡುಗಡೆಹೊಂದಿ ಮೋಕ್ಷವನ್ನು-ಪಡೆಯುವ ಉದ್ದೇಶದಿಂದ ಮಾತ್ರವೇ ಪೂಜೆಯನ್ನು ಮಾಡುತ್ತಾನೆ. 
ಆದರೆ ಸಾಮಾನ್ಯ ಜನರು ವ್ಯವಹಾರದ ಜೊತೆಯಲ್ಲಿಯೇ ಭಗವಂತನನ್ನೂ ಪಡೆಯಬೇಕಾಗುತ್ತದೆ. ಅಂದರೆ ಧರ್ಮಾರ್ಥಕಾಮಮೋಕ್ಷಗಳಿಗಾಗಿ, ಯೋಗ-ಭೋಗಗಳಿಗಾಗಿ ಪೂಜಿಸುತ್ತಾನೆ. ಆದ್ದರಿಂದಲೇ 'ಚತುರ್ವಿಧಪುರುಷಾರ್ಥ ಫಲಸಿದ್ಧ್ಯರ್ಥಂ' ಎಂದು ಪೂಜಾಕಾಲದಲ್ಲಿ ಸಂಕಲ್ಪವನ್ನು ಮಾಡುವುದು.ಪುರುಷಾರ್ಥಗಳನ್ನು ಪಡೆಯುವ ಉದ್ದೇಶ ಕೆಳಮಟ್ಟದ್ದಲ್ಲ. ಶ್ರೀರಂಗಮಹಾಗುರುಗಳು 'ಇಂದ್ರಿಯಗಳೂ ಕೂಡ ಭಗವಂತನ ಪ್ರಸಾದವಾಗಿಯೇ ನಮಗೆ ಲಭಿಸಿರುವುದರಿಂದ ಅವುಗಳ ಸುಖದಿಂದ ವಂಚಿತರಾಗಬೇಕಿಲ್ಲ. ಗಾಡಿಯನ್ನು ಎಳೆಯುವ ಕುದುರೆಗೂ ಆಹಾರ ನೀಡುವುದು ಹೇಗೆ ಅವಶ್ಯಕವೋ ಹಾಗೆ ಶರೀರಯಾತ್ರೆಗೆ ಸಾಧನವಾದ ಇಂದ್ರಿಯಗಳಿಗೂ ಆಹಾರವನ್ನು ಕೊಡಬೇಕು. ಅರ್ಥ-ಕಾಮಗಳು ಅಪೇಕ್ಷಣೀಯವೇ. ಆದರೆ ಅವು ಧರ್ಮ-ಮೋಕ್ಷಗಳ ಹದ್ದುಬಸ್ತಿನಲ್ಲಿರಬೇಕು' ಎಂಬ ಎಚ್ಚರಿಕೆಯನ್ನು ನೀಡಿದ್ದರು. ಋಷಿಪ್ರಣೀತವಾದ ಪೂಜಾವಿಧಾನವು ಜೀವಿಯನ್ನು ಭಗವಂತನೆಡೆ ಒಯ್ಯುವ ಸೇತುವೆಯಾಗಿದೆ. ಮನಸ್ಸೇ ಜೀವಿಯ ಬಂಧ-ಮೋಕ್ಷಗಳೆರಡಕ್ಕೂ ಕಾರಣ. ಆದ್ದರಿಂದ ಮನಸ್ಸನ್ನು ಭಗವಂತನೆಡೆ ಒಯ್ಯುವುದೇ ಜೀವಿಯ ಉದ್ಧಾರಕ್ಕೆ ದಾರಿ ಎಂಬುದನ್ನು ಮಹರ್ಷಿಗಳು ಸ್ಪಷ್ಟವಾಗಿ ಕಂಡುಕೊಂಡರು. ಆ ಗುರಿಮುಟ್ಟಲು ಕಲ್ಪಿಸಿದ ಅನೇಕ ಕರ್ಮಗಳಲ್ಲಿ ಭಗವಂತನ ಪೂಜೆಯು ಪ್ರಧಾನವಾದ ಅಂಗವಾಗಿದೆ. ಋಷಿಸಂಸ್ಕೃತಿಯಲ್ಲಿ ಪೂಜಾಸಿದ್ಧತೆಯಿಂದ ಹಿಡಿದು ಪೂಜಾವಿಧಾನದ ಪ್ರತಿಯೊಂದು ಅಂಶವೂ ಹೇಗೆ ಈ ಉದ್ದೇಶವನ್ನು ಪೂರೈಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.


ಪೂಜೆಗೆ ಅಧಿಕಾರಿ ಯಾರು?
ಆತ್ಮಸಾಕ್ಷಾತ್ಕಾರವು ಪ್ರತಿಯೊಂದು ಜೀವಿಯ ಹಕ್ಕು ಎಂಬುದಾಗಿ ಶ್ರೀರಂಗಮಹಾಗುರುಗಳು ಘೋಷಣೆ ಮಾಡಿದ್ದಾರೆ. 'ನನ್ನ ಹಕ್ಕಿನ ಸ್ವಾಮಿ'ಎಂಬುದಾಗಿ ಭಕ್ತರೊಬ್ಬರು ಭಗವಂತನನ್ನು ಕೊಂಡಾಡಿದ್ದಾರೆ. ಆ ರೀತಿ ದೇವರನ್ನು ತನ್ನ ಸ್ವಾಮಿ, ಪತಿ ಎಂಬುದಾಗಿ ಭಾವಿಸುವ ಎಲ್ಲ ಚೇತನರಿಗೂ ಭಗವಂತನನ್ನು ಪೂಜಿಸುವ ಅಧಿಕಾರವುಂಟು ಎನ್ನುವುದು ಜ್ಞಾನಿಗಳ ಮತ.  ಪೂಜಿಸುವ ಕ್ರಮದಲ್ಲಿ ವ್ಯತ್ಯಾಸಗಳಿದ್ದರೂ ಪೂಜಾಕಾರ್ಯವು ಸರ್ವರಿಗೂ ವಿಧಿತವೇ.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾ ವಾಣಿಯಲ್ಲಿ ಪ್ರಕಟವಾಗಿದೆ.

Friday, February 14, 2020

ಭಾರತೀಯ ಜ್ಞಾನಿಗಳ ದೃಷ್ಟಿಯಲ್ಲಿ- ಸ್ವಾತಂತ್ರ್ಯ (Bharatheeya jnanigala drushtiyalli-svaathantrya)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ: lekhana@ayvm.in)     


ವ್ಯಕ್ತಿ ಅಥವಾ ರಾಷ್ಟ್ರಗಳು ತಮ್ಮ ಇಚ್ಚೆಯಂತೆ ಜೀವನ ಮಾಡಲು ಮುಕ್ತ ಅವಕಾಶ, ಪರಕೀಯ ದಬ್ಬಾಳಿಕೆಯಿಂದ ಮುಕ್ತಿ, ಸ್ವಾವಲಂಬನೆ, ಎಲ್ಲ ಬಗೆಯ ಕಟ್ಟುಗಳಿಂದ ಬಿಡಿಸಿಕೊಳ್ಳುವಿಕೆ ಹೀಗೆ “ಸ್ವಾತಂತ್ರ್ಯ” ಕ್ಕೆ ಅನೇಕ ರೀತಿಯ ವ್ಯಾಖ್ಯೆಗಳು. ನಮ್ಮ ಮನಸ್ಸಿನಂತೆ ನಡೆದುಕೊಳ್ಳುವ ಅವಕಾಶ ಎಲ್ಲರಿಗೂ ಇರಬೇಕು. ಸ್ವಾತಂತ್ರ್ಯವೇ ಸ್ವರ್ಗ-ಪಾರತಂತ್ರ್ಯವೇ ನರಕ ಎನ್ನುವ ಘೋಷಣೆ ಬಹಳ ಪ್ರಸಿದ್ಧ. ನಮ್ಮ ಮನಸ್ಸಿನಂತೆ ನಡೆಯಲು ತಡೆಯುಂಟುಮಾಡುವ ನಿರ್ಬಂಧಗಳು ನಮಗೆ ಸಮ್ಮತವಿಲ್ಲ. ಹಾಗಾದರೆ ದೇಶದಲ್ಲಿ ಕಾನೂನು, ಕಟ್ಟಲೆಗಳೇ ಇರಬಾರದೇ? ಸಾಮಾಜಿಕವಾಗಿ ಎಲ್ಲರೂ ಹೀಗೆ ನಡೆದುಕೊಳ್ಳಬೇಕು ಎಂಬ ವಿಧಿ-ನಿಷೇಧಗಳಿಗೆ ಏನು ಅರ್ಥ? ನಿಜವಾಗಿ ಸ್ವಾತಂತ್ರ್ಯ ಎಂದರೆ ಏನು?

ಜಗತ್ತಿನ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿವೆ. ನಮ್ಮ ದೇಶದಲ್ಲಂತೂ ಶತಶತಮಾನಗಳ ದೀರ್ಘ ಹೋರಾಟವೇ ನಡೆದು ಈಗ ಸ್ವತಂತ್ರ ಭಾರತದಲ್ಲಿ ನಾವು ಜೀವಿಸುವಂತಾಗಿದೆ. ಇಷ್ಟಾದರೂ ನಿಶ್ಚಿತವಾಗಿ “ಸ್ವಾತಂತ್ರ್ಯ” ಎಂದರೇನು ಎಂಬ ಪ್ರಶ್ನೆಗೆ ಸಮಾಧಾನ ಹುಡುಕಬೇಕಿದೆ.

ಸ್ವಾತಂತ್ರ್ಯ ಎಂಬ ಪದವನ್ನು ತಂದವರು ನಮ್ಮ ದೇಶದ ಜ್ಞಾನಿಗಳು. ಅವರ ದೃಷ್ಟಿಯಲ್ಲಿ ಈ ಪದವನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಸೂಕ್ತವೆನಿಸುತ್ತದೆ.ಒಂದು ಮಾವಿನ ಬೀಜವನ್ನು ನೆಟ್ಟರೆ ಅದು ತನ್ನ ತಂತ್ರ-ಸ್ವತಂತ್ರದಂತೆ ಮಾವಿನ ಮೊಳಕೆ, ಮಾವಿನ ಕಾಂಡ, ಮಾವಿನ ಕೊಂಬೆ, ಮಾವಿನ ಎಲೆ, ಮಾವಿನ ಕಾಯಿ.ಮಾವಿನ ಹಣ್ಣು ಮತ್ತು ಮಾವಿನ ಬೀಜ ಹೀಗೆ ಅದರ ವಿಕಾಸ ಸಾಗುತ್ತದೆ. ಆ ಬೀಜದಲ್ಲಿ ತನ್ನ ವಿಕಾಸದ ತಂತ್ರವೇನಿದೆಯೋ ಅದೇ ಅದರ ಸ್ವ-ತಂತ್ರ. ಅದು ತನ್ನ ತಂತ್ರದಂತೆ ಮಾವಿನ ಮರವಾಗುವುದಕ್ಕೆ ಮಾಡುವ ಕೃಷಿ ಎಲ್ಲವೂ ಅದರ ಸ್ವಾತಂತ್ರದ ರಕ್ಷಣೆಗೆ ಸೇರುತ್ತದೆ. ಮಾವಿನ ಕೃಷಿಗೆ ಬೇಕಾದ ವಿಧಿ-ನಿಷೇಧಗಳೆಲ್ಲವೂ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಅವಶ್ಯವಾಗುತ್ತವೆ. ಕೆಲವೊಮ್ಮೆ ಮಾವಿನ ಮರದಲ್ಲಿ ಬದನಿಕೆ ಬೆಳೆಯುವುದುಂಟು. ಅದು ಮಾವಿನ ಬೇರಿನ ರಸವನ್ನೆಲ್ಲ ತಾನು ಹೀರಿ ಬೆಳೆಯುತ್ತೆ. ಅದು ಮಾವಿನ ಬೀಜದ ತಂತ್ರದಂತೆ ಬೆಳೆಯಲು ಬಾಧಕ. ವ್ಯವಸಾಯಜ್ಞನಾದವನು ಅದನ್ನು ಗುರುತಿಸಿ ಅಂತಹ ಬದನಿಕೆಯನ್ನು ತೆಗೆದುಹಾಕಿ ಮಾವಿನ ಮರವೇ ಸೊಂಪಾಗಿ ಬೆಳೆಯಲು ಬೇಕಾದ ಜಾಗ್ರತೆ ವಹಿಸುತ್ತಾನೆ. ಹಾಗೆ ಬದನಿಕೆಯನ್ನು ಕಿತ್ತುಹಾಕುವುದು ಮಾವಿನ ಸ್ವಾತಂತ್ರ್ಯವನ್ನು ಕಸಿದುಕೊಂಡಂತಲ್ಲ. ಬದಲಿಗೆ ಮಾವಿನ ತಂತ್ರದಂತೆ ಅದರ ವಿಕಾಸಕ್ಕೆ ನೀಡುವ ಸಹಕಾರ.
ಮಾನವನಿಗೂ ಸಹಜವಾದ ತಂತ್ರ ಒಂದುಂಟು. ಜೀವನ ಎನ್ನುವಾಗಲೇ ಜೀವ-ಸೇರಿಕೊಂಡಿದೆ. ಜೀವವೇ ಮಾನವ ವೃಕ್ಷದ ಬೀಜ. ಶ್ರೀರಂಗ ಮಹಾಗುರುಗಳ ಮಾತಿನಂತೆ ಜೀವವನ್ನು ಕಡೆಗಣಿಸಿ ಬಾಳಿದರೆ ಅದು ಜೀವ-“ನ” ಆಗಿಬಿಡುತ್ತದೆ. ಹಾಗಾಗದೇ  ಜೀವದ ಆಶಯ ಏನು ಎಂಬುದನ್ನು ತಪಸ್ಯೆಯಿಂದ ಕಂಡುಕೊಂಡವರು ನಮ್ಮ ಮಹರ್ಷಿಗಳು. ಜೀವವು ಮಹಾಚೈತನ್ಯ ಸ್ವರೂಪನಾದ ಪರಮಾತ್ಮನ ಅಂಶವೇ ಆಗಿದೆ. ಮಾವಿನ ಮರ ಎಲ್ಲೂ ಮಾವಿನ ತನವನ್ನು ಬಿಡದೇ ವಿಕಾಸವಾಗಿ ಕಡೆಗೆ ಮಾವಿನ ಬೀಜದಲ್ಲೇ ಪರ್ಯವಸಾನವಾಗುವಂತೆ ಜೀವವೂ ತಾನು ವಿಕಾಸವಾಗುವಾಗ ಆ ಮಹಾ ಚೈತನ್ಯದ ಆಶಯಕ್ಕನುಗುಣವಾಗಿಯೇ ಬೆಳೆಯುತ್ತಾ ಕಡೆಗೆ ಅದರಲ್ಲೇ ಸೇರುವಂತಾದರೆ ಅದು ಜೀವ ಬೀಜದ ಸಹಜವಾದ ತಂತ್ರ, ಸ್ವ-ತಂತ್ರ. ಅಂತಹ ಜೀವನ ವಿಕಾಸದಲ್ಲಿ ನೆಮ್ಮದಿ, ಶಾಂತಿ, ಆನಂದಗಳುಂಟು. ಅಂತಹ ಜೀವನವೇ ಸ್ವತಂತ್ರ ಜೀವನ ಪೂರ್ಣಜೀವನ ಎಂಬುದು ಆ ಸ್ವಾತಂತ್ರ್ಯವನ್ನು ಅನುಭವಿಸಿ ಸುಖಿಸಿದವರ ತೀರ್ಮಾನ.

ಈ ಜೀವನ ವೃಕ್ಷದಲ್ಲೂ ಜೀವದ ಮೂಲ ರಸವನ್ನೇ ಹೀರುತ್ತಾ ಅದರ ತಂತ್ರಕ್ಕೆ ಸೇರದ ಬದನಿಕೆಗಳು ಬೆಳೆಯುವುದುಂಟು. ನಮ್ಮ ಮನಸ್ಸು ಇಂದ್ರಿಯ ಸುಖಗಳ ಬೆನ್ನಟ್ಟಿ ಮುಂದೆ ಸಾಗುತ್ತಾ ಹಿಂಬದಿಯಲ್ಲಿ ಬೆಳಗುತ್ತಿರುವ ಜೀವದ ಆಶಯವನ್ನು ಮರೆತು ಬೆಳೆಯ ತೊಡಗಿದಾಗ ಪಾರತಂತ್ರ್ಯ. ಸ್ವಾತಂತ್ರ್ಯದ ವಿಸ್ಮರಣೆ. ಚಂಚಲವಾದ ಮನೋಬುದ್ಧಿ, ಇಂದ್ರಿಯಗಳು ಹೀಗೆ ದಾರಿತಪ್ಪಬಾರದು. ಅವು ತಮ್ಮ ಸಹಜವಾದ ತಂತ್ರದಲ್ಲಿ ವಿಕಾಸವಾಗುವಂತಾಗಬೇಕು. ಜೀವಲೋಕವೆಲ್ಲವೂ ತನ್ನ ಸಹಜಾವಸ್ಥೆಯಾದ ಸುಖ ಶಾಂತಿ ನೆಮ್ಮದಿಗಳಿಂದ ಬಾಳುವಂತಾಗಬೇಕು ಎಂಬುದು ನಮ್ಮ ಮಹರ್ಷಿಗಳ ಆಶಯ. ಜೀವಲೋಕದ ಮೇಲಿನ ಕರುಣೆಯಿಂದಲೇ ಅವರು ಅಂತಹ ಸ್ವಾತಂತ್ರ್ಯದಿಂದ ಬಾಳುವ ಜೀವನ ವಿಧಾನವನ್ನು ಈ ನಾಡಿನಲ್ಲಿ ರೂಪಿಸಿದರು. ಜೀವನದುದ್ದಕ್ಕೂ ಸ್ವ-ತಂತ್ರ ಮರೆಯಾಗಬಾರದು. ಆ ಆನಂದರಸವು ಅನವರತವೂ, ವಿಕಾಸದ ಹಾದಿಯಲ್ಲೆಲ್ಲ ಹರಿದು ಬರಬೇಕು. ಅದಕ್ಕೆ ಸಹಕಾರಿಯಾಗುವ “ವಿಧಿ” ಗಳನ್ನು ಆಚರಣೆಗೆ ತಂದರು. ಅದಕ್ಕೆ ಪ್ರತಿಬಂಧಕವಾದುದನ್ನು ನಿಷೇಧ ಮಾಡಿದರು. ಇದು ಈ ನಾಡಿನ ಜ್ಞಾನಿಗಳ ಸ್ವಾತಂತ್ರ್ಯದ ಬಗೆಗಿನ ನೋಟ.

ಇಂತಹ ಜೀವನ ವಿಧಾನದಲ್ಲಿ ಬಾಳಿ ಜೀವನದ ಪರಮ ಸುಖವನ್ನು ಎಲ್ಲರೂ ಅನುಭವಿಸುವಂತೆ ಇಲ್ಲಿ ರಾಷ್ಟ್ರ ವ್ಯವಸ್ಥೆಯನ್ನು ತಂದರು. ಎಲ್ಲರೂ ಸ್ವ-ತಂತ್ರದಿಂದ ಬಾಳಲು ಅನುಕೂಲವಾದ ವಾತಾವರಣ ಸಮಾಜದಲ್ಲಿ ಇರುವಂತೆ ನೋಡಿಕೊಳ್ಳುವವನು ರಾಜನಾದನು. ಅವನು ಸ್ವತಃ ಆತ್ಮರಾಜ್ಯವನ್ನು ಒಳಗೆ ಅನುಭವಿಸಿದವನು. ಹೊರಗೂ ಎಲ್ಲ ಪ್ರಜೆಗಳೂ ಅದನ್ನು ಅನುಭವಿಸಲು ಅನುವಾಗುವಂತೆ ನಿಯಮನ ಮಾಡುವವನು.ಈ ಜೀವನ ವಿಧಾನವನ್ನು ಮುರಿದು ಅಶಾಂತಿ ಹರಡುವ ದುಷ್ಟರನ್ನು ದಂಡಿಸಿ, ವ್ಯವಸ್ಥೆ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುವ ಸ್ವಾಮಿಯಾದನು. “ರಾಜ” ಎಂದರೆ ಬೆಳಗುವವನು. ಒಳಗೇ ಎಲ್ಲ ಜೀವಿಗಳಲ್ಲಿ ಬೆಳಗುತ್ತಿರುವ, ಎಲ್ಲರನ್ನೂ ನಿಯಮನ ಮಾಡುತ್ತಿರುವ ಪರಂಜ್ಯೋತಿಯ ಪ್ರತಿನಿಧಿ. ಅಂತಹ ಶ್ರೇಷ್ಠ ರಾಜಪರಂಪರೆಯನ್ನೇ ಬೆಳೆಸಿದ ವೈಭವದ ನಾಡು ನಮ್ಮದು.

ಸುಶಿಕ್ಷಿತವಾದ ಮನಸ್ಸೇ ಸ್ವತಂತ್ರಕ್ಕೆ ಸಹಕಾರಿಯಾದ ಶಿಸ್ತನ್ನು ರೂಪಿಸಿಕೊಳ್ಳುತ್ತದೆ. ಹಾಗೆ ಮಾಡುವ ಎಲ್ಲ ಕಟ್ಟುಪಾಡುಗಳೂ ಸ್ವಾತಂತ್ರ್ಯ ರಕ್ಷಣೆಗೆ ಸೇರುವಂತಹವು. ಬರಿಯ ಸ್ವೇಚ್ಚೆ ಸ್ವಾತಂತ್ರ್ಯವಲ್ಲ. ಆ ಇಚ್ಛೆ ಮಹರ್ಷಿಗಳು ಕಂಡುಕೊಂಡ ನಿಜವಾದ ನಮ್ಮ ತಂತ್ರಕ್ಕೆ ಅನುಗುಣವಾಗಿದ್ದರೆ ಮಾತ್ರವೇ ಸ್ವಾತಂತ್ರ್ಯವಾಗಬಲ್ಲುದು. ರಸ್ತೆಯ ಎಡಭಾಗದಲ್ಲಿ ವಾಹನ ಚಲಿಸಬೇಕು ಎಂಬ ನಿಯಮ ನಮ್ಮ ಜೀವ ಹಿತಕ್ಕಾಗಿ ಬಂದಿರುವುದು. ಅಂತಹ ನಿಯಮ ಪಾಲನೆ ಸ್ವಾತಂತ್ರ್ಯಕ್ಕೆ ಅಡ್ಡಿ ಅಲ್ಲ. ಬದಲಿಗೆ ಪೂರಕ. ನಮಗೆ ಬಲ ಭಾಗದಲ್ಲಿ ಸಂಚರಿಸಬೇಕೆಂಬ ಇಚ್ಛೆ ಬಂದರೆ ಅದು ನಮ್ಮನ್ನೂ, ಎದುರು ಬರುವವರನ್ನೂ ಬಲಿತೆಗೆದುಕೊಳ್ಳಬಹುದು. ಹೀಗೆಯೇ ನಮ್ಮ ಇಹ ಪರಗಳ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹರ್ಷಿಗಳು ತಂದ ಜೀವನ ವಿಧಾನ, ಆಚಾರ ವಿಚಾರಗಳು, ವಿಧಿ-ನಿಷೇಧಗಳು ಎಲ್ಲವೂ ಸ್ವಾತಂತ್ರ್ಯಕ್ಕೆ ಪೂರಕ. ಅಂತಹ ನಿಜವಾದ ಸ್ವಾತಂತ್ರ್ಯದಲ್ಲಿ ನಾವೆಲ್ಲಾ ರಮಿಸುವಂತಾದರೆ ಅದೇ ಈ ದೇಶದ ಮಹರ್ಷಿಗಳಿಗೆ ನಾವು ಅರ್ಪಿಸುವ ಕೃತಜ್ಞತೆ.    

ಸೂಚನೆ: 13/02/2020 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿಯ ಅಂಕಣದಲ್ಲಿ ಪ್ರಕಟವಾಗಿದೆ.