Wednesday, February 5, 2020

ಗುರುವಿಗೆ ಗುಲಾಮನಾಗಬೇಕೆ? (Guruvige gulaamanaagabeke?)

ಲೇಖಕರು:  ಶ್ರೀ. ಕೆ. ಎಸ. ರಾಜಗೋಪಾಲನ್.
(ಪ್ರತಿಕ್ರಿಯಿಸಿರಿ : lekhana@ayvm.in)



“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ, ಪುರಂದರದಾಸರು. ವಿಚಾರವಾದಿಗಳೆನಿಸಿಕೊಂಡ ಒಬ್ಬರು “ಇದೊಂದು ದಾಸ್ಯ ಪ್ರವೃತ್ತಿ; ಗುರುವಿಗೆ ಗುಲಾಮನಾಗಿಹ ತನಕ ಎಂದು ಬದಲಿಸಿಕೊಳ್ಳಿ” ಎಂದಿದ್ದರು.

ಸ್ವತಂತ್ರವಾಗಿರುವುದು ಸುಖ ಎಂದು ಎಲ್ಲ ಜೀವಿಗಳಿಗೂ ಅನ್ನಿಸುವುದು ಸಹಜವೇ ಆಗಿದೆ. ಆದರೆ ಇಲ್ಲಿ ಹೇಳಿರುವ ಗುರು ಯಾರು? ಎಂದು ಅರಿವಾದರಷ್ಟೆ ಮುಂದಿನ ಚಿಂತನೆಗೆ ದಾರಿಯಾಗುತ್ತದೆ.

ಲೋಕದಲ್ಲಿ ಒಂದು ಹೊಳೆಯನ್ನು ದಾಟಿ ಮತ್ತೊಂದು ಊರಿಗೆ ಪ್ರಯಾಣ ಮಾಡುವಾಗ ದೋಣಿಯಲ್ಲಿ ಕುಳಿತು ಪ್ರಯಾಣ ಮಾಡುವುದುಂಟು. ಬಹುಮಟ್ಟಿಗೆ ಹೇಳುವುದಾದರೆ,  ಪ್ರಯಾಣಿಕರಿಗೆ ದೋಣಿಯನ್ನು ಚಾಲನೆ ಮಾಡುವ ಕ್ರಮವೇ ಗೊತ್ತಿರುವುದಿಲ್ಲ. ಅಷ್ಟೇಕೆ? ಬಹಳ ದೂರ ಸಾಗಬೇಕಾದಾಗ, ತಾವು ಹೋಗುತ್ತಿರುವ ಮಾರ್ಗ ಸರಿಯಾಗಿಯೇ ಇದೆಯೇ ಇಲ್ಲವೇ ಎಂಬ ಅರಿವೂ ಇರದು. ಅಂಬಿಗನನ್ನು ನಂಬಿ ನಿಶ್ಚಿಂತರಾಗಿಯೇ ಜನಗಳು ಪ್ರಯಾಣಿಸುತ್ತಿರುತ್ತಾರೆ. ಇಂತಹ ಪ್ರಯಾಣಿಕರನ್ನು ಕುರಿತು “ನಾವಿಕನಿಗೆ ನಿಮ್ಮನ್ನು ಒಪ್ಪಿಸಿಕೊಂಡು ಪ್ರಯಾಣಿಸುವುದು ಗುಲಾಮಗಿರಿಯ ಸಂಕೇತವಲ್ಲವೇ” ಎಂದು ಯಾರೂ ಪ್ರಶ್ನಿಸುವುದಿಲ್ಲ.

ಅಂತೆಯೇ ಈ ಭವಸಾಗರವನ್ನು ದಾಟಿಸಲು ಸಮರ್ಥನಾದ ಗುರುವೊಬ್ಬನಿದ್ದು, ಅವನಿಗೆ ನಮ್ಮನ್ನು ಒಪ್ಪಿಸಿಕೊಂಡಲ್ಲಿ ಅದು ಸಾಧುವಾದದ್ದೇ. ಆದರೆ, ಗುರುವನ್ನು ನಂಬುವ ಮುಂಚೆ ಚೆನ್ನಾಗಿ  ಪರೀಕ್ಷಿಸಬೇಕು. ಸೂಕ್ತರೀತಿಯಲ್ಲಿ ಪರೀಕ್ಷಿಸಿ ಒಮ್ಮೆ ಗುರುವನ್ನು ನಂಬಿದ ಬಳಿಕ, ಪದೇ ಪದೇ ಗುರುವನ್ನು ಸಂದೇಹಿಸಬಾರದು. ಆಗಷ್ಟೇ ಅಧ್ಯಾತ್ಮಮಾರ್ಗದಲ್ಲಿ ನಮ್ಮ ಪ್ರಯಾಣ ನೆಮ್ಮದಿಯಾಗಿರಬಲ್ಲದು.

ಸಾಧನೆಗೆ ಯತ್ನಿಸಿದಾಗಷ್ಟೆ ತಿಳಿಯುತ್ತದೆ, ಏಕಾಗ್ರತೆಯನ್ನು ಸಿದ್ಧಿಸಿಕೊಳ್ಳುವುದು ಎಷ್ಟು ಕಷ್ಟವೆಂದು. ಇಂತಹ ಸಂದರ್ಭದಲ್ಲೇ ನಮಗೆ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಗುರುವು ತನ್ನಲ್ಲಿ ಶಿಷ್ಯನು ಸಮರ್ಪಿಸಿದ ಭಕ್ತಿಗೌರವಗಳನ್ನು --ಇದು ತನಗೆಂದು ಭಾವಿಸದೇ ಅವುಗಳನ್ನು ಭಗವಂತನಿಗೆ ತಲುಪಿಸುವ ದ್ವಾರವಷ್ಟೇ ಆಗುತ್ತಾನೆ. ಆದ್ದರಿಂದ ಶಿಷ್ಯನು ಗುರುವಿಗೆ ಮಾಡುವ ನಮಸ್ಕಾರವೋ, ಪೂಜೆಯೋ, ಭಗವಂತನಿಗೇ ಸಲ್ಲುತ್ತದೆ. ನಿಜವಾದ ಗುರುವಿನ ಯೋಗ್ಯತೆ ಹೀಗಿರುವುದರಿಂದಲೇ ಶಂಕರ ಭಗವತ್ಪಾದರು, “ಗುರುವಿನ ಚರಣಾಂಬುಜದಲ್ಲಿ ದೃಢವಾದ ಭಕ್ತಿಯನ್ನು ಹೊಂದಿದವನಾದರೆ, ಸಂಸಾರದಿಂದ ಶೀಘ್ರವಾಗಿ ಮುಕ್ತಿಯನ್ನು ಪಡೆಯುವೆ. ಇಂದ್ರಿಯ ಮನಸ್ಸುಗಳನ್ನು ನಿಯಮದಿಂದ ಇರಿಸಿಕೊಂಡರೆ ನಿನ್ನ ಹೃದಯದಲ್ಲಿಯೇ ದೇವನನ್ನು ನೋಡುವೆ” ಎನ್ನುತ್ತಾರೆ, ಭಜಗೋವಿಂದ ಸ್ತೋತ್ರದಲ್ಲಿ.

ಗುರುವು, ನೋಡಲು ನಮ್ಮಂತೆಯೇ ಕಂಡರೂ ಅಂತರಂಗದಲ್ಲಿ ಭಗವಂತನನ್ನು ಕಂಡು, ಇತರರಿಗೂ ಅದನ್ನು ತೋರಬಲ್ಲ ವಿಧಾನವರಿತವನು. ಎಂತಹ ವಿಜ್ಞಾನಿಯಾದರೂ ಹೊರನೋಟಕ್ಕೆ ನಮ್ಮಂತೆಯೇ ಕಾಣುವ ವ್ಯಕ್ತಿಯಷ್ಟೆ. ಆದರೆ ಜಗತ್ತಿನಲ್ಲೇ ಒಂದು ಅದ್ಭುತ ಪವಾಡವೆನಿಸುವಂತಹ ಕಾರ್ಯಗಳನ್ನು ಮಾಡಬಲ್ಲ ಮೇಧಾಶಕ್ತಿಯಿಂದ ಅವನ ಮನಸ್ಸು ಕೂಡಿರುತ್ತದೆಯಲ್ಲವೇ!

ಸದ್ಗುರುವಿನ ಸಾಮರ್ಥ್ಯದ ಬಗ್ಗೆ ಶ್ರೀರಂಗ ಮಹಾಗುರುಗಳು ನುಡಿದಿರುವುದು ಇಲ್ಲಿ ಸ್ಮರಣೀಯ. “ಕಾಡಿನಲ್ಲಿ ಯಥೇಚ್ಛವಾಗಿ ಓಡಾಡುತ್ತಿರುವ ಮದಿಸಿದ ಆನೆಯನ್ನಾದರೂ ಕಟ್ಟಬಹುದು. ಆದರೆ ಮನಸ್ಸನ್ನು ಕಟ್ಟಿಹಾಕುವುದು ಕಷ್ಟ. ಆದರೆ ಕುಮಕಿ(ಪಳಗಿದ) ಆನೆಯ ಸಹಾಯವಿದ್ದರೆ, ಆ ಮದಿಸಿದ ಆನೆಯನ್ನೂ ಪಳಗಿಸಬಹುದಲ್ಲವೇ! ಹಾಗೆಯೇ ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ!”. ಆದರ್ಶ ಸದ್ಗುರುವಿನ ಗುಲಾಮರಾಗಬೇಕೆಂದು ಆಶಿಸೋಣ.  


ಸೂಚನೆ:  04/02/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ