ಧರ್ಮಾತ್ ಅರ್ಥಃ ಪ್ರಭವತೇ ಧರ್ಮಾತ್ ಪ್ರಭವತೇ ಸುಖಮ್ |
ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ || ರಾಮಾಯಣ-೩.೯.೩೦
ಅರ್ಥ- ಧರ್ಮದಿಂದ ಅರ್ಥವು ಹುಟ್ಟುತ್ತದೆ. ಧರ್ಮದಿಂದ ಸುಖವು ಹುಟ್ಟುತ್ತದೆ. ಧರ್ಮದಿಂದ ಎಲ್ಲವೂ ಲಭಿಸುತ್ತದೆ. ಈ ಜಗತ್ತು ಧರ್ಮದ ಸಾರವಾಗಿದೆ.
ವಿವರಣೆ-ಈ ಜಗತ್ತೇ ಧರ್ಮದ ಸಾರ ಎಂದು ಹೇಳಿರುವುದರಿಂದ ಧರ್ಮಕ್ಕೆ ಅಷ್ಟು ಪ್ರಾಧಾನ್ಯ ಬಂತು. ಧರ್ಮ ಎಂಬ ಪದವು ಸಂಸ್ಕೃತದ 'ಧೃಞ್ ಧಾರಣಪೋಷಣಯೋಃ' ಎಂಬ ಮೂಲದಿಂದ ಬಂದಿದೆ. ಯಾವುದು ಎಲ್ಲವನ್ನು ಧರಿಸುವುದೋ ಮತ್ತು ಎಲ್ಲವನ್ನು ಪೋಷಿಸುವುದೋ ಅದಕ್ಕೆ ಧರ್ಮ ಎಂದು ಕರೆಯುತ್ತಾರೆ. ಈ ಜಗತ್ತನ್ನು ಧರ್ಮವು ಧರಿಸಿ ಪೋಷಿಸುವುದರಿಂದ ಧರ್ಮವೇ ಎಲ್ಲವೂ ಆಗಿದೆ. ಅದನ್ನೇ ಧರ್ಮ ಎಂಬ ಪದಕ್ಕೆ ಮೂಲತಃ ಭಗವಂತ ಎಂಬ ಅರ್ಥವನ್ನು ಶ್ರೀರಂಗ ಮಹಾಗುರುಗಳು ವಿಶೇಷವಾಗಿ ನೀಡಿದ್ದಾರೆ. ನಿಜವಾಗಿ ಧರ್ಮ ಎಂಬ ಪದವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಉಳಿದ ವಿಷಯ ಅರ್ಥವಾಗುತ್ತದೆ.
ಭಗವಂತನಿಂದಲೇ ಸೃಷ್ಟವಾದ ಈ ಜಗತ್ತು ಅವನಿಂದಲೇ ಧರಿಸಲ್ಪಟ್ಟಿದೆ. ಆದ್ದರಿಂದ ಈ ಜಗತ್ತಿಗೆ ಅವನೇ ಪೋಷಕ ಎಂದರೆ ಅದರಲ್ಲಿ ಸೊಗಸು ಇದೆ. ಅರ್ಥ ಎಂಬ ಪದಕ್ಕೆ ಪದಾರ್ಥ ಅಥವಾ ವಸ್ತು ಎಂಬ ಅರ್ಥವನ್ನು ಇಲ್ಲಿ ಇಟ್ಟುಕೊಳ್ಳಬೇಕು. ಈ ನೇರದಲ್ಲಿ ಧರ್ಮದಿಂದ ಅರ್ಥವು ಹುಟ್ಟಿದೆ ಎಂಬ ವಾಕ್ಯಕ್ಕೆ ಭಗವಂತನಿಂದ ಈ ವಿಶಾಲವಾದ ಅರ್ಥರೂಪ ಪ್ರಪಂಚವು ಸೃಷ್ಟಿಯಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಮತ್ತು ಜೀವನದಲ್ಲಿ ಭಗವಂತನೇ ಸರ್ವಸ್ವ ಎಂದು ತಿಳಿದು ಸಾಗಿದಾಗ ಜೀವನಕ್ಕೆ ಒಂದು ಅರ್ಥ (ಸಾರ್ಥಕತೆ) ಸಿಗುವುದು. ಹೀಗೆ 'ಧರ್ಮ' ಎಂಬ ಪದಕ್ಕೆ ಸದಾಚಾರ, ಭಗವಂತನನ್ನು ಪಡೆಯಲು ಇರುವ ಸಾಧನ ಎಂಬೆಲ್ಲಾ ಅರ್ಥಗಳು ಇವೆ. ಆದರೂ ಧರ್ಮಪದಕ್ಕೆ ಭಗವಂತ ಎಂಬ ಅರ್ಥವನ್ನು ಇಟ್ಟುಕೊಂಡಾಗ ಮಾತ್ರ ಈ ಸೂಕ್ತಿಯು ಅರ್ಥವಾಗುತ್ತದೆ. "ಭಗವಂತನಿಂದ ಅರ್ಥಪ್ರಪಂಚವು ಹುಟ್ಟಿದೆ. ಭಗವಂತನಿಂದಲೇ ಸುಖವೂ ಲಭಿಸುತ್ತದೆ. ಆದ್ದರಿಂದ ಭಗವಂತನೇ ಸರ್ವಸ್ವ ಮತ್ತು ಈ ಸೃಷ್ಟಿ ಭಗವಂತ ಸಾರ" ಎಂಬ ಗಂಭೀರವಾದ ಅರ್ಥವು ಸಿಗುತ್ತದೆ.