ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಉಡುಗೊರೆಗಳ ಕೊಡುವವರ ಸಡಗರಗಳು
ವೃಷ್ಣಿ-ಅಂಧಕ-ವಂಶಗಳ ವೀರರು ಅಲ್ಲಿ ಬಂದು ಸೇರಿದ್ದರಷ್ಟೆ. ಅವರಲ್ಲಿ ಕೆಲವರನ್ನು ಗುರುವಿನಂತೆಯೂ ಕೆಲವರನ್ನು ಸ್ನೇಹಿತರಂತೆಯೂ ಯುಧಿಷ್ಠಿರನು ಸ್ವಾಗತಿಸಿದನು. ಕೆಲವರಿಗೆ ತಾನೇ ಅಭಿವಾದನ ಮಾಡಿದನು. ಮತ್ತೆ ಕೆಲವರು ಆತನಿಗೆ ಅಭಿವಾದನ ಮಾಡಿದರು. ವಧುವಾದ ಸುಭದ್ರೆಗಾಗಿ ಉತ್ತಮವಾದ ಧನವನ್ನು ಕೃಷ್ಣನು ಈಗಿತ್ತನು.
ಕಿಂಕಿಣಿಗಳಿಂದಲೂ ಜಾಲಗಳಿಂದಲೂ ಒಪ್ಪುವ ಸುವರ್ಣ-ಖಚಿತವಾದ ಸಾವಿರ ರಥಗಳು, ಅವೊಂದೊಂದಕ್ಕೂ ನಾಲ್ಕು ನಾಲ್ಕು ಕುದುರೆಗಳು, ಅವಕ್ಕೆ ಚೆನ್ನಾಗಿ ಶಿಕ್ಷಿತರಾಗಿದ್ದ ಸೂತರು – ಇವನ್ನು ಕೃಷ್ಣನು ಬಳುವಳಿಯಾಗಿತ್ತನು.
ಜೊತೆಗೆ, ಚೆನ್ನಾಗಿ ಹಾಲ್ಕರೆಯುವ ಹಾಗೂ ತೇಜಶ್ಶಾಲಿಗಳಾದ, ಮತ್ತು ಮಥುರೆಯಿಂದ ಬಂದ, ಹತ್ತು ಸಾವಿರ ಗೋವುಗಳನ್ನೂ ಇತ್ತನು. ಅಲ್ಲದೆ, ಚಂದ್ರನ ಕಿರಣಗಳ ಹಾಗೆ ಹೊಳೆಯುವ ಬಿಳಿ ಬಣ್ಣದ ಶುದ್ಧಜಾತಿಯ ಕುದುರೆಗಳು - ಬಂಗಾರದಿಂದ ಅಲಂಕಾರಗೊಂಡಿರತಕ್ಕವು - ಅವನ್ನೂ ಇತ್ತನು. ಇವಲ್ಲದೆ, ಕಪ್ಪುಗೂದಲಿನ ಐನೂರು ಅಶ್ವತರಗಳು, ಎಂದರೆ ಹೇಸರಗತ್ತೆಗಳು, ಹಾಗೂ ಬಿಳಿಕೂದಲಿನ ಐನೂರು ಹೇಸರಗತ್ತೆಗಳು – ಇವನ್ನೂ ಕೊಟ್ಟನು; ಅವುಗಳೆಲ್ಲವೂ ವಾಯುವೇಗದಲ್ಲಿ ಓಡತಕ್ಕವೂ, ಹಾಗೂ ಹೇಳಿದಂತೆ ಕೇಳತಕ್ಕವೂ ಆಗಿದ್ದವು.
ಇದಲ್ಲದೆ ಒಂದು ಸಾವಿರ ಕನ್ಯೆಯರನ್ನೂ ಕೊಟ್ಟನು; ಮತ್ತು ಅವರಾದರೂ ಸ್ನಾನ-ಪಾನ-ಉತ್ಸವಗಳಲ್ಲಿ ಬಳಕೆಗೆ ಬರತಕ್ಕವರು. ವಯಸ್ಸಿಗೆ ಬಂದವರು. ಒಳ್ಳೆಯ ವೇಷದಿಂದ ಕೂಡಿರತಕ್ಕವರು, ಬೆಳ್ಳಗಿರುವವರು. ಹಾಗೂ ಕಾಂತಿ-ಸಂಪನ್ನರು, ನೂರು ನೂರು ಚಿನ್ನದ ಮಣಿಗಳಿಂದ ಕೂಡಿದ ಹಾರಗಳನ್ನು ಧರಿಸಿರುವವರು, ಮೈಮೇಲೆ ರೋಮಗಳಿಲ್ಲದವರು, ಚೆನ್ನಾಗಿ ಅಲಂಕಾರ ಮಾಡಿಕೊಂಡಿರುವವರು, ಹಾಗೂ ಸೇವಾ-ಕಾರ್ಯಗಳಲ್ಲಿ ದಕ್ಷರಾಗಿರತಕ್ಕವರು; ಇಂತಹವರನ್ನನ್ನಿತ್ತನು.
ಹಾಗೆಯೇ ಕನ್ಯಾ-ಧನವಾಗಿಯೇ, ಬಾಹ್ಲೀಕದೇಶದ ಒಂದು ಲಕ್ಷ ಕುದುರೆಗಳು, ಸವಾರಿಯನ್ನು ಜೋಡಿಸಿಯಾಗಿರತಕ್ಕವು - ಅವನ್ನೂ ಕೊಟ್ಟನು. ಅಲ್ಲದೆ ಕೃತ ಮತ್ತು ಅಕೃತಗಳಾದ, ಎಂದರೆ ಕೃತ್ರಿಮ ಹಾಗೂ ಸಹಜಗಳಾದ, ಆದರೆ ಅಗ್ನಿಯಂತೆ ಕಂಗೊಳಿಸುವ, ಮನುಷ್ಯತೂಕದ ಹತ್ತು ಸುವರ್ಣರಾಶಿಗಳನ್ನೂ ಕೃಷ್ಣನು ಕೊಟ್ಟನು.
ಇನ್ನು ಬಲರಾಮನು ಒಂದು ಸಾವಿರ ಆನೆಗಳನ್ನು ಕೊಟ್ಟನು. ಅವಾದರೂ ಮೂರೆಡೆಗಳಲ್ಲಿ ಮದಜಲವನ್ನು ಸುರಿಸತಕ್ಕವು. ಪರ್ವತ-ಶಿಖರದಂತೆ ಎತ್ತರದ ನಿಲುವುಳ್ಳವು. ಯುದ್ಧಗಳಲ್ಲಿ ಎಂದೂ ಹಿಂದಿರುಗವು. ಅವುಗಳಿಗೆ ಕಟ್ಟಿದ್ದ ಘಂಟೆಗಳು ಸುಲಕ್ಷಣವಾಗಿದ್ದವು, ಸುಂದರವಾಗಿದ್ದವು, ಕನಕ-ಹಾರಗಳನ್ನು ಹೊಂದಿದ್ದವು; ಹಾಗೂ ಆ ಆನೆಗಳಷ್ಟನ್ನೂ ಹಲ-ಧರನು, ಎಂದರೆ ಬಲರಾಮನು, ಪಾಣಿ-ಗ್ರಹಣಿಕವಾಗಿ, ಎಂದರೆ ವೈವಾಹಿಕವಾದ ಉಡುಗೊರೆಯಾಗಿ, ಅರ್ಜುನನಿಗಿತ್ತನು. ಈ ಸಂಬಂಧವು ತನಗೂ ಒಪ್ಪಿಗೆ - ಎಂಬುದನ್ನು ಈ ಮೂಲಕ ಸೂಚಿಸಿದನು.
ನದಿಗಳ ನೀರುಗಳೆಲ್ಲ ಸಮುದ್ರವನ್ನು ಬಂದು ಸೇರುವುವು, ಅಲ್ಲವೆ? ಹಾಗೆ ಇಲ್ಲೂ ಆಯಿತು. ಮಹಾಧನಗಳು ಹಾಗೂ ರತ್ನಗಳೇ ಪ್ರವಾಹ; ವಸ್ತ್ರಗಳು ಹಾಗೂ ಕಂಬಳಿಗಳೇ ನೊರೆಗಳು; ಮಹಾಗಜಗಳೇ ದೊಡ್ಡ ಮೊಸಳೆಗಳು; ಪತಾಕೆಗಳೇ ಪಾಚಿಗಳು - ಈ ಪ್ರಕಾರವಾಗಿ ಇವೆಲ್ಲವೂ ಬಂದು ಪಾಂಡವನೆಂಬ ಸಾಗರವನ್ನುಸೇರಿದವು. ಮೊದಲೇ ತುಂಬಿದ್ದುದನ್ನು ಮತ್ತೂ ತುಂಬಿಸಿದವು.
ಆದರೆ ಇದೆಲ್ಲವೂ ಶತ್ರುಗಳಿಗೆ ಶೋಕ-ಪ್ರದವಾಗಿದ್ದಿತು. ಧರ್ಮರಾಜನಾದ ಯುಧಿಷ್ಠಿರನು ಅದೆಲ್ಲವನ್ನೂ ಸ್ವೀಕರಿಸಿದನು. ವೃಷ್ಣಿ-ಅಂಧಕ-ವಂಶಗಳ ಮಹಾರಥರನ್ನು ಆದರಿಸಿದನು.
ಪುಣ್ಯಶಾಲಿಗಳಾದ ಮನುಷ್ಯರು ದೇವಲೋಕದಲ್ಲಿ ಯಾವ ರೀತಿ ಸಂತೋಷದಿಂದ ವಿಹರಿಸುವರೂ, ಅದೇ ಬಗೆಯಲ್ಲಿ ಇಲ್ಲಿ ಕುರುವಂಶ-ವೃಷ್ಣಿವಂಶ-ಅಂಧಕವಂಶಗಳ ವೀರರು ವಿಹರಿಸಿದರು.