Saturday, October 27, 2018

ಅವತಾರ (Avatara)


ಶ್ರೀರಾಮ ಮತ್ತು ಶ್ರೀಕೃಷ್ಣ ಹಾಗೂ ಇನ್ನೂ ಅನೇಕ ಮಹಾಪುರುಷರನ್ನು ಅವತಾರಪುರುಷರೆಂದು ಆರಾಧಿಸುವ ಪರಂಪರೆ ನಮ್ಮ ದೇಶದಲ್ಲಿದೆ.ಅವರ ಪುಣ್ಯಕಥೆಗಳನ್ನು ಪುನಃಪುನಃ ಕೇಳಿ ಧನ್ಯರಾಗಬೇಕೆಂದು ಬಯಸುವ ಭಕ್ತರೂ ಅಸಂಖ್ಯ. ಒಟ್ಟಾರೆ ಅವತಾರದ ಪರಿಕಲ್ಪನೆಯು ನಮ್ಮ ಭಾರತೀಯ ಜೀವನದ ಒಂದು ಅವಿಭಾಜ್ಯ ಅಂಗ.

ಆದರೆ ಅವತಾರದ ಯತಾರ್ಥತೆಯ ಬಗ್ಗೆಯೇ  ಪ್ರಶ್ನೆಗಳೂ ಇಲ್ಲದಿಲ್ಲ. 

1.ವಿಶ್ವವ್ಯಾಪಕನಾದ ದೇವರಿಗೆ ಅವತಾರವೆನ್ನುವುದು ಸರಿಯಲ್ಲ.ಅವತರಿಸುವುದು ಎಂದರೆ ಇಳಿದುಬರುವುದು ಎಂದರ್ಥ.ಹಾಗೆ ಇಳಿದುಬಂದರೆ ಅವನು ಹಿಂದೆ ಇದ್ದ ಜಾಗವು ಬರಿದಾಗುವುದೇ? ಅವನು ಇಲ್ಲದ ಜಾಗವೇ ಇಲ್ಲ.ಆಗ ಅವನು ಒಂದೆಡೆಯಿಂದ ಇನ್ನೊಂದೆಡೆಗೆ ಇಳಿದುಬರುವುದು ಎಂದರೆ ಅರ್ಥಹೀನವಲ್ಲವೇ? ಹಾಗಾಗಿ ಭಗವಂತನಿಗೆ ಆಗಮನ ನಿರ್ಗಮನಗಳಿಲ್ಲ.

2.ಅವತಾರವೆಂದರೆ ಮನುಷ್ಯ ಇತ್ಯಾದಿ ಜನ್ಮಗಳನ್ನು ತಾಳುವುದು.ಆದರೆ ಹಾಗೆ ಹೇಳುವುದು ಭಾರತೀಯ ಶಾಸ್ತ್ರಚಿಂತನೆಗೇ ವಿರುದ್ಧವಾದದ್ದು.ಏಕೆಂದರೆ ಹುಟ್ಟು-ಸಾವುಗಳು ವಿಕಾರಗಳು.ಅವತಾರವಾದವನ್ನು ಒಪ್ಪಿದರೆ ಭಗವಂತನಿಗೆ ವಿಕಾರವನ್ನು ಆರೋಪಿಸಿದಂತಾಗುತ್ತದೆ.ಅದು ಸರಿಯಲ್ಲ.ಅವಿಕಾರಾಯ ಶುದ್ಧಾಯ ಎಂದು ಅವನನ್ನು ಸ್ತುತಿಸುತ್ತೇವೆ.

3.ಭಗವಂತನು ಎಲ್ಲರೊಳಗೂ ಇರುವ ಅಂತರ್ಯಾಮಿ.ಆದ್ದರಿಂದ ದುಷ್ಟನಿಗ್ರಹ,ಅಧರ್ಮದ ನಾಶವನ್ನು ಅವತರಿಸಿಯೇ ಮಾಡಬೇಕೆಂದಿಲ್ಲ.ಅವನು ಸರ್ವಶಕ್ತ,ಸರ್ವಜ್ಞ.ಒಳಗಿನಿಂದಲೇ ದುಷ್ಟರ ಬುದ್ಧಿಯಲ್ಲಿ ಪರಿವರ್ತನೆ ತರಬಲ್ಲ.ಆದ್ದರಿಂದ ಅವತಾರದ ಆವಶ್ಯಕತೆಯೇ ಇಲ್ಲವಲ್ಲ ?.

4.ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ಆದರ್ಶ ಮಾನವರೆಂದು ಗೌರವಿಸಿ ಅನುಸರಿಸಿದರೆ ಸಾಲದೇ? ಎನ್ನುವುದು ಕೆಲವರ ವಾದ.

 ಆದರೆ ದೈವತ್ವವನ್ನು ಅಳೆಯಲು ಅತೀಂದ್ರಿಯ ದೃಷ್ಟಿ ಬೇಕು ಎನ್ನುವುದು ಋಷಿಗಳ ಅನುಭವಾತ್ಮಕವಾದ ನಿರ್ಣಯ. “ದೃಶ್ಯತೇ ಜ್ಞಾನಚಕ್ಷುರ್ಭಿಃ ತಪಶ್ಚಕ್ಷುರ್ಭಿರೇವಚ,,,,” ಜೊತೆಗೆ, ಪ್ರತ್ಯಕ್ಷಾನುಭವ,ಯುಕ್ತಿ-ತರ್ಕ ಮತ್ತು ಆಪ್ತವಾಕ್ಯ (ಅನುಭವಿಗಳ ನೈಜಕಥನ) ಇವುಗಳನ್ನು ಆಧರಿಸಿಯೇ ನಾವು ನಿಜವನ್ನು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ.

ಅವತಾರದ ವಿಷಯದಲ್ಲಿ ಜ್ಞಾನಿಗಳ ಅನುಭವದ ಗಾಥೆಯನ್ನೂ,ಆ ಅನುಭವಕ್ಕೆ ಹೊಂದುವ ಯುಕ್ತಿಯನ್ನೂ, ಇವೆರಡನ್ನೂ ಆಧರಿಸಿರುವ ಆಪ್ತ(ಸತ್ಯ)ವಚನಗಳನ್ನೂ ಭಾರತೀಯ ಸಾಹಿತ್ಯದಲ್ಲಿ ವಿಪುಲವಾಗಿ ಕಾಣುತ್ತೇವೆ.ಜೊತೆಗೆ ಭಿನ್ನ ಭಿನ್ನ ಕಾಲ-ದೇಶಗಳಲ್ಲಿ ಅವತಾರಪುರುಷರ ದರ್ಶನಾದಿ ಅನುಭವಗಳು ಸಾಧಕರಲ್ಲಿ ಕಂಡುಬಂದಿರುವ ಇತಿಹಾಸ ಕೂಡ ಇದೆ.

ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತತಮವಾಗಿ ಮೇಲಿನ ಪ್ರಶ್ನೆಗಳ ಸಮಾಧಾನಕ್ಕೆ ಯತ್ನಿಸೋಣವಂತೆ. ಭಗವಂತನಿಗೆ ಪಾರಮಾರ್ಥಿಕವಾಗಿ ಏರಿಕೆ,ಇಳಿಕೆ ಯಾವುದೂ ಇಲ್ಲ. ಅವನು ಸರ್ವತ್ರ ಸದಾ ಪರಿಪೂರ್ಣನು.ಕರ್ಮಸಂಬಂಧದಿಂದ ಉಂಟಾಗುವ ಹುಟ್ಟೂ ಅವನಿಗೆ ವಾಸ್ತವವಾಗಿ ಇಲ್ಲ. ಅವನಿಗೆ ಅವತಾರವನ್ನು ಹೇಳಿರುವುದು ಔಪಚಾರಿಕ ಅರ್ಥದಲ್ಲಿ ಮಾತ್ರ.ಅವನು ತನ್ನ ಸಂಕಲ್ಪದಿಂದ ಇಲ್ಲಿ ಯಾವಾಗ ಜೀವಿಗಳಿಗೆ ವ್ಯಕ್ತಪಡುತ್ತಾನೆಯೋ ಆಗ ಅದು ಅವನ ‘ಅವತಾರ’ ಎಂದು ಕರೆಯಲಾಗಿದೆ.ಹೀಗೆ ಭಗವಂತನ ಅವತಾರವು ಅಭಿವ್ಯಕ್ತಿಯೇ ಹೊರತು ವಾಸ್ತವವಾದ ಇಳಿತವಲ್ಲವಾದ್ದರಿಂದ ಅವನ ಪೂರ್ಣತೆ ವ್ಯಾಪಕತೆಗಳಿಗೆ ವಿರೋಧವೇನೂ ಇಲ್ಲ.

ಹುಟ್ಟುಸಾವುಗಳನ್ನು ವಿಕಾರವೆಂದು ಕರೆಯುವ ಶಾಸ್ತ್ರಗಳು ಭಗವಂತನನ್ನು ಅಜಾಯಮಾನೋ ಬಹುಧಾ ವಿಜಾಯತೇ-ಅಂದರೆ ಹುಟ್ಟದೆಯೇ ಹುಟ್ಟುತ್ತಾನೆ ಎನ್ನುತ್ತವೆ. ಅಂದರೆ ಅವನು ತನ್ನ ಸಂಕಲ್ಪಕ್ಕೆ ಅನುಗುಣವಾಗಿ ಅಭಿವ್ಯಕ್ತನಾಗುತ್ತಾನೆಯೇ ಹೊರತು ಜನ್ಮಾಂತರದ ಕರ್ಮಗಳ ಕಾರಣದಿಂದಲ್ಲ. ಆದ್ದರಿಂದ ವಿಕಾರವೆಂಬುದು ಅವನಿಗೆ ಅನ್ವಯಿಸುವುದಿಲ್ಲ.

ಅಂತರ್ಯಾಮಿಯಾಗಿ ತನ್ನ ಸಂಕಲ್ಪವನ್ನು ಪೂರೈಸಿಕೊಳ್ಳುವುದು ಸರ್ವಶಕ್ತನಾದ ಅವನಿಗೆ ಅಸಾಧ್ಯವೇನಲ್ಲ. ಹಾಗೆಂದು ಭಕ್ತರ ಅಂತರ್ಬಾಹ್ಯ ದೃಷ್ಟಿಗೆ ಗೋಚರನಾಗಿ,ಪರಮನಯನೋತ್ಸವಕಾರಣನಾಗಿ ಅವರನ್ನು ಉದ್ಧಾರ ಮಾಡುವ ಸ್ವಾತಂತ್ರ್ಯ ಅವನಿಗಿಲ್ಲವೆ ?

ಅವತಾರಪುರುಷರು ಧ್ಯಾನಕ್ಕೆ ಶುಭಾಶ್ರಯರಾಗಿ ಉಪಾಸಕರಿಗೆ ಭೋಗ-ಮೋಕ್ಷಗಳನ್ನು ಅನುಗ್ರಹಿಸುವ ಶಕ್ತಿಯುಳ್ಳವರಾಗಿರುತ್ತಾರೆ. ಅವತಾರಕ್ಕೆ ಪೂರ್ವದಲ್ಲೂ, ಅವತಾರಕಾಲದಲ್ಲೂ ಮತ್ತು ಉಪಸಂಹಾರದ ನಂತರವೂ ಅವರ ಸತ್ತೆಯು-ಪ್ರಭಾವವು ಒಂದೇ ತೆರನಾಗಿರುತ್ತದೆ. ಅದೇ ತಾನು ಒಬ್ಬ ಜೀವಿಯಾಗಿದ್ದು ತನ್ನ ಸಾಧನೆಯಿಂದ ಸಿದ್ಧಿಯನ್ನು ಪಡೆದವನಿಗೆ ಆ ಮಟ್ಟದ ಸಾಮರ್ಥ್ಯವಿರುವುದಿಲ್ಲ. ಇನ್ನು ಆದರ್ಶವಾದ ಜೀವನವನ್ನು ನಡೆಸಿರುವ ನಾಯಕನಾಗಿದ್ದಲ್ಲಿ ಅವನ ಅನುಕರಣೆಯಿಂದ ಜನರು ಧಾರ್ಮಿಕರಾಗಬಹುದು ಅಷ್ಟೆ.

ಹೀಗೆ  ಅವತಾರದ ಪರಿಕಲ್ಪನೆಯು ಅತೀಂದ್ರಿಯ ಅನುಭವಸಂಪನ್ನರ ಕಾರಣದಿಂದ  ಭಾರತೀಯರ ಜೀವನವನ್ನು ಹಾಸುಹೊಕ್ಕಾಗಿ ವ್ಯಾಪಿಸಿಕೊಂಡಿದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Sunday, October 21, 2018

ದಾಂಪತ್ಯದಲ್ಲಿ ನೀತಿ-ಅನೀತಿ (Dampatyadalli neethii-aneethi)

Asst. Prof, IIT Hyderabad

ದಾಂಪತ್ಯ ಒಂದು ಒಪ್ಪಂದಅದರ ಉಲ್ಲಂಘನೆ ಶಿಕ್ಷಾರ್ಹವೋ ಅಲ್ಲವೋ ಎನ್ನುವುದು ದೇಶಾದ್ಯಂತ ಚರ್ಚಿಸಲ್ಪಡುತ್ತಿದೆ.  ವಾಗ್ವಾದಕ್ಕೆ ಪ್ರವೇಶಿಸದೆ ತಿಳಿಯ ಮನಸ್ಸಿನಿಂದ ನಮ್ಮ ದೇಶದ ಸಂಸ್ಕೃತಿಯಲ್ಲಿ ದಾಂಪತ್ಯದ ಸಂಬಂಧ ಹೇಗೆ ಬೆಳೆದು ಬಂದಿದೆ ಎಂದು ನೋಡಿದರೆ  ವಿಷಯಕ್ಕೆ ಒಂದು ಹೊಸ ದಿಗಂತ ದರ್ಶನ.

ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಕೇವಲ ಒಂದು ವ್ಯವಹಾರ ಒಪ್ಪಂದವಲ್ಲ - ಸೃಷ್ಟಿಸಹಜವಾದ ಒಂದು ಬಂಧ. ದಿವಿ-ಭುವಿಗಳಂತೆ , ಮನಸ್ಸು-ವಾಕ್ಕಿನಂತೆ ಇರುವ ಸಹಜ ಸಂಬಂಧ ಎಂದು ವಿವಾಹ ಮಂತ್ರಗಳು ತಿಳಿಸುತ್ತವೆ. ದಿವಿಯ ಮೋಡ ತನ್ನ ನೀರನ್ನು ಭುವಿಗೆರಚಿ ಹೊಸ ಚಿಗುರನ್ನು ಹಬ್ಬಿಸುತ್ತೆ. ದಿವಿಯ ಪ್ರಕಾಶ ಭುವಿಯ ಜೀವನವನ್ನು ಪೋಷಿಸುತ್ತೆ. ಇದರಿಂದ ಲಾಭ ಯಾರಿಗೆ ? ದಿವಿಗೋ ಭುವಿಗೋ ? ಎಂದರೆ ಇಬ್ಬರಿಗೂ ಅಲ್ಲ. ಅವರಿಬ್ಬರೂ ಸೃಷ್ಟಿನಿಯಮದ ಪಾಲಕರಷ್ಟೇ. ಪಶು ಪಕ್ಷಿ, ಸಸ್ಯ ವನಸ್ಪತಿಗಳೇ ಮೊದಲಾದ ಜೀವರಾಶಿಯ ಸಂತತಿಗಳು ಬೆಳೆದು ಹೊಳೆವ ಸೃಷ್ಟಿಯ ಆಸೆಯನ್ನೀಡೇರಿಸುವ ಮಹಾತ್ಮರು.

ವಾಕ್ಕು ಮನಸ್ಸಿನ ಆಶಯವನ್ನು ಹೊರತರುತ್ತದೆ. ಯಾರಿಗೋಸ್ಕರ ಎಂದರೆ ವಾಙ್ಮನಸ್ಸುಗಳ ಒಡೆಯನಾದ ಆ ವ್ಯಕ್ತಿಯ ಒಳಿತಿಗೋಸ್ಕರ. ಅಂತೆಯೇ ದಾಂಪತ್ಯ ಕೇವಲ ಭೋಗಕ್ಕೆ ಲೈಸೆನ್ಸ್ ಅಲ್ಲದೆ, ನಿಸ್ವಾರ್ಥವಾಗಿ ಸೃಷ್ಟಿ-ಸೃಷ್ಟೀಶನ ಆಶಯವನ್ನು ಮುಂದುವರಿಸುವ ಹೊಣೆಗಾರಿಕೆ ಎಂದೂ ಶುದ್ಧವಾದ ಆತ್ಮಗುಣಗಳಿಂದ ಕೂಡಿದ ಸಂತತಿಯನ್ನು ಲೋಕಾರ್ಪಣೆ ಮಾಡುವ ಮಹಾಯಜ್ಞವೆಂದು ಎಣಿಸಿದರು ಭಾರತರು.

ಅಯ್ಯೋ ! ದಾಂಪತ್ಯದ ಮಧುರ ಸಂಬಂಧವನ್ನು ಒಣ ವೈರಾಗ್ಯದ ನಿರ್ಬಂಧವನ್ನಾಗಿ ಮಾಡಿಬಿಟ್ಟರಲ್ಲ ಎಂದು ಆತಂಕ ಪಡಬೇಕಾಗಿಲ್ಲ. ದಿವಿ-ಭುವಿಗಳ ಉಪಮಾನವನ್ನು ಕೊಡುವ ವೇದ ಮಂತ್ರಗಳೇ, 'ಎನ್ನ ಹೃದಯವು ನಿನ್ನದಾಗಲಿ - ನಿನ್ನಹೃದಯವು ನನ್ನದಾಗಲಿ' ಎಂಬ ಮೃದುಮಧುರವೂ ಅರ್ಥಗರ್ಭಿತವೂ ಆದ ಮಾತುಗಳನ್ನೂ ನುಡಿಯುತ್ತವೆ. ತನ್ನ ಪ್ರಿಯತಮೆಯೂ ಭಾವೀ ಪತ್ನಿಯೂ ಆದ ಪ್ರಮದ್ವರೆಯು ಸರ್ಪವಿಷದಿಂದ ಪ್ರಾಣ ತ್ಯಜಿಸಿದಾಗ ತನ್ನ ಆಯುಷ್ಯದಲ್ಲಿ ಅರ್ಧಭಾಗ ದಾನಮಾಡಿ ಆಕೆಯನ್ನು ಬದುಕಿಸಿದ ರುರುವೂ ಒಬ್ಬ ಋಷಿಕುಮಾರನೇ ಎಂದು ಮರೆಯಬಾರದು. ಯೋಗೀಶ್ರೇಷ್ಠರಾದದ ಕಪಿಲ ಮುನಿಗಳ ತಂದೆಯೂ ಬ್ರಹ್ಮಜ್ಞಾನಿಗಳೂ ಆದ ಕರ್ದಮ ಪ್ರಜಾಪತಿಗಳು ನೂರು ವರ್ಷಗಳ ಕಾಲ ಪತ್ನಿಯಾದ ದೇವಹೂತಿಯೊಡನೆ ಅರಣ್ಯ- ರಮ್ಯ ಉದ್ಯಾನವನಗಳಲ್ಲಿ ವಿಹರಿಸಿ ಭೋಗಿಸಿದರಂತೆ. ವಸಿಷ್ಠ-ಅರುಂಧತಿ, ಅತ್ರಿ-ಅನಸೂಯ, ಕಶ್ಯಪ-ಅದಿತಿ ಮುಂತಾದ ಅಸಂಖ್ಯಾತ ಋಷಿ ದಂಪತಿಗಳು ಗೃಹಸ್ಥ ಜೀವನ ನಡೆಸಿ ವಿಸ್ತಾರವಾದ ವಂಶ ಪರಂಪರೆಯನ್ನು ಬೆಳೆಸಿದರು.

ದಾಂಪತ್ಯದ ಬಂಧವು ಸೃಷ್ಟಿ-ಸೃಷ್ಟೀಶನಆಶಯದಂತೆ ಮಾಡುವ ಯಜ್ಞವಾದ್ದರಿಂದ, ಅದರ ಉಲ್ಲಂಘನೆಯೂ ಸೃಷ್ಟಿಮಾತೆಯ ನ್ಯಾಯಾಲಯದಲ್ಲೇ ಶಿಕ್ಷಾರ್ಹ. ಶಿಕ್ಷೆ ಶಿಕ್ಷಣಕ್ಕೆ ಪರ್ಯಾಯ. ಏರುಪೇರನ್ನು ಸರಿಪಡಿಸುವ ಕ್ರಿಯೆ. ಆದುದರಿಂದಲೇ ಅಹಲ್ಯೆಗೆ ಶಿಕ್ಷೆ ದೀರ್ಘ ಕಾಲ ಕಠೋರ ತಪಸ್ಯೆ. ಆ ತಪಸ್ಸಿನ ಫಲವಾಗಿ ಶ್ರೀರಾಮದರ್ಶನದಿಂದ ಲೋಭಮೋಹ ವಿವರ್ಜಿತಳಾಗಿ ಗೌತಮರೊಡನೆ ಒಂದುಗೂಡುತ್ತಾಳೆ. ಅನೈತಿಕ ನಡತೆಯಲ್ಲಿ ಭಾಗಿಯಾದ ಇಂದ್ರನಿಗೆ ಷಂಡತ್ವದ ಶಿಕ್ಷೆ. ಗಂಡು-ಹೆಣ್ಣು ಇಬ್ಬರಿಗೂ ಶಿಕ್ಷೆ ಆಯಿತು ಎನ್ನುವುದು ಗಮನಾರ್ಹ. ವಿಧಿಸಲ್ಪಟ್ಟ ಶಿಕ್ಷೆ ಬೇರೆ ಬೇರೆಯಾದರೂ ಕಳೆದುಕೊಂಡಿದ್ದ ಇಂದ್ರಿಯಜಯವನ್ನು ಮಾತ್ತೆ ಪಡೆಯುವ ಗುರಿಯೊಂದೇ. ಇಲ್ಲಿ ಯಾವ ಜೈಲಿಗಾಗಲಿ ಕೋರ್ಟು-ಕಚೇರಿಗಾಗಲಿ ಅವಕಾಶವಿಲ್ಲ. ಮದುವೆಯ ದಾಖಲಾತಿ-ರದ್ದುಪಡಿಸುವಿಕೆಯ ಸುದ್ದಿಯೇ ಇಲ್ಲ. 

ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯದ ದಾಖಲಾತಿ ಹೃದಯಗರ್ಭದಲ್ಲಿ ಗೂಢವಾಗಿರುತ್ತೆ. ಭಕ್ತಕವಿ ಜಯದೇವಪತ್ನಿ ಪದ್ಮಾವತಿಯು, ಪತಿಯ ಮೃತ್ಯುವಿನ ಸುಳ್ಳು ಸಮಾಚಾರವನ್ನು ಕೇಳಿ ಅಲ್ಲೇ ಪ್ರಾಣ ತ್ಯಜಿಸಿದಳೆಂದೂ, ಜಯದೇವರ ಭಕ್ತಿಗಾನದಿಂದ ಪುನರುಜ್ಜೀವಗೊಂಡಳೆಂದೂ ವೃತ್ತಾಂತ. ಇಂತಹ ಮಹನೀಯರು ರಸಪ್ರೇಮಿಗಳೋ ಭಕ್ತಶ್ರೇಷ್ಠರೊ ? ಇಂದ್ರಿಯ ಸೌಖ್ಯವನ್ನೂ ಸೃಷ್ಟಿ-ಸೃಷ್ಟೀಶನ ತಪಸ್ಯೆಯನ್ನೂ ಏಕಕಾಲದಲ್ಲಿ ಅನಾಯಾಸವಾಗಿ ಸಾಧಿಸಿದ್ದು ಪ್ರಾಚೀನ ಭಾರತೀಯರ ಅಸಾಮಾನ್ಯ ಹಾಗೂ ಅದ್ವಿತೀಯವಾದ ಸಾಧನೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Saturday, October 13, 2018

ದೀರ್ಘಬಂಧು (Dirghabandhu)

ಲೇಖಕರು: ವಿದ್ವಾನ್ ಬಿ.ಜಿ. ಅನಂತ, ಮೈಸೂರು

ಭವತಾರಕನಾದ ಗುರುವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದುಂಟು.  ಈ ಹೆಸರುಗಳು ಕೇವಲ ಹೆಸರುಗಳೋ ಸಮಾನಾರ್ಥಕ ಪದಗಳೋ ಆಗಿರದೆ ಗುರುವೆಂಬ ಕರುಣಾ ಸಾಗರನ ಬೇರೆ ಬೇರೆ ಗುಣಗಳನ್ನೂ ಸ್ವಭಾವಗಳನ್ನೂ ಹೇಳುವವುಗಳೇ ಆಗಿವೆ.  ಅವುಗಳಲ್ಲಿ ದೀರ್ಥಬಂಧು’ ಎಂಬುದೂ ಒಂದು.
ಬಂಧು
ಬಂಧನ ಎಂಬರ್ಥದಲ್ಲಿ ಪ್ರಯೋಗದಲ್ಲಿರುವ ಶಬ್ದ ಬಂಧು ಎಂಬುದು.  ಎಂದರೆ ಕಟ್ಟು’ ಎಂದರ್ಥ.  ಯಾರೋ ಇಬ್ಬರ ನಡುವೆ ಒಂದು ಕಟ್ಟುಕಟ್ಟಿಕೊಳ್ಳವಿಕೆ ಇದೆ ಅಥವಾ ಯಾವುದೋ ಒಂದು ವಿಷಯದ ಬಂಧನಕ್ಕೆ ಒಳಗಾದವರು ಎಂಬ ಅರ್ಥದಲ್ಲಿ ಬಂಧುಗಳು ಎಂಬ ಶಬ್ದ ಬಂದಿದೆ.  ಆ ಬಂಧವು ರಕ್ತದಿಂದ(ಹುಟ್ಟಿನಿಂದ) ಬಂದದ್ದು ಎಂಬರ್ಥದಲ್ಲಿ ಇಂದು ಹೆಚ್ಚಾಗಿ ಚಾಲ್ತಿಯಲ್ಲಿದೆ.

ರಕ್ತ ಸಂಬಂಧವು ಒಮ್ಮೆ ಉಂಟಾದರೆ ಅದು ಅಜೀವ ಪರ್ಯಂತವೂ ಮತ್ತು ಆಮೇಲೂ ಇರುತ್ತದೆ.  ಉದಾಹರಣೆಗೆ ಶ್ರೀರಾಮ-ದಶರಥರು ತಂದೆ ಮಕ್ಕಳು. ಅವರು ಆ ಸಂಬಂಧವು ಇನ್ನು ಸಾವಿರ ವರ್ಷ ಕಳೆದರೂ ಹೋಗುವಂಥದ್ದಲ್ಲ.

ಇನ್ನು ಕೆಲವು ಹುಟ್ಟಿನ ಅನಂತರ ಉಂಟಾಗುವ ಸಂಬಂಧಗಳೂ ಹೀಗೆಯೇ ಅಜೀವ ಪರ್ಯಂತ ಇರುವುದುಂಟು.  ಉದಾಹರಣೆಗೆ ಪತಿಪತ್ನಿಯರು,  ಅಂತೆಯೇ ಸ್ನೇಹಿತರು.  ಗುರುಶಿಷ್ಯರ ಸಂಬಂಧವೂ ಹೀಗೆಯೇ-ಒಮ್ಮೆ ಹುಟ್ಟಿಕೊಂಡರೆ ಮುಗಿಯಿತು.  ಆ ಸಂಬಂಧಕ್ಕೆ ಹುಟ್ಟುವುದಕ್ಕೂ ಮೊದಲು ಆಸ್ತಿತ್ವವಿಲ್ಲ.  ಆದರೆ ಒಮ್ಮೆ ಹುಟ್ಟಿಕೊಂಡುಬಿಟ್ಟರೆ ಆಮೇಲೆ ಸಾವಿಲ್ಲ.  ಆಮೇಲೆ ಅದು ಅಮರ.  ಗುರುವು ಶಿಷ್ಯನನ್ನು ಪರಿಗ್ರಹಿಸುವುದಕ್ಕೆ ಮುಂಚೆ ಅಥವಾ ವಿದ್ಯಾರ್ಥಿಯು ಬೋಧಕನನ್ನು ಗುರುವಾಗಿ ಒಪ್ಪುವುದಕ್ಕೆ ಮುಂಚೆ ಅವರು ಗುರುಶಿಷ್ಯರಲ್ಲ.  ಅಲ್ಲೊಂದು ಸಂಬಂಧವೂ ಇಲ್ಲ.  ಆದರೆ ಒಮ್ಮೆ ಹುಟ್ಟಿತೋಅಲ್ಲಿಗೆ ಅದು ಪ್ರಾರಂಭವಾಯಿತು ಅಷ್ಟೇ.
ಗುರುವು
ಲೋಕದಲ್ಲಿ ಕಲಿಯಲು ಕೋಟಿ ವಿಷಯಗಳಿವೆ.  ಆದರೆ ಅವುಗಳನ್ನು ಕಲಿಸುವವರೆಲ್ಲ ಗುರುಗಳಲ್ಲ.  ಕಲಿಯುವವನು ಶಿಷ್ಯನೂ ಅಲ್ಲ.  ಈ ಗುರು’ ಎಂಬುದೂ ಶಿಷ್ಯ’ ಎಂಬುಂದೂ ವಿಶೇಷಾರ್ಥವನ್ನುಳ್ಳ ಪಾರಿಭಾಷಿಕ ಶಬ್ದಗಳು. ಯಾವನು ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಸಾಧಕನ ಕೈಹಿಡಿದು ನಡೆಸುತ್ತಾನೆಯೋ ಮತ್ತು ಅಂತಿಮವಾಗಿ ತತ್ತ್ವಸಾಕ್ಷಾತ್ಕಾರವನ್ನು ಮಾಡಿಸುತ್ತಾನೆಯೋ ಅವನೇ ಗುರುವು ಮತ್ತು ಅಂತಹ ಸಾಧಕನು ಮಾತ್ರ ಶಿಷ್ಯ.  ಆ ಮಾರ್ಗದಲ್ಲಿ ಗುರುವಾದವನು ಕೊಡುವ ಮಾರ್ಗದರ್ಶನವೇನಿದೆಯೋ ಅದುವೇ ವಿದ್ಯೆ.  ಇದನ್ನೇ ಕೃಷ್ಣನು ಗೀತೆಯಲ್ಲಿ ಅಧ್ಯಾತ್ಮ ವಿದ್ಯಾ ವಿದ್ಯಾನಾಂ- ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆಯೇ ನಾನು ಎಂದಿದ್ದಾನೆ.
ಕೇವಲ ಮೋಕ್ಷವನ್ನೇ ಜೀವನದ ಏಕ ಗುರಿಯಾಗಿ ಇಟ್ಟುಕೊಂಡ ಜೀವಿಯ ತನ್ನ ಕೈ ಹಿಡಿದು ಆ ಮಾರ್ಗಕ್ಕೆ ಹತ್ತಿಸುವಂತೆ ಗುರುವಾದವನಲ್ಲಿ ಬೇಡಿಕೊಳ್ಳುತ್ತಾನೆ.  ಹಾಗೆ ಬೇಡುವವನಲ್ಲಿ ಸಾಮರ್ಥ್ಯವಿದ್ದುದೇ ಆದರೆ ಗುರುವು ಅವನನ್ನು ಒಪ್ಪುತ್ತಾನೆ.  ಅವನನ್ನು ಶಿಷ್ಯನಾಗಿ ಪರಿಗ್ರಹಿಸುತ್ತಾನೆ.  ಆ ಕ್ಷಣವೊಂದು ಅಮೃತಘಳಿಗೆ.  ಆ ಮುಹೂರ್ತದಿಂದ ಅವರಿಬ್ಬರೂ ಗುರುಶಿಷ್ಯರಾಗುತ್ತಾರೆ.   ನೆನಪಿಡಬೇಕಾದ ಅಂಶವೆಂದರೆ ಇಲ್ಲಿ ಶಿಷ್ಯನು ಸಾಧಕನೂಗುರುವು ಈಗಾಗಲೇ ಸಾಧನೆಯ ಕೊನೆಮುಟ್ಟಿದ ಸಿದ್ಧನೂ ಆಗಿರುತ್ತಾನೆಂಬುದು.  ಇಬ್ಬರೂ ಸಾಧಕರೇ ಆಗಿದ್ದರೆ ಅದರಲ್ಲಿ ಒಬ್ಬನು ಗುರುವಾಗಲಾರ ಏಕೆಂದರೆ ಒಟ್ಟಿಗೇ ಇಬ್ಬರು ಈಜು ಕಲಿಯುತ್ತಿರುವವರಲ್ಲಿ ಒಬ್ಬನು ಈಜು ಕಲಿಸುವವನಾದರೆ ಆಗುವುದೇನು?
ದೀರ್ಘಬಂಧು
ನಿಜವಾದ ಗುರುವಾದರೆ ಒಮ್ಮೆ ಒಬ್ಬನನ್ನು ಶಿಷ್ಯನಾಗಿ ಪರಿಗ್ರಹಿಸಿದರೆ ಆಯಿತುಶಿಷ್ಯನು ಕೊನೆಮುಟ್ಟುವವರೆಗೂ ಅವನು ಗುರುವೇ.  ನೂರು ಜನ್ಮಗಳಾಗಲಿ ಅವನು ಶಿಷ್ಯನ ಬೆನ್ನುಬಿಡುವುದಿಲ್ಲ.
ತಾಯಿಮೀನು ತನ್ನ ಮರಿಯನ್ನು ಕಾಯುವಂತೆ ಬೇರೆಬೇರೆ ರೀತಿಗಳಲ್ಲಿ ರಕ್ಷಣೆಯನ್ನು ಕೊಟ್ಟುಬಿಡುತ್ತಾನೆ.  ಆದ್ದರಿಂದಲೇ ಅವನನ್ನು ದೀರ್ಘಬಂಧು ಎಂದು ಸಾಧಕಲೋಕವು ಕೃತಜ್ಞತೆಯಿಂದ ಭಾವಿಸುತ್ತದೆ.  ಗುರುಶಿಷ್ಯರ ಬಂಧವನ್ನು ಬಿಟ್ಟು ಜಗತ್ತಿನ ಮತ್ತಾವ ಬಂಧವೂ ಇಷ್ಟು ದೀರ್ಘವಾಗಿರುವುದಿಲ್ಲ ಎಂಬುದು ವಿಶೇಷ.  ಅಂತಹ ಕರುಣಾಮಯನಾದ ದೀರ್ಘಬಂಧುವಿಗೆ ನಮೋ ನಮಃ
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ

ಗಂಗೆ ಗೌರಿಯರು ಸವತಿಯರೇ? (Gange gauriyaru savatiyare ?)

ಲೇಖಕರುಸುಬ್ರಹ್ಮಣ್ಯ ಸೋಮಯಾಜಿಬೆಂಗಳೂರು

ಪುರಾಣದ ಕಥೆಗಳಲ್ಲಿ ಗಂಗೆ ಗೌರಿ ಇಬ್ಬರು ಶಿವನ ಪತ್ನಿಯರು ಎಂಬ ಚಿತ್ರಣವಿದೆ.ಅದನ್ನೇ ಕಾವ್ಯಗಳಲ್ಲಿ , ಚಲನ ಚಿತ್ರಗಳಲ್ಲಿ ಸವತಿಯರಾಗಿ ತೋರಿಸುತ್ತಾರೆ.  ನಾವು  ಸಮಾಜದಲ್ಲಿ ಸವತಿಯರ ಮಾತ್ಸರ್ಯ, ಸ್ಪರ್ಧೆ,ಜಗಳಗಳು ಇವನ್ನೆಲ್ಲಾ ನೋಡಿದ್ದೇವೆ.ನಮ್ಮ ಈ ಅರಿವನ್ನು  ಗಂಗೆ ಗೌರಿಯರ ವಿಷಯದಲ್ಲೂ  ಭಾವಿಸುವುದಾಗಿದೆ. ಸಮಾಜದಲ್ಲಿ ಕಾಣುವ ಪತಿಗಳಂತೆ ಇವರಿಬ್ಬರನ್ನು ಸಂಭಾಳಿಸುವುದು ಶಿವನಿಗೆ ಕಷ್ಟವಾಗಿತ್ತು ಎಂದು ಭಾವಿಸುವಂತೆ ಚಿತ್ರಗಳಲ್ಲಿ,ನಾಟಕಗಳಲ್ಲಿ,ಕಾವ್ಯಗಳಲ್ಲಿ ಬಿಂಬಿಸಲಾಗಿದೆ. ಆದರೆ ದೇವತೆಗಳು ನಮ್ಮಂತೆ ರಸ್ತೆಗಳಲ್ಲಿ ಓಡಾಡುವ ಇಂದ್ರಿಯ ಕ್ಷೇತ್ರದ ಬದುಕುಗಳಲ್ಲ.ಎಲ್ಲ ಭೂತಗಳ ಅಂತರಂಗದಲ್ಲಿ ಪ್ರಕಾಶರೂಪವಾಗಿ  ಕೆಲಸ ಮಾಡುವ,ಕೇವಲ ಜ್ಞಾನದ ಕಣ್ಣುಗಳಿಗೆ ಮಾತ್ರವೇ ಗೋಚರಿಸುವ ಶಕ್ತಿ ವಿಶೇಷಗಳು ಎಂಬುದನ್ನು ನಾವು ಮರೆಯ ಬಾರದು.
ಗಂಗೆ ಗೌರಿಯರ ನೈಜ ಪರಿಚಯವಾದಾಗಲೇ ನಮ್ಮ ಭೌತಿಕ ಭಾವವು ದೈವಿಕ ಭಾವದಲ್ಲಿ ಪರ್ಯವಸಾನವಾದೀತು.
ಭಾದ್ರಪದಮಾಸದ ಶುಕ್ಲಪಕ್ಷದ ತದಿಗೆಯಂದು ಸಂಭ್ರಮದಿಂದ ಸ್ವರ್ಣಗೌರೀ ಪೂಜೆಯನ್ನು ಆಚರಿಸುತ್ತೇವೆ.ಜಗದಾದಿ ದಂಪತಿಗಳಾದ ಪಾರ್ವತೀಪರಮೇಶ್ವರರ ಮಕ್ಕಳೇ ನಾವೆಲ್ಲರೂ.ಅವರದಲ್ಲದ ಯಾವುದೂ ಸೃಷ್ಟಿಯಲ್ಲಿಲ್ಲ ಎಂಬುದು ಅವರನ್ನು ತಪಸ್ಸಿನ ಕಣ್ಣುಗಳಿಂದ ಕಂಡ ಜ್ಞಾನಿಗಳ ಅನುಭವದ ಮಾತು.ಹಾಗೆಂದೇ ತಾಯಿ ಪಾರ್ವತಿಯ ಪೂಜೆ ನಮ್ಮೆಲ್ಲರಿಗೂ ಪರಮ ಶ್ರೇಯಸ್ಕರ.
ಶಂಕರ ಭಗವತ್ಪಾದರು ಅವಳ ಸ್ವರೂಪವನ್ನು ಹೇಳುವಾಗ “ಚಾಂಪೇಯ ಗೌರಾರ್ಧ ಶರೀರಕಾಯೈ “ ಎಂದಿದ್ದಾರೆ. ಅವಳದು ಸಂಪಿಗೆ ಹೂವಿನ ಬಣ್ಣ. ಗೌರ ಎಂದರೆ ಸಂಪಿಗೆ ಅಥವಾ ಬಿಳಿಯ ಬಣ್ಣ.ಎಂದೇ ಅವಳಿಗೆ ಗೌರೀ ಎಂಬ ಹೆಸರು.ಆಕೆಯು  ಸಂಹಾರಕಾರ್ಯ ಮಾಡುವಾಗ ಕಾಳಿ.ವಿದ್ಯಾಪ್ರದಾನ ಮಾಡುವಾಗ ಶ್ಯಾಮಲಾಮ್ಬಿಕಾ. ಹಾಗೆಯೇ ಸೌಮಾಂಗಲ್ಯ-ಸೌಭಾಗ್ಯ-ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣ್ಣದ, ಕೆಲವೊಮ್ಮೆ ಹಿಮ-ಶುಭ್ರವರ್ಣದ ಗೌರೀ.ತ್ರಿಲೋಕವ್ಯಾಪಿಯಾಗಿ ಜ್ಞಾನಪ್ರವಾಹವಾದಾಗ  ಗಂಗೆ.
ಹೇಗೆ ಒಬ್ಬನೇ ಪರಮಾತ್ಮನು ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಬ್ರಹ್ಮ-ವಿಷ್ಣು-ಮಹೇಶ್ವರ ರೂಪವನ್ನು ತಾಳುತ್ತಾನೆಯೋ ಹಾಗೆಯೇ  ಒಬ್ಬಳೇ ಪರಾ ಪ್ರಕೃತಿರೂಪಿಣಿಯಾದ ತಾಯಿಯೇ ತಾನು ನಿರ್ವಹಿಸಬೇಕಾದ ಕೆಲಸಕ್ಕನುಗುಣವಾದ ನಾಮ-ರೂಪಗಳಿಂದ  ಅಲಂಕೃತೆಯಾಗುತ್ತಾಳೆ.ಸರಸ್ವತೀ-ಲಕ್ಷ್ಮೀ-ಪಾರ್ವತೀ ಈ ರೂಪಗಳೆಲ್ಲ ಆ ಮಹಾ ತಾಯಿಯದೇ.
ಗೌರೀ ಪೂಜೆಯ ಪರ್ವದಲ್ಲಿ ಪೂಜಿಸಲ್ಪಡುವ ಗೌರಿಯ ವಿಗ್ರಹವನ್ನು ಮಾಡುವುದಕ್ಕೆ ಬೇಕಾದ ಮಣ್ಣನ್ನು ಗಂಗೆಯಿಂದ ತರುವ ವಾಡಿಕೆ ಇದೆ.
ನಮ್ಮ ಪುರಾಣಗಳಲ್ಲಿ ಗಂಗೆ ಗೌರಿಯರು ಹಿಮವಂತನ ಪುತ್ರಿಯರು ಎಂದಿದೆ.ಗಂಗೆಯು ಹಿಮಾಲಯದಲ್ಲಿ ಹುಟ್ಟುವುದರಿಂದ ಹಾಗೆ ಕರೆಯಬಹುದು.ಹಾಗೆಯೇ ಗಂಗೆಯನ್ನು-ವಿಷ್ಣು ಪಾದದಿಂದ ಜನಿಸಿದವಳು,ಬ್ರಹ್ಮ ಕಮಂಡಲದ ತೀರ್ಥ,ಜಹ್ನು ಮಹರ್ಷಿಯ ಪುತ್ರಿ,ಭಗೀರಥನ ಪುತ್ರಿ-ಭಾಗೀರಥೀ ಎಂದೆಲ್ಲ ಆಯಾ ಕಥೆಗಳನ್ನು ಅನುಸರಿಸಿ ಕರೆಯುವುದನ್ನೂ ಕೇಳುತ್ತೇವೆ.
ಆದರೆ ತಾತ್ವಿಕವಾಗಿ ನೋಡಿದಾಗ ಗಂಗೆಯು ಬ್ರಹ್ಮವಿದ್ಯಾ ಪ್ರವಾಹವೇ ಆಗಿದೆ.ಆ ವಿದ್ಯಾ ಪ್ರವಾಹದ ಉಗಮ, ಭಗವಂತನ ಧಾಮವೇ.ಅಲ್ಲಿಂದಲೇ ಅದು ಲೋಕ ಕಲ್ಯಾಣಕ್ಕಾಗಿ ಹರಿದು ಬರುವುದು,ಪರಮೋನ್ನತವಾದ ಶಿಖರಗಳನ್ನು ಹೊಂದಿ ಯೋಗಿಗಳಿಗೆ ಧ್ಯಾನ ಭೂಮಿಯಾಗಿರುವ ಹಿಮವನ್ತನೂ ಪರಮಾತ್ಮನ ಪ್ರತಿನಿಧಿಯೇ ಆಗುತ್ತಾನೆ.ಹಾಗೆಯೇ ಬ್ರಹ್ಮಜ್ಞಾನಿಯ ಬಲಗಿವಿಯಿಂದ ವೇದವಿದ್ಯಾ ಮಾರ್ಗವಾಗಿ ಬಂದಾಗ ಆ ಮಹರ್ಷಿ ಪುತ್ರಿಯೂ ಹೌದು.ಅಂತಹ ಜ್ಞಾನ ಪ್ರವಾಹವನ್ನು ಮಹಾ ತಪಸ್ಸಿನ ಸಾಧನೆಯಿಂದ ಪಡೆದು ಲೋಕಕ್ಕೆ ವಿನಿಯೋಗಿಸಿದ ಮಹಾಯೋಗಿ ಭಗೀರಥ. ಈ ಎಲ್ಲ ವಿಷಯಗಳೂ ಗಂಗೆಯು ಜ್ಞಾನದ ಪ್ರವಾಹಕ್ಕೆ ಮತ್ತೊಂದು ಹೆಸರು ಎಂದೇ ಸಾರುತ್ತಿವೆ. “ತ್ರಿಭುವನ ಜನನೀ ವ್ಯಾಪಿನೀ ಜ್ಞಾನಗಂಗಾ” ಎಂದು ಶ್ರೀ ಶಂಕರರೂ ಸಾರುತ್ತಾರೆ. ಹಾಗೆಯೇ ಗೌರಿಯೂ ಸಹ ಶಂಕರಾರ್ಧ ಶರೀರಿಣಿಯಾಗಿ ಬ್ರಹ್ಮವಿದ್ಯಾಸ್ವರೂಪಿಣಿಯೇ ಆಗಿದ್ದಾಳೆ. ಇಬ್ಬರೂ ಶಿವ ಸ್ವರೂಪಿಯಾದ ಭಗವಂತನ ಜ್ಞಾನವನ್ನು ವಿಸ್ತರಿಸುತ್ತಿರುವ ಅವನ ಮಡದಿಯರೇ
ಹೀಗೆ ಗಂಗೆ ಗೌರಿ ಇಬ್ಬರೂ ಒಬ್ಬಳೇ ಪರಾ ಪ್ರಕೃತಿಯ ಎರಡು ಕವಲುಗಳು. ಇಬ್ಬರ ಸತ್ವ ಸಾರವೂ ಜ್ಞಾನವೇ. ಆದ್ದರಿಂದ ಅವರನ್ನು ಒಡಹುಟ್ಟಿದವರೆಂದು ಶಾಸ್ತ್ರಗಳು ಕರೆಯುತ್ತವೆ.ಅವರಲ್ಲಿ ಲೋಕದಲ್ಲಿ ಕಂಡಂತೆ ಸವತಿ ಮತ್ಸರಗಳು ಇತ್ಯಾದಿ ಭಾವಿಸುವುದು ಬಾಲಿಶ ಭಾವವಾಗುತ್ತದೆ. ಅದು ಸತ್ಯಕ್ಕೆ ಮಾಡುವ ಅಪಚಾರವೇ ಆಗುತ್ತದೆ. ಜ್ಞಾನಪ್ರವಾಹವಾಗಿ ಮೇಲಿಂದ ಕೆಳಗೆ ಇಳಿದುಬಂದಾಗ ಗಂಗೆ. ಜಗತ್ತಿನ ಇರುವಿಕೆಗೆ ಕಾರಣವಾಗಿ ಪರಶಿವನ ಆಶಯದಂತೆ ಸೃಷ್ಟಿವಿಸ್ತಾರ ಕಾರ್ಯದಲ್ಲಿ ಪ್ರವೃತ್ತಳಾದಾಗ ಗೌರೀ.

ಇಂದಿನ ನಮ್ಮ ಭಗವತಿ ಗೌರೀಪೂಜೆಯ ಶುಭ ಸಂದರ್ಭದಲ್ಲಿ ಅವರಿಬ್ಬರನ್ನೂ ಈ ಪವಿತ್ರಭಾವದಿಂದ ಪೂಜಿಸೋಣ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Tuesday, October 9, 2018

ಪಿತೃ ಪಕ್ಷ - ಏನು? ಏಕೆ? ಹೇಗೆ? (Pitru paksha - yenu? yeke? Hege?)

ಲೇಖಕರು: ನಾಗರಾಜ ಗುಂಡಪ್ಪ
ಶಿಕ್ಷಣ: ಎಮ್. ಟೆಕ್., ಕಂಪ್ಯೂಟರ್ ಇಂಜಿನಿಯರಿಂಗ್, ಮೈಸೂರು ವಿಶ್ವವಿದಾಯಲಯ.
ಹುದ್ದೆ: ಮಾಜಿ ಜನರಲ್ ಮ್ಯಾನೇಜರ, ವಿಪ್ರೋ ಟೆಕ್ನಾಲಜೀಸ್, ಹಾಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್


ಚಾಂದ್ರಮಾನ ಕಾಲ ಗಣನಾ ಪದ್ಧತಿಯಲ್ಲಿ ಒಂದು ತಿಂಗಳ ಎರಡು 15 ದಿನಗಳ ಅವಧಿಗಳನ್ನು ಪಕ್ಷ ಎಂದು ಕರೆಯುತ್ತಾರೆ. ಪೂರ್ಣಿಮೆಯಲ್ಲಿ ಕೊನೆಗೊಳ್ಳುವ ಅವಧಿಯು ಶುಕ್ಲ ಪಕ್ಷ ಎಂದೂ ಅಮಾವಾಸ್ಯೆಯಲ್ಲಿ ಕೊನೆಗೊಳ್ಳುವ ಅವಧಿಯು ಕೃಷ್ಣ ಪಕ್ಷ ಎಂದೂ ಕರೆಯಲ್ಪಡುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷಕ್ಕೆ ಪಿತೃ ಪಕ್ಷ ಎಂದು ಹೆಸರು ಮತ್ತು ಈ ಪಕ್ಷದ ಅಮಾವಸ್ಯೆಯು ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಟ್ಟು ಉಳಿದ ಅಮಾವಾಸ್ಯೆಗಳಿಗಿಂತ ವಿಶೇಷವಾಗಿ ಆಚರಿಸಲ್ಪಡುತ್ತದೆ. 

ಏಕೆ ಈ 15 ದಿನಗಳನ್ನೇ ಪಿತೃ ಪಕ್ಷ ಎನ್ನುತ್ತಾರೆ ಮತ್ತ್ತು ಈ ಪಿತೃ ಪಕ್ಷಕ್ಕೆ ಏಕೆ ಇಷ್ಟು ಮಹತ್ವ? ಇದಕ್ಕೆ ಎರಡು ಕಾರಣಗಳಿವೆ:
1. ಈ ಪಕ್ಷದಲ್ಲಿ ಆಚರಿಸುವ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಈ ಪಕ್ಷಕ್ಕೆ ಒಂದು ಮಹತ್ವವುಂಟು. ಪಂಚ ಮಹಾಯಜ್ಞ ಎಂದರೇನು? ಮಹರ್ಷಿ ಸಂಸ್ಕೃತಿಯಲ್ಲಿ ಭಗವಂತನನ್ನು ಆರಾಧಿಸುವ ವಿಧಾನಗಳಲ್ಲಿ ನೇರವಾಗಿ ಭಗವಂತನನ್ನೇ ಆರಾಧಿಸುವುದು ಒಂದು ಬಗೆಯಾದರೆ, ಅವನ ಅನುಗ್ರಹ ನಮ್ಮವರೆವಿಗೆ ಹರಿದು ಬರುವ ದ್ವಾರಗಳನ್ನು ಆರಾಧಿಸಿ ತನ್ಮೂಲಕ ನಮ್ಮ ಆರಾಧನೆ ಭಗವಂತನಿಗೆ ತಲಪುವ ಹಾಗೆ ಮಾಡುವುದು ಮತ್ತೊಂದು ವಿಧಾನ. ಈ ಎರಡನೆಯ ವಿಧಾನದಲ್ಲಿ, ಮನುಷ್ಯನ ಪೋಷಣೆ, ರಕ್ಷಣೆಗಾಗಿ ಭಗವಂತನ ಅನುಗ್ರಹ ಹರಿದು ಬರುವ 5 ದ್ವಾರಗಳನ್ನು ಗೌರವಿಸುವುದು ಅಥವಾ ಪೂಜಿಸುವುದು ಪಂಚ ಮಹಾಯಜ್ಞಗಳೆನ್ನಿಸಿಕೊಳ್ಳುತ್ತದೆ. ಒಬ್ಬ ಮನುಷ್ಯ ಹುಟ್ಟಿ, ಬೆಳೆದು ಸಾರ್ಥಕ ಜೀವನ ನಿರ್ವಹಿಸಲು ಆತನಿಗೆ ಅನೇಕ ವಿಧವಾದ ಪೋಷಣೆ, ಸಹಕಾರಗಳು ಅವಶ್ಯಕವಾಗಿದ್ದು ಭಗವಂತನ ಅನುಗ್ರಹದಿಂದ ದೊರೆಯುತ್ತದೆ. ಒಂದು ಮಗು ಹುಟ್ಟಿದೊಡನೆಯೇ ಅದಕ್ಕೆ ಯಾರೂ ಹೇಳಿಕೊಡದಿದ್ದರೂ ತನ್ನದೇ ಸಹಜ ಪ್ರೇರಣೆಯಿಂದ ಸ್ತನ್ಯಪಾನ ಮಾಡುತ್ತದೆ. ನಂತರ ತಾನಾಗಿಯೇ ನೋಡುವುದು, ನಡೆಯುವುದು, ಮಾತಾನಾಡುವುದನ್ನೆಲ್ಲಾ ಕಲಿತುಕೊಳ್ಳುತ್ತದೆ. ಮಾತನ್ನು ಕಲಿಯುವಾಗ ಸುತ್ತಮುತ್ತಲಿನ ಜನರ ಮಾತನ್ನು ಕೇಳುತ್ತಾ ಮಾತನ್ನು ಕಲಿತರೂ ಸಹಾ, ಕಲಿಯುವಿಕೆಯು ಆಗುವುದು ತನ್ನೊಳಗೇ ಇರುವು ಸಹಜ ಪ್ರವೃತ್ತಿಯ ದೆಸೆಯಿಂದಲೇ ಹೊರತು ಒಬ್ಬ ವ್ಯಕ್ತಿ ಕಲಿತಿರುವ ಅಥವಾ ಆಡುವ ಅಷ್ಟೂ ಮಾತನ್ನು ಯಾರೂ ಹೊರಗಡೆಯಿಂದ ಹೇಳಿಕೊಡಲಿಕ್ಕಾಗುವುದಿಲ್ಲ. ಈ ಉದಾಹರಣೆಯನ್ನು ವಿಸ್ತರಿಸಿ ಗಮನಿಸಿದಾಗ, ನಮ್ಮ ಎಲ್ಲ ಇಂದ್ರಿಯ ಮನಸ್ಸುಗಳ ಕಾರ್ಯನಿರ್ವಹಣೆ ನಮ್ಮೊಳಗಿನ ಪ್ರೇರಣೆಯಿಂದಲೇ ನಡೆಯುತ್ತಿರುತ್ತದೆ.  ನಮ್ಮೊಳಗೇ ಶಕ್ತಿ ರೂಪದಲ್ಲಿದ್ದು, ಇಂದ್ರಿಯ ಮನಸ್ಸುಗಳಿಗೆ ಪ್ರೇರಣೆ ನೀಡುವವರನ್ನು ದೇವತೆಗಳು ಎನ್ನುತ್ತೇವೆ. ದೇವತೆಗಳು ಭಗವಂತನ ಅನುಗ್ರಹ ನಮ್ಮವರೆವಿಗೆ ಹರಿಯಲು ಇರುವ ಒಂದು ದ್ವಾರ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವ ನಾನಾ ವಿಧಗಳನ್ನು ದೇವ ಯಜ್ಞ ಎನ್ನುತ್ತೇವೆ. ಇದೇ ರೀತಿ, ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಜೀವನದಲ್ಲಿ ನಾನಾ ಪಾತ್ರ ವಹಿಸಿದರೂ, ತನ್ನ ಮಕ್ಕಳ ವಿಷಯಕ್ಕೆ ಬಂದಾಗ ಅತನಲ್ಲಿ ಮತ್ತು ಆಕೆಯಲ್ಲಿ ತಂದೆತನ ಮತ್ತು ತಾಯಿತನ ಆಡುತ್ತದೆ. ಈ ತಂದೆತನ, ತಾಯಿತನದ ಪ್ರವೃತ್ತಿ ಒಬ್ಬ ವ್ಯಕ್ತಿಯಲ್ಲಿ ಉಂಟಾಗುವುದು ಆತನ ಒಳಗೇ ಇರುವ ಪಿತೃ ದೇವತೆಗಳೆಂಬ ಶಕ್ತಿಗಳಿಂದ. ಒಬ್ಬ ಮನುಷ್ಯ ಹುಟ್ಟಿದ ನಂತರ ಆತನ ಅಥವಾ ಆಕೆಯ ಪಾಲನೆ, ಪೋಷಣೆಯನ್ನು ಪಿತೃದೇವತೆಗಳು ಪ್ರತ್ಯಕ್ಷವಾಗಿ ತಂದೆ, ತಾಯಿಯ ರೂಪದಲ್ಲೂ, ಪರೋಕ್ಷವಾಗಿ ದೇಹದೊಳಗೆ ಶಕ್ತಿರೂಪದಲ್ಲೂ ನೀಡುತ್ತಿರುತ್ತಾರೆ. ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಪಿತೃ ಯಜ್ಞ ಎನ್ನುತ್ತಾರೆ. ಹೀಗೆಯೇ ಒಬ್ಬ ಮನುಷ್ಯನ ಜ್ಞಾನ ಸಾಧನೆಗೆ ಋಷಿಗಳು ಹೊರಗಿನಿಂದಲೂ, ಒಳಗಿನಿಂದಲೂ ಕಾರಣರಾಗಿರುತಾರೆ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು  ಬ್ರಹ್ಮ ಯಜ್ಞ ಅಥವಾ ಜ್ಞಾನ ಯಜ್ಞ ಎನ್ನುತ್ತಾರೆ. ಇದಲ್ಲದೇ ಒಬ್ಬ ಮನುಷ್ಯ ಸಮರ್ಥ ಜೀವನ ನಡೆಸುವಲ್ಲಿ ಅನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ. ಒಬ್ಬ ವ್ಯಕ್ತಿ ಒಂದು ಹೊತ್ತಿನ ಆಹಾರ ಸೇವನೆ ಮಾಡಬೇಕಾದರೇನೇ, ಅದನ್ನು ಬಿತ್ತಿ ಬೆಳೆದವ, ಬೆಳೆಯುವುದಕ್ಕೆ ಬೇಕಾಗುವ ನೇಗಿಲು ಇತ್ಯಾದಿಗಳನ್ನು ತಯಾರಿಸಿದವ, ಔಷಧ ಗೊಬ್ಬರಗಳನ್ನು ತಯಾರಿಸಿದವ ಮತ್ತು ಅವುಗಳನ್ನು ಮಾರಾಟ ಮಾಡಿದವ, ಕುಯಿಲು ಮಾಡಿದವ, ಧಾನ್ಯಗಳನ್ನು ಹದ ಮಾಡಿದವ, ಸಾಗಿಸಿದವ, ಅಡುಗೆ ಮಾಡಿ ಬಡಿಸಿದವರೆಲ್ಲರ ಪರಿಶ್ರಮ ನಮ್ಮ ಒಂದು ಹೊತ್ತಿನ ಊಟದಲ್ಲಿ ಪಾತ್ರವಹಿಸಿರುತ್ತದೆ. ಇದೇ ರೀತಿಯಲ್ಲಿ ನಮ್ಮ ವಸತಿ, ಬಟ್ಟೆ, ಶಿಕ್ಷಣ, ಮನೋರಂಜನೆ, ಸಂಪಾದನೆ ಮುಂತಾದ ಪ್ರತಿ ಕ್ಷೇತ್ರದಲ್ಲೂ ಅನೇಕಾನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅತಿಥಿ ಸತ್ಕಾರದ ಮೂಲಕ ಮನುಷ್ಯರನ್ನು ಸತ್ಕರಿಸುವುದು ಮನುಷ್ಯ ಯಜ್ಞವೆನಿಸಿಕೊಳ್ಳುತ್ತದೆ. ಹೀಗೆಯೇ ಪಶು ಪಕ್ಷಿಗಳೂ ಸಹ ನಮ್ಮ ಪಾಲನೆ ಪೋಷಣೆಗೆ ಕಾರಣವಾಗಿರುತ್ತದೆ. ನಮ್ಮ ಶಾಲಾ ಕಾಲೇಜುಗಳ ಪಾಠಗಳಲ್ಲಿ ಬರುವ eco system ಎನ್ನುವ ಶೀರ್ಷಿಕೆಯಲ್ಲಿ ಪಶುಪಕ್ಷಿಗಳಿಂದ ಮನುಷ್ಯರಿಗೆ ಆಗುವ ಅನೇಕ ಉಪಕಾರಗಳ ಬಗ್ಗೆ ವಿಸ್ತಾರವಾಗಿ ವಿಷಯ ಸಿಗುತ್ತದೆ. ಆದುದರಿಂದ ಪಶುಪಕ್ಷಿಗಳಿಗೆ ಆಹಾರ ನೀಡುವುದನ್ನು ಭೂತ ಯಜ್ಞ ಎನ್ನುತ್ತಾರೆ. ಹೀಗೆ ಭಗವಂತನ ಪೋಷಣೆ ನಮಗೆ ತಲಪುವ  ದ್ವಾರಗಳಲ್ಲಿ 5 ಮುಖ್ಯ ದ್ವಾರಗಳಾದ - ದೇವತೆಗಳು, ಪಿತೃಗಳು, ಋಷಿಗಳು, ಮನುಷ್ಯರು ಮತ್ತು ಪಶುಪಕ್ಷಿಗಳನ್ನು ಅರಾಧಿಸುವುದನ್ನು, ಸತ್ಕರಿಸುವುದನ್ನು ಪಂಚ ಮಹಾ ಯಜ್ಞಗಳೆಂದು ಕರೆಯುತ್ತಾರೆ. ಈ ಐದರಲ್ಲಿ ಒಂದಾಗಿರುವುದರಿಂದ ಪಿತೃ ಯಜ್ಞಕ್ಕೆ ಒಂದು ಮಹತ್ವ. 

2. ಎರಡನೆಯದಾಗಿ, ಈ ಹದಿನೈದು ದಿನಗಳಿಗೆ ಕಾಲದ ದೃಷಿಯಿಂದಲೂ ಒಂದು ಮಹತ್ವ ಉಂಟು. ಹೇಗೆ ಒಂದು ದಿನದಲ್ಲಿ ರಾತ್ರಿಕಾಲ ನಿದ್ರೆಗೂ, ಹಗಲು ಪ್ರವೃತ್ತ ಜೀವನಕ್ಕೂ ಮತ್ತು ಸಂಧ್ಯಾ ಕಾಲ ಭಗವಂತನ ಆರಾಧನೆಗೂ ಸೂಕ್ತವಾಗಿದೆಯೋ ಹಾಗೆಯೇ ಒಂದು ವರ್ಷದ ಕೆಲವು ದಿನಗಳಲ್ಲಿ ಕೆಲವು ದೇವತೆಗಳ ಅನುಗ್ರಹವು ವಿಶೇಷವಾಗಿ ಹರಿಯುತ್ತಿದ್ದು ಆಯಾ ದೇವತೆಯ ವಿಶೇಷ ಆರಾಧನೆಗೆ ಪ್ರಶಸ್ತ ಎಂದು ಪರಿಗಣಿಸಲ್ಪಡುತ್ತದೆ. ಈ ವಿಶೇಷದಿನಗಳನ್ನು ಪರ್ವ ಅಥವಾ ಹಬ್ಬ ಎಂದು ಆಯಾ ದೇವತೆಯ ಹೆಸರಿನಿಂದ, ರಾಮ ನವಮೀ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮೊದಲಾಗಿ ಕರೆಯುತ್ತಾರೆ. ಈ ನೇರದಲ್ಲಿ ಪಿತೃ ದೇವತೆಗಳ ಸಾನ್ನಿಧ್ಯ ವಿಶೇಷವಾಗಿ ಕೂಡಿಬಂದು ಅವರ ಅನುಗ್ರಹ ಹರಿಯುವುದಕ್ಕೆ ವಿಶೇಷವಾಗಿರುವ ಅವಧಿ ಎಂದರೆ ಈ ಪಿತೃ ಪಕ್ಷ. ಈ ಕಾಲಾವಧಿಯಲ್ಲಿ ಪಂಚ ಮಹಾ ಯಜ್ಞಗಳಲ್ಲೊಂದಾದ ಪಿತೃ ಯಜ್ಞದ ಆಚರಣೆ ವಿಶೇಷ ಫಲವನ್ನು ನೀಡುವುದರಿಂದ ಪಿತೃ ಪಕ್ಷವು ಮಹತ್ವವನ್ನು ಪಡೆಯುತ್ತದೆ. 

ಪಿತೃ ಯಜ್ಞ ಎಂದರೇನು ಮತ್ತು ಪಿತೃ ಪಕ್ಷದಲ್ಲಿ ಇದರ ಆಚರಣೆಯ ವೈಶಿಷ್ಟ್ಯವೇನು? ತಂದೆ ತಾಯಿಯರು ಬದುಕಿರುವಾಗ ಅವರನ್ನು ಆದರಿಸಿ ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಅವರ ಕಾಲಾನಂತರ ಶ್ರಾದ್ಧ, ತರ್ಪಣಗಳ ಮೂಲಕ ಸತ್ಕರಿಸುವುದನ್ನು ಪಿತೃ ಯಜ್ಞ ಎಂದು ಕರೆಯುತ್ತಾರೆ. ವ್ಯಕ್ತಿ ಗತಿಸಿದ ತಿಥಿಯಂದು ಪ್ರತಿ ವರ್ಷ ಶ್ರಾದ್ಧ ಹಾಗೂ ಪ್ರತಿ ಅಮಾವಾಸ್ಯೆ, ಸಂಕ್ರಮಣಗಳಂದು ತರ್ಪಣ ಮಾಡುತ್ತಾರೆ. ಈ ಶ್ರಾದ್ಧವು ಎಲ್ಲಾ ಜಾತಿವರ್ಗಗಳ ಜನರೂ ಋಷಿಗಳು ಹೇಳಿಕೊಟ್ಟಿರುವ ತಮ್ಮ ತಮ್ಮ ವಿಧಾನಗಳಲ್ಲಿ ಅವಶ್ಯಕವಾಗಿ ಆಚರಿಸಬೇಕಾದ ಕರ್ಮವಾಗಿದೆ.  ಪಿತೃ ಪಕ್ಷದಲ್ಲಿ ಈ ಶ್ರಾದ್ಧ ತರ್ಪಣಗಳ ಆಚರಣೆ ವಿಶೇಷ. ಸಾಧ್ಯವಿರುವವರು ಪಿತೃ ಪಕ್ಷದಲ್ಲಿ ಪ್ರತಿದಿನವೂ ಶ್ರಾಧ್ಧ ಮಾಡುತ್ತಾರೆ ಇಲ್ಲದಿದ್ದಲ್ಲಿ ಒಂದು ದಿನ ವಿಶೇಷ ತರ್ಪಣವನ್ನು ಮಾಡಿ ಭೋಜನವನ್ನು ಮಾಡಿಸುತ್ತಾರೆ. ಮಹಾಲಯ ತರ್ಪಣ ಹೇಗೆ ವಿಶೇಷವೆಂದರೆ - ಪ್ರತಿ ಅಮಾವಾಸ್ಯೆ ತರ್ಪಣದಲ್ಲಿ ತಂದೆ ಕಡೆಯ ಹಿಂದಿನ ಮೂರು ತಲೆಮಾರು ಹಾಗೂ ತಾಯಿಯ ಕಡೆಯ ಹಿಂದಿನ ಮೂರುತಲೆಮಾರುಗಳಿಗೆ ಮಾತ್ರ ತರ್ಪಣ ಆದರೆ ಮಹಾಲಯ ತರ್ಪಣದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಗತಿಸಿರುವವರಿಗೆ ತರ್ಪಣ ನೀಡುತ್ತಾರೆ. ಈ ಪಕ್ಷದಲ್ಲಿ ತರ್ಪಣ ಸ್ವೀಕರಿಸುವವರನ್ನು ಕಾರುಣ್ಯ ಪಿತೃಗಳು ಎನ್ನುತ್ತಾರೆ ಮತ್ತು ಈ ಕಾರುಣ್ಯ ಪಿತೃಗಳ ಪಟ್ಟಿಯಲ್ಲಿ ನೇರವಾದ ಪೂರ್ವಜರಲ್ಲದೇ ಗತಿಸಿರುವ ಇತರ ಸಂಬಂಧಿಕರು, ಆಚಾರ್ಯರು ಮತ್ತು ಆಪ್ತ ಮಿತ್ರರೂ ಸಹಾ ಸೇರಿ ತರ್ಪಣದ ಪಟ್ಟಿ ದೊಡ್ಡದಾಗಿರುತ್ತದೆ. ಈ ಕಾರಣದಿಂದಲೂ ಪಿತೃಪಕ್ಷದ ಆಚರಣೆ ವಿಶೇಷವಾಗಿರುತ್ತದೆ.

ಒಬ್ಬ ವ್ಯಕ್ತಿಯ ಅದರಲ್ಲೂ ಗೃಹಸ್ಥನ ಜೀವನದಲ್ಲಿ ಪಿತೃ ಯಜ್ಞವಷ್ಟೇ ಅಲ್ಲದೇ ಮಹಾ ಯಜ್ಞಗಳೂ ಸಹಾ ಪ್ರಮುಖವಾಗಿರುತ್ತದೆ ಆದರೆ ವಿಸ್ತಾರಭಯದಿಂದ ಅವುಗಳೆಲ್ಲದರ ವಿವರಣೆಯನ್ನು ಈ ಲೇಖನದಿಂದ ಹೊರಗಿಡಲಾಗಿದೆ ಅಷ್ಟೇ. 

ಹೀಗೆ ನೇರವಾದ ಪೂರ್ವಜರಲ್ಲದೇ ಇನ್ನೂ ಅನೇಕ, ಗತಿಸಿರುವವರ ಸದ್ಗತಿಗೆ ಕಾರಣವಾಗಿ ತಾನೂ ಕೃತಾರ್ಥನಾಗುವ ಆಚರಣೆಗಳಿಗೆ ಪಿತೃ ಪಕ್ಷ ಪ್ರಶಸ್ತ ಅವಕಾಶವಾಗಿದ್ದು ಮಹರ್ಷಿಗಳು ನಮಗೆ ಕೊಟ್ಟಿರುವ ಅಪೂರ್ವ ಕೊಡುಗೆಯಾಗಿದೆ. ಆದುದರಿಂದ ಇಂತಹಾ ಅಪೂರ್ವಕೊಡುಗೆಯನ್ನು ಸದುಪಯೋಗ ಪಡಿಸಿಕೊಳ್ಳಲು ತಂದೆತಾಯಿ ಇರುವವರು ಅವರನ್ನು ಪ್ರೀತ್ಯಾದರಗಳಿಂದ ನೋಡಿಕೊಂಡು ಉಳಿದವರು ಶ್ರಾದ್ಧ, ತರ್ಪಣಗಳಿಂದ ಪಿತೃ ದೇವತೆಗಳನ್ನು ಆರಾಧಿಸಿ ನಾವೆಲ್ಲರೂ ಕೃತಾರ್ಥರಾಗೋಣ.

ಸೂಚನೆ : ವಿಜಯ ಕರ್ನಾಟಕದ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, October 7, 2018

ವಿದ್ಯಾವಿಹೀನಃ ಪಶುಭಿಃ ಸಮಾನಃ (Vidyavihinah pashubhihi samanaha)


ಲೇಖಕರು: ತಾರೋಡಿ ಸುರೇಶ, ಬೆಂಗಳೂರು

ವಿದ್ಯೆಯ ಮಹತ್ವವನ್ನು ವಿವರಿಸುವ ಋಷಿಗಳ ಮಾತಿದು. ವಿದ್ಯೆ ಇಲ್ಲದವನು ಪ್ರಾಣಿಗಳಿಗೆ ಸಮಾನ, ವಿದ್ಯೆಯೇ ಮಾನವನಲ್ಲಿರುವ ವಿಶೇಷ. ಅದೇ  ಮಾನವ ಮತ್ತು ಪ್ರಾಣಿಗಳಲ್ಲಿರುವ ಬಹುಮುಖ್ಯ ವ್ಯತ್ಯಾಸ. ಸುಖಮಯವೂ, ಶ್ರೇಷ್ಠವೂ ಆದ ಜೀವನಕ್ಕೆ ವಿದ್ಯೆ ಅತ್ಯಗತ್ಯ. ಆದ್ದರಿಂದಲೇ ವಿದ್ಯಾವಂತನಿಗೆ, ವಿದ್ಯೆಯಿಲ್ಲದ ಪ್ರಾಣಿಗಳು ಸಮನಾಗಲಾರವು. ಮತ್ತು ಪ್ರಾಣಿಗಳಿಗಿಂತ ಉತ್ತಮಬಾಳ್ವೆ ಬೇಕಿದ್ದಲ್ಲಿ ವಿದ್ಯಾವಂತನಾಗಲೇಬೇಕು ಎಂಬ ಸಂದೇಶ ಇಲ್ಲಿದೆ.   
ಪ್ರಾಣಿಗಳು ಪ್ರಕೃತಿಯ ಸೆಳೆತಕ್ಕನುಗುಣವಾಗಿ ಬಾಳುತ್ತವೆ. ಅವುಗಳಲ್ಲಿ ಹಸಿವು, ನಿದ್ರೆ, ಭಯ, ವಂಶಬೆಳೆಸುವಿಕೆ ಇವೆಲ್ಲವೂ ಸಹಜವಾಗಿ ನಡೆಯುತ್ತವೆ. ಅದಕ್ಕೆ ಬೇಕಾದ ಕೌಶಲ್ಯಗಳು ಜನ್ಮಜಾತವಾಗಿರುತ್ತವೆ. 
 ಗಾನಕ್ಕೆ ಕೋಗಿಲೆ, ನಾಟ್ಯಕ್ಕೆ ನವಿಲು, ಓಟಕ್ಕೆ ಚಿರತೆ, ದೇಹಬಲಗಳಿಗೆಲ್ಲ ಪ್ರಾಣಿಗಳೇ ಮಾದರಿಗಳು.  ಇಲ್ಲೆಲ್ಲಾ ಪ್ರಾಣಿಗಳದ್ದೇ ಮೇಲುಗೈ.
ಕೆಲವು ಪ್ರಾಣಿಗಳಲ್ಲಿ ಗಣಿತಪ್ರಜ್ಞೆಯನ್ನೂ ನೋಡಬಹುದು. ದುಂಬಿಯು ತನ್ನ ಗೃಹರಚನೆಗೆ ನಿರ್ದಿಷ್ಟ ಸಂಖ್ಯೆಯ ಎಲೆಗಳನ್ನು ಬಳಸುತ್ತದೆ. ಇರುವೆಗಳಲ್ಲಿ ಸೈನಿಕರದ್ದೇ ಒಂದು ಗುಂಪು. ತಾಯಿಪಕ್ಷಿಯು ಮರಿಗೆ ಹಾರುವುದನ್ನು ಕಲಿಸುವ ಶಿಕ್ಷಕಿ. ಮುಂಗುಸಿಯು ಮೂಲಿಕೆಗಳನ್ನು ತಿಂದು ವಿಷದಿಂದ ರಕ್ಷಿಸಿಕೊಳ್ಳುತ್ತದೆ. ಗಂಧಗ್ರಹಣ, ನಕ್ಷತ್ರಗಳ ನಕ್ಷೆಗಳಿಂದ ತಮ್ಮ ಮನೆಯನ್ನು ಪತ್ತೆಹಚ್ಚುತ್ತವೆ. ಮನೆಕಟ್ಟಲು ಮೇಸ್ತ್ರಿಗಾಗಿ ಕಾಯುವುದಿಲ್ಲ. ಕ್ರೃತಜ್ಞತೆ, ಸ್ವಾಮಿಭಕ್ತಿ ಇತ್ಯಾದಿ ಸದ್ಗುಣಗಳಲ್ಲಿಯೂ ಅವೇ ಮಾದರಿಗಳು.
 ಸಾಕುಪ್ರಾಣಿಗಳಿಗೆ ಮಸಾಲೆ ದೋಸೆ ತಿನ್ನಿಸಿ, ಕಾಫಿ ಕುಡಿಸಿ, ಚಡ್ಡಿ ಹಾಕಿಸಿ ಅಭ್ಯಾಸ ಮಾಡಿಸದಿದ್ದಲ್ಲಿ ಅವು ಸಾಮಾನ್ಯವಾಗಿ ಆರೋಗ್ಯದಿಂದ ಇರುತ್ತವೆ! ಈ ಹಿನ್ನೆಲೆಯಲ್ಲಿ ಪ್ರಾಣಿಗಳಲ್ಲಿ ವಿದ್ಯೆ ಇಲ್ಲವೆಂದು ಹೇಗೆ ಹೇಳಲಾದೀತು?
ಮಾನವನಾದರೋ ಓದಬಲ್ಲ. ಬರೆಯಬಲ್ಲ. ಇನ್ನೊಂದು ಭಾಷೆಯನ್ನು ಕಲಿಯಬಲ್ಲ. ಇಂದ್ರಿಯಗೋಚರವಾದ ಎಲ್ಲ ಕ್ಷೇತ್ರಗಳಲ್ಲಿಯೂ ಮನುಷ್ಯನ ಸಾಧನೆ ಅದ್ಭುತ. ನಿಸರ್ಗದ ರಹಸ್ಯಗಳನ್ನು ಅನ್ವೇಷಿಸಿ ಬಳಸಿಕೊಳ್ಳವಲ್ಲಿ ಮಾನವ ಸಿದ್ಧಹಸ್ತ. ವಿದ್ಯೆಯು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎನ್ನುವುದು ನಿರ್ವಿವಾದ.
ಇಲ್ಲಿ ಗಮನಿಸಬೇಕಾದದ್ದು ಮಾನವ ಮತ್ತು ಪಶುಗಳೆರಡೂ ನಡೆಸುತ್ತಿರುವ ಜೀವನದ ವ್ಯಾಪ್ತಿಯನ್ನು. ಎಚ್ಚರ, ಸ್ವಪ್ನ, ನಿದ್ರೆ-ಈ ಮೂರು ಅವಸ್ಥೆಗಳನ್ನೂ ಅನುಭವಿಸುವುದು ಎರಡೂ ವರ್ಗಗಳಲ್ಲಿಯೂ ಸಾಮಾನ್ಯವಾದುದ್ದು.  ಪ್ರಾಣಿಗಳು ಪ್ರಕೃತಿಯ ಪ್ರೇರಣೆಯಂತೆ ನಡೆದರೆ, ಮಾನವ ತನ್ನ ಬುದ್ಧಿಸಾಮರ್ಥ್ಯವನ್ನೂ ಬಳಸುತ್ತಾನೆ. ಆದರೆ ಎರಡು ಕಡೆಯೂ ಸುಖವು ಮೂರು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ. ವಾಸ್ತವಿಕವಾಗಿ, ಪ್ರಾಣಿಗಳು ನಿಸರ್ಗವನ್ನೂ,ತಮ್ಮ ದೇಹವನ್ನೂ ಮನುಷ್ಯನಂತೆ ದುರ್ಬಳಕೆ ಮಾಡಿಕೊಳ್ಳದೆ, ಮನುಷ್ಯನಿಗಿಂತ ಹೆಚ್ಚು ಸುಖವನ್ನು ಅನುಭವಿಸುತ್ತವೆ. ಒಟ್ಟಿನಲ್ಲಿ ಲೌಕಿಕಜೀವನಕ್ಕೆ ಬೇಕಾದ ವಿದ್ಯೆಗಳನ್ನು ಮಾನವ-ಪ್ರಾಣಿಗಳೆರಡರಲ್ಲೂ ನೋಡುತ್ತೇವೆ.
ಹಾಗಿದ್ದಲ್ಲಿ ವಿದ್ಯಾವಿಹೀನಃ ಪಶುಭಿಃ ಸಮಾನ: ಎನ್ನುವುದು ಹೇಗೆ ಸಮಂಜಸಇಂತಹ ಅಭಿಪ್ರಾಯಗಳ ಹಿಂದಿರುವ ಋಷಿಹೃದಯವೇನು? ಇದಕ್ಕೆ ಉತ್ತರವನ್ನು ನಾವು ಮಾನವ ಹಾಗೂ ಪ್ರಾಣಿಗಳ ದೇಹರಚನೆಯಲ್ಲಿನ ವ್ಯತ್ಯಾಸ ಮತ್ತು ವಿದ್ಯೆಯ ಸರಿಯಾದ ಪರಿಕಲ್ಪನೆಯಲ್ಲಿ ಹುಡುಕಬೇಕಾಗುತ್ತದೆ.
 ಸಾಮಾನ್ಯಮನುಷ್ಯರು ತಮ್ಮ ದೇಹವನ್ನಾಗಲೀ, ಜಗತ್ತನ್ನಾಗಲೀ ಇಂದ್ರಿಯಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರಷ್ಟೆ. ಹಾಗಲ್ಲದೆ, ಅತೀಂದ್ರಿಯವಾದ ದೃಷ್ಟಿ(ಯೋಗದೃಷ್ಟಿ)ಯನ್ನು  ತಪಸ್ಸಿನಿಂದ ಸಂಪಾದಿಸಿ ಜೀವನವನ್ನು ಸಮಗ್ರವಾಗಿ ಅರ್ಥಮಾಡಿಕೊಂಡವರೇ ಋಷಿಗಳು. ಇಂತಹ ದೃಷ್ಟಿಸಂಪಾದನೆ ಮಾನವನಿಗೆ ಮಾತ್ರ ಸಾಧ್ಯ. ಯೋಗದೃಷ್ಟಿಯಿಂದ ನೋಡಿದಾಗ ಅವರಿಗೆ ಮಾನವದೇಹರಚನೆಯ ವಿಶೇಷತೆಯೂ, ಜೀವನದ ಸಹಜ ಧ್ಯೇಯವೂ ಮತ್ತು ಅದನ್ನು ಸಾಧಿಸಿದಾಗ ಆಗುವ ಲಾಭವೂ ಸಮಗ್ರವಾಗಿ ಅರ್ಥವಾಯಿತು. ಅವರ ಅನ್ವೇಷಣೆಯ ವಿವರಗಳನ್ನು ಈ ಕೆಳಗಿನಂತೆ ಸಂಗ್ರಹಿಸ ಬಹುದು.
ಜೀವಿಗಳೆಲ್ಲರ ಹೃದಯದಲ್ಲಿ ಜ್ಯೋತೀರೂಪದಲ್ಲಿ ಬೆಳಗುತ್ತಿರುವ ಒಂದು ತತ್ವವಿದೆ. ದೇವರು, ಭಗವಂತ ಎಂದೆಲ್ಲ ಕರೆಯಲ್ಪಟ್ಟ, ಆ ವಿಶ್ವಬೀಜದಿಂದಲೇ ಸಂಪೂರ್ಣವಿಶ್ವವೂ, ಸಮಸ್ತಜೀವಿಗಳೂ-ಸೂಕ್ಷ್ಮವಾದ ಆಲದ ಬೀಜದಿಂದ ವಿಶಾಲ ವಟವೃಕ್ಷವು ವಿಕಾಸಗೊಳ್ಳುವಂತೆ-ಅರಳಿಬಂದಿವೆ. ಬೀಜದಿಂದ ಬೆಳೆದ ವೃಕ್ಷವು ಪುನಃ ಬೀಜದಲ್ಲಿಯೇ ತನ್ನ ವಿಕಾಸವನ್ನು ಮುಗಿಸಿಕೊಳ್ಳುವಂತೆ ತಮ್ಮ ಸಹಜನೆಲೆಯಾದ ಪರಮಾತ್ಮ ತತ್ವದಲ್ಲಿ ಜೀವಿಗಳು ಲಯಗೊಂಡಾಗಲೇ ಪೂರ್ಣವಿಶ್ರಾಂತಿ. ಅಲ್ಲಿ ದೊರೆಯುವ ಆನಂದವನ್ನು ಊಹಿಸುವುದೂ ಅಸಾಧ್ಯ. 
 ಅಷ್ಟಲ್ಲದೆ, ಮನುಷ್ಯನು ಯೋಗ ಮುಂತಾದ ವಿದ್ಯೆಗಳನ್ನು ಅವಲಂಬಿಸಿ ತನ್ನ ಮೂಲಸ್ವರೂಪದಲ್ಲಿ ಸೇರಬಲ್ಲ. ಅಂತಹ ರಚನಾವಿನ್ಯಾಸ ಮಾನವ ದೇಹದಲ್ಲಿದೆ. ಅದೇ ಮಾನವ ಮಾತ್ರರು ಅನುಭವಿಸಬಹುದಾದ ತುರೀಯವೆಂಬ ನಾಲ್ಕನೆಯ ಅವಸ್ಥೆ.  ನಾಲ್ಕೂ ಅವಸ್ಥೆಗಳ ಪೂರ್ಣಜೀವನ ಮಾನವನ ಜನ್ಮಸಿದ್ಧ ಹಕ್ಕು. ತುರೀಯವನ್ನು ಸಾಧಿಸದಿದ್ದರೆ ಜೀವನ ವ್ಯರ್ಥ. ಏಕೆಂದರೆ ಮಾನವದೇಹದ  ವೈಶಿಷ್ಟ್ಯವೇ ತುರೀಯವನ್ನು ಸಾಧಿಸಬಲ್ಲ ಸಹಜ ಸಾಮರ್ಥ್ಯ. ಈ ತುರೀಯವನ್ನು ಪಡೆಯುವ ದೇಹರಚನೆ, ಮನೋರಚನೆಗಳು ಪ್ರಾಣಿಗಳಿಗಿಲ್ಲ.
ಋಷಿಗಳ ದೃಷ್ಟಿಯಲ್ಲಿ ವಿದ್ಯೆಯು ಕೇವಲ ಲೌಕಿಕ ಜೀವನಕ್ಕೆ ಸಾಧಕವಾದ ಕೌಶಲ್ಯವಲ್ಲ. ಮಾಹಿತಿಸಂಗ್ರಹವಲ್ಲ. ವಿದ್ಎಂದರೆ ಜ್ಞಾನವೆಂದೂ. ಯಾಎಂದರೆ ಅದನ್ನು ಒದಗಿಸಿಕೊಡುವ ಸಾಧನವೆಂದೂ ಅರ್ಥ. ಗೀತೆ ಇತ್ಯಾದಿ ಆರ್ಷಗ್ರಂಥಗಳಲ್ಲಿ ಜ್ಞಾನ ಎಂಬ ಪದದ ಮೌಲಿಕವಾದ ಅರ್ಥವು ಪರಮಾತ್ಮ ಎಂದು ಸ್ಪಷ್ಟಪಡಿಸಿದೆ. ಹೀಗೆ ವಿದ್ಯೆಯೆಂದರೆ ಜ್ಞಾನವನ್ನು,ಸುಖದ ನಿಧಿಯಾದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನ-ವಿದ್ಯಯಾ ಅಮೃತಮಶ್ನುತೇ ಮಾನವನ ದೇಹರಚನೆಯೇ ಒಂದು ವಿದ್ಯಾರೂಪವಾಗಿದೆ ವಿದ್ಯಾಮಯೋ~ಯಮ್ ಪುರುಷಃ  
ಈ ಅರ್ಥದಲ್ಲಿ ಮಾನವ ವಿದ್ಯಾವಂತನಾದರೆ ಕೇವಲ ಪ್ರಾಣಿಸದೃಶನಾಗಿ ಉಳಿಯುವುದಿಲ್ಲ. ಇಲ್ಲದಿದ್ದರೆ ಮಹತ್ತಾದ ಸುಖದಿಂದ ವಂಚಿತನಾಗಿ ಬದುಕು ವ್ಯರ್ಥವಾಗುವುದು ಎಂಬ ವಿಷಯವನ್ನು ಮನವರಿಕೆ ಮಾಡಿಕೊಟ್ಟವರು ಶ್ರೀರಂಗಮಹಾಗುರುಗಳು. ಹೀಗೆ ಈ ಆರ್ಷವಾಕ್ಯವು ಅರ್ಥಪೂರ್ಣವಾಗಿದೆ. ಭಾರತದ ಜನಮಾನಸವು ತಮ್ಮ ಪೂರ್ವಜರಾದ ಋಷಿಗಳ ಆಶಯದಂತೆ ನಿಜವಾದ ಅರ್ಥದಲ್ಲಿ ವಿದ್ಯಾವಂತರಾಗಿ ಬಾಳಿ ಶ್ರೇಷ್ಠಜೀವನದ ಹರಿಕಾರರಾಗುವ ಸಂದೇಶವನ್ನು ನೀಡುತ್ತದೆ. 
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಗೃಹರಚನೆ (Griharachane)

                ಗೃಹ ಅಥವ ಮನೆ ಎಲ್ಲರಿಗೂ ಅತ್ಯಗತ್ಯವಾದದ್ದು. ಅದರಲ್ಲೂ ಸ್ವಂತಮನೆಯೇ ಆದರೆ ಅತ್ಯುತ್ತಮ. ಮನೆಕಟ್ಟಿ ನೋಡು, ಮದುವೆಮಾಡಿ ನೋಡು ಎನ್ನುವ ಗಾದೆಯಂತೆ ಈ ಕೆಲಸದಲ್ಲಿ ಆರ್ಥಿಕ ಹಾಗೂ ಇತರೇ ಸಮಸ್ಯೆಗಳನ್ನು ಎದುರಿಸಬಾಕಾದರೂ ನಮ್ಮ ಸೌಲಭ್ಯದಂತೆ ವಾಸಸ್ಥಾನವಾಗುವುದೇ ತೃಪ್ತಿಕರ. ಇತ್ತೀಚೆಗೆ ಸಾಕಷ್ಟು ಸೌಲಭ್ಯಗಳು ದೊರಕುವುದರಿಂದ ಕೆಲಸವು ಸುಲಭವಾಗುತ್ತಿದೆ.
                ಆಧುನಿಕ ಚಿಂತನೆಯಲ್ಲಿ ಮನೆಯೆಂಬುದು ನಮ್ಮ ಅನುಕೂಲಕ್ಕೆ, ಅಭಿರುಚಿಗೆ ತಕ್ಕಂತಿರಬೇಕು; ಸುಭದ್ರವಾಗಿಯೂ, ಸುರಕ್ಷಿತವಾಗಿಯೂ ಇರಬೇಕು. ವಾಸ್ತುಶಾಸ್ತ್ರಕ್ಕೆ ತಕ್ಕಂತಿರಬೇಕೆಂಬ ಅಂಶವೂ ಬಹಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ವಾಸ್ತುಸರಿಯಿಲ್ಲದಿದ್ದಲ್ಲಿ ಲಕ್ಷಾಂತರ ಖರ್ಚುಮಾಡಿಯಾದರು ಮನೆಯ ಕೆಲವುಭಾಗಗಳನ್ನು ಕೆಡವಿ ಸರಿಮಾಡಿಸುವ ಪರಿಪಾಟಿಯು ಕಂಡುಬರುತ್ತಿದೆ).
                ಗೃಹರಚನೆಯಲ್ಲಿ ಇಷ್ಟಂಶಗಳನ್ನು ಗಮನಿಸುವುದು ಸಾಕೆಂದರೆ ಪ್ರಾಣಿ-ಪಕ್ಷಿಗಳು ಈ ಕೆಲಸವನ್ನು ಮನುಷ್ಯನಿಗಿಂತಲೂ ಚೆನ್ನಾಗಿ ಮಾಡುತ್ತವೆಯಲ್ಲಾ! ಉದಾಹರಣೆಗೆ, ಗೀಜಗನು ತನ್ನ ಗೂಡಿನಲ್ಲಿ ಮೊಟ್ಟೆಗಳನ್ನಿಡಲು, ಆಹಾರಶೇಖರೆಣೆಗೆ ಇತ್ಯಾದಿಗಳಿಗೆ ಬೇರೆಬೇರೆ ಕೋಣೆಗಳನ್ನು ರಚಿಸಿ, ಗಾಳಿ-ಬೆಳಕೂ ಚೆನ್ನಾಗಿ ಬರುವಂತೆ, ಆಕರ್ಷಕವಾಗಿಯೂ ಇರುವಂತೆ ಕಟ್ಟುತ್ತದೆ. ಅದೂ ಯಾವ ಇನ್ಜಿನೀಯರ್, ಕೆಲಸಗಾರರ ಸಹಕಾರವೂ ಇಲ್ಲದೇಯೇ!
                ಹಾಗಾದರೆ ಮನುಷ್ಯನ ಗೃಹರಚನೆಯಲ್ಲಿ ಇನ್ಯಾವ ವೈಶಿಷ್ಟ್ಯವೂ ಇಲ್ಲವೇ? ಈ ವಿಚಾರದಲ್ಲಿ ಮಹರ್ಷಿಗಳ ಆಶಯವು ಉನ್ನತವಾದ ನೋಟವನ್ನೊಳಗೊಂಡಿದೆ. ಯಾವುದೇ ಮನೆಯನ್ನು ಕಟ್ಟಬೇಕಾದರೂ ಅದಕ್ಕೊಂದು ಪ್ಲಾನ್ ಅವಶ್ಯಕ. ಅದು ಮೊದಲು ನಮ್ಮ ಮತಿಯಲ್ಲಿ ಉದ್ಭವಿಸಿ ನಂತರ ಒಂದು ಹಾಳೆಯಮೇಲೆ ರೂಪತಳೆದು ಕಟ್ಟಡವಾಗಿ ಪರಿಣಮಿಸುತ್ತದೆ. ಆ ಪ್ಲಾನೇ ನಮ್ಮ ಮನೆಗೆ ಮಾಡಲ್ ಆಗುವುದು. ಆದರೆ ಜ್ಞಾನಿಗಳ ನೋಟದಲ್ಲಿ ಗೃಹರಚನೆಗೆ ಮಾಡಲ್ ಆಗಿರುವುದು ನಮ್ಮ ಶರೀರವೇ.
                ಶರೀರದ ವಿವಿಧ ಕೋಶಗಳು ಯಜಮಾನನಾದ ಜೀವಿಯ ಆಶಯದಂತೆ ಸುವ್ಯವಸ್ಥಿತವಾಗಿರುವಂತೆ ನಮ್ಮ ಮನೆಯೂಕೂಡ ನಮ್ಮೊಳಗಿನ ಜೀವಿಯ ಆಶಯಕ್ಕೆ ತಕ್ಕಂತಿರಬೇಕು. ಜೀವಿಯ ಆಶಯವೇನು? ಎಂದರೆ ನಮ್ಮ ಇಂದ್ರಿಯಗಳ ಕಾಮನೆಯನ್ನೇ ಆಶಯವೆಂದು ತಿಳಿಯುತ್ತೇವೆ. ಖೈದಿಯೊಬ್ಬನು ಮತ್ತೊಬ್ಬರ ಅಧೀನದಲ್ಲಿದ್ದಾಗ ನ್ಯಾಯಾಧೀಶನ ಮುಂದೆಯೇ ನಿಲ್ಲಿಸಿದರೂ ನಿಜವನ್ನು ಹೇಳಲಾಗದೆ  ತನ್ನನ್ನು ವಶಪಡಿಸಿಕೊಂಡವರು ನುಡಿಸಿದಂತೆಯೇ ನುಡಿಯುತ್ತಾನೆ. ಅಂತೆಯೇ ನಾವೂಸಹ ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿರುವಾಗ ನಮ್ಮ ನಿಜವಾದ ಆಶಯವನ್ನು ತಿಳಿಯಲಾಗುವುದಿಲ್ಲ. ಆದರೆ ಇಂದ್ರಿಯಗಳ ಸಂಕೋಲೆಯಿಂದ ಬಿಡಿಸಿಕೊಂಡ ಜ್ಞಾನಿಗಳು ಸಾರುವುದು: ಜೀವಿಯ ಆಶಯ-ತಾನು ಎಲ್ಲಿಂದ ಬಂದನೋ ಆ ಭಗವಂತನೆಡೆಗೇ ಸಾಗ ಬೇಕೆನ್ನುವುದೇ. ಆದ್ದರಿಂದ ಜ್ಞಾನಿಗಳ ಉಪಾಯವೇನೆಂದರೆ ಜೀವನದಲ್ಲಿ ಭಗವಂತನೆಡೆಗೆ ಸೇರಲು ಅಡ್ಡಿಮಾಡದಂತೆ ಇಂದ್ರಿಯಗಳಿಗೆ ಬೇಕಾದ ಸುಖವನ್ನೂ ಕೊಟ್ಟುಕೊಂಡೇ ಭಗವಂತನೆಡೆಗೆ ಸಾಗುವಂತೆ ಮಾಡುವುದು. ಅದೇ ಧರ್ಮ-ಅರ್ಥ-ಕಾಮ-ಮೋಕ್ಷಗಳಿಂದೊಡಗೂಡಿದ ಪುರುಷಾರ್ಥಮಯ ಜೀವನವಿಧಾನ. ಅದಕ್ಕಾಗಿ ಜೀವವು ನಿರ್ಮಿಸಿಕೊಂಡ ದಿವ್ಯವಾದ ಗೂಡೇ ಈ ಶರೀರ. ಮಾನವಶರೀರ ಯೋಗ-ಭೋಗಾಯತನವಾದ, ಅದ್ಭುತವಾದ ಸಹಜಶಿಲ್ಪವಾಗಿದೆ.
                ಆದ್ದರಿಂದ ಋಷಿಗಳ ನೋಟದಲ್ಲಿ ಗೃಹವೂಕೂಡ ಯೋಗ-ಭೋಗಗಳಿಗೆ ಎಡೆಯಾಗಿ ಅದಕ್ಕೆ ಅನುಕೂಲಿಸುವಂತಿರಬೇಕು. ಧರ್ಮಮಯವಾದ ಜೀವನನಡೆಸಲು ಮನೆಯಲ್ಲಿ ದುಷ್ಟಶಕ್ತಿಗಳನ್ನು ಓಡಿಸಿ ದೇವತಾಶಕ್ತಿಗಳನ್ನು ತುಂಬಬೇಕು. ಈ ಬಗೆಗೆ ವಿವರಗಳನ್ನು ನೀಡುವುದೇ ವಾಸ್ತುಶಾಸ್ತ್ರ.
                ಮನೆಯ ನಾಲ್ಕು ಗೋಡೆಗಳು ನಾಲ್ಕು ಪುರುಷಾರ್ಥಗಳಿಂದ ಕೂಡಿದ ಜೀವನವನ್ನು ಮಾಡಬೇಕೆನ್ನುವುದನ್ನು ನೆನೆಪಿಸುತ್ತವೆ. ಮನೆಯಲ್ಲಿನ ಕಂಭಗಳೇ ಪ್ರಾಣಾಪಾನಗಳೆಂಬ ಕಂಭದಮೇಲೆ ಶರೀರವು ನಿಂತಿರುವುದರ ಪ್ರತೀಕ. ಮನೆಯ ಮಧ್ಯದಲ್ಲಿ ಪ್ರಧಾನವಾಗಿ ಧರ್ಮದ ಪ್ರತೀಕವಾಗಿ ಒಂದು ಕಂಭವಿರಬೇಕು. ಸೂರ್ಯ-ಚಂದ್ರರ ಗುರುತಾಗಿ ಎರಡು ಬಾಗಿಲುಗಳು. ಮೋಕ್ಷಸಾಧನವಾದ ಪೂಜಾಗೃಹವೆಂಬುದು ಮನೆಯ ಅತ್ಯಗತ್ಯವಾದ ಭಾಗವಾಗಿರಬೇಕು. ಇಂತಹ ವಾಸ್ತುವಿನಿಂದ ಕೂಡಿದ್ದರೆ ಪುರುಷಾರ್ಥಸಾಧನೆ ಸುಲಭವೆಂಬುದು ಮಹರ್ಷಿಗಳ ದೃಷ್ಟಿಯಾಗಿದೆ.
ಶರೀರದಮಾಡಲ್‌ನಲ್ಲಿಯೇ ಗೃಹವನ್ನುನಿರ್ಮಿಸಿ ಜೀವದ ಆಶಯದಂತೆ ಜೀವನಮಾಡಿದರೆ ಬಾಳಾಟ; ಇಲ್ಲವೆಂದರೆ ಗೋಳಾಟವೇ ಸರಿ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಯಾವುದನ್ನು ಬಯಸೋಣ? (Yavudannu bayasona?)

ಲೇಖಕರು: ಮೈಥಿಲೀ ರಾಘವನ್, ಬೆಂಗಳೂರು
ಏನಿದು ಪ್ರಶ್ನೆ? ಮನಸ್ಸನ್ನು ಸೆಳೆಯುವುದನ್ನು ಬಯಸಬೇಕು. ಇಂದಿನ ಯುಗದಲ್ಲಿ ಎತ್ತ ತಿರುಗಿದರೂ ಮನಸೆಳೆಯುವ ವಿಷಯಗಳು ಅಸಂಖ್ಯಾತವಾಗಿ ಕಂಡು ಬರುತ್ತಿವೆ. ಅಲಂಕಾರ ಸಾಧನ ಸಾಮಗ್ರಿಗಳು, ನೂತನ ಶೈಲಿಯ ವೇಷಭೂಷಣಗಳು, ಮನೋರಂಜನೆಯ ಮಾಧ್ಯಮಗಳು, ಬಗೆಬಗೆಯ ಆಹಾರ ಪದಾರ್ಥಗಳು, ಸುಖಸೌಲಭ್ಯಗಳನ್ನು ಒದಗಿಸುವ ಯಂತ್ರಗಳು ಇತ್ಯಾದಿ. ಇವುಗಳಿಂದ ಮನೆತುಂಬಿಸುವಷ್ಟು ಶ್ರೀಮಂತಿಕೆಯೂ ಸಹ ಇಂದು ಸರ್ವ ಸಾಮಾನ್ಯವಾಗಿದೆ. ಹೀಗಿರುವಾಗ ಏನನ್ನು ಬಯಸೋಣ ಎಂಬ ಪ್ರಶ್ನೆಯೇ ಹಾಸ್ಯಾಸ್ಪದ. ಎಲ್ಲೆಡೆಯಲ್ಲೂ ಚೆನ್ನನ್ನೇ ಬಯಸುವುದು ಮಾನವನ ಪ್ರವೃತ್ತಿಯಾದ್ದರಿಂದ ಚೆನ್ನಾಗಿರುವ ಯಾವುದೇ ಪದಾರ್ಥವನ್ನಾದರೂ ಬಯಸಿ ಪಡೆದು ಸಂತೋಷಿಸಬಹುದಲ್ಲವೇ?
ನಮ್ಮ ಮನಸ್ಸನ್ನು ಆಕರ್ಷಿಸುವ ವಸ್ತುವೇ ನಮ್ಮ ಪಾಲಿಗೆ ಚೆನ್ನಾಗುವುದು. ಆದರೆ ನಮಗೆ ಪ್ರಿಯವಾದದ್ದು ಮತ್ತೊಬ್ಬರಿಗೆ ಅಪ್ರಿಯವಾಗಬಹುದು. ಆದ್ದರಿಂದ ಯಾವುದು ಚೆನ್ನು ಎಂಬ ನಿರ್ಣಯವು ಅವರವರ ಅಭಿರುಚಿಯನ್ನವಲಂಬಿಸಿದೆಯೇ ಹೊರತು ವಸ್ತುನಿಷ್ಟವಾದುದಲ್ಲ ಎನ್ನೋಣವೇ
ಕುಡುಕನೊಬ್ಬನಿಗೆ ಮದ್ಯಪಾನವೇ ಚೆನ್ನು, ಪ್ರಾಣಕ್ಕಿಂತಲೂ ಪ್ರಿಯ. ಇಂದಿನ ಬಾಲಕರಿಗೆ ಆಟೋಟಗಳಿಗಿಂತಲೂ ನಿರಂತರ ಕಾರ್ಟೂನ್-ನೋಟವೇ ಚೆನ್ನು. ಅನೇಕರಿಗೆ ಬೀದಿಯಲ್ಲೇ ತಯಾರಾಗಿ ಅಲ್ಲೇ ಮಾರಾಟವಾಗುವ (ಧೂಳುತುಂಬಿದ) ಆಹಾರವೇ ಬಲು ಆಸ್ವಾದನೀಯ. ಆದರೆ ಒಬ್ಬ ವೈದ್ಯನ ನೋಟದಲ್ಲಿ ಇವು ಯಾವುದೂ ಚೆನ್ನಲ್ಲ. ಕಾರಣ ಇವು ದೇಹಾರೋಗ್ಯಕ್ಕೆ ತಂದೊಡ್ಡುವ ತೊಡಕು ಮತ್ತು ಉಂಟುಮಾಡುವ ಬುದ್ಧಿಭ್ರಮಣ. ಇಲ್ಲಿ ದೇಹ ಮತ್ತು ಬುದ್ಧಿಗಳ ಮೇಲೆ ಆಗುವ ಪರಿಣಾಮವೇ ಚೆನ್ನಿನ ನಿರ್ಣಯಕ್ಕೆ ಮಾನದಂಡ. ಆದ್ದರಿಂದ ವಿವೇಕದಿಂದ ನೋಡಿದಾಗ ಆಕರ್ಷಣೆಗಿಂತ ಆರೋಗ್ಯವೇ ಪ್ರಧಾನವೆಂಬುದು ನಿಸ್ಸಂಶಯ. ಮತ್ತು ಚೆನ್ನೆಂಬುದು ವ್ಯಕ್ತಿಗತವಲ್ಲ, ಪದಾರ್ಥದ ಗುಣವನ್ನವಲಂಬಿಸಿದೆಯೆಂಬುದೂ ಸ್ಪಷ್ಟವಾಗುತ್ತದೆ.
ಇನ್ನೂ ಆಳವಾಗಿ ವಿವೇಚಿಸುವುದಾದರೆ, ನಮ್ಮ ಮನಸ್ಸನ್ನು ದುಃಖದುಗುಡಗಳು ಆವರಿಸಿರುವಾಗ ಮೇಲೆ ಹೇಳಿದ ಆರೋಗ್ಯದ ದೃಷ್ಟಿಯಿಂದ ಚೆನ್ನಾದ ಯಾವುದೇ ವಸ್ತುವೂ ನಮಗೆ ರುಚಿಸದು. ಕಾರಣ ಎಂತಹ ಸುಖವನ್ನಾದರೂ ನಾವು ಅನುಭವಿಸುವುದು ಮನಸ್ಸಿನ ಮೂಲಕವೇ ಅಲ್ಲವೇ? ಆದ್ದರಿಂದ ಮನಸ್ಸಿನ ಸ್ವಾಸ್ಥ್ಯದ ಮೇಲೆ ಆಗುವ ಪರಿಣಾಮವು ಒಳಿತನ್ನು ನಿರ್ಣಯಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಎನ್ನಬಹುದು. ಯಾವುದೇ ಪದಾರ್ಥವನ್ನೂ ಬಯಸುವ ಮುನ್ನ ಈ ದೃಷ್ಟಿಯಿಂದ ಅದನ್ನು ಅಳೆಯುವುದು ಅನಿವಾರ್ಯವೆಂದರೆ ತಪ್ಪಾಗಲಾರದು.
ಹಾಗಾದರೆ ಮನಸ್ಸಿನ ಸ್ವಾಸ್ಥ್ಯವೆಂದರೇನು? ಕಣ್ಣಿನ ಆರೋಗ್ಯವೆಂದರೆ ಸಾಮಾನ್ಯರ ಗಣನೆಗೆ ಕಣ್ಣು ಕಾಣೀಸುತ್ತಿದೆ ಎನ್ನುವುದಷ್ಟೇ. ಆದರೆ ಕಣ್ಣಿನತಜ್ಞನೊಬ್ಬನಿಗೆ ಇದಿಷ್ಟೇ ಆರೋಗ್ಯದ ಲಕ್ಷಣವಲ್ಲ. ಕಣ್ಣಿನ ಹಿಂದಿರುವ ನರಮಂಡಲಗಳು, ಅವುಗಳ ಉಗಮಸ್ಥಾನವಾದ ಮೆದುಳಿನಕೇಂದ್ರ, ಅಲ್ಲಿ ನಡೆಯುವ ಪ್ರಕ್ರಿಯೆಗಳು-ಇವೆಲ್ಲವೂ ತಮ್ಮ ಸ್ವಸ್ಥಿಯಲ್ಲಿದ್ದು ಪೂರ್‍ಣ ಸಾಮರ್ಥ್ಯದಿಂದ ಕೂಡಿರುವುದೇ ಕಣ್ಣಿನ ಆರೋಗ್ಯಸ್ಥಿತಿ ಎಂಬುದಾಗಿ ಪರಿಗಣಿಸುತ್ತಾನೆ. ಅದರಂತೆಯೇ ಮನಸ್ಸು ತನ್ನ ಪೂರ್ಣ ಸಾಮರ್ಥ್ಯದಿಂದ ಕೂಡಿರುವುದೇ ಅದರ ಆರೋಗ್ಯದ ಲಕ್ಷಣ. ಈ ಬಗೆಗೆ ಆಧುನಿಕ ವೈದ್ಯಶಾಸ್ತ್ರವು ಸಾಕಷ್ಟು ವಿವರಣೆಗಳನ್ನು ನೀಡುತ್ತಿದೆ. ಆ ವಿಚಾರಗಳೆಲ್ಲವೂ ಭೌತಿಕಕ್ಷೇತ್ರವನ್ನು ಸಾದ್ಯವಾದಷ್ಟು ಮಟ್ಟಿಗೆ ಅನ್ವೇಷಣೆ ಮಾಡಿ ನಿರ್ಧರಿಸಿದ ಅಂಶಗಳಾಗಿವೆ.
ಆದರೆ ಭಾರತೀಯ ಮಹರ್ಷಿಗಳ ಅನುಭವಸಿದ್ಧವಾದ ಘೋಷಣೆಯೆಂದರೆ ಪ್ರತಿಮಾನವನಲ್ಲೂ ಭೌತಿಕಕ್ಷೇತ್ರವನ್ನೂ (ಅಂಗೋಪಾಂಗಗಳನ್ನೂ) ಮೀರಿದ ಅನೇಕ ಕೇಂದ್ರಗಳುಂಟು. ಅಲ್ಲಿ ಬೆಳಗುವ ಅನೇಕಾನೇಕ ದೇವತಾಶಕ್ತಿಗಳುಂಟು. ಆ ದೇವತೆಗಳಿಗೂ ನಿಯಾಮಕನಾದ ಪರಾತ್ಪರ ವಸ್ತು, ಪರಮಾತ್ಮನುಂಟು. ಮಾನವನ ಮನಕ್ಕೆ ಆ ಕೇಂದ್ರಗಳನ್ನೆಲ್ಲವನ್ನೂ ಮುಟ್ಟಿ ಆಯಾ ದೇವತೆಗಳನ್ನೂ, ಪರಮಾತ್ಮನನ್ನೂ ದರ್ಶನಮಾಡಿ ಅದರಿಂದಾಗುವ ಪರಮಾನಂದವನ್ನು ಭುಜಿಸಿ ಸುಖಿಸುವ ಯೋಗ್ಯತೆಯು ಜನ್ಮಸಹಜವಾಗಿಯೇ ಉಂಟು. ಕರ್ಮವಶದಿಂದಾಗಿ ಮುಚ್ಚಿಹೋಗಿರುವ ಆ ಕೇಂದ್ರಗಳು ಸದ್ಗುರುವಿನ ಅನುಗ್ರಹ, ಮಾರ್ಗದರ್ಶನಗಳಿಂದಕೂಡಿದ ಪ್ರಯತ್ನದಿಂದ ಮತ್ತೆ ತೆರೆಯಬಲ್ಲುದು ಎಂಬುದನ್ನು ಜ್ಞಾನಿಗಳು ಘಂಟಾಘೋಷವಾಗಿ ಸಾರುತ್ತಾರೆ.
ಮನುಷ್ಯಮಾತ್ರರಿಗೆ ಸಹಜ ಸಿದ್ಧವಾದ ಈ ಯೋಗ್ಯತೆಯನ್ನು ಮತ್ತೆ ಪಡೆಯುವುದೇ ಮನಸ್ಸಿನ ಪೂರ್ಣಸಾಮರ್ಥ್ಯದ, ಆರೋಗ್ಯದ ಲಕ್ಷಣ ಎನ್ನುವುದು ಋಷಿ ದೃಷ್ಟಿ. ಆದ್ದರಿಂದ ನಾವು ಬಯಸಿ ಬಳಸುವ ಪದಾರ್ಥವು ಮನಸ್ಸಿನ ಈ ಸಾಮರ್ಥ್ಯವನ್ನು ಕುಂಠಿತಗೊಳಿಸದಿದ್ದರೆ ಮಾತ್ರವೇ ಅವು ಬಳಕೆಗೆ ಯೋಗ್ಯವೆಂಬುದು ಅವರ ಮತ.
ಎಲ್ಲ ವಸ್ತುಗಳೂ ದರ್ಶನ-ಸ್ಪರ್ಶ-ಆಘ್ರಾಣಗಳ ಮೂಲಕ ಮಾನವನಮೇಲೆ ತಮ್ಮ ಪ್ರಭಾವವನ್ನು ಅವಶ್ಯವಾಗಿ ಬೀರುತ್ತವೆ. ಅವುಗಳ ಪರಿಣಾಮವು ಭೌತಿಕ-ದೈವಿಕ-ಆಧ್ಯಾತ್ಮಿಕವೆಂಬ ಮೂರೂ ಕ್ಷೇತ್ರಗಳಲ್ಲೂ ಆಗುವುದು ಎಂಬುದು ಋಷಿಗಳ ಪ್ರಯೋಗಸಿದ್ಧವಾದ ಸತ್ಯ. ತುಲಸಿ, ಎಲಕ್ಕಿ ಮುಂತಾದ ಕೆಲವುಪದಾರ್ಥಗಳು ಮೂರೂ ಕ್ಷೇತ್ರಗಳಲ್ಲಿ ಸಂಚರಿಸಲು ಸಹಕರಿಸುವುವಾದರೆ ಈರುಳ್ಳಿ, ಬೆಳ್ಳುಳ್ಳಿ ಮುಂತಾದವು ದೇಹಾರೋಗ್ಯದೃಷ್ತಿಯಿಂದ ಅತ್ಯುತ್ತಮವಾದವುಗಳಾದರೂ ದೈವೀ ಕೇಂದ್ರಗಳನ್ನು ಮುಟ್ಟಲು ಅಡ್ಡಿಯಾಗುತ್ತವೆ. ಆದ ಕಾರಣದಿಂದಲೇ ಋಷಿಗಳು ಪದಾರ್ಥಗಳನ್ನು ಸೇವ್ಯ, ವರ್ಜ್ಯ ಎಂಬುದಾಗಿ ವರ್ಗೀಕರಿಸಿದ್ದಾರೆ. ಋಷಿದೃಷ್ಟಿಗೆ ಗೋಚರವಾಗಿ ಕಾಲಕ್ರಮದಲ್ಲಿ ಮರೆಯಾಗಿರುವ ಈ ಪದಾರ್ಥವಿಜ್ಞಾನದ ಮೇಲೆ ಬೆಳಕನ್ನು ಚೆಲ್ಲಿ ಪುನರುಜ್ಜೀವನಗೊಳಿಸಿದವರು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು. ಇವರು ದ್ರವ್ಯಗಳ ಮೂರೂಕ್ಷೇತ್ರಗಳಲ್ಲಿನ ಗುಣಮಟ್ಟವನ್ನು ನಿಖರವಾಗಿ ಅಳೆದು ಹೇಳುವ ಸಾಮರ್ಥ್ಯದಿಂದ ಕೂಡಿದ ಮಹಾಪುರುಷರಾಗಿದ್ದರು.
ಭಗವತ್ಸಾಕ್ಷಾತ್ಕಾರದ ಮೂಲಕ ಎಣೆಯಿಲ್ಲದ ಪರಮಾನಂದವನ್ನು ಅನುಭವಿಸುವ ಆಕಾಂಕ್ಷೆಯುಳ್ಳವರಿಗೆ ಪದಾರ್ಥಗಳ ಆಯ್ಕೆಯಲ್ಲಿ ಇದೊಂದು ಮಾನದಂಡವಾಗುವುದು ಎಂಬುದುರಲ್ಲಿ ಸಂಶಯವಿಲ್ಲ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಸ್ಮೃತಿ-ವಿಸ್ಮೃತಿ-ಸಂಸ್ಕೃತಿ (Smruti-vismruti-sanskruti)

ಲೇಖಕರು: ತಾರೋಡಿ ಸುರೇಶ, ಬೆಂಗಳೂರು

ಯೋಗಶಾಸ್ತ್ರದಲ್ಲಿ ಅನುಭೂತವಿಷಯಾ ಸಂಪ್ರಮೋಷಃ ಸ್ಮೃತಿಃ ಅಂದರೆ ಅನುಭವಿಸಿದ್ದ ವಿಷಯವು ಮನಸ್ಸಿನಿಂದ ಮರೆಯಾಗದಿರುವುದು ಸ್ಮೃತಿ ಎಂದಿದ್ದಾರೆ.ಅದು ಬುದ್ಧಿಭೂಮಿಕೆಯಿಂದ ಜಾರಿಹೋದರೆ ವಿಸ್ಮೃತಿ. ಎಲ್ಲರಿಗೂ ಈ ಅನುಭವವು ಇರುವಂತಹದ್ದೇ.
 ಸ್ಮೃತಿ ವಿಸ್ಮೃತಿಗಳು ಕೇವಲ ನಮ್ಮ ಬಾಹ್ಯಜೀವನಕ್ಕೆ ಮಾತ್ರ ಸೀಮಿತವಲ್ಲ.ನಮ್ಮ ಪೂರ್ವಜರಾದ ಋಷಿಗಳು, ಸೂಕ್ಷ್ಮ ಮತ್ತು ಪರ ಎಂಬ ಇನ್ನೆರಡು ಅಂತರಂಗದ ಕ್ಷೇತ್ರಗಳನ್ನೂ ತಮ್ಮ ಯೋಗದೃಷ್ಟಿಯಿಂದ ಕಂಡುಕೊಂಡರು. ಆದರೆ, ನಮಗೆ ನಮ್ಮದೇ ಜೀವದ, ಅದಕ್ಕೂ ಮೂಲದಲ್ಲಿರುವ  ದೇವನ ಪರಿಚಯವಾಗಲೀ ಇಲ್ಲ. ಅಲ್ಲಿಯ ಪರಮಸುಖವೂ ಇಲ್ಲ. ಅಲ್ಲಿ ವಿಸ್ಮೃತಿ ಉಂಟಾಗಿದೆ. ಜೀವನ ಜೊತೆಯಲ್ಲಿಯೇ ದೇವನು  ಬರುತ್ತಿದ್ದರೂ  ಮರೆವು ಅಂದರೆ ಅಜ್ಞಾನದ ಆವರಣವು ಮುಚ್ಚಿಬಿಡುತ್ತದೆ.
 ಮರೆತಿದ್ದುದನ್ನು ಜ್ಞಾಪಿಸುವವರು ಬೇಕು.ಜೀವನದ ಮಧುರತಮವಾದ ವಸ್ತು ಅದಾಗಿದ್ದಲ್ಲಿ ಅದನ್ನು ಅವಶ್ಯ ನೆನಪಿಸಬೇಕು.ಇಲ್ಲದಿದ್ದರೆ ಜೀವಿಯು ಮೂಲಭೂತ ಹಕ್ಕಾದ ತನ್ನ ಪರಸ್ವರೂಪವನ್ನು ಪಡೆಯದೆ ಜೀವನವನ್ನು ವ್ಯರ್ಥಮಾಡಿಕೊಳ್ಳುವನು. ಅಂತಹ  ನೆನಪನ್ನು ಸಹಜವಾಗಿ ಉಂಟುಮಾಡಲು ಸೂಕ್ತವಾದ ಜೀವನ ವಿಧಾನವೊಂದನ್ನು ನಮ್ಮ ಪೂರ್ವಜರಾದ ಋಷಿಗಳು ರೂಪಿಸಿಕೊಟ್ಟರು. ಇದೇ ಸಂಸ್ಕೃತಿ. ಜ್ಞಾನದ ಸವಿಯನ್ನುಂಡವರು ತಾನೇ ಅದನ್ನು ಬೇರೆಯವರಿಗೂ ಉಣಬಡಿಸಬಲ್ಲರು. ಇದರ ಒಂದೆರಡು ಉದಾಹರಣೆಗಳನ್ನು ನೋಡೋಣ:
ಗರ್ಭೋಪನಿಷತ್ತು ಶಿಶುವು ಗರ್ಭದಲ್ಲಿರುವಾಗ, ಅದರ ಅಂತರಂಗದ ಮತ್ತು ಹೊರಗಿನ ಸ್ಥಿತಿಗತಿಗಳು ಹೇಗಿರುತ್ತವೆ ಎಂಬುದನ್ನು ವರ್ಣಿಸಿದೆ. ಮಗುವು ಗರ್ಭದಲ್ಲಿರುವಾಗ  ಎರಡೂ ಕೈಗಳನ್ನು ಜೋಡಿಸಿಕೊಂಡು ತೇಲುತ್ತಿರುತ್ತದೆ. ಆ ಸ್ಥಿತಿಯು ಸ್ವಭಾವಸಹಜವಾದ ನಮಸ್ಕಾರ ಮುದ್ರೆ ಎನ್ನಿಸಿಕೊಳ್ಳುತ್ತದೆ. ಸುಖಪ್ರಸವಕ್ಕೂ ಈ  ಸ್ಥಿತಿಯು ಅನುಕೂಲ. ಗರ್ಭೋಪನಿಷತ್ತಿನ ಪ್ರಕಾರ ಆ ಜೀವವು ತನ್ನೊಳಗೆ ಪರಮಾತ್ಮಜ್ಯೋತಿಯನ್ನು ನೋಡಿ ಆಸ್ವಾದಿಸುತ್ತಿರುತ್ತದೆ. ಹಾಗಾಗಿ ಆ ಒಳ ನಮಸ್ಕಾರದ ಕ್ರಿಯೆಯನ್ನು ಹೊರಗಿನ ದೈನಂದಿನ ಜೀವನದಲ್ಲೂ ದೇವರಿಗೆ, ಹಿರಿಯರಿಗೆ ನಮಸ್ಕಾರ ಮಾಡಿಸಿ ಅಭ್ಯಾಸಮಾಡಿಸುತ್ತಾರೆ. ಒಬ್ಬರನ್ನೊಬ್ಬರು ಸಂಧಿಸಿದಾಗ ಎಲ್ಲರೊಳಗೂ ಇರುವ ಭಗವಂತನನ್ನು ಸ್ಮರಿಸಿಕೊಂಡು ನಮಸ್ಕರಿಸುತ್ತಾರೆ. ಇದನ್ನು ಮೈಗೂಡಿಸಿಕೊಳ್ಳುವುದರಿಂದ ಪರಮಾತ್ಮಜ್ಯೋತಿಯ ಸ್ಮೃತಿ ಲಭ್ಯವಾಗುತ್ತದೆ ಎನ್ನುವುದು ಇದರ ಹಿಂದಿರುವ ವಿಜ್ಞಾನ.ಗರ್ಭದಲ್ಲಿ ಶಿಶುವಿನ ಈ ಸ್ಥಿತಿಯನ್ನು ಯೋಗಮುದ್ರೆ ಎಂದೇ ಕರೆದಿದ್ದಾರೆ. ಬಹುಮುಖ್ಯವಾದ ವಿಷಯವೆಂದರೆ ಈ ನಮಸ್ಕಾರದ ವಿಧಾನವು ಮನುಷ್ಯಕೃತವಾದದ್ದಲ್ಲ. ಸೃಷ್ಟಿಸಹಜವಾದದ್ದು.
ಪ್ರಸವದ ಕೊಠಡಿಯಲ್ಲಿ ಒಂದು ದೀಪವನ್ನು ಹಚ್ಚಿಡುವ ವಾಡಿಕೆಯುಂಟು. ಇದಕ್ಕೆ ಕಾರಣ,ಗರ್ಭದಲ್ಲಿ ಶಿಶುವು ತನ್ನ ಎಂಟು ಅಥವಾ ಒಂಬತ್ತನೆಯ ತಿಂಗಳಲ್ಲಿ ತನ್ನ ಮೂಲಸ್ವರೂಪವಾದ ಪರಂಜ್ಯೊತಿಯನ್ನು ದರ್ಶನಮಾಡುತ್ತಾ ಸುಖಿಸುವುದಂತೆ. ಆ ಸುಖವು, ಪ್ರಸವವಾದ ಕ್ಷಣವೇ ಪೂರ್ವಕರ್ಮಗಳ ಕಾರಣದಿಂದ, ಮರೆಯಾಗುವುದು. ಅದನ್ನು ನೆನಪಿಸಲು ಅದರ ದೃಷ್ಟಿಗೆ ಬೀಳುವಂತೆ ಒಂದು ತ್ರಿಕೋಣದ ಹಣತೆಯಲ್ಲಿ ಒಳಜ್ಯೋತಿಯನ್ನು ನೆನಪಿಸುವ ದೀಪವನ್ನು ಬೆಳಗುವ ಪದ್ಧತಿಯನ್ನು ಋಷಿಗಳು ತಂದುಕೊಟ್ಟಿದ್ದಾರೆ. ಇಂತಹ ತುಪ್ಪ,ಇಂತಹ ಕಮಲಸೂತ್ರದ ಬತ್ತಿ, ಇಷ್ಟು ಪ್ರಮಾಣದ ಜ್ವಾಲೆ ಇರಬೇಕು ಎಂದೆಲ್ಲ ನಿಯಮಗಳಿವೆ. ಆಗ ಅದು ಪರಂಜ್ಯೋತಿಯ ಅಭಿಜ್ಞಾನವಾಗಿ ಅದರ ನೆನಪನ್ನು ಕೊಡಬಲ್ಲುದು. ಅಭಿಜಾತಶಿಶುವು ತಂದೆತಾಯಿಯರನ್ನು ಗುರುತಿಸದಿದ್ದರೂ ದೀಪವನ್ನು ನೋಡುತ್ತಾ ನಲಿಯುವುದನ್ನು ಇಂದಿಗೂ ಗಮನಿಸಬಹುದು.
ನಮ್ಮ ಸಂಸ್ಕೃತಿಯಲ್ಲಿ ಸಜ್ಜನರಸಂಗಕ್ಕೆ ವಿಶೇಷ ಮಹತ್ವವಿದೆ. ನೇಯಂ ಸಜ್ಜನಸಂಗೇ ಚಿತ್ತಂ ಎಂದೆಲ್ಲ ಜ್ಞಾನಿಗಳು ಹಾಡಿದ್ದಾರೆ. ಏಕೆಂದರೆ ಜ್ಞಾನಿಗಳ ಸಹವಾಸ ಅಂತಹದ್ದೇ ಆದ ಮನೋಧರ್ಮವನ್ನುಂಟು ಮಾಡಿ ಸಾಧನೆಗೆ ಸ್ಫೂರ್ತಿಯನ್ನು ನೀಡಿ ತನ್ಮೂಲಕ ವಿಸ್ಮೃತಿಯನ್ನು ಹೋಗಲಾಡಿಸುತ್ತದೆ.
 ತನ್ನ ಸ್ವರೂಪವನ್ನು ಮರೆತು ಧರ್ಮಾಧರ್ಮಗಳ ಗೊಂದಲಕ್ಕೆ ಬಿದ್ದಾಗ ಅರ್ಜುನನಿಗೆ ಶ್ರೀಕೃಷ್ಣನು ತಿಳಿಹೇಳುತ್ತಾನೆ. ಕೊನೆಯಲ್ಲಿ ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ ಎಂದು ನಿವೇದಿಸಿ ತನಗೆ ಪೂರ್ವಸ್ಮೃತಿಯು ಬಂತು ಎಂದು ಅರ್ಜುನನು ತನ್ನನ್ನು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ.
ಪಾಲಿಸಬೇಕಾದ ವಿಧಿನಿಷೇಧಗಳ ಪರಿಚಯವನ್ನು ಕೊಟ್ಟು ಭಗವತ್ಸ್ಮರಣೆಯನ್ನು ಉಂಟುಮಾಡುವ ಧರ್ಮಶಾಸ್ತ್ರಗಳನ್ನೂ ಈ ಕಾರಣದಿಂದಲೇ ಸ್ಮೃತಿಗಳು ಎನ್ನುತ್ತಾರೆ.
ಒಟ್ಟಾರೆ  ಜ್ಞಾನ ಆನಂದ ಅಮಲತ್ವಗಳೊಂದಿಗೆ ತನ್ನಲ್ಲೇ ತಾನು ಯಾವಾಗಲೂ ಬೆಳಗುತ್ತಿರುವ ಪರಂಜ್ಯೊತಿಯನ್ನು ಹೊಂದಿ ವಿಸ್ಮೃತಿಯಿಂದ ದೂರವಾಗಿ ಮತ್ತೆ ಜನನ-ಮರಣಗಳ ಬಂಧನಕ್ಕೆ ಸಿಗದಂತಾಗುವುದೇ ಸ್ಮೃತಿಯ ಫಲ. ಅದಕ್ಕಾಗಿಯೇ ಸಂಸ್ಕೃತಿ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ವಿನಾಯಕನ ಪೂಜೆ ಮಾಡೋಣ! ಆದರೆ ವಿಸರ್ಜನೆ ಏಕೆ? (Vinayakana puje madona! Adare visarjane yeke?)

ಲೇಖಕರು: ಅರ್ ಮೈಥಿಲೀ, ಬೆಂಗಳೂರು
ಇದೀಗ ಬರಲಿದೆ ಗಣೇಶಚತುರ್ಥಿ. ಎಲ್ಲೆಡೆಯಲ್ಲೂ ವಿವಿಧ ಭಂಗಿಗಳಲ್ಲಿರುವ ಗಣಪನನ್ನು ಕಾಣಬಹುದಾಗಿದೆ. ಅದೆಷ್ಟು ಬಣ್ಣಗಳು, ಎಷ್ಟು ಅಲಂಕಾರಗಳು! ಸಣ್ಣ ಮೂರ್ತಿಯಿಂದ ಹಿಡಿದು ಬೃಹದಾಕಾರದ  ಮೂರ್ತಿಯವರೆಗು ಅದೆಷ್ಟು ವೈವಿಧ್ಯ?! ಇವುಗಳ ನಿರ್ಮಾಣದಲ್ಲಿ ಆಗುವ ಹಣದ ಕರ್ಚು, ಪದಾರ್ಥಗಳ ಕರ್ಚು, ಶಿಲ್ಪಿಯ ಪರಿಶ್ರಮಗಳು ಅಪಾರ.
ಈ ಮೂರ್ತಿಗಳನ್ನು ನಮ್ಮ ಆನುಕೂಲ್ಯಕ್ಕೆ ತಕ್ಕಂತೆ ಖರೀದಿಸಿ ತಂದು ಮನೆಯಲ್ಲಿ/ಸಾಮೂಹಿಕ ಕೂಟಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಪೂಜೆಯನ್ನು ಜರುಗಿಸುವುದು ಎಲ್ಲರಿಗೂ ತಿಳಿದೇ ಇದೆ. ಪೂಜೆಯ ನಂತರ ಆ ದಿನವೇ ಅಥವಾ ಮುಂದಿನ ನಿರ್ದಿಷ್ಟದಿನಗಳಲ್ಲಿ ಆ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದೂ ಪ್ರಸಿದ್ಧವಾಗಿದೆ.
ಆದರೆ ಇದೇನಿದು? ಅಷ್ಟು ಭಕ್ತಿಯಿಂದ ಪೂಜಿಸಿದ ಮೂರ್ತಿಯನ್ನು ನೀರುಪಾಲು ಮಾಡುವುದೇ? ಗಣೇಶನ ವಿಸರ್ಜನೆಯನ್ನು ಮಾಡುವಾಗ ಇಷ್ಟು ದಿನಗಳು ಪ್ರೀತಿಯಿಂದ ಆರಾಧಿಸಿದ ಮುದ್ದುಗಣಪನನ್ನು ಅಗಲಬೇಕಾಗಿದೆಯಲ್ಲಾ ಎಂಬ ವ್ಯಥೆಯಿಂದ ಕೊರಗುವವರೂ ಇಲ್ಲದಿಲ್ಲ. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ಎಂಬಂತೆ ಸಾವಿರಾರು ರುಪಾಯಿಗಳು ಕರ್ಚುಮಾಡಿ ಅನೇಕ ದಿನಗಳ ಕಾಲ ಶ್ರಮಿಸಿ ತಯಾರಿಸಿದ್ದನ್ನು ನಿಮಿಷಮಾತ್ರದಲ್ಲಿ ನೀರುಪಾಲು ಮಾಡುವುದೇನು ನ್ಯಾಯ? ಮನೆಯಲ್ಲಿ ಪ್ರತಿನಿತ್ಯವೂ ಪೂಜಿಸುವ ಗಣೇಶನ ಮೂರ್ತಿಗಳನ್ನು ನಾವು ನೀರಿಗೆ ಹಾಕುವುದಿಲ್ಲವಷ್ಟೆ. ಈ ಹಬ್ಬದ ಆರಾಧ್ಯನಿಗೆ ಮಾತ್ರ ಏಕೆ ಈ ಗತಿ? ಇವನನ್ನೂ ಮನೆಯಲ್ಲಿ ಉಳಿಸಿ ಕೊಳ್ಳಬಾರದೇಕೆ? ಈ ಎಲ್ಲ ಪ್ರಶ್ನೆಗಳಿಗೂ ಹಿರಿಯರಿಂದ ಬಂದ ಪದ್ಧತಿ, ಅದನ್ನು ಅಂತೆಯೇ ಪ್ರಶ್ನೆಮಾಡದೇ ಪಾಲಿಸೋಣ ಎಂದು ಹೇಳಿ ಜಾರಿಕೊಳ್ಳುವುದೇಯಾಗಿದೆ.
ಆದರೆ ಜ್ಞಾನಿಗಳಿಂದ ಬಂದ ಈ ವಿಚಿತ್ರವೆನ್ನಿಸುವ ಪದ್ಧತಿಗೆ ಸಮರ್ಪಕವಾದ ವಿವರಣೆಯನ್ನು ಅವರು ಮಾತ್ರವೇ ಕೊಡಬಲ್ಲರು. ಋಷಿಹೃದಯವನ್ನೂ, ಅವರ ಸಂಸ್ಕೃತಿಯ ಮರ್ಮವನ್ನೂ ಕರತಲಾಮಲಕವಾಗಿ ಅರಿತ ಶ್ರೀರಂಗಮಹಾಗುರುಗಳೆಂಬ ಜ್ಞಾನಿಶ್ರೇಷ್ಠರು ಇದಕ್ಕೆ ನೀಡಿದ ವಿವರಣೆ ಹೀಗಿದೆ.
ವಿನಾಯಕನ ಅನೇಕ ಮೂರ್ತಿಗಳಲ್ಲಿ ಸಿದ್ಧಿವಿನಾಯಕ ಮೂರ್ತಿಯನ್ನೇ ಗಣೇಶ ಚತುರ್ಥಿಯಂದು ಪೂಜಿಸಬೇಕು. ಈ ಮೂರ್ತಿಯ ಪೂಜೆಯು ತಾಪತ್ರಯಗಳಿಂದ(ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕಗಳಲ್ಲಿನ ಸಂಕಟಗಳಿಂದ) ನಮ್ಮನ್ನು ಮುಕ್ತಗೊಳಿಸುತ್ತದೆ. ಮಹಾಯೋಗಿಗಳು ಈ ದಿನದ ಪೂಜೆಯಲ್ಲಿ ತಮ್ಮ ಮನಸ್ಸನ್ನು ಮೊದಲು ಮೂಲಾಧಾರಸ್ಥಾನದಲ್ಲಿ ಕಂಗೊಳಿಸುವ ಗಣೇಶನ ಮೂರ್ತಿಯಲ್ಲಿ ಲಯಗೊಳಿಸುತ್ತಾರೆ. ನಂತರ ಮನಸ್ಸನ್ನು ಇನ್ನೂ ಮೇಲಕ್ಕೆ ಏರಿಸಿ ಸ್ವಾಧಿಷ್ಟಾನಚಕ್ರದಲ್ಲಿ ಗಣೇಶನಜೊತೆಯಲ್ಲಿ ಲಯಗೊಳಿಸಿದಾಗ ಅಲ್ಲಿ ತಾಪತ್ರಯಗಳ ನಿವಾರಣೆಯಾಗಿ ತಂಪನ್ನು ಅನುಭವಿಸುತ್ತಾರೆ. ಮೂಲಾಧಾರವು ಪ್ರಿಥ್ವೀ ತತ್ತ್ವದ ಸ್ಥಾನ, ಸ್ವಾಧಿಷ್ಟಾನವು ಅಪ್ಪ್ ತತ್ತ್ವದ ಸ್ಥಾನ ಎಂದು ಪ್ರಸಿದ್ಧವಾಗಿದೆ.
ಯೋಗಿಗಳು ತಮ್ಮ ಈ ಅಂತರಂಗಪೂಜೆಯ ಗುರುತಾಗಿ ಹೊರಗಡೆಯೂ ಗಣೇಶನ ಪೂಜಾವಿಧಾನವನ್ನು ಕಲ್ಪಿಸಿದ್ದಾರೆ. ಪೃಥ್ವಿತತ್ತ್ವದ ಹೊರ ಪ್ರತೀಕವಾಗಿರುವುದು ಮಣ್ಣು; ಅಪ್ಪ್ ತತ್ತ್ವದ ಪ್ರತೀಕ ಜಲ. ಆದ್ದರಿಂದ ಒಳ ಪ್ರಪಂಚದಲ್ಲಿ ನಡೆಯ ಬೇಕಾಗಿರುವ ಕ್ರಿಯೆಯನ್ನು ಸೂಚಿಸಲು ಹೊರಗೆ ಮಣ್ಣಿನ ಗಣೇಶನ ಪೂಜೆ, ನಂತರ ಅದನ್ನು ನೀರಿನಲ್ಲಿ ಲಯಗೊಳಿಸುವುದು. ನಮ್ಮ ಮನಸ್ಸನ್ನು ಒಳಕೇಂದ್ರಗಳತ್ತ ಸೆಳೆದು, ಎಲ್ಲಿ ನಿಲ್ಲಿಸಬೇಕೆಂಬುದನ್ನು ನೆನಪಿಸುತ್ತಿದ್ದಾರೆ ಜ್ಞಾನಿಗಳು. ತನ್ಮೂಲಕ ನಮಗೆ ತಾಪತ್ರಯಗಳಿಂದ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸಿ ನೆಮ್ಮದಿಯನ್ನುಂಟುಮಾಡುವ ಜಾಣ್ಮೆಯಿಂದ ಕೂಡಿದ ಒಂದು ತಂತ್ರವೇ ಈ ಹೊರ ಪೂಜೆ ಹಾಗೂ ವಿಸರ್ಜನೆಗಳು.
ಆದ್ದರಿಂದ ಈ ಹಬ್ಬದ ದಿನ ಪೂಜೆಯಲ್ಲಿ ಭೌತಿಕ ಪ್ರಯೋಜನೆಗಳಿಗೆ ಮಾತ್ರವಲ್ಲದೆ ತಾಪತ್ರಯಗಳ ನಿವಾರಣೆಗಾಗಿ ವಿಶೇಷ ಸಂಕಲ್ಪವನ್ನು ಮಾಡಿಕೊಳ್ಳಬೇಕಾಗಿದೆ. ಅಂತರಂಗದಲ್ಲಿ ನಡೆಯಬೇಕಾಗಿರುವ ಕಾರ್ಯವನ್ನು ನೆನಪಿಸಿಕೊಂಡು, ಮುಂದೆ ಆ ನೇರದಲ್ಲಿ ಪ್ರಯತ್ನವನ್ನು ಕೈಗೊಳ್ಳುವ ಸಂಕಲ್ಪದ ಜೊತೆಗೆ ಹೊರ ಪೂಜೆಯನ್ನು ಸಲ್ಲಿಸೋಣ. ಆಚರಿಸುವ ಕ್ರಿಯೆಗಳ ಮರ್ಮವನ್ನು ಅರಿತು ಆಚರಿಸಿದಾಗ ಅದರಲ್ಲಿ ವಿಶೇಷ ಪ್ರಯೋಜನವುಂಟು.