ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಒಂದು ಪಟ್ಟಣದಲ್ಲಿ, ಹಳೆಯ ಕಬ್ಬಿಣ ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುವ ಒಬ್ಬ ಬಡ ವ್ಯಕ್ತಿ ವಾಸಿಸುತ್ತಿದ್ದನು. ಅದೇ ಊರಿನ ಸಮೀಪದಲ್ಲಿ ಒಬ್ಬ ಮಹರ್ಷಿಯು ಮರದ ಕೆಳಗೆ ಧ್ಯಾನಸ್ಥರಾಗಿರುತ್ತಿದ್ದರು. ಈ ಮಹರ್ಷಿಗಳು ಈತನನ್ನು ಗಮನಿಸಿ ಒಮ್ಮೆ ಅವರ ಬಳಿ ಕರೆದು - "ಏನಪ್ಪಾ! ನಿನ್ನ ಜೀವನ ಹೇಗೆ ನಡಿಯುತ್ತಿದೆ? ನೀನು ಕಷ್ಟ ಪಟ್ಟು ಹಳೆಯ ಸಾಮಾನುಗಳ ಮಾರಾಟ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಿನ್ನ ಮನೆಯಲ್ಲಿ ಸೌಖ್ಯವೇ? ನಿನ್ನ ಕುಟುಂಬದ ಹೊಟ್ಟೆ ಬಟ್ಟೆಗಾಗುವಷ್ಟು ಸಂಪಾದನೆ ಆಗುತ್ತಿದ್ದೀಯಾ?" ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಅವನು ಬಹಳ ಬೇಸರದಿಂದ ಅವನ ಕಷ್ಟಗಳನ್ನು ಹೇಳಿಕೊಳ್ಳುತ್ತಾನೆ. ಅವನ ಸಂಪಾದನೆ ಊಟ ಮಾಡುವುದಕ್ಕೂ ಸಾಲುತ್ತಿಲ್ಲ, ಮತ್ತು ಒಂದು ಮನೆಯು ಇಲ್ಲದೆ ಒಂದು ಸಣ್ಣ ಗುಡಿಸಲಿನಲ್ಲಿ ಅವನ ಹೆಂಡತಿ ಮಕ್ಕಳರೊಡನೆ ವಾಸ ಮಾಡುತ್ತಿದ್ದೇನೆ ಎಂದು ಪೇಚಾಡಿಕೊಳ್ಳುತ್ತಾನೆ. ತಾವೇ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾನೆ.
ಇದನ್ನು ಕೇಳಿ ಆ ಮಹರ್ಷಿಗಳು ಅವನಿಗೆ ಒಂದು ತಾಮ್ರದ ನಿಧಿಯ ಜಾಗವನ್ನು ತಿಳಿಸುತ್ತಾರೆ. ಆ ತಾಮ್ರವನ್ನು ಮಾರಾಟ ಮಾಡಿದರೆ ಸಾಕಷ್ಟು ದುಡ್ಡು ಬರತ್ತದೆ ಅದರಿಂದ ನಿನ್ನ ಜೀವನ ಚೆನ್ನಾಗುತ್ತದೆ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ಈತ ಬಹಳ ಸಂತೋಷದಿಂದ ಈ ತಾಮ್ರದ ನಿಧಿಯನ್ನು ಪಡೆದು, ಅವರು ಹೇಳಿದಂತೆ ಇದರ ಮಾರಾಟ ಮಾಡಿ ಹೊಸದಾಗಿ ಜೀವನ ಮಾಡವುದಕ್ಕೆ ಶುರು ಮಾಡುತ್ತಾನೆ.
ಸ್ವಲ್ಪ ಕಾಲದ ನಂತರ, ಮತ್ತೆ ಈತ ಮಹರ್ಷಿಗಳನ್ನು ಭೇಟಿಯಾಗುತ್ತಾನೆ. ಈಗ ಮತ್ತೆ ಆ ಮಹಾತ್ಮರು ಈತನ ಸೌಖ್ಯವನ್ನು ವಿಚಾರಿಸುತ್ತಾರೆ. ಅದಕ್ಕೆ ಈತ "ಹೆಂಡತಿ ಮಕ್ಕಳಿಗೆಲ್ಲ ಊಟ, ಬಟ್ಟೆಗೆ ಬೇಕಾದಷ್ಟು ಸಂಪಾದನೆ ಆಗುತ್ತಿದೆ ಸ್ವಾಮಿ, ಆದರೆ, ಒಂದು ಒಳ್ಳೆ ಮನೆಯನ್ನು ಕಟ್ಟುವ ಸಾಮರ್ಥ್ಯ ಒದಗುವಂತೆ ತಾವು ಅನುಗ್ರಹಿಸಬೇಕು ಎಂದು ಪ್ರಾರ್ಥಿಸುತ್ತಾನೆ. ಇದನ್ನು ಕೇಳಿ ಮಹರ್ಷಿಗಳು ಈ ಬಾರಿ ಅವನಿಗೆ ಒಂದು ಬೆಳ್ಳಿಯ ನಿಧಿಯ ದಿಕ್ಕನ್ನು ತೋರಿ ಆಶೀರ್ವದಿಸುತ್ತಾರೆ. ಬಹಳ ಸಂತೋಷದಿಂದ ಇವನು ಅದೇ ದಿಕ್ಕಿನಲ್ಲಿ ಹೋದಾಗ ಸಿಕ್ಕ ಬೆಳ್ಳಿಯ ನಿಧಿಯನ್ನು ನೋಡಿ ಬಹಳ ಸಂತಸ ಪಡುತ್ತಾನೆ.
ಈ ನಿಧಿಯನ್ನು ಪಡೆದ ಮೇಲೆ ಬೆಳ್ಳಿಯ ಮಾರಾಟದಿಂದ ತುಂಬಾ ಶ್ರೀಮಂತನೇ ಆಗಿಬಿಡುತ್ತಾನೆ. ಒಂದು ಒಳ್ಳೆಯ ಮನೆ ಕಟ್ಟಿ ಸುಖವಾಗಿ ಜೀವನ ಮಾಡುವುದಕ್ಕೆ ಶುರು ಮಾಡುತ್ತಾನೆ. ಸ್ವಲ್ಪ ಕಾಲ ಹೀಗೆ ಕಳೆಯತ್ತದೆ. ಎಲ್ಲ ಸುಖಗಳಿದ್ದರೂ, ಅವನಿಗಿಂತ ಶ್ರೀಮಂತರಾದ ಜನರನ್ನು ನೋಡಿ, ಅವನು ಮತ್ತೊಮ್ಮೆ ಅದೇ ಮಹರ್ಷಿಗಳ ಬಳಿ ಹೋಗುತ್ತಾನೆ. ಅವರನ್ನು ನಮಸ್ಕರಿಸಿ, ಅವರ ಕೃಪೆಯಿಂದ ಎಲ್ಲ ತುಂಬಾ ಚೆನ್ನಾಗಿದೆ, ಎಂದು ಕೃತಜ್ಞತೆಯನ್ನು ಸಲ್ಲಿಸಿ ಕೃತಜ್ಞತೆಯ ಜೊತೆಯಲ್ಲೇ ಅವರಲ್ಲಿ ಇನ್ನೊಂದು ಪ್ರಾರ್ಥನೆಯನ್ನು ಮಾಡುತ್ತಾನೆ: "ತಮಗೆ ಇನ್ನು ಯಾವುದಾದರೂ ಧನದ ಬಗ್ಗೆ ತಿಳಿದಿದ್ದರೆ, ಅದನ್ನು ತಿಳಿಸಬಹುದೇ? ಇನ್ನು ಧನ ಸಿಕ್ಕಿದರೆ ಆಗ ಎಲ್ಲ ಅಕ್ಕ ಪಕ್ಕದ ಊರಿನಲ್ಲೂ ನಾನೇ ಎಲ್ಲರಿಗಿಂತ ಶ್ರೀಮಂತನಾಗುತ್ತೇನೆ. ಆಗ ಇನ್ನೂ ಸುಖವಾಗಿ ಜೀವನ ಮಾಡಬಹುದು" ಎಂದು ಬೇಡುತ್ತಾನೆ. ಇದಕ್ಕೆ ಈ ಬಾರಿ ಮಹರ್ಷಿಗಳು ಅವನಿಗೆ ಒಂದು ದೊಡ್ಡ ಚಿನ್ನದ ನಿಧಿಯ ಬಳಿ ಕಳುಹಿಸುತ್ತಾರೆ. ಇವನು ಚಿನ್ನದ ನಿಧಿಯೂ ಇರಬಹುದಾ ಎಂದು ಆಶ್ಚರ್ಯದಿಂದ, ಮತ್ತು ಅಷ್ಟೇ ಉತ್ಸಾಹದಿಂದ ಅವರು ಕೊಟ್ಟ ಮಾರ್ಗವನ್ನನುಸರಿಸಿ ಬರುತ್ತಾನೆ. ಅಲ್ಲಿ ಆ ಹೊಳೆಯುತ್ತಿರುವ ಚಿನ್ನದ ರಾಶಿಯನ್ನು ನೋಡಿ ಆಶ್ಚರ್ಯದಿಂದ ಒಂದು ಕ್ಷಣ ಮೈ ಮರೆಯುತ್ತಾನೆ. ಇದನ್ನು ಮಾರಾಟ ಮಾಡಿದರೆ ಎಂತಹ ಅದ್ಭುತವಾದ ಜೀವನವನ್ನು ಮಾಡಬಹುದು ಎಂದು ಯೋಚಿಸಿ ಅವನ ಭವ್ಯವಾದ ಭವಿಷ್ಯದ ಯೋಚನೆಗಳಲ್ಲಿ ಮುಳುಗುತ್ತಾನೆ. ಹೀಗೆ ಯೋಚಿಸುತ್ತಿರುವಾಗ ಅವನಿಗೆ ಇಲ್ಲಿಯವರೆವಿಗೂ ಬರದಿದ್ದ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಮಹರ್ಷಿಗಳಿಗೆ ಇದೆಲ್ಲ ನಿಧಿಗಳ ಬಗ್ಗೆ ಗೊತ್ತಿದ್ದರೂ ಅವರು ಮಾತ್ರ ಆ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು, ಭಿಕ್ಷಾಟನದಿಂದ ಬಂದ ಆಹಾರವನ್ನೇ ಸ್ವೀಕರಿಸುತ್ತ ಇದ್ದಾರಲ್ಲ! ಇದು ಯಾಕೆ ಎಂದು ಯೋಚಿಸಿ, ಆ ಚಿನ್ನವನ್ನು ಮುಟ್ಟಲ್ಲು ಮನಸ್ಸಾಗದೇ ಮೊದಲು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂದು ಹಿಂದಿರುಗೆ ಮಹರ್ಷಿಗಳ ಬಳಿ ಓಡಿಹೋಗುತ್ತಾನೆ.
"ಮಹರ್ಷಿಗಳೇ! ನಿಮಗೆ ಇಷ್ಟೆಲ್ಲಾ ನಿಧಿಗಳ ಬಗ್ಗೆ ಗೊತ್ತಿದ್ದರೂ ನೀವು ಯಾಕೆ ಇಂತಹ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು ಬಡವರ ತರಹ ಬಾಳುತ್ತಿದ್ದೀರಾ?" ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಮಹರ್ಷಿಗಳು, ಹಸನ್ಮುಖರಾಗಿ, " ಅಪ್ಪ, ಈ ನಿಧಿಗಳೆಲ್ಲ ನನ್ನ ಬಳಿ ಇರುವ ನಿಧಿಗೆ ಹೋಲಿಸಿದರೆ ತುಂಬಾ ಚಿಕ್ಕದು. ನನ್ನ ಹತ್ತಿರ ವಜ್ರದ ನಿಧಿಯೇ ಇದೆ, ಅದು, ಎಂದಿಗೂ ಕ್ಷಯವೇ ಆಗದಂತಹ ಅಕ್ಷಯ ನಿಧಿ. ಇದು ಇರುವಾಗ ಯಾವ ಬೆಳ್ಳಿ ನಿಧಿ, ಯಾವ ಚಿನ್ನದ ನಿಧಿ ಬೇಕು" ಎಂದು ಹೇಳುತ್ತಾರೆ.
ಇದನ್ನು ಕೇಳಿ "ಅಕ್ಷಯವಾದ ವಜ್ರದ ನಿಧಿಯೇ? ಎಲ್ಲಿದೆ? ನನಗೂ ಅದು ಬೇಕಲ್ಲ. ತಾವು ಅನುಗ್ರಹಿಸಬಹುದೇ?" ಎಂದು ಬೇಡುತ್ತಾನೆ. ಆಗ ಮಹರ್ಷಿಗಳು "ಆಗಬಹುದು, ಆದರೆ, ಅದು ಅಷ್ಟು ಸುಲಭವಲ್ಲ. ನಾನು ಹೇಳಿದ ಹಾಗೆ ನೀನು ಮಾಡಬೇಕಾಗತ್ತದೆ, ಮತ್ತು ಸ್ವಲ್ಪ ಕಾಲ ಹಿಡಿಯತ್ತದೆ, ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗತ್ತದೆ, ಇದಕ್ಕೆಲ್ಲಾ ನೀನು ಸಿದ್ಧವೇ? " ಎಂದು ಪ್ರಶ್ನಿಸುತ್ತಾರೆ. ಈತ ಇದಕ್ಕೆ ಬಹಳ ಉತ್ಸಾಹದಿಂದ "ನೀವು ಏನು ಹೇಳಿದರೂ ನಾನು ಮಾಡಲು ಸಿದ್ಧ" ಎಂದು ಒಪ್ಪಿಕೊಳ್ಳುತ್ತಾನೆ.
ಇದಾದ ನಂತರ ಆ ಮಹರ್ಷಿಗಳು ಇವನನ್ನು ಶಿಷ್ಯನಾಗಿ ಸ್ವೀಕರಿಸಿ, ಸಾಧನ ಮಾರ್ಗವನ್ನು ಹೇಳಿಕೊಡುತ್ತಾರೆ. ಈ ಮಾರ್ಗವನ್ನು ಅನುಸರಿಸಿ ಅವರು ಹೇಳಿದಂತೆ ಮಾಡುತ್ತ, ಸ್ವಲ್ಪ ವರ್ಷಗಳು ಕಳೆಯುತ್ತವೆ. ಹೀಗೆ ಒಂದು ದಿನ ಇವನಿಗೆ ಆತ್ಮ ಸಾಕ್ಷಾತ್ಕಾರವೇ ಆಗಿಬಿಡುತ್ತದೆ. ಆತ್ಮ ಸಾಕ್ಷಾತ್ಕಾರವೆಂದರೆ ಅವನ ಒಳಗಡೆ ಇರುವ ಅಂಗುಷ್ಠಾಕಾರವಾಗಿರುವ ಜ್ಯೋತಿಯ ದರ್ಶನ ಆಗತ್ತದೆ. ಆ ಕ್ಷಣದಲ್ಲಿ ಅವನು ಎಂದೂ ಅನುಭವಿಸಿರದ ಪರಮಾನಂದವನ್ನು ಅನುಭವಿಸುತ್ತಾನೆ. ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ಆನಂದ ಭಾಷ್ಪವು ಹರಿಯುತ್ತದೆ.
ಈ ಅದ್ಭುತವಾದ ಅನುಭವವನ್ನು ಅವನ ಗುರುಗಳ ಬಳಿ ತಿಳಿಸುತ್ತಾನೆ. ಇದನ್ನು ಕೇಳಿ, ಆ ಮಹರ್ಷಿಗಳಿಗೂ ತುಂಬಾ ಸಂತೋಷವಾಗುತ್ತದೆ. "ಇದೇನಪ್ಪಾ! ಎಲ್ಲದಕ್ಕಿಂತ ದೊಡ್ಡ ಅಕ್ಷಯವಾದ ವಜ್ರದ ನಿಧಿ. ಇದನ್ನು ಎಲ್ಲ ಮನುಷ್ಯರು ಪಡಿಯಬೇಕು" ಎಂದು ಹೇಳುತ್ತಾರೆ. ಒಳಗೆ ಹೊಳೆಯುವುದು ಬೆಳಕಾಗಿರುವುದರಿಂದ ಮತ್ತು ಅತ್ಯಂತ ದೊಡ್ಡ ಆನಂದ ಅದರಲ್ಲಿರುವುದರಿಂದ, ಮಹರ್ಷಿಗಳು ಹೊಳೆಯುವ ಮತ್ತು ಅತ್ಯಂತ ಬೆಲೆ ಬಾಳುವ ವಜ್ರದ ಉದಾಹರಣೆಯೊಂದಿಗೆ ಆತ್ಮಾನುಭವದ ಬಗ್ಗೆ ಅವನಿಗೆ ತಿಳಿಹೇಳಿದ್ದರು.
ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಾಕ್ಯವು ಅತ್ಯಂತ ಸ್ಫೂರ್ತಿದಾಯಕ - "ಆತ್ಮ ಸಾಕ್ಷಾತ್ಕಾರ ಪ್ರತಿಯೊಬ್ಬ ಮನುಷ್ಯನ ಹಕ್ಕಪ್ಪಾ! ಇದನ್ನು ಎಲ್ಲ ಮಾನವರೂ ಪಡೆಯಬೇಕು" ಎಂದು ಸಾರಿದ್ದಾರೆ. ಇವರ ಮಾತಿನಂತೆಯೇ ನಾವೆಲ್ಲರೂ ನಮ್ಮ ಜೀವನದ ಗುರಿಯೂ, ಮತ್ತು ಹಕ್ಕಾಗಿರುವ ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಸಾಗುವಂತಾಗಲಿ ಮತ್ತು ಈ ಅಕ್ಷಯವಾದ ನಿಧಿಯನ್ನು ಪಡಯುವಂತಾಗಲಿ ಎಂದು ಪ್ರಾರ್ಥನೆ.
ಸೂಚನೆ: 16/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.
ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಒಂದು ಊರಿನಲ್ಲಿ ಜನರು ವ್ಯವಸಾಯವನ್ನು ಮಾಡಿಕೊಂಡು ಅಲ್ಲಿ ಬರುವ ಬೆಳೆಗಳನ್ನು ಮತ್ತು ತರಕಾರಿಗಳನ್ನೆಲ್ಲ ತೆಗೆದುಕೊಂಡುಹೋಗಿ ಪಕ್ಕದ ಊರಿನಲ್ಲಿ ಮತ್ತು ಸಂತೆಗಳಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ತಮ್ಮ ಜೀವನವನ್ನು ನಡೆಸುತ್ತಾ ಇದ್ದರು. ಇದೇ ಊರಿನಲ್ಲಿ ಒಬ್ಬನ ಹತ್ತಿರ ಅವನು ಬೆಳೆದದ್ದನ್ನು ಮಾರಾಟ ಮಾಡುವುದಕ್ಕೆ ತೆಗೆದುಕೊಂಡು ಹೋಗಲು ಎತ್ತಿನ ಗಾಡಿ ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ . ಆದುದರಿಂದ ಅವನು ಪ್ರತಿ ಸಲವೂ ಬೇರೆಯವರ ಎತ್ತಿನ ಗಾಡಿಯಲ್ಲಿ ತನಗೂ ಸ್ವಲ್ಪ ಜಾಗವನ್ನು ಕೇಳಿ ಅವರ ಜೊತೆಯಲ್ಲಿಯೇ ಹೋಗಿ ಮಾರಾಟ ಮಾಡಿಕೊಂಡು ಬರುತ್ತಾ ಇದ್ದನು. ಈ ವ್ಯಕ್ತಿಗೆ ಬೇರೆ ಜನರಗಿಂತ ಬುದ್ಧಿಮಟ್ಟ ಮತ್ತು ಚಾಕಚಕ್ಯತೆ ಸ್ವಲ್ಪ ಕಡಿಮೆ ಇತ್ತು. ಆದರೆ ಇವನಲ್ಲಿ ಎರಡು ಬಹಳ ದೊಡ್ಡ ಗುಣಗಳಿತ್ತು - ಒಂದು ಶ್ರದ್ಧೆ ಮತ್ತು ಇನ್ನೊಂದು ಭಕ್ತಿ. ಒಮ್ಮೆಈ ಊರಿಗೆ ಒಬ್ಬ ಋಷಿಗಳು ಆಗಮಿಸುತ್ತಾರೆ . ಅವರು ಬಂದಿರುವುದು ಇವನಿಗೆ ತಿಳಿದ ಕೂಡಲೇ ಅವರ ಬಳಿ ಓಡಿ ಹೋಗಿ ಅತ್ಯಂತ ವಿನಯದಿಂದ ತನ್ನ ಆತಿಥ್ಯವನ್ನು ಸ್ವೀಕರಿಸಬೇಕೆಂದು ಅವರಲ್ಲಿ ಬೇಡಿಕೊಳ್ಳುತ್ತಾನೆ. ಇವನ ಭಕ್ತಿಯನ್ನು ನೋಡಿ ಅವರು ಇವನ ಮನೆಗೆ ಬಂದು ಇವನ ಆತಿಥ್ಯವನ್ನು ಸ್ವೀಕರಿಸುತ್ತಾರೆ. ಅವರು ಎಷ್ಟು ಕಾಲ ಆ ಹಳ್ಳಿಯಲ್ಲಿದ್ದರೋ ಅಷ್ಟೂ ದಿನಗಳು ಇವನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಅವರಿಗೆ ಸೇವೆ, ಶುಶ್ರೂಷೆಗಳನ್ನು ಮಾಡಿ ಅವರ ಮನಸ್ಸನ್ನು ಪ್ರಸನ್ನಗೊಳಿಸುತ್ತಾನೆ. ಆದುದರಿಂದ ಅವರು ಹೊರಟು ಬರುವ ಮುನ್ನ ಇವನಿಗೆ ಏನು ವರ ಬೇಕಾದರೂ ಕೇಳಲೆಂದು ಹೇಳುತ್ತಾರೆ. ಅದಕ್ಕೆ ಅವನು ತನ್ನ ಬಳಿ ಯಾವ ವಾಹನವೂ ಇಲ್ಲದೆ ಇರುವುದನ್ನು ಜ್ಞಾಪಿಸಿಕೊಂಡು ಅವರಲ್ಲಿ ಒಂದು ವಾಹನವನ್ನು ದಯಪಾಲಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾನೆ. ಅವರು ಮಹಾ ತಪಸ್ವಿಗಳು, ಏನನ್ನು ಬೇಕಾದರೂ ಕೊಡಬಲ್ಲವರು, ಇವನು ಇಷ್ಟು ಸಣ್ಣ ಪದಾರ್ಥವನ್ನು ಅಪೇಕ್ಷಿಸುತ್ತಾನಲ್ಲಾ ಎಂದುಕೊಂಡರೂ, ಅತ್ಯಂತ ಕರುಣೆಯಿಂದ ಇವನಿಗೆ ಒಂದು ಅಪೂರ್ವ ಯಂತ್ರವನ್ನೇ ದಯಪಾಲಿಸುತ್ತಾರೆ. ಆ ಯಂತ್ರವು ಭೂಮಿಯಲ್ಲಿ ಅತಿವೇಗದಿಂದ ಚಲಿಸಬಲ್ಲದು, ಬಹಳಷ್ಟು ಸಾಮಾನನ್ನು ಹೊರಬಲ್ಲದು, ಅಷ್ಟೇ ಅಲ್ಲಾ, ಅದರಲ್ಲಿ ಆಕಾಶ ಮಾರ್ಗವಾಗಿಯೂ ಚಲಿಸಬಲ್ಲದಾದಂತಹ ಅದ್ಭುತ ಯಂತ್ರವದು. ಆ ಯಂತ್ರವನ್ನು ಇವನಿಗೆ ಕೊಟ್ಟು, ಅದನ್ನು ಹೇಗೆ ಉಪಯೋಗಿಸುವುದೆಂಬುದನ್ನೂ ತಿಳಿಸಿಕೊಟ್ಟು ಅಲ್ಲಿಂದ ಹೊರಟುಬರುತ್ತಾರೆ. ಆದರೆ ದುರಾದೃಷ್ಟದಿಂದ ಋಷಿಗಳು ಹೊರಟ ಸ್ವಲ್ಪ ಕಾಲಕ್ಕೆ ಅವನು ಆ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗುತ್ತಾನೆ. ಋಷಿಗಳು ಸಂಚಾರಿಗಳಾಗಿದ್ದುದರಿಂದ ಅವರನ್ನು ಮತ್ತೆ ಸಂಪರ್ಕಿಸಲು ಆಗುವುದಿಲ್ಲ. ಆದ್ದರಿಂದ ಇವನು ಬೇರೆಯವರ ಎತ್ತಿನ ಗಾಡಿಯನ್ನು ನೋಡಿ ಅವರಂತೆಯೇ ತನ್ನ ಯಂತ್ರಕ್ಕೂ ಎತ್ತುಗಳನ್ನು ಕಟ್ಟಿ ಅದನ್ನು ಎತ್ತಿನ ಗಾಡಿಯಾಗಿ ಉಪಯೋಗಿಸಲು ಪ್ರಾರಂಭಿಸುತ್ತಾನೆ. ಇವನು ಅಷ್ಟು ದೊಡ್ಡ ಯಂತ್ರವನ್ನು ಎತ್ತಿನ ಗಾಡಿಯಂತೆ ಉಪಯೋಗಿಸುತ್ತಿರುವ ವಿಷಯ ಆ ಋಷಿಗಳಿಗೆ ಕರ್ಣಾಕರ್ಣಿಕೆಯಾಗಿ ತಿಳಿದಾಗ ಅವರಿಗೆ ತುಂಬಾ ಬೇಜಾರಾಗಿ ಅಷ್ಟು ದೊಡ್ಡ ವಸ್ತುವನ್ನು ಇವನು ಇಷ್ಟು ಚಿಕ್ಕದಾಗಿ ಎತ್ತಿನ ಗಾಡಿಯಂತೆ ಉಪಯೋಗಿಸಿಕೊಂಡುಬಿಟ್ಟನಲ್ಲ ಅಂತ ಎಂದು ಬೇಸರಿಸಿಕೊಂಡು ಇವನ ಪ್ರಾಪ್ತಿಯೇ ಇಷ್ಟು ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.
ಈ ಕಥೆಯನ್ನು ಕೇಳಿದರೆ ಇದು ಬಹಳ ಸಾಮಾನ್ಯವಾದದ್ದು, ಇದರಲ್ಲಿ ಏನು ವೈಶಿಷ್ಟ್ಯ ಇದೆ? ಎಂದು ಎನ್ನಿಸಬಹುದು. ಯಾರಾದರೂ ಹೀಗೆ ಅಷ್ಟು ದೊಡ್ಡ ಯಂತ್ರವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಮರೆತುಹೋಗಲು ಸಾಧ್ಯವೇ ಎಂದು ಆಶ್ಚರ್ಯವಾಗಬಹುದು. ಆದರೂ ಪರಿಶೀಲಿಸಿ ನೋಡಿದರೆ ನಾವೇ ಅಂತಹ ವ್ಯಕ್ತಿಗಳಾಗಿದ್ದೇವೆ. ಈ ಕಥೆಯಲ್ಲಿರುವ ಆ ಸಾಮಾನ್ಯ ಮನುಷ್ಯ ನಾವೇ ಆಗಿದ್ದೇವೆ ಮತ್ತು ನಮ್ಮ ಮಾನವ ದೇಹವೇ ಆ ಅದ್ಭುತ ಯಂತ್ರವಾಗಿದೆ. ಯೋಗ ಸಾಧನೆಯಿಂದ, ಮನಸ್ಸನು ಒಳಮುಖವಾಗಿಸಿದಲ್ಲಿ, ಅದ್ಭುತ ವೇಗದಲ್ಲಿ ನಮ್ಮ ಮನಸ್ಸು ಬುದ್ಧಿಗಳು ಕೆಲಸ ಮಾಡುವಂತೆ ಮಾಡಿಕೊಳ್ಳಬಹುದು. ನಮ್ಮ ದೇಹದೊಳಗೇ ಇರುವ ಊರ್ಧ್ವಲೋಕಗಳಿಗೂ ಸಂಚರಿಸಿ ಅತ್ಯಂತ ಮೇಲಿರುವ ಪರಮಪದದಲ್ಲಿ ಭಗವಂತನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು.
ಈ ಮಾತನ್ನು ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆಯೊಂದಿಗೆ ನಮಗೆ ಹೇಳಿದ್ದಾರೆ. ನಾವು ಸರ್ಕಸ್ಸುಗಳಲ್ಲಿ(circus) ಇರುವ ಸೈಕಲ್ಲನ್ನು (cycle) ನೋಡಿದರೆ ಅದು ಮುಂದೆ pedal ಮಾಡಿದಾಗ ಮುಂದೆ ಹೋಗತ್ತೆ ಹಿಂದೆ pedal ಮಾಡಿದಾಗ ಹಿಂದೆ ಹೋಗುತ್ತದೆ. ಅಂದರೆ ಅದಕ್ಕೆ ಮುಂದೆ ಮತ್ತು ಹಿಂದೆ ಎರಡು ಕಡೆ ಹೋಗುವ ಸಾಮರ್ಥ್ಯವಿದೆ(ಬೇರೆ ಸೈಕಲ್ ಗಳಿಗೆ ಹಿಂದೆ ಹೋಗುವ ಸಾಮರ್ಥ್ಯವಿರುವುದಿಲ್ಲ). ಅದೇ ರೀತಿ ನಮ್ಮ ದೇಹಕ್ಕೂ ಅಷ್ಟೇ ಒಳಜೀವನ ಮತ್ತು ಹೊರಜೀವನ ಎರಡಲ್ಲೂ ಇರುವ ಸಾಮರ್ಥ್ಯ ಇದೆ. ಒಂದು ಯಂತ್ರ ಆಕಾಶಕ್ಕೆ ಹೋದಾಗ ವಿಮಾನವಾಗಿ, ಭೂಮಿಗೆ ಬಂದಾಗ ಬಸ್ ಮತ್ತು ರೈಲ್ ಆಗಬೇಕು. ನೀರಿನ ಮೇಲೆ ಬಂದಾಗ ಹಡಗಾಗಬೇಕು ಮತ್ತು ಮುಳುಗಿದಾಗ ಸಬ್ಮೆರಿನ್ (submarine) ಆಗಬೇಕು. ಒಂದೇ ಯಂತ್ರದಲ್ಲಿ ಇಷ್ಟು ಸೌಲಭ್ಯಗಳಿದ್ದರೆ ಹೇಗೆ ಇರುತ್ತದೆ? ಆ ಯಂತ್ರ ಬೇರೆಯಾವುದೂ ಅಲ್ಲ ನಮ್ಮ ಮಾನವ ದೇಹವೇ ಎಂದು ಶ್ರೀರಂಗ ಮಹಾಗುರುಗಳು ತಿಳಿಸಿಕೊಟ್ಟಿದ್ದಾರೆ. ಅಂತಹ ಯಂತ್ರವನ್ನು ಪಡೆದಿರುವ ನಾವು ಅದನ್ನು ಹೇಗೆ ಉಪಯೋಗಿಸಬೇಕೆಂದು ಮರೆತುಹೋಗಿದ್ದೇವೆ. ನಮಗೆ ಒಬ್ಬ ಸದ್ಗುರುವು ಆಶೀರ್ವಾದ ಮಾಡಿ ಆ ಉಪಯೋಗವನ್ನು ತಿಳಿಸಿಕೊಟ್ಟರೆ ಅವನ ಅನುಗ್ರಹದಿಂದ ಈ ಯಂತ್ರದ ಮೌಲ್ಯವೇನೆಂದು ಈ ಯಂತ್ರವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದುಕೊಂಡರೆ ಆಗ ಇದರ ಸಂಪೂರ್ಣ ಉಪಯೋಗವನ್ನು ಪಡೆದು ಸಾರ್ಥಕವಾಗಿರುವ ಜೀವನವನ್ನು ನಾವು ಮಾಡಬಹುದು. ನಮ್ಮೆಲ್ಲರ ಜೀವನವು ಅದೇ ರೀತಿಯಲ್ಲಿ ಸಾರ್ಥಕವಾಗಲೆಂದು ನಾವು ಪ್ರಾರ್ಥಿಸುತ್ತೇವೆ.
ಸೂಚನೆ: 02/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.
ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಅರಿಷಡ್ವರ್ಗಗಳು ಎಂಬುದಾಗಿ ಆರನ್ನು ಹೇಳಿ ಅವು ನಮ್ಮ ಪತನಕ್ಕೆ ಕಾರಣವಾಗುತ್ತವೆ, ಅವುಗಳ ವಿಷಯದಲ್ಲಿ ನಾವು ಹುಷಾರಾಗಿರಬೇಕು ಎಂದು ಅನೇಕ ಮಹಾತ್ಮರು ಹಾಗೂ ನಮ್ಮ ಅನೇಕ ವೈದಿಕ ಸಾಹಿತ್ಯ ಕೃತಿಗಳಲ್ಲಿ ಅರಿಷಡ್ವರ್ಗಗಳ ಅಪಾಯದ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ನೀಡುತ್ತವೆ. ಆದರೆ ಇನ್ನೊಂದೆಡೆ ನೋಡಿದರೆ, ಸಾಂಖ್ಯದ 96 ತತ್ವಗಳಲ್ಲಿ ಈ ಅರಿಷಡ್ವರ್ಗಗಳು ಅಂದರೆ ಕಾಮ, ಕ್ರೋಧ, ಲೋಭ, ಮೋಹ,ಮದ ಮತ್ತು ಮಾತ್ಸರ್ಯ ಇವುಗಳೂ ಸಹ ಸೇರಿಕೊಂಡಿವೆ.
ಈ 96 ತತ್ವಗಳು ಭಗವಂತನೇ ಸೃಷ್ಟಿಯಲ್ಲಿ ಸಹಜವಾಗಿಯೇ ಇಟ್ಟಿರುವಂತಹ ವಿಷಯಗಳಾಗಿವೆ. ಹೀಗೆ ಭಗವಂತ ಸೃಷ್ಟಿಯಲ್ಲಿ ಸಹಜವಾಗಿ ಇಟ್ಟಿರುವ ವಿಷಯಗಳು ನಮಗೆ ಅರಿ ಅಂದರೆ ಶತ್ರುಗಳು ಹೇಗಾದವು? ಅರಿ ಎಂದರೆ ಶತ್ರು, ಷಡ್ವರ್ಗ ಎಂದರೆ ಈ ಆರರ ಗುಂಪು. ಹೇಗೆ ಅವು ಶತ್ರುಗಳಾದವು ಎಂಬುದಾಗಿ ವಿಚಾರ ಮಾಡಿದರೆ ಅದರಲ್ಲಿ ಒಂದು ಸೂಕ್ಷ್ಮತೆ ಇದೆ, ಶ್ರೀರಂಗ ಮಹಾಗುರುಗಳು ಅದರ ರಹಸ್ಯವನ್ನು ಬಿಡಿಸಿ ಕೊಟ್ಟಿದ್ದಾರೆ. ಅದೇನೆಂದು ಹೇಳಿದರೆ ಈ ಆರು ಕೂಡ ಯಾವುದೋ ಒಂದು ಪ್ರಮಾಣದಲ್ಲಿ, ಒಂದು ಕಂಡೀಷನ್ ನಲ್ಲಿ ಇದ್ದಾಗ ಅದು ನಮ್ಮ ಜೀವನಕ್ಕೆ ಪೋಷಕವಾಗಿರುತ್ತದೆ. ಆದರೆ ಒಂದು ಪ್ರಮಾಣವನ್ನು ಅದು ಮೀರಿದಾಗ, ಅಥವಾ ಅದರ ಕಂಡೀಷನ್ ಕೆಟ್ಟಾಗ ಅದು ನಮ್ಮ ಪತನಕ್ಕೆ ಕಾರಣವಾಗುತ್ತದೆ ಆದ್ದರಿಂದ ಆಗ ಅದು ಅರಿಷಡ್ವರ್ಗಗಳಾಗುತ್ತವೆ ಎನ್ನುವುದು ಗುರುಗಳು ಬಿಡಿಸಿ ಕೊಟ್ಟಿರುವ ಮರ್ಮ. ಯಾವ ಕಂಡಿಷನ್ ನಲ್ಲಿ ಇದ್ದಾಗ ಅವುಗಳು ನಮಗೆ ಪೋಷಕವಾಗಿರುತ್ತವೆ ಅಥವಾ ಅರಿಯಲ್ಲದೇ ಹರಿಷಡ್ವರ್ಗಗಳಾಗುತ್ತವೆ ಎಂಬುದನ್ನು ಒಂದೊಂದಾಗಿ ಗಮನಿಸೋಣ.
ಮೊದಲನೆಯದಾಗಿ ಕಾಮ - ಕಾಮ ಅನ್ನುವುದು ಧರ್ಮಕ್ಕೆ ಅವಿರೋಧವಾಗಿ ಇದ್ದಾಗ ಭಗವತ್ ಕಾಮವಾಗಿದ್ದಾಗ ಅದು ನಮಗೆ ಪೋಷಕವಾಗಿರುತ್ತದೆ. ಭಗವದ್ಗೀತೆಯಲ್ಲಿಯೇ ಕೃಷ್ಣಪರಮಾತ್ಮ'ಧರ್ಮಾವಿರುಧ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ' ಎಂಬುದಾಗಿ ಧರ್ಮಕ್ಕೆ ಅವಿರೋಧವಾದ ಕಾಮ ನಾನೇ ಆಗಿದ್ದೇನೆ ಎಂಬುದಾಗಿ ಹೇಳುತ್ತಾನೆ. ಕಾಮ ಆ ಕಂಡಿಷನ್ ನಲ್ಲಿ ಇದ್ದಾಗ ಅದು ಪೋಷಕವಾಗಿರುತ್ತದೆ ಅಥವಾ ಹರಿಷಡ್ವರ್ಗಗಳಲ್ಲಿ ಒಂದಾಗಿರುತ್ತದೆ.
ಹಾಗೆಯೇ ಕ್ರೋಧ - ಕ್ರೋಧ ನಮ್ಮ ಹತೋಟಿಯಲ್ಲಿದ್ದು ಎಲ್ಲಿ ಧರ್ಮಕ್ಕೆ ಚ್ಯುತಿ ಬರುತ್ತಿರುತ್ತದೆಯೋ ಅಲ್ಲಿ, ಅಧರ್ಮದ ವಿರುದ್ಧವಾಗಿ ಅದು ಪ್ರಯೋಗವಾದಾಗ ಆ ಕ್ರೋಧ ಅನ್ನುವುದು ಎಲ್ಲರ ಏಳಿಗೆಗೆ ಕಾರಣವಾಗುತ್ತದೆ. ಉದಾಹರಣೆಗೆ ಪ್ರಭು ಶ್ರೀರಾಮಚಂದ್ರ ರಾವಣನನ್ನು ಸಂಹಾರ ಮಾಡಬೇಕಾದಾಗ ಅಗಾಧವಾದ ಕ್ರೋಧವನ್ನು ತಂದುಕೊಂಡ ಎಂಬುದಾಗಿ ಹೇಳುತ್ತಾರೆ. ಕ್ರೋಧವನ್ನು ತಂದುಕೊಂಡು ಆ ಕ್ರೋಧವನ್ನು ರಾವಣನಮೇಲೆ ಪ್ರಯೋಗ ಮಾಡಿದಾಗ ರಾವಣನ ಸಂಹಾರವಾಗಿ ಅಧರ್ಮ ನಾಶವಾಗುತ್ತದೆ. ಅಲ್ಲಿ ಅಂತಹ ಕ್ರೋಧ ಪೂಜ್ಯ. ಆದರೆ ಯಾವ ಕ್ರೋಧ ನಮ್ಮನ್ನು ಹತೋಟಿಗೆ ತಂದುಕೊಂಡು ನಮ್ಮನ್ನು ಕೆಳಗಡೆ ಇಳಿಸುತ್ತದೆಯೋ, ಬೀಳಿಸುತ್ತದೆಯೋ ಅಂತಹ ಕ್ರೋಧ ತ್ಯಾಜ್ಯ.
ಹೀಗೆ ಲೋಭ - ಲೋಭವೂ ಸಹ ವಸ್ತುಗಳ ಮೇಲಿರುವ ಲೋಭಕ್ಕಿಂತ ತಪಸ್ಸಿನ ಮೇಲೆ ಲೋಭ ಇದ್ದರೆ ಆಗ ನಾವು ಅದನ್ನು ಹೆಚ್ಚು ಹೆಚ್ಚು ಗಳಿಸಿಕೊಳ್ಳಬೇಕು ಎನ್ನುವ ಪ್ರಯತ್ನ ಮಾಡುತ್ತೇವೆ. ಋಷಿಗಳು ತಪೋ ಲೋಭಿಗಳಾಗಿರುತ್ತಾರೆ ಎಂಬುದಾಗಿ ನಮ್ಮ ಸಾಹಿತ್ಯಗಳಲ್ಲಿ ಕಂಡು ಬರುತ್ತದೆ.
ಹಾಗೆಯೇ ಮೋಹ - ಯಾವ ವಿಷಯದಮೇಲೆ ನಮಗೆ ಮೋಹ ಇರುತ್ತದೆಯೋ ಆ ವಿಷಯವನ್ನು ನಾವು ಸಂರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಧರ್ಮಸಮ್ಮತವಾದ ವಿಷಯಗಳು ಉದಾಹರಣೆಗೆ, ಒಬ್ಬ ತಾಯಿಗೆ ತನ್ನ ಮಕ್ಕಳ ಮೇಲೆ ಮೋಹ ಇದ್ದರೆ ಮಾತ್ರವೇ ಆಕೆ ಆ ಸಂತಾನವನ್ನು ರಕ್ಷಣೆ ಮಾಡಿಕೊಂಡು ಪಾಲನೆ, ಪೋಷಣೆ ಮಾಡಿಕೊಳ್ಳಲು ಸಾಧ್ಯವಾಗುವುದು. ಆದರೆ ಅತಿಯಾದ ವ್ಯಾಮೋಹವಿದ್ದರೆ ಆ ಬೆಳವಣಿಗೆ ವಿರೂಪವಾಗುತ್ತದೆ ಎಂಬುದೂ ಇದೆ. ಅದನ್ನೇ ನಾವು ಸ್ವಲ್ಪ ಇಂಗ್ಲೀಷನಲ್ಲಿ ಹೇಳುವುದಾದರೆ Love and nurture ಗೂ pampering ಗೂ ಒಂದು ವ್ಯತ್ಯಾಸ ಇರುತ್ತದೆ. ಮೋಹ ಅನ್ನುವುದು ಮಿತಿಮೀರಿದಾಗ ಅದು pampering ಆಗುತ್ತದೆ. ಇಲ್ಲದೇ ಇದ್ದಾಗ ಅದು Love and nurture ಅನ್ನುವ ರೀತಿಯಲ್ಲಿದ್ದು ಮಕ್ಕಳ ಬೆಳವಣಿಗೆಗೆ ಪೋಷಕವಾಗಿರುತ್ತದೆ.
ಹೀಗೆಯೇ ಮದ ಅನ್ನುವುದನ್ನು ಇಂದು ಅನೇಕ ರೀತಿಯಲ್ಲಿ ನೋಡುತ್ತೇವೆ, ಅಧಿಕಾರ ಮದ, ಧನ ಮದ ಇತ್ಯಾದಿಯಾಗಿ. ಇದೂ ಸಹ ಒಬ್ಬ ವ್ಯಕ್ತಿಯನ್ನು ಕೆಳಗಡೆ ಬೀಳುವ ಹಾಗೆ ಮಾಡುತ್ತದೆ.
ಯಾವುದ್ಯಾವುದೋ ಲೌಕಿಕ ವಿಷಯದಲ್ಲಿ ಮದ ಬಿಟ್ಟು ಭಗವಂತನ ವಿಷಯದಲ್ಲಿ ಅದನ್ನು ಇಟ್ಟುಕೊಂಡಾಗ ಅದು ನಮ್ಮನ್ನು ಬೀಳದೆ ಇರುವ ರೀತಿಯಲ್ಲಿ ಕಾಪಾಡುತ್ತದೆ, ಉದ್ಧಾರ ಮಾಡುತ್ತದೆ. ಜ್ಞಾನಿಗಳು ತಾವು ಇಂದ್ರಿಯವಶರಾಗದೇ ಅವುಗಳ ಮೇಲಿದ್ದು ತಮ್ಮ ಇಂದ್ರಿಯ ಸಂಯಮದ ಬಗ್ಗೆ ಒಂದು ಗತ್ತನ್ನು ಹೊಂದಿರುತ್ತಾರೆ. ಯಾರಾದರೂ ಇಂದ್ರಿಯದಾಸರು ತಮ್ಮ ಒಂದು ಅಧಿಕಾರ ಮದವನ್ನೋ ಧನ ಮದವನ್ನೋ ಪ್ರದರ್ಶನ ಮಾಡುತ್ತಿರಬೇಕಾದರೆ ಇವರು ಅದಕ್ಕೆ ಸೋತು ಸುಣ್ಣರಾಗಿ ಹೌದಪ್ಪ ನೀವು ಬಹಳ ಹಣವಂತರು ಅಥವಾ ನೀವು ಅಧಿಕಾರ ಇರುವವರು ಹಾಗಾಗಿ ನೀವೇ ದೊಡ್ಡವರು ಎಂಬುದಾಗಿ ಹೇಳುವುದಿಲ್ಲ. ನೀವು ಅಧಿಕಾರಿಗಳಾಗಿರಬಹುದು, ಹಣವಂತರಾಗಿರಬಹುದು. ನೀವು ಇಂದ್ರಿಯಗಳಿಗೆ ದಾಸರಾಗಿದ್ದೀರ, ನಾವು ಭಗವಂತನಿಗೆ ದಾಸರಾಗಿದ್ದೇವೆ, ಆದ್ದರಿಂದ ನೀವು ನೀವೇ, ನಾವು ನಾವೇ - ಯೂಯಂ ಯೂಯಮ್, ವಯಂ ವಯಮ್ ಅನ್ನುವ ಒಂದು ಸಾಧುವಾದ ಮದದಿಂದ ಇಂದ್ರಿಯ ಮದವನ್ನು ಗೆಲ್ಲುತ್ತಾರೆ. ಅವರು ಈ ರೀತಿಯ ಮದವನ್ನು ಇಟ್ಟುಕೊಂಡಾಗ, ಆ ಮದವು ಅವರು ಭಗವಂತನಲ್ಲಿ ಹೊಂದಿರುವ ತಾದಾತ್ಮ್ಯವನ್ನು ಕಾಪಾಡುತ್ತದೆ ಹಾಗೂ ಉದ್ದಾರ ಮಾಡುತ್ತದೆ. ಆಗ ಮದ ಅನ್ನುವುದು ಕೂಡ ಹರಿಷಡ್ವರ್ಗ ಆಗುತ್ತದೆ, ಅರಿ(ಶತ್ರು ) ಆಗಿ ಇರುವುದಿಲ್ಲ.
ಇನ್ನು ಇದೇ ರೀತಿ ನೋಡುವುದಾದರೆ ಮಾತ್ಸರ್ಯ ಆರನೆಯದು. ನಮಗಿಂತ ಒಬ್ಬನು ಚೆನ್ನಾಗಿ ಆಗುತ್ತಿದ್ದಾನೆ ಎಂಬುದಾಗಿ ಅನ್ನಿಸಿದಾಗ ಬರುವಂತಹ ಈರ್ಷ್ಯೆಯೇ ಮಾತ್ಸರ್ಯ. ಮಾತ್ಸರ್ಯ ಅನ್ನುವುದು ಯಾವಾಗ ಕೆಟ್ಟದಾಗಿ ಆಗುತ್ತದೆ ಎಂದರೆ ಅದರ ಮುಂದಿನ ಹೆಜ್ಜೆಯಾಗಿ ಚೆನ್ನಾಗಿರುವನನ್ನು ಕೆಳಗೆಳೆಯಬೇಕು ಎನ್ನಿಸಿದಾಗ. ಮತ್ತು ಎಳೆಯಬೇಕಾದರೆ ಏನು ಮಾಡಬೇಕು ಎಂದು ಯೋಚಿಸಿ ಅದನ್ನು ಮಾಡಿದಾಗ ಅದು ಪಾಪವನ್ನುಂಟು ಮಾಡುತ್ತದೆ. ಆಗ ಅದು ಅರಿಷಡ್ವರ್ಗ, ತಪ್ಪು, ಬೇರೆಯವರಿಗೂ ಹಾನಿಕಾರಕ ಮತ್ತು ನಮಗೂ ಹಾನಿಕಾರಕವಾಗುತ್ತದೆ. ಆದರೆ ಇನ್ನೊಬ್ಬನು ಚೆನ್ನಾಗಿ ಆಗುತ್ತಿದ್ದಾನೆ ಎಂದು ಕಂಡು ಬಂದಾಗ ನಾವೂ ಅವನಂತೆಯೇ ಚೆನ್ನಾಗಿ ಆಗಬೇಕು ಅನ್ನಿಸಿ ಚೆನ್ನಾಗುವ ಕಡೆ ನಮ್ಮ ಒಂದು ಪ್ರಯತ್ನದ ತೀವ್ರತೆ ಹೆಚ್ಚಾದರೆ ಅಂತಹ ಮಾತ್ಸರ್ಯ ಕ್ಷೇಮಕರವಾಗಿದ್ದು ನಮ್ಮ ಏಳಿಗೆಗೆ ಕಾರಣವಾಗುತ್ತದೆ. ಒಬ್ಬನಲ್ಲಿ ಕಲಾವಂತಿಕೆ ಹೆಚ್ಚಿಗೆ ಇರಬಹುದು ಇನ್ನೊಬ್ಬನಲ್ಲಿ ವಿದ್ಯೆ ಹೆಚ್ಚಿರಬಹುದು ಅದನ್ನು ನೋಡಿ ನಮಗೆ ಒಂದು ಮಾತ್ಸರ್ಯ ಉಂಟಾಗಿ ನಾವು ಹೆಚ್ಚಿನ ಪ್ರಯತ್ನಪಟ್ಟು ನಮ್ಮ ವಿದ್ಯೆಗಳನ್ನು ಕಲೆಗಳನ್ನು ಇನ್ನೂ ಶೋಭೆಗೊಳಿಸಿಕೊಳ್ಳಲು ಪ್ರಯತ್ನಿಸಿದರೆ ಆಗ ಅದು ನಮ್ಮ ಏಳಿಗೆಗೆ ಕಾರಣವಾಗುತ್ತದೆ. ಈ ರೀತಿಯಾಗಿ ನೋಡಿದಾಗ ಆಗ ಮಾತ್ಸರ್ಯವೂ ಸಹ ಅರಿಷಡ್ವರ್ಗದಿಂದ ಹರಿಷಡ್ವರ್ಗವಾಗಿ ಮಾರ್ಪಾಡಾಗುತ್ತದೆ. ಹೀಗೆ ಈ ಆರನ್ನೂ ಕೂಡ, ಒಂದು ಚೌಕಟ್ಟಿನಲ್ಲಿ, ಒಂದು ಪ್ರಮಾಣದಲ್ಲಿ ಇಟ್ಟುಕೊಂಡಾಗ ನಮ್ಮ ಜೀವನಕ್ಕೆ ಪೋಷಕವಾಗಿರುತ್ತದೆ.
ಹೀಗೆ ಅರಿಷಡ್ವರ್ಗಗಳನ್ನು ಹರಿಷಡ್ವರ್ಗಗಳನ್ನಾಗಿ ಮಾಡಿಕೊಂಡು ಸುಂದರ ಜೀವನ ನಡೆಸೋಣ.
ಸೂಚನೆ : 5/8/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
ಇಂದಿನ ನಮ್ಮ ಲೋಕಾರೂಢಿಯ ಜೀವನವನ್ನು ಗಮನಿಸಿದರೆ ನಾವು ಮಾನವ ದೇಹವನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ? ಅದರ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದೇವೆ? ಎಂದು ಕೇಳಿದರೆ ಅದನ್ನು ಎರಡಾಗಿ ವಿಭಾಗ ಮಾಡಿಕೊಳ್ಳಬಹುದು, ಮೊದಲನೆಯದಾಗಿ ಅದರ ಬಗ್ಗೆ ಬೆಳೆದಿರುವ ವಿಜ್ಞಾನ Anatomy, physiology ಮುಂತಾದವುಗಳಾಗಿ. ಮಾನವ ದೇಹದಲ್ಲಿ ಇಂತಿಂತಹ ಸಾಮಗ್ರಿಗಳಿವೆ ಅನ್ನುವ ನೇರದಲ್ಲಿ ದೇಹದ ಬಗ್ಗೆ ಕೆಲವು ನೋಟ ಇದೆ, ಉದಾಹರಣೆಗೆ blood circulation system ಇದೆ, nervous system ಇದೆ, skeletal system ಇದೆ ಇತ್ಯಾದಿಯಾಗಿ.ಇನ್ನು ದೈನಂದಿನ ಜೀವನದಲ್ಲಿ ನಾವು ಅದನ್ನ ಬಳಸಿಕೊಳ್ಳುವುದು ಅನ್ನುವುದರರ ಬಗ್ಗೆ ವಿಚಾರ ಮಾಡಿದರೆ ನಾವು ಇಂದ್ರಿಯ ಸುಖಕ್ಕಾಗಿ ಈ ದೇಹವನ್ನು ಬಳಸಿಕೊಳ್ಳುತ್ತಿದ್ದೇವೆ, ಹೇಗೆಂದರೆ ಏನಾದರೂ ಇಷ್ಟವಾಗಿರುವುದನ್ನು ತಿನ್ನುವುದು ಇಷ್ಟವಾಗಿರುವುದನ್ನು ಕೇಳುವುದು, ಇಷ್ಟವಾಗಿರುವುದನ್ನು ನೋಡುವುದು ಹೀಗೆ. ಆದರೆ ಇಷ್ಟೆಯೇ ಮಾನವ ದೇಹವನ್ನು ಪಡೆದುದರ ಪೂರ್ಣ ಪ್ರಯೋಜನ? ಮತ್ತು ನಾವು ಬೆಳೆಸಿಕೊಂಡಿರುವಂತಹ ಆಧುನಿಕ ವೈಜ್ಞಾನಿಕ ಪರಿಚಯ ಪೂರ್ಣವೇ? ಎಂದು ವಿಚಾರ ಮಾಡಿದರೆ ಹಾಗೇನಿಲ್ಲ. ಏಕೆಂದರೆ ಈ ಮಾನವ ದೇಹದಲ್ಲಿ ಏನೆಲ್ಲಾ ಇದೆ ಎಂದು ಗಮನಿಸಿದರೆ ಕೇವಲ ರಕ್ತ,ಮಾಂಸ,ಮೂಳೆ ಅಷ್ಟೇ ಅಲ್ಲದೆ ಇಲ್ಲೊಂದು ಮನಸ್ಸಿದೆ,ಇಲ್ಲೊಂದು ಬುದ್ಧಿ ಇದೆ ಮತ್ತು ಎಲ್ಲದಕ್ಕೂ ಮಿಗಿಲಾಗಿ ಒಂದು ಜೀವ ಇದೆ. ಯಾರಾದರೂ ಒಬ್ಬ ವ್ಯಕ್ತಿ ಸತ್ತಾಗ ಆ ವ್ಯಕ್ತಿಯ ದೇಹ ಅಲ್ಲೇ ಇರುತ್ತದೆ, ಆದರೂ ಆ ವ್ಯಕ್ತಿ ಇನ್ನಿಲ್ಲ ಎಂದು ವ್ಯವಹರಿಸುತ್ತೇವೆ. ಅಂದರೆ, ದೇಹಕ್ಕಿಂತ ಮಿಗಿಲಾದ ಇನ್ನೊಂದು ವಸ್ತು ದೇಹದಲ್ಲಿತ್ತು, ಅದು ದೇಹದಿಂದ ಹೊರಗೆ ಹೋದಾಗ ವ್ಯಕ್ತಿ ಇಲ್ಲ ಎಂದು ವ್ಯವಹರಿಸುತ್ತೇವೆ. ಸತ್ ಆದ ವಸ್ತು, ದೇಹದಲ್ಲಿ ಇತ್ತು, ಅದನ್ನೇ ಜೀವ ಎಂದು ಹೇಳುತ್ತಾರೆ, ಆ ಜೀವ ದೇಹದಿಂದ ಹೊರಟು ಹೋದಾಗ ಸತ್ತು ಹೋಯಿತು, ಸತ್ತು ಹೋದ ಎನ್ನುವ ವ್ಯವಹಾರ ಬರುತ್ತದೆ. ಅಂದರೆ ಮಾನವ ದೇಹದ ಬಗ್ಗೆ ತಿಳಿದುಕೊಳ್ಳಬೇಕಾದರೆ ದೇಹ, ಮನಸ್ಸು, ಅಹಂಕಾರ, ಬುದ್ಧಿ, ಚಿತ್ತ, ಮತ್ತು ಜೀವ - ಇವುಗಳೆಲ್ಲದರ ಬಗೆಗೆ ತಿಳಿದರೆ ಅದನ್ನು ಮಾನವದೇಹದ ಬಗೆಗಿನ ಪೂರ್ಣ ಪರಿಚಯ ಎಂದು ಹೇಳಬಹುದು. ದೇಹದಲ್ಲಿರುವ ಈ ಎಲ್ಲವೂ ಸರಿಯಾದ ಬಳಕೆಗೆ ಬಂದಾಗ ದೇಹದ ಪ್ರಯೋಜನ ಪೂರ್ಣವಾಗುತ್ತದೆ.
ಶ್ರೀರಂಗ ಮಹಾಗುರುಗಳು ಒಂದು ನೋಟವನ್ನು ಕೊಟ್ಟಿದ್ದರು, ''ಯಾವುದೇ ಒಂದು ವಸ್ತುವನ್ನು ಉಪಯೋಗಿಸಬೇಕಾದರೆ ಆ ವಸ್ತುವನ್ನು ವಿನ್ಯಾಸ ಮಾಡಿ,ಅದನ್ನು ತಯಾರಿಸಿದವನು ಯಾವ ಅಭಿಪ್ರಾಯದಿಂದ ಅದನ್ನು ತಯಾರಿಸಿದ್ದಾನೆಯೋ ಅದಕ್ಕೆ ಅನುಗುಣವಾಗಿ ಅದನ್ನು ಉಪಯೋಗಿಸಿಕೊಂಡರೆ ಆಗ ಅದು ಅದರ ಸರಿಯಾದ ಉಪಯೋಗವಾಗುತ್ತದೆಯಪ್ಪ" ಎಂಬುದಾಗಿ. ಉದಾಹರಣೆಗೆ ಒಂದು ಮೊಬೈಲ್ ಫೋನನ್ನು ನಾವು Call ಮಾಡುವುದಕ್ಕೆ ಹಾಗೂ text ಮಾಡುವುದಕ್ಕೆ ಉಪಯೋಗಿಸಿಕೊಂಡರೆ ಸರಿಯಾದ ಉಪಯೋಗವಾಗುತ್ತದೆ, ಅದನ್ನು ಬಿಟ್ಟು ಆ ವಸ್ತುವನ್ನು ಇನ್ನೊಬ್ಬರ ಮೇಲೆ ಬಿಸಾಕಿ ಅವರಿಗೆ ಏಟನ್ನು ಉಂಟುಮಾಡಲು ಉಪಯೋಗಿಸಿಕೊಂಡರೆ ಅದು ಅದರ ಸರಿಯಾದ ಉಪಯೋಗವಾಗುತ್ತದೆಯೇ? ಇಲ್ಲ. ಇದೇ ರೀತಿಯಲ್ಲಿ ಮಾನವದೇಹವನ್ನು ವಿನ್ಯಾಸ ಮಾಡಿದವರು ಯಾರು? ಅವರ ಆಶಯವೇನು ಎಂದು ಕೇಳಿದರೆ, ಈ ದೇಹವನ್ನು ನಿರ್ಮಿಸಿದವರು ಬ್ರಹ್ಮ; ಆ ಬ್ರಹ್ಮನ ಆಶಯ ಏನಿದೆ ಎಂದರೆ, ಮಾನವರು ತಮ್ಮ ಹಿಂದೆ ಬೆಳಗುತ್ತಿರುವ ಜ್ಯೋತಿಯನ್ನು ಕಂಡು ಈ ಸಂಸಾರದಿಂದ ಮುಕ್ತಿಯನ್ನು ಪಡೆಯಲಿ,ಅದಕ್ಕಾಗಿಯೇ ಈ ದೇಹವನ್ನು ನಿರ್ಮಿಸಿದ್ದೇನೆ ಎನ್ನುವುದು. ಸೃಷ್ಟಿಕರ್ತನ ಈ ಆಶಯವನ್ನು ಅರ್ಥ ಮಾಡಿಕೊಂಡು,ಅವನು ಇಟ್ಟಿರುವ ವಿನ್ಯಾಸವನ್ನು ಸದುಪಯೋಗಪಡಿಸಿಕೊಂಡು, ಆ ನಮ್ಮ ಮೂಲದಲ್ಲಿ ಬೆಳಗುತ್ತಿರುವಂತಹ ಜ್ಯೋತಿಯನ್ನು ಕಾಣುವುದಕ್ಕಾಗಿ ಮಾನವ ದೇಹವನ್ನು ಬಳಸಿದರೆ ಆಗ ಈ ದೇಹಯಂತ್ರವನ್ನು ವಿನ್ಯಾಸ ಮಾಡಿದವನ ವಿನ್ಯಾಸ ಹಾಗೂ ಆಶಯಕ್ಕೆ ತಕ್ಕಂತೆ ಬಳಸಿಕೊಂಡ ಹಾಗಾಗುತ್ತದೆ. ನಾವು ದೇಹಯಂತ್ರವನ್ನು ಬಳಸಿಕೊಂಡು ಭಗವಂತನನ್ನು ಕಾಣುವುದಕ್ಕೆ ಹೇಗೆ ಸಾಧ್ಯ? ಮತ್ತು ಈ ನೇರದಲ್ಲಿ ನಮಗೆ ದೇಹ ಯಂತ್ರದ ಬಗ್ಗೆ ಯಾವ ರೀತಿಯ ಪರಿಚಯ ಬೇಕಾಗಿದೆ ಎಂದು ಕೇಳಿದರೆ, ಅದಕ್ಕೆ ನಮಗೆ ಮಹರ್ಷಿಗಳು ಕೊಟ್ಟಿರುವ ನೋಟದಲ್ಲಿ ಉತ್ತರ ಸಿಗುತ್ತದೆ. ತಪಸ್ಯೆಯ ಮೂಲಕ ಮಹರ್ಷಿಗಳು ಈ ಮಾನವ ದೇಹದಲ್ಲಿ ಏನೇನಿದೆ ಎಂಬುದನ್ನು ತಮ್ಮೊಳಗೆ ಕಂಡುಕೊಂಡು ಅವರು ದೇಹದಲ್ಲಿರುವ elements ಅಥವಾ ತತ್ವಗಳೆಷ್ಟು ಮತ್ತು ಅವು ಯಾವುವು ಎನ್ನುವುದನ್ನು ವಿಸ್ತಾರವಾಗಿ ನಿರೂಪಿಸಿದ್ದಾರೆ. ಈ elements ಅಥವಾ ತತ್ವಗಳು 26; ಯಾವುವೆಂದರೆ - ಪೃಥ್ವಿ,ಅಪ್,ತೇಜಸ್,ವಾಯು ಮತ್ತು ಆಕಾಶ ಎನ್ನುವ ಪಂಚಭೂತಗಳಿವೆ(5), ಶಬ್ದ,ರಸ,ರೂಪ ಗಂಧ, ಮತ್ತು ಸ್ಪರ್ಶ ಎಂಬ (5)ಪಂಚತನ್ಮಾತ್ರೆಗಳಿವೆ, ವಾಕ್, ಪಾದ, ಪಾಯು ಪಾಣಿ, ಹಾಗೂ ಉಪಸ್ಥ ಎಂಬುದಾಗಿ ಪಂಚ (5)ಕರ್ಮೇಂದ್ರಿಯಗಳಿವೆ. ಕಣ್ಣು, ಕಿವಿ,ಮೂಗು,ನಾಲಿಗೆ ಮತ್ತು ಚರ್ಮ(5) ಇವು ಜ್ಞಾನೇಂದ್ರಿಯಗಳು. ಇವೆಲ್ಲ ಸೇರಿ 20 ತತ್ವಗಳು ಆಗುತ್ತವೆ. ಇವೆಲ್ಲದರ ಹಿಂದೆ ಮನಸ್ಸು,ಬುದ್ಧಿ, ಅಹಂಕಾರ ಮತ್ತು ಚಿತ್ತ ಎಂಬುದಾಗಿ ಇವೆ, ಇವನ್ನು ಅಂತ:ಕರಣಗಳು ಎಂದು ಕರೆಯುತ್ತಾರೆ. ಈ 24 ತತ್ವಗಳು ಒಟ್ಟಿನಲ್ಲಿ ಪ್ರಕೃತಿ ಎಂದು ಆಗಿದೆ. ಇವುಗಳ ಹಿಂದೆ ಜೀವ ಇದ್ದಾನೆ ಮತ್ತು ಅವನಿಗೂ ಹಿಂದೆ ಪರಮಾತ್ಮನೂ ಇದ್ದಾನೆ. ಇವಿಷ್ಟೂ ಅಂದರೆ ಒಟ್ಟು 26 ತತ್ವಗಳೂ ಸೇರಿಯೇ ಈ ಮಾನವ ದೇಹ ಎಂಬುದಾಗಿ ಆಗಿದೆ.
ಹಾಗಿದ್ದರೆ ಪ್ರತಿಯೊಂದು ದೇಹದಲ್ಲಿಯೂ ಭಗವಂತ ಇದ್ದಾನೆಯೇ? ಎಂದರೆ ಖಂಡಿತವಾಗಿಯೂ, ಇದ್ದಾನೆ. ಏಕೆಂದರೆ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ
ಈಶ್ವರಸ್ಸರ್ವಭೂತಾನಾಂ| ಹೃದ್ದೇಶೇರ್ಜುನ ತಿಷ್ಠತಿ l
ಭ್ರಾಮಯನ್ ಸರ್ವಭೂತಾನಿ| ಯಂತ್ರರೂಢಾನಿ ಮಾಯಯಾ ll
ಎಂಬುದಾಗಿ ಹೇಳಿದ್ದಾನೆ ಅಂದರೆ ಅವನೇ ಈ ದೇಹದಲ್ಲಿ ಕುಳಿತುಕೊಂಡು ನಮ್ಮನ್ನೆಲ್ಲಾ ಆಡಿಸುತ್ತಿದ್ದಾನೆ. ಎಂದರೆ ನಮ್ಮ ದೇಹದಲ್ಲಿ ಒಂದು ಮೆಕ್ಯಾನಿಸಮ್ ಇಟ್ಟು ಆ ಮೆಕ್ಯಾನಿಸಮ್ ಅನ್ನು ಭಗವಂತ ಇಲ್ಲಿ ಇಟ್ಟು ಆಪರೇಟ್ ಮಾಡುತ್ತಿದ್ದಾನೆ ಮತ್ತು ನಮ್ಮ ಇಚ್ಛೆಯಂತೆ ಅದನ್ನು ನಡೆಸುತ್ತಿದ್ದಾನೆ. ಈ ಜೀವಕ್ಕೆ ತನ್ನ ಕರ್ಮಫಲದ ಅನುಗುಣವಾಗಿ ಎಷ್ಟು ಸ್ವಾತಂತ್ರವಿದೆಯೋ ಅಷ್ಟು ಸ್ವಾತಂತ್ರದಲ್ಲಿ ಈ ಜೀವದ ಇಚ್ಚೆಗೆ ಅನುಗುಣವಾಗಿ ಭಗವಂತ ಈ ದೇಹವೆಂಬ ರಥವನ್ನು ನಡೆಸಿಕೊಂಡು ಹೋಗುತ್ತಾ ಇರುತ್ತಾನೆ. ಹೀಗಾಗಿ ಈ ದೇಹದಲ್ಲಿ ಭಗವಂತನಿದ್ದಾನೆ, ಜೀವ ಇದೆ ಮತ್ತು ಈ ಪ್ರಕೃತಿ ಅನ್ನುವುದು ಇದೆ ಅನ್ನುವ ನೋಟವನ್ನು ಮಹರ್ಷಿಗಳು ಕೊಟ್ಟಿದ್ದಾರೆ. ಆಧುನಿಕವಾದ ಮೆಡಿಕಲ್ ಸೈನ್ಸ್ ದೇಹದ ಬಗ್ಗೆ ಸ್ಥೂಲವಾದ ನೋಟವನ್ನು ಮಾತ್ರ ಕೊಡುತ್ತದೆ, ಇದಕ್ಕಿಂತ ವಿಭಿನ್ನವಾದ ನೋಟವನ್ನು ನಮ್ಮ ಮಹರ್ಷಿಗಳು ಕೊಟ್ಟಿದ್ದಾರೆ. ಈ ನೋಟದ ಸಹಾಯದಿಂದ ನಾವು ಲೌಕಿಕ ಜೀವನ ಅಥವಾ ಇಂದ್ರಿಯಾವಲಂಬೀ ಜೀವನವನ್ನು ಮಾಡುವುದಲ್ಲದೇ ಆತ್ಮ ಸುಖವನ್ನೂ ಅನುಭವಿಸಿದರೆ ಮಾತ್ರ ಈ ಮಾನವ ದೇಹದ ಉಪಯೋಗ ಪೂರ್ಣವಾಗುತ್ತದೆ, ನಾವು ಪೂರ್ಣ ಜೀವನ ಮಾಡಿದ ಹಾಗೆ ಆಗುತ್ತದೆ ಎನ್ನುವುದು ಮಹರ್ಷಿಗಳ ಅಭಿಪ್ರಾಯವಾಗಿದೆ.
ಹೀಗೆ, ಅನೇಕ ದೃಷ್ಟಿಕೋಣಗಳಿಂದ ನೋಡಿದಾಗಲೂ ನಮ್ಮ ದೇಹದ ಹಿಂಬದಿಯಲ್ಲಿರುವ ಜೀವ ಮತ್ತು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಾಗಲೇ ನಮಗೆ ನಮ್ಮ ಪರಿಚಯ ಪೂರ್ಣವಾಗುವುದು ಮತ್ತು ಜೀವನ ಸಾರ್ಥಕವಾಗುವುದು. ಈ ದಿಕ್ಕಿನಲ್ಲಿ ಪ್ರಯತ್ನ ಪಟ್ಟು ಜೀವನವನ್ನು ಸಾರ್ಥಕ ಮಾಡಿಕೊಳ್ಳೋಣ.
ಸೂಚನೆ: 3/8/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.
ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಪ್ರಭು ಶ್ರೀರಾಮಚಂದ್ರನ ಪೂರ್ವಜರಲ್ಲಿ ನಡೆದಂತಹ ಒಂದು ಕಥೆ, ಶ್ರೀರಂಗ ಮಹಾಗುರುಗಳು ಭಾರತೀಯ ಸಂಸ್ಕೃತಿಯಲ್ಲಿ ಇರುವಂತಹ ವೈರಾಗ್ಯ ಮತ್ತು ನಿ:ಸ್ಪೃಹತೆಯ ವಿಷಯದಲ್ಲಿ ಈ ಪ್ರಸಂಗವನ್ನು ಎತ್ತಿ ಹೇಳುತ್ತಿದ್ದರು.
ಹಿಂದೊಮ್ಮೆ ವರತಂತು ಎನ್ನುವಂತಹ ಆಚಾರ್ಯರ ಗುರುಕುಲದಲ್ಲಿ ಕೌತ್ಸ ಎನ್ನುವ ಶಿಷ್ಯ ತನ್ನ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿ ಆಚಾರ್ಯರ ಪರಮ ಪ್ರೀತಿಗೆ ಕಾರಣನಾಗಿರುತ್ತಾನೆ. ಗುರುಗಳ ಬಳಿ ನನ್ನ ವಿದ್ಯಾಭ್ಯಾಸವೆಲ್ಲಾ ಮುಗಿಯಿತು ನಾನು ತಮಗೆ ಗುರುದಕ್ಷಿಣೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತಿದ್ದೇನೆ ಏನನ್ನು ಕೊಡಲಿ ಎಂದು ಕೇಳುತ್ತಾನೆ. ಆಗ ಅವನ ಬಗ್ಗೆ ಅತ್ಯಂತ ಸಂಪ್ರೀತರಾಗಿದ್ದಂತಹ ಗುರುಗಳು ಏನೂ ಬೇಡಪ್ಪ ಇದುವರೆಗೂ ನೀನು ನನ್ನ ಸೇವೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀಯ, ವಿದ್ಯೆಯನ್ನು ತುಂಬಾ ಚೆನ್ನಾಗಿ ಗ್ರಹಣ ಮಾಡಿದ್ದೀಯ ಹಾಗಾಗಿ ನನಗೆ ನಿನ್ನ ಬಗ್ಗೆ ಸಂತೋಷ ಉಂಟಾಗಿದೆ ಇನ್ನೇನೂ ಬೇಡ ಎಂದು ಹೇಳುತ್ತಾರೆ. ಅವರು ಹಾಗೆ ಹೇಳಿದ ಮೇಲೆಯೂ ಕೂಡ ಕೌತ್ಸ ಪದೇ ಪದೇ ಅವರನ್ನು ಪೀಡಿಸುತ್ತಾನೆ, ಇಲ್ಲ ಗುರುಗಳೇ ನಾನು ಏನಾದರೂ ಒಂದು ಗುರುದಕ್ಷಿಣೆ ಕೊಡಲೇಬೇಕು ನಿಮಗೆ ಏನನ್ನು ಕೊಡಲಿ ಹೇಳಿ ಹೇಳಿ ಎಂದು. ಆಗ ವರತಂತುಗಳಿಗೆ ನಾನು ಇಷ್ಟು ಬೇಡ ಎಂದರೂ ಇವನು ಪೀಡಿಸುತ್ತಿದ್ದಾನಲ್ಲ ಎಂದು ಒಂದು ಸಾತ್ವಿಕವಾದ ಕೋಪ ಉಂಟಾಗುತ್ತದೆ. ಆಗ ಅವನನ್ನು ಕುರಿತು ನೋಡು ನೀನು 14 ವಿದ್ಯೆಗಳನ್ನು ನನ್ನಿಂದ ಕಲಿತಿದ್ದೀಯಾ ಹಾಗಾಗಿ 14 ಮಣ ಚಿನ್ನವನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ಕೌತ್ಸ ಒಬ್ಬ ಬಡ ಬ್ರಾಹ್ಮ; ಬಡವರ ಮನೆಯಿಂದ ಬಂದಂತಹ ವಿದ್ಯಾರ್ಥಿ,ಅವನು 14 ಮಣ ಚಿನ್ನವನ್ನು ಎಲ್ಲಿಂದ ತರುವುದು? ಆದರೆ ಅವನು ವಿದ್ಯಾವಂತನೂ ಆದುದರಿಂದ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾನೆ. ಆಗ ಶ್ರೀರಾಮಚಂದ್ರನ ಪೂರ್ವಜನಾದ ರಘು ಮಹಾರಾಜ ಭೂಮಿಯನ್ನು ಆಳುತ್ತಿರುತ್ತಾನೆ. ಅವನ ಹತ್ತಿರ ಹೋಗಿ ಚಿನ್ನವನ್ನು ಕೇಳೋಣ ಎಂದು ಕೌತ್ಸನು ಯೋಚಿಸಿ ಅವನ ಬಳಿಗೆ ಹೋಗುತ್ತಾನೆ. ಅಲ್ಲಿ ಹೋಗಿ ನೋಡಿದರೆ ರಘುವಿನ ಆಸ್ಥಾನದಲ್ಲಿ ರಘು ಆಗತಾನೆ ಒಂದು ದೊಡ್ಡ ಯಾಗವನ್ನು ಮಾಡಿ ಅನೇಕ ವಿಧವಾದ ದಾನದಕ್ಷಿಣೆಗಳನ್ನೆಲ್ಲಾ ಕೊಟ್ಟು ಬರಿಗೈಯಲ್ಲಿ ಇರುತ್ತಾನೆ. ಕೌತ್ಸ ಹೋದಾಗ ಅವನಿಗೆ ಚಿನ್ನದ ಪಾತ್ರೆಯಲ್ಲಿ ಸತ್ಕಾರ ಮಾಡುವ ಬದಲು ಮಣ್ಣಿನ ಪಾತ್ರೆಯಲ್ಲಿ ನೀರನ್ನು ತಂದು ಅದರಲ್ಲಿ ಕೌತ್ಸನಿಗೆ ಕಾಲು ತೊಳೆದು ಉಪಚಾರವನ್ನು ಮಾಡಿ,ಏನು ಬಂದಿದ್ದೀರಿ ?ಎಂದು ಕೇಳುತ್ತಾನೆ. ಆಗ ಕೌತ್ಸ ಇವನ ಹತ್ತಿರವೇ ಮಣ್ಣಿನ ಪಾತ್ರೆ ಇದೆ ಇನ್ನು ನನಗೆ ಚಿನ್ನ ಎಲ್ಲಿಂದ ಕೊಡುತ್ತಾನೆ ಎಂದು ಯೋಚಿಸಿ ಏನಿಲ್ಲ ಸುಮ್ಮನೆ ನಿನ್ನನ್ನು ನೋಡೋಣ ಎಂದು ಬಂದೆ ಎಂದು ಹೇಳಿ ಹೋಗಿ ಬರುತ್ತೇನೆ ಎಂದು ಅಲ್ಲಿಂದ ಹೊರಡಲು ಸಿದ್ಧವಾಗುತ್ತಾನೆ. ಆದರೆ ರಘು ಮಹಾರಾಜ ಇಂಗಿತಜ್ಞ, ಕೌತ್ಸನ ಮುಖವನ್ನು ನೋಡಿದಾಗಲೇ ಇವನು ಸುಮ್ಮನೆ ಬಂದಿಲ್ಲ ನಿರ್ನಿಮಿತ್ತವಾಗಿ ಬಂದಿಲ್ಲ ಏನೋ ಒಂದು ಉದ್ದೇಶವನ್ನು ಇಟ್ಟುಕೊಂಡು ಬಂದಿದ್ದಾನೆ ಎಂದು ಅವನಿಗೆ ಗೊತ್ತಾಗುತ್ತದೆ. ಹೀಗಾಗಿ ರಘು ಮಹಾರಾಜ ಅವನನ್ನು ಒತ್ತಾಯ ಮಾಡಿ ಕೇಳುತ್ತಾನೆ ಏತಕ್ಕಾಗಿ ಬಂದಿದ್ದೀಯಾ ಹೇಳು ಎಂದು. ಆಗ ಕೌತ್ಸ ನಡೆದ ಪ್ರಸಂಗವನ್ನು ವಿವರಿಸಿ ಗುರುಗಳು ಕೋಪಿಸಿಕೊಂಡು 64 ಮಣ ಚಿನ್ನವನ್ನು ಕೊಡು ಎಂದರು ಅದಕ್ಕಾಗಿ ನಿನ್ನ ಬಳಿ ಬಂದೆ ಎಂದಾಗ ಮಹಾರಾಜ, ಅಷ್ಟೇ ತಾನೇ ನಾನು ಅದಕ್ಕೆ ವ್ಯವಸ್ಥೆ ಮಾಡುತ್ತೇನೆ ನೀನು ಇಲ್ಲಿಯೇ ಉಳಿದುಕೋ ಎಂದು ಹೇಳುತ್ತಾನೆ.
ಅಂದು ರಾತ್ರಿ ರಘು ಮಹಾರಾಜ ಮನಸ್ಸಿನಲ್ಲಿ ನಾಳೆ ಬೆಳಿಗ್ಗೆ ಕುಬೇರನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಚಿನ್ನವನ್ನು ತೆಗೆದುಕೊಂಡು ಬಂದು ಕೌತ್ಸನಿಗೆ ಕೊಡಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ.
ಕುಬೇರ ಯಕ್ಷರ ರಾಜ, ಅವನು ಕೂಡ ಇಂಗಿತಜ್ಞ; ರಘುವಿನ ಮನಸ್ಸಿನಲ್ಲಿ ಈ ರೀತಿಯ ಒಂದು ಆಲೋಚನೆ ಬಂದ ತಕ್ಷಣವೇ ಅವನಿಗೆ ಗೊತ್ತಾಗುತ್ತದೆ. ಹಾಗೆಯೇ ರಘು ಮಹಾರಾಜನನ್ನು ತಡೆಯುವ ಸಾಮರ್ಥ್ಯವೂ ಅವನಿಗೆ ಇರುವುದಿಲ್ಲ; ಜೊತೆಗೆ ರಘುವಿನ ಯೋಚನೆ ಸಾಧುವಾಗಿಯೇ ಇದೆ, ಒಬ್ಬ ಗುರುವಿಗೆ ಗುರುದಕ್ಷಿಣೆಯನ್ನು ಕೊಡುವುದಕ್ಕಾಗಿ ಬಂದಂತಹವನ ಸಹಾಯಕ್ಕಾಗಿ, ತಾನು ಧನ ಸಂಪಾದನೆ ಮಾಡಲು ದಂಡೆತ್ತಿ ಬರುತ್ತಿದ್ದಾನೆ, ಅವನ ಯೋಚನೆ ಸಾಧುವಾಗಿಯೇ ಇದೆ ಹಾಗಾಗಿ ಅವನಿಗೆ ಅನುಗ್ರಹವನ್ನು ಮಾಡುವುದೇ ಸರಿ ಎಂದು ಕುಬೇರನು ಯೋಚಿಸಿ ಅಂದು ರಾತ್ರಿಯೇ ರಘುವಿನ ಖಜಾನೆಯನ್ನು ಪೂರ್ತಿಯಾಗಿ ಚಿನ್ನದಿಂದ ತುಂಬಿಸಿಬಿಡುತ್ತಾನೆ. ರಘು ಮಹಾರಾಜ ಮಾರನೆಯ ದಿನ ಬೆಳಿಗ್ಗೆ ಎದ್ದು ನೋಡುತ್ತಾನೆ ಅವನ ಖಜಾನೆ ಪೂರ್ತಿಯಾಗಿ ತುಂಬಿರುತ್ತದೆ. ಆಗ ಕೌತ್ಸನಿಗೆ ಬೇಕಾದಂತಹ 14 ಗಾಡಿಗಳಲ್ಲಿ ಚಿನ್ನವನ್ನು ತುಂಬಿಸಿ ನೀನು ಇದನ್ನು ನಿನ್ನ ಗುರುವಿಗೆ ತೆಗೆದುಕೊಂಡು ಹೋಗಿ ಕೊಡಬಹುದು ಎಂದು ಹೇಳುತ್ತಾನೆ, ಖಜಾನೆಯಲ್ಲಿ ಇನ್ನಷ್ಟು ಚಿನ್ನ ಹಾಗೆಯೇ ಉಳಿದಿರುತ್ತದೆ, ಇದನ್ನೂ ಗಾಡಿಗೆ ಹಾಕಿಸುತ್ತೇನೆ ಇದನ್ನು ಕೂಡ ನೀನೆ ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಆಗ ಕೌತ್ಸ ಇಲ್ಲ ಹಾಗೆ ಮಾಡಲು ಸಾಧ್ಯವಿಲ್ಲ ನಾನು ಗುರುದಕ್ಷಿಣೆ ಕೊಡುವ ಸಲುವಾಗಿ ನಿನ್ನನ್ನು ಕೇಳಿದ್ದು, ಅದನ್ನು ಹೊರತು ಪಡಿಸಿ ಒಂದೇ ಒಂದು ಬಿಡಿಗಾಸನ್ನೂ ಕೂಡ ಹೆಚ್ಚಿಗೆ ನಾನು ತೆಗೆದುಕೊಂಡು ಹೋಗುವುದಿಲ್ಲ ಎನ್ನುತ್ತಾನೆ. ಆಗ ರಘು ಮಹಾರಾಜ, ನೋಡು ಕುಬೇರ ಇಲ್ಲಿ ಧನವನ್ನು ವರ್ಷಿಸಿರುವುದು ನಿನಗೋಸ್ಕರ, ನಿನಗೋಸ್ಕರ ನಾನು ದಂಡೆತ್ತಿ ಹೋಗಬೇಕು ಎಂದಿದ್ದೆ, ನಿನಗೋಸ್ಕರ ಅವನು ಕೊಟ್ಟಿದ್ದಾನೆ, ಆದ್ದರಿಂದ ಇದರಲ್ಲಿ ಒಂದೇ ಒಂದು ಬಿಡಿಗಾಸನ್ನೂ ನಾನು ಇಟ್ಟುಕೊಳ್ಳುವುದಕ್ಕೆ ತಯಾರಾಗಿಲ್ಲ, ಅದು ನನಗೆ ಸೇರಿದ್ದಲ್ಲ ನಿನಗೇ ಸೇರಿದ್ದು ನೀನೇ ತೆಗೆದುಕೊಂಡು ಹೋಗಬೇಕು ಎಂದು ವಾದ ಮಾಡುತ್ತಾನೆ. ಹೀಗೆ ಒಬ್ಬರಿಗೊಬ್ಬರಿಗೆ ಎಷ್ಟು ತೀವ್ರವಾಗಿ ವಾದ ಆಗುತ್ತದೆ ಎಂದರೆ ಇದು ನನಗೆ ಸೇರಿದ್ದಲ್ಲ ಇದು ನನಗೆ ಸೇರಿದ್ದಲ್ಲ ಎಂದು ಇನ್ನೊಬ್ಬರ ವಸ್ತುವನ್ನು ತಮ್ಮದಾಗಿ ಮಾಡಿಕೊಳ್ಳದೇ ಇರುವುದರ ಬಗ್ಗೆ ಅವರು ವಾದ ಮಾಡುತ್ತಿರುತ್ತಾರೆ. ಅಂದರೆ ಅವರಿಗೆ ಇದ್ದಂತಹ ಉತ್ತಮ ಮಟ್ಟದ ವೈರಾಗ್ಯ ಮತ್ತು ನಿ:ಸ್ಪೃಹತೆಯಲ್ಲಿ ಎದ್ದು ಕಾಣುತ್ತದೆ. ನಿ:ಸ್ಪೃಹತೆಯ ಎಂದರೆ, ನಮ್ಮದಲ್ಲದ ವಸ್ತುವಿನ ಜೊತೆ ಮನಸ್ಸು ಸ್ವಲ್ಪವೂ ಅಂಟಿಕೊಳ್ಳದಿರುವಿಕೆ. ವೈರಾಗ್ಯ ಹಾಗೂ ನಿ:ಸ್ಪೃಹತೆಯಗಳು ಒಂದಕ್ಕೊಂದು ಸಂಬಂಧ ಪಟ್ಟದ್ದು ಹಾಗೂ ವೈರಾಗ್ಯ ಅನ್ನುವುದು ಒಂದು ದೊಡ್ಡ ಸಂಪತ್ತು ಅನ್ನುವ ಕಾರಣದಿಂದ ನಾವು ಆಹಾರ ಸೇವನೆ ಮಾಡಬೇಕಾದರೆ 'ಜ್ಞಾನ ವೈರಾಗ್ಯ ಸಿ ದ್ಧ್ಯರ್ಥಮ್ ಭಿಕ್ಷಾಂ ದೇಹಿ ಚ ಪಾರ್ವತಿ' ಎಂದು ಅನ್ನಪೂರ್ಣಾ ದೇವಿಯನ್ನು ಸ್ತುತಿ ಮಾಡುತ್ತೇವೆ. ಹೀಗಾಗಿ ವೈರಾಗ್ಯದಂತಹ ಸಂಪತ್ತನ್ನು ನಾವು ಬೆಳೆಸಿಕೊಳ್ಳೋಣ, ಜೀವನದಲ್ಲಿ ಉದ್ಧಾರವಾಗೋಣ.
ಲೇಖಕರು: ಶ್ರೀ ಜಿ ನಾಗರಾಜ(ಪ್ರತಿಕ್ರಿಯಿಸಿರಿ lekhana@ayvm.in)ನಾವು ಅನೇಕ ರೀತಿಯ ಸಾಧಕರನ್ನು ಜೀವನದಲ್ಲಿ ನೋಡಿರುತ್ತೇವೆ. ಹಾಗೆಯೇ ನಾವೂ ನಾನಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕು, ಯಶಸ್ವಿಯಾಗಬೇಕು ಎಂದುಕೊಂಡಿರುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಯಶಸ್ವಿಯಾಗಬೇಕಾದರೆ ಕೆಲವೊಂದಷ್ಟು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ. ಅಂತಹ ಸೂತ್ರಗಳಲ್ಲಿ ಪತಂಜಲಿ ಯೋಗಸೂತ್ರದಲ್ಲಿ ಬರುವಂತಹ ಸೂತ್ರವೂ ಒಂದಾಗಿದೆ. ಅದು ಯಾವುದೆಂದರೆ ' ಸ ತು ದೀರ್ಘಕಾಲ ನೈರಂತರ್ಯ ಸತ್ಕಾರಾ ಸೇವಿತ ದೃಢಭೂಮಿಃ' ಎಂಬುದಾಗಿ. ಅಂದರೆ ನಮ್ಮ ಯೋಗ ಸಾಧನೆಯು ಪಕ್ವವಾಗಬೇಕಾದರೆ, ನಮಗೆ ಸಾಧನೆಯಲ್ಲಿ ಒಂದು ದೃಢ ಭೂಮಿ ಉಂಟಾಗಬೇಕಾದರೆ, ನಮ್ಮ ಯೋಗ ಸಾಧನೆಯನ್ನು ದೀರ್ಘಕಾಲ ಮಾಡಬೇಕು. ಎರಡನೆಯದಾಗಿ, ಈ ಸಾಧನೆಯಲ್ಲಿ gap (ಅಂತರ) ಬರಬಾರದು, ನಿರಂತರವಾಗಿರಬೇಕು. ಇವತ್ತು ಮಾಡಿದ್ದೇವೆ, ನಾಳೆ ಮಾಡಲಿಲ್ಲ; ಮತ್ತೆ ನಾಡಿದ್ದು ಮಾಡುತ್ತೇವೆ ಎಂದರೆ ಅದರಿಂದ ಫಲ ಸಿಗುವುದಿಲ್ಲ. ಮತ್ತು ಸತ್ಕಾರಾ ಸೇವಿತ ಅಂದರೆ ಆ ಸಾಧನೆಗೆ ಎಷ್ಟು ರೀತಿಯಲ್ಲಿ ಸತ್ಕಾರವನ್ನು ಕೊಡಬೇಕೋ ಅದನ್ನು ಕೊಟ್ಟು ಮಾಡಬೇಕು. ಶ್ರದ್ಧೆ, ಭಕ್ತಿ ಇವುಗಳಿಂದ ಆ ಸಾಧನೆಯನ್ನು ಮಾಡಬೇಕು. ಹಾಗೆ ಮಾಡಿದಾಗ ಅದರಲ್ಲಿ ನಮಗೆ ಒಂದು ದೃಢ ಭೂಮಿ ಸಿಗುತ್ತದೆ.ಈ ಸೂತ್ರವನ್ನು ನಾವು ಲೌಕಿಕ ಕ್ಷೇತ್ರದ ಸಾಧನೆಗಳಿಗೂ ಅನ್ವಯಿಸಿಕೊಳ್ಳಬಹುದು. ಉದಾಹರಣೆಗೆ ಅದು ಸಂಗೀತ ಕ್ಷೇತ್ರ ಇರಬಹುದು, ಕ್ರೀಡಾಕ್ಷೇತ್ರ ಇರಬಹುದು -ಯಾವುದೇ ಕ್ಷೇತ್ರದಲ್ಲಾದರೂ ನಾವು ನಮ್ಮನ್ನು ದೀರ್ಘಕಾಲ ತೊಡಗಿಸಿಕೊಂಡಾಗ ಆ ಕ್ಷೇತ್ರದಲ್ಲಿ ನಮಗೆ ಒಂದು ದೃಢ ಭೂಮಿ ಸಿಗುತ್ತದೆ. ಇದನ್ನು ನಾವು ನಮ್ಮ ನಿತ್ಯ ಜೀವನದಲ್ಲಿಯೂ ಅಳವಡಿಸಿಕೊಳ್ಳಬಹುದು. ಹೇಗೆಂದರೆ ಮೊಟ್ಟಮೊದಲನೆಯದಾಗಿ ನಾವು ನಮ್ಮನ್ನು ಅಧ್ಯಾತ್ಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಅಧ್ಯಾತ್ಮ ಕ್ಷೇತ್ರ ಎಂದು ಹೇಳಿದ ಮಾತ್ರಕ್ಕೆ ಸಂಸಾರವನ್ನು ತ್ಯಾಗ ಮಾಡಿ, ಕಾಡಿನಲ್ಲಿ ಹೋಗಿ ಮೂಗನ್ನು ಹಿಡಿದು ಕುಳಿತುಕೊಳ್ಳುವವರಿಗೆ ಮಾತ್ರ ಎಂದು ಅರ್ಥ ಮಾಡಿಕೊಳ್ಳಬೇಕಾಗಿಲ್ಲ. ಅಧ್ಯಾತ್ಮ ಸಾಧನೆ ಅಥವಾ ಯೋಗ ಸಾಧನೆ ಎನ್ನುವುದು ನಿತ್ಯ ಜೀವನದಲ್ಲಿ ಎಲ್ಲರಿಗೂ ಬೇಕಾಗಿರುವಂತಹ ವಿಷಯವಾಗಿದೆ. ಇದರಿಂದ ನಮ್ಮ ಲೌಕಿಕ ಜೀವನದಲ್ಲಿಯೂ ಕೂಡ ಪೋಷಣೆ ಸಿಗುತ್ತದೆ. ಅಧ್ಯಾತ್ಮ ಸಾಧನೆಯಿಂದ ಲೌಕಿಕ ಜೀವನಕ್ಕೆ ಹೇಗೆ ಪೋಷಣೆ ಸಿಗುತ್ತದೆ ಎನ್ನುವುದನ್ನು ಒಂದು ವೈದಿಕ ಆಶೀರ್ವಚನದಿಂದ ಅರ್ಥ ಮಾಡಿಕೊಳ್ಳಬಹುದು.
ವೈದಿಕ ಕರ್ಮಗಳನ್ನು ಆಚರಣೆ ಮಾಡಿದಾಗ ಕೊನೆಯಲ್ಲಿ ಒಂದು ಶುಭಾಶಂಸನೆಯನ್ನು ಹೇಳುತ್ತಾರೆ - ಶಾಂತಿರಸ್ತು, ತುಷ್ಟಿರಸ್ತು, ಪುಷ್ಟಿರಸ್ತು, ಆಯುಷ್ಯಮಸ್ತು ಶಿವಂ ಕರ್ಮಾಸ್ತು, ಧನಧಾನ್ಯಾಭಿವೃದ್ಧಿರಸ್ತು, ಪುತ್ರ ಪೌತ್ರಾಭಿವೃದ್ದಿರಸ್ತು ಎಂಬುದಾಗಿ. ಇದರ ಅರ್ಥ ಏನೆಂದರೆ ನಾವು ಯಾವುದಾದರೂ ಒಂದು ವೈದಿಕ ಕರ್ಮವನ್ನಾಗಲಿ ಅಥವಾ ಭಗವಂತನಿಗೆ ಪ್ರೀತಿಕರವಾದ ಕರ್ಮವನ್ನಾಗಲಿ ಆಚರಿಸಿದರೆ ನಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಆ ಶಾಂತಿಯಿಂದ ನಮ್ಮ ಮನಸ್ಸಿಗೆ ಒಂದು ಬಲ ಸಿಗುತ್ತದೆ ಅದೇ ತುಷ್ಟಿ. ಮನಸ್ಸಿನಲ್ಲಿ ಒಂದು ಬಲ ಉಂಟಾದಾಗ ಶರೀರಕ್ಕೂ ಪುಷ್ಟಿ ದೊರೆಯುತ್ತದೆ, ಅದರಿಂದ ನಮ್ಮ ಆಯುಷ್ಯ ವೃದ್ಧಿಯಾಗುತ್ತದೆ. ಆ ಆಯುಷ್ಯವೃದ್ಧಿಯಾದಾಗ ಶಿವಂ ಕರ್ಮಾಸ್ತು ಎಂಬುದಾಗಿ ಹೇಳುವ ಉದ್ದೇಶವು ಹೀಗಿದೆ- ನಾವು ಮಂಗಳಮಯವಾದ ಕರ್ಮಗಳನ್ನು ಆಚರಿಸಿದಾಗ ಅದರಿಂದ ಒಂದು ಫಲ ಸಿಗುತ್ತದೆ. ಕರ್ಮಗಳನ್ನು (ಕೆಲಸಗಳನ್ನು) ಚೆನ್ನಾಗಿ ಮಾಡಿದರೆ, ಅದರಿಂದ ನಮಗೆ ಸಂಪತ್ತು ದೊರೆಯುತ್ತದೆ; ಧನ ಧಾನ್ಯಗಳು ವೃದ್ಧಿಯಾಗುತ್ತವೆ. ಆ ಧನ ಧಾನ್ಯಗಳ ಅಭಿವೃದ್ಧಿಯಿಂದ ನಾವು ನಮ್ಮ ಸಾಂಸಾರಿಕ ಜೀವನದಲ್ಲಿಯೂ ಏಳಿಗೆಯನ್ನು ಕಾಣಬಹುದು, ಹೆಂಡತಿ,ಮಕ್ಕಳು,ಮೊಮ್ಮಕ್ಕಳು ಅಭಿವೃದ್ಧಿಯನ್ನು ಹೊಂದುತ್ತಾರೆ. ಇದೇ ಈ ಆಶೀರ್ವಾದದ ಒಂದು ಆಶಯವಾಗಿದೆ.
ಹೀಗೆ, ಅಧ್ಯಾತ್ಮ ಜೀವನಕ್ಕೂ ಲೌಕಿಕ ಜೀವನಕ್ಕೂ ಒಂದು ಸಂಬಂಧವುಂಟು. ಅಧ್ಯಾತ್ಮ ಸಾಧನೆಯಿಂದ ಉಂಟಾದ ಶರೀರ, ಮನಸ್ಸುಗಳ ಬಲವನ್ನು ಉತ್ತಮ ಸಂಕಲ್ಪದಿಂದೊಡಗೂಡಿದ ಲೌಕಿಕ ವೃತ್ತಿಯಲ್ಲಿ ತೊಡಗಿಸಿ ಅಲ್ಲಿಯೂ ಸಾಧನೆಯನ್ನು ದೀರ್ಘಕಾಲ, ನಿರಂತರವಾಗಿ, ಶ್ರದ್ಧೆಯಿಂದ ಮಾಡಬೇಕು. ಲೌಕಿಕ ಸಾಧನೆಗೂ ಈ ಯೋಗಸೂತ್ರ ಅನ್ವಯವಾಗುತ್ತದೆ. ಉದಾಹರಣೆಗೆ ಸತತ ಪರಿಶ್ರಮದಿಂದ ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗುತ್ತಾರೆ, ಸಂಗೀತ ವಿದ್ಯಾರ್ಥಿಗಳು ಸಂಗೀತಗಾರರಾಗುತ್ತಾರೆ.
ಆದುದರಿಂದ ನಾವು ನಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಬೇಕು ಎಂದು ಮೊದಲು ಅಂದುಕೊಳ್ಳೋಣ, ಸಾಧನೆ ಮಾಡಬೇಕಾದರೆ ಮೊದಲಿಗೆ ನಾವು ನಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಯೋಗ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು, ಅನಂತರ ಅದರಿಂದ ನಮಗೆ ಏನು ಒಂದು strength (ಸಾಮರ್ಥ್ಯ) ಬರುತ್ತದೆಯೋ ಅದನ್ನು ಲೌಕಿಕ ಜೀವನದಲ್ಲಿಯೂ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಆತ್ಮಜೀವನ, ಲೋಕಜೀವನಗಳೆರಡರಲ್ಲೂ ಉದ್ಧಾರವಾಗೋಣ.
ಇಂದು ವಿದ್ಯೆ ಎಂದ ಕೂಡಲೇ "Education" ಎಂದು ನಾವು ಅರ್ಥೈಸಿಕೊಳ್ಳುತ್ತೇವೆ. ವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ, ಗಣಿತ, ವಿಜ್ಞಾನ, ವಾಣಿಜ್ಯ ಎಂಬ ಅನೇಕ ವಿಭಾಗಗಳನ್ನು ಕಾಣುತ್ತೇವೆ ಮತ್ತು ಇವೆಲ್ಲವನ್ನೂ ವಿದ್ಯೆಯೆಂದೇ ಗುರುತಿಸುತ್ತೇವೆ. ವಿದ್ಯೆಯೆಂಬ ಪದವನ್ನು ಪ್ರಯೋಗಕ್ಕೆ ತಂದ ಮಹರ್ಷಿಗಳ ಅಭಿಪ್ರಾಯದಲ್ಲಿ, ಈ ಆಧುನಿಕ ವ್ಯಾಸಂಗದ ವಿಷಯಗಳೆಲ್ಲಾ ವಿದ್ಯೆ ಎಂದು ಪರಿಗಣಿಸಲ್ಪಡುತ್ತದೆಯೇ? ಅಥವಾ ವಿದ್ಯೆಯೆಂದರೆ ಇನ್ನೂ ಆಳವಾದ ಪರಿಕಲ್ಪನೆಯುಂಟೇ ಎನ್ನುವ ಪ್ರಶ್ನೆ ಪರಿಶೀಲನಾರ್ಹ.
ವಿದ್ಯೆಯ ಬಗ್ಗೆ ಮಹರ್ಷಿಗಳ ಪರಿಕಲ್ಪನೆ ಬಹಳ ಆಳವಾದದ್ದಾಗಿದೆ. ವಿದ್ಯೆಯೆಂದರೆ, "ಸಾ ವಿದ್ಯಾ ಯಾ ವಿಮುಕ್ತಯೇ", ಅಂದರೆ ಯಾವುದು ನಮ್ಮನ್ನು ಸಂಸಾರ ಬಂಧನದಿಂದ ಮುಕ್ತಿಗೊಳಿಸುತ್ತದೆಯೋ ಅದೇ ವಿದ್ಯೆ ಎಂದು ವಿದ್ಯೆಯ ಸ್ವರೂಪವನ್ನು ಸಾರಿದ್ದಾರೆ. ಇದೇ ನಿಟ್ಟಿನಲ್ಲಿ, ಶ್ರೀರಂಗಮಹಾಗುರುಗಳು ವಿದ್ಯೆಗೆ ಮತ್ತೊಂದು ವ್ಯುತ್ಪತ್ತಿಯನ್ನು ಎತ್ತಿ ಹಿಡಿದಿದ್ದಾರೆ: "ವಿದ ಜ್ಞಾನೇ, ಯಾ ಪ್ರಾಪಣೇ" ಅಂದರೆ ಯಾವುದು ನಮ್ಮನ್ನು ಪರಮಾತ್ಮ ಜ್ಞಾನದವರೆಗೂ, ಕರೆದುಕೊಂಡು ಹೋಗುವುದೋ ಅದೇ ನಿಜವಾದ ಅರ್ಥದಲ್ಲಿ ವಿದ್ಯೆ ಎನಿಸಿಕೊಳ್ಳುತ್ತದೆ.
ಯಾವುಗಳನ್ನು, (ಋಷಿಮೂಲವಾದ ವೇದ, ಶಾಸ್ತ್ರ, ಸಂಗೀತ, ನಾಟ್ಯ ಮುಂತಾದವು) ನಾವು ಅನುಸಂಧಾನ ಮಾಡಿದರೆ, ಅವು ನಮ್ಮ ಮನಸ್ಸನ್ನು ಒಳಮುಖವಾಗಿ ತಿರುಗಿಸಿ, ನಮ್ಮನ್ನು ಮೂಲದಲ್ಲಿ ಬೆಳಗುವ ಜ್ಯೋತಿಯಲ್ಲಿ ಅಥವಾ ಪ್ರಣವದಲ್ಲಿ ಒಂದಾಗಿಸುತ್ತದೆಯೋ ಅವನ್ನು ವಿದ್ಯೆಯೆನ್ನುತ್ತೇವೆ. ಭಾರತೀಯ ವಿದ್ಯೆಗಳಿಗೆ ಮಾತ್ರ ಏಕೆ ಈ ಸಾಮರ್ಥ್ಯ ಎಂದರೆ, ಇದಕ್ಕೂ ಶ್ರೀರಂಗಮಹಾಗುರುಗಳ ಒಂದು ಮಾರ್ಮಿಕ ನೋಟ ಉತ್ತರ ಕೊಡುತ್ತದೆ. ಅದೇನೆಂದರೆ, ಯಾವುದೇ ವಿಷಯವು ಯಾವ ಮೂಲದಿಂದ ವಿಕಾಸವಾಗಿದೆಯೋ ಅನುಸಂಧಾನ ಮಾಡುವವರನ್ನು ಆ ಮೂಲಕ್ಕೇ ತಲುಪಿಸುತ್ತದೆ.
ಭಾರತೀಯ ವಿದ್ಯೆಗಳು ಪ್ರಣವ ಮೂಲದಿಂದ ವಿಕಾಸವಾಗಿರುತ್ತವೆ. ಆದುದರಿಂದ ಅನುಸಂಧಾನ ಮಾಡುವವರನ್ನು ವಿದ್ಯಾಮೂಲವಾದ ಪ್ರಣವಕ್ಕೇ ತಲುಪಿಸುತ್ತದೆ. ಯಾವುದೋ ಮೂಲದಿಂದ ವಿಕಾಸವಾಗುವುದು ಅಥವಾ ಮೂಲವನ್ನು ತಲಪುವುದು ಎಂದರೇನು? ಕೆಲವು ಲೌಕಿಕ ಉದಾಹರಣೆಗಳ ಮೂಲಕ ಅರ್ಥ ಮಾಡಿಕೊಳ್ಳೋಣ.
ಒಬ್ಬ ಆಧುನಿಕ ವಿಜ್ಞಾನಿ ತನ್ನ ಬೌದ್ಧಿಕ ಸಾಮರ್ಥ್ಯದಿಂದ ಒಂದು ಖಗೋಳವನ್ನು ವೀಕ್ಷಿಸಿ, ಒಂದು ಥಿಯರಿಯನ್ನು ಹೊರತರುತ್ತಾನೆಂದುಕೊಳ್ಳೋಣ. ಈ ಥಿಯರಿಯನ್ನು ಬುದ್ಧಿ ಹಾಗೂ ಇಂದ್ರಿಯಗಳ ಮೂಲದಿಂದ ವಿಕಾಸವಾಗಿದೆ ಎಂದು ಹೇಳಬಹುದು. ಏಕೆಂದರೆ, ಇಂದ್ರಿಯಗಳ ನೆರವಿನಿಂದ ವೀಕ್ಷಣೆ ಮಾಡುತ್ತಾರೆ, ಬುದ್ಧಿಯ ಸಹಾಯದಿಂದ ವಿಶ್ಲೇಷಣೆ ಮಾಡಿ ಥಿಯರಿಯನ್ನು ಹೊರತಂದು ಪ್ರಕಟಿಸುತ್ತಾರೆ. ಈ ಥಿಯರಿಯನ್ನು ಯಾರು ಅನುಸಂಧಾನ ಮಾಡುತ್ತಾರೆಯೋ ಅವರು ಈ ವಿಜ್ಞಾನಿಯ ಬೌದ್ಧಿಕ ಸ್ಥಿತಿಯನ್ನು ತಲುಪಬಹುದು. ಅಂದರೆ ಬುದ್ಧಿಮೂಲವಾಗಿ ಬಂದ ವಿಷಯವನ್ನು ಅನುಸಂಧಾನ ಮಾಡಿದಾಗ ಅದು ಬುದ್ಧಿಯನ್ನು ಹರಿತಗೊಳಿಸಿ ಸೃಷ್ಟಿಯ ಒಂದು ಮರ್ಮವನ್ನು ಅರ್ಥ ಮಾಡಿಸುತ್ತದೆ. ಯಾವ ಮೂಲದಿಂದ ವಿಷಯ ವಿಕಾಸವಾಯಿತೋ ಆ ಮೂಲಕ್ಕೆ ಅನುಸಂಧಾನ ಮಾಡುವವನನ್ನು ತಲುಪಿಸುತ್ತದೆ.
ಆದರೆ ಭಾರತೀಯ ವಿದ್ಯೆಗಳ ವಿಷಯಕ್ಕೆ ಬಂದರೆ, ಅವುಗಳೆಲ್ಲಾ ಪ್ರಣವ ಮೂಲದಿಂದ ವಿಕಾಸವಾಗಿವೆ. ಪ್ರಣವವೆಂದರೆ ಓಂಕಾರ. ಓಂಕಾರವೆಂದರೆ ಇಂದು ನಾವು ಉಚ್ಚರಿಸುವ ಒಂದು ಮಂತ್ರ ಪ್ರಕಾರವಷ್ಟೇ ಅಲ್ಲ ;ಮಾನವನು ತನ್ನ ಮನಸ್ಸನ್ನು ಹಿಂದಕ್ಕೆ ತಿರುಗಿಸಿ, ಆಳವಾಗಿ ಸಂಚರಿಸಿ ಅನ್ವೇಷಿಸಿದಾಗ, ಆತ್ಮಮೂಲದಲ್ಲಿ ಬೆಳಗುವ ಜ್ಯೋತಿಯ ನಾದಾತ್ಮಕ ಅಭಿವ್ಯಕ್ತಿಯೇ ಪ್ರಣವ. ಈ ಓಂಕಾರವೇ ಸೃಷ್ಟಿಯಲ್ಲಿ ಅನಾಹತವಾಗಿ ವ್ಯಾಪಕವಾಗಿ ಮೊಳಗುತ್ತಿದೆ ಎಂದು ಋಷಿಗಳು ಮನಗಂಡು, ಅದರಿಂದಲೇ ವಿದ್ಯಾಪ್ರಪಂಚವು ವಿಸ್ತಾರವಾಗಿದೆ ಎಂಬ ಸತ್ಯಾರ್ಥವನ್ನು ಕಂಡುಕೊಂಡರು.
ನಮ್ಮ ದೇಹದಲ್ಲಿರುವ ಷಟ್ಚಕ್ರಗಳಲ್ಲಿ ಅನೇಕ ದಳಗಳಿರುತ್ತವೆ. ಮೂಲದಲ್ಲಿ ಮೊಳಗುವ ಈ ಓಂಕಾರ, ಷಟ್ಚಕ್ರಗಳ 50 ದಳಗಳಲ್ಲಿ ಹೊರಹೊಮ್ಮುತ್ತಾ ಬೇರೆ ಬೇರೆ ವರ್ಣ ಅಥವಾ ಅಕ್ಷರಗಳಾಗಿ ಮಾರ್ಪಡುತ್ತದೆ. ಈ ಅಕ್ಷರಗಳೇ ಸಂಯೋಜನೆಗೊಂಡು ಪದ, ವಾಕ್ಯ, ಸಾಹಿತ್ಯವಾಗಿ ವಿಕಾಸವಾಗುತ್ತದೆ. ಓಂಕಾರ ಅಥವಾ ಪ್ರಣವದಿಂದಲೇ ವಿಸ್ತಾರವಾಗಿ ಭಾಷೆಯಾಗಿ, ಸಾಹಿತ್ಯವಾಗಿ ಬೆಳೆದಿರುವ ಸಂಸ್ಕೃತ ಭಾಷೆಯನ್ನು ದೇವಭಾಷೆ ಅಥವಾ ಅಮರಭಾಷೆ ಎನ್ನುತ್ತಾರೆ. ಈ ಅಮರಭಾವವು ವ್ಯಕ್ತವಾಗಿರುವ ಸಾಹಿತ್ಯವು ವಿದ್ಯೆಯೆನಿಸಿಕೊಳ್ಳುತ್ತದೆ. ಈ ವಿದ್ಯೆಯನ್ನು ಸರಿಯಾಗಿ ಅನುಸಂಧಾನ ಮಾಡಿದರೆ, ಅನುಸಂಧಾನ ಮಾಡುವವನನ್ನು ಪ್ರಣವ ಮೂಲಕ್ಕೇ ತಲುಪಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಈ ವಿದ್ಯೆ.
ಅಂತೆಯೇ, ಈ ಪ್ರಣವವು ಚಕ್ರಗಳಿಂದ ಹೊರಹೊಮ್ಮಿದಾಗ ಸಪ್ತ ಸ್ಪರಗಳು ಮೂಡುತ್ತವೆ. ಅದು ಭಾವ ರಾಗಗಳೊಂದಿಗೆ ಕೂಡಿಕೊಂಡು ಸಂಗೀತ ವಿದ್ಯೆಯಾಗಿ ಬೆಳೆದಿದೆ.
ಓಂಕಾರವೆಂಬ ಈ ಶಕ್ತಿಯು ನಮ್ಮ ದೇಹವಿನ್ಯಾಸವನ್ನೂ ರೂಪಿಸಬಲ್ಲದು. ಋಷಿಗಳ ಸಮಾಧಿ ಸ್ಥಿತಿಯಲ್ಲಿ ಉಂಟಾದ ದೇಹ ವಿನ್ಯಾಸಗಳನ್ನನುಸರಿಸಿ ಯೋಗಾಸನ, ನಾಟ್ಯ ಮುಂತಾದ ವಿದ್ಯೆಗಳು ಬೆಳೆದಿವೆ. ಇವುಗಳನ್ನೆಲ್ಲಾ ಪಟ್ಟಿ ಮಾಡುತ್ತಾ ಹೋದರೆ, ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ವೇದಾಂಗಗಳು ಸೇರಿ 14 ವಿದ್ಯೆಗಳಾಗುತ್ತವೆ. ಇವೇ ಇನ್ನೂ ವಿಸ್ತಾರವಾಗಿ ವಿದ್ಯೆಗಳಾಗುತ್ತವೆ. ಈ 64 ವಿದ್ಯೆಗಳ ಪಟ್ಟಿಯಲ್ಲಿ ಕೃಷಿ, ಗೋರಕ್ಷೆ, ವಾಸ್ತು ಶಾಸ್ತ್ರ ಅಂದರೆ ಗೃಹ ರಚನೆ, ನಗರ ರಚನೆ, ದೇವಾಲಯ ರಚನೆ, ಲೋಹವಿದ್ಯೆ, ಶಿಲ್ಪ ಶಾಸ್ತ್ರ ಮುಂತಾಗಿ ಅನೇಕ ದೈನಂದಿನ ಜೀವನೋಪಯೋಗಿ ವಿದ್ಯೆಗಳಿವೆ. ಅಂದರೆ, ಈ ವಿದ್ಯೆಗಳು ಅಧ್ಯಾತ್ಮಾನುಭವವನ್ನುಂಟು ಮಾಡುವುದಲ್ಲದೇ ಪ್ರಾಪಂಚಿಕ ಜೀವನವನ್ನು ಉತ್ತಮ ಸಂಸ್ಕೃತಿ ಮತ್ತು ನಾಗರಿಕತೆಗಳಿಂದೊಡಗೂಡಿ ಸಾಗಿಸುವುದಕ್ಕೆ ದಾರಿ ಮಾಡಿಕೊಡುತ್ತವೆ. ದುರದೃಷ್ಟವಶಾತ್ ನಾವು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ತೊಡಗಿರುವುದರಿಂದ ಈ ವಿದ್ಯೆಗಳು ಇಂದು ಕುಟುಕು ಜೀವದಿಂದಿವೆ. ಆದುದರಿಂದ ಈ ವಿದ್ಯೆಗಳನ್ನು ಋಷಿಹೃದಯದೊಡನೆ ಅನುಸಂಧಾನ ಮಾಡಿ, ಪುನರುಜ್ಜೀವಗೊಳಿಸಿ ಭಾರತೀಯ ಸಂಸ್ಕೃತಿಯು ಪುನಃ ವೈಭವದಿಂದ ಬೆಳಗುವಂತೆ ಮಾಡೋಣ.
ಸೂಚನೆ : 11/3/20223 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
ಲೇಖಕರು: ಶ್ರೀ ಜಿ ನಾಗರಾಜ(ಪ್ರತಿಕ್ರಿಯಿಸಿರಿ lekhana@ayvm.in)
ಆಧುನಿಕ ಜೀವನದಲ್ಲಿ stress ಅಥವಾ ಮಾನಸಿಕ ಒತ್ತಡ ಬಹಳ ಕೇಳಿ ಬರುತ್ತಿರುವ ವಿಷಯ. ಉದ್ಯೋಗ (ಪ್ರೊಫೆಶನ್) ಕ್ಷೇತ್ರವಿರಲಿ, ಸ್ಕೂಲು ಕಾಲೇಜು ಇರಲಿ, ಕೆಲಸದಲ್ಲಿ ತೊಡಗಿಸಿ ಕೊಂಡಾಗ ಒತ್ತಡ ಅನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಎಲ್ಲೆಡೆಯೂ ಕೆಲಸದ ಹೊರೆ ಮತ್ತು ಫಲಿತಾಂಶದ ಜವಾಬ್ದಾರಿ ಒತ್ತಡಕ್ಕೆ ಕಾರಣವಾಗುತ್ತದೆ. ಒತ್ತಡವನ್ನು ಪರಿಹರಿಸಿಕೊಂಡು ನಾವು ಕರ್ತವ್ಯ ಪರಾಯಣರಾಗಿಯೂ ಇದ್ದು ಮನಸ್ಸನ್ನೂ ಹಗುರವಾಗಿಟ್ಟುಕೊಳ್ಳುವುದು ಹೇಗೆ? ಅದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯ ಒಂದು ಅಮೂಲ್ಯವಾದ ಚಿಂತನೆಯನ್ನು ಅಳವಡಿಸಿಕೊಂಡರೆ ಸುಲಭವಾಗುತ್ತದೆ. ಆ ಚಿಂತನೆಯೇ ಕರ್ಮ ಯೋಗದ ಚಿಂತನೆ.
ಕರ್ಮಯೋಗದಲ್ಲಿ ಮೂರು ಭಾಗಗಳು ಇವೆ: ಯಾವುವೆಂದರೆ ಕರ್ತೃತ್ವ ತ್ಯಾಗ, ಮಮತ್ವ ತ್ಯಾಗ ಹಾಗೂ ಕರ್ಮಫಲ ತ್ಯಾಗ ಎಂಬುದಾಗಿ. ಈ ಮೂರು ತ್ಯಾಗಗಳನ್ನು ಮಾಡಿದಾಗ ಮನಸ್ಸು ನಿರಾಳವಾಗಿರುತ್ತದೆ ಮತ್ತು ಒತ್ತಡ ಇರುವುದಿಲ್ಲ. ಭಗವತ್ಕಾರ್ಯಗಳನ್ನು ಅಂದರೆ ಯಾವ ಕರ್ಮಗಳನ್ನು ಋಷಿಗಳು ಇದು ನಿಮ್ಮ ನಿತ್ಯಕರ್ಮ, ನೈಮಿತ್ತಿಕ ಕರ್ಮ ಎಂಬುದಾಗಿ ವಿಧಿಸಿದ್ದಾರೆಯೋ ಅಂತಹ ಕರ್ಮಗಳನ್ನು ನಾವು ಆಚರಣೆ ಮಾಡಬೇಕಾದರೆ ನಮ್ಮ ಮನಸ್ಸನ್ನು ಯಾವ ರೀತಿ ಇಟ್ಟುಕೊಂಡಿರಬೇಕು ಅನ್ನುವುದರ ಬಗ್ಗೆ ಮಹರ್ಷಿಗಳು ತಿಳಿಸಿಕೊಟ್ಟಿದ್ದಾರೆ. ಆ ರೀತಿ ಮನಸ್ಸನ್ನು ಇಟ್ಟುಕೊಂಡು ಕರ್ಮಗಳನ್ನು ಮಾಡುತ್ತಿದ್ದರೆ ಅದು ನಮ್ಮ ಮನಸ್ಸನ್ನು ನಿರ್ಮಲಗೊಳಿಸಿ, ಯೋಗವಾಗಿ ಪರಿಣಮಿಸುತ್ತದೆ. ಮನಸ್ಸು ಸ್ವಲ್ಪವಾದರೂ ಹಗುರವಾಗುತ್ತದೆ. ಆದುದರಿಂದ ಈ ಮೂರು ತ್ಯಾಗಗಳು ಏನು, ಹೇಗೆ ಎಂದು ನೋಡೋಣ.
ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ಕರ್ಮ(ಕೆಲಸ) ಮಾಡಿದರೆ, ಅದನ್ನು ನಾನೇ ಮಾಡಬೇಕು, ನಾನು ಮಾಡಿದೆ ಎಂದು ಅಂದುಕೊಳ್ಳುತ್ತೇವೆ. ಆದರೆ, ವಾಸ್ತವದಲ್ಲಿ ನಮಗಿಂತ ದೊಡ್ಡ ಶಕ್ತಿಯೊಂದು ನಮ್ಮ ಕೈಯಲ್ಲಿ ಆ ಕೆಲಸವನ್ನು ಮಾಡಿಸಿಕೊಳ್ಳುತ್ತಿರುತ್ತದೆ. ಇದನ್ನು ಮುಂದೆ ಉದಾಹರಣೆಯೊಂದಿಗೆ ವಿಸ್ತಾರವಾಗಿ ಅರ್ಥ ಮಾಡಿಕೊಳ್ಳಬಹುದು. ಆದುದರಿಂದ ನಾನು ಮಾಡುತ್ತೇನೆ, ನಾನು ಮಾಡಿದೆ ಎಂದು ಅಂದುಕೊಳ್ಳುವುದಕ್ಕಿಂತ ನಾನು ನಿಮಿತ್ತವಾಗಿದ್ದೆ, ಕರ್ಮವನ್ನು ಭಗವಂತ ನಮ್ಮ ಕೈಯ್ಯಲ್ಲಿ ಮಾಡಿಸಿಕೊಂಡ ಎಂದುಕೊಂಡಾಗ ನಾವು ನಮ್ಮ ಕರ್ತೃತ್ವವನ್ನು ಭಗವದರ್ಪಣೆ ಮಾಡುತ್ತೇವೆ, ಅಥವಾ ಕರ್ತೃತ್ವ ತ್ಯಾಗ ಮಾಡುತ್ತೇವೆ ಮತ್ತು ನಮ್ಮ ಮನಸ್ಸು ನಿರಾಳವಾಗುತ್ತದೆ. ನಾವು ಮಾಡುತ್ತಿರುವ ಕೆಲಸದಲ್ಲಿ ಭಗವಂತ ನಮ್ಮ ಬೆನ್ನ ಹಿಂದಿದ್ದಾನೆ ಎನ್ನುವ ಭರವಸೆಯು ಮಾಡುವ ಕೆಲಸವು ಚೆನ್ನಾಗಿ ಆಗುವಂತೆಯೂ ಮಾಡುತ್ತದೆ.
ಹಾಗೆಯೇ ಮಮತ್ವ ತ್ಯಾಗ - ಈ ಕರ್ಮ ನನ್ನದು ಎಂದುಕೊಂಡು ಮಾಡುವುದಕ್ಕಿಂತ ಅದು ಭಗವಂತನ ಕರ್ಮ ಅದನ್ನು ನಾನು ನನ್ನದಾಗಿಸಿಕೊಂಡು ಆಚರಣೆ ಮಾಡಿದ್ದೇನೆ ಎಂದು ಭಾವಿಸಿಕೊಂಡು ಅದು ಭಗವಂತನ ಕರ್ಮ ಎಂದು ಅರ್ಪಣೆ ಮಾಡಿಕೊಂಡು ಮಾಡುವುದು ಎರಡನೆಯ ವಿಧವಾದ ತ್ಯಾಗ.
ಮೂರನೆಯದು ಕರ್ಮಫಲ ತ್ಯಾಗ - ಒಂದು ಕರ್ಮದ ಫಲವು, ಮಾಡಿದ ಕರ್ಮವನ್ನಲ್ಲದೇ ಇನ್ನೂ ಕೆಲವು ಅಂಶಗಳ ಮೇಲೆ ನಿಂತಿರುತ್ತದೆ. ಆದುದರಿಂದ, ಫಲವನ್ನು ಮನಸ್ಸಿನಲ್ಲಿಟ್ಟುಕೊಂಡು, ಅದರ ಬಗ್ಗೆಯೇ ಚಿಂತಿಸುತ್ತಾ ಇದ್ದರೆ ಒತ್ತಡವು ಉಂಟಾಗುತ್ತದೆ ಮತ್ತು ಕೆಲಸದಲ್ಲಿ ಉತ್ಸಾಹ, ಏಕಾಗ್ರತೆಗಳೂ ಕಡಿಮೆಯಾಗುತ್ತದೆ. ಆದರೆ, ಫಲ ಬರುವುದಕ್ಕೆ ಏನು ಕೆಲಸ ಮಾಡಬೇಕೋ ಆ ಕೆಲಸವನ್ನು ಅಥವಾ ಕರ್ಮವನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ಕರ್ಮಾಚರಣೆ ಮಾಡಿದರೆ ಒತ್ತಡವೂ ಇರುವುದಿಲ್ಲ, ಏಕಾಗ್ರತೆಯಿಂದ ಕರ್ಮವೂ ಚೆನ್ನಾಗಿ ಆಗುತ್ತದೆ. ಅಂದರೆ, ಕರ್ಮವನ್ನು ಮಾಡುತ್ತೇನೆ, ಆದರೆ ಕರ್ಮಫಲವನ್ನು ಭಗವಂತನಿಗೆ ಬಿಡುತ್ತೇನೆ ಎಂದುಕೊಳ್ಳುವುದು ಕರ್ಮಫಲ ತ್ಯಾಗ ಆಗುತ್ತದೆ.
ಈ ಮೂರು ವಿಧವಾದ ತ್ಯಾಗಗಳಿಂದ ನಾವು ನಮ್ಮತನವನ್ನು ಬಿಟ್ಟು ಭಗವಂತನಲ್ಲಿ ಒಂದಾಗಲು ಅನುಕೂಲಕರವಾಗುವುದರಿಂದ ಇದನ್ನು ಕರ್ಮಯೋಗ ಎಂದು ಕರೆಯುತ್ತಾರೆ. ಇದನ್ನು ಎಲ್ಲಾ ಲೌಕಿಕವಾದ ವಿಷಯಗಳಿಗೂ ನಾವು ಅಳವಡಿಸಿಕೊಳ್ಳಬಹುದು. ಹೇಗೆಂದರೆ ಒಂದು ಬ್ಯಾಂಕಿನ ಉದಾಹರಣೆಯನ್ನು ತೆಗೆದುಕೊಳ್ಳೋಣ, ಬ್ಯಾಂಕಿನಲ್ಲಿ ಒಬ್ಬ ಕ್ಯಾಶಿಯರ್ ಹಣದ ಜವಾಬ್ದಾರಿಯನ್ನು ಹೊತ್ತು ಹಣವನ್ನು ಗ್ರಾಹಕರಿಗೆ ಕೊಡುವುದು, ಗ್ರಾಹಕರಿಂದ ತೆಗೆದುಕೊಳ್ಳುವುದು ಮಾಡುತ್ತಿರುತ್ತಾನೆ.
ಮೊದಲು ಅವನು ಕರ್ತೃತ್ವ ತ್ಯಾಗ ಎಂದರೆ ನಾನು ಅವರಿಗೆಲ್ಲ ದುಡ್ಡು ಕೊಡುತ್ತಿದ್ದೇನೆ ಎಂದು ಅಂದುಕೊಳ್ಳಬಾರದು. ಬ್ಯಾಂಕ್ ಗ್ರಾಹಕರಿಗೆ ದುಡ್ಡು ಕೊಡುತ್ತಿದೆ, ಗ್ರಾಹಕರಿಂದ ದುಡ್ಡು ತೆಗೆದುಕೊಳ್ಳುತ್ತಿದೆ ಮತ್ತು ನಿಮಿತ್ತ ಮಾತ್ರನಾಗಿ ಬ್ಯಾಂಕ್ ಪರವಾಗಿ ನಾನು ಮಾಡುತ್ತಿದ್ದೇನೆ ಎನ್ನುವ ಪ್ರಜ್ಞೆ ಅವನಲ್ಲಿ ಇದ್ದಾಗ ಅದು ಕರ್ತೃತ್ವ ತ್ಯಾಗ ಆಗುತ್ತದೆ. ಅವನಿಗೆ ಎಷ್ಟೊಂದು ದುಡ್ಡು ಗ್ರಾಹಕರಿಗೆ ಕೊಟ್ಟೆ ಎಂದು ಮನಸ್ಸು ಕುಗ್ಗುವುದಿಲ್ಲ ಅಥವಾ ಎಷ್ಟೊಂದು ದುಡ್ಡು ಡಿಪಾಸಿಟ್ ಆಗಿ ಬಂದಿತು ಎಂದು ಹಿಗ್ಗುವುದಿಲ್ಲ. ನಿರ್ವಿಕಾರನಾಗಿರುತ್ತಾನೆ.
ನಂತರದ್ದು ಮಮತ್ವ ತ್ಯಾಗ. ಕ್ಯಾಶಿಯರ್ ಲಕ್ಷಾಂತರ ರೂಪಾಯಿಗಳನ್ನು ನಿರ್ವಹಣೆ ಮಾಡುತ್ತಿರುತ್ತಾನೆ, ಜವಾಬ್ದಾರಿಯ ದೃಷ್ಟಿಯಿಂದ ಆ ಹಣ ಬ್ಯಾಂಕ್ ನಲ್ಲಿ ಅವನದೇ. ಅಂದರೆ, ಬ್ಯಾಂಕಿನಲ್ಲಿ ಇನ್ಯಾರೂ ಅದರ ನಿರ್ವಹಣೆ ಮಾಡುವ ಹಾಗಿಲ್ಲ ಅವನೇ ಮಾಡಬೇಕು. ಕರ್ತವ್ಯದಲ್ಲಿದ್ದಾಗ, ಆ ಸಮಯದಲ್ಲಿ ಹಣವನ್ನು ನನ್ನದು ಎಂದುಕೊಂಡಿದ್ದರೂ ಕೆಲಸದ ವೇಳೆ ಮುಗಿದು ಬ್ಯಾಂಕನ್ನು ಬಿಟ್ಟು ಮನೆಗೆ ಹೋಗುವಾಗ ಅದೆಲ್ಲ ಹಣದ ಲೆಖ್ಖ ಚುಕ್ತ ಮಾಡಿ ಲಾಕರ್ ನಲ್ಲಿಟ್ಟು ಅದು ಬ್ಯಾಂಕ್ ನದ್ದು, ನನ್ನದಲ್ಲ ಎಂದು ನಿರಾಳವಾಗುತ್ತಾನೆ. ಅಂದರೆ, ಅದು ಬ್ಯಾಂಕಿನ ದುಡ್ಡು ಎಂದು ಮಮತ್ವ ತ್ಯಾಗ ಮಾಡಿ ಮನೆಗೆ ಹೋಗುತ್ತಾನೆ. ಆ ದುಡ್ಡಿನ ಭದ್ರತೆ ಬಗ್ಗೆ ಕಿಂಚಿತ್ತೂ ಚಿಂತಿಸುವುದಿಲ್ಲ, ಒತ್ತಡಕ್ಕೊಳಗಾಗುವುದಿಲ್ಲ. ಬ್ಯಾಂಕ್ ನ ಮೇಲೆ ಜವಾಬ್ದಾರಿಯನ್ನು ಇಟ್ಟು ತಾನು ನಿಶ್ಚಿಂತನಾಗಿ ಮನೆಯಲ್ಲಿ ನಿದ್ರಿಸುತ್ತಾನೆ.
ಹಾಗೆಯೇ ಮೂರನೆಯದು ಕರ್ಮಫಲ ತ್ಯಾಗ- ಅವನು ಆ ಬ್ಯಾಂಕಿನ ಕೆಲಸವನ್ನು ನಿರ್ವಹಣೆ ಮಾಡಿರುವುದರಿಂದ ಬ್ಯಾಂಕಿಗೆ ಏನು ಲಾಭ ಬರಬೇಕಾಗಿತ್ತೋ ಅದನ್ನು ಬ್ಯಾಂಕಿಗೇ ಬಿಡುತ್ತಾನೆ. ಮತ್ತು ಬ್ಯಾಂಕಿನ ಕರ್ತವ್ಯಗಳನ್ನು ನಿರ್ವಹಣೆ ಮಾಡಿದ್ದರಿಂದ ಅವನಿಗೆ ಏನು ಸಂಬಳ ಇತ್ಯಾದಿ ಫಲಗಳು ಬರಬೇಕಾಗಿರುತ್ತದೆ ಅದನ್ನು ಬ್ಯಾಂಕು ಕೊಡುತ್ತದೆ ಎಂದು ಅವನು ನಿರಾಳವಾಗಿ ಇರುತ್ತಾನೆ ಇದು ಕರ್ಮಫಲ ತ್ಯಾಗ.
ಹೀಗೆ ಮನಸ್ಸನ್ನು ಇಟ್ಟುಕೊಂಡಿದ್ದಾಗ ಎಷ್ಟು ಬೇಕೋ ಅಷ್ಟು ಮನಸ್ಸನ್ನು ಆ ವೃತ್ತಿಯಲ್ಲಿ ಇಟ್ಟುಕೊಂಡಿರುವುದು ಅದರ ನಂತರ ಅದರ ಸೋಂಕಿಲ್ಲದಂತೆಯೇ ಅದನ್ನು ಅಲ್ಲಿಯೇ ಬಿಟ್ಟು ನಿರಾಳವಾಗಿರಬಹುದು. ಈ ಚಿಂತನೆಯನ್ನು ಬೇರೆ ಬೇರೆ ವೃತ್ತಿಗಳು, ಹಾಗೂ ಜೀವನದ ಬೇರೆ ಬೇರೆ ಸಂದರ್ಭಗಳಿಗೂ ಅನ್ವಯಿಸಿಕೊಳ್ಳಬಹುದು.
ಇಂತಹ ರೀತಿಯಾಗಿ ಈ ತ್ರಿವಿಧ ತ್ಯಾಗಗಳ ಮೂಲಕ ನಾವು ಕರ್ಮಯೋಗಕ್ಕನುಗುಣವಾದ ಮನಸ್ಸನ್ನು ಬೆಳೆಸಿಕೊಂಡರೆ ಕೆಲಸವೂ ಚೆನ್ನಾಗಿರುತ್ತದೆ, ನಾವೂ ಸಹ ಒತ್ತಡ ರಹಿತವಾಗಿರಬಹುದು.
ಸೂಚನೆ: 09/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.
ಇಂದು 'ವಿದ್ಯೆ' ಎನ್ನುವ ಪದವು ಬಹಳ ಹಗುರ ಅರ್ಥದಲ್ಲಿ ಬಳಕೆಯಲ್ಲಿದೆ. ಆರ್ಷ ವಿದ್ಯೆ, ಕಲೆಗಳಾದ, ಸಂಗೀತ, ನಾಟ್ಯ, ಯೋಗ ಮುಂತಾದವುಗಳಿಗೂ ವಿದ್ಯೆ ಎನ್ನುತ್ತೇವೆ ಮತ್ತು ಆಧುನಿಕ ವಿಜ್ಞಾನಕ್ಕೆ ಸಂಬಂಧಪಟ್ಟ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ, ಕಂಪ್ಯೂಟರ್ ಸೈನ್ಸ್ ಮೊದಲಾದವು, ಹಾಗೆಯೇ ಆಧುನಿಕ ಸಂಗೀತ, ಆಧುನಿಕ ಚಿತ್ರಕಲೆ, ಸಿನಿಮಾ ಕಲೆ ಎಲ್ಲಕ್ಕೂ ವಿದ್ಯೆ, ಕಲೆ ಎನ್ನುವ ಪದ ಉಪಯೋಗಿಸುತ್ತೇವೆ. ಒಟ್ಟಿನಲ್ಲಿ, ಕಲಿಯಬೇಕಾದ ಪರಿಣತಿ ಪಡೆಯಬೇಕಾದ ಯಾವುದಾದರೂ ವಿಷಯವನ್ನು ಇಂದು ವಿದ್ಯೆ, ಕಲೆ ಎನ್ನುವ ಅರ್ಥದಲ್ಲಿ ಬಳಸುತ್ತಿದ್ದೇವೆ.
ಆದರೆ ಮಹರ್ಷಿಗಳ ಅಭಿಪ್ರಾಯ ವಿದ್ಯೆಯ ಬಗ್ಗೆ ಇಷ್ಟೇ ಇತ್ತೆ ಎಂದರೆ, ಹಾಗೇನಿಲ್ಲ! ಆರ್ಷ ಸಾಹಿತ್ಯದಲ್ಲಿ ವಿದ್ಯೆಗೆ "ಸಾ ವಿದ್ಯಾ ಯಾ ವಿಮುಕ್ತಯೇ"-- ಅಂದರೆ ಯಾವುದು ಮುಕ್ತಿಯನ್ನು ಕೊಡುತ್ತದೆಯೋ ಅದು ವಿದ್ಯೆ ಎಂದು ವಿದ್ಯೆಯ ಬಗ್ಗೆ ವ್ಯಾಖ್ಯಾನವಿದೆ. ಜನನ ಮರಣ ಚಕ್ರದಿಂದ ಮುಕ್ತಿ ದೊರೆಯುವುದು ಆತ್ಮ ಜ್ಞಾನದಿಂದ. ಅಂದರೆ ಯಾವುದು ಆತ್ಮ ಜ್ಞಾನವನ್ನು ಉಂಟು ಮಾಡುತ್ತದೆಯೋ ಅದೇ ವಿದ್ಯೆಯೆನ್ನಿಸಿಕೊಳ್ಳುತ್ತದೆ. ಈ ನೇರದಲ್ಲಿ ವಿದ್ಯೆಗಳ ಬಗ್ಗೆ ಆಮೂಲಾಗ್ರ ನೋಟವನ್ನು ನೀಡಿರುವ ಶ್ರೀರಂಗ ಮಹಾಗುರುಗಳು ವಿದ್ಯೆಯೆಂಬ ಪದಕ್ಕೆ ಇನ್ನೊಂದು ವ್ಯುತ್ಪತ್ತಿಯನ್ನು ಕೊಟ್ಟಿದ್ದಾರೆ: ವಿದ - ಜ್ಞಾನೇ, ಯಾ - ಪ್ರಾಪಣೇ, ಅಂದರೆ ಯಾವುದು ನಮ್ಮನ್ನು ಆತ್ಮಜ್ಞಾನದತ್ತ ಕರೆದೊಯ್ಯುತ್ತದೆಯೋ ಅದು ವಿದ್ಯೆ.
ಇಂದು ನಾವು ವಿದ್ಯೆಯೆಂದು ಕರೆಯುತ್ತಿರುವ ಎಲ್ಲ ವಿಷಯಗಳೂ ನಮಗೆ ಜ್ಯೋತಿರ್ದರ್ಶನ ಮಾಡಿಸಬಲ್ಲುದೇ ಎಂದರೆ, ಹಾಗೇನಿಲ್ಲ; ಏಕೆ ಹೀಗೆ? ಶ್ರೀರಂಗಮಹಾಗುರುಗಳು ಕೊಟ್ಟಿರುವ ಒಂದು ಮಾರ್ಮಿಕ ನೋಟದಿಂದ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ಯಾವುದೇ ವಿಷಯವು ಯಾವ ನೆಲೆಯಿಂದ (ಮನಸ್ಸು ಬುದ್ಧಿಗಳು ಯಾವ ಆಳವನ್ನು ತಲುಪಿತೋ ಆ ಆಳದಿಂದ) ಹೊರಟಿತೋ ಅದು ಅನುಸಂಧಾನ ಮಾಡುವವರನ್ನು ಆ ನೆಲೆಯ ತನಕ ಮಾತ್ರ ತಲುಪಿಸಬಲ್ಲುದು ಆಧುನಿಕ ವಿಷಯಗಳು ಪ್ರಾಪಂಚಿಕ ಭಾವದಿಂದ ವಿಕಾಸವಾಗಿರುವುದರಿಂದ ಅದು ಅನುಸಂಧಾನ ಮಾಡುವವರನ್ನು ಪ್ರಾಪಂಚಿಕ ಭಾವದ ಒಂದು ಮಟ್ಟದವರೆವಿಗೂ ಕರೆದೊಯ್ಯಬಹುದೇ ಹೊರತು, ಆತ್ಮಸಾಕ್ಷಾತ್ಕಾರದವರೆವಿಗೂ ಕರೆದೊಯ್ಯುವುದಿಲ್ಲ. ಉದಾಹರಣೆಯ ಮೂಲಕ ಈ ಪ್ರಕ್ರಿಯೆಯನ್ನು ಗಮನಿಸಬಹುದು.
ನಾವು ಒಂದು ಕಥೆಯನ್ನು ತನ್ಮಯರಾಗಿ ಓದುತ್ತೇವೆಂದುಕೊಳ್ಳೋಣ. ಆ ಕಥೆಯ ಲೇಖಕರು ತಮ್ಮೊಳಗೇ ಮುಳುಗಿ ಕಥೆಯ ಪರಿಕಲ್ಪನೆ, ಚೌಕಟ್ಟುಗಳನ್ನು ರೂಪಿಸಿಕೊಳ್ಳುತ್ತಾರೆ. ಹೀಗೆ ರೂಪಿಸಿಕೊಳ್ಳಬೇಕಾದರೆ ಅವರ ಮನಸ್ಸು ಯಾವ ಭಾವವನ್ನು ಹೊಂದಿತ್ತೋ, ಯಾವ ಆಳವನ್ನು ತಲುಪಿತ್ತೋ ಅದಕ್ಕೆ ಅನುಗುಣವಾಗಿ ಕಥೆಯು ಬೆಳವಣಿಗೆ ಹೊಂದುತ್ತಾ ಹೋಗುತ್ತದೆ. ಓದುಗರು ಆ ಕಥೆಯನ್ನು ಓದುತ್ತಾ ಹೋದರೆ, ಲೇಖಕರ ಯಾವ ಭಾವ, ಕಥೆಯ ಹರಿವಿಗೆ ಮೂಲವಾಗಿತ್ತೋ ಆ ಭಾವದೆಡೆಗೆ ಸಾಗುತ್ತಾರೆ ಮತ್ತು ಅವರಲ್ಲಿ ಕೆಲವರು ಲೇಖಕರಿಗಿದ್ದ ಭಾವವನ್ನೇ ತಲುಪಬಹುದು. ಲೇಖಕರ ಮನಸ್ಸಿನಲ್ಲಿ ಸಾಹಸ ಪ್ರಧಾನವಾದ ಭಾವವಿದ್ದರೆ, ಓದುಗರು ರೋಚಕತೆಯನ್ನು ಅನುಭವಿಸುತ್ತಾರೆ, ದುಃಖ ಪ್ರಧಾನವಾದ ಕಥೆಯಾದರೆ ದುಃಖವನ್ನನುಭವಿಸುತ್ತಾರೆ, ಒಟ್ಟಿನಲ್ಲಿ ಕಥಾಮೂಲವಾದ ಲೇಖಕರ ಭಾವವನ್ನೇ ಹೊಂದುತ್ತಾರೆ. ಇಂದಿನ ಬಹುತೇಕ ಕಥೆಗಳು, ಯಾವುದಾದರೂ ಪ್ರಾಪಂಚಿಕ ಅಥವಾ ಸಾಮಾಜಿಕ ಭಾವಕ್ಕೆ ಸಂಬಂಧ ಪಟ್ಟಿದ್ದಾಗಿರುತ್ತದೆ, ಮತ್ತು ಓದುಗರ ಮನಸ್ಸು ಆ ಪ್ರಾಪಂಚಿಕ ಅಥವಾ ಸಾಮಾಜಿಕ ಭಾವವನ್ನು ತಾಳುತ್ತದೆ. ಲೇಖಕರು ಆತ್ಮಭಾವದಲ್ಲಿ ನೆಲೆಸಿಲ್ಲದಿದ್ದರೆ, ಓದುಗರೂ ಸಹ ಆ ಆತ್ಮಭಾವವನ್ನು ಹೊಂದಲಾರರು. ಆದುದರಿಂದ ಲೌಕಿಕ ಸಾಹಿತ್ಯವನ್ನು ಪರಿಪೂರ್ಣವಾದ ಅರ್ಥದಲ್ಲಿ ವಿದ್ಯೆಯೆಂದು ಪರಿಗಣಿಸಲಿಕ್ಕಾಗುವುದಿಲ್ಲ. ಇದೇ ರೀತಿ, ಭೌತಿಕ ಪ್ರಪಂಚಕ್ಕೆ ಮಾತ್ರ ಸಂಬಂಧಿಸಿದ ಯಾವುದೇ ವಿಷಯವಾದರೂ ಅದು ಪ್ರಾಪಂಚಿಕ ಭಾವದ ಮೂಲದಿಂದ ಹೊರಟಿದ್ದಾದುದರಿಂದ ಆತ್ಮ ಜ್ಞಾನದವರೆವಿಗೂ ಕರೆದುಕೊಂಡು ಹೋಗುವುದಿಲ್ಲ.
ಆದರೆ ಭಾರತೀಯ ವಿದ್ಯೆಗಳ ವಿಷಯವು ಹಾಗಿಲ್ಲ. ಅವು ಆತ್ಮಮೂಲದಿಂದ ವಿಕಾಸವಾದ ವಿದ್ಯೆಗಳು. ಮಹರ್ಷಿಗಳು ತಮ್ಮ ಸತ್ಯಾನ್ವೇಷಣೆಯ ಪ್ರಯತ್ನದಲ್ಲಿ ಮನಸ್ಸನ್ನು ಅಂತರ್ಮುಖವಾಗಿ ತಿರುಗಿಸಿ ತಮ್ಮ ಮೂಲವನ್ನು ಕಂಡುಕೊಂಡರು. ನಮ್ಮೆಲ್ಲರ ಹಾಗೂ ವಿಶ್ವದ ಮೂಲದಲ್ಲಿ ಒಂದು ಅಖಂಡ ಜ್ಯೋತಿಯು ಬೆಳಗುತ್ತಿದೆ, ಇದನ್ನೇ ಪರಬ್ರಹ್ಮ, ಪರಮಾತ್ಮ ಎನ್ನುವುದು ಮತ್ತು ಈ ಜ್ಯೋತಿಗೆ ನಾದಬ್ರಹ್ಮವೆಂದು ಕರೆಯಲ್ಪಡುವ ಒಂದು ನಾದರೂಪವೂ ಇದೆ ಎನ್ನುವುದೇ ಮಹರ್ಷಿಗಳು ಸಾರಿರುವ ಸತ್ಯ. ಈ ನಾದವನ್ನು ಪ್ರಣವ ಅಥವಾ ಓಂಕಾರ ಎಂದೂ ಕರೆಯುತ್ತಾರೆ. ಈ ನಾದವು ಅನಾಹತವಾಗಿದೆ; ಅಂದರೆ, ಯಾವುದೇ ಆಹತ ಅಥವಾ ಘಾತ, ಘರ್ಷಣಗಳಿಲ್ಲದೇ ತಾನಾಗಿಯೇ ಸೃಷ್ಟಿಯಲ್ಲಿ ಸಹಜವಾಗಿ ಮೊಳಗುತ್ತಿರುವ ನಾದವಿದಾಗಿದೆ. ಯೋಗಿಗಳು ತಮ್ಮ ಅಂತಃಶ್ರವಣದಿಂದ ತಮ್ಮೊಳಗೆ ಕೇಳಬಹುದಾದ ನಾದವಾಗಿದೆ ಓಂಕಾರ. ಈ ಓಂಕಾರವು ಬಿಂದು, ನಾದ, ಮಕಾರ, ಉಕಾರ,ಅಕಾರಗಳಿಂದ ಕೂಡಿದ್ದು, ಸೃಷ್ಟಿಯೆಲ್ಲಕ್ಕೂ ಬೀಜರೂಪದಲ್ಲಿದೆ. ಇದನ್ನೇ ಆರೋಹಣ ಕ್ರಮದಲ್ಲಿ ಹೇಳುವುದಾದರೆ, ಓಂಕಾರವು ಅಕಾರ, ಉಕಾರ, ಮಕಾರ, ನಾದ, ಬಿಂದುಗಳಿಂದ ಕೂಡಿದ್ದು ಎಲ್ಲ ಭಾರತೀಯ ವಿದ್ಯೆಗಳೂ ಈ ಪ್ರಣವ ಮೂಲದಿಂದಲೇ ವಿಕಾಸವಾಗಿವೆ.
ಭಾರತೀಯ ವಿದ್ಯೆಗಳು ಪ್ರಣವಮೂಲದಿಂದ ವಿಕಾಸವಾಗುವುದು ಎಂದರೇನು? ಇದನ್ನು ಕೆಲವು ವಿದ್ಯೆಗಳ ವಿಶ್ಲೇಷಣೆಯಿಂದ ಅರ್ಥ ಮಾಡಿಕೊಳ್ಳಬಹುದು. ಮಾನವದೇಹದಲ್ಲಿ, ನಾಡಿಗಳು ಸಂಧಿಸುವ ಸ್ಥಾನಗಳನ್ನು ಚಕ್ರಗಳೆನ್ನುತ್ತಾರೆ ಮತ್ತು ಇವು ಮೂಲಾಧಾರದಿಂದ ಆಜ್ಞಾಚಕ್ರದವರೆವಿಗೆ ಷಟ್ಚಕ್ರಗಳೆಂದೂ, ಅದಕ್ಕೂ ಮೇಲಿರುವ ಸಹಸ್ರಾರ ಚಕ್ರವನ್ನೂ ಸೇರಿಸಿದರೆ ಸಪ್ತ ಚಕ್ರಗಳೆಂದು ತಂತ್ರಶಾಸ್ತ್ರಗಳಲ್ಲಿ ಪ್ರಸಿದ್ಧವಾಗಿವೆ. ಈ ಚಕ್ರಗಳನ್ನು ಪದ್ಮಗಳೆಂದೂ ಕರೆಯುತ್ತಾರೆ ಮತ್ತು ಷಟ್ಚಕ್ರಗಳಲ್ಲಿ ಬೇರೆ ಬೇರೆ ಸಂಖ್ಯೆಯ ದಳಗಳಿದ್ದು ಒಟ್ಟಾರೆ ಐವತ್ತು ದಳಗಳಿರುತ್ತವೆ. ಮೂಲದಲ್ಲಿರುವ ಓಂಕಾರವು ಈ ದಳಗಳ ಮೂಲಕ ಹೊರಹೊಮ್ಮಬೇಕಾದರೆ, 50 ಅಕ್ಷರಗಳಾಗಿ ವಿಭಜನೆ ಹೊಂದುತ್ತದೆ. ಈ ಅಕ್ಷರಗಳ ಸಮ್ಮಿಳನದಿಂದ ಪದಗಳೂ, ಪದಗಳು ಸೇರಿ ವಾಕ್ಯಗಳು, ವಾಕ್ಯಗಳು ಸೇರಿ ಸಾಹಿತ್ಯರಾಶಿಯು ಉಂಟಾಗುತ್ತದೆ. ಹೀಗಾಗಿ ಸಂಸ್ಕೃತ ಭಾಷೆಯು ಪ್ರಣವಮೂಲದಿಂದ ವಿಕಾಸವಾಗಿದ್ದು ಇದನ್ನು ದೇವಭಾಷೆ ಎಂದೂ ಕರೆಯುತ್ತಾರೆ. ಶಬ್ದ ಪ್ರಪಂಚದ ಸಹಜ ವಿಕಾಸ ಕ್ರಮದಲ್ಲಿ ಯಾವ ರೀತಿ ಅಕ್ಷರಗಳು ಸೇರಿ ಪದಗಳಾಗುತ್ತವೆ, ಪದಗಳು ವಾಕ್ಯಗಳಾಗುತ್ತವೆ ಎನ್ನುವ ನಿಯಮಗಳನ್ನು ತಿಳಿಸುವ ಸಂಸ್ಕೃತ ವ್ಯಾಕರಣವು ಪ್ರಣವದಿಂದ ವಿಕಾಸವಾಗಿರುವ ವಿದ್ಯೆಯಾಗಿದೆ. ಈ ವಿದ್ಯೆಯನ್ನು ಅನುಸಂಧಾನ ಮಾಡಿದರೆ ಅದು ತನ್ನ ಮೂಲದಲ್ಲಿರುವ ಪ್ರಣವದ ಸಾಕ್ಷಾತ್ಕಾರದವರೆವಿಗೂ ತಲುಪಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ.
ಇದೇ ರೀತಿ, ಪ್ರಣವವು ಸಪ್ತ ಚಕ್ರಗಳಿಂದ ಹೊರಹೊಮ್ಮಬೇಕಾದರೆ ಸಪ್ತಸ್ವರಗಳಾಗಿಯೂ ರೂಪಾಂತರ ಹೊಂದುತ್ತದೆ. ಸರಿಗಮಪಧನಿ ಎಂಬ ಸಪ್ತಸ್ವರಗಳ ವಿಕಾಸವೇ ಭಾರತೀಯ ಸಂಗೀತ ವಿದ್ಯೆಯಾಗಿದೆ. ಭಾರತೀಯ ಸಂಗೀತವನ್ನು ಯೌಗಿಕ ರೀತಿಯಲ್ಲಿ ಅನುಸಂಧಾನ ಮಾಡಿದರೆ (ನಾದ ಯೋಗದ ರೂಪದಲ್ಲಿ), ಅದು ತಲ್ಲೀನತೆಯುಂಟು ಮಾಡಿ, ನಂತರ ಸಮಾಧಿ ಸ್ಥಿತಿಯನ್ನುಂಟು ಮಾಡಿ ನಾದಬ್ರಹ್ಮದ ಸಾಕ್ಷಾತ್ಕಾರವನ್ನೇ ಉಂಟು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ.
ಹೀಗೆಯೇ ಬೇರೆ ಭಾರತೀಯ ವಿದ್ಯೆಗಳೂ ಪ್ರಣವದಿಂದಲೇ ವಿಕಾಸವಾದುವಾಗಿವೆ. ಇಂತಹ ವಿದ್ಯೆಗಳ ಪಟ್ಟಿಯನ್ನು ಗಮನಿಸುವುದಾದರೆ, ವಿದ್ಯೆಗಳನ್ನು 14, 18, 64, ಅನಂತ- ಹೀಗೆ ವಿಂಗಡಣೆ ಮಾಡುತ್ತಾರೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿರುವ 64 ವಿದ್ಯೆ, ಕಲೆಗಳ ಪಟ್ಟಿಯನ್ನು ಗಮನಿಸಿದರೆ, ಅವು ಆತ್ಮ ಸಮೃದ್ಧಿಯನ್ನುಂಟು ಮಾಡುವುದಲ್ಲದೇ ಲೋಕಜೀವನವನ್ನು ಸಮೃದ್ಧವಾಗಿ ನಡೆಸಲು ಬೇಕಾದ ವಿಷಯಗಳನ್ನೊಳಗೊಂಡಿವೆಯೆಂಬುದು ಕಂಡು ಬರುತ್ತದೆ. ಕೃಷಿ, ಗೋರಕ್ಷೆ, ವಾಣಿಜ್ಯ, ಲೋಹ ವಿದ್ಯೆ, ಶಿಲ್ಪ ವಿದ್ಯೆ, ನೇಯ್ಗೆ, ಆಯುರ್ವೇದ, ಪಾಕ ಶಾಸ್ತ್ರ (ಆಯುರ್ವೇದದ ಅಂಗ), ಸಸ್ಯ ಶಾಸ್ತ್ರ (ವೃಕ್ಷಾಯುರ್ವೇದ), ವಾಸ್ತು ಶಾಸ್ತ್ರ ( ಭೂಮಿಯ ಗುಣ ವಿಶ್ಲೇಷಣೆ, ಕಟ್ಟಡ ಪದಾರ್ಥಗಳು, ಗೃಹರಚನೆ, ದೇವಾಲಯ ರಚನೆ, ನಗರರಚನೆ, ಅರಮನೆಯ ರಚನೆ) ಮುಂತಾದ್ದಾಗಿ ಅನೇಕ ವಿದ್ಯೆಗಳಿದ್ದು ಮೂರು-ನಾಲ್ಕು ಶತಮಾನಗಳ ಹಿಂದಿನವರೆವಿಗೂ ಎಷ್ಟೋ ಮಟ್ಟಿಗೆ ಪ್ರಯೋಗದಲ್ಲಿಯೂ ಇದ್ದವು.
ದೆಹಲಿಯ ಕುತುಬ್ ಮಿನಾರ್ ನಲ್ಲಿರುವ ೧೬೦೦ ವರ್ಷಗಳ ಹಳೆಯ ಕಬ್ಬಿಣದ ಕಂಭವೊಂದು ಎಷ್ಟೇ ಮಳೆಗಾಳಿಗೆ ಒಡ್ಡಲ್ಪಟ್ಟಿದ್ದರೂ ತುಕ್ಕು ಹಿಡಿದಿಲ್ಲ. ಇಂತಹ ಅನೇಕ ವಿಸ್ಮಯಗಳು ಭಾರತೀಯರ ಲೋಹಶಾಸ್ತ್ರದ ಪರಿಣತಿಯನ್ನು ಹೇಳುತ್ತವೆ. ಬೇಲೂರು ಹಳೇಬೀಡು ದೇವಾಲಯಗಳು ಶಿಲ್ಪಕಲೆಯ ಅತ್ಯಂತ ಸೂಕ್ಷ್ಮಸ್ತರದ ನಿಪುಣತೆಗೂ, ತಂಜಾವೂರಿನ ದೇವಾಲಯಗಳು, ಇಂದಿನ ಕ್ರೇನ್ ಗಳಿಗೂ ಹೊರಲಾಗದಷ್ಟು ಭಾರವಾದ ಕಲ್ಲುಗಳನ್ನು ಮೇಲೆ ಸಾಗಿಸಲು ಇರಬೇಕಾದ ತಂತ್ರಜ್ಞಾನದ ಪರಿಣತಿಯನ್ನೂ ಎತ್ತಿ ತೋರಿಸುತ್ತವೆ. ಭಾರತೀಯರ ನೇಯ್ಗೆಗಳು ಇಂದಿಗೂ ಅತ್ಯಂತ ವೈವಿಧ್ಯಮಯ ಎಂಬುದು ಜಗತ್ಪ್ರಸಿದ್ಧವಾಗಿವೆ. ಇಂದಿಗೂ ಭಾರತೀಯರ ಆಹಾರ ವೈವಿಧ್ಯ ಮತ್ತು ಅದರಲ್ಲಿ ಅಡಕವಾಗಿರುವ ಔಷಧ ಗುಣಗಳೂ ಸಹ ವಿಶ್ವ ಮಾನ್ಯ.
ಹೀಗೆ ವೈಭವದಿಂದ ಕಂಗೊಳಿಸುತ್ತಿದ್ದ ವಿದ್ಯೆ, ಕಲೆಗಳು ಭವ್ಯವಾದ ಭಾರತೀಯ ಸಂಸ್ಕೃತಿ-ನಾಗರಿಕತೆಯನ್ನು ರೂಪಿಸಿದ್ದವು. ಆದರೆ ಬ್ರಿಟಿಷರ ಆಳ್ವಿಕೆಯಲ್ಲಿ ಶಿಕ್ಷಣ ಪದ್ಧತಿಯ ಮಾರ್ಪಾಡಿನಿಂದ ಈ ವಿದ್ಯೆಗಳೂ, ಮತ್ತು ಈ ವಿದ್ಯೆಗಳನ್ನನುಸರಿಸಿ ಚಾಲ್ತಿಯಲ್ಲಿದ್ದ ವೃತ್ತಿಗಳು ಹಾಗೂ ಜೀವನ ಶೈಲಿಯು ಬಹುತೇಕ ನಾಶವಾಗಿದ್ದು ಭಾರತೀಯ ವಿದ್ಯೆಗಳು ಇಂದು ಕುಟುಕು ಜೀವದಿಂದಿವೆ. ಇಷ್ಟಾದರೂ ಉಳಿದಿರುವ ವಿದ್ಯೆಗಳನ್ನು ಉಳಿಸಿ, ಬೆಳೆಸಿ ಮತ್ತೆ ಭಾರತೀಯ ಸಂಸ್ಕೃತಿ ನಾಗರಿಕತೆಯನ್ನು ಭವ್ಯವಾಗಿ ಮಾಡಬೇಕಾಗಿದೆ. ಈ ಕರ್ತವ್ಯವನ್ನೂ ಮತ್ತು ಈ ವಿದ್ಯೆಗಳನ್ನು ಬೆಳೆಸಿದ ಮಹರ್ಷಿಗಳನ್ನೂ, ಈ ವಿದ್ಯೆಗಳ ಬಗ್ಗೆ ನೋಟವನ್ನು ಕೊಟ್ಟಿರುವ ಶ್ರೀರಂಗಮಹಾಗುರುಗಳನ್ನೂ ಕೃತಜ್ಞತೆಯಿಂದ ಸ್ಮರಿಸಿ ಎಲ್ಲರಿಗೂ ಸನ್ಮಂಗಳವಾಗಲೆಂದು ಆಶಿಸೋಣ.
ಸೂಚನೆ: 10/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.