Monday, June 22, 2026

ಪ್ರಶ್ನೋತ್ತರ ರತ್ನಮಾಲಿಕೆ 71 (Prasnottara Ratnamalike 71)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೧. ರಾಮನಿಗಿಂತಲೂ ಶೂರ ಯಾರು?

ಮನ್ಮಥನಿಂದ ಪೀಡಿತನಾಗಿದ್ದರೂ ನಿಶ್ಚಲನಾದ ವ್ಯಕ್ತಿ.


ರಾಮನಿಗಿಂತಲೂ ಶೂರ ಯಾರಾದರೂ ಇದ್ದಾರೆಯೇ? ಎಂದು ಯಾರಾದರೂ ಪ್ರಶ್ನೆಯನ್ನು ಕೇಳಿದರೆ ಅದಕ್ಕೆ ಉತ್ತರ ‘ಇಲ್ಲ’ ಎಂಬುದೇ. ಶೂರನು ಯಾರು? ಎಂದು ಕೇಳಿದಾಗ ‘ರಾಮನೇ’ ಎಂಬುದಾಗಿ ಉತ್ತರ ಸಾಮಾನ್ಯ ಚಿಕ್ಕ ಮಗುವಿಗೂ ತಿಳಿದಿರುವ ವಿಷಯ. ಹೀಗಿರುವಾಗ ರಾಮನಿಗಿಂತಲೂ ಶೂರ ಯಾರು? ಎಂಬ ಪ್ರಶ್ನೆಗೆ ಇಲ್ಲಿನ ಉತ್ತರ ಔಚಿತ್ಯ ಪೂರ್ಣವಾಗಿದೆ. ಅದು ಹೇಗೆ? ಒಬ್ಬ ಶೂರನಾಗಲು ಏನು ಬೇಕು? ಅಂದರೆ ಅವನು ರಾಮನಿಗಿಂತಲೂ ಶ್ರೇಷ್ಠನಾಗಬೇಕು ಅಂತಾದರೆ ಯಾವ ಗುಣ ಇರಬೇಕು ಎಂಬ ಪ್ರಶ್ನೆ ಎಲ್ಲಿದೆ. ಅವನು ರಾಮನಿಗಿಂತಲೂ ಶೂರ ಎಂದಾಗಬೇಕಾದರೆ ಅವನು ಯಾವುದೇ ಕಾರಣಕ್ಕೂ ಮನ್ಮಥನಿಂದ ಅಥವಾ ಕಾಮ ಪೀಡಿತನಾಗದೇ ಇದ್ದರೆ ಮಾತ್ರ ಸಾಧ್ಯ ಎಂಬುದಾಗಿ ಇಲ್ಲಿ ಉತ್ತರವಿದೆ. ಶೂರ ಎಂದರೇನು? ಶೂರನೇ ಆಗಬೇಕಾದರೆ ಅವನು ಹೇಗೆ ಕಾಮವನ್ನು ಅಥವಾ ಮನ್ಮಥನನ್ನು ಹೇಗೆ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು? ಎಂಬುದನ್ನೂ ಕೂಡ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ.

ಶೂರ ಎಂಬ ಶಬ್ದಕ್ಕೆ ಧೀರ, ಪರಾಕ್ರಮಿ, ಬಲಯುತ ಇತ್ಯಾದಿ ಅರ್ಥಗಳು ಇವೆ. ಅಂದರೆ ಅವನಿಗೆ ಪರಾಕ್ರಮ ಬಲ ಇತ್ಯಾದಿ ಗುಣಗಳು ಬರಬೇಕಾದರೆ ಅವನ ಬುದ್ಧಿಯು ನಿಯಂತ್ರಣದಲ್ಲಿ ಇರಬೇಕು. ಯಾರ ಬುದ್ಧಿ ಸನ್ಮಾರ್ಗದಲ್ಲಿ ಇರುತ್ತದೆಯೋ ಅವನೇ ನಿಜವಾದ ಧೀರ ಎಂಬುದಾಗಿ ಹೇಳಲಾಗಿದೆ. ಹಾಗಾಗಿ ಅಂತಹ ಶೂರನಾಗಬಲ್ಲವು ತನ್ನ ನಿಯೋಜಿತಕಾರ್ಯವನ್ನು ಉಚಿತವಾಗಿ ಮಾಡಬಲ್ಲ ಸಾಮರ್ಥ್ಯವನ್ನು ಸಂಪಾದನೆ ಮಾಡಿರುತ್ತಾನೆ ಎಂಬುದಾಗಿ. ಹಾಗಿಲ್ಲದೆ ಕಾಮಪರವಶನಾಗಿ ಅಥವಾ ಮೋಹದಿಂದ ಕೂಡಿದ್ದರೆ ಅವನು ಧೀರನಾಗಲು ಸಾಧ್ಯವಿಲ್ಲ. ಅವನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ ಎಂಬುದಾಗಿ ಒಂದು ಸುಭಾಷಿತ ಹೇಳುತ್ತದೆ - “ಪ್ರಾಯಃ ಸಮಾಪನ್ನವಿಪತ್ತಿಕಾಲೇ ಧಿಯೋSಪಿ ಪುಂಸಾಂ ಮಲಿನೀಭವಂತಿ” ಅಂದರೆ ಧೀರರಾದವರೂ ಕೂಡ ವಿಪತ್ತಿನ ಕಾಲದಲ್ಲಿ ತನ್ನ ಬುದ್ಧಿಯ ಸ್ತಿಮಿತತೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ. ಇಲ್ಲಿ ರಾಮನನ್ನೇ ಉದಾಹರಣೆಯಾಗಿ ಕೊಡಲಾಗಿದೆ. ಸೀತೆಯು ಮಾಯಾಜಿಂಕೆಯನ್ನು ಕಂಡು ಅದು ತನಗೆ ಬೇಕೆಂಬುದಾಗಿ ಹಠ ಮಾಡುತ್ತಾಳೆ. ಒಂದು ಕ್ಷಣ ಯೋಚಿಸಿ ಮತ್ತೆ ಆ ಸೀತೆಯ ಬಯಕೆಯನ್ನು ಈಡೇರಿಸಲು ಮಾಯಜಿಂಕೆಯ ಹಿಂದೆ ರಾಮ ಧಾವಿಸುತ್ತೇನೆ. ವಸ್ತುತಃ ಅದು ಮಾಯಾಜಿಂಕೆಯೇ ಆಗಿತ್ತು. ಸೀತೆಯನ್ನು ಅಪಹರಿಸಲು ಮಾಡಿದ ಒಂದು ಕುತಂತ್ರ ಅದಾಗಿತ್ತು. ಆದರೆ ರಾಮನಂತಹ ರಾಮನು ಕೂಡ ಆ ಕ್ಷಣದಲ್ಲಿ ತನ್ನ ಬುದ್ಧಿಯನ್ನು ಸ್ತಿಮಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಸೀತೆಯ ಮೇಲಿನ ಮೋಹ. ಅವಳ ಬಯಕೆಯನ್ನು ಈಡೇರಿಸುವುದೇ ಅವನ ಇಚ್ಛೆಯಾಗಿತ್ತು. ಅವನು ಸೀತೆಯ ಕಾಮನೆಗೆ ಅನುಸಾರವಾಗಿ ಅವಳ ಪ್ರೀತಿಗೆ ಮನಸೋತು ಮಾಯಾಜಿಂಕೆಯ ಹಿಂದೆ ಓಡಿದನು. ಅದರಿಂದ ರಾಮನು ಧೀರನಾದರೂ ತನ್ನ ಮಡದಿಯನ್ನು ಕಳೆದುಕೊಳ್ಳುವ ಸಂದರ್ಭ ಒದಗಿತು. ರಾಮನಂತಹವರಿಗೆ ಇಂತಹ ಬುದ್ಧಿಯು ಮಂಕಾಗುವ ಸಂದರ್ಭವಿದೆ ಎಂದಾದರೆ ಸಾಮಾನ್ಯವ್ಯಕ್ತಿಯ ಮಾತೇನು! ಹಾಗಾಗಿ ಇಲ್ಲಿ ಹೇಳಿರುವುದು ರಾಮನುಗಿಂತಲೂ ಅವನು ಶೂರನಾಗಬೇಕು ಎಂದಾದರೆ ಆಶೆಯನ್ನು ಅಥವಾ ಮನ್ಮಥನಿಂದ ಪ್ರೇರಿತವಾದ ಕಾಮನೆಯನ್ನು ಅವನು ಬಿಡಬೇಕು. ಹಾಗೆ ಬಿಟ್ಟಾಗ ಮಾತ್ರ ಅವನು ತನ್ನ ಬುದ್ಧಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಸಾಧ್ಯ. ಯಾವಾಗ ಬುದ್ಧಿ ಶುದ್ಧವಾಗುತ್ತದೆಯೋ ಆಗ ಅದು ಕಾಮಧೇನುವಿನಂತೆ ಬೇಡಿದ್ದನ್ನು ಕೊಡಲು ಸಾಧ್ಯ. ಆದ್ದರಿಂದ ಕಾಮಪರವಶನಾಗದಿದ್ದರೆ ಅವನು ರಾಮನೇ ಎಂಬುದಾಗಿ ಇಲ್ಲಿ ಹೇಳಲಾಗಿದೆ.


ಸೂಚನೆ : 21/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 193 ಭೀಮ-ಸಹದೇವರು ಸಾಧಿಸಿದ ದಿಗ್ವಿಜಯಗಳು (Vyaasa Vikshita193)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png


ಧರ್ಮರಾಜನ ಆಜ್ಞೆಗೆ ಅನುಸಾರವಾಗಿ ಮಹಾ-ಪ್ರತಾಪಶಾಲಿಯಾದ ಶಿಶುಪಾಲನ ಬಳಿಗೆ ಭೀಮನು ಆ ಬಳಿಕ ಹೋದನು. ಭೀಮನು ಏನನ್ನು ಮಾಡಲಿರುವನೆಂಬುದನ್ನು ಕೇಳಿ ತಿಳಿದ ಚೇದಿ-ರಾಜನಾದ ಶಿಶುಪಾಲನೂ ಸಹ ನಗರದಿಂದ ಹೊರಬಂದು ಭೀಮನನ್ನು ಎದುರ್ಗೊಂಡನು. ಕುರುಕುಲ-ಶ್ರೇಷ್ಠನಾದ ಭೀಮನೂ ಚೇದಿವಂಶ-ಶ್ರೇಷ್ಠನಾದ ಶಿಶುಪಾಲನೂ ಆಗ ಕಲೆತು, ಪರಸ್ಪರ ತಮ್ಮ ವಂಶಗಳ ಬಗ್ಗೆ ಕುಶಲಪ್ರಶ್ನೆಯನ್ನು ಮಾಡಿಕೊಂಡರು.

ಆಗ ಶಿಶುಪಾಲನು ತನ್ನ ಚೇದಿ-ರಾಜ್ಯವನ್ನು ಭೀಮನಿಗೊಪ್ಪಿಸಿ ನಗುತ್ತಾ, ಭೀಮನನ್ನು "ನೀನಿದೇನು ಮಾಡಲಿರುವೆ?" ಎಂಬುದಾಗಿ ಕೇಳಿದನು. ಅದಕ್ಕೆ ಭೀಮನೂ ಧರ್ಮರಾಜನು ಮಾಡಹೊರಟಿರುವ ಯಜ್ಞದ ವಿಷಯವನ್ನು ಹೇಳಿದನು. ಆತನೂ ಆ ಮಾತುಗಳನ್ನು ಹಾಗೆಯೇ ಸ್ವೀಕರಿಸಿ,  ತದನುಸಾರಿಯಾಗಿಯೇ ವರ್ತಿಸಿದನು. ಆಮೇಲೆ ಭೀಮನು ಅಲ್ಲಿಯೇ ಹದಿಮೂರು ರಾತ್ರಿಗಳನ್ನು ಕಳೆದನು. ಶಿಶುಪಾಲನಿಂದ ಸತ್ಕಾರವನ್ನು ಪಡೆದು ತನ್ನ ಸೈನ್ಯ-ಸವಾರಿಗಳೊಂದಿಗೆ ಶಿಶುಪಾಲನ ಸ್ಥಾನವನ್ನು ಬಿಟ್ಟು ಹೊರಟನು.

ಆ ಬಳಿಕ ಭೀಮನು ಕುಮಾರ-ದೇಶದ ಶ್ರೇಣಿಮಂತನನ್ನು ಜಯಿಸಿದನು. ಆಮೇಲೆ ಕೋಸಲ-ರಾಜನಾದ ಬೃಹದ್ಬಲನನ್ನು ಗೆದ್ದನು. ಹೆಚ್ಚು ಕಷ್ಟವೇ ಪಡದೆ ಅಯೋಧ್ಯಾಧಿಪತಿಯಾದ ಹಾಗೂ ಬಲಶಾಲಿಯೂ ಧರ್ಮಜ್ಞನೂ ಆದ ದೀರ್ಘಯಜ್ಞನನ್ನು ಜಯಿಸಿದನು.

ಆಮೇಲೆ ಉತ್ತರ-ಕೋಸಲಾಧಿಪತಿ, ಮಲ್ಲ-ರಾಷ್ಟ್ರಾಧಿಪತಿಗಳನ್ನೂ, ಶುಕ್ತಿಮಂತ-ಪರ್ವತ, ಹಿಮಾಲಯ-ಪರ್ವತಗಳ ತಪ್ಪಲಿನ  ಪ್ರದೇಶಗಳನ್ನೂ, ಕಾಶಿ-ರಾಜನಾದ ಸುಬಾಹು, ಸುಪಾರ್ಶ್ವ-ಪರ್ವತದ ಬಳಿಯಿದ್ದ ಕ್ರಥನೆಂಬ ರಾಜ, ಮತ್ಸ್ಯದೇಶ-ಮಲದದೇಶ-ನೇಪಾಳದೇಶ-ವತ್ಸಭೂಮಿಗಳ ರಾಜರುಗಳು, ನಿಷಾದರ ರಾಜ, ವಿದೇಹ-ರಾಜನಾದ ಜನಕ – ಇವರೆಲ್ಲರನ್ನೂ ಗೆದ್ದನು.

ಶಕರನ್ನೂ ಬರ್ಬರರನ್ನೂ ಛದ್ಮದಿಂದ, ಎಂದರೆ ಮೋಸದಿಂದ, ಗೆದ್ದುಕೊಂಡನು. ವಿದೇಹದೇಶದ ಸುತ್ತಲಿನ ಏಳು ಕಿರಾತಾಧಿಪತಿಗಳನ್ನು ಜಯಿಸಿದನು. ಬಳಿಕ ಸುಹ್ಮ-ಪ್ರಸುಹ್ಮರಾಜರನ್ನೂ ಇನ್ನಿಬ್ಬರನ್ನೂ ಸೋಲಿಸಿದನು. ಜರಾಸಂಧ-ಪುತ್ರನನ್ನು ಕರ-ಸಮರ್ಪಕನನ್ನಾಗಿ ಮಾಡಿಕೊಂಡನು. ಹಾಗೆಯೇ ಕರ್ಣನೆಂಬ ಮತ್ತೊಬ್ಬ ರಾಜ, ಮೋದಾಗಿರಿಯ ರಾಜ - ಇವರುಗಳನ್ನು ಸೋಲಿಸಿದನು. ಪೌಂಡ್ರಕ-ವಾಸುದೇವನನ್ನೂ ಜಯಿಸಿ ವಂಗ-ದೇಶದ ಮೇಲೆ ಆಕ್ರಮಣ ಮಾಡಿದನು. ಮತ್ತೂ ಹಲವರನ್ನು ಜಯಿಸಿ ಸುತ್ತಲಿನ ಮ್ಲೇಚ್ಛ-ರಾಜರನ್ನೆಲ್ಲಾ ಬಗ್ಗುಬಡಿದನು.

ಹೀಗೆ ಹಲವು ಅರಸರನ್ನು ಮೆಟ್ಟಿ, ಅವರ ಐಶ್ವರ್ಯವನ್ನು ತೆಗೆದುಕೊಂಡು, ಮ್ಲೇಚ್ಛರಿಂದ ಕರವನ್ನೂ ನಾನಾ-ರತ್ನಗಳನ್ನೂ ಚಂದನ-ಅಗರು-ವಸ್ತ್ರಗಳನ್ನೂ ಮಣಿ-ಮುತ್ತು-ಕಂಬಲಗಳನ್ನೂ ಕಾಂಚನ-ರಜತ-ವಿದ್ರುಮ(ಹವಳ)ಗಳನ್ನೂ ಕೋಟಿಸಂಖ್ಯೆಯಲ್ಲಿ ಪಡೆದನು. ಇಂದ್ರಪ್ರಸ್ಥಕ್ಕೆ ಹಿಂದಿರುಗಿ ಧರ್ಮರಾಜನಿಗೆ ಎಲ್ಲವನ್ನೂ ಒಪ್ಪಿಸಿದನು, ಭೀಮ.

ಇತ್ತ ಸಹದೇವನು ಧರ್ಮರಾಜನಿಂದ ಸಮ್ಮಾನಿತನಾಗಿ, ದೊಡ್ಡಸೈನ್ಯದೊಂದಿಗೆ ದಕ್ಷಿಣದಿಕ್ಕಿಗೆ ಹೊರಟನು. ಮೊಟ್ಟಮೊದಲು ಆತನು ಶೂರಸೇನರನ್ನು ಜಯಿಸಿದನು. ಆಮೇಲೆ ಮತ್ಸ್ಯರಾಜನನ್ನು , ಬಳಿಕ ಅಧಿರಾಜರಿಗೆ ಅಧಿಪತಿಯಾದ ದಂತವಕ್ತ್ರನನ್ನು ಸೋಲಿಸಿದನು. ಅವನಿಂದ ಕರವನ್ನು ಸ್ವೀಕರಿಸಿ ಅದೇ ರಾಜ್ಯದಲ್ಲೇ ಆತನನ್ನು ಪ್ರತಿಷ್ಠಾಪಿಸಿದನು. ಆಮೇಲೆ ಅಪರ-ಮತ್ಸ್ಯ, ನಿಷಾದ-ದೇಶ, ಗೋಶೃಂಗ-ಪರ್ವತ ಮುಂತಾದವನ್ನು ವಶಪಡಿಸಿಕೊಂಡನು.

ಸಹದೇವನು ಕುಂತಿಭೋಜನ ಮೇಲೆ ಸೆಣಸಲು ಹೋಗುತ್ತಿದ್ದಂತೆಯೇ, ಆತನೇ ಈತನನ್ನು ಪ್ರೀತಿಯಿಂದ ಸ್ವಾಗತಿಸಿ ಆತನ ಶಾಸನವನ್ನು ಒಪ್ಪಿಕೊಂಡನು. ಆಮೇಲೆ ಚರ್ಮಣ್ವತೀ-ನದಿಯ ಬಳಿಯ ರಾಜಸೇಕ-ಅಪರಸೇಕರಾಜ್ಯಗಳ ರಾಜರು, ಮತ್ತೆ ಹಲವು ಅರಸರು, ಭೀಷ್ಮಕ-ರಾಜ, ಪೂರ್ವಕೋಸಲದ ರಾಜ, ಇನ್ನಿತರ ನಾನಾರಾಜರುಗಳು - ಇವರನ್ನೆಲ್ಲ ಸೋಲಿಸಿ ಅವರಿಂದ ಕರಗ್ರಹಣವನ್ನು ಮಾಡಿದರು. ಪುಲಿಂದರನ್ನು ಜಯಿಸಿದನು. 

ಇವಾದ ಬಳಿಕ, ಕಿಷ್ಕಿಂಧೆಗೂ ಹೋದನು. ವಾನರ-ರಾಜರಾದ ಮೈಂದ-ದ್ವಿವಿದರೊಂದಿಗೆ ಏಳು ದಿನಗಳ ಯುದ್ಧವಾಯಿತು. ಅವರು ಸೋಲದಿದ್ದರೂ ಸಹದೇವನ ವಿಷಯದಲ್ಲಿ ಸಂತೋಷಪಟ್ಟು, ಹೀಗೆ ಹೇಳಿದರು: “ಪಾಂಡವ-ಶ್ರೇಷ್ಠನಾದ ಸಹದೇವನೇ, ಇವೆಲ್ಲ ರತ್ನಗಳನ್ನೂ ಸಾಗಿಸು. ಧರ್ಮರಾಜನ ಕಾರ್ಯವು ನಿರ್ವಿಘ್ನವಾಗಿ ನೆರವೇರಲಿ.

ಸೂಚನೆ : 21/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 108 ವಿಚಿತ್ರಾಪಿ ನ ಶೋಭತೇ! (Astakshara 108)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

Screenshot 2026-06-22 075320.png

ನಾಳೆ ಅಂತಾರಾಷ್ಟ್ರಿಯ ಯೋಗದಿನ! ಅದಕ್ಕಾಗಿ ಈ ಲೇಖನ.


ನಮ್ಮ ಕಣ್ಣು ಕತ್ತಲನ್ನು ಬಯಸುವುದಿಲ್ಲ, ಬೆಳಕನ್ನು ಬಯಸುತ್ತದೆ. ಕಣ್ಣುರಿ ಬಂದಾಗ ಬೆಳಕೇ ಬೇಡವೆನಿಸೀತು, ಬಿಡಿ. ಅತ್ತ ಕತ್ತಲೇ ಪ್ರೀತಿ, ನಿಶಾಚರ-ಪ್ರಾಣಿಗಳಿಗೆ.

ಯಾವುದು ಯಾರಿಗೆ ಶೋಭೆ? ನಮ್ಮ ಜಿಜ್ಞಾಸೆ ಬೆಡಗಿನ ವಸ್ತುಗಳ ಬಗೆಗೆ, ಬೆಳಗುವ ತತ್ತ್ವದ ಬಗೆಗೆ.  ಯಾವುದು ಶುಭ್ರವೋ ಅದು ತಾನೆ ಶೋಭಿಸುವುದು? ಕಳೆ-ಕಾಂತಿಗಳುಳ್ಳದ್ದೇ ಶೋಭಿಸುವುದು.
ಸಾಧಾರಣವಾದ ವಸ್ತುಗಳ ಮಧ್ಯೆ ಅಸಾಧಾರಣವಸ್ತುವೇ ಎದ್ದುಕಾಣುವಂತಹುದು. ಬುದ್ಧಿಶಕ್ತಿಯು ಕಡಿಮೆಯಿರುವವರ ನಡುವೆ ಒಬ್ಬ ಮಹಾಬುದ್ಧಿಶಾಲಿಯಿದ್ದರೆ, ಆತನು ತಾನೇ ಶೋಭಿಸತಕ್ಕವನು? ಇದಕ್ಕೆ ವ್ಯತಿರಿಕ್ತವಾಗಿ, ಹಂಸಗಳ ಮಧ್ಯದಲ್ಲಿ ಬಕಪಕ್ಷಿಗೆ ಶೋಭೆಯೇ? ಕೋಗಿಲೆಗಳ ನಡುವೆ ಕಾಗೆಗೇ?

ಕೆಲವರು ಒಳ್ಳೊಳ್ಳೆಯ ಬಟ್ಟೆಯುಡುತ್ತಾರೆ: ವಸ್ತ್ರದಿಂದ ಶೋಭೆ. ಯೋಗಾಸನ-ಪಟುಗಳಿಗೆ ತಮ್ಮ ಅಚ್ಚುಕಟ್ಟಾದ ಮೈಕಟ್ಟೇ ಒಂದು ಶೋಭೆ.

ಎಲ್ಲರಿಗೂ ಪ್ರಿಯವಾಗುವಂತೆ ಮಾತನಾಡುವವರಿಗೆ ಮಾತೇ ಶೋಭೆ. ಜೊತೆಗೆ ವಿದ್ಯಾರ್ಜನೆಯೂ ಇದ್ದರೆ ಮತ್ತೂ ಶೋಭೆ. ವಿದ್ಯೆಗೆ ವಿನಯವು ಮಹಾಶೋಭೆ.

ಸೀತೆಯಿಂದಾಗಿ ರಾಮನಿಗೆ ಶೋಭೆ: ಸಂಸ್ಕೃತದಲ್ಲಿ ರಾಮನೆಂದರೇ ನಲಿವು. ರಾಮನೆಂದರೆ ಆಕರ್ಷಕನೂ ಹೌದು. ಅಂತಹ ಅಭಿರಾಮನಾದ ರಾಮನೇ, ಸೀತೆಯೊಡಗೂಡಿದಾಗ ಮತ್ತೂ ಶೋಭಿಸಿದನಂತೆ:  “ಅಭಿರಾಮೆಯೂ ಉತ್ತಮರಾಜಕನ್ಯೆಯೂ ಆದ ಸೀತೆಯೊಂದಿಗಿನ ವಿವಾಹದಿಂದಾಗಿ ಆ ರಾಜರ್ಷಿಸುತನು ಶೋಭಿಸಿದನು - ಅಮರೇಶ್ವರನಾದ ವಿಷ್ಣುವು ಅತ್ಯಾಕರ್ಷಕಳಾದ ಲಕ್ಷ್ಮಿಯಿಂದಾಗಿ ಹೇಗೆ ಶೋಭಿಸಿದನೋ ಹಾಗೆ” - ಎನ್ನುತ್ತದೆ, ರಾಮಾಯಣ.
ಮೂರು ಶೋಭೆಗಳು: ಸತಿಯಿಂದ ಪತಿಗೆ ಹೇಗೆ ಮೆರುಗೋ, ಪತಿಯಿಂದ ಸತಿಗೂ ಹಾಗೆಯೇ. ರಾಜನನ್ನು ಭೂ-ಪತಿಯೆನ್ನುವವರಲ್ಲವೇ? ಅರಾಜಕವಾದ ರಾಜ್ಯವೆಂದರೆ ದುಷ್ಟರಿಗೇ ಇಷ್ಟವಾಗುವಂತಹುದು. ಒಳ್ಳೆಯ ರಾಜನಿದ್ದರೇ ಭುವಿಗೊಂದು ಸೊಬಗು. ರಾಷ್ಟ್ರಕ್ಕೆ ಧರ್ಮಿಷ್ಠ-ರಾಜನೇ ಬೆಳಕು.

ಹೀಗೆ ರಾಜಯೋಗದಿಂದಲೇ ಪೃಥ್ವಿಗೆ ಶೋಭೆ!

ನಿಶೆಗೆ ಶೋಭೆ: ಹಾಗೆಯೇ ರಾತ್ರಿ-ಸಮಯದಲ್ಲಿ ಆಕಾಶದಲ್ಲಿ ಚಂದ್ರನು ತೋರುತ್ತಲೇ ನಿಶೆಗೆ ಕಳೆಕಟ್ಟುವುದು. ಇಂದು ನಗರಗಳಲ್ಲಂತೂ ವಿದ್ಯುದ್ದೀಪಗಳ ವಿಜೃಂಭಣೆಯಿಂದಾಗಿ ತಾರೆಗಳೇ ತೋರವಾಗಿವೆ! ಜಗಮಗಾಯಿಸುವ ದೀಪಗಳ ನಡುವೆ ಇರುವ ನಾವು, ಇಂದುವಿನ ಚೆಂದವನ್ನಾಸ್ವಾದಿಸುವುದೆಂತು?

ಚಂದ್ರನನ್ನೂ ರಾಜನೆನ್ನುವುದುಂಟು. “ನಕ್ಷತ್ರಗಳಿಗೆಲ್ಲಾ ಚಂದ್ರನೇ ರಾಜ” – ಎನ್ನುವ ಲೆಕ್ಕವಿದೆ. ಆದರೆ ನಿಜವಾದ ರಾಜನೆಂದರೆ ಸೋಮನೇ - ಎಂದು ಹೇಳುವ ವೇದಮಂತ್ರಗಳೇ ಉಂಟು. ಎಂದೇ ರಾಜಶೇಖರ/ಸೋಮಶೇಖರ/ಚಂದ್ರಶೇಖರಗಳು ಸಮಾನಾರ್ಥಕ.

ಈ ರಾಜನ ಬೆಳದಿಂಗಳು ಹರಿದಾಗಲಲ್ಲವೆ, ರಾತ್ರಿಯೆಂಬುದೂ ಆಸ್ವಾದ್ಯವಾಗುವುದು? ಹೀಗೆ ರಾಜಯೋಗದಿಂದಲೇ ನಿಶೆಗೆ ಶೋಭೆ!

ಮುದ್ರೆಗೆ ಶೋಭೆ: ಹಾಗೆಯೇ ಲೋಕದಲ್ಲಿ ಅನೇಕ ಬಗೆಯ ಮುದ್ರೆ(ಸೀಲ್)ಗಳಿವೆ. ರಾಜನದಾದ ಮುದ್ರೆಯೇ ರಾಜಮುದ್ರೆ. ಅದರ ಮುಂದೆ ಮತ್ತಾವ ಮುದ್ರೆ? ರಾಜಮುದ್ರೆಯುಳ್ಳ ಒಕ್ಕಣೆಗೆ ಎದುರ್ನುಡಿಯೆಂಬುದುಂಟೇ? ಹೀಗೂ ರಾಜಯೋಗವಿರುವ ಮುದ್ರೆಗೇ ಶೋಭೆ!

ಪ್ರಕೃತಿಯಲ್ಲೋ ಪ್ರಜೆಗಳಲ್ಲೋ ಏನೇನೋ ವಿಶಿಷ್ಟತೆಗಳಿದ್ದಾವು. ಆದರೂ ಪೃಥ್ವಿಗೆ ಶೋಭೆಯೆಂದರೆ ಒಳ್ಳೆಯ ರಾಜನೇ. ನಿಶಾಸಮಯದಲ್ಲಿ ಎಷ್ಟೆಷ್ಟೋ ನಕ್ಷತ್ರಗಳು ರಾರಾಜಿಸಬಹುದು. ಆದರೂ ಚಂದ್ರನಿಲ್ಲದ ರಾತ್ರಿಯಲ್ಲಿ – ಅರ್ಥಾತ್ ಅಮಾವಾಸ್ಯೆಯ ರಾತ್ರಿಯಲ್ಲಿ - ಯಾವ ಶೋಭೆ?

ಇವೆರಡಕ್ಕಿಂತಲೂ ಮುಖ್ಯವಾಗಿ, ಯೋಗಶಾಸ್ತ್ರದಲ್ಲೇ ಬಗೆಬಗೆಯ ಮುದ್ರೆಗಳನ್ನು ಹೇಳುವುದೂ ಉಂಟು. ಅವು ಸಾಧಾರಣವಲ್ಲ, ವಿಶಿಷ್ಟವಾದವೇ. ಅನಲ್ಪ-ಸಾಧನೆಯಿಂದಲೇ ಲಭ್ಯವಾಗತಕ್ಕವು. ಆದರೂ ರಾಜಯೋಗದ ಛಾಪು ಅವುಗಳ ಮೇಲೆ ಬೀಳದಿದ್ದಲ್ಲಿ ಅವಲ್ಲೂ ಶೋಭೆಯಿರದು.

ಈ ಮೂರೆಡೆಗಳಲ್ಲೂ ರಾಜಯೋಗಕ್ಕೇ ಬೆಲೆ – ಎಂಬೀ ಮಾತು ಬಂದಿರುವುದು ಹಠಯೋಗಪ್ರದೀಪಿಕೆಯಲ್ಲಿ. ಯೋಗಗ್ರಂಥವಾದರೂ, ಕಾವ್ಯಭಂಗಿಯಲ್ಲಿ ಶ್ಲೇಷಾಲಂಕಾರದಿಂದ ತತ್ತ್ವವನ್ನು ಕಾಣಿಸಿದೆ:

ರಾಜಯೋಗಂ ವಿನಾ ಪೃಥ್ವೀ, ರಾಜಯೋಗಂ ವಿನಾ ನಿಶಾ| 

ರಾಜಯೋಗಂ ವಿನಾ ಮುದ್ರಾ - ವಿಚಿತ್ರಾಪಿ ನ ಶೋಭತೇ!||

ರಾಜಯೋಗವೆಂದರೇನು? ಇಷ್ಟೊಂದು ಕೊಂಡಾಡಲ್ಪಡುವ ಈ ರಾಜಯೋಗವೆಂದರೇನು? ಯೋಗಿರಾಜರಾದ ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ, "ಪೂರ್ಣ-ನಾದದಲ್ಲಿ ಮನಸ್ಸಿನ ಐಕ್ಯವು ರಾಜಯೋಗವೆಂಬ ಹೆಸರನ್ನು ಪಡೆಯುತ್ತದೆ."

ಇಲ್ಲಿ ಹೇಳಿರುವ ನಾದಕ್ಕೆ ಅಂತರ್ನಾದ, ಅನಾಹತನಾದ – ಎಂಬ ಹೆಸರುಗಳೂ ಉಂಟು. ಆ ನಾದದೊಂದಿಗಿನ ಮನೋವಿಲಯದ ಸ್ಥಿತಿಯೇ ಅಂತರ್ಜ್ಯೋತಿಯೆನಿಸುವ ವಿಷ್ಣುಪದಕ್ಕೇರಿಸುವಂತಹುದು. ಹೀಗಾಗಿ, ಈ ರಾಜಯೋಗವು ಯೋಗದ ಪರಾಕಾಷ್ಠೆ. ರಾಜ ಎಂಬ ಪದವಾದರೂ ಮೂಲತಃ ಬೆಳಕನ್ನೇ ಹೇಳುವುದು: ರಾಜೃ ದೀಪ್ತೌ. ಯೋಗವೆಂದರೆ ಸೇರುವಿಕೆ.

ಇಂದು ಯೋಗವೆಂದರೆ ಕೇವಲ ನಾನಾ ಆಸನ-ಭಂಗಿಗಳಲ್ಲಿ ಪರಿಣತಿ, ಬಗೆಬಗೆಯಾಗಿ ಉಸಿರುಕಟ್ಟುವುದು – ಇಷ್ಟಕ್ಕೇ ನಿಂತಿದೆ. ಇವೆಲ್ಲಾ ಎಷ್ಟೇ ಅದ್ಬುತವೆನಿಸುವಂತಿದ್ದರೂ ರಾಜಯೋಗವಿದ್ದಾಗಲೇ ಇವಕ್ಕೆ ಶೋಭೆ, ಇಲ್ಲದಿದ್ದರೆ ಇಲ್ಲ – ಎನ್ನುವುದನ್ನೇ ವಿಚಿತ್ರಾಪಿ ನ ಶೋಭತೇ ಎಂದಿರುವುದು:

ಬರೀ ಬೆಡಗಾದರೆ ಸಾಲದು, ಬೆಳಕಿನಲ್ಲಿ ಸೇರ್ಪಡೆಯಿರಬೇಕು.

ಸೂಚನೆ: 20/06//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.


Monday, June 15, 2026

ವ್ಯಾಸ ವೀಕ್ಷಿತ 191 (Vyaasa Vikshita191)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಅರ್ಜುನನ ಉತ್ತರದಿಗ್-ವಿಜಯ-ಸಮಾಪ್ತಿ; ಭೀಮನ ಪೂರ್ವದಿಗ್-ವಿಜಯಾರಂಭ

ಆಮೇಲೆ ಉತ್ತರಕುರು-ವರ್ಷದೇಶವನ್ನು ಕಂಡವನೇ ಅದನ್ನು ಜಯಿಸಬೇಕೆಂದುಕೊಂಡನು, ಅರ್ಜುನ. ಅಲ್ಲಿದ್ದ ದ್ವಾರಪಾಲಕರು ಮಹಾಕಾಯರು,  ಮಹಾಬಲರು. ಆದರೂ ಮಹಾವೀರ್ಯನಾದ ಆ ಅರ್ಜುನನನ್ನು ಕಂಡು ಹರ್ಷದಿಂದ ಹೀಗೆ ಹೇಳಿದರು:

"ಅಯ್ಯಾ ಪಾರ್ಥನೇ, ಈ ಪುರವನ್ನು ನೀನು ಜಯಿಸಲಾರೆ. ಭದ್ರನೇ, ನೀನಿಲ್ಲಿಯವರೆಗೆ ಬಂದೆಯಲ್ಲಾ, ಅಷ್ಟೇ ಸಾಕು. ಈ ನಗರಕ್ಕೆ ಯಾವನು ಪ್ರವೇಶಮಾಡುವನೋ ಆತನು ನರನಾಗಿ ಉಳಿಯನು. ನೀನು ಸಾಕಷ್ಟು ವಿಜಯವನ್ನು ಸಾಧಿಸಿದ್ದೀಯೇ. ನಿನ್ನ ವಿಷಯದಲ್ಲಿ ನಾವು ಸಂತುಷ್ಟರಾಗಿದ್ದೇವೆ. ಇಲ್ಲಿ ನಿನಗೆ ಜಯಿಸಲು ಏನೂ ಇಲ್ಲ. ಇಲ್ಲಿ ಒಳಗೆ ಪ್ರವೇಶಿಸಿದರೂ ನೀನು ಏನನ್ನೂ ಕಾಣಲಾರೆ ಕೂಡ. ಮನುಷ್ಯ-ಶರೀರವುಳ್ಳವರಿಗೆ ಇಲ್ಲಿ ಏನನ್ನೂ ಕಾಣಲೂ ಆಗದು. ಬದಲಾಗಿ, ನೀನಿಲ್ಲೇನನ್ನಾದರೂ ಮಾಡಬೇಕೆಂದು ಇಷ್ಟಪಟ್ಟಿದ್ದರೆ, ಅದನ್ನು ನಮಗೆ ತಿಳಿಸು. ನೀನು ಹೇಳಿದ ಮಾತ್ರಕ್ಕೇ ನಾವದನ್ನು ಮಾಡಿಮುಗಿಸುವೆವು" ಎಂದರು.

ಅವರು ಹೇಳಿದುದಕ್ಕೆ ನಗುತ್ತಾ ಅರ್ಜುನನು ಹೀಗೆ ಹೇಳಿದನು: ನನ್ನ ಸೋದರನಾದ ಧರ್ಮರಾಜನು ಸಮ್ರಾಟ್ ಆಗಬೇಕು - ಎಂಬುದನ್ನು ಬಯಸುವವನು ನಾನು. ಇಲ್ಲಿ ಮನುಷ್ಯರಿಗೆ ಅಸ್ಪದವಿಲ್ಲವೆನ್ನುವುದಾದರೆ ನಾನು ಪ್ರವೇಶ ಮಾಡುವುದಿಲ್ಲ. ಯುಧಿಷ್ಠಿರನಿಗಾಗಿ ನೀವು ಒಂದಿಷ್ಟು ಕರವನ್ನು ಕೊಡಬೇಕಲ್ಲಾ? ಅಷ್ಟಾದರಾಯಿತು" ಎಂದನು.

ದಿವ್ಯ-ವಸ್ತ್ರಗಳು, ದಿವ್ಯಾಭರಣಗಳು, ರೇಷ್ಮೆ-ವಸ್ತ್ರಗಳು, ಹಾಗೂ ಮೃಗ-ಚರ್ಮ – ಇವುಗಳನ್ನು ಆಗ ಅವರು ಕರರೂಪವಾಗಿ ಇತ್ತರು.

ಅಂತೂ ಈ ಎಲ್ಲ ಪ್ರಕಾರಗಳಿಂದ ಅರ್ಜುನನು ಉತ್ತರ ದಿಕ್ಕನ್ನು ಗೆದ್ದವನಾದನು. ಅದಕ್ಕಾಗಿ ಅನೇಕ ಕ್ಷತ್ರಿಯರೊಂದಿಗೂ ದಸ್ಯುಗಳೊಂದಿಗೂ ಹಲವಾರು ಸಂಗ್ರಾಮಗಳನ್ನು ನಡೆಸಬೇಕಾಯಿತು.

ಆ ರಾಜರನ್ನು ಜಯಿಸಿದವನೇ ಅವರಿಂದ ಕರವನ್ನೂ ಧನವನ್ನೂ ವಸೂಲಿಮಾಡಿದನು. ನಾನಾವಿಧವಾದ ರತ್ನಗಳನ್ನು ಪಡೆದುದಲ್ಲದೆ, ವರ್ಣಗಳ ಕುದುರೆಗಳನ್ನೂ ಪಡೆದನು. ಅವೆಲ್ಲವೂ ವಾಯುವೇಗವುಳ್ಳವುಗಳೇ ಸರಿ. ಮಹತ್ತಾದ ಚತುರಂಗ-ಸೇನೆಯೊಂದಿಗೆ ವೀರನಾದ ಅರ್ಜುನನು ಮತ್ತೆ ಇಂದ್ರಪ್ರಸ್ಥವೆಂಬ ತನ್ನ ಶ್ರೇಷ್ಠನಗರಿಗೆ ಹಿಂದಿರುಗಿದನು.

ಇಂದ್ರಪ್ರಸ್ಥಕ್ಕೆ ಬಂದವನೇ, ಆ ಸಮಸ್ತ ಐಶ್ವರ್ಯವನ್ನೂ ವಾಹನ-ಸಮೇತವಾಗಿ ಧರ್ಮರಾಜನಿಗೆ ಒಪ್ಪಿಸಿದನು. ಹಾಗೂ ಆತನ ಅನುಮತಿಯನ್ನು ಪಡೆದು, ತನ್ನ ಆವಾಸಕ್ಕೆ ತೆರಳಿದನು.

ಇತ್ತ ಪರಾಕ್ರಮಿಯಾದ ಭೀಮಸೇನನೂ ಧರ್ಮರಾಜನಿಂದ ಅನುಮತಿಯನ್ನು ಪಡೆದು ಪೂರ್ವದಿಕ್ಕಿಗೆ ಹೊರಟಿದ್ದನು. ಶತ್ರು-ರಾಷ್ಟ್ರಗಳನ್ನು ಮರ್ದಿಸುವ ಸೈನ್ಯ-ಸಮೂಹವು ಆತನೊಂದಿಗಿತ್ತು. ಹಸ್ತಿ (ಎಂದರೆ ಆನೆ), ಹಾಗೂ ಅಶ್ವ ಮತ್ತು ರಥ - ಇವುಗಳೊಂದಿಗೆ ಸುಸಜ್ಜಿತನಾಗಿದ್ದ ಆತನು, ಶತ್ರುಗಳಿಗೆ ಶೋಕವನ್ನು ಹೆಚ್ಚಿಸುವವನೇ ಆಗಿದ್ದನು; ಅಂತಹ ಭರತವಂಶದ ಶ್ರೇಷ್ಠ-ಕ್ಷತ್ರಿಯನೇ ಆಗಿದ್ದನು.

ಭೀಮನು ಮೊಟ್ಟಮೊದಲು ಹೋದದ್ದು ಪಂಚಾಲ-ದೇಶಕ್ಕೆ. ಅಲ್ಲಿ ಯುದ್ಧವನ್ನು ಪ್ರಸ್ತಾವಿಸುವುದರ ಬದಲು ಬಗೆಬಗೆಯಾದ ಸಾಂತ್ವನದ ಮಾತುಗಳನ್ನಾಡಿದನು, ಹಾಗೂ ಅವರು ತನ್ನ ಕಡೆಯವರಾಗುವಂತೆ ಮಾಡಿಕೊಂಡನು. ಆಮೇಲೆ ಗಂಡಕ-ದೇಶ, ವಿದೇಹ-ರಾಜ್ಯಗಳನ್ನು ಸ್ವಲ್ಪವೇ ಕಾಲದಲ್ಲಿ ಜಯಿಸಿದನು. ಆದರೆ ದರ್ಶಾರ್ಣ-ದೇಶದ ಅಧಿಪತಿಯಾದ ಸುಧರ್ಮನೊಂದಿಗೆ ಘೋರಯುದ್ಧವೇ ಆಯಿತು. ಸುಧರ್ಮನ ಪರಾಕ್ರಮವನ್ನು ಕಂಡು ಸಂತೋಷಗೊಂಡ ಭೀಮನು ಆತನನ್ನು ತನ್ನ ಅಧಿಸೇನಾಪತಿಯನ್ನಾಗಿ ಮಾಡಿಕೊಂಡನು.

ಮತ್ತು ಪೂರ್ವದತ್ತ ಸಾಗಿ ಅಶ್ವಮೇಧ-ದೇಶದ ರಾಜನಾದ ರೋಚಮಾನನನ್ನು ಸೋಲಿಸಿದನು. ಹೀಗೆ ಪೂರ್ವದೇಶದ ಮೇಲೆ ವಿಜಯವನ್ನು ಸಾಧಿಸಿ, ಅದರ ದಕ್ಷಿಣದ ಪುಲಿಂದ-ರಾಜ್ಯವನ್ನು ಮುತ್ತಿ, ಅಲ್ಲಿಯ ಸುಕುಮಾರ ಹಾಗೂ ಸುಮಿತ್ರರೆಂಬ ರಾಜರನ್ನು ತನ್ನ ವಶಕ್ಕೆ ತಂದುಕೊಂಡನು, ಭೀಮ. 

ಸೂಚನೆ : 14/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 70 (Prasnottara Ratnamalike 70)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಮನುಷ್ಯ ಬಹಳ ಹಗುರವಾಗುವುದು ಯಾವಾಗ?

ಅಧರ್ಮರಲ್ಲಿ ಯಾಚನೆ ಮಾಡಿದಾಗ.


ಮನುಷ್ಯ ಹಗುರವಾಗುವುದು ಎಂದರೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು ಅಥವಾ ತನಗೆ ಇರುವ ಮೌಲ್ಯವನ್ನು ಕಳೆದುಕೊಳ್ಳುವುದು ಎಂದರ್ಥ. ಅಂದರೆ ತನಗೆ ಬೇಕಿರುವ ಯಾವುದೋ ಒಂದು ವಸ್ತುವನ್ನು ಒಬ್ಬ ಅಧರ್ಮಿಯಲ್ಲಿ ಅಥವಾ ದುಷ್ಟನಲ್ಲಿ ಬೇಡಿ ಪಡೆದುಕೊಂಡರೆ ಆಗ ಪಡೆದುಕೊಂಡವನ ವ್ಯಕ್ತಿತ್ವವು ನಾಶವಾಗುತ್ತದೆ. ಆ ಮನುಷ್ಯ ಹಗುರವಾಗುತ್ತಾನೆ ಎಂಬ ಅರ್ಥವನ್ನು ಈ ಉತ್ತರ ನೀಡುತ್ತಿದೆ.


ಇಲ್ಲಿ ನಾವು ಗಮನಿಸಬೇಕಾದ ವಿಷಯ ಇಷ್ಟು - ಮಾಡಿದ ಯಾಚನೆಯಿಂದ ಹೇಗೆ ವ್ಯಕ್ತಿ ಹಗುರವಾಗುತ್ತಾನೆ ಎಂಬುದನ್ನು. ನಾವು ನಮಗೆ ಬೇಕಾದ ವಸ್ತುವನ್ನು ಇನ್ನೊಬ್ಬರಿಂದ ಪಡೆಯಬೇಕು; ಅದಕ್ಕೆ ಯಾಚನೆ ಅಥವಾ ಭಿಕ್ಷೆ ಎಂಬುದಾಗಿ ಕರೆಯಲಾಗಿದೆ. ಹಿಂದಿನ ಕಾಲದಲ್ಲಿ ಭಿಕ್ಷೆಯನ್ನು ಬೇಡುವ ಪದ್ಧತಿ ಇತ್ತು. ಭಿಕ್ಷೆಯನ್ನು ಬೇಡುವಾಗ ಒಳ್ಳೆಯ ಗೃಹಸ್ಥರಲ್ಲಿ ಬೇಡಬೇಕು. ಒಂದು ವೇಳೆ ಆ ಗೃಹಸ್ಥನು ಒಳ್ಳೆಯವನಾಗದಿದ್ದರೆ ಅಥವಾ ಅವನಲ್ಲಿ ದೋಷವಿದ್ದರೆ ಆಗ ಭಿಕ್ಷೆಯನ್ನು ಬೇಡಬಾರದು ಎಂಬುದಾಗಿ ನಿಯಮವಿದೆ. ಏಕೆಂದರೆ ಆ ಗೃಹಸ್ಥನಲ್ಲಿರುವ ಅಥವಾ ಆ ವ್ಯಕ್ತಿಯಲ್ಲಿರುವ ದೋಷವು ಅವನಿಂದ ಪಡೆದ ವಸ್ತುವಿನ ಮೂಲಕ ಬೇಡಿದವನಿಗೆ ಸಂಕ್ರಾಂತವಾಗುತ್ತದೆ. ಆಗ ಬೇಡಿದವನು ಕೂಡ ಆ ದೋಷವನ್ನು ಉಣ್ಣಬೇಕಾಗುತ್ತದೆ. ಹಾಗಾಗಿ ಯಾಚನೆಯನ್ನು ಎಂತಹ ವ್ಯಕ್ತಿಯಲ್ಲಿ ಮಾಡಬೇಕು ಎಂಬುದು ಗಂಭೀರವಾದದ್ದು. ಕಾಳಿದಾಸನು ಮೇಘದೂತ ಎಂಬ ಕಾವ್ಯದಲ್ಲಿ ಒಂದು ಮಾತನ್ನು ಹೇಳುತ್ತಾನೆ - “ಯಾಞಚ್ನಾ  ಮೋಘಾ ವರಮ್ ಅಧಿಗುಣೇ ನಾಧಮೇ ಲಬ್ಧಕಾಮಾ” ಎಂದು. ಅಂದರೆ ಕೆಟ್ಟವರಲ್ಲಿ ಕೇಳಿದ್ದು ಸಿಗುವುದಕ್ಕಿಂತ ಒಳ್ಳೆಯವರಲ್ಲಿ ಕೇಳಿದ್ದು ಸಿಗದಿರುವುದೇ ಲೇಸು ಎಂದು. ಕೇಳಬೇಕಾದದ್ದು ಶ್ರೇಷ್ಠರಲ್ಲಿ. ಅಪೇಕ್ಷಿತವಾದ ಪದಾರ್ಥವನ್ನು ಅಂಥವರಿಂದಲೇ ಪಡೆಯಬೇಕು. ಏಕೆಂದರೆ ಪದಾರ್ಥಗಳು ದೋಷವನ್ನು ಅಥವಾ ಗುಣವನ್ನು ದಾಟಿಸುತ್ತವೆ ಎಂಬ ಶ್ರೀರಂಗ ಮಹಾಗುರುಗಳ ಮಾತಿನ ಸಾರವನ್ನು ನಾವಿಲ್ಲಿ ಸ್ಮರಿಸಿಕೊಳ್ಳಬೇಕು.

ಯಾಚನೆ ಅಥವಾ ಭಿಕ್ಷೆ ಎಂಬ ವ್ಯಾಪಾರದಲ್ಲಿ ಪದಾರ್ಥವು ಒಬ್ಬರಿಂದ ಒಬ್ಬರಿಗೆ ಬದಲಿಸಲ್ಪಡುತ್ತದೆ. ಆಗ ಆ ಪದಾರ್ಥದ ಮೂಲಕ ಅವನ ಗುಣದೋಷಗಳೂ ಕೂಡ ಸಂಕ್ರಾಂತವಾಗುತ್ತವೆ. ಇದೇ ನೇರದಲ್ಲಿ ದಾನ ಎಂಬ ಅತ್ಯಂತ ಪುಣ್ಯತಮವಾದ ಕಾರ್ಯವು ಕೂಡ ನಮ್ಮ ಸಂಪ್ರದಾಯದಲ್ಲಿ ಬಂದಿದೆ ಕೂಡ.  ದಾನ ಮಾಡುವುದರಿಂದ ನಮ್ಮ ಪಾಪವು ಪರಿಹಾರವಾಗುತ್ತದೆ ಎಂಬುದಾಗಿ ಹೇಳಲಾಗಿದೆ. ಅಂದರೆ ಆ ಪಾಪವು ಆ ವಸ್ತುವಿನ ಮೂಲಕ ದಾಟಿದಾಗ ಮಾತ್ರ ಅವನು ನಿಷ್ಪಾಪಿಯಾಗುತ್ತಾನೆ!. ಆದ್ದರಿಂದ ವಸ್ತುವನ್ನು ಪಡೆಯುವಾಗ ಈ ಹಿನ್ನೆಲೆಯಲ್ಲಿ ಈ ಮಾರ್ಮಿಕವಾದ ವಿಷಯವನ್ನು ಅರ್ಥ ಮಾಡಿಕೊಂಡು ಇರಬೇಕು ಎಂಬ ತತ್ವ ಇಲ್ಲಿ ಅಡಗಿದೆ. ಸಂಪ್ರದಾಯದಲ್ಲಿ ಗೃಹಸ್ಥರಿಗೆ ಮಾತ್ರ ಸಂಪಾದಿಸಲು ಅರ್ಹತೆ ಇದೆ. ಉಳಿದ ಆಶ್ರಮಗಳಾದ ಬ್ರಹ್ಮಚಾರಿ ಮತ್ತು ಸನ್ಯಾಸಿಗಳಿಗೆ ಸಂಪಾದಿಸಿದವರ ಸಂಪತ್ತನ್ನು ಅಥವಾ ಪದಾರ್ಥವನ್ನು ವಿನಿಯೋಗಿಸುವುದರ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಈ ಭಿಕ್ಷೆ ಅಥವಾ ಯಾಚನೆ ಎಂಬ ಉತ್ಕೃಷ್ಟವಾದ ಪದ್ಧತಿ ಬಂದಿದೆ. ಹಾಗಾಗಿ ಈ ಯಾಚನೆಯಲ್ಲಿ ಈ ಒಂದು ಗಂಭೀರವಾದ ವಿಷಯವನ್ನು ಮನನ ಮಾಡಿಕೊಂಡಿರಬೇಕು ಎಂಬ ಸಂದೇಶ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ.


ಸೂಚನೆ : 14
/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, June 9, 2026

ವ್ಯಾಸ ವೀಕ್ಷಿತ 191 ನಗರಗಳನ್ನು ಜಯಿಸಿ ತುರಗ-ರತ್ನಗಳನ್ನೂ ತಂದ ರಣಧೀರ(Vyaasa Vikshita191)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಆಗ ತನ್ನ ಚತುರಂಗಬಲದೊಂದಿಗೆ ತ್ವರಿತವಾಗಿ ತನ್ನ ನಗರದಿಂದಾಚೆ ಬಂದ ಬೃಹಂತನು ಫಾಲ್ಗುನನನ್ನು, ಎಂದರೆ ಅರ್ಜುನನನ್ನು, ಕಾಳಗದಲ್ಲಿ ಎದುರಿಸಿದನು.

ಹೀಗಾಗಿ ಧನಂಜಯ-ಬೃಹಂತರ ನಡುವೆ ಮಹತ್ತಾದ ಸಂಗರ(ಯುದ್ಧ)ವೇ ಆಯಿತು. ಈ ಪಾಂಡವನ ವಿಕ್ರಮವನ್ನು ಆ ಬೃಹಂತನಾದರೂ ಅದೆಂತು ತಡೆದಾನು?

ಅರ್ಜುನನನ್ನು ಸೋಲಿಸಲಾಗದೆಂಬುದನ್ನು ಮನಗಂಡವನೇ, ಆ ವೀರನಾದ ಪರ್ವತ-ರಾಜನಾದ ಬೃಹಂತನು ಯುದ್ಧವನ್ನು ತೊರೆದು ರತ್ನಗಳೊಂದಿಗೆ ಆಗಮಿಸಿದನು.

ಇತ್ತ ಅರ್ಜುನನೂ ಆ ರಾಜ್ಯವನ್ನು ಆತನಿಗೇ ಒಪ್ಪಿಸಿ, ಮತ್ತೆ ಉಲೂಕ-ರಾಜನನ್ನು ಜೊತೆಮಾಡಿಕೊಂಡು  ಸೇನಾಬಿಂದು ಎಂಬ ರಾಜನ ಮೇಲೆ ದಂಡೆತ್ತಿ ಹೋದನು. ಆತನನ್ನು ರಾಜ್ಯದಿಂದ ಚ್ಯುತಿಗೊಳಿಸಲು ಅರ್ಜುನನಿಗೆ ಹೆಚ್ಚು ಸಮಯವು ಬೇಕಾಗಲಿಲ್ಲ. ಆಮೇಲೆ ಮೋದಾಪುರ ಮೊದಲಾದ ಹಲವು ರಾಜ್ಯಗಳನ್ನು ಗೆದ್ದನು.

ಬಳಿಕ ಸೇನಾಬಿಂದುವಿನ ರಾಜಧಾನಿಗೇ ಬಂದು, ಚತುರಂಗಬಲವನ್ನು ಮತ್ತೆ ಜೋಡಿಸಿಕೊಂಡು, ಪೌರವ-ರಾಜನಾದ ವಿಷ್ವಗಶ್ವನ ಮೇಲೆ ದಂಡೆತ್ತಿದನು. ಅಲ್ಲಿನ ಪರ್ವತಪ್ರದೇಶದ ರಾಜರುಗಳನ್ನು ಸೋಲಿಸಿ ಅವರನ್ನು ವಶಪಡಿಸಿಕೊಂಡನು.

ಆ ಪರ್ವತ-ಪ್ರಾಂತಗಳಲ್ಲಿ ಉತ್ಸವ-ಸಂಕೇತ ಎಂಬ ಹೆಸರಿನ ಏಳು ದಸ್ಯುಗಳು, ಎಂದರೆ ಧರ್ಮದ್ವೇಷಿಗಳಾದ ಚೋರರು, ಇದ್ದರು. ಅವರನ್ನು ಜಯಿಸಿದ್ದೂ ಆಯಿತು. ಆಮೇಲೆ ಕಾಶ್ಮೀರದಲ್ಲಿ ಹತ್ತು ಮಂಡಲಗಳನ್ನು ಮಾಡಿಕೊಂಡಿದ್ದ ಕ್ಷತ್ರಿಯ-ವೀರರನ್ನೂ ಲೋಹಿತ-ರಾಜನನ್ನೂ ಅರ್ಜುನನು ಜಯಿಸಿದನು.

ಆಮೇಲೆ ತ್ರಿಗರ್ತರು, ದಾರ್ವರು, ಕೋಕನದರು ಮುಂತಾದ ಅನೇಕ ಕ್ಷತ್ರಿಯರು ಎಲ್ಲೆಡೆಯಿಂದಲೂ ಬಂದು ತಾವೇ ಶರಣಾದರು.

ರಮ್ಯವಾದ ಅಭಿಸಾರಿಯೆಂಬ ಪುರಿಯನ್ನು ಅರ್ಜುನನು ಗೆದ್ದನು. ಉರಗವೆಂಬ ರಾಜ್ಯದ ಒಡೆಯನಾದ ರೋಚಮಾನ ಎಂಬಾತನನ್ನು ಅರ್ಜುನನು ಜಯಿಸಿದನು. ಚಿತ್ರಾಯುಧನೆಂಬ ರಾಜನಿಂದ ರಕ್ಷಿತವಾಗಿದ ಸಿಂಹಪುರವನ್ನು ಸೈನ್ಯಬಲದಿಂದ ಯುದ್ಧದಲ್ಲಿ ಮೆಟ್ಟಿದನು. ಆಮೇಲೆ ಸುಹ್ಮದೇಶ-ಚೋಲದೇಶಗಳನ್ನು ಸೈನ್ಯಸಹಿತನಾಗಿ ಅರ್ಜುನನು ಮಥನ ಮಾಡಿಬಿಟ್ಟನು. ಹಾಗೆಯೇ ಬಾಹ್ಲೀಕ-ದರದ-ಕಾಂಭೋಜಗಳ ರಾಜರನ್ನು ಸೋಲಿಸಿದನು. ಈಶಾನ್ಯದಲ್ಲಿ ಕೆಲವು ಪಾಳೆಯಗಾರರಿದ್ದರು; ಅವರನ್ನೂ ಗೆದ್ದನು. ಆಮೇಲೆ ಲೋಹರು-ಪರಮಕಾಂಬೋಜರು-ಉತ್ತರ ಋಷಿಕರು - ಇವರುಗಳನ್ನೆಲ್ಲ ಸೋಲಿಸಿದನು.

ಇವುಗಳಲ್ಲಿ ಬಹಳ ಭಯಂಕರವಾಗಿದ್ದದ್ದೆಂದರೆ ಋಷಿಕರೊಂದಿಗಿನ ಯುದ್ಧ. ಅವರನ್ನು ಅಡಗಿಸಿ, ಗಿಳಿಗಳ ಹೊಟ್ಟೆಯ ಬಣ್ಣವನ್ನು ಹೊಂದಿದ್ದ ಎಂಟು ಕುದುರೆಗಳನ್ನು ಅಲ್ಲಿಂದ ತಂದನು. ಹಾಗೆಯೇ ಕರಕ್ಕೋಸ್ಕರವಾಗಿ ಅನೇಕ ವೇಗಶಾಲಿ ಕುದುರೆಗಳನ್ನು ಪಡೆದನು. ಅವು ನವಿಲಿನ ಬಣ್ಣವನ್ನು ಹೊಂದಿದ್ದವು, ಉತ್ತಮವಾದವು.

ಆಮೇಲೆ ಹಿಮವಂತ-ನಿಷ್ಕುಟಗಳ ರಾಜರುಗಳನ್ನು ಗೆದ್ದನು. ಬಳಿಕ ಶ್ವೇತ-ಪರ್ವತಕ್ಕೆ ಹೋಗಿ ಬಿಡಾರ ಹೂಡಿದನು. ಶ್ವೇತ-ಪರ್ವತವನ್ನು ಜಯಿಸಿದ ಬಳಿಕ, ದ್ರುಮಪುತ್ರನೆಂಬ ರಾಜನ ದೇಶವಾದ ಕಿಂಪುರುಷವನ್ನು ಜಯಿಸಿದನು. ಅಲ್ಲಾದ ಯುದ್ಧವು ಘೋರವೇ ಆಗಿತ್ತು. ಕರ ತೆರಬೇಕೆಂಬ ನಿಬಂಧನೆಯ ಮೇಲೆ ಆ ರಾಜ್ಯವನ್ನು ಅವನಿಗೇ ಬಿಟ್ಟುಕೊಟ್ಟನು.

ಆಮೇಲೆ ಗುಹ್ಯಕರಿಂದ ರಕ್ಷಿತವಾಗಿದ್ದ ಹಾಟಕ-ದೇಶವನ್ನು ಗೆದ್ದನು. ಅಲ್ಲಿ ಯುದ್ಧವು ಬೇಕಾಗಿರಲಿಲ್ಲ. ಸಾಮ-ಮಾರ್ಗದಲ್ಲಿಯೇ ಅವರನ್ನು ವಶಪಡಿಸಿಕೊಂಡನು.

ಅಲ್ಲಿಂದ ಮುಂದಕ್ಕೆ ಹೋದಾಗ ಸಿಕ್ಕದ್ದು ಶ್ರೇಷ್ಠವಾದ ಮಾನಸ-ಸರೋವರ. ಅದಲ್ಲದೆ, ಅಲ್ಲಿ ಅನೇಕ ಋಷಿ-ಕುಲ್ಯೆಗಳೂ ಇದ್ದವು. ಎಂದರೆ ಋಷಿಗಳ ಹೆಸರುಗಳಿಂದ ಪ್ರಸಿದ್ಧವಾದ ನಾಲೆಗಳು. ಅಲ್ಲೂ ಗಂಧರ್ವರಕ್ಷಿತ-ಪ್ರದೇಶಗಳನ್ನು ಗೆದ್ದು, ಅವರಿಂದ ತಿತ್ತಿರ, ಕಲ್ಮಾಷ, ಹಾಗೂ ಮಂಡೂಕ ಎಂಬ ಹೆಸರಿನ ಶ್ರೇಷ್ಠವಾದ ಕುದುರೆಗಳನ್ನು ಕರರೂಪದಲ್ಲಿ ಪಡೆದನು.


ಸೂಚನೆ : 7/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 69 (Prasnottara Ratnamalike 69)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

Screenshot 2026-06-09 195055.png

ಪ್ರಶ್ನೆ - ೬೯. ಮನುಷ್ಯ ಯಾವಾಗ ಶೋಕಿಸಬೇಕಿಲ್ಲ?

ವಿನೀತಳಾದ ಪತ್ನಿ ಇರುವಾಗ ಮತ್ತು ಸನ್ಮಾರ್ಗದಲ್ಲಿ ವೈಭವವಿದ್ದಾಗ.

ಈ ಪ್ರಶ್ನೋತ್ತರದಲ್ಲಿ ಕಾರ್ಯಕಾರಣಭಾವವಿದೆ. ಲಕ್ಷ್ಮಿಯು ಕಾರ್ಯವಾದರೆ ವಿನೀತಳಾದ ಪತ್ನಿ ಮತ್ತು ಸಂಪತ್ತು ಕಾರಣವಾಗಿದೆ. ಈ ಪ್ರಶ್ನೋತ್ತರದಲ್ಲಿ ಗೃಹಸ್ಥನಿಗೆ ನೆಮ್ಮದಿ ಯಾವಾಗ ಸಿಗುತ್ತದೆ? ಎಂಬ ವಿಷಯ ಇಲ್ಲಿ ಪ್ರಸ್ತಾಪಿತಗೊಂಡಿದೆ. ಅಂದರೆ ಗೃಹಸ್ಥನಿಗೆ ತಾನೇ ಪತ್ನಿ ಇರಬೇಕಾದದ್ದು! ಮತ್ತು ಆತನು ತಾನೇ ವೈಭವವನ್ನು - ಸಂಪತ್ತನ್ನು ಪಡೆದು, ಅದನ್ನು ವಿನಿಯೋಗಿಸುವವ. ಗೃಹಸ್ಥನು ವಿನಯದಿಂದ ಕೂಡಿರುವ ಪತ್ನಿ ಮತ್ತು ತಾನು ಸಂಪಾದಿಸಿದ ಸಂಪತ್ತು ಸನ್ಮಾರ್ಗದಲ್ಲಿ ಬಳಕೆಯಾದಾಗ ಅವನು ಶೋಕಿಸುವ ಅವಶ್ಯಕತೆ ಇಲ್ಲ ಎಂಬುದು ಇದರ ತಾತ್ಪರ್ಯ. ಅಂದರೆ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಇದ್ದರೆ ಅದು ದುಃಖಕ್ಕೆ ಕಾರಣ ಎಂಬುದು ಅರ್ಥ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬುದಾಗಿ ನಾಲ್ಕು ಬಗೆಯ ಆಶ್ರಮ ಜೀವನಗಳಲ್ಲಿ ಗೃಹಸ್ಥನು ಮಾತ್ರ ಸಂಪತ್ತನ್ನು ಸಂಪಾದಿಸಬೇಕು; ಅದನ್ನು ಬ್ರಹ್ಮಚಾರಿ ಮತ್ತು ಸನ್ಯಾಸಿ ಆಶ್ರಮಗಳನ್ನು ಪರಿಪಾಲಿಸಬೇಕಾದದ್ದು ಅವನ ಕರ್ತವ್ಯವಾಗಿದೆ. ಗೃಹಸ್ಥಾಶ್ರಮವೇ ಸಂಪತ್ತನ್ನು ಸಂಪಾದಿಸಲು ಮತ್ತು ಅದನ್ನು ವಿನಿಯೋಗಿಸಲೂ ಕೂಡ ಅರ್ಹತೆಯಿಂದ ಕೂಡಿರುತ್ತದೆ. ಆದರೆ ಇದನ್ನು ವಿನಯೋಗಿಸಬೇಕಾದರೆ ಗೃಹಸ್ಥನ ಜೊತೆಗೂಡಿದ ಗೃಹಿಣಿಯ ಪಾತ್ರವೂ ಅತ್ಯಂತ ಪ್ರಮುಖವಾದದ್ದು. “ಗೃಹಿಣೀ ಗೃಹಮುಚ್ಚ್ಯತೇ” ಗೃಹಿಣಿಯನ್ನು ‘ಗೃಹ’ ಎಂಬ ಮಾತನ್ನು ಕೇಳುತ್ತೇವೆ. ಗೃಹಿಣಿಯನ್ನು ಮಂತ್ರಿ ಎಂಬುದಾಗಿಯೂ ಹೇಳಿದ್ದುಂಟು. ಒಬ್ಬ ರಾಜನಾದವನಿಗೆ ಸರಿಯಾದ ಮಂತ್ರಿ ಇದ್ದರೆ ಅವನ ರಾಜ್ಯ ಹೇಗೆ ಸುಂದರವಾಗಿ ಇರುತ್ತದೆಯೋ, ಅಂತೆಯೇ ಮಂತ್ರಿಸ್ಥಾನದಲ್ಲಿರುವ ಗೃಹಿಣಿಯು ಗೃಹಸ್ಥನ ಎಲ್ಲ ರೀತಿಯ ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ನಾಲ್ಕು ಪುರುಷಾರ್ಥಗಳಲ್ಲಿ ಪರಿಪೂರ್ಣವಾಗಿ ತನ್ನ ಸಹಯೋಗಿತ್ವವನ್ನು ಮತ್ತು ಸಹಭಾಗಿತ್ವವನ್ನು ನೀಡಬೇಕಾಗುತ್ತದೆ. ಹಾಗೆ ನೀಡಿದಾಗ ಮಾತ್ರ ಆ ಗೃಹಸ್ಥಜೀವನವು ಧನ್ಯ ಎಂಬುದಾಗಿ ಪರಿಗಣಿತವಾಗುತ್ತದೆ. ಆದ್ದರಿಂದಲೇ ಗಂಡನಾದವನು ತನ್ನ ಜೀವನದಲ್ಲಿ ಯಾವುದನ್ನು ಪರಮಪುರುಷಾರ್ಥಕ್ಕೆ ಅನುಗುಣವಾಗಿ ಮಾಡಬೇಕು ಎಂಬುದಾಗಿ ಅಂದುಕೊಂಡಿರುತ್ತಾನೋ, ಅದಕ್ಕೆ ಸ್ವಲ್ಪವೂ ಚ್ಯುತಿ ಬಾರದ ರೀತಿಯಲ್ಲಿ ಪತ್ನಿಯಾದವಳು ಹೆಜ್ಜೆಗೆ ಗೆಜ್ಜೆಯಂತೆ ಅವನ ಪೂರ್ಣಜೀವನಕ್ಕೆ ಸಹಕರಿಸಬೇಕಾಗುತ್ತದೆ. ಆಗ ಅವಳು ತನ್ನ ಪತಿಗೆ ವಿನೀತಳು ಎಂದರ್ಥ. ಮತ್ತೊಂದು ಅರ್ಥವೆಂದರೆ ಒಬ್ಬ ದುರ್ಮಾರ್ಗಗಾಮಿಯಾದ ಪತಿಯನ್ನು ಕೂಡ ಸನ್ಮಾರ್ಗದಲ್ಲಿ ನಡೆಸಿಕೊಂಡು ಬರುವ ಸಾಮರ್ಥ್ಯ ಮತ್ತು ಕರ್ತವ್ಯ ಇವೆರಡು ಕೂಡ ಗೃಹಿಣಿಯಾದವಳಿಗೆ ಇರುತ್ತದೆ ಎಂಬ ವಿಷಯ ಇಲ್ಲಿ ಧ್ವನಿತವಾಗುತ್ತದೆ. ಈ ನೇರದಲ್ಲಿ ಗೃಹಣಿಯಾದವಳು ಗೃಹಸ್ಥನಿಗೆ ಪರಿಪೂರ್ಣ ಸಹಕಾರವನ್ನು ನೀಡಬೇಕಾಗುತ್ತದೆ. ಆಗ ಆ ಗೃಹಸ್ಥನ ಜೀವನ ಸುಖಮಯ.


ಕಾಳಿದಾಸನು ಹೇಳುವಂತೆ “ಯೌವನೇ ವಿಷಯೈಷಿಣಾಂ” ಯೌವನದಲ್ಲಿ ಮಾತ್ರ ಸಂಪಾದಿಸಬೇಕು. ಆ ಸಂಪಾದನೆಯು ಬ್ರಹ್ಮಚರ್ಯ ಆಶ್ರಮದಲ್ಲಿ ಸಂಪಾದಿಸಿದ ವಿದ್ಯೆಯ ಬಲದಿಂದ ಆಗಿರಬೇಕು. ಯಾವಾಗ ಸಂಪಾದನೆಯು ವಿದ್ಯೆಯಿಂದ ಬರುತ್ತದೆಯೋ, ಆ ಸಂಪಾದನೆಯು ಧರ್ಮಕಾರ್ಯದಲ್ಲಿ ವಿನಿಯೋಗವಾಗುತ್ತದೆ ಎಂಬ ಅರ್ಥದಲ್ಲಿ ಒಂದು ಸುಭಾಷಿತ ಹೀಗೆ ಹೇಳುತ್ತದೆ - “ವಿದ್ಯಾ ದದಾತಿ ವಿನಯಂ ವಿನಯಾತ್ ಯಾತಿ ಪಾತ್ರತಾಮ್। ಪಾತ್ರತ್ವಾತ್ ಧನಮಾಪ್ನೋತಿ ಧನಾತ್ ಧರ್ಮಃ ತತಃ ಸುಖಮ್” ಎಂಬುದಾಗಿ. ಅಂದರೆ ವಿದ್ಯೆಯು ಧನವನ್ನು ಕೊಡುವುದರ ಮೂಲಕ ಧರ್ಮವನ್ನು ಕೊಟ್ಟು ಕೊನೆಗೆ ಆತ್ಯಂತಿಕವಾದ ಸುಖವನ್ನು ಕೊಡಲು ಸಮರ್ಥವಾದದ್ದು. ವಿವೇಕದಿಂದ ಕೂಡಿದ ವಿದ್ಯೆಯು ಸರ್ವಸ್ವವನ್ನೂ ಕೊಡುವುದಾದ್ದರಿಂದ ಇದರ ಬಲದಿಂದ ಬಂದ ಸಂಪತ್ತು ಸನ್ಮಾರ್ಗಗಾಮಿಯಾಗಿಯೇ ಇರುತ್ತದೆ. ಅಲ್ಲಿ ಯಾವುದೇ ರೀತಿಯಾದ ಧರ್ಮಚ್ಯುತಿಗೆ ಅವಕಾಶವಿಲ್ಲ ಎಂಬುದು ಇದರ ತಾತ್ಪರ್ಯ.


ಸೂಚನೆ :  7/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Sunday, June 7, 2026

ಶ್ರೀರಾಮನಿಗೆ ಅಗಸ್ತ್ಯಮುನಿಗಳ ಮಾರ್ಮಿಕ ಸಂಕೇತ (Śriramanige Agastyamunigala Marmika Sanketa)

  
ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)
image.png

ರಾಮಾಯಣದಲ್ಲಿ ಅಗಸ್ತ್ಯಮುನಿಗಳು ಮುಖ್ಯವಾಗಿ ಎರಡು ಪ್ರಸಂಗಗಳಲ್ಲಿ ಕಾಣಿಸಿಕೊಳ್ಳುತ್ತಾರೆ: ಅರಣ್ಯಕಾಂಡದಲ್ಲೊಮ್ಮೆ ಯುದ್ಧಕಾಂಡದಲ್ಲೊಮ್ಮೆ. ಅಗಸ್ತ್ಯರ ಮಾಹಾತ್ಮ್ಯವು ನಮಗೆ ವಾತಾಪಿ-ಇಲ್ವಲರ ಕಥೆಯ ಮೂಲಕ ರಾಮಾಯಣದಲ್ಲೇ ತಿಳಿದುಬರುತ್ತದೆ. ಅಗಸ್ತ್ಯಮುನಿಗಳ ಆಶ್ರಮಕ್ಕೆ ಶ್ರೀರಾಮ-ಸೀತೆ-ಲಕ್ಷ್ಮಣರು ಹೋಗುವುದನ್ನು ನಾವು ಅರಣ್ಯಕಾಂಡದಲ್ಲಿ ನೋಡುತ್ತೇವೆ.

ಅಗಸ್ತ್ಯರೊಂದಿಗೆ ಭೇಟಿ

ವಿರಾಧನೆಂಬ ರಾಕ್ಷಸನ ಸಂಹಾರವಾದ ಬಳಿಕ, ಶ್ರೀರಾಮಾದಿಗಳು ಆ ಸ್ಥಾನವನ್ನು ಬಿಟ್ಟು ಬೇರೆಲ್ಲಿಗಾದರೂ ಹೊರಡೋಣವೆಂದು ನಿಶ್ಚಯಿಸಿದರು. ಹಾಗೇ ಮುಂದೆ ಸಾಗುತ್ತಾ ಅವರು ಅಗಸ್ತ್ಯರ ಆಶ್ರಮಕ್ಕೆ ಭೇಟಿ ನೀಡಿದರು. ಆ ಮಹಾತ್ಮರ ತಪಸ್ಸಿನ ತೇಜಸ್ಸು-ಬಲಗಳೆಂತಹುದು ಎಂದರೆ ಅವರು ಅಲ್ಲಿ ಕಾಲಿಟ್ಟ ಮೇಲೆ ರಾಕ್ಷಸರು ಅತ್ತ ಕಣ್ಣೆತ್ತಿ ನೋಡಲೂ ಅಂಜುತ್ತಿದ್ದರು. ವೈರಕ್ಕೆ ಅಲ್ಲಿ ಸ್ಥಾನವಿಲ್ಲ. ಕ್ರೂರಕರ್ಮಿಗಳು ಅಲ್ಲಿರಲಾರರು. ಸಜ್ಜನರು ಸಂದರ್ಶಿಸುವ ಸ್ಥಾನವಿದಾಗಿದ್ದು, ಶರಣ್ಯರನ್ನು ರಕ್ಷಿಸುವುದೆಂಬ ಖ್ಯಾತಿಯನ್ನು ದಕ್ಷಿಣದಿಕ್ಕಿಗೇ ತಂದುಕೊಟ್ಟಿತು. ಅವರನ್ನು ಭೇಟಿಯಾಗಬೇಕೆಂಬ ತಮ್ಮ ಉದ್ದೇಶವನ್ನು ಲಕ್ಷ್ಮಣನು ಅವರ ಶಿಷ್ಯರಿಗೆ ತಿಳಿಸಿದನು. ಅದನ್ನು ಕೇಳಿ ಅಗಸ್ತ್ಯರಿಗೆ ಬಹಳ ಆನಂದವಾಯಿತು. ರಾಮನ ಬರುವಿಕೆಯನ್ನು ಕಾದಿದ್ದ ತಾಪಸರಲ್ಲಿ ಇವರೂ ಒಬ್ಬರು.

ಮುನಿಗಳ ಆತಿಥ್ಯ

ಅವರ ಅಪ್ಪಣೆಯಂತೆ ರಾಮಾದಿಗಳನ್ನು ಶಿಷ್ಯರು ಒಳಗೆ ಕರೆತರುತ್ತಿದ್ದಂತೆಯೇ ಅಗಸ್ತ್ಯರು ಅವರನ್ನು ಎದುರ್ಗೊಂಡರು. ತಪಸ್ಸಿನ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಮುನಿಗಳಿಗೆ ಆ ಮೂವರೂ ನಮಸ್ಕರಿಸಿದರು. ಆಗ ಅಗಸ್ತ್ಯರು ರಾಮಾದಿಗಳಿಗೆ ಆದರದ ಸತ್ಕಾರವನ್ನು ಮಾಡಿದರು. ರಾಮನು ಪೂಜ್ಯನೂ ಮಾನ್ಯನೂ ಆದ ಪ್ರಿಯ ಅತಿಥಿಯೆಂದರು. ಹಾಗೆಂದು ಹೇಳಿ, ವಿಶ್ವಕರ್ಮನು ನಿರ್ಮಿಸಿದ್ದ ವಿಷ್ಣುವಿನ ಧನುಸ್ಸನ್ನೂ ಎರಡು ಅಕ್ಷಯತೂಣೀರಗಳನ್ನೂ, ಎಂದರೆ ಮಿತಿಯಿಲ್ಲದಷ್ಟು ಬಾಣಗಳನ್ನು ಕೊಡುವ ಬತ್ತಳಿಕೆಗಳನ್ನೂ, ವೈಷ್ಣವವಾದ ಚಿನ್ನದ ಖಡ್ಗವನ್ನೂ ಕೊಟ್ಟರು. ಪತಿಪ್ರೇಮದಿಂದ ರಾಮನನ್ನು ಹಿಂಬಾಲಿಸಿ ಕಾಡಿಗೆ ಬಂದಿರುವ ಸೀತೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ತಾವು ಮೂವರೂ ಆಶ್ರಮವನ್ನು ಕಟ್ಟಿಕೊಂಡು ಇರಲು ಅನುಕೂಲವಾದ ಸ್ಥಳವೊಂದನ್ನು ಸೂಚಿಸಬೇಕೆಂಬುದಾಗಿ, ರಾಘವನು ಮುನಿಗಳಲ್ಲಿ ಕೋರಿಕೆಯನ್ನು ಇಟ್ಟನು. ಆಗ ಅಗಸ್ತ್ಯರು ಸೂಚಿಸಿದ ಜಾಗವೇ ಪಂಚವಟಿ.

ಅವರು ಅಲ್ಲಿ ಹೇಳುವ ಮಾತುಗಳು ಸೂಕ್ಷ್ಮವೂ ಮಾರ್ಮಿಕವೂ ಆಗಿವೆ. ಗೆಡ್ಡೆ-ಗೆಣಸುಗಳೂ, ಮೃಗಗಳೂ ತುಂಬಿರುವ ಸ್ಥಳವದು. ಗೋದಾವರೀ ನದಿಯೂ ಹತ್ತಿರದಲ್ಲೇ ಇದೆ. ರಮ್ಯವಾಗಿರುವ ಆ ಸ್ಥಾನದಲ್ಲಿ ಸೀತೆಯು ಸುಖವಾಗಿರುತ್ತಾಳೆಂದು ಅವರು ತಿಳಿಸಿದರು. ಜೊತೆಗೇ ಅಲ್ಲಿ ಜನಸಂಚಾರವಿಲ್ಲವೆಂದೂ ಆದರೆ ಸೀತೆಯನ್ನು ರಕ್ಷಿಸುವ ಸಾಮರ್ಥ್ಯ ರಾಘವನಿಗಿದೆಯೆಂದೂ ಅವರು ಹೇಳಿದರು. ತದನಂತರ ರಾಮ-ಲಕ್ಷ್ಮಣ-ಸೀತೆಯರು ಮುನಿಗಳ ಪಾದಕ್ಕೆ ವಂದಿಸಿ ಪಂಚವಟಿಗೆ ತೆರಳಿದರು.

ಪಂಚವಟಿಯೇಕೆ ಮುಖ್ಯ?

ಈ ಮಿಲನದಲ್ಲಿ ಎರಡು ಪ್ರಮುಖವಾದ ವಿಷಯಗಳನ್ನು ಗಮನಿಸುವುದಿದೆ. ಅಗಸ್ತ್ಯಮುನಿಗಳನ್ನು ಭೇಟಿಯಾಗುವ ಹೊತ್ತಿಗೆ ರಾಮಾದಿಗಳು ಹಲವರ್ಷಗಳು ವನವಾಸದಲ್ಲಿ ಕಳೆದಿದ್ದರು. ಈವರೆಗೆ ಈ ಮೂವರ ಕಾಲ ಬಹುಶಃ ಶಾಂತಿಯುತವಾಗಿಯೇ ಕಳೆದಿತ್ತು. ತಾಪಸರನ್ನು ಭೇಟಿಯಾಗುವುದು, ಅವರಿಂದ ಆಖ್ಯಾನಗಳನ್ನು ಕೇಳುವುದು, ಆಗೊಮ್ಮೆ ಈಗೊಮ್ಮೆ ದುಷ್ಟಸಂಹಾರಕಾರ್ಯ ಮಾಡುವುದು - ಹೀಗೆ ಸಾಗಿತ್ತು. ಆದರೆ ಈ ಕಾಲಘಟ್ಟವಾದ ಮೇಲೇ ಘಟನಾವಳಿಗಳು ಒಂದರ ಬೆನ್ನಲ್ಲೇ ಮತ್ತೊಂದು ಎಂಬಂತೆ ನಡೆಯುತ್ತಾ ಹೋಗುತ್ತve?ದೆ. ಶೂರ್ಪಣಖೆ-ಖರ-ದೂಷಣರಿಗೆ ಸಂಬಂಧಿಸಿದ ಘಟನೆಗಳು, ಮಾಯಾಮೃಗ ಕಾಣಿಸಿಕೊಳ್ಳುವುದು, ಸೀತಾಪಹರಣ - ಈ ಎಲ್ಲವೂ ಪಂಚವಟಿಗೆ ಹೋದ ನಂತರವೇ ಘಟಿಸುವುದು.

ಮುಂಬರುವ ಘಟನೆಗಳ ಹಿನ್ನೆಲೆಯಲ್ಲೇ ರಾಮ-ಲಕ್ಷ್ಮಣರಿಗೆ ಸಹಾಯವಾಗಲೋ ಎಂಬಂತೆ, ಅಗಸ್ತ್ಯರು ಮೊದಲೇ ರಾಮನಿಗೆ ವೈಷ್ಣವವಾದ ಶಸ್ತ್ರಗಳನ್ನು ಕೊಟ್ಟಿದ್ದಾರೆ. ದೇವರಾಜನಾದ ಇಂದ್ರನೇ ಮುನಿಗಳಿಗೆ ಕೊಟ್ಟಿರುವ ಶಸ್ತ್ರಗಳಿವು. ವಿಷ್ಣುವೇ ಹಿಂದೆ ದೈತ್ಯಸಂಹಾರಕ್ಕೆ ಉಪಯೋಗಿಸಿರುವ ಆಯುಧಗಳು. ಮುಂದಾಗಬೇಕಾಗಿರುವ ದುಷ್ಟಸಂಹಾರಕಾರ್ಯಕ್ಕೆ ಇದೊಂದು ನಾಂದಿಯಿದ್ದಂತೆ ಎಂದು ತಿಳಿಯಬಹುದು. "ಅಪಿ ಚಾತ್ರ ವಸನ್ ರಾಮ ತಾಪಸಾನ್ ಪಾಲಯಿಷ್ಯಸಿ", ಎಂದರೆ "ನೀನು ಪಂಚವಟಿಯಲ್ಲಿದ್ದರೆ ತಪಸ್ವಿಗಳ ಪಾಲನೆಯ ಕಾರ್ಯವು ನಡೆಯುವುದು", ಎಂದೂ ಅಗಸ್ತ್ಯರು ಹೇಳುತ್ತಾರೆ. ಈ ಹಿಂದೆ ತಾನೆ ಶ್ರೀರಾಮನು ದಂಡಕಾರಣ್ಯದಲ್ಲಿ ತಪೋನಿರತರಾದ ಋಷಿಗಳಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟಿದ್ದನು. ಏನದು ಅವರು ಕೇಳಿದ ಸಹಾಯ?

ತಾಪಸರ ಪಾಲನೆ ಎಂದರೇನು?

ತಾವು ತಪಸ್ಸನ್ನು ನಿರ್ವಿಘ್ನವಾಗಿ ನಡೆಸಲು ರಾಮನು ಅನುಕೂಲ ಮಾಡಿಕೊಡುವುದೇ ಅದು. ಏನು ಆ ಅನುಕೂಲ? ಋಷಿಗಳೆಂದರೆ ತಪಸ್ಸು-ಯಜ್ಞಕರ್ಮಗಳಲ್ಲಿ ನಿರತರಾದವರು. ಆದರೆ ಅವರ ಆ ಲೋಕಕಲ್ಯಾಣಕರವಾದ ಕೆಲಸಕ್ಕೆ ನಿಷ್ಕಾರಣವಾಗಿ ವಿಘ್ನಗಳನ್ನೊಡ್ಡುವವರು ರಾಕ್ಷಸರು. ಅಂತಹವರು ಹಲವರು ದಂಡಕಾರಣ್ಯದಲ್ಲಿದ್ದು, ಅಲ್ಲಿದ್ದ ಋಷಿ-ಮುನಿಗಳಿಗೆ ತೊಂದರೆ ಕೊಡುತ್ತಲೇ ಇದ್ದರು. ಶ್ರೀರಾಮನು ತನ್ನ ವನವಾಸಕ್ಕೆ ಆ ಘೋರಾರಣ್ಯಕ್ಕೆ ಬಂದಾಗ ಸಹಜವಾಗಿಯೇ ಅಲ್ಲಿನ ತಪಸ್ವಿಗಳು ರಾಮನ ಮೊರೆಹೊಕ್ಕರು. ಸ್ವಭಾವಸಹಜವಾಗಿ ಶರಣಾಗತರಕ್ಷಕನಾದ ರಾಘವನು ಅವರಿಗೆ ಅಭಯವಿತ್ತನು. ಇದೇ ರಾಮನು ತಾನು ಮಾಡುವುದಾಗಿ ಪ್ರತಿಜ್ಞೆ ಮಾಡಿರುವ ತಾಪಸ-ಪಾಲನ-ಕಾರ್ಯ. ಶ್ರೀರಂಗಮಹಾಗುರುಗಳು ಈ ಬಗ್ಗೆ ಹೇಳುವುದಿಂತು: "ಶಿಷ್ಟರಕ್ಷಣ ದುಷ್ಟಶಿಕ್ಷಣ, ಇದೇ ಕ್ಷತ್ರಿಯ ಧರ್ಮ...ಕಳೆಯನ್ನು ನಿರ್ಮೂಲ ಮಾಡದೇ ಬೆಳೆಯಿಲ್ಲ...ಆಗಬೇಕಾದುದು ಅಧರ್ಮ ನಿರ್ಮೂಲನ, ಧರ್ಮರಕ್ಷಣೆಗಾಗಿ ಯುದ್ಧ." ಈ ರಾಕ್ಷಸಸಂಹರಣಕ್ಕೆ ಸಹಾಯವಾಗಲೆಂದೇ ಅಗಸ್ತ್ಯರು ಆಯುಧಗಳನ್ನಿತ್ತದ್ದು.

ಪಂಚವಟೀಕ್ಷೇತ್ರಕ್ಕೆ ಶ್ರೀರಾಮನ ಗಮನವನ್ನು ಸೆಳೆದದ್ದೂ ಬಹಳ ಮಹತ್ವದ ಸಂಕೇತವೇ. ರಾಕ್ಷಸರನ್ನು ಒಂದು ಸ್ಥಾನಕ್ಕೆ ಸೆಳೆದು ಅವರ ಸಂಹಾರ ಮಾಡಲು ಬೀಸಿದ ಒಂದು ಬಲೆಯೋ ಎಂಬಂತಿದೆ ಅದು. ರಾಮಾಯಣದ ನಿರ್ಣಾಯಕವಾದ ತಿರುವು - ಎಂದರೆ ಸೀತಾಪಹರಣ - ಆಗಲು ಅಗಸ್ತ್ಯರು ಕೊಟ್ಟ ಈ ಸೂಚನೆಯೇ ಕೀಲಿಯೆನ್ನಬಹುದೇನೋ. ದೇವತಾಕಾರ್ಯವೂ ಲೋಕಕಲ್ಯಾಣಕಾರ್ಯವೂ ಆಗಬೇಕಾದಾಗ ಪೂರ್ವಗಾಮಿಘಟನೆಗಳು ಕೆಲವು ಆಗಬೇಕಾಗುತ್ತವೆ. ಅಲ್ಪಕಾಲಿಕವಾಗಿಯೇ ಆದರೂ ವ್ಯಕ್ತಿತ್ವವೊಂದು ಸಕಾಲಕ್ಕೆ ಪ್ರಕಟವಾಗಿ, ಘಟನಾವಳಿಯ ದಿಕ್ಕನ್ನು ನಿರ್ಧರಿಸುವಂತಾಗಬೇಕು. ಆ ಕಾರ್ಯವನ್ನು ಅಗಸ್ತ್ಯಮುನಿಗಳು ಈ ಸಂದರ್ಭದಲ್ಲಿ ಮಾಡಿರುವರು.

ರಾಮಾಯಣ ನಡೆಯಲು ಅಗಸ್ತ್ಯರೂ ಒಂದು ಕಾರಣವಾಗಿದ್ದಾರೆ, ಅಲ್ಲವೇ?

ಸೂಚನೆ: 6/06/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.

ನಮ್ಮ ಗುಪ್ತನಿಧಿ ಯಾವುದು ? (Namma Guptanidhi Yavudu?)

ಲೇಖಕರು:ವಾದಿರಾಜ್ ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


image.png


ಗುಪ್ತನಿಧಿ ಎಂದೊಡನೆ ನಮಗೆ ಬಚ್ಚಿಟ್ಟ ಹಣ, ಬ್ಯಾಂಕಿನ ಲಾಕರ್ ನಲ್ಲಿ ಇಟ್ಟ ಸಂಪತ್ತು, ಇತ್ಯಾದಿಗಳೆಲ್ಲ ನೆನಪಾಗುತ್ತವೆ.

ನಮ್ಮ ನಿತ್ಯಜೀವನಕ್ಕೆ ಬೇಕಾದ ಆಹಾರ, ವಸ್ತ್ರ ಇತ್ಯಾದಿ ಖರೀದಿಸಲು ಹಣದಿಂದಲೇ ಸಾಧ್ಯ. ಹಾಗಾಗಿ ನಾವೆಲ್ಲಾ ಸದಾ ದುಡಿಯುತ್ತಿರುವುದು ಹಣ ಸಂಪಾದನೆಗಾಗಿಯೇ. ನಮ್ಮ ಸಂಸಾರ ಚಕ್ರವು ಸುಗಮವಾಗಿ ನಡೆಸಲು ಹಣದ  ಪಾತ್ರ ದೊಡ್ಡದು. ಇನ್ನು, ನಾವು ಕೂಡಿಟ್ಟಿದ್ದ ಹಣದಲ್ಲಿ ಒಡವೆ, ವಸ್ತು-ವಾಹನ, ಮನೆ ಇತ್ಯಾದಿ ಖರೀದಿಸುವುದು ಉಂಟು. ಇನ್ನು ಕೆಲವರಿಗೆ ಪರ‍್ವಜರು ಸಂಪಾದಿಸಿದ ಸ್ಥಿರ ಚರ ಆಸ್ಥಿಗಳು ದೊರಕಿರಬಹುದು. ಇವೆಲ್ಲವೂ ಒಂರ‍್ಥದಲ್ಲಿ ನಿಧಿ ! ಇದನ್ನು ಸುಭದ್ರವಾಗಿ ಕಾಪಾಡಿಟ್ಟುಕೊಳ್ಳುವುದು ಮತ್ತು ವೃದ್ಧಿಮಾಡುವುದು ನಮ್ಮ ರ‍್ತವ್ಯವಾಗಿದೆ.  ನಮ್ಮ ಸ್ಥಿರ-ಚರ ಆಸ್ಥಿಗಳು ಅಥವಾ ಹಣವು ಬಂದರೆ ಸಂತೋಷವಾಗುತ್ತದೆ. ಅದನ್ನು ಕಳೆದುಕೊಂಡರೆ ಅತೀವವಾದ ದುಃಖವಾಗುತ್ತದೆ. ಮತ್ತು ಈ ನಿಧಿಯಿಂದ ಲಾಭ ನಷ್ಟಗಳರೆಡೂ ಉಂಟು.

ಹಣ, ಆಸ್ತಿ, ಮನೆ, ಚಿನ್ನ ಇವುಗಳನ್ನೆಲ್ಲ ಬಿಟ್ಟು ಇನ್ನೇನಾದರೂ ನಿಧಿ ಇದೆಯೇ? ಈ ದೇಶದ ಮರ‍್ಷಿಗಳು ಯಾವುದನ್ನು ದೊಡ್ಡ ನಿಧಿ ಎಂದಿದ್ದಾರೆ ಎಂಬುದನ್ನು ಗಮನಿಸೋಣ.

ಸುಖಕ್ಕಾಗಿ ನಿಧಿ :

ನಿಜಕ್ಕೂ ಮೇಲಿನ ನಿಧಿಗಳನ್ನೆಲ್ಲಾ ನಾವು ಕೂಡಿ ಇಡುವುದು ನಮ್ಮ ಇಂದಿನ, ಮುಂದಿನ ಸುಖದ ಬದುಕಿಗಾಗಿ. ಅದರಿಂದ ಸುಖ ಸಿಗುತ್ತದೆ ಎಂಬುದೇ ನಿಧಿ ಸಂಗ್ರಹಣೆಯ ಹಿಂದಿನ ಸ್ಫರ‍್ತಿ. ನಮ್ಮ  ಮರ‍್ಷಿಗಳು ಸಹ ಸುಖದ ಅನ್ವೇಷನೆಯಲ್ಲೇ ಸಾಗಿದವರು. ಅವರು ಈ ಬಗೆಯ ನಿಧಿಗಳಿಂದ ಸಿಗುವ ಸುಖ ಸಂತೋಷಗಳಿಗೆ ಅಪರಿಚಿತರೇನೂ ಅಲ್ಲ.

ಶಾಶ್ವತ ಸುಖದ ನಿಧಿ :

ಆದರೆ ಆತ್ಯಂತಿಕವಾಗಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ಸುಖವೇನಾದರೂ ಇದೆಯೇ ಎಂಬುದು ಅವರ ಅನ್ವೇಷಣೆಯಾಗಿತ್ತು. ಹಾಗೆಂದೇ  ಕಣ್ಣಿಗೆ ಕಾಣುವ ನಿಧಿಗೆ ಮಾತ್ರ ಸೀಮಿತವಾಗದೆ, ತಮ್ಮ ತಪಸ್ಸಿನ ಶಕ್ತಿಯಿಂದ  ಅತ್ಯಂತ ದೊಡ್ಡದಾದ ಪರಮಾನಂದ ನಿಧಿ ಇದೆ ಎಂಬುದನ್ನು ಕಂಡುಕೊಂಡುದೇ ಅವರ ಸಾಧನೆ. ಆ ನಿಧಿ ಇನ್ನೆಲ್ಲೂ ಇಲ್ಲದೇ ನಮ್ಮೊಳಗೇ ಇದೆ, ಅದನ್ನು ಮಾನವರೆಲ್ಲರೂ ಪಡೆಯಬಹುದಾದ ಮಾತ್ರವಲ್ಲ, ಪಡೆಯಲೇ ಬೇಕಾದ ನಿಧಿ ಎಂದು ಘೋಷಿಸಿದರು. ಪ್ರತಿಯೊಬ್ಬ ಜೀವಿಯ ಅಂತರಂಗದಲ್ಲಿ ಬೆಳಗುವ ಪರಮಾತ್ಮ ಜ್ಯೋತಿಯೇ ಆ ನಿಧಿ. ಅದರ ಅರಿವು ಉಂಟಾದಾಗ ಇನ್ನಿಲ್ಲದ ನೆಮ್ಮದಿ, ಶಾಂತಿ ,ಆನಂದ. ಒಮ್ಮೆ ಅದರ ಅನುಭವವಾಗಿಬಿಟ್ಟರೆ ಆ ಆನಂದ ಶಾಶ್ವತ. ಮೇಲಿನ ನಿಧಿಗಳೆಲ್ಲ ಅದರ ಎದುರು ಕ್ಷುದ್ರ ಎಂಬುದು ಅವರ ಅನುಭವಿಕ ಸತ್ಯ. ಮಾನವ ದೇಹದಲ್ಲಿ ಆ ನಿಧಿಯನ್ನು ಪಡೆಯುವ ಎಲ್ಲಾ ಅನುಕೂಲತೆಗಳು ಇವೆ ಎಂಬುದನ್ನು ಅವರು ಕಂಡುಕೊಂಡರು.

ಪರಮಾತ್ಮ ಜ್ಯೋತಿಯೇ ನಮ್ಮ ಗುಪ್ತನಿಧಿ :

ಆ ಪರಮಾತ್ಮ ಜ್ಯೋತಿಯನ್ನೇ ಬಹಳ ದೊಡ್ಡನಿಧಿ ಎಂದು ಅವರು ಕೊಂಡಾಡಿದ್ದು. ಅದು ನಮ್ಮೊಳಗೇ ಇರುವುದರಿಂದ, ಹೃದಯ ಗುಹೆಯಲ್ಲಿ ಅನುಭವಕ್ಕೆ ಬರುವುದರಿಂದ ಅದು ಗುಪ್ತ ನಿಧಿಯೂ ಹೌದು. ಅದನ್ನು ಪಡೆಯದ ಮಾನವ ಜನ್ಮ ವ್ರ‍್ಥ.  ಆ ನಿಧಿಯನ್ನು ಪಡೆಯಲು ನಮ್ಮೆಲ್ಲ ಸಾಧನೆಗಳು, ಪೂಜೆ ಧ್ಯಾನ ಎಲ್ಲವೂ. ಅದನ್ನು ಪಡೆಯಲು ಮರ‍್ಷಿಗಳು  ಹಲವಾರು ಮರ‍್ಗಗಳನ್ನು, ವಿಧಿ-ನಿಷೇಧಗಳನ್ನು ತಂದಿದ್ದಾರೆ. ಮಾನವ ಶರೀರದಲ್ಲಿ ಮಾತ್ರವೇ ಈ ಪರಮೋನ್ನತ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದಿದ್ದಾರೆ. ಅಂದರೆ, ಪ್ರತಿ ಮಾನವದೇಹವೂ ಒಂದು ಗುಪ್ತ ನಿಧಿಯ ಭಂಡಾರವಾಗಿದೆ. ಆ ನಿಧಿಯನ್ನು ಕುಂಡಲಿರೂಪವಾದ ರ‍್ಪವು ಕಾಯುತ್ತಿದೆಯಂತೆ . ತೀವ್ರವಾದ ತಪಸ್ಸಿನಿಂದ ಅದರ ಅನ್ವೇಷಣೆಗೆ ತೊಡಗಿ ಅದಕ್ಕೆ ಬೇಕಾದ ವಿಧಿ, ವಿಧಾನಗಳನ್ನು ಅನುಸರಿಸಿ ಪ್ರಾಮಾಣಿಕ ಪ್ರಯತ್ನ ನಡೆಸಿದಲ್ಲಿ ಆ ಕುಂಡಲಿನಿ ದೇವಿಯು ನಮ್ಮನ್ನು ಒಳಗೆ ಸಾಗಲು ಅವಕಾಶ ಕೊಡುತ್ತಾಳಂತೆ. ಅದಿಲ್ಲದೇ ಕೇವಲ ಭೌತಿಕ ಜೀವನದಲ್ಲಿ ಮಾತ್ರ ಆಸಕ್ತರಾಗಿ ಆ ನಿಧಿಯ ಗೋಜಿಗೇ ಹೋಗದ ಬಡಜೀವಿಗಳಿಗೆ ಅದು ಎಂದೆಂದಿಗೂ ಅನುಭವಕ್ಕೆ ಬಾರದ ಗುಪ್ತ ನಿಧಿಯೇ. ಆ ನಿಧಿಯನ್ನು ಪತ್ತೆ ಹಚ್ಚಿ ಕೈವಶ ಮಾಡಿ ಕೊಂಡವರೇ ನಮ್ಮ ಭಾರತೀಯ ಮರ‍್ಷಿಗಳು.

ಶ್ರೀರಂಗ ವಾಣಿ :

ಮರ‍್ಷಿಗಳ ಈ ಸಾಧನೆಯನ್ನುಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳು; “ಪರಮಾತ್ಮಜ್ಯೋತಿಯನ್ನು ಪಡೆಯುವುದು ಭಾರತ ಋಷಿಗಳ ದೃಷ್ಟಿಯಿಂದ ಜೀವನದ ಪರಮಧ್ಯೇಯ. ಅದೇ  ಪರಮಾನಂದಸಾಧನೆ. ಅದೇ ಮುಕ್ತಿ. ನದಿಯು ಸಮುದ್ರದೊಡನೆ ಒಂದಾಗಿಬಿಡುವಂತೆ ಆ ಆತ್ಮ-ದೀಪದೊಡನೆ ಐಕ್ಯ ಭಾವವನ್ನು ಹೊಂದುವುದಕ್ಕೆ “ಜ್ಞಾನ” ಎಂದು ಹೆಸರು.” ಎಂದು ನುಡಿದಿದ್ದರು.

ಆ ಗುಪ್ತನಿಧಿಗಾಗಿ ನಮ್ಮ ಪ್ರಯತ್ನವಿರಲಿ :

ಹಾಗಾಗಿ ನಾವು ಋಷಿಪ್ರಣೀತವಾದ ಸಾಧನಾಮರ‍್ಗವನ್ನು ಅನುಸರಿಸೋಣ.  ಲೌಕಿಕವಾದ ನಿಧಿಯ ಜೊತೆಯಲ್ಲೇ ಮರ‍್ಷಿಗಳು ತಮ್ಮ ತಪಸ್ಯೆಯಿಂದ ಅರುಹಿದ  ಪಾರಮರ‍್ಥಿಕ ಸುಖವನ್ನು, ಶಾಶ್ವತವಾದ ಆನಂದವನ್ನು ಕರುಣಿಸುವ ಆ ಪರಮಾತ್ಮ ನಿಧಿಯನ್ನು ಕಂಡುಕೊಳ್ಳುವ ಮರ‍್ಗದಲ್ಲಿ ಹೆಜ್ಜೆ ಹಾಕೋಣ.

ಅತ್ಯಂತ ದೊಡ್ಡದಾದ, ನಮ್ಮಲ್ಲೇ ಇರುವ ಆ ಗುಪ್ತನಿಧಿಯ ಪರಮಾನಂದವನ್ನು ಪಡೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರರ‍್ಥಿಸೋಣ.

ಸೂಚನೆ: 6/06/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 107 ಆಚಾರ್ಯಾತ್ ಪಾದಮಾದತ್ತೇ (Astakshara 107)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಆಚಾರ್ಯನಿಂದ ಬರುವ ವಿದ್ಯೆಯು ಕೇವಲ ಕಾಲುಭಾಗವಷ್ಟೇ!


ವಿದ್ಯೆಯನ್ನು ಕಲಿಯಲಿ - ಎಂದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಅಲ್ಲಿ ಬೋಧಕರು ಪಾಠ ಮಾಡುತ್ತಾರೆ. ಇದರಿಂದಾಗಿ ತಾನೆ ಮಕ್ಕಳು ಕಲಿಯುವಂತಾಗುವುದು? - ಎಂಬುದೇ ನಮ್ಮೆಲ್ಲರ ಲೆಕ್ಕಾಚಾರವಲ್ಲವೇ?

ಇಂದಂತೂ ತಂದೆತಾಯಿಗಳಿಗೆ ಬಹಳವೇ ಆಕುಲತೆ: ಯಾವ ಶಾಲೆಗೆ ಮಕ್ಕಳನ್ನು ಕಳುಹಿಸುವುದಪ್ಪಾ?  - ಎಂಬ ಪ್ರಶ್ನೆ. ಎಷ್ಟೋ ವೇಳೆ ಬಗೆಹರಿಯದ ಪ್ರಶ್ನೆ. ಏಕೆ? ಈ ಶಾಲೆಗಿಂತ ಆ ಶಾಲೆಯಲ್ಲಿ ಒಳ್ಳೆಯ ಅಧ್ಯಾಪಕರಿದ್ದಾರೆ ಎಂದು ಯಾರೋ ಹೇಳಿಬಿಡುತ್ತಾರೆ. ಸರಿ, ಆ ಶಾಲೆಗೇ ತಮ್ಮ ಮಕ್ಕಳನ್ನು ಸೇರಿಸಬೇಕೆಂಬ ಆಗ್ರಹ ತಂದೆತಾಯಿಗಳಿಗೆ; ಮತ್ತು ಅದಕ್ಕಾಗಿ ಅದೆಷ್ಟು ಪರದಾಟ!

ಈಗಂತೂ ಶಾಲೆಗಳನ್ನು ನಡೆಸುವವರಿಗೆ ಶಾಲೆಗಳೆಂದರೆ ಧನಾರ್ಜನೆಯ ಕೇಂದ್ರವೆಂಬಂತೆಯೇ ಆಗಿಬಿಟ್ಟಿದೆ! ಶಾಲೆಗೆ ಒಳ್ಳೆಯ ಹೆಸರು ಬಂದುಬಿಟ್ಟಿದ್ದರಂತೂ ದುಡ್ಡು ಕೀಳಲು ಸುಸಂದರ್ಭವೆಂದೇ ಅವರ ಲೆಕ್ಕ. ಒಂದನೆಯ ತರಗತಿಯಿಂದ ಆರಂಭಿಸಿ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಗಳಿಸಲು ತಮಗೆ ಅದೆಷ್ಟು ಹಣವು ಹಿಂದೆ ವ್ಯಯವಾಗುತ್ತಿತ್ತೋ ಅದಕ್ಕೆ ಹತ್ತರಷ್ಟೋ ನೂರರಷ್ಟೋ, ತಮ್ಮ ಮಕ್ಕಳ ಕೇವಲ ಪ್ರೈಮರಿ ತರಗತಿಯ ವಿದ್ಯಾಭ್ಯಾಸಕ್ಕಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ, ತಂದೆತಾಯಿಗಳಿಗೆ!

ಹಿಂದೆಲ್ಲಾ, ಎಂದರೆ ಈಗೊಂದು ಐವತ್ತು ವರ್ಷದ ಹಿಂದೆ ಕೂಡ, ಪರಿಸ್ಥಿತಿಯೆಂದರೆ ಹೇಗಿತ್ತೆಂಬುದು ಕೆಲವರಿಗಾದರೂ ಗೊತ್ತಿರಬಹುದು. ತಮ್ಮ ಮಕ್ಕಳು ಮಂಕಾಗಿದ್ದರೋ, ಶಾಲೆಯಲ್ಲಿ ಅಧ್ಯಾಪಕರು ಪಾಠವನ್ನು ಚೆನ್ನಾಗಿ ಮಾಡುತ್ತಿಲ್ಲವೆಂದಾದರೋ, ಮಕ್ಕಳನ್ನು "ಮನೆಪಾಠ"ಕ್ಕೂ ಕಳುಹಿಸುತ್ತಿದ್ದರು. ಚೆನ್ನಾಗಿ ಪಾಠಮಾಡುವವರೆಂದು ಹೆಸರು ಮಾಡಿರುವವರನ್ನು ಅರಸಿ, ಅವರಲ್ಲಿಗೆ ತಮ್ಮ ಮಕ್ಕಳನ್ನು ಪಾಠಕ್ಕೆ ಕಳುಹಿಸುವ ತವಕ, ಹೆತ್ತವರಿಗೆ.

ಅದಕ್ಕೆ ಇನ್ನೊಂದು ಮುಖವೂ ಇತ್ತು. ಹಾಗೆ ಶಾಲೆಯಲ್ಲದೆ ಮತ್ತೊಬ್ಬರ ಬಳಿಯೂ ಪಾಠಕ್ಕಾಗಿ ಯಾರಾದರೂ ಹೋಗುವರೆಂದರೆ, ಹಿಂದೆ ಅದು ನಾಚಿಕೆಯ ವಿಷಯವೇ ಆಗಿರುತ್ತಿತ್ತು: ಮಕ್ಕಳಿಗೂ, ಅಪ್ಪ-ಅಮ್ಮಂದಿರಿಗೂ! ಬೆಳಗಿನ ಜಾವವೇ ಬೇರೆ ಯಾರಿಗೂ ತಿಳಿಯದಂತೆ ಪಾಠಕ್ಕೆ ಹೋಗಿಬರುವ ಸನ್ನಿವೇಶವಿತ್ತು. ಈಗ ಬಿಡಿ, ಅದು ರಾಜಾರೋಷವಾಗಿಯೇ ಆಗುತ್ತಿದೆ. ನಾಚಿಕೆಯ ಬದಲು ಜಂಭದ ಮಾತೂ ಆಗಿದೆ! ಅಲ್ಲದೆ, ಎಳಸಿನಿಂದಲೇ ಹೀಗೆ ಪಾಠಕ್ಕೆ ಹಾಕುವುದೂ ಇಂದಿನ ಪರಿಪಾಟಿಯಾಗಿಬಿಟ್ಟಿದೆ; ಅತ್ತ, ಶಾಲೆಗಳಲ್ಲಿ ಪಾಠವೂ ಚೆನ್ನಾಗಿ ನಡೆಯುತ್ತಿಲ್ಲ.

ಹಾಗೆ ಪಾಠಗಳನ್ನು ನಡೆಸುವವರೂ ತಮ್ಮದೇ ಕೂಟಗಳನ್ನೂ ಮಾಡಿಕೊಂಡು, ಹೇಗಾದರೂ ಹೆಚ್ಚು ಹಣ ಮಾಡಿಕೊಳ್ಳಲೇ ಹೊಂಚು ಹಾಕುವುದೂ ನಡೆಯುತ್ತಿದೆ. ಈಗಂತೂ ಎಂತಹ ದುಷ್ಟವಾದ ವರ್ತನೆಯಾಗುತ್ತಿದೆಯೆಂದರೆ ಹೇಗಾದರೂ ಮಾಡಿ ಪ್ರಶ್ನಪತ್ರಿಕೆಯನ್ನೇ ಕಳ್ಳತನದಲ್ಲಿ ಅರಿತುಕೊಂಡು, ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆಗಳ ಸುಳಿವಿತ್ತು, ಅದರಿಂದಲೂ ಹಣಮಾಡುವ ಪರಿಯಾಗಿದೆ!

ಪರಿಸ್ಥಿತಿಯು ಇಂದು ಅದೆಷ್ಟು ವಿಷಮಿಸಿದೆಯೆಂದರೆ, ಇತ್ತ ವಿದ್ಯಾರ್ಥಿಗಳೂ ಸಮಗ್ರವಾಗಿ ಮತ್ತು ಆಳವಾಗಿ ಜ್ಞಾನವನ್ನು ಸಂಪಾದಿಸಿಕೊಳ್ಳುವುದರ ಬದಲು, ಮೇಲೆ ಹೇಳಿದ ದುರ್ಮಾರ್ಗದಿಂದಲೇ ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನಗಳ ಊಹೆ, ಅವುಗಳಿಗೆ ಮಾತ್ರವಷ್ಟೆ ಉತ್ತರಕ್ಕೆ ಸಿದ್ಧತೆ - ಇವುಗಳಲ್ಲಿ ತೊಡಗುವುದೇ ಸುಲಭವೆಂದೆಣಿಸುವಂತಾಗಿದೆ. ಹೀಗಿದೆ ಇಂದಿನ ಅಧ್ಯಾಪಕ-ವಿದ್ಯಾರ್ಥಿಗಳ ನಡುವಣದ ಶಿಕ್ಷಣ-ವೈಖರಿ!

ಆದರೆ, ನಮ್ಮ ದೇಶದಲ್ಲಿ ಸಹಸ್ರಾರು ವರ್ಷಗಳಿಂದಲೂ ವಿದ್ಯಾಭ್ಯಾಸವು ನಡೆಯುತ್ತಿತ್ತಲ್ಲವೇ? ಹಾಗಾದರೆ ಅಲ್ಲಿದ್ದ ಕ್ರಮವೇನು? - ಎಂಬ ಕುತೂಹಲವು ಮೂಡುವುದಷ್ಟೆ? ಅದರ ಕೆಲವಂಶಗಳನ್ನು ಸೂಚಿಸುವ ಸುಂದರವಾದ ಪದ್ಯವೊಂದಿದೆ. ಕ್ರಿಸ್ತಪೂರ್ವಕಾಲದ ಆಪಸ್ತಂಬ-ಧರ್ಮಸೂತ್ರ ಎಂಬ ಗ್ರಂಥಕ್ಕೆ, ಸುಮಾರು ಹದಿಮೂರನೆಯ ಶತಮಾನದ ಹರದತ್ತ ಎಂಬುವನು ವ್ಯಾಖ್ಯಾನ ಮಾಡುತ್ತಾ ಈ ಶ್ಲೋಕವನ್ನು ಉಲ್ಲೇಖಿಸಿದ್ದಾನೆ.

ಅದರ ಸಾರವೇನು? ವಿದ್ಯಾರ್ಥಿಯು ತನ್ನ ಆಚಾರ್ಯನಿಂದ ಪಡೆಯುವುದು ವಿದ್ಯೆಯ ಕಾಲುಭಾಗ ಮಾತ್ರ (ಆಚಾರ್ಯಾತ್ ಪಾದಂ ಆದತ್ತೇ). ಇನ್ನು ಕಾಲುಭಾಗವು ಶಿಷ್ಯನು ಸ್ವ-ಮೇಧೆಯಿಂದಲೇ ಸಂಪಾದಿಸತಕ್ಕದ್ದು. ಇನ್ನು ಕಾಲುಭಾಗವು ಬರುವುದು ಸಹಪಾಠಿಗಳೊಂದಿಗೆ ಪಾಠಗಳ ಬಗ್ಗೆ ಚರ್ಚಿಸುತ್ತಿರುವುದರಿಂದ. ಇನ್ನುಳಿದ ಕಾಲುಭಾಗವು ಕಾಲಕ್ರಮದಲ್ಲಿ ಪಾಕಹೊಂದುತ್ತದೆ.

"ಮೂಲಭೂತವಾದ ಜ್ಞಾನವುಳ್ಳ ಗುರುವೇ ಕೊಟ್ಟರೂ ವಿದ್ಯೆಯು ಸ್ಥಿರವಾಗಿ ನಿಲ್ಲಲು ಬೇಕಾದ ಅಂಶಗಳು ಇಲ್ಲಿವೆ" ಎಂದು ಹೇಳಿ, ಹರದತ್ತನು ಸೂಚಿಸಿರುವ ಈ ಪದ್ಯವನ್ನು ಶ್ರೀರಂಗಮಹಾಗುರುಗಳು ತಮ್ಮ ಆಯುರ್ವೇದ-ಪ್ರವಚನದಲ್ಲಿ ಉಲ್ಲೇಖಿಸಿದ್ದಾರೆ. ಸಾಕ್ಷಾದ್ ಆಯುರ್ವೇದಾಚಾರ್ಯನೇ ಬಂದು ಉಪದೇಶಿಸಿದರೂ ವಿದ್ಯೆಯು ಬೆಳೆಯುವುದೇ ಹೀಗೆ - ಎಂದು ತಿಳಿಸಿ, ಕೇವಲ ಪುಸ್ತಕ-ವಿದ್ಯೆಯೇ ವಿದ್ಯೆಯಲ್ಲವೆನ್ನುವುದನ್ನೂ ಅರುಹಿದ್ದಾರೆ.

ಹೀಗೆ ಗುರು-ಶಿಷ್ಯರಿಬ್ಬರ ಮೇಲೂ ಜವಾಬ್ದಾರಿಯಿರುವುದನ್ನೂ, ಶಿಷ್ಯನ ಮನನದ ಮೇಲೇ ಹೆಚ್ಚಿರುವುದನ್ನೂ ಮನಗಾಣಲು ಈ ಶ್ಲೋಕವು ಒಳ್ಳೆಯ ಸೂಚಕವಾಗಿದೆಯಲ್ಲವೇ?

ಸೂಚನೆ: 6/6//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ

ಅಷ್ಟಾಕ್ಷರೀ 106 ಸುವರ್ಣಂ ಅಜರಾಮರಂ (Astakshara 106)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಈಚೆಗಂತೂ ಚಿನ್ನ ಸುದ್ದಿಯಲ್ಲಿದೆ.

ಈ ಒಂದು ವರ್ಷ ಚಿನ್ನಕ್ಕೆ ಹಣ ಸುರಿಯಬೇಡಿರೆಂದು ದೇಶದ ಪ್ರಧಾನಿಗಳು ಜನತೆಗೆ ಕರೆ ಕೊಟ್ಟಿರುವರಷ್ಟೆ. ಯುದ್ಧ-ಸನ್ನಿವೇಶದಲ್ಲಿ ದೇಶದ ಆರ್ಥಿಕ-ಕ್ಷೇಮಕ್ಕಾಗಿ ಈ ಹಿತೋಕ್ತಿ. ಎಲ್ಲ ದೇವಾಲಯಗಳ ಚಿನ್ನವನ್ನೂ ಸರ್ಕಾರವು ವಶಪಡಿಸಿಕೊಳ್ಳಲಿದೆಯೆಂಬ ಸುಳ್ಳು ವದಂತಿಯನ್ನೂ ಈಚೆಗೆ ಹಬ್ಬಿಸಲಾಯಿತಷ್ಟೆ.

ಚಿನ್ನಕ್ಕೇಕೆ ಇಷ್ಟು ಪ್ರಾಮುಖ್ಯ? ಅದೆಷ್ಟು ಬೆಲೆ ಬಾಳುವಂತಹುದು! ಒಂದು ಗ್ರಾಂಗೆ ಹದಿನಾರು ಸಾವಿರ ರೂಪಾಯಿಯ ಹತ್ತಿರದ ಬೆಲೆ, ಇಂದು - ಶೇ ೯೯ರಷ್ಟು ಶುದ್ಧವಾದ ಚಿನ್ನಕ್ಕೆ (೨೪ ಕ್ಯಾರಟ್)!  ಶೇ. ೯೨ರಷ್ಟರದ್ದಕ್ಕೆ (೨೨ ಕ್ಯಾರಟ್) ಇನ್ನೊಂದು ಸಾವಿರ ಕಡಿಮೆಯೆಂದುಕೊಳ್ಳಿ. ಚಿನ್ನದ ಒಂದು ಕಿರು-ಸರವೆಂದರೆ ಇಪ್ಪತ್ತುಸಾವಿರದಿಂದ ಆರಂಭಿಸಿ ಐದು ಲಕ್ಷದವರೆವಿಗೂ ಆದೀತು!

ಚಿನ್ನವು ಅತ್ಯಂತ ನಮ್ಯವಾದ ಪದಾರ್ಥ. ಒಂದು ಔನ್ಸ್ (೩೦ ಗ್ರಾಂಗಳಿಗಿಂತ ಕೊಂಚ ಕಡಿಮೆ) ಚಿನ್ನವನ್ನು ತೆಳು-ತಂತಿಯನ್ನಾಗಿಸಿ ೫೦ ಮೈಲುಗಳಷ್ಟುದ್ದ ಎಳೆಯಬಹುದೆನ್ನುತ್ತಾರೆ! ಅಥವಾ ಅದನ್ನೇ ತೆಳು ಚಪ್ಪಟೆಯಾಗಿಸಿ ೯ ಮೀಟರುಗಳ ಚದರವಾಗಿಸಬಹುದೆನ್ನುತ್ತಾರೆ!

ಚಿನ್ನವು ಕರಗುವುದು ೧೦೦೦ ಡಿಗ್ರಿಗೆ; ಕುದಿಯುವುದು ೨೮೦೦ ಡಿಗ್ರಿಗೆ. ಮನುಷ್ಯದೇಹದ ತಾಪಮಾನವಾದ ೩೭ ಡಿಗ್ರಿಗೆ ಚಿನ್ನವು ಬೇಗನೇ ಹೊಂದಿಕೊಳ್ಳುವುದೆಂದೇ ಆಭರಣಗಳನ್ನು ಚಿನ್ನದಿಂದ ಮಾಡಿಸುವುದು ಪ್ರಚುರ. ಜಗತ್ತಿನಲ್ಲಿ ಲಭ್ಯವಾಗಿರುವ ಚಿನ್ನದ ಅರ್ಧಭಾಗದಷ್ಟು ಆಭರಣಕ್ಕೇ ಬಳಕೆಯಾಗಿದೆಯೆನ್ನುತ್ತಾರೆ.

ಕಳ್ಳರಿಗೆ ಅತ್ಯಂತ-ಪ್ರಿಯವಾದ ವಸ್ತುವೆಂದರೆ ಇದೇ. ಏಕೆ? ಲಕ್ಷಾಂತರರೂಪಾಯಿಯ ವಸ್ತುವನ್ನು ಕಿರುಕಿಸೆಯಲ್ಲಿ ತುರುಕಿಕೊಂಡು ಓಡಬಹುದು!

ಚಿನ್ನದ ಪ್ರಕಾಶವೆಂತಹುದು! ಬಂಗಾರದ ಬಣ್ಣವೆಂದರೆ ಹಳದಿಯ ಹೊಳಪು! ಅದಕ್ಕೇ ಅಲ್ಲವೇ, ಅದು ಸು-ವರ್ಣ, “ಒಳ್ಳೆಯ ಬಣ್ಣವುಳ್ಳದ್ದು”! ಸ್ವರ್ಣವೆಂದರೂ ಅದೇ.  ಸ್ವರ್ಣದಿಂದಲೇ ಪೊನ್ನು-ಹೊನ್ನುಗಳು ಬಂದಿರುವುವೆನ್ನುವರು. ಸಂಸ್ಕೃತದ ಭೃಂಗಾರವೇ ಬಂಗಾರವಾಗಿದೆ. ಕಾಂಚನ-ರುಕ್ಮಗಳೆಂದರೂ ಹೊಳೆಯುವುದೇ. ಮೈಬಣ್ಣ ಯಾವುದೇ ಇರಲಿ ಎಲ್ಲರಿಗೂ ಮೆರಗು ತರುವುದೇ ಸುವರ್ಣ.

ಚಿನ್ನಕ್ಕೂ ಭಾರತಕ್ಕೂ ಅನಾದಿಕಾಲದ ಸಂಬಂಧ. ಭಾರತದಲ್ಲಿ ಭಾರೀಪ್ರಮಾಣದಲ್ಲಿ ಬಂಗಾರವಿದ್ದುದನ್ನು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಮೆಗಾಸ್ತನೀಸ್ ಹೇಳಿದ್ದಾನೆ.

ಇನ್ನೂ ಹಿಂದಕ್ಕೆ ವೈದಿಕ-ಸಾಹಿತ್ಯಕ್ಕೆ ಹೋದರೆ, ಲಕ್ಷ್ಮೀದೇವಿಯನ್ನು ಹಿರಣ್ಯ-ವರ್ಣಾ ಎಂದಿರುವುದಿದೆ. ಚಿನ್ನವು ಹಿರಣ್ಯ; ಚಿನ್ನದಿಂದಾದುದು ಹಿರಣ್ಮಯ. ವೇದಗಳಲ್ಲಿ ರಥದ ಮುಂಭಾಗಕ್ಕೆ ಚಿನ್ನವನ್ನು ಬಳಸುತ್ತಿದ್ದುದನ್ನು ಹೇಳಿದೆ. ಇನ್ನು ಸೂರ್ಯನ ರಥವೇ ಹಿರಣ್ಮಯ! ಮೇರು/ಸುಮೇರು/ ಮಹಾಮೇರುವೆಂದರೆ ಹೇಮಾದ್ರಿ: ಅರ್ಥಾತ್, ಚಿನ್ನದ ಪರ್ವತ!

ಕಾಲುಗುರಿನಿಂದ ಹಿಡಿದು ತಲೆಗೂದಲಿನವರೆಗೂ ಹಿರಣ್ಮಯನಾದ ಪುರುಷನನ್ನು ಛಾಂದೋಗ್ಯೋಪನಿಷತ್ತು ಚಿತ್ರಿಸುತ್ತದೆ. ಸತ್ಯ-ಮುಖವನ್ನು ಹಿರಣ್ಮಯ-ಪಾತ್ರವು ಮುಚ್ಚಿರುವುದನ್ನು ಈಶೋಪನಿಷತ್ತು ಹೇಳಿದೆ.

ಸೃಷ್ಟಿಯ ಆರಂಭವೇ ಹಿರಣ್ಯಗರ್ಭನಿಂದ. ಅಸುರರಲ್ಲಿ ಪ್ರಸಿದ್ಧರಾದ ಹಿರಣ್ಯಾಕ್ಷ-ಹಿರಣ್ಯಕಶಿಪುಗಳ ಹೆಸರಲ್ಲೂ ಹಿರಣ್ಯವಿದೆ. ಲಂಕೆಯನ್ನು ಸ್ವರ್ಣಮಯೀ ಎಂದಿದೆ. ಸೀತೆಯ ಆಕೃಷ್ಟಳಾದದ್ದು ಹೇಮ-ಮೃಗಕ್ಕೆ. ಅಶ್ವಮೇಧ-ಸಂದರ್ಭದಲ್ಲಿ ಸೀತೆಯ ಸ್ವರ್ಣ-ಪ್ರತಿಮೆಯನ್ನೇ ರಾಮನಿಟ್ಟುಕೊಂಡಿದ್ದುದು. ಕೃಷ್ಣ-ಕಥೆಯಲ್ಲಿಯ ರುಕ್ಮಿ-ರುಕ್ಮಿಣಿಗಳಿಬ್ಬರ ಹೆಸರೂ ರುಕ್ಮದಿಂದಾದುದು. 

ಚಿನ್ನಕ್ಕೆ ಪರ್ಯಾಯಗಳು ಅಮರಕೋಶದಲ್ಲಿ ೨೫. ಉಳಿದವನ್ನೂ ಸೇರಿಸಿಕೊಂಡರೆ ೫೮. ಹೀಗೆ ಭಾರತದಲ್ಲಿಯ ಸ್ವರ್ಣ-ರಾಶಿಯೂ ವಿಪುಲ, ಅದಕ್ಕಿರುವ ಶಬ್ದರಾಶಿಯೂ ವಿಪುಲ!

ಹಿಂದೆ ನಮ್ಮಲ್ಲಿ ಚಿನ್ನದ ನಾಣ್ಯಗಳು ಬಳಕೆಯಲ್ಲಿದ್ದವು: "ಹತ್ತು ಚಿನ್ನಗಳನ್ನು ಕೊಡು" ಎಂಬ ಮೃಚ್ಛಕಟಿಕದಲ್ಲಿಯ ಮಾತಿಗೆ, “ಹತ್ತು ಸುವರ್ಣ-ನಾಣ್ಯಗಳನ್ನು ಕೊಡು” ಎಂದರ್ಥ.

ಚಿನ್ನವು ಆಯುಸ್, ಪ್ರಜ್ಞೆ, ವೀರ್ಯ, ಬಲ, ಸ್ಮೃತಿಗಳನ್ನುಂಟುಮಾಡುತ್ತದೆ – ಎನ್ನುತ್ತದೆ, ಆಯುರ್ವೇದ. ಅಲ್ಲದೆ ವಾಗ್-ವಿಶುದ್ಧಿ, ಕಾಂತಿಗಳಲ್ಲದೆ, ಪಾಪ-ಕ್ಷಯವನ್ನೂ ಸಹ ಮಾಡುವುದೆಂದಿದೆ.

ವಿವಾಹ-ಸಂದರ್ಭದಲ್ಲಿ ಕನ್ಯೆಯನ್ನು ಕನಕ-ಸಂಪನ್ನೆಯಾಗಿಯೇ ಧಾರೆಯೆರೆದುಕೊಡುವುದು: ಕನ್ಯೆ-ಕನಕಗಳೆರಡಕ್ಕೂ ಹೊಳೆಯುವುದೆಂದೇ ಅರ್ಥ. ಎಂಭತ್ತೊಂದು ದಾಟಿದವರಿಗೆ ನಡೆಸುವ ಸಹಸ್ರಚಂದ್ರ-ದರ್ಶನದ ಆಚರಣೆಯಲ್ಲಿ ಸುವರ್ಣಾಭಿಷೇಕವುಂಟು. 

ಹಿತವೂ ರಮಣೀಯವೂ ಆಗಿರುವುದರಿಂದಲೇ ಚಿನ್ನವನ್ನು ಹಿರಣ್ಯವೆನ್ನುವುದು. ಎಂದೇ, ಪಂಚ-ಮಹಾಪಾತಕಗಳಲ್ಲಿ ಹಿರಣ್ಯ-ಸ್ತೇಯ ಅಥವಾ ಚಿನ್ನವನ್ನು ಕದಿಯುವುದನ್ನೇ ಮೊಟ್ಟಮೊದಲನೆಯದನ್ನಾಗಿ ಛಾಂದೋಗ್ಯೋಪನಿಷತ್ತು ಪರಿಗಣಿಸಿದೆ.

ಇವೆಲ್ಲಕ್ಕೂ ಮಿಗಿಲಾಗಿ, ಚಿನ್ನವೆಂಬುದು ಏಕೆ ಅಷ್ಟು ವಿಶಿಷ್ಟ/ಪವಿತ್ರವೆಂಬುದನ್ನು ಶ್ರೀರಂಗಮಹಾಗುರುಗಳು ವಿವರಿಸಿರುವ ನುಡಿಯನ್ನು ಗಮನಿಸಬೇಕು: “ಸಮಾಧಿಸ್ಥಿತಿಗೆ ಏರುವಾಗ ಯೋಗಿಯಲ್ಲಿ ಯಾವ ನಾಡೀ-ಗತಿಯು ಆರಂಭವಾಗುತ್ತದೋ ಅಂತಹ ನಾಡೀ-ಗತಿಯನ್ನು ಸ್ವರ್ಣ-ಧಾರಣವು ಉಂಟುಮಾಡುತ್ತದೆ.” ಸ್ವತಃ ಯೋಗಿಗಳೂ ನಾಡೀವಿಜ್ಞಾನ-ಕುಶಲರೂ ಆದ ಅವರು ಪ್ರಯೋಗ-ಪೂರ್ವಕವಾಗಿ ತಿಳಿಸಿಕೊಟ್ಟಿದ್ದ ವಿಷಯವಿದು.

ಲಕ್ಷವರ್ಷಗಳಾದರೂ ಯಾವುದೇ ಬದಲಾವಣೆಯಿಲ್ಲದೆ ಉಳಿದುಕೊಳ್ಳುವ ಚಿನ್ನವನ್ನು “ಸುವರ್ಣಂ ಅಜರಾಮರಂ” - ಮುಪ್ಪುಸಾವುಗಳಿಲ್ಲದ್ದು ಚಿನ್ನ! - ಎಂದು ನಮ್ಮ ಪೂರ್ವಿಕರು ಕೊಂಡಾಡಿದ್ದರೆ ಆಶ್ಚರ್ಯವೇನು?

ಸೂಚನೆ: 21/5//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.