Tuesday, August 11, 2026

ದಾನಿಯ ಆದರ್ಶ ಮನೋಧರ್ಮ (Daniya Adarsha Manodharma)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)

Screenshot 2026-08-11 080825.png

ವೈದಿಕಕಾಲದ ಕಥೆ.  ಜಾನಶ್ರುತಿ ಎಂಬ ರಾಜನು ಮಹಾದಾನಿಯಾಗಿದ್ದನು. ತನ್ನ ರಾಜ್ಯದಲ್ಲಿ ಎಲ್ಲರಿಗೂ ಆಹಾರವನ್ನು ತಯಾರಿಸಿ ಉಚಿತವಾಗಿ ನೀಡುತ್ತಿದ್ದ ಕಾರಣ , ತಾನು ತನ್ನಂತಹ ಮಹಾದಾನಿ ಯಾರೂ ಇಲ್ಲವೆಂದು ನಂಬಿದ್ದನು. ಹಾಗೂ ಇದರಂದ ಬಂದ ಕೀರ್ತಿಯಷ್ಟೇ ಜೀವನದ ಧ್ಯೇಯವೆಂದು ದೃಢವಾಗಿ ನಂಬಿದ್ದನು.  ಅವನು ಪಕ್ಷಿಗಳ ಮತ್ತು ಪ್ರಾಣಿಗಳ ಭಾಷೆಯನ್ನೂ ಅರಿತಿದ್ದನು.    ಒಂದು ಸಂಜೆ ಅವನು ಪ್ರಕೃತಿಯ ಸೊಗಸಾದ ದೃಶ್ಯವನ್ನು ತನ್ನ ಅರಮನೆಯ ಮೇಲುಮನೆಯಿಂದ ಆಸ್ವಾದಿಸುತ್ತಿದ್ದನು. ಆಗ ಎರಡು ಹಾರುತ್ತಿರುವ ಹಂಸಗಳು ಪರಸ್ಪರ ಮಾತನಾಡುತ್ತಿರುವದನ್ನು ಕಂಡನು. ಅವುಗಳಲ್ಲಿ ಒಂದು ಹಂಸವು ಹೇಳಿತು, “ನೀನು ರಾಜ ಜಾನಶ್ರುತಿಯ ಕೀರ್ತಿಯ ಬೆಳಕಿನ ತೀವ್ರತೆಯನ್ನು ದಾಟುವಾಗ ಜಾಗರೂಕನಾಗಿರು , ಇಲ್ಲವಾದರೆ ಅದರ ಕೀರ್ತಿಯ ಬೆಳಕಿನಿಂದ  ನೀನು ಸುಟ್ಟುಹೋಗುತ್ತೀಯೆ. ಇಂದು ಅವನಂತ ಮಹಾನುಭಾವನು ಯಾರೂ ಇಲ್ಲ, ಅವನು ದಾನಿಗಳಲ್ಲಿ ಶ್ರೇಷ್ಠ.”  ಇದಕ್ಕೆ ಉತ್ತರವಾಗಿ ಮತ್ತೊಂದು ಹಂಸವು ಹೇಳಿತು, “ಓ ಮಿತ್ರ, ರಾಜ ಜಾನಶ್ರುತಿ, ರೈಕ್ವ ಎಂಬ ಆತ್ಮಜ್ಞಾನಿ ಹಾಗೂ ರಥಚಲಿಸುವವನಿಗಿಂತ ದೊಡ್ಡವನಾ? ರಾಜನಿಗೆ ಕೇವಲ ಹೆಸರು ಮತ್ತು ಕೀರ್ತಿ ಮಾತ್ರ  ಜೀವನದ ಪರಮಧ್ಯೇಯ ಹಾಗೂ ಅದಕ್ಕಾಗಿ ತೀವ್ರವಾಗಿ ಹಂಬಲಿಸುತ್ತಾನೆ.  ಮೊದಲ ಹಂಸವು ಆಶ್ಚರ್ಯದಿಂದ ಕೇಳಿತು, “ಈ ರೈಕ್ವ ಯಾರು? ಅವನು ಕೇವಲ ರಥಚಲಿಸುವವ ಆತ್ಮಜ್ಞಾನಿಯಾದರೂ ಹೇಗೆ ಜಾನಶ್ರುತಿಗೆ  ಹೋಲಿಸಿದರೆ ದೊಡ್ಡವನಾಗಿದ್ದಾನೆ?” ಹೀಗೆ ಹೇಳುತ್ತಾ ಆ ಹಂಸಗಳು ಹಾರಿಹೋದವು.   

ಈ ಸಂಭಾಷಣೆಯನ್ನು ಕೇಳಿದ ರಾಜನು ರೈಕ್ವನನ್ನು ಕಂಡು ನಿಜವಾದ ಶಾಂತಿಯನ್ನು ಅನುಭವಿಸಲು ಸಂಕಲ್ಪಿಸಿ,  ತನ್ನ ಸೇವಕನಿಂದ ರೈಕ್ವನನ್ನು ಹುಡಿಕಿಸಿ, ಆತನಿರುವ ಎಡೆಯನ್ನು ತಿಳಿದುಕೊಂಡನು.    ಜಾನಶ್ರುತಿ  ದೊಡ್ಡ ಸಿದ್ಧತೆಯನ್ನು ಮಾಡಿಕೊಂಡು ರೈಕ್ವನ ಬಳಿ ಬಂದು ಆರು ನೂರು ಹಸುಗಳು, ಚಿನ್ನದ ಸರ, ಮತ್ತು ಹೇಸರುಗತ್ತೆ ಎಳೆಯುವ ಗಾಡಿಯನ್ನು ರೈಕ್ವನ ಪಾದಗಳಿಗೆ ಅರ್ಪಿಸಿ,ಆಧ್ಯಾತ್ಮಿಕ ಜ್ಞಾನವನ್ನು ದಯಪಾಲಿಸೆಂದು ಪ್ರಾರ್ಥಿಸಿದನು. ರೈಕ್ವಾ ನಕ್ಕು ಹೇಳಿದನು, “ ಇವೆಲ್ಲವನ್ನೂ ಹಿಂತೆಗೆದುಕೊಳ್ಳಿ! ಆತ್ಮಜ್ಞಾನವು ಮಾರಾಟಕ್ಕಿಲ್ಲ !” ಜಾನಶ್ರುತಿ ಹಿಂತಿರುಗಿ, ಮತ್ತೊಂದು ಸಮಯದಲ್ಲಿ ಸಾವಿರ ಹಸುಗಳು, ಚಿನ್ನದ ಸರ, ಹೇಸರುಗತ್ತೆ ಎಳೆಯುವ ಗಾಡಿ ಮತ್ತು ಅವನ ಸ್ವಂತ ಪುತ್ರಿಯನ್ನು ರೈಕ್ವನಿಗೆ ಪತ್ನಿಯಾಗಿ ನೀಡಲು ಬಂದನು. ಅವನು ಇವುಗಳನ್ನು ಅರ್ಪಿಸಿ, ಆತ್ಮಜ್ಞಾನದ ಗಹನವಾದ ಸತ್ಯಗಳನ್ನು ದಯಪಾಲಿಸಲು ಮತ್ತೇ ಪ್ರಾರ್ಥಿಸಿದನು. ರೈಕ್ವಾ ಈ ದಾನಗಳಿಗೆ ಹಾತೊರೆಯಲಿಲ್ಲ. ಆದರೆ ಜಾನಶ್ರುತಿಯ ಛಲ, ಪ್ರಾಮಾಣಿಕತೆ ಹಾಗೂ ಗುರುವಿನಲ್ಲಿದ್ದ  ಅಚಲವಾದ ಶ್ರದ್ಧೆಯನ್ನು ನೋಡಿ ಈತ ಶಿಷ್ಯನಾಗಲು ಅರ್ಹನೆಂದು  ರೈಕ್ವನು ಆತ್ಮಜ್ಞಾನವನ್ನು ಸಂವರ್ಗವಿದ್ಯೆಯ ಮೂಲಕ ಉಪದೇಶಮಾಡಲು ಉದ್ಯುಕ್ತನಾದನು. ಗೀತಾಚಾರ್ಯನ ವಾಣಿಯಂತೆ (೪.೩೪)ಜ್ಞಾನವನ್ನು, ಗುರುಗಳ ಸೇವೆಯಿಂದ, ಆತ್ಮಸಮರ್ಪಣೆಯ ಭಾವದಿಂದ ಪಡೆಯಬೇಕು.

ಆರ್ಷಸಾಹಿತ್ಯದಲ್ಲಿ ಸಂಪತ್ತನ್ನು ಮತ್ತು ಕೀರ್ತಿಗಳಿಸುವುದು ಅನಾದರ್ಶವೆಂದು ಪರಿಗಣಿಸುವುದಿಲ್ಲ.  ಇವೆರಡನ್ನು ಅರ್ಥ ಹಾಗೂ ಕಾಮವೆಂದು ಪರಿಗಣಿಸುತ್ತಾ,. ಧರ್ಮ ಮತ್ತು ಮೋಕ್ಷಕ್ಕೆ ಪೋಷಕವಾಗಿ ಹಾಗೂ ವಿರೋಧವಿಲ್ಲದ ರೀತಿಯಲ್ಲಿ ಇವೆರಡನ್ನೂ ಗಳಿಸಬೇಕೆಂಬುದೇ ಋಷಿಮುನಿಗಳ ಆಶಯ ಹಾಗಿಲ್ಲದಿದ್ದಾಗ ತ್ಯಾಜ್ಯ   "ಮರಕಡಿದು ಫಲ ಕೇಳಿದರೆ ಸಿಕ್ಕುವುದಿಲ್ಲ. ಧರ್ಮವಿದ್ದರೆ ಉಳಿದದ್ದು . ಜೀವವಿದೆಯೇ ಮೊದಲು ನೋಡು. ಅದಿದ್ದರೆ ಉಡಿಗೆ-ತೊಡಿಗೆಗಳು." ಎಂಬ ಶ್ರೀರಂಗ ಮಹಾಗುರುಗಳ ವಾಣೀ ಇಲ್ಲಿ ಮನನೀಯ.


ಕೇವಲ  ಭೌತಿಕ ಸಂಪತ್ತನ್ನು  ಉಪಯೋಗಿಸಿ ಜನಸಹಾಯ ಮಾಡಿದರೆ  ಜ್ಞಾನವು ಸಿಗುವುದಿಲ್ಲ. ಇದನ್ನೇ ಆಚಾರ್ಯ ಶಂಕರರ  "ಕುರುತೇ ಗಂಗಾಸಾಗರಗಮನಂ,ವ್ರತ-ಪರಿಪಾಲನಮಥವಾ ದಾನಮ್ । ಜ್ಞಾನವಿಹೀನಃ ಸರ್ವಮತೇನ, ಭಜತಿ ನ ಮುಕ್ತಿಂ ಜನ್ಮಶತೇನ ॥  “ ಸ್ತೋತ್ರ ಸ್ಮರಣೀಯ. ನಾನು ಕೇವಲ  " ದೇವರ ಕೈಯಲ್ಲಿರುವ ಸಾಧನ" ಎಂಬ ಮನೋಧರ್ಮವು ಹರಿದಾಗ  ದಾನ ಧರ್ಮಗಳು ಅರ್ಥಪೂರ್ಣವಾಗುತ್ತದೆ.   ಜಾನಶ್ರುತಿರಾಜನ ಮೊದಲಿನ ಮನಸ್ಥಿತಿ ದಾನಧರ್ಮಗಳಿಂದ ಬರುವ ಕೀರ್ತಿಯೇ ಜೀವನದ ಧ್ಯೇಯವೆನ್ನುವುದು ತಪ್ಪಾಗಿತ್ತು. ಆದರೆ ಪ್ರಾಮಾಣಿಕನಾಗಿ,ರೈಕ್ವರೆಂಬ ಗುರುಗಳ ಉಪದೇಶಕ್ಕೆ ಮನಸಾರಿ ಒಪ್ಪಿ ನಡೆದುಕೊಂಡಿದ್ದು ರಾಜನ ಪರಿವರ್ತನೆಗೆ ಕಾರಣವಾಯಿತು. ದೇವನೊಬ್ಬನಿಗೇ ಶರಣಾಗಿ ಅವನ ಪ್ರಸಾದರೂಪವಾದ ಪುರುಷಾರ್ಥಗಳನ್ನು ಸ್ವೀಕರಿಸಿ ಅವನೊಡನೆ ಬಾಳುವ ಸದ್ಬುದ್ಧಿಯು ವೃದ್ಧಿಸಲಿ ಎಂದು ಆಶಿಸೋಣ.


ಸೂಚನೆ : 08/08/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.


(Vyaasa Vikshita 200)ರಾಜಸೂಯಯಾಗವು ಸಂಪನ್ನವಾಯಿತು (Vyaasa Vikshita 200)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

.


image.png



ಜನರೆಲ್ಲರನ್ನೂ ಈ ಪರಿಯಲ್ಲಿ ತೃಪ್ತಿಗೊಳಿಸಿದನು, ಧರ್ಮರಾಜ. ಅವರ ಅಪೇಕ್ಷೆಗಳೆಲ್ಲವೂ ಪೂರೈಕೆಗೊಂಡವು. ಅಲ್ಲಿ ನೆರೆದಿದ್ದ ಜನರು ಬಹ್ವನ್ನ-ಬಹುಭಕ್ಷ್ಯಗಳನ್ನು ಸೇವಿಸಿದರು. ಆ ವಿಸ್ತಾರವಾದ ಯಜ್ಞದಿಂದಾಗಿ ದೇವತೆಗಳಿಗೂ ತೃಪ್ತಿಯಾಯಿತು. ಇಡಾ, ಆಜ್ಯಹೋಮ, ಆಹುತಿಗಳೆಂದು ಕರೆಸಿಕೊಳ್ಳುವ ಹೋಮಗಳಿಂದ ನೆರವೇರಿತು, ಆ ಯಜ್ಞ. ಮಂತ್ರಶಿಕ್ಷೆಯಲ್ಲಿ ವಿಶಾರದರಾದ ಮಹರ್ಷಿಗಳು ಮಾಡಿದ ಯಜ್ಞವು ದೇವತೆಗಳಿಗೆ ತೃಪ್ತಿಕರವಾಯಿತು.

ದೇವತೆಗಳಂತೆಯೇ ವಿಪ್ರರೂ ತೃಪ್ತಿಗೊಂಡರು. ಸರ್ವವರ್ಣಗಳವರೂ ಆ ಯಜ್ಞವನ್ನು ಕಂಡು ಸಂತೋಷದಿಂದ ಪಾಲ್ಗೊಂಡು ತೃಪ್ತಿಪಟ್ಟರು.

ಯಜ್ಞವು ಹೀಗೆ ಸಂಪನ್ನವಾಗುತ್ತಿದ್ದಂತೆ ಅಭಿಷೇಚನೀಯ-ದಿನವು ಬಂದಿತು. ಅಭಿಷೇಚನೀಯವೆಂಬುದು ರಾಜಸೂಯದ ಒಂದು ಅಂಗ. ಅದರಲ್ಲಿ ಪೂರ್ಜಾರ್ಹರಿಗೆ ಪೂಜೆಯು ಸಲ್ಲುವುದು; ರಾಜಸೂಯದ ಯಜಮಾನನಿಗೆ ಅಭಿಷೇಕವು ನೆರವೇರುವುದು.

ಸತ್ಕಾರಕ್ಕೆ ಅರ್ಹರಾದ ಮಹರ್ಷಿಗಳು ಯಜ್ಞಭವನದ ಅಂತರ್ವೇದಿಯೆಂಬ ಸ್ಥಾನಕ್ಕೆ ಆಗಮಿಸಿದರು. ಅಲ್ಲಿ ನೆರೆದಿದ್ದ ರಾಜರ್ಷಿಗಳ ಜೊತೆಯಲ್ಲಿ ಆಸೀನರಾಗಿದ್ದ ನಾರದರೇ ಮೊದಲಾದ ಮಹರ್ಷಿಗಳೂ ಶೋಭಿಸಿದರು.

ಬ್ರಹ್ಮಭವನದಲ್ಲಿ ಬಂದು ಸೇರಿದ್ದ ದೇವತೆಗಳು ಹಾಗೂ ದೇವರ್ಷಿಗಳ ಹಾಗಿದ್ದ ವಿಪ್ರವರರು ನಾನಾಕರ್ಮೋಪಾಸಕರಾಗಿದ್ದು ಜಲ್ಪವನ್ನು ಮಾಡಿದರು. ಜಲ್ಪವೆಂದರೆ ವಾದ-ವಿವಾದಗಳು. ’ಇದು ಹೀಗೆ’ ಎಂದು ಕೆಲವರೆಂದರೆ, ’ಇದು ಹೀಗಲ್ಲ’ ಎನ್ನುವವರು ಕೆಲವರು. "ಇದು ಹೀಗೆಯೇ, ಮತ್ತೆಂತೂ ಅಲ್ಲ" ಎಂಬುದಾಗಿ ಮತ್ತೆ ಕೆಲವರ ವಾದ. ಹೀಗೆ ವಿತಂಡಾವಾದವನ್ನು ಮಾಡುವವರೂ ಕೆಲವರಿದ್ದರು. ದುರ್ಬಲಪಕ್ಷವನ್ನು ಪುಷ್ಟೀಕರಿಸುವವರು ಕೆಲವರು; ಸಬಲಪಕ್ಷವನ್ನು ದುರ್ಬಲವನ್ನಾಗಿಸುವವರು ಮತ್ತೆ ಕೆಲವರು; ಮತ್ತೆ ಕೆಲ ಮೇಧಾವಿಗಳು ಮತ್ತೊಬ್ಬರು ಹೇಳಿದ ಪ್ರಮೇಯವನ್ನು ಖಂಡತುಂಡವಾಗಿಸಿದರು. ಅದು ಹೇಗಿತ್ತೆಂದರೆ ಆಕಾಶದಲ್ಲಿರುವ ಆಮಿಷವನ್ನು ಗಿಡುಗಗಳು ಕಿತ್ತಾಡುವ ಹಾಗೆ. ಅವರಲ್ಲಿ ಕೆಲವರು ಧರ್ಮಾರ್ಥಕುಶಲರು. ಕೆಲವರು ಮಹಾವ್ರತಪರಿಪಾಲಕರು. ಕೆಲವರು ಶ್ರೇಷ್ಠವಿದ್ವಾಂಸರು: ಎಲ್ಲ ಭಾಷ್ಯಗಳನ್ನೂ ಬಲ್ಲವರು; ಅವುಗಳಲ್ಲಿಯ ತತ್ತ್ವಗಳನ್ನು ಪರಸ್ಪರ ಹೇಳಿಕೊಳ್ಳುತ್ತಾ ಸಂತೋಷಪಡುತ್ತಿದ್ದರು, ಅವರು. ವೇದ-ಸಂಪನ್ನರಾದ ದೇವರ್ಷಿ-ಬ್ರಹ್ಮರ್ಷಿ-ಮಹರ್ಷಿಗಳಿಂದ ತುಂಬಿದ ಆ ವೇದಿಯು, ಎಂದರೆ ಯಜ್ಞವೇದಿಕೆಯು, ಹೇಗಿತ್ತೆಂದರೆ ವಿಶಾಲವಾದ ಆಕಾಶವು ನಕ್ಷತ್ರಗಳಿಂದ ಕಿಕ್ಕಿರಿದಿದ್ದು ಕಂಗೊಳಿಸುವಂತೆ.

ಆ ಸಭೆಯಲ್ಲಿ ವ್ರತಹೀನನಾದ ದ್ವಿಜನೊಬ್ಬನೂ ಇರಲಿಲ್ಲ. ಲಕ್ಷ್ಮೀಸಂಪನ್ನನಾದ ಧೀಮಂತ ಯುಧಿಷ್ಠಿರನ ಯಜ್ಞ-ವಿಧಾನದ ಲಕ್ಷ್ಮಿಯನ್ನು, ಎಂದರೆ ಸೊಬಗನ್ನು, ಕಾಣುತ್ತಾ ನಾರದಮುನಿಗಳು ಸಂತೋಷಗೊಂಡರು.

ಆದರೆ ಇದರ ಜೊತೆಗೇ ಚಿಂತೆಯಾಯಿತು ನಾರದ-ಮುನಿಗಳಿಗೆ, ಅಲ್ಲಿದ್ದ ಎಲ್ಲ ಕ್ಷತ್ರಿಯರ ಸಂಗಮವನ್ನು ಕಂಡು. ಏಕೆ? ಅವರಿಗೆ ಹಳೆಯ ವಿಷಯವೊಂದರ ಸ್ಮರಣೆಯಾಯಿತು. ಬ್ರಹ್ಮಲೋಕದಲ್ಲೊಂದು ಚರ್ಚೆಯಾಗಿತ್ತಲ್ಲವೇ? ಭಗವಂತನು ತನ್ನ ಅಂಶಗಳಾದ ದೇವತೆಗಳೊಂದಿಗೆ ಅವತರಿಸಿಬರುವುದೆಂಬುದರ ಬಗ್ಗೆ? ಆ ಚಿಂತೆ.

ಇಲ್ಲಿ ನೆರೆದಿದ್ದ ರಾಜರುಗಳ ಸಮೂಹ ವನ್ನು ಕಂಡರಿತು ನಾರದರು ಮನಸ್ಸಿನಲ್ಲಿ ಪುಂಡರೀಕಾಕ್ಷನಾದ ಹರಿಯನ್ನು ನೆನೆಸಿಕೊಂಡರು. ಅವರ ಮನಸ್ಸಿನಲ್ಲಿ ಆ ಭಾವವು ಉದಯಿಸಿತು: “ಆಹಾ, ದೇವಶತ್ರುಗಳಾದ ಅಸುರರ ವಿನಾಶಕನಾದ ಭಗವಾನ್ ನಾರಾಯಣನು ತನ್ನ ಪ್ರತಿಜ್ಞೆಯನ್ನು ಪೂರೈಸುವವನಾಗಿಯೇ ಕ್ಷತ್ರಿಯಕುಲದಲ್ಲಿ ಈಗ ಜನಿಸಿದ್ದಾನೆ. ಹಿಂದೆ ಆತನೇ ದೇವತೆಗಳಿಗೆ ತನ್ನ ಆದೇಶವನ್ನಿತ್ತಿದ್ದನು: ಪರಸ್ಪರ ಸಂಹಾರ-ಕಾರ್ಯವನ್ನು ಮಾಡಿ ಮತ್ತೆ ದೇವಲೋಕಕ್ಕೆ ಹಿಂದಿರುಗಿ - ಎಂಬುದಾಗಿ. ಅಂಧಕವಂಶ-ವೃಷ್ಣಿವಂಶಗಳಲ್ಲಿ ಈತನೇ ಮಹಾಕಾಂತಿಯಿಂದ ಕಂಗೊಳಿಸುತ್ತಿರುವವನು - ನಕ್ಷತ್ರಗಳ ನಡುವೆ ಉಡುರಾಜನು, ಎಂದರೆ ಚಂದ್ರನು, ಹೇಗೆ ಶೋಭಿಸುವನೋ ಹಾಗೆ.

ಸೂಚನೆ : 9///2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

(Vyaasa Vikshita 199)ಯಜ್ಞದ ವಿವಿಧ-ಕರ್ತವ್ಯಗಳ ವಿನಿಯೋಗಗಳು (Vyaasa Vikshita 199)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png


ಯಜ್ಞಕ್ಕಾಗಿ ಆಗಮಿಸಿದ  ಆ ರಾಜರುಗಳೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡವರಾಗಿ ಧರ್ಮರಾಜನನ್ನು ಬಂದು ಕಂಡರು. ಎಂತಹ ರಾಜನವನು? ಭೂರಿ-ದಕ್ಷಿಣೆಗಳನ್ನು ಕೊಡುವ ರಾಜ. ಭೂರಿಯೆಂದರೆ ಹೆಚ್ಚು. ಸದಸ್ಯರನೇಕರಿಂದ ಸುತ್ತುವರಿಯಲ್ಪಟ್ಟಿರುವನು. ಸದಸ್ಯರೆಂದರೆ ಸದಸ್ಸಿಗೆ ಸೇರುವವರು. ಸದಸ್ಸೆಂದರೆ ಸಭೆ. ಆತನ ಸದಸ್ಸು ರಾಜರುಗಳಿಂದಲೂ, ವಿಪ್ರರಿಂದಲೂ, ಮಹರ್ಷಿಗಳಿಂದಲೂ ಕಿಕ್ಕಿರಿದಿತ್ತು. ದೇವತೆಗಳಿಂದ ತುಂಬಿರುವ ನಾಕಲೋಕದ ಹಾಗೆ ಪ್ರಕಾಶಿಸುತ್ತಿತ್ತು. ನಾಕವೆಂದರೆ ಸ್ವರ್ಗ.

ಹೀಗೆ ಅನೇಕ ಅತಿಥಿಗಳು ಆಗಮಿಸುತ್ತಿರಲಾಗಿ, ಯುಧಿಷ್ಠಿರನು ಭೀಷ್ಮಪಿತಾಮಹರನ್ನೂ ಗುರುಗಳಾದ ದ್ರೋಣಾಚಾರ್ಯರನ್ನೂ ಎದುರುಗೊಂಡನು, ಅವರಿಗೆ ಆದರದಿಂದ ಅಭಿವಾದಿಸಿದನು. ಬಳಿಕ ಭೀಷ್ಮ, ದ್ರೋಣ, ಕೃಪ, ದ್ರೌಣಿ ಎಂದರೆ ದ್ರೋಣಪುತ್ರನಾದ ಅಶ್ವತ್ಥಾಮ, ದುರ್ಯೋಧನ ಹಾಗೂ ವಿವಿಂಶತಿ - ಇವರುಗಳಿಗೆ ಹೀಗೆ ಹೇಳಿದನು :

"ನನ್ನ ಈ ವಿಪುಲವಾದ ಧನವೇನುಂಟೋ ಅದನ್ನು ನೀವು ನಿಮ್ಮ ಇಚ್ಛೆಗೆ ಅನುಸಾರವಾಗಿ ಸತ್ಕರ್ಮದಲ್ಲಿ ತೊಡಗಿಸಬಹುದು" ಎಂದು.

ಅವರಿಗೆಲ್ಲ ಹೀಗೆ ಹೇಳಿದ ಯುಧಿಷ್ಠಿರನು ದೀಕ್ಷಿತನಾಗಿದ್ದು ಅವರುಗಳನ್ನು ಅವರವರ ಯೋಗಾನುಸಾರ ಬೇರೆ ಬೇರೆ ಅಧಿಕಾರಗಳಲ್ಲಿ ನಿಯೋಜಿಸಿದನು. ಹೀಗೆ: ಭಕ್ಷ್ಯ-ಭೋಜ್ಯಗಳ ಅಧಿಕಾರದಲ್ಲಿ ದುಃಶಾಸನನನ್ನು ತೊಡಗಿಸಿದನು. ವಿಪ್ರರ ಸ್ವಾಗತ-ಸತ್ಕಾರಗಳನ್ನು ಅಶ್ವತ್ಥಾಮನಿಗೆ ಒಪ್ಪಿಸಿದನು.

ನಾನಾ ರಾಜರುಗಳ ಸತ್ಕಾರದ ಕಾರ್‍ಯವನ್ನು ಸಂಜಯನಿಗೆ ವಹಿಸಿದನು. ಯಾವ ಕಾರ್ಯವು ನೆರವೇರಿದೆ, ಯಾವುದಿಲ್ಲ? - ಎಂಬುದನ್ನು ಅನ್ವವೇಕ್ಷಿಸಲು - ಎಂದರೆ ಪರಿಶೀಲಿಸುತ್ತಿರಲು - ಮಹಾಮತಿಗಳಾದ ಭೀಷ್ಮ-ದ್ರೋಣರನ್ನು ಒಪ್ಪಿಸಿದನು. ಒಳ್ಳೆಯ ಬಣ್ಣದ ಚಿನ್ನ ಹಾಗೂ ರತ್ನಗಳು - ಇವನ್ನು ನೋಡಿಕೊಳ್ಳಲು ಹಾಗೂ ದಕ್ಷಿಣೆಗಳನ್ನು ದಾನಮಾಡುವುದು - ಇವಕ್ಕೆ ಕೃಪಾಚಾರ್ಯರನ್ನು ನಿಯೋಜಿಸಿದನು. ಹೀಗೆಯೇ ಬೇರೆಬೇರೆ ಪುರುಷಶ್ರೇಷ್ಠರನ್ನು ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಸಿದನು.

ನಕುಲನು ಕರೆತಂದ ಬಾಹ್ಲಿಕ, ಧೃತರಾಷ್ಟ್ರ, ಸೋಮದತ್ತ, ಹಾಗೂ ಜಯದ್ರಥ - ಇವರುಗಳು ಪ್ರಭುಗಳಂತೆ ಅಲ್ಲಿ ರಮಿಸಿದರು.

ಧನ-ವ್ಯಯವನ್ನು ನೋಡಿಕೊಳ್ಳುವ ಕೆಲಸವು ಸರ್ವಧರ್ಮಜ್ಞನಾದ ವಿದುರನ ಪಾಲಿಗೆ ಬಂದಿತು. ಎಲ್ಲರ ಕಾಣಿಕೆಗಳನ್ನು ನೋಡಿಕೊಳ್ಳುವ ಕೆಲಸವು ದುರ್ಯೋಧನನಿಗಾಯಿತು. ಶ್ರೀಕೃಷ್ಣನು ಉತ್ತಮವಾದ ಫಲವನ್ನು ಪಡೆಯಲಿಚ್ಛಿಸುವವನಾಗಿ ಬ್ರಾಹ್ಮಣರ ಪಾದಗಳನ್ನು ತೊಳೆಯುವ ಕೆಲಸವನ್ನು ತಾನೇ ಕೈಗೊಂಡನು!

ಆ ಸಭೆಯನ್ನೂ ಯುಧಿಷ್ಠಿರನನ್ನೂ ನೋಡುವ ಬಯಕೆಯಿಂದ ಬಂದ ರಾಜರುಗಳಲ್ಲಿ ಯಾವನೊಬ್ಬನೂ ಸಾವಿರಕ್ಕೆ ಕಡಿಮೆಯ ಹೊನ್ನನ್ನು (ಎಂದರೆ ಸುವರ್ಣಮುದ್ರೆಯನ್ನು) ತಂದಿರಲಿಲ್ಲ. ಬಹುರತ್ನಗಳಿಂದ ಪ್ರತಿಯೊಬ್ಬರೂ ಆ ಧರ್ಮರಾಜನಿಗೆ ಧನವೃದ್ಧಿಯನ್ನುಂಟುಮಾಡಿದರು. ಆ ರಾಜರುಗಳಲ್ಲಿ ಒಂದು ಸ್ಪರ್ಧೆಯಿದ್ದಿತು - ನಾನು ಕೊಡುವ ರತ್ನದಾನವನ್ನು ಬಳಸಿಯೇ ಯುಧಿಷ್ಠಿರನು ಯಾಗವನ್ನು ಪೂರೈಸುವಂತಾಗಲಿ - ಎಂಬುದಾಗಿ.

ಅಲ್ಲಿಗೆ ಬಂದಿದ್ದವರ ಗೃಹಗಳು ಹೇಗಿದ್ದವು! ಅವುಗಳ ಮಹಡಿಗಳ ತುದಿಗಳು ದೇವತೆಗಳ ವಿಮಾನಗಳನ್ನು ಸ್ಪರ್ಶಿಸುತ್ತವೆಯೋ? - ಎಂಬಂತಿದ್ದವು! ಜಲಾಶಯಗಳಿಂದ ಕೂಡಿದವೂ, ರತ್ನಸಮೃದ್ಧಿಯುಳ್ಳವುಗಳೂ ತುಳುಕುವ ಸಂಪತ್ತಿನಿಂದ ಕಂಗೊಳಿಸತಕ್ಕವೂ ಆದ ಅಂತಹ ಭವನಗಳಿಂದಾಗಿ ಯುಧಿಷ್ಠಿರನ ಸಭೆಯು ಕಂಗೊಳಿಸಿತು.

ಸಮೃದ್ಧಿಯ ವಿಷಯದಲ್ಲಿ ಮಹಾದೇವನೊಂದಿಗೇ ಯುಧಿಷ್ಠಿರನು ಸ್ಪರ್ಧಿಸುತ್ತಿದ್ದನು! ಷಡಗ್ನಿಯಾದ ಯಜ್ಞವನ್ನು ಸದಕ್ಷಿಣವಾಗಿ ಧರ್ಮರಾಜನು ಆರಂಭಿಸಿದನು. ಷಡಗ್ನಿಗಳೆಂದರೆ ಆರು ಬಗೆಯ ಅಗ್ನಿಗಳು. ಅವು ಯಾವುವೆಂದರೆ ಆರಂಭಣೀಯ, ಕ್ಷತ್ರ, ಧೃತಿ, ವ್ಯುಷ್ಟಿ, ದ್ವಿರಾತ್ರ, ಹಾಗೂ ದಶಪೇಯ - ಎಂಬಿವು. ಸದಕ್ಷಿಣವೆಂದರೆ ಸತ್ಪಾತ್ರರಿಗೆ ದಕ್ಷಿಣೆಗಳನ್ನು ಕೊಟ್ಟಿರುವುದು.

ಸೂಚನೆ : 26/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 77 (Prasnottara Ratnamalike 77)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png

ಪ್ರಶ್ನೆ - ೭೭. ಮನುಷ್ಯನು ಯಾವುದನ್ನು ಸಂಪಾದಿಸಬೇಕು?

ಉತ್ತರ- ವಿದ್ಯಾ, ಧನ, ಬಲ, ಕೀರ್ತಿ ಮತ್ತು ಪುಣ್ಯ.

ಮನುಷ್ಯನು ಅತ್ಯಂತ ಮುಖ್ಯವಾಗಿ ಬಯಸಬೇಕಾದದ್ದು ಅಥವಾ ಸಂಪಾದಿಸಬೇಕಾದದ್ದು ವಿದ್ಯೆ, ಧನ, ಬಲ, ಕೀರ್ತಿ ಮತ್ತು ಪುಣ್ಯ. ಇವುಗಳನ್ನು ಸಂಪಾದಿಸಿದ್ದರಿಂದ ಆಗುವ ಲಾಭ ಅತ್ಯಂತ ಹಿರಿದಾದದ್ದು. ತನ್ನ ಜೀವನವನ್ನು ಸುಂದರವಾಗಿಸಲು ಮತ್ತು ಸಾರ್ಥಕವಾಗಿಸಲು ಇವು ಅತ್ಯಂತ ಮುಖ್ಯ. ಮನುಷ್ಯನ ಜೀವನದ ಮುಖ್ಯ ಉದ್ದೇಶವೇ ಪುರುಷಾರ್ಥಗಳನ್ನು ಸಾಧಿಸುವುದು ಎಂಬುದನ್ನು ಅರಿತಾಗ ಅದಕ್ಕೆ ಬೇಕಾದ ವಿದ್ಯೆ ಎಂದರೆ ಯಾವುದು? ಎಂಬುದು ಅರ್ಥವಾಗುತ್ತದೆ. ಇದಕ್ಕಾಗಿ ವಿದ್ಯೆ ಅತ್ಯಂತ ಮುಖ್ಯವಾಗಿ ಬೇಕು. ಶ್ರೀರಂಗ ಮಹಾಗುರುಗಳು ಹೇಳುವಂತೆ “ವಿದ್ಯೆ ಎಂದರೆ ‘ವಿದ- ಜ್ಞಾನೇ, ಯಾ-ಪ್ರಾಪಣೇ’ ಎಂಬಂತೆ ಯಾವುದು ಜ್ಞಾನವನ್ನು ಅಂದರೆ ಭಗವಂತನನ್ನು ಪ್ರಾಪ್ತಿಮಾಡಿಸುತ್ತದೆಯೋ ಅದನ್ನು ವಿದ್ಯೆ ಎಂಬುದಾಗಿ ಕರೆಯಬೇಕು” ಎಂದು. ಇಂದಿನ ವಿದ್ಯೆಯೆಂಬುದು ಕೇವಲ ನಮ್ಮ ಭೌತಿಕ ಜೀವನವನ್ನು ನಡೆಸಲು ಮಾತ್ರ ಸಾಧನವಾಗಿದೆ. ಆದರೆ ನಮ್ಮ ಭಾರತೀಯ ಪರಂಪರೆಯು ಯಾವುದನ್ನು ವಿದ್ಯೆ ಎಂಬುದಾಗಿ ಕರೆದಿದೆಯೋ ಅದು ಕೇವಲ ಭೌತಿಕ ಜೀವನಕ್ಕೆ ಅನುಕೂಲ ಮಾಡಿಕೊಡುವುದಲ್ಲದೆ ದೈವಿಕ ಮತ್ತು ಆಧ್ಯಾತ್ಮಿಕ ಜೀವನಕ್ಕೂ ಅನುಕೂಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಮಾನವ ಈ ವಿದ್ಯೆಯನ್ನು ಸಂಪಾದಿಸುವುದು ಅತ್ಯಂತ ಮುಖ್ಯ. ವಿದ್ಯೆಯ ಬಲದಿಂದ ಬರುವ ಧನದಿಂದ ಧರ್ಮವು ಮತ್ತು ಪುಣ್ಯವೂ ಸಂಪಾದನೆಯಾಗುತ್ತದೆ. ಅಂತಹ ಧನವನ್ನು ಸಂಪಾದನೆ ಮಾಡುವುದು ಅತ್ಯಂತ ಅವಶ್ಯಕ. ಅದು ನಾಲ್ಕು ಪುರುಷಾರ್ಥಗಳಲ್ಲಿ ಒಂದು ಎಂಬುದಾಗಿ ಹೇಳಲಾಗಿದೆ. ಅಂತಹ ಅರ್ಥ ಸಂಪಾದನೆಯು ಜೀವನವನ್ನು ಸುಂದರವಾಗಿಸಲು ಅತ್ಯಂತ ಮುಖ್ಯವಾದದು. ಮಹಾಭಾರತದ “ಅರ್ಥಾಃ ಬಹಿಶ್ಚರಾಃ ಪ್ರಾಣಾಃ” ಎಂಬ ಮಾತು ಧನದ ಸಂಪಾದನೆಯನ್ನು ಪುಷ್ಟೀಕರಿಸುತ್ತದೆ. ಒಬ್ಬ ಬದುಕಬೇಕಾದರೆ ಹೇಗೆ ಶರೀರದ ಒಳಗಿನ ಪ್ರಾಣ ಎಷ್ಟು ಮುಖ್ಯವೋ, ಅಂತಯೇ ಬಹಿರಂಗದ ಪ್ರಾಣ ರೂಪವಾದ ಧನವೂ ಅಷ್ಟೇ ಮುಖ್ಯ ಎಂದು ಧನದ ಮಹತ್ವ ಅರಿವಾಗುತ್ತದೆ. ಹಾಗಾಗಿ ಧನ ಸಂಪಾದನೆಯು ಧರ್ಮದ ಚೌಕಟ್ಟಿನಲ್ಲಿ ಇರಬೇಕು.

 ಒಬ್ಬ ಬಲಿಷ್ಠನಾದರೆ ಮಾತ್ರ ಈ ಪ್ರಪಂಚದಲ್ಲಿ ಜೀವಿಸಲು ಸಾಧ್ಯ. ಈ ಪ್ರಪಂಚದ ಸಹಜ ನಡೆಯೇ ಹಾಗೆ, ಬಲಿಷ್ಠವಾದುದು ಬದುಕುತ್ತದೆ; ದುರ್ಬಲವಾದುದು ಅಳಿಯುತ್ತದೆ. ಹಾಗಾಗಿ ನಾವು ಬದುಕಬೇಕಾದರೆ ಬಲವನ್ನು ಸಂಪಾದನೆ ಮಾಡುವುದು ಅತ್ಯಂತ ಅಗತ್ಯ. ಹೀಗೆ ವಿದ್ಯೆ, ಧನ ಮತ್ತು ಬಲ ಇವುಗಳಿಂದ ಬರುವ ಯಾವ ಕೀರ್ತಿ ಅಥವಾ ಪುಣ್ಯ ಇದೆಯೋ ಅದಕ್ಕೂ ಅಷ್ಟೇ ಬೆಲೆ ಉಂಟು. ಅದು ಹೆಚ್ಚು ಕಾಲ ಉಳಿಯುತ್ತದೆ. ನಾವು ಅಳಿದರೂ, ಕೀರ್ತಿಯು ನಮ್ಮನ್ನು ಉಳಿಸುತ್ತದೆ. ಅಂತಹ ಕೀರ್ತಿಯನ್ನು ಸಂಪಾದನೆ ಮಾಡುವುದು ಅತ್ಯಂತ ಅಗತ್ಯ. ನಾವು ಮಡಿದ ಮೇಲೂ ನಮ್ಮನ್ನು ಸುಂದರವಾಗಿಸುವುದು ಎಂದರೆ ಅದೇ ಪುಣ್ಯ ಅಥವಾ ಧರ್ಮ. ನಾವು ಬದುಕಿದಾಗ ಯಾವ ಒಳ್ಳೆಯ ಕಾರ್ಯವನ್ನು ಮಾಡುತ್ತೇವೋ, ಅದರಿಂದ ನಮಗೆ ಪುಣ್ಯ ಸಂಪಾದನೆ ಆಗುತ್ತದೆ. ಆ ಪುಣ್ಯ ಸಂಪಾದನೆಯ ಕಾರಣದಿಂದಲೇ ನಾವು ಪಡೆದ ಜನುಮದಲ್ಲೇ ನಮ್ಮ ಜೀವನದ ಸಾರ್ಥಕವನ್ನು ಕಾಣಬಹುದು ಅಥವಾ ಮತ್ತೂ ಉತ್ಕೃಷ್ಟ ಜನ್ಮವನ್ನು ಪಡೆದು ನಮ್ಮ ಪುರುಷಾರ್ಥವನ್ನು ಪೂರ್ಣಮಾಡಿಕೊಳ್ಳಲು ಅವಕಾಶವಿದೆ. ಹಾಗಾಗಿ ಪ್ರತಿಯೊಬ್ಬರೂ ಬಯಸಬೇಕಾದದ್ದು ಇಂತಹ ಪುಣ್ಯವನ್ನೇ. ಇಲ್ಲಿ ಹೇಳಿದ ಎಲ್ಲವೂ ಧರ್ಮಮಯ ಜೀವನಕ್ಕೆ ಅನುಕೂಲವಾದ ಸಾಮಗ್ರಿಗಳು. ಆದ್ದರಿಂದ ಇವುಗಳನ್ನು ಮಾನವನಾದವನು ಸಂಪಾದನೆ ಮಾಡಲೇಬೇಕು.


ಸೂಚನೆ :  9/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, August 2, 2026

ಅಷ್ಟಾಕ್ಷರೀ 111 ಸಂಕಲ್ಪಾಃ ಕಲ್ಪತರವಃ (Astakshara 111)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



 ಬಯಸಿದುದೆಲ್ಲಾ ಬಂದೇಬಿಟ್ಟೀತು, ಜೋಕೆ!

ಎಷ್ಟೋ ಬಾರಿ ನಮಗೆ ಒಂದು ಪ್ರಶ್ನೆಯುಂಟಾಗುತ್ತದೆ - ಜೀವನದಲ್ಲಿ ತೃಪ್ತಿಯಿರಬೇಕೋ? ಇರಬಾರದೋ? - ಎಂದು.

ಏಕೆ? ತೃಪ್ತಿಯೂ ಒಳ್ಳೆಯದಲ್ಲ, ಅತೃಪ್ತಿಯೂ ಒಳ್ಳೆಯದಲ್ಲ! ಹೇಗೆ? ಅಲ್ಪತೃಪ್ತಿಯೇ ಇದ್ದುಬಿಟ್ಟರೆ ಮುಂದೆ ಮತ್ತಾವುದಕ್ಕೂ ಶ್ರಮಿಸಬೇಕೆನಿಸುವುದಿಲ್ಲ.

"ಹಾಸಿಗೆಯಿದ್ದಷ್ಟು ಕಾಲು ಚಾಚು" ಎಂಬ ಗಾದೆಯಿದೆ. ಹಾಗೆಂದರೇನು? ನಮ್ಮ ಮಿತಿಯನ್ನರಿತು ಬಾಳಬೇಕು; ಮಿತಿಮೀರಿದ ಅಭಿಲಾಷೆ ಬೇಡ - ಎಂದು.

ಒಂದು ಗಾದೆಯ ಮಾತನ್ನೇ ಅಷ್ಟೊಂದನುಸರಿಸುವುದೇ? - ಎಂದರೆ ಅದಕ್ಕೂ ಸಮರ್ಥಕವಾಗಿ ಮತ್ತೂ ಒಂದು ಗಾದೆಯೇ ಇದೆಯಲ್ಲವೇ: "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂದು!

ಆದರಿದೋ, ಪರಸ್ಪರ-ವಿರುದ್ಧವಾದ ಗಾದೆಗಳೂ ಇರುತ್ತವಲ್ಲವೇ? ಹಾಗಾದರೆ, ಮತ್ತೆ ನಮ್ಮ ವಿವೇಚನೆಗೆ ಕೆಲಸವಿದ್ದೇ ಇದೆಯೆಂದಾಯಿತು.

ಇನ್ನು ತೃಪ್ತಿಯ ಬದಲು ಅತೃಪ್ತಿಯೇ ಮನಸ್ಸಿನಲ್ಲಿ ಉಳಿದರಂತೂ ನೆಮ್ಮದಿಯೇ ಇರದಷ್ಟೆ. ಇವಿಷ್ಟರ ಮಥಿತಾರ್ಥವಿದು: ಅತೃಪ್ತಿಯಿರಬೇಕು: ಅದಿದ್ದರಲ್ಲವೇ ಮನುಷ್ಯನು ಮುಂದುಮುಂದಕ್ಕೆ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವಾಗುವುದು? ಹಾಗೆಂದು ಅತೃಪ್ತಿಯೇ ಸದಾ ಇರುವುದಾದರೂ ಕಷ್ಟವೇ: ಏನೆಲ್ಲಾ ಸಾಧಿಸಿದರೂ ಹಂಬಲಗಳಿಗೊಂದು ನಿಲುಗಡೆಯೆಂಬುದೇ ಇಲ್ಲವಾಗಿ, ಸದಾ ಕೆರಳಿರುವಂತೆಯೇ ಆಗಿಬಿಡುವುದು. ಅಲ್ಲಿಗೆ ತೃಪ್ತಿ-ಅತೃಪ್ತಿಗಳಲ್ಲಿ ಏನೋ ಒಂದು ತೋಲನವಿರಬೇಕಾಗುತ್ತದೆ. 

ಎಷ್ಟೋ ಬಾರಿ ನಾವು ಕೇಳುವ/ಕೇಳಿಕೊಳ್ಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವು ದೊರಕಿತೆಂದಾದರೂ, ಆ ಉತ್ತರದಲ್ಲೂ ಸ್ಪಷ್ಟತೆಯನ್ನು ಸಾಧಿಸಿಕೊಳ್ಳಬೇಕಾಗಿರುವುದು ಉಳಿದಿರುತ್ತದೆ. ಹೇಗೆ? "ನಾವು ಹೇಗೆ ಬದುಕಬೇಕು?" - ಎಂಬುದು ಪ್ರಶ್ನೆಯಾದರೆ, ಅದಕ್ಕೆ "ತಾನೂ ಇತರರೂ ಚೆನ್ನಾಗಿರುವಂತೆ ಬದುಕಬೇಕು" ಎಂಬುದೊಂದು ಒಳ್ಳೆಯ ಉತ್ತರ. ಆದರೆ ಜೊತೆಗೇ, "ಚೆನ್ನು ಎಂದರೇನು?” - ಎಂಬ ಪ್ರಶ್ನೆ ಬಂದರೆ, ಅದಕ್ಕೆ ಉತ್ತರಕೊಡುವುದು ಸುಲಭವಲ್ಲ, ಅಲ್ಲವೇ?

ನಾವು ಚೆನ್ನಾಗಿ ಬದುಕಬೇಕೆಂದರೆ, ಏನನ್ನಾದರೂ ದೊಡ್ಡದನ್ನು ಸಾಧಿಸಬೇಕು ಎನ್ನುವುದುಂಟು.  ದೊಡ್ಡದಕ್ಕಾಗಿ ತಪಸ್ಸು ಬೇಕು ಎನ್ನುವರಲ್ಲವೇ? "ಯಾವಯಾವುದು ದುರ್ಲಭವೋ, ಯಾವಯಾವುದು ದುಷ್ಕರವೋ, ಅದನ್ನೆಲ್ಲಾ ತಪಸ್ಸಿನಿಂದ ಸಾಧಿಸಬಹುದು: ತಪಸ್ಸಿಗೆ ಎಟುಕದುದುಂಟೇ?” – ಎಂದಿದ್ದಾನೆ, ಮನು.

ಉಕ್ತಿಮಾತ್ರವಲ್ಲ; ಹಾಗೆ ತಪಸ್ಸು ಮಾಡಿ, ಇತರರಿಗೆ ಸಾಧ್ಯವಾಗದುದನ್ನು ಸಾಧಿಸಿದ ಅನೇಕರ ಕಥೆಗಳು ನಮ್ಮ ಇತಿಹಾಸ-ಪುರಾಣಗಳಲ್ಲುಂಟಷ್ಟೆ?

ಹೀಗಾಗಿ, ಬೇಕಾದುದನ್ನೆಲ್ಲ ತಪಸ್ಸಿನಿಂದ ಸಾಧಿಸಿಕೊಳ್ಳಬಹುದೆಂದುಕೊಂಡರೂ, ಎಲ್ಲವೂ ಸ್ಪಷ್ಟವಾಯಿತೆಂದಲ್ಲ. ಏಕೆ? ತಪಸ್ಸು ಮಾಡಿಯೂ ಕಂಗೆಟ್ಟವರಿಲ್ಲವೇ?

ಮತ್ತೆ ಪ್ರಶ್ನೆ: ತಪಸ್ಸನ್ನು ಮಾಡಿದವರಿಗೆಲ್ಲಾ ವರವೀಯುವವನು ಭಗವಂತನೇ ಅಲ್ಲವೇ? ಆದರೂ ಹಾಳಾದವರುಂಟೇ?  

ಉಂಟೇ ಉಂಟು. ಹತ್ತು ತಲೆಯ ರಾವಣನೂ ಸತ್ತುಹೋದನಲ್ಲವೇ? ಭಸ್ಮಾಸುರನು ತಾನೇ ಭಸ್ಮವಾಗಿಬಿಡಲಿಲ್ಲವೇ? ಹಿರಣ್ಯಕಶಿಪುವಿಗೆ ಎಂತಹ ಕ್ರೌರ್ಯದ ಮರಣ ಸಂದಿತಲ್ಲವೇ? ಇವರೆಲ್ಲರೂ ತಪಸ್ಸು ಮಾಡಿದ್ದವರೇ; ಘೋರವಾದ ತಪಸ್ಸನ್ನೇ ಆಚರಿಸಿದ್ದವರೇ!

ತಪಸ್ಸಿಗಿಂತಲೂ ಉತ್ತಮವಾದ ಸಾಧನವಿಲ್ಲವೆಂದರೂ ಹೀಗೇಕೆ ಈ ತಪಸ್ವಿಗಳಿಗೆಲ್ಲಾ ಘೋರಪತನವಾಯಿತು? ತಪೋಲಬ್ಧವಾದ ಅನುಪಮ-ಬಲವಿದ್ದೂ ಒಬ್ಬೊಬ್ಬನೂ ಲೋಕ-ಕಂಟಕನೂ ಆತ್ಮ-ಘಾತಕನೂ ಆಗಿಬಿಟ್ಟನಲ್ಲಾ? ಹಾಗಿದ್ದರೆ ಇವರೆಲ್ಲಾ ಎಡವಿದ್ದೆಲ್ಲಿ?

ಇದರ ಉತ್ತರವನ್ನು ಭಾವನೋಪನಿಷತ್ತಿನ ಒಂದು ಸುಂದರವಾದ ಕಿರುನುಡಿಯಲ್ಲಿ ಕಂಡುಕೊಳ್ಳಬಹುದು: “ಸಂಕಲ್ಪಾಃ ಕಲ್ಪತರವಃ” (ನಮ್ಮ ಸಂಕಲ್ಪಗಳೇ ಕಲ್ಪವೃಕ್ಷಗಳು!) – ಎಂಬ ಮಾತದು.

ಶ್ರೀರಂಗಮಹಾಗುರುಗಳ ಒಂದು ಮಾತು ಈ ಸಂದರ್ಭದಲ್ಲಿ ಮನನೀಯವಾಗಿದೆ: "ಭಗವಂತನು ಎಲ್ಲರಿಗೂ ಒಂದೇ ಆಶೀರ್ವಾದವನ್ನು ಮಾಡಿದ್ದಾನೆ: ಹೇಗೆ ಮನಸ್ಸಿದ್ದರೆ ಹಾಗೆ ಬಾಳು - ಎಂಬುದಾಗಿ. ಮನಸ್ಸು ಒಂದು ಕಲ್ಪವೃಕ್ಷ: ಏನನ್ನು ಸಂಕಲ್ಪಿಸುತ್ತೇವೆಯೋ  ಅದಕ್ಕನುಗುಣವಾದ ಫಲವನ್ನು ಪಡೆಯುತ್ತೇವೆ"!

ರಾವಣಾದಿಗಳು ಉಗ್ರವಾದ ತಪಸ್ಸನ್ನೇನೋ ಮಾಡಿದರು. ಆದರೆ ತಮ್ಮತಮ್ಮ ಸಂಕಲ್ಪದಂತೆ ಕ್ಷುದ್ರ-ಫಲಗಳನ್ನೇ ಕೇಳಿಕೊಂಡರು - ಅವೇ ನಮಗೆ ಅದ್ಭುತವೆನಿಸುವುದಾದರೂ! 

ಬ್ರಹ್ಮನ ಕೆಲಸವೊಂದೇ: ಎಲ್ಲರಿಗೂ ಅವರವರ ಸಂಕಲ್ಪಕ್ಕೆ “ತಥಾಸ್ತು” ಎನ್ನುವುದು. ಎಂದೇ, ಕೇಳಿಕೊಳ್ಳುವಾಗಲೇ ಸರಿಯಾದ ವರವನ್ನೇ ಹೇಳಿಕೊಳ್ಳಬೇಕು! ಕಾರ್ಯಾರಂಭದಲ್ಲೇ ಸಂಕಲ್ಪವು ಯುಕ್ತವಾಗಿರಬೇಕು! ಇಲ್ಲವೋ, ಸ್ವ(ಕೀಯ)ನಾಶವು ಸಿದ್ಧ!

ಚಿಂತಿಸಿದ್ದನ್ನೆಲ್ಲಾ ಕೊಡುವ ಚಿಂತಾಮಣಿ/ಕಾಮಧೇನು/ಕಲ್ಪವೃಕ್ಷಗಳು ದೇವಲೋಕದಲ್ಲಿವೆಯೆನ್ನುತ್ತಾರೆ. ಅದು ಸುಳ್ಳಲ್ಲ; ಆದರೆ ನಮ್ಮೊಳಗೇ ಇರುವ  ಕಲ್ಪವೃಕ್ಷವೊಂದನ್ನು ನಾವು ಗಮನಿಸುತ್ತಿಲ್ಲ: ನಮ್ಮ ಸಂಕಲ್ಪವೇ ಅದು!

ಸತ್ಸಂಕಲ್ಪಬೀಜಗಳಿಗೆ ಸಂತತ-ಸಾಧನೆಯೆಂಬ ಸಲಿಲ-ಸೇಕವಿದ್ದಲ್ಲಿ ಸ್ವಹಿತ-ಪರಹಿತಗಳೆಂಬ ಸತ್ಫಲಗಳು ಸೊಂಪಾಗಿ ಸಂಪಾದಿತವಾಗುವುವೆಂಬುದರಲ್ಲಿ ಸಂಶಯವೇನು? 

ಯಾವುವು ಸತ್ಸಂಕಲ್ಪಗಳು? ಎರಡೇ: ದೇಶಹಿತ-ಸಾಧನವೆಂಬುದೊಂದು; ಆತ್ಮಜ್ಞಾನ-ಸಾಧನವೆಂಬುದೊಂದು. ಉಳಿದೆಲ್ಲ ಬಯಕೆಗಳೂ ಇವಕ್ಕೆ ಅಂಗಭೂತವಾಗಿರುವುದೇ ತೆರನಾದುದು. 

ದೇಶಸೇವೆ-ಈಶಸೇವೆಗಳಿಗಾಗಿ ಜೀವತೇಯುವವರಿಗಿಂತಲೂ ಧನ್ಯರುಂಟೆ? ಚೆನ್ನಿನ ಜೀವನವೆಂಬುದೊಂದಿದ್ದರೆ ಅವರದೇ! ಇವೆರಡೂ ಸಂಪೂರ್ಣವಾಗಿ ಸಾಧಿತವಾಗುವ ತನಕ ಅತೃಪ್ತಿಯೇ; ಎಷ್ಟೆಷ್ಟು ಸಾಧಿತವಾದರಷ್ಟಷ್ಟು  ತೃಪ್ತಿಯೇ!

ಸೂಚನೆ: 1/08//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.



ಧರ್ಮ- ಶಾಸ್ತ್ರ (Dharma - Shastra)


   
ಲೇಖಕರು: ಎಂ. ಆರ್. ಭಾಷ್ಯಮ್

ಪ್ರತಿಕ್ರಿಯಿಸಿರಿ (lekhana@ayvm.in)

Screenshot 2026-08-02 133835.png

ಸಾಮಾನ್ಯವಾಗಿ  ‘ಧರ್ಮ’ ವೆಂದರೆ ಹಿಂದೂಧರ್ಮ, ಮುಸಲ್ಮಾನಧರ್ಮ, ಕ್ರಿಸ್ತಧರ್ಮ ಎಂದು ಒಂದು ಮತಕ್ಕೆ ಅಥವಾ ಕೋಮಿಗೆ ಪರ್ಯಾಯಪದವಾಗಿ ಉಪಯೋಗಿಸುತ್ತಾರೆ. ಆದರೆ ಆರ್ಯ ಭಾರತಮಹರ್ಷಿಗಳು ಇದನ್ನು ಬೇರೆಯಾಗಿಯೇ ಅರ್ಥೈಸಿದ್ದರು.  ಉದಾಹರಣೆಗೆ ‘ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ,’  ‘ಜಗತಃ ಸ್ಥಿತಿಕಾರಣಂ ಧರ್ಮಃ’;  ವಿಶ್ವವೆಲ್ಲವೂ ಧರ್ಮದಲ್ಲಿ ನೆಲೆಗೊಂಡಿದೆ;  ಜಗತ್ತಿನ ಇರುವಿಕೆಗೆ  ಧರ್ಮವೇ ಕಾರಣ; ಅಂದರೆ ಧರ್ಮ ಒಂದು ಮತಕ್ಕೆ ಅಥವಾ ಕೋಮಿಗೆ ಸಂಭಂದಿಸಿದ್ದಲ್ಲ.  

ಒಂದು ಬೀಜವನ್ನು ತೆಗೆದುಕ್ಕೊಳ್ಳುವ. ಅದನ್ನು ಭೂಮಿಯಲ್ಲಿ  ನೆಟ್ಟು ತನ್ನ ನೈಜತೆಯನ್ನು ಉಳಿಸಿಕೊಂಡು ಬೆಳೆದರೆ  ಮೊಳಕೆ, ಕಾಂಡ, ಕೊಂಬೆ - ರಂಬೆಗಳು, ಎಲೆ - ಹೂವು - ಕಾಯಿ - ಫಲವಾಗಿ ಕೊನೆಗೆ ಬೀಜದಲ್ಲಿಯೇ ಪರ್ವ್ಯಸನಗೊಳ್ಳುತ್ತದೆ. ಅಂದರೆ ಇಡೀ ವೃಕ್ಷದ ರಚನೆ,  ಬೀಜದಲ್ಲಿ ಅಡಗಿದೆ. ಆದರೆ ಬೀಜ ಮೊಳಕೆ ಒಡೆಯಬೇಕಾದರೆ ಅದರಮೇಲಿನ ‘ಮೇಲ್ಪದರ - ಕವಚ’ ಇರಬೇಕು. ಇಲ್ಲದಿದ್ದರೆ ಅದು ಮೊಳಕೆಯೊಡೆಯುವುದಿಲ್ಲ. ಉದಾಹರಣೆಗೆ ಭತ್ತದಮೇಲಿನ ಹೊಟ್ಟುಇಲ್ಲದಿದ್ದರೆ ಭತ್ತ ಮೊಳಕೆ ಒಡೆಯುವುದಲ್ಲ. ಈ ಮೇಲಿನ ಕವಚ (ಹೊಟ್ಟು) ಬೀಜದ ವಿಕಾಸವನ್ನು ಅಸ್ತಿತ್ವದಲ್ಲಿರಿಸಿ ಉಳಿಸುತ್ತದೆ. ಆದ್ದರಿಂದ ಈ  ಕವಚ ಮತ್ತು ಅದರ ಈ ಗುಣವನ್ನು  ‘ಧರ್ಮ’ ವೆಂದು ಕರೆಯುತ್ತಾರೆ. 

‘ಧರ್ಮ’ ವೆಂಬ ಪದದ ವ್ಯುತ್ಪತ್ತಿ   ‘ಧೃ’ ಎಂಬ ಧಾತುವಿನಿಂದ. ‘ಧೃ’ ಎಂದರೆ ‘ಧರಿಸುವುದು’  ಅಥವಾ ‘ಅಸ್ತಿತ್ವದಲ್ಲಿರಿಸುವುದು’. ಮೇಲಿನ ಬೀಜ- ಗಿಡದ ಉದಾಹರಣೆಯಲ್ಲಿ ಮೇಲಿನ ಕವಚ ಧರ್ಮ. ಜೊತೆಗೆ, ಇನ್ನೂವಿಕಾಸವಾಗದ ಬೀಜದ  ಸ್ಥಿತಿಗೆ ‘ಋತ’  ವೆಂದೂ, ವಿಕಸಿತ ಗಿಡದ ಸ್ಥಿತೆಗೆ ‘ಸತ್ಯ’ ವೆಂದೂ  ಕರೆಯುತ್ತಾರೆ. ಅಂದರೆ  ಯಾವುದು ಈ ‘ಋತ- ಸತ್ಯಚಕ್ರ’ಗಳ  ಸಂಯೋಜನೆಯನ್ನು ಮತ್ತು   ಆವರ್ತವನ್ನು ಧರಿಸಿ-ಉಳಿಸುತ್ತದೆಯೋ ಅದು ಧರ್ಮ.  ಈ ಸಂಯೋಜನೆಗೆ ವಿರುದ್ಧವಾಗಿ, ಆವರ್ತವನ್ನು ಕೆಡಿಸುವ ನಡೆಯುಂಟಾದರೆ ಅದು ಧರ್ಮಕ್ಕೆ ವಿರುದ್ಧ, ಅಧರ್ಮ. ಋತ-ಸತ್ಯಚಕ್ರವನ್ನು  ಕಾಪಾಡಿ ಉಳಿಸಿದರೆ, ಆಗ ಈ ವ್ಯವಸ್ಥೆ ಶುದ್ಧರೂಪದಲ್ಲಿ ಉಳಿದು, ನಿರಂತರವಾಗಿ ಮುಂದುವರೆಯುತ್ತದೆ. 

ನೋಡುವುದು ಕಣ್ಣಿನಧರ್ಮ. ಆ ನೋಟ ಕೆಟ್ಟರೆ ಕಣ್ಣು ತನ್ನ ‘ಧರ್ಮ’ದಲ್ಲಿ ಉಳಿದಿರುವುದಿಲ್ಲ. ಕೆಡಿಸುವುದು ಯಾವುದೇ ಆಗಿದ್ದರೂ ಅದು ‘ಅಧರ್ಮ’. ಇದನ್ನು ಮಾನವನ ಜೀವನಕ್ಕೆ ಅನ್ವಯಿಸಬಹುದು. ಭಾರತೀಯರ ಜೀವನದ ಉದ್ದೇಶ ಇಹಲೋಕದ ಸಮೃದ್ಧಿ, ಪರಲೋಕದ ಪ್ರಾಪ್ತಿ. ಹೇಗೆ ಜೀವನವನ್ನು ಅಳವಡಿಸಿ ನಡೆಸಿದರೆ ಇವೆರೆಡೂ ದೊರೆಯೆತ್ತದೆಯೋ ಅದೇ ಸರಿಯಾದ ಜೀವನ, ಧಾರ್ಮಿಕ ಜೀವನ. ಅದೇ ಅವರ ಧರ್ಮ. ಶ್ರೀರಂಗಮಹಾಗುರುಗಳು ಮಾನವನ  ಜೀವನಕ್ಕೆ ಅನ್ವಯಿಸುವಂತೆ  ಉಲ್ಲೇಖಿಸುತ್ತಿದ್ದವಾಕ್ಯ  ‘ ಯತೋ ಅಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ - ಯಾವುದು ಇಹಲೋಕದ  ಶ್ರೇಯಸ್ಸಿಗೆ ಮತ್ತು ಪರಲೋಕದ ಸಿದ್ಧಿಗೆ ಕಾರಣವಾಗುತ್ತದೋ ಅದೇ ಧರ್ಮ’

ಇನ್ನು ಶಾಸ್ತ್ರ. ಶಾಸ್ತ್ರ ವೆಂದರೆ ಪ್ರಕೃತಿಯ ಶಾಸನ, ಅಂದರೆ ಮಾಡು - ಬೇಡಗಳು. ಯಾವದನ್ನು ಮಾಡಿದರೆ (ಅಥವಾ ಮಾಡದಿದ್ದರೆ) ಧರ್ಮ ಉಳಿಯುತ್ತದೆಯೋ, ಅದೇ ಶಾಸ್ತ್ರ. ‘ಕಣ್ಣಿನ ತಂಪಿಗೆ ಹರಳೆಣ್ಣೆಯನ್ನು ಹಾಕು,’ ಒಂದು ವಿಧಿ, ಮಾಡಿದರೆ ಧರ್ಮ. ಬದಲು ಮೆಣಸಿನ ಪುಡಿ ನಿಷಿಧ್ಧ, ಬಳಸಿದರೆ ಕಣ್ಣಿನ ‘ಧರ್ಮ’  ಹಾಳು. ಇದೊಂದು ಸರಳ  ಉದಾಹರಣೆ. ಆದರೆ ಮಾನವನ ಜೀವನದಲ್ಲಿ  ಇಹಲೋಕದ  ಶ್ರೇಯಸ್ಸು  ಮತ್ತು ಪರಲೋಕದ ಸಿದ್ಧಿ ಎರಡೂ ದೊರೆಯುವಂತೆ ಮಾಡುವ ಜೀವನದ ನಡೆವಳಿಕೆಯ ಅರಿವು ಬಹಳ ಕಷ್ಟ. ಆದ್ದರಿಂದ  ಋಷಿ-ಮುನಿಗಳು ತಮ್ಮ ತಪಸ್ಸಿನಿಂದ ಅದನ್ನು ಅರಿತು ಸಾಮಾನ್ಯ ಜನತೆಯ ಉಪಯೋಗಕ್ಕೆ ‘ಧರ್ಮಶಾಸ್ತ್ರ’ ಗ್ರಂಥಗಳನ್ನು ರಚಿಸಿದರು. ಈ ಗ್ರಂಥಗಳು ಮಾಡು-ಬೇಡಗಳ ಪಟ್ಟಿ - ನಕಾಶೆಗಳು. ಪಾಲಿಸಿದರೆ ಇಹಲೋಕದ ಸೌಖ್ಯ, ಪರಲೋಕದ ಪ್ರಾಪ್ತಿ. ಇಲ್ಲದಿದ್ದರೆ ಎರಡೂ ಇಲ್ಲ.

ಸೂಚನೆ : 01/07/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, July 31, 2026

ಪ್ರಶ್ನೋತ್ತರ ರತ್ನಮಾಲಿಕೆ 76 (Prasnottara Ratnamalike 76)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೬. ಯಾರ ಸ್ಮರಣೆಯನ್ನು ಮಾಡಿಕೊಳ್ಳಬಾರದು?

ಉತ್ತರ- ಬೇರೆಯವರ ದೋಷವನ್ನು ಮತ್ತು ಸುಳ್ಳನ್ನು.


ಈ ಹಿಂದಿನ ಲೇಖನದಲ್ಲಿ, ಸ್ಮರಣೆ ಎಂದರೇನು? ಯಾವುದನ್ನು ಸ್ಮರಿಸಿಕೊಳ್ಳಬೇಕು? ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಲಾಗಿತ್ತು. ಈಗ ಅದರ ಮುಂದುವರಿಕೆಯಾಗಿ ಯಾವುದನ್ನು ಮರೆಸಿಕೊಳ್ಳಬಾರದು? ಎಂಬ ವಿಷಯವಾಗಿ ಸ್ವಲ್ಪ ಅವಲೋಕನ ಮಾಡೋಣ. ಸ್ಮರಣೆಯನ್ನು ಏಕೆ ಮಾಡಿಕೊಳ್ಳಬೇಕು? ಅದರಿಂದ ಆಗುವ ಪ್ರಯೋಜನವೇನು? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಯಾವುದನ್ನು ಸ್ಮರಿಸಿಕೊಳ್ಳುತ್ತೇವೆಯೋ ಆ ವಿಷಯ ನಮಗೆ ಅರಿವಾಗುತ್ತದೆ ಮತ್ತು ಆ ವಿಷಯದಿಂದ ಆಗುವ ಪ್ರಯೋಜನ ನಮಗೆ ಲಭ್ಯವಾದಂತೆ ಆಗುತ್ತದೆ. ಆದ್ದರಿಂದ ವಿಷಯದ ಸ್ಮರಣೆ ಅತ್ಯಂತ ಮುಖ್ಯವಾದದ್ದು ಎಂಬುದು ಇದರ ತಾತ್ಪರ್ಯ.


ನಾವು ಮಾಡುವ ಸ್ಮರಣೆಯು ಯಾವುದಿರುತ್ತದೆಯೋ, ಅದರಂತೆ ನಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳೆಲ್ಲವೂ ಅದಕ್ಕೆ ಪೂರಕವಾಗಿ ಕೆಲಸವನ್ನು ಮಾಡುತ್ತವೆ. ಆಗ ನಮ್ಮ ನಡೆ ನುಡಿಗಳಲ್ಲಿ ಅದರ ಛಾಯೆಯು ಒಡಮೂಡುತ್ತದೆ. ಅಂದರೆ ಯಾವಾಗ ನಾವು ಸತ್ಯ, ಪ್ರಾಮಾಣಿಕತೆ, ದಯೆ ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಳ್ಳುತ್ತೇವೋ, ಆಗ ನಮ್ಮ ನಡೆನುಡಿಗಳು ಅದಕ್ಕೆ ತಕ್ಕಂತೆ ಇರುತ್ತವೆ. ಆಗ ನಾವು ಮಾತನಾಡುವುದು ಸತ್ಯವಾಗಿರುತ್ತದೆ; ನಮ್ಮ ನಡೆಯು ಸತ್ಯಕ್ಕೆ ಅವಿರೋಧವಾಗಿ ಇರುತ್ತದೆ. ಅದೇ ನಮ್ಮ ಸ್ಮರಣೆಯು ಇದಕ್ಕೆ ವಿರುದ್ಧವಾಗಿದ್ದರೆ ಆಗ ನಡೆನುಡಿಗಳು ವಿರುದ್ಧವಾಗಿಯೇ ಇರುತ್ತವೆ. ಹಾಗಾಗಿ ಈ ಸ್ಮರಣೆಯು ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಅದು ಎಷ್ಟು ನಮಗೆ ಪೂರಕವಾಗುತ್ತದೆ ಎಂಬುದು ಕೂಡ ಅಷ್ಟೇ ಗಮನಾರ್ಹ. ನಾವು ಯಾವುದನ್ನು ಸ್ಮರಿಸಿಕೊಳ್ಳಬೇಕು? ಯಾವುದನ್ನು ಮರೆಯಬಾರದು? ಎಂಬುದನ್ನೂ ಕೂಡ ನಾವು ಯೋಚಿಸಬೇಕು.


ಅದಕ್ಕಾಗಿ ಈ ಪ್ರಶ್ನೋತ್ತರದಲ್ಲಿ ಯಾವುದನ್ನು ಸ್ಮರಿಸಿಕೊಳ್ಳಬಾರದು? ಎಂಬ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಬೇರೆಯವರ ದೋಷವನ್ನು ಮತ್ತು ಸುಳ್ಳನ್ನು ಸ್ಮರಿಸಿಕೊಳ್ಳಬಾರದು ಎಂಬುದಾಗಿ ಇಲ್ಲಿ ಹೇಳಲಾಗಿದೆ. ದೋಷವನ್ನು ತಿಳಿದುಕೊಳ್ಳಬೇಕು ಎಂಬುದಾಗಿ ಹೇಳಿದೆ. ತಿಳಿದುಕೊಂಡವನಿಗೆ ದೋಷಜ್ಞ ಅಥವಾ ಪಂಡಿತ ಎಂಬುದಾಗಿಯೂ ಕರೆಯುವುದುಂಟು. “ವಿದ್ವಾನ್ ವಿಪಶ್ಚಿತ್ ದೋಷಜ್ಞಃ” ಎಂಬುದಾಗಿ ‘ದೋಷಜ್ಞ’ ಎಂಬ ಪದಕ್ಕೆ ‘ವಿದ್ವಾನ್’ ಎಂಬ ಪರ್ಯಾಯ ಪದವನ್ನು ಕೊಟ್ಟಿದ್ದನ್ನು ಕಾಣಬಹುದು. ಅಂದರೆ ದೋಷವನ್ನು ತಿಳಿಯಬೇಕಾದದ್ದು ಸರಿಯೇ. ಆದರೆ ತಿಳಿದ ದೋಷವನ್ನು ಕಳೆದುಕೊಳ್ಳುವಷ್ಟು ಮಾತ್ರ ಸ್ಮರಿಸಿಕೊಳ್ಳಬೇಕೇ ವಿನಾ ಮತ್ತೆ ಮತ್ತೆ ಆ ದೋಷವನ್ನು ಸ್ಮರಿಸಿಕೊಂಡಂತೆ ಆ ದೋಷ ನಮ್ಮ ಮೈಮನಗಳಲ್ಲಿ ಆಡಲು ಶುರುವಾಗುತ್ತದೆ. ಹಾಗಾಗಿ ಆ ದೋಷ ನಮ್ಮ ಮೈಮನಗಳಿಗೆ ತಟ್ಟಿದರೆ ಅದರ ಪರಿಣಾಮ ನಮ್ಮ ಮುಂದಿನ ನಡೆನುಡಿಗಳಲ್ಲಿ ಉಂಟಾಗುತ್ತವೆ. ಅಂತೆಯೇ ಸುಳ್ಳನ್ನು ನಾವು ಹೇಳಬಾರದು. ಒಂದು ವೇಳೆ ಯಾವುದೋ ಸತ್ಯದ ಸ್ಥಾನದಲ್ಲಿ ಹೇಳಿರುವ ಸತ್ಯಕ್ಕೆ ಇರುವಷ್ಟೇ ಬೆಲೆಯುಳ್ಳ ಸುಳ್ಳನ್ನು ಹೇಳಿರಬಹುದು. ಆ ಸುಳ್ಳು ಆ ಕಾಲಕ್ಕೆ ಮಾತ್ರವೇ ಸೀಮಿತ. ಅದನ್ನು ಮತ್ತೆ ಮತ್ತೆ ನಾವು ಹೇಳುವುದು ಯೋಗ್ಯವಲ್ಲ, ಅದನ್ನು ಸ್ಮರಿಸಿಕೊಳ್ಳುವುದು ಕೂಡ ಯೋಗ್ಯವಲ್ಲ ಎಂಬ ಅರ್ಥದಲ್ಲಿ ಈ ಪ್ರಶ್ನೋತ್ತರ ಇದೆ. ಹಾಗಾಗಿ ಸುಳ್ಳು ಮತ್ತು ದೋಷ ಸ್ಮರಿಸಿಕೊಂಡಷ್ಟು ಹೆಚ್ಚುತ್ತದೆ. ಅದು ಹಾನಿಯನ್ನು ಉಂಟುಮಾಡುತ್ತದೆ. ಹಾಗಾಗಿ ಅವುಗಳನ್ನು ಸ್ಮರಿಸಿಕೊಳ್ಳದಿರುವುದು ಒಳಿತು ಎಂಬ ನಿರ್ದೇಶನ ಇಲ್ಲಿದೆ.


ಸೂಚನೆ :  26/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 198 ದಶದಿಶೆಗಳಿಂದಲೂ ಯಾಗಕ್ಕಾಗಮಿಸಿದರು (Vyaasa Vikshita 198)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಸ್ವರ್ಗದಲ್ಲಿ ಇಂದ್ರನ ಕ್ರಿಯೆಯು ಹೇಗೋ ಹಾಗೆಯೇ ಯುಧಿಷ್ಠಿರನ ಯಜ್ಞಕಾರ್ಯವೂ ಭೂಮಂಡಲದ ಮೇಲೆ ನಡೆಯುವಂತಾಯಿತು.

ಇದೆಲ್ಲ ಹೀಗೆ ಜರುಗುತ್ತಿರಲು, ಧರ್ಮರಾಜನು ನಕುಲನನ್ನು ಹಸ್ತಿನಾವತಿಗೆ ಕಳುಹಿಸಿದನು - ಭೀಷ್ಮ, ದ್ರೋಣ, ಧೃತರಾಷ್ಟ್ರ, ವಿದುರ, ಕೃಪ, ಹಾಗೂ ಎಲ್ಲ ಭ್ರಾತೃಗಳು, ಹಾಗೂ ಯಾರು ಯಾರು ಯುಧಿಷ್ಠಿರನಲ್ಲಿ ಅನುರಕ್ತರಾಗಿದ್ದರೋ, ಅವರನ್ನೆಲ್ಲ ಕರೆಯಲು ನಕುಲನು ಹೋದನು.

ಹಾಸ್ತಿನಪುರಕ್ಕೆ (ಎಂದರೆ ಹಸ್ತಿನಾಪುರಕ್ಕೇ) ಹೋದ ನಕುಲನು ಭೀಷ್ಮನನ್ನೂ ಧೃತರಾಷ್ಟ್ರನನ್ನೂ ಆಮಂತ್ರಿಸಿದನು. ಸತ್ಕಾರಪೂರ್ವಕವಾಗಿ ಆಮಂತ್ರಣವನ್ನು ಪಡೆದಿದ್ದ ಭೀಷ್ಮಾಚಾರ್ಯರೇ ಮೊದಲಾದವರು ಬಹಳ ಸಂತೋಷಗೊಂಡವರಾಗಿ, ವಿಪ್ರರನ್ನು ಮುಂದಿಟ್ಟುಕೊಂಡು ಯಜ್ಞಶಾಲೆಯತ್ತ ನಡೆದರು.

ಧರ್ಮರಾಜನು ನಡೆಸುವ ಯಜ್ಞವಿದೆಂದು ತಿಳಿದು ಮತ್ತೂ ನೂರಾರು ಮಂದಿ ಸಂತುಷ್ಟರಾಗಿ ಅಲ್ಲಿಗೆ ಬಂದರು. ಧರ್ಮರಾಜನನ್ನು ನೋಡಬೇಕು, ಆತನ ಸಭೆಯನ್ನು ನೋಡಬೇಕು - ಎಂಬ ಬಯಕೆಯಿಂದ, ಎಲ್ಲ ದಿಕ್ಕುಗಳಿಂದಲೂ ಕ್ಷತ್ರಿಯರು ಅಲ್ಲಿಗೆ ಬಂದರು. ಬರುವಾಗ ನಾನಾರತ್ನಗಳನ್ನು, ವಿಶೇಷವಾಗಿ ಮಹಾರತ್ನಗಳನ್ನು, ತಂದರು.

ಅಲ್ಲಿಗೆ ಯಜ್ಞಕ್ಕೆ ಬಂದವರು ಯಾರಾರು? ಧೃತರಾಷ್ಟ್ರ, ಭೀಷ್ಮ, ಮಹಾಮತಿಯೆನಿಸಿದ್ದ ವಿದುರ, ದುರ್ಯೋಧನನನ್ನು ಮುಂದಿಟ್ಟುಕೊಂಡು ಬಂದ ಅವನೆಲ್ಲ ಭ್ರಾತೃಗಳು; ಗಾಂಧಾರರಾಜನೆನಿಸಿದ ಸುಬಲ, ಮಹಾಬಲಶಾಲಿಯಾದ ಶಕುನಿ, ರಥಿಶ್ರೇಷ್ಠನಾದ ಕರ್ಣ, ಶಲ್ಯ; ಸೋಮದತ್ತ, ಅಶ್ವತ್ಥಾಮ, ಕೃಪಾಚಾರ್ಯ, ದ್ರೋಣಾಚಾರ್ಯರು, ಸಿಂಧುರಾಜನಾದ ಜಯದ್ರಥ, ಸಪುತ್ರನಾಗಿ ಬಂದ ದ್ರುಪದ; ಸಾಳ್ವ ಪ್ರಾಗ್ಜ್ಯೋತಿಷಪುರದ ಒಡೆಯನಾದ ಭಗದತ್ತ, ಆತನೊಂದಿಗೆ ಆಗಮಿಸಿದ ಸಾಗರತೀರವಾಸಿಗಳಾದ ಮ್ಲೇಚ್ಛರು, ಪರ್ವತವಾಸಿಗಳು; ಪೌಂಡ್ರಕವಾಸುದೇವ, ವಂಗದೇಶದ ರಾಜ, ಕಳಿಂಗದ ಅರಸು, ಕುಂತಲ, ಮಾಲವ, ಆಂಧ್ರಕ, ದ್ರಾವಿಡ, ಸಿಂಹಳ; ಕಾಶ್ಮೀರದ ರಾಜ, ಕುಂತಿಭೋಜ, ಬಾಹ್ಲಿಕ, ಪುತ್ರರಿಬ್ಬರೊಂದಿಗೆ ಬಂದಿದ್ದ ವಿರಾಟ; ಇವರಲ್ಲದೆ ಇನ್ನೂ ನಾನಾ ಶೂರರಾಜರು.

ಅಷ್ಟೇ ಅಲ್ಲ, ತನ್ನ ಪುತ್ರನೊಂದಿಗೆ ಶಿಶುಪಾಲನೂ ಆಗಮಿಸಿದ್ದನು. ಶಿಶುಪಾಲನೆಂದರೆ ಸಾಮಾನ್ಯನಲ್ಲ; ಅವನು ಸಮರ-ದುರ್ಮದ - ಎಂದರೆ ರಣಾಂಗಣದಲ್ಲಿ ಕೆಟ್ಟಮದ ತೋರುವವನು; ಅಲ್ಲದೆ, ಬಲರಾಮ, ಅನಿರುದ್ಧ, ಪ್ರದ್ಯುಮ್ನ, ಸಾಂಬ, ಚಾರುದೇಷ್ಣ - ಇವರೇ ಮುಂತಾದ ಅನೇಕ ವೃಷ್ಣಿವೀರರೂ ಅಲ್ಲಿಗೆ ಆಗಮಿಸಿದ್ದರು. ಇವರೆಲ್ಲರೂ ಯುಧಿಷ್ಠಿರನ ಮಹಾಕ್ರತುವಿಗೆ, ಎಂದರೆ ಮಹಾಯಜ್ಞಕ್ಕಾಗಿ, ಬಂದು ಭಾಗವಹಿಸಿದರು.

ಧರ್ಮರಾಜನ ಅಪ್ಪಣೆಯಂತೆ ಅವರಿಗೆ ಆವಸಥಗಳನ್ನು, ಎಂದರೆ ವಾಸಭವನಗಳನ್ನು, ಕೊಡಲಾಯಿತು. ಅಲ್ಲಿ ಬಗೆಬಗೆಯ ಭಕ್ಷ್ಯಗಳಿದ್ದವು. ನಾನಾವೃಕ್ಷಶೋಭಿತವಾದ ಸ್ನಾನಗೃಹಗಳಿದ್ದವು. ಅವರಿಗೆ ಧರ್ಮರಾಜನು ಸ್ವತಃ ತಾನೇ ಸತ್ಕಾರವನ್ನು ನೆರವೇರಿಸಿದನು. ಸತ್ಕಾರ ಹೊಂದಿದ ಅವರು ತಮ್ಮ ತಮ್ಮ ಆವಸಥಗಳಿಗೆ ತೆರಳಿದರು.

ಅವರ ಆ ಬೀಡುಗಳಾದರೂ ಹೇಗಿದ್ದವು? ಕೈಲಾಸಶಿಖರದಂತೆ ಉತ್ತುಂಗವಾಗಿದ್ದವು, ಮನೋಜ್ಞವಾಗಿದ್ದವು. ಪ್ರತಿಯೊಂದರ ಸುತ್ತಲೂ ಪ್ರಾಕಾರಗಳು. ಚೆನ್ನಾಗಿ ಮಾಡಲ್ಪಟ್ಟ ಬಿಳೀಬಣ್ಣದ ಪ್ರಾಕಾರಗಳು. ಚಿನ್ನದ ಜಾಲರಿಗಳುಳ್ಳವು. ಮಣಿಮಯವಾದ ಅಂಗಣಗಳಿಂದ ಕೂಡಿದ್ದವು. ಸುಲಭವಾದ ಹತ್ತಲಾಗುವಂತಹ ಮೆಟ್ಟಿಲುಗಳುಳ್ಳವುಗಳು. ಅಡುಗೆಮನೆಯ ಸೌಕರ್ಯಗಳುಳ್ಳವು. ಪುಷ್ಪಮಾಲೆಗಳಿಂದ ಸಜ್ಜಾದ ಗೃಹಗಳು, ಅವು. ಉತ್ತಮವಾದ ಅಗುರುಗಳಿಂದ ಸುಗಂಧಿತವಾಗಿದ್ದಂತಹ ಆ ಅತಿಥಿಗೃಹಗಳು ಹಂಸವರ್ಣ-ಚಂದ್ರವರ್ಣಗಳಿಂದ ಲೇಪಿತವಾದವು. ಒಂದು ಯೋಜನದಷ್ಟು ದೂರಕ್ಕೇ, ಎಂದರೆ ಸುಮಾರು ೮ ಮೈಲಿಗೇ, ಕಾಣಿಸುತ್ತಿದ್ದಂತಹವು! ಎಲ್ಲೂ ಇಕ್ಕಟ್ಟಿರಲಿಲ್ಲ. ದ್ವಾರಗಳು ಸಮನಾಗಿದ್ದವು. ಎಲ್ಲ ಸೌಕರ್ಯಗಳೂ ನಾನಾ ವರ್ಣಗಳಿಂದೊಡಗೂಡಿದ್ದವು. ಅವುಗಳ ಗೋಡೆಗಳು ಅನೇಕ ಧಾತುಗಳಿಂದಾದಂತಹವು. ಹಿಮಾಲಯದ ಶಿಖರದಂತೆ ತೋರುವಂತಹವು. 

ಸೂಚನೆ :  26/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, July 19, 2026

ಅಷ್ಟಾಕ್ಷರೀ 110 ಭಗವಂತನು ಬಯಸುವುದು ದೃಢ-ಭಕ್ತಿಯೊಂದನ್ನೇ (Astakshara 110)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png

ಭಗವಂತನು ಬಯಸುವುದು ದೃಢ-ಭಕ್ತಿಯೊಂದನ್ನೇ

ಭಕ್ತನು ಭಗವಂತನಿಂದ ಬೇಕಾದಷ್ಟನ್ನು ಬೇಡಬಹುದು, ಆದರೆ ಭಕ್ತನಿಂದ ಭಗವಂತ ಕೇಳುವುದೇನನ್ನು? ಏಳು ನಿದರ್ಶನಗಳ ಮೂಲಕ ಈ ವಿಷಯವನ್ನು ಮನಮುಟ್ಟುವಂತೆ ಶ್ಲೋಕವೊಂದು ತಿಳಿಸಿಕೊಡುತ್ತದೆ. ಆ ನಿದರ್ಶನಗಳನ್ನಿಲ್ಲಿ ನೋಡುವಾ.

ಮೊದಲನೆಯದಾಗಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ದೃಷ್ಟಾಂತ. ಬೇಡರ ಕುಲದಲ್ಲಿ ಹುಟ್ಟಿದ್ದ ಅವನು ಕುಲಧರ್ಮವನ್ನು ನಿಷ್ಠೆಯಿಂದ ಆಚರಿಸುತ್ತಿದ್ದ. ಧರ್ಮದ ಬಗ್ಗೆ ತಿಳಿಯಬಂದ ಬ್ರಾಹ್ಮಣನಿಗೆ ಆತನಿತ್ತ ಪಾಠ ಮನನೀಯ: ವೃತ್ತಿಯ ಹೊರರೂಪವೇ ಶೀಲವನ್ನು ನಿರ್ಣಯಿಸಿಬಿಡದು; ಶ್ರುತದೊಂದಿಗೆ ಸದಾಚಾರವಿದ್ದರೇ ಶೋಭೆ - ಎಂದು.

ಇದಲ್ಲದೆ, ತಾನು ದೇವರೆಂದೇ ಕಾಣುವ ತನ್ನ ತಂದೆತಾಯಿಯರನ್ನು ಆ ಬ್ರಾಹ್ಮಣನಿಗೆ ತೋರಿಸಿದ. ವ್ಯಾಧಯೋನಿಯಲ್ಲಿ ಹುಟ್ಟಿದ್ದರೂ ಭಕ್ತಿಯ ಮೂಲಕ, ಧರ್ಮಸೂಕ್ಷ್ಮಜ್ಞತೆಯ ಮೂಲಕ ಭಗವಂತನಿಗೆ ಪ್ರಿಯನಾದವನು ಅವನು.

ಎರಡನೆಯದು ಧ್ರುವನ ಕಥೆ. ಬಾಲಕನಾದರೂ ಬಾಲಕನಲ್ಲದವನ ಕಥೆ.  ಐದು ವರ್ಷದ ಆ ಮಗುವಿಗೆ ತಂದೆಯ ತೊಡೆಯ ಮೇಲೆ ಕೂರಬೇಕೆಂಬ ಆಸೆಯಾಯಿತು. ಮಲತಾಯಿಯು ಚುಚ್ಚುಮಾತನಾಡಿದಾಗ ಅವಮಾನದಿಂದ ದುಃಖಿತನಾದ, ಆ ಪುಟ್ಟ ಬಾಲಕ. ನಾರದಮುನಿಗಳ ಮಾರ್ಗದರ್ಶನದಲ್ಲಿ ಅಚಲ ತಪಸ್ಸನ್ನೇ ಮಾಡಿದ. ಅವನ ದೃಢನಿಶ್ಚಯ ಮತ್ತು ಏಕಾಗ್ರಭಕ್ತಿಗೆ ಮೆಚ್ಚಿದ ವಿಷ್ಣುವು ಧ್ರುವಪದವನ್ನೇ ಅವನಿಗೆ ಅನುಗ್ರಹಿಸಿದನು. ಭಕ್ತಿಗೆ ಮುಖ್ಯವಾದದ್ದು ವಯಸ್ಸಲ್ಲ, ಮನಸ್ಸಿನ ಸ್ಥೈರ್ಯ.

ಮೂರನೆಯ ಕಥೆ ಗಜೇಂದ್ರನದು. ಆ ಗಜರಾಜನು ತನ್ನ ದೊಡ್ಡ ಗುಂಪಿನೊಂದಿಗೆ ನಿಶ್ಚಿಂತನಾಗಿ ವಿಹರಿಸುತ್ತಿದ್ದ. ಜಲವಿಹಾರದ ವೇಳೆ ಮೈಮರೆತ  ಆನಂದದಲ್ಲಿದ್ದಾಗಲೇ ಮೊಸಳೆಯ ಹಿಡಿತಕ್ಕೆ ಸಿಲುಕಿದ. ಹಲವು ಕಾಲ ಹಗಲು-ರಾತ್ರಿ ಸೆಣೆಸಾಟ ನಡೆದರೂ, ಮೊಸಳೆ ಜಗ್ಗಲಿಲ್ಲ. ಗಜೇಂದ್ರನ ಶಕ್ತಿ ಕ್ಷೀಣಿಸುತ್ತಾ ಬರಲು,  ಪರಮಾತ್ಮನನ್ನು "ಆದಿಮೂಲಾ!" ಎಂದು ಆರ್ತನಾಗಿ ಕರೆದ. ಅಲ್ಲಿದ್ದದ್ದು ಸಂಪೂರ್ಣ ಶರಣಾಗತಿ ಮಾತ್ರವೇ, ಶಾಸ್ತ್ರಜ್ಞಾನವಲ್ಲ. ತತ್-ಕ್ಷಣವೇ ವಿಷ್ಣುವು ಬಂದು ಗಜೇಂದ್ರನ ಉದ್ಧಾರ ಮಾಡಿದ.

ನಾಲ್ಕನೆಯದು, ಹಸ್ತಿನಾವತಿಯ ಸಿಂಹಾಸನದ ಪಕ್ಕದಲ್ಲೇ ಇದ್ದು ಧರ್ಮಸೂಕ್ಷ್ಮಗಳನ್ನು ಹೆಜ್ಜೆಹೆಜ್ಜೆಗೂ ಅರುಹುತ್ತಿದ್ದ ವಿದುರನ ಕಥೆ. ಆತನಾದರೋ ದಾಸೀಪುತ್ರ. ಕ್ಷತ್ರಿಯರಿಗಿಂತ ಕೆಳಜಾತಿಯೆಂದಾದರೂ ವಿದುರನಿಗಿದ್ದ ಧರ್ಮಜ್ಞಾನ, ವಿವೇಕ ಮತ್ತು ಭಕ್ತಿ - ಇವನ್ನು ಧರ್ಮಜ್ಞರು ಗುರುತಿಸುವಂತಾಯಿತು. ಕೃಷ್ಣಸಂಧಾನದ ಸಂದರ್ಭದಲ್ಲಿ ರಾಜಮರ್ಯಾದೆಯ ಭೋಜನವನ್ನು ಬಿಟ್ಟು ಕೃಷ್ಣನು ವಿದುರನ ಸರಳ ಆತಿಥ್ಯವನ್ನು ಸ್ವೀಕರಿಸಿದನು. ಉಚ್ಚಕುಲಜನ್ಮಕ್ಕಿಂತಲೂ ಮಿಗಿಲಾದುದೆಂದರೆ ನಿರ್ಮಲವಾದ ಪ್ರೀತಿ ಮತ್ತು ಧರ್ಮನಿಷ್ಠೆ. ಭಗವಂತನಿಗೆ ಅದೇ ಪ್ರಿಯವೆಂದು ಸಾರಿದ ಪ್ರಸಂಗವಿದು.

ಐದನೆಯದು, ಉಗ್ರಸೇನನ ಕಥೆ. ಸ್ವಂತ ಮಗನಾದ ಕಂಸನಿಂದಾಗಿ ರಾಜ್ಯಚ್ಯುತನಾಗಿ ಬಂಧನಕ್ಕೊಳಗಾದವನು, ಅವನು. ಅವನಿಗೆ ಕಂಸನನ್ನು ಸೋಲಿಸುವ ಪರಾಕ್ರಮವಿರಲಿಲ್ಲ. ಕೃಷ್ಣನೇ ಕಂಸನನ್ನು ಸಂಹರಿಸಿ ಉಗ್ರಸೇನನಿಗೆ ಮತ್ತೆ ರಾಜ್ಯವನ್ನು ಒಪ್ಪಿಸಿದನು. ಕ್ರೂರಕಂಸನನ್ನು ಪರಾಭವಗೊಳಿಸುವ ಪೌರುಷ ಉಗ್ರಸೇನನಿಗಿರಲಿಲ್ಲವಾದರೂ ಕೃಷ್ಣನ ಕೃಪೆಯಿಂದ ಅವನಿಗೆ ಆ ಸ್ಥಾನಮಾನಗಳು ದೊರೆತವು.

ಆರನೆಯ ಕಥೆ ಕುಬ್ಜೆಯದು. ಕಂಸವಧೆಯನ್ನು ಮಾಡಲು ಕೃಷ್ಣನು ಮಥುರೆಗೆ ಹೋದಾಗ ಸಿಕ್ಕವಳೇ ಕುಬ್ಜೆ: ವಕ್ರವಾದ ದೇಹ; ಕಳೆದುಹೋಗಿದ್ದ ಯೌವನ; ಸೌಂದರ್ಯವಿಲ್ಲದ ಆಕಾರ. ಆದರೆ ಅವಳು ಕೃಷ್ಣನಿಗೆ ಸುಗಂಧದ್ರವ್ಯವನ್ನು ಬಹುಪ್ರೀತಿಯಿಂದ ಅರ್ಪಿಸಿದಳು. ಅವಳ ಭಕ್ತಿಭಾವಕ್ಕೆ ಮೆಚ್ಚಿದ ಕೃಷ್ಣನು ಅವಳ ದೇಹದ ವಕ್ರತೆಯನ್ನು ಹೋಗಲಾಡಿಸಿದನು. ಭಗವಂತನು ಅಲ್ಲಿ ಕಂಡದ್ದು ಬಾಹ್ಯಸೌಂದರ್ಯವನ್ನಲ್ಲ, ಭಕ್ತಿಯಿಂದ ಅರಳಿದ ಅಂತರಂಗವನ್ನು.

ಏಳನೆಯ ಕಥೆ ಸುದಾಮನದು. ಕೃಷ್ಣನ ಪ್ರಿಯ ಸ್ನೇಹಿತನಾದ ಆತ, ತೀವ್ರ ಬಡತನದಲ್ಲಿದ್ದ. ಅವನು ಕೃಷ್ಣನನ್ನು ಕಾಣಲು ಕೊಂಚ ಅವಲಕ್ಕಿಯಷ್ಟನ್ನು ಮಾತ್ರ ತಂದನು. ಏನನ್ನೂ ಬೇಡದೆ, ಸ್ನೇಹಭಕ್ತಿಯಿಂದ ಬಂದ ಅವನನ್ನು ಕೃಷ್ಣನು ಅಪಾರ ಗೌರವದಿಂದ ಸ್ವಾಗತಿಸಿದನು. ಸುದಾಮನು ತಂದಿದ್ದ ಕಾಣಿಕೆಯ ಹಿಂದಿರುವ ನಿರ್ಮಲ ಪ್ರೀತಿಯನ್ನೇ ಭಗವಂತನು ಗುರುತಿಸಿದ್ದು.

ಮೇಲೆ ಹೇಳಿದ ಏಳೂ ಮಂದಿಯ  ವಯಸ್ಸು-ಲಿಂಗಗಳು ಬೇರೆ, ಹಿನ್ನೆಲೆಗಳು ಬೇರೆ. ಆದರೆ ಇವರೆಲ್ಲರಲ್ಲಿ ಸಮಾನವಾಗಿರುವುದೆಂದರೆ ನಿಷ್ಕಪಟವಾದ ಭಕ್ತಿಯೊಂದೇ. ಸುರೂಪವನ್ನೋ ಐಶ್ವರ್ಯವನ್ನೋ ದೊಡ್ಡಗುಣಗಳೆಂದು ಭಾವಿಸುವವರಿರಬಹುದು. ಆದರೆ ಮಾಧವನು ಪ್ರಧಾನವಾಗಿ ಭಕ್ತಿಪ್ರಿಯನೆಂಬುದನ್ನು ಅರಿಯಬೇಕು.

ಶ್ರೀರಂಗಮಹಾಗುರುಗಳು ಹೇಳುವಂತೆ: ಭಕ್ತಿಯೆಂದರೆ ಭಗವಂತನೊಡನೆ ಸರ್ವಾಂಶದಿಂದಲೂ ಸರ್ವಭಾವದಿಂದಲೂ ಒಂದಾಗಿ ಬೆರೆತುಬಿಡುವುದು. ಅಲ್ಲಿ ವಿಭಕ್ತಿಯಿರಬಾರದು. ವಿಭಕ್ತಿಯೆಂದರೆ ಬೇರಾಗಿರುವುದು.

ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು; ಮತ್ತೂ ಉತ್ಕಟವಾಗಿ ನಿಷ್ಕಪಟ-ಭಕ್ತಿಯನ್ನು ತುಂಬಿಸಿಕೊಳ್ಳಬೇಕು. ಭಕ್ತರ ಗುಣ-ಸಂಪತ್ತು ದೃಢವಾಗುವುದು, ಬೆಳೆಯುವುದು ಕೂಡ.

ಗುಣಗಳೆಲ್ಲವುಗಳಿಂದ ಸಾಧಿಸಬೇಕಾದುದು ಸರ್ವ-ಸದ್ಗುಣಗಳ ಸ್ರೋತಸ್ಸಾದ ಸರ್ವೇಶನನ್ನೇ ಅಲ್ಲವೇ?

ಸೂಚನೆ: 18/07//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 75 (Prasnottara Ratnamalike 75)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೫. ಯಾರನ್ನು ಸ್ಮರಿಸಿಕೊಳ್ಳಬೇಕು?

ಉತ್ತರ- ಹರಿನಾಮವ.

ಯಾವುದೇ ಸ್ಮರಣೆ ಅಥವಾ ಸ್ಮೃತಿಯು ಬರಬೇಕಾದರೆ ಅಲ್ಲಿ ಅದರ ಅನುಭವ ಇರಬೇಕಾಗುತ್ತದೆ. ಅನುಭವವಿಲ್ಲದೇ ಸ್ಮೃತಿಯು ಬರಲು ಸಾಧ್ಯವಿಲ್ಲ. ಹರಿಯನ್ನು ಸ್ಮರಿಸಬೇಕು ಎಂದರೆ ಹರಿಯ ಅನುಭವ ಬೇಕು ಎಂಬುದೂ ಅಷ್ಟೇ ಮುಖ್ಯ. ಹರಿಯ ಅನುಭವವು ಬರಬೇಕಾದರೆ ಅತ್ಯಂತ ಪ್ರಧಾನವಾದ ಸಾಧನವೆಂದರೆ ಹರಿಯ ನಾಮ. “ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವೋ” ಎಂಬುದಾಗಿ ಪುರಂದರದಾಸರು ಹೇಳುತ್ತಾರೆ. ನಾಮದ ಉಚ್ಚಾರಣೆಯಿಂದ ಆ ನಾಮದ ಹಿಂದಿರುವ ಶಕ್ತಿಯ ಅನುಭವ ಸಾಧ್ಯ ಎಂಬುದು ನಮ್ಮ ಶಾಸ್ತ್ರ ಮತ್ತು ಸಂಪ್ರದಾಯಗಳು ಸಾರಿರುವ ಸತ್ಯವಾಗಿದೆ.


ಪ್ರತಿಯೊಂದು ಪದಾರ್ಥಕ್ಕೂ ಒಂದು ಪದ ಅಥವಾ ನಾಮ ಇರುತ್ತದೆ. ಆ ನಾಮದಿಂದ ಅದನ್ನು ಗುರುತಿಸಲು ಸಾಧ್ಯ. ಏಕೆಂದರೆ ಅವೆರಡೂ ಪರಸ್ಪರ ಒಂದಾಗಿ, ಒಂದೇ ಕಾಲದಲ್ಲಿ ಸೃಷ್ಟಿಸಲ್ಪಟ್ಟಿವೆ. ಯಾವಾಗ ಆ ಪದಾರ್ಥವು ಸೃಷ್ಟಿಯಾಯಿತೋ ಅದೇ ಸಮಯದಲ್ಲಿ ಆ ಪದಾರ್ಥಕ್ಕೆ ಒಂದು ಪದವೂ ಸೃಷ್ಟಿಯಾಯಿತು ಎಂಬುದಾಗಿ ಪದಶಾಸ್ತ್ರ ಹೇಳುತ್ತದೆ. ಪದ ಮತ್ತು ಪದಾರ್ಥಗಳಿಗೆ ಅವಿನಾಭಾವ ಸಂಬಂಧವಿದೆ. ಹಾಗಾಗಿ ಪದವು ಪದಾರ್ಥವನ್ನು ಸೂಚಿಸುತ್ತದೆ. ಪದದ ಜ್ಞಾನವು ಪದಾರ್ಥಜ್ಞಾನದಲ್ಲಿ ಪರ್ಯವಸಾನವಾಗುತ್ತದೆ. ಪದವನ್ನು ಚೆನ್ನಾಗಿ ತಿಳಿದರೆ ಪದಾರ್ಥವನ್ನು ತಿಳಿದಂತೆಯೇ. ಅಂದರೆ ಯಾವುದನ್ನು ತಿಳಿಯಬೇಕು? ಯಾವುದನ್ನು ತಿಳಿದರೆ, ತಿಳಿಯದೇ ಇರುವ ಇನ್ನೊಂದು ತಿಳಿದಂತಾಗುತ್ತದೆ? ಎಂಬ ವಿಷಯವನ್ನೂ ಇಲ್ಲಿ ಹೇಳಲಾಗಿದೆ. ಹರಿಯನ್ನು ತಿಳಿಯಬೇಕು ಎಂದಾದರೆ ಹರಿಯ ನಾಮವನ್ನು ನಾವು ತಿಳಿಯಬೇಕು. ಅದಕ್ಕಾಗಿ ಅದನ್ನು ಅನವರತ ಉಚ್ಚರಿಸಬೇಕು, ಚಿಂತಿಸಬೇಕು, ಅನುಸಂಧಾನ ಮಾಡಬೇಕು ಎಂದರ್ಥ. ಹಾಗೆ ಅನುಸಂಧಾನ ಮಾಡುತ್ತಾ ಆ ಪದದ ಮೂಲವಾದ ಪದಾರ್ಥವನ್ನು ನಾವು ತಲುಪಬಹುದು ಎಂಬುದು ಇದರ ಹಿಂದಿರುವ ತಾತ್ಪರ್ಯವಾಗಿದೆ.


ಒಬ್ಬ ವ್ಯಕ್ತಿಗೆ ಒಂದು ಹೆಸರನ್ನು ಇಡುತ್ತೇವೆ; ಆ ಹೆಸರನ್ನು ಕರೆದಾಗ ಆ ವ್ಯಕ್ತಿ ಓಗುಡುತ್ತಾನೆ. ಅಂದರೆ ಆ ವ್ಯಕ್ತಿಗೆ ಅದು ಅಭಿಧಾನ ಅಥವಾ ಸಂಕೇತ. ಸಂಕೇತವಾದ ಆ ಪದವನ್ನು ಸರಿಯಾಗಿ ಉಚ್ಛರಿಸಿದಾಗ ಮಾತ್ರ ಆ ವ್ಯಕ್ತಿ ಸ್ಪಂದಿಸುತ್ತಾನೆ. ಅಂತೆಯೇ ಹರಿಯ ಕೇವಲ ನಾಮೋಚ್ಚಾರಣೆಯಿಂದ ಅವನು ಸ್ಪಂದಿಸುವುದಿಲ್ಲ. ನಾಮೋಚ್ಚಾರಣೆಗೆ ಬೇಕಾದ ಎಲ್ಲಾ ಎಲ್ಲಾ ಸಿದ್ಧತೆಯ ಜೊತೆಯಲ್ಲಿ ಉಚ್ಚರಿಸಿದಾಗ ಮಾತ್ರ ಆ ಹರಿಯು ನಮ್ಮ ಕಡೆಗೆ ಹರಿಯಬಲ್ಲ. ಇತ್ತ ಧಾವಿಸಬಲ್ಲ, ನಮ್ಮ ಅಹವಾಲನ್ನು ಆಲಿಸಬಲ್ಲ. ಪದವನ್ನು ಶ್ರದ್ಧೆ ಭಕ್ತಿಯಿಂದ ಉಚ್ಚರಿಸಬೇಕು. ನಾಮವನ್ನು ಉಚ್ಚರಿಸುವಾಗ ಆ ಪದಮೂಲವಾದ ಅರ್ಥವನ್ನು ಅಥವಾ ವಿಷಯವನ್ನು ಅನುಸಂಧಾನ ಮಾಡುತ್ತಾ ಉಚ್ಚರಿಸಬೇಕು. ಆದರೆ ಆ ವಸ್ತುವೇ ನಮಗೆ ಸಿಗದಿದ್ದಾಗ ಅದನ್ನು ಅನುಸಂಧಾನ ಮಾಡುವುದು ಹೇಗೆ? ಎಂಬ ಸಂದೇಹ ಬರಬಹುದು. ಆ ವಸ್ತುವನ್ನು ಪ್ರತೀಕಿಸುವ ಮೂರ್ತಿ, ವಿಗ್ರಹ  ಚಿತ್ರ ಮೊದಲಾದವುಗಳನ್ನು ನಮ್ಮ ಋಷಿ ಮಹರ್ಷಿಗಳು ಕಂಡುಂಡು ನಮಗೆ ಅನುಗ್ರಹಿಸಿದ್ದಾರೆ. ಋಷಿಮುನಿಗಳ ಅನುಗ್ರಹ ರೂಪವಾದ ಚಿತ್ರ, ವಿಗ್ರಹ ಮೊದಲಾದವುಗಳನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ, ಚಿಂತಿಸುತ್ತಾ ನಾಮವನ್ನು ಉಚ್ಚರಿಸುತ್ತಾ ಉಚ್ಚರಿಸುತ್ತಾ ಹೋದರೆ ವಿಗ್ರಹದ ಅಂತರ್ಯಾಮಿಯಾದ ಆ ಭಗವಂತನ ಅನುಗ್ರಹ - ಸಾಕ್ಷಾತ್ಕಾರ ಉಂಟಾಗುತ್ತದೆ ಎಂಬುದು ನಮ್ಮ ಸಂಪ್ರದಾಯದ ಹಿಂದಿರುವ ಆಶಯವಾಗಿದೆ. ಹಾಗಾಗಿ ನಾವು ಸ್ಮರಿಸಬೇಕು ಎಂತಾದರೆ ಹರಿನಾಮವನ್ನು ಮಾತ್ರ ಸ್ಮರಿಸಬೇಕು. ಅದು ನಮಗೆ ಇಷ್ಟಾರ್ಥವನ್ನು ಕೊಡುವ ಶಕ್ತಿಯಿಂದ ಕೂಡಿದ ಮಂತ್ರವಾಗಿದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 19
/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 197 ರಾಜಸೂಯಕ್ಕೆ ಸಂಭ್ರಮದ ಸಿದ್ಧತೆಗಳು (Vyaasa Vikshita 197)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



 

ಯಾಗವನ್ನು ಯುಧಿಷ್ಠಿರನೇ ನಡೆಸುವುದೆಂದು ಕೃಷ್ಣನು ತೀರ್ಮಾನವಾಗಿ ಹೇಳಿದನು. ಅದಕ್ಕೆ ಯುಧಿಷ್ಠಿರನು ಉತ್ತರಿಸುತ್ತಾ ಹೀಗೆ ಹೇಳಿದನು: "ಕೃಷ್ಣ, ನನ್ನ ಸಂಕಲ್ಪ ಸಫಲವಾಯಿತು. ಕಾರ್ಯಸಿದ್ಧಿಯೂ ಅವಶ್ಯವಾಗಿ ಆಗುವಂತಹುದೇ: ಏಕೆಂದರೆ, ಓ ಹೃಷೀಕೇಶನೇ, ನೀನು ನಿನ್ನ ಇಚ್ಛೆಯಿಂದಲೇ ಇಲ್ಲಿ ಉಪಸ್ಥಿತನಾಗಿರುವೆ".

ಅಂತೂ ಕೃಷ್ಣನ ಅನುಜ್ಞೆಯನ್ನು, ಎಂದರೆ ಅನುಮತಿಯನ್ನು, ಪಡೆದವನೇ, ತನ್ನ ಭ್ರಾತೃಗಳೊಂದಿಗೆ ಯುಧಿಷ್ಠಿರನು ರಾಜಸೂಯಯಜ್ಞವನ್ನು ಮಾಡಲೋಸುಗ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳಲು ಆರಂಭಿಸಿದನು.

ಶತ್ರುಸಂಹಾರಿಯಾದ ಯುಧಿಷ್ಠಿರನು, ಯೋಧರಲ್ಲಿ ಶ್ರೇಷ್ಠನಾದ ಸಹದೇವನಿಗೆ, ಹಾಗೂ ಎಲ್ಲ ಮಂತ್ರಿಗಳಿಗೂ, ಆಮೇಲೆ ಅಪ್ಪಣೆಯಿತ್ತನು: “ಬ್ರಾಹ್ಮಣರು ಹೇಳಿದಂತೆ ಈ ಯಜ್ಞಕ್ಕೆ ಅಂಗ-ಭೂತವಾಗಿರುವ ಎಲ್ಲ ಮಂಗಳ-ಸಾಧನಗಳನ್ನೂ ಸಿದ್ಧಪಡಿಸಿಕೊಳ್ಳಿ. 

ಧೌಮ್ಯರು ಹೇಳುವ ಯಜ್ಞಸಾಮಗ್ರಿಯನ್ನು ದೊರೆತಂತೆ ದೊರೆತಂತೆ ಹಾಗೂ ಕ್ರಮಾನುಸಾರವಾಗಿ, ಸೇವಕಜನರು ತರುವುದಾಗಲಿ.

ಅನ್ನ ಮುಂತಾದುವುಗಳ ಸಂಗ್ರಹಕಾರ್ಯದಲ್ಲಿ ಇಂದ್ರಸೇನ, ವಿಶೋಕ, ಅರ್ಜುನಸಾರಥಿಯಾದ ಪೂರು - ಇವರುಗಳು ತೊಡಗಿದಲ್ಲಿ ನನಗೆ ಸಂತೋಷವಾಗುತ್ತದೆ. ಎಲ್ಲರಿಗೂ ಇಷ್ಟವಾಗುವ ಹಾಗೂ ಒಳ್ಳೆಯ ರಸಗಳಿಂದಲೂ ಗಂಧಗಳಿಂದಲೂ ಕೂಡಿರುವ ಅಡಿಗೆಗಳನ್ನು ಮಾಡೋಣವಾಗಲಿ.”

ಯುಧಿಷ್ಠಿರನು ಈ ಮಾತುಗಳನ್ನು ಹೇಳುತ್ತಿದ್ದಂತೆಯೇ ಸಹದೇವನು ಇದೆಲ್ಲವೂ ಆಗಿದೆಯೆಂಬುದಾಗಿ ಯುಧಿಷ್ಠಿರನಿಗೆ ತಿಳಿಸಿದನು. ಸಾಕ್ಷಾದ್ ವೇದಗಳೇ ಮೈತಾಳಿಬಂದಂತಿದ್ದ ಋತ್ವಿಕ್ಕುಗಳನ್ನು ಆಗ ಯುಧಿಷ್ಠಿರನು ಬರಮಾಡಿದನು. ವ್ಯಾಸಮಹರ್ಷಿಗಳೇ ಅಲ್ಲಿ ಬ್ರಹ್ಮಸ್ಥಾನವನ್ನು ಅಲಂಕರಿಸಿದರು. ಧನಂಜಯಗೋತ್ರದಲ್ಲಿ ಶ್ರೇಷ್ಠನೆನಿಸಿದ ಸುಸಾಮ ಎಂಬ ಋಷಿಯು ಸಾಮಗಾನವನ್ನು ಮಾಡಿದನು. ಬ್ರಹ್ಮಿಷ್ಠನಾದ ಯಾಜ್ಞವಲ್ಕ್ಯನು ಅಧ್ವರ್ಯುವರ್ಯನಾದನು. ಇನ್ನು ಹೋತೃವಾಗಿ ವಸುಪುತ್ರನಾದ ಪೈಲನು ಬಂದಿದ್ದನು. ಅವರುಗಳ ಪುತ್ರವರ್ಗ-ಶಿಷ್ಯವರ್ಗಗಳು ಧೌಮ್ಯಮುನಿಯೊಂದಿಗೆ ಸಹಕರಿಸಿದರು.

ಯಜ್ಞವು ಆರಂಭವಾಯಿತು. ಮೊದಲು ಪುಣ್ಯಾಹವಾಚನ ಹಾಗೂ ಯಜ್ಞವಿಧಿಗಳ ವ್ಯವಸ್ಥಾಪನಗಳಾದವು. ಯಜ್ಞಸ್ಥಾನಕ್ಕೆ ಶಾಸ್ತ್ರೋಕ್ತಪೂಜೆಯು ಸಂದಿತು. ರಾಜಾಜ್ಞಾನುಸಾರವಾಗಿ ಶಿಲ್ಪಿಗಳು ದೇವಮಂದಿರಗಳಿಗೆ ಸಮಾನವೆನಿಸುವಂತೆ ವಿಶಾಲವೂ ಸುಗಂಧಭರಿತವೂ ಆದ ಭವನಗಳನ್ನು ನಿರ್ಮಿಸಿಕೊಟ್ಟರು.

ಆಮೇಲೆ ಯುಧಿಷ್ಠಿರನು, ಮಂತ್ರಿಯಾದ ಸಹದೇವನನ್ನು ಬರಮಾಡಿಕೊಂಡನು. ವಿಪ್ರರನ್ನು ಅಮಂತ್ರಿಸಲು ಶೀಘ್ರಗಾಮಿಗಳಾದ ದೂತರನ್ನು ಕಳುಹಿಸೆಂದು ಅಪ್ಪಣೆಯಿತ್ತನು. ಆತನೂ ದೂತರನ್ನು ಕರೆಸಿ, ಬೇರೆ ಬೇರೆ ರಾಷ್ಟ್ರಗಳಲ್ಲಿನ ವಿಪ್ರರನ್ನೂ ಕ್ಷತ್ರಿಯರನ್ನೂ ಹಾಗೆಯೇ ಮಾನ್ಯರಾದ ವೈಶ್ಯರನ್ನೂ ಶೂದ್ರರನ್ನೂ ಕರೆತನ್ನಿರಿ - ಎಂದನು.

ಯುಧಿಷ್ಠಿರನ ಅಪ್ಪಣೆಯಂತೆ, ಶೀಘ್ರಗಾಮಿಗಳಾದ ದೂತರು ಕರೆತರಬೇಕಾದವರನ್ನೆಲ್ಲ ಕರೆತಂದರು.

ಆಗಮಿಸಿದ ವಿಪ್ರರು ರಾಜಸೂಯಕ್ಕಾಗಿ ಯುಧಿಷ್ಠಿರನಿಗೆ ದೀಕ್ಷೆಯನ್ನಿತ್ತರು. ಯಜ್ಞದೀಕ್ಷೆ ತೊಟ್ಟ ಯುಧಿಷ್ಠಿರನೂ ಯಜ್ಞಮಂಟಪಕ್ಕೆ ವಿಪ್ರರೊಂದಿಗೆ ತೆರಳಿದನು. ಭ್ರಾತೃಗಳು, ಜ್ಞಾತಿ(ಬಂಧು)ಗಳು, ಸುಹೃತ್(ಮಿತ್ರರು), ಸಚಿವರು - ಇವರುಗಳೆಲ್ಲಆಗಮಿಸಿದ್ದರು. ನಾನಾದೇಶಗಳಿಂದ ಬಂದ ಇವರುಗಳೊಂದಿಗೆ ಕೂಡಿದ ಧರ್ಮರಾಜನು ಧರ್ಮವೇ ಮೈತಾಳಿಬಂದಂತಿದ್ದನು.

ನಾನಾವಿದ್ಯೆಗಳಲ್ಲೂ ವೇದ-ವೇದಾಂಗಗಳಲ್ಲೂ ನಿಷ್ಣಾತರಾದ ವಿಪ್ರರು ಬೇರೆ ಬೇರೆ ದೇಶಗಳಿಂದ ಆಗಮಿಸಿದರು. ಅವರೆಲ್ಲರಿಗೂ ಆವಾಸಗಳನ್ನು ಕಲ್ಪಿಸಲಾಯಿತು. ಅವರಿಗೆ ಅನ್ನ-ವಸ್ತ್ರಗಳ ವ್ಯವಸ್ಥೆಯಾಯಿತು. ಯಾವುದೇ ಋತುವಿನ ಸೌಕರ್ಯಗಳೂ ದೊರೆಯುವಂತೆ ಶಿಲ್ಪಿಗಳು ವ್ಯವಸ್ಥೆಯನ್ನು ಮಾಡಿದರು.

ರಾಜನಿಂದ ಸತ್ಕೃತರಾಗಿ ಅಲ್ಲಿ ಅನೇಕ ವಿಪ್ರರು ವಾಸಿಸಿದರು. ಪರಸ್ಪರ ಅನೇಕ ಕಥಾಲಾಪಗಳನ್ನು ಮಾಡಿದರು. ನಟ-ನರ್ತಕರನ್ನು ಕಂಡರು. ಯಥೇಷ್ಟವಾದ ಭೋಜನಗಳು ಮಾತುಕತೆಗಳು - ಇವುಗಳ ಸದ್ದೇ ನಿರಂತರವಾಗಿ ಅಲ್ಲಿ ಕೇಳಿಬರುತ್ತಿತ್ತು. ಅಲ್ಲಿ ನಡೆದ ದಾನಕ್ರಿಯೆ-ಭೋಜನಕ್ರಿಯೆಗಳಿಗೆ ಮಿತಿಯೇ ಇರಲಿಲ್ಲ. ಲಕ್ಷ ಗೋಗಳ ದಾನ, ಶಯನಗಳ ದಾನ, ಸುವರ್ಣನಾಣ್ಯಗಳ ದಾನ - ಈ ಕೆಲಸಗಳಲ್ಲೇ ಧರ್ಮರಾಜನು ಮುಳುಗಿದ್ದನು.

ಸೂಚನೆ :  19/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.