ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಭೀಷ್ಮರ ನುಡಿಗೆ ಸಹದೇವನ ಸಮರ್ಥನೆ
ಕೃಷ್ಣನೇ ಅಗ್ರಪೂಜೆಗೆ ಅರ್ಹನೆಂದು ಪ್ರತಿಪಾದಿಸುತ್ತಾ ಭೀಷ್ಮರು ಹೇಳಿದರು:
ಜರಾಯುಜವೆಂದರೆ ಗರ್ಭಾಶಯದಿಂದ ಹುಟ್ಟುವ ಪಶು-ಮನುಷ್ಯಾದಿಗಳು. ಬೆವರಿನಲ್ಲಿ ಹುಟ್ಟತಕ್ಕವು ಎಂದರೆ ಕೆಲ ಕೃಮಿ-ಕೀಟಗಳು. ಅಂಡಜಗಳೆಂದರೆ ಮೊಟ್ಟೆಯೊಡೆದು ಹುಟ್ಟುವ ಪಕ್ಷಿಗಳು, ಸರ್ಪಗಳು ಮುಂತಾದವು; ಉದ್ಭಿದ್ ಅಥವಾ ಉದ್ಭಿಜ್ಜಗಳೆಂದರೆ ಭೂಮಿಯನ್ನು ಸೀಳಿಕೊಂಡು ಮೇಲೆ ಬರುವ ಗಿಡಮರಗಳು. ಈ ನಾಲ್ಕೂ ವಿಧವಾದ ಜೀವಿಗಳೂ, ಅರ್ಥಾತ್ ಸಮಸ್ತ ಜೀವಿಗಳೂ ಕೃಷ್ಣನಲ್ಲಿ ಪ್ರತಿಷ್ಠಿತವಾಗಿವೆ.
ಸೂರ್ಯಚಂದ್ರರೂ ಗ್ರಹ-ನಕ್ಷತ್ರಗಳೂ ದಿಕ್ಕು-ವಿದಿಕ್ಕುಗಳೂ - ಎಲ್ಲವೂ ಕೃಷ್ಣನಲ್ಲಿಯೇ ಪ್ರತಿಷ್ಠಿತವಾಗಿವೆ. ಹೇಗೆ ವೇದಗಳಲ್ಲಿ ಅಗ್ನಿಹೋತ್ರವೇ ಮುಖ್ಯವೋ ಹಾಗೆ ದೇವಲೋಕಗಳನ್ನೂ ಸೇರಿದಂತೆ ಎಲ್ಲ ಲೋಕಗಳಲ್ಲೂ ಕೃಷ್ಣನೇ ಮುಖ್ಯ. ಛಂದಸ್ಸುಗಳಲ್ಲಿ ಗಾಯತ್ರಿಯೇ ಮುಖ್ಯ; ಮನುಷ್ಯರಲ್ಲಿ ರಾಜನೇ ಮುಖ್ಯ; ಹಾಗೆಯೇ ನದಿಗಳಲ್ಲಿ ಸಾಗರವು; ನಕ್ಷತ್ರಗಳಲ್ಲಿ ಚಂದ್ರ; ತೇಜಸ್ವಿವಸ್ತುಗಳಲ್ಲಿ ಸೂರ್ಯ; ಪರ್ವತಗಳಲ್ಲಿ ಮೇರು; ಪಕ್ಷಿಗಳಲ್ಲಿ ಗರುಡ - ಇವರುಗಳು ಹೇಗೋ ಹಾಗೆ, ಮೇಲೂ ಕೆಳಗೂ ಅಡ್ಡಲಾಗಿಯೂ ಇರುವ ಜಗತ್ತಿನೆಡೆಗಳಲ್ಲೆಲ್ಲಾ ಕೃಷ್ಣನೇ ಮುಖ್ಯನಾದವನು.
ಈ ಶಿಶುಪಾಲನು ಬಾಲ, ಮೂಢಮತಿ. ಎಂದೇ ಎಲ್ಲೆಡೆ ಸರ್ವದಾ ಕೃಷ್ಣನನ್ನು ಕುರಿತಾಗಿ ಹೀಗೆಯೇ ಮಾತನಾಡುವುದೀತ. ಉತ್ಕೃಷ್ಟವಾದ ಮತಿಯನ್ನು ಹೊಂದಿರುವ ಯಾವನೇ ಆದರೂ ಧರ್ಮವೆಂದರೇನೆಂದು ಹುಡುಕಿನೋಡುವವನೇ ಆದಲ್ಲಿ, ಆತನೇ ಧರ್ಮಸ್ವರೂಪವನ್ನು ಅರಿಯಬಲ್ಲ. ಆದರೆ ಈ ಚೇದಿರಾಜನು, ಎಂದರೆ ಶಿಶುಪಾಲನು, ಹಾಗಲ್ಲ.
ವೃದ್ಧರಾಗಲಿ ಬಾಲರಾಗಲಿ, ಅವರನ್ನೂ ಒಳಗೊಂಡಂತೆ, ಮಹಾತ್ಮರಾದ ಅರಸರುಗಳಲ್ಲಿ ಯಾರು ತಾನೆ ಕೃಷ್ಣನನ್ನು ಮಾನಾರ್ಹನೆಂದು ಭಾವಿಸುವುದಿಲ್ಲ, ಕೃಷ್ಣನನ್ನು ಪೂಜಿಸುವುದಿಲ್ಲ? ಈ ಶಿಶುಪಾಲನೇನಾದರೂ ಈ ಪೂಜೆಯನ್ನು ಅನುಚಿತವೆಂದು ಭಾವಿಸುತ್ತಾನಾದರೆ ಆ ಬಗ್ಗೆ ತನಗೇನು ಸರಿಯೆಂದು ತೋರುತ್ತದೋ ಹಾಗೆ ಮಾಡಲಿ” - ಎಂದು ಹೇಳಿಬಿಟ್ಟರು.
ಈ ರೀತಿಯಾಗಿ ಹೇಳಿ, ಭೀಷ್ಮರು ತಮ್ಮ ಮಾತನ್ನು ಮುಗಿಸಿದರು. ಆಗ ಸಹದೇವನು ಅರ್ಥವತ್ತಾದ ಉತ್ತರವನ್ನು ಹೀಗಿತ್ತನು:
"ಕೇಶಿದಾನವನನ್ನು ಸಂಹರಿಸಿದ ಕೇಶವನು ಅಪ್ರಮೇಯವಾದ, ಎಂದರೆ ಅಳೆಯಲು ಅಸಾಧ್ಯವಾದಂತಹ, ಪರಾಕ್ರಮವುಳ್ಳವನು. ಆತನಿಗೆ ನಾನು ಪೂಜೆ ಸಲ್ಲಿಸಿರುವುದಾಗಿದೆ.
ನಿಮ್ಮಲ್ಲಿ ಯಾರಿಗಾದರೂ ಈ ಬಗ್ಗೆ ಸಹನೆಯಿಲ್ಲದಿದ್ದರೆ ಅಂತಹ ಬಲಶಾಲಿಗಳ ಶಿರಸ್ಸಿನ ಮೇಲೆ ನನ್ನೀ ಚರಣವನ್ನಿಟ್ಟಿದ್ದೇನೆಂದು ಭಾವಿಸತಕ್ಕದ್ದು! ಅಂತಹವನು ಯಾರೇ ಆಗಲಿ ನನಗೆ ವಧ್ಯನೇ ಸರಿ, ಎಂದರೆ ನನ್ನಿಂದ ಸಾವನ್ನು ಹೊಂದತಕ್ಕವನೇ ಸರಿ. ಇದರಲ್ಲಿ ಸಂಶಯವಿಲ್ಲ.
ಕೃಷ್ಣನು ನಮಗೆ ಆಚಾರ್ಯನೂ ತಂದೆಯೂ ಗುರುವೂ ಆಗಿರತಕ್ಕವನು. ಆತನು ಅರ್ಚೆಗೆ ಯೋಗ್ಯ, ಅರ್ಘಕ್ಕೆ ಅರ್ಹನಾದವನು. ಆತನಿಗಾಗಿರುವ ಅರ್ಚನವನ್ನು ಇಲ್ಲಿ ನೆರೆದಿರುವ ಮತಿಸಂಪನ್ನರಾದ ಅರಸರು ಅನುಮೋದಿಸಲಿ” - ಎಂದನು.
ಅಲ್ಲಿದ್ದ ಧೀಮಂತರಾದ ರಾಜರುಗಳಲ್ಲಿ ಯಾರೊಬ್ಬನೂ ಮಾತನ್ನಾಡಲಿಲ್ಲ - ಮಾನಸಂಪನ್ನರೂ ಬಲಶಾಲಿಗಳೂ ಆದ ರಾಜರ ಮಧ್ಯದಲ್ಲಿ ಸಹದೇವನು ಹೀಗೆ ಮಾತನ್ನಾಡಿದಾಗ. ಆಗ ಸಹದೇವನ ಶಿರಸ್ಸಿನ ಮೇಲೆ ಪುಷ್ಪವೃಷ್ಟಿಯೇ ಆಯಿತು. ಹಾಗೂ ಅಲ್ಲಿದ್ದ ದೇವತೆಗಳಿಂದ “ಸಾಧು, ಸಾಧು,” ಎಂದರೆ “ಭಲೇ ಭಲೇ” - ಎಂಬ ಮಾತು, ಹೊರಹೊಮ್ಮಿತು.
ಶ್ರೀಕೃಷ್ಣನು ಎಂದೂ ಸೋಲನ್ನೇ ಕಾಣದವ, ಎಂದೇ ಅಜಿತ. ಆತನನ್ನು ಕುರಿತಾಗಿ ಆಗ ನಾರದರು ಮಾತನಾಡಿದರು.
ಸೂಚನೆ : 14/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.