ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರಶ್ನೆ – 35 ಮರಣಕಾಲದಲ್ಲಿ ಮಿತ್ರನಾರು ?
ಉತ್ತರ - ಧರ್ಮ
ಸಾಯುವ ಕಾಲಕ್ಕೆ ಯಾರು ಸಹಾಯ ಮಾಡುವರೋ ಅವರು ತಾನೆ ಬಂಧು! ಅವನು ತಾನೆ ಮಿತ್ರ! ಇತ್ಯಾದಿಯಾಗಿ ಲೋಕದಲ್ಲಿ ಮಾತುಗಳಿವೆ. ಸಾಯುವಕಾಲಕ್ಕೆ ಬೇಕಾಗುತ್ತದೆ ಅಂತ ಹಣವನ್ನು ಸಂಗ್ರಹ ಮಾಡಿಡುತ್ತೇವೆ. ಕೆಲವರು ನಾಲ್ಕು ಜನರನ್ನಾದರೂ ಗಳಿಸಿಟ್ಟುಕೊಳ್ಳಬೇಕು, ಚಟ್ಟವನ್ನಾದರೂ ಹೊರಲು ಸಹಾಯವಾದೀತು ಎಂದು ಯೋಚಿಸುವವರು ಇಲ್ಲದಿಲ್ಲ. ಹಾಗಾದರೆ ಇವರಾರಾದರೂ ಮರಣಕಾಲಕ್ಕೆ ಸನ್ನಿಹಿತರಾಗುವರೇ? ಎಂದರೆ ಕಷ್ಟ. ಸತ್ಯವಾಗಿಯೂ ಹೇಳುವುದಾದರೆ ಧರ್ಮವೊಂದೇ ನಮ್ಮ ಮರಣಕಾಲಕ್ಕೆ ನಮ್ಮ ಜೊತೆ ಇದ್ದು ಸಹಕಾರವನ್ನು ನೀಡಬಲ್ಲದು. ಅದು ಹೇಗೆ?
ಪ್ರತಿಯೊಬ್ಬ ಜೀವಿಗೂ ಹುಟ್ಟಿದ ಮೇಲೆ ಮರಣವು ಖಚಿತ. ಆದರೆ ಆ ಮರಣವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂಬುದಕ್ಕೆ ನಮಗೆ ಅನೇಕ ಪುರಾಣಕಥೆಗಳು ಲಭ್ಯವಿವೆ. ಪ್ರತಿಯೊಂದು ಅನುಭವವೂ ನಾವು ಮಾಡಿದ ಹಿಂದಿನ ಕರ್ಮಾಧಾರಿತವೇ ಆಗಿರುತ್ತದೆ. ಅದಕ್ಕೂ ಹೊರತಾದುದನ್ನು ನಾವೆಂದೂ ನಿರೀಕ್ಷಿಸಲು ಸಾಧ್ಯವಿಲ್ಲ. ಸತ್ಕರ್ಮವನ್ನು ಮಾಡಿದರೆ ಅದು ಸತ್ಫಲವನ್ನು ನೀಡುತ್ತದೆ. ಕುಕರ್ಮವನ್ನು ಮಾಡಿದರೆ ಕುಫಲವನ್ನು ನೀಡುತ್ತದೆ. ಕರ್ಮವು ಎಂದು ವ್ಯರ್ಥವಾಗುವುದಿಲ್ಲ. ವಿರುದ್ಧವಾದ ಫಲವನ್ನೂ ನೀಡುವುದಿಲ್ಲ. ಈ ನೇರದಲ್ಲೇ ನಮ್ಮಲ್ಲಿ ಒಂದು ಮಾತು ಜನಜನಿತವಾಗಿದೆ. 'ಅನಾಯಾಸೇನ ಮರಣಂ' ಎಂದು. ಅನಾಯಾಸವೆಂದರೆ ಮಾಡಬೇಕಾದ ಕಾರ್ಯವನ್ನು ಬಹಳ ನಾಜೂಕಾಗಿ ಮಾಡುವುದರ ಮೂಲಕ ಶಾರೀರಕವಾಗಲಿ, ಮಾನಸಿಕವಾಗಲಿ ಮೀತಿ ಮೀರಿದ ಬಳಲಿಕೆ ಆಗದ ರೀತಿಯಲ್ಲಿ ಸಮಾಪ್ತಿಗೊಳಿಸುವುದು. ಮರಣಕಾಲದಲ್ಲಿ ಯಾವುದೇ ಬಗೆಯ ಪರದಾಟವಾಗಲಿ, ನರಳಾಟವಾಗಲಿ ಆಗದೇ ಸುಖವಾಗಿ ಸಾವು ಬರುವಂತಾಗಬೇಕು ಎಂದು ಪ್ರತಿಯೊಬ್ಬರೂ ಬಯಸುವುದುಂಟು. ಬಯಕೆ ಏನೂ ನಿಜ. ಆದರೆ ನಮ್ಮಲ್ಲಿ ಅಂತಹ ಸಾವು ಬರುವ ರೀತಿಯಲ್ಲಿ ನಾವು ಹೇಗೆ ಜೀವನವನ್ನು ಮಾಡಬೇಕೆಂಬ ಬಗ್ಗೆ ಅರಿವಿಲ್ಲ. ಈ ಅರಿವನ್ನು ಮೂಡಿಸಲು ಯಕ್ಷನು ಈ ಬಗೆಯ ಪ್ರಶ್ನೆಯನ್ನು ಧರ್ಮರಾಜನಿಗೆ ಮಾಡುತ್ತಾನೆ.
ಧರ್ಮದಿಂದ ಮಾತ್ರವೇ ಅಂತಹ ಅನಾಯಾಸವಾದ, ನರಳಾಟವಿಲ್ಲದ ಸಾವು ಬರಲು ಸಾಧ್ಯ. ಅಂದ ಹಾಗೆ ಧರ್ಮವು ಮಾತ್ರ ಆತನ ಸಾವಿನ ಸಮಯದಲ್ಲಿ ಜೊತೆಯಾಗಿ ನಿಲ್ಲುತ್ತದೆ. ಅದು ಮಾತ್ರವೇ ಸಾವಿನ ಅನಂತರ ಮುಂದೇನು? ಎಂಬುದನ್ನೂ ತೀರ್ಮಾನಿಸುತ್ತದೆ. ಹಾಗಾಗಿ ನಮ್ಮಲ್ಲಿ 'ಧರ್ಮಮಯವಾದ ಬಾಳಾಟ ಮಾಡು' ಎಂಬ ಮಾತು ಬಂದಿದೆ. ಸತ್ಕರ್ಮದ ಫಲವೇ ಧರ್ಮ. ಹೇಗೆ ಬೀಜವನ್ನು ಬಿತ್ತಿ ಕಾಲಕಾಲಕ್ಕೆ ಅದರ ಬೆಳವಣಿಗೆಗೆ ಬೇಕಾದ ಎಲ್ಲ ಕಾರ್ಯವನ್ನು ಸೂಕ್ತವಾಗಿ ಮಾಡಿದಾಗ ಸುಫಲವೆಂಬುದು ನಿರೀಕ್ಷಿತವೋ, ಅಂತೆಯೇ ಈ ಬಾಳೆಂಬ ಬೀಜಕ್ಕೆ ಸಕಾಲದ ಸತ್ಕರ್ಮವು ಧರ್ಮವನ್ನು ಜಾಗೃತಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾವಿನ ಮುಂದಿನ ಗತಿ ಯಾವುದೆಂದರೆ ಮತ್ತೆ ಹುಟ್ಟಿಲ್ಲದಿರುವುದು. ಅಂದರೆ ಅದೇ ಮುಕ್ತಿ. ಮುಕ್ತನಾಗಬೇಕಾದರೆ ಕರ್ಮಬಂಧನದಿಂದ ವಿಮುಕ್ತನಾಗಬೇಕು. 'ಮುಕ್ತಸಂಗಃ ಸಮಾಚರ' ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ ಕರ್ಮವನ್ನು ಮಾಡುವಾಗ ಫಲದ ಮೇಲೆ ಅಪೇಕ್ಷೆಯನ್ನು ತೋರದೆ ಕರ್ತವ್ಯಬುದ್ಧಿಯಿಂದ ಮಾತ್ರವೇ ಕರ್ಮವನ್ನು ಮಾಡುತ್ತಾ ಸಾಗುವುದು. ಅದು ಧರ್ಮಸಂಪಾದನೆಯ ದಾರಿ. ಅದುವೇ ನಾಜೂಕಾದ ಕರ್ಮ. ಆಗ ತಾನೇ ಅನಾಯಾಸವಾದ ಮರಣ ಸಂಭವಿಸಲು ಸಾಧ್ಯ. ಆದ್ದರಿಂದ ಧರ್ಮಜನ ಉತ್ತರ ಮರಣಕಾಲಕ್ಕೆ ಧರ್ಮವೇ ಮಿತ್ರ ಎಂಬುದು.