ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಭಗವಂತನನ್ನು ಕರುಣಾಮಯ, ಕನಿಕರ ಮೂರ್ತಿ, ಕರುಣೆಯ ಕಡಲು ಹೀಗೆಲ್ಲಾ ಕರೆಯುತ್ತಾರೆ. ವಾಸ್ತವವಾಗಿ ಭಗವಂತನಿಗೆ ಕರುಣೆ ಇದೆಯೇ? ಎಂಬ ಪ್ರಶ್ನೆ ಪಕ್ಕದಲ್ಲೇ ಇದೆ. ನಾವು ಜೀವಿಸುವ ಜಗತ್ತನ್ನೊಮ್ಮೆ ನೋಡಿ. ಎಷ್ಟೊಂದು ದುಃಖ ದೈನ್ಯಗಳು! ಹೊಟ್ಟೆಗಿಲ್ಲದೇ ಸಾಯುವವರು, ಜೀವನದ ಪ್ರಾಥಮಿಕ ಅವಶ್ಯಕತೆಗಳೇ ಪೂರೈಕೆಯಾಗದೇ ಗುಳಿಬಿದ್ದ ಕಣ್ಣುಗಳೆಷ್ಟು! ನೆರಿಗೆಯಾದ ಮುಖಗಳೆಷ್ಟು! ಒಂದೆಡೆ ಬಡಜೀವಿಗಳ ತಲೆಯೊಡೆದು ಐಷಾರಾಮದ ಜೀವನ ನಡೆಸುತ್ತಾ ಯಾವ ಭಯವೂ ಇಲ್ಲದೇ ಸ್ವಚ್ಚಂದವಾಗಿ ಬದುಕುವವರ ಅಟ್ಟಹಾಸ! ಇನ್ನೊಂದೆಡೆ ಇವರೆಲ್ಲರ ಕಾಲ್ತುಳಿತಕ್ಕೆ ಒಳಗಾಗಿ ನಳುಗಿಹೊದವರ ಆಕ್ರಂದನ! ಭರ್ತೃಹರಿಯ ಮಾತೊಂದು ಹೀಗಿದೆ- ಕ್ವಚಿದ್ ವಿದ್ವದ್ಗೋಷ್ಠಿ ಕ್ವಚಿದಪಿ ಸುರಾಮತ್ತ ಕಲಹ: ಕ್ವಚಿದ್ ವೀಣಾ ನಾದಃ ಕ್ವಚಿದಪಿ ಹಾಹೇತಿ ರುದಿತಂ| ಕ್ವಚಿದ್ ರಮ್ಯಾರಾಮಾ ಕ್ವಚಿದಪಿ ಜರಾ ಜರ್ಝರ ತನು: | ನ ಜಾನೇ ಸಂಸಾರಃ ಕಿಮಮೃತಮಯಃ ಕಿಂ ವಿಷಮಯಃ||- ಒಂದೆಡೆ ವಿದ್ವಾಂಸರ ಸಭೆ.ಇನ್ನೊಂದೆಡೆ ಹೆಂಡ ಕುಡುಕರ ಜಗಳ. ಒಂದೆಡೆ ಸುಶ್ರಾವ್ಯವಾದ ವೀಣಾನಾದ. ಇನ್ನೊಂದೆಡೆ ಹಾ ಹಾ ಎಂಬ ನೋವಿನ ಚೀತ್ಕಾರ. ಒಂದೆಡೆ ಸುಂದರಿಯಾದ ತರುಣಿ.
ಇನ್ನೊಂದೆಡೆ ಮುಪ್ಪಿನಿಂದ ಜರ್ಝರಿತವಾದ ಶರೀರ.
ಇದರಿಂದ ಈ ಸಂಸಾರವು ಅಮೃತಮಯವೇ, ವಿಷಮಯವೇ ಎಂಬುದೇ ತಿಳಿಯದು ಎನ್ನುತ್ತಾನೆ. ಏನಿದು ವಿಪರ್ಯಾಸ? ಇಷ್ಟಲ್ಲದೇ ಒಬ್ಬ ವ್ಯಕ್ತಿಯ ಬದುಕಲ್ಲೇ ಎಷ್ಟು ವೈಪರೀತ್ಯಗಳು! ಇವತ್ತು ಚೆನ್ನಾಗಿದ್ದವನು ನಾಳೆ ಖಾಯಿಲೆಯಿಂದ ಬಳಲುತ್ತಾನೆ. ಬದುಕೆಲ್ಲವೂ ಬವಣೆಯಲ್ಲೆ ಕಳೆದುಹೋಗುತ್ತಿದೆ. ಜೊತೆಗೇ ರೋಗ, ಮುಪ್ಪು,ಸಾವು, ನೋವುಗಳು..ಇಷ್ಟೇ ಅಲ್ಲದೇ ಪ್ರಳಯಕಾಲದಲ್ಲಿ ಎಲ್ಲಾ ಜೀವಿಗಳನ್ನೂ ಒಳ್ಳೆಯ ಕೆಟ್ಟವರೆಂದಲ್ಲದೇ ಸಂಹಾರ ಮಾಡುತ್ತಾನೆ. ನಿತ್ಯದಲ್ಲೂ ಜೀವಿಗಳ ಮರಣಕ್ಕೂ ಅವನೇ ಕಾರಣ. ಹೀಗೆ ಇನ್ನಿಲ್ಲದ ದುಃಖ ಸಾಗರದಲ್ಲಿ ಮುಳುಗಿದ ಜಗತ್ತನ್ನು ನೋಡಿಯೂ ಈ ಜಗದ ಒಡೆಯನನ್ನು ಕರುಣಾಮಯ ಎನ್ನುವುದೇ? ದಾಸಶ್ರೇಷ್ಠರಾದ ಪುರಂದರ ದಾಸರೇ ಒಂದೆಡೆ -ಕರುಣಾಮಯ ನೀನೆಂಬುವುದ್ಯಾತಕೋ ಭರವಸವಿಲ್ಲೆನಗೆ" ಎಂದಿದ್ದಾರಲ್ಲಾ ಕರುಣಾಮಯ ಎಂಬ ಈ ವಿಶೇಷಣ ಅವನಿಗೆ ಸಲ್ಲದು ಎಂದೇ ಅನ್ನಿಸಿಬಿಡುತ್ತದೆ. ಹಾಗಾದರೆ ಜ್ಞಾನಿಗಳು, ಭಕ್ತರು ಎಲ್ಲಾ ಏಕೆ ಅವನನ್ನು ಹೀಗೆನ್ನುತ್ತಾರೆ? ವಿಚಾರ ಮಾಡಬೇಕಾದ ವಿಷಯ. ಕೆಲವು ಉದಾಹರಣೆಗಳನ್ನು ಗಮನಿಸೋಣ.
ಕರುಣೆಯ ಸ್ವರೂಪವೇನು?:
ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-ಮಗುವಿನ ಜಾತಕರ್ಮಕ್ಕಾಗಿ ಲಾಡು ಮಾಡಿಸಿರುತ್ತಾರೆ. ಬಂದವರೆಲ್ಲರಿಗೂ ಲಾಡು ಬಡಿಸಿ ಸಂತೋಷಪಡಿಸಿದ್ದರೂ ಆ ಮಗುವಿಗೇ ಸ್ವಲ್ಪವೂ ಲಾಡು ಕೊಡದಿರುವ ತಾಯಿ ಎಷ್ಟು ನಿಷ್ಕರುಣಿ ಅಲ್ಲವೇ ? ಎಂದರೆ ಏನೆನ್ನಬೇಕು? ಆ ತಾಯಿ ಏನಾದರೂ ಮಗುವಿನ ಬಾಯಿಗೆ ಲಾಡನ್ನು ಹಾಕಿದರೆ ಮಗುವಿನ ಪರಿಸ್ಥಿತಿ ಏನಾಗಬಹುದು? ಆಗ ಅವಳನ್ನು ಕರುಣಾಮಯಿ ಎನ್ನಲಾದೀತೇ?
ಒಬ್ಬ ಚಿಕ್ಕ ಹುಡುಗನಿಗೆ ತಂದೆ ಹೆದರಿಸಿ, ಹೊಡೆದು, ಪಾಠ ಓದಿಸಿದರೆ ಆ ಸನ್ನಿವೇಶದಲ್ಲಿ ಹುಡುಗನಿಗೆ ತಂದೆ ನಿಷ್ಕರುಣಿ, ತನಗೆ ಶತ್ರುವಿನಂತೆ ಇದ್ದಾನೆ ಎನ್ನಿಸಿದರೆ ಆಶ್ಚರ್ಯವಿಲ್ಲ. ಆದರೆ ಮಗನ ಮೇಲಿನ ಕರುಣೆಯೇ ಈಗ ತಂದೆಯಿಂದ ಇಂತಹ ಕೆಲಸ ಮಾಡಿಸುತ್ತಿದೆಯಲ್ಲವೇ? ಆದರೆ ತಂದೆಯ ಕರುಣೆ ಆ ಮಗುವಿಗೆ ಅರ್ಥವಾಗುವುದು ಮುಂದೆ ಅವನು ಚೆನ್ನಾಗಿ ಓದಿ ದೊಡ್ಡವನಾದಾಗ. ತಂದೆ ಅಂದು ಹಾಗೆ ಮಾಡದಿದ್ದರೆ ಇಂದು ತಾನು ಇಷ್ಟು ಒಳ್ಳೆಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಎಂದು ಗದ್ಗದಿತನಾಗಿ ಅವನು ತಂದೆಯನ್ನು ನೆನಪಿಸಿಕೊಳ್ಳುತ್ತಾನೆ. ನಮಗೆ ಭಗವಂತನ ಕರುಣೆಯ ಸ್ವರೂಪ ತಿಳಿಯದಿದ್ದಾಗ ಹುಡುಗ ಆರಂಭದಲ್ಲಿ ತಂದೆಯನ್ನು ಭಾವಿಸಿದಂತೆ ನಾವೂ ಅವನನ್ನು ನಿಷ್ಕರುಣಿ ಎಂದುಕೊಳ್ಳುತ್ತೇವೆ.
ಅಪರಾಧಿಗೆ ನ್ಯಾಯಾಧೀಶರು ಶಿಕ್ಷೆ ಕೊಡಬಹುದೇ:
ಕಳ್ಳತನ ಮಾಡಿದವನಿಗೆ ನ್ಯಾಯಾಧೀಶರು ಜೈಲು ಶಿಕ್ಷೆ ವಿಧಿಸುತ್ತಾರೆ. ಹಾಗಾದರೆ ನ್ಯಾಯಾಧೀಶರು ನಿಷ್ಕರುಣಿಯೇ? ಶಿಕ್ಷೆ ಕೊಡದೇ ಹಾಗೇ ಬಿಟ್ಟರೆ ನಮಗೆ ಅದು ಒಪ್ಪಿಗೆಯಾಗುತ್ತದೆಯೇ? ಶಿಕ್ಷೆ ಎನ್ನುವುದೇ ಒಬ್ಬನನ್ನು ಸರಿದಾರಿಗೆ ತರಲು ಇರುವ ವ್ಯವಸ್ಥೆ. ಅವನನ್ನು ಸರಿದಾರಿಗೆ ತರಬೇಕೆನ್ನುವ ಮಾನಸಿಕ ಸ್ಥಿತಿ ಕರುಣೆಯೇ ಅಲ್ಲವೇ? ಹೀಗೆ ಸರಿದಾರಿಗೆ ತರುವ ಕ್ರಮ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿರುತ್ತದೆ. ಅವರವರ ಪೂರ್ವ ಸಂಸ್ಕಾರದ ಮೇಲೆ ಯಾವ ಯಾವ ಉಪಾಯಗಳನ್ನು ಮಾಡಿದರೆ ಒಬ್ಬನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಸರಿದಾರಿಗೆ ಬರುತ್ತಾನೆ ಎಂದು ವಿಚಾರ ಮಾಡಿ ಸಜ್ಜನರು ಅಂತಹ ನಿಯಮಗಳನ್ನು ಮಾಡಿರುತ್ತಾರೆ.
ಭಗವಂತನ ಸೃಷ್ಟಿಯೆಲ್ಲವೂ ಕರುಣೆಯಿಂದಲೇ ಆದುದು:
ಹಾಗೆಯೇ ಭಗವಂತನೂ ಜೀವಲೋಕದ ಮೇಲಿನ ಕರುಣೆಯಿಂದಲೇ ಜೀವಕ್ಕೆ ಬೇಕಾದುದೆಲ್ಲವನ್ನೂ ಕೊಟ್ಟು ಸೃಷ್ಟಿಸಿದ್ದಾನೆ. ದಿವಿಯ ಆನಂದದಿಂದ ಭುವಿಯ ಸಂತೋಷಗಳ ವರೆಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಈ ಬ್ರಹ್ಮಾಂಡದ ಸೊಬಗನ್ನೊಮ್ಮೆ ನೋಡಿ- ಅಕ್ಷಯ ಸಂಪದ್ಭರಿತಳಾದಈ ನಮ್ಮ ಭೂಮಿ ತಾಯಿ, ನಯನ ಮನೋಹರ ಗಿರಿ ಪರ್ವತಗಳು,ತಂಪಾದ ನದಿಗಳು, ವಿಶಾಲ ಸಮುದ್ರ,ಅಸಂಖ್ಯ ನಕ್ಷತ್ರನಿಬಿಡವಾದ ನೀಲಾಕಾಶ, ಇನ್ನು ನಮ್ಮ ಈ ಪಿಂಡಾಂಡದಅದ್ಭುತವನ್ನು ಏನೆಂದು ಹೇಳೋಣ..ನಮ್ಮೊಳಗೇ ಬ್ರಹ್ಮಾಂಡದ ಸೋಬಗನ್ನೆಲ್ಲ ಅನುಭವಿಸುವುದಕ್ಕೆ ಬೇಕಾದ ಜ್ಞಾನ ಕರ್ಮೇಂದ್ರಿಯಗಳ ವೈಭವ. ಇಂದ್ರಿಯ ಸುಖಗಳ ಜೊತೆಗೇ ಅದನ್ನೂ ಮೀರಿದ ಆತ್ಮನ ಸುಖವನ್ನೂ ಅನುಭವಿಸಲು ಸಮರ್ಥವಾಗಿರುವ ಅದ್ಭುತವಾದ ಮಾನವ ದೇಹ. ಇವೆಲ್ಲವನ್ನೂ ಜೀವಲೋಕದ ಮೇಲಿನ ಕರುಣೆಯಿಂದಲ್ಲವೇ ಅವನು ಅನುಗ್ರಹಿಸಿರುವುದು? ಹಾಗಾದರೆ ಮೇಲೆ ಹೇಳಿದ ದುಃಖ ದೈನ್ಯಗಳಿಗೆ ಯಾರು ಜವಾಬ್ದಾರರು? ಮುಂದಿನ ಸಂಚಿಕೆಯಲ್ಲಿ ನೋಡೋಣ
ಮುಂದುವರೆಯುವುದು
ಸೂಚನೆ : 29/6/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.