Sunday, June 16, 2024

ಯಕ್ಷ ಪ್ರಶ್ನೆ 94 (Yaksha prashne 94)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 93 ಆಲಸ್ಯ ಎಂದರೆ ಯಾವುದು?

ಉತ್ತರ - ಧರ್ಮಕಾರ್ಯವನ್ನು ಮಾಡದೆ ಇರುವುದು. 

ಮಾನವನು ತನ್ನ ಜೀವಿತಾವಧಿಯಲ್ಲಿ ಮಾಡಲೇಬೇಕಾದ ಕಾರ್ಯ ಯಾವುದುಂಟೋ ಅವೆಲ್ಲವನ್ನು ಧರ್ಮಕಾರ್ಯ ಎನ್ನಬಹುದು. ಅವುಗಳನ್ನು ಮಾಡದಿರುವುದಕ್ಕೆ ಆಲಸ್ಯವೇ ಕಾರಣ ಎನ್ನಬಹುದು ಎಂಬುದಾಗಿ ಧರ್ಮರಾಜನ ಉತ್ತರವಾಗಿದೆ. ಹಾಗಾದರೆ ಮಾನವನಾಗಿ ಮಾಡಲೇಬೇಕಾದ ಕಾರ್ಯಗಳು ಯಾವುವು? ಎಂಬುದನ್ನು ಮೊದಲು ತಿಳಿದಾಗ ಮುಂದಿನ ವಿಷಯ ಸುಗಮವಾಗುತ್ತದೆ. ಈ ಜೀವನ ಎಂಬುದು ಪ್ರಧಾನವಾಗಿ ಹುಟ್ಟನ್ನು ಸಾರ್ಥಪಡಿಸಿಕೊಳ್ಳುವ ಕಾಲಘಟ್ಟ. ಇದರಲ್ಲಿ ಪ್ರಧಾನವಾಗಿ ನಾಲ್ಕು ಘಟ್ಟಗಳು ಮತ್ತು ನಾಲ್ಕು ಅವಸ್ಥೆಗಳು ಬರುತ್ತವೆ. ಜಾಗೃತ್ ಸ್ವಪ್ನ ಸುಷುಪ್ತಿ ಮತ್ತು ತುರೀಯ ಎಂಬ ಆ ನಾಲ್ಕು ಅವಸ್ಥೆಗಳು; ಶೈಶವ, ಯೌವನ, ವಾರ್ಧಕ ಮತ್ತು ಮುಪ್ಪು ಎಂಬ ನಾಲ್ಕು ಘಟ್ಟಗಳು. ಇವುಗಳನ್ನು ಸಾರ್ಥಕಪಡಿಸಿಕೊಳ್ಳಬೇಕು. ಹುಟ್ಟಿನಿಂದ ಆರಂಭಿಸಿ ಅಧ್ಯಯನದ ವರೆಗಿನ ಅವಧಿ ಶೈಶವ, ಅಧ್ಯಯನ ಅವಧಿ ಮುಗಿದ ಬಳಿಕ ವಿವಾಹವಾಗಿ ಗೃಹಸ್ಥನ ಬದುಕನ್ನು ಯೌವನ ಎನ್ನಬಹುದು. ಅರವತ್ತು ವರ್ಷದ ಅನಂತರಕಾಲ ವಾರ್ಧಕ್ಯ ಎನ್ನುವುದಾದರೆ; ಸಾವು ಸಮೀಪಿಸಿದ ಕಾಲವೇ ಮುಪ್ಪು. ಈ ಅವಸ್ಥೆಗಳಲ್ಲಿ ಯಾವುದನ್ನು ಮಾಡಲೇಬೇಕು ಎಂಬುದಕ್ಕೆ ಕಾಳಿದಾಸನು ಸೂತ್ರಪ್ರಾಯವಾದ ಈ ಮಾತನ್ನು ಹೇಳುತ್ತಾನೆ.

 "ಶೈಶವೇ ಅಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಂ । ವಾರ್ಧಕೇ ಮುನಿವೃತ್ತಿನಾಂ ಯೋಗೇನಾಂತೇ ತನುತ್ಯಜಾಮ್ ।

 - ಶೈಶವಾವಸ್ಥೆಯಲ್ಲಿ ವಿದ್ಯೆಯು ನಮ್ಮ ಮೈಮನಗಳಲ್ಲಿ ಬೇರೂರಬೇಕು. ವಿದ್ಯೆಯು ಎಲ್ಲಾ ಬಗೆಯಿಂದ ಗಟ್ಟಿಯಾಗಿ ಕುಳಿತುಕೊಳ್ಳುವ ಅವಧಿಯನ್ನೇ ವಿದ್ಯಾ-ಅಭಿ- ಆಸ =ವಿದ್ಯಾಭ್ಯಾಸ ಎನ್ನಬಹುದು. ಹಾಗೆ ಗಟ್ಟಿಯಾಗಿ ಕುಳಿತುಕೊಳ್ಳುವ ರೀತಿಯಲ್ಲೇ ವಿದ್ಯೆಯನ್ನು ಸಂಪಾದನೆ ಮಾಡಬೇಕು. ವಿದ್ಯೆಯನ್ನು ಬಿಟ್ಟು ಬೇರಾವುದನ್ನೂ ಸಂಪಾದನೆ ಮಾಡಬಾರದು. ಒಂದು ವೇಳೆ ಬೇರೆಯದನ್ನು ಸಂಪಾದನೆ ಮಾಡಲು ಹೊರಟರೆ ವಿದ್ಯಾಧ್ಯಯನ ಅಪೂರ್ಣವಾಗುವುದು. ವಿದ್ಯೆಯು ಪೂರ್ಣವಾಗದಿದ್ದರೆ ಮುಂದಿನ ವ್ಯವಸ್ಥೆಯೂ ಅಪೂರ್ಣವಾದಂತೆಯೇ ಸರಿ. ಬಾಲ್ಯದಲ್ಲಿ ಯಾವ ವಿದ್ಯೆಯನ್ನು ಸಂಪಾದನೆ ಮಾಡಿರುತ್ತಾನೋ ಅದರಿಂದ ಬಂದ ವಿವೇಕ ವಿನಯಾದಿ ಸದ್ಗುಣಗಳಿಂದ ಆತ ಮಾಡುವ ಕರ್ಮಗಳೆಲ್ಲವೂ ಧರ್ಮಪರವಾಗುವುವು. ವಿದ್ಯೆ ಇಲ್ಲದವನ ಕಾರ್ಯವೂ ಅಪೂರ್ಣವೇ. ಹಾಗಾಗಿ ಮಕ್ಕಳಿಗೆ ಆರಂಭದಲ್ಲೇ ಧರ್ಮಬುದ್ಧಿಯನ್ನು ಬೆಳೆಸಬೇಕು. 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎಂಬ ಗಾದೆಯೂ ಇದೆ. ಫೌಂಡೇಶನ್ ಗಟ್ಟಿಯಾಗಿದ್ದರೆ ತಾನೆ ಭವ್ಯಭವನವನ್ನು ಕಟ್ಟಲು ಸಾಧ್ಯ. ಆದ್ದರಿಂದ ವಿದ್ಯೆ ಸಂಪಾದನೆಯೇ ಬಾಲ್ಯದ ಧರ್ಮಕಾರ್ಯ. ಇದನ್ನು ಮಾಡದಿರುವುದೇ ಆಲಸ್ಯ. ಅಥವಾ ಆಲಸ್ಯದ ಕಾರಣದಿಂದ ವಿದ್ಯೆಯನ್ನು ಸಂಪಾದನೆ ಮಾಡುವುದಿಲ್ಲ. 

ವಿದ್ಯೆಯ ಬಲದಿಂದ ಮುಂದಿನ ಕಾರ್ಯ ಸಾಗಬೇಕು. ವಿದ್ಯಾವಂತನಾದವನಿಗೆ ಮುಂದಿನ ಬೇಕು ಬೇಡಗಳ ಸ್ಪಷ್ಟತೆ ಇರುತ್ತದೆ. ಆತನಿಗೆ ಗೊಂದಲವೇ ಇರುವುದಿಲ್ಲ. ಜೀವನದಲ್ಲಿ ಎಡರುತೊಡರುಗಳ ಸಾಧ್ಯತೆಯೂ ಕಡಿಮೆಯೇ. ನೆಮ್ಮದಿಯ ಯೌವನ ಜಾರುತ್ತದೆ. ಹೀಗೆ ಯೌವನವು ನೆಮ್ಮದಿಂದ ಸಾಗಿದರೆ ಮೈಯ್ಯಲ್ಲಿ ಕಸು ಇಲ್ಲದಿದ್ದಾಗ ಹಾಯಾಗಿ ಕುಳಿತು ಪೂಜೆ ಧ್ಯಾನ ಮೊದಲಾದ ಸತ್ಕಾಲಕ್ಷೇಪವು ಅವನದಾಗಿರುತ್ತದೆ. ಇಲ್ಲೂ ಜೀವಿಕೆಗಾಗಿ ಹುಡುಕಾಟ ಅಲೆದಾಟದ ಗೋಜಿಲಿಲ್ಲ. ಇದು ಮುಂದಿನ ಅನಾಯಾಸವಾದ ಮರಣಕ್ಕೆ ದಾರಿ. ಯೋಗಮಯ ಜೀವನವೆಂದರೆ ಇದುವೇ ಮಹರ್ಷಿಗಳು ಹೇಳಿದ್ದು. ಮತ್ತು ಜಾಗೃಜ್ಜೀವನ ಆತಂಕರಹಿತವಾಗಿ ನಡೆದಾಗ ಸುಖವಾದ ಸ್ವಪ್ನ ನಿದ್ದೆಗಳು ಬರುವವು ಅಷ್ಟೇ. ಇದೇ ಮುಂದಿನ ಸಹಜಾವಸ್ಥೆ - ತುರೀಯಾವಸ್ಥೆ ಅಥವಾ ಸಮಾಧಿಜೀವನಕ್ಕೂ ಪೂರಕವಾಗುತ್ತದೆ. ಇದೇ ನಿಜವಾದ ಧರ್ಮಕಾರ್ಯ. ಇದೇ ಆಲಸ್ಯರಹಿತವಾದ ಜೀವನಪದ್ಧತಿ. 

ಸೂಚನೆ : 16/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.