Friday, June 7, 2024

ಸಂಪತ್ತಿನ ಸದ್ವಿನಿಯೋಗ ಯಾವಾಗ ? (Sampattina Sadviniyoga Yavaga?)


ಲೇಖಕರು; ವಿದುಷಿ ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)




ಶ್ರೀಕೃಷ್ಣ ಮತ್ತು ಸುದಾಮರು ಬಾಲ್ಯ ಸ್ನೇಹಿತರು. ಸಾಂದೀಪನಿ ಮಹರ್ಷಿಗಳ ಗುರುಕುಲದಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡಿದವರು. ಅವರಿಬ್ಬರ ಗುರುಕುಲವಾಸ ಪೂರ್ಣವಾದ ಬಳಿಕ ಶ್ರೀಕೃಷ್ಣನು ದ್ವಾರಕೆಗೆ ಹಿಂತಿರುಗುತ್ತಾನೆ. ಸುದಾಮನು ತನ್ನ ಸ್ವಗೃಹಕ್ಕೆ ತೆರಳುತ್ತಾನೆ. ಶ್ರೀಕೃಷ್ಣನು ದ್ವಾರಕೆಯಲ್ಲಿ ಅರಮನೆಯ ವಾಸದಲ್ಲಿರುತ್ತಾನೆ. ಸುದಾಮನಾದರೋ ಅತ್ಯಂತ ಬಡವ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಅವನದು.

ಸುದಾಮನ ಹೆಂಡತಿಗೆ ಶ್ರೀಕೃಷ್ಣನು ತನ್ನ ಪತಿಯ ಪ್ರಿಯಮಿತ್ರ ಎಂಬುದು ತಿಳಿದಿರುತ್ತದೆ. ಅವಳು ಒಮ್ಮೆ ಪತಿಯನ್ನು ಕುರಿತು ತಾವು ದ್ವಾರಕೆಗೆ ಹೋಗಿ  ಕೃಷ್ಣನ ಸಹಾಯವನ್ನು ಕೇಳಬಹುದಲ್ಲವೇ ? ಅದರಿಂದ ನಮ್ಮ ಪರಿಸ್ಥಿತಿ  ಸುಧಾರಿಸಬಹುದು ಎಂಬುದಾಗಿ ಸೂಚಿಸುತ್ತಾಳೆ.  ಸುದಾಮನಿಗೆ ತಮ್ಮ ದಾರಿದ್ರ್ಯವನ್ನು ಅವನಲ್ಲಿ ಅರಿಕೆ ಮಾಡಿಕೊಳ್ಳುವುದು ಇಷ್ಟವಿಲ್ಲದಿದ್ದರೂ ಪತ್ನಿಯ ಪ್ರೇರೇಪಣೆಯಿಂದ ದ್ವಾರಕೆಗೆ ಬರುತ್ತಾನೆ.

 ಶ್ರೀಕೃಷ್ಣನು ಸುದಾಮನ ಆಗಮನದ ವಾರ್ತೆಯನ್ನು ತಿಳಿದು ಅತ್ಯಂತ ಸಂತೋಷಗೊಂಡವನಾಗಿ ಅವನನ್ನು ಆತ್ಮೀಯವಾಗಿ ಎದುರುಗೊಂಡು ಪ್ರೀತಿಯಿಂದ ಸತ್ಕಾರವನ್ನು ಮಾಡುತ್ತಾನೆ. ಅವನ  ಆದರಪೂರ್ಣವಾದ ಸತ್ಕಾರದಿಂದ ಸುದಾಮನ ಮನಸ್ಸು ಆನಂದದಿಂದ ತುಂಬಿ ಹೋಗುತ್ತದೆ. ಶ್ರೀಕೃಷ್ಣ ಪರಮಾತ್ಮನ ಸಾನಿಧ್ಯ ಸೌಖ್ಯದಲ್ಲಿ ಅವನಿಗೆ ತನ್ನ ಕಷ್ಟ ಪರಂಪರೆ ನೆನಪಾಗುವುದೇ ಇಲ್ಲ!. ಅವನು ತನ್ನ ಆಗಮನದ ಕಾರಣವನ್ನೇ ಮರೆತುಬಿಡುತ್ತಾನೆ. ಸರ್ವಾಂತರ್ಯಾಮಿಯಾದ ಶ್ರೀಕೃಷ್ಣನಿಗೆ ಸುದಾಮನ ಮನದಾಳದ ಬಯಕೆ ತಿಳಿಯದೇ ಇರುತ್ತದೆಯೇ ? ಸುದಾಮನು ಕೆಲವು ದಿನಗಳು  ಕೃಷ್ಣನ ಜೊತೆಯಲ್ಲಿಯೇ ಇದ್ದು ನಂತರ ತನ್ನೂರಿಗೆ ಹೊರಡುತ್ತಾನೆ. ದಾರಿಯಲ್ಲಿ ಬರುವಾಗ ಅವನಿಗೆ ತನ್ನ ದಾರಿದ್ರ್ಯದ ನೆನಪಾಗಿ ತಾನು ಕೇಳಬೇಕೆಂದುಕೊಂಡಿದ್ದನ್ನು ಕೃಷ್ಣನ ಬಳಿ ಕೇಳಲೇ ಇಲ್ಲವಲ್ಲ ಎಂದು ಯೋಚಿಸುತ್ತಾನೆ. ಆದರೆ ತನ್ನ ಮನೆಯ ಹತ್ತಿರ ಬಂದಾಗ ಸುದಾಮನಿಗೆ ಆಶ್ಚರ್ಯ ಕಾದಿರುತ್ತದೆ. ತನ್ನ ಗುಡಿಸಲು ಇರುವ ಜಾಗದಲ್ಲಿ ಭವ್ಯವಾದ ಬಂಗಲೆ ನಿರ್ಮಿತವಾಗಿರುತ್ತದೆ, ಮನೆಯು ಧನ ಧಾನ್ಯದಿಂದ ತುಂಬಿರುತ್ತದೆ, ಹೆಂಡತಿ ಮಕ್ಕಳು ಹೊಸ ಬಟ್ಟೆ,ಆಭರಣಗಳನ್ನು ತೊಟ್ಟುಕೊಂಡು ಓಡಾಡುತ್ತಿರುತ್ತಾರೆ. ಇವೆಲ್ಲವೂ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ಎಂಬುದು ಅವನಿಗೆ ಸ್ಪಷ್ಟವಾಗುತ್ತದೆ.  ತನಗೆ ಸಂಪತ್ತನ್ನು ಅನುಗ್ರಹಿಸಿರುವ ಶ್ರೀ ಕೃಷ್ಣನನ್ನು ಕೃತಜ್ಞತೆಯಿಂದ ಸ್ಮರಿಸಿ,  ಸದ್ಗೃಹಸ್ಥನಾಗಿ, ಭಗವಂತನಿಂದ ಕೊಡಲ್ಪಟ್ಟ ಸಂಪತ್ತನ್ನು  ಭಗವಂತನ ಸ್ಮರಣೆಯೊಂದಿಗೆ ಸದ್ವಿನಿಯೋಗಮಾಡುತ್ತಾ ಸುಖ, ಶಾಂತಿಯಿಂದ ಜೀವನವನ್ನು ನಡೆಸುತ್ತಾನೆ.

 ಈ ಸೃಷ್ಟಿಯಲ್ಲಿ ಭೌತಿಕವಾದ ಸಂಪತ್ತು ಅನ್ನುವುದು ಎಲ್ಲರಿಗೂ, ಎಲ್ಲಾ ಕಾಲದಲ್ಲಿಯೂ ಒಂದೇ ತರಹ ಇರುವುದಿಲ್ಲ. ಅವರವರ ಪೂರ್ವಕೃತ ಕರ್ಮಕ್ಕನುಗುಣವಾಗಿ, ಪರಿಶ್ರಮಕ್ಕನುಗುಣವಾಗಿ, ಅದೃಷ್ಟದ ಮೇರೆಗೆ ಬದಲಾಗುತ್ತಾ ಇರುತ್ತದೆ. ಸಂಪತ್ತಿರುವೆಡೆ ಸುಖ ಶಾಂತಿ ನೆಲೆಸಿರುತ್ತದೆ ಎಂಬುದೂ ಇಲ್ಲ. ಭಗವಂತನಿಂದ ದಯಪಾಲಿಸಲ್ಪಟ್ಟ ಸಂಪತ್ತನ್ನು ಯಾವ ರೀತಿ ಉಪಯೋಗಿಸಿದಾಗ ಅದು ನಮ್ಮ ಭೌತಿಕ ಜೀವನವನ್ನು ಸುಖಮಯವಾಗಿಸಿ, ಮನಸ್ಸಿಗೆ ಶಾಂತಿಯನ್ನು ನೀಡುವ ಪಾರಮಾರ್ಥಿಕ ಜೀವನಕ್ಕೂ ಪೋಷಕವಾಗಬಲ್ಲದು ಎಂಬ ಅರಿವು ಅವಶ್ಯಕ.

ಭಗವಂತನನ್ನು ಮರೆಸುವ ಸಂಪತ್ತು ವಿಪತ್ತೇ ಆಗುತ್ತದೆ. "ಒಂದು ದ್ರವ್ಯವೂ ಇದ್ದು ಅದರ ಸರಿಯಾದ ವಿನಿಯೋಗವೆಂದರೆ ಪರಮ ಯೋಗದಲ್ಲಿ ಮುಕ್ತಾಯವಾಗುವುದು" ಎಂಬ ಶ್ರೀರಂಗಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ.
 
ಭಗವಂತನ ಸ್ಮರಣೆಯೊಂದಿಗೆ ಧರ್ಮ ಸಮ್ಮತವಾಗಿ ಸಂಪತ್ತನ್ನು ತಾನೂ ಅನುಭವಿಸಿ,  ಸತ್ಕಾರ್ಯಕ್ಕೆ ಅದನ್ನು ವಿನಿಯೋಗ ಮಾಡುತ್ತಾ ಬಂದಾಗ ಅದು ಪರಮಯೋಗದಲ್ಲಿ ನಮ್ಮನ್ನು ನೆಲೆ ನಿಲ್ಲಿಸಲು ಸಹಕಾರಿಯಾಗುವುದರೊಂದಿಗೆ ಆ ಸಂಪತ್ತಿನ ಸಾರ್ಥಕವಾದ ಬಳಕೆಯಾದಂತಾಗುತ್ತದೆ.

ಸೂಚನೆ: 07/06/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.