Monday, October 30, 2023

ವ್ಯಾಸ ವೀಕ್ಷಿತ - 60 ದ್ರೌಪದೀ-ವಿವಾಹದ ಪ್ರಸ್ತಾವ (Vyaasa Vikshita - 60 Draupadi-vivahada Prastava)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)



ಪರಸ್ಪರವಿಶ್ವಾಸವು ಹೀಗೆ ಬೆಳೆಯಲು, ತನ್ನ ಮಕ್ಕಳೊಂದಿಗೆ ಆಗಮಿಸಿ, ದ್ರುಪದನು ಯುಧಿಷ್ಠಿರನಿಗೆ ಹೀಗೆ ಹೇಳಿದನು: "ಇಂದು ಪುಣ್ಯದಿನ. ವಿಧಿವತ್ತಾಗಿ ಪಾಣಿಗ್ರಹಣವನ್ನು ಮಹಾಬಾಹುವಾದ ಅರ್ಜುನನು ಮಾಡಲಿ. ಅದಕ್ಕಾಗಿ ತಕ್ಕ ಮಂಗಳಾರಂಭವಾಗಲಿ" - ಎಂದು. ಅದಕ್ಕೆ ಧರ್ಮಾತ್ಮನಾದ ಯುಧಿಷ್ಠಿರನು, "ರಾಜನೇ, ನನಗೂ ವಿವಾಹವೀಗ ನೆರವೇರಬೇಕಾಗುತ್ತದೆಯಷ್ಟೆ?" - ಎಂದನು. ಅದಕ್ಕೆ ದ್ರುಪದನು, "ನನ್ನ ಮಗಳ ಕೈಯನ್ನು ವಿಧಿವತ್ತಾಗಿ ಹಿಡಿಯುವುದನ್ನು ನೀನೇ ಮಾಡಬಹುದು; ಅಥವಾ ಉಳಿದ ಸಹೋದರರಲ್ಲಿ ಯಾರೊಂದಿಗಾದರೂ ಕೃಷ್ಣೆಯ ವಿವಾಹಕ್ಕೆ ತಮ್ಮ ಅಪ್ಪಣೆಯಾಗಬಹುದು, ವೀರನೇ" ಎಂದನು.

ಆಗ ಯುಧಿಷ್ಠಿರನು ಹೇಳಿದನು: ರಾಜನೇ, ಕೃಷ್ಣೆಯು ನಮ್ಮೆಲ್ಲರಿಗೂ ಮಹಿಷಿ (ಎಂದರೆ ಪಟ್ಟದರಸಿ) ಯಾಗುವಳು. ಹಾಗೆಂಬುದಾಗಿಯೇ ನನ್ನ ತಾಯಿಯು ಈ ಮೊದಲೇ ಆದೇಶಿಸಿರುವಳು. ನಾನೂ ಭೀಮಸೇನನೂ ಇನ್ನೂ ಅವಿವಾಹಿತರೇ. ರತ್ನಸ್ವರೂಪಳಾದ ನಿನ್ನ ಈ ಪುತ್ರಿಯನ್ನು ಅರ್ಜುನನು ಗೆದ್ದಿರುವನು. ರಾಜನೇ, ನಮ್ಮೊಳಗಿನ ಒಪ್ಪಂದವಿದು: ಯಾವುದೇ ರತ್ನವಿದ್ದರೂ ನಾವೆಲ್ಲರೂ ಅದನ್ನು ಒಟ್ಟಾಗಿಯೇ ಸೇವಿಸುವುದು - ಎಂಬುದಾಗಿ. ಆ ಒಪ್ಪಂದವನ್ನು ನಾವು ತೊರೆಯಲಿಚ್ಛಿಸುವುದಿಲ್ಲ, ರಾಜನೇ. ಕೃಷ್ಣೆಯು ನಮ್ಮೆಲ್ಲರಿಗೂ ಧರ್ಮಾನುಸಾರವಾಗಿಯೇ ಮಹಿಷಿಯಾಗತಕ್ಕವಳು ಆದ್ದರಿಂದ ಆಕೆಯು ಅಗ್ನಿಯೆದುರಿಗೇ ಅನುಕ್ರಮವಾಗಿ ನಮ್ಮೆಲ್ಲರ ಕೈಯನ್ನು ಹಿಡಿಯಲಿ.

ಆಗ ದ್ರುಪದನು ಹೇಳಿದನು: " ಒಬ್ಬನಿಗೆ ಹಲವರು ಪತ್ನಿಯರು ವಿಹಿತವಾಗಿರುವುದನ್ನು (ವೇದಗಳಲ್ಲೇ) ನಾವು ಕೇಳಿರುತ್ತೇವೆ. ಆದರೆ ಒಬ್ಬಳಿಗೇ ಅನೇಕ ಪತಿಯರು ಆಗುವುದನ್ನು ಎಲ್ಲಿಯೂ ಕೇಳಿಲ್ಲ. ಅಯ್ಯಾ ಕೌಂತೇಯನೇ, ನೀನು ಧರ್ಮವನ್ನು ಬಲ್ಲವನು, ಶುಚಿಯಾದವನು. ಲೋಕಕ್ಕೂ ವೇದಕ್ಕೂ ಇದು ವಿರುದ್ಧವಾದದ್ದು. ಹಾಗಿದ್ದು ಅಧರ್ಮವೆನಿಸತಕ್ಕ ಇಂತಹ ಕಾರ್ಯವನ್ನು ನೀನು ಮಾಡುವುದುಂಟೇ?" – ಎಂಬುದಾಗಿ. (ಇಲ್ಲಿ ಸ್ಪಷ್ಟವಾಗಿ ತಿಳಿದುಬರುವ ಅಂಶವೊಂದಿದೆ. ಪಾಶ್ಚಾತ್ಯರ ನಿರೂಪಣೆಗಳನ್ನು ಅನುಸರಿಸಿಯೋ, ಅಥವಾ ತಮ್ಮ ಸ್ವಂತಚಿಂತನೆಗಳಿಂದಲೋ, ಕೆಲವರು ಹೀಗೆ ಕಲ್ಪಿಸುವುದುಂಟು: "ಒಬ್ಬಳಿಗೇ ಹಲವು ಪತಿಯರಿರುವ ಕ್ರಮ ಎಂದಿನಿಂದಲೂ ಇತ್ತು - ಕೆಲವು ಗುಡ್ಡಗಾಡುಗಳ ಮಂದಿಯಲ್ಲಾದರೂ ಇತ್ತು" ಇತ್ಯಾದಿಯಾಗಿ. ಈ ರೀತಿಯ ಸ್ವಕಪೋಲಕಲ್ಪಿತಗಳಿಗೆ ವ್ಯಾಸಮಹಾಭಾರತದಲ್ಲಿ ಯಾವುದೇ ಆಧಾರವಿಲ್ಲ - ಎಂಬುದನ್ನು ಮನಗಾಣಬೇಕು. ಅಧುನಿಕ ಕಥೆ-ಕಾದಂಬರಿ-ನಾಟಕ-ಸಿನೆಮಾಗಳಲ್ಲಿ ಬಂದದ್ದನ್ನೆಲ್ಲಾ ವಾಲ್ಮೀಕಿಯೋ ವ್ಯಾಸರೋ ಬರೆದದ್ದೆಂಬುದಾಗಿ ಭ್ರಮಿಸಬಾರದು. ಮೂಲದಲ್ಲಿ ಇಲ್ಲದಿರುವುದನ್ನು ಭಾವಿಸಲು ಯುಕ್ತ-ಸಾಕ್ಷ್ಯಾಧಾರಗಳೇನೂ ಇಲ್ಲದೇ ಹೋದಾಗ, ಅವನ್ನು ಕೇವಲ ಊಹೆ/ಕಲ್ಪನೆಯೆಂದಷ್ಟೇ ಭಾವಿಸಬಹುದಷ್ಟೆ. "ಒಬ್ಬಳ ಬಹುಪತಿತ್ವವೆಂಬುದು ಲೋಕವಿರುದ್ಧವೂ ಹೌದು ವೇದವಿರುದ್ಧವೂ ಹೌದು" -  ಎಂಬುದಾಗಿ ದ್ರುಪದನು ಸ್ಪಷ್ಟವಾಗಿ ಹೇಳಿ, ಅದು ಅಧರ್ಮವೆಂದು ಜರೆದಿರುವುದನ್ನೂಇಲ್ಲಿ ಗಮನಿಸಬೇಕು.)

ಆಗ ಯುಧಿಷ್ಠಿರನು ಹೇಳಿದನು: "ಮಹಾರಾಜನೇ, ಧರ್ಮವು ಸೂಕ್ಷ್ಮವಾದದ್ದು. ಅದರ ನಡೆಯನ್ನು ನಾವು ಅರಿಯೆವು. (ಆ ಕಾರಣಕ್ಕೆ) ನಮ್ಮ ಪೂರ್ವಿಕರಾದವರು (ಎಂದರೆ ಹಿಂದಿನ ಮಹಾತ್ಮರು) ನಡೆದ ಹಾದಿಯಲ್ಲಿ ನಾವು ನಡೆಯತಕ್ಕವರು (ಎಂದರೆ, ಯಾರಿಗೆ ಸ್ವತಃ ಧರ್ಮದ ಜಾಡನ್ನೂ ನಡೆಯನ್ನೂ ಹಿಡಿಯಲಾಗದೋ ಅಂತಹವರೇನು ಮಾಡಬಹುದು? ಧರ್ಮಿಷ್ಠರಾದ ಹಿರಿಯರು ಹೋಗುವ ಹಾದಿಯನ್ನೇ ಹಿಡಿಯುವುದೇ ಕ್ಷೇಮ - ಎಂಬ ನ್ಯಾಯವಾದ ಲೆಕ್ಕವೇ ಇಲ್ಲಿದೆ).

ಸೂಚನೆ : 29/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 61 (Yaksha prashne 61)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 60 ಯಾವುದನ್ನು ಬಿಟ್ಟರೆ ಮನುಷ್ಯನು ಶೋಕಿಸುವುದಿಲ್ಲ ?

ಉತ್ತರ - ಕ್ರೋಧ  

 ಇಲ್ಲಿ ಯಕ್ಷನು ಕೇಳುವ ಈ ಪ್ರಶ್ನೆಯಲ್ಲಿ - ಕ್ರೋಧವನ್ನು ಬಿಡುವುದರಿಂದ ಶೋಕ ಹೇಗೆ ದೂರಾಗುತ್ತದೆ? ಮತ್ತು ಕ್ರೋಧ ಅಥವಾ ಕೋಪ ಹೇಗೆ ಶೋಕಕ್ಕೆ ಕಾರಣವಾಗುತ್ತದೆ? ಎನ್ನುವ ಎರಡು ಅಂಶವನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಕ್ರೋಧ ಎಂದರೆ ಸಿಟ್ಟು ಅಥವಾ ಕೋಪ. ಕೋಪವು ಇಟ್ಟುಕೊಳ್ಳಬೇಕಾದದ್ದೋ ಅಥವಾ ಬಿಟ್ಟುಕೊಡಬೇಕಾದದ್ದೋ ಅನ್ನುವಂತಹ ಎರಡು ವಿಷಯವೂ ಕೂಡ ಇದಕ್ಕೆ ಇದೆ. ಸಕಾಲದಲ್ಲಿ ಬರುವಂತಹ ಕ್ರೋಧವು ಅನುಕೂಲವನ್ನು ಉಂಟು ಮಾಡಬಹುದು. ಅದೇ ಅಕಾಲದಲ್ಲಿ ಬರುವಂತಹ ಕ್ರೋಧವು ಪ್ರತಿಕೂಲವನ್ನು ಉಂಟು ಮಾಡಬಹುದು. ಸಿಟ್ಟು ಕೆಟ್ಟದ್ದನ್ನು ನೋಡಿದಾಗ ಬರುವಂತಹದ್ದು ಸಹಜ. ಅಲ್ಲ ಸಲ್ಲದ ವಿಷಯವನ್ನು ಕಂಡಾಗ ಕೇಳಿದಾಗ ಬರುವಂತಹ ಕೋಪವೂ ಸಹಜವೇ. ಯಾವುದೇ ವಸ್ತುವೂ ಅದು ಎಲ್ಲಿ ಹುಟ್ಟಿದೆ? ಆ ಹುಟ್ಟಿಗೆ ಕಾರಣವಾದ ಅಂಶಗಳು ಯಾವುವು? ಎಂಬುದರ ಮೇಲೆ ಆ ವಸ್ತುವಿನ ಗುಣ ದೋಷಗಳು ನಿರ್ಣಯವಾಗುತ್ತವೆ.  ಭಗವದ್ಗೀತೆಯಲ್ಲಿ ಕ್ರೋಧ ಎಂಬ ಗುಣವು ರಜೋಗುಣದಿಂದ ಹುಟ್ಟುತ್ತದೆ ಎಂಬುದನ್ನು ಹೇಳಿದ್ದಾನೆ ಶ್ರೀಕೃಷ್ಣ. ಕೆಲವೊಮ್ಮೆ  ಸತ್ತ್ವಗುಣದಿಂದಲೂ ಕೋಪವು ಬರುವುದು ಉಂಟು. ಅಂತ ಗುಣವು ಪೂಜ್ಯವಾದುದು. ಯಾವುದು ರಜೋಗುಣದಿಂದ ಹುಟ್ಟುತ್ತದೆಯೋ ಅದು ತ್ಯಾಜ್ಯವಾದದ್ದು ಎಂಬುದು ನಿಶ್ಚಯವಾದ ವಿಷಯ. ಅಂದರೆ ರಜೋಗುಣದಿಂದ ಉದ್ಭವವಾಗುವ ಗುಣವಿದೆಯೋ ಅದು ಮುಂದೆ ಶೋಕಕ್ಕೆ ಕಾರಣವಾಗುತ್ತದೆ ಎಂದರ್ಥ. ಅದೇ ರೀತಿಯಾಗಿ ಸತ್ತ್ವಗುಣದಿಂದ ಹುಟ್ಟುವಂತಹ ಯಾವ ಕ್ರೋಧವಿದೆಯೋ ಅದು ಅನುಕೂಲಕ್ಕೆ ಕಾರಣ ಎಂದು. ನಾವು ರಾಮಾಯಣದಲ್ಲಿ ಒಂದು ಉದಾಹರಣೆಯನ್ನು ನೋಡಬಹುದು. ರಾಮನು ಕ್ರೋಧವನ್ನು ಆವಾಹಿಸಿಕೊಂಡ ಎಂಬುದಾಗಿ. ಅಂದರೆ ಸಮುದ್ರರಾಜನ ದರ್ಪವನ್ನು -  ಅಹಂಕಾರವನ್ನು ಅಡಗಿಸುವುದಕೋಸ್ಕರ ಅಲ್ಲಿ ರಾಮನು ಕ್ರೋಧವನ್ನು ಬರಸೆಳೆದ. ಹಾಗಾಗಿ ಅಲ್ಲಿ ಕ್ರೋಧ ಎಂಬುದು ಅನುಕೂಲವಾಗುವ ಗುಣವಾಯಿತೇ ಹೊರತು ಅದರಿಂದ ಪ್ರತಿಕೂಲವಾಗಲಿಲ್ಲ. ಆದರೆ ಬೇರೆ ಯಾವುದೇ ಸಂದರ್ಭದಲ್ಲಿ ಈ ಕ್ರೋಧವು ರಜೋಗುಣದಿಂದ ಹುಟ್ಟಿದಾಗ ಅದು ಪ್ರತಿಕೂಲವಾಗುತ್ತದೆ ಎಂದರ್ಥ.

ಒಂದು ಮಗುವು ತನಗೆ ಯಾವುದಾದರೂ ಒಂದು ವಸ್ತು ಬೇಕೇ ಬೇಕು ಎಂದಾಗ ಅದಕ್ಕೆ ಹಠ ಹಿಡಿಯುತ್ತದೆ. ಅದು ಸಿಗದೇ ಇರುವಾಗ ಸಿಟ್ಟು ಕೂಡ ಬರುತ್ತದೆ. ಮಗುವಿನ ಅತಿಯಾದ ಬೇಕು ಎಂಬುದು ಸಿಗದಿದ್ದಾಗ ಸಿಟ್ಟಾಯಿತು. ಸಿಟ್ಟು ಮಾಡಿಕೊಂಡು ಆ ವಸ್ತು ಸಿಗದೇ ಇದ್ದಾಗ ಶೋಕ ಅಥವಾ ದುಃಖ ಉಂಟಾಯಿತು. ಅಂದರೆ ಇಲ್ಲಿ ಸಿಟ್ಟು ಯಾಕೆ ಬಂತು ಎಂದು ಕೇಳಿದರೆ ಅದಕ್ಕೆ ಮೂಲ ಅತಿಯಾದ ಆಸೆ. ಹಾಗಾಗಿ ಆ ಆಸೆಯನ್ನು ಈಡೇರಿಸಲು ಆಗದಿರುವಾಗ ಶೋಕವು ಸಹಜವಾಗಿ ಬರುತ್ತದೆ. ಅಂದರೆ ಬೇಕಾಗಿರುವಂತಹ ವಸ್ತು ಸಿಗದೇ ಇದ್ದಾಗ ಸಹಜವಾದ ಶೋಕ ಕೂಡ ಅಲ್ಲಿ ಬರುವಂತಹದ್ದು.  ಇಂತಹ ಸಂದರ್ಭದಲ್ಲಿ ಬರುವ ಸಿಟ್ಟು ನಮಗೆ ಅನುಕೂಲ ಅಲ್ಲ. ಆ ಸಿಟ್ಟು ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಅಂತಹ ಸಿಟ್ಟನ್ನು ಬಿಡಬೇಕು ಎಂಬುದು ಇದರ ತಾತ್ಪರ್ಯವಾಗಿದೆ.

ಸೂಚನೆ : 29/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮನೋನಿಗ್ರಹವನ್ನು ಸಾಧಿಸಿ ಜೀವನವು ಭಗವನ್ಮಯವಾಗಲು ಮಂಡೋದರಿಯ ಸ್ಮರಣೆ (Manonigrahavannu Sadhisi Jivanavu Bhagavanmayavagalu Mandodariya Smarane)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ಪಂಚಕನ್ಯೆಯರಲ್ಲಿ ಐದನೆಯವಳು ಮಂಡೋದರೀ. ಮಯಾಸುರ ಎಂಬ ದಾನವ ರಾಜನ ಮಗಳು, ರಾಕ್ಷಸ ರಾಜನಾಗಿ, ಲಂಕಾಧಿಪತಿಯಾಗಿದ್ದ ರಾವಣನ ಜ್ಯೇಷ್ಠ ಪತ್ನಿ. ಅಪ್ರತಿಮ ಪರಾಕ್ರಮಿಯಾದ, ದೇವಾಸುರರ ಯುದ್ಧದಲ್ಲಿ ಇಂದ್ರನನ್ನೇ ಜಯಿಸಿ ಇಂದ್ರಜಿತ್ ಎಂಬ ಹೆಸರು ಪಡೆದ ಮೇಘನಾದನ ತಾಯಿ. ಅವಳಿಗೆ ಅತಿಕಾಯ ಮತ್ತು ಅಕ್ಷಯ ಕುಮಾರ ಎಂಬ ಇನ್ನಿಬ್ಬರು ಪರಕ್ರಾಮಿಗಳಾದ ಮಕ್ಕಳೂ ಇದ್ದರು. ಮಂಡೋದರಿಯು ಶಿವನ ವರಪ್ರಸಾದದಿಂದ ಜನಿಸಿದವಳು ಎಂಬ ಉಲ್ಲೇಖವೂ ಇದೆ. ಮಂಡೋದರಿ ಅಸುರನ ಮಗಳಾಗಿದ್ದರೂ, ದುಷ್ಟ ರಾವಣನ ಕೈ ಹಿಡಿದರೂ ಅತ್ಯಂತ ನೀತಿವಂತೆಯಾಗಿ ಬಾಳಿದವಳು. ಅಧರ್ಮಿಗಳ ನಡುವೆ ಇದ್ದರೂ ತಾನು ಅಧರ್ಮವನ್ನು ಅಂಟಿಸಿಕೊಳ್ಳದೇ ಸದಾ ಧರ್ಮಿಷ್ಠಳಾಗಿ ಜೀವನ ನಡೆಸಿದವಳು. ಸುತ್ತಮುತ್ತಲೂ ಧರ್ಮಕ್ಕೆ ವಿರೋಧವಾದ ವಾತಾವರಣ ಇದ್ದರೂ, ತನ್ನ ತನಕ್ಕೆ ಎಂದಿಗೂ ಧಕ್ಕೆ ತಂದುಕೊಳ್ಳದೇ ಕೆಸರಿನಲ್ಲಿ ಕಮಲ ಅರಳುವಂತೆ ಅರಳಿದವಳು. ರಾಕ್ಷಸರ ಮಧ್ಯೆ ಇದ್ದರೂ ದೈವೀಭಾವವನ್ನು ತನ್ನಲ್ಲಿ ಬೆಳಸಿಕೊಂಡು, ಭಗವನ್ಮಯವಾದ ಬಾಳಾಟವನ್ನೇ ನಡೆಸಿ ಬದುಕನ್ನು ಬೆಳಗಿಸಿ ಕೊಂಡವಳು.

ಆಂಜನೇಯನು ಸೀತಾನ್ವೇಷಣೆಗಾಗಿ ಲಂಕೆಯನ್ನು ಪ್ರವೇಶಿಸಿ ಎಲ್ಲೆಡೆಯೂ ಸೀತಾಮಾತೆಯನ್ನು ಹುಡುಕುತ್ತಾ ರಾವಣನ ಅಂತಃಪುರವನ್ನು ಪ್ರವೇಶಿಸುತ್ತಾನೆ. ಅಲ್ಲಿ ದಿವ್ಯವಾದ ಮುಖಕಾಂತಿಯಿಂದ ಬೆಳಗುತ್ತಿರುವ ಮಂಡೋದರಿಯನ್ನು ನೋಡಿ ಸೀತಾಮಾತೆಯನ್ನು ಕಂಡೆ ಎಂಬುದಾಗಿ ಕ್ಷಣಕಾಲ ಭ್ರಮೆಗೆ ಒಳಗಾಗುತ್ತಾನೆ. ಆದರೆ ಸೀತೆಯು ಇಂತಹ ಜಾಗದಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ಮನಗಂಡು ಪುನಃ ಬೇರೆಡೆಗೆ ತೆರಳುತ್ತಾನೆ. ಮಂಡೋದರಿಯು ಸೀತಾಮಾತೆಯಂತೆಯೇ ಅನುಪಮವಾದ,ಅಲೌಕಿಕ ಸೌಂದರ್ಯವನ್ನು ಹೊಂದಿದ್ದವಳು, ಮಹಾ ಪತಿವ್ರತೆ. ಪತಿಯ ಬಗ್ಗೆ ಅತ್ಯಂತ ಅನುರಾಗವನ್ನು ಹೊಂದಿದವಳು. ಪತಿಯಾದ ರಾವಣನು ಕಾಮ ಮತ್ತು ಕ್ರೋಧಕ್ಕೆ ವಶನಾಗಿ, ಅಧರ್ಮದ ಹಾದಿಯನ್ನು ತುಳಿದಾಗ ಅವನಲ್ಲಿ ಧರ್ಮಪ್ರಜ್ಞೆ ಮೂಡಿಸಿ, ಸನ್ಮಾರ್ಗಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಾಳೆ. ಅನೇಕ ಬಾರಿ ಅವನ ದುಶ್ಚರಿತವನ್ನು ನಿವಾರಿಸಲು ಪ್ರಯತ್ನಿಸಿ ವಿಫಲಳಾಗುತ್ತಾಳೆ. ಇಂದ್ರಿಯಗಳಿಗೆ ದಾಸನಾಗಿ ದುಷ್ಕಾಮ ಪ್ರವೃತ್ತನಾದ ರಾವಣನಿಗೆ ಅವಳ ಧರ್ಮಯುಕ್ತವಾದ ಮಾತುಗಳು ರುಚಿಸುವುದಿಲ್ಲ. ಶ್ರೀರಾಮನ ಹಾಗೂ ಸೀತಾಮಾತೆಯ ಮಹಿಮೆಯನ್ನು ಅರಿತವಳಾಗಿದ್ದಳು. ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ಪತಿಯ ಕಾರ್ಯವನ್ನು ಸಂಪೂರ್ಣವಾಗಿ ಧಿಕ್ಕರಿಸುತ್ತಾಳೆ. ಸಮಸ್ತರಿಂದಲೂ ಪೂಜಾರ್ಹಳಾದ ಸೀತೆಯನ್ನು ಅಪಹರಣ ಮಾಡಿ ಸ್ವತಃ ಮೃತ್ಯುವನ್ನು ಬರಮಾಡಿಕೊಳ್ಳುತ್ತಿರುವೆ ಎಂದು ಎಚ್ಚರಿಕೆ ನೀಡುತ್ತಾಳೆ. ಮಹಾಲಕ್ಷ್ಮಿ ಸ್ವರೂಪಳಾದ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿ ಅವನಲ್ಲಿ ಶರಣಾಗತಿಯನ್ನು ಹೊಂದುವುದು ಸರ್ವರೀತಿಯಿಂದಲೂ ಶ್ರೇಯಸ್ಕರ ಎಂಬ ಮಾತನ್ನು ಬಾರಿ ಬಾರಿಗೂ ಹೇಳುತ್ತಾಳೆ. ಆದರೆ ಅಧರ್ಮಿಯಾದ ರಾವಣನು ಶ್ರೀರಾಮನೊಂದಿಗೆ ಯುದ್ಧ ಮಾಡಿ ಅವನ ಬಾಣದಿಂದ ಪ್ರಹರಿಸಲ್ಪಟ್ಟು ಹತನಾಗುತ್ತಾನೆ. ಆಗ ತನ್ನ ಮಾತನ್ನು ನಿರ್ಲಕ್ಷಿಸಿ ರಾಮನೊಂದಿಗೆ ಯುದ್ಧ ಮಾಡಿ ಪ್ರಾಣವನ್ನು ತೊರೆದ ಪತಿಯನ್ನು ಕುರಿತು ದುಃಖತಪ್ತಳಾಗಿ ಅವಳು ಆಡುವ ಮಾತುಗಳಿಂದ ಶ್ರೀರಾಮನ ಬಗ್ಗೆ ಅವಳಿಗಿದ್ದ ಅರಿವು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ಶ್ರೀರಾಮನನ್ನು ಕುರಿತು ಅವಳಾಡುವ ಕೆಲ ಮಾತುಗಳು ರಾಮಾಯಣದಲ್ಲಿ ಹೀಗೆ ಉಲ್ಲೇಖವಾಗಿದೆ- ಶ್ರೀರಾಮನು ಮಹಾಯೋಗಿಯು. ಸನಾತನನಾದ ಪರಮಾತ್ಮನು. ಅವನಿಗೆ ಆದಿ, ಮಧ್ಯ ಅಂತ್ಯಗಳಾವುವೂ ಇಲ್ಲ. ಅವನು ಮಹತೋ ಮಹೀಯನು. ಅಜ್ಞಾನದಿಂದ ಆಚೆ ಇರುವವನು. ಸಮಸ್ತರನ್ನೂ ಧರಿಸಿರುವ ಪರಮೇಶ್ವರನು.ಕೈಗಳಲ್ಲಿ ಶಂಖ ಚಕ್ರ ಗದೆಗಳನ್ನು ಹಿಡಿದಿರುವವನು. ನಿತ್ಯವೂ ಮಹಾಲಕ್ಷ್ಮಿಯೊಡನೆ ವಿಹರಿಸುವವನು. ಸಮಸ್ತಲೋಕಗಳಿಗೂ ಅಧೀಶ್ವರನಾಗಿರುವವನು. ಸತ್ಯ ಪರಾಕ್ರಮಿಯಾದ ಭಗವಾನ್ ಮಹಾವಿಷ್ಣುವೇ ಲೋಕಗಳ ಹಿತಾರ್ಥವಾಗಿ ಸಾಕ್ಷಾತ್ತಾಗಿ ಮನುಷ್ಯ ರೂಪವನ್ನು ಧರಿಸಿ ವಾನರರೂಪಿಗಳಾಗಿರುವ ದೇವತೆಗಳಿಂದ ಪರಿವೃತನಾಗಿ ನಿನ್ನನ್ನು ಸಂಹರಿಸಿದ್ದಾನೆ. ಎಂಬುದಾಗಿ ಮೃತನಾದ ಪತಿಯ ಮುಂದೆ ಶ್ರೀರಾಮನನ್ನು ಸ್ತುತಿಸುತ್ತಾಳೆ. ಪತಿಯ ವಿಯೋಗವಾದಾಗಲೂ ಭಗವಂತನ ಸ್ವರೂಪವನ್ನು ಅರಿತು, ಈ ರೀತಿಯಾಗಿ ಭಾವಿಸಿ ಸ್ತುತಿಸುವುದಕ್ಕೆ ಜ್ಞಾನಿಗಳಿಂದ ಅಥವಾ ಭಕ್ತ ಶ್ರೇಷ್ಠರಿಂದ ಮಾತ್ರ ಸಾಧ್ಯ. ಅಂತಹವರ ಸಾಲಿಗೆ ಮಂಡೋದರಿಯೂ ಸೇರುತ್ತಾಳೆ. ಹಾಗಾಗಿಯೇ ಮಂಡೋದರಿಯು ಪೂಜ್ಯಳು ಮತ್ತು ಪ್ರಾತಃ ಸ್ಮರಣೀಯಳು.

ಮಂಡೋದರಿಯ ಮನೋನಿಗ್ರಹ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ನಮ್ಮ ಸುತ್ತಲೂ ನಮ್ಮ ಮನಸ್ಸಿಗೆ ಅನುಕೂಲವಾದ ವಾತಾವರಣವಿದ್ದಾಗ ನಮ್ಮ ಅಂತರಂಗದ ಹಾಗೂ ಬಾಹ್ಯವಾದ ಸಾಧನೆಗೆ ನಮ್ಮನ್ನು ತೊಡಗಿಸಿಕೊಳ್ಳಲು ಸುಲಭವಾಗುತ್ತದೆ. ಅದೇ ಸಂಪೂರ್ಣವಾಗಿ ವಿರುದ್ಧವಾದ ವಾತಾವರಣವಿದ್ದರೆ ಆ ಸಾಧನೆಗಳಿಂದ ವಿಮುಖರಾಗುವ ಸಂಭವವೇ ಅಧಿಕವಾಗಿರುತ್ತದೆ.ಮಂಡೋದರಿಯು ತಮೋಗುಣ ಪೂರಿತರಾದ ರಾಕ್ಷಸರ ನಡುವೆ ಇದ್ದರೂ ಸಾತ್ವಿಕಳಾಗಿ ಬಾಳಿದವಳು. ಆ ಸಾತ್ವಿಕತೆಯನ್ನು ಉಳಿಸಿಕೊಳ್ಳಲು ನಿತ್ಯವೂ ಭಗವತ್ ಚಿಂತನೆ ಹಾಗೂ ಆರಾಧನೆಗಳ ಮೂಲಕ ಪರಿಶ್ರಮ ಪಡಲೇಬೇಕಾಗುತ್ತದೆ.ಅತ್ಯಂತ ದುಷ್ಟನಾಗಿ, ಸದಾ ಭಗವದ್ ವಿರೋಧಿ ಕಾರ್ಯಗಳನ್ನೇ ಮಾಡುವಂತಹ ಪತಿಯನ್ನು ಪಡೆದರೂ, ಆ ಪತಿಯಲ್ಲಿಯೇ ಎಲ್ಲೆಡೆಯಲ್ಲಿಯೂ ಬೆಳಗುವ ಪರಮಾತ್ಮನನ್ನು ಕಂಡು ಆರಾಧಿಸಿ ಮಹಾಪತಿವ್ರತೆ ಎನಿಸಿಕೊಳ್ಳುತ್ತಾಳೆ. ಉತ್ತಮ ಗುಣವಂತನಾದ ಪತಿಯ ಸೇವೆಯನ್ನು ಸಕಲ ರೀತಿಯಿಂದಲೂ ಮಾಡಿ ಪಾತಿವ್ರತ್ಯವನ್ನು ಸಂಪಾದಿಸಿಕೊಳ್ಳುವುದಕ್ಕಿಂತ, ದುಷ್ಟಗುಣಗಳಿಂದ ಕೂಡಿದ ಪತಿಯನ್ನು ಪಡೆದಾಗ ಪಾತಿವ್ರತ್ಯವನ್ನು ಸಂಪಾದಿಸಿಕೊಳ್ಳುವುದು ಅತ್ಯಂತ ಕಷ್ಟಸಾಧ್ಯ. ಆದರೆ ಮಂಡೋದರಿಯು ಅದನ್ನು ಸಾಧಿಸಿದ್ದಳು.

ಸ್ತ್ರೀಯರಿಗೆ ಪಾತಿವ್ರತ್ಯಕ್ಕಿಂತ ಮಿಗಿಲಾದ ತಪಸ್ಸು ಇನ್ನೊಂದಿಲ್ಲ ಎಂಬುದನ್ನು ಶಾಸ್ತ್ರಗಳು ಕೊಂಡಾಡುತ್ತವೆ. ಏಕೆಂದರೆ ಪಂಚಾಗ್ನಿ ಮುಂತಾದ ಮಹಾತಪಸ್ಸುಗಳಿಂದ ಸಾಧಿಸಬಹುದಾದ ಮನೋನಿಗ್ರಹವನ್ನು, ಪಾತಿವ್ರತ್ಯದಿಂದ ಸ್ತ್ರೀಯರು ಸಂಸಾರದಲ್ಲಿದ್ದುಕೊಂಡೇ ಸಾಧಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಅಂತಹ ತಪಸ್ಸನ್ನು ಅವಳು ಸಾಧಿಸಿದ್ದರಿಂದ ಶ್ರೀರಾಮನ ಗುಣಗಳನ್ನು, ಅವನ ಸ್ವರೂಪವನ್ನು ಅವಳಿಂದ ಅರಿಯಲು ಸಾಧ್ಯವಾಯಿತು. ಅಂತಹ ಮಂಡೋದರಿಯ ಸ್ಮರಣೆಯಿಂದ ನಮ್ಮ ಪಾಪಗಳೂ ದೂರವಾಗುತ್ತವೆ. ಅವಳಂತೆಯೇ ಮನೋನಿಗ್ರಹವನ್ನು ಸಾಧಿಸಿ ಜೀವನವನ್ನು ಭಗವನ್ಮಯವನ್ನಾಗಿ ಮಾಡಿಕೊಳ್ಳುವುದಕ್ಕೆ ಮಂಡೋದರಿಯ ಸ್ಮರಣೆ ಅತ್ಯಂತ ಸಹಕಾರಿ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 7/10/2023 ರಂದು ಪ್ರಕಟವಾಗಿದೆ.

Sunday, October 22, 2023

ಅಷ್ಟಾಕ್ಷರೀ​ - 46 (Astakshara Darshana 46)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)


ಕಟಿಬಂಧ-ಕಂಕಣಬಂಧಗಳ ಮರ್ಮ


"ಇಂದಿನ ಮಕ್ಕಳಿಗೆ ಹತ್ತು ನಿಮಿಷದ ಮೇಲೆ ಮನಸ್ಸು ಒಂದು ಕಡೆ ನಿಲ್ಲುವುದೇ ಇಲ್ಲ" - ಎಂದು ಹಿರಿಯರು ಬೇಜಾರುಮಾಡಿಕೊಳ್ಳುವುದನ್ನು ನೋಡುತ್ತಿರುತ್ತೇವೆ. ಚಿಕ್ಕವರದ್ದೇನು, ದೊಡ್ಡವರ ಮನಸ್ಸೂ ಅಷ್ಟೇ. ಎಷ್ಟೋ ಕೆಲಸಗಳನ್ನು ಉತ್ಸಾಹದಿಂದ ಆರಂಭಮಾಡುತ್ತೇವೆ; ಸ್ವಲ್ಪಕಾಲಕ್ಕೇ ಉತ್ಸಾಹ ಕ್ಷೀಣಿಸುತ್ತದೆ. "ಈ ಕಾರ್ಯವನ್ನು ಸಾಧಿಸಲಾರೆ" ಎಂಬ 'ಆತ್ಮವಿಶ್ವಾಸ'ವು ಹೊಮ್ಮುತ್ತದೆ! ಆರಂಭಮಾಡಿದ್ದನ್ನು ಕೈಬಿಡುವುದು, ಮತ್ತೊಂದನ್ನು ಕೈಗೆ ತೆಗೆದುಕೊಳ್ಳುವುದು, ಅದರಲ್ಲಿಯೂ ಸೋಲನುಭವಿಸುವುದು: ಬಹುಮಂದಿಯ ಕಥೆಯೇ ಇದು!

ಮನಸ್ಸನ್ನು ಚಂಚಲಗೊಳಿಸುವ ಸಾಧನಗಳೋ ಇಂದಂತೂ ಹತ್ತು ಹಲವು! ಮೊಬೈಲ್ ಒಂದೇ ಸಾಕು. ಇಂಟರ್ನೆಟ್ ಇದ್ದುಬಿಟ್ಟರೆ ತುಂಬಾ ಕೆಲಸಗಳು ಸಾಧಿತವಾಗಿಬಿಡುತ್ತವೆ - ಎಂಬುದೆಷ್ಟು ನಿಜವೋ, ಅದರಿಂದಾಗಿ ಹತ್ತಾರು ಕಾರ್ಯಗಳು ಹದಗೆಟ್ಟವು - ಎನ್ನುವುದೂ ಅಷ್ಟೇ ನಿಜ. ನಮ್ಮ ಮನಸ್ಸನ್ನು ಅಂತರ್ಜಾಲವು ಜಾಲಾಡಿ, ಹತ್ತು ನಿಮಿಷದಲ್ಲಿ ನೂರಾರು ವಿಷಯಗಳತ್ತ ಸೆಳೆದುಹಾಕಿಬಿಡಬಲ್ಲುದು!

ಒಂದು ಕೆಲಸವನ್ನು ಹಿಡಿದರೆ ಅದು ಮುಗಿಯುವ ತನಕ ನಮ್ಮ ಮನಸ್ಸು ಒಂದೇ ರೀತಿಯಲ್ಲಿ ಇರಲು ತಕ್ಕಮಟ್ಟಿಗಾದರೂ ಏನನ್ನಾದರೂ ಮಾಡಲಾದೀತೇ? - ಎಂಬುದೇ ಪ್ರಶ್ನೆ.

ಮನಸ್ಸಿನ ಧೃತಿಯ ಬಗ್ಗೆ ನಾನಾವಿಧವಾದ ಪ್ರಯೋಗಗಳನ್ನು ಸಾವಿರಾರುವರ್ಷಗಳಿಂದ ಮಾಡಿರುವವರು ನಮ್ಮ ಪೂರ್ವಿಕರು, ಭಾರತೀಯರು; ವಾಸ್ತವವಾಗಿ ನಮ್ಮ ಋಷಿಮುನಿಗಳು. ಹಾಗಿದ್ದರೆ, ಅವರು ಈ ಬಗ್ಗೆ ಏನಾದರೂ ಚಿಂತನವನ್ನು ಮಾಡಿರುವರೇ? ಕಾರ್ಯಪದ್ಧತಿಗಳನ್ನು ರೂಪಿಸಿರುವರೇ? - ಎಂದು ಕೇಳಿಕೊಳ್ಳಬೇಕಾದುದು ಸಹಜವಷ್ಟೆ?

ಪಾಶ್ಚಾತ್ತ್ಯಸಂಸ್ಕೃತಿಗೆ ನಾವಿಂದು ಮಾರುಹೋಗಿದ್ದೇವೆ; ನಮ್ಮ ಜೀವನಶೈಲಿಯೆಲ್ಲಾ ಅವರ ಪರಿಯ ಪಡಿಯಚ್ಚಾಗಿಹೋಗಿದೆ; ಅವರನ್ನು 'ಕಾಪಿ' ಮಾಡುವುದರಲ್ಲೇ ಸಾರ್ಥಕ್ಯವನ್ನು ಕಾಣುವಂತಾಗಿದೆ ನಮ್ಮ ಪಾಪಿಜೀವನ!  ನಮ್ಮ ಭಾಷೆ ಕೂಡ ಕುಲಗೆಡುತ್ತಿದೆ - ಎನ್ನುವಷ್ಟು ಪರಿಸ್ಥಿತಿ ಹದಗೆಟ್ಟಿದೆಯಲ್ಲವೇ?

ಸಂಸ್ಕೃತಿಯೊಂದು ಹಾದುಬಂದ ಮಾರ್ಗದ ಅಚ್ಚುಗಳನ್ನು ಬಹುಮಟ್ಟಿಗೆ ಪಟ್ಟಾಗಿ ಕಾಪಿಟ್ಟುಕೊಂಡಿರುವುದೆಂದರೆ ಅದರ ಮಂದಿಯ ಭಾಷೆಯೇ ಸರಿ. ನಮ್ಮ ಭಾಷೆಯನ್ನೇ ಕೇಳಿಕೊಂಡರೆ ನಮ್ಮ ಋಷಿಗಳು ಕಂಡುಕೊಂಡ  ಸತ್ಯಗಳ ಬಗ್ಗೆ ಕೆಲವು ಸುಳಿವುಗಳು ಸಿಕ್ಕಾವು.

ಯಾವುದೇ ಕೆಲಸವನ್ನು ಒಬ್ಬರು ಪಟ್ಟುಹಿಡಿದು ಏಕನಿಷ್ಠೆಯಿಂದ ಮಾಡುತ್ತಿದ್ದರೆ, ಅವರ ಬಗ್ಗೆ ನಾವು "ಅವರು ಆ ಕೆಲಸಕ್ಕೇ ಟೊಂಕಕಟ್ಟಿ ನಿಂತಿರುವವರು" ಎನ್ನುವೆವು. "ಸೊಂಟಕಟ್ಟಿ ನಿಂತಿದ್ದಾರೆ" ಎಂಬ ಮಾತಿನಂತೆಯೇ, "ಪಣತೊಟ್ಟು, ಬದ್ಧಕಂಕಣರಾಗಿ" ಮಾಡುತ್ತಿದ್ದಾರೆ - ಎನ್ನುವ ಮಾತನ್ನೂ ಬಳಸುವುದುಂಟು. ಏನು ಇವೆಲ್ಲ ಪಟ್ಟು-ಕಟ್ಟು-ತೊಟ್ಟುಗಳ ಗುಟ್ಟು?

ಇವುಗಳ ಮರ್ಮವನ್ನು ಬಿಡಿಸಿಕೊಟ್ಟವರು ಯೋಗಜ್ಞರಾದ ಶ್ರೀರಂಗಮಹಾಗುರುಗಳು. ಮನೆಯಲ್ಲಿ ಏನೇ ಹೋಮ-ಹವನಗಳಿರಲಿ, ಯಾವುದೇ ವ್ರತವು ಜರುಗಲಿ, ಮೊಟ್ಟಮೊದಲ ಹೆಜ್ಜೆಯೆಂದರೆ ಇವೇ ಅಲ್ಲವೇ?: ಸೊಂಟಕ್ಕೆ ಪಟ್ಟಿಕಟ್ಟು, ಕೈಗೆ ಕಂಕಣಕಟ್ಟು.  ದಸರೆಯ ಆರಂಭವಾದರೂ ಪಾಡ್ಯದಂದು ಮಹಾರಾಜರ ಕಂಕಣಬಂಧದಿಂದಲೇ ಅಲ್ಲವೇ? ವ್ರತ-ಪರ್ಯವಸಾನದ  ಪರ್ಯಂತವೂ ಕಂಕಣವನ್ನು ಕಳಚದ ಕಟ್ಟುನಿಟ್ಟು!

ಹಿಡಿದ ಕೆಲಸವನ್ನು ಧೃತಿಗೆಡದೆ ಸಾಧಿಸಲು ಈ ಕ್ರಮಗಳು ತುಂಬ ಉಪಯೋಗಿ: ನಿರ್ದಿಷ್ಟಸ್ಥಾನಗಳಲ್ಲಿ ದೇಹಬಂಧವನ್ನು ಮಾಡಿಕೊಂಡಲ್ಲಿ, ಆವಶ್ಯಕವಾದ ಮನೋಬಂಧವನ್ನು ಮಾಡಿಕೊಳ್ಳಲು ಅನುಕೂಲವೇರ್ಪಡುವುದು – ಎಂಬ ಯೋಗವಿದ್ಯೆಯ ಈ ಮುಖ್ಯಮರ್ಮವನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು. ವಿವಾಹಾದಿ-ಶುಭಕರ್ಮಗಳಾಗಲಿ, ಶ್ರಾದ್ಧಾದಿ-ಪುಣ್ಯಕರ್ಮಗಳಾಗಲಿ, ದರ್ಭನಿರ್ಮಿತವಾದ 'ಪವಿತ್ರ'ವನ್ನು ಬೆರಳಿಗೆ ತೊಟ್ಟೇ ಕಾರ್ಯಾರಂಭವಲ್ಲವೇ? ಅಲ್ಲಿಯೂ ಇದೇ ತತ್ತ್ವವೇ.

ಸೊಂಟಕಟ್ಟಿ ನಿಂತಲ್ಲಿ, ಸುಲಭಕ್ಕೆ ಮನಸ್ಸು ಕೆಳಕ್ಕೆ ಜಾರದು. ನಮ್ಮ ದೇಶದ ವೇಷಭೂಷಣಗಳ ಇತಿಹಾಸವನ್ನು ಎಚ್ಚರವಾಗಿ ನೋಡಿದರಂತೂ, ಸಿಂಧು-ಸರಸ್ವತೀ-ಸಂಸ್ಕೃತಿಯ ಕಾಲದಿಂದ ಇಂದಿನವರೆವಿಗೂ (ಸ್ತ್ರೀ-ಪುರುಷರ ಕಚ್ಚೆಪಂಚೆ-ವೀರಗಚ್ಚೆಗಳಲ್ಲೂ ಸ್ಫುಟವಾಗಿ ಗೋಚರವಾಗುವಂತೆ) ಸೊಂಟಕ್ಕೆ ಕಟ್ಟುಕಟ್ಟುವ ಪದ್ಧತಿ ಅನುಸ್ಯೂತವಾಗಿ ನಡೆದುಬಂದದ್ದೇ. (ಪಾಶ್ಚಾತ್ತ್ಯರಲ್ಲೋ, ಎಂದಿನಿಂದಲೂ ಇಳಿಬಿಡುವ ಅಂಗಿಗಳೇ ಸಾಧಾರಣ; ಅಲ್ಲದೆ, ಬೆಲ್ಟೊಂದನ್ನು ಸುತ್ತಿಕೊಳ್ಳುವುದಷ್ಟರಿಂದ, ಕಟಿಬಂಧದಿಂದಾಗುವ ಪರಿಣಾಮವು ಖಂಡಿತವಾಗಿಯೂ ಆಗದು!)

ಹೀಗಾಗಿ, "ಈ ಪವಿತ್ರಕಾರ್ಯಕ್ಕಾಗಿ ಸೊಂಟಕಟ್ಟಿ ನಿಂತಿದ್ದೇನೆ" ಎನ್ನುವುದು ಯಾವುದೇ ನಿಷ್ಠಾವಂತ ಸಾಧಕನ ಒಂದು ಸಲ್ಲಕ್ಷಣ. ಅದರ ಸಂಸ್ಕೃತರೂಪವಾದ "ಕಾರ್ಯಾಯ ಬದ್ಧಾ ಕಟೀಯಂ" ಎಂಬೀ ಉಕ್ತಿಯು, ದೇಶಭಕ್ತಿಯನ್ನು ಬೆಳಸಲೆಳಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯಪ್ರಾರ್ಥನೆಯ ಒಂದು ನಲ್ನುಡಿ: "ಭಗವಂತನೇ, ನಿನ್ನದೇ ಕಾರ್ಯಕ್ಕಾಗಿ ಇದೋ ಸೊಂಟಕಟ್ಟಿದ್ದೇವೆ"!

ಸತ್ಕಾರ್ಯಕ್ಕಾಗಿಯೇ ಕಟಿಬದ್ಧರಾದವರಿಗೆ, ಅದನ್ನು ಪೂರೈಸಲೋಸುಗ ಅಜಯ್ಯವಾದ ಶಕ್ತಿಯನ್ನೇ ದಯಪಾಲಿಸುವ ಭಗವಂತನ ಶುಭಾಶೀರ್ವಾದವು ಇದ್ದೇ ಇರುವುದಲ್ಲವೇ?

ಸೂಚನೆ : 22/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 58 ತಾವಾರೆಂದು ಯುಧಿಷ್ಠಿರನು ದ್ರುಪದನಿಗೆ ತಿಳಿಸಿಕೊಟ್ಟದ್ದು (Vyaasa Vikshita - 58 Tavarendu Yudhishthiranu Drupadanige Tilisikottaddu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)


ಭೋಜನಾನಂತರ ದ್ರುಪದನು ಪಾಂಡವರ ಬಳಿ ಬಂದು ಅವರನ್ನು ಪ್ರಶ್ನಿಸುತ್ತಾನೆ:

ತಮ್ಮನ್ನು ಏನೆಂಬುದಾಗಿ ನಾವು ತಿಳಿಯಬಹುದು, ಸ್ವಾಮಿ?: ಕ್ಷತ್ತ್ರಿಯರೆಂದೋ ಬ್ರಾಹ್ಮಣರೆಂದೋ? ಗುಣಸಂಪನ್ನರಾದ ವೈಶ್ಯರೆಂದೋ, ಶೂದ್ರಜಾತಿಯಲ್ಲಿ ಜನಿಸಿದವರೆಂದೋ? ಅಥವಾ, ಮಾಯಾವಲಂಬಿಗಳಾಗಿ (ಎಂದರೆ ನಿಜಸ್ವರೂಪವನ್ನು ತೋರ್ಪಡಿಸಿಕೊಳ್ಳದೆ) ಎಲ್ಲೆಡೆ ಸಂಚರಿಸುವ ವಿಪ್ರರೆಂದೋ? ಅಥವಾ ದ್ರೌಪದಿಯನ್ನು ಪಡೆಯಲೋಸುಗ ಕೇವಲದರ್ಶಕರ ರೂಪದಲ್ಲಿ ಬಂದಿರುವ ದೇವತೆಗಳೆಂದೋ?  ತಾವು ಸತ್ಯವನ್ನು ಹೇಳಬೇಕು. ನಮಗಿಲ್ಲಿ ಮಹಾಸಂದೇಹವೇ ಉಂಟಾಗಿದೆ.  ನಮ್ಮ ಸಂಶಯಗಳು ಕೊನೆಗೊಂಡು ನಮ್ಮ ಮನಸ್ಸಿಗೆ ಸಂತುಷ್ಟಿಯು ಉಂಟಾಗುವುದಷ್ಟೆ? ನಮ್ಮ ಭಾಗ್ಯವು ಶುಭವಾಗುವುದಷ್ಟೆ?

ತಮ್ಮ ಇಚ್ಛೆಗೆ ಅನುಸಾರವಾಗಿ ಸತ್ಯವನ್ನೇ ಹೇಳಿರಿ. ಸತ್ಯವು ರಾಜರಿಗೊಂದು ಶೋಭೆ. 'ಇಷ್ಟ'ಕ್ಕಿಂತಲೂ 'ಪೂರ್ತ'ಕ್ಕಿಂತಲೂ ಸತ್ಯವೇ ಹಿರಿದಾದುದಲ್ಲವೆ? ('ಇಷ್ಟ'ವೆಂದರೆ ಅಗ್ನಿಹೋತ್ರ, ವೇದರಕ್ಷಣ, ವೈಶ್ವದೇವ ಮುಂತಾದುದು; 'ಪೂರ್ತ'ವೆಂದರೆ ಬಾವಿ ತೋಡಿಸುವುದು, ಅನ್ನದಾನ ಮುಂತಾದುದು. ಇಷ್ಟಗಳೂ ಪೂರ್ತಗಳೂ ಪುಣ್ಯಕಾರ್ಯಗಳೇ. ಇವನ್ನು ಮಾಡುವುದು ಶ್ರೇಷ್ಠ; ಆದರೆ ಸತ್ಯವನ್ನು ಹೇಳುವುದು ಮತ್ತೂ ಶ್ರೇಷ್ಠ- ಎಂಬ ಭಾವ). ಎಂದೇ ಅಸತ್ಯವನ್ನು ನುಡಿಯಬಾರದಲ್ಲವೇ?

ದೇವತೆಯ ಹಾಗೆ ಬೆಳಗುತ್ತಿರುವವನೇ, ಶತ್ರುಗಳನ್ನು ಮೆಟ್ಟುವವನೇ, ನಿನ್ನ ಉತ್ತರವನ್ನು ಪಡೆದೊಡನೆಯೇ ವಿಧಿಪೂರ್ವಕವಾದ ವಿವಾಹಕ್ಕಾಗಿ ನಾನು ಸನ್ನಾಹಮಾಡಬಹುದು - ಎಂದನು.

ಆಗ ಯುಧಿಷ್ಠಿರನು ಹೇಳಿದನು:

"ರಾಜನೇ, ನೀನು ಚಿಂತಿತನಾಗಬೇಕಿಲ್ಲ. ನೀನು ಇದನ್ನು ಕೇಳಿ ಸಂತೋಷಿಸುವೆ. ನೀನು ಬಯಸಿದುದೇನೋ ಅದೇ ಇಂದು ಘಟಿಸಿದೆ, ನಿಸ್ಸಂಶಯವಾಗಿಯೂ. ನಾವು ಕ್ಷತ್ರಿಯರು - ಮಹಾತ್ಮನಾದ ಪಾಂಡುವಿನ ಮಕ್ಕಳು. ನಾನು ಜ್ಯೇಷ್ಠ. ಇವರಿಬ್ಬರು ಭೀಮಸೇನ, ಅರ್ಜುನರು. ಇವರಿಬ್ಬರೇ ನಿನ್ನ ಮಗಳನ್ನು ರಾಜಸಭೆಯಲ್ಲಿ ಗೆದ್ದವರು. ಅದೋ ಅವರಿಬ್ಬರು ಯಮಳರು (ಅವಳಿಗಳು: ನಕುಲ- ಸಹದೇವರು). ಮತ್ತು ತಾಯಿ ಕುಂತಿಯು ಕೃಷ್ಣೆಯಿರುವೆಡೆಯಲ್ಲಿಯೇ ಇರುವಳು (ಎಂದರೆ ತಮ್ಮ ಅಂತಃಪುರದಲ್ಲಿ).

ನಿನ್ನ ಮನಸ್ಸಿನ ದುಃಖ ಕಳೆಯಲಿ, ನಾವು ಕ್ಷತ್ರಿಯರೇ. ಒಂದು ಹ್ರದದಿಂದ (ಎಂದರೆ ಸರೋವರದಿಂದ) ಮತ್ತೊಂದು ಹ್ರದಕ್ಕೆ ಬಂದಿರುವ ಪದ್ಮಿನಿಯ ಹಾಗೆ ಅವಳಿದ್ದಾಳೆ (ಪದ್ಮಿನಿಯೆಂದರೆ ಕಮಲದ ಬಳ್ಳಿ. ತಾತ್ಪರ್ಯವಿದು: ಕೃಷ್ಣೆಯು ಇನ್ನು ಮುಂದೆ ನಮ್ಮೊಂದಿಗಿದ್ದೂ ಮೊದಲಿನಂತೆಯೇ ಸುಖವಾಗಿರುವವಳು).

ನಾನು ಹೇಳಿರುವುದೆಲ್ಲವೂ ಸತ್ಯವೇ, ಮಹಾರಾಜನೇ. ತಾವು ನಮಗೆ ಹಿರಿಯರು, ನಮಗೆ ಶ್ರೇಷ್ಠವಾದ ಆಶ್ರಯ."

ಯುಧಿಷ್ಠಿರನ ಮಾತುಗಳನ್ನು ಕೇಳಿದ ದ್ರುಪದರಾಜನ ಕಣ್ಣಲ್ಲಿ ಆನಂದಾಶ್ರುವೇ ತುಂಬಿಕೊಂಡಿತು. ಸಂತೋಷ(ಗದ್ಗದಿತನಾ)ದ ಕಾರಣ ಯುಧಿಷ್ಠಿರನಿಗೆ ಏನೂ ಹೇಳಲಾರದಾದನು,ದ್ರುಪದ. ತನ್ನ ಹರ್ಷವನ್ನು ಯತ್ನದಿಂದ ತಡೆದುಕೊಂಡು, ಯುಧಿಷ್ಠಿರನನ್ನು ಕುರಿತು ಅನುರೂಪವಾದ ಮಾತುಗಳನ್ನು ಆಡಿದನು. (ವಾರಣಾವತ)ನಗರದಿಂದ ಅವರುಗಳು ತಪ್ಪಿಸಿಕೊಂಡುಹೋದ ಬಗೆಯನ್ನು ಕೇಳಿದನು. ಆ ಪಾಂಡವನೂ ಅನುಕ್ರಮವಾಗಿ ಅದೆಲ್ಲವನ್ನೂ ಹೇಳಿದನು. ಕುಂತೀಪುತ್ರನ ಆ ಭಾಷಿತವನ್ನು ಕೇಳಿ (ಭಾಷಿತವೆಂದರೆ ನುಡಿ), ಧೃತರಾಷ್ಟ್ರನನ್ನು ನಿಂದಿಸಿದನು, ಆ ದ್ರುಪದ. ಯುಧಿಷ್ಠಿರನಿಗೆ ಆಶ್ವಾಸನೆಯನ್ನಿತ್ತನಲ್ಲದೆ, ಪ್ರತಿಜ್ಞೆಯನ್ನೂ ಮಾಡಿದನು - ರಾಜ್ಯವು ದೊರೆಯುವಂತಾಗಿಸುವುದಾಗಿ.

ಆ ಬಳಿಕ ಕುಂತಿ-ಕೃಷ್ಣೆಯರೂ, ಭೀಮಾರ್ಜುನರೂ, ನಕುಲ-ಸಹದೇವರೂ ರಾಜನು ಸೂಚಿಸಿದ ಮಹತ್ತಾದ ಭವನವನ್ನು ಪ್ರವೇಶಿಸಿದರು. ದ್ರುಪದನಿಂದ ಆದೃತರಾದ (= ಟ್ಟ) ಅವರು ಅಲ್ಲೇ ವಾಸಿಸಿದರು.

ಸೂಚನೆ : 22/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 60 (Yaksha prashne 60)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 59 ಯಾವುದನ್ನು ಬಿಟ್ಟರೆ ಮನುಷ್ಯನು ಎಲ್ಲರಿಗೂ ಬೇಕಾದವನು ಆಗುತ್ತಾನೆ ?

ಉತ್ತರ - ಮಾನವನ್ನು ಬಿಟ್ಟರೆ.  

ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಂದಷ್ಟು ಮಿತ್ರರನ್ನು, ಇನ್ನು ಕೆಲವು ಶತ್ರುಗಳನ್ನು ಪಡೆದೇ ಇರುತ್ತಾನೆ. ಎಲ್ಲರಿಗೂ ಮಿತ್ರನಾಗುವುದು ಅಥವಾ ಎಲ್ಲರಿಗೂ ಶತ್ರುವಾಗುವುದು ಎಂಬುದು ಕಷ್ಟಸಾಧ್ಯವೇನೋ? ಯಾವುದೋ ಒಂದು ವಿಷಯವನ್ನು ಬಿಟ್ಟರೆ ಆತ ಎಲ್ಲರೂ ಇಷ್ಟಪಡುವ ವ್ಯಕ್ತಿಯಾಗುತ್ತಾನೆ ಎಂಬ ಯಕ್ಷನ ಪ್ರಶ್ನೆಗೆ ಇಲ್ಲಿ ಮಾನವೆಂಬ ಉತ್ತರವನ್ನು ಧರ್ಮರಾಜನು ನೀಡುತ್ತಾನೆ.. 

'ಮಾನ' ಎಂಬ ಪದಕ್ಕೆ ಅಳತೆ, ಅಹಂಕಾರ, ಮರ್ಯಾದೆ ಇತ್ಯಾದಿಯಾದ ಅರ್ಥಗಳನ್ನು ವಿಭಿನ್ನವಾದ ಸಂದರ್ಭಗಳನ್ನು ಮಾಡಬಹುದು. ಹಾಗಾದರೆ ಇಲ್ಲಿ ಯಾವ ಅರ್ಥದಲ್ಲಿ ಬಳಕೆಯಾಗಿದೆ? 'ಮಾನವೇ ಸತ್ಪುಷರ ಧನ' 'ಉತ್ತಮಾ ಮಾನಮ್ ಇಚ್ಚಂತಿ' 'ಮಾನಶ್ಚಿತ್ತಸಮುನ್ನತಿಃ' ಇತ್ಯಾದಿ ಸ್ಥಳಗಳಲ್ಲಿ ಮಾನವೆಂಬುದು ಉತ್ತಮಗುಣ. ನನಗೆ ಸರಿಯಾದವರೂ ಯಾರೂ ಇಲ್ಲ ಎಂಬ ಬುದ್ಧಿಯನ್ನೂ ಮಾನ ಎಂದು ಕರೆಯುತ್ತಾರೆ. ದ್ವೇಷಂ ದಂಭಂ ಚ ಮಾನಂ ಚ ಕ್ರೋಧಂ ತೈಕ್ಷ್ಣ್ಯಂ ಚ ವರ್ಜಯೇತ್' ಮುಂತಾದ ಸ್ಥಳಗಳಲ್ಲಿ ಹೇಳಿರುವ ಮಾನವೆಂಬ ಪದಕ್ಕೆ ಮಾನವನು ಬಿಡಲೇಬೇಕಾದ ದೋಷ ಎಂಬುದಾಗಿ ಗುರುತಿಸಿದ್ದಾರೆ. ಇಲ್ಲಿ ಯಕ್ಷನು ಯಾವ ಮಾನವನ್ನು ಬಿಡಬೇಕು ಎಂದಿದ್ದಾನೆ? ಎಂದರೆ ಗುಣವಾದದ್ದನ್ನು ಬಿಡುವುದಾಗಲಿ ದೋಷವನ್ನು ಇಟ್ಟುಕೊಳ್ಳುವುದು ಸರಿಯೇ? ಹಾಗಾಗಿ ತ್ಯಾಜ್ಯ ಎಂಬ ಅರ್ಥವನ್ನು ಕೊಡುವ ಮಾನ - ಅಹಂಕಾರ, ನನ್ನಂತವರು ಯಾರೂ ಇಲ್ಲ, ನಾನೇ ಎಲ್ಲರಿಗಿಂತಲೂ ಸರ್ವಶ್ರೇಷ್ಠ ಎಂದು ಭಾವಿಸುವ  ಅರ್ಥವನ್ನು ತೆಗೆದುಕೊಳ್ಳಬೇಕು. ಈ ವಿಶ್ವದಲ್ಲಿ ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ. ಸಮಯ ಸಂದರ್ಭಗಳಲ್ಲಿ ಎಲ್ಲದಕ್ಕೂ ಮಹತ್ತ್ವವನ್ನು ಕಾಣಬಹುದು. ಆದರೆ ಎಲ್ಲದಕ್ಕೂ ನಾನೇ ಕಾರಣ, ನಾನು ಇಲ್ಲದಿದ್ದರೆ ಯಾವುದೂ ನಡೆಯುವುದೇ ಇಲ್ಲ ಎಂಬ ಭಾವನೆ ಎಷ್ಟಕ್ಕೂ ಉತ್ತಮವಲ್ಲ. ಈ ಭಾವನೆ ಬಂದರೆ ಅವನಿಗೆ ಸಿಗುವ ಗೌರವಾದರಗಳು ಕಡಿಮೆಯಾಗುತ್ತ ಬರುತ್ತವೆ. ಅನೇಕ ಗುಣಗಳಿದ್ದರೂ, ಯಾವುದಾದರೂ ದುರಭಿಮಾನದಂತಹ ಒಂದು ಅವಗುಣವಿದ್ದರೆ ಸಾಕು ಆತ ಸಂಪೂರ್ಣ ವಿನಾಶವಾಗುತ್ತನೆ. ಇದಕ್ಕೆ ಪುರಾಣಗಳಲ್ಲಿ ಅನೇಕ ಕಥೆಗಳನ್ನು ನಾವು ಕಾಣಬಹುದು. ಚಂದ್ರನಿಗೆ ತನ್ನಷ್ಟು ಸುಂದರ ಯಾರೂ ಇಲ್ಲ ಎಂಬ ಅಹಂಕಾರ ಬರುತ್ತದೆ. ಗಣಪತಿಯ ವಿಚಿತ್ರವಾದ ಆಕಾರವನ್ನು ಕಂಡು ನಗುತ್ತಾನೆ. ಅನಂತರ ಗಣಪತಿಯಿಂದ ಶಾಪಗ್ರಸ್ತನಾಗುತ್ತಾನೆ. ಅಂತೆಯೇ ಅನೇಕ ಗುಣಗಳಿಂದ ಕೂಡಿದ್ದರೂ ದಾನವನ್ನು ಮಾಡುವುದರಲ್ಲಿ ನನಗೆ ಮೀರಿಸುವವರು  ಯಾರೂ ಇಲ್ಲ ಎಂಬ ಮಾನದಿಂದ ಬಲಿಚಕ್ರವರ್ತಿ ಬೀಗುತ್ತಾನೆ. ಆಗ ವಾಮನಾವತಾರಿಯಾಗಿ ಬಂದು ದಾನ ಮಾಡಲು ಸಾಧ್ಯವಿಲ್ಲದಷ್ಟು ಅವಕಾಶ ಕೆಲವೊಮ್ಮೆ ಬರಬಹುದು ಎಂಬುದನ್ನೂ ತೋರಿಸಿ ಆತನ ಅಹಂಕಾರವನ್ನು ಮುರಿದನು. ಮಾನವೆಂಬುದು ಮನುಷ್ಯನನ್ನು ದುರ್ಬಲಗೊಳಿಸುತ್ತದೆ. ಇಲ್ಲದಿರುವ ಅನೇಕ ಭಾವಗಳನ್ನು ತನ್ನಲ್ಲಿ ಆರೋಪಿಸಿಕೊಳ್ಳುತ್ತಾ ಆರೋಪಿಸಿಕೊಳ್ಳುತ್ತಾ ಸರ್ವರಿಂದಲೂ ಅನಾದರಕ್ಕೊಳಗಾಗುವ ಸಂದರ್ಭಗಳು ಬರುತ್ತವೆ. ಆದರೆ ಇಂತಹ ಮಾನವೆಂಬುದು ಇಲ್ಲವಾದರೆ ಆತ ತನ್ನ ಸಹಜತೆಯನ್ನು ಕಾಣುತ್ತಾ ಹೋಗುತ್ತಾನೆ. ಮನುಷ್ಯ ತನ್ನ ಸಹಜತೆಯನ್ನು ತಾನೇ ಉಳಿಸಿಕೊಳ್ಳಬೇಕಾದುದು!

ಸೂಚನೆ : 22/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪರಮಾತ್ಮನ ಸ್ವರೂಪವನ್ನು ಅರಿತ ಶುದ್ಧಪ್ರಕೃತೆ ತಾರಾ (Paramatmana Svarupavannu Arita Suddhaprakr̥te Tara)

 

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ತಾರಾ ವಾನರರ ರಾಜ ವಾಲಿಯ ಹೆಂಡತಿಸುಷೇಣನೆಂಬ ವಾನರಶ್ರೇಷ್ಠನ ಮಗಳು,ವಾನರರಲ್ಲಿ ಪರಕ್ರಮಿಯಾದ ಅಂಗದನ ತಾಯಿಶ್ರೀಮದ್ ರಾಮಾಯಣದಲ್ಲಿ ವಾಲಿಯ ಕಥೆ ಅತ್ಯಂತ ಪ್ರಸಿದ್ಧವಾಗಿದೆಇಂದ್ರನ ಪುತ್ರನಾದ ವಾಲಿಯು ಮಹಾ ಬಲಿಷ್ಠಅವನು ತನ್ನ ತಮ್ಮನಾದ ಸುಗ್ರೀವನ ಮೇಲಿನ ತಪ್ಪು ಗ್ರಹಿಕೆಯಿಂದ ಅವನನ್ನು ಸದಾಕಾಲ ದ್ವೇಷಿಸುತ್ತಾಸಂಹರಿಸಲು ಯತ್ನಿಸುತಿದ್ದಸುಗ್ರೀವನ ಎಲ್ಲಾ ಸಂಪತ್ತನ್ನೂ , ಕಡೆಗೆ ಅವನ ಪತ್ನಿಯಾದ ರುಮೆಯನ್ನೂ ಕೂಡ ಬಲವಂತವಾಗಿ ಅಪಹರಿಸಿದ್ದಸುಗ್ರೀವನು ವಾಲಿಯ ಕ್ರೋಧಕ್ಕೆ ಹೆದರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಋಷ್ಯಮೂಕ ಎಂಬ ಪರ್ವತದಲ್ಲಿ ವಾಸವಾಗಿದ್ದ  ಪ್ರದೇಶಕ್ಕೆ ಋಷಿ ಶಾಪದ ಕಾರಣದಿಂದ ವಾಲಿಯ ಆಗಮನಕ್ಕೆ ನಿಷೇಧವಿತ್ತುವಾಲಿಯ ಪತ್ನಿ ತಾರಾ ನೀತಿವಂತೆಧರ್ಮಜ್ಞೆಅವಳು ಅನೇಕ ಬಾರಿ ಹಿತವಚನಗಳ ಮೂಲಕ ಪತಿಯ ತಪ್ಪು ನಡುವಳಿಕೆಗಳನ್ನು ತಿದ್ದಲು ಪ್ರಯತ್ನಿಸುತ್ತಲೇ ಇದ್ದಳುಆದರೂ ವಾಲಿಯು ಕ್ರೋಧದಿಂದ ಅಂಧನಾಗಿ ತನ್ನ ಹಠವನ್ನು ಮುಂದುವರಿಸಿ ಸುಗ್ರೀವನಿಗೆ ತೊಂದರೆ ಕೊಡುತ್ತಲೇ ಇದ್ದಅಂತಹ ಸಂದರ್ಭದಲ್ಲಿ ಋಷ್ಯಮೂಕ ಪರ್ವತಕ್ಕೆ ಶ್ರೀರಾಮ ಹಾಗೂ ಲಕ್ಷ್ಮಣರ ಆಗಮನವಾಗುತ್ತದೆಶ್ರೀರಾಮ ಹಾಗೂ ಸುಗ್ರೀವರ ಭೇಟಿಯಾಗುತ್ತದೆಸುಗ್ರೀವನು ವಾಲಿಯ ದುಷ್ಟತನವನ್ನು ವಿವರಿಸಿ ವಾಲಿಯ ಸಂಹಾರಕ್ಕೆ ಸಹಾಯ ಮಾಡುವಂತೆ ಶ್ರೀರಾಮನಲ್ಲಿ ವಿನಂತಿಸಿಕೊಳ್ಳುತ್ತಾನೆಅಂತೆಯೇ ಶ್ರೀರಾಮನೂ ಕೂಡ ಅಧರ್ಮಿಯಾದ ವಾಲಿಯನ್ನು ಸಂಹರಿಸಲು ಸಂಕಲ್ಪಿಸುತ್ತಾನೆ.


 ವಾಲಿ ಮತ್ತು ಸುಗ್ರೀವರ ಯುದ್ಧದಲ್ಲಿ ಶ್ರೀರಾಮನ ಬಾಣದ ಪ್ರಹಾರಕ್ಕೆ ತುತ್ತಾಗಿ ಮರಣಶಯ್ಯೆಯಲ್ಲಿರುವ ವಾಲಿಯನ್ನು ಕಂಡು ತಾರೆಯು ಅತ್ಯಂತ ದುಃಖಪಡುತ್ತಾಳೆಶ್ರೀರಾಮನನ್ನು ಕುರಿತು ಅನೇಕ ವಿಧವಾಗಿ ದುಃಖಭರಿತವಾದ ಮಾತುಗಳನ್ನು ಆಡುತ್ತಾಳೆಅವಳ ಮಾತುಗಳಲ್ಲಿ ಪತಿಯ ಬಗ್ಗೆ ಅವಳಿಗಿರುವ ಅನುರಾಗಶ್ರೀರಾಮನ ಮೇಲಿನ ಭಕ್ತಿ ಎಲ್ಲವೂ ವ್ಯಕ್ತವಾಗುತ್ತದೆಶಾಸ್ತ್ರವಾಕ್ಯಗಳನ್ನು ಒಳಗೊಂಡಂತಹ ಅವಳ ಮಾತು ಅವಳಲ್ಲಿದ್ದ ಶಾಸ್ತ್ರ ಜ್ಞಾನವನ್ನುಬುದ್ಧಿ ಪರಿಪಕ್ವತೆಯನ್ನು ತಿಳಿಸುತ್ತದೆಶ್ರೀರಾಮನ ಸಂಪೂರ್ಣ ಜೀವನ ಚರಿತ್ರೆಯ  ಹಾಗೂ ಅವನ ಮೂಲ ಸ್ವರೂಪದ ಅರಿವು ಅವಳಿಗೆ ಇತ್ತು ಎಂಬುದು ಅವಳ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.


 ಪತಿಯಾದ ವಾಲಿಯು ಮಧ್ಯರಾತ್ರಿಯಲ್ಲಿ ಸುಗ್ರೀವನ ಯುದ್ಧದ ಕರೆಗೆ ಓಗೊಟ್ಟು ಆವೇಶ ಭರಿತನಾಗಿ ಯುದ್ಧಕ್ಕೆ ಸಿದ್ಧನಾಗಿ ನಿಂತಾಗ ಇದು ಯುದ್ಧಕ್ಕೆ ಹೋಗುವ ಸಮಯವಲ್ಲಸುಗ್ರೀವನನ್ನು ಮೊದಲಿನಂತೆ ತಿಳಿಯಬೇಡ ಅವನಿಗೆ ಈಗ ಶ್ರೀರಾಮನೆಂಬ ಮಹಾಪುರುಷನ ಬೆಂಬಲ ದೊರಕಿದೆನೀನು ನಿನ್ನ ತಮ್ಮನೊಂದಿಗಿನ ವೈರವನ್ನು ತ್ಯಜಿಸಿ ಅವನೊಂದಿಗೆ ಮೈತ್ರಿಯನ್ನು ಸಂಪಾದಿಸಿಕೋ ಅದು ನಮ್ಮ ಇಡೀ ವಾನರ ಸಂಕುಲಕ್ಕೆ ಹಿತಕರವಾದದ್ದು ಎಂಬ ಯುಕ್ತಿಯುಕ್ತವಾದ ಮಾತುಗಳನ್ನಾಡುತ್ತಾಳೆ. ಆದರೆ ವಾಲಿಯ ಅಂತ್ಯ ಸಮೀಪಿಸಿರುವುದರಿಂದ ತಾರೆಯ ಸಮಯೋಚಿತವಾದ ಮಾತುಗಳು ಅವನಿಗೆ ಹಿಡಿಸುವುದಿಲ್ಲ.


 ಶ್ರೀರಾಮನ ಬಾಣದ ಪ್ರಹಾರಕ್ಕೆ ತುತ್ತಾಗಿ ಮೂರ್ಛೆಗೊಂಡಿರುವ ಪತಿಯನ್ನು ಕಂಡು ಸಾಧ್ವಿಯಾದ ತಾರೆಯು ಆರ್ತವಾಗಿ ವಿಲಪಿಸುತ್ತಾಳೆಪತಿಯ ಶೌರ್ಯ ಪರಾಕ್ರಮಗಳನ್ನು ಹಾಗೂ ಇಂದು ಅವನಿಗೆ ಬಂದಿರುವ ದೈನ್ಯಸ್ಥಿತಿಯನ್ನು ನೆನೆದು ಅತಿಯಾಗಿ ಶೋಕಿಸುತ್ತಾಳೆಪತಿಯೊಡನೆ ಸಹಗಮನ ಮಾಡಲು ಸಿದ್ಧಳಾಗುತ್ತಾಳೆಆಗ ಆಂಜನೇಯನೇಯನು ಅವಳನ್ನು ಕುರಿತು ಸಾಂತ್ವನದ ಮಾತುಗಳನ್ನು ಹೇಳಿಪುತ್ರನಾದ ಅಂಗದನನ್ನು ನೋಡಿಕೊಳ್ಳುವ ಕರ್ತವ್ಯವನ್ನು ನೆನಪಿಸುತ್ತಾನೆ.


 ಅಂತ್ಯಕಾಲ ಸಮೀಪಸುತ್ತಿರುವ ವಾಲಿಗೆ ಶ್ರೀರಾಮನ ದಯೆಯಿಂದ ಸುಬುದ್ಧಿ ಉಂಟಾಗುತ್ತದೆಸುಗ್ರೀವನ ಮೇಲೆ ತಾನು ಎಸಗಿದ ಅಪರಾಧ ತಪ್ಪು ಎಂಬ ಭಾವನೆ ಉಂಟಾಗುತ್ತದೆಸುಗ್ರೀವನನ್ನು ಕರೆದು ಸ್ನೇಹಯುಕ್ತವಾದ ಮಾತುಗಳನ್ನು ಆಡುತ್ತಾನೆತಾರೆ ಹಾಗೂ ಅಂಗದನ ರಕ್ಷಣೆಯ ಜವಾಬ್ದಾರಿಯನ್ನು ವಹಿಸುತ್ತಾನೆತಾರೆಯ ಬಗ್ಗೆ ವಾಲಿಯು ಆಡುವ ಮಾತುಗಳು ಅವಳ ಶ್ರೇಷ್ಠತೆಯನ್ನು ನಮಗೆ ತಿಳಿಸುತ್ತದೆ.


ವಾಲಿಯು ತಾರೆಯನ್ನು ಕುರಿತು ಆಡಿದ ಕೆಲವೊಂದು ಮಾತುಗಳು ಹೀಗಿವೆತಾರೆಯು ಸಾಮಾನ್ಯರಿಂದ ತಿಳಿಯಲು ಅಸಾಧ್ಯವಾದ ಸೂಕ್ಷ್ಮವಾದ ವಿಷಯಗಳನ್ನು ನಿರ್ಣಯಿಸಿ ಹೇಳುವುದರಲ್ಲಿಯೂವಿಧ ವಿಧವಾದ ಉತ್ಪಾತಗಳ ಫಲಾಫಲಗಳನ್ನು ತಿಳಿದು ಹೇಳುವುದರಲ್ಲಿಯೂ ವಿಶೇಷವಾದ ತಿಳುವಳಿಕೆಯನ್ನು ಹೊಂದಿದ್ದಾಳೆಅವಳು ಯೋಚಿಸಿ ನಿರ್ಧಾರಪೂರ್ವಕವಾಗಿ ಹೇಳುವ ವಿಷಯವು ಯಾವ ರೀತಿಯಲ್ಲಿಯೂ ವತ್ಯಾಸವಾಗುವುದೇ ಇಲ್ಲವಾಲಿಯ ಈ ಮಾತುಗಳಿಂದ ತಾರೆಯ ವ್ಯಕ್ತಿತ್ವದ ಔನ್ನತ್ಯ ತಿಳಿಯುತ್ತದೆಅಂದಿನ ಕಾಲದಲ್ಲಿ ಶ್ರೀರಾಮನ ಸ್ವಸ್ವರೂಪದ ಬಗ್ಗೆ ಅರಿವನ್ನು ಹೊಂದಿದ್ದ ಕೆಲವೇ ಕೆಲವರಲ್ಲಿ ತಾರೆಯೂ ಒಬ್ಬಳು ಎಂಬುದನ್ನು ರಾಮಾಯಣವು ತಿಳಿಸುತ್ತದೆವಾಲಿಯ ಮರಣದ ನಂತರ ಶೋಕಮಗ್ನಳಾಗಿ ಪ್ರಾಣತ್ಯಾಗ ಮಾಡಲು ನಿರ್ಧರಿಸಿದ ತಾರೆಯನ್ನು ಶ್ರೀರಾಮನು ಹಿತಕರವಾದ ಮಾತುಗಳಿಂದ ಸಾಂತ್ವನ ಪಡಿಸುತ್ತಾನೆವಾಲಿಯ ನಿಧನದ ನಂತರ ವಾನರ ಕುಲದಲ್ಲಿ ಅಂದಿನ ವಾನರರ ಸಾಮಾಜಿಕ ನಿಯಮಕ್ಕೆ ಅನುಗುಣವಾಗಿ ಸುಗ್ರೀವನನ್ನು ಮದುವೆಯಾಗಿ ಅವನ ರಕ್ಷಣೆಯಲ್ಲಿ ಜೀವನ ನಡೆಸುತ್ತಾಳೆ.


ಶ್ರೀರಾಮನ ಅವತಾರ ಕಾಲದಲ್ಲಿ ಅವನ ಸ್ವರೂಪವನ್ನು ಅರಿತು ಅದರ ಬಗ್ಗೆ ಪತಿಗೆ ಅರಿವನ್ನು ಮೂಡಿಸಲು ಪ್ರಯತ್ನಿಸಿದ ಮಹಾತ್ಮಳು ತಾರಾಪರಮಾತ್ಮನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಕೃತಿಶುದ್ಧತೆ, ತಪಸ್ಯೆಯ ದೃಷ್ಟಿ ಬೇಕುಅವುಗಳನ್ನು ಮೌನವಾಗಿ ಸಂಪಾದಿಸಿಕೊಂಡಿದ್ದಂತಹ ಪವಿತ್ರಾತ್ಮಳು ತಾರಾಅಂತಹ ತಾರೆಯನ್ನು ಅವಳ ಸದ್ಗುಣಗಳೊಂದಿಗೆ ಸ್ಮರಣೆ ಮಾಡಿಕೊಂಡಾಗ ನಮ್ಮ ಪಾಪಗಳೂ ನಾಶವಾಗಿ ಜೀವನ ಪವಿತ್ರವಾಗುವುದರಲ್ಲಿ ಸಂದೇಹವಿಲ್ಲ.


ಸೂಚನೆ : 21/10/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Sunday, October 15, 2023

ವ್ಯಾಸ ವೀಕ್ಷಿತ - 57 ಪಾಂಡವರಿಗಾದ ಊಟೋಪಚಾರಗಳು (Vyaasa Vikshita - 57 Pandavarigada Utopacharagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)



ದ್ರುಪದನ ಕಡೆಯಿಂದ ಬಂದವನೊಬ್ಬನು ಪಾಂಡವರೆಲ್ಲರನ್ನೂ ಭೋಜನಕ್ಕಾಗಿ ಆಹ್ವಾನಿಸಿ, ಅದಕ್ಕಾಗಿ ಅವರನ್ನೊಯ್ಯಲು ರಥಗಳು ಸಿದ್ಧವಾಗಿರುವುದನ್ನೂ ತಿಳಿಸಿದನಷ್ಟೆ. ಆ ಮೊದಲೇ ಬಂದಿದ್ದ ಪುರೋಹಿತನನ್ನು ಕಳುಹಿಸಿಕೊಟ್ಟು, ಆನಂತರ ಆತನ ಸೂಚನೆಯಂತೆ ಆ ದೊಡ್ಡ ದೊಡ್ಡ ರಥಗಳನ್ನು ಹತ್ತಿ ಹೊರಟರು, ಪಾಂಡವರು. ಒಂದು ರಥದಲ್ಲಿ ಕುಂತಿಯೂ ದ್ರೌಪದಿಯೂ ಕುಳಿತುಕೊಂಡರು; ಉಳಿದವರು ಮತ್ತೊಂದರಲ್ಲಿ.

ಯುಧಿಷ್ಠಿರನು  ಆಡಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದ ದ್ರುಪದಮಹಾರಾಜನು, ಇವರುಗಳಿಗಾಗಿ ಅನೇಕಪದಾರ್ಥಗಳನ್ನು ಹೊಂದಿಸಿಟ್ಟಿದ್ದನು:  ಹಣ್ಣು-ಹೂಮಾಲೆಗಳು, ಕವಚ-ಕತ್ತಿ-ಗುರಾಣಿಗಳು, ರತ್ನಗಂಬಳಿ-ಆಸನಗಳು; ಕೃಷಿಕಾರ್ಯಕ್ಕೆ ಉಪಯೋಗಕ್ಕೆ ಬರುವ ಹಸು-ಹಗ್ಗ-ಬೀಜಗಳು ಮುಂತಾದುವು; ಹಾಗೆಯೇ ಬೇರೆ ಶಿಲ್ಪಗಳಲ್ಲಿ (ಕೈಗಾರಿಕೆಗಳ) ಬಳಕೆಗೆ ಬರುವ ವಸ್ತುಗಳು; ಹಾಗೂ ಕ್ರೀಡನಕಗಳು (ಎಂದರೆ ಆಟಗಳಿಗೆ ಬೇಕಾಗುವ ವಸ್ತುಗಳು) – ಎಲ್ಲವೂ ಇದ್ದವು.

ಅಷ್ಟರಲ್ಲೇ ಕೃಷ್ಣೆಯನ್ನು ಕರೆದುಕೊಂಡು ಬಂದ ಕುಂತಿಯು ದ್ರುಪದನ ಅಂತಃಪುರವನ್ನು ಪ್ರವೇಶಿಸಿದಳು. ಅಲ್ಲಿದ್ದ ಉದಾರಮನಸ್ಸಿನ ನಾರಿಯರು, ಕುಂತಿಯನ್ನು ಆದರಿಸಿದರು. ದ್ರುಪದನೂ, ಆತನ ಸಚಿವರೂ, ಪುತ್ರ-ಮಿತ್ರರೂ, ಭೃತ್ಯರೂ (ಎಂದರೆ ಸೇವಕರೂ) ಆ ಪಾಂಡವರನ್ನು ಕಂಡು ಬಹಳವೇ ಸಂತೋಷಪಟ್ಟರು: ಅಜಿನವನ್ನೇ ಉತ್ತರೀಯವನ್ನಾಗಿ ಹೊಂದಿದ್ದ ಆ ಪಾಂಡವರ ಸಿಂಹದಂತಿರುವ ನಡೆಯೇನು! ಎತ್ತಿನ ಕಣ್ಣುಗಳಂತೆ ಇದ್ದ ಅವರ ವಿಶಾಲವಾದ ನೇತ್ರಗಳೇನು! ತುಂಬಿಕೊಂಡಿದ್ದ ಹೆಗಲುಗಳೇನು! ಸರ್ಪರಾಜನಂತೆ ನೀಳವಾದ ಬಾಹುಗಳೇನು! ಕಂಡವರಿಗೆಲ್ಲಾ ಅತೀವ ಹರ್ಷವೇ ಆಯಿತು.

ಇನ್ನು ಆ ವೀರರಾದ ಪಾಂಡವರೂ ಅಷ್ಟೆ. ಪಾದಪೀಠವುಳ್ಳ ಶ್ರೇಷ್ಠವಾದ ಆ ಆಸನಗಳಲ್ಲಿ ಹೋಗಿ ಕುಳಿತುಕೊಂಡರು. ಅನುಕ್ರಮವಾಗಿ ಕುಳಿತರು - ಎಂದರೆ ಜ್ಯೇಷ್ಠಾನುಪೂರ್ವವಾಗಿ (ಮೊದಲು ಹಿರಿಯರು, ಆಮೇಲೆ ಕಿರಿಯರು ಎಂಬ ಕ್ರಮದಲ್ಲಿ) ಕುಳಿತರು. ಅವರು ಕುಳಿತುಕೊಳ್ಳುವಾಗ ಕಿಂಚಿತ್ತೂ ಶಂಕೆಯಿರಲಿಲ್ಲ (ಇದು ತಮಗೋ, ಇನ್ನಾರೋ ಹಿರಿಯರಿಗೋ - ಎನ್ನುವ ಆಕುಲತೆಯಿರಲಿಲ್ಲ); ಹಾಗೆಯೇ ವಿಸ್ಮಯವೂ ಇರಲಿಲ್ಲ (ಆಹಾ ಇದೆಲ್ಲ ಅದೆಷ್ಟು ಉತ್ತಮವಾಗಿದೆ, ಅದ್ಭುತವಾಗಿದೆ, ಎಂಥ ರಾಜೋಪಚಾರ! - ಎಂಬ ಬಗೆಯ ಪ್ರತಿಕ್ರಿಯೆಯೂ ಇರಲಿಲ್ಲ).

ಅವರು ಕುಳಿತುಕೊಳ್ಳುತ್ತಿದ್ದಂತೆಯೇ ಅಲ್ಲಿಗೆ ಬಂದರು, ಸುಸ್ವಚ್ಛವೇಷಧಾರಿಗಳಾಗಿದ್ದ ದಾಸ-ದಾಸಿಯರೂ ಬಡಿಸುವವರೂ. ಚಿನ್ನ-ಬೆಳ್ಳಿಗಳ ಪಾತ್ರೆಗಳಲ್ಲಿ ಸಾಧಾರಣವೂ ವಿಶೇಷವೂ ಆದ ರಾಜೋಚಿತ ಭೋಜನಸಾಮಗ್ರಿಗಳನ್ನು (ಭಕ್ಷ್ಯಗಳು, ಭೋಜ್ಯಗಳು ಮುಂತಾದುವನ್ನು) ತಂದು ತಂದು ಬಡಿಸಿದರು. ತಮತಮಗೆ ಅಪೇಕ್ಷಿತವಾದಷ್ಟನ್ನು ಆ ಪುರುಷವೀರರು ಭುಜಿಸಿದರು (ತಿಂದರು); ಸುತೃಪ್ತರಾದರು.

ಭೋಜನ ಮುಗಿಯುತ್ತಲೇ ಅವರು ನಡೆದುದು ದ್ರುಪದನು ಅಲ್ಲಿ ಜೋಡಿಸಿದ್ದ ನಾನಾವಸ್ತುಗಳತ್ತ; ಅಲ್ಲೂ ಅವರು ಮಿಕ್ಕೆಲ್ಲವನ್ನೂ, ಎಂದರೆ ಭೋಗದ ವಸ್ತುಗಳೆಲ್ಲವನ್ನೂ, ಬಿಟ್ಟು ಸಾಂಗ್ರಾಮಿಕಗಳತ್ತ ಸಾಗಿದರು. (ಸಂಗ್ರಾಮಕ್ಕೆ ಬೇಕಾಗುವಂತಹವು ಸಾಂಗ್ರಾಮಿಕಗಳು: ಕತ್ತಿ-ಗುರಾಣಿ-ಗದೆ-ಬಿಲ್ಲು ಮುಂತಾದವು). ದ್ರುಪದನೂ ಆತನ ಪುತ್ರನೂ, ಆತನ ಮುಖ್ಯಮಂತ್ರಿಗಳು -ಎಲ್ಲರೂ ಇದನ್ನು ಗಮನಿಸಿಕೊಂಡರು. "ಇವರೆಲ್ಲರೂ ಕುಂತೀಪುತ್ರರಾದ ರಾಜಕುಮಾರರೇ" ಎಂಬುದನ್ನು (ಮನಸ್ಸಿನಲ್ಲೇ) ತೀರ್ಮಾನಿಸಿಕೊಂಡವರಾಗಿ ಹರ್ಷದಿಂದ ತುಂಬಿಹೋದರು.

ಆ ಬಳಿಕ ಮಹಾದ್ಯುತಿಯುಳ್ಳವನಾದ (ದ್ಯುತಿಯೆಂದರೆ ಕಾಂತಿ) ದ್ರುಪದನು ತೇಜಶ್ಶಾಲಿಯದ ಯುಧಿಷ್ಠಿರನಲ್ಲಿಗೆ ಹೋಗಿ, ಬ್ರಾಹ್ಮಣರನ್ನು ಮಾತನಾಡಿಸುವ ಪರಿ ಏನುಂಟೋ ಅದೇ ಪರಿಯಲ್ಲಿ ಸಂಬೋಧಿಸಿ, ಯಾವುದೇ ದೈನ್ಯ-ಸಂಕೋಚಗಳಿಲ್ಲದೆ ಪ್ರಶ್ನಿಸಿದನು.

ಸೂಚನೆ : 
15/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 59 (Yaksha prashne 59)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 58 ಯಾವುದನ್ನು ನಿಗ್ರಹಿಸುವುದರಿಂದ ಜನರು ಶೋಕವನ್ನು ಪಡುವುದಿಲ್ಲ ?

ಉತ್ತರ - ಮನೋನಿಗ್ರಹದಿಂದ  

"ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂಬ ಮಾತು ಮನುಷ್ಯನ ಸುಖದುಃಖಗಳಿಗೆ ಮನಸ್ಸು ಯಾವ ರೀತಿ ಕಾರಣವಾಗುತ್ತದೆ ಎಂಬುದನ್ನು ಹೇಳುತ್ತದೆ. ಈ ಮನಸ್ಸು ಮನುಷ್ಯನ ಜೀವನದಲ್ಲಿ ಅವಿಭಾಜ್ಯವಾದ ಅಂಗವಾಗಿದೆ. ಮನಸ್ಸಿನಿಂದಲೇ ಮಾನವನಾಗಿರುವುದು. ಆದರೆ ಮನಸ್ಸನ್ನು ನಿಗ್ರಹ ಮಾಡುವ ಅಗತ್ಯವೇನು? ನಿಗ್ರಹ ಮಾಡದಿದ್ದರೆ ಯಾವ ದುಷ್ಪರಿಣಾಮ ಉಂಟಾಗುತ್ತದೆ? ಮನಸ್ಸನ್ನು ನಿಗ್ರಹಿಸುವುದು ಹೇಗೆ? ಮತ್ತು ಅದರ ನಿಗ್ರಹದಿಂದ ಶೋಕವು ಹೇಗೆ ನಿಯಂತ್ರಣಗೊಳ್ಳುತ್ತದೆ? ಎಂಬ ಆಶಯ ಯಕ್ಷನ ಪ್ರಶ್ನೆಯಲ್ಲಿ ಅಡಕವಾಗಿದೆ. 

ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ ಎಂದು ಎರಡು ಮುಖಗಳಲ್ಲಿ ಮನಸ್ಸು ಸಂಚರಿಸುತ್ತದೆ. ಬಾಹ್ಯವಾದ ಇಂದ್ರಿಯಗಳ ಮೂಲಕ ಮನಸ್ಸು ಹೊರ ಮುಖವಾಗಿ ಹರಿದರೆ ಅದು ಪ್ರವೃತ್ತಿಮಾರ್ಗ. ಇಂದ್ರಿಯಗಳನ್ನು ಬಿಟ್ಟು ಅಂತರ್ಮುಖವಾದರೆ ಅದು ನಿವೃತ್ತಿಮಾರ್ಗ. ಮನಸ್ಸು ಯಾವಾಗ ಪ್ರವೃತ್ತಿಮಾರ್ಗದಲ್ಲಿ ಸಂಚರಿಸುತ್ತದೆಯೋ ಆಗ ಶೋಕಕ್ಕೆ ಆಸ್ಪದ, ನಿವೃತ್ತಿಮಾರ್ಗದಲ್ಲಿ ಸಂಚರಿಸುವಾಗ ಶೋಕಮೋಹಗಳಿಗೆ ಆಸ್ಪದವಿರುವುದಿಲ್ಲ. ಅದಕ್ಕೆ ಕಾರಣವಿಷ್ಟೆ - ಶಬ್ದ-ಸ್ಪರ್ಶ-ರೂಪ-ರಸ-ಗಂಧ ಎಂಬ ಸೂಕ್ಷ್ಮವಾದ ವಿಷಯಗಳಿಂದ ಆಕಾಶ-ವಾಯು-ಅಗ್ನಿ-ನೀರು-ಪೃಥಿವೀ ಎಂಬ ಐದು ಭೂತಗಳ ಸೃಷ್ಟಿಯಾಗುತ್ತದೆ. ಕಿವಿ-ಚರ್ಮ-ಕಣ್ಣು-ನಾಲಗೆ-ಮೂಗು ಈ ಐದು ಇಂದ್ರಿಯಗಳಿಂದ ಶಬ್ದಾದಿ ವಿಷಯಗಳು ಮತ್ತು ಪೃಥಿವ್ಯಾದಿ ಪಂಚಭೂತಗಳು ಅನುಭವಕ್ಕೆ ಗೋಚರವಾಗುತ್ತವೆ. ಈ ಪ್ರಪಂಚವು ಇಂತಹ ಐದು ಭೂತಗಳಿಂದಲೇ ಸೃಷ್ಟಿಯಾಗಿದೆ. ಇಲ್ಲಿ ಯಾವುದೇ ಪದಾರ್ಥವಾಗಿರಬಹುದು ಅದರಲ್ಲಿ ಈ ಭೂತಗಳ ಅಂಶವೆಂಬುದು ಇದ್ದೇ ಇರುತ್ತದೆ. ಇಂತಹ ಪ್ರಪಂಚದಲ್ಲಿ ಮನುಷ್ಯನೂ ಒಂದು ಬಗೆಯ ಸೃಷ್ಟಿಯೇ ಆಗಿದ್ದಾನೆ. ಈತನೂ ತನ್ನ ಮನಸ್ಸಿನಿಂದ ಈ ಪಾಂಚಭೌತಿಕವಾದ ಪ್ರಂಪಚವನ್ನು ಅನುಭವಿಸುತ್ತಾನೆ. ಇಲ್ಲಿರುವ ವಸ್ತುಗಳೇ ಮನಸ್ಸಿನಿಂದ ಅನುಭವಿಸುವ ಸುಖ ದುಃಖಗಳಿಗೆ ಕಾರಣ ಎಂಬುದಾಗಿ ಭಾವಿಸಿದ್ದಾನೆ. ಯಾವುದು ಸುಖಕ್ಕೆ ಕಾರಣವೋ ಅದೇ ದುಖಃಖಕ್ಕೆ ಕಾರಣವೆಂಬುದನ್ನು ಅಲ್ಲಗಳಿಯುವಂತಿಲ್ಲ. ಆದರೆ ನಾವು ಬಾಹ್ಯವಾದ ದ್ರವ್ಯಸಂಗ್ರಹದಿಂದ ಮಾತ್ರವೇ ಸುಖ ಸಿಗುತ್ತದೆ ಎಂಬ ಭ್ರಮೆಯಲ್ಲಿ ಜೀವಿಸುತ್ತಿದ್ದೇವೆ. ಇದೇ ಶೋಕಕ್ಕೂ ಕಾರಣವೆಂಬ ಪ್ರಮೆ ನಮಗೆ ಬರುವುದೇ ಇಲ್ಲ. 

ನದಿಯನ್ನು ದಾಟಲಿ ದೋಣಿಯನ್ನು ಬಳಸಿಕೊಳ್ಳುತ್ತೇವೆ. ಆದರೆ ದೋಣಿ ಬೇಕೇಬೇಕು. ಯಾವಾಗ ನದಿಯ ಇನ್ನೊಂದು ಪಾರಕ್ಕೆ ತಲುಪಿರುತ್ತೇವೋ ಆಗಲೂ ದೋಣಿಯಲ್ಲೆ ಕುಳಿತು 'ನಮ್ಮನ್ನು ದಾಟಿಸಿದ ದೋಣಿಯನ್ನು ಬಿಡುವುದೆಂತು' ಎಂದು ಕುಳಿತರೆ ನದಿಯನ್ನು ದಾಟಲು ಸಾಧ್ಯವೇ? ಅಂತೆಯೇ ಈ ಪ್ರಪಂಚದಲ್ಲಿ ಇರುವ ವಸ್ತುವನ್ನು ಮನಸ್ಸಿನ ನಿವೃತ್ತಿಮಾರ್ಗಕ್ಕೆ ಅನುಕೂಲವಾಗುವಂತೆ ಬಳಸಿಕೊಳ್ಳಬೇಕು. ಅಲ್ಲೇ ಕುಳಿತರೆ ಶೋಕವನ್ನೇ ಅನುಭವಿಸಬೇಕಲ್ಲವೇ? ಸಿಕ್ಕಿದ ದಡವನ್ನೂ ಬಿಟ್ಟಂತಾಗುವುದಲ್ಲವೇ? ಶ್ರೀರಂಗಮಹಾಗುರುಗಳು ಮುಕುಂದಮಾಲಾದ 'ಜಿಹ್ವೇ ಕೀರ್ತಯ' ಎಂಬ ಶ್ಲೋಕಕ್ಕೆ ವಿವರಣೆಯನ್ನು ಕೊಡುತ್ತಾ ಹೀಗೆ ಹೇಳುತ್ತಿದ್ದರು. "ಜೀವಕ್ಕೆ ಸ್ಥಿರವಾದ ನೆಲೆಯೆಂದರೆ ಭಗವಂತನೇ. ಇಂದ್ರಿಯದ ಕಡೆ ಅಂಟಿರುವ ಜೀವವನ್ನು ಮೆಲ್ಲಗೆ ಭಗವಂತನ ಕಡೆ ತಿರುಗಿಸಲು ಬೇಕಾದ ವಿಷಯಗಳನ್ನೂ ಭಗವಂತನಲ್ಲಿ ತೋರಿಸಿದರು. ಹೀಗೆ ಇಂದ್ರಿಯಾವಲಂಬನವನ್ನು ಅವುಗಳ ಆಕರ್ಷಣೆಯಿಂದ ಮೆಲ್ಲಗೆ ತಪ್ಪಿಸಿ, ಆತ್ಮಾವಲಂಬಿಯಾದ ಜೀವನವನ್ನುಂಟುಮಾಡಲು ಇಂದ್ರಿಯಗಳಲ್ಲಿ ಮೆಲ್ಲಗೆ ಆತ್ಮಭಾವವನ್ನು ತುಂಬಿದರು" ಎಂದು. ಇಂತಹ ಭಾವವನ್ನು ಇಂದ್ರಿಯಗಳಿಗೆ ತುಂಬಿದಾಗ ಮನಸ್ಸೂ ಕೂಡ ಆತ್ಮಭಾವದಲ್ಲಿ ನೆಲೆನಿಂತು ಶೋಕ ಮೋಹಗಳು ದೂರವಾಗುವುವು.

ಸೂಚನೆ : 15/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, October 10, 2023

ಅಷ್ಟಾಕ್ಷರೀ​ - 45 ಚಂಚಲಂ ಹಿ ಮನಃ ಕೃಷ್ಣ! (Astakshara Darshana 45 VCancalam Hi Manah Krishna!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ನಮಗೆ ಗೊತ್ತಿಲ್ಲದಿರುವ ವಿಷಯವನ್ನು ಯಾರಾದರೂ ತಿಳಿಸಿಕೊಟ್ಟರೆ, "ಉಪಕಾರವಾಯಿತು, ಕೃತಜ್ಞತೆಗಳು" ಎನ್ನುತ್ತೇವೆ. ತಿಳಿದಿರುವುದನ್ನೇ ತಿಳಿಸುವುದಾದರೆ ಪ್ರಯೋಜನವೇನು?


ಚಿಕ್ಕವನಾಗಿದ್ದಾಗಲೇ ನನಗೊಂದು ಪ್ರಶ್ನೆ ಬಂದಿತ್ತು. ಸತ್ಯವನ್ನು ಹೇಳಬೇಕು, ಕಳ್ಳತನವನ್ನು ಮಾಡಬಾರದು - ಮುಂತಾದ ಮಾತುಗಳು ಉಂಟಷ್ಟೆ? ಇವೆಲ್ಲಾ ನಮ್ಮ ಸಾಧಾರಣ ಅರಿವಿಗೇ (ಕಾಮನ್ ಸೆನ್ಸ್ ಎಂಬುದಕ್ಕೇ) ಗೋಚರವಾಗುವಂತಹವು. ಹೀಗೆ: ಯಾರಾದರೂ ಸುಳ್ಳನ್ನು ಪದೇ ಪದೇ ಹೇಳುತ್ತಿದ್ದರೆ ಬರಬರುತ್ತಾ ಅದು ಗೊತ್ತಾಗಿಹೋಗಿ ಜನರು ಅವರನ್ನು ನಂಬುವುದು ಕಡಿಮೆಯಾಗುತ್ತದೆ. "ಹುಷಾರು, ಆತ ಸುಳ್ಳುಬುರುಕ" - ಎಂದು ಜನ ಆಡಿಕೊಳ್ಳುವುದೋ ಒಬ್ಬರಿಗೊಬ್ಬರು ಎಚ್ಚರಕೊಡುವುದೋ ಆರಂಭವಾಗುತ್ತದೆ. ಹಾಗೆಯೇ "ಈತ ಕದಿಯುತ್ತಾನೆ" ಎಂಬುದಾಗಿ ಮಾತು ಹರಡಿದರಂತೂ ಸದಾ ಸಂಶಯದಿಂದಲೇ ನೋಡುವವರು ಹೆಚ್ಚಾಗುತ್ತಾರೆ. ಹೀಗಾಗಿ, ಜನರು ತನ್ನನ್ನು ನಂಬರು, ನೆಚ್ಚರು - ಎಂಬುದೇ ಸಾಕಷ್ಟು ಮಾನಸಿಕ ಬಾಧೆಕೊಡುವುದು; ಲೋಕವ್ಯವಹಾರವೂ ದುಸ್ತರವೇ ಆಗಲಾರಂಭಿಸುವುದು. ಅಲ್ಲದೆ, ನಂಬುಗೆಗೆ ಅಪಾತ್ರರಾದರೆ ಸಮಯಕ್ಕಾರು ಸಹಾಯಮಾಡಿಯಾರು?


ಹೀಗೆ, ವ್ಯಾವಹಾರಿಕವಾದ ಚಿಂತನೆಯಿಂದಲೇ ಗೊತ್ತಾಗುವ ಈ ವಿಷಯವನ್ನು ನಾವೇನು ಉಪನಿಷತ್ತಿನಿಂದಲೋ ಧರ್ಮಶಾಸ್ತ್ರಗಳಿಂದಲೋ ತಿಳಿಯಬೇಕೆ? ಅವೇನಿದ್ದರೂ ನಮಗೆ ಪೂರ್ವ-ವಿದಿತವಲ್ಲದ (ಮೊದಲೇ ಗೊತ್ತಾಗಿಲ್ಲದ) ವಿಷಯವನ್ನು ತಿಳಿಸಿಕೊಡುವುದಾದರೆ ಸರಿ. ಈ ಸಣ್ಣಪುಟ್ಟವಿಷಯಗಳಿಗೆಲ್ಲಾ ದೇವರು-ಧರ್ಮ - ಇವುಗಳನ್ನು ತರುವ ಆವಶ್ಯಕತೆಯದರೂ ಏನು? – ಎಂಬುದೇ ಆ ಪ್ರಶ್ನೆ.


ಆದರೂ "ಸತ್ಯಂ ವದ" ಎಂದು ಒಂದು ಉಪನಿಷತ್ತು (ತೈತ್ತಿರೀಯ) ಹೇಳುತ್ತದೆ; ಮತ್ತೊಬ್ಬರ ಸೊತ್ತಿಗಾಗಿ ಹಂಬಲಿಸಬೇಡ ಎಂದು ಮತ್ತೊಂದು (ಈಶಾವಾಸ್ಯ) ಹೇಳುತ್ತದೆ - ಅಲ್ಲವೇ? ಏತಕ್ಕಾಗಿ?


ಇದಕ್ಕೆ ಉತ್ತರ ಕೊಡುವ ಮುನ್ನ ಮತ್ತೂ ಒಂದು ಪ್ರಶ್ನೆಯನ್ನು ಕೇಳಿಕೊಂಡುಬಿಡೋಣ. ಅದು ಮನಸ್ಸಿಗೆ ಸಂಬಂಧಿಸಿದುದು. (ಕದಿಯಬೇಡ ಎಂದದ್ದು ಕಾಯದ ಸಮಾಚಾರ; ಸುಳ್ಳಾಡಬೇಡ ಎಂದದ್ದು ಮಾತಿನ ಸಮಾಚಾರ.) ಹೀಗಾಗಿ ಕಾಯ-ವಾಕ್-ಮನಸ್ಸುಗಳ ಆಚಾರವನ್ನು ಕುರಿತು ಇಲ್ಲಿ ವಿವೇಚಿಸುವುದಾಗಿದೆ.


"ಮನಸ್ಸು ಚಂಚಲ" - ಎಂಬುದು ಯಾರಿಗೆ ಗೊತ್ತಿಲ್ಲ? ಎಳೇಮಕ್ಕಳನ್ನು ನೋಡಿದರೂ ಗೊತ್ತಾಗುವಂತಹುದೇ ಅದು. ವಯಸ್ಸಾದವರೂ, "ನನ್ನ ಮನಸ್ಸು ನಿಶ್ಚಲವಾದದ್ದು"- ಎಂದು ಎದೆತಟ್ಟಿ ಹೇಳಿಕೊಳ್ಳಲಾರರು. ಹಾಗಿರಬೇಕಾದರೆ ಇದೇನೋ ದೊಡ್ಡ ವಿಷಯವೆಂಬಂತೆ ಅರ್ಜುನನು ಕೃಷ್ಣನ ಬಳಿ ಹೇಳಿಕೊಳ್ಳುವ ಮಾತೇ "ಚಂಚಲಂ ಹಿ ಮನಃ ಕೃಷ್ಣ!".


ಅರ್ಥವಾಗದವರಿಗೊಂದು ಉಪಮಾನವನ್ನೂ ಕೊಟ್ಟು ಹೇಳುವುದುಂಟು. ಇಲ್ಲಿ ಕೃಷ್ಣನಿಗೇ ಅರ್ಜುನನು  ಹೋಲಿಕೆಯೊಂದನ್ನಿತ್ತು ಹೇಳುತ್ತಿದ್ದಾನೆ - "ಗಾಳಿಯನ್ನು ಹೇಗೆ ಹಿಡಿದಿಡಲಾಗದೋ ಹಾಗೆ ಅದು" – ಎಂದು!


ಅದಕ್ಕೆ ಕೃಷ್ಣನೂ, "ನಿಸ್ಸಂಶಯವಾಗಿಯೂ ಮನಸ್ಸು ದುರ್ನಿಗ್ರಹ (ನಿಗ್ರಹಿಸಲು ಮಹಾಕಷ್ಟವಾದದ್ದು) – ಎಂದುತ್ತರಿಸುತ್ತಾನೆ! ಎಲ್ಲರಿಗೂ ಗೊತ್ತಿರುವುದನ್ನೇ ಇಲ್ಲಿಯೂ ಹೇಳುತ್ತಿದೆಯಲ್ಲವೇ? ಇದೇನೋ ಹೊಸದೆಂಬಂತೆ ಭಗವಂತನ ಮುಂದೆ ಹೇಳಬೇಕೇ? ಆತನಾದರೂ ಇದೇನೋ ಗಹನಸತ್ಯವೆಂಬಂತೆ ಮತ್ತೆ ಒತ್ತಿ ಹೇಳಬೇಕೇ?!


ಸಾಧಾರಣರಿಗೂ ಗೊತ್ತಾಗುವ ವಿಷಯವನ್ನು ಶಾಸ್ತ್ರವೂ ಹೇಳುತ್ತದೆಂದರೆ, ಅಲ್ಲೇನೋ ವಿಶೇಷವಿರಲೇಬೇಕು. ಅದಿದು: ಸತ್ಯ-ಅಸ್ತೇಯಗಳು ಪುಣ್ಯವರ್ಧಕಗಳೆಂದು ಧರ್ಮಶಾಸ್ತ್ರಗಳು ಸೂಚಿಸುತ್ತವೆ. (ಅಸತ್ಯ-ಕಳ್ಳತನಗಳು ಪಾಪಗಳು; ಪಾಪಗಳು ಆಧ್ಯಾತ್ಮಿಕ-ಪ್ರಗತಿಗೆ ಬಾಧಕವೇ). ಯೋಗಶಾಸ್ತ್ರವು ಮತ್ತೊಂದಂಶವನ್ನು ತಿಳಿಸಿಕೊಡುತ್ತದೆ: ಸತ್ಯವನ್ನೇ ನುಡಿಯುತ್ತಿದ್ದರೆ, ಅಂತಹವನು ನುಡಿಯುವುದೇ ಸತ್ಯವಾಗುತ್ತದೆ(ವಾಕ್-ಸಿದ್ಧಿ)! ಕಳ್ಳತನಕ್ಕೆಂದೂ ಕೈಹಾಕದವನತ್ತ ಸಿರಿಯೇ ಆಗಮಿಸುತ್ತದೆ!


ಐಂದ್ರಿಯಿಕ-ಭೋಗಗಳು ಸುಖಕ್ಕೆ ಕಾರಣವಾಗುವಂತೆ ದುಃಖಕ್ಕೂ ಕಾರಣವಾಗಬಲ್ಲವು; ಭೋಗ-ರುಚಿಯು ತೀವ್ರವಾದಷ್ಟೂ ಉತ್ಕಟವಾದ ದುಃಖಕ್ಕೇ ಅವು ಕಾರಣವಾಗತಕ್ಕವು - ಎಂಬ ಯೋಗಶಾಸ್ತ್ರದ ಎಚ್ಚರವು ಭೋಗಗಳ ಬಗೆಗಿನ ರಾಗವನ್ನು ಕಡಿಮೆಮಾಡುವುದು.


ಮನಸ್ಸಿನ ನಡೆಯನ್ನು ಕುರಿತಾಗಿ ಮುಖ್ಯವಾದ ತತ್ತ್ವವೊಂದನ್ನು ಯೋಗಿಪುಂಗವರಾದ ಶ್ರೀರಂಗಮಹಾಗುರುಗಳು ಪ್ರಶ್ನೆಯೊಂದರ ಮೂಲಕ ಸೂಚಿಸಿದ್ದರು: "ಹರಿಯುವುದೇ ಮನಸ್ಸಿನ ಸ್ವಭಾವವಾಗುವುದಾದರೆ, ಅದರ ಬಹಿರ್ಮುಖವಾದ ನಡೆಯನ್ನು ತಡೆದಲ್ಲಿ, ಒಳಮುಖವಾಗಿ ಅದೇಕೆ ಹರಿಯದು? (ಹರಿದೇ ಹರಿಯುತ್ತದೆ)" ಎಂದು. ಅಭ್ಯಾಸದಿಂದ ಅನುಭವ-ಗೋಚರವಾಗುವ ವಿಷಯವಿದು. ರಾಗಗಳು ಕಡಿಮೆಯಾಗುತ್ತಾ ಮನಸ್ಸು ಅಂತರ್ಮುಖವಾಗಿ ಹರಿದು ನೆಲೆಗಾಣುವುದೇ ಧ್ಯಾನ-ಸಮಾಧಿಗಳ ಸಿದ್ಧಿಗೆ ಪ್ರಧಾನ-ಸಾಧನ. ಅಭ್ಯಾಸ-ವೈರಾಗ್ಯಗಳಿಂದಲೇ ಚಿತ್ತವೃತ್ತಿ-ನಿರೋಧ.


ಹೀಗಾಗಿ, "ಬಹಿರ್ಮುಖತೆ-ಚಾಂಚಲ್ಯಗಳೆಂಬುದು ಚಿತ್ತಕ್ಕೆ ಸಹಜವಾದದ್ದು" – ಎಂಬುದು ಸರ್ವಜನ-ಅನುಭವ-ಗಮ್ಯವು ಹೇಗೋ, ಹಾಗೆಯೇ, "ಅಂತರ್ಮುಖತೆ-ನೈಶ್ಚಲ್ಯಗಳೆಂಬುದೂ ಚಿತ್ತಕ್ಕೆ ಅಷ್ಟೇ ಸಹಜವಾದದ್ದು" - ಎಂಬುದು ಯೋಗಿಜನ-ಅನುಭವ-ಗಮ್ಯವಾದದ್ದು. ಯುಕ್ತ-ಮಾರ್ಗದರ್ಶನವಿದ್ದಲ್ಲಿ ಯಾರು ಬೇಕಾದರೂ ಯೋಗಿಗಳಾಗಬಹುದಷ್ಟೆ?


ಹೀಗೆ ಸಾಧಾರಣ-ತರ್ಕಕ್ಕೆ ಗೋಚರವಾಗತಕ್ಕ ವಿಷಯಗಳನ್ನೂ ಶಾಸ್ತ್ರಗಳು ಹೇಳುತ್ತವೆಂದರೆ, ಅವುಗಳಲ್ಲಿರಬಹುದಾದ ಆಳವಾದ ಅನೂಹ್ಯ-ತತ್ತ್ವಗಳನ್ನೂ ಅವು ಮನವರಿಕೆ ಮಾಡಿಕೊಡುತ್ತವೆಂದೇ!


ಸೂಚನೆ: 08/10/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

ಯಕ್ಷ ಪ್ರಶ್ನೆ 58 (Yaksha prashne 58)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 57 ನಿರಂತರವಾಗಿ ಫಲವನ್ನು ಕೊಡುವ ಧರ್ಮ ಯಾವುದು ?

ಉತ್ತರ - ತ್ರಯೀ - ವೇದ 

ಈ ನಿಸರ್ಗದಲ್ಲಿ ಯಾವುದೇ ಬೀಜವು ಫಲವನ್ನು ಕೊಡಬೇಕಾದರೆ ಅದಕ್ಕೊಂದು ಕಾಲ ಸನ್ನಿವೇಶಗಳ ಅವಶ್ಯಕತೆ ಇರುತ್ತದೆ. ಅಥವಾ ಎಲ್ಲಾ ಬೀಜವೂ ವೃಕ್ಷವಾಗಿ ಎಲ್ಲಾ ಕಾಲದಲ್ಲೂ ಎಡಬಿಡದೇ ಫಲವನ್ನು ಕೊಡುವುದೆಂಬುದೂ ಅಸಾಧ್ಯದ ಮಾತೇ. ಅಂತೆಯೇ ನಿರಂತರವಾಗಿ ಫಲವನ್ನು ಕೊಡುವ ಯಾವುದೇ ವೃಕ್ಷವನ್ನು ಕೇಳಿಲ್ಲ, ಕಂಡಿಲ್ಲ. ಆದರೆ ಇಲ್ಲಿ ಯಕ್ಷನು ನಿರಂತರವಾಗಿ ಫಲವನ್ನು ಕೊಡುವಂತಹ ಧರ್ಮ ಯಾವುದು? ಎಂಬ ಪ್ರಶ್ನೆಯನ್ನು ಮುಂದಿಡುತ್ತಾನೆ. ಅದಕ್ಕೆ ಧರ್ಮರಾಜನು ತ್ರಯೀ - ವೇದ ಎಂಬ ಉತ್ತರವನ್ನು ಕೊಡುತ್ತಾನೆ. ಅಂದರೆ ಅದಾವ ಧರ್ಮಕ್ಕೆ ನಿರಂತರ ಫಲಕೊಡುವ ಯೋಗ್ಯತೆಯಿದೆ? ಮತ್ತು ಹೇಗೆ? ಫಲವನ್ನು ಕೊಡಲು ಅದು ವೃಕ್ಷವಾಗಿರಬೇಕಲ್ಲವೇ? ವೇದಕ್ಕೆ ತ್ರಯೀ ಎಂದು ಹೆಸರು ಹೇಗೆ ಬಂತು? ಮತ್ತು ವೇದವೆಂಬ ಧರ್ಮವು ಹೇಗೆ ಮಧ್ಯೆ ಬಿಡುವಿಲ್ಲದೇ ಫಲವನ್ನು ಕೊಡಲು ಸಾಧ್ಯ? ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ. 

ಇಲ್ಲಿ ಹೇಳುತ್ತಿರುವುದು ನಾವು ಕಾಣುವ ವನದಲ್ಲಿ ಇರುವ ವೃಕ್ಷವಲ್ಲ. ಆರಣ್ಯಕ, ಬ್ರಾಹ್ಮಣ ಮತ್ತು ಸಂಹಿತಾ ಎಂಬ ಮೂರು ಶಾಖೆಗಳಿಂದ ಕೂಡಿರುವ ವೇದವೆಂಬ ವೃಕ್ಷ. ವೇದವೃಕ್ಷವು ಊರ್ಧ್ವಮೂಲವಾದ ಕೆಳಕೊಂಬೆಯಿಂದ ಕೂಡಿದ್ದಾಗಿದೆ. ವಿದ-ಜ್ಞಾನೇ ಎಂಬ ಸಂಸ್ಕೃತಮೂಲವಾದ ಶಬ್ದಕ್ಕೆ ಜ್ಞಾನ ಎಂದು ಅರ್ಥ. ಇಂತಹ ಜ್ಞಾನರೂಪವಾದ ವೇದವು ನಿರಂತರವಾದ ಫಲವನ್ನು ಕೊಡುತ್ತದೆ. ಜ್ಞಾನ, ಇಚ್ಛಾ, ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಪ್ರವೃತ್ತಿಗಳು. ಇಲ್ಲಿ ಇಚ್ಛಾ ಮತ್ತು ಕ್ರಿಯೆಗಳಿಗೆ ಜ್ಞಾನವೇ ಮೂಲವಾಗಿದೆ. ಜ್ಞಾನವು ಈ ಸೃಷ್ಟಿಯಲ್ಲಿ ಸದಾ ಜಾಗೃತವಾಗಿ ಮೊಳಗುತ್ತಿರುವ ಶಬ್ದಗಳ ತರಂಗ. ಅವುಗಳನ್ನು ಸಾಕ್ಷಾತ್ಕರಿಸಿಕೊಂಡವನು ಋಷಿ. ಅಂತಹ ಜ್ಞಾನದಿಂದ ನಡೆಯುವ ಮುಂದಿನ ಎಲ್ಲಾ ವ್ಯಾಪಾರಗಳೂ ವೇದಮೂಲವಾದವುಗಳೇ ಆಗಿವೆ. ಇಂತಹ ವ್ಯಾಪಾರವು ಅವ್ಯಾಹತವಾಗಿ ಇಂದೂ ಮುಂದೂ ಎಂದೆಂದೂ ನಡೆದುಕೊಂಡು ಬರುತ್ತಲೇ ಇದೆ. ವೇದಗಳು ಯಜಕ್ಕಾಗಿಯೇ ಋಷಿಗಳ ಮನೋಭೂಮಿಯಲ್ಲಿ ಬೆಳೆದ ಮರವದು. ಯಜ್ಞರೂಪವಾದ ಕರ್ಮ ನಿರಂತರವಾಗಿಯೇ ಇರುವುದರಿಂದ ಆ ಯಜ್ಞಗಳ ಫಲವು ಹಾಗೇ ನಿರಂತರವಾಗಿ ಬರಬೇಕಲ್ಲವೇ. ಈ ದೃಷ್ಟಿಯಿಂದ ತ್ರಯೀ ಎನ್ನುವುದು ನಿರಂತರವಾಗಿ ಫಲವನ್ನು ಕೊಡುವ ಧರ್ಮವಾಗಿದೆ. ಧರ್ಮವೆಂದರೆ ಅದೊಂದು ಬಗೆಯ ಕಂಡೀಶನ್ ಎಂಬುದಾಗಿ ಶ್ರೀರಂಗ ಮಹಾಗುರುಗಳ ಮಾತನ್ನು ಈ ನೆನಪಿಸಿಕೊಳ್ಳುತ್ತೇನೆ. ವೇದವೆಂಬುದು ಈ ಸೃಷ್ಟಿಯಲ್ಲಿ ಮೊಳಗುತ್ತಿರುವ ಶಾಶ್ವತವಾದ ಸತ್ಯ. ಅದು ಯಾವುದೋ ಒಂದು ಕಂಡೀಶನ್ನಲ್ಲಿ ಇದ್ದಾಗ ಮಾತ್ರ ನಮಗೆ ಗೋಚರಿಸಬಲ್ಲದು. ನಿತ್ಯಸತ್ಯವಾದ ವೇದದ ಮೂಲವಾದ ಪ್ರತಿಯೊಂದು ಕ್ರಿಯೆಗಳೂ ಅನವರತ ನಡೆಯಲೇಬೇಕಾಗಿವೆ. 'ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತಿ ಅಕರ್ಮಕೃತ್' ಎಂದು ಗೀತೆಯಲ್ಲಿ ಹೇಳುವಂತೆ ನಿಷ್ಕ್ರಿಯವಾದ ಯಾವ ಜಂತುವೂ ಇಲ್ಲ. ಇವುಗಳಲ್ಲಿ ನಡೆಯುತ್ತಿರುವ ಕ್ರಿಯೆಗಳೆಲ್ಲವೂ ಜ್ಞಾನಮೂಲವಾದುವುಗಳೇ ಅಲ್ಲವೇ!

ಮತ್ತು 'ಮೋಕ್ಷಮಂತ್ರಸ್ತ್ರಯ್ಯೈವಂ ವಿದೇತ್' ಜಾಬಾಲೋಪನಿಷತ್ತಿನಲ್ಲಿ ಪ್ರಣವವನ್ನು 'ತ್ರಯೀ' ಎನ್ನಲಾಗಿದೆ. ಅಕಾರ ಉಕಾರ ಮಕಾರಗಳೆಂಬ ವಿಭಾಗಿಸಲಾಗದ ಅಂತರ್ಗತವಾದ ಧ್ವನಿರೂಪವಾದುದು ಪ್ರಣವ. ಅದರ ಅನುಸಂಧಾನವು ಮೋಕ್ಷಕ್ಕೆ ಸಾಧನೀಭೂತವಾದುದು. ಅದೂ ಈ ನಿಸರ್ಗದಲ್ಲಿ ಸಹಜವಾಗಿ ನಿತ್ಯವಾಗಿ ಪ್ರತಿಧ್ವನಿತವಾಗುತ್ತಾ ಇರುತ್ತದೆ. ಇಂತಹ ಪ್ರಣವದಿಂದ ವಿಸ್ತಾರವಾದುದೇ ವೇದ. ಇದೇ ಧರ್ಮಸಾಧನ.

ಸೂಚನೆ : 08/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 57 ದ್ರುಪದನ ಕನಸು ನನಸಾಯಿತು (Vyaasa Vikshita - 57 Drupadana Kanasu Nanasayitu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in


ಪಾಂಡವರಿದ್ದ ಎಡೆಗೆ ಬಂದ ದ್ರುಪದನ ಪುರೋಹಿತನು ತನ್ನ ಮಾತನ್ನು ಮುಂದುವರಿಸುತ್ತಾ ಹೀಗೆ ಹೇಳಿದನು:

"ಕುರುವಂಶದಲ್ಲಿ ಜನಿಸಿದವನಿಗೆ (ಎಂದರೆ ಪಾಂಡುಪುತ್ರನಿಗೆ) ತನ್ನ ಮಗಳನ್ನು ಕೊಡಬೇಕು - ಎಂಬ ಬಯಕೆ ದ್ರುಪದರಾಜನಿಗೆ ಇದ್ದದ್ದೇ. ದ್ರುಪದರಾಜನ ಹೃದಯದಲ್ಲಿ ಸದಾ ಇದ್ದ ಆಸೆಯೇನು ಗೊತ್ತೇ? : ದುಂಡಾಗಿಯೂ ನೀಳವಾಗಿಯೂ ಇರುವ ಬಾಹುಗಳುಳ್ಳ ಅರ್ಜುನನು ನನ್ನೀ ಮಗಳನ್ನು ಧರ್ಮಮಾರ್ಗದಿಂದಲೇ ಮದುವೆಯಾಗಬೇಕು – ಎಂಬುದು; ನನ್ನ ಈ ಆಸೆಯು ಪೂರೈಸಿದಲ್ಲಿ ಇದು ನನ್ನ ಸುಕೃತ (ಸುಕೃತವೆಂದರೆ ಭಾಗ್ಯ); ಇದುವೇ ನನ್ನ ಪಾಲಿಗೆ ಯಶಸ್ಸು, ಪುಣ್ಯ, ಹಾಗೂ ಹಿತವಾದದ್ದು" – ಎಂಬುದಾಗಿ.

ಈ ರೀತಿಯಾಗಿ ವಿನಯದಿಂದ ನುಡಿದ ಪುರೋಹಿತನನ್ನು ಒಮ್ಮೆ ನೋಡಿದನು, ರಾಜ ಯುಧಿಷ್ಠಿರ. ಮತ್ತು ಬಳಿಯೇ ಇದ್ದ ಭೀಮಸೇನನಿಗೆ ಈ ರೀತಿಯಾಗಿ ಆಜ್ಞೆಯಿತ್ತನು: "ಭೀಮ, ಈತನು ದ್ರುಪದರಾಜನ ಪುರೋಹಿತ. ಈತನಿಗೆ ಪಾದ್ಯವನ್ನೂ ಅರ್ಘ್ಯವನ್ನೂ ಕೊಡು (ಕಾಲ್ತೊಳೆಯಲು ಕೊಡುವ ನೀರು ಪಾದ್ಯ. ಹಾಗೆಯೇ ಹಸ್ತ-ಶುದ್ಧಿಗಾಗಿ ಕೊಡುವ ನೀರು ಅರ್ಘ್ಯ). ಈತನಿಗೆ ಅಭ್ಯಧಿಕವಾದ (ಎಂದರೆ ತುಂಬಾ ಹೆಚ್ಚಿನದಾದ) ಗೌರವವನ್ನು ಸಲ್ಲಿಸತಕದ್ದು".

ಭೀಮನು ಅಂತೆಯೇ ಮಾಡಿದನು. ಆ ಗೌರವವನ್ನು ಹರ್ಷದಿಂದ ಸ್ವೀಕರಿಸಿದ ಪುರೋಹಿತನು ಸುಖಾಸೀನನಾದನು. ಆತನನ್ನು ಕುರಿತು ಯುಧಿಷ್ಠಿರನು ಹೀಗೆ ಹೇಳಿದನು:

" ತನ್ನ ಮಗಳನ್ನು ತನ್ನ ಮನಸ್ಸಿಗೆ ತೋರಿದಂತೆ ದ್ರುಪದರಾಜನು ಕೊಟ್ಟುಬಿಟ್ಟಿಲ್ಲ; ಬದಲಾಗಿ ಸ್ವಧರ್ಮಕ್ಕೆ ಅನುಸಾರವಾಗಿ (ಎಂದರೆ ಕ್ಷತ್ರಿಯಧರ್ಮಕ್ಕೆ ಅನುಗುಣವಾಗಿ) ಶುಲ್ಕವನ್ನು ನಿಗದಿಮಾಡಿದ್ದಾನೆ. ವೀರನಾದ ಅರ್ಜುನನೂ ಅಂತೆಯೇ ಅವಳನ್ನು ಪಡೆದಿದ್ದಾನೆ.

ದ್ರುಪದನು ವರ್ಣ-ಶೀಲ-ಕುಲ-ಗೋತ್ರಗಳನ್ನೇನೂ ನಿಗದಿಮಾಡಲಿಲ್ಲ. ಬಿಲ್ಲನ್ನು ಸಜ್ಜುಗೊಳಿಸಬೇಕು; ಲಕ್ಷ್ಯವನ್ನು ಭೇದಿಸಬೇಕು: ಅದನ್ನು ಸಾಧಿಸಿದವನಿಗೆ ನನ್ನ ಮಗಳನ್ನು ಕೊಡುವುದು - ಎಂದು ನಿಗದಿಮಾಡಿದ್ದನು.

ಅದಕ್ಕನುಗುಣವಾಗಿಯೇ ಈ ಮಹಾತ್ಮನಾದರೂ ರಾಜರುಗಳ ಸ್ತೋಮದಲ್ಲಿಯೇ ಕೃಷ್ಣೆಯನ್ನು ಗೆದ್ದಿರುವುದು. ಪರಿಸ್ಥಿತಿಯು ಹೀಗಿರಲು, ಸೋಮವಂಶದ ರಾಜನಾಗಿದ್ದುಕೊಂಡು, ಸುಖವನ್ನು ಕಳೆದುಹಾಕುವ ಸಂತಾಪವನ್ನು ದ್ರುಪದನು ಮಾಡಿಯಾನೇ? ಸರ್ವಥಾ ಇಲ್ಲ. ಆತನ ಬಯಕೆಯು ಏನಿತ್ತೋ ಅದೀಗ ಸಂಪನ್ನವಾಗುತ್ತಿದೆ. ಈ ರಾಜಕುಮಾರಿಯೂ ಉತ್ತಮಳೆಂದೇ ಅತ್ಯಂತ ಸ್ವೀಕಾರ್ಯಳೆಂದೇ ಭಾವಿಸುತ್ತೇನೆ, ಓ ಬ್ರಾಹ್ಮಣನೇ.

ಅಲ್ಪಬಲದವರಾರೂ ಆ ಬಿಲ್ಲಿಗೆ ಹೆದೆಯೇರಿಸಲು ಶಕ್ತರಾಗರು; ಅಸ್ತ್ರವಿದ್ಯೆಯಲ್ಲಿ ಶಿಕ್ಷಿತರಲ್ಲದವರೂ ಅಷ್ಟೇ; ಹಾಗೆಯೇ ನೀಚಕುಲೋತ್ಪನ್ನರಾರೂ ಹಾಗೆ ಲಕ್ಷ್ಯಪಾತನ (ಪಾತನವೆಂದರೆ ಬೀಳಿಸುವುದು)ದಲ್ಲಿ ಸಮರ್ಥರಾಗರು.

ಹೀಗಿರಲು ಪಾಂಚಾಲರಾಜನು ತನ್ನ ಮಗಳ ನಿಮಿತ್ತ ಶೋಕಿಸಲು ಇಲ್ಲೇನೂ ಇಲ್ಲ; ಮತ್ತಾವನೇ ಮನುಷ್ಯನೂ ಸಹ ಹಾಗೆ ಲಕ್ಷ್ಯವನ್ನು ಭೇದಿಸಲಾರ."

ಯುಧಿಷ್ಠಿರನು ಹೀಗೆ ಹೇಳುತ್ತಿರುವಷ್ಟರಲ್ಲಿಯೇ ಪಾಂಚಾಲರಾಜನ ಕಡೆಯಿಂದ ತ್ವರಿತವಾಗಿ ಮತ್ತೊಬ್ಬನು ಬಂದು ಹೀಗೆ ಹೇಳಿದನು:

"ಮಗಳ ವಿವಾಹದ ನಿಮಿತ್ತ ಸುಪರಿಷ್ಕೃತವಾದ ಭೋಜನವನ್ನು ದ್ರುಪದರಾಜನು ಸಿದ್ಧಪಡಿಸಿದ್ದಾನೆ. ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು ತಾವು ಅದಕ್ಕಾಗಿ ಬನ್ನಿ, ಕೃಷ್ಣೆಯನ್ನೂ ಕರೆತನ್ನಿ. ವಿಳಂಬ ಮಾಡಬೇಡಿ. ಇದೋ ಸುವರ್ಣಕಮಲಗಳಿಂದಲೂ ಒಳ್ಳೆಯ ಕುದುರೆಗಳಿಂದಲೂ ಕೂಡಿದ ರಥಗಳು ಬಂದಿವೆ, ರಾಜರಿಗೆ ಅರ್ಹವಾದಂತಹ ಅವನ್ನು ಹತ್ತಿ, ಪಾಂಚಾಲರಾಜನ ಅರಮನೆಗೆ ಸರ್ವರೂ ಸೇರಿ ಬನ್ನಿ" ಎಂದನು. 

ಸೂಚನೆ : 08/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆತ್ಮದೀಪ್ತಿಯ ಪ್ರಕಾಶದಿಂದ ಬೆಳಗಿದ ಸೀತಾಮಾತೆ (Atmadiptiya Prakasadinda Belagida Sitamate)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ಪಂಚಕನ್ಯೆಯರಲ್ಲಿ ಒಬ್ಬಳಾಗಿ ಪ್ರಾತ:ಸ್ಮರಣೀಯಳಾದ ಸೀತಾಮಾತೆಯ ಬಗ್ಗೆ ಅನುಸಂಧಾನ ಮಾಡೋಣ. ಮಹಾಕವಿ ಕಾಳಿದಾಸನು ರಘುವಂಶವೆಂಬ ಮಹಾಕಾವ್ಯವನ್ನು ರಚಿಸುವ ಮೊದಲು ವಿನಯದಿಂದ ಹೀಗೆ ಹೇಳುತ್ತಾನೆ, "ಮಹಾಸಮುದ್ರವನ್ನು ಒಂದು ಸಣ್ಣ ದೋಣಿಯಿಂದ ದಾಟಲು ಪ್ರಯತ್ನಿಸುತ್ತಿದ್ದೇನೆ. ಮಹಾಸಮುದ್ರವನ್ನು ದಾಟಲು ದೋಣಿಯು ಹೇಗೆ ಅಸಮರ್ಥವೋ ಹಾಗೆಯೇ ರಘುವಂಶದ ಚರಿತೆಯನ್ನು ಹೇಳುವ ಪ್ರಯತ್ನವೂ ನನ್ನ ಸಾಮರ್ಥ್ಯಕ್ಕೆ ಮೀರಿದ ವಿಷಯ. ಆದರೂ ಚಾಪಲ್ಯದಿಂದ ನನ್ನ ಪಾವಿತ್ರ್ಯಕ್ಕಾಗಿ ಹೇಳಲು ಹೊರಟಿದ್ದೇನೆ" ಎಂದು.

ಹಾಗೆಯೇ ಸೀತಾಮಾತೆಯ ಬಗ್ಗೆ ಹೇಳಲು ಪ್ರಯತ್ನಿಸುವುದೂ ಕೂಡ ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷಯ. ಅವಳು ಪರಮಪುರುಷನ ಶಕ್ತಿಸ್ವರೂಪಿಣಿಯಾಗಿದ್ದು, ಅವನ ಆಶಯಕ್ಕೆ ಅನುಗುಣವಾಗಿ ಸೃಷ್ಟಿಯನ್ನು ಬೆಳೆಸುವ ಪ್ರಕೃತಿಸ್ವರೂಪಿಣಿ. ಭಗವಂತನು ಲೋಕಕಲ್ಯಾಣಕ್ಕಾಗಿ ಶ್ರೀರಾಮನಾಗಿ ಅವತರಿಸಿದಾಗ ಭಗವತಿಯೂ ಕೂಡ ಅವನ ಸತ್ಯ ಸಂಕಲ್ಪಕ್ಕೆ ಸಹಕಾರಿಣಿಯಾಗಿದ್ದು ಭುವಿಗೆ ಇಳಿದು ಬಂದು ಸೀತೆಯಾಗಿ, ಸಮಸ್ತ ಸ್ತ್ರೀ ಸಂಕುಲಕ್ಕೆ ಮಾತ್ರವಲ್ಲದೇ ಮಾನವತೆಗೇ ಆದರ್ಶಪ್ರಾಯಳಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತಾಳೆ. 

ಅವಳ ಜೀವನ ಚಿಂತನೆಯೇ ನಮ್ಮ ಜೀವನವನ್ನು ಪಾವನವಾಗಿಸುತ್ತದೆ. ಮಿಥಿಲಾಧಿಪತಿಯಾದ ಜನಕಮಹಾರಾಜನು ಒಮ್ಮೆ ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಭೂಮಿಯನ್ನು ಬೇಧಿಸಿಕೊಂಡು ಬಂದ ಹೆಣ್ಣುಮಗುವನ್ನು ನೋಡಿ ವಿಸ್ಮಿತನಾಗುತ್ತಾನೆ. ವಾತ್ಸಲ್ಯಭರಿತನಾಗಿ ಆ ಮಗುವನ್ನು ಎತ್ತಿಕೊಂಡು ನನ್ನ ಮಗಳು ಎಂಬುದಾಗಿ ಉದ್ಘೋಷಿಸುತ್ತಾನೆ. ಅದೇ ಸಮಯದಲ್ಲಿ ಅವನ ಮಾತನ್ನೇ ಪುಷ್ಟೀಕರಿಸುವಂತಹ ಅಶರೀರವಾಣಿಯು ಮೊಳಗುತ್ತದೆ. ಸಾಕ್ಷಾತ್ ಮಹಾಲಕ್ಷ್ಮಿಯನ್ನೇ ಮಗಳಾಗಿ ಪಡೆದ ಕಾರಣ ಅವನ ರಾಜ್ಯವು ಸಕಲವಿಧವಾದ ಸಂಪತ್ತುಗಳಿಂದ ತುಂಬಿ ಶೋಭಿಸುತ್ತದೆ.

ಅನುಪಮ ಸ್ತ್ರೀರತ್ನಳಾದ, ದಿವ್ಯ ತೇಜಸ್ಸಿನಿಂದ ಬೆಳಗುತ್ತಿರುವ ಸೀತೆಗೆ ವಿವಾಹಕಾಲ ಸನ್ನಿಹಿತವಾಗುತ್ತದೆ. ಆಗ ಜನಕಮಹಾರಾಜನು ತನ್ನ ಮಗಳು ಮಹಾಪುರುಷನಿಂದ ಮಾತ್ರವೇ ವರಿಸಲ್ಪಡತಕ್ಕವಳು ಎಂಬುದನ್ನು ಅರಿತು ಅದಕ್ಕೆ ಅನುಗುಣವಾಗಿ ಸ್ವಯಂವರವನ್ನು ಯೋಜಿಸುತ್ತಾನೆ. ಅನೇಕ ರಾಜ ಮಹಾರಾಜರಿಂದ ಕಿಂಚಿತ್ತೂ ಅಲುಗಾಡಿಸಲು ಸಾಧ್ಯವಾಗದ ದೈವದತ್ತವಾದ ಶಿವಧನುಸ್ಸನ್ನು ಶ್ರೀರಾಮಚಂದ್ರನು ಲೀಲಾಜಾಲವಾಗಿ ಎತ್ತಿ ಭೇಧಿಸಿ ಸ್ವಯಂವರದಲ್ಲಿ ತನ್ನ ಆತ್ಮಶ್ರೀಯಾದಂತಹ ಸೀತೆಯನ್ನು ವರಿಸುತ್ತಾನೆ. ಲೋಕ ಮಂಗಳಕರವಾದ ಸೀತಾ - ರಾಮರ ಕಲ್ಯಾಣ ಸಂಪನ್ನವಾಗುತ್ತದೆ. ಸೀತೆಯು ತನ್ನ ಪತಿಯೊಂದಿಗೆ, ಪರಿಜನರೊಂದಿಗೆ ಅಯೋಧ್ಯೆಯಲ್ಲಿ ಸಂತೋಷದಿಂದ ಇರುತ್ತಾಳೆ. ಸಹಜವಾಗಿಯೇ ತನ್ನಲ್ಲಿ ನೆಲೆಯೂರಿರುವ ಉತ್ತಮ ಗುಣಗಳಿಂದ ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರಳಾಗಿರುತ್ತಾಳೆ. ಅಂತಹ ಸಮಯದಲ್ಲಿ ಊಹಿಸಲೂ ಸಾಧ್ಯವಾಗದಂತಹ ಅತ್ಯಂತ ಕ್ಲಿಷ್ಟಕರವಾದ ಸಂದರ್ಭವೊಂದು ಬರುತ್ತದೆ. ಪತಿಗೆ ಪಟ್ಟಾಭಿಷೇಕ, ತಾನು ಮಹಾರಾಣಿಯ ಸ್ಥಾನವನ್ನು ಅಲಂಕರಿಸಬೇಕು, ಎಂಬುದಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಪತಿಯು ರಾಜ್ಯವನ್ನು ತೊರೆದು ವನವಾಸಕ್ಕೆ ಹೊರಡಬೇಕಾಗುತ್ತದೆ. ಆಗ ಕಿಂಚಿತ್ತೂ ಮನಸ್ಸಿನ ಸ್ಥೈರ್ಯ ಕಳೆದುಕೊಳ್ಳದೇ ಶ್ರೀರಾಮನಿಗೆ ತಕ್ಕ ಪತ್ನಿಯಾಗಿ, ಪತಿಯ ಮಾರ್ಗವನ್ನೇ ಅನುಸರಿಸಿ ಹೊರಡುತ್ತಾಳೆ.

ಸುಕುಮಾರಿಯಾಗಿ ಅರಮನೆಯ ವಾಸದಲ್ಲಿದ್ದವಳು ವನವಾಸದ ಕ್ಲೇಶಗಳನ್ನೆಲ್ಲಾ ಸಹಿಸಿಕೊಳ್ಳುತ್ತಾಳೆ. ಪತಿಯ ಸೇವೆಯನ್ನು ಮಾಡುತ್ತಾ ಹಾಗೂ ತಮ್ಮ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿ ಬಂದಂತಹ ಲಕ್ಷ್ಮಣನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ವನವಾಸದಲ್ಲಿ ಸಂತೋಷವಾಗಿಯೇ ಕಾಲವನ್ನು ಕಳೆಯುತ್ತಾಳೆ. ಹಾಗಿರುವಾಗ ದುಷ್ಟ ರಾವಣನ ಆಗಮನವಾಗಿ ಅವನಿಂದ ಅಪಹರಿಸಲ್ಪಟ್ಟು ಲಂಕೆಯ ಅಶೋಕವನದಲ್ಲಿ ಪತಿ ವಿರಹದ ಶೋಕವನ್ನು, ರಾವಣನ ಕ್ರೌರ್ಯವನ್ನು ಅನುಕ್ಷಣವೂ ಅನುಭವಿಸುತ್ತಾ ಕಾಲ ಕಳೆಯಬೇಕಾದಂತಹ ಪ್ರಸಂಗ ಬರುತ್ತದೆ. ರಾವಣನು ಅವಳನ್ನು ಮೋಹಗೊಳಿಸಲು ಒಡ್ಡಿದ ಯಾವ ಪ್ರಲೋಭನೆಗಾಗಲೀ, ಬೆದರಿಸಲು ಮಾಡಿದ ಕುತಂತ್ರಗಳಿಗಾಗಲೀ, ಧೃತಿಗೆಡದೇ ಅನವರತವೂ ಪತಿಯನ್ನೇ ನೆನೆಯುತ್ತಾ ಅವನ ಆಗಮನದ ನಿರೀಕ್ಷೆಯಲ್ಲಿಯೇ ಪ್ರತಿಕ್ಷಣವನ್ನೂ ಕಳೆಯುತ್ತಿರುತ್ತಾಳೆ. ಕ್ಷಣಮಾತ್ರದಲ್ಲಿ ರಾವಣನನ್ನು ದಹಿಸುವಂತಹ ಪಾತಿವ್ರತ್ಯ,ತಪ:ಶಕ್ತಿ ಅವಳಲ್ಲಿ ಇದ್ದರೂ ಅದನ್ನು ತನ್ನಲ್ಲೇ ಅಡಗಿಸಿಟ್ಟುಕೊಂಡು, ರಾವಣ ಸಂಹಾರದ ಕೀರ್ತಿ ಪತಿಯಾದ ಶ್ರೀರಾಮನಿಗೇ ಸಲ್ಲಬೇಕು ಎಂಬ ಆಶಯದಿಂದ ಸಹನೆಯಿಂದ ಕಾಯುತ್ತಾಳೆ. ರಾವಣ ಸಂಹಾರದ ನಂತರ, ಸೀತೆ ಪರಮ ಪಾವನೆ ಎಂಬುದಾಗಿ ಶ್ರೀರಾಮನ ಅಂತರಾತ್ಮಕ್ಕೆ ತಿಳಿದಿದ್ದರೂ ಸಹ ಅವನು ಆದರ್ಶ ರಾಜನೂ ಆಗಿದ್ದರಿಂದ ,ಅವಳನ್ನು ಆ ಕ್ಷಣದಲ್ಲಿ ಅವನಿಂದ ಸ್ವೀಕರಿದೇ ಅವಳ ಪಾವಿತ್ರ್ಯದ ಪರೀಕ್ಷೆಯನ್ನು ನಿರೀಕ್ಷಿಸಬೇಕಾಗುತ್ತದೆ. ಪತಿಯ ಮನೋರಥವನ್ನು ಅರಿತ ಸೀತೆ ಲಕ್ಷ್ಮಣನಿಗೆ ಅಗ್ನಿಯನ್ನು ಸಿದ್ಧಪಡಿಸಲು ಹೇಳುತ್ತಾಳೆ. ಕಾಯಾ, ವಾಚಾ, ಮನಸಾ ಸದಾಕಾಲ ನಾನು ಧರ್ಮಜ್ಞನಾದ ನನ್ನ ಪತಿಯನ್ನೇ ಅನುಸರಿಸಿದ್ದಾದರೆ ನೀನು ನನ್ನನ್ನು ಕಾಪಾಡು ಎಂಬುದಾಗಿ ಅಗ್ನಿದೇವನನ್ನು ಪ್ರಾರ್ಥಿಸಿ ಅಗ್ನಿಯನ್ನು ಪ್ರವೇಶಿಸುತ್ತಾಳೆ. ಸೀತಾಮಾತೆಯ ಸಂಸರ್ಗದಿಂದ ಅಗ್ನಿದೇವನು ಇನ್ನಷ್ಟು ಪವಿತ್ರನಾಗುತ್ತಾನೆ. ಅವನು ಸಮಸ್ತ ದೇವತೆಗಳ ಹಾಗೂ ಅಲ್ಲಿ ನೆರೆದವರ ಸಮ್ಮುಖದಲ್ಲಿ ಸೀತೆಯನ್ನು ಪರಮ ಪಾವನೆ ಎಂದು ಘೋಷಿಸಿ ರಾಮನಿಗೆ ಒಪ್ಪಿಸುತ್ತಾನೆ.

ಆನಂತರ ಶ್ರೀರಾಮನ ಪಟ್ಟದ ರಾಣಿಯಾಗುತ್ತಾಳೆ. ಆದರೆ ಕಷ್ಟಗಳ ಪರಂಪರೆ ಮುಂದುವರೆಯುತ್ತಲೇ ಹೋಗುತ್ತದೆ. ಮೂಢಮತಿಯುಳ್ಳ ಅಯೋಧ್ಯೆಯ ಕೆಲ ಪ್ರಜೆಗಳ ಸಲುವಾಗಿ, ಅಯೋಧ್ಯೆಯ ರಾಜನಾಗಿ ರಾಮನು ಸೀತೆಯನ್ನು ಪರಿತ್ಯಾಗ ಮಾಡುವಂತಹ ಕಠೋರ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಮಹಾಮಾತೆಯ ಸಾನಿಧ್ಯದಲ್ಲಿ ಇರುವ ಸೌಭಾಗ್ಯ ವನ್ನು ಅಯೋಧ್ಯೆಯ ಪ್ರಜೆಗಳು ಕಳೆದುಕೊಳ್ಳುತ್ತಾರೆ. ಆದರೂ ವಾತ್ಸಲ್ಯಮಯಿಯಾದ ಸೀತೆ ಅವರ ಮೇಲೆ ಕ್ರೋಧ ದೃಷ್ಟಿಯನ್ನು ಬೀರುವುದಿಲ್ಲ, ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ, ಜಗನ್ಮಾತೆಯಲ್ಲವೇ ಅವಳು, ಅವಳ ಮಮತೆಗೆ ಎಣೆ ಎಲ್ಲಿದೆ? ವಾಲ್ಮೀಕಿಗಳ ಆಶ್ರಮದಲ್ಲಿ ಕುಶ ಲವರನ್ನು ಸಂಸ್ಕಾರದಿಂದ ಬೆಳೆಸಿ ಬ್ರಹ್ಮಜ್ಞಾನದ ಜೊತೆಗೆ ಕ್ಷಾತ್ರತೇಜಸ್ಸನ್ನು ತುಂಬಿ ಪತಿಗೆ ಒಪ್ಪಿಸಿ ತಾನು ಬಂದ ನೆಲೆಯನ್ನು ಸೇರಿಕೊಳ್ಳುತ್ತಾಳೆ. ಆದರ್ಶ ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ ಸದಾ ಆತ್ಮದೀಪ್ತಿಯ ಪ್ರಕಾಶದಿಂದ ಬೆಳಗಿದ ಸೀತಾಮಾತೆಯ ಸ್ಮರಣೆಯು ನಮ್ಮ ಪಾಪಗಳನ್ನು ದೂರಮಾಡಿ ಅತಿಶಯವಾದ ಪಾವನತ್ವವನ್ನು ಕೊಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.

ಸೂಚನೆ : 07/10/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.