Sunday, October 22, 2023

ಯಕ್ಷ ಪ್ರಶ್ನೆ 60 (Yaksha prashne 60)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 59 ಯಾವುದನ್ನು ಬಿಟ್ಟರೆ ಮನುಷ್ಯನು ಎಲ್ಲರಿಗೂ ಬೇಕಾದವನು ಆಗುತ್ತಾನೆ ?

ಉತ್ತರ - ಮಾನವನ್ನು ಬಿಟ್ಟರೆ.  

ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಂದಷ್ಟು ಮಿತ್ರರನ್ನು, ಇನ್ನು ಕೆಲವು ಶತ್ರುಗಳನ್ನು ಪಡೆದೇ ಇರುತ್ತಾನೆ. ಎಲ್ಲರಿಗೂ ಮಿತ್ರನಾಗುವುದು ಅಥವಾ ಎಲ್ಲರಿಗೂ ಶತ್ರುವಾಗುವುದು ಎಂಬುದು ಕಷ್ಟಸಾಧ್ಯವೇನೋ? ಯಾವುದೋ ಒಂದು ವಿಷಯವನ್ನು ಬಿಟ್ಟರೆ ಆತ ಎಲ್ಲರೂ ಇಷ್ಟಪಡುವ ವ್ಯಕ್ತಿಯಾಗುತ್ತಾನೆ ಎಂಬ ಯಕ್ಷನ ಪ್ರಶ್ನೆಗೆ ಇಲ್ಲಿ ಮಾನವೆಂಬ ಉತ್ತರವನ್ನು ಧರ್ಮರಾಜನು ನೀಡುತ್ತಾನೆ.. 

'ಮಾನ' ಎಂಬ ಪದಕ್ಕೆ ಅಳತೆ, ಅಹಂಕಾರ, ಮರ್ಯಾದೆ ಇತ್ಯಾದಿಯಾದ ಅರ್ಥಗಳನ್ನು ವಿಭಿನ್ನವಾದ ಸಂದರ್ಭಗಳನ್ನು ಮಾಡಬಹುದು. ಹಾಗಾದರೆ ಇಲ್ಲಿ ಯಾವ ಅರ್ಥದಲ್ಲಿ ಬಳಕೆಯಾಗಿದೆ? 'ಮಾನವೇ ಸತ್ಪುಷರ ಧನ' 'ಉತ್ತಮಾ ಮಾನಮ್ ಇಚ್ಚಂತಿ' 'ಮಾನಶ್ಚಿತ್ತಸಮುನ್ನತಿಃ' ಇತ್ಯಾದಿ ಸ್ಥಳಗಳಲ್ಲಿ ಮಾನವೆಂಬುದು ಉತ್ತಮಗುಣ. ನನಗೆ ಸರಿಯಾದವರೂ ಯಾರೂ ಇಲ್ಲ ಎಂಬ ಬುದ್ಧಿಯನ್ನೂ ಮಾನ ಎಂದು ಕರೆಯುತ್ತಾರೆ. ದ್ವೇಷಂ ದಂಭಂ ಚ ಮಾನಂ ಚ ಕ್ರೋಧಂ ತೈಕ್ಷ್ಣ್ಯಂ ಚ ವರ್ಜಯೇತ್' ಮುಂತಾದ ಸ್ಥಳಗಳಲ್ಲಿ ಹೇಳಿರುವ ಮಾನವೆಂಬ ಪದಕ್ಕೆ ಮಾನವನು ಬಿಡಲೇಬೇಕಾದ ದೋಷ ಎಂಬುದಾಗಿ ಗುರುತಿಸಿದ್ದಾರೆ. ಇಲ್ಲಿ ಯಕ್ಷನು ಯಾವ ಮಾನವನ್ನು ಬಿಡಬೇಕು ಎಂದಿದ್ದಾನೆ? ಎಂದರೆ ಗುಣವಾದದ್ದನ್ನು ಬಿಡುವುದಾಗಲಿ ದೋಷವನ್ನು ಇಟ್ಟುಕೊಳ್ಳುವುದು ಸರಿಯೇ? ಹಾಗಾಗಿ ತ್ಯಾಜ್ಯ ಎಂಬ ಅರ್ಥವನ್ನು ಕೊಡುವ ಮಾನ - ಅಹಂಕಾರ, ನನ್ನಂತವರು ಯಾರೂ ಇಲ್ಲ, ನಾನೇ ಎಲ್ಲರಿಗಿಂತಲೂ ಸರ್ವಶ್ರೇಷ್ಠ ಎಂದು ಭಾವಿಸುವ  ಅರ್ಥವನ್ನು ತೆಗೆದುಕೊಳ್ಳಬೇಕು. ಈ ವಿಶ್ವದಲ್ಲಿ ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ. ಸಮಯ ಸಂದರ್ಭಗಳಲ್ಲಿ ಎಲ್ಲದಕ್ಕೂ ಮಹತ್ತ್ವವನ್ನು ಕಾಣಬಹುದು. ಆದರೆ ಎಲ್ಲದಕ್ಕೂ ನಾನೇ ಕಾರಣ, ನಾನು ಇಲ್ಲದಿದ್ದರೆ ಯಾವುದೂ ನಡೆಯುವುದೇ ಇಲ್ಲ ಎಂಬ ಭಾವನೆ ಎಷ್ಟಕ್ಕೂ ಉತ್ತಮವಲ್ಲ. ಈ ಭಾವನೆ ಬಂದರೆ ಅವನಿಗೆ ಸಿಗುವ ಗೌರವಾದರಗಳು ಕಡಿಮೆಯಾಗುತ್ತ ಬರುತ್ತವೆ. ಅನೇಕ ಗುಣಗಳಿದ್ದರೂ, ಯಾವುದಾದರೂ ದುರಭಿಮಾನದಂತಹ ಒಂದು ಅವಗುಣವಿದ್ದರೆ ಸಾಕು ಆತ ಸಂಪೂರ್ಣ ವಿನಾಶವಾಗುತ್ತನೆ. ಇದಕ್ಕೆ ಪುರಾಣಗಳಲ್ಲಿ ಅನೇಕ ಕಥೆಗಳನ್ನು ನಾವು ಕಾಣಬಹುದು. ಚಂದ್ರನಿಗೆ ತನ್ನಷ್ಟು ಸುಂದರ ಯಾರೂ ಇಲ್ಲ ಎಂಬ ಅಹಂಕಾರ ಬರುತ್ತದೆ. ಗಣಪತಿಯ ವಿಚಿತ್ರವಾದ ಆಕಾರವನ್ನು ಕಂಡು ನಗುತ್ತಾನೆ. ಅನಂತರ ಗಣಪತಿಯಿಂದ ಶಾಪಗ್ರಸ್ತನಾಗುತ್ತಾನೆ. ಅಂತೆಯೇ ಅನೇಕ ಗುಣಗಳಿಂದ ಕೂಡಿದ್ದರೂ ದಾನವನ್ನು ಮಾಡುವುದರಲ್ಲಿ ನನಗೆ ಮೀರಿಸುವವರು  ಯಾರೂ ಇಲ್ಲ ಎಂಬ ಮಾನದಿಂದ ಬಲಿಚಕ್ರವರ್ತಿ ಬೀಗುತ್ತಾನೆ. ಆಗ ವಾಮನಾವತಾರಿಯಾಗಿ ಬಂದು ದಾನ ಮಾಡಲು ಸಾಧ್ಯವಿಲ್ಲದಷ್ಟು ಅವಕಾಶ ಕೆಲವೊಮ್ಮೆ ಬರಬಹುದು ಎಂಬುದನ್ನೂ ತೋರಿಸಿ ಆತನ ಅಹಂಕಾರವನ್ನು ಮುರಿದನು. ಮಾನವೆಂಬುದು ಮನುಷ್ಯನನ್ನು ದುರ್ಬಲಗೊಳಿಸುತ್ತದೆ. ಇಲ್ಲದಿರುವ ಅನೇಕ ಭಾವಗಳನ್ನು ತನ್ನಲ್ಲಿ ಆರೋಪಿಸಿಕೊಳ್ಳುತ್ತಾ ಆರೋಪಿಸಿಕೊಳ್ಳುತ್ತಾ ಸರ್ವರಿಂದಲೂ ಅನಾದರಕ್ಕೊಳಗಾಗುವ ಸಂದರ್ಭಗಳು ಬರುತ್ತವೆ. ಆದರೆ ಇಂತಹ ಮಾನವೆಂಬುದು ಇಲ್ಲವಾದರೆ ಆತ ತನ್ನ ಸಹಜತೆಯನ್ನು ಕಾಣುತ್ತಾ ಹೋಗುತ್ತಾನೆ. ಮನುಷ್ಯ ತನ್ನ ಸಹಜತೆಯನ್ನು ತಾನೇ ಉಳಿಸಿಕೊಳ್ಳಬೇಕಾದುದು!

ಸೂಚನೆ : 22/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.