Monday, August 28, 2023

ಅಷ್ಟಾಕ್ಷರೀ​ - 42 ಆಪ್ತಾಃ ಶಿಷ್ಟಾಃ ವಿಬುದ್ಧಾಸ್ತೇ (Astakshara Darshana 42 Aptah Shishtah Vibuddhaste)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) 



ಯೌವನವು ಯಾರಿಗೆ ಬೇಡ? ಯಯಾತಿಯಿಂದ ಆರಂಭಿಸಿ ಎಲ್ಲರಿಗೂ ಬೇಕಾದದ್ದೇ ಅದು. ಯೌವನವೆಂದರೆ ಉಕ್ಕುವ ಶಕ್ತಿ, ಉಕ್ಕುವ ಉತ್ಸಾಹಗಳು. ದೊಡ್ಡಸಾಧನೆಗಳಿಗೆ ಅದುವೇ ಸರಿಯಾದ ಕಾಲ. ಬಲ-ಉತ್ಸಾಹಗಳಿದ್ದಲ್ಲಿ ಯಾವುದು ತಾನೆ ಅಸಾಧ್ಯ? ಉತ್ಸಾಹಿಗಳಿದ್ದಲ್ಲಿ ನಿರುತ್ಸಾಹಿಗಳಿಗೂ ಒಂದಿಷ್ಟು ಉತ್ಸಾಹ ಅಂಟುವುದೇ!

 ಉತ್ಸಾಹವೇನೋ ತುಂಬ ಉಂಟು, ಆದರೆ ಹೆಚ್ಚು ಶಕ್ತಿಯಿಲ್ಲ– ಎಂದಲ್ಲಿ ಹೆಚ್ಚಿನ ಸಾಧನೆಯಾಗುವ ನಿರೀಕ್ಷೆಯಿಲ್ಲ. ಬದಲಾಗಿ ಬಲವು ಬೇಕಾದಷ್ಟಿದ್ದೂ ಉತ್ಸಾಹವೇ ಇಲ್ಲದಿದ್ದಲ್ಲಿ ಆಗಲೂ ಏನು ತಾನೆ ಸಾಧನೆಯಾದೀತು? ಕುಂಭಕರ್ಣನಿಗೇನು ಕಡಿಮೆ ಬಲವಿತ್ತೇ? ಆದರೆ ಸದಾ ನಿದ್ರಾಳು! ಹಾಗಿದ್ದರೇನು ಬಂತು? ಅತಿನಿದ್ರೆಯೆಂಬುದು ತಮಸ್ಸಿನ ಪ್ರಭಾವ. ಮಹಾಶಕ್ತಿಶಾಲಿಯಾಗಿದ್ದೂ ತಮೋಮಯನಾಗಿದ್ದರೆ ಸಾಧನೆಯು ಸೊನ್ನೆಯೇ.

ಆದರೆ ರಾವಣನ ನಡೆ ಇದಕ್ಕೆ ವಿರುದ್ಧವಾದದ್ದು: ಅದೆಂತೆಂತಹ ಸಾಧನೆಗಳನ್ನು ಮಾಡಿಬಿಟ್ಟ ಅವನು! ವೇದಾಧ್ಯಯನಸಂಪನ್ನ ಹಾಗೂ ಶಿವಭಕ್ತ, ಆತ. ಕೈಲಾಸವನ್ನೇ ಅಲ್ಲಾಡಿಸಿದ! ಅಲ್ಲೇ ನಂದಿಯನ್ನೇ ಕೆಣಕಿದ! ಉಗ್ರತಪಸ್ಸನ್ನು ಮಾಡಿ, ದೇವ-ಗಂಧರ್ವ-ದಾನವರಾರಿಂದಲೂ ಮರಣ ಬರದಂತಹ ವರ ಪಡೆದ. ಇಷ್ಟು ಬಲಶಾಲಿ ಕೊನೆಗೆ ಮಾಡಿದುದೇನು? ವೇದವತಿಯನ್ನು ಬಲಾತ್ಕರಿಸಿದ, ರಂಭೆಯ ಮೇಲೂ  ಬಲಪ್ರಯೋಗ ಮಾಡಿದ! ತಾನು ಕೆಣಕಿದ ನಂದಿ-ರಂಭೆ-ವೇದವತಿಯರಿಂದ ಹಿಡಿಶಾಪಗಳನ್ನು ಪಡೆದ! ಹತ್ತು ತಲೆಗಳಿದ್ದರೇನು? ಒಂದನ್ನೂ ಉಪಯೋಗಿಸದೆ ಸ್ವನಾಶಕ್ಕೆ ದಾರಿಮಾಡಿಕೊಂಡ. ತನ್ನ ಅದಮ್ಯದರ್ಪ-ಪಾರುಷ್ಯಗಳ ಕಹಿಫಲವನ್ನನುಭವಿಸಿದ. ಇವೆಲ್ಲಾ ರಜೋಗುಣಭರಿತರ ಲಕ್ಷಣಗಳೇ.

ಅಲ್ಲಿಗೆ, ಬರೀ ಬಲದಿಂದಲೂ ಪ್ರಯೋಜನವಿಲ್ಲ; ಬರೀ ಉತ್ಸಾಹದಿಂದಲೂ ಅಷ್ಟೆ; ಬಲೋತ್ಸಾಹಗಳೆರಡೂ ಇದ್ದರೂ ಅರಿವು ಬೇಕು: ಜೀವನದಲ್ಲಿ ಸಾಗಬೇಕಾದ ದಿಕ್ಕು ಯಾವುದು? – ಎಂಬುದರರಿವು; ಸಾಧಿಸಬೇಕಾದ ಜೀವನಲಕ್ಷ್ಯವೇನು? - ಎಂಬುದರರಿವು.

ಜೀವನದ ಲಕ್ಷ್ಯ, ಅದಕ್ಕೆ ಸುಮಾರ್ಗ - ಎಂಬಿವನ್ನು ತಿಳಿಸುವ ಪುಸ್ತಕಗಳು ಹಲವಿರಬಹುದು. ಆದರೆ ನಮಗೇನೋ ಸಮಸ್ಯೆ ಬಂದಾಗ ಅವು ಸಾಲದಾಗುವುವು; ಆಗ ನಾವು ಮೊರೆಹೋಗುವುದು ಆಪ್ತೇಷ್ಟರಲ್ಲಿಗೆ. ಆಪ್ತರ ಸಲಹೆ ಉಪಕಾರಕ. "ಇವರು ನಮಗೆ ತುಂಬ ಆಪ್ತರು" ಎಂದು ಯಾರ ಬಗ್ಗೆಯಾದರೂ ಹೇಳಿದರೆ, ಅವರು ನಮಗೆ ಒಳ್ಳೆಯದಾಗುವುದನ್ನೇ ಹೇಳುವರು - ಎಂಬ ಎಣಿಕೆಯಿರುವುದಲ್ಲವೇ?

ನಮಗೆ ಹತ್ತಿರವಾದ ಬಂಧುಗಳನ್ನೋ ಮಿತ್ರರನ್ನೋ ಆಪ್ತರೆನ್ನುವುದುಂಟು. ವಾಸ್ತವವಾಗಿ ಆ ನಿಕಟತೆಯೆಂಬುದಷ್ಟೇ ಸಹ ಸಾಲದೆ ಹೋಗುವುದು. ಹಿತೈಷಿಗಳೆನಿಸಲು ಬೇರೊಂದಂಶವೂ ಬೇಕು. ಏನದು? ಅರಿವು: ಸಮಸ್ಯೆಯ ಹಾಗೂ ಪರಿಹಾರದ ಸ್ಪಷ್ಟ ಅರಿವು. ಅರಿವನ್ನೇ ಬೋಧವೆನ್ನುವರು; ಈ ಬೋಧದ ಜೊತೆಗೆ  ಜಾಗರೂಕತೆಯೂ ಇರುವ ಪ್ರೌಢತೆಯುಳ್ಳವರನ್ನೇ ಪ್ರಬುದ್ಧರೆನ್ನುವುದು. ವಿಬುದ್ಧರೆಂದರೂ ಅದೇ. ಆಪ್ತರು ವಿಬುದ್ಧರಾಗಿರಬೇಕು.

ಒಂದರ್ಥದಲ್ಲಿ ಇದೂ ಸಹ ಸಾಲದೇ! ಏಕೆ? ಅರಿತದ್ದನ್ನು ತಮ್ಮ ಜೀವನದಲ್ಲೇ ಅವರು ನಡೆದು ತೋರಿಸಿದ್ದಾರೋ? - ಎಂಬ ಪ್ರಶ್ನೆಯೂ ತಲೆದೋರುವುದೇ – ಯಾರಾದರೂ ಉದ್ದ ಉಪದೇಶ ಕೊಟ್ಟಾಗ. ಯಾರು ಒಂದು ಒಳ್ಳೆಯ ಶಿಸ್ತಿಗೆ ಒಳಪಟ್ಟಿರುವುದಿಲ್ಲವೋ ಅಂತಹವರು ದೊಡ್ಡ ಸಾಧನೆಯನ್ನೇನೂ ಮಾಡಿರ(ಲಾರ)ರು. ಶಿಸ್ತಿಗೇ  (ಅನು)ಶಾಸನವೆಂದೂ ಹೇಳುವುದುಂಟು. ಶಾಸನಕ್ಕೊಳಪಟ್ಟವರೇ ಶಿಷ್ಟರೆನಿಸಿಕೊಳ್ಳುವುದು. ಹೀಗಾಗಿ ಯುಕ್ತವಾದ ಅರಿವು, ತಕ್ಕುದಾದ ಶಿಸ್ತು - ಇವುಗಳ ಬಲವೂ ಉಳ್ಳವರಾದಲ್ಲಿ, ಅಂತಹ ಆಪ್ತರ ಮಾತಿಗೇ ಬೆಲೆ: "ಆಪ್ತರ ವಾಕ್ಯವು ಪ್ರಮಾಣ" – ಎಂದುಕೊಳ್ಳುವುದು ಹೀಗಾದಾಗಲೇ ಹೊಂದಿಕೊಳ್ಳುವುದು.

ಜೀವನದಲ್ಲಿ ಯಾರ ಮಾರ್ಗದರ್ಶನವು ಯುಕ್ತ? - ಎಂಬ ಪ್ರಶ್ನೆಗೆ ಆರ್ಯುರ್ವೇದವು ಕೊಡುವ ಸೂಚನೆಯೊಂದಿದೆ. "ಆಪ್ತರ ಮಾತಿನಂತೆ ನಡೆಯಿರಿ" - ಎಂದು. ಯಾರು ಆಪ್ತರು? - ಎಂಬುದಕ್ಕೆ ಚರಕಸಂಹಿತೆಯೇ ಹೇಳುವ ಲಕ್ಷಣವನ್ನು ಶ್ರೀರಂಗಮಹಾಗುರುಗಳು ಉದ್ಧರಿಸುತ್ತಿದ್ದರು - "ಆಪ್ತಾಃ ಶಿಷ್ಟಾಃ ವಿಬುದ್ಧಾಸ್ತೇ".  ಶಿಷ್ಟರೂ ವಿಬುದ್ಧರೂ ಆಗಿರುವವರು ಆಪ್ತರು. 

ಅಷ್ಟೇ ಅಲ್ಲ. 'ಆಪ್ತ'ರೆಂಬುದಕ್ಕೆ "ಪಡೆದಿರುವವರು" ಎಂಬುದೇ  ಮುಖ್ಯಾರ್ಥ. ಏನನ್ನು ಪಡೆದಿರುವವರು? "ತಪಸ್ಸಿನಿಂದ ಯಾರು ಅಮಲಜ್ಞಾನವನ್ನು ಪಡೆದಿರುವರೋ ಅವರೇ ಆಪ್ತರು" - ಎಂಬುದು ಶ್ರೀರಂಗಮಹಾಗುರುಗಳ ಸೂತ್ರ. ಅಂತಹ ಜ್ಞಾನವನ್ನು ಯಾರು ಪಡೆಯಲು ಸಾಧ್ಯ? ವಾಸ್ತವವಾಗಿ, ಯಾರು ರಜೋಗುಣ-ತಮೋಗುಣಗಳನ್ನು ಮೀರಿರುವರೋ ಅವರೇ; ಸತ್ಯವನ್ನು ಹೇಳಬಲ್ಲವರೂ ಅವರೇ – ಎಂಬ ಮಾತನ್ನೂ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. 

ಹೀಗಾಗಿ, ಆತ್ಮಜ್ಞಾನಿಗಳೇ ನಿಜವಾದ ಆಪ್ತರು. ಆತ್ಮಜ್ಞರ ಮಾರ್ಗದರ್ಶನವಿದ್ದಲ್ಲಿ ಯಾರ ಜೀವನ ಉನ್ನತಿ ಪಡೆಯದು?.

ಸೂಚನೆ: 27/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 



ಯಕ್ಷ ಪ್ರಶ್ನೆ 52 (Yaksha prashne 52)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)  



ಪ್ರಶ್ನೆ – 51 ಮನುಷ್ಯನ ಮುಖ್ಯ ಕರ್ತವ್ಯವೇನು  ?

ಉತ್ತರ - ದಾನ

ಮಾಡಲೇ ಬೇಕು. ಮಾಡದಿದ್ದರೆ ಆಗದು ಎಂಬುದಕ್ಕೆ ಕರ್ತವ್ಯ ಎಂದು ಕರೆಯುತ್ತಾರೆ. ಮನುಷ್ಯನು ಮಾಡಲೇಬೇಕು, ಮಾಡದಿದ್ದರೆ ಆಗುವುದಿಲ್ಲ ಎಂಬ ಅದಾವ ವಿಚಾರವುಂಟು? ಎಂದು ಯಕ್ಷನು ಕೇಳುತ್ತಾನೆ. ಅದಕ್ಕೆ ಧರ್ಮರಾಜನು 'ದಾನ' ಎಂಬ ಉತ್ತರವನ್ನು ಕೊಡುತ್ತಾನೆ. ಹಾಗಾದರೆ ದಾನ ಹೇಗೆ ಅಂತಹ ಕರ್ತವ್ಯದ ವಿಚಾರವಾಗಿದೆ. ಇದನ್ನು ಮಾಡದಿದ್ದರೆ ಮನುಷ್ಯನ ಜೀವನವು ನಡೆಯುವುದೇ ಇಲ್ಲವೇ?

ಕೊಟ್ಟು ಬದುಕೇ ಹೊರತು ಇಟ್ಟಲ್ಲ. "ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ" ಎಂಬ ದಾಸರ ವಾಣಿಯನ್ನು ನೋಡಬಹುದು. ಸೃಷ್ಟಿಯಲ್ಲಿ ಎಲ್ಲು ನೋಡಿದರು ಕೊಡುವುದು ಕಂಡುಬರುತ್ತದೆಯೇ ಹೊರತು ಇಟ್ಟಿಕೊಂಡಿದ್ದು ಕಂಡುಬರುವುದಿಲ್ಲ. ಕೊಟ್ಟಾಗ ಬರುತ್ತದೆ. ಇಟ್ಟಾಗ ಕೆಟ್ಟುಹೋಗುತ್ತದೆ. ಹರಿಯುವ ನೀರು ಶುದ್ಧವಾಗಿರುತ್ತದೆ. ಅಲ್ಲಿ ನದಿಯು ಪರೋಪಕ್ಕಾರಕ್ಕಾಗಿ ಹರಿಯುತ್ತದೆ. ಒಂದು ವೇಳೆ ಹರಿಯದಿದ್ದರೆ ನದಿಯ ನೀರು ಕಲ್ಮಷವಾಗಿ ಪಾಚಿಕಟ್ಟಿ ಯಾರಿಗೂ ಉಪಯೋಗವಿಲ್ಲದಂತಾಗುತ್ತದೆ. ಹಸು ಪ್ರತಿದಿನ ಹಾಲನ್ನು ಕೊಡುತ್ತದೆ. ಹಾಲನ್ನು ಕೊಡುವುದಿಲ್ಲವೆಂದು ಹಟಮಾಡಿದರೆ ಕೆಚ್ಚಲಬಾವು ಉಂಟಾಗಬಹುದು. ಕೊಡುವುದರಲ್ಲಿ ಇರುವ ಸುಖ, ಇಟ್ಟುಕೊಳ್ಳುವುದರಲ್ಲಿ ಇಲ್ಲ ಎಂಬುದನ್ನು ನಿಸರ್ಗ ನಮಗೆ ಪಾಠವನ್ನು ಮಾಡುತ್ತದೆ. ಮನುಷ್ಯನು ಮಾತ್ರ ಇದನ್ನು ಮರೆತಂತೆ ಕಾಣುತ್ತದೆ. ಅದನ್ನು ಎಚ್ಚರಿಸಲು ಯಕ್ಷನು ಈ ಪ್ರಶ್ನೆಯನ್ನು ಕೇಳುತ್ತಾನೆ. 

ಮನುಷ್ಯನು ದಾನವನ್ನು ಮಾಡಲೇಬೇಕು. ದಾನವನ್ನು ಮಾಡುವುದು ಅವನ ಕರ್ತವ್ಯ. ಅಂದರೆ ಮಾಡದಿದ್ದರೆ ಸಾಧ್ಯವೇ ಇಲ್ಲ ಎಂಬುದು ಇದರ ಅರ್ಥ. ಮಾಡಲೇಬೇಕಾದುದು ಕರ್ತವ್ಯವಾಗುತ್ತದಷ್ಟೆ. ವಿಕಲ್ಪವಾದದ್ದು ಕರ್ತವ್ಯಕ್ಕೆ ಸೇರುವುದಿಲ್ಲವಷ್ಟೇ. ಅಂದರೆ ಮಾನವನಿಗೆ ದಾನ ಮಾಡದಿದ್ದರೆ ಗತಿಯೇ ಇಲ್ಲ. ದಾನವು ಆತನನ್ನು ಶುದ್ಧಗೊಳಿಸುತ್ತದೆ. ಶುದ್ಧಿಯು ತಾನೆ ಸಹಜತೆ, ವಿಶುದ್ಧಿಯು ವಿಕಾರ. ಆದ್ದರಿಂದ ಶುದ್ಧಿಯನ್ನು ಉಂಟುಮಾಡುವ ಸಾಧನಗಳಲ್ಲಿ ಅತಿಮುಖ್ಯವಾದುದು ದಾನವಾಗಿದೆ. ದಾನವು ಹೇಗಿರಬೇಕು? ಯಾವ ದಾನ ಶ್ರೇಷ್ಠವಾದುದು?  ಎಂಬುದಕ್ಕೆ ಶ್ರೀರಂಗಮಹಾಗುರುಗಳು ಈ ಮಾತನ್ನು ಹೇಳುತ್ತಿದ್ದರು "ಭೂತದಯೆ ಪಶ್ಚಾತ್ತಾಪಗಳಿಂದ ಯಾರಿಗೆ ಬೇಕಾದರೂ ದಾನ ಮಾಡಬಹುದು. ಅದು ಸರಿ. ಆದರೆ ಬ್ರಹ್ಮಾರ್ಪಿತವಾಗಬೇಕಾದರೆ ಜ್ಞಾನಿಗೇ ಕೊಡಬೇಕು. ಮೊದಲನೆಯದಕ್ಕೆ ಒಂದು ರೂಪಾಯಿ ಕೊಡಬಹುದು. ಆದರೆ ಭಗವಂತನು ಅಪೇಕ್ಷಿಸುವುದು ಮನೋಧರ್ಮವನ್ನು" ಎಂದು. ಎಲ್ಲದಕ್ಕಿಂತ ಮನೋಧರ್ಮ ಬೇಳೆಯಬೇಕಾದುದು ಮುಖ್ಯ. ದಾನವು ಅದನ್ನು ಬೆಳೆಸುತ್ತದೆ. ಆದ್ದರಿಂದ ಉಳಿದ ಪ್ರಾಣಿಗಳಿಗಿಂತ ಮನುಷ್ಯನಿಗೆ ದಾನವನ್ನು ಕರ್ತವ್ಯ ಎಂಬುದಾಗಿ ಹೇಳಲಾಗಿದೆ.   

ಎಂತಹ ದಾನ ಇಂತಹ ಮನೋಧರ್ಮವನ್ನು ಬೆಳೆಸಲು ಸಾಧ್ಯ? ದಾನಗಳಲ್ಲಿ ಸಾತ್ತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಬಗೆಯ ದಾನಗಳಿವೆ. ಇಲ್ಲಿ ಮೂರೂ ಬಗೆಯ ದಾನಗಳಲ್ಲೂ ಕೊಡುವುದುಂಟು. ಕೊಟ್ಟಿದ್ದೆಲ್ಲಾ ದಾನವಾಗುವುದಿಲ್ಲ. ದಾನದ ಹಿಂದಿರುವ ಉದ್ದೇಶ ಅತ್ಯಂತ ಪ್ರಧಾನ. ಉದ್ದೇಶ ಒಳ್ಳೆಯದಾಗಿದ್ದರೆ ಮಾತ್ರ ಆ ದಾನ ಸಾತ್ತ್ವಿಕದಾನವಾಗುತ್ತದೆ. ಫಲಾಪೇಕ್ಷೆಯಿಲ್ಲದೇ ಕೇವಲ ಕರ್ತವ್ಯಬುದ್ಧಿಯಿಂದ ದಾನವನ್ನು ಮಾಡಬೇಕು. ಕೀರ್ತಿಕಾಮನೆ ಅಥವಾ ಇನ್ನಾವುದೋ ಅಪೇಕ್ಷೆ ಆ ದಾನದ ಹಿಂದೆ ಇರಬಾರದು. ಅಂತಹ ದಾನವನ್ನು ನಿಸರ್ಗ ನಮಗೆ ಕಲಿಸಿದೆ. ಇಂತಹ ದಾನದಿಂದ ಮಾತ್ರವೇ ಸನ್ಮಮೋಧರ್ಮ ಬೆಳೆಯಲು ಸಾಧ್ಯ. ಇಂತಹ ದಾನ ಮಾತ್ರ ಭಗವದರ್ಪಿತವಾಗಲು ಸಾಧ್ಯ.

ಸೂಚನೆ : 27/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 52 ಕುಂತಿಯ ಚಿಂತೆ (Vyaasa Vikshita - 52 Kuntiya Chinte)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಯುದ್ಧದಲ್ಲಿ ವೈಶಾರದ್ಯವನ್ನು (ಎಂದರೆ ಪ್ರಾವೀಣ್ಯವನ್ನು) ಹೊಂದಿದ್ದ ಆ ರಾಜರುಗಳು ಯುದ್ಧದಿಂದ ವಿನಿವೃತ್ತರಾದರು (ಎಂದರೆ ಹಿಂದಿರುಗಿದರು); ವಿಸ್ಮಯಗೊಂಡಿದ್ದ ಆ ರಾಜರು ಇನ್ನು ತಮ್ಮ ತಮ್ಮ ಡೇರೆಗಳತ್ತ ಹೊರಡಲು ಅನುವಾದರು.

"ಈ ರಂಗಮಂಚದಲ್ಲಿ ಬ್ರಾಹ್ಮಣರೇ ಶ್ರೇಷ್ಠರೆಂಬುದು ಸಾಬೀತಾಯಿತು! ಪಾಂಚಾಲಿಯು ಬ್ರಾಹ್ಮಣರನ್ನು ವರಿಸಿದಳು!" - ಹೀಗೆಂಬುದಾಗಿ ಹೇಳುತ್ತಾ, ಅಲ್ಲಿಗೆ ಬಂದಿದ್ದವರು ತಮ್ಮ ತಮ್ಮ ಮನೆಗಳತ್ತ ತೆರಳಿದರು. ರುರುಮೃಗದ ಅಜಿನದಿಂದ (ಅಜಿನ ಎಂದರೆ ಚರ್ಮ) ಆವೃತರಾಗಿದ್ದ ಆ ಬ್ರಾಹ್ಮಣರು ಭೀಮಾರ್ಜುನರನ್ನು ಸುತ್ತುಗಟ್ಟಿದರು.

ಜನಸಂಮರ್ದದಿಂದ (ಸಂಮರ್ದವೆಂದರೆ ಭಾರೀ ಗುಂಪು) ಆಚೆ ಬಂದರು, ಭೀಮಾರ್ಜುನರು; ಶತ್ರುಗಳೆಲ್ಲರೂ ಇವರನ್ನೇ ದಿಟ್ಟಿಸಿ ನೋಡುತ್ತಿದ್ದರು. ದ್ರೌಪದಿಯೂ ಅವರನ್ನೇ ಅನುಸರಿಸಿ ಬಂದಿದ್ದಳಾಗಿ ಆ ನರವೀರರಿಬ್ಬರು ಅತಿಶಯವಾಗಿ ವಿರಾಜಿಸಿದರು. ಹುಣ್ಣಿಮೆಯಂದು ಮೋಡಗಳಿಂದ ಬಿಡಿಸಿಕೊಂಡು ಬಂದಿರುವ ಚಂದ್ರ-ಸೂರ್ಯರ ಹಾಗೆ ಅವರು ಕಾಣಿಸುತ್ತಿದರು.

ಆದರೆ ಇತ್ತ, ತನ್ನ ಮಕ್ಕಳಿಗೆ ಅದೇನೋ ಆಪತ್ತು ಬಂದಿರಬೇಕೆಂದು ತಾಯಿ ಕುಂತಿಗೆ ಚಿಂತೆಯು ಮೂಡಿತು: "ಭಿಕ್ಷಾಕಾಲವು ಮೀರುತ್ತಿದೆ. ನನ್ನ ಮಕ್ಕಳು ಇನ್ನೂ ಬರಲಿಲ್ಲ. ಧೃತರಾಷ್ಟ್ರನ ಪುತ್ರರಿಂದ ಇವರುಗಳು ಹತರಾಗಿಲ್ಲವಷ್ಟೆ! ಅಥವಾ ಮಾಯಾಮಯರೂ ಸುಘೋರರೂ ದೃಢವೈರಿಗಳೂ ಆದ ರಾಕ್ಷಸರಿಂದ ಸಾವುಂಟಾಗಿಲ್ಲವಷ್ಟೆ? ಆಹಾ! ಮಹಾತ್ಮರಾದ ವ್ಯಾಸರ ಆಶಂಸೆಯೂ ವಿರುದ್ಧವಾಗಿಹೋಯಿತೇ?" ಎಂದು ವ್ಯಾಕುಲಳಾದಳು.

ಹೀಗೆ ಶಂಕೆಯು ಮನಸನ್ನಾವರಿಸಲು ಸುತಸ್ನೇಹದಿಂದ (ಎಂದರೆ ಮಕ್ಕಳ ಮೇಲಣ ಪ್ರೀತಿಯಿಂದ) ಚಿಂತೆಗೀಡಾದ ಕುಂತಿಯು ಹೀಗೆಲ್ಲಾ ಯೋಚಿಸಿದಳು.

ಮೋಡಗಳಿಂದ ಆಕಾಶವು ಕಿಕ್ಕಿರಿದಿದ್ದ ದುರ್ದಿನದ ಮಹತ್ತಾದ ಅಪರಾಹ್ಣದಲ್ಲಿ, ಜನಗಳು ಇದೇನು ನಿದ್ರಿಸಿರುವರೋ ಎಂಬಂತಿರುವುದಲ್ಲವೇ? ಮೋಡಗಳಿಂದ ಸುತ್ತುವರಿಯಲ್ಪಟ್ಟ ಸೂರ್ಯನು ಹೇಗೋ ಹಾಗೆ, ಬ್ರಾಹ್ಮಣರಿಂದ ಸುತ್ತುವರಿಯಲ್ಪಟ್ಟ ಜಿಷ್ಣುವು (ಅರ್ಜುನನು) ಆ ಕುಂಬಾರನ ಮನೆಗೆ ಅಪರಾಹ್ಣದಲ್ಲಿ ಪ್ರವೇಶಮಾಡಿದನು. ಅರ್ಜುನನೊಂದಿಗೆ ಭೀಮನೂ ಪ್ರವೇಶಿಸಿದನಷ್ಟೆ.

ಅತ್ಯಂತ ಸಂತೋಷದಿಂದ ಕೂಡಿದ್ದ ಅವರಿಬ್ಬರು ದ್ರೌಪದಿಯನ್ನು ಪಡೆದಿರುವುದನ್ನು (ಸೂಚಿಸಲು) "ಭಿಕ್ಷೆಯನ್ನು ತಂದಿದ್ದೇವೆ" - ಎಂಬುದಾಗಿ ತಿಳಿಸಿದರು. ಕುಂತಿಯಾದರೂ ಕುಟಿಯ ಒಳಗಿದ್ದಳು; ಆ ಮಕ್ಕಳಿಬ್ಬರನ್ನು ಗಮನಿಸಲಿಲ್ಲ. "ಎಲ್ಲರೂ ಸೇರಿ ಹಂಚಿಕೊಂಡು ತಿನ್ನಿರಿ, ಭಿಕ್ಷೆಯನ್ನು" (ಸಮೇತ್ಯ ಸರ್ವೇ ಭುಂಕ್ತ) ಎಂದಳು.

ಆಮೇಲೆ ಅಲ್ಲಿಗೇ ಬಂದ ಕುಂತಿಯು ಕೃಷ್ಣೆಯನ್ನು ಕಂಡಳು. "ನಾನದೆಂತಹ ಮಾತನ್ನಾಡಿಬಿಟ್ಟೆ!" ಎಂದುಕೊಂಡಳು. ಅದು ಹಾಗೇ ಘಟಿಸಿದರೆ ಅಧರ್ಮವಾದೀತೋ ಏನೋ ಎಂಬ ಭೀತಿಯು ಮನಸ್ಸಿನಲ್ಲಿ ಬಂದಿತು; ಆಕೆ ಚಿಂತಾಕುಲಳಾದಳು. ಆದರೆ ದ್ರೌಪದಿಯು ಅತ್ಯಂತ ಸಂತುಷ್ಟಳಾಗಿದ್ದಳು: ಎಷ್ಟಾದರೂ ತನಗಿಷ್ಟನಾದ ಪತಿಯೇ ದೊರೆತನಲ್ಲವೇ?

ದ್ರೌಪದಿಯ ಕೈಯನ್ನು ಹಿಡಿದುಕೊಂಡು ಕುಂತಿಯು ಯುಧಿಷ್ಠಿರನಲ್ಲಿಗೆ ಬಂದಳು. ಮತ್ತುಆತನಿಗೆ ಹೇಳಿದಳು: "ಈಕೆ ದ್ರುಪದರಾಜಕುಮಾರಿ. ನಿನ್ನ ತಮ್ಮಂದಿ(ರಿಬ್ಬ)ರು ಇವಳನ್ನು ನನಗೆ ಒಪ್ಪಿಸಿರುವರು. ಯಥೋಚಿತವಾಗಿ ನಾನು ಸಹ "ಎಲ್ಲರೂ ಸೇರಿ ಸೇವಿಸಿರಿ" ಎಂದು ಪ್ರಮಾದದಿಂದ (=ಸರಿಯದ ಅರಿವಿಲ್ಲದೆ) ಹೇಳಿಬಿಟ್ಟೆ! ನಾನು ಇಂದಾಡಿರುವ ಮಾತು ಸುಳ್ಳಾಗಕೂಡದು; ಆದರೆ ಅದು ಹೇಗೆ ಸಾಧ್ಯವಾದೀತೆಂಬುದನ್ನು ನೀನೇ ಹೇಳಬೇಕು, ಕುರುವಂಶದ ವೀರನೇ! ಪಾಂಚಾಲರಾಜಕುಮಾರಿಯಾದ ಇವಳಿಗೂ ಅಧರ್ಮವು ಸೋಂಕಬಾರದು. ಮತ್ತು ಪಾಪಫಲವಾಗಿ ಅವಳು ಮುಂದೆ (ನೀಚಜನ್ಮಗಳನ್ನು ಹೊಂದಿ) ಅಲೆಯುವಂತಾಗಬಾರದು" ಎಂದಳು.

ಸೂಚನೆ : 27/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, August 24, 2023

ಜಡಭರತನ ಶ್ರೇಷ್ಠ ಜೀವನಗಾಥೆ (Jadabharatana Srestha Jivanagathe)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 
ಪ್ರತಿಕ್ರಿಯಿಸಿರಿ lekhana@ayvm.in)




ಜುಳು ಜುಳು ಮಂಜುಳ ನಾದದಿಂದ ಪ್ರಶಾಂತವಾಗಿ ಹರಿಯುತ್ತಿದ್ದ ನದಿ. ಸುತ್ತಲೂ ಅರಣಿಕರು ವಿಹರಿಸುತ್ತಿದ್ದ ಕಾಡು, ಅದರಲ್ಲಿನ ದುಂಬಿ - ಜೀರುಂಡೆಗಳ ನಾದ. ಹತ್ತಿರದಲ್ಲೇ ಸಪ್ತಋಷಿಗಳಲ್ಲಿ ಒಬ್ಬರಾದ ಪುಲಹರ ಆಶ್ರಮ. ಈ ಪ್ರಶಾಂತ ವಾತಾವರಣದಲ್ಲಿ ಆಗತಾನೆ ಆಹ್ನಿಕ ಧ್ಯಾನಗಳನ್ನು ಮುಗಿಸಿದ ರಾಜರ್ಷಿ ಭರತರು, ದಹರಾಕಾಶದಲ್ಲಿ ಕಂಡು ಅನುಭವಿಸಿದ ಜ್ಞಾನಸೂರ್ಯನ ಪ್ರಕಾಶ- ಪ್ರಶಾಂತತೆಯ ವಿಸ್ತಾರವನ್ನು, ಪ್ರಣವ ನಾದದ ವಿಸ್ತಾರವನ್ನು ಹೊರಪ್ರಕೃತಿಯಲ್ಲೂ ಅನುಭವಿಸುತ್ತ ಇನ್ನೂ ಒಳಅನುಭವದ ಗುಂಗಿನಲ್ಲೇ ಇದ್ದರು. ಈ ಮಧ್ಯೆ, ಈ ವಾತಾವರಣವನ್ನು ಭೇದಿಸಿ ಹೊರಟ ಸಿಂಹದ ಘರ್ಜನೆ. ಹತ್ತಿರದಲ್ಲೇ ಮೇಯುತ್ತಿದ್ದ ತುಂಬು ಗರ್ಭಿಣಿಯಾದ ಒಂದು ಹರಿಣಿ, ಬೆಚ್ಚಿ, ಬೆದರಿ ದಿಕ್ಕು ಕಾಣದೆ ತನ್ನನ್ನು, ತನ್ನ ಒಳಗಿನ ಕಿರು ಜೀವವನ್ನು ಪಾರುಮಾಡಲೋಸುಗ ಶಕ್ತಿಮೀರಿದ ಪ್ರಯತ್ನದಿಂದ ನದಿಯನ್ನು ಹಾರಿ ದಾಟಲು ಉದ್ಯುಕ್ತವಾಯಿತು. ತನ್ನ ಭಾರವನ್ನು ಮತ್ತು ಉದರದಲ್ಲಿದ್ದ ಕಿರಿಯ ಭಾರವನ್ನೂ ದಾಟಿಸಲಾಗದೆ ನೀರಿನಲ್ಲಿ ಬಿದ್ದು ಅಸು ನೀಗಿತು. ಅದೃಷ್ಟವಶಾತ್ ಗರ್ಭದಲ್ಲಿದ್ದ ಮರಿ ಹೊರಬಂದಿತು. ಈ ಘಟನೆಗಳನ್ನು ಇನ್ನೂ ಒಳಗುಂಗಿನಲ್ಲೇ ಇದ್ದ ಆತ್ಮಗುಣಸಂಪನ್ನನಾದ ಋಷಿಯ ಮನಸ್ಸು ಗುರುತಿಸಿ, ದಯೆ ಒಸರಿ, ಕರುಣಾರಸವಾಗಿ ದ್ರವಿಸಿ, ಅವರ ಹೊರ ಇಂದ್ರಿಯಗಳಿಗೆ ಚೈತನ್ಯವನ್ನು ಕೊಟ್ಟು, ನದಿಯಲ್ಲಿ ಧುಮಿಕಿಸಿ ಆ ಕಂದನನ್ನು ಕಾಪಾಡುವಂತೆ ಮಾಡಿತು. ಮರಿಯನ್ನು ಆಶ್ರಮಕ್ಕೆ ತಂದ ಅವರು, ಅದಕ್ಕೆ ಹಾಲುಯ್ದು, ಮೇವುಣಿಸಿ ಸಂರಕ್ಷಿಸಲುದ್ಯುಕ್ತರಾದರು. ಕ್ರಮೇಣ ಬೆಳೆಯುತ್ತಿದ್ದ ಆ ಜಿಂಕೆ , ತನ್ನ ಮಿಂಚಿನ ಕುಡಿನೋಟದಿಂದ, ಚಿಮ್ಮುವ ಹಾರುವಿಕೆಯಿಂದ, ಪ್ರೀತಿಯವರ್ತನೆಯಿಂದ ಅವರ ಕರುಣೆಯನ್ನು ವಾತ್ಸಲ್ಯವಾಗಿ, ಪ್ರೀತಿಯಾಗಿ ಅವರಿಗೇ ತಿಳಿಯದಂತೆ ಮಾರ್ಪಡಿಸಿತು. ತಾನು ದರ್ಭ ಸಂಗ್ರಹಕ್ಕೆ ಹೋದರೂ ಮರಿಯದೇ ಗುಂಗು, ಧ್ಯಾನದಲ್ಲೂ ಕೆಲವೊಮ್ಮೆ ಅದರ ಯೋಚನೆಯೇ! ಪ್ರೀತಿ ಕೊನೆಗೆ ಎಲ್ಲಿಲ್ಲದ ಮೋಹವಾಗಿ ಪರಿಣಮಿಸಿ, ಭಗವಂತನ ಧ್ಯಾನದ ಬದಲಿಗೆ ಜಿಂಕೆಯ ಧ್ಯಾನದಲ್ಲಿ ಪರ್ವ್ಯವಸಾನಗೊಂಡಿತು. ತನ್ನ ಅಂತ್ಯಕಾಲದಲ್ಲೂ ಆ ಹರಿಣದ ನೆನಪಿನಲ್ಲೇ ಋಷಿ ಅಸುನೀಗಿದರು. ಅಂತ್ಯಕಾಲದಲ್ಲಿ ಯಾವ ಚಿಂತೆಯಲ್ಲಿರುತ್ತೇವೆಯೋ ಮರು ಜನ್ಮ ಅದರಲ್ಲೇ ಎಂಬ ಭಗವಂತನ ನಿಯಮದಂತೆ , ಭರತರು ಜಿಂಕೆಯಾಗಿಯೇ ಜನ್ಮ ಪಡೆದರು. ಆದರೂ ಪೂರ್ವಜನ್ಮದ ಸಂಸ್ಕಾರ ಬಲವಾಗಿದ್ದದರಿಂದ, ತನ್ನ ಹಿಂದಿನ ಜನ್ಮದ ನೆನಪು ಪ್ರಖರವಾಗಿಯೇ ಇದ್ದಿತು. ಈ ತಪ್ಪನ್ನು ಮತ್ತೆ ಮಾಡಬಾರದು ಎಂದು ಸಂಕಪಲ್ಪಿಸಿದ ಆ ಋಷಿ ಜಿಂಕೆ, ಒಬ್ಬ ಋಷಿ ಆಶ್ರಮದಲ್ಲಿ ತನ್ನ ಜೀವನವನ್ನು ಕಳೆದು ಮತ್ತೆ ಮಾನವನಾಗಿ ಜನಿಸಿತು. ಹುಟ್ಟಿನಿಂದಲೇ ಆಧ್ಯಾತ್ಮದಲ್ಲೇ ತಲ್ಲೀನರಾಗಿ, ಮಹಾಬುದ್ಧಿವಂತರಾಗಿದ್ದರೂ, ಲೌಕಿಕವಿಷಯಗಲ್ಲಿ ಜಡರಾಗಿ 'ಜಡಭರತ' ಎಂಬ ಬಿರುದು ಪಡೆದರು. ತಂದೆ -ತಾಯಿಯರು ಸ್ವರ್ಗಸ್ಥರಾದ ಬಳಿಕ ಅವರ ಅಣ್ಣ - ತಮ್ಮಂದಿರು ಅವರನ್ನು ಕೂಲಿಯವನಂತೆ ದುಡಿಸಿಕೊಂಡು, ಅಧಮ ಆಹಾರವನ್ನು ಕೊಡುತ್ತಿದ್ದರಂತೆ. ಆದರೂ ಧೃಢಕಾಯರಾಗಿದ್ದ ಇವರು ಒಮ್ಮೆ ಹೊಲದ ಬಳಿಯಲ್ಲಿದ್ದಾಗ, ಕೆಲವು ಬೇಡರು ಕಾಳಿಕಾದೇವಿಗೆ ಬಲಿಕೊಡುವುದಕ್ಕಾಗಿ ಕರೆದೊಯ್ದರಂತೆ. ಒಳ್ಳೆಯ ಆಹಾರ ಸಿಕ್ಕದ ಇವರಿಗೆ ಮೃಷ್ಟಾನ್ನ ಭೋಜನ ಬಡಿಸಿದಾಗ ಆನಂದದಿಂದ ಆಸ್ವಾದಿಸಿದರಂತೆ. ಬೇಡರು ಇವರನ್ನು ಬಲಿಕೊಡಲು ಉದ್ಯುಕ್ತರಾದಾಗ, ಕಾಳಿಕಾದೇವಿ ಪ್ರತ್ಯಕ್ಷಳಾಗಿ , ಅವರ ಕತ್ತಿಯಿಂದ ಅವರನ್ನೇ ಕತ್ತರಿಸಿ, ' ಬ್ರಹ್ಮ ಜ್ಞಾನಿಗೆ ನಮಸ್ಕಾರ' ಎಂದು ಇವರಿಗೇ ನಮಸ್ಕರಿಸಿ ಅಂತರ್ಧಾನಳಾದಳಂತೆ.

ಈ ಮಧ್ಯೆ, ಸಿಂಧುಸೌವೀರದೇಶದ ರಾಜ ರಾಹುಗಣ ಎಂಬುವವನು ಅವಧೂತ ಶಿಖಾಮಣಿಗಳಾದ ದತ್ತಾತ್ರೇಯರಲ್ಲಿ ಜ್ಞಾನ- ವೈರಾಗ್ಯ ಪಾಠವನ್ನು ಕಲಿಯಲು ಬೋವಿಗಳು ಹೊತ್ತ ಪಲ್ಲಕ್ಕಿಯಲ್ಲಿ ಪ್ರಯಾಣಮಾಡುತ್ತಿದ್ದನಂತೆ. ಪಲ್ಲಕ್ಕಿ ಹೊರುವರಲ್ಲಿ ಒಬ್ಬನಿಗೆ ಅನಾರೋಗ್ಯವಾದಾಗ, ಗಟ್ಟಿಮುಟ್ಟಾಗಿದ್ದ ಭರತರು ಕಣ್ಣಿಗೆ ಬೀಳಲು, ಅವರನ್ನೇ ಪಲ್ಲಕ್ಕಿಯನ್ನು ಹೊರಲು ನಿಯಮಿಸಿಕ್ಕೊಂಡರಂತೆ. ಎಲ್ಲರಿಗಿಂತಲೂ ಎತ್ತರವಾಗಿದ್ದ ಭರತರು, ನೆಲವನ್ನು ನೋಡುತ್ತಾ, ಭೂಮಿಯಲ್ಲಿ ಓಡಾಡುವ ಕ್ರಿಮಿ ಕೀಟಗಳಿಗೆ ತೊಂದರೆಯಾಗದಂತೆ ವಕ್ರ ವಕ್ರವಾಗಿ ಕಾಲಿಡುತ್ತಿದ್ದರು. ಒಳಗಿದ್ದ ಮಹಾರಾಜನಿಗೆ ಹಿಂಸೆಯಾಗಿ ತಡೆಯಲಾಗದ ಕೋಪದಿಂದ 'ಸರಿಯಾಗಿ ನಡೆ, ಇಲ್ಲದಿದ್ದರೆ ತಕ್ಕ ಶಿಕ್ಷೆಮಾಡುತ್ತೇನೆ ನಾನು' ಎಂದು ಗದರಿಸುತ್ತಾನೆ. ಬ್ರಹ್ಮಭಾವವನ್ನು ಪಡೆದು ವಿವೇಕಿಯಾಗಿರುವ ನನ್ನನ್ನು ಶಿಕ್ಷೆಮಾಡುವುದರಿಂದ ನಿನಗೇನೂ ಲಾಭ? ನಾನು ತಲುಪಬೇಕಾದ ಸ್ಥಾನ ಯಾವುದು ಇಲ್ಲ. ನನಗೆ ಎಲ್ಲವೂ ಒಂದೇ' ಎಂದು ಉತ್ತರಿಸುತ್ತಾರೆ. ಕೇಳಿದ ರಾಜ ಕಕ್ಕಾ ಬಿಕ್ಕಿಯಾಗಿ, ಇಳಿದು, ಸಾತ್ವಿಕ ತೇಜಸ್ಸಿನಿಂದ ಬೆಳಗುತ್ತಿದ್ದ ಮೂರ್ತಿಯನ್ನು ಕಂಡು, ಒಡನೆಯೇ ನಮಸ್ಕರಿಸಿ, 'ಮಹಾತ್ಮರೇ ತಾವು ಯಾರು? ಪರಮ ತೇಜಸ್ಸಿನಿಂದ ತುಂಬಿರುವಿರಲ್ಲ? ನಾನು ಅರೆಸಿಕೊಂಡು ಹೊರಟ ದತ್ತಾತ್ರೇಯರೇ ನನಗೆ ತಿಳುವಳಿಕೆ ಕೊಡಬೇಕೆಂದು ಇಲ್ಲಿ ಬಂದಿದ್ದಾರೆಯೇ? ತತ್ವವನ್ನು ಉಪದೇಶ ಮಾಡಬೇಕು ತಾವು' ಎಂದು ಬೇಡಿಕ್ಕೊಳ್ಳುತ್ತಾನೆ.

ಆಗ ಭರತರು, ಸಂಸಾರವನ್ನು ಒಂದು ಅರಣ್ಯಕ್ಕೆ ಹೋಲಿಸಿ, ಕಾಮ, ಕ್ರೋಧ, ಲೋಭ, ಮೋಹ, ಮದ , ಮಾತ್ಸರ್ಯ ಗಳೆಂಬ ಕ್ರೂರ ಮೃಗಗಳಿಂದ ತುಂಬಿರುವ ಸಂಸಾರವನ್ನು ಕೆಲವೊಮ್ಮೆ ಕುಶಲತೆಯಿಂದ, ಕೆಲವೊಮ್ಮೆ ಚಾತುರ್ಯದಿಂದ, ಕೆಲವೊಮ್ಮೆ ಬಲಪ್ರಯೋಗದಿಂದ ಹೇಗೆ ತಪ್ಪಿಸಿ ಕೊಳ್ಳಬೇಕು ಎಂದು ವಿಶದವಾಗಿ ತಿಳಿಯಪಡಿಸಿ ತತ್ವೋಪದೇಶವನ್ನು ಮಾಡುತ್ತಾರೆ. ಉಪದೇಶವನ್ನು ಪಡೆದ ರಾಜ, ವಾನಪ್ರಸ್ಥಾಶ್ರಮದಲ್ಲಿದ್ದುಕೊಂಡು, ತಪಸ್ಸು ಮಾಡಿ ಆತ್ಮೋದ್ಧಾರವನ್ನು ಮಾಡಿಕೊಳ್ಳುತ್ತಾನೆ.

ರಾಜರ್ಷಿ ಭರತರ ಹಿಂದಿನವರ ಕಥೆಯೂ ಬಹಳ ರಮಣೀಯ. ಪ್ರಿಯವ್ರತ ಮತ್ತು ಉತ್ತಾನಪಾದ ಸ್ವಾಯಂಭು ಮನುವಿನ ಪುತ್ರರು. ಉತ್ತಾನಪಾದನ ಮಗನೇ ಧ್ರುವಕುಮಾರ. ಪ್ರಿಯವ್ರತ ಉತ್ತಾನಪಾದನ ಅಣ್ಣ. ಬ್ರಹ್ಮ ದೇವರ ಆಜ್ಞೆಯಂತೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ, ಧರ್ಮಮಾರ್ಗದಲ್ಲಿ ರಾಜ್ಯವಾಳಿ, ಜಿತೇಂದ್ರಿಯನಾಗಿ ಕೊನೆಗೆ ಭಗವಂತನ ಪಾದವನ್ನು ತಲುಪುತ್ತಾನೆ. ಆ ಪರಂಪರೆಯಲ್ಲಿ ನಾಭಿ ಎಂಬ ರಾಜರ್ಷಿ. ಆತನು ಮತ್ತು ಅವನ ಧರ್ಮ ಪತ್ನಿ ಮೇರುದೇವಿ, ಶ್ರೀಮನ್ನಾರಾಯಣನನ್ನು ಆರಾಧಿಸಿ ತಮಗೆ ಅವನಂತಹ ಪುತ್ರ ಬೇಕು ಎಂಬ ವರ ಬೇಡುತ್ತಾರೆ. ತನ್ನಂತೆ ಅಥವಾ ತನಗಿಂತ ಮಿಗಿಲಾದವರು ಯಾರೂ ಇಲ್ಲವೆಂದ ಭಗವಂತ, ತನ್ನ ಕಲೆಯಿಂದ ಅವರ ಪುತ್ರನಾಗಿ ಜನಿಸುತ್ತಾನೆ. ಅವನೇ ಮಹಾತ್ಮನಾದ ಋಷಭದೇವ. ಈ ಅವತಾರದ ಉದ್ದೇಶ, ಆದರ್ಶ ಗೃಹಸ್ಥಾಶ್ರಮದ ಧರ್ಮವನ್ನು ಬೋಧಿಸಿ, ಭಗವಂತನನ್ನು ಆರಾಧಿಸಿ ನಂತರ ಅವಧೂತರ ಆದರ್ಶವನ್ನು ತೋರಿಸುವುದು. ಈ ಉದ್ದೇಶಕ್ಕೆ ತಕ್ಕಂತೆ, ಋಷಭದೇವ, ಜಯಂತಿ ಎಂಬ ದಿವ್ಯಕನ್ಯೆಯನ್ನು ವಿವಾಹವಾಗಿ ಅನೇಕ ಪುತ್ರರನ್ನು ಪಡೆಯುತ್ತಾನೆ. ಅವರ ಪುತ್ರನೇ ಮಹಾತ್ಮನಾದ ಭರತ, ಮುಂದೆ ಜಡ-ಭಾರತನಾದವನು. ನಮ್ಮ ದೇಶಕ್ಕೆ 'ಭಾರತ' ಎಂಬ ಹೆಸರು ಬರುವುದಕ್ಕೆ ಈ ಭರತನೇ ಕಾರಣ ಎಂದು ಶ್ರೀಮದ್ಭಾಗವತವು ತಿಳಿಸುತ್ತದೆ ಆದರ್ಶ ಗೃಹಸ್ಥ ಧರ್ಮ ವನ್ನು ಪಾಲಿಸಿದ ಋಷಭ ಮಹಾರಾಜ, ತನ್ನ ಸುಪುತ್ರನಾದ ಭರತನಿಗೆ ಪಟ್ಟಕಟ್ಟಿ, ತಾನು ಅಕ್ಷರ ಬ್ರಹ್ಮದಲ್ಲಿ ತಾದಾತ್ಯ್ಮವನ್ನು ಹೊಂದಿ, ವರೇಣ್ಯ ಎಂಬುದಕ್ಕೆ ವಿಷಯನಾಗಿ, ಪಾಪಾದಿ ಬಂಧನಗಳೆನ್ನೆಲ್ಲ ಅಶ್ವ ಧೂಳು ಕೊಡವುವಂತೆ ಕೊಡವಿ, ತತ್ವಮಸಿ ಎಂಬ ಶ್ರುತಿ ವಾಕ್ಯಕ್ಕೆ ವಿಷಯನಾದ ಭಗವಂತನಲ್ಲಿ ತಾದಾತ್ಮ್ಯಹೊಂದಿ ಅ-ವ-ಧೂ-ತ ನಾಗಿ, ಆಧರ್ಮವನ್ನು ಬೊಧಿಸುತ್ತಾ, ಯಾವ ಬಂಧನಗಳೂ ಇಲ್ಲದೆ, ಕೊನೆಗೆ ಅನಂತದಲ್ಲೇ ಲೀನವಾಗುತ್ತಾನೆ. ಈ ಋಷಭದೇವನನ್ನು ವೈದಿಕರು ಪೂಜಿಸುವಂತೆಯೇ ಜೈನರೂ ಆದಿತೀರ್ಥಂಕರನೆಂದು ಪೂಜಿಸುತ್ತಾರೆ.

 ಮಹಾತ್ಮನಾದ ಭರತ, ಚಕ್ರವರ್ತಿಯಾಗಿ, ವಿಶಾಲ ಭೂಮಂಡಲವನ್ನು ತನ್ನ ತಮ್ಮಂದಿರಿಗೆ ವಿಭಜಿಸಿಕೊಟ್ಟು, ಸಾಮ, ದಾನ, ಭೇದ, ದಂಡವೆಂಬ ನಾಲ್ಕು ಉಪಾಯಗಳಲ್ಲೂ ಪರಿಣಿತನಾಗಿ ಧರ್ಮದಿಂದ ತಾನೇ ನೇರವಾಗಿ ಆಳುತ್ತಿದ್ದ ಭಾಗಕ್ಕೆ 'ಭಾರತವರ್ಷ' ಎಂದು ಹೆಸರು ಬರುವಂತೆ ಮಾಡಿದನು. ಭರತನು ವಿಶ್ವರೂಪನ ಪುತ್ರಿಯಾದ ಪಂಚಜನೀ ಎಂಬ ಕನ್ಯೆಯನ್ನು ವರಿಸಿ ಸದ್ಗೃಹಸ್ಥನಾಗಿ, ಭೂಮಿಯನ್ನು ಆಳಿದನು. ನಂತರ ವಾನಪ್ರಸ್ಥವನ್ನು ಸ್ವೀಕರಿಸಿ ಸಪ್ತರ್ಷಿಗಳಲ್ಲಿ ಒಬ್ಬರಾದ ಪುಲಹರ ಆಶ್ರಮದಲ್ಲಿದ್ದುಕೊಂಡು ಅದ್ಭುತವಾದ ತಪಸ್ಸನ್ನು ಆಚರಿಸಿದನು. ಅಲ್ಲಿದ್ದಾಗಲೇ ನಡೆದಿದ್ದು ಜಿಂಕೆಯ ಕಥೆ.

'ಶ್ರೀಮದ್ ಭಾಗವತಕಥಾಮೃತಸಾರದಲ್ಲಿ' ಪೂಜ್ಯ ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ಅವರ ಗುರುಗಳಾದ ಶ್ರೀರಂಗಮಹಾಗುರುಗಳು ಕೊಟ್ಟ ನೋಟದಿಂದ ವರ್ಣಿಸಿರುವ ಶ್ರೀಮದ್ಭಾಗವತದ ಐದನೆಯ ಸ್ಕಂಧವನ್ನಲಂಕರಿಸಿರುವ 'ಭರತೋಪಾಖ್ಯಾನ'ದ ಮೇಲೆ ಈ ಲೇಖನ ಆಧರಿಸಿದೆ. ಸಂಸಾರದಲ್ಲಿದ್ದರೂ ಕುಶಲತೆಯಿಂದ ಅರಿಷಡ್ವರ್ಗಗಳಿಂದ ತಪ್ಪಿಸಿಕ್ಕೊಂಡು, ರಾಗ-ಮೋಹಗಳ ಬಂಧಗಳಿಗೆ ಒಳಗಾಗದೆ, ಭಗವಂತನ ತಾದಾತ್ಮ್ಯ ವನ್ನು ಹೊಂದಿ, ಅಂತ್ಯ ಕಾಲದಲ್ಲಿ ಅವನೆಡೆಯಲ್ಲಿಯೇ ಮನಸ್ಸಿದ್ದರೆ, ಅವನಲ್ಲೇ ಲೀನವಾಗಬಹುದು ಎಂದು ಈ ಕಥೆಗಳ ಸಾರಾಂಶ. ಭಗವಂತನ ಧ್ಯಾನ ಬಿಟ್ಟು ಜಿಂಕೆಯ ವ್ಯಾಮೋಹದಲ್ಲಿ ತೊಡಗಿದ್ದರಿಂದ ಜಿಂಕೆಯಾಗಿ ಜನ್ಮ ತಳೆಯಬೇಕಾದುದು ದುರ್ದೈವ. ಆದರೂ ಒಳ್ಳೆಯ ಸಂಸ್ಕಾರ, ಕರ್ಮಗಳು ಅವನ ಪೂರ್ವಜನ್ಮದ ಸ್ಮರಣೆಯನ್ನು ಹಾಗೇ ಉಳಿಸಿ ಮತ್ತೆ ಮಹಾ ಧ್ಯೇಯದತ್ತ ಸಾಗುವಂತಾದುದು ಸುಕೃತದ ಫಲ. ನಾವೆಲ್ಲಾ ಕಲಿಯಬೇಕಾದ ಜೀವನ ಪಾಠಗಳನ್ನು ಬಿತ್ತರಿಸುವ ಕಥೆಯಾಗಿ, 'ಭಾರತ' ಎಂಬ ನಾಮಧೇಯಕ್ಕೆ ಕಾರಣರಾದ ಭರತ ಮಹಾಮುನಿಗೆ ನಮೋನಮಃ.

ಸೂಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.

Monday, August 21, 2023

ವ್ಯಾಸ ವೀಕ್ಷಿತ - 51 ಕರ್ಣ-ಶಲ್ಯರನ್ನು ಮೆಟ್ಟಿದ ಭೀಮಾರ್ಜುನರು (Vyaasa Vikshita - 51 Karna-Shalyarannu Mettida Bhimarjunaru)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



"ಸಾಕ್ಷಾದ್ ಇಂದ್ರನನ್ನು ಬಿಟ್ಟು ಮತ್ತಾವ ಗಂಡಸೂ ಯುದ್ಧದಲ್ಲಿ ಕುಪಿತನಾದ ನನ್ನನ್ನು ಎದುರಿಸಲಾರ - ಪಾಂಡುಪುತ್ರನಾದ ಅರ್ಜುನನನ್ನು ಬಿಟ್ಟು!" –

ಹೀಗೆ ಹೇಳಿದ ಕರ್ಣನಿಗೆ ಅರ್ಜುನನು ಪ್ರತ್ಯುತ್ತರವಿತ್ತನು:

"ಕರ್ಣನೇ, ನಾನೇನೂ (ನೀನು ಅಂದುಕೊಂಡಂತೆ) ಧನುರ್ವೇದವೇ(ಮೈತಾಳಿದವ)ನಲ್ಲ; ಪ್ರತಾಪಶಾಲಿಯಾದ ಪರಶುರಾಮನೂ ಅಲ್ಲ; ಶಸ್ತ್ರಧಾರಿಗಳಲ್ಲಿ ಗಣ್ಯನಾದ ಯೋಧಶ್ರೇಷ್ಠನಾದ ಬ್ರಾಹ್ಮಣನು ನಾನು: ಗುರೂಪದೇಶಾನುಸಾರಿಯಾಗಿ ಬ್ರಹ್ಮಾಸ್ತ್ರ-ಇಂದ್ರಾಸ್ತ್ರಗಳಲ್ಲಿ ಪಳಗಿದವನು ; ನಿನ್ನನ್ನು ಸೋಲಿಸಲೆಂದು ಇಂದು ಯುದ್ಧಕ್ಕೆ ನಿಂತಿದ್ದೇನೆ, ನೀನೂ ಸ್ಥಿರನಾಗಿ ನಿಲ್ಲು!" - ಎಂದನು.

ಅರ್ಜುನನ ಈ ಮಾತನ್ನು ಕೇಳಿದ ಕರ್ಣನು, ಬ್ರಾಹ್ಮತೇಜಸ್ಸೆಂಬುದು ಜಯಿಸಲು ಶಕ್ಯವಲ್ಲದ್ದೆಂದು ಅರಿತು, ಯುದ್ಧದಿಂದ ಪರಾಙ್ಮುಖನಾದನು (ಎಂದರೆ ಯುದ್ಧ ತೊರೆದನು).

ಇನ್ನು ಮತ್ತೊಂದೆಡೆ, ಶಲ್ಯ-ಭೀಮರ ಕಾಳಗ: ಇಬ್ಬರೂ ವೀರರು, ಇಬ್ಬರೂ ಬಲಶಾಲಿಗಳು; ವಿದ್ಯೆ-ಬಲ-ಯುದ್ಧಕಲೆ - ಇವುಗಳಲ್ಲಿ ಇಬ್ಬರೂ ಪ್ರವೀಣರು; ಪರಸ್ಪರ ಯುದ್ಧಾಹ್ವಾನ ಮಾಡುತ್ತಿದ್ದ ಅವರು ಮದಿಸಿದ ಎರಡು ಗಜಗಳಂತೆ ಇದ್ದರು. ಮುಷ್ಟಿಗಳಿಂದಲೂ ಮಂಡಿಗಳಿಂದಲೂ ಒಬ್ಬರನ್ನೊಬ್ಬರು ಪ್ರಹರಿಸುತ್ತಿದ್ದರು. ಪರಸ್ಪರ ಪ್ರಕರ್ಷಣ-ಆಕರ್ಷಣ-ಅಭ್ಯಾಕರ್ಷಣ-ವಿಕರ್ಷಣಗಳಿಂದ (ಸೆಳೆದಾಟ-ಎಳೆದಾಟ-ಇಕ್ಕಾಟ-ತಿಕ್ಕಾಟಗಳಿಂದ) ಒಬ್ಬರನ್ನೊಬ್ಬರು ಬಡಿದಾಡಿದರು. ಕಲ್ಲುಗಳೆರಡು ಪರಸ್ಪರ ಇಕ್ಕಿದಾಗ ಬರುವಂತಹ ಘೋರವಾದ ಚಟಚಟಾಶಬ್ದವೂ ಬರುತ್ತಿತ್ತು, ಅವರು ಒಬ್ಬರಿಗೊಬ್ಬರು ಪ್ರಹಾರಮಾಡುತ್ತಿದ್ದಾಗ! ಹೀಗೇ ಎರಡು ಘಂಟೆಗಳ ಕಾಲ ಕಾದಾಡಿದರು. ಆಗೊಮ್ಮೆ ಭೀಮನು ತನ್ನ ತೋಳುಗಳಿಂದ ಶಲ್ಯನನ್ನು ಮೇಲಕ್ಕೆತ್ತಿ ಕುಕ್ಕಿದನು: ಅಲ್ಲಿದ್ದ ಬ್ರಾಹ್ಮಣರು ನಕ್ಕಿಬಿಟ್ಟರು. ಆಗಾದ ಆಶ್ಚರ್ಯದ ವಿಷಯವೆಂದರೆ, ನೆಲ ಕಚ್ಚಿದ್ದ ಬಲಶಾಲಿ ಶಲ್ಯನನ್ನು ಬಲಿಷ್ಠ ಭೀಮನು ಸಂಹರಿಸಲಿಲ್ಲವೆಂಬುದು!

ಅಂತೂ ಹೀಗೆ ಶಲ್ಯನನ್ನು ಭೀಮಸೇನನು ಉರುಳಿಸಿದ್ದು; ಅರ್ಜುನನ ವಿಷಯದಲ್ಲಿ ಕರ್ಣನೇ ಬೆದರಿದ್ದು: ಇದನ್ನು ಕಂಡ ಉಳಿದೆಲ್ಲ ರಾಜರು ಇನ್ನು ಮುಂದಕ್ಕೆ ಹೋರಾಡಲು ಹೆದರಿದರು. ಭೀಮಸೇನನನ್ನು ಸುತ್ತುವರಿದರು.

ಎಲ್ಲರೂ ಸೇರಿ ಹೇಳಿದರು: ಈ ಇಬ್ಬರು ಬ್ರಾಹ್ಮಣಶ್ರೇಷ್ಠರು ಧನ್ಯರು. ಇವರು ಯಾವ ವಂಶದವರು ಹಾಗೂ ಎಲ್ಲಿ ವಾಸಮಾಡುತ್ತಿರುವರು - ಎಂಬುದನ್ನು ತಿಳಿಯಬೇಕಲ್ಲ!

ರಾಧಾಪುತ್ರನಾದ ಕರ್ಣನನ್ನು ಯಾರು ತಾನೇ ಯುದ್ಧದಲ್ಲಿ ಎದುರಿಸಲು ಸರ್ಮರ್ಥರು? ದ್ರೋಣ-ಪರಶುರಾಮರು, ಪಾಂಡುಪುತ್ರನಾದ ಕಿರೀಟಿ(ಎಂದರೆ ಅರ್ಜುನ), ಹಾಗೂ ದೇವಕೀಪುತ್ರನಾದ ಕೃಷ್ಣ, ಹಾಗೂ ಶರದ್ವಂತನ ಮಗನಾದ ಕೃಪಾಚಾರ್ಯ - ಇವರನ್ನು ಬಿಟ್ಟರೆ ಕರ್ಣನೊಂದಿಗೆ ಸೆಣಸಲು ಇನ್ನಾರಿಗೆ ಸಾಧ್ಯ?

ಹಾಗೆಯೇ ಮದ್ರದೇಶದ ಅರಸಾದ ಬಲಶಾಲಿ ಶಲ್ಯನನ್ನೂ ಸಹ ಗೆಲ್ಲಲು ಯಾರು ತಾನೇ ಸಮರ್ಥರು? - ಬಲರಾಮ, ಪಾಂಡುಪುತ್ರನಾದ ವೃಕೋದರ(ಎಂದರೆ ಭೀಮ), ಹಾಗೂ ವೀರನಾದ ದುರ್ಯೋಧನ - ಇವರನ್ನು ಬಿಟ್ಟು?

ಆದ್ದರಿಂದ ಈ ಬ್ರಾಹ್ಮಣಸ್ತೋಮದಿಂದ ದೂರವಿರೋಣ. ಬ್ರಾಹ್ಮಣರಂತೂ ಸರ್ವದಾ ರಕ್ಷಿಸಲ್ಪಡಬೇಕಾದವರು - ತಪ್ಪು ಮಾಡಿದ್ದರೂ. ಆದ್ದರಿಂದ ಇವರಾರೆಂದು ಮೊದಲು ಅರಿತುಕೊಳ್ಳೋಣ; ಆಮೇಲೆ ಬೇಕೆನಿಸಿದರೆ ಸಂತೋಷವಾಗಿ ಯುದ್ಧಮಾಡೋಣವಂತೆ - ಎಂದರು.

ಹಾಗೆ ಹೇಳುತ್ತಿದ್ದ ರಾಜರನ್ನೂ ಇನ್ನಿತರ ಪುರುಷರನ್ನೂ ಕಂಡು ಭೀಮಾರ್ಜುನರು ಪ್ರಸನ್ನರಾದರು.

ಭೀಮಸೇನನ ಆ ಕೃತ್ಯವನ್ನು ಕಂಡ ಕೃಷ್ಣನು, ಅವರಿಬ್ಬರೂ ಕುಂತಿಯ ಮಕ್ಕಳೇ ಇರಬೇಕೆಂದು ಶಂಕಿಸಿದವನಾಗಿ, ಆ ರಾಜರು ಮತ್ತೂ ಯುದ್ಧಮಾಡುವುದನ್ನು ತಡೆದನು: ಧರ್ಮವಾಕ್ಯಗಳಿಂದ ಅವರನ್ನೆಲ್ಲಾ ಅನುನಯಗೊಳಿಸಿದನು.

ಸೂಚನೆ : 21/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 51 (Yaksha prashne 51)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 50 ಮನುಷ್ಯನ ಜೀವನೋಪಾಯ ಯಾವುದು  ?

ಉತ್ತರ - ಪರ್ಜನ್ಯ 

ಮನುಷ್ಯನ ಅಧ್ಯಾತ್ಮಜೀವನ ಸುಂದರವಾಗಬೇಕಾದರೆ ಭೌತಿಕಜೀವನವೂ ಮಧುರವಾಗಿದ್ದಾಗ ಮಾತ್ರ ಸಾಧ್ಯ. ಈ ಬಾಹ್ಯಜೀವನವು ಅನಾಯಾಸವಾಗಿ ಸಂಪನ್ನವಾಗಿಸಬೇಕಾದ ಪ್ರಧಾನ ಸಾಧನ ಯಾವುದು ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ವೃಷ್ಟಿ ಎಂಬುದು ಉತ್ತರ. ಮಳೆಯು ಯಾವ ರೀತಿಯಾಗಿ ಮಾನುಷ್ಯನ ಹೊರ ಜೀವನವನ್ನು ಅಂದಗೊಳಿಸುತ್ತದೆ? ಎಂಬುದನ್ನು ನೋಡೋಣ.

ಇಂದು ಜೀವನ ಎಂದರೆ ಹುಟ್ಟು ಮತ್ತು ಸಾವುಗಳ ನಡುವಿನ ಕಾಲದ ಪರಿಮಾಣ ಎಂಬಷ್ಟನ್ನೇ ಪರಿಗಣಿಸುತ್ತಿದ್ದೇವೆ. ಶ್ರೀರಂಗ ಮಹಾಗುರುಗಳು ಜೀವನಕ್ಕೆ ಬಹಳ ಸುಂದರವಾದ ವ್ಯಾಖ್ಯಾನವನ್ನು ಮಾಡಿದ್ದಾರೆ. "ಜೀವನವನ್ನು ಕೇವಲ ಭೌತಿಕದೃಷ್ಟಿಯಿಂದ ನೋಡಿ 'ಖಾನಾ, ಪೀನಾ, ಸೋನಾ ಇಷ್ಟೇ ಜೀವನ'ವೆಂದು ಅಂದುಕೊಂಡಿದ್ದಾಗ ಆಗುವುದೇ ಇಷ್ಟು. ಆದರೆ ಮೂಲದಲ್ಲಿ ನೋಡಿದರೆ ಪೂರ್ಣಾತ್ಮ. ಜೀವನದ ದಡವನ್ನು ಮುಟ್ಟಿ ಅಂತಹ ಜೀವನ  ಮಾಡಿದರೆ ತಾನೇ ಅದು ಒಂದು ಜೀವನ" ಎಂದು. ಭಗವಂತನಿಂದ ಬೇರ್ಪಟ್ಟ ಜೀವವು ಮತ್ತೆ ಭಗವಂತನಲ್ಲಿ ಒಂದಾಗುವವರೆಗಿನ ಯಾವ ಯಾನದ ಮಾನ ಉಂಟೋ ಅದನ್ನು ಮಹರ್ಷಿಗಳ ದೃಷ್ಟಿಯಿಂದ 'ಜೀವನ' ಎಂದು ಕರೆಯಬೇಕೆಂದು ಅವರು ಹೇಳುತ್ತಿದ್ದರು. ಮತ್ತು ಇಂದ್ರಿಯವನ್ನವಲಂಬಿಸಿ ಮಾಡುವ ಜೀವನ ಹೊರಜೀವನ, ಆತ್ಮವನ್ನವಲಂಬಿಸಿ ಮಾಡುವ ಜೀವನ ಒಳ ಜೀವನ. ಎರಡಕ್ಕೂ ಆತ್ಮಾ ಬೇಕೇ ಬೇಕು ಎಂಬುದನ್ನೂ ಹೇಳುತ್ತಿದ್ದರು. ಆದ್ದರಿಂದ ಇಂತಹ ಪೂರ್ಣಜೀವನವನ್ನು ಮಾಡಲು ಅತ್ಯವಶ್ಯವಾದ ವಿಷಯ ಯಾವುದು? ಎಂಬುದು ಪ್ರಶ್ನೆ.

ಮಳೆಯೆಂಬುದು ಕೇವಲ ಮನುಷ್ಯಮಾತ್ರನಿಗೆ ಅವಶ್ಯವಾದ ದ್ರವ್ಯವಲ್ಲ. ಮನುಷ್ಯನಂತೆ ಹಲವು ಪ್ರಾಣಿ, ಪಶು, ಪಕ್ಷಿ, ಮರ, ಗಿಡ ಹೀಗೆ ಸೃಷ್ಟಿಯ ಜೀವಸಂಕುಲವೇ  ಮಳೆಯನ್ನು ಆಶ್ರಯಿಸಿಕೊಂಡಿದೆ. ಮಳೆಯಿಲ್ಲದಿದ್ದರೆ ಜೀವಸಂಕುಲಕ್ಕೆ ಆಧಾರವಿಲ್ಲ. ಮಳೆಯಿಂದ ಸಿಗುವುದು ನೀರು. ನೀರಿಲ್ಲದೇ ಯಾವ ಜೀವಜಂತು ಬದುಕೀತು!. ಸಂಸ್ಕೃತದ ಅಮರಕೋಶ ಎಂಬ ಶಬ್ದಕೋಶದಲ್ಲಿ 'ಪಯಃ ಕೀಲಾಲಮ್ ಅಮೃತಂ ಜೀವನಂ ಭುವನಂ ವನಂ' ಎಂಬುದಾಗಿ ನೀರಿಗೆ 'ಜೀವನ' ಎಂಬ ಪದವನ್ನು ಬಳಸುತ್ತಾರೆ. ಅಂದರೆ ಜೀವಿಕೆಗೆ ನೀರು ಎಷ್ಟು ಮುಖ್ಯ ಎಂಬುದನ್ನು ಈ ಪದವೇ ತಿಳಿಸುತ್ತದೆ. ನೀರೆಂಬ ಜೀವನವಿಲ್ಲದಿದ್ದರೆ ಜೀವವೇ 'ನ'- ಇಲ್ಲ ಎಂದಾಗುತ್ತದೆ. ಅಮೃತ ಎಂಬ ಪದವನ್ನು ಇದೇ ಅರ್ಥದಲ್ಲಿ ಬಳಸಲಾಗುತ್ತದೆ. ಬದುಕಿಗೆ ನೀರು ಅಷ್ಟು ಅವಶ್ಯ ಎಂಬುದು ತಾತ್ಪರ್ಯ. ಇಂತಹ ನೀರು ಬೇಕುಬೇಕಾದಲ್ಲಿ ದೊರೆಯುವುದು ಹೇಗೆ? ಎಲ್ಲಾ ಕಾಲದಲ್ಲೂ ಎಲ್ಲೆಡೆ ನೀರು ಸಿಗುವುದಿಲ್ಲ. ಸಾಗರದಲ್ಲಿ ನೀರು ಹೇರಳವಾಗಿ ಇದೆ. ಆದರೆ ಅದು ಬಳಕೆಗೆ ಯೋಗ್ಯವಲ್ಲ. ಅಲ್ಲಿ ಪ್ರಾಕೃತಿಕವಾದ ಯಾವುದೋ ಒಂದು ಕಂಡೀಶನ್ ಏರ್ಪಟ್ಟಾಗ ಆವಿಯಾಗಿ, ಮೋಡವಾಗಿ, ಮಳೆಸುರಿದು, ಭೂಮಿಯ ಎಲ್ಲೆಡೆ ಸಮಾನವಾಗಿ ಬೀಳುತ್ತದೆ. ಇದರಿಂದ ಎಲ್ಲೋ ಇರುವ ನೀರು ಜೀವಿಗೆ ಸಿಗುವಂತಾಗುತ್ತದೆ. ಸಾಗರದ ನೀರು ಆವಿಯಾಲು ಕಾರಣವೇನು? ಯಜ್ಞವೇ ಮೋಡವಾಗಲು ಸಹಾಯಮಾಡುತ್ತದೆ 'ಯಜ್ಞಾದ್ಭವತಿ ಪರ್ಜನ್ಯಃ' ಎಂದು ನಮ್ಮ ಋಷಿಗಳು ಹೇಳುತ್ತಾರೆ. ಜೀವಸಂಕುಲಕ್ಕೆ ಮಳೆಯು ಹೇಗೆ ಕಾರಣವಾಗಿದೆ ಎಂಬುದನ್ನು ಕಾರ್ಯಕಾರಣ ಚಕ್ರದ ಮುಖಾಂತರ ವಿವರಿಸಿದ್ದುಂಟು. ಮಳೆಯಿಲ್ಲದೆ ಕೃಷಿಯಿಲ್ಲ. ಕೃಷಿಯಿಲ್ಲದೆ ಬೆಳೆಯಿಲ್ಲ. ಬೆಳೆಯಿಲ್ಲದೆ ಜೀವನವಿಲ್ಲ. ಆದ್ದರಿಂದ ಪೂರ್ಣಜೀವನಕ್ಕೆ ಮಳೆಯೇ ಆಧಾರ. 

ಸೂಚನೆ : 21/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, August 19, 2023

ಭಕ್ತಿ ಶರಣಾಗತಿಗಳ ಸೆಲೆ- ಮುಕುಂದಮಾಲೆ (Bhakti Saranagatigala Sele- Mukundamale)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)




ನಮ್ಮ ದೇಶದ ಸ್ತೋತ್ರಸಾಹಿತ್ಯದಲ್ಲಿ ಒಂದು ಅಪೂರ್ವವೂ ಜನಪ್ರಿಯವೂ ಆದ ಸಾಹಿತ್ಯ, ಕುಲಶೇಖರ ಆಳ್ವಾರ್ ವಿರಚಿತ "ಮುಕುಂದಮಾಲೆ".


ಆದರ್ಶವಾದ ಸ್ತೋತ್ರಸಾಹಿತ್ಯವು  ಜನಸಾಮಾನ್ಯರಿಗೆಲ್ಲ ಬೇಕೇ ಬೇಕು.  ಸ್ತೋತ್ರಸಾಹಿತ್ಯದ ಅವಶ್ಯಕತೆಯ ಬಗ್ಗೆ ಶ್ರೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು-" ಭಗವದನುಭವದಲ್ಲೇ ಇದ್ದಾಗ ಅಲ್ಲಿ ಯಾವ ಸಾಹಿತ್ಯವೂ ಇಲ್ಲಪ್ಪ. ಭಗವಂತನಲ್ಲಿರಬೇಕು ಎಂದ ಮಾತ್ರಕ್ಕೆ ಇಪ್ಪತ್ತನಾಲ್ಕು ಘಂಟೆಯೂ ಇರಲಾಗುವುದಿಲ್ಲ. ಭಗವಂತನನ್ನು ಅನುಭವಿಸುತ್ತಾ ಅದರ ರಸವನ್ನೇ ತುಂಬಿಕೊಂಡಿರುವ ಸಾಹಿತ್ಯವು ಬೇಕು. ಅದು ಜೀವನವನ್ನು ಭಗವಂತನ ಕಡೆಗೆ ತಿರುಗಿಸುತ್ತದೆ".


ಆಳ್ವಾರುಗಳು ಭಕ್ತಿರಸದಲ್ಲಿ ಆಳವಾಗಿ ಮುಳುಗಿದ್ದವರು; ಭಕ್ತಿಸಾಮ್ರಾಜ್ಯವನ್ನು ಆಳಿದವರು. ಇವರಲ್ಲಿ ಅಗ್ರಗಣ್ಯರು, ಮುಕುಂದಮಾಲೆಯನ್ನು ರಚಿಸಿದ ಕುಲಶೇಖರಾಳ್ವರರು.  ಇವರು ತಿರುವಾಂಕೂರಿನ ರಾಜರಾಗಿದ್ದರೆಂದು ಐತಿಹ್ಯವು ಹೇಳುತ್ತದೆ.


ಮುಕುಂದಮಾಲೆಯು  ನಲವತ್ತು ಶ್ಲೋಕಪುಷ್ಪಗಳಿಂದ ಪೋಣಿಸಲ್ಪಟ್ಟು ಭಗವದರ್ಪಿತವಾದ ಸುಂದರ ಹಾರ. ಈ ಸ್ತೋತ್ರದಲ್ಲಿ ಭಕ್ತಿಯಿದೆ; ಶರಣಾಗತಿಯಿದೆ; ಆದರ್ಶವಾದ ಪ್ರಾರ್ಥನೆಯಿದೆ; ಜೀವನಕ್ಕೆ ಬೇಕಾದ ಪಾಠವಿದೆ. ಇದು ಶ್ರೀವೈಷ್ಣವಸಂತರಿಂದ ರಚಿತವಾಗಿದ್ದರೂ ಎಲ್ಲರ ಗೌರವಾದರಗಳಿಗೆ ಹಿಂದಿನಿಂದಲೂ ಪಾತ್ರವಾಗಿದೆ. 


ಜನಗಳು ಭಗವಂತನಿಂದ ವಿಮುಖವಾಗಿರುವುದನ್ನು ಮನಗಂಡು, ಅವರನ್ನು ಭಗವಂತನತ್ತ ತಿರುಗಿಸಲು ಇಂದ್ರಿಯಸುಖಗಳನ್ನು ಜರೆದವರಿದ್ದಾರೆ. ಆದರೆ ಇಂದ್ರಿಯಜೀವನದಿಂದ ವಿಮುಖರಾಗುವುದು ಪ್ರಕೃತಿಸಹಜವಲ್ಲ. ಈ ಬಗ್ಗೆ  ಶ್ರೀರಂಗಮಹಾಗುರುಗಳ ಈ ಮಾತು ಸ್ಮರಣೀಯ. "ಜೀವವನ್ನು ಐಹಿಕಾಪೇಕ್ಷೆ ಬಿಡು ಎಂದರೆ ಒಪ್ಪುವುದಿಲ್ಲ. ಆದುದರಿಂದ ಅದನ್ನೂ ಕೊಟ್ಟುಕೊಂಡು ಅದರ ಜೊತೆಯಲ್ಲಿಯೇ ಭಗವಂತನ ಸಾನ್ನಿಧ್ಯದಲ್ಲಿರು, ಎಂದರೆ ಅಲ್ಲಿ ತೊಡಕಿಲ್ಲ. ಇಂದ್ರಿಯಗಳಿಗೆ ಬೇಕಾದ ಆಹಾರವನ್ನು ಕೊಟ್ಟುಬಿಟ್ಟರೆ, ಅವುಗಳಿಗೆ ಕಟ್ಟುವ ಕಂದಾಯ ಕಟ್ಟಿಬಿಟ್ಟರೆ, ಗಲಾಟೆಯಿಲ್ಲ. ಇಂದ್ರಿಯಗಳನ್ನು ಸೃಷ್ಟಿ ಮಾಡಿ , ಅವುಗಳಿಗೆ ವಿಷಯವೇ ಬೇಡ ಎಂದರೆ ಅವುಗಳ ಬೆಲೆಯಾದರೂ ಏನು? ಆದ್ದರಿಂದ  ಇಂದ್ರಿಯಗಳಿಗೆ ವಿಷಯವನ್ನು ಕೊಡಬೇಕು. ಹಾಗೆ ಕೊಟ್ಟರೂ, ಅವು ನಮ್ಮ ಜೀವನಕ್ಕೆ ಅಡ್ಡಿಯನ್ನು ತರದಂತೆ ಕೊಡಬೇಕು".


ಕುಲಶೇಖರಾಳ್ವರರು ತಮ್ಮ "ಜಿಹ್ವೇ ಕೀರ್ತಯ ಕೇಶವಂ……" ಎಂಬ ಶ್ಲೋಕದಲ್ಲಿ ನಾನಾ ಇಂದ್ರಿಯಗಳಿಗೆ ಭಗವದ್ವಿಷಯವನ್ನು ಕೊಟ್ಟಿದ್ದಾರೆ."ಎಲೈ ನಾಲಗೆಯೇ ಕೇಶವನನ್ನು ಕೀರ್ತಿಸು; ಮನಸ್ಸೇ ಮುರರಿಪುವನ್ನು ಭಜಿಸು; ಕೈಗಳಿರಾ, ಶ್ರೀಧರನನ್ನು ಅರ್ಚಿಸಿರಿ; ಕಣ್ಣುಗಳೇ, ಕೃಷ್ಣನನ್ನು ನೋಡಿರಿ; ಕಾಲುಗಳಿರಾ, ಹರಿಯ ಆಲಯಕ್ಕೆ ಹೋಗಿರಿ; ಎಲೈ ನಾಸಿಕವೇ, ಮುಕುಂದಪಾದತುಲಸಿಯನ್ನು ಆಘ್ರಾಣಿಸು; ತಲೆಯೇ, ಪರಮಾತ್ಮನಲ್ಲಿ ಬಾಗು" ಎನ್ನುತ್ತಾರೆ. ಹೀಗೆ ಜೀವನವನ್ನು ದೇವನ ಕಡೆಗೆ ತಿರುಗಿಸುವ ತಂತ್ರವಿದಾಗಿದೆ. "ನಾಹಂ ವಂದೇ……." ಎಂಬ ಶ್ಲೋಕದಲ್ಲಿ ಅವರ ನಿಃಸ್ವಾರ್ಥಭಾವವು ಎದ್ದು ತೋರುತ್ತದೆ. "ಭಗವಂತ, ನಿನ್ನನ್ನು ಯಾವುದೋ ಸುಖದ ಅಪೇಕ್ಷೆಯಿಂದಾಗಲಿ, ಕಷ್ಟನಿವಾರಣೆಗಾಗಿಯಾಗಲಿ, ನಾನು ನಮಸ್ಕರಿಸುವುದಿಲ್ಲ. ಹೃದಯಭವನದಲ್ಲಿ, ಎಲ್ಲ ಭಾವಗಳಲ್ಲಿಯೂ ನಿನ್ನನ್ನು ತಾನೇ ಭಾವಿಸಬೇಕು; ಅದಕ್ಕಾಗಿ, ನಿನ್ನನ್ನು ನಮಸ್ಕರಿಸುತ್ತೇನೆ" ಎನ್ನುತ್ತಾರೆ. ಪರಮಭಕ್ತನಾದವನು ತಾನು ಸ್ನಾನ ಮಾಡಿದರೂ, ಇದು ಭಗವಂತನಿಗೆ ಅಭಿಷೇಕವೆಂದೇ ಭಾವಿಸುತ್ತಾನೆ. ಮಾಡಿದ ಅಡಿಗೆಯನ್ನು ಭಗವಂತನಿಗೆ ನಿವೇದಿಸಿ, ಅವನ ಪ್ರಸಾದವನ್ನೇ ಸೇವಿಸುತ್ತಿರುವುದಾಗಿ ಭಾವಿಸುತ್ತಾನೆ. …ಹೀಗೆ ಎಲ್ಲ ಭಾವಗಳಲ್ಲಿಯೂ ಭಗವಂತನನ್ನು ಒಬ್ಬನು ಭಾವಿಸುತ್ತಿದ್ದರೆ ಅವನ ಜೀವನ ಸಾರ್ಥಕವಾಗುವುದರಲ್ಲಿ ಸಂದೇಹವೇನು!

ತಮ್ಮ "ನಾಸ್ಥಾ ಧರ್ಮೇ…….." ಎಂಬ ಶ್ಲೋಕದಲ್ಲಿ "ಪೂರ್ವಕರ್ಮಾನುರೂಪವಾಗಿ ಆಗಬೇಕಾದ್ದೆಲ್ಲ ಆಗಲಿ. ನಿನ್ನ ಚರಣಕಮಲಗಳಲ್ಲಿ ನಿಶ್ಚಲವಾದ ಭಕ್ತಿಯಿರಲಿ" ಎನ್ನುತ್ತಾರೆ. ಜೀವನದ ಕಷ್ಟಗಳಿಗೆ ಧೃತಿಗೆಡದೆ ದೇವರ ಸ್ಮರಣೆಯೊಡನೆ ಜೀವನವನ್ನು ಎದುರಿಸುವ ಪಾಠ ನಮಗಿಲ್ಲಿ ಆಗುತ್ತದೆ. "ಬಂದದ್ದೆಲ್ಲ ಬರಲಿ; ಗೋವಿಂದನ ದಯೆಯಿರಲಿ" ಎಂಬ ದಾಸವಾಣಿಯು ಇದನ್ನೇ ನೆನಪಿಗೆ ತರುತ್ತದೆ.  ಜೀವನದಲ್ಲಿ ವೃತ್ತಿಯಿಂದ ನಿವೃತ್ತರಾದ ಮೇಲೆ ಭಗವಂತನನ್ನು ಭಾವಿಸಿದರಾಯಿತು ಎನ್ನುವವರುಂಟು. ಆದರೆ "ಪ್ರಾಣಪ್ರಯಾಣ ಸಮಯದಲ್ಲಿ ಕಫ, ವಾತ, ಪಿತ್ತಗಳ ತೊಂದರೆಯಿಂದ ಗಂಟಲೇ ಕಟ್ಟಿಬಿಟ್ಟರೆ, ನಿನ್ನ ಸ್ಮರಣೆಯೇ ಆಗದಿರಬಹುದು. ಆದ್ದರಿಂದ ನನ್ನ ಮನಸ್ಸು ಈಗಲೇ ನಿನ್ನಲ್ಲಿ ಪ್ರವೇಶಿಸಲಿ" ಎನ್ನುತ್ತಾರೆ ಇವರು. ಇಂದ್ರಿಯಗಳು ಸುಸ್ಥಿತಿಯಲ್ಲಿರುವಾಗಲೇ ಭಗವಂತನನ್ನು ಸೇರಿಸಿಕೊಂಡು ಜೀವನ ಮಾಡಬೇಕೆಂಬ ಪಾಠವಿಲ್ಲಿದೆ.


ಸರಿಯಾದುದನ್ನು (positive) ಸಾಧಿಸಬೇಕೆಂದಿದ್ದರೆ, ತಪ್ಪಾದ(negative) ದಿಕ್ಕಿನಿಂದ ದೂರವಿರಬೇಕಾದುದು ಅನಿವಾರ್ಯವೇ. "ಮಾ ದ್ರಾಕ್ಷಂ….." ಎಂಬ ಶ್ಲೋಕದಲ್ಲಿ "ನಿನ್ನ ಪಾದಕಮಲದಲ್ಲಿ ಭಕ್ತಿಯಿಲ್ಲದೆ ಇರುವ ಕ್ಷೀಣಪುಣ್ಯರನ್ನು ನಾನು ನೋಡುವಂತಾಗುವುದು ಬೇಡ; ನಿನ್ನ ಶ್ರಾವ್ಯವಾದ ಕಥೆಗಳ ಹೊರತು ಮತ್ತಾವ ಕಥೆಗಳನ್ನೂ ನಾನು ಕೇಳುವಂತಾಗುವುದು ಬೇಡ; ನಿನ್ನ ಅಸ್ತಿತ್ವವನ್ನೇ ನಿರಾಕರಿಸುವವರನ್ನು ನಾನು ಮನಸ್ಸಿನಲ್ಲೂ ಸ್ಮರಿಸುವುದೂ ಬೇಡ; ಯಾವುದೇ ಜನ್ಮದಲ್ಲಾಗಲಿ, ನಿನ್ನ ಸೇವೆಯ ಸಂಬಂಧವನ್ನು ನಾನು ಬಿಟ್ಟಿರದಂತಾಗಲಿ" ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ. "ಭಗವಂತನ ನಾಮಗಳನ್ನು ಹೇಳಲು ಸಮರ್ಥರಾಗಿದ್ದರೂ ವ್ಯಸನಾಭಿಮುಖರಾದ ಜನರು ಹೇಳುತ್ತಿಲ್ಲವಲ್ಲ" ಎಂಬ ಕಳಕಳಿಯಿಂದ ಜನರನ್ನು ಎಚ್ಚರಿಸುತ್ತಾರೆ. ಭಗವಂತನ ಮಹಿಮೆಯ  ಮುಂದೆ ನಾವು ದೊಡ್ಡದೆಂದು ಭಾವಿಸುವುದೆಲ್ಲವೂ ಅತಿ ಸಣ್ಣದೆಂದು ತಿಳಿ ಹೇಳುತ್ತಾರೆ.


ತಾವು ಪರಂಜ್ಯೋತಿಯನ್ನು ದರ್ಶನ ಮಾಡಿದಾಗ ತಮ್ಮ ದೇಹ ಮನಸ್ಸುಗಳಲ್ಲಿ ಉಂಟಾದ ದಿವ್ಯಸ್ಥಿತಿಯನ್ನು ತಮ್ಮ "ಬದ್ಧೇನಾಂಜಲಿನಾ…." ಎಂಬ ಶ್ಲೋಕದಲ್ಲಿ ಸ್ಮರಿಸುತ್ತಾ "ಇಂತಹ ರೀತಿಯಲ್ಲಿ ತಮ್ಮ ಜೀವನವನ್ನು ಕಳೆಯುವಂತಾಗಲಿ" ಎಂದು ಭಗವದನುಭವದ ಒಂದು ನೋಟವನ್ನು ಜನರಿಗೆ ಮನಗಾಣಿಸಿದ್ದಾರೆ. ಭಗವಂತನನ್ನು ಭಕ್ತಪ್ರಿಯನಾದ (ಭಕ್ತರೆಂದರೆ ಅವನಿಗೆ ಪ್ರಿಯ; ಭಕ್ತರಿಗೆ ಅವನು ಪ್ರಿಯನೂ ಹೌದು) ಆಶ್ರಯಿಸಬೇಕೆಂಬ ಭಾವ ಜನರಲ್ಲಿ ಮೂಡಲೆಂದು, ಭಗವಂತನು ಭವರೋಗಕ್ಕೆ ಔಷಧ, ಭವದ ಮರುಭೂಮಿಗೆ ಜಲದ ಸ್ರೋತಸ್ಸು; ಭವಸಾಗರಕ್ಕೆ ನಾವೆ– ಎಂದು ವಿವಿಧವಾಗಿ ಬಣ್ಣಿಸಿ, "ಕೃಷ್ಣಮಂತ್ರ ಎಂಬ ಜನ್ಮಸಾಫಲ್ಯಮಂತ್ರವನ್ನು ಜಪಿಸಿ" ಎಂದು ಜನರಿಗೆ ತಿಳಿಸಿಕೊಡುತ್ತಾರೆ.


ಭಗವಂತನನ್ನು ಸಮಾಹಿತಮನಸ್ಕರಾಗಿ ಧ್ಯಾನಿಸುವವರಿಗೆ, ಭಗವಂತ ಅಭಯ ಕೊಟ್ಟೇ ಕೊಡುತ್ತಾನೆ ಎಂಬ ಫಲಶ್ರುತಿಯನ್ನು ಕೊನೆಗೆ ಹೇಳುತ್ತಾರೆ. "ಯೋಗಶಾಯಿಯಾಗಿ ಕ್ಷೀರಾಬ್ಧಿಯಲ್ಲಿ ಪವಡಿಸಿರುವ ನಾರಾಯಣನಲ್ಲಿ ನಮ್ಮ ಜೀವನವನ್ನು ತೆಗೆದುಕೊಂಡುಹೋಗಿ ನಿಲ್ಲಿಸುವಂತಿರಬೇಕು" ಎಂದು ಶ್ರೀರಂಗಮಹಾಗುರುಗಳು ಕರ್ಮಯೋಗದ ಸಾರವನ್ನು ತಿಳಿಸುತ್ತಿದ್ದರು. ಅಂತಹ ಕ್ಷೀರಸಾಗರಶಾಯಿಯ ಸುಂದರ ವರ್ಣನೆಯಲ್ಲಿ ನೆಲೆ ನಿಲ್ಲುತ್ತದೆ, ಮುಕುಂದಮಾಲೆ.


ಸೂಚನೆ:  19/8/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Tuesday, August 15, 2023

ಅಷ್ಟಾಕ್ಷರೀ​ - 41 ವಿಶ್ವಂ ವಿಷ್ಣುರ್ವಷಟ್ಕಾರಃ (Astakshara Darshana 41 Vishvam Vishnurvashatkarah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ದೇವನೊಬ್ಬ, ನಾಮ ಹಲವು - ಎಂಬ ಮಾತಿದೆಯಷ್ಟೆ?  ಆತನ ನಾನಾನಾಮಗಳಿಗೆ ಮತ್ತೂ ಒಂದು ಲೌಕಿಕಪ್ರಯೋಜನವಿದೆ. ಅದರ ಪರಿಯಿದು. ಬಿರಿಯುತ್ತಿರುವ ಬೆಂಗಳೂರಿನಲ್ಲಿ ಬನಶಂಕರಿಯೆಂಬ  ಬಹಳ ಭಾರಿಯಾದ  ಬಡಾವಣೆಯ ನಾಲ್ಕುಸಾವಿರ ಎಕರೆಗಳಲ್ಲಿ ಎಷ್ಟೆಷ್ಟು ಸ್ಟೇಜ್‍ಗಳು ಫೇಸ್‍ಗಳು ಬ್ಲಾಕ್‍ಗಳು! ಯಾರಿಗಾದರೂ ಭ್ರಾಂತಿಹುಟ್ಟಿಸುವಂತಹವೇ ಸರಿ! ಬೆಂಗಳೂರಲ್ಲಲ್ಲಲ್ಲಿ ರಾಜಕುಮಾರ್-ವೃತ್ತಗಳು! ಮೈಸೂರಿನಲ್ಲೂ ಜಯನಗರ ಜೆಪಿನಗರಗಳು! ಇವನ್ನೆಲ್ಲ ನೋಡಿದಾಗ ದೇವರೇ! - ಎನಿಸುತ್ತದೆ!

ಏಕೆ? ನಮ್ಮಲ್ಲಿ ೩೩ ಕೋಟಿ ದೇವತೆಗಳಿಲ್ಲವೇ?  ಅವುಗಳಲ್ಲಿ ಹತ್ತಾರು ಮಂದಿಗೆ (ಹಲವು) ಸಹಸ್ರನಾಮಗಳಿವೆ, ನೂರಾರು ಮಂದಿಗೆ ಅಷ್ಟೋತ್ತರಶತನಾಮಗಳಿವೆ. (ಅವುಗಳನ್ನು ಯಾರೂ ಕಾಪಿರೈಟು ಮಾಡಿಟ್ಟುಕೊಂಡಿಲ್ಲವಲ್ಲ!) ಬೆಂಗಳೂರಿನ ಬಡಾವಣೆಗಳಿಗೆ ಅವಲ್ಲಿ ಕೆಲವನ್ನಾದರೂ ಬಳಸಿಕೊಂಡರೂ, ಪ್ರಚಲಿತ ವಿಚಿತ್ರ'ನಾಮಕರಣ'ಗಳ ಬೇಸರದ ಬವಣೆಗೆ ಸುಲಭಪರಿಹಾರವೊಂದು ಸಿಕ್ಕಿದಂತಾಗಲಿಲ್ಲವೆ?

ಸಹಸ್ರನಾಮದ ಮಾತು ಬಂದಿತಲ್ಲವೆ? ಸಹಸ್ರನಾಮಗಳಲ್ಲಿ ಬಹಳ ಪ್ರಸಿದ್ಧವಾದುದೆಂದರೆ ವಿಷ್ಣುಸಹಸ್ರನಾಮವೇ ಸರಿ. "ಗೇಯಂ ಗೀತಾ-ನಾಮಸಹಸ್ರಂ" ಎನ್ನುತ್ತಾರೆ ಶಂಕರರು. ಗೀತೆಗಳೂ ಹಲವು (ಅಷ್ಟಾವಕ್ರಗೀತೆ, ಗಣೇಶಗೀತೆ, ಋಭುಗೀತೆ, ಹಂಸಗೀತೆ, ಮಂಕಿಗೀತೆ, ಉತ್ತರಗೀತೆ, ಅವಧೂತಗೀತೆ ಇತ್ಯಾದಿ); ಸಹಸ್ರನಾಮಗಳೂ ಹಲವು (ವಿಷ್ಣುಸಹಸ್ರನಾಮ, ಶಿವಸಹಸ್ರನಾಮ, ಲಲಿತಾಸಹಸ್ರನಾಮ ಮುಂತಾದವು). "ದಾಸರೆಂದರೆ ಪುರಂದರದಾಸರಯ್ಯ" ಎನ್ನುವಂತೆ, ಗೀತೆಯೆಂದರೆ ಭಗವದ್ಗೀತೆಯೇ; ಸಹಸ್ರನಾಮವೆಂದರೆ ವಿಷ್ಣುಸಹಸ್ರನಾಮವೇ. ಮಿಕ್ಕವು ಕಡಿಮೆಯೆಂದೇನಲ್ಲ; ಪ್ರಸಿದ್ಧಿಯ ಲೆಕ್ಕ. 

ವಿಷ್ಣುಸಹಸ್ರನಾಮದ ಆರಂಭವೇ ಪ್ರಕೃತಲೇಖನದ ಚಿಂತನವಸ್ತು. ಅದರ ಮೊದಲ ಅಷ್ಟಾಕ್ಷರಗಳೆಂದರೆ "ವಿಶ್ವಂ ವಿಷ್ಣುರ್ ವಷಟ್ಕಾರಃ" ಎಂಬುದು. ಇಲ್ಲಿಯ ಎಂಟಕ್ಷರಗಳಲ್ಲಿ ಪದತ್ರಯವಿದೆ. "ವಿಷ್ಣು"ವು ಎರಡನೆಯದಾಗಿದೆ. ಆದರೆ ಇಲ್ಲಿ ಒಂದಿಷ್ಟು ಜಿಜ್ಞಾಸ್ಯವಾದ ವಿಷಯವಿದೆ; ಜಿಜ್ಞಾಸ್ಯವೆಂದರೆ ಜಿಜ್ಞಾಸೆಗೆ ಒಳಪಡಬೇಕಾದದ್ದು; ಜಿಜ್ಞಾಸೆಯೆಂದರೆ ತಿಳಿದುಕೊಳ್ಳುವ ಬಯಕೆ: ಜ್ಞಾತುಮಿಚ್ಛಾ ಜಿಜ್ಞಾಸಾ.

ವಿಷ್ಣುಸಹಸ್ರನಾಮಕ್ಕೆ ನಾನಾಭಾಷ್ಯಗಳಿವೆ. ಇವೆಲ್ಲವುಗಳಲ್ಲಿ ಕೊಟ್ಟಿರುವ ಅರ್ಥಕ್ಕಿಂತ ಭಿನ್ನವಾದ, ಆದರೆ ಸಹಜಸರಲವಾದ, ಅರ್ಥವೊಂದನ್ನು ವಿಷ್ಣುಸಹಸ್ರನಾಮದ ಮೊದಲೆರಡು ಪದಗಳಿಗೆ ಶ್ರೀರಂಗಮಹಾಗುರುಗಳು ತಮ್ಮ ಅಂತಃಸ್ಫೂರ್ತಿಯಿಂದ ಕೊಟ್ಟಿದ್ದರು: "ವಿಶ್ವಂ ವಿಷ್ಣುಃ" - ಎಂದರೆ, "ವಿಶ್ವವೆಲ್ಲವೂ ವಿಷ್ಣುವೇ" ಎಂಬುದೇ ಈ ಅರ್ಥ. ನೇರವಾದ ಅರ್ಥವಾಗಿ ತೋರುವ ಮುಖ್ಯಾರ್ಥ.

ಹೀಗೆ ಹೇಳಿದಲ್ಲಿ ಏಳುವ ಪ್ರಶ್ನೆಯಿದು: ಭಗವಂತನು ಚೈತನ್ಯರೂಪಿ, ಆದರೆ ವಿಶ್ವವು ಜಡಪದಾರ್ಥಗಳಿಂದ ತುಂಬಿದೆ; ಈ ಪದಾರ್ಥಗಳ ಬಣ್ಣಗಳು ಬೇರೆ, ಆಕಾರಗಳು ಬೇರೆ, ಗುಣಗಳು ಬೇರೆ; ಹೀಗೆ ಏಕ-ಅನೇಕ, ಚೈತನ್ಯ-ಜಾಡ್ಯ ಮುಂತಾದ ವಿರುದ್ಧಗುಣಗಳುಳ್ಳವು ಒಂದೇ ಆಗಿರಲು ಸಾಧ್ಯವೇ? ಸಾಧ್ಯವೆಂಬುದನ್ನು ಶ್ರೀರಂಗಮಹಾಗುರುಗಳು ಸೋದಾಹರಣವಾಗಿ  ತಿಳಿಸಿಕೊಟ್ಟಿರುವರು: ವಜ್ರವೂ ಕಲ್ಲಿದ್ದಲೂ ಬೇರೆ ಬೇರೆ ಪದಾರ್ಥಗಳಷ್ಟೆ? ಅವುಗಳ ಗುಣ-ರೂಪ-ಪ್ರಯೋಜನಗಳು ಬೇರೆ ಬೇರೆ. (ಅವುಗಳ ಬೆಲೆಗಳೂ ಬಹಳ ಬೇರೆಯೆಂದು ಬೇರೆಯಾಗಿ ಹೇಳಬೇಕಿಲ್ಲವಷ್ಟೆ!) ಆದರೆ ವಿಜ್ಞಾನಿಯು ಅವು ಏಕಸ್ವರೂಪಕ ಎನ್ನುವನಲ್ಲವೆ? ಹಾಗೆಯೇ ಇದೂ - ಎಂಬುದು ಅವರಿತ್ತಿರುವ ವಿವರಣೆ.

ಏನಿದರ ಅರ್ಥ? ವಿಜ್ಞಾನಿಯ ಉದಾಹರಣೆಯನ್ನು ಅವರು ಕೊಟ್ಟಿರುವುದರಿಂದ, ವಿಜ್ಞಾನದ ಸ್ವರೂಪ-ಕ್ರಮಗಳನ್ನು ಕುರಿತಾಗಿಯೇ ಒಂದಿಷ್ಟು ತಿಳಿಯುವುದು ಉಚಿತ.

ವಿಜ್ಞಾನಿಗಳು ತಮ್ಮ ಸಂಶೋಧನೆಗಳಲ್ಲಿ ಹುಡುಕುವುದೇನನ್ನು?: ನಮಗಿನ್ನೂ ಅಜ್ಞಾತವಾದ ವಸ್ತುಗಳಾವುವು? ಅವಲ್ಲಿರುವ ಗುಣಗಳಾವುವು? ಅವುಗಳಿಗೆ ಅನ್ಯವಸ್ತುಗಳೊಂದಿಗೆ ಸೇರ್ಪಡೆ-ಬೇರ್ಪಡೆಗಳಿಂದಾಗುವ ಫಲಿತಗಳೇನು? ಅವನ್ನು ನಿಯಂತ್ರಿಸುವ ವೈಶ್ವಿಕ ನಿಯಮಗಳೇನು? ವಸ್ತುಗಳ ಒಳರಚನೆಯೆಂತು? ಮೂಲತತ್ತ್ವಗಳೇನು? ಇತ್ಯಾದಿಗಳನ್ನು. 

ಜಗತ್ತಿನೆಲ್ಲ ಪದಾರ್ಥಗಳೂ ೧೧೮ ಮೂಲಭೂತಪದಾರ್ಥ(elements)ಗಳಿಂದಾಗಿವೆಯೆಂಬುದು ಈಚಿನವರೆಗೆ (೨೦೨೧ರವರೆಗೆ) ಸಂಶೋಧಿತವಾಗಿದೆ. ಹೀಗಾಗಿ ರಸಾಯನಶಾಸ್ತ್ರಜ್ಞ(chemist)ರು ಹೇಳುವಂತೆ, ಜಗತ್ತೆಲ್ಲವೂ ಈ ಎಲಿಮೆಂಟ್‍ಗಳಿಂದಲೇ ಆಗಿರುವುದು. ಅವನ್ನೂ ಒಳಹೊಕ್ಕು ನೋಡುವ ಭೌತವಿಜ್ಞಾನಿಯು (physicist), ಅವಾದರೂ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್‍ಗಳಿಂದಲೇ ಆಗಿರುವುವೆನ್ನುವನು. ಅವನ್ನೇ ಮತ್ತೂ ಮೌಲಿಕವಾಗಿ ನೋಡಿದಲ್ಲಿ ಅವುಗಳೆಲ್ಲವೂ ಶಕ್ತಿ(energy)ಯಿಂದಾಗಿರತಕ್ಕವೇ ಸರಿ! ಹೀಗಾಗಿ ಸ್ಥೂಲದೃಷ್ಟಿಯ ಮೇಲ್ನೋಟಕ್ಕೆ ಬಹುವಾದ ಬಗೆಗಳಾದರೂ, ಸೂಕ್ಷ್ಮಸೂಕ್ಷ್ಮದೃಷ್ಟಿಗೆ ಅವಲ್ಲಿಯ ಆಳವಾದ ಏಕತೆಯು ವಿಜ್ಞಾನಿಗೆ ಗೋಚರಿಸುತ್ತದೆ.

ಶ್ರೀರಂಗಮಹಾಗುರುಗಳಿತ್ತ ಉದಾಹರಣೆಯಲ್ಲಿ ಮೊದಲು ಅಲಾಟ್ರಪಿ(allotropy)ಯ ವಿಷಯ ಬಂದಿದೆ ("ಸರ್ವಂ ಇಂಗಾಲಮಯಂ"); ಆಮೇಲೆ ಇನ್ನೂ ಆಳವಾಗಿ, "ಸರ್ವಂ ಎಲೆಕ್ಟ್ರಾನ್-ಪ್ರೋಟಾನ್-ಮಯಂ" ಆಗಿದೆ. 

ಮತ್ತೂ ಆಳವಾಗಿ, ಸೃಷ್ಟಿಕರ್ತನ ಸ್ಥಾನದಿಂದ ನೋಡುವಾಗ ಅಧ್ಯಾತ್ಮಜ್ಞನು ಉದ್ಗರಿಸುವುದು "ಸರ್ವಂ ವಿಷ್ಣುಮಯಂ!" - ಎಂದು. (ಇಷ್ಟಲ್ಲದೆ, ಜಗತ್ತೆಲ್ಲವೂ ಯಜ್ಞತತ್ತ್ವಮಯವೇ- ಎಂಬುದನ್ನು "ವಷಟ್ಕಾರ"ವೆಂಬುದು ಸೂಚ್ಯವಾಗಿ ಹೇಳುವುದು!)

ಹೀಗೆ ವಿಜ್ಞಾನವು ಮೇಲ್ನೋಟವನ್ನು ಮೀರಿ ಸೂಕ್ಷ್ಮದತ್ತ ಸಾಗುವಂತೆಯೇ, ಅಧ್ಯಾತ್ಮವೆಂಬುದು ಇಂದ್ರಿಯಗೋಚರವನ್ನು ಮೀರಿ ಪರತತ್ತ್ವದತ್ತ  ಸಾಗಿ ಕೃತಾರ್ಥವಾಗುವುದಲ್ಲವೇ? 

ಸೂಚನೆ: 13/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 



ವ್ಯಾಸ ವೀಕ್ಷಿತ - 50 ಕರ್ಣಾರ್ಜುನರ ನಡುವಿನ ಪೈಪೋಟಿ (Vyaasa Vikshita - 50 Karnarjunara Naduvina Paipoti)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ಹೀಗೆ ಹೇಳುತ್ತಿದ್ದ ಆ ಬ್ರಾಹ್ಮಣರಿಗೆ, ನಸುನಗುತ್ತಾ ಅರ್ಜುನನು ಹೇಳಿದನು "ಸುಮ್ಮನೆ ಪ್ರೇಕ್ಷಕರಾಗಿದ್ದುಕೊಂಡು ನೀವು ಪಕ್ಕಕ್ಕೆ ನಿಲ್ಲಿರಿ. ಕೋಪಗೊಂಡ ಸರ್ಪಗಳನ್ನು ಮಂತ್ರಗಳಿಂದ ತಡೆಗಟ್ಟುವುದುಂಟಲ್ಲವೆ? ಹಾಗೆ ಈ ರಾಜರನ್ನು ನನ್ನ ನೂರಾರು ಬಾಣಗಳಿಂದ ತಡೆಗಟ್ಟುವೆ."

ಹೀಗೆ ಹೇಳಿದವನೇ, ಪಣಕ್ಕಾಗಿ ಅಲ್ಲಿಟ್ಟಿದ್ದ ಬಿಲ್ಲನ್ನೇ ಬಗ್ಗಿಸಿ (ಹೆದೆಯೇರಿಸಿ) ನಿಶ್ಚಲವಾದ ಪರ್ವತದಂತೆ ಭೀಮಸೇನನೊಂದಿಗೆ ನಿಂತನು, ಮಹಾಬಲಶಾಲಿಯಾದ ಅರ್ಜುನ. ಕರ್ಣನೇ ಮೊದಲಾದ ಕ್ಷತ್ರಿಯರು ರಣಮದವನ್ನು ಹೊಂದಿದ್ದವರು; ಅವರನ್ನೆದುರಿಸಿದರು ಈ ಭೀಮಾರ್ಜುನರು.

ಯುದ್ಧಮಾಡಲೆದ್ದಿದ್ದ ಆ ರಾಜರು (ಆ ಬ್ರಾಹ್ಮಣರನ್ನು ಕುರಿತು) ಪರುಷವಾದ ಮಾತುಗಳನ್ನಾಡಿದರು(ಪರುಷ ಎಂದರೆ ಕಠೋರ): "ಯುದ್ಧ ಮಾಡಲಿಚ್ಛಿಸುವ ಬ್ರಾಹ್ಮಣನನ್ನು ಸಹ ಯುದ್ಧದಲ್ಲಿ ಕೊಲ್ಲಬಹುದೆಂಬುದನ್ನು ಶಾಸ್ತ್ರಗಳಲ್ಲಿ ಹೇಳಿದೆ". ಹೀಗೆಂಬುದಾಗಿ ಹೇಳಿದವರೇ ಆ ಬ್ರಾಹ್ಮಣರತ್ತ ಒಡನೆಯೇ ಧಾವಿಸಿದರು. ಆಗ ಮಹಾತೇಜಸ್ವಿಯಾದ ಕರ್ಣನು ಅರ್ಜುನನತ್ತ ಸೆಣಸಲು ಇತ್ತ ಬಂದನು. ಅತ್ತ, ಮಹಾಬಲಶಾಲಿಯಾದ ಹಾಗೂ ಮದ್ರದೇಶಪ್ರಭುವಾದ ಶಲ್ಯನು ಭೀಮಸೇನನತ್ತ ಸಾಗಿದನು - ಹೆಣ್ಣಾನೆಯೊಂದಕ್ಕೋಸ್ಕರ ಒಂದು ಗಂಡಾನೆಯು ಮತ್ತೊಂದು ಗಂಡಾನೆಯ ಮೇಲೆ ಸೆಣಸಲು ಸಾಗುವ ಹಾಗಿತ್ತು ಆ ದೃಶ್ಯ. ದುರ್ಯೋಧನಪ್ರಭೃತಿಗಳೆಲ್ಲರೂ ಬ್ರಾಹ್ಮಣರೊಂದಿಗೆ ಪ್ರತಿಯುದ್ಧಮಾಡಿದರು: ಕಷ್ಟವನ್ನೇ ಪಡದೆ, ಮೃದುವಾಗಿಯೇ ಅವರೊಂದಿಗೆ ಯುದ್ಧಮಾಡಿದರು.

ಆದರೆ  ಮತ್ತೊಂದೆಡೆ,  ಬಲಶಾಲಿಯಾದ ಧನುಸ್ಸನ್ನು ಹೆದೆಯೇರಿಸಿ ತನ್ನ ಮೇಲೇರಿ ಬರುತ್ತಿದ್ದ ಸೂರ್ಯಪುತ್ರ ಕರ್ಣನನ್ನು ತನ್ನ ಶಿತವಾದ (ಎಂದರೆ ಚೂಪಾದ) ಬಾಣಗಳಿಂದ ಘಾಸಿಗೊಳಿಸಿದನು, ಅರ್ಜುನ. ವೇಗದಿಂದ ಬರುತ್ತಿದ್ದ ಹಾಗೂ ತೀಕ್ಷ್ಣತೇಜಸ್ಸುಳ್ಳ ಆ ಬಾಣಗಳ ವೇಗದಿಂದಾಗಿ ಕರ್ಣನು ಮೂರ್ಛೆಗೊಳ್ಳುವುದರಲ್ಲಿದ್ದನು.

ಆದರೂ ಅರ್ಜುನನತ್ತ ಮಹಾಕಷ್ಟದಿಂದಲೇ ಸಾಗಿದನು. ಇಬ್ಬರೂ ಜಯಶಾಲಿಗಳೇ. ಇಬ್ಬರ ಹಸ್ತಲಾಘವವೂ (ಎಂದರೆ ಕೈಚಳಕವೂ) ಸಮಾನವೇ. ಪರಸ್ಪರ ಸೋಲಿಸುವ ಬಯಕೆ ಇಬ್ಬರಲ್ಲೂ ಇದ್ದದ್ದೇ. ಅಂತೂ ಮಹಾಕ್ರೋಧದಿಂದಲೇ ಇಬ್ಬರೂ ಸೆಣಸಿದರು. ಇಬ್ಬರೂ ಒಬ್ಬರನ್ನೊಬ್ಬರು ಮೂದಲಿಸುತ್ತಿದ್ದರು : "ನಿನ್ನ ಅಸ್ತ್ರಕ್ಕೆ ನನ್ನ ಪ್ರತ್ಯಸ್ತ್ರ ಹೇಗಿದೆ, ನೋಡು! ಅದಿರಲಿ, ನನ್ನ ತೋಳ್ಬಲ ನೋಡು!" ಎಂದು ಮುಂತಾಗಿ ಶೌರ್ಯಸೂಚಕವಾದ ಮಾತುಗಳು ಅವರಿಂದ ಹೊಮ್ಮುತ್ತಿದ್ದ್ದವು. ಬರಬರುತ್ತಾ ಕರ್ಣನಿಗೆ ಗೊತ್ತಾಯಿತು, ಅರ್ಜುನನ ಭುಜಗಳ ವೀರ್ಯವು ಭೂಲೋಕದಲ್ಲೇ ಅದೆಷ್ಟು ಅಪ್ರತಿಮವಾಗಿದೆ! - ಎಂಬುದು (ಯಾವುದಕ್ಕೆ ಪ್ರತಿಮೆ, ಅರ್ಥಾತ್ ಸರಿಸಾಟಿ, ಇಲ್ಲವೋ ಅದು ಅಪ್ರತಿಮ; ಅನುಪಮ). ಕರ್ಣನು ಇದನ್ನರಿತು ಕ್ರೋಧಪೂರ್ವಕವಾಗಿ ಅವನೊಡನೆ ಯುದ್ಧಗೈದನು. ಅರ್ಜುನನಿಂದ ಬರುತ್ತಿದ್ದ ವೇಗಶಾಲಿ ಬಾಣಗಳನ್ನು ಪ್ರತಿಹನನ ಮಾಡಿ, ಉಚ್ಚವಾಗಿ (ಎಂದರೆ ಗಟ್ಟಿಯಾಗಿ) ಗರ್ಜಿಸಿದನು. ಸೈನಿಕರು ಇದನ್ನು ಮೆಚ್ಚಿಕೊಂಡರು.

ಆಗ ಕರ್ಣನು ಹೇಳಿದನು: ಅಯ್ಯಾ, ಬ್ರಾಹ್ಮಣರಲ್ಲಿ ಮುಖ್ಯನಾದವನೇ! ಯುದ್ಧದಲ್ಲಿಯ ನಿನ್ನ ಭುಜವೀರ್ಯಕ್ಕೆ ನನಗೆ ಸಂತೋಷವಾಗಿದೆ! ನೀನು ಉತ್ಸಾಹಗುಂದದೆ ಹೋರಾಡಿರುವೆ; ನಿನ್ನ ಶಸ್ತ್ರಗಳ ಹಾಗೂ ಅಸ್ತ್ರಗಳ ಪ್ರಯೋಗವನ್ನು ಕಂಡೂ ತುಷ್ಟನಾಗಿದ್ದೇನೆ. ನೀನೇನು ಸಾಕ್ಷಾದ್ ಧನುರ್ವೇದವೇ ಆಗಿರುವೆಯಾ? ಅಥವಾ ಸಾಕ್ಷಾತ್ ಪರಶುರಾಮನೇಯೇಯೋ? ಅಥವಾ ಇಂದ್ರನೋ, ಅಥವಾ ಸಾಕ್ಷಾದ್ ವಿಷ್ಣುವೇ ಆಗಿರುವೆಯೋ? ನನಗೆ ಹೀಗೆ ತೋರುತ್ತಿದೆ: ನಿನ್ನ ವಾಸ್ತವರೂಪವನ್ನು ಬಚ್ಚಿಡಲೆಂದು ಬ್ರಾಹ್ಮಣವೇಷವನ್ನು ಧರಿಸಿ ನನ್ನ ಮೇಲೆ ಯುದ್ಧ ಮಾಡುತ್ತಿರುವೆ!

ಸೂಚನೆ : 13/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 50 (Yaksha prashne 50)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 49 ದೈವದತ್ತನಾದ ಮಿತ್ರ ಯಾರು  ?

ಉತ್ತರ - ಭಾರ್ಯಾ 

ಕುಟುಂಬ ವ್ಯವಸ್ಥೆಯಲ್ಲಿ ಸತಿ-ಪತಿಯರ ಪಾತ್ರ ಬಹಳ ಮಹತ್ತ್ವದ್ದು ಮತ್ತು ಸಮಾನವಾದದ್ದು. ಅವರ ಸಮಭಾಗಿತ್ವದಿಂದಲೇ ಆ ಕುಟುಂಬವು ಔನ್ನತ್ಯಕ್ಕೆ ಏರಲು ಸಾಧ್ಯ. ಭಾರತೀಯ ಸಂಸ್ಕೃತಿಯು ಮಡದಿಗಿ ಪತಿಯಷ್ಟೇ ಸ್ಥಾನವನ್ನು ಕೊಟ್ಟಿದೆ. 'ಅರ್ಧಂ ಭಾರ್ಯಾ ಮನುಷ್ಯಸ್ಯ' 'ಶ್ರೀಕಂಠಾರ್ಧಶರೀರಿಣೀಂ' ಎಂದು ಪಾರ್ವತಿಯನ್ನು ವರ್ಣಿಸಿದ್ದುಂಟು. ಉಪದೇಶದ ಮೂರು ಕ್ರಮಗಳಲ್ಲಿ ಕಾಂತಾಸಂಮಿತಾ ಎಂದು ಭಾರ್ಯೆಯನ್ನು ಒಬ್ಬ ಉಪದೇಶವನ್ನು ಮಾಡುವ ಸ್ಥಾನದಲ್ಲಿ ಇಟ್ಟು ಗೌರವಿಸಿದ್ದು ಇದೇ ಸಂಸ್ಕೃತಿ. ವಿವಾಹ ಎಂಬ ಅತಿಮುಖ್ಯವಾದ ಸಂಸ್ಕಾರ ಕರ್ಮವು ಸ್ತ್ರೀಯನ್ನು ಪುರುಷನ ಸಮಾನತೆಯ ಪ್ರತೀಕವಾಗಿಸಿದೆ. ಹೆಂದತಿಗೆ ಸಂಸ್ಕೃತದಲ್ಲಿ ಸಹಧರ್ಮಿಣೀ' ಎಂಬ ಪದ ಬಂದಿದೆ. ಧರ್ಮಕಾರ್ಯವನ್ನು ಮಾಡುವಾಗ ಪತ್ನಿ ಇಲ್ಲದಿದ್ದರೆ ಆ ಕಾರ್ಯವು ಪರಿಪೂರ್ಣವಾಗಲಾರದು. 'ಪತ್ನಿ ಎಂಬ ಶಬ್ದವು ಯಜ್ಞದಲ್ಲಿ ಪತ್ನಿಯ ಸಹಭಾಗಿತ್ವವನ್ನು ಸೂಚಿಸುವಂತಹದ್ದು. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳೂ ಕೂಡ ಸಂತೋಷಪಾಡುತ್ತಾರೆ. ಪತ್ನಿಯು ಕಣ್ಣಿರಿಟ್ಟ ಮನೆಯು ಉದ್ಧಾರವಾಗುವುದಿಲ್ಲ ಎಂಬ ಮಾತೂ ಜನಜನಿತವಾದುದು. ಇಷ್ಟೆಲ್ಲಾ ವಿಚಾರವನ್ನು ನೋಡಿದಾಗ ನಮಗೆ ಮನದಟ್ಟಾಗುವುದೇನೆಂದರೆ ಕುಟುಂಬದ ವ್ಯವಸ್ಥೆಯಿಂದಲೇ ಭಾರತೀಯ ಸಂಸ್ಕೃತಿಗೆ ಜಗಮನ್ನಣೆ ದೊರೆಯಲು ಕಾರಣಳೇ ಭಾರ್ಯಾ ಎಂಬುದನ್ನು ತಿಳಿಸಲು ಯಕ್ಷನು ದೈವದತ್ತನಾದ ಮಿತ್ರ ಯಾರು ? ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಅದಕ್ಕೆ ಧರ್ಮರಾಜನು 'ಭಾರ್ಯಾ' ಎಂಬ ಉತ್ತರವನ್ನು ಕೊಡುತ್ತಾನೆ. 

ಋಣಾನುಬಂಧದಿಂದ ಪಶು, ಪತ್ನಿ ಸುತ ಮತ್ತು ಆಲಯ ದೊರೆಯುತ್ತವೆ ಎಂಬ ಮಾತಿದೆ. ಆ ಋಣವನ್ನೇ ದೈವ ಎಂದಿದ್ದಾರೆ. ದೈವ ಎಂದರೆ ದೇವರಲ್ಲ. ದೇವ ಅಲ್ಲ. ಅದು ನಮ್ಮ ಕರ್ಮದ ಸಂಚಿತವಾದ ರೂಪವಷ್ಟೇ. ಮಾಡಿದ ಪ್ರತಿಯೊಂದು ಕರ್ಮಕ್ಕೂ ಒಂದು ಫಲ ಇದ್ದೇ ಇದೆ. ವರ್ತಮಾನದಲ್ಲಿ ನಾವು ಯಾವುದನ್ನು ಮಾಡದೆ ಅನುಭವಿಸುತ್ತಿದ್ದೇವೋ ಅದನ್ನೇ ಅದೃಷ್ಟ ದೈವ ಭಾಗ್ಯ ಎಂದೆಲ್ಲಾ ಕರೆಯುತ್ತಾರೆ. ಇಂದ ಕರ್ಮಫಲರೂಪವಾಗಿ ಸಿಗಿವಂತಹದ್ದೇ ಭಾರ್ಯಾ ಎಂದರ್ಥ. ಆ ಭಾರ್ಯೆಯೇ ಪುರುಷನ ಜೀವದನಲ್ಲಿ ಸಿಗಬಹುದಾದ ಉತ್ತಮ ಮಿತ್ರ. ಮಿತ್ರನ ಪಾತ್ರ ಜೀವನಕ್ಕೆ ಅನೇಕ ಬಾರಿ ಜೀವಿಕೆಯನ್ನು ಕೊಡುವುದುಂಟು. ಅಂತಹ ಮಿತ್ರರಲ್ಲಿ ಹೆಂಡತಿಯು ಮೊದಲಿಗಳು. ಏಕೆಂದರೆ ಉಳಿದೆಲ್ಲಾ ಮಿತ್ರರು ಯಾವುದೇ ಸಂದರ್ಭಕ್ಕೂ ನಮ್ಮಿಂದ ದೂರವಾಗಬಹುದು. ಆದರೆ ಪತ್ನಿ ಮಾತ್ರ ವಿವಾಹದಿಂದ ಆರಂಭವಾದ ಜೀವನ ಪಯಣಕ್ಕೆ ಅಂತ್ಯದದವರೆಗೂ ಸಹಚಾರಿಣೀ. ಪುರುಷನಿಂದ ಪಾಪಕಾರ್ಯಗಳು ಆಗದಂತೆ ನೋಡಿಕೊಳ್ಳುತ್ತಾಣೆ, ಉತ್ತಮ ಕಾರ್ಯಗಳಲ್ಲಿ ಅವನನ್ನು ತೊಡಗಿಸುತ್ತಾಳೆ. ರಹಸ್ಯವಾದುದನ್ನು ರಕ್ಷಿಸುತ್ತಾಳೆ. ಗುಣವನ್ನು ಬಿತ್ತರಿಸುತ್ತಾ ದೋಷಗಳನ್ನು ಅವನಿಗೆ ಅರಿವಾಗದಂತೆ ದೂರೀಕರಿಸುತ್ತಾಳೆ. ಯಾವುದೇ ಆಪತ್ತಿನಲ್ಲೂ ಆಕೆಯು ಪತಿಯ ಜೊತೆ ಇದ್ದು ಸಹಕರಿಸುತ್ತಾಳೆ. ಸಂಪತ್ತಿನಲ್ಲಿ ಮಾತ್ರ ಜೊತೆಗಿರುವವರು ಮಿತ್ರರಾಗುವುದಿಲ್ಲ. ಮಿತ್ರನ ಲಕ್ಷಣ ಪರಿಪೂರ್ಣವಾಗಿ ಅನ್ವಯವಾಗುವುದು ಭಾರ್ಯೆಯಲ್ಲಿ ಮಾತ್ರ. ಅವಳು ಕೇವಲ ಇಹಲೋಕಕ್ಕೆ ಮಾತ್ರವಲ್ಲ ಸಪ್ತ ಊರ್ಧ್ವಲೋಕದ ಪ್ರಯಾಣದಲ್ಲೂ ಸಹಪಥಿಕಳೇ. ಅದನ್ನೇ ನೆನಪಿಸಲು ವಿವಾಹದಲ್ಲಿ 'ಸಪ್ತಪದೀ' ಎಂಬ ಮುಖ್ಯವಾದ ಘಟ್ಟ. ಏಳು ಹೆಜ್ಜೆ ನಡೆದು ಮಿತ್ರನಾಗು ಬಾಣಿನುದ್ದಾಕ್ಕೂ ಹಾಗೇ ಇರುವಂತವಳು ಭಾರ್ಯೆ.  

ಸೂಚನೆ : 13/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, August 12, 2023

ಸುಸಂಸ್ಕಾರಗಳು ನಮ್ಮನ್ನು ಉದ್ಧರಿಸುವುವು (Susanskaragalu Nammannu Uddharisuvuvu)

 ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)


https://www.ayvm.in/publications )


ತಮಿಳು ಪ್ರಾಂತದಲ್ಲಿ ಶಿವಭಕ್ತ ಕುಟುಂಬವೊಂದರಲ್ಲಿ ಮಗುವಿನ ಜನನವಾಯಿತು. ಮಗುವಿನ ತಂದೆ ಜನಸಾಮಾನ್ಯರೆಲ್ಲರಿಗೂ ಶಿವಭಕ್ತಿಯನ್ನು ಸಾರುತ್ತಾ, ಶಿವಭಕ್ತಿಯಲ್ಲೇ ಮುಳುಗಿದ್ದ. ಮಗನನ್ನೂ ಶಿವಾರಾಧನೆ, ಶಿವಸ್ಮರಣೆಗಳೊಂದಿಗೇ ಬೆಳೆಸಿದ. ವಿಧೇಯನಾಗಿದ್ದ ಮಗ. ಆದರೆ ಎಲ್ಲೋ ಮಧ್ಯದಲ್ಲಿ ಲೌಕಿಕ ವ್ಯವಹಾರಗಳಲ್ಲಿ ವ್ಯಸ್ತನಾಗಿ, ಶಿವ ಸ್ಮರಣೆಯನ್ನು ಮರೆತ.


 ವಯಸ್ಸಿಗೆ ಬಂದಾಗ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಲಾಯಿತು. ವಿವಾಹವು  ಧರ್ಮಪ್ರಜೆಯನ್ನು ಪಡೆಯಲು, ಧರ್ಮಪತ್ನಿಯನ್ನು ಸ್ವೀಕರಿಸುವ  ಸಂಸ್ಕಾರ, ಎಂಬುದನ್ನು ಮರೆತು, ಕೇವಲ ಇಂದ್ರಿಯಗಳ ತೃಪ್ತಿಗಾಗಿ, ಆಡಂಬರಗಳೊಂದಿಗೆ ಏರ್ಪಟ್ಟಿತ್ತು. ಆಹ್ವಾನಿತ ಅತಿಥಿಗಳೆಲ್ಲರೂ ಆಗಮಿಸಿದ್ದರು. ವರನು ವಧುವಿಗೆ ಮಾಂಗಲ್ಯವನ್ನು ಕಟ್ಟಬೇಕೆನ್ನುವಾಗ, ವೃದ್ಧ ಬ್ರಾಹ್ಮಣನೊಬ್ಬ "ಇಲ್ಲ, ದಯವಿಟ್ಟು ಈ ಮದುವೆಯನ್ನು ನಿಲ್ಲಿಸಿ" ಎಂದು ಕೂಗುತ್ತಾ ಬಂದನು. ಯಾವುದೋ ಆಶೌಚ ಬಂದಿರಬಹುದು, ಎಂದು ಆತಂಕಗೊಂಡ ಜನ ಪಿಸುಗುಟ್ಟಿದರು. "ಇಲ್ಲ ಯಾವ ಆಶೌಚವೂ ಇಲ್ಲ. ವಿಷಯವೇನೆಂದರೆ, ಈ ವರ ನನ್ನ ದಾಸ. ನನ್ನ ಅನುಮತಿಯಿಲ್ಲದೆ ಮದುವೆಯಾಗುವಂತಿಲ್ಲ" ಎಂದ ಬ್ರಾಹ್ಮಣ. "ಎಲೋ! ನಿನಗೆ ತಲೆ ಕೆಟ್ಟಿದೆ. ಅವನ ಕೆಳಗೆ ಹಲವಾರು  ಸೇವಕರು ಕೆಲಸ ಮಾಡುವರು. ಅವನು ದಾಸನಲ್ಲ" ಎಂದು ಅಲ್ಲಿದ್ದವರೆಲ್ಲಾ ತರ್ಕ ಮಾಡಿದರು. "ನಾನು ವ್ಯರ್ಥ ಮಾತನಾಡುವವನಲ್ಲ. ಇಗೋ ನೋಡಿ ಪತ್ರ" ಎಂದು ವರನ ಕೈಬರಹದಿಂದಲೇ ಲಿಖಿತವಾದ ಪತ್ರವನ್ನು ತೋರಿಸಿದ ಬ್ರಾಹ್ಮಣ. ಅದರಲ್ಲಿ "ನಾನು ಬಹಳ ಕಾಲದಿಂದ ನಿನ್ನ ದಾಸ" ಎಂದು ಬರೆದಿತ್ತು..


 ಸತ್ಯ ಧರ್ಮಗಳನ್ನು ಆದರಿಸುತ್ತಿದ್ದ ಅಂದಿನ ಸಮಾಜವು, ಮದುವೆಯ ಸಡಗರವನ್ನು ಬಿಟ್ಟು ಸತ್ಯಾನ್ವೇಷಣೆಗೆ ಉದ್ಯುಕ್ತರಾದರು. ವರನಿಗೆ ಆಶ್ಚರ್ಯ! ಪತ್ರವನ್ನಾವಾ ಬರೆದನೆಂದು ನೆನಪಾಗದಿದ್ದರೂ, ಅವನ ಹಸ್ತಾಕ್ಷರದಲ್ಲಿ ಕಪಟವಿಲ್ಲವೆಂದು ನಂಬಿದನು. ಕ್ಷಣಮಾತ್ರದಲ್ಲಿ ಕೋಪಗೊಂಡು ಪತ್ರವನ್ನು ಹರಿದು ಬಿಸಾಡಿದ. ಬ್ರಾಹ್ಮಣನು ನಕ್ಕು "ನೀನು ಹರಿದರೇನಂತೆ, ಅದರ ಅಸಲು ನನ್ನ ಹಳ್ಳಿಯಲ್ಲಿದೆ" ಎಂದ. "ನನಗೆ ತೋರು" ಎಂದ ವರ. "ಸತ್ಯವನ್ನು ಬಯಸುವ ಹಿರಿಯರೆಲ್ಲರೂ ನನ್ನೊಂದಿಗೆ ಬನ್ನಿ" ಎಂದು ಹೇಳಿ, ಶಿವದೇವಾಲಯಕ್ಕೆ ಎಲ್ಲರನ್ನೂ ಕರೆದೊಯ್ದ ವೃದ್ಧ. 


"ಇವನು ದಾಸ. ಇಂದಿನಿಂದ ಮಾತ್ರವಲ್ಲ, ಇವನ ತಂದೆ, ತಾತ, ಮುತ್ತಾತ, ಏಳು ಪೀಳಿಗೆಗಳಿಂದ ಎಲ್ಲರೂ ನನ್ನ ದಾಸರು" ಎಂದು ಪತ್ರದಲ್ಲಿ ಬರೆದಿತ್ತು. ವರನಿಗೆ ಮರುಮಾತೇ ಹೊರಡಲಿಲ್ಲ. ಬ್ರಾಹ್ಮಣ ಅದೃಶ್ಯನಾದ!! ಅವನ ಪೂರ್ವ ಸಂಸ್ಕಾರಗಳು ಅವನ ಹಿಂದಿನ ಧಾರ್ಮಿಕ ಜೀವನವನ್ನು ನೆನಪಿಗೆ ತರಿಸಿದವು. ಭಗವಂತನಲ್ಲಿ " ನಾನು ನಿನ್ನ ದಾಸಾನುದಾಸ, ನನ್ನ ದಾಸ್ಯವನ್ನು ಸ್ವೀಕರಿಸಿ ನನ್ನನ್ನು ಉದ್ಧರಿಸು ಎಂದು ಪ್ರಾರ್ಥನೆ ಮಾಡಿದ್ದೆಲ್ಲವೂ ಸ್ಮರಣೆಯಾಯಿತು. "ದೇವರೇ! ಇಂದ್ರಿಯಗಳ ದುರ್ವ್ಯವಹಾರವನ್ನು ತಡೆಗಟ್ಟಿ, ದಾಸನಾಗಿಸಿದೆಯಪ್ಪಾ" ಎಂದು ಅಡ್ಡಬಿದ್ದ. "ನಿನಗೆ ನಾನು ಶರಣಾಗಿದ್ದೇನೆ,ನನ್ನನ್ನು ನಿನ್ನ ಚರಣಕಮಲಗಳಲ್ಲಿ ಸೇರಿಸಿಕೊ ", ಎಂಬುದು ಅವನ ಚಿಕ್ಕಂದಿನ ಪ್ರಾರ್ಥನೆಯಾಗಿತ್ತು. ಅವನು ಮರೆತರೂ ದೇವರು ಅದನ್ನು ಮರೆತಿರಲಿಲ್ಲ. ಸೂಕ್ತ ಸಮಯದಲ್ಲಿ ಜ್ಞಾಪಿಸಿದ. 


ಪೂರ್ವಸುಕೃತಗಳ ಪಾತ್ರ:

ಅವನ ಪೂರ್ವಸಂಸ್ಕಾರಗಳು ಅವನನ್ನು ಹೀಗೆ ಶರಣಾಗುವಂತೆ ಮಾಡಿತು, ಎಂದು ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ಈ ಕಥೆಯನ್ನು ಹೇಳುತ್ತಿದ್ದರು. ಪೂರ್ವಸಂಸ್ಕಾರವೆಂದರೆ, ವಂಶವಾಹಿಯಾಗಿ, ಹಾಗೂ ನಮ್ಮ ಆಚರಣೆಗಳಿಂದ ಪಡೆದುಕೊಂಡಿರುವ  ದೇಹಾತ್ಮಶುದ್ಧಿ. ಹೇಗೆ ಒಂದು ರಸ್ತೆಯು ಚೆನ್ನಾಗಿದ್ದರೂ, ಬಹುಕಾಲ ಬಳಸದಿದ್ದರೆ, ಮುಳ್ಳುಗಿಡಗಳು ಬೆಳೆದು, ನಡೆಯಲು ದುಸ್ತರವಾಗುತ್ತದೆಯೋ,, ಹಾಗೇ ಜನ್ಮದಿಂದ ಸಂಸ್ಕಾರಿಯಾಗಿದ್ದರೂ,ಈ ವರನು ಹಿರಿಯರು ಹಾಕಿಕೊಟ್ಟ ಧರ್ಮದ ದಾರಿಯನ್ನು ಮರೆತಿದ್ದರಿಂದ, ಆ ಮಾರ್ಗ ಮುಸುಕಾಗಿತ್ತು. ಮೋಡಗಳು ಮರೆಯಾಗಿ ಸೂರ್ಯ ದರ್ಶನವಾದಂತೆ ತೀವ್ರವಾದ ಅವನ ಪೂರ್ವ ಸಂಸ್ಕಾರಗಳು ಈ ಘಟನೆಯಿಂದ ಮತ್ತೆ ಮುನ್ನೆಲೆಗೆ ಬಂದವು.


ಪವಿತ್ರ ಸಂಸ್ಕಾರ-ವಿವಾಹ

ವಿವಾಹವು ಸತ್ಸಂತಾನವನ್ನು ಪಡೆಯಲು, ಧರ್ಮ,ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸಲು ಋಷಿಗಳು ತಂದಿರುವ  ಸಂಸ್ಕಾರ.  ಜಗನ್ಮಾತಾಪಿತೃಗಳ ಸಂಕಲ್ಪದಂತೆ ಇಬ್ಬರೂ ಸೇರಿ, ಪುರುಷಾರ್ಥಮಯವಾಗಿ ಜೀವನ ನಡೆಸೋಣ, ಅನ್ನುವುದು ವಿವಾಹದ ಪವಿತ್ರ ಸಂಕಲ್ಪ. ಅಂತಹ ಸಂಕಲ್ಪದೊಂದಿಗಿನ ಮಿಲನ ಸತ್ಸಂತಾನವನ್ನು ಸೃಷ್ಟಿಯಲ್ಲಿ ಮುಂದುವರೆಸಲು ಸಹಾಯಕವಾಗುತ್ತದೆ.ಅದಿಲ್ಲದೇ ಪಶುಗಳಂತೆ ಕೇವಲ ಇಂದ್ರಿಯ ಸುಖದ ಅಪೇಕ್ಷೆಯಿಂದಷ್ಟೇ ಆದ ಒಂದುಗೂಡುವಿಕೆ ಮಹರ್ಷಿಗಳು ತಂದ ಪವಿತ್ರ ಸಂಸ್ಕಾರವಾದ ವಿವಾಹ ಆಗದು. ಎಂದೇ ಅವನನ್ನು ಅಂತಹ ಕಾರ್ಯಕ್ಕೆ ಅಣಿಗೊಳಿಸಿದ ಕರುಣೆ ಭಗವಂತನದು.


ಇಂದ್ರಿಯಕ್ಷೇತ್ರಕ್ಕೆ ಜಾರಿದ ವರನನ್ನು ಮತ್ತೊಮ್ಮೆ ಧರ್ಮ ಮಾರ್ಗಕ್ಕೆ ಎಳೆದು, ಆನಂತರವೇ ವಿವಾಹ ನಡೆಯಬೇಕೆಂಬುದು ಬ್ರಾಹ್ಮಣ ರೂಪಿಯಾದ ಭಗವಂತನ ಇಚ್ಛೆಯಾಗಿತ್ತು.


 "ಸತ್ಯಕ್ಕೆ ಕವಚವಾದ ಧರ್ಮವನ್ನು ಸತ್ಯರೂಪನಾದವನು ಉಳಿಸುತ್ತಾನೆ. ಧರ್ಮಕ್ಕೆ ಬಂದ ಮುಸುಕನ್ನು ತೆಗೆಯಲು ಅವನೇ ಯತ್ನಿಸುತ್ತಾನೆ. ಭಗವಂತನ ಬಳಿಯಿದ್ದ ಜೀವ, ಇಂದ್ರಿಯಗಳ ಕೈಗೆ ಸಿಕ್ಕಿಹಾಕಿಕೊಂಡು ಬಿದ್ದಿದೆ. ಈ ರೀತಿ ಬಿದ್ದಿದ್ದನ್ನು ಮೆಲಕ್ಕೆತ್ತುವುದೇ ಧರ್ಮ". "ಬಿದ್ದವನನ್ನು, ಬೀಳುತ್ತಿರುವವನನ್ನು, ಬೀಳುವವನನ್ನು ಮೇಲೆತ್ತುವುದೇ ಧರ್ಮ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ..


ನಿರಂತರವಾಗಿ ಭಗವಂತನ ಸ್ಮರಣೆಯಿಂದ, ಸಜ್ಜನರ ಸಹವಾಸದಿಂದ ಸಂಸ್ಕಾರಿಗಳಾಗಿದ್ದರೆ, ಅದು ಎಂದೆಂದಿಗೂ ನಮ್ಮ ಜೊತೆಯಿದ್ದು ಬೀಳದಂತೆ ರಕ್ಷಿಸುತ್ತದೆ. ಅಂತಹ ಜ್ಞಾನೀ ಜನರ ಮಾರ್ಗದಲ್ಲಿ ಹೆಜ್ಜೆ ಹಾಕೋಣ.


ಸೂಚನೆ : 12/08/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.



Thursday, August 10, 2023

ಪುತ್ರನಿಂದ ಬ್ರಹ್ಮಜ್ಞಾನ ಪಡೆದ ಮಹಾತಾಯಿ ದೇವಹೂತಿ (Putraninda Brahmajnana Padeda Mahatayi Devahuti)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 
ಪ್ರತಿಕ್ರಿಯಿಸಿರಿ lekhana@ayvm.in)




ಹಿಮಾಲಯದ ಪರ್ವತ ಶ್ರೇಣಿ. ಪಾರ್ವತೀ- ಪರಮೇಶ್ವರರು ವಿಹರಿಸುವ ತಾಣ. ಪ್ರಶಾಂತ ಗಂಭೀರ ವಾತಾವರಣ. ಅಲ್ಲೊಂದು
ಸುಂದರ, ರಮಣೀಯ ಆಶ್ರಮ. ಪ್ರಜಾಪತಿಗಳಲ್ಲಿ ಒಬ್ಬರಾದ ಕರ್ದಮ ಮಹರ್ಷಿಗಳು ತಪೋ- ಧ್ಯಾನ - ಸಮಾಧಿಯಲ್ಲಿ ಮುಳುಗಿ
ಆಗತಾನೆ ಹೊರಬಂದು ಬಾಹ್ಯಪ್ರಪಂಚದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಆಸೀನರಾಗಿದ್ದಾರೆ. ಅಲ್ಲಿಗೆ
ಸ್ವಾಯಂಭುವ ಮನು, ಅವರ ಪತ್ನಿ ಶತರೂಪಾ ಮತ್ತು ಪುತ್ರಿ ದೇವಹೂತಿಯರು ದೇದೀಪ್ಯಮಾನವಾದ ರಥದಲ್ಲಿ
ಆಗಮಿಸುತ್ತಾರೆ. ಕರ್ದಮರನ್ನು ಏಕಾಂತದಲ್ಲಿ ಕಂಡ ಸ್ವಾಯಂಭುವ ಮನುವು, ತನ್ನ ಮಗಳಾದ ಸರ್ವ ಗುಣ ಸಂಪನ್ನೆಯಾದ
ದೆವಹೂತಿಯನ್ನು ವರಿಸುವಂತೆ ಕರ್ದಮರಲ್ಲಿ ಪ್ರಾರ್ಥಿಸುತ್ತಾನೆ. ಬ್ರಹ್ಮಚರ್ಯಾಶ್ರಮದಲ್ಲಿ ಸಾಧಿಸಬೇಕಾದ ಭಗವತ್ಸಾಕ್ಷಾತ್ಕಾರ
ಸಿದ್ಧಿಗಳನ್ನೆಲ್ಲ ಪಡೆದ ಕರ್ದಮರು, ವಂಶವೃದ್ಧಿಗೋಸ್ಕರ ಗೃಹಸ್ಥಾಶ್ರಮವನ್ನು ಸ್ವೀಕರಿಸುವ ಉದ್ದೇಶದಿಂದ
ಪರವಾಸುದೇವನನ್ನು ಕುರಿತು ತಪಸ್ಸು ಮಾಡಿರುತ್ತಾರೆ. ಪ್ರತ್ಯಕ್ಷನಾದ ಭಗವಂತ 'ನಿನಗೆ ಯೋಗ್ಯಳಾದ ಕನ್ಯೆಯು ತಾನಾಗಿಯೇ
ಶೀಘ್ರದಲ್ಲಿ ಬರುವವಳಿದ್ದಾಳೆ. ಸ್ವಾಯಂಭುವ ಮನುವಿನ ಪುತ್ರಿ. ಅವಳನ್ನು ನೀನು ವಿವಾಹವಾಗು. ನಾನೇ ನಿನ್ನ ವೀರ್ಯದಲ್ಲಿ
ಇಳಿದು, ನಿನಗೆ ಪುತ್ರನಾಗಿ ಜನಿಸುವೆ' ಎಂಬ ವರ ಕೊಟ್ಟಿರುತ್ತಾನೆ. ಇದನ್ನು ನೆನೆದ ಕರ್ದಮರು- ತಾನು
ಸಂತಾನೋತ್ಪತ್ತಿಯವರೆವಿಗೂ, ಗೃಹಸ್ಥ ಧರ್ಮಪಾಲಿಸಿ ಅನಂತರ ಸಂನ್ಯಾಸಧರ್ಮಕ್ಕೆ ಮನಕೊಡುವೆನೆಂಬ ನಿಬಂಧನೆಯ ಮೇಲೆ
ವಿವಾಹಕ್ಕೆ ಸಮ್ಮತಿಸುತ್ತಾರೆ, ಒಪ್ಪಿದ ರಾಜದಂಪತಿಗಳು, ಆ ಆಶ್ರಮದಲ್ಲೇ ತಮ್ಮ ಪ್ರೀತಿಯಪುತ್ರಿ ದೇವಹೂತಿಯನ್ನು
ಕರ್ದಮರಿಗೆ ವಿವಾಹ ಮಾಡಿಕೊಡುತ್ತಾರೆ.

ತಾನಿರುವುದು ಒಬ್ಬ ಋಷಿವರೇಣ್ಯರ ಆಶ್ರಮವೆಂದು ಅರಿತ ದೇವಹೂತಿ, ರಾಜಪುತ್ರಿಯೆಂದು ಮರೆತು, ಆಶ್ರಮದ ಗಾಂಭೀರ್ಯಕ್ಕೆ
ತಕ್ಕಂತೆ, ಸರ್ವಜ್ಞರಾದ ಕರ್ದಮರ ಸೇವೆಯಲ್ಲಿ ನಿರತಳಾಗುತ್ತಾಳೆ, ಪಾರ್ವತೀದೇವಿ ಪರಶಿವನ ಸೇವೆಯಲ್ಲಿ ನಿರತಳಾದಂತೆ.
ಹಲವು ಕಾಲದ ಸೇವೆಯಿಂದ ಸಂತೃಪ್ತರಾಗಿ, ಸೊರಗಿದ ರಾಜಕುಮಾರಿಯನ್ನು ಕಂಡ ಕರ್ದಮರು, ಅವಳಿಗೆ ದೇವತೆಗಳ
ಭೋಗವನ್ನು ಅನುಭವಿಸಲು ಯೋಗ್ಯವಾದಂತಹ ದಿವ್ಯದೇಹವನ್ನು ಅನುಗ್ರಹಿಸುತ್ತಾರೆ, ತಮ್ಮ ತಪೋಬಲದಿಂದ. ಕಾಲಕ್ರಮದಲ್ಲಿ
ಕರ್ದಮ-ದೇವಹೂತಿಯರಿಗೆ ಒಂಭತ್ತು ಸ್ತ್ರೀ ರತ್ನಗಳು ಜನಿಸುತ್ತವೆ. ಅವರನ್ನೆಲ್ಲಾ ಸರಿಯಾದ ವರರಿಗೆ
ವಿವಾಹಮಾಡಿಕೊಡುತ್ತಾರೆ.

ಇಷ್ಟೆಲ್ಲಾ ಭೋಗ ಭಾಗ್ಯಗಳಿದ್ದರೂ ದೇವಹೂತಿಯ ಮನದಲ್ಲಿ ಒಂದು ಕೊರತೆ - ತಾನೊಬ್ಬ ಬ್ರಹ್ಮರ್ಷಿಯ ಪತ್ನಿಯಾದರೂ
ಅವರಿಂದ ಬ್ರಹ್ಮ ಮಾರ್ಗವನ್ನು ತಿಳಿದುಕ್ಕೊಳ್ಳಲಿಲ್ಲವಲ್ಲವೆಂದು. ಪತಿಯನ್ನು ಏಕಾಂತದಲ್ಲಿ ಕಂಡ ಅವಳು, ಬ್ರಹ್ಮಕ್ಕೆ
ದಾರಿಯನ್ನು ಬೇಡುತ್ತಾಳೆ. ಮಹಾಜ್ಯೋತಿಯನ್ನು ಗರ್ಭದಲ್ಲಿ ಧರಿಸಿರುವಳೆಂದು ಅರಿತ ಅವರು, ದೇವಹೂತಿಗೆ ತಿಳಿಸುತ್ತಾರೆ
'ನಿನ್ನ ಗರ್ಭದಲ್ಲಿ ಈಗ ಬೆಳಗುತ್ತಿರುವವನು ಸಾಕ್ಷಾತ್ ಶ್ರೀಮನ್ನಾರಾಯಣನೇ. ಅವನೇ ನಿನಗೆ ದಾರಿಯನ್ನು ತೋರಿಸುತ್ತಾನೆ. ಈಗ
ನನ್ನ ಗೃಹಸ್ಥಧರ್ಮದ ಸಂಕಲ್ಪ ಮುಗಿದಿರುವುದರಿಂದ, ಮಾತಿನಂತೆ ಸನ್ಯಸ್ಥನಾಗುತ್ತೇನೆ' ಎಂದು ತಿಳಿಸಿ ತಮ್ಮ ಮುಂದಿನದಾರಿಗೆ
ಹೊರಡುತ್ತಾರೆ.

ದೇದೀಪ್ಯಮಾನವಾದ ಶಿಶು ಜನಿಸುತ್ತದೆ. ತಾನ್ಯಾರೆಂದು ಹುಟ್ಟಿನಿಂದಲೇ ಅರಿತ ಮಗು, ಶೀಘ್ರವಾಗಿ ಬೆಳೆದು ತಾರುಣ್ಯಕ್ಕೆ
ಕಾಲಿಡುತ್ತದೆ, ಕಪಿಲರಾಗಿ, ಮಹಾಮುನಿಯಾಗಿ. ಬೆಳೆದುನಿಂತ ದಿವ್ಯ ಮಂಗಲಸುಂದರಾಂಗನಾದ ಪುತ್ರ ಶ್ರೀಮನ್ನಾರಾಯಣನೇ
ಎಂದು ಅರಿತ ದೇವಹೂತಿ ಅವನನ್ನು ಏಕಾಂತದಲ್ಲಿ ಕಂಡು ನಮಸ್ಕರಿಸಿ 'ನೀನ್ಯಾರೆಂದು ನಿನ್ನ ತಂದೆಯವರಿಂದ ತಿಳಿದಿದ್ದೇನೆ.
ನನಗೆ ಭಗವಂತನ ಮಾರ್ಗವನ್ನು ತಿಳಿಸಿಕೊಡು' ಎಂದು ಬೇಡುತ್ತಾಳೆ. ತಾಯಿ ಮಗನಿಗೆ ನಮಸ್ಕರಿಸಬಹುದೇ? ಆದರೆ ಮಗ
ಭಗವಂತನೇ ಆದಾಗ? ಗುರುವಾಗಬೇಕಾದಾಗ? ದೇವಕೀದೇವಿಯು ತನ್ನಪುತ್ರನಿಗೆ ನಮಸ್ಕರಿಸಲಿಲ್ಲವೇ?

ನಮಸ್ಕರಿಸಿದ ತಾಯಿಗೆ ಕಪಿಲರು' ಸಾಂಖ್ಯಯೋಗದರ್ಶನ'ವನ್ನು ಉಪದೇಶಿಸುತ್ತಾರೆ. ತ್ರಿಗುಣಾತ್ಮಕವಾದ ಪ್ರಕೃತಿ ಹೇಗೆ ಆತ್ಮಕ್ಕೆ
ಮೋಸಮಾಡುತ್ತದೆ - ಸರಿಯಿಲ್ಲದ ಕನ್ನಡಿ ಪ್ರತಿಬಿಂಬವನ್ನು ಹೇಗೆಹೇಗೋ ತೋರಿಸುವಂತೆ. ಆತ್ಮ ನಮ್ಮೊಳಗಡೆಯೇ ಅಡಗಿದೆ -
ಆತ್ಮಾ ಗುಹಾಯಾಂ ನಿಹಿತೊsಸ್ಯ ಜಂತೋ: ಮಾನವರು ತಮ್ಮೊಳಗೇ ಇರುವ ಹಿರಣ್ಯಗರ್ಭನನ್ನು ಅರಿಯದೆ ದುಃಖದ
ಕಡಲಿನಲ್ಲಿ ಮುಳುಗಿರುತ್ತಾರೆ - ಭೂಮಿಯಲ್ಲಿ ಅಡಗಿರುವ ಸುವರ್ಣದ ಮೇಲೆ ಓಡಾಡುತ್ತಿದ್ದರೂ ಭಿಕಾರಿಯಾಗಿ ಅಲೆಯುವಂತೆ.
ಪಂಚಮಹಾಭೂತಗಳು, ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು, ಪಂಚ ತನ್ಮಾತ್ರೆಗಳು, ಮನಸ್ಸು, ಅಹಂಕಾರ, ಬುದ್ಧಿ
(ಮಹತ್), ಪ್ರಕೃತಿ ಇವುಗಳಿಂದ ಮಾಡಿದ ಇಪ್ಪತ್ತುನಾಲ್ಕು ಪೊರೆಗಳನ್ನು, ತಾನ್ಯಾರೆಂದು ಚಿಂತಿಸುವುದರಮೂಲಕ, ಭಕ್ತಿಯಿಂದ,
ಮಹಾಪುರುಷನ ಧ್ಯಾನದಿಂದ, ಮತ್ತು ಇವೆಲ್ಲವನ್ನೂ ಸೇರಿಸಿಕೊಂಡು ಹೇಗೆ ಬಂಧನದಿಂದ ಬಿಡುಗಡೆ ಹೊಂದುವುದು
ಎಂಬುದೆಲ್ಲವನ್ನೂ ತಿಳಿಸಿಕೊಟ್ಟು, ತನ್ನ ಮೂರ್ತಿಯೇ ಒಳಮಾರ್ಗದಲ್ಲಿ ಕೊಂಡೊಯ್ಯುವ ಮಂಗಲವಿಗ್ರಹವಾದುದರಿಂದ

ಅದನ್ನೇ ಹೇಗೆ ಧ್ಯಾನಮಾಡುವುದೆಂದು ತಿಳಿಸಿಕೊಟ್ಟು, 'ನಾನು ನಿನಗೆ ಬಹಳ ಪ್ರಿಯವಾದವನು, ದೇಹ ಸಂಬಂಧದಿಂದ
ಮಾತ್ರವಲ್ಲ, ಆತ್ಮಸಂಬಂಧದಿಂದಲೂಕೂಡ. ನನ್ನನು ಪ್ರೀತಿಯಿಂದ, ಅಥವಾ ಭಕ್ತಿಯಿಂದ, ತಂದೆಯಾಗಿ, ಗುರುವಾಗಿ ಕೊನೆಗೆ
ನಾನೇ ಆತ್ಮವೆಂದು ಧ್ಯಾನಮಾಡಮ್ಮ' 'ತಿಳಿಯಿತೇ?ಅರ್ಥವಾಯಿತೇ? ಮನಸ್ಸಿಗೆ ಬಂತೇ?' ಎಂದು ಮತ್ತೆಮತ್ತೆ ಕೇಳಿ, ಅವಳಿಗೆ
ತಿಳಿಯಿತೆಂದು ಮನದಟ್ಟುಮಾಡಿಕೊಂಡು, ತಾನೂ ಈಶಾನ್ಯ ದಿಕ್ಕಿಗೆ ತಪಸ್ಸಿಗೆ ಹೊರಡುತ್ತಾರೆ.

ನಾವೆಲ್ಲಾ ಭಗವಂತನಿಂದ ೨೫ ಮೈಲಿಗಳ ದೂರದಲ್ಲಿ ಇದ್ದೇವೆ. ೨೪ ಪ್ರಕೃತಿ ತತ್ವಗಳು, ೨೫ ನೆಯ ಜೀವ. ೨೬ ನೇ ಪರತತ್ತ್ವವೇ
ಭಗವಂತ ಎಂದು ಶ್ರೀರಂಗ ಮಹಾಗುರುಗಳು ಮಾರ್ಮಿಕವಾಗಿ ತಿಳಿಸಿದ್ದು ಇಲ್ಲಿ ಸ್ಮರಣೀಯ. ಸಕಲ ಸುಖ ಭೋಗಗಳು
ಮುಂದಿದ್ದರೂ ಪರಮಾನಂದದ ನೆಲೆಯಾದ ಬ್ರಹ್ಮತತ್ತ್ವದ ಉಪದೇಶಕ್ಕಾಗಿ ಮಗನನ್ನೇ ಆಶ್ರಯಿಸಿದ ಮಹಾತಾಯಿ ದೆವಹೂತಿಗೆ
ನಮೋನಮಃ. ಹಿಮಾಲಯದ ಮಡಿಲಲ್ಲಿ ಕಪಿಲವಸ್ತು ಎಂದು ಅವರಹೆಸರಿನಿಂದಲೇ ಪ್ರಸಿದ್ಧವಾದ ಸ್ಥಳದಲ್ಲಿ ಜನಿಸಿ (ಗೌತಮ
ಬುದ್ಧರಿಗೆ ಬಹಳ ಮೊದಲು), ತಾಯಿಗೆ ಉಪದೇಶಮಾಡುವ ನೆಪದಲ್ಲಿ ಲೋಕೋದ್ಧಾರಕ್ಕಾಗಿ ಎಲ್ಲಾ ಶಾಸ್ತ್ರಗಳಿಗೆ
ಬೆನ್ನುಮೂಳೆಯಂತಿರುವ - ಪಾತಂಜಲಂ ಕಾಪಿಲಂಚ ಸರ್ವಶಾಸ್ತ್ರೋಪಕಾರಕಂ - 'ಸಾಂಖ್ಯ ದರ್ಶನ' ವನ್ನು ಉಪದೇಶಿಸಿ, -
ಪ್ರಕೃತಿಯನ್ನು ದಾಟುವಮಾರ್ಗವನ್ನು ತಿಳಿಯಪಡಿಸಿ, ಈಶಾನ್ಯವನ್ನು ಪವಿತ್ರಗೊಳಿಸಿರುವ ಸಿದ್ಧರಲ್ಲಿ ಅತ್ಯಂತ ಶ್ರ್ರೇಷ್ಠರಾದ ,
ಭಗವಂತನ ಅವತಾರವೇ ಆದ ಕಪಿಲ ಮಹರ್ಷಿಗಳಿಗೆ ನಮೋನಮಃ. ದೇವಹೂತಿಯ ಆದರ್ಶ, ಕಪಿಲರ ಉಪದೇಶ ನಮ್ಮೆಲ್ಲರ
ದಾರಿದೀವಿಗೆಯಾಗಲಿ.

ಸೂಚನೆ: 10/08/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.