ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ದ್ರುಪದಮಹಾರಾಜನು ಬ್ರಾಹ್ಮಣನೊಬ್ಬನಿಗೆ ಕನ್ಯೆಯನ್ನು ಕೊಡಲಿರುವುದನ್ನು ಕಂಡು, ಅಲ್ಲಿದ್ದ ರಾಜರು ಕೋಪಗೊಂಡರು; ಪರಸ್ಪರ ಮುಖಾವಲೋಕನ ಮಾಡಿಕೊಂಡರು. ಹೀಗೆ ಕೋಪವನ್ನು ವ್ಯಕ್ತಪಡಿಸಿದರು:
"ಸ್ತ್ರೀಯರಲ್ಲಿ ಶ್ರೇಷ್ಠಳೆನಿಸುವ ದ್ರೌಪದಿಯನ್ನು, ಈತನು ವಿಪ್ರನೊಬ್ಬನಿಗೆ ಕೊಡಲಿದ್ದಾನೆ - ಇಲ್ಲಿ ಸೇರಿರುವ ನಮ್ಮನ್ನೆಲ್ಲ ತೃಣೀಕರಿಸಿದಂತಾಯಿತು (ಎಂದರೆ ಹುಲ್ಲಿನಂತೆ ಕಂಡು, ತುಚ್ಛೀಕರಿಸಿದಂತಾಯಿತು ಎಂದರ್ಥ)! ಮರವನ್ನು ಬೆಳೆಸಿ, ಅದರ ಫಲಕಾಲದಲ್ಲಿ (ಎಂದರೆ ಹಣ್ಣುಬಿಡುವ ಸಮಯಕ್ಕೆ) ಅದನ್ನು ಉರುಳಿಸಿಬಿಡುವ ಲೆಕ್ಕವಿದು! ನಮ್ಮನ್ನು ಆದರಿಸದ ಈ ದುಷ್ಟನನ್ನು ಇಲ್ಲಿಯೇ ಕೊಂದುಬಿಡೋಣ. ವೃದ್ಧನೆಂಬ ಕಾರಣಕ್ಕೆ ಸಲ್ಲಬೇಕಾದ ಆದರಕ್ಕೂ ಈತನು ಅರ್ಹನಲ್ಲ. ಈತ ದುರಾಚಾರಿ, ರಾಜದ್ವೇಷಿ; ಈತನನ್ನು ಕೊಂದುಬಿಡೋಣ - ಪುತ್ರಸಮೇತನಾಗಿ ಈತನನ್ನು ಕೊಲ್ಲೋಣ. ಈತ ಮಾಡಿರುವುದೇನು? ರಾಜರನ್ನೆಲ್ಲಾ ಕರೆದು ಸತ್ಕರಿಸಿ, ಒಳ್ಳೆಯ ಭೋಜನವನ್ನು ಸಹ ಇತ್ತು, ಆಮೇಲಿದೋ ಈಗ ಅವಮಾನಿಸುತ್ತಿದ್ದಾನೆ! ಈ ರಾಜಸಮೂಹವೆಂಬುದು ಒಳ್ಳೇ ದೇವಸ್ತೋಮದಂತಿರುವುದು! ಇಷ್ಟು ಮಂದಿಯಲ್ಲಿ ಯಾರೊಬ್ಬನೂ ತನ್ನ ಮಗಳಿಗೆ ಸಮಳೆಂದು ಈತನಿಗೆ ತೋರದಾಯಿತೇ?
ವಿಪ್ರರಿಗೆಲ್ಲಿದೆ ಅಧಿಕಾರ ಈ ಸ್ವಯಂವರಕ್ಕೆ? ಸ್ವಯಂವರವೆಂಬುದಿರುವುದು ಕ್ಷತ್ರಿಯರಿಗೆ - ಎಂಬ ಮಾತು ಪ್ರಸಿದ್ಧವಾಗಿಯೇ ಇದೆಯಲ್ಲವೆ? ಇಷ್ಟರ ಮೇಲೆ ಈ ಕನ್ಯೆಗೇ ನಮ್ಮಲ್ಲಿ ಯಾರೊಬ್ಬನನ್ನೂ ವರಿಸಲು ಇಷ್ಟವಿಲ್ಲದಿದ್ದಲ್ಲಿ, ಇವಳನ್ನು ಬೆಂಕಿಗೆ ಹಾಕಿ ನಮ್ಮ ರಾಷ್ಟ್ರಗಳಿಗೆ ಹೋಗೋಣ, ಅರಸರೇ! ಚಾಪಲ್ಯದಿಂದಲೋ, ರಾಜಕನ್ಯೆಯೊಬ್ಬಳ ಲೋಭದಿಂದಲೋ, ಬ್ರಾಹ್ಮಣನೊಬ್ಬನು ರಾಜರುಗಳಿಗೆ ಅಪ್ರಿಯವಾದುದನ್ನು ಮಾಡಿದ್ದಾನೆಂದಾಗಿರಬಹುದು; ಹೇಗೂ ಬ್ರಾಹ್ಮಣನು ಅವಧ್ಯ (ಆತನನ್ನು ವಧಿಸಲಾಗದು) ಎಷ್ಟಾದರೂ ನಮ್ಮ ರಾಜ್ಯಕೋಶಗಳೇನು, ಸಂತಾನವೇನು, ಆಸ್ತಿಪಾಸ್ತಿಗಳೇನು - ಎಲ್ಲವೂ ಬ್ರಾಹ್ಮಣರಿಗಾಗಿಯೇ ಸರಿ! ಮೂರು ಕಾರಣಗಳಿಗಾಗಿ ನಾವಿಲ್ಲಿ ಪ್ರತಿಭಟಿಸಬೇಕು - ನಮಗಾಗುತ್ತಿರುವ ಅವಮಾನಕ್ಕೆ ಪ್ರತೀಕಾರಕ್ಕಾಗಿ; ಸ್ವಧರ್ಮದ ರಕ್ಷಣೆಗಾಗಿ; ಹಾಗೂ ಇನ್ನಿತರ ಸ್ವಯಂವರಗಳಲ್ಲೂ ಇದೇ ಕಥೆಯು ಮರುಕಳಿಸಬಾರದು - ಎಂಬುದಕ್ಕಾಗಿ."
ಹೀಗೆ ಹೇಳಿದ ರಾಜಶ್ರೇಷ್ಠರುಗಳು ಆ ದ್ರುಪದನನ್ನು ಕೊಲ್ಲುವ ಬಯಕೆಯಿಂದ ಕೈಯಲ್ಲಿ ಪರಿಘವೇ ಮೊದಲಾದ ಆಯುಧಗಳನ್ನು ಹಿಡಿದವರಾಗಿ ಆತನತ್ತ ಧಾವಿಸಿದರು. ಸಾಯುಧರಾಗಿ ತನ್ನ ಮೇಲೇರಿಬರುತ್ತಿರುವ ಆ ಬಹುಮಂದಿ ಅರಸರನ್ನು ಕಂಡ ದ್ರುಪದನು ಬೆದರಿದನು! ಆ ಬ್ರಾಹ್ಮಣರನ್ನೇ ಶರಣುಹೋದನು! ಮದಿಸಿದ ಆನೆಗಳಂತೆ ವೇಗದಿಂದ ನುಗ್ಗುತ್ತಿದ್ದ ಆ ಅರಸರನ್ನು ಕಂಡರು, ಪಾಂಡುಪುತ್ರರಾದ ಭೀಮಾರ್ಜುನರು. ಅವರು ಅರಿಂದಮರು (ಎಂದರೆ ಶತ್ರುಧ್ವಂಸಿಗಳು); ಮಹಾಧನುರ್ಧಾರಿಗಳಾಗಿ ಈಗ ಆ ರಾಜಸ್ತೋಮವನ್ನೆದುರಿಸಿದರು.
ಇತ್ತ ಅವರಿಬ್ಬರ ವಿರುದ್ಧವಾಗಿ ಈಗ ಆ ರಾಜರುಗಳೆಲ್ಲ ಸಿಡಿದೆದ್ದರು: ಕೈಗಳಲ್ಲಿ ಗೋಧಾಂಗುಲಿತ್ರಾಣಗಳನ್ನು ಧರಿಸಿದರು (ಬಾಣಗಳನ್ನು ಬಿಡುವಾಗ ಬೆರಳುಗಳು ಘಾಸಿಯಾಗದಿರಲು ಉಡದ ಚರ್ಮದಿಂದ ಮಾಡಿದ ರಕ್ಷಾಕವಚಗಳು ಅವು.) ಆಯುಧಗಳನ್ನು ಮೇಲೆತ್ತಿಹಿಡಿದುಕೊಂಡು ಧಾವಿಸಿಬಂದರು: ಕುರುವಂಶದ ರಾಜಕುಮಾರರಾದ ಆ ಭೀಮಾರ್ಜುನರನ್ನು ಕೊಂದೇಬಿಡಬೇಕೆಂಬ ಉದ್ದೇಶದಿಂದ ದಾಳಿಮಾಡಬಂದರು!
ಆಗ ಭೀಮನೇನು ಸುಮ್ಮನಿದ್ದನೇ? ಎಷ್ಟಾದರೂ ಅದ್ಭುತವೂ ಭೀಮವೂ (ಭೀಮವೆಂದರೆ ಭಯಂಕರ) ಆದ ಹಲವು ಕೃತ್ಯಗಳನ್ನು ಎಸಗಿದ್ದವನು ಅವನು! ವಜ್ರಕ್ಕೆ ಸಮಾನವಾದ ಶಕ್ತಿಯುಳ್ಳವನು! ಮಹಾಬಲಶಾಲಿ! ಏಕವೀರನಾದ ಆತ ಅಲ್ಲೇ ಇದ್ದ ಮರವೊಂದನ್ನು ತನ್ನ ತೋಳುಗಳಿಂದಲೇ ಉತ್ಪಾಟನಮಾಡಿದನು (ಎಂದರೆ ಕಿತ್ತನು). (ಮುಂದುವರೆಯುವುದು)