Thursday, September 29, 2022

ஸ்ரீகுருவின் கண்ணோட்டம் - 27 போய்வருகிறேன் (Poivarugiren)

மூலம்: திரு  சாயாபதி

தமிழாக்கம்: திருமதி ஜானகி

மின்னஞ்சல் : (lekhana@ayvm.in)



  போய் வருகிறேன், வருகிறேன்___வீட்டிலிருந்து வெளியில் செல்பவர் கூறும் வார்த்தை இது. தினமும் செய்யும் வேலையாக இருக்கலாம், வேறு வேலைகளாக இருக்கலாம் அன்றி வேலை நிமித்தமாக வெளியூர் பயணமாகவும் இருக்கலாம். ஆனால் வீட்டை விட்டு  வெளியே செல்பவர் "போகிறேன்," எனகூற வேண்டுமே தவிர வருகிறேன், போய் வருகிறேன் என்பது எவ்வாறு பொருந்தும்?  எனும் வினா மனதில் தோன்றுவது  ஆச்சரியமல்ல. முதன்முதலில் இவ்வாறு தோன்றிய போதும் பல தடவை கேட்டு பழகிவிட்டால் இது ஒரு வழக்கம் என விட்டு விடலாம்.


              எவ்வாறு வந்தது இவ்வழக்கம? இதில் ஏதாவது அர்த்தமுள்ளதா என மனதில் தோன்றுவதில் தவறேதுமில்லை.

           வீடு என்பது தன்னுடைய நிம்மதி மற்றும் சுகத்திற்காக ஏற்படுத்திக் கொண்ட ஓர் இடம். அங்கிருந்து வெளியில் கிளம்பும் போது எங்கு சென்றாலும் மீண்டும் வீட்டிற்கு திரும்ப வேண்டும் எனும் நினைவுடன் இந்த வழக்கம் வந்துள்ளது. வெளியே செல்வதே தன்னுடைய நோக்கமல்ல. வேலை நிமித்தமாக விதியின்றி வெளியே சென்றாலும் மீண்டும் தன் இருப்பிடம் வந்தடைவதே முக்கிய குறிக்கோளாகும். வெளியில் செல்வது மீண்டும் திரும்புவதற்கே. ஆகையினால் போய் வருகிறேன் என கூறுவது தகும். அவ்வாறே மீண்டும் வருவதற்கே போகிறேன் என்பதில் வருவதை அழுத்தமாக சொல்வதற்காக "வருகிறேன்" என கூறுவது வழக்கமாக உள்ளது.


        உடலை வைத்துக் கொள்ள ஒரு வீடு உள்ளது போன்று , உடலே ஓர் ஜீவன் வாசம் புரியும் வீடாக உள்ளது. அவ்வாறே ஜீவனுக்கு தன் நிலையான, தன் நிஜ ரூபத்தின் சௌந்தர்யத்தை அனுபவிக்கும் ஓர் வீடு உள்ளது. அது சாந்தி, பரமானந்ததின் இருப்பிடம். ஜீவன் தன் உலக வாழ்க்கைக்காக தன் ஐம்புலன்களுடன் தொடர்பு கொள்வதே வெளியே செல்வதாகும். மற்றும் புலன்களிடமிருந்து பின்னோக்கி தன் நிலை அடைவதே மீண்டும் வருவது. இது அந்த உள்ளிருக்கும் ஆனந்தநிலை என்னும் வீட்டை அறிந்த ஞானிகளின் வாழ்க்கை முறை. ஆகையினால் இந்திரியங்களின் தொடர்பு கொள்ளும்  ஜீவன் தான் மீண்டும் தன் நிலைக்கு செல்ல வேண்டும் என்பதை மறவாமல் வெளியே வரவேண்டும். இந்திரியங்களால் தான் அனுபவிக்க வேண்டியதை அடைந்த பிறகு மீண்டும் தன் நிலைக்கே திரும்ப வேண்டும். வீட்டிலிருந்து புறப்பட்டவன் மறந்து தெருவிலேயே அலைபவனாக கூடாது. அவ்வாறே ஜீவனும் தன்நிலையை மறந்து புலன் இன்பங்களில் அலைந்து திரிவது தகாது எனும் எச்சரிக்கை வார்த்தை இது. தன்னுடைய நிம்மதிக்காக திரும்பி வரவேண்டிய அமைதியான இல்லமொன்று உண்டு  என்பதை நினைவுறுத்தும்  அறிவுறை இது. அவ்வாறு தன்னிலையை, சாந்தியின் இருப்பிடத்தை அடைந்த போதுதானே இவ்வார்த்தையின் உட்பொருளை அறிய இயலும்!

     


Monday, September 26, 2022

ನವರಾತ್ರಮಹೋತ್ಸವದ ಅಂತರಾರ್ಥ ( Navartramahotsavada Antarratha)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)

ಪೀಠಿಕೆ -

ಭಾರತವು ಅನೇಕಪರ್ವಗಳ ನಾಡು.  ಸನಾತನಾರ್ಯಭಾರತೀಯಮಹರ್ಷಿಗಳು ಪ್ರಕೃತಿಯಲ್ಲಿ ಸಹಜವಾಗಿ ಸಂಭವಿಸಬಹುದಾದ ಅನೇಕ ವಿಶೇಷ ಕಾಲಘಟ್ಟಗಳನ್ನೂ ಅವುಗಳು ಮಾನವನ ಶರೀರದಲ್ಲಿನ ದೇವತಾಕೇಂದ್ರಗಳಲ್ಲಿ ಮಾಡುವ ಜಾಗೃತಿಯನ್ನೂ, ಉದ್ಬೋಧನೆಯನ್ನೂ ತಮ್ಮ ತಪಸ್ಯೆಯಿಂದ ತಿಳಿದುಕೊಂಡವರಾಗಿ, ಅತ್ಯಂತ ಕರುಣೆಯಿಂದ ಜನರ ಉದ್ಧಾರಕ್ಕಾಗಿ, ಅವರವರ ಪ್ರಕೃತಿಗನುಗುಣವಾಗಿ ಭಗವದಾರಾಧನೆಯ ಪದ್ಧತಿಯನ್ನು ಅನೇಕ ಹಬ್ಬಗಳ ಹೆಸರಿನಲ್ಲಿ ತಂದಿರುತ್ತಾರೆ. 'ಗಾಳಿಬಂದಾಗ ತೂರಿಕೋ' ಎಂಬ ಜ್ಞಾನಿಗಳ ಹಿತನುಡಿಯಂತೆ ಮಾನವರು ಇದನ್ನು ಯಥಾಶಕ್ತಿ ಪಾಲಿಸಿ ಆತ್ಮೋದ್ಧಾರವನ್ನು ಮಾಡಿಕೊಳ್ಳಬೇಕು.

ಹಾಗೆ ತಂದಿರುವ ಅನೇಕ ಪರ್ವಗಳಲ್ಲಿ 'ನವರಾತ್ರಮಹೋತ್ಸವ'ವು ಅತ್ಯಂತ ಮುಖ್ಯವಾದ ಪರ್ವ.  ಹೆಸರೇ ತಿಳಿಸುವಂತೆ ಒಂಬತ್ತು ಅಹೋರಾತ್ರಿಗಳಲ್ಲಿ, ಆಬಾಲವೃದ್ದರೂ,  ಎಲ್ಲಾ ಧರ್ಮದವರೂ, ಎಲ್ಲಾ ವರ್ಣದವರೂ,  ಎಲ್ಲಾ ಆಶ್ರಮದವರೂ, ಅವರವರ ಪದ್ಧತಿಯಂತೆ ಆಚರಿಸಬೇಕಾದ ಈ ಪರ್ವವು 'ನವರಾತ್ರ' ಅಥವಾ 'ದುರ್ಗೋತ್ಸವ'ವೆಂಬ ಎರಡು ಹೆಸರುಗಳಿಂದ ಪ್ರಸಿದ್ಧವಾಗಿದೆ.  'ವಿಜಯದಶಮೀ' ಎಂದೇ ಪ್ರಖ್ಯಾತವಾದ ಈ ಪರ್ವದ ಮುಂದಿನ ದಿನವನ್ನೂ ಸೇರಿಸಿಕೊಂಡಲ್ಲಿ ಇದನ್ನು 'ದಶಾಹ' ಅಥವಾ 'ದಸರಾ' ಅಥವಾ (ಐದು ಮಹಾಪಾತಕಗಳನ್ನೂ ಮತ್ತು ಐದು ಉಪಪಾತಕಗಳನ್ನೂ ದೂರಮಾಡುವುದರಿಂದ) 'ದಶಹರ'  ಎಂದು ಈ ಪರ್ವವನ್ನು ಕರೆಯುವ ರೂಢಿಯಿದೆ. ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪತ್ತಿನಿಂದ ಒಂಬತ್ತು ದಿನಗಳು ಆಚರಿಸಲ್ಪಡುವ ಈ ಪರ್ವವನ್ನು 'ವಸಂತ ನವರಾತ್ರ'ವೆಂಬ ಹೆಸರಿನಿಂದಲೂ, ಶರದೃತುವಿನ ಶುಕ್ಲಪಕ್ಷದ ಪ್ರಥಮೆಯಿಂದ ನವಮಿ ಪರ್ಯಂತ ಆಚರಿಸಲ್ಪಡುವ ಈ ಪರ್ವವನ್ನು 'ಶರನ್ನವರಾತ್ರ'ವೆಂದೂ ಕರೆಯುತ್ತಾರೆ.  ದುರ್ಗಾದೇವಿಯನ್ನು ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾದುರ್ಗಾ ಮುಂತಾದ ನಾನಾರೂಪಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಪರ್ವವಾದ್ದರಿಂದ 'ಮಹೋತ್ಸವ'ವೆಂಬ ಹೆಸರು ಅನ್ವರ್ಥವಾಗಿದೆ.

ನವರಾತ್ರಪರ್ವದ ಉದ್ದೇಶ

ಅಧರ್ಮಾಚರಣೆಯಿಂದ ನಮಗೆ ಬಂದೊದಗಿರುವ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ತಾಪತ್ರಯಗಳನ್ನು 'ದುರ್ಗಾಂ ದುರ್ಗತಿನಾಶಿನೀಮ್' ಎಂಬಂತೆ ಜಗನ್ಮಾತೆಯಾದ ಮಹಾದುರ್ಗಿಯ ಆರಾಧನೆಯಿಂದ ನಿವಾರಿಸಿಕೊಂಡು ಅಧರ್ಮವನ್ನು ಮೆಟ್ಟಿ ಧರ್ಮಮಯವಾದ ಅಂತಃಪ್ರಪಂಚದ, ಒಳಸುಖದ ಬಾಳಾಟವನ್ನು ಪ್ರಾರಂಭಿಸುವುದೇ ಈ ಪರ್ವದ ಉದ್ದೇಶ.  ಚಾತುರ್ಮಾಸ್ಯ ವ್ರತಾಚರಣೆಯ ದೀಕ್ಷೆಯನ್ನು ಆಚರಿಸುತ್ತಾ ಒಳಮುಖರಾಗಿ ಮೌನವಾಗಿದ್ದು ಅಂತಸ್ಸುಖವನ್ನು ಅನುಭವಿಸಿಕೊಂಡಿದ್ದಂಥ ಯೋಗಿಗಳು, ಸನ್ಯಾಸಿಗಳು ಮೌನವನ್ನು ಮುರಿದು ಈಗ ಹೊರಮುಖರಾಗಿ ತಾವು ಅನುಭವಿಸಿದ ಅಂತಸ್ಸುಖವನ್ನು, ಆ ಒಳ ಬೆಳಕಿನ ಆನಂದವನ್ನು ತಮ್ಮ ಧರ್ಮೋಪದೇಶದ ಮೂಲಕ ಶ್ರೀಸಾಮಾನ್ಯರನ್ನು ಅನುಗ್ರಹಿಸುವುದಕ್ಕಾಗಿ, ಜಗನ್ಮಾತೆಯ ಶಕ್ತಿದೇವತೆಯ ಆರಾಧನೆಯನ್ನು ಮಾಡುವ ಪರ್ವವಿದು.  ದಿಗ್ವಿಜಯಕ್ಕಾಗಿ ವಿಜಯದಶಮಿಯಂದು ಹೊರಡುವ ಕ್ಷತ್ರಿಯರು ತತ್ಪೂರ್ವಭಾವಿಯಾಗಿ ಭಗವತಿಯರಾದ ತ್ರಿಮೂರ್ತಿರಾಣಿಯರನ್ನು ಬಲ-ವಿದ್ಯೆ-ಸಂಪತ್ತುಗಳಿಗೋಸ್ಕರ ಆರಾಧಿಸುವ ಪರ್ವವಿದು.  

ಪ್ರಕೃತಿಯ ಆನುಕೂಲ್ಯ

ಶರತ್ಕಾಲದ ನವರಾತ್ರದ ಸಮಯವು ದೇವತಾಪೂಜೆಗೆ ಅತ್ಯಂತ ಪ್ರಶಸ್ತವಾಗಿದೆ. 'ತ್ರಿಲೋಕ್ಯವಿಮಲಂ ವ್ಯೋಮ ಗತವಿದ್ಯುತ್ಬಲಾಹಕಮ್' ಎಂಬಂತೆ ಹಿಂದಿನ ವರ್ಷರ್ತುವಿನಲ್ಲಿ ಕಾರ್ಮೋಡಗಳಿಂದ ಆವೃತವಾಗಿದ್ದ ಆಕಾಶವು ಈಗ ಸ್ವಚ್ಛಾಚ್ಛವಾಗಿದ್ದೂ, ಮಳೆಯ ನೀರಿನಿಂದಾಗಿ ಬಗ್ಗಡವಾಗಿದ್ದ ನದಿಗಳು ಈಗ ತಿಳಿಯಾಗಿ ಸ್ಫಟಿಕದಂತಿರುವ ತೀರ್ಥದಿಂದಲೂ ಕೂಡಿದ್ದು, ಅರಳಿದ ಕಮಲಗಳಿಂದಲೂ ಹಂಸಪಕ್ಷಿಗಳಿಂದಲೂ ಶೋಭಿತವಾದ ಸರೋವರಗಳೂ ಮತ್ತು ರಾತ್ರಿಯ ವೇಳೆಯಲ್ಲಿ ಮನಸ್ಸಿಗೆ ತಂಪನ್ನು ಕೊಡುವ ಪ್ರಕಾಶಮಾನನಾದ ಚಂದ್ರನ ಚಂದ್ರಿಕೆಯೂ ಸ್ವಾಭಾವಿಕವಾಗಿಯೇ ನಮ್ಮಲ್ಲಿ ನವಚೈತನ್ಯವನ್ನೂ, ನವೋಲ್ಲಾಸವನ್ನೂ, ಉತ್ಸಾಹವನ್ನೂ ಉಂಟುಮಾಡುತ್ತಾ ಯೋಗಸಾಧನೆಗೆ ಬೇಕಾದ ಪರಿಸರವನ್ನು ತಂದುಕೊಟ್ಟಿರುತ್ತದೆ. ಒಳಜೀವನಕ್ಕೆ ವಿರುದ್ದವಲ್ಲದ ಇಂದ್ರಿಯಸುಖವನ್ನು ಉಂಟುಮಾಡಿ,  ಅಧಿಕಪ್ರಯಾಸವಿಲ್ಲದೆ ಧಾತುಪ್ರಸನ್ನತೆಯನ್ನುಂಟುಮಾಡಿ, ಸತ್ತ್ವ-ರಜಸ್-ತಮೋರೂಪಿಗಳಾದ ಜಗನ್ಮಾತೆಯರಾದ ಶ್ರೀಮಹಾಲಕ್ಷ್ಮೀ-ಶ್ರೀಮಹಾಸರಸ್ವತೀ-ಶ್ರೀಮಹಾದುರ್ಗಿಯರನ್ನು ಅಂತಃಪ್ರಪಂಚದಲ್ಲಿ ಹೇಗೋ ಹಾಗೇ ಬಹಿರ್ಮುಖವಾಗಿ ಆರಾಧಿಸುವ ಆನುಕೂಲ್ಯವನ್ನು ಪ್ರಕೃತಿಯು ಒದಗಿಸಿರುತ್ತದೆ.

ನವರಾತ್ರಪರ್ವದ ಐತಿಹ್ಯ 

ಈ ಪರ್ವವನ್ನು ಹಿಂದೆ ಯಾರು ಆಚರಿಸಿದರೆಂಬುದಕ್ಕೆ ಪುರಾಣಗಳಲ್ಲಿ ಅನೇಕ ಉಲ್ಲೇಖಗಳಿವೆ. ಕುತಂತ್ರಿಯೂ, ಅಧರ್ಮಿಯೂ ಆದ ದುರ್ಯೋಧನನಿಂದ ಹೆದರಿದ ವನವಾಸಿಗಳಾದ ಪಾಂಡವರು ಧೌಮ್ಯಮಹರ್ಷಿಗಳ ಉಪದೇಶದಂತೆ ಒಂಬತ್ತು ದಿನಗಳು ಶಕ್ತಿರೂಪಿಣಿಯಾದ, ದುರ್ಗತಿಯನ್ನು ನಾಶಮಾಡುವ, ಕಷ್ಟಗಳನ್ನು ನೀಗಿಸಬಲ್ಲ ದುರ್ಗಿಯನ್ನು ಆರಾಧಿಸಿ ಹತ್ತನೆಯ ದಿನ ಅಂದರೆ ವಿಜಯದಶಮಿಯ ದಿನದಂದು ವಿರಾಟನಗರವನ್ನು ಅಜ್ಞಾತವಾಸಕ್ಕಾಗಿ ಪ್ರವೇಶಿಸಿ, ದುರ್ಯೋಧನನಿಗೆ ತಿಳಿಯದಂತೆ ತಮ್ಮ ಅಜ್ಞಾತವಾಸವನ್ನು ಮುಗಿಸಿದರೆಂದು ತಿಳಿದುಬರುತ್ತದೆ.

ಅಂತೆಯೇ, ಶ್ರೀರಾಮನೂ ಕೂಡ ಲೋಕಕಂಟಕನಾದ ರಾವಣನನ್ನು ಸಂಹರಿಸಲು ಶಮೀವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ವಿಜಯದಶಮೀ ದಿವಸ ವಿಜಯಯಾತ್ರೆಯನ್ನು ಪ್ರಾರಂಭಿಸಿದ ಎಂದು ಹೇಳುತ್ತಾರೆ.

ನವರಾತ್ರಪರ್ವದ ಆಚರಣೆಯ ವಿಧಾನ

ನವರಾತ್ರದ ಒಂಬತ್ತೂ ದಿನಗಳಲ್ಲಿ ಜಗನ್ಮಾತೆಯರಾದ ಪ್ರಕೃತಿಸ್ವರೂಪಿಣಿಯರಾದ ಮಹಾಲಕ್ಷ್ಮೀ, ಮಹಾಸರಸ್ವತೀ ಮತ್ತು ಮಹಾದುರ್ಗಿಯರ ಆರಾಧನೆಯೇ ವಿಶೇಷ. ಅವುಗಳಲ್ಲಿ ಮೊದಲ ಮೂರು ದಿನಗಳಲ್ಲಿ ಸತ್ತ್ವಪ್ರಧಾನಳಾದ ಮಹಾವಿಷ್ಣುವಿನ ಮನದನ್ನೆಯಾದ ಮಹಾಲಕ್ಷ್ಮಿಯನ್ನು ಆರಾಧಿಸುತ್ತಾರೆ.  ಎರಡನೆಯ ಮೂರು ದಿನಗಳಲ್ಲಿ ರಜಃಪ್ರಧಾನಳಾದ ಬ್ರಹ್ಮನ ಪತ್ನಿಯಾದ ವಿದ್ಯಾಧಿದೇವತೆಯಾದ ಮಹಾಸರಸ್ವತಿಯನ್ನು ಪೂಜಿಸುತ್ತಾರೆ.  ಕಡೆಯ ಮೂರು ದಿನಗಳು ಶಕ್ತಿದೇವತೆಯಾದ ತಮಃಪ್ರಧಾನಳಾದ ಪರಮೇಶ್ವರನ ಪತ್ನಿಯಾದ ಮಹಾದುರ್ಗಿಯ ಆರಾಧನೆಯನ್ನು ಮಾಡುತ್ತಾರೆ.  'ಅಂತರ್ಮುಖಸಮಾರಾಧ್ಯಾ' ಎಂಬಂತೆ ಮೊದಲು ಭಗವತಿಯನ್ನು ಹೃದಯದಲ್ಲಿ ಚೆನ್ನಾಗಿ ಉಪಾಸಿಸಿ ನಂತರ ಬಹಿರ್ಮುಖವಾಗಿ ಧ್ಯಾನಾವಾಹನಾದಿ ಷೋಡಶೋಪಚಾರದಿಂದಲೂ, ನೃತ್ಯ, ಗೀತಾದಿ ಸೇವೆಗಳಿಂದಲೂ ಚೆನ್ನಾಗಿ ಅರ್ಚಿಸುತ್ತಾರೆ. ಪ್ರತಿನಿತ್ಯವೂ ದುರ್ಗಾಸಪ್ತಶತೀಪಾರಾಯಣ, ದೇವೀಭಾಗವತಪುರಾಣಪಾರಾಯಣ, ಸೌಂದರ್ಯಲಹರೀಪಠನವೇ ಮುಂತಾದ ದೇವೀಸಂಬಂಧ ಸಾ  ಹಿತ್ಯಾನುಸಂಧಾನ,  ಹೋಮಹವನಾದಿಗಳನ್ನೂ ಮಾಡುವ ಪದ್ಧತಿಯಿದೆ.  ಮೂಲಾನಕ್ಷತ್ರದಲ್ಲಿ ಮಹಾಸರಸ್ವತಿಯನ್ನು ಧ್ಯಾನಿಸಿ, ಆವಾಹನೆಯನ್ನು ಮಾಡಿ, ಪೂರ್ವಾಷಾಢಾ ನಕ್ಷತ್ರದಲ್ಲಿ ಪೂಜಿಸಿ, ಉತ್ತರಾಷಾಢಾ ನಕ್ಷತ್ರದಲ್ಲಿ ಬಲಿದಾನವನ್ನು ಮಾಡಿ, ಶ್ರವಣನಕ್ಷತ್ರದಲ್ಲಿ ವಿಸರ್ಜನೆಮಾಡುವ ರೂಢಿಯಿದೆ.  

ದುರ್ಗಾಷ್ಟಮೀ – ಎಲ್ಲಾ ದುರ್ಗಗಳನ್ನೂ (ಸಂಕಷ್ಟಗಳನ್ನೂ) ದಾಟಿಸುವುದರಿಂದಲೇ ದುರ್ಗಾ ಎಂಬ ಅನ್ವರ್ಥನಾಮಳಾದ ದುರ್ಗೆಯ ಪೂಜೆಯು ಅಷ್ಟಮಿಯ ದಿನ ವಿಹಿತವಾಗಿದೆ. ಅಂದು ಮಹಾದುರ್ಗಿಗೆ ಷೋಡಶೋಪಚಾರಪೂಜಾ,  ದುರ್ಗಾಸಪ್ತಶತಿಯ ಪಾರಾಯಣ ಮತ್ತು ಹೋಮಾದಿಗಳನ್ನು ಮಾಡುವುದಲ್ಲದೇ ಕುಮಾರಿಯರನ್ನು ಮತ್ತು ಸುಮಂಗಲಿಯರನ್ನು ಪೂಜಿಸಿ ವಸ್ತ್ರ,ಬಾಗಿನಗಳನ್ನು ಕೊಡುವ ಪದ್ಧತಿಯಿದೆ.

ಮಹಾನವಮೀ – ಈ ದಿನವೂ ಕೂಡ ದುರ್ಗಾಷ್ಟಮಿಯಂತೆ ಭಗವತಿಯನ್ನು ಪೂಜಿಸುತ್ತಾರೆ. ಅಲ್ಲದೆ ಇಂದು  ವಿದ್ಯಾಧಿದೇವತೆಯಾದ ಶ್ರೀಹಯಗ್ರೀವದೇವನು ಲೋಕಕಲ್ಯಾಣಕ್ಕಾಗಿ ಇಳಿದು ಬರುವ ದಿನ. ಇಂದು ಹಯಗ್ರೀವದೇವರ ಮತ್ತು ಸರಸ್ವತೀದೇವಿಯ ಪೂಜೆ, ಸಂಗೀತೋಪಕರಣಗಳಾದ ವೀಣೆ, ಮೃದಂಗಾದಿಗಳ ಪೂಜೆ, ಆಯುಧಗಳ, ಗಜಾಶ್ವಗಳ ಪೂಜೆಗಳೂ ಸಂಪನ್ನವಾಗುತ್ತವೆ.

ವಿಜಯದಶಮೀ – ಈ ದಿನ ಹಿಂದಿನಂತೆ ಪೂಜಾದಿಗಳನ್ನು ನೆರವೇರಿಸಿ, ಭಗವತಿಯ ಆಶೀರ್ವಾದವನ್ನು ಪಡೆದು ವಿದ್ಯಾರ್ಥಿಗಳು ವಿದ್ಯಾರಂಭವನ್ನು ಪ್ರಾರಂಭಿಸುತ್ತಾರೆ.  ಕ್ಷತ್ರಿಯರು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ, ವಿಜಯಯಾತ್ರೆಗೆ ಹೊರಡುತ್ತಾರೆ.  ಆತ್ಮಯಾತ್ರೆಯನ್ನೇ ವ್ರತವಾಗುಳ್ಳ ಯತಿಗಳು ಇಂದು ಧರ್ಮಪ್ರಚಾರಕ್ಕಾಗಿ ಸೀಮೋಲ್ಲಂಘನವನ್ನು ಮಾಡುತ್ತಾರೆ.

ನವಾಗ್ರಯಣಸ್ಥಾಲೀಪಾಕ – ಈ ಸಮಯದಲ್ಲಿ ಹೊಸದಾಗಿ ಧಾನ್ಯಗಳು ಬಂದಿರುತ್ತವೆಯಾಗಿ ಗೃಹಸ್ಥರು ನವಾಗ್ರಯಣಸ್ಥಾಲೀಪಾಕವನ್ನು ಮಾಡಿ ದೇವತೆಗಳಿಗೆ ಅಗ್ನಿಯಲ್ಲಿ ಅರ್ಪಿಸಿ, ಅತಿಥಿಗಳಿಗೂ ಸಮಾರಾಧನೆಯನ್ನು ಈ ಪರ್ವದಲ್ಲಿ ಆಚರಿಸುತ್ತಾರೆಂಬುದು ವಿಶೇಷ.

ಶಮೀವೃಕ್ಷದ ಪೂಜಾಮಹತ್ತ್ವ  - ಹೆಸರೇ ಸೂಚಿಸುವಂತೆ ಶಮಪ್ರಧಾನವಾದ ವೃಕ್ಷ 'ಶಮೀ'. ಶಮ ಎಂದರೆ ಇಂದ್ರಿಯಾದಿಗಳ ನಿಗ್ರಹ. ಅದನ್ನುಳ್ಳದ್ದು ಶಮೀ. ವಿಜಯಯಾತ್ರೆಗೆ ತೊಡಗಿರುವ ಕ್ಷತ್ರಿಯನಿಗೂ, ಆತ್ಮಯಾತ್ರೆಗೆ ತೊಡಗಿರುವ ಯತಿಗೂ ಮತ್ತು ವಿದ್ಯಾಭ್ಯಾಸಕ್ಕೆ ತೊಡಗಿರುವ ವಿದ್ಯಾರ್ಥಿಗೂ ಇಂದ್ರಿಯ ಮತ್ತು ಮನಸ್ಸುಗಳ ನಿಗ್ರಹವು ಮುಖ್ಯ ಸಾಧನವಷ್ಟೆ. ಅದಕ್ಕಾಗಿಯೇ ಶಮೀವೃಕ್ಷಕ್ಕೆ ಪೂಜೆ. ಈ ವೃಕ್ಷಕ್ಕೆ 'ಬನ್ನೀ' ಎಂಬ ಹೆಸರುಂಟು.  ಸಂಸ್ಕೃತಭಾಷೆಯ 'ವಹ್ನಿ' (ಬೆಂಕಿ)ಯೆಂಬುದೇ ಕನ್ನಡದಲ್ಲಿ 'ಬನ್ನಿ' ಎಂದಾಗಿದೆ.  'ಶಮೀ ಶಮಯತೇ ಪಾಪಂ' ಎಂಬಂತೆ ಶಮೀವೃಕ್ಷವು ಪಾಪವನ್ನು ನಾಶಮಾಡುವುದು.  ಅದಕ್ಕಾಗಿಯೇ ಇದಕ್ಕೆ ಪೂಜೆ. 'ಅಮಂಗಳವನ್ನು ನಿವಾರಿಸುವ, ಪಾಪನಿವಾರಕಳಾದ, ದುಃಖಗಳನ್ನು ನಾಶಮಾಡುವ ಶುಭಪ್ರದಳಾದ ನಿನಗೆ ಶರಣು.  ಯಾವ ದಿಗ್ವಿಜಯಯಾತ್ರೆಯನ್ನು /ಆತ್ಮಯಾತ್ರೆಯನ್ನು /ವಿದ್ಯಾಭ್ಯಾಸವನ್ನು ಮಾಡುವುದಕ್ಕೆ ಮುಂದಾಗಿರುವೆನೋ ಅದರಲ್ಲಿ ವಿಘ್ನಬರದಂತೆ ನನ್ನನ್ನು ಸಲಹು' ಎಂದೇ ಶಮೀವೃಕ್ಷಕ್ಕೆ ಪೂಜೆ ಮತ್ತು ಪ್ರಾರ್ಥನೆ.

ಈ ಪರ್ವದಲ್ಲಿ ಗೊಂಬೆಯ ವಿಶೇಷತೆ – ಈ ಪರ್ವದಲ್ಲಿ ಮನೆಮನೆಗಳಲ್ಲೂ ಬೊಂಬೆಗಳನ್ನು (ಪಟ್ಟದ ಬೊಂಬೆ, ರಾಜ-ರಾಣಿ, ಮಂತ್ರಿ-ಪುರೋಹಿತ, ಅಶ್ವ-ಗಜ-ಪಶು-ಸೇನಾ-ರಥಾದಿಗಳು, ಅಡಿಗೆಮನೆ ಸಾಮಾನುಗಳು ಇತ್ಯಾದಿ)  ಕೂರಿಸಿ, ಪೂಜಿಸುವ ಪದ್ಧತಿ ಇದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಒಂದು ರಾಷ್ಟ್ರದ ಚಿತ್ರಣವೇ ಆಗಿರುತ್ತಾ, ರಾಷ್ಟ್ರದ ಬಗ್ಗೆ, ಜೀವನದ ನಿರ್ವಹಣೆಯ ಬಗ್ಗೆ ಮಕ್ಕಳಿಗೆ ಶಿಕ್ಷಣಕ್ಕೆ ಒದಗಿಬರುವ ಸಾಮಗ್ರಿಯಾಗಿದೆ ಎಂಬುದೇ ಈ ಬೊಂಬೆಗಳ ತತ್ತ್ವ.  ಹಾಗೆಯೇ ಬೊಂಬೆಬಾಗಿನವೂ ಕೂಡ ಮೊದಲು ಮಕ್ಕಳಿಗೆ ಇಂದ್ರಿಯತೃಪ್ತಿಯನ್ನು ಉಂಟುಮಾಡಿ, 'ಮೊದಲು ಪೇಠೋಭಾ ನಂತರ ವಿಠೋಭಾ' ಎಂಬಂತೆ ಮೊದಲು ಉದರಪೂಜೆಯನ್ನು ಮಾಡಿಸಿ, ನಂತರ ದಾಮೋದರನ ಪೂಜೆಯಲ್ಲಿ ಪರ್ಯವಸಾನವಾಗುತ್ತದೆ.

ಉಪಸಂಹಾರ -

"ಜೀವನದಲ್ಲಿ ನವತ್ವವನ್ನು ಉಂಟುಮಾಡುವ ನವರಾತ್ರ ಇದು.  ಶುದ್ಧಪ್ರಕೃತಿಮಾತೆಯನ್ನು ಮೊದಲ ಮೂರುದಿನಗಳಲ್ಲಿ ಲಕ್ಷ್ಮೀಯೆಂದೂ, ಆನಂತರದ ಮೂರುದಿನಗಳಲ್ಲಿ ಸರಸ್ವತೀಯೆಂದೂ ಕೊನೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗೀಯೆಂದೂ ಆರಾಧಿಸಿ ನಿಮ್ಮ ಪ್ರಕೃತಿಯನ್ನು ಶುದ್ಧಮಾಡಿಕೊಳ್ಳಿ.  ಹೊರಗಡೆ ಪ್ರಕೃತಿಯಲ್ಲಿ ಮೋಡಗಳಿಲ್ಲದ ಶುದ್ಧವಾದ ಆಕಾಶ, ಒಳಗೂ ಶುದ್ಧವಾದ ಜ್ಞಾನಾಕಾಶ. ಹೊರಗೆ ಸರೋವರದಲ್ಲಿ ಅರಳಿರುವ ಕಮಲಗಳು, ಒಳಗೆ ಮಾನಸಸರೋವರದಲ್ಲಿ ಅರಳಿರುವ ಹೃದಯಾದಿಕಮಲಗಳು.  ಅಲ್ಲಿ ಪರಮಾತ್ಮನ ಪರಾಪ್ರಕೃತಿಯಾಗಿರುವ ದೇವಿಯನ್ನು ಆರಾಧಿಸಿ ಶುದ್ಧಸತ್ತ್ವರಾಗಿರಿ.  ಹೊರಗಡೆ ಧನಧಾನ್ಯಸಮೃದ್ಧಿ, ಒಳಗೆ ಆತ್ಮಧನಸಮೃದ್ಧಿ, ಹೊರಗಡೆ ವೀರಕ್ಷತ್ರಿಯರಿಂದ ಧರ್ಮವಿಜಯಕ್ಕಾಗಿ ಯಾತ್ರೆ, ಒಳಗೆ ಆತ್ಮವಿಜಯಕ್ಕಾಗಿ ಯಾತ್ರೆ – ಎಲ್ಲವೂ ಕೂಡಿ ಬರುವ ಮಹಾಪರ್ವ ಇದು" ಎಂದು ಈ ಪರ್ವದ ವಿಶೇಷತೆಯನ್ನು ಸಾರಿಷ್ಠವಾದ ಸಂದೇಶದಲ್ಲಿ ಅಪ್ಪಣೆ ಕೊಡಿಸಿದ ಶ್ರೀರಂಗಮಹಾಗುರುವನ್ನು ಸ್ಮರಿಸುತ್ತಾ ಈ ಲೇಖನವನ್ನು ಸರ್ವಕರ್ಮಸಮಾರಾಧ್ಯನಾದ ಭಗವಂತನ ಪಾದಾರವಿಂದಗಳಿಗೆ ಅರ್ಪಿಸಿ ವಿರಮಿಸುತ್ತೇನೆ.

ಸೂಚನೆ : 26/09/2022 ರಂದು ಈ ಲೇಖನ ವಿಜಯ ವಾಣಿ  ಸಕಾಲಿಕ ಅಂಕಣದಲ್ಲಿ ಪ್ರಕಟವಾಗಿದೆ.

ಯಕ್ಷಪ್ರಶ್ನೆ - 5 (Yaksha Prashne - 5)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)




ಪ್ರಶ್ನೆ- ೪ ಸೂರ್ಯನು ಎಲ್ಲಿ ಪ್ರತಿಷ್ಠಿತನಾಗಿದ್ದಾನೆ ?  

ಉತ್ತರ- ಸತ್ಯದಲ್ಲಿ 

ಈ ಹಿಂದಿನ ಪ್ರಶ್ನೆಯಲ್ಲಿ ಸೂರ್ಯನ ಗತಿಗೆ ಕಾರಣವೇನು? ಎಂಬುದನ್ನು ತಿಳಿದುಕೊಂಡಿದ್ದೇವೆ. ಈಗಿನ ಪ್ರಶ್ನೆ ಸೂರ್ಯನು ಎಲ್ಲಿ ಪ್ರತಿಷ್ಠಿತನಾಗಿದ್ದಾನೆ ? ಎಂದು. ಅದಕ್ಕೆ ಧರ್ಮರಾಜನ ಉತ್ತರ 'ಸತ್ಯದಲ್ಲಿ' ಎಂದು. ಸತ್ಯ ಎಂದರೇನು? ಸತ್ಯದಲ್ಲಿ ಪ್ರತಿಷ್ಠಿತನಾಗುವುದು ಎಂದರೇನು? 


ಈ ಸೃಷ್ಟಿಯ ವ್ಯಾಪಾರವು ಬಹಳ ವ್ಯವಸ್ಥಿತವಾಗಿದೆ. ಇಲ್ಲಿ ಸೃಷ್ಟಿ, ಸ್ಥಿತಿ, ಲಯ ಎಂಬ ಮೂರು ಹಂತಗಳಿವೆ. ಮತ್ತು ಸೃಷ್ಟಿಯು ಯಾವ ಬಿಂದುವಿನಿಂದ ಆರಂಭವಾಗಿದೆಯೋ ಅಲ್ಲಿಯೇ ಲಯವಾಗುವುದು ಅದರ ಸಹಜ ಪ್ರಕ್ರಿಯೆಯಷ್ಟೇ. ಈ ಸೃಷ್ಟಿಯು ಪರಬ್ರಹ್ಮ ಎಂಬ ಬಿಂದುವಿನಿಂದ ಆರಂಭವಾಗಿದೆ. ಹಾಗಾಗಿ ಅದು ಅದೇ ಪರಬ್ರಹ್ಮನಲ್ಲಿಯೇ ಲಯ ಹೊಂದಬೇಕಾಗಿದೆ. ಇದಕ್ಕೆ ಸೂರ್ಯನೂ ಹೊರತಲ್ಲ. ಈ ಪ್ರಪಂಚವು ನಡೆಯಲು ಸೂರ್ಯನ ಸ್ಥಾನ ಬಲವಾಗಿದೆ. ಅವನಿಲ್ಲದೆ ಯಾವ ಕಾರ್ಯವು ನಡೆಯದು. ಎಂಭತ್ತ ನಾಲ್ಕು ಲಕ್ಷ ಜೀವ ಜಾತಿಗಳು ತಮ್ಮ ಜೀವನವ್ಯಾಪಾರವನ್ನು ನಿರ್ವಹಿಸಲು ಈ ಸೂರ್ಯನೇ ಆಧಾರ. ಅದನ್ನೇ ವೇದವು "ಸೂರ್ಯ ಆತ್ಮಾ ಜಗತಃ ತಸ್ಥುಶಶ್ಚ" ಎಂದು ಹೇಳಿದೆ. ಈ ಹಿಂದಿನ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಿದಂತೆ ಸೂರ್ಯನೆಂದರೆ ನಮಗೆ ಕಾಣುವ ಉದಯಾಸ್ತಗಳಿಂದ ಕೂಡಿದ ಸೂರ್ಯನು ಮಾತ್ರ ಅಲ್ಲ. ಈ ಸೂರ್ಯನಿಗೂ ಯಾರಿಂದ ಬೆಳಗುವ ಶಕ್ತಿ ಬಂದಿದೆಯೋ; ಆ ಸತ್ಯ ಎಂದು ಕರೆಯುವ ಪರಬ್ರಹ್ಮ ಕೂಡ.


ಈ ವಿಶ್ವಕ್ಕೆಲ್ಲಾ ಯಾವ ಮಹಾಶಕ್ತಿಯಿಂದ ಚೈತನ್ಯ ಒದಗಿದೆಯೋ ಅದನ್ನೇ ಮೂಲತಃ ಸತ್ಯ ಎಂದು ಕರೆಯುತ್ತಾರೆ. ಶ್ರೀರಂಗ ಮಹಾಗುರುಗಳು ಸತ್ಯ ಎಂಬ ಪದಕ್ಕೆ ಛಾoದೋಗ್ಯ ಉಪನಿಷತ್ತಿನ ವಿವರಣೆಯನ್ನು ನೀಡಿ ಬಹಳ ಮನಮುಟ್ಟುವಂತೆ ವಿವರಿಸಿದ್ದರು - ಅದರಂತೆ 'ಸತ್ಯ' ಎಂದರೆ ಸ -ತಿ -ಯಂ ಎಂಬ ಮೂರು ಅಕ್ಷರಗಳಿವೆ - ಯಾವುದು ನಿತ್ಯವೂ ಅಮರವೂ ಆಗಿದೆಯೋ ಅದೇ 'ಸತ್'. 'ತಿ ' ಎಂದರೆ ಮರ್ತ್ಯ. ಇವೆರಡನ್ನೂ ಜೋಡಿಸುವ ವಿಷಯವೇ 'ಯ' ಎಂಬುದು. ಈ ಸತ್ಯದಿಂದಲೇ ಪ್ರಪಂಚದ ಆಗುಹೋಗುಗಳು ನಡೆಯುತ್ತಿವೆ. ಆದ್ದರಿಂದ ಸತ್ಯದಲ್ಲೇ ಎಲ್ಲವೂ ಪ್ರತಿಷ್ಠಿತವಾಗಿವೆ ಎಂಬುದನ್ನು "ಸತ್ಯೇ ಸರ್ವಂ ಪ್ರತಿಷ್ಠಿತಂ ತಸ್ಮಾತ್ ಸತ್ಯಂ ಪರಮಂ ವದಂತಿ" ಎಂದು ಮಹಾನಾರಾಯಣೋಪನಿಷತ್ತು ಸಾರುತ್ತಿದೆ. ನಾವು ಸತ್ಯ ಎಂಬುದಕ್ಕೆ ಸತ್ಯವಾಗಿ ಮಾತನಾಡುವುದು ಎಂಬ ಅರ್ಥವನ್ನು ಮಾತ್ರ ಗ್ರಹಿಸುತ್ತೇವೆ. ಆದರೆ ಸತ್ಯಕ್ಕೆ ಇಷ್ಟು ವ್ಯಾಪಕವಾದ ಅರ್ಥ ಅಡಗಿದೆ. ಒಂದು ಬೀಜದಿಂದ  ಆರಂಭವಾದ ವೃಕ್ಷವು ಮತ್ತೆ ಬೀಜದಲ್ಲಿ ಕೊನೆಗೊಳ್ಳುವುದು ಹೇಗೆ ನಿಸರ್ಗಸಹಜವೋ, ಅಂತೆಯೇ ಸತ್ಯದಿಂದ ಆರಂಭಗೊಂಡ ಈ ಸಮಸ್ತ ಬ್ರಹ್ಮಾಂಡವೂ ಅಲ್ಲೇ ಕೊನೆಗೊಳ್ಳುವುದೂ  ಅಷ್ಟೇ ಸಹಜ. ಈ ಅರ್ಥದಲ್ಲಿ 'ಸೂರ್ಯನು ಎಲ್ಲಿ ಪ್ರತಿಷ್ಠಿತನಾಗಿದ್ದಾನೆ?' ಎಂಬ ಪ್ರಶ್ನೆಗೆ ಧರ್ಮರಾಜನ ಉತ್ತರವಿತ್ತು.


ಸೂಚನೆ : 25/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ-5 ಪುರೋಚನನ ಸಂಚು - ಪಾಂಡವರ ಹೊಂಚು (Vyaasa Vikshita - 5 Purochanana Sanchu - Pandavara Honchu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ವಿದುರ-ಭೀಷ್ಮರು ಹಿಂದಿರುಗಿದರು. ಆಗ ಕುಂತಿಯು ಕೇಳಿದಳು ಯುಧಿಷ್ಠಿರನನ್ನು: "ಜನರ ನಡುವೆ ಏನನ್ನು ಹೇಳದ ಹಾಗೆಯೂ ಏನನ್ನೋ ಹೇಳಿದ, ವಿದುರ; ನೀನೂ ಹೌದೆಂದೆ; ನನಗೇನೂ ತಿಳಿಯಲಿಲ್ಲ.". ಧರ್ಮಬುದ್ಧಿಯುಳ್ಳ ವಿದುರನು ಹೇಳಿದ್ದು ಇದು: "ನಾವು ಹೋಗಿ ಉಳಿದುಕೊಳ್ಳುವ ಮನೆಯಲ್ಲಿ ಅಗ್ನಿಭಯವಿದೆ. ಊರಿನಲ್ಲಿರುವ ದಾರಿಗಳನ್ನೆಲ್ಲ ಚೆನ್ನಾಗಿ ಪರಿಚಯಮಾಡಿಕೊಳ್ಳಿ."


ವಾರಣಾವತದಲ್ಲಿ ಪಾಂಡವರಿಗೆ ಭಾರೀ ಸ್ವಾಗತವೇ. ಅತಿಶಯವಾದ ಆದರೋಪಚಾರಗಳನ್ನೇ ನೀಡಿದ, ಪುರೋಚನ. ದಿನಗಳು ಕಳೆಯಲು, ಅವರಿಗಾಗಿ 'ಶಿವಗೃಹ'ವೊಂದು ಸಿದ್ಧವಾಗಿರುವುದೆಂದು ಹೇಳಿದ ಪುರೋಚನ. ಅದಂತೂ ತದ್ವಿರುದ್ಧವಾದ ಅಮಂಗಳಗೃಹವೇ. 


ಸೂಕ್ಷ್ಮವಾಗಿ ಗಮನಿಸಿದ ಯುಧಿಷ್ಠಿರ ಭೀಮಸೇನನಿಗೆ ಎಚ್ಚರಿಸಿದ."ಇದು  ಬೆಂಕಿಗೆ ಸುಲಭವಾಗಿ ತುತ್ತಾಗುವಂತಹ ಗೃಹ. ಮೇದಸ್ಸಿನ, ತುಪ್ಪ-ಅರಗುಗಳ ಮಿಶ್ರಣದ, ವಾಸನೆಗಳು ಮೂಗಿಗೆ ಬಡಿಯುತ್ತಿವೆ: ನಮ್ಮನ್ನು ಕೊಲ್ಲುವುದರ ಸನ್ನಾಹವಿದು. ನಮ್ಮ ಅಂತರಂಗವನ್ನು ಬಹಿರಂಗಪಡಿಸದೆ, ಅಪ್ರಮತ್ತರಾಗಿ ನಾವಿಲ್ಲಿರುವುದು ಒಳಿತು. ಪುರೋಚನನಿಗೆ ಸುಳಿವು ಸಿಕ್ಕಿತೋ, ಆತ ನಮ್ಮನ್ನು ಬೇರಾವುದೋ ಉಪಾಯದಿಂದ ಸಾಯಿಸುವವನೇ; ಜನಾಕ್ರೋಶಕ್ಕಾಗಲಿ ಅಧರ್ಮಕ್ಕಾಗಲಿ ಬೆದರುವವನಲ್ಲ. ನಾವೀಗ ಇಲ್ಲಿಂದ ಧಾವಿಸಿದ್ದೇ ಆದರೆ ಗೂಢಚರರ ದ್ವಾರಾ ಘಾತಿಸುವವನೇ ಸರಿ: ನಾವು ಅಧಿಕಾರದಲ್ಲಿಲ್ಲ, ಅವನಿದ್ದಾನೆ; ಅವನಿಗೆ ಕೋಶಬಲ-ಸಹಾಯಕರುಗಳುಂಟು, ನಮಗಿಲ್ಲ. ಈ ಪಾಪಿಪುರೋಚನನನ್ನೂ ಪಾಪಿದುರ್ಯೋಧನನನ್ನೂ ನಾವೇ ವಂಚಿಸುತ್ತಾ ಬದುಕಬೇಕಾಗಿದೆ. ಬೇಟೆಯಾಡುತ್ತಾ ನಾವಿಲ್ಲಿಯ ಮಾರ್ಗಗಳನ್ನೆಲ್ಲ ಪರಿಚಯಮಾಡಿಕೊಂಡಿದ್ದರೆ ಇಲ್ಲಿಂದ ಪಲಾಯನವು ಸುಕರ. ಸುರಂಗವೊಂದಕ್ಕೆ ಈಗಲೇ ಆರಂಭವಾಗಲಿ: ಅದರೊಳಗೆ ಗಾಳಿಯು ಹೆಚ್ಚಾಡದು; ಬೆಂಕಿಯೂ ಜ್ವಲಿಸಲಾಗದು. ನಮ್ಮೀ ವ್ಯವಸ್ಥೆಯ ಬಗ್ಗೆ ಪುರೋಚನನಿಗಾಗಲಿ ಪುರಜನರಿಗಾಗಲಿ ಸುಳಿವೇ ಸಿಗಬಾಗದು."


ಅದೇ ಹೊತ್ತಿಗೆ ಸರಿಯಾಗಿ ಒಬ್ಬ ಕುಶಲನಾದ ಖನಕನು - ಎಂದರೆ ಅಗೆಯುವವನು - ಅಲ್ಲಿಗೆ ಬಂದನು. ಏಕಾಂತದಲ್ಲಿ ಪಾಂಡವರನ್ನು ಕಂಡು " ನಿಮ್ಮ ಹಿತವನ್ನು ಸಾಧಿಸಲೆಂದು ವಿದುರನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ; ನಾನು ಮಾಡಬೇಕಾದ್ದನ್ನು ತಿಳಿಸಿ. ಈ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಂದು ತಮ್ಮ ಭವನದ ಬಾಗಿಲಿಗೆ ಬೆಂಕಿಯಿಕ್ಕಲು ಪುರೋಚನನು ಸಂಕಲ್ಪಿಸಿದ್ದಾನೆ. ಮಾತೃಸಮೇತರಾದ ಪಾಂಡವರನ್ನು ಸುಡುವುದು ದುರ್ಮತಿ ದುರ್ಯೋಧನನ ಚಿಂತಿತವಾಗಿದೆ. ನೀವು ಹೊರಡುವಾಗ ವಿದುರನು ಮ್ಲೇಚ್ಛಭಾಷೆಯಲ್ಲಿ ನಿನಗೇನನ್ನೋ ಹೇಳಿದಾಗ ನೀನು "ತತ್ ತಥಾ" (ಅದು ಹಾಗೆಯೇ) ಎಂದು ಹೇಳಿದೆಯಲ್ಲವೆ? ನಿನಗೆ ನನ್ನ ಮೇಲೆ ನಂಬಿಕೆ ಬರಲು ಇಷ್ಟು ಸಾಕಲ್ಲವೇ?" ಎಂದನು. ಆತನನ್ನು ಗುರುತಿಸಿದ ಯುಧಿಷ್ಠಿರನು "ನೀನು ವಿದುರನಿಗೆ ಆಪ್ತ, ನಿಷ್ಠಾವಂತ. ನೀನವನಿಗೆಂತೋ ನಮಗೂ ಅಂತೆಯೇ. ವಿದುರನು ಹಿಂದೆಯೇ ಕಂಡುಕೊಂಡಿದ್ದ ವಿಪತ್ತು ಇದೀಗ ಒದಗಿದೆ. ನಮ್ಮನ್ನೀಗ ಪಾರುಮಾಡು" ಎಂದನು. ದ್ವಾರವುಳ್ಳ ಭಾರೀಬಿಲವೊಂದನ್ನು ಆತನು ನಿರ್ಮಿಸಿದನು; ದ್ವಾರವು ಕಾಣದಂತೆಯೂ ವ್ಯವಸ್ಥೆಮಾಡಿದನು. 


ಪುರೋಚನನು ಸದಾ ಗೃಹದ್ವಾರದಲ್ಲೇ ಇರುತ್ತಿದ್ದನು; ಪಾಂಡವರಾದರೋ ರಾತ್ರಿಹೊತ್ತು ಸಾಯುಧರಾಗಿರುತ್ತಿದ್ದರು, ಹಗಲು ಬೇಟೆಯಲ್ಲಿರುತ್ತಿದ್ದರು. ಪುರೋಚನನನ್ನು ನಂಬದಿದ್ದರೂ ನಂಬಿದವರಂತೆ, ಸಂತೋಷವಿಲ್ಲದಿದ್ದರೂ ಇರುವವರಂತೆ ವಂಚಕಪುರೋಚನನನ್ನೇ ವಂಚಿಸುತ್ತ ಅಲ್ಲಿದ್ದರು.


ಕಥೆಯ ಜೊತೆಗೆ ಇಲ್ಲಿಯ ತತ್ತ್ವವನ್ನು ನಾವು ಗಮನಿಸಬೇಕು. ಯುಧಿಷ್ಠಿರನನ್ನು ಭೋಳೆಮನುಷ್ಯನೆಂದು ಭಾವಿಸುವವರುಂಟು. "ಮೋಸಕ್ಕೆ ಪ್ರತಿಮೋಸ"ವೆಂಬುದನ್ನು ಆತ ಜಾಣತನದಿಂದಲೇ ಮಾಡುತ್ತಿದ್ದಾನೆಯಲ್ಲವೇ?


ಸೂಚನೆ : 26/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕಾಳಿದಾಸನ ಜೀವನದರ್ಶನ -29 ಅರಿಯದೆ ಎಸಗಿದ ಅಪರಾಧ, ಅದಕ್ಕೆ ಮುನಿಯಿತ್ತ ಪರಿಹಾರ (Kalidasana Jivanadarshana - 29 Ariyade Esagida Aparadha, Adakke Muniyitta Parihara)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ದಿಲೀಪನು ರಘುವಂಶದ ಅರಸ. ವೈವಸ್ವತಮನುವಿನ ವಂಶದಲ್ಲಿ ಜನಿಸಿದವ. ಶುದ್ಧವಾದ ವಂಶದಲ್ಲಿ ಹುಟ್ಟಿ, "ಶುದ್ಧತರ"ನೆನಿಸಿಕೊಂಡವನವನು. ಕ್ಷಾತ್ರಧರ್ಮವೇ ಮೈತಾಳಿ ಬಂದಿರುವಂತಹವನು. ಆತನ ಆಕಾರವೇನು, ಪ್ರಜ್ಞೆಯೇನು, ಶಾಸ್ತ್ರಜ್ಞಾನವೇನು, ಉದ್ಯಮಗಳೇನು, ಕಾರ್ಯಸಿದ್ಧಿಗಳೇನು! - ಎಲ್ಲವೂ ಒಂದಕ್ಕೊಂದು ತಕ್ಕುದೆನಿಸಿದವೇ. ಪ್ರಜೆಗಳನ್ನು ತನ್ನ ಮಕ್ಕಳಂತೆ ಕಂಡವನಿವನು. ಆತನಿಗೆ ಸರಿಸಾಟಿಯಾಗಿದ್ದವಳು ಆತನ ಪತ್ನಿ, ಸುದಕ್ಷಿಣೆ.

ಎಲ್ಲವೂ ಇದ್ದರೂ ಆತನಿಗೆ ಸಂತಾನಸೌಭಾಗ್ಯವು ಒದಗಿಬಂದಿರಲಿಲ್ಲ. ಸಂತಾನವಿಲ್ಲವೆಂದು ಕೊರಗದವರಾರು? ಆ ನೋವಿನ ಪರಿಹಾರಕ್ಕಾಗಿ ಎಳಸದವರಾರು? ಸಂತಾನಾರ್ಥಿಯು ಸೃಷ್ಟಿಕರ್ತನಾದ ವಿಧಾತೃವಿನ ಪೂಜೆಯನ್ನು ಮೊದಲು ಮಾಡಬೇಕಷ್ಟೆ? ಅದನ್ನು ಮಾಡಿ, ದಿಲೀಪ-ಸುದಕ್ಷಿಣೆಯರು ಹೊರಟರು, ಕುಲಗುರುಗಳಾದ ವಸಿಷ್ಠರ ಆಶ್ರಮದತ್ತ. ಹೊರಡುವ ಮುನ್ನ ರಾಜ್ಯಭಾರದ ಹೊರೆಯನ್ನು ಮಂತ್ರಿಗಳಿಗಿತ್ತರು; ರಾಜ್ಯಭಾರವೆಂಬುದು ಎಷ್ಟಾದರೂ ಜವಾಬ್ದಾರಿಯ ಕೆಲಸವಲ್ಲವೇ?

ಪರಿಮಿತಪರಿವಾರದೊಂದಿಗೆ ಆಶ್ರಮದತ್ತ ಹೊರಟರು: ಪುಣ್ಯಾಶ್ರಮವೆಂದರೆ ಅಲ್ಲೇನು ವೈಭವವನ್ನು ಮೆರೆಸಬೇಕೇ? ಸಂಜೆಯ ಸಮಯಕ್ಕೆ ವಸಿಷ್ಠ-ಅರುಂಧತಿಯರ ದರ್ಶನವಾಯಿತು. ಅವರಂತೂ ಅಗ್ನಿದೇವ-ಸ್ವಾಹಾದೇವಿಗಳಂತೆ ಇದ್ದವರು! ಅವರಿಗೆ ಅಭಿವಾದನವನ್ನು ಮಾಡಿ ಆಶೀರ್ವಾದವನ್ನು ಪಡೆದುಕೊಂಡರು, ಅರಸ-ದಂಪತಿಗಳು. ಆಶ್ರಮದಲ್ಲಿದ್ದ ವಸಿಷ್ಠರೇನೋ ಮುನಿಗಳು ಸರಿಯೇ;  ಆದರೆ ದಿಲೀಪನೂ "ರಾಜ್ಯಾಶ್ರಮ"ದಲ್ಲಿಯ ಮುನಿಯೇ - ಎನ್ನುತ್ತಾನೆ, ಕಾಳಿದಾಸ! ಎಂದರೆ, ದಿಲೀಪನು ತನ್ನ ರಾಜ್ಯವನ್ನು ಆಶ್ರಮವೆಂಬಂತೆಯೇ ಕಂಡಿದ್ದವನು: ಅಂತಹ ಧರ್ಮಮತಿ ಅವನದು. ವಸಿಷ್ಠರೋ ಅಥರ್ವವನ್ನು ಬಲ್ಲವರಲ್ಲಿ ಶ್ರೇಷ್ಠರು; ಎಂದೇ ಎಂತಹ ಸಮಸ್ಯೆಗೂ ಪರಿಹಾರದ ದಿಕ್ಕನ್ನು ತೋರಬಲ್ಲವರು. ಅವರಲ್ಲೀಗ ತನ್ನ ದುಃಖವನ್ನು ನಿವೇದಿಸಿಕೊಂಡನು, ದಿಲೀಪ: "ನನ್ನ ಭೂಮಿಯು ರತ್ನಭರಿತಳಾಗಿರಬಹುದು; ಆದರೆ ನನ್ನ ಗೃಹಿಣಿಯು ಪುತ್ರರತ್ನನಿಗೆ ಜನ್ಮವಿತ್ತಿಲ್ಲ: ಪಿತೃ-ಋಣವನ್ನು ನಾ ತೀರಿಸಲಾಗಿಲ್ಲ. ಬಂಜೆಯಾದ ಆಶ್ರಮವೃಕ್ಷವು ಹೇಗೋ ಹಾಗಾಗಿಬಿಟ್ಟಿದ್ದೇನೆ! ಸಹಿಸಲಾಗದ ಈ ನೋವಿಗೆ ಪರಿಹಾರವನ್ನು ಸೂಚಿಸಿ" - ಎಂದವರನ್ನು ಬೇಡಿಕೊಂಡನು.

ಕ್ಷಣಕಾಲ ಕಣ್ಮುಚ್ಚಿ ವಸಿಷ್ಠರು ಧ್ಯಾನದಿಂದ ತಿಳಿದುಕೊಂಡರು: ಆತನಿಗೆ ಹಾಗಾದದ್ದೇಕೆ? - ಎಂಬುದನ್ನು. ಅದಾದದ್ದು ಹೀಗೆ. ಒಮ್ಮೆ ಇಂದ್ರನಲ್ಲಿಗೆ ದಿಲೀಪನು ಹೋಗಿದ್ದನು. ಅಲ್ಲಿಂದ ಹಿಂದಿರುಗುತ್ತಿದ್ದಾಗ, ದಾರಿಯಲ್ಲಿ ಕಲ್ಪವೃಕ್ಷದ ಬುಡದಲ್ಲಿ ಕಾಮಧೇನುವು ನಿಂತಿದ್ದಳು. ಸುರಭಿ ಎಂಬ ಹೆಸರಿನ ಆ ಹಸುವು ಪರಮಪೂಜಾರ್ಹವಾದದ್ದು, ಪ್ರದಕ್ಷಿಣಕ್ರಿಯೆಗೆ ಯೋಗ್ಯವಾದದ್ದು. ಕಲ್ಪವೃಕ್ಷವೆಂತೋ ಕಾಮಧೇನುವೂ ಅಂತೆಯೇ: ಕೇಳಿದ್ದನ್ನು ದಯಪಾಲಿಸುವ ಶಕ್ತಿಯನ್ನು ಹೊಂದಿರುವ ಧೇನು(ಹಸು)ವದು. ಆದರೆ ದಿಲೀಪನು ಆಕೆಗೆ ಸಲ್ಲಿಸಬೇಕಾಗಿದ್ದ ಗೌರವವನ್ನು ಸಲ್ಲಿಸಲಿಲ್ಲ!

ಏಕೆ ಹಾಗಾಯಿತು? ಅವಳ ಬಗ್ಗೆ, ಧರ್ಮದ ಬಗ್ಗೆ, ಗೌರವವಿರಲಿಲ್ಲವೇ ಆತನಿಗೆ? ಅದಲ್ಲ. ಆತನ ಮನಸ್ಸಿನಲ್ಲಿ ದುಗುಡವೊಂದಿತ್ತು: ಧರ್ಮಲೋಪದ ಭಯ; ಅದರಿಂದ ಹಾಗಾಯಿತು. ಯಾವ ಭಯ?: ತನ್ನ ಪತ್ನಿಯು ಋತುಸ್ನಾತಳಾಗಿದ್ದಾಳೆ; ಅವಳೊಂದಿಗೆ ಸಂಗಮವು ಕರ್ತವ್ಯವಾಗಿದೆ. ತ್ವರಿತವಾಗಿ ಹಿಂತಿರುಗಬೇಕಾಗಿದೆ. ಈ ಆತಂಕದ ಧಾವಂತದಲ್ಲಿ ನಂದಿನಿಯನ್ನು ಗಮನಿಸಲಿಲ್ಲ. "ನನ್ನನ್ನು ಹೀಗೆ ತಿರಸ್ಕರಿಸಿ ಹೋದೆಯಲ್ಲಾ, ನಿನಗೆ ಸಂತತಿಯಾಗದಿರಲಿ! " - ಎಂಬುದಾಗಿ ಶಾಪವು ಹೊಮ್ಮಿತು, ಸುರಭಿಯಿಂದ: ಸಂತಾನಕ್ಕಾಗಿಯಾದದ್ದು ಆತನ ಧಾವಂತ; ಎಂದೇ ಅದಕ್ಕೇ ಅಡ್ಡಿ! ವಿಧಿಯಾಟವೆಂದರೆ, ಆ ಶಾಪವು ಸಹ ಅವನಿಗೆ ಕೇಳದಾಯಿತು! ಸಾರಥಿಗೂ! ಏಕೆ? ಗಂಗಾಪ್ರವಾಹದೆಡೆಗೆ ಬಂದಿದ್ದ ದಿಗ್ಗಜಗಳ ಘೀಳಿಡುವಿಕೆಯ ಸದ್ದೇನು ಕಡಿಮೆಯೇ? ಅರಿವೇ ಆಗದೆ ತಪ್ಪೇ ನಡೆದುಹೋಯಿತು!

ವಸಿಷ್ಠರಿದನ್ನು ಕಂಡುಕೊಂಡರು. ಸುರಭಿಗಾದ ತಿರಸ್ಕಾರ ಈತನ ಶ್ರೇಯಸ್ಸಿಗೆ ಪ್ರತಿಬಂಧಕ. "ಸುರಭಿಯ ಮಗಳಾದ ನಂದಿನಿಯನ್ನೇ ಆರಾಧಿಸು, ರಾಜನೇ! ಅವಳೂ ಕಾಮದುಘೆಯೇ: ಕೇಳಿದ್ದನ್ನೆಲ್ಲ ಕೊಡುವವಳು" - ಎಂದು ವಸಿಷ್ಠರು ಆತನಿಗೆ ಹೇಳುವರು: ರಾಜನಿಗೆ ತನ್ನ ಅಪರಾಧದ ಅರಿವು ಇದೀಗಷ್ಟೆ ಆಯಿತು; ಮಹಾಭಾಗ್ಯದಿಂದಾಗಿ, ಪರಿಹಾರವೂ ಜೊತೆಗೇ ಬೋಧಿತವಾಯಿತು!

ಅಷ್ಟರಲ್ಲೇ ಶುಭಸೂಚನೆಯೂ ಆಯಿತು: ಅಲ್ಲಿಗಿದೋ ನಂದಿನಿಯೇ ಆಗಮಿಸಿದಳು! ಮಾರನೆಯ ದಿನದ ಪ್ರಭಾತದಿಂದಲೇ ಆರಂಭವಾಯಿತು, ಅವಳ ಸೇವೆ. ಗೋಮಾತೆಯ ಸೇವೆಯೆಂಬುದನ್ನು ಪ್ರೀತ್ಯಾದರಗಳಿಂದ ಮಾಡುವುದು ಹೇಗೆ? - ಎಂಬುದನ್ನು ಕಾಳಿದಾಸನ ರಘುವಂಶದಿಂದಲೇ ತಿಳಿಯತಕ್ಕದ್ದು!

ಅನುಯಾಯಿಗಳಿದ್ದರೂ ಅವರನ್ನು ಹಿಂದಿರುಗಿಸಿ, ರಾಜನೇ ಸೇವೆಯನ್ನು ಕೈಗೊಂಡನು: ಗೋಗ್ರಾಸ ಕೊಡುವುದು, ತುರಿಯನ್ನು ಹೋಗಲಾಡಿಸುವುದು ಮುಂತಾದುವೆಲ್ಲ ನಡೆದವು; ನೆರಳಿನಂತೆ ಅದನ್ನಾತ ಹಿಂಬಾಲಿಸುವನು; ಸಂಜೆಯ ಹೊತ್ತಿಗೆ ಹಿಂದಿರುಗಿಬರುವ ಧೇನುವಿಗೆ ಸುದಕ್ಷಿಣೆಯೇ ಪೂಜೆ ಸಲ್ಲಿಸುವಳು. ಹೀಗೆ ಇಪ್ಪತ್ತೊಂದು ದಿನಗಳು ಕಳೆದವು.

ರಾಜನ ಭಾವವನ್ನು ಪರೀಕ್ಷಿಸಲೆಂದು ಹಿಮಾಲಯದ ಗುಹೆಯೊಂದನ್ನು ನಂದಿನಿಯೊಮ್ಮೆ ಪ್ರವೇಶಿಸಿತು. ಹಿಮಾಲಯದ ಸೊಬಗಿನತ್ತ ರಾಜನ ದೃಷ್ಟಿ ಹರಿಯುತ್ತಿದ್ದಂತೆಯೇ ಥಟ್ಟನೆ ಸಿಂಹವೊಂದು ಬಂದು ಧೇನುವನ್ನು ಆಕ್ರಮಿಸಿತು! ನಂದಿನಿಯ ಆರ್ತಧ್ವನಿ ಕೇಳಿಸಿತು! ಒಡನೆಯೇ ಬಾಣಪ್ರಯೋಗಕ್ಕೆಂದು ಬತ್ತಳಿಕೆಗೆ ರಾಜನು ಕೈಹಾಕಿದನು: ಆದರಿದೋ, ಅಲ್ಲೇ ಕೈ ಅಂಟಿಕೊಂಡಿಬಿಟ್ಟಿತು! ಕೋಪಾಶ್ಚರ್ಯಗಳು ಆತನಲ್ಲುಕ್ಕಿದವು. ಸಿಂಹವಾಗ ಹೇಳಿತು : "ಅಯ್ಯಾ, ನಾನೊಬ್ಬ ಶಿವಸೇವಕ, ಈ ದೇವದಾರುವನ್ನು ಕಾಯಲು ನೇಮಿತನಾಗಿದ್ದೇನೆ. ಹಸಿದ ನನಗೆ ಆಹಾರವಾಗಿ ಬಂದಿದೆ ಈ ಹಸು. ನೀನಿನ್ನು ಹಿಂದಿರುಗಬಹುದು." ಅದಕ್ಕೆ ರಾಜನು, "ಅಯ್ಯಾ, ನನ್ನನ್ನೇ ತಿನ್ನು, ಗುರುವಿಗಾಗಿ ಈ ಧೇನುವನ್ನು ಬಿಡು" - ಎಂದು ಬೇಡಿದ. ಅದಕ್ಕೆ ಸಿಂಹವೆಂದಿತು: "ಮೂಢ, ನಿನ್ನಲ್ಲಿ ಗೋಸಂಪತ್ತಿಗೇನು ಕಡಿಮೆಯೇ? ಗುರುವಿಗೆ ಮತ್ತೊಂದಿತ್ತರಾಗದೇ?"

ಆದರೆ ಋಷಿಧೇನುವನ್ನುಳಿಸಲು ತನ್ನ ಶರೀರವನ್ನೇ ಸಮರ್ಪಿಸಿ ಬಾಗಿದ, ದಿಲೀಪ: ಮರುಕ್ಷಣದಲ್ಲಿ ಪುಷ್ಪವೃಷ್ಟಿಯಾಯಿತು! ತಲೆಯೆತ್ತಿ ನೋಡಿದರಿದೋ ಸಿಂಹವೇ ಇಲ್ಲ! "ನಾನು ನಿನ್ನನ್ನು ಪರೀಕ್ಷಿಸಿದೆ, ಅಷ್ಟೆ. ನಿನಗೇನು ವರ ಬೇಕು? ಕೇಳು" - ಎಂದಿತು ನಂದಿನಿ! ಅನುಗ್ರಹವಾಯಿತು: ಮುಂದೆ ಸತ್ಸಂತಾನವಾಗಿ, ರಘುವು ಜನಿಸಿದ: ವಂಶವೇ ಬೆಳಗಿತು!

ಇಲ್ಲಿ ಗಮನಿಸಬೇಕಾದುದಿದು: ಅರಿಯದೆ ಮಾಡುವ ತಪ್ಪಿಗೂ ಶಿಕ್ಷೆಯುಂಟು; ಅದಕ್ಕೂ ಪಶ್ಚಾತ್ತಾಪ-ಪ್ರಾಯಶ್ಚಿತ್ತಗಳುಂಟೇ ಸರಿ!

ಸೂಚನೆ : 24/09/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Thursday, September 22, 2022

ஸ்ரீகுருவின் கண்ணோட்டம் - 26 ஏன் இந்த முணுமுணுப்பு? (En inda munumunuppu?)

 மூலம்: வரததேசிகாசார்யார்

தமிழாக்கம்: வனஜா
மின்னஞ்சல் : (lekhana@ayvm.in)



"வியாதி குணமாக நல்ல மருந்தை உட்கொள்ள வேண்டும்.  பத்தியமும் கடைபிடிக்க தேவையாகும். ஆனால் இவ்விரண்டிற்கும் இடையே ஒரு பயனற்ற மூட வழக்கத்தையும் கடைபிடிக்கிறார்களே"
"என்ன வழக்கமப்பா அது"?


"மருந்து, மாத்திரை மற்றும் லேகியம் போன்றவற்றை உட்கொள்ளும்போது ஏதோ மந்திரத்தை வேறு முணுமுணுக்கின்றனர்."
"அந்த மந்திரத்தை கவனித்தருக்கிறாயா"


"நன்றாக கவனித்திருக்கிறேன். முன்காலத்தின் மூட நம்பிக்கையின் அடையாளம் என்று அதனை பதிவு செய்திருக்கின்றேன் "
"நான் அதனை கேட்கலாமா?"
"கேளுங்கள்- 


                       சரீரே ஜர்ஜரீ பூதே வ்யாதிக்ரஸ்தே களேபரே|
                      ஔஷதம் ஜாஹ்னவீ தோயம் வைத்யோ நாராயணோ ஹரி:" 
"அதன் பொருள் என்ன தெரியுமா?"

"உடல்நலம் குன்றி, நோய்வாய்படும்போது கங்கை நீரே மருந்தாகும், இறைவனே வைத்தியன் என்பது கருத்து."
"மருந்து உட்கொள்ளும்போது இதனை உச்சரிப்பதில் ஏதாவது இடைஞ்சல் உள்ளதா? அல்லது தவறா?"
"தவறேதும் இல்லை. ஆனால் பயனும் ஏதுமில்லை. அதனை உச்சரிப்பவனுக்கு இறைவனிடத்தோ, மருந்து, மற்றும் வைத்தியனிடத்தோ முழு நம்பிக்கை இருப்பதில்லை."

"அவ்வளவு விரைவில் முடிவு செய்யக்கூடாதப்பா.உண்மையில் இறைவனை நினைக்காவிடில் நோய்முற்றிலும்  குணமாவதே இல்லை "

"அது எவ்வாறு"?
"இறைவன் நிம்மதி, மகிழ்ச்சி, சமாதானம், தைர்யம், வீரம் இவற்றின் முழு உருவம். அவன் நினைவுடன் மருந்து உட்கொள்கையில் மனதின் குற்றமும் குறையும் நீங்கி உடல் நோயும் நீங்குகிறது. மருந்தை மட்டுமே  உட்கொண்டால்  உடலின் வெளியில் காணும் நோய் மடடும் குணமாகலாம். ஆனால் மனதில் உள்ள நோய்(ஆதி) மற்றும் உடலில் உள்ள நோய்(வியாதி) இரண்டும்  நீங்குவதே உண்மையான நலம். ஆதி, வியாதிகளிரண்டும் நீங்க வேண்டுமெனில் மருந்து உட்கொள்கையில் இறைவனை நினைவதும் மிக முக்கியமாகும்."

Monday, September 19, 2022

ಯಕ್ಷ ಪ್ರಶ್ನೆ?– 4 (Yaksha Prashne - 4)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ- ೩ ಸೂರ್ಯನ ಅಸ್ತಮಾನಕ್ಕೆ ಕಾರಣವೇನು ?  

ಉತ್ತರ- ಧರ್ಮ 

ನಾವು ಇರುವುದು ಒಂದು ಸೌರಮಂಡಲದಲ್ಲಿ. ಇದಕ್ಕೆ ಸೂರ್ಯನೇ ಪ್ರಧಾನ. ಅದೇ ಕೇಂದ್ರ. ಅವನು ಒಂದು ನಕ್ಷತ್ರ. ಯಾವುದು ಸ್ವಯಂಪ್ರಕಾಶ ಉಳ್ಳದ್ದೋ ಅದು ತಾನೇ ನಕ್ಷತ್ರ. ನಕ್ಷತ್ರ ಸಮೂಹಗಳಲ್ಲಿ ಅವನು ಪ್ರಖರಕಿರಣ. ಅವನ ಸುತ್ತಲು ಎಲ್ಲಾ ಗ್ರಹಗಳು, ಉಲ್ಕೆಗಳು, ಧೂಮಕೇತು ಮೊದಲಾದ ಆಕಾಶ ಕಾಯಗಳು ಸಂಚರಿಸುತ್ತವೆ. ಇವುಗಳಲ್ಲಿ ಭೂಮಿಯೂ ಒಂದು ಗ್ರಹ. ಭೂಮಿಯು ಸೂರ್ಯನನ್ನೇ ಭ್ರಮಣ ಮಾಡುತ್ತಿದೆ. ಆಗ ಭೂಮಿಯ ಅರ್ಧದಷ್ಟು ಭಾಗಕ್ಕೆ ಸೂರ್ಯನ ಬೆಳಕು ಬೀಳುತ್ತದೆ. ಉಳಿದ ಅರ್ಧಭಾಗಕ್ಕೆ ಬೆಳಕು ಬೀಳುವುದಿಲ್ಲ. ಯಾವ ಭಾಗದಲ್ಲಿ ಬೆಳಕು ಬೀಳುತ್ತದೆಯೋ ಅದನ್ನು 'ಹಗಲು' ಎಂತಲೂ, ಬೆಳಕು ಬೀಳದ ಭಾಗವನ್ನು 'ಕತ್ತಲು' ಎಂದು ಕರೆಯುತ್ತಾರೆ. ಇದೊಂದು ಪ್ರಾಕೃತಿಕವಾದ ಪ್ರಕ್ರಿಯೆ ಅಷ್ಟೇ. ಇದರಲ್ಲಿ ಇನ್ನಾವುದೇ ಹಿನ್ನೆಲೆ ಇಲ್ಲ ಎಂಬುದು ಆಧುನಿಕ ವಿಜ್ಞಾದ ಪರಿಭಾಷೆ. ಆದರೆ ನಮ್ಮ ಭಾರತೀಯ ಖಗೋಳ ಶಾಸ್ಟ್ರದ ಪ್ರಕ್ರಿಯೆ ಇದಕ್ಕಿಂದ ಭಿನ್ನವಾಗಿ ಇಲ್ಲ. ಅದನ್ನು ವಿಶ್ಲೇಷಿಸುವ ವಿಧಾನ ಭಿನ್ನ ಅಷ್ಟೇ. ಸೂರ್ಯ ನಮಗೆ ಬೆಳಿಗ್ಗೆ ಒಂದು ಭಾಗದಲ್ಲಿ ಉದಯಿಸಿದಂತೆ ಇನ್ನೊಂದು ಭಾಗದಲ್ಲಿ ಅಸ್ತವಾದಂತೆ ಕಾಣುತ್ತದೆ. ಕಂಡಿದ್ದನ್ನು ನೋಡಿ ಹೇಳಿದ್ದು ಸೂರ್ಯ ಭೂಮಿಯ ಸುತ್ತಲೂ ಸುತ್ತುತ್ತದೆ ಎಂದು. ಇದರ ವಾಸ್ತವ ಒಂದೇ. ಇದಕ್ಕೆ ಕಾರಣವೇನು ಅನ್ನುವುದು ಇಲ್ಲಿ ಯಕ್ಷನ ಪ್ರಶ್ನೆ. ಇದಕ್ಕೆ ಉತ್ತರ ಧರ್ಮ ಎಂಬುದು. 


 ಸೃಷ್ಟಿಯಲ್ಲಿ ನಡೆಯುವ ಸಹಜವಾದ ಪ್ರಕ್ರಿಯೆಗೆ ಕಾರಣವನ್ನು ಹುಡುಕುವುದು ದಡ್ಡತನ. ಮತ್ತು ಅದಕ್ಕೆ ಧರ್ಮ ಕಾರಣ ಎನ್ನುವುದು ಇನ್ನೂ ಮೂರ್ಖತನದ ಪರಮಾವಧಿಯಲ್ಲವೇ? ಎಂಬುದು ಪ್ರಶ್ನೆ. ಆದರೆ ಸನಾತನ ಭಾರತದ ಋಷಿ ಮಹರ್ಷಿಗಳು ದಡ್ಡರಲ್ಲ. ಅವ್ರು ತಮ್ಮ ಶರೀರವನ್ನೇ ಪ್ರಯೋಗಾಲವಾಗಿಸಿಕೊಂಡು ಸೌರಮಂಡಲದ ಸಮಗ್ರವಾದ ಅಧ್ಯಯನವನ್ನು ಮಾಡಿ "ಇದಂ ಇತ್ಥಮ್" ಎಂಬ ನಿರ್ಣಯವನ್ನು ಸಾವಿರ ವರ್ಷಗಳ ಹಿಂದೆಯೇ ಕೊಟ್ಟಿದ್ದಾರೆ. ಅವರಿಗೆ ಸೂರ್ಯನು ಸ್ತವಾಗಲು ಕಾರಣವೇನು ಎಂಬುದನ್ನು ತಿಳಿಯಲು ಅಸಾಧ್ಯವಾಯಿತೇ? ಖಂಡಿತವಾಗಿಯೂ ಇಲ್ಲ. ಅವನ ನೋಟವೇ ಬೇರೆ. ಅವರ ಚಿಂತನಾವಿಧಾನವೇ ಬೇರೆ. ಸೂರ್ಯನು ಅಸ್ತವಾಗಲು ಕಾರಣ ಧಾರ್ಮ ಎಂದಿದ್ದಾರೆ. ಶ್ರೀರಂಗ ಮಹಾಗುರುವೂ ಹೇಳುವಂತೆ " ಧರ್ಮ ಎಂದರೆ ಒಂದು ಖಂಡಿಷನಪ್ಪ" ಎಂದು. ಈ ಸಮಗ್ರ ಪ್ರಪಂಚವು ತನ್ನದೇ ಆದ ರೀತಿಯಲ್ಲಿ ನಡೆದುಕೊಂಡು ಹೋಗಲು ಅಲ್ಲೊಂದು ಕಂಡೀಷನ್ ಕಾರಣ. "ಧಾರಣಾತ್ ಧರ್ಮ ಇತ್ಯಾಹು: - ಯಾವುದು ಈ ಜಗತ್ತನ್ನು ಧರಿಸಿದೆಯೋ ಅದಕ್ಕೆ ಧರ್ಮ" ಎನ್ನುತ್ತಾರೆ. ಈ ಪ್ರಪಂಚದ ಸಮಸ್ತ ಆಗುಹೋಗುಗಳು ವ್ಯವಸ್ಥಿತವಾಗಿ ಹೋಗಲು ಆ ಧರ್ಮವೇ ಕಾರಣ. ಅದನ್ನೇ ಪರಬ್ರಹ್ಮ ಎನ್ನುವುದು. ಅವನೇ ತಾನೇ ಸೂರ್ಯ ಮಾತ್ರನಲ್ಲ; ಎಲ್ಲಾ ಚರಾಚರ ಜಗತ್ತಿನ ಚೇಷ್ಟೆಯು ಅವಳಲ್ಲದೆ ನಡೆಯಲು ಸಾಧ್ಯವಿಲ್ಲ. "ತೇನ ವಿನಾ ತೃಣಮಪಿ ನ ಚಾಲತಿ" ಅಲ್ಲವೇ?


ಸೂಚನೆ : 18/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ -4 ವಿದುರೋಪದೇಶ (Vyaasa Vikshita - 4 Viduropadesha)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಸಾಧಾರಣನಾಗಿ ಕಂಡರೂ ಅಸಾಧಾರಣವಾದ ಲೌಕಿಕಜ್ಞಾನವನ್ನೂ ಅಲೌಕಿಕಜ್ಞಾನವನ್ನೂ ಪಡೆದಿದ್ದ ವ್ಯಕ್ತಿಯೆಂದರೆ ವಿದುರನೇ ಸರಿ.


ಧೃತರಾಷ್ಟ್ರನ ಹೊಂಚೂ ದುರ್ಯೋಧನನ ಸಂಚೂ ಮೇಳೈಸಿದವು: ಪಾಂಡವರನ್ನು ಕರೆದು ಧೃತರಾಷ್ಟ್ರ ಹೇಳಿದ: "ವಾರಣಾವತನಗರವು ಸೊಗಸಾಗಿದೆಯಂತೆ.  ಅಲ್ಲಿಗೆ ಹೋಗಿ ವಿಹರಿಸಿ ಬನ್ನಿ." ಯುಧಿಷ್ಠಿರನೊಪ್ಪಿದ. ದುರಾತ್ಮ ದುರ್ಯೋಧನ ಒಡನೆಯೇ ಪುರೋಚನನನ್ನು ಏಕಾಂತಕ್ಕೆ ಕರೆಸಿ ಆತ್ಮೀಯತೆಯಿಂದ ಮಾತನಾಡಿಸಿ, "ನೀನೇ ಕಾಪಾಡಬೇಕು. ಅರಗಿನ ಮನೆಯೊಂದನ್ನು ವಾರಣಾವತದಲ್ಲಿ ನಿರ್ಮಿಸು. ಪಾಂಡವರಿಗೆ ಅಲ್ಲಿ ನೆಚ್ಚಿಕೆಯಾಗುವಂತೆ ಮಾಡಿ, ಕೊನೆಗೆ ಕಿಚ್ಚುಹಚ್ಚಿ ಬಾ" ಎಂದ.


ಹಿರಿಯರಿಗೆಲ್ಲ ವಂದಿಸಿ, ಹೊರಡಲು ಸಂನದ್ಧನಾದ, ಯುಧಿಷ್ಠಿರ. ಆಗ ಕೆಲವರು ಹೇಳಿಯೇಬಿಟ್ಟರು: "ಧೃತರಾಷ್ಟ್ರನು ಮಾಡುತ್ತಿರುವುದು ಸರಿಯಲ್ಲ. ಪಾಂಡವರು ಪಾಪಮಾಡರು. ಆದರೆ ಅವರ ಬಗ್ಗೆ ಧೃತರಾಷ್ಟ್ರನಿಗೆ ಸಹನೆಯಿಲ್ಲ. ಭೀಷ್ಮ-ಪಾಂಡುಗಳು ಹೀಗೆಂದೂ ವರ್ತಿಸಲಿಲ್ಲ. ಯುಧಿಷ್ಠಿರನೆಲ್ಲಿಗೆ ಹೋಗುವನೋ ಅಲ್ಲಿಗೇ ನಾವೂ" ಎಂದು. ಅದರೆ ಯುಧಿಷ್ಠಿರನು ಹಾಗೆ ಬೇಡವೆನ್ನಲು ವಾಪಸಾದರು. 


ಆಗ, "ಪ್ರಾಜ್ಞರ ಪ್ರಲಾಪವನ್ನು ಬಲ್ಲ ಪ್ರಾಜ್ಞನಾದ ವಿದುರನು, ಪ್ರಾಜ್ಞನೂ ಪ್ರಾಜ್ಞಪ್ರಲಾಪ-ವನ್ನರಿತವನೂ ಆದ ಯುಧಿಷ್ಠಿರನಿಗೆ ಒಂದೆರಡು ಕಿವಿಮಾತನ್ನು ಹೇಳಿದ" ಎಂದು ವ್ಯಾಸರು ಹೇಳುತ್ತಾರೆ. (ಜಾಣರು ಜಾಣರೊಂದಿಗಾಡುವ ಮಾತುಗಳು ಕೆಲವೊಮ್ಮೆ ಇತರರಿಗೆ ಒಗಟೊಗಟಾಗಿ ತೋರಿದರೂ ಪರಸ್ಪರ ಅರ್ಥವಾಗುತ್ತವೆ). 


(ಸಂಸ್ಕೃತಜ್ಞರಷ್ಟೇ ಸಂಸ್ಕೃತಭಾಷೆಯಲ್ಲಿಯ ಒಗಟನ್ನು ಬಿಡಿಸಿಕೊಳ್ಳಬಲ್ಲರು. ಎಂದೇ ಅದರ ಅಭಿಪ್ರಾಯವನ್ನಿಲ್ಲಿ ಸ್ವಲ್ಪ ಬಿಡಿಸಿಯೇ ಹೇಳೋಣ) ಶತ್ರುವಿನ ಮತಿಯನ್ನರಿತು ಕಾರ್ಯ ಮಾಡಬೇಕು. ಹಾಗೆ ಮಾಡಿದಲ್ಲಿ ಆಪತ್ತನ್ನು ದಾಟಬಹುದು. ಮೈಯನ್ನು ಕೊಯ್ಯಲು ಲೋಹನಿರ್ಮಿತವಲ್ಲದ ನಿಶಿತವಾದ ಶಸ್ತ್ರವೂ ಇರಬಹುದು. ಅದನ್ನರಿತವನನ್ನು- ಘಾತಕ್ಕೆ ಪ್ರತಿಘಾತವನ್ನು ಬಲ್ಲವನನ್ನು - ಅದು ಕೊಲ್ಲದು. (ಇಲ್ಲಿ 'ನಿಶಿ' ಎಂದರೆ 'ರಾತ್ರಿಸಮಯದಲ್ಲಿ' ಎಂಬ ಧ್ವನಿಯಿದೆಯೆಂಬುದನ್ನು ಗಮನಿಸಬೇಕು. 'ಅಲೋಹ'ವೆಂದರೆ ವಿಷವೆಂದೋ ಬೆಂಕಿಯೆಂದೋ ತಿಳಿಯಬೇ್ಕು). ಬೆಂಕಿಯು ಬಿಲದೊಳಗಿರು್ವುದನ್ನು ಧ್ವಂಸಮಾಡದು – ಎಂದರಿತವನು ಸ್ವರಕ್ಷಣೆಮಾಡಿಕೊಳ್ಳಬಹುದು. (ಅರ್ಥಾತ್, ಸುರಂಗವನ್ನು ಸೇರಿಕೊಂಡವರು ಅಗ್ನಿಪೀಡೆಯಿಂದ ಪಾರಾಗಬಹುದು). ಕಣ್ಣಿಲ್ಲದವನಿಗೆ ದಾರಿ ಕಾಣದು, ದಿಕ್ಕೂ ತೋಚದು (ಅರ್ಥಾತ್ ವಿವೇಕವೆಂಬ ಕಣ್ಣಿಲ್ಲದವನಿಗೆ ಆಪತ್ತಿನಿಂದ ತಪ್ಪಿಸಿಕೊಳ್ಳುವ ಹಾದಿಕಾಣದು, ಬರೀ ದಿಗ್ಭ್ರಮೆಯಾಗುತ್ತದೆ). ಧೃತಿಯಿಲ್ಲದವನಿಗೆ ಬುದ್ಧಿಯಿರದು. (ಅರ್ಥಾತ್, ಕ್ಲೇಶಗಳು ಬಂದಾಗ ಕಂಗಾಲಾದರೆ ಸರಿಯಾದದ್ದು ತೋಚದು). ಆಪ್ತರಲ್ಲದವರು ಪ್ರಯೋಗಿಸುವ ಅಲೋಹಶಸ್ತ್ರದಿಂದ (ಅರ್ಥಾತ್ ಅಗ್ನಿಪ್ರಯೋಗದಿಂದ) ಬಿಡಿಸಿಕೊಳ್ಳುವುದನ್ನರಿತಿರಬೇಕು. ಓಡಾಡುತ್ತಿದ್ದರೆ ದಾರಿಗಳ ಪರಿಚಯವಾಗುತ್ತದೆ. (ಅರ್ಥಾತ್ ವಾರಣಾವತದಲ್ಲಿದ್ದಾಗ ಹಗಲೆಲ್ಲ ಊರು ಸುತ್ತುತ್ತಿದ್ದರೆ ಹೆದ್ದಾರಿ-ಕಿರುದಾರಿಗಳೆಲ್ಲ ಗೊತ್ತಾಗುವುವು: ತಪ್ಪಿಸಿಕೊಳ್ಳಲು ಇದೆಲ್ಲ ತಿಳಿದಿರಬೇಕು). ನಕ್ಷತ್ರಗಳಿಂದಲೂ ದಿಕ್ಕುಗಳನ್ನು ತಿಳಿಯಬಹುದು (ಅರ್ಥಾತ್ ಕತ್ತಲಲ್ಲಿ

ತಪ್ಪಿಸಿಕೊಂಡುಹೋಗಬೇಕಾಗುವ ಸಂನಿವೇಶವು ಬರಲಿದೆ). ತಾನೇ ತನ್ನ ಐದನ್ನು ಪೀಡಿಸುತ್ತಿದ್ದರೆ ಪೀಡೆಗೊಳಗಾಗನು (ಅರ್ಥಾತ್ ಪಂಚೇಂದ್ರಿಯಸಂಯಮವನ್ನು ತನ್ನ ಮನಸ್ಸಿನಿಂದಲೇ ಮಾಡಿಕೊಂಡಿರುತ್ತಿದ್ದರೆ – ಅಂದರೆ ಇಂದ್ರಿಯಚಾಪಲ್ಯಗಳಿಗೆ ತುತ್ತಾಗದಿದ್ದರೆ – ಸ್ವರಕ್ಷಣೆಯು ಶಕ್ಯ).


ಹೀಗಿವೆ ವಿದುರನ ಮಾತುಗಳು! ಎಂದೇ ವ್ಯಾಸರು ಆತನನ್ನು ವಿದ್ವಾಂಸರಲ್ಲಿ ಶ್ರೇಷ್ಠ ಎನ್ನುವುದು "ವಿದುರಂ ವಿದುಷಾಂ ಶ್ರೇಷ್ಠಂ"! ವಾರಣಾವತದಲ್ಲಿ ಯಾವ ಬಗೆಯ ವಿಪತ್ತು ಕಾದಿದೆ, ಆತ್ಮರಕ್ಷಣೆ ಹೇಗೆ ? – ಎಂಬಿಷ್ಟನ್ನೂ ಅವನು ಸೂಚಿಸಿದ್ದಾನೆ. ಧರ್ಮಜ್ಞನಾದ ವಿದುರನಿಗೆ

ನಮಸ್ಕಾರ.

ಸೂಚನೆ : 18/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 19 ಅಹಿಂಸಾ ಪರಮೋ ಧರ್ಮಃ (Astakshara Darshana 19 Ahinsa Paramo Dharmah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



'ಅಹಿಂಸೆಯು ಪರಮಧರ್ಮ' - ಎಂಬ ಸೂಕ್ತಿ ಬಹಳವಾಗಿ ಪ್ರಸಿದ್ಧವಾದದ್ದೇ. ತನ್ನಿಂದ ಯಾರಿಗೂ ನೋವಾಗಬಾರದು - ಎಂಬುದಿದರ ಸಾರ.

"ಅಹಿಂಸಾ ಪರಮೋ ಧರ್ಮಃ" - ಎಂಬುದು ಮಹಾತ್ಮರಾದ ಭೀಷ್ಮರ ಉಕ್ತಿ, ಮಹಾಭಾರತದಲ್ಲಿರುವುದು. ಅಹಿಂಸೆಯು ದೈವೀಸಂಪತ್ತಿನ ಒಂದು ಭಾಗವೆನ್ನುತ್ತದೆ, ಭಗವದ್ಗೀತೆ. ಶಾರೀರ-ವಾಙ್ಮಯ-ಮಾನಸಗಳೆಂಬ ಮೂರು ಬಗೆಯ ತಪಸ್ಸುಗಳಿವೆ; ಅಹಿಂಸೆಯು ಶಾರೀರತಪಸ್ಸಿನಲ್ಲಿ ಸೇರಿದೆ - ಎನ್ನುತ್ತದೆ, ಗೀತೆ.

ಪಾತಂಜಲಯೋಗಸೂತ್ರದಲ್ಲಿ, ಅಷ್ಟಾಂಗಯೋಗದ ಮೊದಲ ಮೆಟ್ಟಲಾದ ಯಮದಲ್ಲೇ ಮೊದಲಂಶವಾಗಿ ಅಹಿಂಸೆಗೆ ಸ್ಥಾನವಿದೆ. ಜೈನಮತ- ಬೌದ್ಧಮತಗಳಲ್ಲೂ ಅಹಿಂಸೆಗೆ ಒತ್ತು ಇದ್ದೇ ಇದೆ. ಕಳೆದ ಶತಮಾನದಲ್ಲಿ ಶ್ರೀಗಾಂಧಿಯವರ ಬೋಧನೆಯಿಂದಾಗಿ ಅಹಿಂಸೆಯೆಂಬುದೇ ಜೀವನದ ಏಕೈಕವ್ರತವೋ ಎಂಬಂತಾಗಿಹೋಗಿದೆ.

"ಯುದ್ಧವನ್ನು ಕರ್ತವ್ಯವಾಗಿ ಮಾಡು - ಎಂದು ಹೇಳಿದ ಶ್ರೀಕೃಷ್ಣನಿಗಿಂತಲೂ, ಅಹಿಂಸಾಜಪವನ್ನು ಮಾಡುತ್ತಿದ್ದ ಗಾಂಧಿಯವರೇ ಮೇಲು" - ಎಂಬ ಭಾವನೆ ಸಹ ಇಂದು ಅನೇಕ ಮಂದಿಗಿದೆ! ಆದರೆ ಗಾಂಧಿಯವರ ಅಹಿಂಸಾಜಪದ ಹಿಮ್ಮೇಳದಲ್ಲಿಯೇ ಲಕ್ಷಾಂತರಮಂದಿಯ ಕಗ್ಗೊಲೆ ನಡೆದುಹೋಯಿತಲ್ಲವೇ? ದರೋಡೆಮಾಡಲು ಬಂದವನಿಗೆ ನಮ್ಮ ಆಯುಧಗಳನ್ನು ನಾವೇ ಒಪ್ಪಿಸಿ, "ನಾನೆಂತಹ ಅಹಿಂಸಾವಾದಿ ಕಂಡೆಯಾ!" – ಎಂದರೆ ಸಾಕು; ಆತನೇ ಬೆಚ್ಚಿ, ನಮ್ಮ ತತ್ತ್ವಪಾಲನವನ್ನು ಮೆಚ್ಚಿ, ಹೃದಯಪರಿವರ್ತನೆಹೊಂದಿ ಹಿಂದಿರುಗಿಬಿಡುವನು - ಎಂಬ ಹುಚ್ಚುಭ್ರಮೆ ನಮ್ಮನ್ನು ಹಿಡಿದುಕೊಂಡಂತಿದೆ. 

ಅಹಿಂಸೆಯ ಬಗ್ಗೆ ಇಷ್ಟೆಲ್ಲಾ ಕಾಳಜಿಗೆ ಕಾರಣವೇನು? ಇದನ್ನು ತಿಳಿಯಲಿಕ್ಕೆ ನಮ್ಮ ಮೂಲ ಪ್ರೇರಣೆಗಳತ್ತ ಗಮನಹರಿಸಬೇಕು. "ನಾನಿರಬೇಕು, ನಾನು ಸುಖಿಯಾಗಿರಬೇಕು" ಎಂಬುದೇ ಪ್ರತಿಯೊಂದು ಜೀವಿಯ ಪ್ರವೃತ್ತಿ. ಒಂದು ಸಣ್ಣ ಇರುವೆಯು ಸಹ ನೀರಿಗೆ ಬಿದ್ದರೆ ವಿಲವಿಲ ಒದ್ದಾಡುವುದೇಕೆ?: ತಾನು ಸಾಯಬಾರದೆಂದು. ಆಹಾರಸಂಗ್ರಹವನ್ನು ಮಾಡಿಟ್ಟುಕೊಳ್ಳುವುದೇಕೆ?: ತಾನು ಸಾಯಬಾರದೆಂದೇ. ಸಾವಿಗಿಂತಲೂ ನೋವೇ? ಎಂದೇ, ಹಿಂಸೆಯ ಪರಾಕಾಷ್ಠೆಯೆಂದರೆ ಸಾವೇ; ಎಂದ ಮೇಲೆ, ಅಹಿಂಸೆಯ ಪರಾಕಾಷ್ಠೆಯೆಂದರೆ ಜೀವದಾನವೇ.

ಬರೀ ಬದುಕಿದ್ದರಷ್ಟಕ್ಕೇ ಸುಖವೇ? ಭೋಗದಿಂದಲ್ಲವೇ ಸುಖ? – ಎನಿಸದೇ? ತಿನ್ನುವುದು ಭೋಗ: "ಬದುಕಿರಲಿಕ್ಕಾಗಿ ತಿನ್ನು". ಅಷ್ಟೇ ಸಾಲದು; ಜೊತೆಗೆ, "ರುಚಿಗಾಗಿ ತಿನ್ನು". ಹೊಟ್ಟೆ-ಬಟ್ಟೆ-ವಾಸಗಳು ಭೋಗದ ಬಗೆಗಳು. ಮತ್ತಿತರ ಭೋಗಗಳೂ ಇವೆಯಷ್ಟೆ? ಭೋಗಗಳಿಗೆ ಕೊನೆಯುಂಟೇ?

ವಿಚಿತ್ರಸತ್ಯವೆಂದರೆ, "ಎಲ್ಲ ಭೋಗಗಳ ಹಿಂದೆಯೂ ಹಿಂಸೆಯೆಂಬುದಿದ್ದೇ ಇದೆ!"ಎಂಬುದು.  ಯೋಗವಿದ್ಯೆಯು ಕಂಡುಕೊಂಡಿರುವ ಪ್ರಥಮಸತ್ಯವಿದು! ಒಂದರ್ಥದಲ್ಲಿ ನಮ್ಮ ಸಾಮಾನ್ಯಜ್ಞಾನದಿಂದಲೂ ಅರಿಯಬಹುದಾದದ್ದೇ: ಭೋಗವೆಂದೊಡನೆಯೇ, ಅದಕ್ಕೆ ಅಂಟಿಕೊಂಡೇ ಹಿಂಸೆಯೂ ಸೇರಿರುತ್ತದೆ.

ಹೇಗೆ? ನಾವು ಬದುಕಿರಲು ಆಹಾರವು ಬೇಕಷ್ಟೆ? ಮಾಂಸಾಹಾರವಾದರೆ ಪ್ರಾಣಿಗಳನ್ನು ಕೊಲ್ಲಬೇಕಾಗುವುದು; ಅದಂತೂ ಹಿಂಸೆಯೇ. ಸಸ್ಯಾಹಾರವೆಂದಾಗಲೂ ಅಷ್ಟೆ: ಗಿಡಗಳಿಗೇನು ಹಿಂಸೆಯಾಗದೇ? ನೋವಿನ ಅರಿವಿಗಾಗಿಯೇ ಇರತಕ್ಕ ವೇದನಾಗ್ರಾಹಿಗಳು (ರಿಸೆಪ್ಟರ್ಸ್) ಸಸ್ಯಗಳಲ್ಲಿ ಉಂಟೇ ಇಲ್ಲವೇ? - ಎಂಬ ವಿಷಯದ ಬಗ್ಗೆ ವಿಜ್ಞಾನಿಗಳಲ್ಲಿ ಅಭಿಪ್ರಾಯಭೇದವಿರಬಹುದು; ಅದರೆ ಅವಕ್ಕೆ ಸುಖದುಃಖಗಳು ಉಂಟೇ ಉಂಟೆಂಬುದನ್ನು ನಮ್ಮ ಪ್ರಾಚೀನಗ್ರಂಥಗಳು ಸಾರಿವೆ. ಚೇಷ್ಟೆಗಾಗಿ ತೃಣಚ್ಛೇದನವನ್ನು (ಹುಲ್ಲನ್ನು ಕೀಳುವುದು, ಕತ್ತರಿಸುವುದು) ಸಹ ಮಾಡಬಾರದೆಂಬುದಾಗಿ ಹಿರಿಯರು ಹೇಳುವರಲ್ಲವೇ?

ನಮ್ಮನ್ನು ಕಚ್ಚುತ್ತಿರುವ ಸೊಳ್ಳೆಯನ್ನು ಸಾಯಿಸಿದರೆ ಪ್ರಾಣಿಹಿಂಸೆಯಾಗುವುದಲ್ಲವೇ? - ಎಂಬುದಾಗಿ ಪ್ರಶ್ನೆಯನ್ನು ಕೇಳಿದವರೊಬ್ಬರಿಗೆ, "ಸರಿಯಪ್ಪಾ, ಪ್ರಾಣಿಗೆ ಹಿಂಸೆಯಾಗುವುದನ್ನು ತಪ್ಪಿಸಿದರೆ, ಪ್ರಾಣಿಗೇ ಹಿಂಸೆಯಾಗುವುದಿಲ್ಲವೇ?" ಎಂಬುದಾಗಿ ತಮ್ಮ ಶರೀರವನ್ನೇ ತೋರಿಸಿಕೊಂಡು ಶ್ರೀರಂಗಮಹಾಗುರುಗಳು ಕೇಳಿದ್ದರು! ಅಲ್ಲಿಗೆ, ಹೀಗೂ ಹಿಂಸೆಯೇ, ಹಾಗೂ ಹಿಂಸೆಯೇ!: ಪ್ರಾಣಿಹಿಂಸೆಯು ಎಂದಾದರೂ ತಪ್ಪೀತೇ?

ರೋಗಗಳು ಬಂದಾಗ ತುಂಬ ಹಿಂಸೆಯನ್ನನುಭವಿಸುತ್ತೇವೆ. 'ಹೊಟ್ಟೆಯಲ್ಲಿ ಹುಳುವಿದೆ' ಎಂದು ವೈದ್ಯರು ಹೇಳಿದರೆ, "ಕೊನೆಗೆ ಬದುಕಬೇಕಾದ್ದು ಅವುಗಳೋ ನಾವೋ" - ಎಂಬ ಪ್ರಶ್ನೆ ಬರದಿರುವುದೇ? ಹಾವು ಕಚ್ಚಿದ ಬೆರಳನ್ನು ಕೊಚ್ಚಿಹಾಕಬೇಕಾದದ್ದೂ ಅನಿವಾರ್ಯವಾದೀತು! ನಮ್ಮ ದೇಹವೆಂತೋ ನಮ್ಮ ದೇಶವೂ ಅಂತೆಯೇ. ಜನಕ್ಕಾಹಾರಕ್ಕಾಗುವ ಸಸ್ಯರಾಶಿಗೆ ಕೀಟಸ್ತೋಮದ ಬಾಧೆ ಬಂದಲ್ಲಿ, ಕೀಟನಾಶಕವನ್ನು ಬಳಸುವುದನ್ನೂ ಬೇಡವೆನ್ನೋಣವೇ? ದೇಶವನ್ನು ದುಷ್ಟದಸ್ಯುಗಳು (ದಾರಿಗಳ್ಳರು, ದ್ರೋಹಿಗಳು) ದೋಚುತ್ತಿದ್ದರೆ, "ಅಯ್ಯೋ, ಅವರಿಗೆ ಹಿಂಸೆ ಮಾಡುವುದೇ? ಪ್ರಾಣಿಹಿಂಸೆಯು ದೋಷವಲ್ಲವೇ?" - ಎಂದು ರಾಜನು ಮರುಗಬೇಕೇ, ಕೊರಗಬೇಕೇ? ಬದಲಾಗಿ, ಬಡಿಯದೆ ಬಿಡಬೇ(ಕೇ)ಕೆ?

ದೇಹವು ರುಗ್ಣವಾದಾಗ ಆಯುಧಪ್ರಯೋಗಮಾಡಿಯಾದರೂ ರೋಗಿಯನ್ನು ರೋಗಮುಕ್ತನನ್ನಾಗಿಸಿ ಹೇಗೆ ವೈದ್ಯನು ಕಾಪಾಡುವನೋ, ಹಾಗೆಯೇ ರಾಜನೂ ರಾಜ್ಯವನ್ನು ರಕ್ಷಿಸಬೇಕಾದುದಿದೆ. "ಧರ್ಮಕಂಟಕರಾದ ರಾಕ್ಷಸರನ್ನು ರಾಮನು ಕೊಂದಿದ್ದೇ ಅಹಿಂಸೆ!" - ಎಂಬ ಶ್ರೀರಂಗಮಹಾಗುರುಗಳ ಮಾರ್ಮಿಕವಚನವು ನಮ್ಮ ಲೋಚನವನ್ನು ತೆರೆಸುವಂತಹುದೇ ಸರಿ!

ಸೂಚನೆ: 18/09/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.