ಡಾ. ಎನ್. ಎಸ್. ಸುರೇಶ್
ಪೀಠಿಕೆ -
ಭಾರತವು ಅನೇಕಪರ್ವಗಳ ನಾಡು. ಸನಾತನಾರ್ಯಭಾರತೀಯಮಹರ್ಷಿಗಳು ಪ್ರಕೃತಿಯಲ್ಲಿ ಸಹಜವಾಗಿ ಸಂಭವಿಸಬಹುದಾದ ಅನೇಕ ವಿಶೇಷ ಕಾಲಘಟ್ಟಗಳನ್ನೂ ಅವುಗಳು ಮಾನವನ ಶರೀರದಲ್ಲಿನ ದೇವತಾಕೇಂದ್ರಗಳಲ್ಲಿ ಮಾಡುವ ಜಾಗೃತಿಯನ್ನೂ, ಉದ್ಬೋಧನೆಯನ್ನೂ ತಮ್ಮ ತಪಸ್ಯೆಯಿಂದ ತಿಳಿದುಕೊಂಡವರಾಗಿ, ಅತ್ಯಂತ ಕರುಣೆಯಿಂದ ಜನರ ಉದ್ಧಾರಕ್ಕಾಗಿ, ಅವರವರ ಪ್ರಕೃತಿಗನುಗುಣವಾಗಿ ಭಗವದಾರಾಧನೆಯ ಪದ್ಧತಿಯನ್ನು ಅನೇಕ ಹಬ್ಬಗಳ ಹೆಸರಿನಲ್ಲಿ ತಂದಿರುತ್ತಾರೆ. 'ಗಾಳಿಬಂದಾಗ ತೂರಿಕೋ' ಎಂಬ ಜ್ಞಾನಿಗಳ ಹಿತನುಡಿಯಂತೆ ಮಾನವರು ಇದನ್ನು ಯಥಾಶಕ್ತಿ ಪಾಲಿಸಿ ಆತ್ಮೋದ್ಧಾರವನ್ನು ಮಾಡಿಕೊಳ್ಳಬೇಕು.
ಹಾಗೆ ತಂದಿರುವ ಅನೇಕ ಪರ್ವಗಳಲ್ಲಿ 'ನವರಾತ್ರಮಹೋತ್ಸವ'ವು ಅತ್ಯಂತ ಮುಖ್ಯವಾದ ಪರ್ವ. ಹೆಸರೇ ತಿಳಿಸುವಂತೆ ಒಂಬತ್ತು ಅಹೋರಾತ್ರಿಗಳಲ್ಲಿ, ಆಬಾಲವೃದ್ದರೂ, ಎಲ್ಲಾ ಧರ್ಮದವರೂ, ಎಲ್ಲಾ ವರ್ಣದವರೂ, ಎಲ್ಲಾ ಆಶ್ರಮದವರೂ, ಅವರವರ ಪದ್ಧತಿಯಂತೆ ಆಚರಿಸಬೇಕಾದ ಈ ಪರ್ವವು 'ನವರಾತ್ರ' ಅಥವಾ 'ದುರ್ಗೋತ್ಸವ'ವೆಂಬ ಎರಡು ಹೆಸರುಗಳಿಂದ ಪ್ರಸಿದ್ಧವಾಗಿದೆ. 'ವಿಜಯದಶಮೀ' ಎಂದೇ ಪ್ರಖ್ಯಾತವಾದ ಈ ಪರ್ವದ ಮುಂದಿನ ದಿನವನ್ನೂ ಸೇರಿಸಿಕೊಂಡಲ್ಲಿ ಇದನ್ನು 'ದಶಾಹ' ಅಥವಾ 'ದಸರಾ' ಅಥವಾ (ಐದು ಮಹಾಪಾತಕಗಳನ್ನೂ ಮತ್ತು ಐದು ಉಪಪಾತಕಗಳನ್ನೂ ದೂರಮಾಡುವುದರಿಂದ) 'ದಶಹರ' ಎಂದು ಈ ಪರ್ವವನ್ನು ಕರೆಯುವ ರೂಢಿಯಿದೆ. ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪತ್ತಿನಿಂದ ಒಂಬತ್ತು ದಿನಗಳು ಆಚರಿಸಲ್ಪಡುವ ಈ ಪರ್ವವನ್ನು 'ವಸಂತ ನವರಾತ್ರ'ವೆಂಬ ಹೆಸರಿನಿಂದಲೂ, ಶರದೃತುವಿನ ಶುಕ್ಲಪಕ್ಷದ ಪ್ರಥಮೆಯಿಂದ ನವಮಿ ಪರ್ಯಂತ ಆಚರಿಸಲ್ಪಡುವ ಈ ಪರ್ವವನ್ನು 'ಶರನ್ನವರಾತ್ರ'ವೆಂದೂ ಕರೆಯುತ್ತಾರೆ. ದುರ್ಗಾದೇವಿಯನ್ನು ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾದುರ್ಗಾ ಮುಂತಾದ ನಾನಾರೂಪಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಪರ್ವವಾದ್ದರಿಂದ 'ಮಹೋತ್ಸವ'ವೆಂಬ ಹೆಸರು ಅನ್ವರ್ಥವಾಗಿದೆ.
ನವರಾತ್ರಪರ್ವದ ಉದ್ದೇಶ –
ಅಧರ್ಮಾಚರಣೆಯಿಂದ ನಮಗೆ ಬಂದೊದಗಿರುವ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ತಾಪತ್ರಯಗಳನ್ನು 'ದುರ್ಗಾಂ ದುರ್ಗತಿನಾಶಿನೀಮ್' ಎಂಬಂತೆ ಜಗನ್ಮಾತೆಯಾದ ಮಹಾದುರ್ಗಿಯ ಆರಾಧನೆಯಿಂದ ನಿವಾರಿಸಿಕೊಂಡು ಅಧರ್ಮವನ್ನು ಮೆಟ್ಟಿ ಧರ್ಮಮಯವಾದ ಅಂತಃಪ್ರಪಂಚದ, ಒಳಸುಖದ ಬಾಳಾಟವನ್ನು ಪ್ರಾರಂಭಿಸುವುದೇ ಈ ಪರ್ವದ ಉದ್ದೇಶ. ಚಾತುರ್ಮಾಸ್ಯ ವ್ರತಾಚರಣೆಯ ದೀಕ್ಷೆಯನ್ನು ಆಚರಿಸುತ್ತಾ ಒಳಮುಖರಾಗಿ ಮೌನವಾಗಿದ್ದು ಅಂತಸ್ಸುಖವನ್ನು ಅನುಭವಿಸಿಕೊಂಡಿದ್ದಂಥ ಯೋಗಿಗಳು, ಸನ್ಯಾಸಿಗಳು ಮೌನವನ್ನು ಮುರಿದು ಈಗ ಹೊರಮುಖರಾಗಿ ತಾವು ಅನುಭವಿಸಿದ ಅಂತಸ್ಸುಖವನ್ನು, ಆ ಒಳ ಬೆಳಕಿನ ಆನಂದವನ್ನು ತಮ್ಮ ಧರ್ಮೋಪದೇಶದ ಮೂಲಕ ಶ್ರೀಸಾಮಾನ್ಯರನ್ನು ಅನುಗ್ರಹಿಸುವುದಕ್ಕಾಗಿ, ಜಗನ್ಮಾತೆಯ ಶಕ್ತಿದೇವತೆಯ ಆರಾಧನೆಯನ್ನು ಮಾಡುವ ಪರ್ವವಿದು. ದಿಗ್ವಿಜಯಕ್ಕಾಗಿ ವಿಜಯದಶಮಿಯಂದು ಹೊರಡುವ ಕ್ಷತ್ರಿಯರು ತತ್ಪೂರ್ವಭಾವಿಯಾಗಿ ಭಗವತಿಯರಾದ ತ್ರಿಮೂರ್ತಿರಾಣಿಯರನ್ನು ಬಲ-ವಿದ್ಯೆ-ಸಂಪತ್ತುಗಳಿಗೋಸ್ಕರ ಆರಾಧಿಸುವ ಪರ್ವವಿದು.
ಪ್ರಕೃತಿಯ ಆನುಕೂಲ್ಯ
ಶರತ್ಕಾಲದ ನವರಾತ್ರದ ಸಮಯವು ದೇವತಾಪೂಜೆಗೆ ಅತ್ಯಂತ ಪ್ರಶಸ್ತವಾಗಿದೆ. 'ತ್ರಿಲೋಕ್ಯವಿಮಲಂ ವ್ಯೋಮ ಗತವಿದ್ಯುತ್ಬಲಾಹಕಮ್' ಎಂಬಂತೆ ಹಿಂದಿನ ವರ್ಷರ್ತುವಿನಲ್ಲಿ ಕಾರ್ಮೋಡಗಳಿಂದ ಆವೃತವಾಗಿದ್ದ ಆಕಾಶವು ಈಗ ಸ್ವಚ್ಛಾಚ್ಛವಾಗಿದ್ದೂ, ಮಳೆಯ ನೀರಿನಿಂದಾಗಿ ಬಗ್ಗಡವಾಗಿದ್ದ ನದಿಗಳು ಈಗ ತಿಳಿಯಾಗಿ ಸ್ಫಟಿಕದಂತಿರುವ ತೀರ್ಥದಿಂದಲೂ ಕೂಡಿದ್ದು, ಅರಳಿದ ಕಮಲಗಳಿಂದಲೂ ಹಂಸಪಕ್ಷಿಗಳಿಂದಲೂ ಶೋಭಿತವಾದ ಸರೋವರಗಳೂ ಮತ್ತು ರಾತ್ರಿಯ ವೇಳೆಯಲ್ಲಿ ಮನಸ್ಸಿಗೆ ತಂಪನ್ನು ಕೊಡುವ ಪ್ರಕಾಶಮಾನನಾದ ಚಂದ್ರನ ಚಂದ್ರಿಕೆಯೂ ಸ್ವಾಭಾವಿಕವಾಗಿಯೇ ನಮ್ಮಲ್ಲಿ ನವಚೈತನ್ಯವನ್ನೂ, ನವೋಲ್ಲಾಸವನ್ನೂ, ಉತ್ಸಾಹವನ್ನೂ ಉಂಟುಮಾಡುತ್ತಾ ಯೋಗಸಾಧನೆಗೆ ಬೇಕಾದ ಪರಿಸರವನ್ನು ತಂದುಕೊಟ್ಟಿರುತ್ತದೆ. ಒಳಜೀವನಕ್ಕೆ ವಿರುದ್ದವಲ್ಲದ ಇಂದ್ರಿಯಸುಖವನ್ನು ಉಂಟುಮಾಡಿ, ಅಧಿಕಪ್ರಯಾಸವಿಲ್ಲದೆ ಧಾತುಪ್ರಸನ್ನತೆಯನ್ನುಂಟುಮಾಡಿ, ಸತ್ತ್ವ-ರಜಸ್-ತಮೋರೂಪಿಗಳಾದ ಜಗನ್ಮಾತೆಯರಾದ ಶ್ರೀಮಹಾಲಕ್ಷ್ಮೀ-ಶ್ರೀಮಹಾಸರಸ್ವತೀ-ಶ್ರೀಮಹಾದುರ್ಗಿಯರನ್ನು ಅಂತಃಪ್ರಪಂಚದಲ್ಲಿ ಹೇಗೋ ಹಾಗೇ ಬಹಿರ್ಮುಖವಾಗಿ ಆರಾಧಿಸುವ ಆನುಕೂಲ್ಯವನ್ನು ಪ್ರಕೃತಿಯು ಒದಗಿಸಿರುತ್ತದೆ.
ನವರಾತ್ರಪರ್ವದ ಐತಿಹ್ಯ
ಈ ಪರ್ವವನ್ನು ಹಿಂದೆ ಯಾರು ಆಚರಿಸಿದರೆಂಬುದಕ್ಕೆ ಪುರಾಣಗಳಲ್ಲಿ ಅನೇಕ ಉಲ್ಲೇಖಗಳಿವೆ. ಕುತಂತ್ರಿಯೂ, ಅಧರ್ಮಿಯೂ ಆದ ದುರ್ಯೋಧನನಿಂದ ಹೆದರಿದ ವನವಾಸಿಗಳಾದ ಪಾಂಡವರು ಧೌಮ್ಯಮಹರ್ಷಿಗಳ ಉಪದೇಶದಂತೆ ಒಂಬತ್ತು ದಿನಗಳು ಶಕ್ತಿರೂಪಿಣಿಯಾದ, ದುರ್ಗತಿಯನ್ನು ನಾಶಮಾಡುವ, ಕಷ್ಟಗಳನ್ನು ನೀಗಿಸಬಲ್ಲ ದುರ್ಗಿಯನ್ನು ಆರಾಧಿಸಿ ಹತ್ತನೆಯ ದಿನ ಅಂದರೆ ವಿಜಯದಶಮಿಯ ದಿನದಂದು ವಿರಾಟನಗರವನ್ನು ಅಜ್ಞಾತವಾಸಕ್ಕಾಗಿ ಪ್ರವೇಶಿಸಿ, ದುರ್ಯೋಧನನಿಗೆ ತಿಳಿಯದಂತೆ ತಮ್ಮ ಅಜ್ಞಾತವಾಸವನ್ನು ಮುಗಿಸಿದರೆಂದು ತಿಳಿದುಬರುತ್ತದೆ.
ಅಂತೆಯೇ, ಶ್ರೀರಾಮನೂ ಕೂಡ ಲೋಕಕಂಟಕನಾದ ರಾವಣನನ್ನು ಸಂಹರಿಸಲು ಶಮೀವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ವಿಜಯದಶಮೀ ದಿವಸ ವಿಜಯಯಾತ್ರೆಯನ್ನು ಪ್ರಾರಂಭಿಸಿದ ಎಂದು ಹೇಳುತ್ತಾರೆ.
ನವರಾತ್ರಪರ್ವದ ಆಚರಣೆಯ ವಿಧಾನ
ನವರಾತ್ರದ ಒಂಬತ್ತೂ ದಿನಗಳಲ್ಲಿ ಜಗನ್ಮಾತೆಯರಾದ ಪ್ರಕೃತಿಸ್ವರೂಪಿಣಿಯರಾದ ಮಹಾಲಕ್ಷ್ಮೀ, ಮಹಾಸರಸ್ವತೀ ಮತ್ತು ಮಹಾದುರ್ಗಿಯರ ಆರಾಧನೆಯೇ ವಿಶೇಷ. ಅವುಗಳಲ್ಲಿ ಮೊದಲ ಮೂರು ದಿನಗಳಲ್ಲಿ ಸತ್ತ್ವಪ್ರಧಾನಳಾದ ಮಹಾವಿಷ್ಣುವಿನ ಮನದನ್ನೆಯಾದ ಮಹಾಲಕ್ಷ್ಮಿಯನ್ನು ಆರಾಧಿಸುತ್ತಾರೆ. ಎರಡನೆಯ ಮೂರು ದಿನಗಳಲ್ಲಿ ರಜಃಪ್ರಧಾನಳಾದ ಬ್ರಹ್ಮನ ಪತ್ನಿಯಾದ ವಿದ್ಯಾಧಿದೇವತೆಯಾದ ಮಹಾಸರಸ್ವತಿಯನ್ನು ಪೂಜಿಸುತ್ತಾರೆ. ಕಡೆಯ ಮೂರು ದಿನಗಳು ಶಕ್ತಿದೇವತೆಯಾದ ತಮಃಪ್ರಧಾನಳಾದ ಪರಮೇಶ್ವರನ ಪತ್ನಿಯಾದ ಮಹಾದುರ್ಗಿಯ ಆರಾಧನೆಯನ್ನು ಮಾಡುತ್ತಾರೆ. 'ಅಂತರ್ಮುಖಸಮಾರಾಧ್ಯಾ' ಎಂಬಂತೆ ಮೊದಲು ಭಗವತಿಯನ್ನು ಹೃದಯದಲ್ಲಿ ಚೆನ್ನಾಗಿ ಉಪಾಸಿಸಿ ನಂತರ ಬಹಿರ್ಮುಖವಾಗಿ ಧ್ಯಾನಾವಾಹನಾದಿ ಷೋಡಶೋಪಚಾರದಿಂದಲೂ, ನೃತ್ಯ, ಗೀತಾದಿ ಸೇವೆಗಳಿಂದಲೂ ಚೆನ್ನಾಗಿ ಅರ್ಚಿಸುತ್ತಾರೆ. ಪ್ರತಿನಿತ್ಯವೂ ದುರ್ಗಾಸಪ್ತಶತೀಪಾರಾಯಣ, ದೇವೀಭಾಗವತಪುರಾಣಪಾರಾಯಣ, ಸೌಂದರ್ಯಲಹರೀಪಠನವೇ ಮುಂತಾದ ದೇವೀಸಂಬಂಧ ಸಾ ಹಿತ್ಯಾನುಸಂಧಾನ, ಹೋಮಹವನಾದಿಗಳನ್ನೂ ಮಾಡುವ ಪದ್ಧತಿಯಿದೆ. ಮೂಲಾನಕ್ಷತ್ರದಲ್ಲಿ ಮಹಾಸರಸ್ವತಿಯನ್ನು ಧ್ಯಾನಿಸಿ, ಆವಾಹನೆಯನ್ನು ಮಾಡಿ, ಪೂರ್ವಾಷಾಢಾ ನಕ್ಷತ್ರದಲ್ಲಿ ಪೂಜಿಸಿ, ಉತ್ತರಾಷಾಢಾ ನಕ್ಷತ್ರದಲ್ಲಿ ಬಲಿದಾನವನ್ನು ಮಾಡಿ, ಶ್ರವಣನಕ್ಷತ್ರದಲ್ಲಿ ವಿಸರ್ಜನೆಮಾಡುವ ರೂಢಿಯಿದೆ.
ದುರ್ಗಾಷ್ಟಮೀ – ಎಲ್ಲಾ ದುರ್ಗಗಳನ್ನೂ (ಸಂಕಷ್ಟಗಳನ್ನೂ) ದಾಟಿಸುವುದರಿಂದಲೇ ದುರ್ಗಾ ಎಂಬ ಅನ್ವರ್ಥನಾಮಳಾದ ದುರ್ಗೆಯ ಪೂಜೆಯು ಅಷ್ಟಮಿಯ ದಿನ ವಿಹಿತವಾಗಿದೆ. ಅಂದು ಮಹಾದುರ್ಗಿಗೆ ಷೋಡಶೋಪಚಾರಪೂಜಾ, ದುರ್ಗಾಸಪ್ತಶತಿಯ ಪಾರಾಯಣ ಮತ್ತು ಹೋಮಾದಿಗಳನ್ನು ಮಾಡುವುದಲ್ಲದೇ ಕುಮಾರಿಯರನ್ನು ಮತ್ತು ಸುಮಂಗಲಿಯರನ್ನು ಪೂಜಿಸಿ ವಸ್ತ್ರ,ಬಾಗಿನಗಳನ್ನು ಕೊಡುವ ಪದ್ಧತಿಯಿದೆ.
ಮಹಾನವಮೀ – ಈ ದಿನವೂ ಕೂಡ ದುರ್ಗಾಷ್ಟಮಿಯಂತೆ ಭಗವತಿಯನ್ನು ಪೂಜಿಸುತ್ತಾರೆ. ಅಲ್ಲದೆ ಇಂದು ವಿದ್ಯಾಧಿದೇವತೆಯಾದ ಶ್ರೀಹಯಗ್ರೀವದೇವನು ಲೋಕಕಲ್ಯಾಣಕ್ಕಾಗಿ ಇಳಿದು ಬರುವ ದಿನ. ಇಂದು ಹಯಗ್ರೀವದೇವರ ಮತ್ತು ಸರಸ್ವತೀದೇವಿಯ ಪೂಜೆ, ಸಂಗೀತೋಪಕರಣಗಳಾದ ವೀಣೆ, ಮೃದಂಗಾದಿಗಳ ಪೂಜೆ, ಆಯುಧಗಳ, ಗಜಾಶ್ವಗಳ ಪೂಜೆಗಳೂ ಸಂಪನ್ನವಾಗುತ್ತವೆ.
ವಿಜಯದಶಮೀ – ಈ ದಿನ ಹಿಂದಿನಂತೆ ಪೂಜಾದಿಗಳನ್ನು ನೆರವೇರಿಸಿ, ಭಗವತಿಯ ಆಶೀರ್ವಾದವನ್ನು ಪಡೆದು ವಿದ್ಯಾರ್ಥಿಗಳು ವಿದ್ಯಾರಂಭವನ್ನು ಪ್ರಾರಂಭಿಸುತ್ತಾರೆ. ಕ್ಷತ್ರಿಯರು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ, ವಿಜಯಯಾತ್ರೆಗೆ ಹೊರಡುತ್ತಾರೆ. ಆತ್ಮಯಾತ್ರೆಯನ್ನೇ ವ್ರತವಾಗುಳ್ಳ ಯತಿಗಳು ಇಂದು ಧರ್ಮಪ್ರಚಾರಕ್ಕಾಗಿ ಸೀಮೋಲ್ಲಂಘನವನ್ನು ಮಾಡುತ್ತಾರೆ.
ನವಾಗ್ರಯಣಸ್ಥಾಲೀಪಾಕ – ಈ ಸಮಯದಲ್ಲಿ ಹೊಸದಾಗಿ ಧಾನ್ಯಗಳು ಬಂದಿರುತ್ತವೆಯಾಗಿ ಗೃಹಸ್ಥರು ನವಾಗ್ರಯಣಸ್ಥಾಲೀಪಾಕವನ್ನು ಮಾಡಿ ದೇವತೆಗಳಿಗೆ ಅಗ್ನಿಯಲ್ಲಿ ಅರ್ಪಿಸಿ, ಅತಿಥಿಗಳಿಗೂ ಸಮಾರಾಧನೆಯನ್ನು ಈ ಪರ್ವದಲ್ಲಿ ಆಚರಿಸುತ್ತಾರೆಂಬುದು ವಿಶೇಷ.
ಶಮೀವೃಕ್ಷದ ಪೂಜಾಮಹತ್ತ್ವ - ಹೆಸರೇ ಸೂಚಿಸುವಂತೆ ಶಮಪ್ರಧಾನವಾದ ವೃಕ್ಷ 'ಶಮೀ'. ಶಮ ಎಂದರೆ ಇಂದ್ರಿಯಾದಿಗಳ ನಿಗ್ರಹ. ಅದನ್ನುಳ್ಳದ್ದು ಶಮೀ. ವಿಜಯಯಾತ್ರೆಗೆ ತೊಡಗಿರುವ ಕ್ಷತ್ರಿಯನಿಗೂ, ಆತ್ಮಯಾತ್ರೆಗೆ ತೊಡಗಿರುವ ಯತಿಗೂ ಮತ್ತು ವಿದ್ಯಾಭ್ಯಾಸಕ್ಕೆ ತೊಡಗಿರುವ ವಿದ್ಯಾರ್ಥಿಗೂ ಇಂದ್ರಿಯ ಮತ್ತು ಮನಸ್ಸುಗಳ ನಿಗ್ರಹವು ಮುಖ್ಯ ಸಾಧನವಷ್ಟೆ. ಅದಕ್ಕಾಗಿಯೇ ಶಮೀವೃಕ್ಷಕ್ಕೆ ಪೂಜೆ. ಈ ವೃಕ್ಷಕ್ಕೆ 'ಬನ್ನೀ' ಎಂಬ ಹೆಸರುಂಟು. ಸಂಸ್ಕೃತಭಾಷೆಯ 'ವಹ್ನಿ' (ಬೆಂಕಿ)ಯೆಂಬುದೇ ಕನ್ನಡದಲ್ಲಿ 'ಬನ್ನಿ' ಎಂದಾಗಿದೆ. 'ಶಮೀ ಶಮಯತೇ ಪಾಪಂ' ಎಂಬಂತೆ ಶಮೀವೃಕ್ಷವು ಪಾಪವನ್ನು ನಾಶಮಾಡುವುದು. ಅದಕ್ಕಾಗಿಯೇ ಇದಕ್ಕೆ ಪೂಜೆ. 'ಅಮಂಗಳವನ್ನು ನಿವಾರಿಸುವ, ಪಾಪನಿವಾರಕಳಾದ, ದುಃಖಗಳನ್ನು ನಾಶಮಾಡುವ ಶುಭಪ್ರದಳಾದ ನಿನಗೆ ಶರಣು. ಯಾವ ದಿಗ್ವಿಜಯಯಾತ್ರೆಯನ್ನು /ಆತ್ಮಯಾತ್ರೆಯನ್ನು /ವಿದ್ಯಾಭ್ಯಾಸವನ್ನು ಮಾಡುವುದಕ್ಕೆ ಮುಂದಾಗಿರುವೆನೋ ಅದರಲ್ಲಿ ವಿಘ್ನಬರದಂತೆ ನನ್ನನ್ನು ಸಲಹು' ಎಂದೇ ಶಮೀವೃಕ್ಷಕ್ಕೆ ಪೂಜೆ ಮತ್ತು ಪ್ರಾರ್ಥನೆ.
ಈ ಪರ್ವದಲ್ಲಿ ಗೊಂಬೆಯ ವಿಶೇಷತೆ – ಈ ಪರ್ವದಲ್ಲಿ ಮನೆಮನೆಗಳಲ್ಲೂ ಬೊಂಬೆಗಳನ್ನು (ಪಟ್ಟದ ಬೊಂಬೆ, ರಾಜ-ರಾಣಿ, ಮಂತ್ರಿ-ಪುರೋಹಿತ, ಅಶ್ವ-ಗಜ-ಪಶು-ಸೇನಾ-ರಥಾದಿಗಳು, ಅಡಿಗೆಮನೆ ಸಾಮಾನುಗಳು ಇತ್ಯಾದಿ) ಕೂರಿಸಿ, ಪೂಜಿಸುವ ಪದ್ಧತಿ ಇದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಒಂದು ರಾಷ್ಟ್ರದ ಚಿತ್ರಣವೇ ಆಗಿರುತ್ತಾ, ರಾಷ್ಟ್ರದ ಬಗ್ಗೆ, ಜೀವನದ ನಿರ್ವಹಣೆಯ ಬಗ್ಗೆ ಮಕ್ಕಳಿಗೆ ಶಿಕ್ಷಣಕ್ಕೆ ಒದಗಿಬರುವ ಸಾಮಗ್ರಿಯಾಗಿದೆ ಎಂಬುದೇ ಈ ಬೊಂಬೆಗಳ ತತ್ತ್ವ. ಹಾಗೆಯೇ ಬೊಂಬೆಬಾಗಿನವೂ ಕೂಡ ಮೊದಲು ಮಕ್ಕಳಿಗೆ ಇಂದ್ರಿಯತೃಪ್ತಿಯನ್ನು ಉಂಟುಮಾಡಿ, 'ಮೊದಲು ಪೇಠೋಭಾ ನಂತರ ವಿಠೋಭಾ' ಎಂಬಂತೆ ಮೊದಲು ಉದರಪೂಜೆಯನ್ನು ಮಾಡಿಸಿ, ನಂತರ ದಾಮೋದರನ ಪೂಜೆಯಲ್ಲಿ ಪರ್ಯವಸಾನವಾಗುತ್ತದೆ.
ಉಪಸಂಹಾರ -
"ಜೀವನದಲ್ಲಿ ನವತ್ವವನ್ನು ಉಂಟುಮಾಡುವ ನವರಾತ್ರ ಇದು. ಶುದ್ಧಪ್ರಕೃತಿಮಾತೆಯನ್ನು ಮೊದಲ ಮೂರುದಿನಗಳಲ್ಲಿ ಲಕ್ಷ್ಮೀಯೆಂದೂ, ಆನಂತರದ ಮೂರುದಿನಗಳಲ್ಲಿ ಸರಸ್ವತೀಯೆಂದೂ ಕೊನೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗೀಯೆಂದೂ ಆರಾಧಿಸಿ ನಿಮ್ಮ ಪ್ರಕೃತಿಯನ್ನು ಶುದ್ಧಮಾಡಿಕೊಳ್ಳಿ. ಹೊರಗಡೆ ಪ್ರಕೃತಿಯಲ್ಲಿ ಮೋಡಗಳಿಲ್ಲದ ಶುದ್ಧವಾದ ಆಕಾಶ, ಒಳಗೂ ಶುದ್ಧವಾದ ಜ್ಞಾನಾಕಾಶ. ಹೊರಗೆ ಸರೋವರದಲ್ಲಿ ಅರಳಿರುವ ಕಮಲಗಳು, ಒಳಗೆ ಮಾನಸಸರೋವರದಲ್ಲಿ ಅರಳಿರುವ ಹೃದಯಾದಿಕಮಲಗಳು. ಅಲ್ಲಿ ಪರಮಾತ್ಮನ ಪರಾಪ್ರಕೃತಿಯಾಗಿರುವ ದೇವಿಯನ್ನು ಆರಾಧಿಸಿ ಶುದ್ಧಸತ್ತ್ವರಾಗಿರಿ. ಹೊರಗಡೆ ಧನಧಾನ್ಯಸಮೃದ್ಧಿ, ಒಳಗೆ ಆತ್ಮಧನಸಮೃದ್ಧಿ, ಹೊರಗಡೆ ವೀರಕ್ಷತ್ರಿಯರಿಂದ ಧರ್ಮವಿಜಯಕ್ಕಾಗಿ ಯಾತ್ರೆ, ಒಳಗೆ ಆತ್ಮವಿಜಯಕ್ಕಾಗಿ ಯಾತ್ರೆ – ಎಲ್ಲವೂ ಕೂಡಿ ಬರುವ ಮಹಾಪರ್ವ ಇದು" ಎಂದು ಈ ಪರ್ವದ ವಿಶೇಷತೆಯನ್ನು ಸಾರಿಷ್ಠವಾದ ಸಂದೇಶದಲ್ಲಿ ಅಪ್ಪಣೆ ಕೊಡಿಸಿದ ಶ್ರೀರಂಗಮಹಾಗುರುವನ್ನು ಸ್ಮರಿಸುತ್ತಾ ಈ ಲೇಖನವನ್ನು ಸರ್ವಕರ್ಮಸಮಾರಾಧ್ಯನಾದ ಭಗವಂತನ ಪಾದಾರವಿಂದಗಳಿಗೆ ಅರ್ಪಿಸಿ ವಿರಮಿಸುತ್ತೇನೆ.
ಸೂಚನೆ : 26/09/2022 ರಂದು ಈ ಲೇಖನ ವಿಜಯ ವಾಣಿ ಸಕಾಲಿಕ ಅಂಕಣದಲ್ಲಿ ಪ್ರಕಟವಾಗಿದೆ.