Saturday, May 25, 2019

ಗುರುನಿಷ್ಠೆಯ ಪರಮ ಫಲ (Gurunshteya parama phala)

ಲೇಖಕರು: ತಾರೋಡಿ ಸುರೇಶ
ಶ್ರೀ ಶಂಕರಭಗವತ್ಪಾದರ ಜೀವನದ ಒಂದು ಸಂದರ್ಭ. ಶ್ರೀಶಂಕರರ , ಮಹಾ ಮೆಧಾವಿಗಳಾದ ಮೂವರು ಶಿಷ್ಯರು ಗುರುಗಳಿಂದ ಪಾಠದ ಅನುಗ್ರಹಕ್ಕಾಗಿ ಕಾಯುತ್ತಿದ್ದಾರೆ. ಗುರುಗಳೂ ಸಹ ಸಿದ್ಧರಾಗಿಯೇ ಕುಳಿತಿದ್ದಾರೆ. ಆದರೆ ಪಾಠವನ್ನು ಮಾತ್ರ ಆರಂಭಿಸುತ್ತಿಲ್ಲ. ಶಿಷ್ಯರಿಗೆ ಈ ನಡೆ ಅರ್ಥವಾಗಲಿಲ್ಲ, ಮೌನವನ್ನು ಮುರಿದು ಒಬ್ಬರು ಕೇಳಿದರು” ಗುರುಗಳೇ ಎಲ್ಲರೂ ಬಂದಾಗಿದೆ, ಪಾಠವನ್ನು ಪ್ರಾರಂಭಿಸಬಹುದಲ್ಲಾ” ಎಂದು. ಆಗ ಶಂಕರರು- ಗಿರಿ  ಎಲ್ಲಿ? ಅವನೂ ಬರಲಿ ಎಂದರು. ಆಗ ಆ ಶಿಷ್ಯರು-ವಸ್ತ್ರಗಳನ್ನು ಒಗೆಯಲು ಹೋಗಿರಬೇಕು, ಇನ್ನೂ ಬಹಳ ಹೊತ್ತಾಗಬಹುದು. ಅಲ್ಲದೇ, ಗುರುಗಳೇ, ಗಿರಿ ಎಂದೂ ಗಂಭೀರವಾಗಿ ಪಾಠ ಕೇಳಿ ಒಪ್ಪಿಸಿದವನಲ್ಲ. ಅವನ ಮೇಧಾ ಶಕ್ತಿಯೂ ಕಡಿಮೆ. ಪಾಠದ ಸಂದರ್ಭದಲ್ಲಿ ಅನ್ಯಮನಸ್ಕನಂತೆ ಗೋಡೆಗೆ ಒರಗಿ ಕುಳಿತಿರುತ್ತಾನೆ. ಅವನನ್ನು ಕಾಯುವುದರಲ್ಲಿ ಅರ್ಥವಿಲ್ಲ ಸಮಯ ವ್ಯರ್ಥ.  ಎಂದು ಗೋಡೆಯ ಕಡೆಗೆ ನೋಡಿದರು. ಅಂದರೆ ಅವನಿಗೆ ಪಾಠ ಮಾಡುವುದು ಗೋಡೆಗೆ ಹೇಳಿದಂತೆ ಎನ್ನುವ ಧೋರಣೆ ಅವರದು. ಈ ಮಾತು ಶಂಕರರಿಗೆ ಇಷ್ಟವಾಗಲಿಲ್ಲ. ನಿಮೀಲಿತ ನೇತ್ರರಾಗಿ ಕುಳಿತಲ್ಲಿಂದಲೇ ಗಿರಿಯನ್ನು ಅನುಗ್ರಹಿಸಿದರು.

ಏನಾಶ್ಚರ್ಯ! ಎಂದೂ ಚರ್ಚೆಯಲ್ಲಿ ಭಾಗವಹಿಸದ, ಸಂದೇಹವನ್ನೂ ಕೇಳದ ಗಿರಿಯು ತೋಟಕ ವೃತ್ತದಲ್ಲಿ ಗುರುಸ್ತುತಿಯನ್ನು ಹೇಳುತ್ತಾ ಬರುತ್ತಿದ್ದಾನೆ! ವಿದಿತಾಖಿಲ ಶಾಸ್ತ್ರ ಸುಧಾಜಲಧೇ ಮಹಿತೊಪನಿಷತ್ ಕಥಿತಾರ್ಥನಿಧೇ, ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರದೇಶಿಕ ಮೇ ಶರಣಂ” ಎಂದು ಆರಂಭಗೊಳ್ಳುವ ಅಷ್ಟಕ ಇಂದಿಗೂ ಬಹಳ ಪ್ರಸಿದ್ಧವಾಗಿದೆ. ಭಗವತ್ಪಾದರು ಗಿರಿಯನ್ನು ಹರಸಿ – ಈ ಸ್ತೋತ್ರವು ತೋಟಕಾಷ್ಟಕವೆಂದೇ ಪ್ರಸಿದ್ಧವಾಗಲಿ, ಇಂದಿನಿಂದ ನೀನು ತೋಟಕಾಚಾರ್ಯನೆಂಬ ಹೆಸರಿನಿಂದ ಪ್ರಸಿದ್ಧನಾಗು ಎಂದು ಆಶೀರ್ವದಿಸಿದರು.

ವಾಸ್ತವವಾಗಿ ಗಿರಿ ದಡ್ದನಾಗಿರಲಿಲ್ಲ. ನಾವು ಹೊರ ಪ್ರವೃತ್ತಿಯಿಂದ ವ್ಯಕ್ತಿಗಳನ್ನು ಅಳೆಯುವ ತಪ್ಪುಮಾಡುತ್ತೇವೆ. ಗಿರಿಯ ಗುರುನಿಷ್ಠೆ ಪ್ರಶ್ನಾತೀತವಾದದ್ದು. ಶಂಕರಭಗವತ್ಪಾದರಂತಹ ಜ್ಞಾನೀ ಗುರುವಿನ ಸೇವೆ ಶುಶ್ರುಷೆಗಳೇ ಅವನ ಅಂತರ್ಬಾಹ್ಯ ಪ್ರಕೃತಿಯನ್ನು ಪವಿತ್ರಗೊಳಿಸಿತ್ತು. ಮನೋಬುದ್ಧಿಗಳು ಗುರುವಿನ ಅನುಗ್ರಹವನ್ನು ಗ್ರಹಿಸಲು ಸಿದ್ಧವಾಗಿದ್ದವು. ಈ ವಿಷಯವನ್ನು ಉಳಿದ ಶಿಷ್ಯರು ಗಮನಿಸಿರಲಿಲ್ಲ. ಅನುಗ್ರಹವಾದೊಡನೆಯೇ ಅವನ ಒಳಗಿನ ಸಿದ್ಧತೆಗೆ ಶಕ್ತಿಸಂಚಾರವಾಯಿತು. ಗಿರಿ ತೋಟಕಾಚಾರ್ಯನಾದ.

ನಮ್ಮ ಬದುಕು ಇಂದ್ರಿಯ ಪ್ರಪಂಚದಲ್ಲಿಯೇ ಸಾಗುತ್ತಾ ಮಲಿನವಾಗಿರುತ್ತದೆ. ಸತ್ಪುರುಷನಾದ ಗುರುವಿನ ಸೇವೆ, ಅವನ ಚರಣಕಮಲಗಳ ಪೂಜೆ, ಅವನಲ್ಲಿ ವಿಭಕ್ತವಾಗದ ಅನನ್ಯ ಭಕ್ತಿ ಇವೆಲ್ಲವೂ ನಮ್ಮ ಪ್ರಕೃತಿಯನ್ನು ನಿರ್ಮಲವಾಗಿಸುತ್ತವೆ. ಈ ಕಥೆಯಲ್ಲಿ ಗುರುಭಕ್ತಿಯ ಪಾಠವಿದೆ. ನಾನು ತಿಳಿದವನು, ಅವನಿಗೆ ಬುದ್ಧಿ ಕಡಿಮೆ ಎಂಬ ಅಹಂಕಾರವನ್ನು ತೊರೆಯಬೇಕೆಂಬ ಪಾಠವಿದೆ. ಮೇಲು ಮೇಲಿನ ತಿಳುವಳಿಕೆಯಿಂದ ಒಬ್ಬರನ್ನು ಅಳೆಯಬಾರದು ಎಂಬ ಪಾಠವಿದೆ.

ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ನಮಗೆಲ್ಲರಿಗೂ ಕೈದೀವಿಗೆಯಾಗುವ ಈ ಕಥೆಯನ್ನು ಮರೆಯದಿರೋಣ.


ಸೂಚನೆ:  25/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಮರಗಳು ತೋರುವ ಅಮರಭಾವ (Maragalu thoruva amarabhava)

ಲೇಖಕರು: ಡಾ. ಕೆ. ಎಸ್. ಕಣ್ಣನ್


ಮರದ ಬುಡ ಮೊದಲು ಗಟ್ಟಿಯಾದಲ್ಲಿ ಮರವು ಸ್ಥಿರವಾಗಿರಬಲ್ಲುದು, ಚೆನ್ನಾಗಿ ಬೆಳೆಯಬಲ್ಲುದು. ಸೊಂಪಾಗಿ ವಿಸ್ತರಿಸಬಲ್ಲುದು. ಮುಂದೆ ಚೆನ್ನಾಗಿ ಬೆಳೆಯಲು ಬೇಕಾಗುವ ವ್ಯವಸ್ಥೆಯೆಲ್ಲಾ ಬೇರಿನ ಬೆಳವಣಿಗೆಯಲ್ಲೇ ನಿಗೂಢವಾಗಿ ಸಿದ್ಧವಾಗುತ್ತಿರುತ್ತದೆ – ಎಂದೆವಲ್ಲವೇ?

ಗಿಡವೇನು, ಮನುಷ್ಯ ಸೃಷ್ಟಿಯೂ ಹೀಗೆಯೇ, ಅಲ್ಲವೆ? ಇದನ್ನು ಗರ್ಭಶಾಸ್ತ್ರವು (ಎಂಬ್ರಿಯಾಲಜಿ embryology) ಸ್ಪಷ್ಟಪಡಿಸುತ್ತದೆ. ಮುಂದೆ ನೆರವೇರಬೇಕಾದ ಬೆಳವಣಿಗೆಗಾಗಿ ಎಲ್ಲ ಏರ್ಪಾಡೂ ಗರ್ಭದಲ್ಲಿಯೇ ಆಗಿರುತ್ತದೆ. ಸ್ತ್ರೀಯ ಗರ್ಭವನ್ನು ಸೇರಿದ ಪುರುಷನ ವೀರ್ಯವು ತಾಳುವ ಮೊದಲ ಆಕಾರವೇ ಮಸ್ತಿಷ್ಕ ಹಾಗೂ ಮೆದುಳುಬಳ್ಳಿಯದು. ಯಾವುದೇ ಶಿಶುವು ಬೆಳೆದುಕೊಳ್ಳಲೂ ಮೊದಲ ಹೆಜ್ಜೆಯೆಂದರೆ ತಲೆಯೇ ಸರಿ. ಮೊದಮೊದಲು ತಲೆಯೇ ದಪ್ಪನಾಗಿ ದೊಡ್ಡದಾಗಿರುವುದು. ಅಲ್ಲಿಯ ಅಂಶಗಳೇ ಕ್ರಮಕ್ರಮವಾಗಿ ಇಡೀ ಶರೀರವಾಗಿ ಬೆಳೆದುಕೊಳ್ಳುವುದು. ಸಹಜ ಸಾರೋಗ್ಯ ಹೆರಿಗೆಯೆಂದರೆ ಮೊದಲು ಹೊರಬರುವುದೂ ತಲೆಯೇ ಸರಿ. ಮಗುವು ಜನಿಸಿದ ಮೇಲೂ “ತಲೆ ನಿಲ್ಲುವ ತನಕ” ಮಗುವನ್ನು ಬಹಳ ಎಚ್ಚರಿಕೆಯಿಂದಲೇ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮೂಲವು ಸ್ಥಿರವಾಗುವ ಪರ್ಯಂತ ಬೇರೆಯ ಬೆಳವಣಿಗೆಗಳು ಮಂದಗತಿಯಿಂದಲೇ ಘಟಿಸುತ್ತವೆ. ಮಿಕ್ಕ ಪ್ರಾಣಿಗಳಲ್ಲೂ ಈ ಅಂಶವು ಸಮಾನವಾಗಿದ್ದರೂ, ಮನುಷ್ಯರಲ್ಲಿ ಇದೊಂದು ವಿಶೇಷವೇ ಸರಿ. ಮಿಕ್ಕ ಪ್ರಾಣಿಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲೇ ಅವು ಮನುಷ್ಯಶಿಶುವಿಗಿಂತಲೂ ಹೆಚ್ಚಾಗಿ ಹಾಗೂ ಶೀಘ್ರತರವಾಗಿ ಸ್ವಾವಲಂಬಿಯಾಗಿರುತ್ತವೆ.

ಹೀಗೆ ಬುಡವನ್ನು ಗಟ್ಟಿಮಾಡಿಕೊಂಡೇ ಉಳಿದ ಬೆಳವಣಿಗೆಗೆ ಕೈಹಾಕುವುದೆಂಬ ತತ್ತ್ವವನ್ನು ಸಸ್ಯಗಳಲ್ಲೂ ಮನುಷ್ಯರಲ್ಲೂ ನಾವು ಕಾಣಬಲ್ಲೆವು.ಭಾರತೀಯಸಂಸ್ಕೃತಿಯ ಹಿರಿಮೆಯೆಂಬುದು ಋಷಿಗಳಿಂದ ಆದುದೆಂಬುದು ನಿರ್ವಿವಾದವೇ ಸರಿ. ಏಕೆ? ಏಕೆಂದರೆ ಈ ಸಂಸ್ಕೃತಿಯು ಶ್ರೇಷ್ಠಜ್ಞಾನವನ್ನು ಆಧರಿಸಿದುದು. ಶ್ರೇಷ್ಠಜ್ಞಾನವೆಂದರೇನು? ಸಾಧಾರಣವಾದ ಜ್ಞಾನವೆಂದರೆ ನಮ್ಮ ಐದು ಇಂದ್ರಿಯಗಳಿಗೆ ಏನೇನು ತಿಳಿಯುತ್ತದೋ ಅಷ್ಟೇ. ಶ್ರೇಷ್ಠಜ್ಞಾನವೆಂದರೆ ಸೃಷ್ಟಿಯ ಸೂಕ್ಷ್ಮಗಳನ್ನು ಅರಿಯುವ ಜ್ಞಾನ. ಆಧುನಿಕ ವಿಜ್ಞಾನವೂ ಸೃಷ್ಟಿಯ ಅನೇಕ ಸೂಕ್ಷ್ಮಗಳನ್ನು ಹೊರಗೆಡಹಿದೆಯಷ್ಟೆ. ಆದರೆ ಮತ್ತೂ ಮುಖ್ಯವಾದ ಸೃಷ್ಟಿಯ ಅನೇಕ ಮರ್ಮಗಳನ್ನು ಋಷಿಗಳು ಕಂಡುಕೊಂಡರು.

ಋಷಿಗಳು ಇವನ್ನು ಎಲ್ಲಿ ಕಂಡುಕೊಂಡರು, ಹೇಗೆ ಕಂಡುಕೊಂಡರು? – ಎಂಬ ಪ್ರಶ್ನೆಗಳು ಬರುವುವಷ್ಟೆ? ಅವರು ಕಂಡುಕೊಂಡದ್ದು ತಮ್ಮ ತಪೋವನಗಳಲ್ಲಿ. ತಪಸ್ಸು ಮಾಡಿ ಕಂಡುಕೊಂಡರು.

ತಪೋವನಗಳೆಂದರೇನು? ಅವುಗಳು ಮರದ ರಾಶಿಗಳೇ ಸರಿ. ಮರಗಳು ತೋರುವ ಆದರ್ಶವು ಸಾಮಾನ್ಯವೇನಲ್ಲ. ಮೇಲ್ನೋಟಕ್ಕೇ ಗೋಚರವಾಗುವ ಅಂಶವೆಂದರೆ ಮರಗಳ ಪರೋಪಕಾರಪರತೆ. ಮರಗಳ ನೆರಳಲ್ಲಿ ಪ್ರಾಣಿಗಳು ಮಲಗುತ್ತವೆ. ಮರಗಳ ಮೇಲ್ಭಾಗದಲ್ಲಿ ಪಕ್ಷಿಗಳು ಗೂಡು ಕಟ್ಟಿಕೊಳ್ಳುತ್ತವೆ. ಪೊಟರೆಗಳಲ್ಲಿ ಕೀಟಗಳು ತುಂಬಿರುತ್ತವೆ. ಕೊಂಬೆಗಳಲ್ಲಿ ಕಪಿಗಳು ನೆಲೆಗಾಣುತ್ತವೆ. ಹೂಗಳಿಗೆ ದುಂಬಿಗಳು ಬಂದು ಮಧುಪಾನವನ್ನು ಮಾಡಿಕೊಳ್ಳುತ್ತವೆ. ಹೀಗೆ ಮರವೊಂದರ ಅಂಗಗಳೆಲ್ಲವೂ ನಾನಾ ಪ್ರಾಣಿಗಳಿಗೆ ಸುಖವನ್ನು ಕೊಡುವಂತಹವೇ. ಈ ಆದರ್ಶವನ್ನು ಪಾಲಿಸದವರೇ ಭೂಮಿಗೆ ಭಾರ – ಎಂಬ ಮಾತು ಪಂಚತಂತ್ರದಲ್ಲಿ ಬರುತ್ತದೆ.

ಮತ್ತೊಂದು ಸುಭಾಷಿತವು ಚಂದನವೃಕ್ಷದ ಆದರ್ಶವನ್ನು ಹೇಳುತ್ತದೆ. ಬುಡದಲ್ಲಿ ಭುಜಂಗ(ಹಾವು)ಗಳು, ಶಿಖರದಲ್ಲಿ ವಿಹಂಗ(ಪಕ್ಷಿ)ಗಳು, ಕೊಂಬೆಗಳಲ್ಲಿ ಪ್ಲವಂಗ(ಕೋತಿ)ಗಳು, ಹೂಗಳಲ್ಲಿ ಭೃಂಗ(ದುಂಬಿ)ಗಳು – ಹೀಗಾಗಿ, ಪರೋಪಕಾರಕ್ಕಾಗಿಯೇ ಸಜ್ಜನರಿರುವುದು – ಎಂದು. ಇಂತಹ ಆದರ್ಶಗಳು ಸದಾ ಕಣ್ಣಮುಂದೆ ಇರುವುದೂ ಒಂದು ಉತ್ಕೃಷ್ಟ ಸಂನಿವೇಶವೇ. ಕಾಳಿದಾಸನು ತನ್ನ ಕುಮಾರಸಂಭವ ಕಾವ್ಯದಲ್ಲಿ ಪಾರ್ವತಿಯ ತಪಸ್ಸಿನ ವರ್ಣನೆಯನ್ನು ಮಾಡುತ್ತಾನೆ. ಗಿಡಗಳಿಗೆ ನೀರೆರೆಯುವುದರಲ್ಲಿ ಆಕೆ ತಾಯ್ತನದ ಸವಿಯನ್ನು ಕಂಡಳು – ಎನ್ನುತ್ತಾನೆ. ಯಾವುದೇ ಗಿಡ ಮೊದಲ ಬಾರಿ ಹೂಬಿಟ್ಟಂದು ಅದೊಂದು ಹಬ್ಬವೇ ಆಗಿರುತ್ತಿತ್ತು, ಶಕುಂತಲೆಗೆ – ಎಂದೂ ತನ್ನ ಶಾಕುಂತಲ ನಾಟಕದಲ್ಲಿ ಹೇಳುತ್ತಾನೆ. ಗಿಡಮರಗಳ ಬಗೆಗಿನ ಪ್ರೀತಿ ಸಹಜವಾಗಿ ಉಕ್ಕೇರಿದುದು ನಮ್ಮ ದೇಶದಲ್ಲಿ. ವನಸಂಪತ್ತಿಲ್ಲದಿದ್ದಲ್ಲಿ ನಮಗೆ ಉಳಿಗಾಲವಿಲ್ಲ – ಎಂಬ ಇಂದಿನ ಭೀತಿಯಿಂದ ಜನಿಸಿದುದಲ್ಲ! ಇವೆಲ್ಲಕ್ಕಿಂತಲೂ ಮಿಗಿಲಾಗಿ, ಗಿಡಮರಗಳ ’ಮಿತಾಹಾರಸೇವನೆ’ಯೂ ಒಂದು ಆದರ್ಶವೇ. ತಾನಾಗಿ ಒದಗಿದ ನೀರು, ಚಂದ್ರನ ಕಿರಣಗಳು – ಇವೇ ತಮ್ಮ ಆಹಾರ! ಈ ಆದರ್ಶವೂ ಪಾರ್ವತಿಯ ತಪಸ್ಸಿಗೆ ಮಾದರಿಯಾಯಿತಂತೆ!

ಇಷ್ಟಲ್ಲದೆ ತಪಸ್ಸಿಗೆ ಆದರ್ಶವೆನಿಸುವ ನಿಶ್ಚಲತೆಯನ್ನೂ ಪಾಠವಾಗಿ ತೆಗೆದುಕೊಳ್ಳಬಹುದು. ಎಲ್ಲಕ್ಕಿಂತಲೂ ಮಿಗಿಲಾಗಿ, ಜೀವರಸವನ್ನು ಮೇಲ್ಮುಖವಾಗಿ ಹರಿಸುವ ಮಾದರಿಯು ಋಷಿಗಳ ಊರ್ಧ್ವರೇತಸ್ಕತೆಗೂ ಆದರ್ಶವಾಯಿತೆಂಬುದನ್ನು ಗಮನಿಸಬಹುದು.

ಹೀಗೆ ಮರಗಳ ಜೀವನವು ನಮಗೆ ಅಮರಜೀವನಕ್ಕೇ ಆದರ್ಶವಾಗಿದೆಯಲ್ಲವೆ!?


ಸೂಚನೆ: 25/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, May 24, 2019

ಅಹಂಕಾರ ಬಿಡೋಣ (Ahankara bidona)

ಲೇಖಕರು: ಕೆ. ಎಸ್. ರಾಜಗೋಪಾಲನ್  



ಜಯ-ವಿಜಯರು ವೈಕುಂಠದ ದ್ವಾರಪಾಲಕರು. ಒಮ್ಮೆ ಸನಕಾದಿ ಮುನಿಗಳು ಮಹಾವಿಷ್ಣುವನ್ನು ನೋಡಲು ಬಂದರು. ಅಹಂಕಾರವಶರಾಗಿದ್ದ ಈ ದ್ವಾರಪಾಲಕರು, ಬಂದವರು ಯಾರೆಂದು ತಿಳಿದಿದ್ದರೂ ಅವರನ್ನು ತಡೆದುಬಿಟ್ಟರು. ಸನಕಾದಿಗಳಿಗೆ ಕೋಪ ಬಂತು. “ನೀವು ಇಂತಹ ಶುದ್ಧವಾದ ಜಾಗದಲ್ಲಿರಲು ಯೋಗ್ಯರಲ್ಲ; ರಾಕ್ಷಸರಾಗಿ ಜನ್ಮವೆತ್ತಿ” ಎಂದು ಶಪಿಸಿದರು. ಮಹಾವಿಷ್ಣುವೇ ಬಂದು ಜಯವಿಜಯರನ್ನು “ನೀವು ಮೂರು ಜನ್ಮ ನನ್ನ ಶತ್ರುಗಳಾಗಿದ್ದು ಮತ್ತೆ ನನ್ನ ಬಳಿಗೆ ಬರುವಿರೋ ಅಥವಾ ಏಳು ಜನ್ಮ ಮಿತ್ರರಾಗಿದ್ದು ಬರುವಿರೋ?” ಎಂದು ಕೇಳಿದನು. ಜಯವಿಜಯರು “ಮೂರು ಜನ್ಮ ಶತ್ರುಗಳಾಗಿದ್ದುಕೊಂಡು ಬೇಗ ಮತ್ತೆ ಹಿಂದಿರುಗುತ್ತೇವೆ” ಎಂದರು. ಸನಕಾದಿ ಮುನಿಗಳು ಕ್ರೋಧವಶರಾದದ್ದೂ ತಪ್ಪೇ! ಅದರ ಬಗ್ಗೆ ತಿಳಿವಳಿಕೆ ಕೊಡಲೆಂದು ವಿಷ್ಣುವು ಆ ಮುನಿಗಳನ್ನು ಕುರಿತು “ಜಿತೇಂದ್ರಿಯರಾದ ನಿಮ್ಮಂತಹವರನ್ನು ನಮ್ಮ ದ್ವಾರಪಾಲಕರು ಒಳಗೆ ಬಿಡದಿದ್ದುದು ತಪ್ಪು.  ಅವರ ತಪ್ಪಿಗಾಗಿ ನಿಮ್ಮಲ್ಲಿ ನಾನು ಕ್ಷಮೆ ಕೋರುತ್ತೇನೆ” ಎಂದನಂತೆ. ಸನಕಾದಿಗಳಿಗೆ ತಮ್ಮ ತಪ್ಪಿನ ಅರಿವಾಯಿತು! ಇದು ಪ್ರಸಿದ್ಧ ಕತೆ.

 ವಿಷ್ಣುಭಕ್ತರಾದ ಜಯವಿಜಯರಿಗೆ ಭಗವಂತನ ವಿರಹ ಸಹಿಸಿಕೊಳ್ಳಲಾಗದೇ ಹೀಗೆಂದಿರಬೇಕೆಂದು ಎಷ್ಟೋ ಜನ ಭಾವಿಸಿಯಾರು!  ಶ್ರೀರಂಗಮಹಾಗುರುಗಳು ಈ ಕಥೆಯನ್ನು ಸುಂದರವಾಗಿ ವಿವರಿಸಿದ್ದರು. ಜಯವಿಜಯರಿಗೆ ಎರಡು ಆಯ್ಕೆಗಳಿದ್ದವು-- ಶತ್ರುಗಳಾಗಿರುವುದು ಅಥವಾ ಮಿತ್ರರಾಗಿರುವುದು. ಅವರು ಆರಿಸಿದುದು ಶತ್ರುಗಳಾಗಿರುವ ಮಾರ್ಗವನ್ನೇ!  ಹಾಗೆ ಮಾಡಲು ಕಾರಣ, ಶಾಪವು ಆಗಲೇ ಅವರನ್ನು ಆವರಿಸಿಬಿಟ್ಟು, ಅವರ ಬುದ್ಧಿಯು ಸನ್ಮಾರ್ಗದಲ್ಲಿ ಓಡದಂತಾಗಿತ್ತು. ಭಗವಂತನ ಮಿತ್ರರಾಗಿ ಏಳು ಜನ್ಮವಲ್ಲ, ನೂರು ಜನ್ಮವಾದರೂ ಇರಬಹುದಿತ್ತು. ವೈಕುಂಠದಲ್ಲಿದ್ದ ಅವರ ಮನಸ್ಸು ಸದಾ  ಭಗವಂತನಲ್ಲೇ ಇರಬೇಕಿತ್ತು. ಹೋಗಲಿ! ಶಾಪದ ದೆಸೆಯಿಂದಾಗಿ ಭೂಲೋಕಕ್ಕೇ ಬಂದರೂ, ಅವರ ಮನಸ್ಸು  ನಿರಂತರವಾಗಿ ಭಗವಂತನಲ್ಲೇ ರಮಿಸುವುದಾದಲ್ಲಿ ಎಲ್ಲಿದ್ದರೇನು? ಇದನ್ನು ಅವರು ತಿಳಿಯದೇ ಹೋದರು. ಸ್ವರ್ಗನರಕಗಳಲ್ಲಿ ಎಲ್ಲೇ ಇದ್ದರೂ, ಸುಖವೇ ಇರಲಿ, ದುಃಖವೇ ಇರಲಿ ಎಂತಹ ಸನ್ನಿವೇಶದಲ್ಲೂ ಓ ನರಕಾಂತಕನಾದ ಭಗವಂತನೇ! ನಿನ್ನ ಚರಣಗಳ ಸ್ಮರಣೆ ನನಗೆ ತಪ್ಪದಿರಲಿ ಎಂದು ಪ್ರಾರ್ಥಿಸುವುದು ಭಾರತೀಯ ಸಂಸ್ಕೃತಿಯ ಹಿರಿಮೆಯಾಗಿದೆ.

ಎಂತಹ ಭಕ್ತನಾಗಿದ್ದರೂ ಪದವಿಯ ಆಸೆ, ಕೀರ್ತಿಕಾಮನೆ ಇತ್ಯಾದಿ ಸ್ವಾರ್ಥ ಹುಟ್ಟಿಕೊಂಡರೆ ಜೀವನದ ಲಕ್ಷ್ಯವೇ ಮರೆತು ಹೋಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಜಯವಿಜಯರ ಕಥೆ ದಾರಿದೀಪವಾಗಿದೆ. ಸದಾ ಭಗವಚ್ಚಿಂತನೆಯಲ್ಲಿರುವ ಮಹಾಪುರುಷರಿಗೇ ಹೀಗಾಗುತ್ತದೆಯೆಂದರೆ ಉಳಿದವರ ಪಾಡೇನು! ಅದಕ್ಕೇ ಹಿರಿಯರು ಹೇಳುವುದು--”ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ| ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಷೈರಿತಿ||” (ಪ್ರತಿದಿನವೂ ಮನುಷ್ಯನು ತನ್ನ ನಡೆಯನ್ನು ಅವಲೋಕಿಸಬೇಕು. ನಾನು ಪಶುವಿನಂತೆ ಇದ್ದೆನೇ? ಅಥವಾ ಸಜ್ಜನನ ಹಾಗೆ ನಡೆದೆನೇ?) ಎಂದು. ಪಶುಗಳು ತಮ್ಮ ಸಹಜಪ್ರವೃತ್ತಿಯಿಂದಷ್ಟೇ (instinct) ಕೆಲಸಮಾಡಬಲ್ಲವು. ಮನುಷ್ಯನು ವಿವೇಚನೆಯನ್ನು ಮಾಡಬಲ್ಲ ಸೌಲಭ್ಯವನ್ನು ಹೊಂದಿದ್ದಾನೆ. ದುಷ್ಟ ಸಂಸ್ಕಾರಗಳ ಪ್ರಭಾವ, ಸಹವಾಸ ದೋಷದಿಂದಾಗಿ ಒಂದು ಕ್ಷಣ ಅಧರ್ಮದಲ್ಲೇ ಮನಸ್ಸು ಆಡಿದರೂ, ವಿವೇಕದಿಂದ ತನ್ನನ್ನು ಸರಿಪಡಿಸಿಕೊಂಡು ಲಕ್ಷ್ಯದತ್ತ ಮುಂದಡಿ ಇಡುವುದರಲ್ಲಿ ಜಾಣ್ಮೆಯಿದೆ.

ಸೂಚನೆ:  23/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ஒப்பற்ற மஹாபுருஷர் ஶ்ரீரங்கமஹாகுரு (oppattra mahapurusar Srirangamahaguru Part-6)

திரு எஸ்.வி.சாமு அவர்களின்  மூலகன்னட புத்தகத்தின் ஒரு பகுதி 
                  
                                                                      Part 6

( தமிழாக்கம்:  ஶ்ரீமதி ஜானகி )

மஹாகுரு பரிசோதனையின் மூலம் நிரூபித்த பேருண்மை:

ஒருமுறை அவருடைய கிராமத்திற்கு வந்த  உறவினர்களை தம் தோட்டத்திற்கு அழைத்து சென்றார். மூலிகைகளின் பெருமையை உணராத  ஒரு உறவினர் வழியில்  மூலிகைகளை பற்றி ஏளனம் செய்து வந்தாராம். இதை கண்டு ஸ்ரீகுருவின் நெருங்கிய உறவினரானஸ்ரீதாதாசார்யார் அவருக்கு  தக்க பாடம் புகட்டவேண்டுமென குருவை கேட்டுக்கொண்டார்.  வழியில் கண்ட ஒரு மூலிகையை  சுட்டி காட்டி ஸ்ரீகுரு ’இது கிடைத்தற்கரியது நன்றாக மென்று சுவையுங்கள்’  என்று  தாதாசாரையும் மற்றொறுருவரையும் தவிர அனைவருக்கும் கொடுத்தார்.மூலிகையை பழித்த அந்த நபருக்கும் கொடுத்தார். பிறகு  தென்னந்தோப்பில் நுழைந்து  இளநீர்காய்களை பறிக்க செய்து  அனைவருக்கும்கொடுத்தார். மிகவும் இனிப்பானது என்று அனைவரும் அறிந்திருந்த அந்த இளநீர் அன்று எந்த சுவையும் இன்றி சப்பென்று  இருந்ததாம்.அதை பருக முடியாமல் அனைவரும் உமிழ்ந்து  விட்டனர்.  தாதாசார் மட்டும் மகிழ்ச்சியுடன் சுவைத்தார். மற்றொருமுறை  வழங்கிய  போதும்சப்பென்றிறுந்ததை அறிந்து  அனைவரும் திடுக்கிட்டு தடுமாறினராம். இது அந்த மூலிகையின் மகிமையாக இருக்கலாம் என்று தாதாசார் கூறியகருத்தை அந்த நபர் மட்டும்  ஒப்புக்கொள்ள தயங்கினார்.




'கும்பலோடு கோவிந்தா' என்று கூறும் இயல்புடையவராக இருந்த மூலிகையை சுவைக்காத நபர் தன்னுடைய உண்மையான அநுபவத்தை கூறபயந்து மற்றவர்கள் உமிழ்வதை கண்டு தானும் துப்பினார். ஸ்ரீகுரு நகைசுவையுடன்  ’என் கணக்கு  சரியாகிவிட்டதப்பா’ என்று கூறினார். 

பிறகு ஸ்ரீகுரு எல்லோரும் வீடு திரும்புமுன் மறுபடியும் இளநீரை வீட்டிற்கு அனுப்பி வைத்தார்.  காலம்கடக்க நாவின் சுவை மாறி இனிப்பைஉணரும்படி செய்து எல்லோருக்கும் மகிழ்ச்சியை அருளினார். மதுவிநாசினி மூலிகை நாவின் இனிப்பை உணரும் சுவைமொட்டுக்களைதற்காலிகமாக உணர்விழக்க செய்கிறதென்பதையும் விளக்கினார்.

இந்த பரிசோதனையின் மூலம் வெளிப்படுத்திய உண்மை:

மதுவிநாசினிமூலிகையை போல் நம் மனதில் இறைவனைப் பற்றிய இனிமையான அநுபவங்களை மறைக்கும் தீயகர்மாக்களை நாம் பலபிறவிகளிலிருந்து சேமித்து வந்திருப்பதால்தான்  இறையனுபவம் நமக்கு ஏற்படுவதில்லை. ஆன்றோர்கள் எடுத்துரைத்தாலும் புரிவதில்லை. இந்த மூலிகையின் பயனால் இனிப்புசுவை மறைந்தாலும் மற்ற சுவைகளையெல்லாம் நாவால் உணர இயலுவதுபோல் ஒருவன் உலகவிஷயங்கள் அனைத்தையும்  அநுபவிக்கும்தன்மை பெற்றிருந்தாலும்  கர்மகதியினால் இறையனுபவத்தை மட்டும் உணர இயலாதவனாகிறான்எனும்பாடத்தை  உறுதிபடுத்தினார்.

ஒப்பற்ற மஹாபுருஷர் ஶ்ரீரங்கமஹாகுரு (oppattra mahapurusar Srirangamahaguru Part-5)

திரு எஸ்.வி.சாமு அவர்களின்  மூலகன்னட புத்தகத்தின் ஒரு பகுதி
                   
                                                                      Part 5


( தமிழாக்கம்:  ஶ்ரீமதி ஜானகி )



கலாச்சாரம் - நாகரீகம்:-

வித்யையின் உருவமான புத்தி எனும் நதி தொன்றுதொட்டு பெருக்கெடுத்தோடி வெவ்வேறு காலங்களில் வெவ்வேறு தேசங்களில் மனிதவாழ்கைக்கு பலவிதமான உருவங்களை கொடுத்திருக்கிறது. இதுதான் கலாச்சாரம் மற்றும் நாகரீகம் என கூறப்படுகிறது. கலாசாரம் மற்றும் நாகரீகம் எனும் சொற்கள் சில நேரங்களில் ஒரே பொருளுள்ளவைகளாகவும் வேறு சில நேரங்களில் வெவ்வேறுபொருளுள்ளவைகளாகவும் உபயோகப்பட்டுவருகின்றன. மஹாகுரு இச்சொற்களின் பொருளை தெளிவாக எடுத்துரைத்துள்ளார்.
ஶ்ரீரங்கமஹாகுரு உண்மையான அர்த்தத்தில் கலாச்சாரத்தின் பொருளை உணர்ந்த மகானாக விளங்கினார்.
மஹாகுரு வழங்கிய கலாசாரம் மற்றும் நாகரீகத்தின் அடிப்படை:-

பூரணஞானம் நிறைந்த நிலையில் வாழ்க்கையின்  உள்ளும் புறமும் பற்றின ஶ்ரீரங்கமஹாகுருவின் கண்ணோட்டம் பழமையான பாரதமஹரிஷிகளின் கண்ணோட்டத்திற்கு சமமானதாக விளங்கியது. நெடுந்தவத்திற்கு பின் அவர்கள் வாழ்கையின் உன்னதமான மதிப்பை பற்றி எந்ததீர்மானம் கொண்டிருந்தனரோ அதுவே மஹா தபஸ்வியான ஶ்ரீரங்க குருவின் தீர்மானமும் ஆகியிருந்தது.

கலாச்சாரம் என்பது உயிரோடு ஒன்றி இருக்கும் தர்மமாகும்(தன்மை). அதுவே  நடைமுறையில் வெளிப்படும்பொழுது நாகரீகம்எனப்படுகிறது. பரிபூர்ண ஞானத்தை அடைந்தபொழுது ஏற்படும் உள்நோட்டம், உள்உருவம், உள்செயல்கள், உள்உணர்வுகளை பாரதத்தின்கலாச்சாரம் என்று கூறினால் அவைகளின் இனிய நினைவுகளை கொடுக்கும் வெளிப்பார்வை, வெளிஉருவம், வெளிச்செயல்கள், வெளிஉணர்வுகளை நாகரீகம் என கூறலாம். ஒன்று வெளிக்கண்களால் காண்பதற்கரியது. மற்றொன்று காணக்கிடைப்பது. ஒன்று உணர்வு மற்றொன்றுஅதனின் வெளிப்பாடு. ஒன்று விதையைப் போன்றது, மற்றொன்று அதன் மரத்தை போன்றது. ஒன்று ஜீவனின் மூலத்தில் இருப்பதாகவும்,மற்றொன்று புலன்கள், உடல் முதலியவற்றின் செயல்பாட்டிற்கு சேர்ந்தபடியாக வெளிப்படையாகவும் உள்ளது.

இன்னும் பொருத்தமாக கூறுவதானால் விதைக்கும், மரத்திற்கும், மரத்தின் வேரிற்கும் பின்னால், அணுவாக இருக்கும் தர்மம் கலாச்சாரமாகும்.அது தன்னை உள்ளது உள்ளபடி வெளிப்படுத்திக் கொள்ளும் போது அதுவே நாகரீகமாகிறது. எது சிறப்பாக செய்யப்பட்டுள்ளதோ அதை மஹாகுருகலாச்சாரம் என்பதாக  அறிந்தார்.

கலாச்சாரம்(ஸம்ஸ்க்ருதத்தில் ’ஸம்ஸ்க்ருதி’) எனும் சொல்லிற்கு  ’நன்றாக செய்யப்பட்டது’ என்பதே பொருள்.

மஹர்ஷிகளின் கலாசாரத்திற்கும் இன்றைய கலாசாரத்திற்கும் உள்ள வேறுபாடு :-

ஶ்ரீரங்கமஹாகுரு  வாழ்க்கையின் மூலநிலையான இறை ஒளியை அடைந்து அதனுடைய முழுமை, சாந்தி மற்றும் ஆனந்தத்தைஅனுபவித்தவர். அந்த ஒளியிலிருந்து தோன்றி இலை, பூ, பழத்துடன் கூடி செழிப்பாக வளர்ந்த நாகரீகமெனும் ப்ரம்மாண்டமான மரத்தையும்கண்டார். நாகரீகத்தின் வெவ்வேறு பாகங்களனைத்தும் தமக்கு வேர் போல இருக்கும் பேரொளியுடன் தொடர்புகொண்டவாறு அமைவதுசாத்தியம் என்பதை பரிசோதித்து அறிந்தார்.

இன்று உலகெங்கும் பரவி வெளிப் பார்வைக்கு அற்புதமாக காணப்படும் ஒரு நாகரீகத்தை நம்மை சுற்றி காண்கிறோம். ஆனால் மேற்கூறப்பட்டுள்ள சிறப்பான கலாச்சாரத்தின் அடிப்படை இந்நாகரீகத்தில் காணப்படுவதில்லை. வாழ்க்கையை பரிபூரணமாக்கும்பரம்பொருளின் நினைவு அதில் இல்லை. அதில் பல குறைகள் காணப்படுவதற்கு காரணம் அப்பரம்பொருளுடன் ஒன்றிணையாமல் வெளிக்கண்ணோட்டத்தில் மட்டுமே வளர்ந்திருப்பதுதான். மஹா குருவின் கலாச்சாரத்தைப் பற்றிய கண்ணோட்டம் பழமையான  பாரத மஹரிஷிகளின்மனோதர்மத்தை ஒத்திருந்தது.
ஆன்மீக கலாசாரம் நாகரீகமாக வளர்ந்துள்ள விதம்:-

பூஜையில் மணியோசை செய்வது நமது பரம்பரையில் வந்துள்ள வழக்கம். யோகியின் ஆன்மீகப்பயணத்தில் ப்ராணன் சுஷும்னா நாடியில் நுழையும்பொழுது  மணியோசை கேட்கப்படுகிறது என்பது சாஸ்திரவாக்கியம். யோகிகளின் இதயத்தில் கேட்கப்படும் அந்த ஒலியை அவ்வாறேவெளிப்படுத்துவதற்கேற்ற பொருட்களைக் கொண்டு தயாரிக்கப்படும் மணியையே பூஜையில் உபயோகப்படுத்த வேண்டுமென்பதுசாஸ்த்ரங்களின் கருத்து. அதனால் நாதயோகத்தை லட்சியத்தில் கொண்டு மணியின் உருவம், எடை மற்றும் அதில் உலோகங்களின் கலவைஎந்த விகிதத்தில் இருக்க வேண்டுமென்பதும் சாஸ்திரத்தில் விதிக்கப்பட்டுள்ளது.

லட்சணங்களுடன் கூடிய மணியை தயாரிப்பதற்கு ஒரு சிறந்த கலைஞனின் அவசியம் எவ்வாறோ அவ்வாறே அது சரியாகதயாரிக்கப்பட்டுள்ளதா என சோதித்தறிய அருகிலேயே ஒரு நாதயோகியும் இருக்க வேண்டும். ஆன்மீக பூமியில் தோன்றிய கலாச்சாரம் உலகில்ஒரு நாகரீகமாக உருக்கொண்டதற்கு இது ஓர் மேன்மையான எடுத்துக்காட்டாகும்.

Wednesday, May 22, 2019

ಮೂರು ತಪಸ್ಸುಗಳು (Mooru thapassugalu)




ರಾಮಾಯಣದಲ್ಲಿ ರಾಮನು ನಾಯಕ. ರಾವಣನು ಪ್ರತಿನಾಯಕ. ರಾಮನು ಪರಾಕ್ರಮಿ. ರಾವಣನೂ ಪರಾಕ್ರಮಿಯೇ. ರಾಮನು ಧರ್ಮನಿಷ್ಠ, ಆದರೆ ರಾವಣನು ಇಲ್ಲಿ ಮಾತ್ರ ಹಿಂದೆ ಬಿದ್ದ. ಕೊನೆಗೆ ಸತ್ತು ಬಿದ್ದ. ರಾಮನೊಡನೆ ಸೆಣಸುವ ಬಲ ರಾವಣನಿಗೆ ಹೇಗೆ ಬಂದಿತು? ಅದು ಬಂದದ್ದು ತಪಸ್ಸಿನಿಂದ. ತಪಸ್ಸನ್ನು ರಾವಣನು ಮಾತ್ರವಲ್ಲ, ವಿಭೀಷಣ-ಕುಂಭಕರ್ಣರೂ ಮಾಡಿದರು. ಮೂವರೂ ಒಟ್ಟಿಗೇ ತಪಸ್ಸನ್ನು ಆರಂಭ ಮಾಡಿದರು. ಒಟ್ಟಿಗೇ ಮುಗಿಸಿದರು ಕೂಡ. ಆದರೂ ರಾವಣನು ಸಂಪಾದಿಸಿಕೊಂಡ ಬಲ ಅವರಿಗೆ ಬರಲಿಲ್ಲ.

ಹೀಗೇಕೆ? ಏಕೆಂದರೆ ತಪಸ್ಸನ್ನು ಆರಂಭಮಾಡುವಾಗ ಅವರವರ  ಮನಸ್ಸಿನಲ್ಲಿ ಏನೇನು ಸಂಕಲ್ಪವಿತ್ತೋ ಅದರಂತೆಯೇ ಫಲವು ಬರುವುದೂ. ಮೂವರ ಮುಂದೆಯೂ ಒಬ್ಬರಾದ ಮೇಲೊಬ್ಬರಿಗೆ ಬ್ರಹ್ಮನು ವರಕೊಡಲು ಪ್ರತ್ಯಕ್ಷನಾದನಷ್ಟೆ. ಮೂವರೂ ಕೇಳಿಕೊಂಡ ವರಗಳೂ ಬೇರೆ ಬೇರೆ. ರಾವಣನು ಕೇಳಿದ ವರವಿದು: “ಬ್ರಹ್ಮನೇ, ಎಲ್ಲರಿಗೂ ಸಾವೇ ಭಯ. ನನಗೆ ಅಮರತ್ವವನ್ನು ಕೊಡು”. ಅದಕ್ಕೆ ಬ್ರಹ್ಮನು “ಅದಾಗದು. ಬೇರೆ ವರವನ್ನು ಕೇಳಿಕೋ” ಎಂದ. ಅದಕ್ಕೆ ರಾವಣ ಹೇಳಿದ “ಯಾವ ದೇವ-ದಾನವರಿಂದಲೂ ನನಗೆ ಸಾವು ಬರಬಾರದು. ಮನುಷ್ಯರು ನನಗೆ ಲೆಕ್ಕವಿಲ್ಲ, ಅವರು ಹುಲ್ಲುಕಡ್ಡಿಯಂತೆ”.

ವಿಭೀಷಣನು ಕೇಳಿದುದು ಹೀಗೆ: “ಬ್ರಹ್ಮನೇ, ನೀನು ಲೋಕಗುರು. ನೀನೇ ವರಕೊಡಲು ಬಂದಿರುವೆ. ಅಷ್ಟಕ್ಕೇ ನಾನು ಕೃತಕೃತ್ಯನಾದೆ. ಧರ್ಮದಲ್ಲಿ ನಿರತರಾದವರಿಗೆ ಏನು ತಾನೆ ಎಟುಕದು? ಆದ್ದರಿಂದ ಬಹಳ ದೊಡ್ಡ ಆಪತ್ತೇ ಬಂದರೂ ನನ್ನ ಮನಸ್ಸು ಧರ್ಮದಲ್ಲಿ ನೆಲೆಸಿರಲಿ”. ಕೊನೆಯದಾಗಿ ಕುಂಭಕರ್ಣನ ಸರದಿ. ಆತ ಕೇಳಿದ: “ಅನೇಕ ವರ್ಷಗಳ ಕಾಲ ನಾ ನಿದ್ದೆ ಮಾಡಬೇಕು! ಎಲ್ಲರಿಗೂ “ಹಾಗೆಯೇ ಆಗಲಿ” ಎಂದು ಹೇಳಿ ಬ್ರಹ್ಮನು ಅಂತರ್ಧಾನ ಹೊಂದಿದ.

ಮೂವರೂ ಅಸುರರೇ. ಸಮಕಾಲ ತಪಸ್ಸು ಮಾಡಿದವರೇ. ಆದರೆ ಅವರವರು ವರಿಸಿದ ವರಗಳೇ ಬೇರೆಬೇರೆಯಾದವು. ಹೀಗೇಕಾಯಿತು? ಏಕೆಂದರೆ, ಮೂವರ ಪ್ರವೃತ್ತಿಗಳೂ ಬೇರೆ ಬೇರೆ. ಕುಂಭಕರ್ಣನು ಕೇಳಿಕೊಂಡದ್ದು ಆತನ ತಾಮಸ-ಸ್ವಭಾವವನ್ನು ಹೇಳುತ್ತದೆ. ರಾವಣನು ಕೇಳಿಕೊಂಡದ್ದು ಆತನ ರಾಜಸ-ಸ್ವಭಾವವನ್ನು ತೋರಿಸುತ್ತದೆ. ವಿಭೀಷಣನು ಕೇಳಿಕೊಂಡದ್ದು ಆತನ ಸಾತ್ತ್ವಿಕ-ಸ್ವಭಾವವನ್ನು ತಿಳಿಯಗೊಡಿಸುತ್ತದೆ.

ಹೀಗೆ ಒಡಹುಟ್ಟಿದವರಾದ ಅಸುರರಲ್ಲೇ ಒಬ್ಬ ಸಾತ್ತ್ವಿಕ, ಒಬ್ಬ ರಾಜಸ, ಒಬ್ಬ ತಾಮಸ. ಸತ್ತ್ವಗುಣವುಳ್ಳವನು ಸಾತ್ತ್ವಿಕ. ರಜೋಗುಣವುಳ್ಳವನು ರಾಜಸ. ತಮೋಗುಣವುಳ್ಳವನು ತಾಮಸ. ಈ ತ್ರಿಗುಣಗಳನ್ನುಕುರಿತು ಗೀತೆಯ ಕೊನೆಯ ಐದು ಅಧ್ಯಾಯಗಳಲ್ಲಿ ಅಲ್ಲಲ್ಲಿ ಹೇಳಿದೆ. ಸತ್ತ್ವಗುಣವು ಹೆಚ್ಚಾಗಿರುವವರು ಧರ್ಮಪರರಾಗಿರುತ್ತಾರೆ. ರಜೋಗುಣವು ಪ್ರಧಾನವಾಗಿರುವವರು ಲೋಭಿಗಳಾಗಿದ್ದು ತಮ್ಮ ನಾನಾ ಅಪೇಕ್ಷೆಗಳ ಪೂರೈಕೆಗಾಗಿ ಹಾತೊರೆದು ಹೊಡೆದಾಡುವವರು. ಇನ್ನು ತಮೋಗುಣವು ಯಾರಲ್ಲಿ ಅಧಿಕವೋ ಅವರು ಸೋಮಾರಿಗಳಾಗಿದ್ದುಕೊಂಡು ಯಾವ ಸಾಧನೆಯನ್ನೂ ಮಾಡಲಾರದವರಾಗಿರುತ್ತಾರೆ.

ಧರ್ಮವನ್ನು ಬಿಟ್ಟು ದರ್ಪದಿಂದ ಲೋಕಕಂಟಕನಾದ ರಾವಣ ಸಾವನ್ನಪ್ಪಿದ. ಇತ್ತ ಧರ್ಮವನ್ನು ಹಿಡಿದ ವಿಭೀಷಣನನ್ನು ಚಿರಂಜೀವಿಯೆಂದೇ ಹೇಳುವರಲ್ಲವೇ? ಕುಂಭಕರ್ಣನ ತಪಸ್ಸು ಸಾಧಿಸಿದುದಾದರೂ ತಮಸ್ಸನ್ನೇ!

ಹಾಗಿದ್ದರೆ ಈ ಮೂವರ ಪರಿಗಳಲ್ಲಿ ನಮಗೆ ಆದರ್ಶ ಯಾವುದೆಂದು ಬಾಯಿಬಿಟ್ಟು ಹೇಳಬೇಕೆ?

ಸೂಚನೆ:  22/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Tuesday, May 21, 2019

ಚೂಡಾಕರ್ಮದ ತಾತ್ವಿಕ ಅಂಶಗಳು (Choodakarmada thaathvika amshagalu)

ಲೇಖಕರು: ತಾರೋಡಿ ಸುರೇಶ



ಆಯುರ್ವೇದದ ಪ್ರಕಾರ ತಲೆಯ ಮುಂಭಾಗಕ್ಕೆ ಸೂರ್ಯಕಿರಣಗಳು ಬೀಳುವಂತಿರಬೇಕು. ಅದರಿಂದ ಆರೋಗ್ಯ, ಅಧ್ಯಾತ್ಮ ಹಾಗೂ ದೇವತಾಪ್ರಸನ್ನತೆಗೆ ಸಂಬಂಧಪಟ್ಟ ಕೇಂದ್ರಗಳು ಪ್ರಬೋಧಗೊಳ್ಳುತ್ತವೆ. ಅದನ್ನು ಅಡ್ಡಿಪಡಿಸುವ ಕೂದಲುಗಳನ್ನು ತೆಗೆಸಬೇಕು. ಶಿಖಾಸ್ಥಾನದಲ್ಲಿ ಶಿಖೆಯನ್ನಿರಿಸಿಕೊಳ್ಳಬೇಕು.  ಶಿಖಾಸ್ಥಾನದ ಒಳಭಾಗದಲ್ಲಿ ‘ಅಧಿಪತಿ’ ಎಂಬ ಮರ್ಮಸ್ಥಾನವಿದೆ. ಅದನ್ನು ಸಂರಕ್ಷಿಸಿಕೊಳ್ಳಬೇಕು. ಅಲ್ಲಿಗೇನಾದರೂ ಏಟು ಬಿದ್ದರೆ ಪ್ರಾಣಾಪಾಯ. ಅಲ್ಲಿ ಕೂದಲನ್ನು ಚೆನ್ನಾಗಿ ಬೆಳೆಸಬೇಕು.

ಆದರೆ ಶಿಖೆಯು ಕೇವಲ ಭೌತಿಕಲಾಭಕ್ಕಾಗಿ ಮಾತ್ರವಲ್ಲ. “ತಪೋಧ್ಯಾನಗಳಲ್ಲಿ ಆಳವಾಗಿ ಮುಳುಗಿದ ಮಹರ್ಷಿಗಳು ಸಮಾಧಿಸ್ಥಿತಿಯಲ್ಲಿ ಒಂದು ಜ್ಞಾನಶಿಖೆಯನ್ನು ದರ್ಶನ ಮಾಡುತ್ತಾರೆ.ಆ ಶಿಖೆಯ ಮಧ್ಯದಲ್ಲಿ ಪರಮಾತ್ಮನು ವಿರಾಜಮಾನನಾಗಿದ್ದಾನಪ್ಪ. ಶಿಖೆಗೆ ಒಳಗಿನ ಜ್ಞಾನಶಿಖೆಯೇ ಮೂಲ” ಎಂದು ಶ್ರೀರಂಗಮಹಾಗುರುಗಳು ಇದಕ್ಕೆ ವಿವರಣೆಯನ್ನು ಕೊಟ್ಟಿದ್ದರು. ”ತಸ್ಯಾ ಶಿಖಾಯಾ ಮಧ್ಯೇ ಪರಮಾತ್ಮಾ ವ್ಯವಸ್ಥಿತಃ” ಎಂಬ ಮಾತಿದೆ. ಈ ಹೊರಗಿನ ಶಿಖೆಯು ಒಳಶಿಖೆಯ ಸ್ಮರಣೆಯನ್ನು ಕೊಡುತ್ತದೆ. ಆ ಸ್ಮರಣೆಯೂ ಒಂದು ಸಂಸ್ಕಾರವೇ.

ಶಿಖೆಯು ಗೋವತ್ಸಪಾದದ ಆಕಾರದಲ್ಲಿರಬೇಕು ಎಂದು ಶಾಸ್ತ್ರಗಳು ವಿಧಿಸುತ್ತವೆ. ಶಿಖೆಯು ವೃತ್ತಾಕಾರದಲ್ಲಿರಬೇಕು ಮತ್ತು ಮುಷ್ಟಿಯಲ್ಲಿ ಹಿಡಿದರೆ ಒಂದು ಅಂಗುಷ್ಟದ ಗಾತ್ರವಿರಬೇಕು ಎಂದು ಶ್ರೀರಂಗಮಹಾಗುರುಗಳು ಸೂಚಿಸಿದ್ದರು. ಇದು ಬ್ರಹ್ಮಸ್ಥಾನ. ಯಾವುದೇ ಕರ್ಮವನ್ನು ಆಚರಿಸುವಾಗಲೂ ಬದ್ಧಶಿಖಿಯಾಗಿ ಮಾಡಬೇಕು ಎಂಬ ನಿಯಮವಿದೆ.ಇಲ್ಲದಿದ್ದರೆ ಕರ್ಮವು ವ್ಯರ್ಥವಾಗುತ್ತದೆ. ಅದನ್ನು ಸ್ವಲ್ಪ ಬಿಗಿಯಾಗಿ ಗಂಟು ಹಾಕಬೇಕು.ಇದು ಊರ್ಧ್ವದಲ್ಲಿರುವ ಜ್ಞಾನದ ಕೇಂದ್ರದತ್ತ ಮನಸ್ಸು ಮತ್ತು ಪ್ರಾಣಗಳನ್ನು ಮೇಲಕ್ಕೇರಿಸಿ ಜ್ಞಾನಪ್ರಬೋಧಕ್ಕೆ ಪೋಷಕವಾಗುತ್ತದೆ. ಇದೇ ನಿಯಮವು ಸ್ತ್ರೀಯರಿಗೂ ಅನ್ವಯಿಸುತ್ತದೆ. ಅವರೂ ಜಡೆ ಹಾಕಿಕೊಳ್ಳದೆ ಅಥವಾ ಕೂದಲನ್ನು ಗಂಟು ಹಾಕಿಕೊಳ್ಳದೇ ಯಾವ ಕರ್ಮವನ್ನೂ ಮಾಡಬಾರದು.

ಸ್ತ್ರೀಯರಿಗೆ ಚೂಡಾಕರ್ಮವು ಉಂಟೇ ಎಂಬ ಪ್ರಶ್ನೆ ಸಹಜ. ಹಿಂದೆ ಅವರಿಗೆ ಸಾಂಕೇತಿಕವಾಗಿ ಮಾಡುತ್ತಿದ್ದರು. ಈಗಲೂ ಕೇರಳದಲ್ಲಿ ಅದರ ಅವಶೇಷಗಳುಂಟು. ಅವರಿಗೆ ತಲೆಯನ್ನು ಪೂರ್ತಿ ಮುಂಡನಮಾಡಿಸಬಹುದು ಅಥವಾ ಶಿಖೆಯನ್ನು ಇಡಬಹುದು. ಸ್ತ್ರೀಯರು ಸಹಜವಾಗಿಯೇ ಕೋಮಲ ಪ್ರಕೃತಿಯವರು. ಕುಂಡಲಿನೀ ಶಕ್ತಿಯು ಪುರುಷರಿಗಿಂತ ಸ್ತ್ರೀಯರಲ್ಲಿ ವಿಶೇಷಪ್ರಮಾಣದಲ್ಲಿ ಕೆಲಸಮಾಡುತ್ತವೆ ಎಂದು ಯೋಗಸಾಹಿತ್ಯಗಳು ಕೊಂಡಾಡುತ್ತವೆ. ಭಕ್ತಿಯೂ ಅವರಿಗೆ ಸುಲಭವಾಗಿ ಒಲಿಯುತ್ತದೆ. ಜೀವಿಗಳನ್ನು ವಿಕಾಸಗೊಳಿಸುವ ವಿಶೇಷ ಜವಾಬ್ದಾರಿಯು ಅವರಿಗೆ ಪ್ರಕೃತಿಸಹಜವಾಗಿ ಒದಗಿಬಂದಿದೆ. ಅದಕ್ಕೆ ತಕ್ಕ ಮಾಂಗಲ್ಯದ ಕೇಂದ್ರಗಳು, ಅಂಗಾಂಗಗಳು ಅವರಲ್ಲಿ ವೈಶಿಷ್ಟ್ಯಪೂರ್ಣವಾಗಿದ್ದು ಅವುಗಳನ್ನು ಸಂರಕ್ಷಿಸಿಕೊಳ್ಳಬೇಕಾಗುತ್ತದೆ. ಸದಾ ಕೂದಲನ್ನು ಕತ್ತರಿಸಿಕೊಳ್ಳುವುದರಿಂದ ಅವುಗಳಲ್ಲಿ ದೋಷಗಳ ಸಂಕ್ರಮಣವಾಗುತ್ತವೆ. ಎಲ್ಲರಿಗೂ ಒಂದೇ ನಿಯಮ ಸರಿಯಲ್ಲ. ಸಂನ್ಯಾಸಿಗಳು ಮತ್ತು ಯತಿಸ್ಥಾನದಲ್ಲಿರುವ ಮಡಿಹೆಂಗಸರು ಕೇಶವಪನವನ್ನು ಆಯುರ್ವೃದ್ಧಿಗಾಗಿ ಮಾಡದೆ ಕೇವಲ ಪಾವಿತ್ರ್ಯಕ್ಕಾಗಿ ಮಾಡಿಕೊಳ್ಳುತ್ತಾರೆ.

 ಕ್ಷೇತ್ರ ಇತ್ಯಾದಿಗಳಲ್ಲಿ ದೇವರಿಗೆ ಕೇಶಸಮರ್ಪಣೆಯು(ಮುಂಡನ) ಮಂಗಲವಾದ ಕರ್ಮವೇ. ಹಿಂದೆ ಮೊದಲೇ ಸ್ನಾನಾದಿಗಳನ್ನು ಮಾಡಿ ಶುದ್ಧರಾಗಿ ನಂತರ ಮುಂಡನ ಮಾಡಿಸಿಕೊಂಡು ಭಗವದರ್ಪಣೆ ಮಾಡುತ್ತಿದ್ದರು. ಕಾಶಿಯಲ್ಲಿ ಮುಂಡನದ ಜಾಗವನ್ನು ಮುಂಡನ್ ಆಶ್ರಮ್ ಎಂದೇ ಕರೆಯುತ್ತಾರೆ. ಚೌಲದಲ್ಲಿ ಬಳಸುವ ದ್ರವ್ಯಗಳು,ಮಂತ್ರಗಳು, ಕತ್ತರಿಸುವುದರ ವಿಜ್ಞಾನ, ದೇವತೆಗಳೆಂದರೆ ಯಾರು,ನಾಪಿತನನ್ನು ನೋಡುವಿಕೆ- ಹೀಗೆ ಒಂದೊಂದು ವಿಷಯದಲ್ಲಿಯೂ ಅನೇಕ ಮರ್ಮಗಳನ್ನು ಋಷಿಗಳು ಇಟ್ಟಿದ್ದಾರೆ. ಒಂದೆರಡನ್ನು ಮಾತ್ರ ಇಲ್ಲಿ ವಿವೇಚಿಸಲಾಗಿದೆ.


ಸೂಚನೆ: 21/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, May 20, 2019

ಮರವು ನಮಗೆ ಆದರ್ಶವಾಗಬಲ್ಲದೇ -1 ? (Maravu namage aadrashavagaballade -1?)



ಗಿಡಮರಗಳನ್ನು ಯಾರು ಕಂಡಿಲ್ಲ? ಲೋಕದಲ್ಲಿ ನಾವು ಕಾಣುವ ಮರಗಳೆಲ್ಲ ತಮ್ಮ ಬೇರಿನ ಆಧಾರದ ಮೇಲೆಯೇ ನಿಲ್ಲತಕ್ಕವು. ಬಿತ್ತ ಬೀಜವು ಮೊದಲು ಮಣ್ಣಿನೊಳಗೆ ದೃಢಗೊಂಡು, ಜೊತೆಗೇ ಮಣ್ಣಿನ ಮೇಲ್ಪದರವನ್ನು ಸೀಳಿಕೊಂಡು ಬಂದು ಸಸಿಯಾಗಿ, ಗಿಡವಾಗಿ, ಮರವಾಗಿ ಬೆಳೆಯುತ್ತದೆ. ಮರವು ನಮಗೆ ಕಾಣುವಂತೆ ದೊಡ್ಡದಾಗಿ ಬೆಳೆದಷ್ಟೂ, ಜೊತೆಗೇ, ಮತ್ತು ಅದಕ್ಕಿಂತ ಮುಖ್ಯವಾಗಿ, ಬೇರು ಭದ್ರವಾಗುತ್ತ ಹೋಗಿರುತ್ತದೆ.

ಮನುಷ್ಯರು ಕಟ್ಟುವ ಕಟ್ಟಡಗಳ ಸಮಾಚಾರ ಬೇರೆ. ಕೆಲವೊಮ್ಮೆ ಬುನಾದಿಯು ಭದ್ರವಾಗಿಲ್ಲವಾಗಿದ್ದು, ಕಟ್ಟಡವು ಬಂದ ಸ್ವಲ್ಪವೇ ಕಾಲಕ್ಕೇ ಕಟ್ಟಡವು ತಾನೇ ತಾನಾಗಿ ಸೀಳು ತೋರಿ ಕುಸಿದು ಉರುಳಿಬೀಳುವಂತಾಗುವುದು! ಆದರೆ ಗಿಡಮರಗಳು ಹಾಗಾದಾವೆ? 

ಬುಡವನ್ನು ಭದ್ರಮಾಡಿಕೊಳ್ಳದೆ ಮರವು ಬೆಳೆದುದಿಲ್ಲ. ಬುಡವು ಗಟ್ಟಿಯಾಗುವ ಮುಂಚೆಯೇ ಬೆಳೆದುಕೊಂಡುಬಿಟ್ಟ ತಪ್ಪಿನಿಂದಾಗಿ ಮರವೊಂದು ಉರುಳಿಕೊಂಡಿತು – ಎಂಬುದಾಗಿ ನಾವು ಎಲ್ಲೂ ಕೇಳಿಲ್ಲ (ರೋಗ ಹತ್ತಿದ ಗಿಡದ ಮಾತು ಬೇರೆ). ಕೇಳಲು ಸಾಧ್ಯವೂ ಇಲ್ಲ. ಮರಗಳು ಅದೆಷ್ಟೆತ್ತರ ಬೆಳೆಯಬಲ್ಲವು! ಎಷ್ಟು ವಿಸ್ತಾರವಾಗಬಲ್ಲವು! ಇಷ್ಟಾಗಿ ನಿಂತ ಜಾಗದಲ್ಲೇ ಎಲ್ಲವನ್ನೂ ವ್ಯವಸ್ಥೆಮಾಡಿಕೊಳ್ಳಬಲ್ಲವು! ಬುಡಕ್ಕೆರೆದ ನೀರು ಸಮಸ್ತ ಶಾಖೋಪಶಾಖೆಗಳಿಗೂ ಸಲ್ಲುವುದು.

ಇಡೀ ವೃಕ್ಷವನ್ನು ಕಾಪಾಡುವ ಬೇರು ಮಾತ್ರ ಸಂಕೋಚದಿಂದಲೋ ಎಂಬಂತೆ ತೆರೆಯ ಮರೆಯಲ್ಲೇ – ಎಂದರೆ ನೆಲದ ಅಡಿಯಲ್ಲೇ – ಹುದುಗಿದ್ದು ತನ್ನ ಕಾರ್ಯವನ್ನು ಸದಾ ಸರ್ವದಾ ಮಾಡುತ್ತಲಿರುವುದು. ಆದರೆ ಬುಡಕ್ಕೇನಾದರೂ ಕೊಡಲಿ ಏಟು ಬಿದ್ದಿತೋ, ಇಡೀ ಮರವೇ ಉರುಳುವುದು: ಮರದ ಕಾಂಡ-ಬೇರುಗಳೇ ಮರದ ಆಧಾರ-ಸ್ತಂಭವಲ್ಲವೇ? ಕಾಣದ ಬೇರು ಅವ್ಯಕ್ತ, ಕಾಣುವ ಕಾಂಡ-ಶಾಖೆ-ಉಪಶಾಖೆ-ಪುಷ್ಪ-ಫಲಗಳು ವ್ಯಕ್ತ. ವ್ಯಕ್ತವಾದುದರ ಹಿಂದೆ ಆಧಾರಭೂತವಾದ ಅವ್ಯಕ್ತವಿದೆ. ಅವ್ಯಕ್ತವು ವ್ಯಕ್ತವನ್ನು ಸದಾಕಾಲ ರಕ್ಷಿಸುತ್ತದೆ. ಕೊಂಬೆಯೊಂದನ್ನು ಮುರಿದಷ್ಟಕ್ಕೆ ಮರವು ಸತ್ತುಹೋಗಿಬಿಡುವುದಿಲ್ಲ. ಆದರೆ ಮರದ ಬುಡ-ಬೇರುಗಳಿಗೆ ತೀವ್ರವಾದ ಹೊಡೆತ ಬಿತ್ತೋ, ಮರವು ತತ್ತರಿಸಿ ಹೋಗುತ್ತದೆ. ಇದನ್ನೇ “ಛಿನ್ನೇ ಮೂಲೇ ನೈವ ವೃಕ್ಷಂ ನ ಶಾಖಾ” ಎನ್ನುತ್ತಾರೆ.

ಇದಿಷ್ಟೂ ನಾವು ಸಾಧಾರಣವಾಗಿ ನೋಡುವ ಮರಗಳಿಗೆ ಸಲ್ಲುತ್ತದೆ. ಆದರೆ ಬೇರೊಂದು ವಿಚಿತ್ರವಾದ ಮರವೊಂದಿದೆಯಂತೆ. ಅದನ್ನು ಗೀತೆ-ಉಪನಿಷತ್ತುಗಳು ಹೇಳುತ್ತವೆ. ಅದರ ಬುಡವೇ ಮೇಲಿದೆಯಂತೆ. ಕೊಂಬೆಗಳು ಕೆಳಗಂತೆ!

“ಇಂತಹ ಮರವನ್ನು ಕಂಡಿದ್ದೀರಾ?” – ಎಂಬುದಾಗಿ ಶ್ರೀರಂಗ ಮಹಾಗುರುಗಳು ತಮ್ಮ ಶಿಷ್ಯರನ್ನು ಕೇಳಿದ್ದರು. ಯಾರು ಕಂಡಿರಲು ಸಾಧ್ಯ? ಇಲ್ಲವೆಂದೇ ಉತ್ತರವು ಸಹಜವಾಗಿಯೇ ಬಂದಿತು. “ನೀವೆಲ್ಲರೂ ಕಂಡೇ ಇರುವಿರಿ, ಕಾಣುತ್ತಲೂ ಇರುವಿರಿ” ಎಂಬ ಗುರುಗಳ ಮುಂದಿನ ಮಾತು ಮತ್ತೂ ಒಗಟಾಗಿಯೇ ಕಂಡಿತು.

“ಅಂತಹ ಮರವು ನೀವೇ ಆಗಿರುವಿರಿ” ಎಂದು ಹೇಳಿ ಮತ್ತೂ ಅಚ್ಚರಿಗೊಳಿಸಿದರು. ಅದು ಹೇಗೆಂದು ಕೇಳಿದ ಶಿಷ್ಯರಿಗೆ ಅವರಿತ್ತ ವಿವರಣೆ ಅದ್ಭುತವಾದದ್ದೇ. ನಾವೆಲ್ಲರೂ ಮೇಲ್ಬುಡದ ಮರಗಳೇ ಸರಿ ಏಕೆ? ಹೇಗೆ? ನಮ್ಮ ತಲೆಯೇ ಮೂಲ! ನಮ್ಮ ಕೈಕಾಲುಗಳೇ ಶಾಖೆಗಳು! (ತಲೆಯೇ ಮೂಲವೆಂದರೆ, ತಲೆಯೊಳಗಿನ ಮಸ್ತಿಷ್ಕವೇ ಮೂಲವೆಂದೇ ಅರ್ಥವಷ್ಟೆ). ಅದು ಮರೆಯಲ್ಲಿದ್ದು ಅವ್ಯಕ್ತವಾಗಿದೆ. ನಮ್ಮ ಮೈ-ಕೈ-ಕಾಲುಗಳೇ ಕಾಂಡ ಹಾಗೂ ಶಾಖೆಗಳು. (ಬೆರಳುಗಳನ್ನು ಉಪಶಾಖೆಗಳೆಂದು ಬೇಕಾದರೆ ಹೇಳೋಣವಂತೆ). ಇವುಗಳು ವ್ಯಕ್ತವಾಗಿವೆ. ವ್ಯಕ್ತವಾದುದೇ ಗೋಚರವಾಗುವುದು. ವ್ಯಕ್ತವಾದುದರಲ್ಲೇ ಚಲನ-ವಲನಗಳಾಗುವುದು. ಕೈಗೋ ಬೆರಳಿಗೋ ಉಗುರಿಗೋ ಘಾತವಾಯಿತೆನ್ನಿ, ಗಾಸಿಯಾಯಿತೆನ್ನಿ, ಅವು ಕತ್ತರಿಸಿಯೇ ಹೋದವೆನ್ನಿ – ಮನುಷ್ಯನಿನ್ನೂ ಬದುಕಿರಬಲ್ಲ! ಆದರೆ ತಲೆ ಹೋಯಿತೋ ಕಥೆ ಮುಗಿಯಿತು! ತಲೆ ಚೆನ್ನಾಗಿತ್ತೋ, ಮೈಯೆಲ್ಲ ಚೆನ್ನಾಗಿರುವುದು. ತಲೆ ಸರಿಯಿಲ್ಲವೋ ಮೈಯೆಲ್ಲವೂ ಚೆನ್ನಾಗಿದ್ದರೂ ಪ್ರಯೋಜನವಿಲ್ಲ. ವಾಸ್ತವವಾಗಿ ತಲೆಯು ಸರಿಯಿಲ್ಲದಿದ್ದಲ್ಲಿ ಮೈಯೆಲ್ಲಾ ಚೆನ್ನಾಗಿ ಬಹುಕಾಲವಿರಲು ಸಾಧ್ಯವೇ ಇಲ್ಲ! ಎಂದೇ ಶಿರಸ್ತ್ರಾಣ(ಹೆಲ್ಮೆಟ್)ವೆಂದು ತಲೆಗೇ ಮುಖ್ಯ ರಕ್ಷೆ ಕೊಡುವುದು.

ನಮ್ಮ ಸಾಧಾರಣ ಅನಿಸಿಕೆಯೆಂದರೆ ನಾವು ನಿಲ್ಲಲು ಕಾಲೇ ಆಧಾರವೆಂಬುದು. ಅದರೆ ಗುರುಗಳ ಉತ್ತರ ಸಾಧಾರಣ ಅನಿಸಿಕೆಯನ್ನು “ಬುಡಮೇಲು ಮಾಡು”ವಂತಹುದು! ವಿಶೇಷವಾದ ಅರಿವುಳ್ಳ ಜ್ಞಾನಿಗಳ ನೋಟವು ನಮ್ಮ ಸಾಮಾನ್ಯ “ಅರಿವ”ನ್ನು ತಲೆಕೆಳಗಾಗಿಸಿದರೂ ಮಾರ್ಮಿಕವಾಗಿರುತ್ತದೆ. ಏನು ಇಲ್ಲಿಯ ಮರ್ಮ? ಇದನ್ನು ಮುಂದೆ ನೋಡೋಣ.


ಸೂಚನೆ: 18/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಶ್ರೀ ನರಸಿಂಹಾವತಾರದ ವೈಶಿಷ್ಟ್ಯ (Shri Narasimhavatarada vaishishtya)

ಲೇಖಕರು:  ಡಾ. ಎಂ. ಜಿ. ಪ್ರಸಾದ್


ಪೀಠಿಕೆ:

ಭಗವಂತನು ಸರ್ವವ್ಯಾಪಿ, ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿ. ಈ ತತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡು ಜೀವನದಲ್ಲಿ ಉದಾತ್ತಧ್ಯೇಯವನ್ನು ಹೊಂದಿಪರರಿಗೆ ಹಿಂಸೆಮಾಡದೆ ಜೀವನಮಾಡುವವರೇ ಶಿಷ್ಟರು. ಇದಕ್ಕೆ ವಿರುದ್ಧವಾಗಿ ಪರಮಾತ್ಮ ತತ್ವವನ್ನು ತಿರಸ್ಕರಿಸಿ ತನ್ನನ್ನೇ ಭಗವಂತನೆಂದುಕೊಂಡು ಪರರನ್ನು ಹಿಂಸಿಸುವರೇ ದುಷ್ಟರು. ಯಾವಾಗ ದುಷ್ಟರ ಹಾವಳಿಯು ಮಿತಿಮೀರುತ್ತದೆಯೋ ಆಗ ಶಿಷ್ಟರ ರಕ್ಷಣೆಯನ್ನು ಮಾಡಿ ದುಷ್ಟರನ್ನು ಶಿಕ್ಷಿಸುವುದಕ್ಕಾಗಿ ಭಗವಂತನು ವ್ಯಕ್ತವಾಗುವುದೇ ಅವತಾರ. ಭಗವಂತನ ಎಲ್ಲ ಅವತಾರಗಳಲ್ಲಿ ಶ್ರೀ ನರಸಿಂಹಾವತಾರವು ಅತಿ ವೈಶಿಷ್ಟ್ಯವನ್ನು ಹೊಂದಿದೆ. ನರಸಿಂಹಸ್ವಾಮಿಯ ದೇವಾಲಯಗಳೂ ಬಹಳವಾಗಿವೆ. ಭಗವಂತನ ಈ ಅವತಾರದ ವೈಭವವು ಅಥರ್ವವೇದ ಸಂಹಿತೆ, ನಾರಸಿಂಹ ತಾಪನೀಯ ಉಪನಿಷತ್ತು, ಮಹಾಭಾರತ, ಹರಿವಂಶ , ಶ್ರೀಮದ್ಭಾಗವತ ಮಹಾ ಪುರಾಣ ಮುಂತಾದ ಮಹಾಗ್ರಂಥಗಳಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ. ಈ ಅವತಾರದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಇದರ ಹಿಂದಿರುವ ತತ್ವ ಹಾಗು ವೈಶಿಷ್ಟ್ಯವು ರೋಚಕವಾಗಿದೆ ಹಾಗು ಸ್ಪೂರ್ತಿಯುತವಾಗಿದೆ.                                                                                           

ಶ್ರೀಮದ್ಭಾಗವತ ಮಹಾ ಪುರಾಣದ  ಮಾತು:

” ಸತ್ಯಂ ವಿಧಾತುಂ ನಿಜಭೃತ್ಯ ಭಾಷಿತಂ ವ್ಯಾಪ್ತಿಮ್ ಚ ಭೂತೇಷ್ವಖಿಲೇಷುಚಾತ್ಮನಃ ಅದೃಶ್ಯತಾತ್ಯದ್ಭುತ ರೂಪಮುದ್ವಹನ್ ಸ್ತಂಭೇ ಸಭಾಯಾ೦ ನ ಮೃಗಂ ನ ಮಾನುಷ೦”

"ಒಡನೆಯೇ ಅಲ್ಲಿ ಸಭೆಯ ಕಂಬದಲ್ಲಿ ಅತ್ಯದ್ಭುತವಾದ ರೂಪದಿಂದ ಪ್ರಕಟಗೊಂಡ ಪರಮಪುರುಷ, ಕೇವಲ ಮೃಗ ಎನ್ನುವಂತಿಲ್ಲ. ಕೇವಲ ಮನುಷ್ಯ ಎಂದೂ ಹೇಳುವಂತಿಲ್ಲ. ಇಂತಹ ಮೃಗ-ಮಾನುಷರೂಪಗಳೆರಡೂ ಕೂಡಿದ ರೂಪದಿಂದ ಕಾಣಿಸಿಕೊಂಡನು. ತನ್ನ ಭಕ್ತ ನಾದ  ಪ್ರಹ್ಲಾದ ಕುಮಾರನ ಮತ್ತು ಬ್ರಹ್ಮದೇವರ ಮಾತುಗಳನ್ನು ಸತ್ಯಗೊಳಿಸುವುದಕ್ಕೋಸ್ಕರವೂ ಮತ್ತು ತಾನು ಸಮಸ್ತ ಭೂತಗಳಲ್ಲಿಯೂ ವ್ಯಾಪಿಸಿರುವೆನೆಂಬುದನ್ನು ಪ್ರಮಾಣಿಸುವುದೊಕ್ಕಸ್ಕರವೂ ಸ್ವಾಮಿಯು ಹಾಗೆ ಪ್ರಕಟವಾದನು. "     

ಅವತಾರಕ್ಕೆ ಮೂರು  ಕಾರಣಗಳು: 

ಈ ವಿಶಿಷ್ಟವಾದ ಅವತಾರಕ್ಕೆ ಮೂರು ಕಾರಣಗಳನ್ನು ಕಾಣಬಹುದು. ಮೊದಲನೆಯದಾಗಿ ಹುಟ್ಟಿನಿಂದಲೇ ಭಗವಂತನಲ್ಲಿ ಅನನ್ಯ ಹಾಗು ಸಂಶಯರಹಿತ ಪೂರ್ಣ ಭಕ್ತಿಯುಳ್ಳ ಪ್ರಹ್ಲಾದನ ಮಾತನ್ನು ಹಾಗು ದೈತ್ಯರಾಜನಾದ ಹಿರಣ್ಯಕಶಿಪುವು ಕೇಳಿದ ವಿಶೇಷವಾದ ವರವನ್ನು ನೀಡಿದ ಸೃಷ್ಟಿಕರ್ತ ಬ್ರಹ್ಮನ ಮಾತನ್ನು ನಿಜಗೊಳಿಸಿವುದು. ಎರಡನೆಯದಾಗಿ ತೀವ್ರವಾದ ತಪಸ್ಸು ಹಾಗು ಸಾಧನೆ ಮಾಡಿ ಸೃಷ್ಟಿಕರ್ತ ಬ್ರಹ್ಮನನ್ನು ಒಲಿಸಿಕೊಂಡ ಹಿರಣ್ಯಕಶಿಪುವಿನಂತಹ ಯಾರೇ  ಆಗಲಿ, ಎಲ್ಲೆಡೆಯೂ ಇರುವ ಹಾಗು ಎಲ್ಲಕ್ಕೂ ಮೂಲವಾಗಿರುವ ಪರಮಾತ್ಮನ ಶಕ್ತಿಯನ್ನು ಯಾರೂ ಮೀರಲು ಸಾಧ್ಯವಿಲ್ಲವೆಂದು ತೋರಿಸುವುದು. ಮೂರನೆಯದಾಗಿ ಪರಮಾತ್ಮನು  ಶಕ್ತಿಯ ರೂಪದಲ್ಲಿ ಪ್ರಪಂಚದ ಎಲ್ಲೆಡೆ ಅಂದರೆ ಎಲ್ಲ ಚೈತನ್ಯವಿರುವ ಜೀವಜಂತುಗಳಷ್ಟೇ ಅಲ್ಲದೆ ಎಲ್ಲೆಡೆಯಿರುವ ಜಡವಸ್ತುಗಳಲ್ಲಿಯೂ ಸಹ ತುಂಬಿಕೊಂಡಿದ್ದಾನೆ ಎಂದು ತೋರಿಸುವುದು.                                          .                                             

ಭಯವನ್ನು ದಾಟಿದ್ದ ಭಕ್ತ ಪ್ರಹ್ಲಾದ: 

ಸರ್ವಶಕ್ತನಾದ ಪರಮಾತ್ಮನನ್ನು ತಿರಸ್ಕರಿಸಿ ತನನ್ನೇ ಸರ್ವಶಕ್ತನೆಂದು ತನ್ನನ್ನೇ ಎಲ್ಲರೂ ಪೂಜಿಸಬೇಕೆಂದು ತನ್ನ ರಾಜ್ಯದಲ್ಲಿ ನಿಯಮವನ್ನು ಜಾರಿಗೆ ತಂದಿದ್ದರೂ  ರಾಕ್ಷಸ ರಾಜ ಹಿರಣ್ಯಕಶಿಪುವಿಗೆ  ತನ್ನ ಮಗನಾದ ಬಾಲಕ ಪ್ರಹ್ಲಾದನ ಮೇಲೆ ಅದನ್ನು ಜಾರಿಗೆ ತರಲಾಗಲಿಲ್ಲ. ಏಕೆಂದರೆ ಪ್ರಹ್ಲಾದನ ಒಳಗಣ್ಣು ಅವನ ಹುಟ್ಟಿನಿಂದಲೇ ಬೆಳೆದಿದ್ದ ಪರಮಾತ್ಮನ ಅನನ್ಯ ಭಕ್ತಿಯಿಂದ ತೆರೆದಿತ್ತು. ಆ ತೆರೆದಿದ್ದ ಒಳಗಣ್ಣಿನಿಂದ ಹಾಗು ಹೊರಗಣ್ಣಿನಿಂದ ಪ್ರಹ್ಲಾದನು ಎಲ್ಲೆಡೆಯೂ ಮತ್ತು ತನ್ನ ತಂದೆಯಲ್ಲಿಯೂ ಆ ಪರಮಾತ್ಮನ ಶಕ್ತಿಯ ಬೆಳಕನ್ನು ನೋಡುತ್ತಿದ್ದನು. ಸದಾ ಕಾಲದಲ್ಲಿಯೂ ಎಲ್ಲೆಡೆಯೂ ಹರಡಿದ್ದ ಬೆಳಕನ್ನು ನೋಡುತ್ತಿದ್ದ ಪ್ರಹ್ಲಾದನಿಗೆ ಮರಣಭಯವೂ ಇರಲಿಲ್ಲ. ಆದ್ದರಿಂದಲೇ ತಂದೆ ವಿಧಿಸಿದ ಮರಣ ಶಿಕ್ಷೆಯನ್ನು  ಸದಾ ಪರಮಾತ್ಮನ ಸ್ಮರಣೆಯಿಂದ ಬೆಳಕನ್ನು ನೋಡುತ್ತಾ ಯಾವ ಭಯವೂ ಇಲ್ಲದೆ ಪರಮಾತ್ಮನ ರಕ್ಷಣೆಯಲ್ಲಿದ್ದನು. 

ಕಂಬದಿಂದ ಹೊರಬಂದ  ಶ್ರೀ ನರಸಿಂಹ ಸ್ವಾಮಿಯು ಅತಿ ಕೋಪದಿಂದ  ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ  ಯಾರಿಗೂ ಹಾಗೂ ಶ್ರೀ ಲಕ್ಷ್ಮಿಗೂ ಧೈರ್ಯವಾಗಲಿಲ್ಲ. ಆದರೆ ಪ್ರಹ್ಲಾದನು ಪರಮಾತ್ಮನ ಬೆಳಕನ್ನು ಎಲ್ಲೆಡೆ ನೋಡುತ್ತಾ ಭಯವೇ ಇಲ್ಲದೆ ಶ್ರೀ ನರಸಿಂಹ ಸ್ವಾಮಿಯ ಬಳಿಗೆ ಹೋಗಿ ಮುಗ್ಧತೆಯಿಂದ ಭಕ್ತಿಯಿಂದ ಸ್ತುತಿಸಿದ. ಆ ಶುದ್ಧ ಮುಗ್ಧತೆಗೆ ಕರಗಿದ ಶ್ರೀ ನರಸಿಂಹ ಸ್ವಾಮಿಯು ಶಾಂತನಾಗಿ ಪ್ರಹ್ಲಾದನನ್ನು ಹರಸಿದನು. ಅಷ್ಟೇ ಅಲ್ಲದೆ ಯಾರೇ ಆಗಲಿ ಪ್ರಹ್ಲಾದನಂತೆ ಸದಾ ಶುದ್ಧ ಮುಗ್ಧ ಅನನ್ಯ ಭಕ್ತರಾಗುತ್ತಾರೆಯೋ ಅವರಿಗೂ ಶ್ರೀ ನರಸಿಂಹ ಸ್ವಾಮಿಯ ಕೃಪೆ ಹಾಗು  ಅಂತರ್ದರ್ಶನವಾಗುತ್ತದೆ. ಆದ್ದರಿಂದಲೇ ಪ್ರಹ್ಲಾದನು ಭಕ್ತರಲ್ಲಿ ಅಗ್ರಗಣ್ಯ. ಎಲ್ಲರೂ ಪ್ರಹ್ಲಾದನನ್ನು ಸ್ಮರಿಸುತ್ತಾ ಅವನನ್ನು ಹಾಗು ಶ್ರೀನರಸಿಂಹ ಸ್ವಾಮಿಯನ್ನು ನಮ್ಮ ಹೃದಯದಲ್ಲಿ ಸ್ಥಾಪಿಸಿ ನಮಗೂ ಸದಾ ನಿರ್ಭಯತೆಯನ್ನು ಕರುಣಿಸೆಂದು ಪ್ರಾರ್ಥಿಸೋಣ.

Wednesday, May 15, 2019

ಕ್ಷೌರಕರ್ಮವೂ ಒಂದು ಸಂಸ್ಕಾರವೇ - 1? (Kshoura karmavu ondu samskarave - 1?)

ಲೇಖಕರು: ತಾರೋಡಿ ಸುರೇಶ



ಚೂಡಾಕರ್ಮವು ಈ ಸಂಸ್ಕಾರದ ಶಾಸ್ತ್ರೀಯವಾದ ನಾಮಧೇಯ.ಇದನ್ನು ರೂಢಿಯಲ್ಲಿ ಚೌಲ ಎಂದೂ ಕರೆಯುತ್ತಾರೆ.ಎಲ್ಲ ಗೃಹ್ಯ-ಧರ್ಮಸೂತ್ರಕಾರರು ಮಾನ್ಯ ಮಾಡಿದ್ದಾರೆ.ಚೂಡಾ ಎಂದರೆ ಶಿಖೆ ಎಂದರ್ಥ. ಮೊಟ್ಟಮೊದಲನೆಯ ಶಿಖೆಯನ್ನು ಇಡಿಸುವ ಕರ್ಮವಾಗಿರುವುದರಿಂದ ಮಹತ್ವವುಳ್ಳದ್ದಾಗಿದೆ.

ಆಧುನಿಕರು  ಸೌಕರ್ಯ ಮತ್ತು ಸೌಂದರ್ಯಕ್ಕಾಗಿ ಬಂದ ಪದ್ಧತಿ ಎನ್ನುತ್ತಾರೆ. ಕೇಶವು ಹೆಚ್ಚಿದ್ದರೆ ಹೇನುಗಳು ಮತ್ತು ಇತರ ಕೊಳೆಗಳು ಮಲಿನಗೊಳಿಸುವದರಿಂದ ಕೇಶವಪನವು ಸೌಕರ್ಯ. ತಲೆಭಾರ ಕಡಿಮೆ ಮಾಡುವುದರಿಂದ ಸೌಕರ್ಯ. ನರಬಲಿಗೆ ಪರ್ಯಾಯ. ಕ್ರಮೇಣ ಮಂತ್ರ ಇತ್ಯಾದಿಗಳನ್ನು ಭಯದ ಕಾರಣದಿಂದ ಸೇರಿಸಿ ಧಾರ್ಮಿಕ ರೂಪ ಕೊಟ್ಟರು ಎಂದು ಅಭಿಪ್ರಾಯಪಡುತ್ತಾರೆ. ಋಷಿಗಳು ಸೌಂದರ್ಯವನ್ನು, ಸೌಕರ್ಯವನ್ನು ತಿರಸ್ಕರಿಸಿಲ್ಲ. ಆದರೆ ಅಷ್ಟೇ ಆದರೆ ಅದನ್ನು ಸಂಸ್ಕಾರವೆಂದು ಕರೆದು ಇಷ್ಟು ಮಹತ್ವವನ್ನು ಕೊಡಬೇಕಾಗಿರಲಿಲ್ಲ. ಕೇವಲ ಲೌಕಿಕ ಸಂಸ್ಕಾರವೇ ಸಾಕಾಗುತ್ತಿತ್ತು. ನಾವು ಹಿಂದಿನ ಸಂಸ್ಕಾರಗಳಲ್ಲಿ ಗಮನಿಸಿರುವಂತೆ ದೀರ್ಘಾಯುಸ್ಸು, ಸಾತ್ವಿಕವಾದ ಕೀರ್ತಿ, ಮತ್ತು ಮಾಂಗಲ್ಯಕ್ಕೋಸ್ಕರ ಮಾಡಬೇಕು ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಮಂತ್ರಗಳ ಅಭಿಪ್ರಾಯವೂ ಇದನ್ನೇ ಹೇಳುತ್ತವೆ. ಕ್ಷೌರದ ಅಂಗಡಿಯನ್ನು ನಮ್ಮ ದೇಶದಲ್ಲಿ ‘ಆಯುಷ್ಕರ್ಮಶಾಲಾ’ ಎಂದೂ, ಕೇಶವಪನವನ್ನು ‘ಆಯುಷ್ಕರ್ಮ’ವೆಂದೂ ಕರೆಯುತ್ತಿದ್ದರು. “ಇದು ದೀರ್ಘಾಯಸ್ಸು ಮತ್ತು ಶುದ್ಧಿಯನ್ನು ಉಂಟುಮಾಡುವ ಕರ್ಮ” ಎಂದು ಶ್ರೀರಂಗಮಹಾಗುರುಗಳು, ಚಿಕ್ಕದಾಗಿ, ಚೊಕ್ಕವಾಗಿ ಒಂದೇ ವಾಕ್ಯದಲ್ಲಿ ಸಾರಸರ್ವಸ್ವವನ್ನೂ ಹೇಳಿದ್ದಾರೆ.

ಈ ಸಂಸ್ಕಾರದ ಸಾಮಾನ್ಯವಾದ ಆಚರಣೆ ಹೀಗಿದೆ. ಮೂರನೆಯ ವರ್ಷದಲ್ಲಿ, ಪುನರ್ವಸು ನಕ್ಷತ್ರದಲ್ಲಿ, ಅಥವಾ ಐದನೆಯ ವರ್ಷದಲ್ಲಿ ಮಾಡಬೇಕು. ಕೊನೇಪಕ್ಷ ಉಪನಯನದ ಜೊತೆಯಲ್ಲಿಯಾದರೂ ಮಾಡಲೇಬೇಕಾದ ಕರ್ಮವಿದು. ಶ್ರೀರಂಗಮಹಾಗುರುಗಳ ಮೂರನೆಯ ವರ್ಷ ಎಂದಿದ್ದರು. ಇದನ್ನು ವಿಷಮಸಂಖ್ಯೆಯ ವರ್ಷದಲ್ಲಿ ಮತ್ತು ಹಗಲಿನಲ್ಲಿಯೇ ಮಾಡಬೇಕು. ತಾಯಿಯು ಗರ್ಭವತಿಯಾಗಿದ್ದರೆ ಮಾಡಬಾರದು ಎಂದೂ ಶಾಸ್ತ್ರಗಳು ಎಚ್ಚರಿಸುತ್ತವೆ. ತಣ್ಣೀರಿಗೆ ಬಿಸಿನೀರನ್ನು ಸೇರಿಸಿ ಅದಕ್ಕೆ ಬೆಣ್ಣೆ,ತುಪ್ಪ ಮತ್ತು ಮೊಸರನ್ನು ಬೆರೆಸಬೇಕು. ಕ್ಷೌರ ಮಾಡಬೇಕಾದ ಜಾಗಕ್ಕೆ ಈ ದ್ರವ್ಯವನ್ನು ಸವರಬೇಕು. ಶಲಲೀ ಔದುಂಬರ ಮತ್ತು ಧರ್ಭೆಯನ್ನು ಸೇರಿಸಿ ಕೇಶವನ್ನು ಮೇಲಕ್ಕೆತ್ತಬೇಕು. ಮೊದಲು ತಂದೆಯು ಮೂರು ಕೂದಲನ್ನು ದರ್ಭೆಯೊಂದಿಗೆ ಹಿಡಿದು ನಾಲ್ಕು ದಿಕ್ಕುಗಳಲ್ಲಿಯೂ ಕತ್ತರಿಸಬೇಕು. ಉಳಿದ ಕೂದಲನ್ನು ನಾಪಿತನು ಕತ್ತರಿಸುತ್ತಾನೆ. ತಾಯಿಯು ಗೋಮಯವಿರುವ ಪಾತ್ರೆಯಲ್ಲಿ ಕತ್ತರಿಸಿದ ಕೂದಲನ್ನು ಸಂಗ್ರಹಿಸಿ ಅತ್ತಿಮರದ ಬುಡದಲ್ಲಿ ಹೂಳುತ್ತಾಳೆ ಅಥವಾ ಹಸುವಿನ ಕೊಟ್ಟಿಗೆಯಲ್ಲಿ ಹಾಕುವ ರೂಢಿಯೂ ಇದೆ. ನಂತರ ತಂದೆಯು ಸವಿತೃ ದೇವತೆಯನ್ನು ಧ್ಯಾನಿಸುತ್ತಾ ನಾಪಿತನನ್ನು ನೋಡುತ್ತಾನೆ.  ಮಗುವಿಗೆ ಬಿಸಿ ನೀರಿನ ಸ್ನಾನ,ಅಲಂಕಾರ ಮಾಡಿ ದಕ್ಷಿಣದಲ್ಲಿ ಕುಳಿತಿರುವ ಬ್ರಹ್ಮನಿಗೆ ಗೋದಾನ ಕೊಡಬೇಕು. ಅನಂತರ ಬ್ರಹ್ಮೋದ್ವಾಸನ, ಅಗ್ನಿಯ ಉಪಸ್ಥಾನ, ಭೋಜನ ಮಾಡಿಸಿ ಆಶೀರ್ವಾದವನ್ನು ಪಡೆಯಬೇಕು. ಅನ್ಯಾನ್ಯ ಸಂಪ್ರದಾಯಗಳಲ್ಲಿ ಸಣ್ಣ-ಪುಟ್ಟ ವ್ಯತ್ಯಾಸಗಳು ಇದ್ದರೂ ಇವಿಷ್ಟೂ ಸ್ಥೂಲವಾದ ಕಲಾಪಗಳು. ಎಲ್ಲ ಘಟ್ಟಗಳಲ್ಲಿಯೂ ಸೂಕ್ತವಾದ ಮಂತ್ರ ಪ್ರಯೋಗವಿರುತ್ತದೆ. ಆಯುರ್ವೇದವು  ಚೂಡಾಕರ್ಮವು ಆಯುರ್ವೃದ್ಧಿ, ಪಾಪಪರಿಹಾರಕ, ಹರ್ಷಪ್ರದಾಯಕ, ಸೌಭಾಗ್ಯದಾಯಕ ಎಂದು ಪ್ರಶಂಸೆ ಮಾಡಿದೆ. 

ಪೌಷ್ಟಿಕಂ ವೃಷ್ಯಂ ಆಯುಷ್ಯಂ ಶುಚಿರೂಪಂ ವಿರಾಜನಂ!
ಕೇಶಶ್ಮಶ್ರುನಖಾದೀನಾಂ ಕರ್ತನಂ ಸಂಪ್ರಸಾದನಂ!!
ಎಂದು ಚರಕಮುನಿಯು ಹೇಳುತ್ತಾನೆ. ಆತನ ಮಾತಿನಲ್ಲಿ ತಾತ್ವಿಕವಾದ ಅಂಶ, ಭೌತಿಕ ಆರೋಗ್ಯ, ಸೌಂದರ್ಯ, ಸೌಕರ್ಯಗಳೆಲ್ಲವೂ ಸೇರಿದೆ. ಅವುಗಳ ವಿವರಗಳನ್ನು ಮುಂದೆ  ಗಮನಿಸೋಣ. (ಮುಂದುವರೆಯುವುದು).


ಸೂಚನೆ: 14/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, May 14, 2019

ವಿವೇಕದ ದಾರಿ (vivekada daari)

ಲೇಖಕರು:  ಮೈಥಿಲೀ ರಾಘವನ್


ಹಿಂದೊಮ್ಮೆ ಕಾಶೀ ನಗರದಲ್ಲಿ ಹೀಗೊಂದು ವಿಚಿತ್ರ ಪದ್ಧತಿ ಜಾರಿನಲ್ಲಿತ್ತು. ಅಲ್ಲಿಯ ಪ್ರಜೆಗಳಲ್ಲಿ ಯಾರಾದರೂ ಸಿಂಹಾಸನವನ್ನೇರಿ ಐದು ವರ್ಷಗಳಕಾಲ ತಮ್ಮಿಚ್ಚೆಯಂತೆ ರಾಜ್ಯವಾಳಬಹುದು. ಆ ಕಾಲಾವಧಿಯ ನಂತರ ಅವರನ್ನು ಗಂಗಾನದಿಯ ಆಚೆಯ ದಡದಲ್ಲಿದ್ದ ದಟ್ಟವಾದ ಕಾಡಿನಲ್ಲಿ ಕೈಕಾಲುಗಳನ್ನು ಬಂಧಿಸಿ ಕಾಡುಮೃಗಗಳ ಪಾಲಿಗೆ ಎಸೆದುಬಿಡಲಾಗುವುದು. ಅನೇಕರು ಅಧಿಕಾರದ ಆಸೆಯಿಂದಾಗಿ ರಾಜನಾಗಲು ಮುಂಬಂದು ನಂತರ ಘೋರವಾದ ಸಾವನ್ನೆದುರಿಸಿದರು. ಒಮ್ಮೆ ಯುವಕನೊಬ್ಬನು ಈ ಸಾಹಸದ ಕಾರ್ಯಕ್ಕೆ ಕೈ ಹಾಕಿದ. ಐದು ವರ್ಷಗಳಕಾಲ ಅತ್ಯಂತ ಶ್ರದ್ಧೆಯಿಂದ ಪ್ರಜೆಗಳ ಹಿತದೃಷ್ಟಿಯೊಂದಿಗೆ ರಾಜ್ಯವಾಳಿದ. ಆಡಳಿತದ ಅವಧಿ ಮುಗಿದಂತೆಯೇ ಅವನನ್ನು ದೋಣಿಯಲ್ಲಿ ಕುಳ್ಳಿರಿಸಿ ಕರೆದೊಯ್ಯ ಬೇಕಿತ್ತು. ಗಂಗೆಯ ದಡದವರೆಗೂ ಸಂಭ್ರಮದ ಮೆರವಣಿಗೆ ಸಾಗಿತು. ರಾಜನು ಹಸನ್ಮುಖನಾಗಿ ರಥದಲ್ಲಿ ಆಸೀನನಾಗಿದ್ದ. ಪ್ರಜೆಗಳೆಲ್ಲರಿಗೂ ಆತನನ್ನು ನೋಡಿ ಅತ್ಯಾಶ್ಚರ್ಯವಾಯಿತು. ಕ್ರೂರವಾದ ಸಾವನ್ನಪ್ಪಲು ತೆರಳಿರುವವನಲ್ಲಿ ಈ ನಗುಮುಖ, ಸಂತೋಷವೇ!? ದೋಣಿಯು ಮುಂದೆ ಸಾಗಿತು. ಆದರೂ ಅವನು ಹಸನ್ಮುಖಿಯಾಗಿಯೇ ಇದ್ದ. ನಾವಿಗನು ಸಂಶಯದಿಂದ ಕೇಳಿದ- ನದಿಯಲ್ಲಿ ದುಮುಕಿ ತಪ್ಪಿಸಿಕೊಳ್ಳುವ ಉಪಾಯವೇನಾದರೂ ಹೂಡಿದ್ದೀಯೋ? ಅದು ಸಾಧ್ಯವಿಲ್ಲ. ರಾಜನು ಉತ್ತರಿಸಿದ ನಾನೆಲ್ಲಿಗೆ ತಪ್ಪಿಸಿಕೊಂಡು ಹೋಗಬೇಕಾಗಿದೆ? ಖಂಡಿತವಾಗಿಯೂ ಇಲ್ಲ ನಾವಿದನು ಅಚ್ಚರಿಯಿಂದ ಬೆರಗಾದನು ಅಯ್ಯಾ, ನಿನ್ನ ಮುಂದಿನ ಭವಿಷ್ಯ ತಿಳಿದಿದ್ದರೂ ಹೇಗೆ ಇಷ್ಟು ಪ್ರಸನ್ನನಾಗಿರುವೆ? ರಾಜನೆಂದ ಆಚೆಯ ದಡ ಸಮೀಪಿಸಿದಂತೆ ನಿನಗೇ ತಿಳಿಯುವುದು.

ದಡ ಸಮೀಪಿಸಿದಂತೆ ಎದುರಾದ ದೃಶ್ಯದಿಂದ ನಾವಿಕನ ಆಶ್ಚರ್ಯ ಎಣೆಯಿಲ್ಲದಾಯಿತು. ಅಲ್ಲಿ ಇದ್ದ ದಟ್ಟವಾದ ವನಪ್ರದೇಶ ಮರೆಯಾಗಿ ಸುಂದರವಾದದ್ದೊಂದು ಪಟ್ಟಣ ಕಾಣಿಸುತ್ತಿತ್ತು. ದಡದಲ್ಲಿ ಅನೇಕ ಜನ ಮಂತ್ರಿ-ಪ್ರಮುಖರು ರಾಜನನ್ನು ಸ್ವಾಗತಿಸಲು ಪೂರ್ಣಕುಂಭದೊಂದಿಗೆ ಕಾದಿದ್ದರು! ರಾಜನು ಮುಗುಳ್ನಗೆಯೊಂದಿಗೆ ವಿವರಿಸಿದ ನಾನು ನನ್ನ ಆಡಳಿತದಕಾಲದಲ್ಲಿ
ಕಾಶೀ ರಾಜ್ಯವನ್ನಾಳುವುದರ ಜೊತೆಜೊತೆಗೆ ರಹಸ್ಯವಾಗಿ ಕಾಡನ್ನು ಪಟ್ಟಣವನ್ನಾಗಿ ಮಾರ್‍ಪಡಿಸುವ ಕೆಲಸವನ್ನೂ ಕೈಗೊಂಡೆ. ಆಪ್ತರಾದ ಕೆಲವರನ್ನೂ ರಹಸ್ಯವಾಗಿ ಇಲ್ಲಿ ಕಳುಹಿಸಿದೆ; ಈಗ ನಾನು ಈ ಪಟ್ಟಣದ ಅರಸ!

ಜೀವನದ ಗುಟ್ಟನ್ನು ತಿಳಿಸುವ ಕಥೆಯಿದು. ’ಕಾಶೀಕ್ಷೇತ್ರಂ ಶರೀರಂ’ ಎಂದು ಶಂಕರಭಗವದ್ಪಾದರು ಕೊಂಡಾಡಿದಂತೆ ಈ ಶರೀರವೇ ಕಾಶೀಕ್ಷೇತ್ರ. ಇದರೊಳಗೆ ವಾಸವಾಗಿರುವ ಜೀವನೇ ಸಕಲ ಭೋಗಗಳನ್ನನುಭವಿಸುವ ಅರಸ. ಭೋಗಗಳಷ್ಟನ್ನೇ ಅರಸಿ ಮನಸೋಚ್ಚೆ ವರ್ತಿಸಿದರೆ ಜೀವಿತಾವಧಿ ಕಳೆದಾಗ ತನ್ನ ಕರ್ಮಗಳೆಂಬ ಪಾಶಗಳಿಂದಲೇ ಕಟ್ಟಲ್ಪಟ್ಟು ಅದರ ಫಲವನ್ನು ಅನುಭವಿಸಬೇಕಾಗುವುದು. ಆದರೆ ವಿವೇಕಿಯಾದವನು ಇಹಲೋಕದ ಸುಖಾನುಭವದ ಜೊತೆಯಲ್ಲಿಯೇ ಪರಲೋಕದ ಸುಖಚಿಂತೆಯನ್ನೂ ಸಹ ಮಾಡುತ್ತಾನೆ. ಸತ್ಕರ್ಮಗಳ ಆಚರಣೆಯಿಂದಾಗಿ ಜೀವಿಯು ಕರ್ಮಬಂಧನದಿಂದ ಬಿಡಿಸಿಕೊಂಡು ದೇಹಾವಸಾನದನಂತರವೂ ಸುಖವನ್ನೇ ಪಡೆಯುತ್ತಾನೆ.

ಶ್ರೀರಂಗಮಹಾಗುರುಗಳು  “ ಪರಮಾತ್ಮದರ್ಶನವು ಎಲ್ಲ ಮಾನವರ ಜನ್ಮಸಿದ್ಧವಾದ ಹಕ್ಕು. ಇದಕ್ಕಾಗಿ ಹೋರಾಡಬೇಕು. ಮಾನವ ದೇಹ ಯೋಗ(ಭಗವಂತನೊಡನೆ ಕೂಡುವುದು)-ಭೋಗಗಳೆರಡಕ್ಕು ನೆಲೆಮನೆಯಾಗಿದೆ” ಎಂಬುದನ್ನು ಒತ್ತಿ ಹೇಳಿದ್ದಾರೆ. ವಿವೇಕದ ದಾರಿಹಿಡಿದು ಭೋಗವನ್ನು ಅನುಭವಿಸುತ್ತ ಜೊತೆ ಜೊತೆಯಲ್ಲೇ ಯೋಗಕ್ಕೂ ದಾರಿಮಾಡಿಕೊಳ್ಳೋಣ. ಆಗ ನಮಗೆ
ಲಭಿಸುವುದು ಇಹದಲ್ಲಿ ಸುಖ, ಪರದಲ್ಲಿ ಪರಮಸುಖ!

ಸೂಚನೆ:  13/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ನಾವೇಕೆ “ಬುದ್ಧ”ರಾಗಿಲ್ಲ? (Naveke budhdharagilla?)

ಲೇಖಕರು:   ಸುಬ್ರಹ್ಮಣ್ಯ ಸೋಮಯಾಜಿ



ಕಪಿಲವಸ್ತುವಿನಲ್ಲಿ ಒಂದು ದಿನ ಸಿದ್ಧಾರ್ಥ ರಾಜಕುಮಾರನು ವಿಹಾರಕ್ಕೆಂದು ಹೊರಟ. ಅವನ ತಂದೆ ಶುದ್ಧೋಧನ ಮಹಾರಾಜ ಮಗನ ವಿಹಾರಕ್ಕೆಂದು ಅತ್ಯಂತ ವೈಭವದ ವ್ಯವಸ್ಥೆಯನ್ನೇ ಮಾಡಿದ್ದ. ಎಲ್ಲೆಲ್ಲಿಯೂ ಸಂಭ್ರಮ, ನೃತ್ಯ, ಮೋಜು. ದುಃಖದ ಪರಿಚಯವೇ ಮಗನಿಗೆ ಆಗಕೂಡದು ಎಂಬಲ್ಲಿ ಬಹಳ ಕಾಳಜಿ ವಹಿಸಿದ್ದ.

ಆದರೂ ನಿಯತಿಯ ನಿರ್ಧಾರ ಬೇರೆಯೇ ಆಗಿತ್ತು. ಸಿದ್ಧಾರ್ಥ ಒಬ್ಬ ಮುದುಕನನ್ನು ನೋಡಿದ.ಒಬ್ಬ ರೋಗಿಯನ್ನು ನೋಡಿದ. ಒಂದು ಶವವನ್ನು ನೋಡಿದ. ತನ್ನ ಜೀವನದಲ್ಲಿ ಈ ದೃಶ್ಯಗಳನ್ನು ಅವನು ಕಂಡಿರಲೇ ಇಲ್ಲ. ಬಹಳ ಆತಂಕವಾಯಿತು. ಸಾರಥಿಯನ್ನು ಪ್ರಶ್ನಿಸಿದ. ಸಾರಥಿಯು ಎಲ್ಲರಿಗೂ ಜೀವನದಲ್ಲಿ ಈ ಅವಸ್ಥೆಗಳು ಬರುತ್ತವೆ ಎಂದು ಪರಿಚಯಿಸಿದ. ಅದಾದ ನಂತರ ಸಿದ್ಧಾರ್ಥನಿಗೆ ಯಾವ ವೈಭವವೂ ಸುಖ ಸಂತೋಷಗಳೂ ಬೇಡವಾದವು. ರಥವನ್ನು ಹಿಂತಿರುಗಿಸುವಂತೆ ಹೇಳಿದ. ಈ ಬಗೆಯ ಭೌತಿಕ ಜೀವನ ಅವನಿಗೆ ನಿರರ್ಥಕವೆನಿಸಿತು. ರಾತೋರಾತ್ರಿ ಎಲ್ಲರನ್ನೂ, ಎಲ್ಲವನ್ನೂ ತೊರೆದು ತಪಸ್ಸಿಗೆ ನಡೆದ. ಬುದ್ಧನಾದ. ಈ ಕಥೆ ನಮಗೆಲ್ಲರಿಗೂ ಗೊತ್ತಿದೆ.

ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಪ್ಪಾ, ನಮ್ಮ ಜೀವನದಲ್ಲಿ ನಾವು ದಿನ ಬೆಳಗಾದರೆ ಎಷ್ಟು ಜನ ಮುದುಕರನ್ನು,ರೋಗಿಗಳನ್ನು ಮತ್ತು ಶವಗಳನ್ನು ನೋಡುತ್ತೇವಲ್ಲಾ, ಏಕೆ ನಾವೂ ಬುದ್ಧರಾಗಿಲ್ಲ? ಅಷ್ಟು ಸುಖ ಸಂತೋಷಗಳಲ್ಲಿ ಬೆಳೆದ ಸಿದ್ಧಾರ್ಥನೇಕೆ ಈ ಮೂರು ದೃಶ್ಯಗಳಿಂದ ಮಹಾ ಸನ್ಯಾಸಿಯಾಗಲು ನಿಶ್ಚಯಿಸಿದ? ಜೀವನದ ಪರಮ ಸತ್ಯವನ್ನು ಕಂಡುಕೊಳ್ಳಲು ಇನ್ನಿಲ್ಲದ ಕಷ್ಟಗಳನ್ನು ಎದುರಿಸಲು ತಯಾರಾದ? ಘಟನೆಯೇ ಪರಿಣಾಮ ಮಾಡುವ ಹಾಗಿದ್ದರೆ ನಮಗೂ ಮಾಡಬೇಕಿತ್ತಲ್ಲವೇ? ಪ್ರಶ್ನೆ ಸಹಜ. ಆದರೆ ಎಲ್ಲರಿಗೂ ಒಂದು ಪೂರ್ವಸ್ಥಿತಿ ಇರುತ್ತದೆ. ನಮಗೆ ಆ ಪೂರ್ವ ಸ್ಥಿತಿಯ ಪರಿಚಯವಿರುವುದಿಲ್ಲ. ಸ್ವಿಚ್ ಹಾಕಿದರೆ ಬಲ್ಬ್ ಉರಿಯುತ್ತದೆ ಎಂಬುದು ಸತ್ಯವಾದರೂ ವಿದ್ಯುತ್ತಿನ ಸಂಪರ್ಕ ಎರಡಕ್ಕೂ ಸರಿಯಾಗಿದ್ದಾಗ ಮಾತ್ರ  ಇದು ಸಾಧ್ಯ ಎಂಬುದು ಅಲಿಖಿತ ನಿಯಮ. ಅಂಗಡಿಯಲ್ಲಿ ಮಾರಾಟಕ್ಕೆಂದು ಇಟ್ಟ ಸ್ವಿಚ್ ನ್ನು ಸುಮ್ಮನೇ ಒತ್ತಿದರೆ ಯಾವ ಬಲ್ಬೂ ಉರಿಯದು. ಹಾಗೆ  ಸಿದ್ಧಾರ್ಥನಿಗೆ ಜನ್ಮ ಜನ್ಮಾಂತರಗಳ ಸಂಸ್ಕಾರದಿಂದ ಒಳಜೀವನಕ್ಕೆ ಬೇಕಾದ ಪೂರ್ವತಯಾರಿ ಸಿದ್ಧವಾಗಿತ್ತು. ಈ ಮೂರು ದೃಶ್ಯಗಳು ಕೇವಲ ಸ್ವಿಚ್ ಒತ್ತುವ ಕೆಲಸವನ್ನು ಮಾಡಿದವು. ಅಷ್ಟೇ. ಆದರೆ ನಮಗೆ ಒಳಗೆ ಜೀವನದ ಪರಮ ಸತ್ಯವನ್ನು ಅರಿಯುವ ನಿಟ್ಟಿನಲ್ಲಿ ಯಾವ ಪೂರ್ವ ಸಿದ್ಧತೆಗಳೂ ಇಲ್ಲ. ಹಾಗೆಂದೇ ನಮಗೆ ಈ ಘಟನೆಗಳು ಯಾವ ಗಂಭೀರವಾದ ಪರಿಣಾಮವನ್ನೂ ಮಾಡಿಲ್ಲವೆಂದೇ ಉತ್ತರ. ಯಾವುದೇ ವಿಷಯಗಳು  ಸಂಸ್ಕಾರಿಗಳಿಗೆ ಮಾಡುವ ಪರಿಣಾಮವೇ ಬೇರೆ, ಸಾಮಾನ್ಯರಿಗೇ ಬೇರೆಯಾಗಿರುತ್ತದೆ.

ನಾವು ಮನುಷ್ಯ ಶರೀರವನ್ನು ಹೊತ್ತು ಓಡಾಡುತ್ತಿದ್ದರೂ ಈ ದೇಹದ ಸಾಮರ್ಥ್ಯ,ವಿಶೇಷತೆಗಳನ್ನು ಕೇವಲ ಇಂದ್ರಿಯ ಜೀವನಕ್ಕಾಗಿ ಮಾತ್ರ ಬಳಸಿಕೊಂಡಿದ್ದೇವೆ. ಇಲ್ಲಿ ಇಂದ್ರಿಯಗಳನ್ನು ಮೀರಿದ ಆನಂದದ ಸೆಲೆಯನ್ನು ಅನುಭವಿಸುವ ವ್ಯವಸ್ಥೆಯುಂಟು. ಯೋಗದ ಅಂತಹ ಕೇಂದ್ರಗಳುಂಟು. ಅವುಗಳು ತೆರೆದಾಗ ನಮಗಾಗುವ  ಅನುಭವವು ಇಂದ್ರಿಯ ಸುಖಗಳಿಗಿಂತ ಕೋಟಿ ಪಾಲು ಹೆಚ್ಚಿನದು ಎಂದೆಲ್ಲ ಅಂತಹ ಪರಮ ಸುಖವನ್ನು ಅನುಭವಿಸಿದ ಈ ದೇಶದ ಜ್ಞಾನಿಗಳ ಮಾತು. ಅವರು ತಮ್ಮ ತಪಸ್ಯೆಯಿಂದ ಈ ದೇಹಯಂತ್ರದ ಪೂರ್ಣ ಪ್ರಯೋಜನವನ್ನು ಪಡೆದುಕೊಂಡು ತುಂಬು ಜೀವನವನ್ನು ನಡೆಸಿದವರಾಗಿದ್ದರು. ಅಂತಹ ಪೂರ್ವ ಸಿದ್ಧತೆ ಇದ್ದಾಗ ಸೃಷ್ಟಿಯನ್ನೂ ಅಲ್ಲಿನ ವಿಷಯಗಳನ್ನೂ ನೋಡುವ ನೋಟವು ಸಮಗ್ರವಾದ ನೋಟವಾಗುತ್ತದೆ. ಅದಿಲ್ಲದಿದ್ದಾಗ ಕುರುಡರು ಒಂದು ಆನೆಯ ಬೇರೆ ಬೇರೆ ಭಾಗಗಳನ್ನು ಮುಟ್ಟಿ ಆನೆ ಕಂಬದಂತಿದೆ, ಹಾವಿನಂತಿದೆ ಎಂದೆಲ್ಲ ಹೇಳಿದಂತೆ ಅಪೂರ್ಣವಾದ ನೋಟವಾಗುತ್ತದೆ.

ನಾವು ಅಂತಹ ಕೇಂದ್ರಗಳನ್ನು ಬಳಸದೇ ಜನ್ಮಾಂತರಗಳನ್ನು ಕಳೆದಿದ್ದೇವೆ. ಯಾವುದನ್ನೂ ಬಳಸದೇ ಬಿಟ್ಟಾಗ ತುಕ್ಕು ಹಿಡಿಯುತ್ತದೆ. ಅದರ ಉಪಯೋಗ ನಿತ್ಯದಲ್ಲಿದ್ದಾಗ ಮಾತ್ರ ಅಂತಹ ಸೌಖ್ಯವನ್ನು ನಮ್ಮ ದೇಹವು ಅನುಭವಿಸಲು ಸಾಧ್ಯವಾಗುವುದು.

ಅಂತಹ ಪೂರ್ವಸಿದ್ಧತೆಗಾಗಿ ಪ್ರಯತ್ನಿಸುವ ಬುದ್ಧಿಯನ್ನು ಭಗವಂತನು ನಮಗೆಲ್ಲ ಕರುಣಿಸಲಿ ಎಂದು ಪ್ರಾರ್ಥಿಸೋಣ. ಸಿದ್ಧಾರ್ಥ ಬುದ್ಧನಾದಂತೆ ನಮ್ಮ ಮನಸ್ಸುಗಳೂ ಜೀವನದ ಆ ಅತ್ಯುನ್ನತ  ಸ್ಥಾನಕ್ಕೆ ಏರುವಂತಾಗಲಿ ಎಂದು ಹಾರೈಸೋಣ.

ಸೂಚನೆ:  12/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Tuesday, May 7, 2019

ಅನ್ನಪ್ರಾಶನವೋ ಬ್ರಹ್ಮಪ್ರಾಶನವೋ? (Annaprashanavo? Brahmaprashanavo?)

ಲೇಖಕರು: ತಾರೋಡಿ ಸುರೇಶ


ನಿಷ್ಕ್ರಮಣದ ನಂತರ ಅನ್ನಪ್ರಾಶನ ಸಂಸ್ಕಾರವನ್ನು ಮಾಡಬೇಕು. ವಾಸ್ತವಿಕವಾಗಿ ಈ ಸಂಸ್ಕಾರಕ್ಕೆ ‘ನವಾನ್ನಪ್ರಾಶನ’ ಎಂದು ಹೆಸರು. ಮೊಟ್ಟಮೊದಲಿಗೆ ಸಂಸ್ಕಾರರೂಪವಾಗಿ ಘನಾಹಾರವನ್ನು ಮಗುವಿಗೆ ತಿನ್ನಿಸುವ ಪ್ರಕ್ರಿಯೆ ಇದು. ಹಸಿವಾದಾಗ ಮಗುವು ತಾನೇ ತಿನ್ನುವಾಗ ಇಂತಹ ಕ್ರಿಯೆಯ ಅಗತ್ಯವೇನು? ಎಂಬ ಪ್ರಶ್ನೆ ಬರಬಹುದು. ಅದು ಸಂಸ್ಕಾರವಾಗಬೇಕಾದರೆ ಈ ಕರ್ಮ ಅಗತ್ಯ ಎಂದು ಅದಕ್ಕೆ ಸಂಕ್ಷಿಪ್ತ ಉತ್ತರ.

ಮಗುವಿಗೆ ಮೊದಲ ದರ್ಶನವಾಗಿ ದೀಪ ಬೆಳಗಿಸಿದೆವು. ಹಾಗೆಯೇ ದೇವತಾಪ್ರತಿನಿಧಿಗಳಾದ ಸೂರ್ಯ-ಚಂದ್ರ-ಅಗ್ನಿಗಳನ್ನು ತೋರಿಸಿದೆವು. ಮೊದಲ ಶಬ್ಧವಾಗಿ ಪ್ರಣವನಾದವನ್ನು ಅನುರಣಿಸುವ ಘಂಟಾನಾದವನ್ನು ಕೇಳಿಸಿದೆವು. ಎಲ್ಲ ಕ್ರಿಯೆಗಳಲ್ಲಿಯೂ ಮೊದಲನೆಯದಕ್ಕೆ ವಿಶೇಷ ಮಹತ್ವವಿರುತ್ತದೆ. ಅದರಂತೆಯೇ ಮೊದಲ ಅನ್ನಸ್ವೀಕಾರಕ್ಕೂ ಕೂಡ. ಇದರ ಪ್ರಭಾವವು ಮಗುವಿನ ಮೇಲೆ ಗಾಢವಾಗಿ ಮುದ್ರಿತವಾಗುವುದರಿಂದ ಮಗುವು ಬೆಳೆಯುತ್ತಾ ಪುರುಷಾರ್ಥಮಯವಾದ ಜೀವನಕ್ಕೆ ಬೇಕಾದಂತಹ ಆಹಾರ ವ್ಯವಸ್ಥೆಯಲ್ಲಿ ಸಹಜವಾದ ರುಚಿ ಬೆಳೆಯುತ್ತದೆ.

“ಹಿಂದಿನ ಸಂಸ್ಕಾರಗಳಂತೆಯೇ ಆಯುರ್ವೃದ್ಧಿ, ಬ್ರಹ್ಮವರ್ಚಸ್ಸು, ಗರ್ಭ-ಬೀಜಗಳಿಗೆ ಸಂಬಂಧಿಸಿದ ದೋಷನಿವಾರಣೆ,  ಮಗು ಮುಂದೆ ಒಳ್ಳೆಯ ಅನ್ನವನ್ನು ಸಂಪಾದಿಸುವ ಶಕ್ತಿಗಾಗಿ ಮತ್ತು ಅಂತಿಮವಾಗಿ ಪರಮೇಶ್ವರಪ್ರೀತಿಗಾಗಿ ಅನ್ನಪ್ರಾಶನ ಸಂಸ್ಕಾರವಪ್ಪಾ”ಎಂದು ಶ್ರೀರಂಗಮಹಾಗುರುಗಳು ವಿವರಿಸಿದ್ದರು. 6- 8ನೇ ತಿಂಗಳಲ್ಲಿ ಗಂಡು ಮಗುವಿಗೂ, 5-7ನೇ ತಿಂಗಳಲ್ಲಿ ಸ್ತ್ರೀ ಶಿಶುವಿಗೂ ಅನ್ನಪ್ರಾಶನದ ಸಂಸ್ಕಾರವನ್ನು ಮಾಡಬೇಕು. 12ನೇ ತಿಂಗಳೊಳಗಂತೂ ನಡೆಸಲೇಬೇಕು. ಸೂಕ್ತ ತಿಥಿವಾರ ನಕ್ಷತ್ರಗಳನ್ನೂ ಋಷಿಗಳು ನಿರ್ದೇಶಿಸಿದ್ದಾರೆ. ತಾಯಿಯ ತೊಡೆಯ ಮೇಲೆ ಅಲಂಕೃತ ಮಗುವನ್ನು ಕೂರಿಸಬೇಕು. ಅನ್ನದ ಜೊತೆ ಮಧು, ಆಜ್ಯ, ಕನಕದಿಂದ ಕೂಡಿದ ಪಾಯಸವನ್ನು, ಚಿನ್ನದ ಪಾತ್ರೆಯಲ್ಲಿಟ್ಟು, ಮಂತ್ರಪೂತವಾಗಿ ಪ್ರಾಶನ ಮಾಡಿಸಬೇಕು. ದೇವತಾಪೂಜೆಯನ್ನು ಮಾಡಿ ದೇವರಿಗೆ ನಿವೇದಿಸಿರಬೇಕು. ಹಾಲಿನಿಂದ ಮಾಡಿದ ಓದನವೇ ಪಾಯಸ. 

ಮಗುವು ಗರ್ಭದಲ್ಲಿರುವಾಗ ತಾಯಿಯು ಅಶುದ್ಧವಾದ ಆಹಾರವನ್ನು ಸೇವಿಸಿದ್ದಲ್ಲಿ ಆ ದೋಷವೂ ಈ ಸಂಸ್ಕಾರದಿಂದ ಪರಿಹಾರವಾಗುವುದು. ಇಲ್ಲಿ ವಿನಿಯೋಗಿಸುವ ಮಂತ್ರಗಳ ಭಾವದೊಂದಿಗೆ ದ್ರವ್ಯಗಳು ತಮ್ಮ ರಸದಿಂದಾಗಿ(ಸಾರ) ಹೊಂದಿಕೊಳ್ಳುತ್ತವೆ. ಹಾಗೆಯೇ ಮಂತ್ರಗಳೂ ವಿಜ್ಞಾನಯುತವಾಗಿದ್ದು ಆಯಾ ಸ್ಥಾನ,ದೇವತೆಗಳನ್ನೂ ಮುಟ್ಟಿ ಬಂದಾಗ ಪದಾರ್ಥಗಳು ಪ್ರಸಾದವಾಗುತ್ತವೆ. ಭೂಃ ಭುವಃ ಮತ್ತು ಸುವಃ ಎಂಬ ಮೂರುಲೋಕಗಳ ದೇವತೆಗಳು ಮೇಧೆಯ ವೃದ್ಧಿ, ಆಯುರ್ವೃದ್ಧಿಗಳನ್ನು ದಯಪಾಲಿಸಿ, ಪರಮಾತ್ಮನ ಸಮಾಧಿಸ್ಥಾನಕ್ಕೆ ಸೋಪಾನವಾಗುತ್ತದೆ. ಇಲ್ಲಿ ಮೇಧೆಯೆಂದರೆ  “ಪ್ರಣವ ತತ್ವವನ್ನು ಪಾರದರ್ಶಕವಾಗಿ ಆವರಿಸಿಕೊಂಡಿರುವ ಪ್ರಾಣತತ್ವ” ಎಂದು ಶ್ರೀರಂಗಮಹಾಗುರುಗಳು ತಿಳಿಸಿಕೊಟ್ಟಿದ್ದರು.

ಉಪನಿಷತ್ತುಗಳು ಹೇಳುವಂತೆ ಅನ್ನವು ಬ್ರಹ್ಮವೇ ಆಗಿದೆ. ಸೃಷ್ಟಿ-ಸ್ಥಿತಿ-ಲಯಗಳು ಯಾವುದರಿಂದ ಆಗುತ್ತದೆಯೋ ಅದೇ ಬ್ರಹ್ಮ. “ಪರಮಾತ್ಮನಿಂದ ಆಕಾಶ,  ಆಕಾಶದಿಂದ ವಾಯು,ವಾಯುವಿನಿಂದ ಅಗ್ನಿ,ಅಗ್ನಿಯಿಂದ ಜಲತತ್ವವೂ, ಜಲದಿಂದ ಪೃಥ್ವಿಯೂ, ಪೃಥ್ವಿಯಿಂದ ಓಷಧಿಗಳು,ಓಷಧಿಗಳಿಂದ ಅನ್ನವು ಹುಟ್ಟುತ್ತದೆ”ಎಂದು ಆರ್ಷಸಾಹಿತ್ಯಗಳು ಸೃಷ್ಟಿಪ್ರಕ್ರಿಯೆಯನ್ನು ವರ್ಣಿಸುತ್ತವೆ. ಲಯವಾಗುವಾಗಲೂ ತನ್ನ ಹಿಂದಿನ ತತ್ವದೊಡನೆ ವಿಲೀನಗೊಳ್ಳುತ್ತಾ ಪರಬ್ರಹ್ಮವಸ್ತುವಿನಲ್ಲಿ ನೆಲೆಗೊಳ್ಳುತ್ತವೆ. ಆದ್ದರಿಂದ ಅನ್ನವು ಬ್ರಹ್ಮವೇ ಆಗಿದೆ. ಈ ಪ್ರಕ್ರಿಯೆಯ ಸ್ಮರಣೆಯೇ ಯಜ್ಞದ ಫಲವನ್ನು ಕೊಡುತ್ತದೆ ಎಂಬುದು ಅನುಭವಿಗಳ ಮಾತು.

ಅನ್ನಪ್ರಾಶನವು ಅವಶ್ಯವಾಗಿ ಮಾಡಲೇಬೇಕಾದ ಸಂಸ್ಕಾರ. ಶುದ್ಧವಾದ ಅನ್ನವು ಶುದ್ಧವಾದ ಮನಸ್ಸನ್ನು ಉಂಟುಮಾಡುವುದು ಎಂದು ಯೋಗ, ಆಯುರ್ವೇದ ಇತ್ಯಾದಿ ಶಾಸ್ತ್ರಗಳು ಒತ್ತಿ ಹೇಳುತ್ತವೆ. ಅನ್ನಪ್ರಾಶನವು ಬ್ರಹ್ಮಪ್ರಾಶನ(ಯೋಗ)ದಲ್ಲಿ ಪರ್ಯವಸಾನಗೊಳ್ಳುವ ಬಹುಶ್ರೇಷ್ಠವಾದ ಸಂಸ್ಕಾರವಾಗಿದೆ.

ಸೂಚನೆ: 07/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.