Showing posts with label paper_prajavani. Show all posts
Showing posts with label paper_prajavani. Show all posts

Thursday, March 26, 2020

ಶ್ರೀರಾಮರ ಧೈರ್ಯವು ನಮಗೆ ಆದರ್ಶ (Sriramara Dhairyavu Namage Adarsa)

ಲೇಖಕರು: ಡಾ|| ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in)



ಲೋಕದಲ್ಲಿ ಆದರ್ಶಪುರುಷನ ಲಕ್ಷಣಗಳನ್ನು ಹೊಂದಿರುವ ಶ್ರೀರಾಮನ ಬಗ್ಗೆ ವಾಲ್ಮೀಕಿಗಳಿಗೆ ತಿಳಿಸಿಕೊಡುತ್ತಾ ನಾರದಮಹರ್ಷಿಗಳು ಶ್ರೀರಾಮನನ್ನು ಪ್ರಕೃತಿಯಲ್ಲಿರುವ ಸಮುದ್ರ, ಪರ್ವತ, ಪೃಥ್ವಿ, ಚಂದ್ರ ಮುಂತಾದವುಗಳಿಗೆ ಹೋಲಿಸುತ್ತಾ ಆ ವಸ್ತುಗಳ ಶ್ರೇಷ್ಠತೆಯನ್ನು ವಿಶದಪಡಿಸುತ್ತಾರೆ. ಮಾನವನ ಜೀವನವು ಸಮರಸದಿಂದ ಕೂಡಿರುವುದಾಗಿದೆ. ನಾವು ಯಾವಾಗಲೂ ಸುಖವನ್ನೇ ಬಯಸುವುವವರಾದರೂ ನಮಗೆ ಇಷ್ಟವಿಲ್ಲದಿದ್ದರೂ ದುಃಖವೂ ಅನಿವಾರ್ಯವೇ.  ಸುಖ ಬಂದಾಗ ಹಿಗ್ಗುವುದು ದುಃಖ ಬಂದಾಗ ಕುಗ್ಗುವುದೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮಾನವನು ಹೇಗೆ ನಡೆದುಕೊಳ್ಳಬೇಕೆಂದು ಪ್ರಕೃತಿಯಲ್ಲಿರುವ ವಸ್ತುಗಳು ನಮಗೆ ತಿಳಿಸಿಕೊಡುತ್ತವೆ. ಉದಾಹರಣೆಗೆ ಪರ್ವತವನ್ನು ತೆಗೆದುಕೊಳ್ಳೋಣ. ಮಳೆಯಾಗಲೀ, ಬಿಸಿಲಾಗಲೀ, ಚಳಿಯಾಗಲೀ, ಸಿಡಿಲಾಗಲೀ, ಕಾಡ್ಗಿಚ್ಚಾಗಲೀ, ಬಿರುಗಾಳಿಯಾಗಲೀ  ವರ್ಷ ಪರ್ಯಂತ ಪ್ರಕೃತಿಯಲ್ಲಿ ಆಗುವ ಈ ರೀತಿಯಾದ ಅನೇಕ ವೈಪರೀತ್ಯಗಳಿಂದ ಸತತವಾಗಿ ಪೀಡಿಸಲ್ಪಟ್ಟರೂ ಯಾವುದಕ್ಕೂ ಧೃತಿಗೆಡದೆ ತನ್ನ ತನವನ್ನು ಬಿಟ್ಟುಕೊಡದೆ ಪರ್ವತವು ನಿಶ್ಚಲವಾಗಿರುತ್ತದೆ. 

ಈಗ ಶ್ರೀರಾಮನ ಜೀವನವನ್ನು ಗಮನಿಸೋಣ.  ಶ್ರೀರಾಮನಿಗೆ ಪಟ್ಟಾಭಿಷೇಕದ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ಶ್ರೀರಾಮ ಮರ್ಯಾದಾಪುರುಷೋತ್ತಮ. ಅವನೇನೂ ಅದಕ್ಕಾಗಿ ಹಂಬಲಿಸಿರಲಿಲ್ಲ. ತಾನಾಗಿಯೇ ಹುಡುಕಿಕೊಂಡು ಬಂದ ಭಾಗ್ಯ. ಮಂಥರೆಯ ದುರ್ಬೋಧನೆಗೆ ಮರುಳಾಗಿ, ವರಗಳೆರಡರ ನೆಪದಲ್ಲಿ ಶ್ರೀರಾಮನನ್ನು ಹದಿನಾಲ್ಕು ವರ್ಷ ವನವಾಸ ಮತ್ತು ತನ್ನ ಮಗನಿಗೆ ಪಟ್ಟಾಭಿಷೇಕವನ್ನು ದಶರಥನಿಂದ ಮಾಡಿಸಲು ಮುಂದಾಗಿದ್ದ ಕೈಕೇಯಿಯ ಮಾತನ್ನುಕೇಳಿ ಶ್ರೀರಾಮನು ಧೃತಿಗೆಡಲಿಲ್ಲ. ಸುಖದುಃಖಗಳನ್ನು, ಜಯಾಪಜಯಗಳನ್ನು, ಲಾಭಾಲಾಭಗಳನ್ನು, ನಿಂದಾಸ್ತುತಿಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞನಂತೆ, ಸ್ವೀಕರಿಸುತ್ತಾನೆ. ಮಹಾಕವಿಕಾಳಿದಾಸನು ತನ್ನ ರಘುವಂಶದಲ್ಲಿ ಈ ಸಂದರ್ಭವನ್ನು ವರ್ಣಿಸುವಾಗ 'ತಂದೆಯಿಂದ ಮೊದಲು ಕೊಡಲ್ಪಟ್ಟ ರಾಜ್ಯವನ್ನು ಅಳುತ್ತಾ ಸ್ವೀಕರಿಸಿದನು; ನಂತರ 'ವನಕ್ಕೆ ಹೋಗು' ಎಂಬ ಮಾತನ್ನು ಸಂತೋಷದಿಂದ ಸ್ವೀಕರಿಸಿದ'ನೆಂದು ಹೇಳುತ್ತಾನೆ. ಅಷ್ಟೇ ಅಲ್ಲದೆ, ಸಂಕೋಚದಿಂದಲೂ, ಕೊಟ್ಟಮಾತಿಗೆ ಕಟ್ಟುಬಿದ್ದು ಪ್ರೀತಿಪಾತ್ರನಾದ ಶ್ರೀರಾಮನನ್ನು ವನಕ್ಕೆ ಹೋಗೆಂದು ಹೇಳಲಾರದೇ ಪರಿತಪಿಸುತ್ತಿದ್ದ ತಂದೆ ದಶರಥನನ್ನು ಸತ್ಯವಾಕ್ಕಾಗಿಸಲು, ಕೈಕೇಯಿಯ ಆಣತಿಯಂತೆ ನಾರುಮಡಿಯನ್ನುಟ್ಟು ವನವಾಸಕ್ಕೆ  ಹೊರಟು ನಿಲ್ಲುತ್ತಾನೆ ಶ್ರೀರಾಮ. ಈ ಸನ್ನಿವೇಶವನ್ನು ಕವಿಕುಲಗುರುವು, 'ಮೊದಲು ಪಟ್ಟಾಭಿಷೇಕ್ಕಾಗಿ ಮಂಗಳಮಯವಾದ ಪೀತಾಂಬರವನ್ನು ಧರಿಸಿರುವಾಗಲೂ ಮತ್ತು ನಂತರ ವಲ್ಕಲವನ್ನುಟ್ಟು ಕಾಡಿಗೆ ಹೊರಟು ನಿಂತಾಗಲೂ ಶ್ರೀರಾಮನ ಸಮಾನವಾದ ಮುಖರಾಗವನ್ನು ಕಂಡು ಸಾಕೇತಪುರವಾಸಿಗಳು ವಿಸ್ಮಿತರಾದರು' ಎಂದು ವರ್ಣಿಸುತ್ತಾನೆ.  ಅಬ್ಬಾ! ಮಹಾತ್ಮರಲ್ಲಿ ಅದೆಂತಹ ಧೃತಿ ! ಸಂಪತ್ತು ಮತ್ತು ವಿಪತ್ತುಗಳಲ್ಲಿ ಮಹಾತ್ಮರು ಒಂದೇ ರೀತಿಯಲ್ಲಿರುವರೆಂಬ ಸುಭಾಷಿತಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಶ್ರೀರಾಮನನ್ನು ಸ್ಮರಿಸಬಹುದಾಗಿದೆ. 

ಜೀವನದಲ್ಲಿ ಬರುವ ಯಾವುದೇ ಅಸುಖಕರ ಸಂದರ್ಭದಲ್ಲಿಯೂ ಧೃತಿಗೆಡದೆ ಧರ್ಮಮಾರ್ಗದಿಂದ ಕಿಂಚಿತ್ತೂ ವಿಚಲಿತರಾಗದೇ ಪರ್ವತದಂತೆ ಧೀರರಾಗಿ, ಸ್ಥೈರ್ಯದಿಂದ ಕಷ್ಟಗಳನ್ನು ಎದುರಿಸಬೇಕೆಂಬುದಕ್ಕೆ ಶ್ರೀರಾಮನೇ ಆದರ್ಶ. ಆದ್ದರಿಂದಲೇ ಶ್ರೀರಾಮನನ್ನು ವರ್ಣಿಸುವಾಗ ನಾರದಮಹರ್ಷಿಗಳು 'ಧೈರ್ಯೇಣ ಹಿಮವಾನಿವ' ಎಂದಿದ್ದಾರೆ.

ಸೂಚನೆ: 24/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.  

Saturday, March 21, 2020

ಮಹರ್ಷಿಗಳ ಪೂಜಾಪದ್ಧತಿಯ ವೈಶಿಷ್ಟ್ಯ (Maharsigala Poojapaddhatiya Vaishistya )

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)



ಭಾರತೀಯಮಹರ್ಷಿಗಳು ತಪೋಬಲದಿಂದ ತಮ್ಮೊಳಗೆ ಬೆಳಗುವ ದೈವೀ ಸಾಮ್ರಾಜ್ಯ - ಆತ್ಮಸಾಮ್ರಾಜ್ಯಗಳನ್ನು ಕಂಡು ನಲಿದರು. ತಾವು ಅನುಭವಿಸಿದ ಶಾಂತಿ ಸಮೃದ್ಧಿಯನ್ನು ಲೋಕವೆಲ್ಲವೂ ಅನುಭವಿಸಿ ನಲಿದಾಡಲೆಂಬ ಕರುಣೆ-ಹೆಬ್ಬಯಕೆಗಳಿಂದ ಅತ್ತಕಡೆಗೆ ಲೋಕವನ್ನು ಸೆಳೆಯುವಂತೆ ಜೀವನ ಕ್ರಮವನ್ನು ರೂಪಿಸಿದರು. 

ಮಹರ್ಷಿಗಳ ಪೂಜಾಪದ್ಧತಿಯು ಅವರ ಜೀವನಕ್ರಮದ ಅತಿಪ್ರಮುಖ ಅಂಗವಾಗಿದೆ.  ಜೀವ-ದೇವರ ನಡುವಿನ ಸೇತುವೆಯಾಗುವಂತೆ ರೂಪಿತವಾಗಿರುವ ಈ ಕ್ರಮವು ಮಹರ್ಷಿಗಳ ಮೇಧಾವಿಲಾಸವನ್ನು ಲೋಕಕ್ಕೆ ಸಾರುವಂತಿದೆ. ಮಹರ್ಷಿಗಳು ಸೃಷ್ಟಿಯ ಪದಾರ್ಥಗಳಮೇಲೆ ತಮ್ಮ ದೃಷ್ಟಿಯನ್ನು ಹರಿಸಿ ಅವುಗಳ ಗುಣಧರ್ಮಗಳನ್ನು ಗುರುತಿಸಿ, ತಮ್ಮ ಉದ್ದೇಶಕ್ಕೆ ಪೂರಕವಾಗುವಂತೆ ಅವುಗಳನ್ನು ಬಳಸಿಕೊಂಡಿರುವುದು ಅವರ ಪ್ರತಿಭೆಗೊಂದು ನಿದರ್ಶನ. ಭೌತಿಕ-ದೈವಿಕ-ಆಧ್ಯಾತ್ಮಿಕ ಮೂರುಕ್ಷೇತ್ರಗಳಿಗೂ ಒಂದು ಕೊಂಡಿಯಾಗುವಂತೆ ಮಂತ್ರ(ಸ್ತೋತ್ರ)-ತಂತ್ರ-ಕ್ರಿಯಾಕಲಾಪಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅತ್ತ ಸಾಗಲು ಬೇಕಾದ ಮನಸ್ಥಿತಿಯನ್ನು ಹೊಂದಿಸುವ ಒಳ-ಹೊರ ಸಿದ್ಧತೆಗಳನ್ನೂ ಸಹ ಋಷಿಗಳು ನಿರ್ದೇಶಿಸಿದ್ದಾರೆ.

ಜ್ಞಾನಿಯಾದವನು ತನ್ನ ದೇಹವೆಂಬ ದೇವಾಲಯದೊಳಗೆ ಭಗವಂತನನ್ನು ಅನುಭವಿಸಿ ಅದರಿಂದಾದ ಆನಂದದೊಂದಿಗೆ ಹೊರದೇವಾಲಯಗಳಲ್ಲಿ ಅರ್ಚಕನಾಗಿ ಪೂಜಿಸಿದಾಗ ಆತನು 'ಅರ್ಚಕಸ್ಸ ಹರಿಃಸಾಕ್ಷಾತ್' ಎಂಬಂತೆ ಅತ್ಯಂತ ಪೂಜ್ಯನಾಗುತ್ತಾನೆ. ಆತನು ಮಾಡುವ ಪೂಜೆ, ಮಾಡಿಸುವ ದೇವರದರ್ಶನ, ನೀಡುವ ಪ್ರಸಾದ ಮುಂತಾದವುಗಳ ಮೂಲಕ ಆತನು ತಾನುಪಡೆದ ಕಷ್ಟಸಾಧ್ಯವಾದ ಫಲವನ್ನು ಇತರರು ಸುಲಭವಾಗಿ ಪಡೆಯುವಂತೆ ವಿತರಣೆಮಾಡುವ ಯೋಜನೆ ಋಷಿಪ್ರಣೀತ ಕಲ್ಪದಲ್ಲಡಗಿದೆ. 

ಗಂಧ-ಪುಷ್ಪ-ಧೂಪ-ದೀಪ-ನೈವೇದ್ಯ ಮುಂತಾದ ಪ್ರತಿಯೊಂದು ಪೂಜಾಂಗವೂ ಜೀವಿಯನ್ನು ಭಗವಂತನೆಡೆ ಸೆಳೆಯುವ ಯೋಜನೆಯಿಂದಲೇ ರೂಪಿಸಲ್ಪಟ್ಟಿದೆ. ಪೂಜಾದ್ರವ್ಯಗಳ ಆಯ್ಕೆ, ಅವುಗಳನ್ನು ಬಳಸಬೇಕಾದ ಕ್ರಮ ಎಲ್ಲೆಡೆಯಲ್ಲೂ ಮಹರ್ಷಿಗಳ ವೈಜ್ಞಾನಿಕಮನೋಧರ್ಮವು ಹರಿದಿರುವುದನ್ನು ಮಹರ್ಷಿಹೃದಯವೇದ್ಯರಾದ ಶ್ರೀರಂಗಮಹಾಗುರುಗಳು ಎತ್ತಿತೋರಿಸಿದ್ದಾರೆ. ಉದಾಹರಣೆಗೆ, ದೇವರ ಅಭಿಷೇಕ ತೀರ್ಥಕ್ಕೆ ಕೇಸರಿ, ಏಲಕ್ಕಿ, ಪಚ್ಚಕರ್ಪೂರ, ಲವಂಗ ಮುಂತಾದ ಪರಿಕರಗಳನ್ನು ಸೇರಿಸುವ ಪದ್ಧತಿಯಿದೆ. ಈ ದ್ರವ್ಯಗಳ ಪ್ರತ್ಯೇಕಧರ್ಮ ಹಾಗೂ ಒಟ್ಟು ಸೇರಿದಾಗ ಕೂಡಿಬರುವ ಪರಿಣಾಮಗಳನ್ನು ನಾಡೀಪರಿಜ್ಞಾನದಿಂದ ನಿಖರವಾಗಿ ಅಳೆದ ಶ್ರೀರಂಗಮಹಾಗುರುಗಳು ಅವುಗಳ ಸ್ಪರ್ಶ-ಆಘ್ರಾಣ-ಸೇವನೆಗಳು ಮನಸ್ಸು-ಪ್ರಾಣಗಳನ್ನು ಒಳಾಮುಖವಾಗಿ ಸೆಳೆಯುತ್ತವೆ ಎಂಬುದನ್ನು ಸುಸ್ಪಷ್ಟವಾಗಿ ನಿರೂಪಿಸಿದರು. 

ಅಂತೆಯೇ ಯಾವ ದ್ರವ್ಯಗಳ ಗಂಧ-ಸ್ಪರ್ಶ-ಸೇವನೆಗಳು ನಮ್ಮೊಳಗಿನ ಯಾವ ದೇವತಾಕೇಂದ್ರವನ್ನು ತೆರೆಯಬಲ್ಲವು ಎಂಬುದನ್ನು ಮಹರ್ಷಿಗಳ ಕುಶಾಗ್ರಮತಿಯು ಗುರುತಿಸಿಕೊಂಡಿತ್ತು. ಈ ಅರಿವಿನ ಆಧಾರದ ಮೇಲೆ ಬೇರೆಬೇರೆ ದೇವತೆಗಳ ಸಾಕ್ಷಾತ್ಕಾರಕ್ಕೆ ಪೋಷಕವಾಗುವ ದ್ರವ್ಯಗಳನ್ನು ಆಯಾ ದೇವತೆಗಳಿಗೆ 'ಪ್ರಿಯ' ಎಂಬುದಾಗಿ ಸೂಚಿಸಿ ಅವರ ಪೂಜೆಗೆ ಅವುಗಳನ್ನು ವಿಧಿಸಿದ್ದಾರೆ. ಶ್ರೀರಂಗಮಹಾಗುರುಗಳು ನೀಡಿರುವ ಈ ವಿವರಣೆಯು 'ದೇವತೆಗಳಿಗೂ ನಮ್ಮಂತೆ ಇಷ್ಟ-ಅನಿಷ್ಟಗಳುಂಟೇ? ನಾಲಿಗೆಯ ಚಾಪಲ್ಯವುಂಟೇ?' ಎಂಬ ಸಂಶಯಗಳನ್ನು ಪರಿಹರಿಸುತ್ತದೆ.

ಸಾರಾಂಶವಾಗಿ ಹೇಳುವುದಾದರೆ ಮಹರ್ಷಿಗಳ ಪೂಜಾಪದ್ಧತಿಯು ಅತ್ಯಂತ ವೈಜ್ಞಾನಿಕವಾಗಿದ್ದು  ನಿಜಕ್ಕೂ ಜೀವ-ದೇವರ ನಡುವಿನ ಸೇತುವೆಯೇ ಆಗಿದೆ. ಜೊತೆಗೆ ಪೂಜೆಗೆ ಒದಗಿಬರುವ ಸೃಷ್ಟಿಯಲ್ಲಿನ ಪದಾರ್ಥಗಳಿಗೂ ಧನ್ಯತೆಯನ್ನು ಕೊಡುವ ಅತ್ಯುತ್ತಮ ಕಲ್ಪವಾಗಿದೆ. ಈ ಕರ್ಮದ ಮರ್ಮವರಿತು ಆಚರಿಸಿ ದೇವನ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸೋಣ. ಇಂತಹ ಅದ್ಭುತ ಕೊಡುಗೆಯನ್ನು ಅನುಗ್ರಹಿಸಿದ ಮಹರ್ಷಿಗಳಿಗೆ ನಮ್ಮ ಅನಂತಾನಂತ ಪ್ರಣಾಮಗಳು ಅರ್ಪಿತವಾಗಲಿ.

ಸೂಚನೆ: 21/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Wednesday, March 18, 2020

ನಿತ್ಯತೃಪ್ತನಿಗೆ ನೈವೇದ್ಯ ಸಮರ್ಪಣೆ (Nityatruptanige Naivedya Samarpane)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
ಗಂಧ-ಪುಷ್ಪ-ಧೂಪ-ದೀಪ-ಅರ್ಚನೆಗಳನಂತರ ಭಗವಂತನಿಗೆ ನೈವೇದ್ಯ ಸಮರ್ಪಣೆ. ನಿತ್ಯತೃಪ್ತನಾಗಿ, ಅವಾಪ್ತಸಮಸ್ತಕಾಮನಾಗಿರುವ ಭಗವಂತನಿಗೆ ನಾವು ಆಹಾರ ನೀಡುವುದರ ಔಚಿತ್ಯವೇನು? ನೈವೇದ್ಯವು ಭಗವಂತನು ತಿನ್ನುವುದಕ್ಕಾಗಿ ಅಲ್ಲ. ಹಾಗೇನಾದರೂ ನೈವೇದ್ಯವನ್ನೆಲ್ಲಾ ಭಗವಂತನೇ ಭಕ್ಷಿಸಿಬಿಡುವುದಾದರೆ ಎಷ್ಟುಮಂದಿ ಇಂತಹ ಸಮರ್ಪಣೆಗೆ ಸಿದ್ಧರಾದಾರು?! ಕೆಲವು ಭಕ್ತೋತ್ತಮರು ಆರ್ದ್ರವಾದ ಮನಸ್ಸಿನಿಂದ ಸಮರ್ಪಿಸಿ ಬೇಡಿದಾಗ ಭಗವಂತನು ನಿಜವಾಗಿಯೇ ನೈವೇದ್ಯವನ್ನು ಭಕ್ಷಿಸಿದ ಕಥೆಗಳೂ ಇಲ್ಲದಿಲ್ಲ. ಆದರೆ ಇದು ಸಾಮಾನ್ಯ ನಿಯಮವಲ್ಲ.

'ನೈವೇದ್ಯ' ಎಂದರೆ ನಿವೇದನ ಮಾಡುವುದು. 'ಭಗವಂತ, ನೀನೇ ಕರುಣಿಸಿದ ಪದಾರ್ಥಗಳಿವು' ಎಂಬುದಾಗಿ ಅವನಲ್ಲಿ ಅರಿಕೆಮಾಡಿಕೊಳ್ಳುವುದು, ತನ್ಮೂಲಕ 'ಎಲ್ಲ ಪದಾರ್ಥಗಳ ಉಗಮವೂ, ಸ್ವಾಮಿಯೂ ಅವನೇ ಆಗಿದ್ದಾನೆ' ಎಂಬ ಸತ್ರ್ಯಾರ್ಥವನ್ನು ನೆನಪಿಸಿಕೊಳ್ಳುವುದೇ ನೈವೇದ್ಯ ಸಮರ್ಪಣೆಯ ಕ್ರಿಯೆ. ನೈವೇದ್ಯ ಪದಾರ್ಥಗಳಿಗೆ ಬಾಹ್ಯಶುದ್ಧಿ, ಅಂತಃಶುದ್ಧಿ ಎರಡೂ ಸೇರಿರಬೇಕಾದದ್ದು ಅತ್ಯಾವಶ್ಯಕ.

ನೈವೇದ್ಯ ಸಂದರ್ಭದಲ್ಲಿ ಪದಾರ್ಥದ ಮೇಲೆ ಇತರರ ದೃಷ್ಟಿ ಬೀಳಬಾರದು. ದೇವಾಲಯಗಳಲ್ಲಿ ನೈವೇದ್ಯಮಾಡುವಾಗ ತೆರೆಯನ್ನು ಹಿಡಿದು ಮರೆಮಾಡುವುದುಂಟು. ಮನೆಗಳಲ್ಲಿ ಇತರರು ಆ ಸಂದರ್ಭದಲ್ಲಿ ಪೂಜಾಗೃಹದಿಂದ ಹೊರಬರುವ ರೂಢಿಯಿದೆ. ಪೂಜೆಯನ್ನು ಮಾಡುವವನೂ ಸಹ ತನ್ನ ಭೌತಿಕದೃಷ್ಟಿಯನ್ನು ಪದಾರ್ಥಗಳ ಮೇಲೆ ಹರಿಸದೆ ಕಣ್ಣುಮುಚ್ಚಿ 'ಭಗವತ್ಸಮರ್ಪಿತವಾಗಲಿ' ಎಂಬ ಭಾವನೆಯನ್ನು ಯಥಾಶಕ್ತಿ ಕೂಡಿಸಿಕೊಂಡು ನೈವೇದ್ಯಮಾಡಬೇಕು. 'ನನಗೆ ಪ್ರಿಯವಾದ ಪದಾರ್ಥ'ವೆಂಬ ಭಾವನೆ ತಲೆದೋರದೆ ಎಚ್ಚರಿಕೆಯಿಂದಿರಬೇಕು.
     
ನಿವೇದನೆಗೆ ಪದಾರ್ಥವನ್ನು ನೀರಿನಿಂದ ಶುದ್ಧಗೊಳಿಸಿದ ಜಾಗದಲ್ಲಿಟ್ಟು, ಶುದ್ಧವಾದ ಮನೋಭಾವದಿಂದಲೂ, ಮಂತ್ರಗಳಿಂದಲೂ ಪದಾರ್ಥವನ್ನು ಪ್ರೋಕ್ಷಿಸಿ ತದನಂತರ ಸಮರ್ಪಿಸಬೇಕು. ಹೀಗೆ ಅರ್ಪಿತವಾದ ಪದಾರ್ಥವು ಅವನ ಪ್ರಸನ್ನತೆಯಿಂದ ಕೂಡಿ 'ಪ್ರಸಾದ'ವೆನಿಸಿಕೊಳ್ಳುತ್ತದೆ. ಪ್ರಸಾದವನ್ನು ಪ್ರಸಾದಬುದ್ಧಿಯಿಂದ ಸ್ವೀಕಾರಮಾಡಿದರೆ ಅದು ನಮ್ಮ ಪ್ರಸನ್ನತೆಗೆ, ತಾಪಶಮನಕ್ಕೆ, ಪಾಪಪರಿಹಾರಕ್ಕೆ ಕಾರಣವಾಗುತ್ತದೆ. ಮನೋ-ಬುದ್ಧಿಗಳನ್ನು ಭಗವಂತನೆಡೆಗೆ ಸಾಗಿಸುತ್ತದೆ.

ಆಹಾರಗಳೆಲ್ಲವೂ ನೈವೇದ್ಯಕ್ಕೆ ಯೋಗ್ಯವೇ ಆದರೂ ಬೇರೆಬೇರೆ ದೇವತೆಗಳಿಗೆ ಬೇರೆಬೇರೆ ಆಹಾರಗಳು ಪ್ರಿಯ ಎಂಬುದಾಗಿ ಶಾಸ್ತ್ರಗಳು ಸಾರುತ್ತವೆ-ಗಣೇಶನಿಗೆ ಕಡುಬು, ಹಯಗ್ರೀವದೇವರಿಗೆ ಕಡಲೆ ಇತ್ಯಾದಿ. ಹಾಗಾದರೆ ದೇವತೆಗಳಿಗೂ ನಮ್ಮಂತೆ ನಾಲಿಗೆಯ ಚಾಪಲ್ಯವೇ? ಎಂಬ ಸಂಶಯ ಏಳುವುದು ಸಹಜ. ಶ್ರೀರಂಗಮಹಾಗುರುಗಳು ಈ ಬಗೆಗೆ ನೀಡಿದ ವಿವರಣೆ: "ಎಲ್ಲ ದೇವತೆಗಳೂ ನಮ್ಮ ಶರೀರದಲ್ಲಿನ ಬೇರೆ ಬೇರೆ ಕೇಂದ್ರಗಳಲ್ಲಿ ವಿರಾಜಮಾನರಾಗಿದ್ದಾರೆ. ಮನಸ್ಸು-ಪ್ರಾಣಗಳು ಆಯಾ ಕೇಂದ್ರಗಳನ್ನು ಮುಟ್ಟಿದಾಗ ಮಾತ್ರ ಆಯಾ ದೇವತಾದರ್ಶನವಾಗುವುದು. ಆದ್ದರಿಂದ ಯಾವ ಆಹಾರ ಪದಾರ್ಥ/ಪದಾರ್ಥಗಳ ಯೋಗ ಯಾವ ದೇವತಾಕೇಂದ್ರವನ್ನು ತೆರೆಯುತ್ತದೆ, ಯಾವ ದೇವತಾಭಾವಕ್ಕೆ ಪೋಷಕವಾಗುತ್ತದೆಂಬ ವಿಜ್ಞಾನವನ್ನರಿತ ಮಹರ್ಷಿಗಳು ಅದಕ್ಕನುಗುಣವಾಗಿ ನೈವೇದ್ಯವನ್ನು ವಿಧಿಸಿದ್ದಾರೆ".

ಅನುಕೂಲವಿದ್ದಾಗ ಆಯಾ ದೇವತೆಗಳಿಗೆ ಪ್ರಿಯವಾದ ಆಹಾರಗಳನ್ನು ನಿವೇದಿಸಬಹುದು. ಅದಿಲ್ಲದಿದ್ದಾಗ ನಮ್ಮಲ್ಲಿ ಯಾವುದಿದೆಯೋ ಅದನ್ನೇ ಅರ್ಪಿಸಬಹುದು. ಇಲ್ಲಿ ಭಗವದರ್ಪಣ ಬುದ್ಧಿ-ಮನೋಭಾವಗಳಿಗೇ ಪ್ರಾಧಾನ್ಯ.  

ದೇವರ ಪೂಜೆಯಲ್ಲಿ ನಿವೇದಿತವಾದ ಪ್ರಸಾದಗಳು ಮಾತ್ರವೆ ಸೇವನೆಗೆ ಯೋಗ್ಯ. ಪೂಜೆಗೆ ಅವಕಾಶವಿಲ್ಲದಿದ್ದಾಗ ಎಲೆಗೆಬಂದ ಪದಾರ್ಥವನ್ನು ಮಾನಸಿಕವಾಗಿಯಾದರೂ ಭಗವದರ್ಪಣ ಮಾಡಿ ಸ್ವೀಕರಿಸಬೇಕೆಂಬುದು ಜ್ಞಾನಿಗಳ ಆದೇಶ. ಅದರಿಂದಲೇ ನಮಗೆ ಶ್ರೇಯಸ್ಸು-ಪ್ರೇಯಸ್ಸುಗಳೆರಡೂ ಸಿದ್ಧಿಸುವುವು.    

ಸೂಚನೆ: 17/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.  

Sunday, March 15, 2020

ಮಂಗಲನೀರಾಜನದೊಂದಿಗೆ ಮಂಗಲಮೂರ್ತಿಯ ದರ್ಶನ (Mangalanirajanadondige Mangalamurthiya Darshana)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
  
ದೇವರಿಗೆ ಮಾಡುವ ದೀಪಾರತಿಯು ಮಂಗಲಾರತಿಯೆನಿಸಿಕೊಳ್ಳುತ್ತದೆ. 'ಮಂಗಂ ಲಾತೀತಿ ಮಂಗಲಂ' -ಮಂಗಲ ಎಂದರೆ ಸುಖವನ್ನು, ಆನಂದವನ್ನು ಕೊಡುವುದು. ದೇವರ ಪೂಜೆಯಲ್ಲಿ ಎರಡು ಬಾರಿ ದೀಪಾರತಿಯನ್ನು ಮಾಡುವ ಪದ್ಧತಿ ಇದೆ. ಧೂಪಸಮರ್ಪಣೆಯ ನಂತರ ಮೂರು ಬತ್ತಿಗಳನ್ನು ಸೇರಿಸಿ ತುಪ್ಪದಲ್ಲಿ ಅದ್ದಿ ಮಾಡುವ ಆರತಿ ಪೂರ್ವನೀರಾಜನ. ನೈವೇದ್ಯದ ನಂತರ ಮಾಡುವುದು ಉತ್ತರನೀರಾಜನ ಅಥವ ಮಹಾಮಂಗಲಾರತಿ. 

ದೀಪಾರತಿಮಾಡುವಾಗ ಪ್ರದಕ್ಷಿಣಾಕಾರವಾಗಿ ಸುತ್ತುತ್ತ ಭಗವಂತನನ್ನು ಪಾದಾದಿಕೇಶಪರ್ಯಂತ ದರ್ಶನಮಾಡಿಸಬೇಕು. ಮಂಗಲಮಯವಾದ ದೀಪದ ಪ್ರಕಾಶದಲ್ಲಿ ಭಗವಂತನ ಶ್ರೀಮೂರ್ತಿಯನ್ನು ದರ್ಶನಮಾಡಿ ನಂತರ ಅದನ್ನು ಹೃದಯದಲ್ಲಿಯೂ ತುಂಬಿಕೊಳ್ಳಬೇಕು. ಹೀಗಾದಲ್ಲಿ ಇದು ನಿಜಕ್ಕೂ ಸುಖವನ್ನೂ ಆನಂದವನ್ನೂ ನೀಡುವ 'ಮಂಗಲ'ಆರತಿಯಾಗುತ್ತದೆ.

ದೀಪಾರತಿಯ ಪ್ರಕಾರಗಳು:
ಏಕದೀಪಾರತಿ, ಕುಂಭಾರತಿ, ಐದು, ನಾಲ್ಕು, ಹನ್ನೆರಡು, ಅರವತ್ತುನಾಲ್ಕು ಅಂತೆಯೇ ಸಹಸ್ರದೀಪಗಳಿಂದ ಆರತಿಯನ್ನು ಮಾಡುವುದೂ ಶಾಸ್ತ್ರಸಮ್ಮತವಾಗಿದೆ. ಈ ಸಂಖ್ಯೆಗಳು ತತ್ತ್ವಕ್ಕೆ ಸಂಬಂಧಪಟ್ಟು, ಒಳದರ್ಶನದ ಕಮಲದಳಗಳ ಪ್ರತಿನಿಧಿಯಾಗಿವೆ ಎಂಬುದು ಜ್ಞಾನಿಗಳಿಂದ ತಿಳಿದುಬರುವ ವಿಚಾರ. ಏಕಾರತಿಯು ಏಕಮಾತ್ರ ದೀಪವಾದ ಪರಮಾತ್ಮನ ಪ್ರತೀಕ. ಸಹಸ್ರದೀಪವೆಂಬುದು ಒಳಗಿನ ಸಹಸ್ರಾರಕಮಲವನ್ನು ನೆನಪಿಸುತ್ತದೆ. ವೃಕ್ಷಾರತಿಯೆಂಬುದು (ಒಂದರಮೇಲೊಂದರಂತೆ ಸಾಲುಗಳಿಂದಕೂಡಿದ್ದು, ಕೆಳಗಡೆಯದು ದೊಡ್ಡವೃತ್ತವಾಗಿಯೂ ಮೇಲೆಹೋದಂತೆ ಸಣ್ಣದಾಗುತ್ತಾ ಕೊನೆಗೆ ಒಂದೇ ದೀಪವಾಗಿರುವುದು) ಅಂತರಂಗದಲ್ಲಿ ಕಾಣುವ ಜ್ಯೋತಿಯ ಸಾಲಿನ ಪ್ರತೀಕ.  ಕುಂಭಾರತಿಯು ಕಂಠದಿಂದ ಮೇಲಿರುವ ಶಿರಸ್ಸನ್ನೂ ಅಲ್ಲಿ ಬೆಳಗುವ ಪರಮಾತ್ಮ ಜ್ಯೋತಿಯನ್ನೂ ಸೂಚಿಸುತ್ತದೆ.

ದೀಪಾರತಿಯ ಸಂದರ್ಭದಲ್ಲಿ ಮೂಲಜ್ಯೋತಿಯ ದರ್ಶನಾನುಭವದ ನೆನಪನ್ನು ಕೊಡುವ ಮಂತ್ರವನ್ನೂ, 'ನಿತ್ಯಸೂರಿಗಳು ತ್ರುಟಿಕಾಲವೂ ಎವೆಯಿಕ್ಕದೇ ದರ್ಶಿಸಿ ಆನಂದಿಸುವ ಪರಮಾತ್ಮಜ್ಯೋತಿ' ಎಂದು ಕೊಂಡಾಡುವ ಮಂತ್ರಗಳನ್ನೂ ಪಠಿಸುವ ರೂಢಿಯಿದೆ. ದೇವದೇವನಿಗೆ ಮಂಗಲಾಶಾಸನವನ್ನು ಮಾಡುವ ಶ್ಲೋಕಗಳ ಪಠನವೂ ರೂಢಿಯಲ್ಲಿದೆ. 

ದೇವರಿಗೆ ಕರ್ಪೂರಾರತಿಯನ್ನೂ ಮಾಡುವಾಗ ಒಳ್ಳೆಯ ಕರ್ಪೂರವಾದರೆ ಆರತಿಯಾದನಂತರ ತಟ್ಟೆಯಲ್ಲಿ ಸ್ವಲ್ಪವೂ ಕರೆ ಉಳಿಯುವುದಿಲ್ಲ. ಜೀವನು ಕರ್ಪೂರದಂತೆ ಪರಮಾತ್ಮನಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿ ಅವನಲ್ಲೇ ಲಯವಾಗಬೇಕೆನ್ನುವುದನ್ನು ಸೂಚಿಸುತ್ತದೆ ಕರ್ಪೂರಾರತಿ. 

ಹೀಗೆ ಮಹರ್ಷಿಗಳಿಂದ ಯೋಜಿತವಾಗಿರುವ ದೀಪೋಪಚಾರವೂ ಉಳಿದ ಉಪಚಾರಗಳಂತೆ ಜೀವಿಯನ್ನು ದೇವನಲ್ಲಿ ಸೇರಿಸುವ ಸೇತುವೆಯೇ ಆಗಿದೆ ಎಂದು ಶ್ರೀರಂಗಮಹಾಗುರುಗಳು ಅಪ್ಪಣೆಕೊಡಿಸಿದ್ದರು.

ಸೂಚನೆ: 14/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.  

Tuesday, March 10, 2020

ಭಗವಂತನ ಸನ್ನಿಧಿಯಲ್ಲಿ ದೀಪ (Bhagavantana Sannidhiyalli Deepa)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)



'ವೇದಗಳ ಸಾರವಾಗಿರುವ ಪರಮಾತ್ಮಜ್ಯೋತಿ ಹೃದಯಕಮಲದ ಮಧ್ಯೆ ಬೆಳಗುತ್ತಿದೆ' ಎಂಬುದಾಗಿ ತಮ್ಮ ಅಂತರಂಗದ ಅನುಭವವನ್ನು ಸಾರುತ್ತಾರೆ ಶ್ರೀಶಂಕರರು. ಶ್ರೀಕೃಷ್ಣಜನನವಾದೊಡನೆ ದೇವಕೀದೇವಿಯು "ವಿಷ್ಣುಃ ಅಧ್ಯಾತ್ಮದೀಪಃ" ಎಂಬುದಾಗಿ ಆ ಶಿಶುವನ್ನು ತಾನು ನೋಡಿದ ರೀತಿಯನ್ನು ವರ್ಣಿಸುತ್ತಾಳೆ. ಆರ್ಷಸಾಹಿತ್ಯಗಳೂ ಸಹ ಭಗವಂತನನ್ನು ಜ್ಯೊತಿಸ್ವರೂಪನೆಂದೇ ವರ್ಣಿಸುತ್ತವೆ. ಹೀಗೆ ಸ್ವಯಂ ದೀಪರೂಪನೇ ಆಗಿರುವ ಭಗವಂತನ ಮುಂದೆ ದೀಪವನ್ನು ಬೆಳಗಿಸುವುದು, ದೀಪದಿಂದ ಆರತಿ-ಉಪಚಾರಗಳನ್ನು ಮಾಡುವುದರ ಔಚಿತ್ಯವೇನು ಎಂಬುದರ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ.

ದೀಪರೂಪನ ಪ್ರತಿನಿಧಿ:
ನಮ್ಮೊಳಗೆ ಬೆಳಗುವ ನಿಧಿಯಾದ ಪರಮಾತ್ಮದೀಪದ ಧರ್ಮಗಳನ್ನು ಬಹುಮಟ್ಟಿಗೆ ಹೊಂದಿರುವುದರಿಂದ ಹೊರದೀಪವು ಅದರ ಪ್ರತಿನಿಧಿಯೆನಿಸಿಕೊಳ್ಳುತ್ತದೆ. "ನಮ್ಮನ್ನೇ ನಾವು ಹೊರಗಡೆಯ ದರ್ಪಣದಲ್ಲಿ ನೋಡಲು ಇಚ್ಚಿಸುವಂತೆ ಮಹರ್ಷಿಗಳು ತಾವು ಒಳಗೆ ಕಂಡ ಜ್ಯೋತಿಯನ್ನು ಹೊರಗೆ ಪ್ರಕೃತಿದರ್ಪಣದಲ್ಲಿ ನೋಡಲಿಚ್ಚಿಸಿ ಅದಕ್ಕಾಗಿ ತಂದ ವ್ಯವಸ್ಥೆಯಿದು" ಎಂಬುದಾಗಿ ಶ್ರಿರಂಗಮಹಾಗುರುಗಳು ಅಪ್ಪಣೆಕೊಡಿಸಿದ್ದರು. ಭೂಪಟವನ್ನು ನೋಡಿ ಭೂಮಿಯ ಪರಿಚಯಪಡೆಯುವಂತೆ ಹೊರದೀಪದಿಂದ ಒಳದೀಪವನ್ನು ಪರಿಚಯಿಸಿ ಅತ್ತಕಡೆ ನಮ್ಮನ್ನು ಸೆಳೆಯುವ ಉಪಾಯವಿದು. ದೇಶಕ್ಕೆ ಸಲ್ಲುವ ಗೌರವವೇ ದೇಶದ ಪ್ರತಿನಿಧಿಯಾದ ಧ್ವಜಕ್ಕೂ ಸಲ್ಲುವಂತೆ ಪರಂಜ್ಯೋತಿಯಷ್ಟೇ ಗೌರವವನ್ನು ಹೊರದೀಪಕ್ಕೆ ಕೊಟ್ಟಿರುವರು ಮಹರ್ಷಿಗಳು. ಮಾನವಶರೀರದಲ್ಲಿನ ಬೆನ್ನುಮೂಳೆಯೇ ಒಂದು ಸ್ತಂಭವಾಗಿದೆ. ಅದರ ತುದಿಯಲ್ಲಿ ಬೆಳಗುತ್ತಿದೆ ಪರಮಾತ್ಮದೀಪ. ಇದರ ಹೊರನಕ್ಷೆಯೇ ಹೊರಗೆ  ಉಪಯೋಗಿಸುವ ದೀಪಸ್ತಂಭ.

ಬೆಳಗಿಸುವ ಕ್ರಮ; 
ಬತ್ತಿ-ಎಣ್ಣೆಗಳಿಗನುಗುಣವಾಗಿ ದೀಪಶಿಖೆಯ ವರ್ಣವಿರುವುದು. ಮಹರ್ಷಿಗಳ ವೈಜ್ಞಾನಿಕದೃಷ್ಟಿಯು ಅಂತರಂಗದ ದೀಪಶಿಖೆಯನ್ನು ಹೋಲುವಂತೆ ಹೊರದೀಪವು ಇರಲನುಗುಣವಾದ ಬತ್ತಿ, ಎಣ್ಣೆಗಳನ್ನು ಗುರುತಿಸಿತು. 'ಮೃಣಾಳಸೂತ್ರದಿಂದ ಮಾಡಿದ ಬತ್ತಿಯನ್ನು ನಿರ್ದಿಷ್ಟಪ್ರಮಾಣದ ಶಿಖೆಯನ್ನಿಟ್ಟು, ಅಂದೇ ಕಾಯಿಸಿದ ಹಸುವಿನ ತುಪ್ಪದಿಂದ ಬೆಳಗಿಸಿದಾಗ ಯೋಗಿಗೋಚರವಾದ ದೀಪಜ್ವಾಲೆಯು ಉಂಟಾಗುವುದು' ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸಿದ್ದಾರೆ.

ದೀಪಕ್ಕೆ ಹಸುವಿನ ತುಪ್ಪವನ್ನು ಬಳಸುವುದು ಉತ್ತಮಕಲ್ಪ. ಅದಿಲ್ಲದಿದ್ದರೆ ಎಳ್ಳೆಣ್ಣೆ ಮುಂತಾದ ಶಾಸ್ತ್ರೋಕ್ತವಾದ ಎಣ್ಣೆಗಳನ್ನು ಉಪಯೋಗಿಸಬಹುದು. ಮೂರು ಬತ್ತಿಗಳನ್ನು ಒಟ್ಟಿಗೆ ಹೊಸೆದು ಬತ್ತಿಮಾಡಿ ಉಪಯೋಗಿಸಬೇಕು. ತ್ರಿಗುಣಾತ್ಮಕವಾದ ಈ ಪ್ರಕೃತಿಯಲ್ಲಿ ಅಧ್ಯಾತ್ಮಸ್ನೇಹ(ಭಗವಂತನಸ್ನೇಹ)ವೆಂಬ ಜಿಡ್ಡು ಸೇರಿದಾಗ ಅಲ್ಲಿ ಪರಮಾತ್ಮದೀಪವು ಬೆಳಗುತ್ತದೆ ಎಂಬುದನ್ನು ಸಾರುತ್ತದೆ ಇಂತಹ ಹೊರದೀಪ. ಹೀಗೆ ತುಪ್ಪದಿಂದ ಬೆಳಗುವ ದೀಪವು ಹೊರಸೂಸುವ ಪರಿಮಳವು ಯೋಗಮಾರ್ಗಕ್ಕೆ ಪೋಷಕವಾಗಿ, ಪ್ರಾಣಗಳನ್ನು ಮೇಲ್ಮುಖವಾಗಿ ಏರಿಸುತ್ತದೆ. ದೀಪದರ್ಶನವೇ ಮಂಗಲಕರ, ಪೀಡಾಪರಿಹಾರಕ. 'ಮೃತ್ಯುವನ್ನು ದಾಟಿಸುವುದೇ ದೀಪಸೇವೆಯ ಫಲ' ಎಂಬುದಾಗಿ ಶಾಸ್ತ್ರಗಳು ಘೋಷಿಸುತ್ತವೆ.

ಹೊರಪೂಜೆಗೆ ಯಾವುದೇ ಅನುಕೂಲವಿಲ್ಲದಿದ್ದಾಗ ದೇವರಮುಂದೆ ಒಂದು ದೀಪವನ್ನು ಹಚ್ಚಿಟ್ಟರೆ ಸಾಕು ಎಂಬುದಾಗಿ ಪೂಜೆಯ ಸಂಕ್ಷಿಪ್ತರೂಪವನ್ನೂ ಜ್ಞಾನಿಗಳು ಸೂಚಿಸಿದ್ದಾರೆ. ನಮ್ಮ ಶ್ರೇಯಸ್ಸಿಗಾಗಿಯೇ ಯಥಾಶಕ್ತಿ ದೇವರಿಗೆ ದೀಪೋಪಚಾರವನ್ನು ಸಮರ್ಪಿಸಬೇಕಾಗಿದೆ.

ಸೂಚನೆ: 10/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Saturday, March 7, 2020

ಬ್ರಹ್ಮಚರ್ಯ ಮುಪ್ಪಿನಲ್ಲೊ ಮೊಳಕೆಯಲ್ಲೋ ? (Brahmacarya muppinallo molakeyallo ?)

ಲೇಖಕರು:  ಡಾ || ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)

ಪೌರಾಣಿಕ ಕಥೆಗಳನು ಟಿವಿನಲ್ಲಿ ನೋಡಿದರೆ ಬ್ರಹ್ಮಚಾರೀ ಅಂದಕೂಡಲೇ ಕಾಡು-ಆಶ್ರಮಗಳಲ್ಲಿ ವಾಸ, ಕಠೋರ ಪರಿಶ್ರಮ, ಗುರುಸೇವೆ , ಭಿಕ್ಷೆ,  ವೇದ-ಮಂತ್ರಗಳ ಅಧ್ಯಯನ ಮಾಡುತ್ತಿರುವ ಹುಡುಗರ ಚಿತ್ರಣ ಸಾಮಾನ್ಯವಾಗಿ ಮೂಡುವುದು. ಸಣ್ಣ ವಯಸ್ಸಿನಲ್ಲಿ ಇದೇನು ಶೋಷಣೆ ! ತಂದೆ-ತಾಯಿಯರಿಂದ ಬೇರ್ಪಡಿಸಿ ಕಠೋರವಾದ ಜೀವನ ನಡೆಸಲು ಹೊರದೂಡುವುದು ಕ್ರೌರ್ಯದ ಪರಮಾವಧಿ.'ವಯಸ್ಸಾದ ಮೇಲೆ ರಾಮ ಕೃಷ್ಣ ಅಂತ ಇರೋದು ತಪ್ಪಿದ್ದಲ್ಲ. ಈ ವಯಸ್ಸಿನಲ್ಲಿದೆಲ್ಲ ಯಾಕಪ್ಪ ಬೇಕಿತ್ತು' ಎಂಬುದು ಸಹಜ ಪ್ರತಿಕ್ರಿಯೆ.          

ಯಾವುದೇ ಸಸಿಯನ್ನು ಬೆಳೆದ ಮೇಲೆ ಬಗ್ಗಿಸಲಾರೆವು. ಮಡಿಕೆಯ ಆಕಾರ ಒಣಗಿದ ಮೇಲೆ ಬದಲಾಯಿಸಲು ಸಾಧ್ಯವಿಲ್ಲ.  ಈ ಮಾತುಗಳು ಪ್ರಸಿಧ್ಧವಾಗಿದ್ದರೂ ಇಡೀ ಜೀವನ ಮೋಜು ಗಮ್ಮತ್ತಿನಲ್ಲಿ ಕಳೆದು ರಿಟೈರ್ ಆದಮೇಲೆ ಜಪ, ತಪ, ಭಜನೆ ಅಂತ ಮಾಡೋವ್ರು ನೋಡುತ್ತಲೇ ಇದ್ದೇವಲ್ಲ ಎಂಬ ಸಂಶಯ ಹುಟ್ಟುವುದು ಸಹಜವಷ್ಟೇ. 

ಇಲ್ಲಿ ಜಪ, ತಪಾದಿಗಳಿಂದ ಆಗ ಬೇಕಾದದ್ದು ಏನು ಎಂಬ ಅರಿವು ಅವಶ್ಯ. ಜಪ ತಪಾದಿಗಳು ಸಾಧನವಷ್ಟೇ. ನಮ್ಮೊಳಗಿನ ಚೈತನ್ಯವನ್ನು ಕಾಣುವುದೇ ಗುರಿ. ಕೊನೆಯ ಕಾಲದಲ್ಲಿ ಎಲ್ಲರೂ ಹುಡುಕುವ ನೆಮ್ಮದಿ ಶಾಂತಿ ಸಾರ್ಥಕತೆ, ಆ ಒಳ ಅನುಭವದಿಂದ ಮಾತ್ರ ಬರತಕ್ಕದ್ದು. ಅದು ಫಲಿಸಬೇಕಾದರೆ ನಮ್ಮ ಮೈ-ಮನಗಳು ಚೆನ್ನಾಗಿ ತಪದ ತಾಪದಲ್ಲಿ ಬೆಂದು ಪಾಕವಾಗಬೇಕು. ಇದು ಮುಪ್ಪಿನಲ್ಲಿ ಪ್ರಾರಂಭಿಸಿ ಸಾಧ್ಯವಾಗುವುದಿಲ್ಲ.  ನೂರಾರು ವಾಹನಗಳು ಚಲಿಸುವ ರಸ್ತೆಯ ನಡುವೆ ಸೈಕಲ್ ಕಲಿಯುವುದು ಅಸಾಧ್ಯ. ಖಾಲಿ ಮೈದಾನದಲ್ಲೇ ಕಲಿಯಬೇಕು. ಅಂತೆಯೇ ಒಳ ಬ್ಯಾಲೆನ್ಸ್ ಕಲಿಯಬೇಕಾದರೆ ಸಂಸಾರದ ಸುಖ-ದುಃಖ ಕಷ್ಟ-ಕಾರ್ಪಣ್ಯಗಳೆಂಬ ಟ್ರಾಫಿಕ್ ನಡುವೆ ಕಲಿಯಲು ಅಸಾಧ್ಯ . ಅದರ ಸೋಂಕಿಲ್ಲದ ಮುಗ್ಧವಾದ ಬಾಲ್ಯದಲ್ಲಿ ಕಲಿಯುವುದು ಸುಲಭ. ಒಬ್ಬ ಸಂಯಮಿ ಜ್ಞಾನಿಯಾದ ಗುರುವಿನ ಆಶ್ರಯ ಬೇಕು. ಉಳಿದಂತೆ ಆಶ್ರಮ, ಗುರುಸೇವೆ ಮಂತ್ರ, ಯಜ್ಞ ಮುಂತಾದವೆಲ್ಲ ಕುಶಲನಾದ ಗುರುವು ಉಪಯೋಗಿಸುವ ಸಾಧನಗಳಷ್ಟೇ ಎಂದು ಶ್ರೀರಂಗ ಮಹಾಗುರುಗಳು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದರು.

ಸೂಚನೆ: 07/03/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Wednesday, March 4, 2020

ಭಗವಂತನಿಗೆ ಪತ್ರೆಗಳಿಂದ ಪೂಜೆ (Bhagavantanige Patregalinda Pooje)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)



ಭಗವಂತನ ಪೂಜೆಗೆ ಪುಷ್ಪಗಳಲ್ಲದೆ ಕೆಲವು ಪತ್ರಗಳನ್ನು ಉಪ್ಯೋಗಿಸುವುದುಂಟು. ಅದರಲ್ಲಿ ತುಲಸಿ, ಬಿಲ್ವ ಹಾಗೂ ಗರಿಕೆಹುಲ್ಲು ಪ್ರಸಿದ್ಧವಾದವು.
ತುಲಸಿ: ತುಲಸಿ ಎಂಬ ಪದಕ್ಕೆ 'ನಿಸ್ಸಮಾನವಾದದ್ದು' ಎಂದರ್ಥ. ಭಗವತ್ಭಾವವನ್ನು ತುಂಬುವ ಸಾಮರ್ಥ್ಯದಲ್ಲಿ ಇದಕ್ಕೆ ಸಮನಾದ ಬೇರೊಂದು ವಸ್ತುವಿಲ್ಲ. ಇದರ ಸ್ಪರ್ಶ-ಗಂಧಗಳು ಬ್ರಹ್ಮಭಾವಕ್ಕೇರಿಸಲು ಸಮರ್ಥವಾಗಿವೆ. ಆದಕಾರಣಾದಿಂದಲೇ ಇದು ಅತ್ಯಂತ ಪವಿತ್ರವಾದ ವಸ್ತುವಾಗಿ ಪರಿಗಣಿಸಲ್ಪಡುತ್ತದೆ. ಇದನ್ನು ಮೈಲಿಗೆಯಿಲ್ಲದೆ, ಶುಚಿಯಾಗಿ ಸ್ನಾನಮಾಡಿಯೇ ಆಹರಣಮಾಡಬೇಕೆಂಬ ನಿಯಮವಿದೆ. ಇದೆಷ್ಟು ಶಕ್ತಿಯುತವಾದದ್ದೆಂದರೆ ಇತರ ಪುಷ್ಪಗಳಂತೆ ಇದಕ್ಕೆ ನಿರ್ಮಾಲ್ಯದೋಷವಿಲ್ಲ. ಒಮ್ಮೆ ಪೂಜೆಗೆ ಬಳಸಿದ್ದನ್ನು ಮತ್ತೊಂಮೆ ತೊಳೆದು ಉಪಯೋಗಿಸಬಹುದು. ಒಣಗಿದ ತುಳಸಿಯೂ ಪೂಜಾಯೋಗ್ಯವೆ. ಅದೂ ಸಿಗದಿದ್ದಾಗ ತುಲಸಿಕಾಷ್ಠವನ್ನೋ ಅಥವಾ ಅದರ ಪಾತಿಯ ಮೃತ್ತಿಕೆಯನ್ನೋ ಉಪಯೋಗಿಸಬಹುದೆಂಬ ನಿಯಮವು ಇದರ ಪಾವಿತ್ರ್ಯತೆಯ ಪರಮಾವಧಿಯನ್ನು ಸೂಚಿಸುತ್ತದೆ.

ತುಲಸಿಯನ್ನು ಅಮೃತದಿಂದ ಹುಟ್ಟಿ(ಅಂದರೆ ಅಮೃತಭಾವವನ್ನು ತುಂಬುವ ಧರ್ಮವುಳ್ಳ), ಕೇಶವನಿಗೆ ಪ್ರಿಯಳಾಗಿರುವ ಎಲೈ ತುಲಸಿಯೇ, ಕೇಶವನ ಆರಾಧನೆಗಾಗಿ ನಿನ್ನನ್ನು ಆಹರಣ ಮಾಡುತ್ತೇನೆ, ಕ್ಷಮಿಸು ನನ್ನನ್ನು, ಎಂಬರ್ಥವನ್ನುಳ್ಳ ಶ್ಲೋಕದಿಂದ ಪ್ರಾರ್ಥನೆಯನ್ನು ಮಾಡಿಯೇ ಆಹರಣಮಾಡಬೇಕೆಂಬ ನಿಯಮವಿದೆ. ಅದನ್ನು ಗಿಡದಿಂದ ಬಿಡಿಸುವಾಗ ಒಂದೊಂದೇ ಎಲೆಯನ್ನಾಗಿ ಬಿಡಿಸಬಾರದು. ೪ಎಲೆಗಳಿಂದ ಕೂಡಿದ ಗುಂಪೇ ಒಂದು'ದಳ' ಎಂಬುದಾಗಿ ವ್ಯವಹರಿಸಲ್ಪಡುತ್ತದೆ.

ವಿಷ್ಣುಪೂಜೆಗೆ ಉಪಯೋಗಿಸುವ ತುಲಸಿಯು ನಾಲ್ಕುದಳಗಳಿಂದಿರಬೇಕು. ಇದು ಜೀವನದ ನಾಲಕ್ಕನೆಯ ಅವಸ್ಥೆಯಾದ ತುರೀಯವನ್ನೂ, ನಾಲ್ಕು ಪುರುಷಾರ್ಥಗಳನ್ನೂ ಒದಗಿಸುವ, ಯೋಗ-ಭೋಗಗಳೆರಡನ್ನೂ ಕರುಣಿಸುವ ಪವಿತ್ರವಾದ ವಸ್ತು ಎಂಬುದರ ಸೂಚಕವಾಗಿದೆ. ತುಲಸೀಕಾಷ್ಠದಿಂದ ತಯಾರಿಸಲ್ಪಟ್ಟ ಮಣಿಮಾಲೆಯು ಶ್ರೀವೈಷ್ಣವರಲ್ಲಿ ಜಪ-ಧ್ಯಾನಾದಿಗಳಿಗೆ ಪ್ರಶಸ್ತವಾದದ್ದು.

  

ಬಿಲ್ವ: ಶ್ರೀರಂಗಮಹಾಗುರುಗಳು 'ಶಿವಲಿಂಗವು ಹೇಗೆ ತ್ರಿಮೂರ್ತ್ಯಾತ್ಮಕವಾಗಿದೆಯೋ ಅಂತೆಯೇ ಬಿಲ್ವಪತ್ರದಲ್ಲಿಯೂ ತ್ರಿಮೂರ್ತ್ಯಾತ್ಮಕವಾದ ಧರ್ಮವಿದೆ' ಎಂದು ಸೂಚಿಸಿದ್ದರು. ಬಿಲ್ವಪತ್ರವನ್ನೂ ಒಂದೊಂದು ಎಲೆಯಾಗಿ ಬಿಡಿಸದೆ ಮೂರು ಎಲೆಗಳಗುಂಪಾಗಿಯೇ ಬಿಡಿಸಬೇಕು. 'ಏಕಬಿಲ್ವಂ ಶಿವಾರ್ಪಣಾಂ' ಎನ್ನುವಾಗ ಮೂರರಗುಂಪೇ 'ಏಕಬಿಲ್ವ'ವಾಗುತ್ತದೆ.

ಶರೀರದಲ್ಲಿ ಪಿತ್ತ ಹಾಗೂ ತಾಪಗಳು ಸಮಾಧಿಸ್ಥಿತಿಗೆ ಭಂಗವನ್ನುಂಟುಮಾಡುತ್ತವೆ. ಬಿಲ್ವಪತ್ರೆಯು ಇವೆರಡನ್ನೂ ದೂರಮಾಡಿ ಧಾತುಸಾಮ್ಯವನ್ನೂ, ಧಾತುಪ್ರಸನ್ನತೆಯನ್ನೂ ಉಂಟುಮಾಡಿ ಭಗವದ್ಭಾವಕ್ಕೆ ಪುಷ್ಟಿಯನ್ನು ನೀಡುತ್ತದೆ. ಬಿಲ್ವಫಲವೂ ಸಹ ಈ ಧರ್ಮದಿಂದ ಕೂಡಿದೆ. ಪೂಜೆಯಲ್ಲಿ ಶಿವಲಿಂಗದ ಮೇಲೆ ಬಿಲ್ವದ ಪತ್ರೆ-ಕಾಯಿಗಳೆರಡನ್ನೂ ಅರ್ಪಿಸಬಹುದು.

ಗರಿಕೆ: ಗರಿಕೆಹೂವು ಗಣೇಶನಪೂಜೆಗೆ ಪ್ರಶಸ್ತ. ಗರಿಕೆಯ ಹುಲ್ಲು ಗಣೇಶ ಹಾಗೂ ಹಯಗ್ರೀವದೇವರ ಪೂಜೆಗೆ ವಿಶೇಷವಾದದ್ದು. ಗರಿಕೆಯ ಹುಲ್ಲನ್ನು ಹೋಮಕ್ಕೆ ಸಮರ್ಪಿಸಿದಾಗ ಅದರ ಗಂಧವು ದೇಹದಲ್ಲಿ ಅಲ್ಪಾಯುಸ್ಸನ್ನುಂಟುಮಾಡುವ ಕೇಂದ್ರಗಳನ್ನು ಮುಚ್ಚಿ, ದೀರ್ಘಾಯುಸ್ಸನ್ನು ಕೊಡುವ ಕೇಂದ್ರಗಳನ್ನು ತೆರೆಯುತ್ತದೆ.

ಹೀಗೆ ವಿವಿಧ ಪತ್ರ-ಪುಷ್ಪಗಳ ವೈಶಿಷ್ಟ್ಯವನ್ನು ಪತ್ತೆಮಾಡಿ ವಿವಿಧ ದೇವತೆಗಳ ಪೂಜಾಕಲ್ಪದಲ್ಲಿ ಅವುಗಳಿಗೆ ಸ್ಥಾನವನ್ನು ಕೊಟ್ಟ ಮಹರ್ಷಿಗಳಿಗೆ, ಅವರ ವಿಜ್ಞಾನಕ್ಕೆ ನಮೋನಮಃ |  


ಸೂಚನೆ: 03/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Saturday, February 29, 2020

ದೇವರಿಗೆ ಪುಷ್ಪಸಮರ್ಪಣೆ (Devarige Puspasamarpaṇe)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)



ಮಾನಸ ಪೂಜೆಯಲ್ಲಿ ಸಮಾಧಿಪುಷ್ಪವನ್ನೂ, ಅದರ ವಿಸ್ತಾರವಾದ ಅಹಿಂಸಾ ಮುಂತಾದ ಎಂಟು ಚಿತ್ತವೃತ್ತಿಪುಷ್ಪಗಳನ್ನೂ ಸಮರ್ಪಿಸಿದನಂತರ ಆ ಪುಷ್ಪಗಳ ಪ್ರತೀಕವಾಗಿ ಹೊರಗಡೆಯ ಪುಷ್ಪಗಳನ್ನು ಭಗವಂತನಿಗೆ ಸಮರ್ಪಣೆ ಮಾಡುವುದು ಜ್ಞಾನಿಗಳ ಪೂಜಾವಿಧಾನ.

ಪುಷ್ಪಗಳಲ್ಲಿ ಪೂಜಾಯೋಗ್ಯ ಧರ್ಮಗಳು:
ಭಕ್ತಿಭಾವವಿಲ್ಲದ ಪೂಜೆ ಹೇಗೆ ಭಗವಂತನಿಗೆ ಅಪ್ರಿಯವೋ ಅಂತೆಯೇ ನಿರ್ಗಂಧವಾದ ಹಾಗೂ ದುರ್ಗಂಧದಿಂದ ಕೂಡಿದ ಹೂವುಗಳೂ ಭಗವಂತನಿಗೆ ಅಪ್ರಿಯ. ಆದ್ದರಿಂದ ಕಾಗದದಿಂದ ತಯಾರಿಸಿದ ಹೂವುಗಳನ್ನು ಹೊರಗಡೆಯ ಅಲಂಕಾರಕ್ಕೆ ಬಳಸಬಹುದೇ ಹೊರತು ಪೂಜೆಗಲ್ಲ. ಅನುಕೂಲವಿದ್ದಲ್ಲಿ ಅಲಂಕಾರಕ್ಕೂ ಸುವಾಸನೆಯಪುಷ್ಪಗಳನ್ನೇ ಉಪಯೋಗಿಸಬೇಕು. ಪ್ಲಾಸ್ಟಿಕ್‌ಪದಾರ್ಥವು ಪೂಜಾ-ವಿರುದ್ಧವಾದ ಧರ್ಮಗಳಿಂದ ಕೂಡಿದೆಯೆಂಬುದು ಶ್ರೀರಂಗಮಹಾಗುರುಗಳ ಸಂಶೋಧನೆಯಿಂದ ನಿರೂಪಿತವಾದಸತ್ಯ. ಆದ್ದರಿಂದ ಅದರಿಂದ ತಯಾರಿಸಲ್ಪಟ್ಟ  ಹೂವುಗಳನ್ನು ಬಳಸಲೇಬಾರದೆಂಬುದು ಅವರ ಆಶಯವಾಗಿತ್ತು.
ವೈಷ್ಣವಮೂರ್ತಿಗಳಿಗೆ ಬಿಳಿ ಹಾಗು ಸುವರ್ಣವರ್ಣದ ಹೂವುಗಳು, ಶೈವಮೂರ್ತಿಗಳಿಗೆ ಕೆಂಪು ವರ್ಣದ ಹೂವುಗಳು ಪ್ರಿಯವೆಂಬ ಮಾತಿನಂತೆ  ಬೇರೆಬೇರೆ ಹೂವುಗಳು ಬೇರೆಬೇರೆ ದೇವತೆಗಳ ಪೂಜೆಯಲ್ಲಿ ವಿಶೇಷವಾಗಿ ಉಪಯೋಗಿಸಲ್ಪಡುತ್ತಿವೆ. ಯಾವ ವರ್ಣ ಯಾವ ದೇವತಾ ಭಾವಕ್ಕೆ ನಮ್ಮನ್ನು ಏರಿಸಲು ಸಮರ್ಥವಾಗುತ್ತದೆಯೆಂಬ ವಿಜ್ಞಾನವನ್ನರಿತು ತಂದ ವ್ಯವಸ್ಥೆಯಿದು ಎಂಬಂಶವನ್ನೂ ಶ್ರೀರಂಗಮಹಾಗುರುಗಳು
ತೋರಿಸಿಕೊಟ್ಟರು.

ಕಮಲದ ವೈಶಿಷ್ಟ್ಯ:
ಗುಲಾಬಿ, ಜಾಜಿ, ಮಲ್ಲಿಗೆ, ಸಂಪಿಗೆ ಮುಂತಾದ ಎಲ್ಲ ಪುಷ್ಪಗಳೂ ಪೂಜಾಯೋಗ್ಯವಾದವುಗಳೇ ಆದರೂ ಕಮಲಪುಷ್ಪವು ನಾನಾಕಾರಣಗಳಿಂದ ಪೂಜೆಗೆ ಅತ್ಯಂತ ಪ್ರಶಸ್ತವಾದದ್ದೆಂದು ಜ್ಞಾನಿಗಳಿಂದ ಕೊಂಡಾಡಲ್ಪಟ್ಟಿದೆ. ಎಲ್ಲ ದೇವತೆಗಳ ಪೂಜೆಗೂ ಯೋಗ್ಯವಾಗಿರುವ ಪುಷ್ಪವಿದು. ಪರಮಾತ್ಮನನ್ನು ನೆನಪಿಸಿ ಆ ಭಾವಕ್ಕೆ ಏರಿಸುವ ಧರ್ಮವು ಉಳಿದೆಲ್ಲ ಪುಷ್ಪಗಳಿಗಿಂತ ಇದರಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಪ್ರಧಾನಕಾರಣ. ಯೋಗಿಗಳ ಅಂತರ್ದರ್ಶನಕ್ಕೆ ವಿಷಯರಾದ ದೇವತೆಗಳಿಗೆ ಆಸನ, ಕೈಯಲ್ಲಿನ ಆಭರಣ, ಅಂಗಾಂಗಗಳ ಸ್ವರೂಪ(ಹಸ್ತಪದ್ಮ, ಮುಖಪದ್ಮ, ನೇತ್ರಪದ್ಮ ಇತ್ಯಾದಿ) ಎಲ್ಲವೂ ಕಮಲವೇ. ಇದು ಅತಿಹೆಚ್ಚುಸಂಖ್ಯೆಯ ದಳಗಳಿಂದ ಕೂಡಿರುವುದರಿಂದ ಯೋಗಿಗಳ ಅಂತರಂಗಯಾತ್ರೆಯಲ್ಲಿ ಅತ್ಯುನ್ನತಮಟ್ಟದಲ್ಲಿನ ಸಹಸ್ರಾರಕಮಲದ ಪ್ರತೀಕವಾಗಿದೆ. ಕಮಲಪುಷ್ಪವು ಉದಯಸೂರ್ಯನ ಕಿರಣಗಳಿಂದ ಮೆಲ್ಲಗೆ ಅರಳುವ ಪರಿಯು ಸಮಾಧಿಯಿಂದ ಎಚ್ಚರಗೊಂಡು ನಿಧಾನವಾಗಿ ತೆರೆಯುವ ಒಬ್ಬ ಯೋಗಿಯ ಕಣ್ಣನ್ನು ಹೋಲುತ್ತದೆ. ತಾವರೆಯು ನೀರಿನಲ್ಲೇ ಇದ್ದರೂ ಹೇಗೆ ನೀರಿಗೆ ಅಂಟುವುದಿಲ್ಲವೋ ಅಂತೆಯೇ ಸಂಸಾರದಲ್ಲೇ ಇದ್ದರೂ ಪುಣ್ಯ-ಪಾಪಗಳ ಫಲವಾದ ಸುಖ-ದುಃಖಗಳಿಗೆ ಜ್ಞಾನಿಯು ಅಂಟಿಕೊಳ್ಳುವುದಿಲ್ಲವೆಂಬ ಜ್ಞಾನಿಯ ಗುಣಲಕ್ಷಣದ ಗುರುತಾಗಿದೆ ಕಮಲ.

ವರ್ಗೀಕರಣ:
ಗೊಬ್ಬರದಗುಂಡಿ, ಮಲಗಳಿಂದ ಕೂಡಿದ ಅಶುಚಿಸ್ಥಾನಗಳಲ್ಲಿ, ಸ್ಮಶಾನಭೂಮಿಗಳಲ್ಲಿ ಬೆಳೆದ ಹೂವುಗಳಲ್ಲಿ ಪೂಜಾಯೋಗ್ಯವಾದ ಧರ್ಮಗಳಿರುವುದಿಲ್ಲ. ತನ್ನ ಮನೆಯಲ್ಲಿ ತಾನೇ ನೀರುಹಾಕಿ ಬೆಳೆಸಿದ ಪುಷ್ಪಗಳು ಉತ್ತಮಕಲ್ಪ. 'ದೇವರಪೂಜೆಗಾಗಿ ಗಿಡ ಪುಷ್ಪಿಸಲಿ' ಎಂಬ ಮನೋಧಾರೆಯ ಜೊತೆಗೆ ಜಲಧಾರೆಯನ್ನು ಬಿಟ್ಟು ಬೆಳಸಿದಾಗ ಆ ಪುಷ್ಪಗಳಲ್ಲಿ ವಿಶೇಷಧರ್ಮಗಳು ಕೂಡಿಬರುತ್ತವೆ.
ಸೃಷ್ಟಿಯಲ್ಲಿ ತಾವಾಗಿಯೇ ಬೆಳೆದ ಪುಷ್ಪಗಳು ಮಧ್ಯಮಕಲ್ಪ, ಅಂಗಡಿಯಿಂದ ಕೊಂಡುಕೊಂಡದ್ದು ಅಧಮಕಲ್ಪ, ಯಾಚಿತವಾದದ್ದು ಅಧಮಾಧಮಕಲ್ಪ, ಕದ್ದುತಂದದ್ದು ಅದಕ್ಕಿಂತಲೂ ಕೆಲಮಟ್ಟದ್ದು ಎಂಬುದಾಗಿ ಜ್ಞಾನಿಗಳು ವರ್ಗೀಕರಿಸಿದ್ದಾರೆ.
ಪುಷ್ಪಗಳನ್ನು ತೊಳೆದು ಶುದ್ಧವಾದ ನೀರಿನಿಂದ ಮಂತ್ರಸಹಿತವಾಗಿ ಪ್ರೋಕ್ಷಿಸಿ ಭಕ್ತಿಪೂರ್ವಕವಾಗಿ ಪೂಜೆಗೆ ಉಪಯೋಗಿಸಬೇಕು.

ಸೂಚನೆ: 29/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Wednesday, February 26, 2020

ಸರ್ವಗಂಧನಿಗೆ ಗಂಧಸಮರ್ಪಣಾ ಪೂಜೆ (Sarvagandhanige Gandhasamarpana Pooje)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
ಪೂಜಾಕ್ರಮದಲ್ಲಿ ಪಂಚೋಪಚಾರಪೂಜೆ, ಶೋಡಶೋಪಚಾರಪೂಜೆ ಇತ್ಯಾದಿ ಅನೇಕ ವಿಧಾನಗಳುಂಟು. ಇವುಗಳಲ್ಲಿ ಪಂಚೋಪಚಾರ ಪೂಜಾವಿಧಾನದ ಅಂಗಗಳಾದ ಗಂಧ, ಪುಷ್ಪ, ಧೂಪ, ದೀಪ ನೈವೇದ್ಯ ಇವುಗಳನ್ನು ಕುರಿತ ಸಂಕ್ಷಿಪ್ತವಿವೇಚನೆಯನ್ನು ಮುಂದೆ ಮಾಡಲಾಗುವುದು.

ಸೃಷ್ಟಿತತ್ತ್ವಗಳಲ್ಲಿ ಪೃಥ್ವೀತತ್ತ್ವದ ವಿಶೇಷಲಕ್ಷಣ ಗಂಧ. ಹೊರಗೆ ನಮಗೆ ಸಿಗುವ ಗಂಧವು ಸ್ಥೂಲವಾದದ್ದು. ಆದರೆ ಸಗುಣವಾದ ಭಗವಂತನನ್ನು ಧ್ಯಾನಮಾಡುವವರಿಗೆ ಅಂತರಂಗದಲ್ಲಿ ತನ್ಮಾತ್ರೆಗಳ ಸ್ಥಾನವನ್ನು ದಾಟಿ ಮೇಲೇರಿದಾಗ ದಿವ್ಯಗಂಧದ ಆಘ್ರಾಣವಾಗುತ್ತದೆ ಎಂಬುದು ಜ್ಞಾನಿಗಳ ಅನುಭವ. ಆ ದೈವೀಕ್ಷೇತ್ರವನ್ನೂ ದಾಟಿ ಮೇಲೇರಿದಾಗ ಪರಮಾದ್ಭುತವಾದ ಬ್ರಹ್ಮಗಂಧದ ಅನುಭವವೂ ಆಗುವುದುಂಟು ಮತ್ತು ಮೇಲೆ ಹೇಳಿದ ಎಲ್ಲ ಗಂಧಗಳೂ ಭಗವಂತನ ವಿಸ್ತಾರಗಳೇ ಎಂಬುದು ಜ್ಞಾನಿಗಳು ಕಂಡರಿತ ಸತ್ಯ.

ಗಂಧೋಪಚಾರದಲ್ಲಿ ಸ್ಥೂಲವಾದ ಗಂಧವು 'ಭಗವಂತನ ಬ್ರಹ್ಮಗಂಧದ ಒಂದಂಶ' ಎಂಬುದನ್ನು ನೆನಪಿಸಿಕೊಂಡು ಆತನ ಮಹಿಮೆಯನ್ನು ಸ್ಮರಿಸುವುದು, 'ಅವನ ಪದಾರ್ಥವನ್ನು ಅವನಿಗೇ ಒಪ್ಪಿಸುತ್ತೇನೆ' ಎಂಬ ಭಾವದಿಂದ ಆತನಿಗೆ ಅರ್ಪಿಸುವುದು- ಇದೇ 'ಭಗವತ್ಸಮರ್ಪಣೆ' ಎನಿಸಿಕೊಳ್ಳುತ್ತದೆ. ಇಷ್ಟಲ್ಲದೆ ನಾವು ಕೊಡುವ ಗಂಧದಿಂದ ಆತನಿಗೆ ಆಗಬೇಕಾದದ್ದೇನಿದೆ?ಸಮರ್ಪಣೆಯಿಂದ ಯಾರಿಗೆ, ಏನು ಲಾಭ? ಮಾನಸಿಕವಾಗಿ ಗಂಧಸಮರ್ಪಣೆ ಮಾಡುತ್ತಾ ಧ್ಯಾನದಲ್ಲಿರಬಹುದಲ್ಲ, ಹೊರ ಪದಾರ್ಥದ ಸಮರ್ಪಣೆಯೇಕೆ? ಎನ್ನಬಹುದು.

'ದಾರಿತಪ್ಪಿದ ರಾಜಕುಮಾರನನ್ನು ರಾಜನಬಳಿ ಕರೆದೊಯ್ದರೆ ರಾಜಕುಮಾರನ ಜೊತೆಗೆ ಕರೆದೊಯ್ದವನಿಗೂ ರಾಜನ ದರ್ಶನವಾಗುವುದು. ಅಂತೆಯೇ ಎಲ್ಲೋ ಕಾಡಿನಲ್ಲಿ ಬೆಳೆದ ಮರವನ್ನು ಸದ್ಭಾವದಿಂದ ತಂದು ತೇಯ್ದು ಅದನ್ನು ಭಗವಂತನ ಪಾದಕ್ಕೆ ಸೇರಿಸಿದಾಗ ಆ ಕ್ರಿಯೆಯ ಮೂಲಕ ಸೇರಿಸಿದವನಿಗೂ ಭಗವದ್ಭಾವ-ತನ್ಮಯತೆ ಉಂಟಾಗುತ್ತದೆ' ಎಂದು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದರು.

ಮಾನಸಸಮರ್ಪಣೆಯಿಂದ ಪೂಜಕನಿಗೆ ಮಾತ್ರವೇ ಲಾಭ. ಆದರೆ ಜ್ಞಾನಿಯಾದವನು ಬ್ರಹ್ಮಭಾವದಲ್ಲಿ ಭಗವಂತನಿಗೆ ಅರ್ಪಿಸುವ ಗಂಧದಲ್ಲಿ ಆತನ ಬ್ರಹ್ಮಭಾವತರಂಗಗಳು ಬೆಸೆದುಕೊಳ್ಳುತ್ತದೆ. ಅಂತಹ ಗಂಧವು ದರ್ಶನ-ಸ್ಪರ್ಶಗಳ ಮೂಲಕ ಪ್ರಸನ್ನತೆಯನ್ನುಂಟುಮಾಡುವ ಪ್ರಸಾದವಾಗಿ ಪರಿಣಮಿಸುತ್ತದೆ. ಸ್ವೀಕರಿಸಿದವರನ್ನು ಭಗವದ್ಭಾವಕ್ಕೇರಿಸಿ ಪವಿತ್ರಗೊಳಿಸುತ್ತದೆ. ಇದರಿಂದ ಗಂಧವನ್ನೀಯುವ ವೃಕ್ಷವೂ ಪೂಜಾಸಾಮಗ್ರಿಯಾಗಿ ಧನ್ಯತೆಯನ್ನು ಪಡೆಯುತ್ತದೆ. 'ಮರ'ವು 'ಅಮರ'ವಾಗುತ್ತದೆ. ಆದ್ದರಿಂದ ಗಂಧಸಮರ್ಪಣೆಯ ಲಾಭ ಗಂಧದ ವೃಕ್ಷಕ್ಕೆ, ಪೂಜಕನಿಗೆ, ಪ್ರಸಾದಸ್ವೀಕರಿಸುವವರಿಗೆ ಇಷ್ಟೂ ಜನರಿಗೂ ಉಂಟು.

ಸುಗಂಧಗಳು:
ಮನಸ್ಸನ್ನು ಊರ್ಧ್ವಮುಖವಾಗಿ ಭಗವಂತನೆಡೆಗೆ ಹರಿಸುವ ಗಂಧವೇ ಸುಗಂಧ-ಭಗವಂತನಿಗೆ ಪ್ರಿಯ. ಇದನ್ನಾಧರಿಸಿ ಶ್ರೀಗಂಧವು ಅತ್ಯಂತ ಪ್ರಶಸ್ತವಾದದ್ದು ಎಂಬುದಾಗಿ ಜ್ಞಾನಿಗಳಿಂದ ಗುರುತಿಸಲ್ಪಟ್ಟಿದೆ. ಇದರ ವಾಸನೆ ಮನಸ್ಸನ್ನು ಭಗವಂತನೆಡೆ ಏರಿಸುವುದಲ್ಲದೆ ತಂಪು, ಹಿತವನ್ನುಂಟುಮಾಡುತ್ತದೆ. ಕೆಲವು ದೈಹಿಕ-ಮಾನಸಿಕ ರೋಗಗಳನ್ನು ಪರಿಹರಿಸುತ್ತದೆ. ಮೂರುಕ್ಷೇತ್ರಗಳಲ್ಲೂ (ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕ) ಸಹಕಾರಿಯಾಗುತ್ತದೆ. ಚಂದನ, ಸೀಬೇಮರ, ದೇವದಾರು ಇವುಗಳು ಶ್ರೀಗಂಧದಲ್ಲಿನ ಕೆಲವು ಅಂಶಗಳನ್ನು ಮಾತ್ರ ಸ್ವಲ್ಪಮಟ್ಟಿಗೆ ಹೊಂದಿರುತ್ತವೆ. ಶ್ರೀಗಂಧವು ಸಿಗದಿದ್ದಾಗ ಇವುಗಳನ್ನು ಬಳಸಬಹುದು.

ಗಂಧದ ವರ್ಣ:
ಶ್ರೀಗಂಧಕ್ಕೆ ಕೇಸರಿಯನ್ನು ಸೇರಿಸಿದಾಗ ಬರುವ ಸುವರ್ಣವರ್ಣವು ಸಕಲದೇವತಾಪ್ರಿಯವಾದದ್ದು. ರಕ್ತವರ್ಣದಗಂಧವು ಸೂರ್ಯ, ಗಣಪತಿಪೂಜೆಗೆ ವಿಶೇಷ. ಶ್ರೀಗಂಧ ಸಿಗದಿದ್ದಾಗ ಪೂಜೆಯನ್ನು ನಿಲ್ಲಿಸುವ ಅಗತ್ಯವಿಲ್ಲ, ಮಾನಸಿಕವಾಗಿ ಪೃಥ್ವೀತತ್ತ್ವವನ್ನೇ ಸಮರ್ಪಿಸಬಹುದೆಂಬುದು ಜ್ಞಾನಿಗಳ ಆದೇಶ.  

ಸೂಚನೆ: 25/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Saturday, February 22, 2020

ಪೂಜೆಯು ಭಗವಂತನಲ್ಲಿ ಸೇರಿಸುವ ಸೇತುವೆ (Pujeyu bhagavantanalli Serisuva setuve.)

    ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ: lekhana@ayvm.in)


ಅಂತರಂಗ-ಬಹಿರಂಗ ಪೂಜೆಗಳೆರಡರಲ್ಲಿಯೂ  ಮನಸ್ಸು ಭಗವಂತ್‌ಸಂಬಂಧವನ್ನು ಹೊಂದಿರಬೇಕೆನ್ನುವುದೇ ಮುಖ್ಯ. ಇದನ್ನು ಸಾಧಿಸಲನುಗುಣವಾಗಿ ಜ್ಞಾನಿಗಳು ಪೂಜಾಸಿದ್ಧತೆಯನ್ನು ರೂಪಿಸಿದ್ದಾರೆ. 'ಪೂಜೆಯು ಜೀವ-ದೇವರನ್ನು ಸೇರಿಸುವ ಸೆತುವೆಯಾಗಬೇಕು' ಎನ್ನುವುದು ಶ್ರೀರಂಗಮಹಾಗುರುಗಳ ಸಂದೇಶ.

ಈ ನೇರದಲ್ಲಿ ನಮ್ಮನ್ನು ಸಿದ್ಧಪಡಿಸಿಕೊಳ್ಳುವ ಕ್ರಮ:- ೧. ಶರೀರಶುದ್ಧಿ: ಸ್ನಾನವೇ ಪೂಜಾಸಿದ್ಧತೆಯ ಮೊದಲಹಂತ.
ಪೂಜೆಯೆ ಉದ್ದೇಶಕ್ಕೆ ಬೇಕಾದ ಮನೋಲಯವನ್ನುಂಟು ಮಾಡುವ ಸ್ಥಿತಿಯೇ 'ಶುದ್ಧಿ'ಯೆನಿಸಿಕೊಳ್ಳುತ್ತದೆ.  ಶರೀರದಲ್ಲಿ ಮಲ-ಮೂತ್ರಗಳ ವೇಗಗಳು ಮನಸ್ಸು ಭಗವಂತನೆಡೆ ಹರಿಯಲು ತಡೆಯೊಡ್ಡುವುದರಿಂದ ಈ ಬಾಧೆಯನ್ನು ನೀಗಿಸಿಯೇ ಸ್ನಾನಮಾಡುವುದು ಒಳಿತು. ಆಹಾರಸೇವನೆಯು ಈ ವೇಗಗಳಿಗೆ ನಮ್ಮನ್ನೆಳೆಯುವುದರಿಂದಲೇ ಪೂಜೆಗೆ ನಿರಾಹಾರರಾಗಿರಬೇಕೆಂಬ ನಿಯಮ. ಆದರೆ ಪ್ರಕೃತಿಸೌಲಭ್ಯವಿಲ್ಲದಿದ್ದರೆ ಲಘುಪದಾರ್ಥವನ್ನು ಸೇವಿಸಿ ಪೂಜಾಯೋಗ್ಯವಾದ  ಸ್ಥಿತಿಯಲ್ಲಿರಬೇಕು.  

೨. ಮನಸ್ಸಿನ ಶುದ್ಧಿ(ಅರಿಷಡ್ವರ್ಗಗಳ ನಿವಾರಣೆ): ಶಾರಿರಿಕವಾದ ವೇಗಗಳು ಮನಸ್ಸಿನ ಸ್ಥಿತಿಯನ್ನು ಕೆಡಿಸುವಂತೆಯೇ ಕಾಮ(ಸಲ್ಲದ ಆಸೆಗಳು), ಕ್ರೋಧ(ಕಾಮವು ಈಡೇರದಿದ್ದಾಗ ಏರ್ಪಡುವ ವೇಗ), ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಮಾನಸಿಕವೇಗಗಳೂ ಮನೋಲಯಕ್ಕೆ ಅಡ್ಡಿಯನ್ನುಂಟುಮಾಡುತ್ತವೆ. ಮನಸ್ಸಿನ ತಂಪನ್ನು ಹಾಳುಮಾಡಿ ಪೂಜೆಗೆ ಸಲ್ಲದ ಉಷ್ಣವನ್ನೇರ್ಪಡಿಸುತ್ತವೆ.
ಆದ್ದರಿಂದಲೇ 'ಪೂಜೆಗೆ ಮುನ್ನ ಒಳ್ಳೆಯ ವಿಷಯಗಳ ಅನುಸಂಧಾನವಾಗಲಿ; ವೇಗಗಳುಂಟಾಗುವ ವಾತಾವರಣಾದಲ್ಲಿ ಪೂಜೆಯನ್ನಿಟ್ಟುಕೊಳ್ಳಬೇಡಿ' ಎಂಬ ಶಾಸ್ತ್ರಾದೇಶ. ಕೋಪದ ಪ್ರಸಂಗಗಳನ್ನುಂಟುಮಾಡುವ ಮಾತುಗಳನ್ನು ತಪ್ಪಿಸಬೇಕು. ದುಷ್ಟವೇಗಗಳಿದ್ದರೆ ಅವುಗಳ ನಿವಾರಣೆಗಾಗಿ ವಿಧಿಸಲ್ಪಟ್ಟಿರುವ ಆಚಮನ ಇತ್ಯಾದಿ ವಿಜ್ಞಾನಪೂರ್ಣವಾದ ಕರ್ಮಗಳನ್ನುಮಾಡಿ, ಅವುಗಳು ನಿವಾರಣೆಯಾಗುವವರೆಗೂ ಕಾದು, ನಂತರ ಪೂಜೆಯನ್ನಾಚರಿಸಬೇಕು. ಪೂಜೆಗಾಗಿ ಉಡುವ ಮಡಿಬಟ್ಟೆಗಳೂ ಮನಸ್ಸಿನ ಸುಸ್ಥಿತಿಗೆ ಪೋಷಕವೆಂಬ ಅಂಶವು ಮಹರ್ಷಿಗಳ ಅನ್ವೇಷಣೆಯಿಂದ ತಿಳಿದುಬಂದಿರುವ ಸತ್ಯ.
ಪೂಜೆಗೆ ಪದಾರ್ಥಗಳನ್ನು ಕೊಳ್ಳುವಾಗ ಅಥವ ಕೊಡುವಾಗ ಅನವಶ್ಯಕ ಲೆಕ್ಕಾಚಾರಮಾಡಿಸುವ ಲೋಭ, ಪೂಜೆಯಲ್ಲಿ ಅನಗತ್ಯವಾದ ಆಡಂಬರವನ್ನು ತೋರಿಸುವ ಮದ, ಜೊತೆಯಲ್ಲಿ ಹುಟ್ಟಬಹುದಾದ ಮಾತ್ಸರ್ಯ - ಈ ಎಲ್ಲವೇಗಗಳೂ ನೀಗಿದಾಗಮಾತ್ರವೇ ಶುದ್ಧಿ.

೩. ಭಾವಶುದ್ಧಿ: ಭಾವಶುದ್ಧಿಯೂ ಸಿದ್ಧತೆಯ ಮುಖ್ಯ ಅಂಗವಾಗಿದೆ. ನೈವೇದ್ಯದವೇಳೆಗೆ ಆ ಪದಾರ್ಥ ತನಗೆ ಇಷ್ಟವಾದದ್ದೆನ್ನುವ ಆಸೆ ತಲೆದೋರುವುದು, ಪಾಕತಯಾರಿಸುವಾಗ ಮನೆಯಲ್ಲಿ ಯಾರಿಗೆ ಯಾವುದು ಇಷ್ಟ ಮುಂತಾದ ಲೆಕ್ಕಾಚಾರಗಳು, ಯೋಚನಾಲಹರಿಗಳು! ಇತ್ಯಾದಿ ಯೋಚನೆಗಳೆಲ್ಲವೂ ಭಾವಶುದ್ಧಿಗೆ ಭಂಗ ತರುವಂತವು. ಅವಶ್ಯವಾಗಿ ತಡೆಯಲೇಬೇಕಾದವುಗಳು.
ಈ ಎಲ್ಲ ವೇಗಗಳನ್ನೂ ನಿವಾರಿಸಿಕೊಂಡು ತಂಪಾದ ವಾತಾವರಣದಲ್ಲಿ, ತಂಪಾದ ಮನಸ್ಸಿನೊಡನೆ, ತಂಪಾದ ಅಮೃತಮಯನಾದ ಭಗವಂತನನ್ನು ಪೂಜಿಸಬೇಕಾಗಿದೆ. ಹೀಗಾದಾಗ ಪೂಜೆಯು ನಮ್ಮನ್ನು ಭಗವಂತನಲ್ಲಿ ಸೇರಿಸುವ ಸೇತುವೆಯಾಗಬಲ್ಲದು.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Tuesday, February 18, 2020

ಪೂಜಾ ವೈವಿಧ್ಯಗಳು (Pujaa vaividhyagalu)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ: lekhana@ayvm.in)


ಸ್ವಾರ್ಥಪೂಜೆ, ಪರಾರ್ಥಪೂಜೆ

ಸ್ವಾರ್ಥಪೂಜೆಯೆನ್ನುವುದು ಅವರವರ ಉದ್ಧಾರಕ್ಕಾಗಿ ಮಾಡುವ ಕ್ರಿಯೆಯಾದ್ದರಿಂದ ಸರ್ವರಿಗೂ ಅದಕ್ಕೆ ಅಧಿಕಾರವುಂಟು. ಮನೆಗಳಲ್ಲಿ ಶಿವಲಿಂಗ, ಸಾಲಿಗ್ರಾಮ, ದೇವತಾಮೂರ್ತಿಗಳು ಮುಂತಾದವುಗಳಿಗೆ ಪೂಜಿಸಬಹುದು. ಮನೆಯ ಹಿರಿಯರು ಈ ಪೂಜೆಯನ್ನು ಕೈಗೊಂಡು ನಡೆಸುವುದು, ಇತರರು ಸ್ಥಳಶುದ್ದಿ, ಪೂಜೆಗೆ ಬೇಕಾದ ಸಲಕರಣಗಳನ್ನು ಒದಗಿಸುವುದು ಇತ್ಯಾದಿಕಾರ್ಯಗಳನ್ನು ನಿರ್ವಹಿಸುವುದು ನಮ್ಮ ದೇಶದಲ್ಲಿ ರೂಢಿಯಲ್ಲಿದೆ. ಇದಲ್ಲದೆ ಅವರವರ ಆತ್ಮಸಾಧನೆಗಾಗಿ ಸ್ತೋತ್ರ-ಧ್ಯಾನಾದಿಗಳನ್ನು ಎಲ್ಲರೂ ಪ್ರತ್ಯೇಕವಾಗಿಯೇ ಮಾಡುಬೇಕು.

ಪರಾರ್ಥಪೂಜೆಯೆನ್ನುವುದು ಹೆಚ್ಚು ಜವಾಬ್ದಾರಿಯ ಕೆಲಸ. ವಿಶೇಷವಾದ ಜ್ಞಾನ-ಕಲೆಗಳುಳ್ಳವನೇ ಇದನ್ನು ನಿರ್ವಹಿಸಲು ಸಮರ್ಥನಾಗುತ್ತಾನೆ. ಆತನು ಭಗವತ್‌ಸಾಕ್ಷಾತ್ಕಾರವನ್ನು ಮಾಡಿಕೊಂಡಿರಬೇಕು. ಮುಂದೆ ಅದರಿಂದಾದ ಆನಂದವನ್ನೂ ಸೇರಿಸಿ ಪೂಜೆಯನ್ನು ಮಾಡಬೇಕು. ಅಂತಹ ಪೂಜೆಯಿಂದ ಆತನು ಅದನ್ನು ವೀಕ್ಷಿಸುವವರಮೇಲೆ ತನ್ನ ಜ್ಞಾನಾನಂದಗಳ ಪ್ರಭಾವವನ್ನು ಬೀರುತ್ತಾನೆ.  ಭಗವಂತನ ಪ್ರಸನ್ನತೆಯನ್ನು ನಾನಾ ರೀತಿಯಲ್ಲಿ ಇತರರಿಗೆ ವಿತರಣೆಮಾಡುವ ಹೊಣೆಗಾರಿಕೆಯಿಂದ ಕಾರ್ಯವೆಸಗಬೇಕಾಗಿದೆ. ಅಷ್ಟು ಸಾಮರ್ಥ್ಯದಿಂದಕೂಡಿದ ಜ್ಜಾನಿಯಾದವನನ್ನು ದೇವಾಲಯಗಳಲ್ಲಿ ಅರ್ಚಕನಾಗಿ ನೇಮಿಸುವುದು ಮಹರ್ಷಿಗಳು ಬೆಳಸಿದ ವಿಧಾನ. ಸರ್ವರಿಗೂ ಸುಲಭವಾಗಿ ಉತ್ಕೃಷ್ಟ ಫಲ ದೊರೆಯುವಂತಾಗಲಿ ಎಂಬುದು ಈ ವ್ಯವಸ್ಥೆಯಹಿಂದಿರುವ ಉದ್ದೇಶ.


ಅಂತರಂಗ(ಮಾನಸ)ಪೂಜೆ-ಬಾಹ್ಯಪೂಜೆ

ಅಂತರಂಗ ಪೂಜೆಯೆನ್ನುವುದು ಹೊರಸಾಮಗ್ರಿಗಳಾವುದನ್ನೂ ಬಳಸದೆ ಮಾನಸಿಕವಾಗಿ ಮಾತ್ರವೇ ನಡೆಸುವ ಪೂಜೆ. ಭಗವಂತನ ಮೂರ್ತಿಯನ್ನು ಏಕಾಗ್ರತೆಯಿಂದ ಧ್ಯಾನ ಮಾಡುವುದು ಇದರ ಪ್ರಧಾನ ಅಂಗ. ಅದರ ವಿಸ್ತಾರವಾಗಿ ಮಾನಸಿಕವಾಗಿಯೇ ಗಂಧ, ಪುಷ್ಪ ಇತ್ಯಾದಿಗಳನ್ನು ದೇವರಿಗೆ ಅರ್ಪಿಸುವುದು. ಸೃಷ್ಟಿಯ ಪದಾರ್ಥಗಳೆಲ್ಲವೂ ತನಗಾಗಿ ಎಂಬ ಭಾವನೆಯಿಲ್ಲದೇ ಭಗವಂತನಿಂದ ವಿಸ್ತಾರವಾದ ಅವುಗಳನ್ನು ಅವನಿಗೇ ಸಮರ್ಪಿಸುವ ಮನೋಭಾವವು ಇಲ್ಲಿ ಪ್ರತಿಫಲಿಸುತ್ತದೆ.

ಬಾಹ್ಯಪೂಜೆಯು ಹೊರ ಸಾಮಗ್ರಿಗಳನ್ನು-ಧೂಪ, ದೀಪ, ನೈವೇದ್ಯ ಇತ್ಯಾದಿಗಳನ್ನು-ಆಶ್ರಯಿಸಿ ನಡೆಸುವ ಕ್ರಿಯೆ. ಅಂತರಂಗಪೂಜೆಗೆ ಹೊರಸಿದ್ಧತೆಗಳು ಹೆಚ್ಚಿಲ್ಲವಾದ್ದರಿಂದ ಸುಲಭಸಾಧ್ಯವೆಂದು ಕಂಡರೂ ಮನಸ್ಸು ಅತ್ಯುನ್ನತ ಮಟ್ಟಕ್ಕೆ ಏರಬೇಕಾಗಿರುವುದರಿಂದ ಇದು ಸಾಮಾನ್ಯರಿಗೆ ಸುಲಭವಲ್ಲ. ಶಂಕರಭಗವತ್‌ಪಾದರು 'ಮಣಿಸನ್ನಿಭನಾದ ಆತ್ಮಲಿಂಗವನ್ನು ಶರೀರವೆಂಬಪುರದ ಹೃದಯ ಕಮಲದಲ್ಲಿ ಆರಾಧಿಸುತ್ತೇನೆ. ಶ್ರದ್ಧಾನದಿಯ ಪರಿಶುದ್ಧವಾದ ಮನಸ್ಸೆಂಬ ಜಲದಿಂದ ಅಭಿಷೇಕವನ್ನು ಮಾಡುತ್ತೇನೆ. ಸಮಾಧಿಯೆಂಬ ಪುಷ್ಪದಿಂದ ಪೂಜಿಸುತ್ತೇನೆ' ಮುಂತಾಗಿ ಸ್ತುತಿಸುತ್ತಾರೆ. ಇದು ಅವರಂತವರಿಗೆ ಮಾತ್ರವೇ ಎಟುಕುವಂತದ್ದು.

ಬಾಹ್ಯಪೂಜೆಯು ಸಾಮಾನ್ಯರಿಗೂ ಸುಲಭಸಾಧ್ಯ. ಆದರೆ 'ಬಾಹ್ಯಪೂಜೆಯು ಬಾಹ್ಯದಲ್ಲಿ ಪ್ರಾರಂಭವಾಗಿ, ಬಾಹ್ಯದ ಉದ್ದೇಶದೊಂದಿಗೆ, ಬಾಹ್ಯದಲ್ಲೇ ಕೊನೆಗೊಂಡರೆ ಅಂತಹ ಪೂಜೆಗೆ ಬೆಲೆಯಿಲ್ಲ' ಎಂಬ ಶ್ರೀರಂಗಮಹಾಗುರುಗಳ ಎಚ್ಚರಿಕೆಯು ಇಲ್ಲಿ ಸ್ಮರಣೀಯವಾಗಿದೆ. ಬಾಹ್ಯಪೂಜೆಯು ಮನಸ್ಸನ್ನು ಒಳಗೆ ಎಳೆಯುವಂತಾಗಬೇಕು. ದೇವೀಸ್ತೋತ್ರದಲ್ಲಿ ಬರುವ 'ಬಾಹ್ಯಪೂಜಾ ಪರಾಙ್ಮುಖೀ'ಯೆಂಬ ವಾಕ್ಯ ಸ್ಮರಣೀಯವಾಗಿದೆ. ಯಾವರೀತಿಯ ಪೂಜೆಯೇ ಆದರೂ ಭಗವಂತನಲ್ಲಿ ಪ್ರೀತಿಯೇ ಪೂಜೆಗೆ ಮುಖ್ಯಸಾಧನ.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

Saturday, February 15, 2020

ದೇವತಾಪೂಜೆ - ಸಂಕ್ಷಿಪ್ತ ವಿವೇಚನೆ (Deevataapuje - Sanksipta vivechane)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್  
(ಮಿಂಚಂಚೆ: lekhana@ayvm.in)


ಪ್ರಪಂಚದ ಎಲ್ಲ ಜನಾಂಗದವರೂ ಅವರವರ ಮತಾನುಸಾರವಾಗಿ ಪೂಜೆಯನ್ನು ಮಾಡುವುದುಂಟು. ಪೂಜೆಗೆ ಪ್ರತಿಯೊಂದು ಜನಾಂಗದಲ್ಲೂ ಅವರದೇ ಆದ ಹೆಸರು, ವಿಧಾನಗಳುಂಟು. ಪ್ರಕೃತ ಲೇಖನವು ಭಾರತೀಯ ಮಹರ್ಷಿಗಳಿಂದ ರೂಪಿಸಲ್ಪಟ ಪೂಜಾವಿಧಾನದ ಕೆಲವು ಅಂಶಗಳನ್ನು ವಿವೇಚಿಸುವುದಾಗಿದೆ.

'ಪೂಜಾ' ಪದದ ವಿವರಣೆ
ಪೂಜೆಯೆನ್ನುವ ಪದ ದೇವರಿಗೆ ಆತನ ಸ್ತೋತ್ರಸಹಿತವಾಗಿ ಮಾಡುವ ಪುಷ್ಪ ಸಮರ್ಪಣೆ, ಗಂಧ ಸಮರ್ಪಣೆ ಇತ್ಯಾದಿ ಉಪಚಾರಗಳನ್ನು ಸೂಚಿಸುತ್ತದೆ. ಈ ಪದ ಜೀವಿಗೆ ಭಗವಂತನ ತಾದಾತ್ಮ್ಯವನ್ನು ಉಂಟುಮಾಡುವ ಕ್ರಿಯೆಯನ್ನು ಸೂಚಿಸುತ್ತದೆ. ಇದಕ್ಕೆ ಆರಾಧನೆ ಎಂಬ ಪದವನ್ನೂ ಬಳಸುವುದುಂಟು. ಆರಾಧನೆಯೆಂದರೆ 'ರಾಧ ಸಂಸಿದ್ಧೌ'-ಎಲ್ಲಾ ವಿಧದಿಂದಲೂ ಪೂರ್ಣಸಿದ್ಧಿಯನ್ನು ಪಡೆಯಲು ನಡೆಸುವ ಕ್ರಿಯೆ.


ಪೂಜೆಯ ಉದ್ದೇಶ
ಒಬ್ಬ ಜ್ಞಾನಿಯಾದವನು ಸಂಸಾರಚಕ್ರದಿಂದ ಬಿಡುಗಡೆಹೊಂದಿ ಮೋಕ್ಷವನ್ನು-ಪಡೆಯುವ ಉದ್ದೇಶದಿಂದ ಮಾತ್ರವೇ ಪೂಜೆಯನ್ನು ಮಾಡುತ್ತಾನೆ. 
ಆದರೆ ಸಾಮಾನ್ಯ ಜನರು ವ್ಯವಹಾರದ ಜೊತೆಯಲ್ಲಿಯೇ ಭಗವಂತನನ್ನೂ ಪಡೆಯಬೇಕಾಗುತ್ತದೆ. ಅಂದರೆ ಧರ್ಮಾರ್ಥಕಾಮಮೋಕ್ಷಗಳಿಗಾಗಿ, ಯೋಗ-ಭೋಗಗಳಿಗಾಗಿ ಪೂಜಿಸುತ್ತಾನೆ. ಆದ್ದರಿಂದಲೇ 'ಚತುರ್ವಿಧಪುರುಷಾರ್ಥ ಫಲಸಿದ್ಧ್ಯರ್ಥಂ' ಎಂದು ಪೂಜಾಕಾಲದಲ್ಲಿ ಸಂಕಲ್ಪವನ್ನು ಮಾಡುವುದು.ಪುರುಷಾರ್ಥಗಳನ್ನು ಪಡೆಯುವ ಉದ್ದೇಶ ಕೆಳಮಟ್ಟದ್ದಲ್ಲ. ಶ್ರೀರಂಗಮಹಾಗುರುಗಳು 'ಇಂದ್ರಿಯಗಳೂ ಕೂಡ ಭಗವಂತನ ಪ್ರಸಾದವಾಗಿಯೇ ನಮಗೆ ಲಭಿಸಿರುವುದರಿಂದ ಅವುಗಳ ಸುಖದಿಂದ ವಂಚಿತರಾಗಬೇಕಿಲ್ಲ. ಗಾಡಿಯನ್ನು ಎಳೆಯುವ ಕುದುರೆಗೂ ಆಹಾರ ನೀಡುವುದು ಹೇಗೆ ಅವಶ್ಯಕವೋ ಹಾಗೆ ಶರೀರಯಾತ್ರೆಗೆ ಸಾಧನವಾದ ಇಂದ್ರಿಯಗಳಿಗೂ ಆಹಾರವನ್ನು ಕೊಡಬೇಕು. ಅರ್ಥ-ಕಾಮಗಳು ಅಪೇಕ್ಷಣೀಯವೇ. ಆದರೆ ಅವು ಧರ್ಮ-ಮೋಕ್ಷಗಳ ಹದ್ದುಬಸ್ತಿನಲ್ಲಿರಬೇಕು' ಎಂಬ ಎಚ್ಚರಿಕೆಯನ್ನು ನೀಡಿದ್ದರು. ಋಷಿಪ್ರಣೀತವಾದ ಪೂಜಾವಿಧಾನವು ಜೀವಿಯನ್ನು ಭಗವಂತನೆಡೆ ಒಯ್ಯುವ ಸೇತುವೆಯಾಗಿದೆ. ಮನಸ್ಸೇ ಜೀವಿಯ ಬಂಧ-ಮೋಕ್ಷಗಳೆರಡಕ್ಕೂ ಕಾರಣ. ಆದ್ದರಿಂದ ಮನಸ್ಸನ್ನು ಭಗವಂತನೆಡೆ ಒಯ್ಯುವುದೇ ಜೀವಿಯ ಉದ್ಧಾರಕ್ಕೆ ದಾರಿ ಎಂಬುದನ್ನು ಮಹರ್ಷಿಗಳು ಸ್ಪಷ್ಟವಾಗಿ ಕಂಡುಕೊಂಡರು. ಆ ಗುರಿಮುಟ್ಟಲು ಕಲ್ಪಿಸಿದ ಅನೇಕ ಕರ್ಮಗಳಲ್ಲಿ ಭಗವಂತನ ಪೂಜೆಯು ಪ್ರಧಾನವಾದ ಅಂಗವಾಗಿದೆ. ಋಷಿಸಂಸ್ಕೃತಿಯಲ್ಲಿ ಪೂಜಾಸಿದ್ಧತೆಯಿಂದ ಹಿಡಿದು ಪೂಜಾವಿಧಾನದ ಪ್ರತಿಯೊಂದು ಅಂಶವೂ ಹೇಗೆ ಈ ಉದ್ದೇಶವನ್ನು ಪೂರೈಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.


ಪೂಜೆಗೆ ಅಧಿಕಾರಿ ಯಾರು?
ಆತ್ಮಸಾಕ್ಷಾತ್ಕಾರವು ಪ್ರತಿಯೊಂದು ಜೀವಿಯ ಹಕ್ಕು ಎಂಬುದಾಗಿ ಶ್ರೀರಂಗಮಹಾಗುರುಗಳು ಘೋಷಣೆ ಮಾಡಿದ್ದಾರೆ. 'ನನ್ನ ಹಕ್ಕಿನ ಸ್ವಾಮಿ'ಎಂಬುದಾಗಿ ಭಕ್ತರೊಬ್ಬರು ಭಗವಂತನನ್ನು ಕೊಂಡಾಡಿದ್ದಾರೆ. ಆ ರೀತಿ ದೇವರನ್ನು ತನ್ನ ಸ್ವಾಮಿ, ಪತಿ ಎಂಬುದಾಗಿ ಭಾವಿಸುವ ಎಲ್ಲ ಚೇತನರಿಗೂ ಭಗವಂತನನ್ನು ಪೂಜಿಸುವ ಅಧಿಕಾರವುಂಟು ಎನ್ನುವುದು ಜ್ಞಾನಿಗಳ ಮತ.  ಪೂಜಿಸುವ ಕ್ರಮದಲ್ಲಿ ವ್ಯತ್ಯಾಸಗಳಿದ್ದರೂ ಪೂಜಾಕಾರ್ಯವು ಸರ್ವರಿಗೂ ವಿಧಿತವೇ.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾ ವಾಣಿಯಲ್ಲಿ ಪ್ರಕಟವಾಗಿದೆ.

Wednesday, February 12, 2020

ಯಾವುದು ನಿಜವಾದ ಐಶ್ವರ್ಯ? ( Yavudu nijavada aishvarya?)

ಲೇಖಕರು : ಪ್ರಮೋದ್ ರಾಘವನ್
(ಪ್ರತಿಕ್ರಿಯಿಸಿರಿ: lekhana@ayvm.in)

  
ಐಶ್ವರ್ಯ ಎಂದರೆ ಸಂಪತ್ತು. ಭೋಗದ ವಸ್ತುಗಳ ಸಮೂಹ ಎಂಬುದು ವ್ಯವಹಾರ. ಹಣಕಾಸು, ಚಿನ್ನ-ಒಡವೆ, ಮನೆ, ವಾಹನ, ಬಟ್ಟೆ ಇತ್ಯಾದಿ. ಐಶ್ವರ್ಯವನ್ನೇಕೆ ಬಯಸುತ್ತೇವೆ? ಐಶ್ವರ್ಯವು ಸಂತೋಷ, ಸಂತ್ತೃಪ್ತಿಯನ್ನು ತಂದುಕೊಡುತ್ತದೆ. ಭರ್ಜರಿ ಔತಣ ನಾಲಿಗೆಯನ್ನು ತಣಿಸುತ್ತದೆ, ಸೊಗಸಾದ ಉಡುಪು, ಆಭರಣಾಲಂಕಾರಗಳು ಕಣ್ಣಿಗೆ ಹಿತಕರ. ಒಳ್ಳೆಯ ವಿಶಾಲವಾದ ಮನೆ,  ಮೈ ಮನಗಳಿಗೆ ಸಂತಸವನ್ನು ನೀಡುತ್ತದೆ. ಒಟ್ಟು ಹೇಳುವುದಾದರೆ ಇವೆಲ್ಲವೂ ನಮ್ಮ ಇಂದ್ರಿಯಗಳನ್ನೂ ತನ್ಮೂಲಕ ಮನಸ್ಸನ್ನೂ ತೃಪ್ತಿ ಪಡಿಸುತ್ತವೆ. ಇಂದ್ರಿಯ ಎಂಬ ಪದದ ಹಿಂದಿರುವ ಧಾತುವೂ 'ಪರಮೈಶ್ವರ್ಯ' ಎಂಬರ್ಥವನ್ನು ಹೊಂದಿದೆ.

ಆದರೆ ಐಶ್ವರ್ಯವೆಂದು ಕರೆಸಿಕೊಂಡು ಇಂದ್ರಿಯಗಳನ್ನು ತಣಿಸುವ ಈ ಭೋಗ್ಯ-ಪದಾರ್ಥಗಳು ಶಾಶ್ವತವಲ್ಲ. ಇಂದು ಇರುವ ಪದಾರ್ಥ ನಾಳೆ ಇಲ್ಲವಾಗಬಹುದು. ಆಗ ಸಂತೋಷವೂ ಕ್ಷೀಣವಾಗಿ ದುಃಖಕ್ಕೆ ಕಾರಣವಾಗುತ್ತದೆ. ಆದ್ದರಿಂದಲೇ, ಶಂಕರ ಭಗವತ್ಪಾದರು "ಅರ್ಥಂ ಅನರ್ಥಂ ಭಾವಯ ನಿತ್ಯಂ' ಎಂದು ಹೇಳಿದ್ದಾರೆ. ಹಾಗಾದರೆ ಶಾಶ್ವತವಾದ ಐಶ್ವರ್ಯ ಉಂಟೇ ಎಂಬ ಪ್ರಶ್ನೆ ಹುಟ್ಟುತ್ತದೆ. ಪದಾರ್ಥ ಹೊರಗಿನದ್ದಾದರೂ, ಸಂತೋಷ ಹುಟ್ಟಿದ್ದು ನಮ್ಮಲ್ಲೇ ತಾನೇ !  ಯಾವ ಪದಾರ್ಥದ ಅವಲಂಬನವೂ ಇಲ್ಲದ ಸಂತೋಷವೇ ಶಾಶ್ವತವಾದ ಸುಖ. ಅಂತಹ ಸಂತೋಷವನ್ನು ಪಡೆಯಲೋಸುಗ ಭಾರತೀಯ ಮಹರ್ಷಿಗಳು ತಪಸ್ಸು ಧ್ಯಾನ, ಪೂಜೆ, ನಾಮಸ್ಮರಣೆ ಮುಂತಾದ ಹಲವಾರು ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ತನ್ಮೂಲಕ ನಮ್ಮೊಳಗಿನ ಭಗವಂತನನ್ನು ಕಂಡು ಅನುಭವಿಸಬಹದು. ಅಂತರಂಗದಲ್ಲಿ ಪರಂಜ್ಯೋತಿ ಸ್ವರೂಪವಾಗಿ ಬೆಳಗುತ್ತಿರುವ ಭಗವಂತನೇ ನಮ್ಮ ನಿಜವಾದ ಐಶ್ವರ್ಯ.

ಅಂತಹ ಪರಮೈಶ್ವರ್ಯವನ್ನು ಆರಿಸಿ ಗಳಿಸಿಕೊಂಡ ಮಹನೀಯರಿಬ್ಬರು ನಮ್ಮ ಇತಿಹಾಸದಲ್ಲಿ ಪ್ರಸಿದ್ಧರು. ಒಬ್ಬ ಸುದಾಮ, ಶ್ರೀ ಕೃಷ್ಣನ ಆಪ್ತ ಗೆಳೆಯ ಹಾಗೂ ಸಾಂದೀಪಿನಿ ಮಹರ್ಷಿಗಳ ಗುರುಕುಲದಲ್ಲಿ  ಸಹಪಾಠಿ. ಸುದಾಮ ಬಡತನದಲ್ಲಿದ್ದು  ಸಂಸಾರ  ಸಾಗಿಸುತ್ತಿದ್ದನು. ಸುದಾಮ ಕೃಷ್ಣನನ್ನು ನೋಡಲು ದ್ವಾರಕೆಗೆ ಬಂದಾಗ, ಕೃಷ್ಣನಿಗೆ ತಂದಿದ್ದ ಸ್ವಲ್ಪವೇ ಅವಲಕ್ಕಿಯನ್ನು ಕೊಟ್ಟನು. ತನ್ನ ಬಡ ಜೀವನದಲ್ಲಿ ದೊರಕಿದ ಐಶ್ವರ್ಯವನ್ನು ಭಕ್ತಿ-ಪ್ರೀತಿಗಳನ್ನೂ ಬೆರೆಸಿ  ಕೃಷ್ಣನಿಗೆ ಸಮರ್ಪಿಸಿದ್ದನು. ಅವನು ಮತ್ತೆ ಊರಿಗೆ ಬಂದಾಗ ಅವನ ಪುಟ್ಟಮನೆ ಅರಮನೆಯಾಗಿ ಬಿಟ್ಟಿತ್ತು. ಆದರೆ ಅವನ ಸಂತೋಷದ ಝರಿ ಹೊರ ಅರಮನೆಯಾಗಿರಲಿಲ್ಲ. ಕೃಷ್ಣನ ಚಿರಸ್ಮರಣೆ, ಪ್ರೀತಿ-ವಿಶ್ವಾಸ, ದರ್ಶನಾನುಭವಗಳೇ ಅವನ ಪರಮೈಶ್ವರ್ಯವಾಗಿತ್ತು. " ಐಶ್ವರ್ಯ ಎಂಬುದು 'ಈಶ್ವರ' ಎಂಬ ಪದದಿಂದಲೇ ಬಂದಿದೆ. ಅವನು ಕೊಟ್ಟಿದ್ದನ್ನು ಅವನಿಗೇ ಕೊಡುವುದೇ ಐಶ್ವರ್ಯದ ಸದುಪಯೋಗ" ಎಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ.
ಮತ್ತೊಬ್ಬ ಅರ್ಜುನ. ಯುದ್ಧದಲ್ಲಿ ತನ್ನ ಸಹಾಯಕ್ಕೆ ಬಲಿಷ್ಠ ಸೈನ್ಯ ಬೇಕೋ ಅಥವಾ ಒಬ್ಬಂಟಿಯಾಗಿ ನಿರಾಯುಧವಾಗಿರುವ ಕೃಷ್ಣನ ಮಾರ್ಗದರ್ಶನವೇ ಸಾಕೇ ಎಂಬ ಪ್ರಶ್ನೆ ಎದುರಾದಾಗ, ಕೃಷ್ಣನೇ ತನ್ನ ಪರಮೈಶ್ವರ್ಯ ಎಂದು ನಿಂತವನು ಅರ್ಜುನ. ಎಲ್ಲ ಐಶ್ವರ್ಯಗಳ ಸ್ವಾಮಿಯೂ ಅವನೆಂಬ ನಿರ್ಣಯ ಅರ್ಜುನನದು. ಕೃಷ್ಣಪರಮಾತ್ಮನೇ ಪರಮೈಶ್ವರ್ಯ ಎಂದ ಜೀವದ ಸ್ವರೂಪವೇ ಅರ್ಜುನ.  ಹೀಗೆ ದೇವ-ಜೀವ ಇಬ್ಬರೂ ಸೇರಿದ್ದಾಗ ವಿಜಯಶ್ರೀ ಸದಾಸಿದ್ಧವೆಂಬುದು ಗೀತಾವಾಕ್ಯ.   

ಸೂಚನೆ: 11/02/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ

Sunday, February 9, 2020

ನಮ್ಮ ವೇದ ಸಾಹಿತ್ಯದ ಮಹಿಮೆ (Namma veda saahithyada mahime)

ಲೇಖಕರು: ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


ತಪಸ್ಯೆಯಿಂದ ಜ್ಞಾನಿಗಳ ಅಂತರಂಗದಲ್ಲಿ ಶ್ರುತವಾದವುಗಳೇ “ವೇದ”ಗಳು. ಭಗವಂತನ ಮೂಲ ರೂಪವನ್ನೂ ಅವನ ವಿಸ್ತಾರವಾದ ಸೃಷ್ಟಿ ರಹಸ್ಯಗಳನ್ನೂ ಅರುಹುವ ಸಾಹಿತ್ಯವೇ ವೇದಗಳು. ವಿದ್- ಜ್ಞಾನಮ್ ಎಂಬಂತೆ “ವೇದ”ವೆಂದರೆ ಭಗವಂತನಿಗೇ ಸಲ್ಲುವ ಶಬ್ದ. ಅವನ್ನು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರೇ ಉಪದೇಶಿಸಿ ತಿಳಿಸಿ ಕೊಡಬೇಕಾಗಿದೆ.  ಭಗವಂತನನ್ನು ಹೊಂದಿಸಿಕೊಡುವ ಸಾಹಿತ್ಯವಾದ್ದರಿಂದ ಈ ಸಾಹಿತ್ಯಗಳಿಗೂ “ವೇದ” ಎಂದೇ ಹೆಸರಾಯಿತು. ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆಯನ್ನು ಕೊಡುತ್ತಿದ್ದರು. ಮಟ್ಟೆಸಹಿತವಾದ ತೆಂಗಿನಕಾಯಿ ಇದ್ದಾಗ ನಾವು ತೆಂಗಿನಕಾಯಿ ಯಾವುದು ಎಂದರೆ ಮಟ್ಟೆಯಕಡೆಗೇ ಬೆರಳು ಮಾಡುತ್ತೇವೆ. ನಂತರ  ಮಟ್ಟೆ ತೆಗೆದ ಮೇಲೆ ತೆಂಗಿನಕಾಯಿ ಎಂದಾಗ ನಾವು ಮಟ್ಟೆಯನ್ನು ತೋರಿಸದೇ ಚಿಪ್ಪುಸಹಿತವಾದ ತೆಂಗಿನ ಕಾಯಿಯನ್ನು ತೋರಿಸುತ್ತೇವೆ. ನಂತರ ಚಿಪ್ಪನ್ನೂ ತೆಗೆದ ಮೇಲೆ ತೆಂಗಿನಕಾಯಿ ಎಂದರೆ ತಿರುಳನ್ನೇ ತೋರಿಸುತ್ತೇವೆ. ಎಲ್ಲಿಯ ವರೆಗೆ ಮಟ್ಟೆ, ಚಿಪ್ಪುಗಳು ತೆಂಗು ಎಂಬ ತಿರುಳಿಗೆ ಅಂಟಿಕೊಂಡು ಅದರ ರಕ್ಷಣೆಗೆ ಕಾರಣವಾಗಿದ್ದವೋ ಅಲ್ಲಿಯವರೆಗೆ ಅವೂ ಸಹ ತೆಂಗಿನಕಾಯಿ ಎಂದೇ ಕರೆಸಿಕೊಂಡವು. ತಿರುಳಿನಿಂದ ಬೇರೆಯಾದೊಡನೆಯೇ ಅವುಗಳ ಹೆಸರೂ ಸಹ ಬೇರೆಯಾಯಿತು. ಹೀಗೆ ವೇದ ಸಾಹಿತ್ಯಗಳು ಭಗವಂತನನ್ನು ಹೊತ್ತ ಸಾಹಿತ್ಯಗಳಾಗಿ ಬೆಳೆದುಬಂದಲ್ಲಿ ಅವಕ್ಕೂ ಭಗವಂತನ ಹೆಸರೇ ಸಲ್ಲುತ್ತದೆ. ಯಾವಾಗ ಅವನ್ನು ಭಗವದ್ಭಾವವಿಲ್ಲದೇ ಕೇವಲ ಕಂಠಪಾಠಮಾಡಲಷ್ಟೇ ಬಳಸಿಕೊಂಡಾಗ ಅವು ವೇದ ಎಂದು ಕರೆಯಲು ಯೋಗ್ಯವಾಗುವುದಿಲ್ಲ. ನಮ್ಮ ಸಂಸ್ಕೃತಿಯ ಎಲ್ಲಾ ವಿಷಯಗಳಿಗೂ ಅನ್ವಯಿಸುವ ಮಾತಾಗಿದೆ ಇದು.

ಉಪಸಂಹಾರ:

ಮೊದಲೇ ತಿಳಿಸಿದಂತೆ ದಿಗ್ದರ್ಶನ ರೂಪವಾಗಿ ಕೆಲವೇ ಉದಾಹರಣೆಗಳನ್ನು ತೆಗೆದುಕೊಂಡಿದ್ದೇವೆ. ಹೀಗೆ ಭಾರತೀಯ ಸಂಸ್ಕೃತಿಯೆಂದರೆ ಅದು ಬರಿಯ ಮೌಢ್ಯದಿಂದ ಬಂದ ಕೆಲವು ಆಚರಣೆಗಳ ಕಂತೆಯಲ್ಲ. ಅದರ ನಿಜವಾದ ಅರಿವಿನ ನ್ಯೂನತೆಯೇ ಅದನ್ನು ಹೀಯಾಳಿಸುವವರ ಮೌಡ್ಯಕ್ಕೆಕಾರಣ. ಅದು ವೈಜ್ಞಾನಿಕವಾಗಿ ಮಹರ್ಷಿಗಳು ಜೀವಿಗಳ ಉದ್ಧಾರಕ್ಕಾಗಿ ಹಾಕಿಕೊಟ್ಟ ಉಪಾಯಗಳು. ಒಳಬೆಳಕಿನಲ್ಲಿ ರಮಿಸುವವರೇ ಭಾ-ರತರು. ಅಂತಹ ಜೀವನವನ್ನು ಬೆಳಗುವ ಮೂಲವನ್ನು ನೆನಪಿಸಿ ಆ ಮೂಲದ ಆಶಯದಂತೆಯೇ ಬೆಳೆಯುವಂತೆ, ಬೆಳಗುವಂತೆ ಕೃಷಿಮಾಡಿ ಸೊಂಪಾಗಿ ಬೆಳೆಸಿದ ಮಹರ್ಷಿ ಮನೋರಮವಾದ ಜೀವನ ವೃಕ್ಷವೇ ಭಾರತೀಯ ಸಂಸ್ಕೃತಿ. ಇಂತಹ ಭಾರತೀಯ ಸಂಸ್ಕೃತಿಯನ್ನು ಅದರ ವಾರಸುದಾರರಾದ ನಾವು ಹೆಜ್ಜೆಹೆಜ್ಜೆಗೂ ಅರ್ಥಮಾಡಿಕೊಳ್ಳುವುದೇ ಸಂಸ್ಕೃತಿ-ಸೇವೆ. ಹಾಗೆ ಅರ್ಥಮಾಡಿಕೊಂಡು ಒಳಗೆ ಬೆಳಗುವ ಭಗವಂತನ ಆಶಯದಂತೆ ಸಹಜ ಆನಂದದಿಂದ ಬಾಳುವ ಮನೋಧರ್ಮವನ್ನು ಬೆಳೆಸಿಕೊಳ್ಳುವುದೇ ನಾವೆಲ್ಲರೂ ಭಾರತೀಯರಾಗಿ ಮಾಡಬೇಕಾದ ಕರ್ತವ್ಯವೂ ಸಹ. ನಮ್ಮಲ್ಲಿನ ಅರಿಷಡ್ವರ್ಗರೂಪವಾದ ದೋಷಗಳೆಲ್ಲವನ್ನೂ ತೊಡೆದುಹಾಕಿ, ಹರಿಷಡ್ವರ್ಗಗಳನ್ನು ಬೆಳೆಸಿಕೊಳ್ಳೋಣ. ಈ ವೈಭವದ ಸಂಸ್ಕೃತಿಯ ನಿರ್ಮಾಪಕರಾದ ಜ್ಞಾನಿಗಳೂ ವಿಜ್ಞಾನಿಗಳೂ ಆದ ನಮ್ಮೆಲ್ಲ ಪೂಜ್ಯ ಪೂರ್ವಜರನ್ನು ಹೆಮ್ಮೆಯಿಂದ ಸ್ಮರಿಸುವವರಾಗೋಣ. ಆ ಅಂತಃಪ್ರಕಾಶದಿಂದ ಬೆಳಗುವ ಅನಂತವಾದ ಸಂಸ್ಕೃತಿಯನ್ನು ಮತ್ತೆ ನಾವೆಲ್ಲರೂ ಕಾಣುವಂತಾಗಲಿ ಎಂದು ಸರ್ವೇಶನನ್ನು ಪ್ರಾರ್ಥಿಸೋಣ.        


ಸೂಚನೆ: 08/02/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ

Tuesday, January 28, 2020

ಭಾರತೀಯರ ನಾಗರಿಕತೆ (Bhaaratheeyara naagarikathe)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


ನಮ್ಮ ಮಹರ್ಷಿಗಳು ಕಣ್ಣು ಮುಚ್ಚಿ ಧ್ಯಾನಸ್ಥರಾಗಿ ಮೂಲದ ಶೋಧನೆಯಲ್ಲಿ ತೊಡಗಿದಾಗ ಈ ದೇಹವನ್ನು ಒಂದು ನಗರವಾಗಿ, ಆಲಯವಾಗಿ, ರಥವಾಗಿ ತಮ್ಮ ಅಂತರ್ದರ್ಶನದಲ್ಲಿ ಕಂಡರು. ಹಾಗೆ ಒಳಗೆ ಕಂಡುದನ್ನೇ ಹೊರಗೆ ಅದರ ಅನುಕೃತಿಯಾಗಿ ಇಲ್ಲಿ ನಾಗರಿಕತೆಯನ್ನು ಬೆಳೆಸಿದುದನ್ನು ಕಾಣುತ್ತೇವೆ.  ಅಂತಹ ನಗರಗಳನ್ನು ನಿರ್ಮಿಸುವಾಗ ಆ ನಗರಗಳಿಗೆ ಮೂಲವನ್ನು ನೆನಪಿಸುವ ಹೆಸರನ್ನೇ ಇಟ್ಟರು. ಉದಾಹರಣೆಗೆ, ”ಅಯೋಧ್ಯಾ”- ಯುದ್ಧಮಾಡಿ ಜಯಿಸಲಾಗದುದು. ದೇವದೇವನು ವಾಸಿಸುವ ನಗರದಲ್ಲಿ ಯುದ್ಧದ ಮಾತೇ ಇಲ್ಲ. ಹೊರನಗರಗಳನ್ನು ಯುದ್ಧಮಾಡಿ ಜಯಿಸಬಹುದು. ಆದರೆ ಈ ದೇಹವು ಅವರ ದೃಷ್ಟಿಯಲ್ಲಿ ಒಳನಗರ. ಒಳಗೊಯ್ಯುವ ಹೊರನಗರವೂ ಸಹ. ಇದನ್ನು ಭಕ್ತಿಯಿಂದ, ಶರಣಾಗತಿಯಿಂದ ಸಾಧನೆಯಿಂದ ಮಾತ್ರ ಜಯಿಸಬಹುದಾಗಿದೆ.ಅದನ್ನು ನೆನಪಿಸುವ ಹೆಸರು.
ಅಂತೆಯೇ, ‘ಕಾಶೀ’-ಒಳಪ್ರಕಾಶವನ್ನೇ ನೆನಪಿಸುವ ಹೆಸರನ್ನು ಹೊರ ನಗರಕ್ಕೂ ಇಟ್ಟರು. 

ನಮ್ಮ ದೇವಸ್ಥಾನಗಳು: 

ದೇಹದೊಳಗೆ ದೇವನನ್ನು ಸಾಕ್ಷಾತ್ಕರಿಸಿಕೊಂಡ ಈ ದೇಶದ ಜ್ಞಾನಿಗಳು ಈ ದೇಹದೇವಾಲಯದ ಅನುಕೃತಿಯಾಗಿ ಹೊರಗೂ ದೇವಸ್ಥಾನಗಳನ್ನು ನಿರ್ಮಿಸಿದರು. ಹೆಸರೇ “ದೇವಸ್ಥಾನ”. ನಮ್ಮನ್ನು ಪಾಂಚಭೌತಿಕವಾದ ಭೂತಸ್ಥಾನದಿಂದ ದೇವಸ್ಥಾನಕ್ಕೆ ಹತ್ತಿಸುವ ಉಪಾಯವೇ ಜ್ಞಾನಿಗಳು ತಂದ ದೇವಾಲಯಗಳು. ಇಲ್ಲಿನ ಶಿಲ್ಪಗಳು “ಶೀಲ ಸಮಾಧೌ” ಎಂಬಂತೆ ಸಮಾಧಿಸ್ಥಿತಿಯಿಂದಲೇ ಹೊರಹೊಮ್ಮಿದುವಾಗಿವೆ. ಸಾಮಾನ್ಯವಾಗಿ ದೇವಾಲಯಗಳ ಪ್ರಾಕಾರದ  ಕೆಳಗಿನ ಅಂತಸ್ತುಗಳಲ್ಲಿ ಪಶುಪಕ್ಷಿಗಳ ಚಿತ್ರವಿರುತ್ತದೆ. ನಂತರ ಅಸುರರ ಚಿತ್ರಗಳು ನಂತರ ಮೇಲೆಮೇಲಿನ ಸುತ್ತುಗಳಲ್ಲಿ ಮನುಷ್ಯರ, ಗುರುಶಿಷ್ಯರ ಚಿತ್ರಗಳನ್ನು ಕಾಣುತ್ತೇವೆ. ನಂತರ ದೇವತೆಗಳ, ಭಗವಂತನ ಅವತಾರಗಳ ಚಿತ್ರಗಳು ಹಾಗೆಯೇ ಒಳ ಸುತ್ತುಗಳಲ್ಲಿ ತ್ರಿಮೂರ್ತಿಗಳ ಚಿತ್ರಗಳು ನಂತರ ದೇವಾಲಯದ ಗರ್ಭದಲ್ಲಿ- ಗರ್ಭಗುಡಿಯಲ್ಲಿ ದೇವದೇವನ ಶಿಲ್ಪವಿರುತ್ತದೆ.

ಏನಿದರ ಮರ್ಮ? 

ಭಾರತದ  ಜ್ಞಾನಿಗಳು ಇಡೀ ಸೃಷ್ಟಿ ರಹಸ್ಯವನ್ನೇ ನಮ್ಮೆದುರು ಬಿಚ್ಚಿಟ್ಟಿದ್ದಾರೆ. ಯಾವ ಸಂಸ್ಕಾರವೂ ಇಲ್ಲದಿದ್ದಾಗ ಪ್ರಾಣಿಗಳಂತೆ ಬದುಕುತ್ತೇವೆ. ನಂತರ ಹೊರಜೀವನದ್ದಷ್ಟೇ ಸಂಸ್ಕಾರ ಬೆಳೆದಾಗ ಅಸುರರಂತೆ ವರ್ತಿಸುತ್ತೇವೆ. “ಮನ ಅವಬೋಧನೇ”ಎಂಬಂತೆ ಅರಿತು ಮಾಡುವುದನ್ನು ಕಲಿತಾಗ ಮನುಷ್ಯರಾಗುತ್ತೇವೆ. ಅರಿತು ಮಾಡುವುದು ಎಂದಾಗ ಕೇವಲ ಭೌತಿಕ ಕ್ಷೇತ್ರದ ಅರಿವು ಮಾತ್ರವಲ್ಲದೇ ದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳ ಅರಿವನ್ನೂ ಸೇರಿಸಿಕೊಂಡು ಜೀವನದಲ್ಲಿ ಹೆಜ್ಜೆಯಿಡುವವನಿಗೇ ವಾಸ್ತವವಾಗಿ “ಮಾನವ “, “ಮನುಷ್ಯ” ಎಂಬ ಪದಗಳು ಸಲ್ಲುತ್ತವೆ. ಇನ್ನೂ ಮೇಲಿನ ಮಜಲುಗಳಿಗೆ ಹತ್ತಿದ ಮನಸ್ಸು ಜೀವನ ಮೂಲವನ್ನು ಕಂಡ ಗುರುವನ್ನು ತನ್ನ ಉದ್ಧಾರಕ್ಕಾಗಿ ಆಶ್ರಯಿಸುತ್ತದೆ. ನಂತರ ನಿರಂತರ ಸಾಧನೆಯಿಂದ ತಪಸ್ಯೆಯಿಂದ ಒಳಗೆ ಶಕ್ತಿಸ್ವರೂಪರಾಗಿ ಬೆಳಗುವ ದೇವತೆಗಳನ್ನು ದರ್ಶನ ಮಾಡುತ್ತೇವೆ. ಇನ್ನೂ ಮುಂದೆ ಆ ದೇವತೆಗಳಿಗೆಲ್ಲ ಶಕ್ತಿಯನ್ನು ಹರಿಸಿ ಕಾರ್ಯನಿರ್ವಹಿಸುವಂತೆ ಮಾಡುವ ಒಂದೇ ಚೈತನ್ಯದ ಮೂರುರೂಪಗಳಾದ ತ್ರಿಮೂರ್ತಿಗಳ ದರ್ಶನ. ನಂತರ ಕಡೆಯಲ್ಲಿ ಸೃಷ್ಟಿಮೂಲನಾದ ವಿಕಾಸಮೂಲನಾದ ದೇವದೇವನ ದರ್ಶನ. ಹೀಗೆ ದೇವಾಲಯಗಳನ್ನು ನಾವು ನಮ್ಮ ಇಂದ್ರಿಯಜೀವನದ ವೇಗದಲ್ಲಿ ಮರೆತಿರುವ ನಡೆದುಬಂದ ದಾರಿಯನ್ನು ನೆನಪಿಸುವ ಸ್ಮಾರಕಗಳನ್ನಾಗಿ ತಂದಿದ್ದಾರೆ. ನಮ್ಮ ಶ್ರೀರಂಗ ಮಹಾಗುರುಗಳು ದೇವಾಲಯಗಳನ್ನು ಸ್ಮಾರಕ ಮಂದಿರಗಳು (Memory Hall) ಎಂದೇ ಕರೆದಿದ್ದಾರೆ. ಹೆಜ್ಜೆಹೆಜ್ಜೆಗೂ ಮೂಲದ ಸ್ಮರಣೆಯನ್ನು ತಂದುಕೊಟ್ಟು ವಿಸ್ಮರಣೆಯ ಕೊಳೆಯನ್ನು ತೆಗೆದು ಹಾಕುವ ನಿಜವಾದ ಸಂಸ್ಕೃತಿಯ ಕುರುಹು ಇಲ್ಲಿದೆ.

ಸೂಚನೆ: 28/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, January 26, 2020

ದೋಷಾಪನಯನ ಮತ್ತು ಗುಣಾಧಾನ (Doshaapanayana mattu ginaadhana)

ಲೇಖಕರು: ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ಮನಸ್ಸಿನ ದೋಷಗಳನ್ನು ತೆಗೆದು ಮೂಲದ ಆಶಯವನ್ನು ಎಲ್ಲೆಲ್ಲೂ ಬೆಳೆಸುವ ವಿಧಾನಗಳನ್ನು ಅವರು “ಸಂಸ್ಕಾರ”ಎಂಬ ಹೆಸರಿನಿಂದ ಕರೆದರು.  ನಮ್ಮ ಮನಸ್ಸು-ಬುದ್ಧಿಗಳಲ್ಲಿ ಉಂಟಾಗಿರುವ ನಮ್ಮ ಮೂಲಸ್ವರೂಪದ ವಿಸ್ಮರಣೆಯೇ ಆ ದೋಷ. ನಾವೆಲ್ಲಾ ಈ ವಿಶ್ವವೆಂಬ ಸಂತೆಗೆ ಬಂದಿದ್ದೇವೆ.
ಮನೆಯನ್ನು ಮರೆತಿದ್ದೇವೆ. “ನಾವು ಸಂತೆ ವ್ಯಾಪಾರಕ್ಕೆ ಬಂದಿರುವುದು ಸರಿಯೇ.ಹಾಗೆಂದು
ವ್ಯಾಪಾರದಲ್ಲಿ ನಿರುತ್ಸಾಹ ಪಡಬೇಕಾಗಿಲ್ಲ. ಆದರೆ ವ್ಯಾಪಾರದ ಉತ್ಸಾಹದಲ್ಲಿ ತನ್ನ ಮನೆಗೆ ಹೋಗಿ
ಸೇರಬೇಕಾದ್ದನ್ನು ಮಾತ್ರ ಮರೆಯಬಾರದು” ಎಂಬ ಶ್ರೀರಂಗಮಹಾಗುರುಗಳ ಮಾತು ನಮ್ಮ ಜೀವನಗಳ ವಿಷಯದಲ್ಲಿ ಸದಾ ನೆನಪಿಡಬೇಕಾಗಿದೆ. ಮೂಲ ಮನೆಯನ್ನು ಮರೆತಿರುವ ನಮ್ಮ ಸ್ಥಿತಿಯನ್ನು ಗಮನಿಸಿ, ಮತ್ತೆ ನಮಗೆ ನೆನಪಾಗಲು ಜ್ಞಾನಿಗಳು ಮಾಡಿದ ಉಪಾಯವೇ ಸಂಸ್ಕಾರಗಳು. ಅಂತಹ ವಿಸ್ಮರಣೆಯ ತಮಸ್ಸನ್ನು ತೊಡೆದುಹಾಕುವ, ಸ್ಮರಣೆಯನ್ನುಂಟುಮಾಡುವ ಕೆಲಸವೆಲ್ಲವೂ ಸಂಸ್ಕಾರವೇ ಆಗುತ್ತದೆ.

ಜ್ಞಾನಿಶ್ರೇಷ್ಠರಾದ ಶಂಕರಭಗವತ್ಪಾದರು ಸಂಸ್ಕಾರ ವೆಂದರೆ- “ದೋಷಾಪನಯನ “ ಮತ್ತು “ಗುಣಾಧಾನ “ ಎಂದಿದ್ದಾರೆ. ಒಂದು ತಾಮ್ರದ ಪಾತ್ರೆಯಲ್ಲಿನ ಕೊಳೆಯನ್ನು ತೊಳೆಯುವುದು ದೋಷಾಪನಯನದ ಕೆಲಸವಾದರೆ ಅದಕ್ಕೆ ಹೊಳಪು ಬರುವಂತೆ ಪಾಲಿಷ್ ಮಾಡುವುದು ಗುಣಾಧಾನ. ಜೀವನದಲ್ಲಿ ಇವೆರಡೂ ನಿರಂತರವಾಗಿ ಆಗುತ್ತಿರಬೇಕಾದ ಕ್ರಿಯೆ ಅಥವಾ ಕರ್ಮವಾಗಿದೆ. ದೋಷಗಳು ಸೇರಿಕೊಳ್ಳುವುದು ನಿಸರ್ಗ ಸಹಜ. ಒಂದು ಮೇಜನ್ನು ಒರೆಸಿಟ್ಟರೆ ಸಂಜೆಯವೇಳೆಗೆ ಮತ್ತೆ ಧೂಳಾಗಿರುತ್ತದೆ. ಪಾಂಚಭೌತಿಕವಾದ ಜಗತ್ತಿನಲ್ಲಿ ಈ ಬಗೆಯ ದೋಷಗಳು ಅನಿವಾರ್ಯ. ಎಂದೇ ಅವುಗಳನ್ನು ತೊಡೆದುಹಾಕುವ ಸಂಸ್ಕಾರದ ಕೆಲಸವೂ ನಿರಂತರವಾಗಿ ಆಗಬೇಕಾಗುತ್ತದೆ.

ಮನಸ್ಸಿನ ಮೂಲಸ್ವರೂಪದ ವಿಸ್ಮರಣೆಯನ್ನು ತೊಡೆದುಹಾಕಿ ಮನಸ್ಸಿಗೆ ತನ್ನ ಸ್ವಸ್ವರೂಪವಾದ
ಆನಂದವನ್ನು ಸ್ಮರಣೆಗೆ ತಂದುಕೊಡಲೆಂದೇ ಇಲ್ಲಿನ ಸಮಸ್ತ ಆಚಾರ-ವಿಚಾರಗಳೂ ಬಂದಿವೆ.
ಪ್ರಧಾನವಾಗಿ ಹದಿನಾರು ಸಂಸ್ಕಾರಗಳನ್ನು ಹೇಳಿದ್ದರೂ ಸಂಸ್ಕಾರಗಳು ನಿರಂತರ ನಡೆಯುವ ಪ್ರಕ್ರಿಯೆ. “ನಿಷೇಕಾದ್ಯೈಃ ಸ್ಮಶಾನಾಂತೈ: ಬ್ರಾಹ್ಮೀಯಂ ಕ್ರಿಯತೇ ತನುಃ”–ಗರ್ಭಾಧಾನದಿಂದಾರಂಭಿಸಿ-ಜಾತಕರ್ಮ, ನಾಮಕರಣ, ವಿವಾಹವೇ ಮುಂತಾಗಿ ಶವಸಂಸ್ಕಾರದವರೆಗಿನ ಎಲ್ಲ ಸಂಸ್ಕಾರಗಳ ಉದ್ದೇಶವೂ ಈ ಶರೀರವನ್ನು ಬ್ರಹ್ಮಮಯವನ್ನಾಗಿಸುವುದರ ಜೊತೆಗೆ ಇದಕ್ಕೆ ಅವಿರೋಧವಾದ ಇಂದ್ರಿಯ ಸುಖಗಳನ್ನೂ ಅನುಭವಿಸುವುದೇ ಆಗಿದೆ. ಈ ಎಲ್ಲ ಸಂಸ್ಕಾರಗಳ ಕಲಾಪಗಳಲ್ಲಿ ಮತ್ತು ಉಪಯೋಗಿಸುವ ದ್ರವ್ಯಗಳಲ್ಲಿ, ಮಂತ್ರಗಳಲ್ಲಿ ಆಯಾ ಕಾಲಘಟ್ಟಗಳಲ್ಲಿ ಜೀವಿಗೆ ತನ್ನ ಮೂಲ ಬೆಳಕಾದ ದೇವನನ್ನು ನೆನಪಿಸುವ ಮತ್ತು ಜೀವನದಲ್ಲಿ ಆ ಬೆಳಕನ್ನು ಅನುಸರಿಸಿ ಬದುಕುವ ಅಭ್ಯಾಸ ಮಾಡಿಸಲಾಗುತ್ತದೆ.

ಸೂಚನೆ: 25/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Wednesday, January 22, 2020

ಸ್ವಸ್ವರೂಪವಾದ ಆನಂದವೇ ಭಾರತೀಯ ಸಂಸ್ಕೃತಿ. (Svasvarupavada aanandave bharatheeya samskruthi)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


ನಮ್ಮ ದೇಶದ ಜ್ಞಾನಿಗಳು ಕೇವಲ ಭೌತಿಕ ಪ್ರಪಂಚದಲ್ಲೇ ನಿಲ್ಲದೇ ಈ ಭೌತಿಕವೂ ಯಾವ ಮೂಲದಿಂದ ಅರಳಿಬಂದಿದೆ ಎಂಬುದನ್ನು ತಮ್ಮ ಅಂತರ್ಮುಖವಾದ ಪ್ರಯಾಣದಿಂದ ಅರಿಯುವ ಸಾಹಸ ಮಾಡಿದರು. ತಮ್ಮ ತಪಸ್ಸು, ಸಾಧನೆಗಳಿಂದ ಜೀವನಮೂಲದಲ್ಲಿ ಬೆಳಗುತ್ತಿರುವ ಪರಂಜ್ಯೋತಿಸ್ವರೂಪನಾದ ದೇವನನ್ನು ಕಂಡರು. ಅಲ್ಲಿಂದಲೇ ಎಲ್ಲವೂ ವಿಕಾಸವಾಗಿ ಬಂದಿದೆ ಎಂಬುದನ್ನು ಅವರಿವರು ಹೇಳಿದ್ದನ್ನು ಕೇಳದೇ ತಮ್ಮದೇ ಅನುಭವದಿಂದ ಕಂಡುಕೊಂಡರು. ಆ ದರ್ಶನ, ಅನುಭವಗಳು ಅವರಿಗೆ ಅದುವರೆಗೆ ಕಾಣದ ಆನಂದವನ್ನೂ ಅಪರಿಮಿತವಾದ ನೆಮ್ಮದಿಯನ್ನೂ ತಂದುಕೊಟ್ಟಿದ್ದರಿಂದ ಅವರು ಪರಮ ಕರುಣೆಯಿಂದ ಅಂತಹ ಜೀವನವನ್ನು ಜೀವಲೋಕವೆಲ್ಲವೂ ಅನುಭವಿಸಲೀ ಎಂದು ಉದಾರಹೃದಯರಾಗಿ ಲೋಕದಲ್ಲಿ ಸಂಸ್ಕೃತಿ ವೃಕ್ಷವನ್ನು ಕೃಷಿಮಾಡಿ ಬೆಳೆಸಿದರು.

ವೃಕ್ಷ-ಸಂಸ್ಕೃತಿ, ಒಂದು ಉದಾಹರಣೆ:

ಒಂದು ವೃಕ್ಷದ ಹಿಂಬದಿಯಲ್ಲಿ ನೋಡುತ್ತಾ ಹೋದರೆ ಅದರ ಉಗಮಸ್ಥಾನವಾದ ಬೀಜದಲ್ಲಿ ನಿಲ್ಲುತ್ತದೆ. ಬೀಜದಲ್ಲಿನ ಅಭಿಪ್ರಾಯವೇ ವೃಕ್ಷರೂಪದಲ್ಲಿ ಅರಳುತ್ತದೆ. ಕಡೆಯಲ್ಲಿ ಬೀಜದಲ್ಲೇ ನಿಲ್ಲುತ್ತದೆ. ಹಾಗಾದರೆ ಬೀಜದಲ್ಲಿ ಈ ಬಗೆಯ ಕಾಂಡ, ಕೊಂಬೆಗಳು, ಎಲೆ, ಕಾಯಿ ಹಣ್ಣು ಎಲ್ಲವೂ ಇತ್ತೇ? ಎಂದರೆ ಇತ್ತು ಎಂದೇ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಮುಂದೆ ಅವೆಲ್ಲ ಬರುವುದಾದರೂ ಎಲ್ಲಿಂದ? ಹಾಗೆ ಬೀಜದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವನು ಸಸ್ಯ ಶಾಸ್ತ್ರಜ್ಞ ಹಾಗೂ ವ್ಯವಸಾಯಜ್ಞನಾಗಿರಬೇಕು. ಈ ಬೀಜವೇ ಇಷ್ಟು ದೊಡ್ಡ ವೃಕ್ಷವಾಗಿದೆ ಎಂಬ ಅರಿವಿನಿಂದ ಮಾಡುವ ಕೃಷಿಯೆಲ್ಲವೂ ಬೀಜದ ತನ ಮುಂದುಮುಂದೆ ಬೆಳೆಯಲು ಸಹಾಯ ಮಾಡುವುದೇ ಆಗಿರುತ್ತದೆ. ಅವೆಲ್ಲವೂ ‘ವೃಕ್ಷ-ಸಂಸ್ಕೃತಿ’ಯೇ ಆಗುತ್ತದೆ. ಉದಾಹರಣೆಗೆ ಮಾವಿನ ಬೀಜ ಎಂದಾದರೆ ಅದರಲ್ಲಿ ಮಾವೇ ಮುಂದೆ ಬರುವುದು ನಿಸರ್ಗ ಸಹಜ. ಆದರೆ ಕೆಲವೊಮ್ಮೆ ಬೀಜದ ಶಕ್ತಿಯನ್ನು ಬಳಸಿಕೊಂಡು ಬದನಿಕೆಗಳು ಬೆಳೆದುಬಿಡುವುದುಂಟು. ವ್ಯವಸಾಯಜ್ಞನಾದವನು ಯಾವುದು ಬೀಜದ ತನ ಯಾವುದು ಬದನಿಕೆ ಎಂಬುದನ್ನು ಅರಿತವನಾಗಿರಬೇಕು. ಅಲ್ಲಿ ಅವನು ಬದನಿಕೆಯನ್ನು ಕಿತ್ತುಹಾಕಿ ಮಾವಿನ ಮರವೇ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯುಂಟು. ಹಾಗಾದಾಗ ತಾನೇ ಮಾವಿನ ರಸಾಸ್ವಾದನೆ ನಮಗೆ ಲಭಿಸೀತು?

ಹಾಗೆಯೇ ನಮ್ಮ ದೇಶದ ಜ್ಞಾನಿಗಳು ವಿಶ್ವಕ್ಕೆಲ್ಲಾ ಚೈತನ್ಯಬೀಜನಾದ ಭಗವಂತನನ್ನು ಅರ್ಥಮಾಡಿಕೊಂಡು ಅವನ ತನವೇ ಮುಂದೆಲ್ಲ ಬೆಳೆದರೆ ಜೀವನವು ಸರ್ವಾಂಗ ಸುಂದರವಾಗಿ ಚೇತೋಹಾರಿಯಾಗಿ, ಆನಂದಮಯವಾಗಿ ಇರುವುದನ್ನು ತಮ್ಮ ಅನುಭವದಿಂದ ಕಂಡುಕೊಂಡರು. ಹಾಗೆ ಆ ಜಗದ್ಬೀಜನಾದ ಭಗವಂತನ ತನವೇ ಲೋಕದಲ್ಲೂ ಮತ್ತು ನಮ್ಮಲ್ಲೂ ಬೆಳೆಯುವಂತೆ ಕೃಷಿ ಮಾಡಿ ಇಲ್ಲಿ ಸಂಸ್ಕೃತಿಯನ್ನು ತಂದರು. ಅವನ ತನ ಮರೆಮಾಡುವ ಬದನಿಕೆಗಳನ್ನು ಕಿತ್ತೆಸೆದು  ಅವನ ಸ್ವಸ್ವರೂಪವಾದ ಆನಂದವೇ ಎಲ್ಲೆಡೆ ಬೆಳೆಯುವಂತೆ ಶ್ರಮಿಸಿ ತಂದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಹಾಗೆ ತಂದ ಜೀವನ ವಿಧಾನಗಳೆಲ್ಲವೂ ಭಾರತೀಯ ಸಂಸ್ಕೃತಿಯೆನಿಸಿತು. ಶ್ರೀರಂಗ ಮಹಾಗುರುಗಳ ಮಾತಿನಂತೆ ‘ಭಾ’ರೂಪಿಯಾದ ಪರಂಜ್ಯೋತಿಯ ಸ್ವರೂಪವನ್ನು ಅರ್ಥ ಮಾಡಿಕೊಂಡು ಬೆಳೆದ ಸಂಸ್ಕೃತಿಯೇ-ಭಾರತೀಯ ಸಂಸ್ಕೃತಿ. ಅದು ವಿಕಾಸವಾಗಲು ಇರುವ ಪ್ರತಿಬಂಧಕಗಳನ್ನೆಲ್ಲ ಅವರು ಕೊಳೆ ಅಥವಾ ದೋಷ ಎಂದು ಕರೆದರು.  ಅಂತಹ ದೋಷಗಳನ್ನು ನಿರಂತರವಾಗಿ ತೆಗೆದುಹಾಕಿ ಆ ಪರಂಜ್ಯೋತಿಯ ಆಶಯದಂತೆ ಜೀವನವೆಲ್ಲವೂ ಅರಳಬೇಕು ಎಂಬ ಅತ್ಯುನ್ನತವಾದ ಧ್ಯೇಯದಿಂದ ಪ್ರೇರಿತರಾದವರು ತಂದುಕೊಟ್ಟ ಸಂಸ್ಕೃತಿಯಿದು. ಅವರ ಪಾವನ ಸಂಸ್ಕೃತಿಯ ಕೆಲವೇ ಕೆಲವು ಅಂಶಗಳನ್ನು ಸೂಚನಾಮಾತ್ರವಾಗಿದೆ

ಸೂಚನೆ: 20/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, January 19, 2020

ಭಾರತೀಯ ಸಂಸ್ಕೃತಿಯ ವೈಭವ (Bharatheeya samskruthiya vaibhava)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)



“ಸಂಸ್ಕೃತಿ”ಎಂಬ ಪದವನ್ನು ಇವೊತ್ತು ಅನ್ಯಾನ್ಯ ಸಂದರ್ಭಗಳಲ್ಲಿ ಬಳಸುವುದನ್ನು ಕಾಣುತ್ತೇವೆ. ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿ ”culture” ಎಂಬ ಪದವನ್ನು ಸಂಸ್ಕೃತಿ ಎಂಬ ಪದಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತದೆ. ಈ ಪದವೂ ಸಹ ಏನನ್ನಾದರೂ ಬೆಳೆಸುವುದು ಎಂಬ ಅರ್ಥವನ್ನೇ ಕೊಡುತ್ತದೆ. ಉದಾಹರಣೆಗೆ –Agriculture, Horticulture, sericulture ಇತ್ಯಾದಿ ವಿಶೇಷಣಯುಕ್ತ ಪದಗಳು ಆಯಾ ವಿಷಯಗಳನ್ನು ವ್ಯವಸಾಯ ಮಾಡಿ ಬೆಳೆಸುವ ನಿಟ್ಟಿನಲ್ಲೇ ಬಳಸಲಾಗಿದೆ. ಆದರೆ Culture ಎಂಬ ಪದವು ಈಗ ಅನ್ಯಾನ್ಯ ಅರ್ಥಗಳಲ್ಲಿ ಉಪಯೋಗವಾಗಿ ಇಂದು ಶಾಲೆಗಳಲ್ಲಿ ನಡೆಯುವ ಮನೋರಂಜನಾದಿ ಕಾರ್ಯಕ್ರಮಗಳನ್ನು Cultural Programme ಎಂದು ಕರೆಯುವವರೆಗೆ ಬಂದುಬಿಟ್ಟಿದೆ. ಅದನ್ನೇ ಕನ್ನಡದಲ್ಲಿ ಅನುವಾದಿಸಿ “ಸಾಂಸ್ಕೃತಿಕ ಕಾರ್ಯಕ್ರಮಗಳು” ಎಂದು ಕರೆಯುವ ರೂಢಿಯಾಗಿಬಿಟ್ಟಿದೆ.

ಪದದ ಮೌಲಿಕವಾದ ಅರ್ಥ:

ಇಷ್ಟರ ಮಧ್ಯೆ “ಸಂಸ್ಕೃತಿ” ಎಂಬ ಪದವನ್ನು ಮೊದಲಿಗೆ ತಂದ ಈ ದೇಶದ ಜ್ಞಾನಿಗಳ ಅಭಿಪ್ರಾಯವೇನಿತ್ತು ಎಂಬುದನ್ನು ವಿಚಾರಮಾಡುವುದೇ ಇಲ್ಲಿನ ವಿಷಯವಾಗುತ್ತದೆ. ಸಂಸ್ಕೃತಿ (ಸಮ್ಯಕ್-ಕೃತ-ಸಂಸ್ಕೃತ) ಎಂದರೆ ಚೆನ್ನಾಗಿ ಮಾಡಲ್ಪಟ್ಟದ್ದು, ಪರಿಷ್ಕರಿಸಲ್ಪಟ್ಟದ್ದು ಎಂದರ್ಥ. ಅಂದರೆ ಒಂದು ಬಟ್ಟೆಯನ್ನು ಚೆನ್ನಾಗಿ ಮಾಡುವುದು ಎಂದರೇನು? ಅದರಲ್ಲಿ ಸೇರಿದ ಕೊಳೆಯನ್ನೆಲ್ಲ ತೊಳೆದು ಅದು ಮೊದಲಿದ್ದಂತೆ ಮಾಡುವುದೇ ಆಗಿದೆ. ಹಾಗೆಯೇ ಪಾತ್ರೆಯನ್ನು ತೊಳೆದು ಅದು ಮೊದಲಿನ ಸ್ಥಿತಿಗೆ ತರುವುದು ಅದನ್ನು ಚೆನ್ನಾಗಿ ಮಾಡಿದಂತೆ. ಅಂದರೆ ಸೇರಿದ ಕೊಳೆಯನ್ನು ತೆಗೆದುಹಾಕಿ ವಸ್ತುಗಳ ಮೂಲಸ್ವರೂಪದಲ್ಲಿಡುವ ಕ್ರಿಯೆಯೆಲ್ಲವೂ ಒಂದು ದೃಷ್ಟಿಯಿಂದ ‘ಸಂಸ್ಕೃತಿ’ಯೇ ಆಗುತ್ತದೆ.

ಇಲ್ಲಿ ವಸ್ತುಗಳ, ವಿಷಯಗಳ ಸ್ವರೂಪಕ್ಕನುಗುಣವಾಗಿ ಅವುಗಳ ಕೊಳೆಯನ್ನು ತೆಗೆಯುವ ವಿಧಾನ, ಅದಕ್ಕಾಗಿ ಉಪಯೋಗಿಸಲ್ಪಡುವ ಪರಿಕರಗಳೆಲ್ಲವೂ ಬದಲಾವಣೆಯಾಗುತ್ತವೆ. ಬಟ್ಟೆಯ ಕೊಳೆ ತೆಗೆಯುವ ರೀತಿಯೇ ಬೇರೆ, ಪಾತ್ರೆಯ ಕೊಳೆ ತೆಗೆಯುವ ರೀತಿಯೇ ಬೇರೆ. ಉಪಯೋಗಿಸುವ Detergent ಸಹ ಬೇರೆ ಬೇರೆ. ಮಾತ್ರವಲ್ಲ, ಬಟ್ಟೆ ಪಾತ್ರೆಗಳ ವೈವಿಧ್ಯಗಳ ಮೇಲೆಯೂ ಅವನ್ನು ಮೂಲಸ್ಥಿತಿಗೆ ತರುವ ವಿಧಾನಗಳು ಅವಲಂಬಿತವಾಗುತ್ತವೆ. ಉದಾಹರಣೆಗೆ- ತಾಮ್ರದ ಪಾತ್ರೆಯಾದರೆ ಅದನ್ನು ತೊಳೆಯಲು ಹುಣಿಸೆ ಹಣ್ಣನ್ನು ಉಪಯೋಗಿಸುತ್ತಾರೆ. ಸ್ಟೀಲ್ ಆದರೆ  ಬೇರೆ ರೀತಿಯ ಪುಡಿಗಳನ್ನು ಉಪಯೋಗಿಸುತ್ತಾರೆ. ಆದರೆ ಅವುಗಳ ಮೂಲಸ್ವರೂಪಕ್ಕೆ ತರುವ ವಿಷಯಮಾತ್ರ ಎಲ್ಲಕ್ಕೂ ಸಾಮಾನ್ಯ.
ಇನ್ನು ಮೂಲಸ್ವರೂಪಕ್ಕೆ ತರುವ ಧ್ಯೇಯವಿರುವವರಿಗೆ ಆಯಾ ವಸ್ತುಗಳ ಸ್ವರೂಪಜ್ಞಾನವಿರುವುದು ಅವಶ್ಯಕ. ಹಾಗಿದ್ದಾಗ ಮಾತ್ರ ಅದರ ಮೂಲವೇನು? ಕೊಳೆಯ ಭಾಗ ಯಾವುದು ಹೇಗೆ ಕೊಳೆಯನ್ನು ತೆಗೆದು ಹಾಕುವುದು ಎಂಬುದರಕಡೆ ಚಿಂತನೆ ಹರಿಯುತ್ತದೆ.

ಬಟ್ಟೆ, ಪಾತ್ರೆ, ಮನೆಯ ಕೊಳೆ, ವಸ್ತುಗಳ ಮೇಲಿನ ಕೊಳೆ ಇವೆಲ್ಲವೂ ಎಲ್ಲರಿಗೂ ಗೊತ್ತಾಗುವ ವಿಷಯ. ಆದರೆ ನಮ್ಮ ಶರೀರದ ಒಂದು ಪ್ರಮುಖ ಅಂಗವಾದ ಮನಸ್ಸಿನ ಕೊಳೆ ಯಾವುದು? ಅದರ ಮೂಲರೂಪವೇನು? ಅದಕ್ಕೂ ಹಿಂದೆ ಇರುವ ಜೀವನದ ಮೂಲವೇನು? ಅಲ್ಲಿ ಸೇರಿದ ಕೊಳೆ ಯಾವುದು? ಎಂಬುದರ ವಿಚಾರವನ್ನು ಮುಂದಿನ ಲೇಖನದಲ್ಲಿ ವಿಮರ್ಶಿಸೋಣ.

ಸೂಚನೆ: 18/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.