ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ: lekhana@ayvm.in)
ಸ್ವಾರ್ಥಪೂಜೆ, ಪರಾರ್ಥಪೂಜೆ
ಸ್ವಾರ್ಥಪೂಜೆಯೆನ್ನುವುದು ಅವರವರ ಉದ್ಧಾರಕ್ಕಾಗಿ ಮಾಡುವ ಕ್ರಿಯೆಯಾದ್ದರಿಂದ ಸರ್ವರಿಗೂ ಅದಕ್ಕೆ ಅಧಿಕಾರವುಂಟು. ಮನೆಗಳಲ್ಲಿ ಶಿವಲಿಂಗ, ಸಾಲಿಗ್ರಾಮ, ದೇವತಾಮೂರ್ತಿಗಳು ಮುಂತಾದವುಗಳಿಗೆ ಪೂಜಿಸಬಹುದು. ಮನೆಯ ಹಿರಿಯರು ಈ ಪೂಜೆಯನ್ನು ಕೈಗೊಂಡು ನಡೆಸುವುದು, ಇತರರು ಸ್ಥಳಶುದ್ದಿ, ಪೂಜೆಗೆ ಬೇಕಾದ ಸಲಕರಣಗಳನ್ನು ಒದಗಿಸುವುದು ಇತ್ಯಾದಿಕಾರ್ಯಗಳನ್ನು ನಿರ್ವಹಿಸುವುದು ನಮ್ಮ ದೇಶದಲ್ಲಿ ರೂಢಿಯಲ್ಲಿದೆ. ಇದಲ್ಲದೆ ಅವರವರ ಆತ್ಮಸಾಧನೆಗಾಗಿ ಸ್ತೋತ್ರ-ಧ್ಯಾನಾದಿಗಳನ್ನು ಎಲ್ಲರೂ ಪ್ರತ್ಯೇಕವಾಗಿಯೇ ಮಾಡುಬೇಕು.
ಪರಾರ್ಥಪೂಜೆಯೆನ್ನುವುದು ಹೆಚ್ಚು ಜವಾಬ್ದಾರಿಯ ಕೆಲಸ. ವಿಶೇಷವಾದ ಜ್ಞಾನ-ಕಲೆಗಳುಳ್ಳವನೇ ಇದನ್ನು ನಿರ್ವಹಿಸಲು ಸಮರ್ಥನಾಗುತ್ತಾನೆ. ಆತನು ಭಗವತ್‌ಸಾಕ್ಷಾತ್ಕಾರವನ್ನು ಮಾಡಿಕೊಂಡಿರಬೇಕು. ಮುಂದೆ ಅದರಿಂದಾದ ಆನಂದವನ್ನೂ ಸೇರಿಸಿ ಪೂಜೆಯನ್ನು ಮಾಡಬೇಕು. ಅಂತಹ ಪೂಜೆಯಿಂದ ಆತನು ಅದನ್ನು ವೀಕ್ಷಿಸುವವರಮೇಲೆ ತನ್ನ ಜ್ಞಾನಾನಂದಗಳ ಪ್ರಭಾವವನ್ನು ಬೀರುತ್ತಾನೆ. ಭಗವಂತನ ಪ್ರಸನ್ನತೆಯನ್ನು ನಾನಾ ರೀತಿಯಲ್ಲಿ ಇತರರಿಗೆ ವಿತರಣೆಮಾಡುವ ಹೊಣೆಗಾರಿಕೆಯಿಂದ ಕಾರ್ಯವೆಸಗಬೇಕಾಗಿದೆ. ಅಷ್ಟು ಸಾಮರ್ಥ್ಯದಿಂದಕೂಡಿದ ಜ್ಜಾನಿಯಾದವನನ್ನು ದೇವಾಲಯಗಳಲ್ಲಿ ಅರ್ಚಕನಾಗಿ ನೇಮಿಸುವುದು ಮಹರ್ಷಿಗಳು ಬೆಳಸಿದ ವಿಧಾನ. ಸರ್ವರಿಗೂ ಸುಲಭವಾಗಿ ಉತ್ಕೃಷ್ಟ ಫಲ ದೊರೆಯುವಂತಾಗಲಿ ಎಂಬುದು ಈ ವ್ಯವಸ್ಥೆಯಹಿಂದಿರುವ ಉದ್ದೇಶ.
ಅಂತರಂಗ(ಮಾನಸ)ಪೂಜೆ-ಬಾಹ್ಯಪೂಜೆ
ಅಂತರಂಗ ಪೂಜೆಯೆನ್ನುವುದು ಹೊರಸಾಮಗ್ರಿಗಳಾವುದನ್ನೂ ಬಳಸದೆ ಮಾನಸಿಕವಾಗಿ ಮಾತ್ರವೇ ನಡೆಸುವ ಪೂಜೆ. ಭಗವಂತನ ಮೂರ್ತಿಯನ್ನು ಏಕಾಗ್ರತೆಯಿಂದ ಧ್ಯಾನ ಮಾಡುವುದು ಇದರ ಪ್ರಧಾನ ಅಂಗ. ಅದರ ವಿಸ್ತಾರವಾಗಿ ಮಾನಸಿಕವಾಗಿಯೇ ಗಂಧ, ಪುಷ್ಪ ಇತ್ಯಾದಿಗಳನ್ನು ದೇವರಿಗೆ ಅರ್ಪಿಸುವುದು. ಸೃಷ್ಟಿಯ ಪದಾರ್ಥಗಳೆಲ್ಲವೂ ತನಗಾಗಿ ಎಂಬ ಭಾವನೆಯಿಲ್ಲದೇ ಭಗವಂತನಿಂದ ವಿಸ್ತಾರವಾದ ಅವುಗಳನ್ನು ಅವನಿಗೇ ಸಮರ್ಪಿಸುವ ಮನೋಭಾವವು ಇಲ್ಲಿ ಪ್ರತಿಫಲಿಸುತ್ತದೆ.
ಬಾಹ್ಯಪೂಜೆಯು ಹೊರ ಸಾಮಗ್ರಿಗಳನ್ನು-ಧೂಪ, ದೀಪ, ನೈವೇದ್ಯ ಇತ್ಯಾದಿಗಳನ್ನು-ಆಶ್ರಯಿಸಿ ನಡೆಸುವ ಕ್ರಿಯೆ. ಅಂತರಂಗಪೂಜೆಗೆ ಹೊರಸಿದ್ಧತೆಗಳು ಹೆಚ್ಚಿಲ್ಲವಾದ್ದರಿಂದ ಸುಲಭಸಾಧ್ಯವೆಂದು ಕಂಡರೂ ಮನಸ್ಸು ಅತ್ಯುನ್ನತ ಮಟ್ಟಕ್ಕೆ ಏರಬೇಕಾಗಿರುವುದರಿಂದ ಇದು ಸಾಮಾನ್ಯರಿಗೆ ಸುಲಭವಲ್ಲ. ಶಂಕರಭಗವತ್‌ಪಾದರು 'ಮಣಿಸನ್ನಿಭನಾದ ಆತ್ಮಲಿಂಗವನ್ನು ಶರೀರವೆಂಬಪುರದ ಹೃದಯ ಕಮಲದಲ್ಲಿ ಆರಾಧಿಸುತ್ತೇನೆ. ಶ್ರದ್ಧಾನದಿಯ ಪರಿಶುದ್ಧವಾದ ಮನಸ್ಸೆಂಬ ಜಲದಿಂದ ಅಭಿಷೇಕವನ್ನು ಮಾಡುತ್ತೇನೆ. ಸಮಾಧಿಯೆಂಬ ಪುಷ್ಪದಿಂದ ಪೂಜಿಸುತ್ತೇನೆ' ಮುಂತಾಗಿ ಸ್ತುತಿಸುತ್ತಾರೆ. ಇದು ಅವರಂತವರಿಗೆ ಮಾತ್ರವೇ ಎಟುಕುವಂತದ್ದು.
ಬಾಹ್ಯಪೂಜೆಯು ಸಾಮಾನ್ಯರಿಗೂ ಸುಲಭಸಾಧ್ಯ. ಆದರೆ 'ಬಾಹ್ಯಪೂಜೆಯು ಬಾಹ್ಯದಲ್ಲಿ ಪ್ರಾರಂಭವಾಗಿ, ಬಾಹ್ಯದ ಉದ್ದೇಶದೊಂದಿಗೆ, ಬಾಹ್ಯದಲ್ಲೇ ಕೊನೆಗೊಂಡರೆ ಅಂತಹ ಪೂಜೆಗೆ ಬೆಲೆಯಿಲ್ಲ' ಎಂಬ ಶ್ರೀರಂಗಮಹಾಗುರುಗಳ ಎಚ್ಚರಿಕೆಯು ಇಲ್ಲಿ ಸ್ಮರಣೀಯವಾಗಿದೆ. ಬಾಹ್ಯಪೂಜೆಯು ಮನಸ್ಸನ್ನು ಒಳಗೆ ಎಳೆಯುವಂತಾಗಬೇಕು. ದೇವೀಸ್ತೋತ್ರದಲ್ಲಿ ಬರುವ 'ಬಾಹ್ಯಪೂಜಾ ಪರಾಙ್ಮುಖೀ'ಯೆಂಬ ವಾಕ್ಯ ಸ್ಮರಣೀಯವಾಗಿದೆ. ಯಾವರೀತಿಯ ಪೂಜೆಯೇ ಆದರೂ ಭಗವಂತನಲ್ಲಿ ಪ್ರೀತಿಯೇ ಪೂಜೆಗೆ ಮುಖ್ಯಸಾಧನ.
ಸೂಚನೆ: 15/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.