ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮಾಧವನಿಂದಲೂ ಅರ್ಜುನನಿಂದಲೂ ದೇವತೆಗಳು ಓಡಿಸಲ್ಪಟ್ಟದ್ದನ್ನು ಕಂಡರು, ಆಕಾಶದಲ್ಲಿ ನೆರೆದಿದ್ದ ದೇವತೆಗಳು; ಕಂಡು ಆಶ್ಚರ್ಯಪಟ್ಟರು ಸಹ.
ರಣದಲ್ಲಿ ಮತ್ತೆ ಮತ್ತೆ ಅವರಿಬ್ಬರ ಪರಾಕ್ರಮವನ್ನು ಮನಗಂಡ ಇಂದ್ರನು ಪರಮ-ಸಂತೋಷವನ್ನೇ ಪಟ್ಟನು; ಹಾಗೂ ಮತ್ತೆಯೂ ಅವರೊಂದಿಗೆ ಹೋರಿದನು. ಆಮೇಲೆ ಇಂದ್ರನು ದೊಡ್ಡದಾದ ಅಶ್ಮ-ವರ್ಷವನ್ನು, ಎಂದರೆ ಕಲ್ಲುಗಳ ಮಳೆಯನ್ನು, ಕರೆದನು. ಏಕೆಂದರೆ ಆತನಿಗೆ ಕುತೂಹಲ: ಸವ್ಯಸಾಚಿಯ, ಎಂದರೆ ಅರ್ಜುನನ, ಪರಾಕ್ರಮವೆಂತಹುದು? - ಎಂಬುದನ್ನು ಅರಿಯಬೇಕೆಂದು. ಇತ್ತ ಅತ್ಯಂತ ಅಮರ್ಷಗೊಂಡ ಅರ್ಜುನನೂ ಸಹ ಅದಕ್ಕೆ ಪ್ರತಿಯಾಗಿ ಬಾಣಗಳ ಮಳೆಯನ್ನೇ ಕರೆದನು.
ಮಂದರ-ಪರ್ವತದಿಂದ ಒಂದು ದೊಡ್ಡ ಶಿಖರವನ್ನೇ ತನ್ನೆರಡೂ ಕೈಗಳಿಂದ ಇಂದ್ರನು ಕಿತ್ತುಕೊಂಡನು. ಮರಗಳೊಂದಿಗೇ ಅದನ್ನು ಅರ್ಜುನನತ್ತ ಬೀಸಿದನು - ಅರ್ಜುನನನ್ನು ಕೊಂದುಬಿಡಲೆಂದು! ಅದಕ್ಕೆ ಪ್ರತಿಯಾಗಿ ಅರ್ಜುನನೂ, ತುದಿಯಲ್ಲಿ ಜ್ವಲಿಸುವಂತಹವೂ ನೇರವಾಗಿ ಹೋಗತಕ್ಕವೂ ವೇಗಸಂಪನ್ನವೂ ಆಗಿರುವ ತನ್ನ ಬಾಣಗಳಿಂದ ಆ ಗಿರಿಯ ಶೃಂಗವನ್ನು ಸಾವಿರ ಹೋಳಾಗಿ ವಿಧ್ವಂಸನ ಮಾಡಿದನು. ಛಿನ್ನಭಿನ್ನವಾಗುತ್ತಿದ್ದ ಆ ಗಿರಿಯು ಆಗ ಹೇಗೆ ತೋರಿತು? ಆಕಾಶದಿಂದ ಬಿದ್ದುಹೋಗುತ್ತಿರುವ ಸೂರ್ಯ-ಚಂದ್ರ-ಗ್ರಹಗಳ ಹಾಗದು ತೋರಿತು! ಹಾಗೆ ಆ ಮಹಾಶೈಲವು ಬೀಳುತ್ತಿರಲು, ಅದರ ಶಿಖರವು ಹೊಡೆದ ಪರಿಣಾಮವಾಗಿ, ಖಾಂಡವವನದಲ್ಲಿ ಮನೆಮಾಡಿದ್ದ ಹಲವಾರು ಪ್ರಾಣಿಗಳು ಮರಣಹೊಂದಿದವು.
ಬೆಟ್ಟವು ಬಿದ್ದಿತಾಗಿ, ಆಗ ಭಯಗೊಂಡದ್ದು ಬರೀ ಪ್ರಾಣಿಗಳಲ್ಲ. ದಾನವರು, ಯಕ್ಷರು, ನಾಗರುಗಳಲ್ಲದೆ, ತರಕ್ಷುಗಳು ಎಂದರೆ ಚಿರತೆಗಳು, ಕರಡಿಗಳು - ಈ ಎಲ್ಲಾ ವನ್ಯಜೀವಿಗಳೂ ಸೇರಿದ್ದವು. ಅಲ್ಲದೆ ಮದಜಲ ಸುರಿಸುವ ಆನೆಗಳು, ಶಾರ್ದೂಲಗಳು, ಕೇಸರಗಳಿಂದ ತುಂಬಿದ ಸಿಂಹಗಳು, ಮೃಗಗಳು, ಮಹಿಷಗಳು ಹಾಗೂ ನೂರಾರು ಪಕ್ಷಿಗಳು, ಹಾಗೂ ಇನ್ನೂ ನಾನಾ ಪ್ರಾಣಿಸಮೂಹಗಳು ತೀವ್ರವಾಗಿ ಉದ್ವೇಗಗೊಂಡವುಗಳಾಗಿ ಅತ್ತಿತ್ತ ಹರಿದಾಡಿದುವು.
ಜ್ವಲಿಸುತ್ತಿದ್ದ ಆ ಕಾಡನ್ನೂ ಹಾಗೂ ಆಯುಧಗಳನ್ನು ಮೇಲೆತ್ತಿ ಹಿಡಿದಿದ್ದ ಕೃಷ್ಣಾರ್ಜುನರನ್ನೂ ಕಂಡವು. ಉತ್ಪಾತಶಬ್ದ ಹಾಗೂ ಆರ್ತನಾದದ ಶಬ್ದಗಳಿಂದ ಬೆಚ್ಚಿ ಬೆದರಿರುವಂತೆ ನಿಂತಿದ್ದವು. ಅನೇಕ ಪ್ರಕಾರಗಳಲ್ಲಿ ಸುಟ್ಟುಹೋಗುತ್ತಿದ್ದ ಆ ಕಾಡನ್ನು ಕಂಡು, ಹಾಗೂ ಅಸ್ತ್ರಗಳನ್ನು ಅಭ್ಯುದ್ಯತ ಮಾಡಿದ್ದ, ಎಂದರೆ ಮೇಲೆತ್ತಿ ಹಿಡಿದಿದ್ದ, ಕೃಷ್ಣನನ್ನು ಕಂಡು ಉಲ್ಬಣವಾದ ಆರ್ತಧ್ವನಿಯನ್ನು ಅವು ಮಾಡಿದವು. ಆ ರೌದ್ರವಾದ ನಾದದಿಂದಲೂ, ಅಗ್ನಿಯ ಆ ಧ್ವನಿಯಿಂದಲೂ ಕೂಡಿ, ಉತ್ಪಾತಸಮಯದ ಮೋಡಗಳಿಂದಾಗುವ ಧ್ವನಿಯಿಂದ ಆಕಾಶವು ಕೂಡಿದಂತಿತ್ತು.
ಆಗ ಅವುಗಳ ನಾಶಕ್ಕಾಗಿ, ಮಹಾಬಾಹುವಾದ ಶ್ರೀಕೃಷ್ಣನು ಸ್ವತೇಜಸ್ಸಿನಿಂದಲೇ ಹೊಳೆಹೊಳೆಯುತ್ತಿದ್ದ ಅತ್ಯುಗ್ರವಾದ ಚಕ್ರಾಯುಧವನ್ನು ಪ್ರಯೋಗಿಸಿದನು. ಆತನ ಚಕ್ರಪ್ರಯೋಗದಿಂದ ನೂರಾರು ತುಂಡುಗಳಾಗಿ ಕತ್ತರಿಸಲ್ಪಟ್ಟ ದಾನವಾದಿಗಳು ಒಂದೇ ಕ್ಷಣದಲ್ಲಿಯೇ ಬೆಂಕಿಯೊಳಗುರುಳಿದರು. ಶ್ರೀಕೃಷ್ಣನ ಚಕ್ರಾಯುಧದಿಂದ ಸೀಳಲ್ಪಟ್ಟ ಆ ದೈತ್ಯರು, ಮೇದಸ್ಸು-ರಕ್ತಗಳಿಂದ ತೊಯ್ದವರಾಗಿ, ಸಂಧ್ಯಾಕಾಲದ ಮೋಡಗಳಂತೆ ಕಂಡರು.
ಪಿಶಾಚರನ್ನೂ ಪಕ್ಷಿಗಳನ್ನೂ ನಾಗರನ್ನೂ ಪಶುಗಳನ್ನೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕೊಲ್ಲುತ್ತಾ ನಡೆಯುತ್ತಿದ್ದ ಅರ್ಜುನನು ಕಾಲಪುರುಷನಂತೆ ಅಲ್ಲಿ ತೋರುತ್ತಿದ್ದನು. ಶತ್ರು-ನಾಶಕನಾದ ಕೃಷ್ಣನು ಒಂದು ಕಡೆ ಮತ್ತೆ ಮತ್ತೆ ಚಕ್ರಾಯುಧವನ್ನು ಎಸೆಯುತ್ತಿದ್ದುದೂ, ಆ ಚಕ್ರಾಯುಧವಾದರೂ ಅನೇಕಾನೇಕ ಪ್ರಾಣಿಗಳನ್ನು ಸಂಹಾರ ಮಾಡಿ ಹಿಂದಿರುಗುತ್ತಾ ಆತನ ಕೈಯನ್ನೇ ಮತ್ತೆ ಮತ್ತೆ ಬಂದು ಸೇರುತ್ತಿದ್ದುದೂ ಕಾಣಬರುತ್ತಿತ್ತು.
ಸೂಚನೆ : 9/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.