ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಕೃಷ್ಣನನ್ನು ನಾವು ಆರಾಧಿಸುತ್ತೇವೆ - ಎನ್ನುತ್ತಾನೆ ಲೀಲಾಶುಕ, ಈ ಪದ್ಯದಲ್ಲಿ. ಏತಕ್ಕಾಗಿ ಆರಾಧಿಸಬೇಕು? ಆತನೆಂತಹವನು? - ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಏಳು ವಿಶೇಷಣಗಳಿಂದ ಸೂಚಿಸಿದ್ದಾನೆ. ಅವುಗಳಿಂದಾಗಿ ನಮ್ಮ ಮನಸ್ಸಿಗೆ, "ಆಹಾ, ಆರಾಧ್ಯನೆಂದರೆ ಶ್ರೀಕೃಷ್ಣನೇ ಸರಿ!" - ಎಂದು ತೋರುವಂತಾಗುವುದು.
ಯಾರನ್ನು ಆರಾಧಿಸುತ್ತೇವೆ? - "ನೀಲನಾದ ಬಾಲನನ್ನು" ಎನ್ನುತ್ತಾನೆ. ಅಷ್ಟರಲ್ಲೇ ತಿಳಿದುಬಿಡುತ್ತದೆ, ಕೃಷ್ಣನೇ ಅದೆಂದು. ಈ ಬಾಲನ ನೀಲ-ವರ್ಣವು ಮೇಘ-ವರ್ಣವನ್ನು ಹೋಲುವಂತಹುದೆಂಬುದು ಪ್ರಸಿದ್ಧವಷ್ಟೆ.
ಶೃಂಗಾರರಸಕ್ಕೇ ಶ್ಯಾಮಲ-ವರ್ಣವನ್ನು ಹೇಳುವುದುಂಟು. ಶೃಂಗಾರವೇ ಮೈತಾಳಿಬಂದರೆ ಅದುವೇ ಶ್ರೀಕೃಷ್ಣ! ಬಾಲನೆಂದರೆ ಹದಿನಾರು ವರ್ಷದ ಪರ್ಯಂತದವನು. ಇಂತಹ ಕೃಷ್ಣನೇ ನಮ್ಮ ಆರಾಧನೆಗೆ ಯೋಗ್ಯ. ನೀಲ-ಬಾಲನೆಂಬುದು ಮೊದಲನೆಯ ವಿಶೇಷಣ.
ಉಳಿದ ವಿಶೇಷಣಗಳನ್ನಿನ್ನು ಗಮನಿಸೋಣ.
ಈ ಕೃಷ್ಣನು ಮಂಥರನಾಗಿದ್ದಾನೆ, ಎಂದರೆ ಮಂದ-ಗತಿಯುಳ್ಳವನಾಗಿದ್ದಾನೆ. ಇದು ಎರಡನೆಯ ವಿಶೇಷಣ. ಮಂದ-ಗತಿಯೇಕೆ? ಗೋಪಿಕೆಯೊಬ್ಬಳ ಚಪಲವಾದ ಅಪಾಂಗಗಳು, ಎಂದರೆ ಚಂಚಲವಾದ ಕುಡಿಗಣ್ಣೋಟಗಳು ; ಅವುಗಳ ಸೆಳೆತಕ್ಕೆ ಆತನು ಒಳಗಾಗಿರುವನು. ಯಾರು ಆ ಗೋಪಿಕೆ? ಮತ್ತಿನ್ನಾರು, ರಾಧೆಯೇ ಇರಬೇಕು.
ಅವಳಾದರೂ ಎಂತಹವಳು? ಅವಳು ಸೀಮ-ಭೂತಳು, ಎಂದರೆ ಎಲ್ಲೆಯಾಗಿರುವವಳು, ವಸ್ತುತಃ ಪರಮಾವಧಿಯೇ ಆಗಿರುವವಳು, ಎಂದರೆ ಶ್ರೇಷ್ಠಳಾಗಿರುವವಳು. ಯಾರಲ್ಲಿ ಶ್ರೇಷ್ಠ? ಗೋಪಿಕೆಯರಲ್ಲಿ. ಅವರೂ ಎಂತಹವರು? ಚಾತುರ್ಯೈಕ-ನಿಧಾನರಾದವರು. ಎಂದರೆ ಚತುರತೆಗೇ ನಿಧಾನರಾಗಿರತಕ್ಕವರು. ನಿಧಾನವೆಂದರೆ ನೆಲೆ. ಚತುರ–ಗೋಪನಿಗೆ ಚತುರ-ಗೋಪಿಯರೇ ಜೊತೆಗಾರರು.
ಆ ಚಾತುರ್ಯ-ಗುಣವನ್ನುಳ್ಳವರಲ್ಲೆಲ್ಲಾ ಉತ್ತಮಳೆನಿಸುವವಳು ರಾಧೆ. ರಾಧೆಯ ವಿಷಯದಲ್ಲಿ ಕೃಷ್ಣನ ಸೆಳೆತವೆಂತಹುದೆಂಬುದನ್ನು ಶ್ಲೋಕವೊಂದು ಹೇಳುತ್ತದೆ. ಅದು ಕೃಷ್ಣನೇ ಹೇಳಿದ ಶ್ಲೋಕವೆಂಬ ಮಾತಿದೆ. ಅದರಂತೆ, ಮೂರೂ ಲೋಕಗಳಲ್ಲಿ ಭೂಲೋಕವೇ ಧನ್ಯವಾದದ್ದು; ಅದರಲ್ಲೂ ಬೃಂದಾವನ-ಪುರಿಯು ಧನ್ಯವೆನಿಸುವಂತಹುದು; ಅಲ್ಲೂ ಗೋಪಿಕೆಯರೇ ಧನ್ಯರು; ಅವರಲ್ಲಿ ರಾಧೆಯು ನನಗೆ ಅದೆಷ್ಟು ಅಚ್ಚುಮೆಚ್ಚೆಂದರೆ ಅವಳು ನನ್ನ ಶರೀರವೇ ಸರಿ - ಎನ್ನುತ್ತಾನಂತೆ ಕೃಷ್ಣ!
ಹೀಗಿರಲು ಅವಳು ಆತನನ್ನು ತನ್ನ ಕಣ್ಣೋಟದಿಂದಲೇ ಕಟ್ಟಿಹಾಕಬಲ್ಲಳಷ್ಟೆ! ಅಂತೂ ಚತುರ-ಗೋಪಿಕೆಯರಲ್ಲೂ ಚರಮ-ನೈಪುಣ್ಯವನ್ನು ಹೊಂದಿರುವವಳು ರಾಧೆ; ಬೇಗ ಹೋಗಲಾಗಲಿ, ದೂರ ಹೋಗಲಾಗಲಿ, ಕೃಷ್ಣನನ್ನು ಬಿಡವು, ಅವಳ ಕುಡಿನೋಟಗಳು . ಈ ಕಾರಣಕ್ಕಾಗಿ ಮಂಥರನಾಗಿರುವವನು, ಎಂದರೆ ಮಂದವಾದ ನಡೆಯುಳ್ಳವನು, ಈತ.
ಮೂರನೆಯ ವಿಶೇಷಣವು ಆತನ ಕಣ್ಣನ್ನೇ ಹೇಳುವುದು. ಆತನ ಕಣ್ಣುಗಳನ್ನು ಲಾಲಿಸುತ್ತವೆ, ಲಾವಣ್ಯಾಮೃತದ ವೀಚಿಗಳು. ವೀಚಿಯೆಂದರೆ ಅಲೆ. ಅಮೃತ-ಲಹರಿಗಳು ಆತನ ಲೋಚನಗಳನ್ನು ಲಾಲಿಸಿವೆ, ಎಂದರೆ ಮುದ್ದಿಸಿವೆ. ಯಾವ ಅಮೃತವದು? ಲಾವಣ್ಯವೆಂಬ ಅಮೃತ.
ಏನು ಲಾವಣ್ಯವೆಂದರೆ? ಮುತ್ತುಗಳಲ್ಲಿ ಕಾಂತಿಯಿರುತ್ತದಲ್ಲವೇ? ಆ ಕಾಂತಿಯಲ್ಲೂ ಏನೋ ಒಂದು ಮಿನುಗು ಕಾಣಬರುತ್ತದೆಯಲ್ಲವೆ? ರೂಪ-ಸಂಪನ್ನರ ಅಂಗಗಳಲ್ಲಿ ಒಟ್ಟಾರೆ ತೋರುವ ಏನೋ ಒಂದು ಹೊಳಪೂ ಹಾಗೆಯೇ ಇರುವುದಲ್ಲವೇ? ಅದನ್ನೇ ಲಾವಣ್ಯವೆನ್ನುವುದು.
ಇಂತಹ ಲಾವಣ್ಯದ ಅಮೃತದ ಅಲೆಗಳು ಈತನ ಕಣ್ಣುಗಳನ್ನು ಲಾಲಿಸಿವೆಯೆಂದರೆ, ಕೃಷ್ಣನ ಕಣ್ಣುಗಳಲ್ಲಿಯ ಸೊಬಗು ಹೊಳಪುಗಳನ್ನು ಏನೆಂದು ಬಣ್ಣಿಸುವುದು? ಇಂತಹ ಆಕರ್ಷಕ-ನೇತ್ರಗಳುಳ್ಳವನು ಈ ನೀಲ-ಬಾಲ.
ನಾಲ್ಕನೆಯದಾಗಿ, ಲಕ್ಷ್ಮಿಯ ಕಟಾಕ್ಷವು ಈತನನ್ನು ಆದರಿಸುತ್ತದೆ. ಆದರಿಸುವುದೆಂದರೆ ಗೌರವಕ್ಕೆ ಪಾತ್ರನನ್ನಾಗಿಸುವುದು. ಅಪಾಂಗವೆಂದರೆ ಕಣ್ಣಂಚು; ಕಟಾಕ್ಷವೆಂದರೆ ಅದರಿಂದ ಬೀರುವ ನೋಟ. ಅತ್ತಿತ್ತ ನೋಡುತ್ತಿದ್ದರೂ ಮತ್ತೆ ಮತ್ತೆ ಮೊದಲು ನೋಡಿದ ವ್ಯಕ್ತಿಯತ್ತಲೇ ಕಣ್ಣು ಹೊರಳುತ್ತಿದ್ದಲ್ಲಿ ಆ ವ್ಯಕ್ತಿಯನ್ನು ಕಟಾಕ್ಷಕ್ಕೆ ಪಾತ್ರನಾಗಿರುವನೆನ್ನಬಹುದು. ಸಲಿಗೆಯ ಜೊತೆಗೆ ಆದರವೂ ಸೇರಿಕೊಂಡಾಗ ಬೀರುವ ಕಟಾಕ್ಷವೆಂಬುದು ಆಹ್ಲಾದವನ್ನು ಉಂಟುಮಾಡುವಂತಹುದು.
ಐದನೆಯದಾಗಿ ಕೃಷ್ಣನು ಕಾಲಿಂದಿಯ ಪುಲಿನಾಂಗಣವೆಂಬುದನ್ನು ತುಂಬ ಇಷ್ಟಪಡತಕ್ಕವನು. ಪುಲಿನವೆಂದರೆ ಮರಳು, ಮರಳ ರಾಶಿ, ನದೀ-ತೀರದಲ್ಲಿಯ ಮರಳಿನ ದಂಡೆ. ಅದುವೇ ಒಂದು ಅಂಗಣ, ಎಂದರೆ ವಿಹಾರ-ಸ್ಥಾನ. ಕಾಲಿಂದಿಯೆಂಬುದು ಯಮುನೆಯ ಮತ್ತೊಂದು ಹೆಸರು. ಯಮುನಾನದಿಯ ದಡದ ಮರಳ ವಿಹರಣದೆಡೆಯು ಅಚ್ಚುಮೆಚ್ಚು, ಕೃಷ್ಣನಿಗೆ.
ಆರನೆಯದಾಗಿ, ಆತನು ಕಾಮವತಾರಾಂಕುರ. ಏನು ಹಾಗೆಂದರೆ? ಕಾಮನೆಂದರೆ ಮನ್ಮಥ. ಮನ್ಮಥನು ಕೃಷ್ಣನ ಪುತ್ರನೇ ಸರಿ. ಅಮರಕೋಶದಲ್ಲೇ ಆತನಿಗೆ ಪ್ರದ್ಯುಮ್ನ, ಶ್ರೀಪುತ್ರ – ಎಂಬ ಹೆಸರುಗಳಿವೆ. ಪ್ರದ್ಯುಮ್ನನು ಸಾಕ್ಷಾತ್ ಶ್ರೀಕೃಷ್ಣನ ಪುತ್ರನೇ. ಶ್ರೀಪುತ್ರನೆಂದರೆ ಲಕ್ಷ್ಮಿಯ ಮಗನೇ. ಹೀಗಾಗಿ ಮನ್ಮಥನ ಅವತಾರವಾಗಲು ಶ್ರೀಕೃಷ್ಣನೆಂಬ ಕುಡಿಯೇ ಕಾರಣ. ಅಂಕುರವೆಂದರೆ ಮೊಳಕೆಯೂ ಆಗಬಹುದು, ಮೊಗ್ಗೂ ಆಗಬಹುದು. ಈ ಎರಡರಲ್ಲಿ ಯಾವ ಅರ್ಥ ತೆಗೆದುಕೊಂಡರೂ, ಅಂಕುರವೆಂದರೆ "ಮುಂದಿನ ಬೆಳವಣಿಗೆಗೆ ಆರಂಭ-ಸ್ಥಾನ" - ಎಂಬುದೇ ತಾತ್ಪರ್ಯ.
ಕಾಮಾವತಾರವೆಂಬ ಪದಕ್ಕೆ ಮತ್ತೊಂದು ರೀತಿಯಲ್ಲಿಯೂ ಅರ್ಥ ಹೇಳಬಹುದು. ಮನಸ್ಸಿನಲ್ಲಿ ಉದಯಿಸುವ ಅಭಿಲಾಷೆಯೇ "ಕಾಮ". ಅದರ 'ಅವತಾರ'ಗಳು ಬಗೆಬಗೆಯಾದವು. ಹಾವ-ಭಾವಗಳು ಅದರ ಅವತಾರಗಳೇ. ಲೀಲೆ-ಕಟಾಕ್ಷಗಳೂ ಅವತಾರಗಳೇ. ಅವುಗಳಿಗೆ ಅಂಕುರ ಎಂದರೆ ಹುಟ್ಟುವೆಡೆ. ಗೋಪಿಕೆಯರ ಚಿತ್ತದಲ್ಲಿ ಕೃಷ್ಣನನ್ನು ಕುರಿತು ಅದೆಷ್ಟು ಬಗೆಬಗೆಯ ಭಾವ-ಲಹರಿಗಳು ಉಕ್ಕಿಬಂದವು! ಹೀಗೆ ಅವುಗಳಿಗೆಲ್ಲ ಜನ್ಮ-ಸ್ಥಾನವೇ ಈತ.
ಏಳನೆಯದಾಗಿ, ಶ್ರೀಕೃಷ್ಣನು ಮಧುರಿಮ-ಸ್ವಾರಾಜ್ಯ. ಮಧುರಿಮೆಯೆಂದರೂ ಮಾಧುರ್ಯವೆಂದರೂ ಒಂದೇ. ಅದಕ್ಕೆ ಸ್ವಾರಾಜ್ಯ, ಎಂದರೆ ಸಂಪೂರ್ಣ-ಸ್ವತಂತ್ರತೆಯಿರುವೆಡೆ. ಪರ-ತಂತ್ರತೆಯೆಂಬುದು ಸ್ವ-ತಂತ್ರತೆಯೆನ್ನುವುದಕ್ಕೆ ವಿರುದ್ಧವಾದದ್ದು. ಪರ-ತಂತ್ರತೆಯೆಂದರೆ ಬೇರೆಯವರ ಅಧೀನದಲ್ಲಿರುವಿಕೆ. ಸ್ವತಂತ್ರನಾದವನು ಅನ್ಯರ ಇಚ್ಛೆಯನ್ನು ಅನುಸರಿಸಿಕೊಂಡೇ ಹೋಗಬೇಕಾದದ್ದಿರುವುದಿಲ್ಲ. ಹೀಗೆ ಮಾಧುರ್ಯದ ಸ್ವೇಚ್ಛಾ-ವಿಹಾರವೇ ಶ್ರೀಕೃಷ್ಣ.
ಭಗವಂತನನ್ನು ಪತಿಯೆಂಬ ಭಾವದಿಂದ ಸೇವಿಸುವುದು ಮಾಧುರ್ಯವೆನಿಸುತ್ತದೆ. ಕೃಷ್ಣನನ್ನು ಪ್ರೇಮದಿಂದ ಆರಾಧಿಸಿದ ಗೋಪಿಯರಿಗೆ ಆತನಲ್ಲಿದ್ದದ್ದೇ ಮಧುರ-ಭಾವ. ಶುದ್ಧಾತ್ಮರು ಶುದ್ಧಾತ್ಮರ ವಿಷಯದಲ್ಲಿ ಪ್ರೀತ್ಯಾದರಗಳನ್ನು ತಾಳುವುದೇ, ಸಂತೋಷ-ಗೌರವಗಳೊಂದಿಗೆ ನಡೆದುಕೊಳ್ಳುವುದೇ, ಮಾಧುರ್ಯವೆನಿಸುವುದು. ಗೋಪಿಯರಿಗೆ ಶ್ರೀಕೃಷ್ಣನನ್ನು ಕುರಿತಾದ ಭಾವದಲ್ಲಿ ಪ್ರೇಮ-ಕಾಮಗಳ ನಡುವೆ ಗೆರೆಯನ್ನು ಎಳೆಯಲೇ ಆಗದು. ಹೀಗಾಗಿ ಶ್ರೀಕೃಷ್ಣನು ಮಧುರ-ಭಾವದಿಂದಲೂ ಸಂಸೇವ್ಯನು.
ಅಂತೂ, ಮುಗ್ಧೆಯರಾದರೂ ಕೃಷ್ಣ-ಪ್ರೀತಿಯನ್ನು ಸಂಪಾದಿಸುವುದರಲ್ಲಿ ಚತುರೆಯರೇ ಆದವರು, ಈ ಗೋಪಾಲ-ನಾರಿಯರು; ಅವರಲ್ಲೆಲ್ಲ ಶ್ರೇಷ್ಠಳೆನಿಸುವ ರಾಧೆಯ ದೃಷ್ಟಿಯ ಪಾಶಕ್ಕೆ ಒಳಪಟ್ಟ ಕೃಷ್ಣನ ನಡೆಯು ಬಿರುಸಿನ ನಡೆಯಾದೀತೇ? ಅದು ದ್ರುತ-ಗತಿಯಲ್ಲ, ಹೆಜ್ಜೆಯಿಟ್ಟರೂ ಮೆಲ್ಲಮೆಲ್ಲನಿಡುವ ಪರಿ, ನಡೆದರೂ ಮತ್ತೆ ಮತ್ತೆ ಸ್ಥಗಿತಗೊಳ್ಳುವ ಪರಿಯದು.
ಅಲ್ಲದೆ, ಆತನ ಕಣ್ಗಳು ಲಾವಣ್ಯವನ್ನು ಸೂಸುವುವು. ಲಕ್ಷ್ಮೀ-ಕಟಾಕ್ಷಕ್ಕೆ ಆತನು ಸಹಜವಾಗಿಯೇ ಪಾತ್ರ. ಯಮುನೆಯ ಸೈಕತದ ಮೇಲಿನ ವಿಹಾರವು ಆತನಿಗೆ ಅತ್ಯಂತ ಪ್ರೀತಿ-ಪಾತ್ರವಾದದ್ದು. ಕಾಮನಿಗೆ ಜನ್ಮವಿತ್ತವನೇ ಆತನು. ಇವೆಲ್ಲದರ ಜೊತೆಗೆ ಮಧುರ-ಭಾವವು ತಾನೇ ತಾನಾಗಿ ಆತನಲ್ಲಿ ವಿಹರಿಸುವುದು.
ಇಷ್ಟು ವಿಶಿಷ್ಟನಾಗಿರುವ ಈ ನೀಲ-ಬಾಲನನ್ನಲ್ಲವೇ ನಾವು ಆದರದಿಂದ ಆರಾಧಿಸಬೇಕಾದದ್ದು?
ಚಾತುರ್ಯೈಕ-ನಿಧಾನ-ಸೀಮ-ಚಪಲಾಪಾಂಗಚ್ಛಟಾ-ಮಂಥರಂ/
ಲಾವಣ್ಯಾಮೃತ-ವೀಚಿ-ಲಾಲಿತ-ದೃಶಂ ಲಕ್ಷ್ಮೀ-ಕಟಾಕ್ಷಾದೃತಮ್ |
ಕಾಲಿಂದೀ-ಪುಲಿನಾಂಗಣ-ಪ್ರಣಯಿನಂ ಕಾಮಾವತಾರಾಂಕುರಂ/
ಬಾಲಂ ನೀಲಮಮೀ ವಯಂ ಮಧುರಿಮ-ಸ್ವಾರಾಜ್ಯಮಾರಾಧ್ನುಮಃ ||
ಶ್ಲೋಕ-ಪೂರ್ವಾರ್ಧದಲ್ಲಿ ಹಲವು ಚಕಾರಗಳೂ, ಮುಂದೆ ಹಲವು ಕಕಾರ-ಲಕಾರ-ರೇಫಗಳೂ ಬಂದಿರುವುದನ್ನು ಗಮನಿಸಬಹುದು.
ಸೂಚನೆ : 22/03/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.