ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಸ್ತೋಕ-ಸ್ತೋಕ-ನಿರುಧ್ಯಮಾನ
ಕಳ್ಳತನ ಕೆಟ್ಟದ್ದು - ಎಂಬುದನ್ನು ಯಾರು ಕೇಳಿಲ್ಲ? ಆದರೆ ಕಳ್ಳತನಕ್ಕೆ ಒಳ್ಳೆಯ ಪ್ರಯೋಜನಗಳು ಇರಬಾರದೆಂದೇನೂ ನಿಯಮವಿಲ್ಲ. ಯಾವ ನಿಯಮಗಳನ್ನೂ ಮೀರಲೇಬಾರದೆಂಬ ನಿಯಮವೂ ಇಲ್ಲ! ಹೌದೇ? ಏಕೆ? ಹೇಗೆ?
ವೇಗಮಿತಿಯನ್ನು ಮೀರಿ ಓಡಿಸುತ್ತಿರುವ ಗಾಡಿಯನ್ನು ಹಿಡಿಯಲು ಪೋಲೀಸರೂ ಕೆಲವೊಮ್ಮೆ ತಾವೂ ವೇಗಮಿತಿಯನ್ನು ಮೀರಿ ಅಟ್ಟಿಸಿಕೊಂಡು ಹೋಗಿ ಹಿಡಿಯಬೇಕಾಗುವ ಪ್ರಸಂಗವು ಬರಬಹುದಲ್ಲವೆ? ಕದ್ದಾಲಿಕೆ, ಗುಟ್ಟಿನಲ್ಲಿ ಫೋಟೋ ಹಿಡಿಯುವುದು, ಸುಳ್ಳು ಹೆಸರು ಹೇಳಿ ವ್ಯವಹಾರ ಮಾಡುವುದು, ವೇಷಾಂತರದಲ್ಲಿ ಸಂಚರಿಸುವುದು - ಮುಂತಾದುವೆಲ್ಲ ಕಳ್ಳಾಟಗಳೇ. ಕಳ್ಳರು ಇವನ್ನು ಮಾಡುವುದು ದುಷ್ಟ-ಸ್ವಾರ್ಥಕ್ಕಾಗಿ. ರಾಜನೇ ನಿಯಮಿಸಿದ ಗೂಢಚಾರರು ಇವನ್ನೇ ಮಾಡಿದರೂ ಅದು ದೇಶಹಿತಕ್ಕಾಗಿ.
ಹೀಗೆ ಯಾವುದೇ ಕ್ರಿಯೆಯು ಸಂದರ್ಭಾನುಸಾರ ಒಳ್ಳೆಯದಕ್ಕಾಗಿಯೂ ಆಗಬಹುದು, ಕೆಟ್ಟದಕ್ಕಾಗಿಯೂ ಆಗಬಹುದು. ಪ್ರಕೃತ, ಕೃಷ್ಣಕರ್ಣಾಮೃತಕ್ಕೂ ಈ ಎಲ್ಲ ಮಾತಿಗೂ ಸಂಬಂಧವೇನೆನ್ನುವಿರೋ? ಕೃಷ್ಣನಿಗಿಂತಲೂ ಕಳ್ಳನುಂಟೆ? ಪ್ರಕೃತ-ಶ್ಲೋಕದಲ್ಲಿ ಆತನ ಕಳ್ಳಾಟದ ಕಿರುನೋಟವೊಂದಿದೆ!
ಎಷ್ಟೋ ಜನ ಎದುರಿಗೆ ಕಂಡಾಗ ಇರುವಂತೆ ಪರೋಕ್ಷದಲ್ಲಿ ಇರರು. ನಮ್ಮ ಬಗ್ಗೆ ಅವರಿಗಿರುವ ನಿಜವಾದ ಅಭಿಪ್ರಾಯವೇನು? - ಎಂಬುದನ್ನು ಅರಿಯಲು ಕೆಲವೊಮ್ಮೆ ಅವರಿಗೆ ಗೊತ್ತಾಗದಂತೆಯೇ ಅವರ ಮಾತನ್ನು ಕೇಳಿಸಿಕೊಳ್ಳಬೇಕಾಗುತ್ತದೆ, ಅಲ್ಲವೆ? ಬಚ್ಚಿಟ್ಟುಕೊಂಡು ಕೇಳಿಸಿಕೊಳ್ಳುವುದುಂಟು. ಇದಕ್ಕಿಂತಲೂ ಸುಲಭೋಪಾಯವನ್ನು ಕೃಷ್ಣನು ಹೇಳಿಕೊಡುತ್ತಾನೆ!
ಹೇಗೆ? ಮಿಥ್ಯಾ-ಸ್ವಾಪದಿಂದ. ಏನು ಹಾಗೆಂದರೆ? ಹಾಗೆಂದರೆ ಕಪಟ-ನಿದ್ರೆ. ಒಬ್ಬನಿಗೆ ನಿದ್ರೆಬಂದಂತೆ ಕಂಡುಬಂದಾಗ ಜನರ ವರ್ತನೆಯೇ ಬೇರೆಯಿರುತ್ತದೆ: ಮಲಗಿರುವ ಈತನಿಗೆ ಏನೂ ಕಾಣಿಸದಷ್ಟೇ ಅಲ್ಲ, ಕೇಳಿಸುವುದೂ ಇಲ್ಲ - ಎಂದು ಬಗೆದು, ಹತ್ತಿರದಲ್ಲಿಯೇ ತಮ್ಮ ಅಂತರಂಗವನ್ನು ತೆರೆದೇ ಪರಸ್ಪರ ಮಾತನಾಡಿಕೊಳ್ಳುವುದೂ ಉಂಟು.
ಕೃಷ್ಣನಿಲ್ಲಿ ಮಾಡಿರುವುದೂ ಅಂತೆಯೇ. ವ್ರಜ-ವಧುಗಳು, ಎಂದರೆ ಗೋಕುಲದ ಗೋಪಿಯರು, ಲೀಲೆಯಿಂದ ಏನೇನನ್ನು ಮಾತನಾಡಿಕೊಳ್ಳುವರು ಪರಸ್ಪರ? - ಎಂಬುದನ್ನು ಅರಿತುಕೊಳ್ಳುವ ಉದ್ದೇಶ, ಕೃಷ್ಣನಿಗೆ. ಮಿಥೋಜಲ್ಪಿತವೆಂದರೆ ಗುಟ್ಟಾಗಿ ಮಾತನಾಡುವುದು, ಪರಸ್ಪರ ಹೇಳಿಕೊಳ್ಳುವುದು. ಜಲ್ಪವೆಂದರೆ ಬಡಬಡಿಸುವುದು. "ಬರೀ ನಾವು ನಾವೇ ಇದ್ದೇವೆ" - ಎಂದುಕೊಂಡಾಗ ಮನಬಿಚ್ಚಿ ಯಥೇಚ್ಛವಾಗಿ ಮಾತನಾಡುತ್ತಾ ಗುಟ್ಟುಗಳನ್ನೂ ಹೇಳಿಕೊಳ್ಳುತ್ತೇವಲ್ಲವೆ? ಹೀಗಾಗಿ, ಮಿಥೋಜಲ್ಪಿತವೆಂದರೆ ಅನ್ಯರು ಇಲ್ಲವೆಂದು ತೋರಿದಾಗ ಒಬ್ಬರಿಗೊಬ್ಬರು ಯಥೇಷ್ಟವಾಗಿ ಹೇಳಿಕೊಳ್ಳುವ ಅಂತರಂಗದ ಮಾತು.
ಕೆಲವೊಮ್ಮೆ ಅಂತಹ ಮಾತುಗಳನ್ನು ಕದ್ದಾಲಿಸುವುದರಲ್ಲೇ ಒಂದು ಸಂತಸವಿರುತ್ತದೆ. ಏಕೆಂದರೆ ಅದು ಶ್ರೋತ್ರ-ಮನೋಹರವಾಗಿರುತ್ತದೆ. ಏನು ಹಾಗೆಂದರೆ? ಕಿವಿಗೆ ಯಾವುದು ರಂಜಕವೋ ಅದು ಶ್ರೋತ್ರ-ಮನೋಹರ.
ಶ್ರೋತ್ರ-ಮನೋಹರವೆಂಬುದನ್ನು ಶ್ರೋತ್ರಹರ ಹಾಗೂ ಮನೋಹರ - ಎಂದು ಎರಡಾಗಿಯೂ ನೋಡಬಹುದು. ಶ್ರೋತ್ರವೆಂದರೆ ಕಿವಿಯಲ್ಲವೇ? ಕೆಲವು ಮಾತುಗಳು ಕಿವಿಯನ್ನು ಸೆಳೆದುಕೊಳ್ಳುತ್ತವೆ. ಎಂದರೆ, ಆ ಬಗೆಯ ಮಾತುಗಳನ್ನು ಆಲಿಸುವುದರಲ್ಲೇ ಒಂದು ಚೆಂದವಿರುತ್ತದೆ. ಮುಗ್ಧ-ಗೋಪಿಕೆಯರ ಮಾತಿನ ವೈಖರಿಯಲ್ಲೇ ಒಂದು ಸೊಗಸಿರುವುದು. ಅವರ ವಾಗ್-ವಿಲಾಸವು ಆಕರ್ಷಕ. ಏಕೆ? ಅದರಲ್ಲಿ ಮಧುರತೆ, ಕೋಮಲತೆ, ಸುಶ್ರಾವ್ಯತೆ - ಇವೆಲ್ಲ ಸೇರಿಕೊಂಡಿರುತ್ತವೆ. ಹೀಗೆ ಇದು ಶ್ರೋತ್ರ-ರಂಜಕ.
ಇನ್ನು ಅವರ ಮಾತುಗಳಲ್ಲಿ ಅವರ ಭಾವವು ಗೋಚರವಾಗುತ್ತದೆ. ಅವರ ಸರಳವಾದ ಮಾತುಗಳಲ್ಲೂ ಕೃಷ್ಣನನ್ನು ಕುರಿತಾದ ಅವರ ಗಾಢವಾದ ಪ್ರೇಮವು ಬಿಂಬಿತವಾಗುತ್ತದೆ. ಇದು ಮನೋರಂಜಕ.
ಮುಗುದೆಯರು ತಮ್ಮ ಎದೆಯಾಳದ ಭಾವವನ್ನು ಎದುರಿಗೆ ಹೇಳಲು ನಾಚಿಕೊಳ್ಳುವುದೂ ಉಂಟು, ಭಯಪಡುವುದೂ ಉಂಟು. ತಮ್ಮ ಆಪ್ತ-ಸಖಿಯರು ಮಾತ್ರವೇ ಇದ್ದಾಗ ಹಿಂಜರಿಕೆಯಿಲ್ಲದೆ ಹೇಳಿ ಹಂಚಿಕೊಳ್ಳುವುದೂ ಉಂಟು. ಕಾಳಿದಾಸನ ಶಾಕುಂತಲ-ನಾಟಕದಲ್ಲಿಯ ಈ ಸಂನಿವೇಶ ನೋಡಿ: ದುಷ್ಯಂತನ ವಿಷಯದಲ್ಲಿ ತನಗೆಷ್ಟು ಗಾಢಪ್ರೇಮ - ಎಂಬುದನ್ನು ಶಕುಂತಲೆಯು ಸಖಿಯರೊಂದಿಗೆ ಹೇಳಿಕೊಳ್ಳುತ್ತಾಳೆ; ಅದನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡ ದುಷ್ಯಂತನಿಗೆ ಮಹಾಸಂತೋಷವೇ ಆಗುತ್ತದೆ. ಸಾಮಾನ್ಯವಾಗಿ ಪ್ರತ್ಯಕ್ಷಕ್ಕೇ ಹೆಚ್ಚು ಬೆಲೆ, ಸಾಧಾರಣ-ವ್ಯವಹಾರದಲ್ಲಿ, ಕೋರ್ಟು-ಕಚೇರಿಗಳಲ್ಲಿ. ಆದರಿದೋ ಪರೋಕ್ಷಕ್ಕೇ ಹೆಚ್ಚು ಬೆಲೆ, ಸ್ನೇಹವ್ಯವಹಾರ-ಪ್ರೇಮವ್ಯವಹಾರಗಳಲ್ಲಿ!
ಹೀಗೆ ಕ್ರೀಡೆಯಿಂದ, ಅಥವಾ ಕ್ರೀಡೆಗಾಗಿ, ನಯನಗಳನ್ನು ನಿಮೀಲನಮಾಡಿಕೊಂಡು ಮಲಗಿದ್ದಾನೆ, ಕೃಷ್ಣ, ಗೋಪಿಯರ ಮಾತುಗಳನ್ನಾಲಿಸುತ್ತಾನೆ, ಭಾವವನ್ನು ಗ್ರಹಿಸುತ್ತಾನೆ. ಅವನಿಗೆ ಸಂತೋಷವಾಗದೇ? ಆದದ್ದು ಎರಡು ಬಗೆಯಲ್ಲಿ ತೋರಿಕೊಳ್ಳುತ್ತದೆ. ಅದನ್ನು ಶ್ಲೋಕದ ಪೂರ್ವಾರ್ಧದಲ್ಲಿ ತಿಳಿಸಿದೆ. ಮೊದಲನೆಯದು ಒಂದು ಮುಗುಳ್ನಗೆಯು ಮುಖದಲ್ಲಿ ಮೂಡುವುದು. ಎರಡನೆಯದು ರೋಮಾಂಚ. ಎರಡರಲ್ಲೂ ವಿಶೇಷಗಳಿವೆ.
ಶ್ರೀಕೃಷ್ಣನ ಸ್ಮಿತವು ಮಂದವಾಗಿದೆ. ಎಂದರೆ, ಗೋಪಿಯರ ಏಕಾಂತದ ಮಾತುಗಳಿಗೆ ಆತನಿಗೆ ಕಿರುನಗೆ ಬರುತ್ತಿದೆ. ಮುಗ್ಧರ ಮಾತು ಚತುರರಿಗೆ ಎಷ್ಟೋ ಬಾರಿ ನಗು ತರಿಸುವುದಿಲ್ಲವೇ? ಆದರೆ ಆ ಮಾತುಗಳ ಹಿಂದೆ ಅವರ ಶುದ್ಧವಾದ ಭಾವವಿದೆ. ಹೀಗಾಗಿ ಅದು ಸಂತೋಷ-ಕಾರಕ. ಸಂತೋಷವಿದ್ದಾಗ ನಗುವು ತಾನೇ ಮೂಡುವುದಲ್ಲವೇ? ಮುಖದಲ್ಲಿಯ ಹಾಸವು ಮಂದವೆಂದಿದ್ದರೂ ಅದು ಮೃದುಲವಾಗಿ, ಎಂದರೆ ಕೋಮಲ-ಧಾರೆಯಾಗಿ, ಬರುತ್ತಿರುವಂತಹುದು. ಅಲ್ಲದೆ ಅದನ್ನು ಹಿಡಿದಿಟ್ಟಿದ್ದರೂ, ಸ್ತೋಕ-ಸ್ತೋಕವಾಗಿ, ಎಂದರೆ ಸ್ವಲ್ಪ-ಸ್ವಲ್ಪವಾಗಿ, ಅದು ಪ್ರಸ್ಯಂದಿಯಾಗುತ್ತಲೇ ಇರುವಂತಹುದು, ಹೊರಹೊಮ್ಮುತ್ತಲ್ಲೇ ಇರುವಂತಹುದು.
ಸ್ಮಿತವನ್ನು ಪ್ರಸ್ಯಂದಿಯೆಂದು ಹೇಳಿದೆ. ಹಾಗೆ ಹೇಳಿರುವುದು, ಅದು ಅಮೃತಕಲ್ಪ - ಎಂಬುದನ್ನು ಧ್ವನಿಸುತ್ತದೆ. ಮುಖದಲ್ಲಿ ಮುಗುಳ್ನಗೆಯು ಹರಿಯಿತು - ಎನ್ನುವಲ್ಲಿ ಯಾವುದಾದರೂ ದ್ರವಕ್ಕೆ ತಾನೆ ಹರಿವೆಂಬುದು ಶಕ್ಯ? ಹೀಗಾಗಿ ಮಂದ-ಸ್ಮಿತವು ಅಮೃತ-ಧಾರೆಯಂತೆ ವದನದ ಮೇಲೆ ಮೂಡಿಬರುತ್ತಿದೆಯೆಂಬ ಅರ್ಥವಾಗುತ್ತದೆ.
ಅಷ್ಟೇ ಅಲ್ಲದೆ ವ್ರಜ-ವಧುಗಳ ಮಿಥೋಜಲ್ಪಿತದ ಪರಿಣಾಮವು ಮತ್ತೊಂದು ಬಗೆಯಲ್ಲೂ ವ್ಯಕ್ತವಾಗುತ್ತಿದೆ. ಮುಖದಲ್ಲಿ ಮೂಡುವ ಮುಗುಳ್ನಗೆಯನ್ನಾದರೂ ಒಂದಿಷ್ಟು ಕಷ್ಟಪಟ್ಟು ತಡೆಹಿಡಿಯಬಹುದೇನೋ. ಆದರೆ ಮತ್ತೊಂದು ಪರಿಣಾಮವನ್ನು ಮಾತ್ರ ಬಚ್ಚಿಟ್ಟುಕೊಳ್ಳಲಾಗುವುದಿಲ್ಲ. ಏನದು? ರೋಮಾಂಚ.
ರೋಮಗಳ ಅಂಚನವೇ ರೋಮಾಂಚ. ಅಂಚನವೆಂದರೆ ಚಲಿಸುವುದು, ಎದ್ದುನಿಲ್ಲುವುದು. ನಮ್ಮ ಬಗ್ಗೆಯೇ ಯಾರಾದರೂ ಪ್ರೀತಿಯ, ಅಭಿಮಾನದ, ಹಾಗೂ ಗೌರವದ ಮಾತನ್ನಾಡಿದುದು ಅನಿರೀಕ್ಷಿತವಾಗಿ ಮತ್ತು ಪರೋಕ್ಷದಲ್ಲಿ ಗೋಚರವಾದಾಗ ಸಂತೋಷವಾಗುವುದಲ್ಲದೆ ರೋಮಾಂಚವೂ ಕೆಲವೊಮ್ಮೆ ಆಗುವುದುಂಟು. ಮತ್ತೊಬ್ಬರ ಪ್ರೇಮಕ್ಕೆ ನಾವು ಪಾತ್ರರಾದಾಗಲಂತೂ ರೋಮಾಂಚವು ತಾನೇ ತಾನಾಗುವುದು.
ಪ್ರೇಮೋದ್ಭೇದವೆಂದರೆ ಅನುರಾಗಾತಿಶಯ. ಅದರಿಂದಾದ ರೋಮೋದ್ಗಮವು ನಿರರ್ಗಲವೂ ಪ್ರಸೃಮರವೂ ಪ್ರವ್ಯಕ್ತವೂ ಆಗಿರುವಂತಹುದು - ಎನ್ನುತ್ತಾನೆ, ಕವಿ. ಏನು ಹಾಗೆಂದರೆ? ಅರ್ಗಲವೆಂದರೆ ಅಗುಳಿ. ಬಾಗಿಲಿಗೆ ಅರ್ಗಲವನ್ನು ಹಾಕಿದರೆ ಯಾರೂ ಒಳಬರುವಂತಿಲ್ಲ. ಅಲ್ಲಿಗೆ ಅಡ್ಡ ಹಾಕಿದಂತೆಯೇ. ನಿರರ್ಗಲವೆಂದರೆ ತದ್ವಿರುದ್ಧ: ಅಡೆತಡೆಗಳೇ ಇಲ್ಲದಿರುವುದು.
ಇನ್ನು ಪ್ರಸೃಮರವೆಂದರೆ ಪ್ರಸರಿಸುತ್ತಿರುವಂತಹುದು. ನಿರರ್ಗಲ-ಪ್ರಸೃಮರವೆಂದರೆ ತಡೆಯಿಲ್ಲದೆ ಹರಡುವುದು. ಪ್ರವ್ಯಕ್ತವೆಂದರೆ ಪರಿಸ್ಫುಟವಾಗಿರುವುದು. ಹೀಗಾಗಿ, ಕೃಷ್ಣನಿಗುಂಟಾಗಿರುವ ರೋಮಾಂಚವೆಂಬುದು ವ್ಯಾಪಕವಾಗಿಯೂ ಸುವ್ಯಕ್ತವಾಗಿಯೂ ಆಗಿರುವಂತಹುದು.
ಅಂತೂ ಹೀಗೆ ಕ್ರೀಡೆಗಾಗಿ ನಯನಗಳನ್ನು ನಿಮೀಲನ ಮಾಡಿಕೊಂಡು ಮಿಥ್ಯಾಶಯನವನ್ನು ಮಡುತ್ತಿರುವ ಕೃಷ್ಣನಿಗೆ, ವ್ರಜನಾರಿಯರ ಗುಟ್ಟಿನ ಉಲಿಗಳು ಮಂದಸ್ಮಿತವನ್ನೂ ರೋಮಾಂಚವನ್ನೂ ಉಂಟುಮಾಡುತ್ತಿವೆ.
ಇಂತಹ ಕಪಟ-ಸ್ವಾಪವನ್ನು ಉಪಾಸಿಸುತ್ತೇವೆ - ಎನ್ನುತ್ತಾನೆ ಕವಿ!
ಸ್ತೋಕಸ್ತೋಕ-ನಿರುಧ್ಯಮಾನ-ಮೃದುಲ-ಪ್ರಸ್ಯಂದಿ-ಮಂದಸ್ಮಿತಂ
ಪ್ರೇಮೋದ್ಭೇದ-ನಿರರ್ಗಲ-ಪ್ರಸೃಮರ-ಪ್ರವ್ಯಕ್ತ-ರೋಮೋದ್ಗಮಮ್ |
ಶ್ರೋತೃ-ಶ್ರೋತ್ರ-ಮನೋಹರ-ವ್ರಜವಧೂ-ಲೀಲಾ-ಮಿಥೋ-ಜಲ್ಪಿತಂ
ಮಿಥ್ಯಾ-ಸ್ವಾಪಂ ಉಪಾಸ್ಮಹೇ ಭಗವತಃ ಕ್ರೀಡಾ-ನಿಮೀಲದ್-ದೃಶಃ ||