Thursday, June 30, 2022

ஶ்ரீகுருவின் கண்ணோட்டம் – 14 அதர்மம் அநியாயத்திற்காக வேண்டுதலா?(Adharmam aniyayattirkaga vendudalA?)

மூலம்:  திரு.  வரததேசிகாசார்யார்

தமிழாக்கம் : திருமதி வனஜா
மின்னஞ்சல் : (lekhana@ayvm.in)

    மிகவும் விமரிசையாக பூஜை தொடங்கியது. மந்திரங்களின் முழக்கமும், சங்கு, மணி, தாள வாத்யங்களின் ஒலியும்  மிகுந்திருந்தது.  வீட்டின் தலைவர் வழக்கத்தைவிட  அதிக தூய்மையான(மடியான) ஆடை அணிந்து மேடையில் அமர்ந்தார். கூடை நிறைய பூக்களாலும், (துளசி முதலான) தளங்களாலும்அர்ச்சனை நடந்தது. தூப, தீப, நைவேத்யம்,ஹோமம் மற்றும் ராமாயண பாராயணமும் நிறைவுற்றது.

"என்கோரிக்கைய  நிறைவேற்றும்படி  இறைவனை  வேண்டுங்கள் " என்று பூஜை செய்தவரிடம் எஜமானர் கட்டளை இடும் குரலில் கேட்டுக்கொண்டார். "உங்கள் விருப்பம் என்ன?" என்று வினவியபோது  "இந்த எல்லா சொத்தும் எனக்கே வந்து சேர வேண்டும்.  என் தம்பிக்கு சிறிதளவும்  கிடைக்க கூடாதென்று நீதிமன்றத்தில் தீர்ப்பு கிடைக்கும்படி இறைவனிடம் வேண்டுங்கள் "என்றார்.

        பூஜை செய்தவருக்கு குழப்பம் ஏற்பட்டது.  அப்போதுதான் அனைவரும் ராமாயண கதையை கேட்டிருந்தனர். 'தந்தையார் அளித்த வாக்கின்படி அரசுரிமை தம்பி பரதனுக்கே சேர வேண்டும். இதுவே அறம். நான் அரசுரிமை ஏற்றால் அறம் கெடும். அதுவுமன்றி பரதன் அரசாள தகுந்தவன்.  அவன் என் அன்பிற்குரிய தம்பி. எனவே அவனே அரசனாகட்டும்' என்று தன் கைக்கு எட்டிய அரசுரிமையை  தம்பிக்கே விட்டு கொடுத்த தர்மவான், தியாகி  ஸ்ரீராமசந்திரன்.  ஆனால் இங்கோ தம்பிக்கு சட்டப்படி கிடைக்கவேண்டிய சொத்தும் இந்த அண்ணனுக்கே  சேர வேண்டும்' என்று  அதர்மத்திற்கு துணை போகும்படி அந்த தர்ம ப்ரபுவை கோரவேண்டுமாம்! எத்தகைய நெருக்கடி.

முடிவில் பூஜை செய்தவர் தன் கட்சிகாரன் தவறானவனாயினும் அவனுக்காக வாதாடும் வக்கீலை போலவே நடந்து கொண்டு விட்டார். தன் எஜமானனின் கோரிக்கையை உரத்த குரலில் முறையிட்டார். இத்தகைய பூஜையை ஏற்றுக்கொள்பவனை  இறைவன் என்று எந்த அறநூலும் ஒப்புவதில்லை.

Sunday, June 26, 2022

ಶ್ರೀ ರಾಮನ ಗುಣಗಳು - 60 ಕರುಣಾಕರ- ಶ್ರೀರಾಮ (Sriramana Gunagalu-60 - Karunaahara Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


'ಕರುಣೆ' ಎಂಬುದು ಅತಿ ವಿಶಿಷ್ಟವಾದ ಗುಣ. ಈ ಗುಣ ಇದ್ದವರನ್ನು ದೊಡ್ಡವರು, ಮಹಾತ್ಮರು, ದೇವತ್ವಸಂಪನ್ನರು ಎಂದೆಲ್ಲಾ ಹೇಳಬಹುದು. ಈ ಗುಣದ ಸ್ವಭಾವವೇ ಅಂತಹದ್ದು. ಒಂದುವೇಳೆ ಇಲ್ಲದಿದ್ದರೆ ಬೆಳೆಸಿಕೊಳ್ಳಬಹುದಾದದ್ದು. ಬೆಳೆಸಿಕೊಳ್ಳಲೇಬೇಕಾದುದು.  ಇಂತಹ ಗುಣವನ್ನು ಶ್ರೀರಾಮನಲ್ಲಲ್ಲದೇ ಬೇರೆಯವರಲ್ಲಿ ಹುಡುಕುವುದು ದುಸ್ಸಾಹಸವೇ ಸರಿ. ಹಾಗಾದರೆ ಅಂತಹ ಗುಣವಿಶಿಷ್ಟ ಶ್ರೀರಾಮ ಹೇಗೆ?

ಕರುಣೆ ಎಂಬ ಶಬ್ದಕ್ಕೆ ಕೃಪಾ, ದಯಾ, ಅನುಕಂಪ, ಘೃಣಾ ಎಂಬೆಲ್ಲಾ ಪರ್ಯಾಯ ಪದಗಳಿವೆ. ಕೆಳಗೆ ಬಿದ್ದವನನ್ನು ಮೇಲಕ್ಕೆತ್ತುವ ಭಾವ. ಅಸಹಾಯಕರನ್ನು ಸಹಕರಿಸಿ ಧೈರ್ಯವನ್ನು ತುಂಬುವ ಪರಿ. ಪತಿತರನ್ನು ಪಾವನರನ್ನಾಗಿಸುವ ವಿಧಾನ.  ಇವಷ್ಟನ್ನೂ  ಶ್ರೀರಾಮನಲ್ಲಿ ಕಾಣಲು ಸಾಧ್ಯ. ವಿಶೇಷವಾಗಿ ರಾಮಾಯಣದಲ್ಲಿ ಈ ಕರುಣಾ  ರಸವು ಕಾಕಾಸುರನನ್ನು ಅಟ್ಟುವಲ್ಲಿ ಪ್ರಕಟಗೊಂಡಿದೆ.

ಚಿತ್ರಕೂಟ ಪರ್ವತದ ಉಪವನಪ್ರದೆಶ. ಅಲ್ಲಿ ಸೀತಾದೇವಿಯು ವಿಹರಿಸಿ ಶ್ರಾಂತಳಾಗಿ ಶ್ರೀರಾಮನ ತೊಡೆಯ ಮೇಲೆ ಮಲಗಿ ವಿಶ್ರಾಂತಿಯನ್ನು ಮಾಡುತ್ತಿದ್ದಳು. ಆಗ ಅಲ್ಲಿ ಒಂದು ಕಾಗೆಯು ಬಂತು. ಅದು ಸೀತೆಯನ್ನು ಮಾಂಸಾಪೇಕ್ಷಿಯಾಗಿ ಕುಕ್ಕಲು ಪ್ರಯತ್ನಿಸುತ್ತಿತ್ತು.  ಎಷ್ಟೇ ಪ್ರಯತ್ನಿಸಿದರೂ ಕಾಗೆಯಿಂದ ತಪ್ಪಿಸಿಕೊಳ್ಳಲು ಸೀತೆಗೆ ಸಾಧ್ಯವಾಗಲಿಲ್ಲ. ಇಂತಹ ಸಣ್ಣ ಕಾಗೆಗೆ ಇಷ್ಟು ಭಯಪಡುವುದೇ? ಎಂದು ಹಾಸ್ಯ ಮಾಡಿ ಸೀತೆಯನ್ನು ಸಂತೈಸುತ್ತಿದ್ದ. ಯಾವಾಗ ಕಾಗೆಯು ಸೀತೆಯನ್ನು ಚುಚ್ಚಿ ರಕ್ತ ಹರಿದು ಶ್ರೀರಾಮನ ತೊಡೆಯು ಒದ್ದೆಯಾಗಲು ಆರಂಭವಾಯಿತೋ; ಆಗ ರಾಮನಿಗೆ ತುಂಬಾ ಕೋಪ ಬಂದಿತು. ತಡಮಾಡದೆ ಅಲ್ಲೇ ಇದ್ದ ದರ್ಭೆಯಲ್ಲಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಕಾಕಾಸುರನಿಗೆ ಪ್ರಯೋಗಿಸಿದ. ಅವನಾದರೋ ಇಂದ್ರಪುತ್ರನಾಗಿ ಭೂಮಿಗೆ ವಿಹಾರಕ್ಕಾಗಿ ಬಂದಿದ್ದ. ಬ್ರಹ್ಮಾಸ್ತ್ರವನ್ನು ತಪ್ಪಿಸಿಕೊಳ್ಲಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಲೇ ಇಲ್ಲ. ಋಷಿ-ಮಹರ್ಷಿಗಳ ಮೊರೆಹೊಕ್ಕಿದ. ಆದರೆ ಯಾರೂ ಕಾಕಾಸುರನನ್ನು ರಕ್ಷಿಸುವ ಧೈರ್ಯ ಮಾಡಲೇ ಇಲ್ಲ. ಮೂರು ಲೋಕವನ್ನು ಸುತ್ತಿದರೂ ರಕ್ಷಣೆ ಸಿಗದೇ ಕೊನೆಯಲ್ಲಿ ಶ್ರೀರಾಮನಲ್ಲಿ ಶರಣುಹೊಂಡಿದ.  ಅಷ್ಟರಲ್ಲಿ ಕಾಗೆಯ ಶಕ್ತಿ ಕುಂದಿತ್ತು. ಆದರೆ ನಿಯಮದ ಪ್ರಕಾರ ಬಿಟ್ಟ ಅಸ್ತ್ರವನ್ನು ಮತ್ತೆ ಸ್ವೀಕರಿಸುವಂತಿಲ್ಲ. ಪ್ರಯೋಗಿಸಲೇಬೇಕು. ವ್ಯರ್ಥವಾಗದಂತೆ ಅದಕ್ಕೆ ಏನು ಮಾಡಬೇಕೆಂದು ಕಾಕಾಸುರನಲ್ಲಿ ರಾಮನು ಕೇಳಿದನು. ಆಗ 'ನನ್ನ ಬಲಗಣ್ಣು ನಾಶವಾಗಲಿ' ಎಂದು ಕೇಳಿಕೊಂಡ. ಅದರಂತೆ ಕಾಗೆಯ ಬಲಗಣ್ಣು ನಾಶವಾಯಿತು. ಅನಂತರ ಕಾಕಾಸುರನು ತನ್ನ ಪ್ರಾಣವನ್ನು ಉಳಿಸಿಕೊಂಡನು.  ಆಗ ಸೀತೆಯು ಶ್ರೀರಾಮನಲ್ಲಿ ಕೇಳಿದಳು " ಇಂತಹ ಕ್ಷುದ್ರಜಂತುವಿನ ಮೇಲೆ ಅದೇಕೆ ಇಷ್ಟು ಕರುಣೆ ? ಅಂತಹ ಕೃಪೆಯನ್ನು ನನ್ನಲ್ಲೂ ತೋರು " ಎಂಬುದಾಗಿ ಕಾಕಾಸುರನ ಕಥೆಯನ್ನು ಹೇಳುವುದರ ಮೂಲಕ ಸೀತಾಮಾತೆಯು ಶ್ರೀರಾಮನ ಸಾಮರ್ಥ್ಯದ ಪರಿಚಯವನ್ನು ಮತ್ತು ಅವನ ಕಾರುಣ್ಯವನ್ನೂ ವಿವರಿಸುತ್ತಾಳೆ. ಇಂತಹ ಅನೇಕ ಘಟನೆಗಳು ಶ್ರೀರಾಮನ ಜೀವನದ ಉದ್ದಕ್ಕೂ ನಡೆಯುತ್ತವೆ. ವಾಲಿವಧೆ. ರಾವಣ ಮೊದಲಾದ ರಾಕ್ಷಸರ ಸಂಹಾರ ಇವೆಲ್ಲವೂ ಅವನ ಕರುಣೆಯೇ. ಸತ್ತ ಅನಂತರ ಅವರಿಗೆ ಸದ್ಗತಿಯನ್ನು ಕರುಣಿಸಿದ ಕರುಣಾಕರ ಶ್ರೀರಾಮ.

ಸೂಚನೆ : 26/06/2022 ರಂದು ಈ ಲೇಖನ ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.

Saturday, June 25, 2022

ಕಾಳಿದಾಸನ ಜೀವನದರ್ಶನ – 16 ವಿದ್ಯೆಯ ಗ್ರಹಿಕೆ-ಪರಿಣತಿ-ಫಲಗಳು (Kalidasana Jivanadarshana - 16 Vidyeya Grahike-Parinati-Phalagalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪರಿಣತರಿಬ್ಬರ ನಡುವೆ ನಡೆಯುವ ವಿದ್ಯಾವಿವಾದದಲ್ಲಿ ಒಬ್ಬರೇ ನಿರ್ಣಾಯಕರಾಗುವುದು ತರವಲ್ಲ - ಎಂಬ ವಿಷಯವನ್ನು ಕಾಳಿದಾಸನು ನಿರೂಪಿಸಿದ್ದಾನಷ್ಟೆ. ಹಲವು ಮಂದಿ ಪರೀಕ್ಷಕರಿದ್ದಾಗ  ಪರೀಕ್ಷ್ಯರನ್ನು ನಾನಾದೃಷ್ಟಿಗಳಿಂದ ಗಮನಿಸುವುದು ಸುಕರವಾಗುತ್ತದೆ. (ಪರೀಕ್ಷ್ಯರು ಎಂದರೆ ಪರೀಕ್ಷಿಸಲ್ಪಡಬೇಕಾದವರು): ಒಬ್ಬರಿಗೆ ತೋರದ ದೃಷ್ಟಿ ಮತ್ತೊಬ್ಬರಿಗೆ ತೋರಬಹುದಲ್ಲವೇ? ಒಬ್ಬರೇ ಎಲ್ಲಾ ದೃಷ್ಟಿಗಳಿಂದಲೂ ಮತ್ತೊಬ್ಬರ ವಿದ್ಯೆಯನ್ನು ಅಳೆಯುವುದು ಶಕ್ಯವೇ? ಅಂತಹ ಸರ್ವಜ್ಞತ್ವ ಯಾರಲ್ಲಿದೆ? ಚಾಣಕ್ಯನು ಹೇಳುವಂತೆ "ಸರ್ವಃ ಸರ್ವಂ ನ ಜಾನಾತಿ": ಎಲ್ಲವನ್ನೂ ಬಲ್ಲೆನೆನ್ನುವವರು ಯಾರುಂಟು? ಮಾಳವಿಕಾಗ್ನಿಮಿತ್ರದ ಪರಿವ್ರಾಜಿಕೆಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಾಳೆ: ನಿರ್ಣಾಯಕನು ಸರ್ವಜ್ಞನೇ ಆಗಿದ್ದರೂ ಏಕಾಕಿಯಾಗಿ ನಿರ್ಣಯ ಕೊಡುವುದು ಸರಿಯಲ್ಲ. ಹಾಗೆ ಮಾಡಲು ಹೋದಾಗ ದೋಷವೇರ್ಪಡುವುದು ಸಹಜವೇ! "ಸರ್ವಜ್ಞಸ್ಯಾಪಿ ಏಕಾಕಿನೋ ನಿರ್ಣಯೋ ದೋಷಾಯ" ಎಂಬುದು ಅವಳ (ಎಂದರೆ ಕಾಳಿದಾಸನ) ಮಾತು. ವಿದ್ಯೆಗೆ ವಿನಯವು ಭೂಷಣ: ಬಲ್ಲವರಾದರೂ ಅವಿಕತ್ಥನರಾಗಿರಬೇಕು (ವಿಕತ್ಥನ ಎಂದರೆ ಜಂಭಪಡುವಿಕೆ ಅಥವಾ ಜಂಭಪಡುವವ). "ವಿನಯವು ಒಂದು ರಕ್ಷೆ" ಎಂಬ ಶ್ರೀರಂಗಮಹಾಗುರುಗಳ ಸೂತ್ರ ಅವಿಸ್ಮರಣೀಯ.

ಹತ್ತು ಹಲವು ವರ್ಷಗಳ ಕಾಲ ಮಾಡಲಾದ ವಿದ್ಯಾಭ್ಯಾಸವನ್ನು ಅಳೆಯುವ ವಿಧಾನಗಳನ್ನು ಪರಿಷ್ಕರಿಸಿ ದೃಢಪಡಿಸಿಕೊಂಡು ಅಳೆಯುವುದಂತಿರಲಿ, ವಿದ್ಯಾರ್ಜನಸಾಮರ್ಥ್ಯವು ಯಾರದ್ದು ಹೇಗೆ, ಎಷ್ಟು ಮತ್ತು ಎಂತುಗಳನ್ನು ಅಳೆಯುವುದೂ ಸುಲಭವಲ್ಲ. ಕಂಸವಧಾನಂತರ ಕೃಷ್ಣ-ಬಲರಾಮರು ಸಾಂದೀಪನಿಗಳ ಬಳಿ ವಿದ್ಯಾಭ್ಯಾಸ ಮಾಡಿ, ಅರವತ್ತನಾಲ್ಕುದಿನಗಳಲ್ಲಿ ಅರವತ್ತನಾಲ್ಕು ವಿದ್ಯೆಗಳನ್ನು ಕಲಿತರೆಂದು ಕೇಳುತ್ತೇವೆ. ಯಾರ ಪ್ರಗತಿ ಆಗಲೇ ಎಷ್ಟಾಗಿದೆಯೆಂದು ಆರಂಭಕಾಲದಲ್ಲಿಯೇ ಊಹಿಸುವುದು ಸುಲಭವಲ್ಲ. ಆದರೂ, ಮಾಳವಿಕೆಯನ್ನು ಮೊದಲು ಕಂಡಾಗಲೇ "ದ್ರವ್ಯಮಿಯಂ ಕನ್ಯಾ!" - ಎಂಬ ಉದ್ಗಾರವು ಬಂದುದನ್ನು ಗಮನಿಸಿತಲ್ಲವೆ? ಆದರೆ ಇನ್ನೂ ಮೊದಲೇ, ಬಾಲ್ಯದಲ್ಲೇ, ವಿದ್ಯಾಸಾಮರ್ಥ್ಯಗಳು ತಲೆದೋರುವುದುಂಟು. ಎಲ್ಲ ಶಿಶುಗಳ ವಿದ್ಯಾರಂಭವೂ "ಶೂನ್ಯದಿಂದಲೇ ಶುರು"ವೆಂದು ಭಾವಿಸಬೇಕಾಗಿಲ್ಲ. ಉಮೆಯ ವಿದ್ಯಾಭ್ಯಾಸದ ವಿಷಯವನ್ನು ನಿರೂಪಿಸುತ್ತಾ ಕಾಳಿದಾಸನು ಎರಡು ಉಪಮೆಗಳೊಂದಿಗೆ ಅವಳಲ್ಲಿ ವಿದ್ಯೆಗಳು ಅಪ್ರಯತ್ನವಾಗಿ ಮೈದೋರಿದುದನ್ನು ಹೇಳುತ್ತಾನೆ.

ಶರದೃತುವು ಬರುತ್ತಲೇ ಹಂಸಗಳ ಸಾಲುಗಳು ತಾವಾಗಿಯೇ ಗಂಗೆಯನ್ನು ಬಂದು ಸೇರುತ್ತವೆ - ಎಂಬುದೊಂದು. ಕೆಲವು ಲತೆಗಳಲ್ಲಿ ಬೆಳಕು ಮೂಡುವುದುಂಟು; ಅದು ರಾತ್ರಿಯ ಹೊತ್ತು ತಾನಾಗಿಯೇ ತೋರಿಬರುವುದು - ಇದು ಮತ್ತೊಂದು. ಹಾಗೆಯೇ,  ಹಿಂದಿನ ಜನ್ಮದಲ್ಲಿ ಸಂಪಾದಿಸಿದ ವಿದ್ಯೆಗಳು ಬೋಧನ-ಸಮ-ಕಾಲದಲ್ಲಿಯೇ ಪಾರ್ವತಿಯಲ್ಲಿ ತಾವಾಗಿ ಬಂದು ಸೇರಿಕೊಳ್ಳುತ್ತಿದ್ದುವು! ಬಂದವು ಅವಳಲ್ಲಿ ಸ್ಥಿರವಾಗಿ ಉಳಿದುಕೊಳ್ಳುತ್ತಿದ್ದುವು! - ಎನ್ನುತ್ತಾನೆ, ಕವಿ. (ಸ್ಥಿರೋಪದೇಶಾಮ್ ಉಪದೇಶ-ಕಾಲೇ ಪ್ರಪೇದಿರೇ ಪ್ರಾಕ್ತನ-ಜನ್ಮ-ವಿದ್ಯಾಃ). ಎಷ್ಟೋ ಮಂದಿಗೆ ವಿದ್ಯೆಯು ಸುಲಭವಾಗಿ "ಹತ್ತು"ವುದರಲ್ಲಿ ಪೂರ್ವಜನ್ಮಗಳ ಸಂಸ್ಕಾರಗಳ ಪಾತ್ರವೂ ಒಂದಿಷ್ಟಿದ್ದೀತೆಂಬುದನ್ನು ಮರೆಯಲಾಗದು. "ಬೆಳೆಯುವ ಪೈರು ಮೊಳಕೆಯಲ್ಲೇ" ಎಂಬ ನಾಣ್ಣುಡಿಯೂ, ಮುಂದಾಗುವುದರ ಬಗೆಯ ಸೂಚನೆಯು ಮೊದಲೇ ದೊರಕುವುದನ್ನೂ ತಿಳಿಸುವುದಲ್ಲವೇ? 

ಲೋಕಮಾತೆಯೆನಿಸುವವಳ ತಂದೆಯಾಗುವ ಮಹಾಭಾಗ್ಯ ಹಿಮವಂತನದು: ಆತನ ಪುತ್ರಿಯಾಗಿ ಪಾರ್ವತಿಯು ಜನಿಸಿದಳೆಂದರೆ ಅವನ ಪೂರ್ವಪುಣ್ಯವು ಕಡಿಮೆಯೇನಲ್ಲ. ಆತನ ಮಗಳಾಗಿ ಅವಳು ಹುಟ್ಟಿದುದರಿಂದಾಗಿಯಂತೂ ಆತನು ಮತ್ತೂ ಪವಿತ್ರನೇ ಆದ; ಕುಲಕ್ಕೇ ಭೂಷಣಳಾದ ಅವಳಿಂದ ವಿಭೂಷಿತನೂ ಆದ - ಎನ್ನುವುದನ್ನು ಕಾಳಿದಾಸನು ಮೂರು ಸುಭಗವಾದ ಹೋಲಿಕೆಗಳಿಂದ ತೋರಿಸುತ್ತಾನೆ.

ಅನಲ್ಪಕಾಂತಿಯುತವಾದ ತನ್ನ ಶಿಖೆಯಿಂದಾಗಿ ದೀಪವು ಬೆಳಗುವುದಲ್ಲವೇ? - ಎಂಬುದೊಂದು ಉಪಮಾನ. ದೀಪಶಿಖೆಯಿಂದ ಬೆಳಕು ಚೆನ್ನಾಗಿ ಬಂದರಲ್ಲವೆ ದೀಪಕ್ಕೆ ಶೋಭೆ? ಕತ್ತಲು ತಮಸ್ಸು; ಬೆಳಕು ಜ್ಞಾನ. ಜ್ಞಾನವು ಪವಿತ್ರ; ಬೆಳಕೂ ಪವಿತ್ರವೇ. ಬೆಳಗುವ ಶಿಖೆಯಿಂದಾಗಿ ದೀಪಕ್ಕೆ ಪಾವಿತ್ರ್ಯ; ಬೆಳಗುವ ಶಿಖೆಯೇ ದೀಪಕ್ಕೆ ಭೂಷಣವೂ. ಹಾಗೆ ಪಾರ್ವತಿಯಿಂದಾಗಿ ಹಿಮವಂತನು ಇತ್ತ ಭೂಷಿತನೂ ಆದ, ಅತ್ತ ಪೂತನೂ ಆದ. (ಪೂತ ಎಂದರೆ ಪವಿತ್ರ). ಎರಡನೆಯ ಉಪಮಾನವೆಂದರೆ ಗಂಗೆಯಿಂದಾಗಿಯೇ ಮೂರೂಲೋಕಗಳೂ ಪೂತವಾದದ್ದು, ಭೂಷಿತವೂ ಆದದ್ದು. ಮೂರನೆಯ ಉಪಮಾನ ನಮಗಿಲ್ಲಿ ಮುಖ್ಯವಾದದ್ದು: ಸಂಸ್ಕಾರ-ಸಂಪನ್ನವಾದ ವಾಕ್ಕಿನಿಂದಾಗಿ ಮನೀಷಿ(ಧೀಮಂತ)ಯಾದವನೂ ಅಷ್ಟೇ: ಪವಿತ್ರನೂ ವಿಭೂಷಿತನೂ ಆಗುವನು.  

ಸಂಸ್ಕಾರ-ಸಂಪನ್ನವಾದ ಮಾತೆಂದರೆ ಒಂದರ್ಥದಲ್ಲಿ ವಿದ್ಯೆಯೇ. ಅದಕ್ಕೂ ಎರಡು ಫಲಗಳಿದ್ದರೆ ಸೊಗಸು: ಭೂಷಿಸುವುದು, ಪಾವನಗೊಳಿಸುವುದು. ಮೈಗೆ ಸೊಗಸು ವೇಷಭೂಷಣಗಳು; ಮನಸ್ಸಿಗೆ ವಿದ್ಯೆ. ಬರೀ ಭೂಷಿತರಾದರೆ ಸಾಲದು; ಜೊತೆಗೇ ಪಾವನತೆಯೂ ಮೂಡಬೇಕು.

ಹೆಸರಿನ ಪಕ್ಕದಲ್ಲಿ ನಾವು ಸಂಪಾದಿಸಿದ ಡಿಗ್ರಿಗಳನ್ನು ಭೂಷಣ ಎಂಬಂತೆ ಹಾಕಿಕೊಳ್ಳುವುದು ಲೋಕರೂಢಿ; ಅದು ತಪ್ಪೆಂದಲ್ಲ. ಆದರೆ ನಾವು ಕಲಿತ ವಿದ್ಯೆ ನಮ್ಮಲ್ಲಿ ಒಂದು ಅಂತರಂಗೋನ್ನತಿಯನ್ನೂ ಉಂಟುಮಾಡುತ್ತಿದೆಯೇ? - ಎಂದು ಕೇಳಿಕೊಳ್ಳಬೇಕಾಗಿದೆ. "ವಿದ್ಯಯಾ ಅಮೃತಮ್ ಅಶ್ನುತೇ" ಎಂಬ ಉಕ್ತಿಗೆ ಮತ್ತೆ ಸಾರ್ಥಕ್ಯ ಬರುವಂತೆ ಯತ್ನಿಸಬೇಕಲ್ಲವೇ?

ಸೂಚನೆ : 25/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.


ಮಹರ್ಷಿ ಭಾರತ ಭಾಗ 3 ಭಾರತ-ಈ ದೇಶದ ಶುಭ ನಾಮಧೇಯ (Maharsi Bharata Bhaga -1 Bharata-E Deshada Shubha Namadheya)


ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


 

ಇನ್ನು ಮುಂದಿನ ಹಂತವಾಗಿ ಜೀವಲೋಕಕ್ಕೆ ಆ ಪರಮಸತ್ಯದ ವಿಸ್ಮರಣೆಯಾಗದಂತೆ ಇಲ್ಲಿ ಅವರು ಎಂತಹ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದರು? ನೋಡಿ-ಈ ದೇಶದ ಹೆಸರಿನಿಂದಲೇ ಈ ದೇಶದವರ ಜೀವನಲಕ್ಷ್ಯ ಹೇಗಿರಬೇಕೆಂಬುದರ ನಿರ್ದೇಶನವಿದೆ. ಭಾ-ರತ. ಭಾ=ಪರಮಪ್ರಕಾಶ-ಅದರಲ್ಲಿ ಸದಾ ಇರುವವರು ಭಾರತರು. ಪರಮಾತ್ಮ ಪ್ರಕಾಶದಲ್ಲಿಯೇ ಸದಾ ರಮಿಸುವುದೇ ಮಾನವಜೀವನದ ಪರಮ ಲಕ್ಷ್ಯ. ಹಾಗೆ ಒಳಬೆಳಕಿನಲ್ಲಿ ರಮಿಸುವವರೇ ನಿಜಾರ್ಥದಲ್ಲಿ ಭಾರತರು. ಒಳ ಸಾಗಿದಾಗ ಪರಮ ಪ್ರಕಾಶ. ಅದರಲ್ಲಿ ಮುಳುಗಿ ಹೊರಬಂದರೆ ಆ ಪ್ರಕಾಶದಿಂದಲೇ ವಿಸ್ತಾರವಾದ ವಿಶಾಲ ವಿಶ್ವರೂಪ ದರ್ಶನ. ಅಂತಹ ಒಳ-ಹೊರ ಪ್ರಕಾಶದಲ್ಲಿ ಸದಾ ನಿರತರಾದವರ ದೇಶ. ಇನ್ನೂ ಅತ್ತ ಕಡೆಗೆ ಸಾಗದವರಿಗೆ ಅಮಿತಾನಂದದ ಆ ಪ್ರಕಾಶದೆಡೆಗೆ ದಿಗ್ದರ್ಶನ ಮಾಡುವ ಜ್ಞಾಪಕದ ಹೆಸರು " ಭಾರತ". ಎಂತಹ ಉದಾತ್ತ ಜೀವನ ದೃಷ್ಟಿ! ವಿಶ್ವದ ಇತರೆಡೆ ಕಲ್ಪನೆಗೂ ನಿಲುಕದ ಸಂಗತಿಯಲ್ಲವೇ ಇದು?

 

 

ಉಜ್ವಲವಾದ ಸಂಸ್ಕೃತಿ-ಶಿಲ್ಪ, ದೇವಾಲಯಗಳು.

 

ನಮ್ಮೂರಿಗೆ ಕಾವೇರಿಯಾಗಿ ಹರಿದುಬರುವ ನದಿ ತಲಕಾವೇರಿಯಲ್ಲಿ ಹೇಗಿತ್ತು, ಅದರ ವಿಕಾಸದ ಹಂತದಲ್ಲಿ ಎಷ್ಟು ದೊಡ್ಡ ನದಿಯಾಗಿ ಬಂದಿದೆ -ಹಾಗೆಯೇ ಚೈತನ್ಯವೆಂಬುದು ಮೂಲದಲ್ಲಿ ಹೇಗಿತ್ತು? ಪಂಚಜ್ಞಾನೇಂದ್ರಿಯ- ಕರ್ಮೇಂದ್ರಿಯಗಳ ಸ್ತ್ರೋತಸ್ಸುಗಳಿಂದೊಡಗೂಡಿ ಪಾದಾಂಗುಷ್ಠದವರೆಗೂ ರೋಮರೋಮ ಕೂಪಗಳಲ್ಲಿಯೂ ಹರಿದುಬರುವಾಗ ಎಷ್ಟು ಮಹಾನದಿಗಳು ಉಪನದಿಗಳೆಲ್ಲ ಬೆಳೆದು ಹೀಗಾಗಿದೆ ಎಂಬ ಸೊಬಗನ್ನು ನಮ್ಮ ಕಣ್ಮುಂದೆ ಕಟ್ಟಲು ಭಾರತದಲ್ಲಿ ಶಿಲ್ಪವನ್ನು ತಂದರು. ಪಾಂಚಭೌತಿಕವಾದ  ಭೂತಸ್ಥಾನದಿಂದ ಏರುತ್ತಾ ದೇವಸ್ಥಾನವನ್ನು ಮುಟ್ಟುವ ಜೀವನದ ನಿರ್ದೇಶನವಿದೆ. ಅಲ್ಲಿ ದೇವನಿಗೇ ಸ್ಥಾನ. ಅಂತಹ ಒಳ ಹೊರ ಜೀವನದ ಸ್ಮಾರಕಮಂದಿರವಾಗಿದೆ ನಮ್ಮ ಭಾರತದ ದೇವಸ್ಥಾನಗಳು. 


 ಒಳಗೆ ಗರ್ಭಗೃಹದಿಂದ ವಿಸ್ತಾರವಾಗಿ ಹೊರಗೆ ಬೆಳೆದ ವಿಶ್ವಶಿಲ್ಪವನ್ನು ನಮ್ಮ ಕಣ್ಣಮುಂದೆ ಆಡಿಸುವ ಉಪಾಯ ಅಲ್ಲಿನ ಚಿತ್ರಗಳಲ್ಲಿವೆ. ಅಣೋರಣೀಯಾನ್ ಮಹತೋ ಮಹೀಯಾನ್ –ಭಗವಂತನು ಅಣುವಿಗಿಂತಲೂ ಅಣು. ಅವನೇ ಆದಿ ಬೀಜ. ಸುಕ್ಷ್ಮಾತಿಸೂಕ್ಷ್ಮ. ಅವನೇ ವಿಸ್ತಾರದ ಹಂತದಲ್ಲಿ ಮಹತ್ತಿಗಿಂತ ಮಹತ್ತಾದವನು. ಅವನನ್ನು ಮೀರಿದ ದೊಡ್ಡದು ಯಾವುದೂ ಇಲ್ಲ ಎಂಬ ಉಪನಿಷತ್ತಿನ ಸತ್ಯವನ್ನು ಮನಗಾಣಿಸಲು ಮೇಲಿನ ಶಿಖರ ಬಿಂದುವಿನಿಂದ ಕೆಳಗೆ ವಿಸ್ತಾರವಾಗಿ ಬೆಳೆದಿದೆ ಋಷಿಗಳ ದೇವಾಲಯ. ಅಂತರಂಗದ ಸತ್ಯವು ಇಂದ್ರಿಯ ಜೀವನದ ವೇಗದಲ್ಲಿ ಜೀವಿಗಳು ಮರೆಯದಿರಲಿ ಎಂಬ ಕರುಣೆ ಅವರದು. ಶ್ರೀ ರಂಗಮಹಾಗುರುಗಳು ಅಪ್ಪಣೆ ಕೊಡಿಸಿದಂತೆ ನಮ್ಮೆಲ್ಲ ದೇವಾಲಯಗಳು memory hall  ನಂತಿವೆ. ನಮ್ಮ ನಿಜ ಜೀವನಲಕ್ಷ್ಯವನ್ನು ನಮಗೆ ನೆನಪಿಸುವುದಾಗಿದೆ.

 

ದೇವಾಲಯ ರಚನೆಗೆ ದೇಹವೇ ಸ್ಫೂರ್ತಿ

ಹೊರಗಿನ ದೇವಾಲಯವನ್ನು ರಚಿಸುವ ಮೊದಲು ತಮ್ಮೊಳಗೇ ನೋಡಿಕೊಂಡರು. ಭ್ರೂಮಧ್ಯದ ಕೆಳಗೆ ನೋಡಿದಾಗ ಇಂದ್ರಿಯ ಜೀವನ. ಅದರ ವೈಭವವನ್ನೂ ಅಲ್ಲಿ ಚಿತ್ರಿಸಿದರು. ಇಂದ್ರಿಯಗಳನ್ನೆಲ್ಲ ಸಂಯಮನ ಮಾಡಿ ಭ್ರೂಯುಗಾತೀತ ದೃಷ್ಟಿಯಿಂದ ಮೇಲೆ ನೋಡಿದಾಗ ಅವರಿಗಾದ ದರ್ಶನಗಳ ವೈಭವವನ್ನೂ ಅಲ್ಲಿ ಚಿತ್ರಿಸಿದರು. ಯೋಗ-ಭೋಗಗಳಿಗೆ ಆಶ್ರಯವಾದ ಈ ನಮ್ಮ ದೇಹವನ್ನು ನೋಡಿ ಇದರ ಪ್ರತಿಕೃತಿಯಾಗಿ ಇಲ್ಲಿ ದೇವಾಲಯಗಳನ್ನು ತಂದರು. ಜೀವನದ ಆರಂಭ, ವಿಕಾಸ,ವಿಲಯ ಇವುಗಳನ್ನು ತಮ್ಮ ತಪಸ್ಯೆಯಿಂದ ಅರಿತು ಅಂತೆಯೇ ಸಂಭ್ರಮದ ಬಾಳನ್ನು ತಾವೂ ಬಾಳಿ ಜೀವಲೋಕವೆಲ್ಲವೂ ಹಾಗೆ ಆನಂದದಿಂದ ಬಾಳುವಂತಾಗಲಿ ಎಂಬ ಪರಮ ಕರುಣೆಯಿಂದ, ಲೋಕಹಿತ ಚಿಂತನೆಯಿಂದ ತಂದ ಅದ್ಭುತ ಶಿಲ್ಪ ವೈಭವವಾಗಿದೆ ಋಷಿಗಳ ದೇವಾಲಯ. ಅಂತಹ ಮಹರ್ಷಿಗಳ ದೇಶ ನಮ್ಮದು.

ಸೂಚನೆ : 25/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Friday, June 24, 2022

ಜೀವನದಲ್ಲಿ ಧರ್ಮರಕ್ಷಣೆಗೇ ಪ್ರಾಧಾನ್ಯವಿರಲಿ (Jivanadalli Dharmaraksanege Pradhanyavirali)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀಕೃಷ್ಣ, ಅರ್ಜುನ ಮತ್ತು ಧರ್ಮರಾಯನ ನಡುವೆ ಘಟಿಸಿದ ಅದ್ಭುತ ಪ್ರಸಂಗವೊಂದನ್ನು ಮಹಾಭಾರತದ ಕರ್ಣಪರ್ವದಲ್ಲಿ ವರ್ಣಿಸಲಾಗಿದೆ. ಕುರುಕ್ಷೇತ್ರಯುದ್ಧದ ಸನ್ನಿವೇಶ. ಕರ್ಣ-ಧರ್ಮರಾಯನ ನಡುವೆ ಮಹಾಕಾಳಗ ನಡೆಯುತ್ತದೆ. ಕರ್ಣನ ಬಾಣಗಳಿಂದ ಧರ್ಮರಾಯನು  ಬಹಳವಾಗಿ ಬಳಲಿ ಅವಮಾನದಿಂದಲೂ, ದೇಹಯಾತನೆಯಿಂದಲೂ ನೊಂದು ಬಿಡಾರಕ್ಕೆ ಹಿಂದಿರುಗುತ್ತಾನೆ. 

 

ಈ ವಿಷಯ ತಿಳಿದು ಕೃಷ್ಣಾರ್ಜುನರು ಅಲ್ಲಿಗೆ ಬರುತ್ತಾರೆ. ಅರ್ಜುನನು ಕರ್ಣನನ್ನು ವಧಿಸಿಯೇ ಬರುವನೆಂದು ನಂಬಿದ್ದ ಧರ್ಮರಾಯನು ಆ ಕಾರ್ಯ ನೆರೆವೇರಲಿಲ್ಲವೆಂದರಿತು 'ನೀನು ಗಾಂಡೀವವನ್ನು ಏಕೆ ಇಟ್ಟುಕೊಂಡಿದ್ದೀಯೇ? ಯಾರಾದರು ಹೆಂಗಸರ ಕೈಗೆ ಕೊಡು' ಎಂದು ಅರ್ಜುನನನ್ನು ನಿಂದಿಸುತ್ತಾನೆ.

 

ಅತ್ಯಂತ ಕುಪಿತನಾದ ಅರ್ಜುನನು ''ನನ್ನ ಗಾಂಡೀವವನ್ನು ನಿಂದಿಸಿದವರ ತಲೆಯನ್ನು ತೆಗೆಯುತ್ತೇನೆ" ಎಂದು ತಾನು ಈ ಹಿಂದೆಯೇ ಮಾಡಿದ್ದ ಪ್ರತಿಜ್ಞೆಯಂತೆ ಅಣ್ಣನನ್ನು ಕೊಲ್ಲಲು ಧಾವಿಸುತ್ತಾನೆ. ಶ್ರೀಕೃಷ್ಣನು ಅವನನ್ನು  ತಡೆದಾಗ ಅರ್ಜುನನು ತನ್ನ ಪ್ರತಿಜ್ಞೆಯನ್ನು ತಿಳಿಸಿ ತಾನು ವಿವಶನೆಂದು ವಾದಿಸುತ್ತಾನೆ. "ಅಣ್ಣನು ತಂದೆಗೆ ಸಮಾನನು. ಆತನ ವಧೆ ಘೋರಪಾತಕದ ಕಾರ್ಯ" ಎಂದು ಎಚ್ಚರಿಸುತ್ತಾನೆ ಕೃಷ್ಣ. 

 

ತನ್ನ ಪ್ರತಿಜ್ಞಾಪಾಲನೆಯೇ ಮುಖ್ಯವೋ ಅಥವಾ ಅಣ್ಣನ ಉಳಿವೇ ಮು ಖ್ಯವೋ ಎಂಬ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷ್ಣನನ್ನೇ ಶರಣುಹೊಂದುತ್ತಾನೆ ಅರ್ಜುನ. 

  

ಶ್ರೀಕೃಷ್ಣನು ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತಾನೆ. "ಗುರು-ಹಿರಿಯರನ್ನು ಅವಮಾನಕರವಾಗಿ  ನಿಂದಿಸಿದರೆ ಅವರನ್ನು ವಧಿಸಿದಂತೆಯೇ ಸರಿ. ಆದ್ದರಿಂದ ಈಗ ಧರ್ಮರಾಯನನ್ನು  ಚೆನ್ನಾಗಿ ನಿಂದಿಸು" ಎನ್ನುತ್ತಾನೆ. ಅರ್ಜುನನು ಕೃಷ್ಣನ ಆದೇಶದಂತೆ ಯುಧಿಷ್ಠಿರನನ್ನು  ಚೆನ್ನಾಗಿ ಹೀಯಾಳಿಸುತ್ತಾನೆ. ಇದರಿಂದಾಗಿ ಧರ್ಮರಾಯನು ಅತ್ಯಂತ ದು:ಖಿತನಾಗುತ್ತಾನೆ. 

 

ಆದರೆ "ಪೂಜ್ಯನಾದ  ಅಣ್ಣನನ್ನು ಹೀಯಾಳಿಸಿದ ಮೇಲೆ ನಾನು ಬದುಕಿರಬಾರದು!" ಎನ್ನುತ್ತಾ ಆತ್ಮಹತ್ಯೆಮಾಡಿಕೊಳ್ಳಲು ಯತ್ನಿಸುತ್ತಾನೆ ಅರ್ಜುನ. ಆಗ ಶ್ರೀಕೃಷ್ಣನು "ಆತ್ಮಹತ್ಯೆ ಘೋರಪಾಪ! ಅದನ್ನು ತಪ್ಪಿಸುವ ಉಪಾಯವನ್ನು ಹೇಳುವೆನು ಕೇಳು" ಎನ್ನುತ್ತಾ  "ಆತ್ಮಶ್ಲಾಘನೆಯು ಆತ್ಮಹತ್ಯೆಗೆ ಸಮಾನ" ಎಂಬುದನ್ನು ನೆನಪಿಸುತ್ತಾನೆ. ಅರ್ಜುನನೂ ಅದರಂತೆಯೇ ತನ್ನ ಆತ್ಮಪ್ರಶಂಸೆಯನ್ನು ಬಹಳವಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಮಸ್ಯೆಯು ಪರಿಹಾರವಾಯಿತು. 

 

ತನ್ನ ಪ್ರತಿಜ್ಞಾಪಾಲನೆ ಮಾಡುವ ಭರದಲ್ಲಿ,  ಅರ್ಜುನನು   ಧರ್ಮರಕ್ಷಣೆಗಾಗಿ  ಯುದ್ಧವನ್ನು ಮಾಡುತ್ತಿದ್ದ ಧರ್ಮರಾಯನನ್ನೇ ವಧಿಸಿಬಿಡುತ್ತಿದ್ದ!  ಧರ್ಮರಕ್ಷಣೆಯ ಮಹಾಧ್ಯೇಯವನ್ನು ಮರೆತು, ಆ ಸಮಯದಲ್ಲಿ  ಕಿರಿಯ ಧರ್ಮವಾದ  ಪ್ರತಿಜ್ಞಾಪಾಲನೆಯೇ ಪ್ರಧಾನವೆನ್ನುವಂತೆ ವರ್ತಿಸಲೆಸಗಿದ. ಸದಾ ಧರ್ಮಿಷ್ಠರಾದ ಪಾಂಡವರನ್ನು ರಕ್ಷಿಸುತ್ತಿದ್ದ ಭಗವಂತ, ಈ ಪ್ರಸಂಗದಲ್ಲೂ ಅರ್ಜುನನನ್ನು ಸರಿಯಾದ ದಾರಿಯಲ್ಲಿ ಯೋಜಿಸಿದ. ಧರ್ಮರಕ್ಷಣೆಯ ಜೊತೆಗೆ ಅರ್ಜುನನನ್ನು ಘೋರಪಾಪದಿಂದ ದೂರಮಾಡಿ ಅನುಗ್ರಹಿಸಿದ. ಪ್ರತಿಜ್ಞೆಯನ್ನು ಪಾಲಿಸುವುದೂ ಧರ್ಮವೇ ಆದ್ದರಿಂದ ಅದಕ್ಕೂ ಚ್ಯುತಿಬಾರದಂತೆ ಸನ್ಮಾರ್ಗವನ್ನು ಸೂಚಿಸಿದ. 

 

'ಕಣ್ಣಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಧರ್ಮಕ್ಕಾಗಿ ಹೋರಾಡಬೇಕು' ಎನ್ನುವ ಶ್ರೀರಂಗಮಹಾಗುರುಗಳ ನಿಲುವು ಇಲ್ಲಿ ಸ್ಮರಣೀಯ.  ಮಹಾಧ್ಯೇಯಕ್ಕೆ ಪೋಷಕವಾಗಿಯೇ ನಮ್ಮ ಉಳಿದೆಲ್ಲಾ ಕಾರ್ಯಗಳೂ ಇರಬೇಕು; ದೊಡ್ಡ ಧರ್ಮದ ಸಾಧನೆಗಾಗಿ ಸಣ್ಣಧರ್ಮಗಳನ್ನು ತ್ಯಜಿಸಬೇಕಾಗಿ ಬಂದರೂ ಚಿಂತೆಯಿಲ್ಲ ಎಂಬ ವಿವೇಕವು ಜೀವನದಲ್ಲಿ ಅತ್ಯಗತ್ಯ ಎಂಬ ಜ್ಞಾನಿಗಳ ಆದೇಶವನ್ನು  ನೆನೆಪಿಡಬೇಕಾಗಿದೆ. ಧರ್ಮಮಯ ಜೀವನಕ್ಕಾಗಿ ಶ್ರಮಿಸಿದರೆ ಭಗವಂತನೆಂದಿಗೂ ನಮ್ಮ ಜೊತೆಗಾರನಾಗಿದ್ದು ರಕ್ಷಿಸುವನು ಎಂದು ತಿಳಿಸುವ ರೋಚಕ ಪ್ರಸಂಗವಿದು.

ಸೂಚನೆ: 23/06/2022 ರಂದು ಈ ಲೇಖನ  ವಿಶ್ವವಾಣಿ ಲ್ಲಿ ಪ್ರಕಟವಾಗಿದೆ.   

Wednesday, June 22, 2022

ವಿದ್ಯೆ ಮಾತ್ರವೇ ಇದ್ದರೆ ಸಾಲದು (Vidye Matrave Iddare Saladu)

 ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


ಬೃಹದ್ಯುಮ್ನನೆಂಬ ಅರಸನು ಪರಾವಸು, ಅರ್ವಾವಸುವೆಂಬ ವಿದ್ವಾಂಸರಾದ ಋಷಿಪುತ್ರರನ್ನು ಯಜ್ಞವನ್ನು ನಡೆಸಿಕೊಡಬೇಕೆಂದು ಪ್ರಾರ್ಥಿಸಿದನು. ಯಜ್ಞಕಾಲದ ಮಧ್ಯದಲ್ಲಿ ಕಾರಣಾಂತರದಿಂದ ಪರಾವಸುವಿಗೆ ಮನೆಗೆ ಹೋಗಿಬರುವ ಮನಸ್ಸಾಯಿತು. ಸಂಜೆಯವೇಳೆಗೆ ಆಶ್ರಮವನ್ನು ತಲುಪಿದ ಆತನಿಗೆ ಆಶ್ರಮದ ಬಾಗಿಲಲ್ಲಿ ಪ್ರಾಣಿಯೊಂದು ಹಾರಲು ಸಿದ್ಧವಾಗಿರುವಂತೆ ಕಂಡಿತು. ಗಾಬರಿಗೊಂಡ ಪರಾವಸುವು ಕೂಡಲೇ ಅದನ್ನು ಸಂಹರಿಸಲು ಕೈಯಲ್ಲಿದ್ದ ಆಯುಧವನ್ನೆಸೆದ. ಆದರೆ ಆಯುಧದಿಂದ ಹತವಾದದ್ದು ಪ್ರಾಣಿಯಾಗಿರಲಿಲ್ಲ, ಅವನ ತಂದೆಯಾದ ರೈಭ್ಯಮಹರ್ಷಿ! ಅನಿರೀಕ್ಷಿತ ಘಟನೆಯಿಂದ ದುಃಖಾಕ್ರಾಂತನಾದ ಆತನು ತಪ್ಪಿಗಾಗಿ ಪರಿತಪಿಸುತ್ತ, ಅಂತ್ಯಕ್ರಿಯೆಗಳನ್ನು ಮಾಡಿ ಮುಗಿಸಿದ. ಯಜ್ಞಕಾರ್ಯಕ್ಕೆ ತಡೆಯಾಗಬಾರದೆಂದೆಣಿಸಿದ ಆತನು ಸಹೋದರನ ಬಳಿಸಾರಿ "ನಾನು ಯಜ್ಞಕಾರ್ಯವನ್ನು ಮುಂದುವರಿಸುತ್ತೇನೆ. ಅರಿಯದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವನ್ನು ನನ್ನ ಪರವಾಗಿ ನೀನು ಮಾಡಿ ಬಾ" ಎಂದ. ಅರ್ವಾವಸುವು ಸಹೋದರನಿಗಾಗಿ ದೈಹಿಕ-ಮಾನಸಿಕ ಪ್ರಯಾಸಗಳಿಂದ ಕಠಿಣ ಪ್ರಾಯಶ್ಚಿತ್ತವನ್ನಾಚರಿಸಿ ಯಜ್ಞಶಾಲೆಗೆ ಹಿಂತಿರುಗಿದ. ಆದರೆ ಪ್ರಾಯಶ್ಚಿತ್ತವನ್ನು ತಾನೇ ಆಚರಿಸಲಿಲ್ಲವಾದ್ದರಿಂದ ಪರಾವಸುವು ಪಾಪಭಾಗಿಯಾದ. ತತ್ಪರಿಣಾಮವಾಗಿ ಅರ್ವಾವಸುವನ್ನು ನೋಡಿದೊಡನೆಯೇ ಪರಾವಸುವಿನಲ್ಲಿ ದುಷ್ಟಪ್ರವೃತ್ತಿ ತಲೆದೋರಿ ಅಲ್ಲಿದ್ದವರನ್ನು ಕುರಿತು "ಈತನು ತಂದೆಯನ್ನೇ ಕೊಂದ ಮಹಾಪಾಪಿ. ಇವನ ಉಪಸ್ಥಿತಿಯು ಯಜ್ಞಶಾಲೆಯ ಪಾವಿತ್ರ್ಯಕ್ಕೆ ಭಂಗವನ್ನುಂಟುಮಾಡುತ್ತದೆ" ಎಂದ! ನಿಜವನ್ನು ತಿಳಿಸಲು ಅರ್ವಾವಸುವು ಎಷ್ಟೇ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಬೇಸರಗೊಂಡಾತನು ವನಕ್ಕೆ ತೆರಳಿ ತಪೋಮಗ್ನನಾದ.  ದೇವತೆಗಳು ಪ್ರತ್ಯಕ್ಷವಾಗಿ ವರ ನೀಡುತ್ತೇವೆಂದಾಗ ಅವನು "ನನ್ನ ತಂದೆಯು ಜೀವಂತನಾಗಲಿ ಮತ್ತು ನನ್ನ ಸಹೋದರನಿಗೆ ಸದ್ಬುದ್ಧಿಯುಂಟಾಗಲಿ" ಎಂದು ಪ್ರಾರ್ಥಿಸಿದ!  ತನಗೆ ಕೇಡು ಬಯಸಿದವನಲ್ಲಿ ಕ್ಷಮೆತೋರುವುದಲ್ಲದೆ ಆತನ ಒಳಿತಿಗಾಗಿ ಪ್ರಾರ್ಥನೆ!  ಅದೆಷ್ಟು ಕ್ಷಮೆ! ದಯೆ!


ದಯೆ(ಸರ್ವಭೂತಗಳಲ್ಲೂ ಕರುಣೆ), ಕ್ಷಮೆ(ದೇಹ-ಮನಸ್ಸುಗಳಿಗೆ ದುಃಖವನ್ನುಂಟುಮಾಡಿದರೂ ಸಮಾಧಾನವಾಗಿಯೇ ವರ್ತಿಸುವುದು)-ಇವೆರಡೂ ಆತ್ಮನಿಗೆ ಸ್ವಭಾವವಾದ-ಸಹಜಗುಣಗಳ ಪಟ್ಟಿಯಲ್ಲಿ ಪ್ರಥಮಸ್ಥಾನ ವಹಿಸುವುವು. ಯೋಗಿಗಳಿಗೆ ಸಹಜವೂ, ಸಾಮಾನ್ಯರಿಗೆ ಅಭ್ಯಾಸದಿಂದ ಮಾತ್ರವೇ ಲಭ್ಯವೂ ಆದ ಆತ್ಮಗುಣಗಳ ಫಲ ಶಾಂತಿಸಮೃದ್ಧಿ-ಸಮಾಧಾನ; ಅನಾತ್ಮಗುಣಗಳ ಫಲ ಮನಃಪತನ.


ಶ್ರೀರಂಗಮಹಾಗುರುಗಳು ವಿದ್ಯೆಗೆ ಕೊಟ್ಟಿರುವ ವಿವರಣೆಯನ್ನು ಸ್ಮರಿಸುವುದಾದರೆ-ಜ್ಞಾನಕ್ಕೆ(ಭಗವಂತನೆಡೆಗೆ) ಒಯ್ಯುವುದೇ ವಿದ್ಯೆ. ಈ ನೇರದಲ್ಲಿ ವಿದ್ಯೆಯೆನಿಸುವ ವೇದ-ಶಾಸ್ತ್ರಾದಿಗಳ ಅಭ್ಯಾಸವು ಬುದ್ಧಿಯ  ಮಟ್ಟಕ್ಕೇ ಸೀಮಿತವಾಗದೆ ಮನಸ್ಸನ್ನೂ ಸಂಸ್ಕರಿಸುವಂತಾಗಬೇಕು. ಹಾಗಾದಾಗ ನಮ್ಮೊಳಗಿನ ಆತ್ಮಗುಣಗಳನ್ನರಳಿಸಿ ಭಗವಂತನೆಡೆ ಸಾಗಲು ಸಹಕರಿಸುವುದರಿಂದ ವಿದ್ಯಾಭ್ಯಾಸವು ಅರ್ಥವತ್ತಾಗುವುದು. ಜೀವನದಲ್ಲಿ ಯಶಸ್ವಿಯಾಗಲು ವಿದ್ಯೆ ಮಾತ್ರವೇ ಸಾಲದು, ಆತ್ಮಗುಣಗಳೂ ಅಗತ್ಯವಾದ್ದರಿಂದ ಅವುಗಳನ್ನೂ ಗಳಿಸಿ ಶಾಂತಿ-ಸಮೃದ್ಧವಾದ  ಬಾಳಾಟ ನಡೆಸೋಣ.


ಸೂಚನೆ: 22/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.     

Monday, June 20, 2022

ಸದ್ದಡಗಿದಾಗ ಸತ್ಯ ಹೊರಬೀಳುತ್ತದೆ (Saddadagidaga Satya Horabiluttade)


ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)



ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿರಾಮನು ತನ್ನ ಬುದ್ಧಿಚಾತುರ್ಯದಿಂದ ಅನೇಕ ಸಂದಿಗ್ಧಪರಿಸ್ಥಿತಿಗಳಲ್ಲಿ ರಾಜನನ್ನು ಪಾರುಮಾಡುತ್ತಿದ್ದ. 


ಒಮ್ಮೆ, ಬಹುಭಾಷಾಪ್ರವೀಣನಾದ ವ್ಯಕ್ತಿಯೊಬ್ಬ ವಿಜಯನಗರಕ್ಕೆ ಆಗಮಿಸಿದ. ರಾಜನನ್ನು ಕಂಡು ಸವಾಲೊಂದನ್ನು ಮುಂದಿಟ್ಟ. "ನಾನು ಅನೇಕ ಭಾಷೆಗಳಲ್ಲಿ ಅತಿಸರಳ-ಸುಲಭವಾಗಿ ಮಾತನಾಡಬಲ್ಲೆ. ಆದರೆ ನನ್ನ ಮಾತೃಭಾಷೆ ಯಾವುದೆಂಬುದನ್ನು ನಿಮ್ಮ ಆಸ್ಥಾನದಲ್ಲಿ ಯಾರಾದರೂ ಪತ್ತೆಹಚ್ಚಬಲ್ಲರೇ?" ಎಂದ.  ಆಸ್ಥಾನದ ಪಂಡಿತರನೇಕರು ಆತನನ್ನು ಬೇರೆಬೇರೆ ಭಾಷೆಗಳಲ್ಲಿ ಮಾತನಾಡಿಸಿದಾಗ ಆತನು ಎಲ್ಲ ಭಾಷೆಗಳನ್ನೂ ಮಾತೃಭಾಷೆಯಲ್ಲಿ ಮಾತನಾಡುವಷ್ಟೇ ಸರಳವಾಗಿ ಮಾತನಾಡಲಾಗಿ, ಅವರೆಲ್ಲರೂ ಬಂದವನ ಮಾತೃಭಾಷೆಯನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿ ವಿಫಲರಾದರು. ಆಗ ತೆನಾಲಿರಾಮನು ತನಗೆ ಎರಡು ದಿನಗಳ ಅವಕಾಶನೀಡಿದರೆ ಪತ್ತೆ ಹಚ್ಚುವುದಾಗಿ ತಿಳಿಸಿದ. ರಾಜನು ಅದಕ್ಕೊಪ್ಪಿ ಅತಿಥಿಗೆ ಉಳಿಯಲು ಬೇಕಾದ ವ್ಯವಸ್ಥೆಗಳನ್ನು ಮಾಡಿಸಿದ.


ಮರುದಿನ ತೆನಾಲಿರಾಮನು ಅತಿಥಿಯನ್ನು ಊರನ್ನು ಪರಿಚಯಿಸಲು, ಇಡೀ ದಿನ ಎಲ್ಲ ಕಡೆಗೂ ಸುತ್ತಾಡಿಸಿ ರಾತ್ರಿವೇಳೆಗೆ ಅತಿಥಿಗೃಹಕ್ಕೆ ಕರೆತಂದುಬಿಟ್ಟ. ಸುತ್ತಾಡಿ ಬಳಲಿದ್ದ ಅತಿಥಿಯು ಭೋಜನಾನಂತರ ಗಾಢನಿದ್ರೆಯಲ್ಲಿ ಮುಳುಗಿದ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಯಾರೋ ಹೊಡೆದಂತಾಗಿ ಬೆದರಿ ಜೋರಾಗಿ ಕೂಗಿಕೊಂಡ.  ಯಾರೂ ಸುತ್ತಮುತ್ತ ಕಾಣದೆ ಮತ್ತೆ ನಿದ್ರಿಸತೊಡಗಿದ. 


ಬೆಳಗ್ಗೆ ಆಸ್ಥಾನಕ್ಕೆ ಬಂದು ಕುಳಿತ. ಸಭೆಗೆ ಆಗಮಿಸಿದ ರಾಜನು ರಾಮನನ್ನು "ಪಂಡಿತನ ಪ್ರಶ್ನೆಗೆ ಉತ್ತರವೇನು? ವಿವರಿಸು" ಎಂದಾಗ ರಾಮನು ವಿನಯದಿಂದ ತಿಳಿಸಿದ- "ರಾಜ, ಈತನ ಮಾತೃಭಾಷೆ ಕನ್ನಡ."  ಅತಿಥಿಗೆ ಆಶ್ಚರ್ಯವೋ ಆಶ್ಚರ್ಯ!  ರಾಮನ ಉತ್ತರ ಸರಿಯೆಂದು ಒಪ್ಪಿದ. ರಾಮನು "ಎಷ್ಟೇ ಭಾಷೆಗಳನ್ನು ಕಲಿತಿದ್ದರೂ ಮನುಷ್ಯನು ಗಾಢನಿದ್ರೆಯಿಂದ ತಟ್ಟನೆ ಎದ್ದಾಗ  ಬುದ್ಧಿಯಿಂದ ಕಲಿತವುಗಳಾವುವೂ ಹೊರಬೀಳುವುದಿಲ್ಲ. ತನಗೆ ಸಹಜವಾದ ಮಾತೃಭಾಷೆಯೇ ಹೊರಬರುವುದು" ಎಂದು ಹೇಳಿ ಹಿಂದಿನ ರಾತ್ರಿ ನಡೆದ ಘಟನೆಗಳನ್ನು ತಿಳಿಸಿದ.


ಈ ಕಥೆಯ ಉಲ್ಲೇಖವು ಬಹುವಿಧವಾಗಿ ಕಂಡುಬಂದರೂ ಗಮನಿಸಬೇಕಾದ ಅಂಶವಿಷ್ಟೇ-ಬುದ್ಧಿಯು ವಿಶ್ರಮಿಸುತ್ತಿರುವ ಸನ್ನಿವೇಶದಲ್ಲಿ ಸಹಜವಾದದ್ದು  ತಾನಾಗಿಯೇ ಹೊರಬೀಳುತ್ತದೆ. 


ಕಥೆಯು ಸಾರುವ ಸತ್ಯವನ್ನು ಮುಂದುವರಿಸುವುದಾದರೆ, ಇಂದ್ರಿಯಪಾಶಕ್ಕೆ ಸಿಕ್ಕಿಬಿದ್ದಿರುವ ಜೀವಿಗಳು ಅವುಗಳ ಪ್ರಚೋದನೆಯಂತೆಯೇ ತಮ್ಮ ತಮ್ಮ ಇಚ್ಛೆಗಳನ್ನು ವ್ಯಕ್ತಪಡಿಸುತ್ತವೆ. ಧರ್ಮ-ಅರ್ಥ-ಕಾಮ-ಮೋಕ್ಷಗಳೇ(ಧರ್ಮ-ಮೋಕ್ಷಗಳಿಗೊಳಪಟ್ಟ ಅರ್ಥ-ಕಾಮಗಳು)  ಪ್ರತಿಜೀವಿಯ ಬಯಕೆ-ಪುರುಷಾರ್ಥಗಳು(ಪುರುಷ=ಜೀವಿ, ಅರ್ಥ=ಅಪೇಕ್ಷೆ) ಎಂಬುದು ಜ್ಞಾನಿಗಳ ಮಾತು. ಆದರೆ ಧರ್ಮ-ಮೋಕ್ಷಗಳ ಬಯಕೆ ಲೋಕಸಾಮಾನ್ಯವಾಗಿ ಕಂಡುಬರುವ ವಿಚಾರವೇನಲ್ಲ ಎಂಬುದು ಸಾಮಾನ್ಯ ಸತ್ಯ. ಅಂದಮೇಲೆ ಇವು ಪುರುಷಾರ್ಥಗಳೆನಿಸುವುದು ಹೇಗೆ? ಜೀವಿಯು ಮನೋಬುದ್ಧಿ-ಇಂದ್ರಿಯಗಳ ಕಟ್ಟನ್ನು ಬಿಡಿಸಿಕೊಂಡು  ಸ್ವತಂತ್ರವಾದಾಗ, ತನ್ನದೇ ಆದ ಇಚ್ಛೆಯನ್ನು ಹೊರಗಿಡುತ್ತದೆ. ಜ್ಞಾನಿಗಳು ಜೀವಿಯ  ಈ ಸಹಜವಾದ ಸ್ಥಿತಿಯನ್ನನುಭವಿಸಿ ಅಲ್ಲಿ ವ್ಯಕ್ತವಾದ ಜೀವಿಯ ಬಯಕೆಗಳನ್ನೇ ಪುರುಷಾರ್ಥಗಳೆಂಬುದಾಗಿ ಸಾರಿದ್ದಾರೆ. 


ಅಂತಹ ಪುರುಷಾರ್ಥಮಯ ಜೀವನವನ್ನು ಕೈಗೊಂಡಾಗ ಜೀವನಿಗೆ ನೆಮ್ಮದಿ-ಪರಮಾನಂದಗಳು ಲಭ್ಯ. "ಜೀವನವೆಂಬುದು 'ಜೀವ' ಇದ್ದರೆ ತಾನೇ?", "ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಜೀವ-ನ ಆಗುತ್ತದೆ" ಎಂಬ ಶ್ರೀರಂಗಮಹಾಗುರುಗಳ ವಾಣಿಯು ಜೀವನದಲ್ಲಿ ಪುರುಷಾರ್ಥ(ಜೀವದ ಬಯಕೆಯ) ಸಾಧನೆಯೇ ಪರಮಗುರಿಯೆನ್ನುವುದನ್ನು ಎತ್ತಿ ಸಾರುತ್ತಿದೆ. ಇಂತಹ ಅರ್ಥವತ್ತಾದ ಜೀವನವನ್ನು ನಡೆಸಲು ಪ್ರಯತ್ನಶೀಲರಾಗೋಣ; ಸಫಲತೆಯನ್ನು ಪಡೆದು ನಲಿಯೋಣ.


ಸೂಚನೆ: 19/06/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.



ಶ್ರೀ ರಾಮನ ಗುಣಗಳು - 59 ಭಾರ್ಗವ-ಗರ್ವ-ಭಂಜಕ- ಶ್ರೀರಾಮ (Sriramana Gunagalu-59- Bhargava-Garva-Bhannjaka - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಸೀತಾಮಾತೆಯನ್ನು ಪತ್ನಿಯಾಗಿ ಪರಿಗ್ರಹಿಸಿ ತಂದೆಯಾದ ದಶರಥನೊಂದಿಗೆ ಮಿಥಿಲಾಪಟ್ಟಣದಿಂದ ಹಿಂದಿರುಗುತ್ತಿದ್ದಾನೆ. ಅರಣ್ಯಮಾರ್ಗವಾಗಿ ಬರುತ್ತಿರುವಾಗ ಅತಿ ರಭಸವಾದ ಬಿರುಗಾಳಿ. ಅತ್ತ ಕಾಲಾಗ್ನಿ ಸದೃಶನಾಗಿ ಭಾರ್ಗವರಾಮ ಗೋಚರಿಸಿದ. ದಶರಥನು ಅವನನ್ನು ಗೌರವದಿಂದ ಸ್ವಾಗತಿಸಿ ಅನೇಕ ಮಾತುಗಳನ್ನು ಆಡುತ್ತಾನೆ. ಆದರೆ ಪರಶುರಾಮನು ಇವೆಲ್ಲವನ್ನೂ ತಿರಸ್ಕರಿಸುತ್ತಾನೆ. ಕೊನೆಯಲ್ಲಿ ಶ್ರೀರಾಮನನ್ನು ಕರೆದು - ಶ್ರೀರಾಮನ ಶಿವಧನುರ್ಭಂಗದ ಕಾರ್ಯವನ್ನು ಪ್ರಶಂಸಿಸುತ್ತಾನೆ. ಅನಂತರದಲ್ಲಿ ತನ್ನಲ್ಲಿದ್ದ ವೈಷ್ಣವಧನುಸ್ಸಿಗೆ ಹೆದೆ ಏರಿಸಲು ಸವಾಲೆಸಗುತ್ತಾನೆ. ಹೇ ರಾಮ! ಯಾರಿಂದಲೂ ಅಸಾಧ್ಯವಾದ ಶಿವಧನುಸ್ಸನ್ನು ಮುರಿದಿದ್ದೀಯಾ.  ನಾನು ಬಹಳ ವಿಶಿಷ್ಟವಾದ ಧನುಸ್ಸನ್ನು ತಂದಿರುವೆ. ಈ ಧನುಸ್ಸು ಜಮದಗ್ನಿಯಿಂದ ಪ್ರಾಪ್ತವಾದುದು. ದೇವಲೋಕದಿಂದ ಪ್ರಾಪ್ತವಾದುದು. ಮೂರು ಲೋಕಗಳಲ್ಲೂ ಪ್ರಸಿದ್ಧವಾದುದು. ವಿಶ್ವಕರ್ಮಮನಿಂದ ನಿರ್ಮಿತವಾದುದು. ಆ ಧನುಸ್ಸೇ ನನ್ನ ಕೈಯಲ್ಲಿರುವ ವೈಷ್ಣವಧನುಸ್ಸು. ಇದು ವಿಷ್ಣುವಿನಿಂದ ನನ್ನ ವಂಶೋದ್ಭವನಾದ ಋಚೀಕನಿಗೆ ನ್ಯಾಸರೂಪವಾಗಿ ಕೊಡಲ್ಪಟ್ಟಿತು.  ಈ ಧನುಸ್ಸು ನನ್ನ ತಂದೆಯಾದ ಜಮದಗ್ನಿಗೆ ಕೊಡಲ್ಪಟ್ಟಿತು. ಇದೀಗ ನನ್ನ ಹಸ್ತದಲ್ಲಿದೆ. ನಿನ್ನ ಪರಾಕ್ರಮವನ್ನು ಕೇಳಿ ಇಲ್ಲಿಗೆ ಬಂದಿದ್ದೇನೆ.  ಇದಕ್ಕೆ ಶರವನ್ನು ಸಂಧಾನ ಮಾಡಿದ್ದೇ ಆದರೆ ನಿನ್ನೊಡನೆ ದ್ವಂದ್ವಯುದ್ಧಕ್ಕೂ ನಾನು ಸಿದ್ಧ ಎಂದು ಯುದ್ಧಕ್ಕೆ ಪಂಥಾಹ್ವಾನವನ್ನೂ ನೀಡುತ್ತಾನೆ. 


ಪರಶುರಾಮನ ಗರ್ವದಿಂದ ಕೂಡಿದ ಮಾತನ್ನು ಕೇಳಿದ ಶ್ರೀರಾಮನು ಆದರ ಮತ್ತು ಗೌರವದೊಂದಿಗೆ ವ್ಯವಹರಿಸುತ್ತಾನೆ. "ಭಾರ್ಗವ! ನಿನ್ನ ತಂದೆಯ ವಧೆಯಿಂದ ನೀನು ಕೋಪಗೊಂಡಿರುವುದು ಸರಿಯೇ. ಅದಕ್ಕಾಗಿ ಇಪ್ಪತ್ತೊಂದು ಬಾರಿ ಜಗತ್ತನ್ನು ಪ್ರದಕ್ಷಿಣೆ ಮಾಡಿದ ಕಾರ್ಯವನ್ನು ಶ್ಲಾಘಿಸುತ್ತೇನೆ. ಆದರೆ ಅಶಕ್ತರನ್ನು ಮಾತನಾಡಿಸುವಂತೆ ನನ್ನನ್ನೂ 'ಕ್ಷತ್ರಧರ್ಮಂ ಪುರಸ್ಕೃತ್ಯ' ಎಂದು ಮಾತನಾಡಿ ನನ್ನನ್ನು ಅವಮಾನಿಸುತ್ತಿರುವೆ. ನನ್ನ ತೇಜಸ್ಸನ್ನು ವೀರ್ಯವನ್ನು ತೋರಿಸುತ್ತೇನೆ" ಎಂದು ಹೇಳಿ  ವೈಷ್ಣವಧನುಸ್ಸಿಗೆ ನಾಣವನ್ನು ಕಟ್ಟಿ ಬಾಣವನ್ನು ಹೂಡಿದ ಶ್ರೀರಾಮ. 


ಶ್ರೀರಾಮನು ಪರಶುರಾಮನ ಸವಾಲನ್ನು ಸ್ವೀಕರಿಸಿ ವೈಷ್ಣವಧನುಸ್ಸಿಗೆ ಶರಸಂಧಾನ ಮಾಡುವ ಮೂಲಕ ಭಾರ್ಗವರಾಮನ ಗರ್ವ ಭಂಗವಾಯುತು.  ಬಾಣವನ್ನು ಹೂಡಿದ ಮೇಲೆ ಅದನ್ನು ಪ್ರಯೋಗಿಸಲೇಬೇಕು. ಅದನ್ನು ಪರಶುರಾಮನ ತಪಃಶಕ್ತಿಯ ಮೇಲೆ ಪ್ರಯೋಗಿಸಿದನು. ವಿಷ್ಣುವಿನ ಒಂದು ಅವತಾರವಾದ ಪರಶುರಾಮನು "ನನ್ನನ್ನು ವಿಷ್ಣುವೆಂದೇ ತಿಳಿ. ನಾನು ಪರಾಜಿತನಾಗಿರುವುದು ಲೋಕೇಶ್ವರನಾದ ವಿಷ್ಣುವಿಗೆ. ನಾನು ಮಹೇಂದ್ರಪರ್ವತಕ್ಕೆ ಪ್ರಯಾಣ ಬೆಳೆಸುತ್ತೇನೆ" ಎಂದು ಹೇಳಿ ತನ್ನ ಅವತಾರ ಶಕ್ತಿಯನ್ನು ಮೂಲಶಕ್ತಿಯಲ್ಲಿ ಲೀನಗೊಳಿಸಿದ. ಇದರಿಂದ ಶ್ರೀರಾಮನು ಮತ್ತಷ್ಟು ವಿಖ್ಯಾತನಾದ. ದುಷ್ಟಶಕ್ತಿ ದಮನಕ್ಕೆ ಮತ್ತಷ್ಟು ಬಲವನ್ನು ಪಡೆದ.


ಪ್ರಕೃತ ಅವತಾರವಾದ ಶ್ರೀರಾಮನ ಅತಿಶಯ ಪರಾಕ್ರಮವನ್ನು ಲೋಕಕ್ಕೆ ತಿಳಿಸುವ ಪರಿ ಇದು. ಪರಶುರಾಮನ ಗರ್ವವು ಶ್ರೀರಾಮನಲ್ಲಿದ್ದ ವೀರ್ಯ ಶೌರ್ಯ ಪರಾಕ್ರಮವನ್ನು ಲೋಕಕ್ಕೆ ತಿಳಿಸಿತು. ವೈಷ್ಣವತೇಜಸ್ಸು ಪರಶುರಾಮನ ದೇಹದಿಂದ ಹೊರಹೊರಟು ಎಲ್ಲ ದೇವತೆಗಳ ಸಮ್ಮುಖದಲ್ಲಿ ಶ್ರೀರಾಮನನ್ನು ಸೇರಿತು.


ಸೂಚನೆ : 19/06/2022 ರಂದು ಈ ಲೇಖನ ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ​ - 13 ಸಮತ್ವಂ ಯೋಗ ಉಚ್ಯತೇ (Astakshara Darshana 13 Samatvam Yoga Ucyate

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಇದೋ ಮತ್ತೆ ಬಂದಿತು ಅಂತಾರಾಷ್ಟ್ರಿಯ ಯೋಗ ದಿನ. ಯೋಗವನ್ನು ನಿಮ್ಮ ದಿನಚರಿಯ ಅಂಗವಾಗಿಸಿಕೊಳ್ಳಿ - ಎಂಬ ಸರ್ವಾದರಣೀಯವಾದ ಸಂದೇಶವನ್ನು ಪ್ರಧಾನಿಯವರು ನೀಡಿದ್ದಾರೆ.


ಏಕೆ ಬೇಕೀ ಯೋಗ? ಅದರಿಂದಾಗುವ ಲಾಭವೇನು? ಅದಿಲ್ಲದಿದ್ದರೆ ಆಗುವ ನಷ್ಟವಾದರೂ ಏನು? ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುವುವಲ್ಲವೆ? ಏಕೆಂದರೆ ಪ್ರಯೋಜನದ ಲೆಕ್ಕವಿಲ್ಲದೆ ಯಾರೂ ಯಾವ ಕೆಲಸವನ್ನೂ ಮಾಡರು - ಪೆದ್ದರೂ ಸಹ - ಎಂಬುದಾಗಿ ಹೇಳುವ ಸುಭಾಷಿತವೊಂದಿದೆ. "ಪ್ರಯೋಜನಮನುದ್ದಿಶ್ಯ ನ ಮಂದೋಽಪಿ ಪ್ರವರ್ತತೇ".


ರಣಾಂಗಣದ ಸಂದರ್ಭವೆಂದರೆ ಅತ್ಯಂತ ವೀರಾವೇಶದಿಂದ ಹೋರಾಡಬೇಕಾದ ಸಂನಿವೇಶ. ಜಯ ಅಥವಾ ವಧ - ಇವೆರಡೇ ಅಲ್ಲಿ ದೊರೆಯತಕ್ಕ ಆಯ್ಕೆಗಳಾದರೂ. ಇಂತಹ ಅತಿಮುಖ್ಯಸಂದರ್ಭದಲ್ಲಿ ದುರ್ಬಲಹೃದಯನಾಗಿ ನಪುಂಸಕನಂತೆ ವರ್ತಿಸಿದವನು ಅರ್ಜುನ. ಕೃಷ್ಣನೆಂಬ ಹೆಸರು ಅರ್ಜುನನಿಗೂ ಸಲ್ಲುವುದೇ. ಆದರೆ ಆ ಕೃಷ್ಣನೆಲ್ಲಿ, ಈ ಕೃಷ್ಣನೆಲ್ಲಿ? ಆ ಧೀರಸಾರಥಿಯೆಲ್ಲಿ ಈ ಭೀರುರಥಿಯೆಲ್ಲಿ? (ಭೀರುವೆಂದರೆ ಪುಕ್ಕಲ). ಸ್ಥಿತಪ್ರಜ್ಞಯೋಗೇಶ್ವರನೆಲ್ಲಿ, ಅಂಜಿ ಅಳುಕುವ ಈ ಮನೋರೋಗಗ್ರಸ್ತನೆಲ್ಲಿ? ಶಸ್ತ್ರ ಹಿಡಿಯದೆಯೂ ಎದುರಾಳಿಯನ್ನು ಎದೆಗಾರಿಕೆಯಿಂದ ಎದುರಿಸಬಲ್ಲ ವೃಷ್ಣಿವಂಶಪ್ರದೀಪನೆಲ್ಲಿ?; ರಕ್ತಸಿಕ್ತವಾದ ಭೋಗದ ಬದಲು ಭಿಕ್ಷೆಯೆತ್ತಿ ಬಾಳುವುದೇ ಲೇಸೆಂದು ಹೇಡಿತನವನ್ನೇ ಧರ್ಮವೆಂದು ಬಗೆದು, ಕರ್ತವ್ಯಪಾಲನೆಯೆಂಬ ಸೋಗಿನಲ್ಲಿ ಆತ್ಮದ್ರೋಹ-ಧರ್ಮದ್ರೋಹಗಳನ್ನು ಮಾಡಹೊರಟಿರುವ ಈ "ಪರಂತಪ" "ಭರತರ್ಷಭ"ನೆಲ್ಲಿ?!


ನಾನಾವಂಶಗಳ ನಾನಾರಾಜ್ಯಗಳ ಭವಿಷ್ಯವನ್ನೇ ರೂಪಿಸುವ ನಿರ್ಣಾಯಕಸಂದರ್ಭದಲ್ಲಿ ಅದೆಷ್ಟು ಧೈರ್ಯ-ದಾರ್ಢ್ಯಗಳಿಂದ ಅರ್ಜುನನು ವರ್ತಿಸಬೇಕಿತ್ತೋ ಅಷ್ಟೇ ಕ್ಲೈಬ್ಯ-ವೈಕ್ಲವ್ಯಗಳಿಂದ ವರ್ತಿಸಿದ್ದಾನೆ (ಕ್ಲೈಬ್ಯವೆಂದರೆ ಕ್ಲೀಬತ್ವ; ಕ್ಲೀಬನೆಂದರೆ ನಪುಂಸಕ. ವೈಕ್ಲವ್ಯವೆಂದರೆ ವಿಕ್ಲವತೆ; ಸಂಕಟ-ದಿಗ್ಭ್ರಮೆಗಳ ಸಂಗಮ).


ಆದರೆ ಇಲ್ಲಿಯ ವೈಕಟ್ಯ(ಐರನಿ)ವೆಂದರೆ ಅರ್ಜುನನ ಸೋಗು: ಪ್ರಜ್ಞಾವಾದದ ಸೋಗು, ಮಹಾಕಾರುಣ್ಯದ ಸೋಗು! ಹಿಂದೆಯೂ ಅನೇಕ ಬಾರಿ ಯುದ್ಧಪ್ರಸಂಗಗಳನ್ನೆದುರಿಸಿದ್ದ ಇವನೇ ಈಗ ಯುದ್ಧದಿಂದಾಗುವ ಅನಾಹುತಗಳನ್ನು ಪಟ್ಟಿಮಾಡಹತ್ತಿದ್ದಾನೆ! ಕುಲಕ್ಷಯ-ಧರ್ಮನಾಶ-ವರ್ಣಸಂಕರ-ನರಕವಾಸ - ಎಂದು ಮುಂತಾಗಿ ಇಹಲೋಕ -ಪರಲೋಕಗಳ ದುರಂತಪರಂಪರೆಗಳನ್ನು ತೋರಿಸುತ್ತಿದ್ದಾನೆ; ಇತ್ತ ವೈಯಕ್ತಿಕವಾಗಿಯೂ ಪೂಜಾರ್ಹಾಚಾರ್ಯ-ಹತ್ಯೆ, ಸ್ವಜನ-ಹನನ, ಮಿತ್ರದ್ರೋಹ, ರಾಜ್ಯಸುಖಲೋಭ - ಇವೆಲ್ಲ ತಪ್ಪಲ್ಲವೇ? – ಎಂದು ಪ್ರಶ್ನಿಸುತ್ತಿದ್ದಾನೆ.

 

ಹೋಗಲಿ, ಇದನ್ನೆಲ್ಲ ಗಂಭೀರವಾಗಿ ಚಿಂತಿಸಿ ಸ್ಪಷ್ಟತೀರ್ಮಾನಕ್ಕೆ ಬಂದಿದ್ದಾನೆಯೇ? - ಎಂದರೆ, ಅದೂ ಇಲ್ಲ. ಮೈನಡುಕ, ಮುಖಶೋಷ (ಬಾಯೊಣಗುವಿಕೆ), ರೋಮಾಂಚ, ಚರ್ಮತಾಪ, ಗಾಂಡೀವ-ಸ್ರಂಸನ (ಜಾರುವಿಕೆ), ಕೊನೆಗೆ ಚಿತ್ತಭ್ರಮಣ - ಎಂಬಿವೂ ತನಗಾಗುತ್ತಿರುವುವೆಂದು ತಾನೇ ಹೇಳಿಕೊಳ್ಳುತ್ತಿದ್ದಾನೆ! ಇಷ್ಟೇ ಅಲ್ಲದೆ 'ವದತೋವ್ಯಾಘಾತ'ವೂ ಸೇರಿದೆ (ಹಾಗೆಂದರೆ ತನ್ನ ಮಾತಿನಲ್ಲೇ ವಿರೋಧ)!: ಎದುರಿಗಿರುವವರು "ಆತತಾಯಿ"ಗಳು - ಎಂದರೆ ತನ್ನನ್ನು ಕೊಲ್ಲಲೆಂದೇ ಬಂದಿರುವವರು; ಅಂತಹವರನ್ನು ಕೊಂದರೆ ಪಾಪವಿಲ್ಲವೆಂದು ಧರ್ಮಶಾಸ್ತ್ರಗಳು ಹೇಳಿದರೆ, ಅವರನ್ನು ಕೊಂದರೆ ನಮಗೆ ಪಾಪವೇ ಗಟ್ಟಿಯೆನ್ನುತ್ತಿದ್ದಾನೆ! ಅವರೇ ನನ್ನನ್ನು ಕೊಲ್ಲಲಿ, ಅದೇ ಕ್ಷೇಮವೆನ್ನುತ್ತಾನೆ! ರಕ್ತಸಿಕ್ತರಾಜ್ಯಭೋಗವು ಬೇಡ; ನಾನು ಧರ್ಮನಿರ್ಣಯ ಮಾಡಲಾರೆ. ರಾಜಾಧಿಪತ್ಯ-ದೇವಾಧಿಪತ್ಯಗಳೂ ನನ್ನ ಶೋಕವನ್ನು ಕಳೆಯಲಾರವು ಎನ್ನುತ್ತಾನೆ!


ಸಾರಸಾರಾಂಶವಾಗಿ ಯೋಗಿಯಲ್ಲದವನ ಹಾಗೆ ಮಾತನಾಡುತ್ತಿದ್ದಾನೆ. ಅರ್ಜುನನಿಗೆ ಭ್ರಮೆಯು ಹೋಗಿ ಪ್ರಮೆಯು ಬರಬೇಕು (ಪ್ರಮೆಯೆಂದರೆ ಯಥಾವತ್ತಾದ ತಿಳಿವಳಿಕೆ); ಶೋಕವು ಕಳೆದು ಮನಸ್ಸಿನ ಸ್ತಿಮಿತತೆಯು ಬರಬೇಕು; ಧರ್ಮಾಧರ್ಮಗಳನ್ನು ಬಿಡಿಸಿನೋಡುವ ತಾಳ್ಮೆ-ಸಾಮರ್ಥ್ಯಗಳು ತೋರಬೇಕು; ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಲಾಗಬೇಕು - ಇವಿಷ್ಟನ್ನೂ ಸಾಧಿಸಲಾಗುವಂತೆ ಶ್ರೀಕೃಷ್ಣನು ಮೂಡಿಸಿದ ತಿಳಿವಳಿಕೆಯನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಅದು ಯೋಗೋಪದೇಶವೆನ್ನಬಹುದು.


ಹೇಗೆ? ಸಮತ್ವವೇ ಯೋಗ: ಸಿದ್ಧಿ-ಅಸಿದ್ಧಿಗಳನ್ನು ಸಮನಾಗಿ ಸ್ವೀಕರಿಸುವ ಬಗೆ. ಲಾಭಾಲಾಭಗಳು, ಜಯಾಪಜಯಗಳು, ಸುಖದುಃಖಗಳು ಮುಂತಾದ ದ್ವಂದ್ವಗಳು ಯಾರ ಜೀವನದಲ್ಲಿಲ್ಲ, ಯಾವ ಕಾರ್ಯದಲ್ಲಿಲ್ಲ? ಇವು ಫಲ-ಪರಿಣಾಮಗಳನ್ನು ಹೇಳುತ್ತವೆ: ಜಯ-ಪರಾಜಯಗಳು ಫಲಗಳು; ನೋವು-ನಲಿವುಗಳು ಪರಿಣಾಮಗಳು. ಫಲಗಳ ಮೇಲೇ ಕಣ್ಣಿಟ್ಟಿರುವವರು ಪರಿಣಾಮಗಳನ್ನು ತಪ್ಪಿಸಿಕೊಳ್ಳಲಾರರು: ಅವರು ನೋವಿನಿಂದ ಕುಗ್ಗುವರು; ನಲಿವಿನಿಂದ ಹಿಗ್ಗುವರು.

 

ಆದರೆ ಸರಿಯಾದ ತಿಳಿವಳಿಕೆಯಿಂದ ಹೊರಡುವವನ ಬಗೆಯೇ ಬೇರೆ. ಉಪಸ್ಥಿತಸಂನಿವೇಶದಲ್ಲಿ ತಾನೇನನ್ನು ಮಾಡುವುದು ಧರ್ಮವೆಂಬುದನ್ನು ಮೊದಲು ನಿಶ್ಚಯಿಸಿಕೊಂಡು, ತನ್ನ ಪ್ರಯತ್ನವನ್ನು ತಾನೆಸಗುವನು. ಅದನ್ನು ಶ್ರೀರಂಗಮಹಾಗುರುಗಳು ದರ್ಶಿಸಿದ ಬಗೆಯಿದು: "ಧರ್ಮಕ್ಕಾಗಿ ಟೊಂಕಕಟ್ಟಿ ಹೊರಟಾಗ, ಹಾರ, ಪ್ರಹಾರ, ಸಂಹಾರ – ಎಲ್ಲಕ್ಕೂ ಸಿದ್ಧವಾಗಿಯೇ ಹೊರಡಬೇಕು." ಸತ್ಕಾರ್ಯಸಾಧನೆಗಾಗಿ ಸಂತೋಷಪಟ್ಟು ಹಾರ ಹಾಕುವವರುಂಟು; ಅಮರ್ಷದಿಂದ ಏಟು ಕೊಡಲು ಬರುವವರುಂಟು; ದ್ವೇಷದಿಂದ ಸಾಯಿಸಲೇ ಬರುವವರೂ ಇರಲಾರರೆಂದೇನಿಲ್ಲ. ಸಾಧಿಸಿದ ಸತ್ಕರ್ಮಗಳಿಗೆಲ್ಲಾ ಸ್ತುತಿ-ಸುಖ್ಯಾತಿ-ಸಂಭಾವನೆಗಳೇ ಸರ್ವದಾ ಸಿಕ್ಕಿಬಿಡುವುವೇ?    

 

ರಾಗದ್ವೇಷಗಳನ್ನು ಮೀರಿ ಕೆಲಸಮಾಡುವವನು ಧೃತಿಗೆಡನು. "ಸಮತ್ವಂ ಯೋಗ ಉಚ್ಯತೇ" ಎನ್ನುತ್ತದೆ ಗೀತೆ. ಹೀಗಿರುವ ಯೋಗಕ್ರಮವು ಜೀವನಕ್ಕೇ ಮಾರ್ಗದರ್ಶಕ. "ಬಂದದ್ದೆಲ್ಲಾ ಬರಲಿ, ಗೋವಿಂದನ ದಯವೊಂದಿರಲಿ." - ಎಂಬ ಬಗೆಯ ಸಮತೆ ಸರ್ವಾದರಣೀಯ.


ಸೂಚನೆ: 19/06/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.   

Saturday, June 18, 2022

ಮಹರ್ಷಿ ಭಾರತ ಭಾಗ 2 ತಾವು ಹುಟ್ಟಿಬೆಳೆದ ಜಾಗವನ್ನು ಪ್ರೀತಿಸುವುದು ಸ್ವಭಾವ ಸಹಜ (Maharsi Bharata Bhaga -2 Tavu Huttibeleda Jagavannu Pritisuvudu Svabhava Sahaja)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


 

ಬರಿಯ ಮನುಷ್ಯರೇಕೆ ದನಕರುಗಳೂ ಅವನ್ನು ಬೇರೆಯವರಿಗೆ ಮಾರಿದಾಗಲೂ ಅನೇಕ ದಿನಗಳವರೆಗೆ ಹಳೆಯ ಮನೆಗೇ ಬರುವುದನ್ನು ಕಾಣುತ್ತೇವೆ. ತಾವಿದ್ದ ಜಾಗವನ್ನು, ತಮ್ಮ ಜನಗಳನ್ನು ಪ್ರೀತಿಸುವುದು ಸ್ವಭಾವಸಿದ್ಧವೆಂಬಂತೆ ( by  instinct )  ಎಲ್ಲರಲ್ಲೂ ಕಾಣುತ್ತೇವೆ. ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ-ನನ್ನ ದೇಶ ಹೇಗಾದರೂ ಇರಲಿ ಅದನ್ನು ಪ್ರೀತಿಸಬೇಕು ಎನ್ನುವವರೂ ಇದ್ದಾರೆ. ಇದು ವಿಚಾರಪರತೆಗಿಂತ ಭಾವುಕತೆಗೆ ಹೆಚ್ಚು ವಿಷಯವಾಗಿದೆ. ಕೇವಲ ಭಾವುಕತೆ (by emotion) ಯಿಂದಲ್ಲದೇ,  ವಿಚಾರಪೂರ್ವಕವಾಗಿ ದೇಶವನ್ನು ಪ್ರೀತಿಸುವುದೆಂದಾದಲ್ಲಿ ನಮ್ಮ ದೇಶವನ್ನು ಪ್ರೀತಿಸಲು ಅದಕ್ಕೇನಾದರೂ ವಿಷಯವುಂಟೆ? ಯಾವುದಾದರೂ ರಕ್ಷಣೀಯ ಎಂದಾಗಬೇಕಾದರೆ ಅಲ್ಲಿ ರಕ್ಷಿಸಲ್ಪಡಬೇಕಾದ ಅಮೂಲ್ಯವಾದ ವಿಷಯವಿರಬೇಕು. ಬೆಳೆ ಬೆಳೆಸಿರುವ ಹೊಲಕ್ಕೆ ಬೆಳೆಯನ್ನು ರಕ್ಷಿಸಲೆಂದೇ ಬೇಲಿಹಾಕುತ್ತೇವೆ. ಖಾಲಿ ಮೈದಾನಕ್ಕೆ ಬೇಲಿ ಹಾಕುವುದಿಲ್ಲ. ಹೊಲದಬಗ್ಗೆ ಪ್ರೀತಿ ಎಂದರೆ ಅಲ್ಲಿರುವ ಜೀವನೋಪಯೋಗಿಯಾದ ಬೆಳೆ ಇದೆ ಎಂದೇ ಪ್ರೀತಿ. ಹಾಗೆಯೇ ಜೀವಭೂತವಾದ ವಸ್ತುವಿರುವುದರಿಂದ ದೇಹದ ಮೇಲೆಯೂ ಪ್ರೀತಿ. ಜೀವವಿಲ್ಲದ ದೇಹ, ಪ್ರೀತಿಗೆ ವಿಷಯವಾಗದು. ಪ್ರೀತಿಯ ಕಾರಣದಿಂದಲೇ ರಕ್ಷಣೆ ಮಾಡುತ್ತೇವೆ; ಅಗಲಿಕೆ ಸಹಿಸುವುದಿಲ್ಲ. ಇದು ನಿತ್ಯವಾದ ಸತ್ಯ. ಹಾಗೆ ಭಾರತದೇಶದ ಬಗ್ಗೆ ನಮ್ಮ ಪ್ರೀತಿ ಏಕಿರಬೇಕು? ಕೇವಲ ನಾವು ಹುಟ್ಟಿ ಬೆಳೆದ ನಾಡು ಎಂಬುದಷ್ಟೆಯೇ? ಎಂದು ವಿಚಾರಮಾಡಬೇಕಾಗಿದೆ. 

 

ಪರಮ ಸುಖದ ಅನ್ವೇಷಕರ ದೇಶ


ವಿಶ್ವದ ಎಲ್ಲ ಮಾನವರೂ ಸುಖದ ಅನ್ವೇಷಣೆಯಲ್ಲಿ ತೊಡಗಿದವರೇ. ಸುಖದ ಕಲ್ಪನೆ ಮಾತ್ರ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟು ಬಗೆಯದು! ಆದರೆ ಜಗತ್ತಿನ ಇತರ ದೇಶದ ಜನರೆಲ್ಲಾ ಸುಖದ ಅನ್ವೇಷಣೆಯಲ್ಲಿ ಜೀವನ ಪ್ರವಾಹದ ಮುಂದು ಮುಂದಕ್ಕೆ ಹುಡುಕುತ್ತ ಹೋದರು. ಸೃಷ್ಟಿಯಾಗಿರುವ ಎಲ್ಲ ಭೌತಿಕ ವಸ್ತುಗಳಲ್ಲಿ ಸುಖವನ್ನು ಕಾಣಲು ಯತ್ನಿಸಿದರು. ಆದರೆ ಈ ನಮ್ಮ ಭಾರತದ ಜ್ಞಾನಿಗಳು ಬುದ್ಧಿಯ ಮುಂದೆ ಹರಡಿರುವ ವಸ್ತುಗಳಲ್ಲಿ ಕಾಣುವ ಸುಖವೆಲ್ಲವೂ ಅನಿತ್ಯ ಮತ್ತು ಕಡೆಯಲ್ಲಿ ದು:ಖದಲ್ಲಿ ಪರ್ಯವಸಾನಗೊಳ್ಳುತ್ತವೆ ಎಂದು ತಮ್ಮ ಅನುಭವದಿಂದ ಅರಿತು ಜೀವನ ಪ್ರವಾಹದ ಮೂಲವನ್ನು ಅರಸುತ್ತಾ ತಮ್ಮೊಳಗೆ ಹಿಂದೆ ಹಿಂದೆ ಸಾಗಿದರು. ನಮ್ಮ ಕಣ್ಮುಂದೆ ಕಾಣುತ್ತಿರುವ ಎಲ್ಲವೂ ಯಾವ ಮೂಲದಿಂದ ಬರುತ್ತಿದೆ ಎಂಬ ಅನ್ವೇಷಣೆಯಿಂದ ಅವರ ಪ್ರಯಾಣ ಹಿಂದು ಹಿಂದಕ್ಕೆ ಸಾಗಿ ಸೃಷ್ಟಿಮೂಲನಾದ ಪರಂಜ್ಯೋತಿಯವರೆಗೂ ಸಾಗಿತು. ಆ ಬೆಳಕೇ ಪರಮ ಆನಂದದ, ಶಾಶ್ವತಸುಖದ ತಾಣ ಎಂಬುದನ್ನು ತಮ್ಮ ಅರಿವಿನಿಂದ ಅನುಭವಿಸಿದರು. ಅದರ ಅನುಭವ, ದರ್ಶನಗಳೆಲ್ಲವೂ ವಿಶ್ವದಲ್ಲಿ ಈವರೆಗೆ ಕಂಡ  ಇನ್ನಾವ ಸುಖಗಳಿಗೂ ಸಾಟಿಯಾಗದು ಎಂದು ಅವರಿವರು ಹೇಳಿದ್ದನ್ನು ಕೇಳಿ ಸುಮ್ಮನಾಗದೇ  ತಮ್ಮ ಅನುಭವದಿಂದಲೇ ಕಂಡುಕೊಂಡರು. ನಮ್ಮ ಜೀವನದ ಬೇರಾಗಿ, ಮೂಲವಾಗಿ ನಿತ್ಯವಾಗಿ ಬೆಳಗುತ್ತಿರುವ ಪರಮಾತ್ಮನ ಸಾಕ್ಷಾತ್ಕಾರವನ್ನು ಹೊಂದಿದವರಾಗಿ-ಆ ಮೂಲಬೆಳಕೇ ಅದರ ವಿಕಾಸದ ಮುಂದು ಮುಂದಿನ ಹೆಜ್ಜೆಗಳಲ್ಲಿ ಬೃಹತ್ತಾದ ವಿಶ್ವವಾಗಿದೆ ಎಂಬ ಸತ್ಯದ ಅರಿವನ್ನು ಪಡೆದವರ ದೇಶ ನಮ್ಮ ಭಾರತ. ಬೇರಿಗೆ ನೀರೆರೆದಾಗ ವೃಕ್ಷವೆಲ್ಲವೂ ಫಲಪುಷ್ಪಭರಿತವಾಗಿ ನಳನಳಿಸುವ ನಿಸರ್ಗ ಸಹಜವಾದ ನಡೆಯನ್ನು ಜೀವನ ವೃಕ್ಷದಲ್ಲೂ ಅವರು ಕಂಡುಕೊಂಡರು.ನಮ್ಮ ಜೀವದ ಜೀವವಾದ ಭಗವಂತನೆಡೆಗೆ ಸಾಗುವ ನಮ್ಮ ನಡೆಯೇ ಮಾನವ ಜೀವನದ ಸಹಜವಾದ ನಡೆ ಎಂಬುದನ್ನು ಮನಗಂಡರು. ಅವರು ಜೀವನ ಮೂಲವನ್ನು ಕಂಡವರಾಗಿದ್ದರು-ಬೀಜದಿಂದ ಹೊರಟ ವೃಕ್ಷವಿಕಾಸದ ನಡೆ ಮತ್ತೆ ಬೀಜದಲ್ಲೇ ಪರ್ಯವಸಾನವಾಗುವಂತೆ, ಆ ಮೂಲದಿಂದ ಹೊರಟ ನಮ್ಮೆಲ್ಲರ ನಡೆ ವಿಕಾಸದ ಹಾದಿಯಲ್ಲಿ ಸಾಗುತ್ತಾ ಮತ್ತೆ ಅವನನ್ನೇ ಹೊಂದುವ ಸಹಜವಾದ ಜೀವನವಾಗಲು ಅನುವಾಗುವಂತಹ ಜೀವನ ವಿಧಾನವನ್ನು ಈ ದೇಶದಲ್ಲಿ ರೂಪಿಸಿದರು. ವಿಶ್ವದ ಇತಿಹಾಸದಲ್ಲಿ ಇನ್ನೆಲ್ಲೂ ಕಾಣದ ಅದ್ವಿತೀಯವಾದ ಇಂತಹ ಸಹಜಜೀವನ ಲಕ್ಷ್ಯ , ಅದನ್ನು ಪಡೆಯುವ ಜೀವನ ವಿಧಾನದ ಅನ್ವೇಷಣೆ ಅದನ್ನು ನಮ್ಮ ನಿತ್ಯಜೀವನದಲ್ಲಿ ತಂದುಕೊಟ್ಟ ಹಿರಿಮೆ  ಭಾರತೀಯ ಮಹರ್ಷಿಗಳದ್ದು.


ಸೂಚನೆ : 18/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಕಾಳಿದಾಸನ ಜೀವನದರ್ಶನ – 15 ವಿವಾದಕ್ಕೆ ಹೆದರಬೇಕೇ? (Kalidasana Jivanadarshana - 15 Vivadakke Hedarabeke ?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ತನ್ನ ಅಧ್ಯಯನದ ಕ್ಷೇತ್ರದಲ್ಲಿ ತಾನರಿತ ವಿಷಯದಲ್ಲಿ ಎಷ್ಟೋ ಸಂಶಯಗಳಿಗೋ ಚರ್ಚೆಗಳಿಗೋ ಅವಕಾಶವು ಆಗಾಗ ಇದ್ದೇ ಇರುತ್ತದೆ. ತಾನು ಪ್ರತಿಪಾದಿಸುವ ವಿಷಯಗಳ ಎಷ್ಟೋ ಅಂಶಗಳ ಯುಕ್ತತೆ-ಯಥಾರ್ಥತೆಗಳ ಬಗ್ಗೆ ಜಿಜ್ಞಾಸುಗಳಾಗಿಯೋ ವಿಮರ್ಶಕರಾಗಿಯೋ ಪ್ರಶ್ನೆಮಾಡುವವರೂ ಇದ್ದಾರು. ವಾದ-ವಿವಾದಗಳಿಗೆ ಹೀಗೆ ಆಸ್ಪದವಿರುವಾಗ ಅವುಗಳಿಂದ ವಿದ್ವಾಂಸನಾದವನು ದೂರ ಉಳಿಯಲಾಗದು. ಇದು ಎಷ್ಟಾದರೂ ತನ್ನ ಸ್ಥಾನ-ಮಾನಗಳ ಬಗ್ಗೆ ಗೌರವವುಳಿಸಿಕೊಳ್ಳುವ ಕ್ರಮವೇ ತಾನೆ? – ಎಂಬುದು ಕಾಳಿದಾಸನ ಸೂಚನೆ.

ತನ್ನನ್ನು ಕುರಿತಾದ ವೈಯಕ್ತಿಕವಾದ ಅಧಿಕ್ಷೇಪಣಗಳ ಬಗ್ಗೆಯಾದರೂ ಮೌನವು ಸಹ್ಯವಾದೀತು, ಆದರೆ ತಾನು ಪ್ರತಿಪಾದಿಸುವ ವಿಷಯವನ್ನು ಕುರಿತಾಗಿ ಸಲ್ಲದ ಆಕ್ಷೇಪಗಳು ಬಂದಲ್ಲಿ ಸುಮ್ಮನೆ ಕೂರುವಂತಿಲ್ಲ. 

ಯಾರ ಜ್ಞಾನವು ಪರಿನಿಷ್ಠಿತವಾಗಿಲ್ಲವೋ, ಎಂದರೆ ಗಟ್ಟಿಯಾಗಿ ನೆಲೆಗೊಂಡಿಲ್ಲವೋ, ಅಂತಹವರು ವಿದ್ವದ್-ವೃಂದದಲ್ಲಿ ನಡೆಯುವ ವಾದ-ಚರ್ಚೆಗಳೆಂದರೆ ಹೆದರುವಂತಾಗುತ್ತದೆ. ಅಂತಹವರನ್ನು 'ವಿವಾದ-ಭೀರು' ಎನ್ನುತ್ತಾರೆ. ಭೀರು ಎಂದರೆ ಪುಕ್ಕಲ, ಭಯ ಬೀಳುವವನು. ಒಳ್ಳೆಯ ವಿದ್ವಾಂಸನು ಎಂದಿಗೂ ವಿವಾದಭೀರುವಾಗಿರಬಾರದು. ತನ್ನ ವಿದ್ವತ್ತಿನ ವಿಷಯದಲ್ಲಿ ಅನ್ಯರು ಎತ್ತುವ ಆಕ್ಷೇಪಗಳ ಬಗ್ಗೆ ಮೌನವನ್ನು ತಾಳುವುದೂ ಯುಕ್ತವಲ್ಲ. ಆಕ್ಷೇಪಗಳಿಗೆ ಯೋಗ್ಯವಾದ ಪ್ರತ್ಯುತ್ತರ-ಸಮಾಧಾನಗಳನ್ನು ಕೊಡತಕ್ಕದ್ದೇ.

ಕೇವಲ ಹೊಟ್ಟೆತುಂಬಿಸಿಕೊಳ್ಳುವುದಷ್ಟೇ ಯಾರಿಗೆ ಲಕ್ಷ್ಯವೋ ಅವರು ವಿದ್ವದ್-ವಲಯದ ಸಭೆಗಳು, ವಾದ-ವಿವಾದಗಳು - ಇವುಗಳಿಂದ ದೂರವುಳಿಯುತ್ತಾರೆ. ಇಂತಹವರಿಗೆ ವಿದ್ಯೆಯು 'ಕೇವಲ ಜೀವಿಕೆ'ಗಾಗಿ. ಜೀವಿಕೆಯೆಂದರೆ ಹೊಟ್ಟೆಹೊರೆಯುವಿಕೆಗೆ ಸಾಧನ: ಕೂಳಿಗೊಂದು ಮಾರ್ಗ. ಹಾಗಾಗಬಾರದು. ತಾನು ಕಲಿತ, ಹಾಗೂ ಬೋಧಿಸುತ್ತಿರುವ, ವಿದ್ಯೆಯ ಗೌರವಕ್ಕೆ ಅದರಿಂದ ಧಕ್ಕೆ. ತನಗೆ ಸಾಕಷ್ಟು ಗೌರವ-ಸಂಭಾವನೆಗಳು ದೊರಕುತ್ತಿವೆ; ತಾನು ಸುಖವಾದ ಜೀವನವನ್ನು ನಡೆಸಬಹುದು - ಎಂಬುದಾಗಿ ಭಾವಿಸಿ, ವಿದ್ಯಾಸಂಬಂಧಿಯಾದ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ದೂರವುಳಿದುಕೊಂಡಲ್ಲಿ, ಆತನು ಸಂಪಾದಿಸಿರುವ ವಿದ್ಯೆಯ ಬಗ್ಗೆಯೇ, ಆತನ ಅವಬೋಧ-ಸೌಷ್ಠವದ ಬಗ್ಗೆಯೇ, ಪ್ರಶ್ನಾತ್ಮಕವಾಗಿ ವಿದ್ವಾಂಸರು ಮಾತನಾಡುವರು. ಆ ಬಗ್ಗೆ ಕಾಳಜಿವಹಿಸದೆ  ಜವಾಬ್ದಾರಿಯಿಂದ ನುಣುಚಿಕೊಂಡಲ್ಲಿ, ಅಂತಹವನನ್ನು "ಜ್ಞಾನಪಣ್ಯ-ವಣಿಕ್" ಎನ್ನುತ್ತಾರೆ - ಎನ್ನುತ್ತಾನೆ ಗಣದಾಸ. ಪಣ್ಯವೆಂದರೆ ಮಾರಾಟಕ್ಕಿರುವ ವಸ್ತು. ವಣಿಕ್ ಎಂದರೆ ಬನಿಯಾ, ವ್ಯಾಪಾರಿ. ಅಂದರೆ ಜ್ಞಾನವನ್ನೇ ಮಾರಾಟಕ್ಕಿಟ್ಟು, ಅದರಿಂದಲೇ ಹೊಟ್ಟೆಹೊರೆದುಕೊಂಡು ತೃಪ್ತಿಪಟ್ಟುಕೊಳ್ಳುವ  ವ್ಯಾಪಾರಿ - ಎಂದು ಅರ್ಥ. ಜ್ಞಾನವನ್ನು ಹಾಗೆ ಮಾರಾಟ ಮಾಡುವವನು ವಿದ್ವಾಂಸರಲ್ಲಿ ಅತ್ಯಂತ ನಿಕೃಷ್ಟನೆನಿಸುವನು.

ಎಲ್ಲವನ್ನೂ ಹಣವೊಂದರೆ ದೃಷ್ಟಿಯಿಂದಲೇ ನೋಡುವುದೇ ಪ್ರಚುರವಾಗಿರುವ ಈ ಕಾಲಕ್ಕಾಗಿಯೇ ಬರೆದ ಮಾತುಗಳಂತೆ ಇವೆ, ಕಾಳಿದಾಸನ ಉಕ್ತಿಗಳು. ವಿದ್ವದ್‍ವಲಯದಲ್ಲಿಯ ವೈದುಷ್ಯಸಂಬಂಧಿಯಾದ ವಿವಾದಗಳ ಬಗ್ಗೆ ಯುಕ್ತವಾದ ನಿಲುವು ಹೇಗಿರುವುದು ಯುಕ್ತ? -  ಎಂಬುದನ್ನು ತನ್ನ ಈ ನಾಟಕದಲ್ಲಿನ ಒಂದು ಸಂನಿವೇಶದಲ್ಲಿ ಕಾಳಿದಾಸನು ಕಾಣಿಸಿರುವುದನ್ನು ನೋಡಬಹುದು. ಕೇವಲ ಮನೆಪಾಠವನ್ನು ಹೇಳಿಕೊಂಡು, ಅದರಿಂದ ಅದೆಷ್ಟು ದುಡ್ಡು ಮಾಡಬಹುದೆಂಬ ಏಕಲಕ್ಷ್ಯವನ್ನು ಹೊಂದಿರುವ ಮಂದಿ, ವಿದ್ವತ್ಸಭೆಗಳಿಗೆ ಕಾಲಿಡದ ಮಂದಿ, ವಿಚಾರಸಂಕಿರಣ-ಸಂಮೇಳನಗಳಿಂದ ದೂರವುಳಿಯುವ ಮಂದಿ - ಇವು ಇಂದು ವಿಪುಲವಾಗಿರುವುದನ್ನು ಕಂಡಾಗ, ಎರಡು ಸಾವಿರ ವರ್ಷಗಳ ಹಿಂದೆ ಕಾಳಿದಾಸನು ಆಡಿದ ಮಾತುಗಳು ಇಂದೂ ಎಷ್ಟು ಪ್ರಕೃತವೆಂಬುದು ಗೋಚರವಾಗುತ್ತದೆ.

ಉಪದೇಶದರ್ಶನ

ಉಪದೇಶವೆಂದರೆ ಶಿಷ್ಯನಿಗೆ ಗುರುವು ಬೋಧಿಸಿರುವ ವಿದ್ಯೆ. ಅದರ ದರ್ಶನವೆಂದರೆ ತೋರಿಸುವಿಕೆ, ತಿಳಿದವರ ಮುಂದೆ ಆಡಿ(ಸಿ) ತೋರಿಸುವುದು, ಮಾಡಿ(ಸಿ) ತೋರಿಸುವುದು - ಇತ್ಯಾದಿ. ನಾಟ್ಯವಿದ್ಯೆಯ ವಿಷಯದಲ್ಲಿ ಅದರ ಬಗೆಗಿನ ಪ್ರಶ್ನೋಪಪ್ರಶ್ನೆಗಳಿಗೆ ಉತ್ತರಕೊಡುವುದು ಆಡಿತೋರಿಸುವುದು, ಎಂದರೆ ವಾಗ್-ರೂಪವಾದ ಉತ್ತರ. ಅಭಿನಯಜ್ಞಾನವನ್ನು ಪ್ರಶ್ನಿಸಿದಲ್ಲಿ ಮಾಡಿತೋರಿಸುವ ಪ್ರಸಂಗವು ಬರುವುದು.

ತಾನು ಸುಶಿಕ್ಷಿತನೆಂದಮಾತ್ರಕ್ಕೆ ಉಪದೇಶದರ್ಶನದಲ್ಲಿಯೂ ಸಮರ್ಥನೇ ಎಂದು ಹೇಳುವಂತಿಲ್ಲ. ಅರ್ಥಾತ್, ತಾನು ಬೋಧಿಸಿರುವುದನ್ನು ತನ್ನ ಶಿಷ್ಯರು ವಾಚಿಕವಾಗಿಯೂ ಆಂಗಿಕವಾಗಿಯೂ ಪ್ರದರ್ಶಿಸಿ, ಗುರುವು ತನಗೆ ಹೇಳಿಕೊಟ್ಟದರಲ್ಲಿ ಯಾವುದೇ ಲೋಪ-ದೋಷಗಳಿಲ್ಲವೆಂಬುದನ್ನೂ ತನಗೂ ಅಜ್ಞಾನ-ಅಲ್ಪಜ್ಞಾನಗಳು ಇಲ್ಲವೆಂಬುದನ್ನೂ, ಭಯಾತಂಕಗಳಿಲ್ಲದೆ ಧೈರ್ಯ-ವಿಶ್ವಾಸಗಳಿಂದ ನಿರೂಪಿಸಬಲ್ಲೆನೆಂಬುದನ್ನೂ ವಿದ್ಯಾರ್ಥಿಯು ಸಿದ್ಧಪಡಿಸುವಂತಹುದು ಉಪದೇಶದರ್ಶನ. ಒಳ್ಳೆಯ ಆಚಾರ್ಯನೆನಿಸಿಕೊಳ್ಳಲು ಕೇವಲ ಸುಶಿಕ್ಷಣವು ತನಗೆ ದೊರೆಯಿತೆಂಬುದಷ್ಟೇ ಅಲ್ಲದೆ, ಸುಬೋಧನವೂ ತನಗೆ ಕರಗತವಾಗಿದೆಯೆಂಬುದನ್ನು ಪಂಡಿತಮಂಡಲಿಯ ಎದುರಿಗೆ ಸಹ ಸಾಬೀತುಪಡಿಸುವುದು ಮುಖ್ಯವಾಗುತ್ತದೆ.

ಅರ್ಥಾತ್, ತಾನು ಮಾಡಿಸಿದ ವಿದ್ಯಾಸಂಕ್ರಾಂತಿಯ - ಎಂದರೆ ತನ್ನಲ್ಲಿದ್ದ ವಿದ್ಯೆಯು ಶಿಷ್ಯನಲ್ಲಿ ಹೋಗಿ ನೆಲೆಸಿರುವುದರ - ಸೌಷ್ಠವವನ್ನು ಬಲ್ಲವರ ಮುಂದೆ ಸ್ಥಾಪಿಸುವುದು ಅನಿವಾರ್ಯವಾಗುತ್ತದೆ.

ವಿದ್ಯಾಪರೀಕ್ಷೆ-ನಿರ್ಣಯಗಳು

ಪರೀಕ್ಷೆಗೆ ಒಳಪಡತಕ್ಕ ಶಿಷ್ಯರು ಹೆಚ್ಚುಕಡಿಮೆ ಸಮಾನವಾದ ಅವಧಿಯ ಶಿಕ್ಷಣವನ್ನು ಹೊಂದಿದ್ದಲ್ಲಿ, ಅದೂ ಶ್ರೇಷ್ಠವೇ. ಸಮಾನವೆಂದು ಕರೆಯಬಹುದಾದ ಕಾಲಾವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಎಷ್ಟುದೂರ ಸಾಗಿದ್ದಾರೆ - ಎಂಬ ಹೋಲಿಕೆಯು ಸುಗಮವಾಗುತ್ತದೆ.

ಇಲ್ಲದಿದ್ದಲ್ಲಿ ಒಬ್ಬರು ದೀರ್ಘಕಾಲದ ವಿದ್ಯಾಭ್ಯಾಸವನ್ನು, ಮತ್ತೊಬ್ಬರು ಅಲ್ಪಕಾಲದ ಶಿಕ್ಷಣವನ್ನು, ಪಡೆದಿದ್ದಲ್ಲಿ ಉಪದೇಶ-ದರ್ಶನದಲ್ಲಿ ಸಾಮ್ಯವನ್ನು ಹೇಳುವುದು ಕಷ್ಟವಾಗುವುದು. ಅಲ್ಪಾವಧಿಯ ಶಿಕ್ಷಣವನ್ನು ಹೊಂದಿರುವ ಶಿಷ್ಯನ ಜ್ಞಾನವು ಅಪರಿನಿಷ್ಠಿತವೆನಿಸುವುದು; ಮತ್ತು ದೀರ್ಘಕಾಲದ ಶಿಕ್ಷಣವುಳ್ಳವರ ಅರಿವು ಸುಪರಿನಿಷ್ಠಿತವಾಗಿರುವುದು. ಇಂತಹ ಅಸಮರ ನಡುವಣ ಸಮರವು ಸಾಧುವೆನಿಸದು.

ಆದರೆ ಹೀಗಿದ್ದರೂ, ಅಲ್ಪಕಾಲಿಕವಾದ ಶಿಕ್ಷಣವನ್ನು ಪಡೆದೂ ಚಿರಕಾಲಾಭ್ಯಾಸವುಳ್ಳ ವ್ಯಕ್ತಿಯನ್ನು ಮೀರಿಸುವಂತಾದರಂತೂ, ಯಾರದು ಮೇಲುಗೈ ಎಂಬುದು ಅತ್ಯಂತ ಸ್ಪಷ್ಟವೇ ಆಗಿಬಿಡುವುದು.

ಪ್ರಕೃತ ಮಾಲವಿಕಾಗ್ನಿಮಿತ್ರನಾಟಕದಲ್ಲಿ ಮಾಳವಿಕೆಯು ಸ್ವಲ್ಪವೇ ಕಾಲವೇ ವಿದ್ಯಾಗ್ರಹಣವನ್ನು ಮಾಡಿದ್ದರೂ, ತನಗಿಂತಲೂ ದೀರ್ಘಕಾಲ ಅಭ್ಯಸಿಸಿದ್ದ ಪ್ರತಿದ್ವಂದ್ವಿಗಿಂತಲೂ ಹೆಚ್ಚುಗಾರಿಕೆಯನ್ನು ತೋರಿಸುವಳು.

ಪರೀಕ್ಷೆ ಮಾಡಲು ಎಷ್ಟು ಮಂದಿ ಬೇಕು? ಒಬ್ಬರಾದರಾಯಿತೇ? ಹಲವರು ಪರೀಕ್ಷಕರಿರಬೇಕೆ? ಎಂಬ ಪ್ರಶ್ನೆಗೂ ಈ ಕೃತಿಯಲ್ಲಿ ಉತ್ತರವಿದೆ. ವೈಯಕ್ತಿಕವಾಗಿ ಒಬ್ಬರ ಅರಿವಿನ ಮಟ್ಟವನ್ನು ಅಳೆದುಕೊಳ್ಳಬೇಕೆಂದಿದ್ದಲ್ಲಿ ಒಬ್ಬರನ್ನು ಪರೀಕ್ಷಕರನ್ನಾಗಿಸಿದರೆ ಸಾಕೇನೋ? ಆದರೆ ಜನಸ್ತೋಮದ ಮಧ್ಯೆ ಎದ್ದಿರುವ ಪ್ರಶ್ನೆ ಇಲ್ಲಿಯದಾಗಿದೆ. ಎಂದೇ, ಮಂದಿಯೊಪ್ಪುವ ರೀತಿಯಲ್ಲಿ ಪರೀಕ್ಷೆಯು ನಡೆಯಬೇಕಾಗುತ್ತದೆ. ಪರೀಕ್ಷಕರು ಒಬ್ಬರೇ ಆಗಿಬಿಟ್ಟಿದ್ದು, ಅವರ ಬಗ್ಗೆ ಏನಾದರೂ ಪಕ್ಷಪಾತದ ಶಂಕೆಯು ಯಾರಿಗಾದರೂ ಮೂಡಿದಲ್ಲಿ, ಪರೀಕ್ಷೆಯೇ ಆಕ್ಷೇಪಾರ್ಹವಾಗುತ್ತದೆ. "ಏಕಾಕಿನೋ ನಿರ್ಣಯೋ ದೋಷಾಯ", ಎನ್ನುತ್ತಾನೆ, ಕವಿ.

ಸೂಚನೆ : 18/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Friday, June 17, 2022

ಯಾವುದು ಪೂರ್ಣ ಜೀವನ ? (Yavudu Poorna Jivana?)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



 

ಪೂರ್ಣ ಜೀವನ ಎಂದರೆ ನೂರ್ಕಾಲ ಬದುಕುವುದು ಎಂಬ ಅರ್ಥವೇ? ಅಥವಾ ಸ್ವಲ್ಪ ಕಾಲ ಬದುಕಿದರೂ  ಬದುಕಿನ ಸಹಜವಾದ ಲಕ್ಷ್ಯಗಳನ್ನು ಪೂರೈಸಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವುದೇ?  

 

ನಮ್ಮ ದೇಶದ ಮಹರ್ಷಿಗಳು ಪೂರ್ಣ ಜೀವನವೇ ಬದುಕಿನ ಸಹಜವಾದ ಗುರಿ ಎಂದರು. ಒಂದು ವೃಕ್ಷದ ಜೀವನ ಪುರ್ಣವಾಗುವುದು ಹೇಗೆ? ಒಂದು  ಮಾವಿನ ಬೀಜಕ್ಕೆ, ನಾವು ಅದಕ್ಕೆ ಬೇಕಾದ ಕೃಷಿ ಮಾಡಿದಾಗ, ಅದು ತನ್ನ ವಿಕಾಸದ ಹಂತವಾಗಿ ಮೊಳಕೆ, ಚಿಗುರು, ಕಾಂಡ, ಕೊಂಬೆ, ಎಲೆ, ಹೂವು, ಕಾಯಿ, ಹಣ್ಣು- ಹೀಗೆ ವಿಕಾಸವಾಗಿ  ಕಡೆಯಲ್ಲಿ ಬೀಜದಲ್ಲೇ ಪರ್ಯವಸಾನವಾಗುತ್ತದೆ. ನಾವು ಇವನ್ನೆಲ್ಲಾ ಮಾವಿನ ಮೊಳಕೆ, ಮಾವಿನ ಚಿಗುರು, ಮಾವಿನ ಕೊಂಬೆ, ಮಾವಿನ ಎಲೆ ಮಾವಿನ ಹಣ್ಣು- ಕಡೆಯಲ್ಲಿ ಮಾವಿನ ಬೀಜ ಎಂಬುದಾಗಿ ಗುರುತಿಸುತ್ತೇವೆ. ಅದರ ವಿಕಾಸದ ಎಲ್ಲಾ ಹಂತದಲ್ಲೂ ಮಾವಿನ ತನವನ್ನು ಹೊತ್ತುಕೊಂಡೇ ವಿಕಾಸವಾಗಿ ಕೊನೆಯಲ್ಲಿ ಮಾವಿನ ಬೀಜದಲ್ಲೇ ಪರ್ಯವಸಾನವಾದರೆ ಅದು ಮಾವಿನ ವೃಕ್ಷದ ಸಹಜವಾದ ನಡೆ; ಪೂರ್ಣಜೀವನ ಎನ್ನಬಹುದು. ಈ ವಿಕಾಸದಲ್ಲಿ ಒಂದು ಏಕಸೂತ್ರತೆ ಇದೆ. ಮೊದಲು ಕಾಂಡ ಬಂದು, ಆಮೇಲೆ ಮೊಳಕೆ ಎಂದಾಗದು. ಕ್ರಮಬದ್ಧವಾದ ನಡೆ ನಾವು ಈ ಮೊದಲು ಗಮನಿಸಿದಂತೆ ಇರುತ್ತದೆ. ಹಾಗಿದ್ದಾಗ ಕಡೆಯಲ್ಲಿ ಮಾವಿನ ಹಣ್ಣನ್ನು ನಾವು ಸವಿಯಬಹುದು.

 

ಹಾಗೆಯೇ ಈ ಜೀವನ ವೃಕ್ಷದಲ್ಲೂ ಇದೇ ತರಹ ನಡೆ ಇರುವುದನ್ನು ಋಷಿಗಳು ಗಮನಿಸಿದ್ದಾರೆ. ಭಗವಂತನೆಂಬ ಚೈತನ್ಯದಿಂದ ಆರಂಭವಾಗಿ ತನ್ನ ವಿಕಾಸದ ಹಾದಿಯಲ್ಲೆಲ್ಲೂ ಆ ಚೈತನ್ಯದ ಆಶಯವನ್ನು ಮರೆಯದೇ, ಅದಕ್ಕನುಗುಣವಾದ ಇಂದ್ರಿಯ ಸೌಖ್ಯವನ್ನೂ ಅನುಭವಿಸಿ ಕಡೆಯಲ್ಲಿ ಆ ಚೈತನ್ಯದಲ್ಲೇ ಒಂದಾಗುವ ಪೂರ್ಣಜೀವನ ಮಾನವ ಜೀವನದ ಸಹಜವಾದ ಲಕ್ಷ್ಯ ಎಂದು ಸಾರಿದರು. ಅದಕ್ಕೆ ಬೇಕಾದ ಕೃಷಿಯೇ ಅವರು ಹಾಕಿಕೊಟ್ಟ ವಿಧಿ-ನಿಷೇಧಗಳು.   

 

ನಾವು ಜೀವನದಲ್ಲಿ ಎಲ್ಲಾ ವಿಷಯಗಳನ್ನೂ ನಮ್ಮ ಕಣ್ಣು, ಕಿವಿ, ನಾಲಿಗೆ, ಮೂಗು, ಮತ್ತು ಸ್ಪರ್ಶದ ಮೂಲಕ  ಒಳಗೆ ತೆಗೆದುಕೊಳ್ಳುತ್ತೇವೆ. ಹಾಗೆಯೇ ನಮ್ಮ ಪ್ರತಿಕ್ರಿಯೆಯನ್ನು ಇವುಗಳ ಮುಖೇನ ಹೊರಹಾಕುತ್ತೇವೆ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ನಮ್ಮ ಮನಸ್ಸೇ ಈ ಇಂದ್ರಿಯಗಳ ಮೂಲಕ ಇದೆಲ್ಲವನ್ನೂ ಮಾಡುತ್ತದೆ. ಮಾವಿನ ವೃಕ್ಷ ಪ್ರಕೃತಿ ನೇಮಿಸಿದಂತೆ ತನ್ನ ನಡೆಯನ್ನು ಪೂರ್ಣಗೊಳಿಸುತ್ತದೆ. ಆದರೆ  ಮಾನವನಿಗೆ ವಿಶೇಷವಾಗಿ  "ಮನಸ್ಸು" ಇರುವುದರಿಂದ ನಡೆ ತಪ್ಪುವ ಅವಕಾಶಗಳೂ ಹೆಚ್ಚೇ. "ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂಬಂತೆ ನಮ್ಮನ್ನು ವಿಷಯಗಳಿಗೆ ಮಾತ್ರವೇ ಅಂಟಿಸಿ ಬಂಧಿಸಲೂ ಮನಸ್ಸೇ ಕಾರಣ.  ಹಾಗೆಯೇ, ನಮ್ಮನ್ನು ನಮ್ಮ ಸಹಜವಾದ ಜೀವನದ ಲಕ್ಷ್ಯದೆಡೆಗೆ ಕರೆದೊಯ್ಯುವುದೂ ಸಹ ಮನಸ್ಸೇ. ಮನಸ್ಸನ್ನು ನಾವು ನಿಯಮನ ಮಾಡಿದ್ದೇ ಆದರೆ ಜೀವನವನ್ನು ಆಳಬಹುದು. ಮನಸ್ಸಿಗೆ ವಿಶೇಷ ಯೋಗ್ಯತೆ ಇದೆ. ಅದು ನಮ್ಮನ್ನು ಸಂಸಾರಜೀವನದಲ್ಲೇ ಕಟ್ಟಿಹಾಕಿ ಸುಖದುಃಖಗಳ ಸಂಕೋಲೆಯಲ್ಲಿ ಬೇಯಿಸಬಹುದು. ಅದಿಲ್ಲದೇ, ವಿಶೇಷ ಶಿಕ್ಷಣದಿಂದ ಏಕಾಗ್ರವಾಗಿ ನಮ್ಮನ್ನು ಶಾಶ್ವತ ಸುಖವಾದ ಮೋಕ್ಷ-ಬಿಡುಗಡೆಯ ದಾರಿಯಲ್ಲೂ ಕರೆದೊಯ್ಯಬಹುದಾಗಿದೆ. ಆದರೆ ಮನಸ್ಸನ್ನು ನಿಯಮನ ಮಾಡುವುದು ಸುಲಭದ ಕೆಲಸವೇನಲ್ಲ.  ಮನಸ್ಸಿನ ಒಂದು ವಿಶೇಷ ಗುಣವೇ 'ವಿಷಯಕ್ಕೆ ಅಂಟುವುದು'. ಅದನ್ನು ಒಳ್ಳೆಯ ಸಂಸ್ಕಾರಗಳಿಂದ ಸನ್ಮಾರ್ಗದಲ್ಲಿ ಅಂಟುವಂತೆ ಮಾಡಬೇಕಾಗಿದೆ. ಭಾರತೀಯ ಸಂಸ್ಕೃತಿಯ ಆಚಾರ, ವಿಚಾರ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಇವೆಲ್ಲವೂ ಮನಸ್ಸನ್ನು ಸರಿದಾರಿಗೆ ತಂದು ಪೂರ್ಣ ಜೀವನದೆಡೆಗೆ ನಮ್ಮನ್ನು ಸಾಗುವಂತೆ ಮಾಡುವ ಉದ್ದೇಶದಿಂದಲೇ ಬಂದವುಗಳಾಗಿವೆ. 

 

ಭಗವಂತನ ಸಾಕ್ಷಾತ್ಕಾರದೆಡೆಗೆ ಸಾಗುವ ಸ್ವರೂಪಯೋಗ್ಯತೆ, ಕೇವಲ ಮಾನವ ದೇಹಕ್ಕೆ ಮಾತ್ರವೇ ಇರುವುದಾಗಿದೆ. ಈ ವೈಶಿಷ್ಟ್ಯವನ್ನು ಬಳಸದೇ ಕೇವಲ ಇಂದ್ರಿಯ ಜೀವನದಲ್ಲೇ ನಮ್ಮ ಪ್ರಯಾಣವನ್ನು ಮುಕ್ತಾಯ ಮಾಡಿದರೆ ಈ ಶರೀರ ಯಂತ್ರದ ಪೂರ್ಣ ಪ್ರಯೋಜನ ಪಡೆದಂತಾಗದು. ಒಂದು ಪೆನ್ ಇದೆ. ಅದು ನೋಡಲು ಬಹಳ ಆಕರ್ಷಕವಾಗಿದೆ, ಚಿನ್ನದಿಂದ ಮಾಡಿದ್ದು; ಆದರೆ ಬರೆಯಲು ಮಾತ್ರ ಆಗುವುದಿಲ್ಲ ಎಂದರೆ ಅದರ ಉಪಯೋಗವಾದರೂ ಏನು? ಅದರ ಪ್ರಮುಖ ಉದ್ದೇಶವೇ ಈಡೇರದಿದ್ದಾಗ ಅದರ ಸೌಂದರ್ಯವರ್ಣನೆಯಿಂದ ಯಾವ ಪ್ರಯೋಜನವೂ ಆಗದು. 

 

ಹಾಗೆಯೇ ನಮ್ಮನ್ನು ಪರಮ ಪದದ ಔನ್ನತ್ಯಕ್ಕೆ ಏರಿಸುವ ಯಂತ್ರವನ್ನಿಟ್ಟುಕೊಂಡು ಆ ಉಪಯೋಗವನ್ನೇ ಪಡೆಯದೇ ಹೋದರೆ ಈ ಜೀವನಕ್ಕೆ ಏನೂ ಅರ್ಥವಿರುವುದಿಲ್ಲ ಎಂದು ಅಂತಹ ಸುಖವನ್ನು ಈ ಶರೀರದಿಂದಲೇ ಪಡೆದ ಜ್ಞಾನೀ ಜನರ ಮಾತು. ಈ ದೇಹದಲ್ಲಿ ಇಂದ್ರಿಯ ಸುಖಗಳನ್ನೂ ಪಡೆಯುವ ಅವಕಾಶವಿರುವಂತೆಯೇ ಅತೀಂದ್ರಿಯವಾದ ಮೋಕ್ಷ ಸುಖವನ್ನೂ ಪಡೆಯುವ ಅವಕಾಶವಿದೆ. ಇದನ್ನು ಹಾಗೆ ಬಳಸಿಕೊಂಡು ನಮ್ಮ ಇಹ-ಪರ ಜೀವನಗಳನ್ನು ಸಮೃದ್ಧಗೊಳಿಸಿಕೊಳ್ಳುವ ಮಾರ್ಗವನ್ನು ಈ ದೇಶದ ಋಷಿ-ಮಹರ್ಷಿಗಳು ಕಂಡುಕೊಂಡು ಜೀವಲೋಕಕ್ಕೆ ಹಾಕಿಕೊಟ್ಟಿದ್ದಾರೆ. ಅಂತಹ ಪುರ್ಣಜೀವನ ನಮ್ಮೆಲ್ಲರ ಉದ್ದೇಶವಾಗಬೇಕಾಗಿದೆ.  ಆದರೆ "ಮರ ಹತ್ತಿರುವವನು ಎಷ್ಟೇ ಭರವಸೆಕೊಟ್ಟರೂ "ಕೈ ಬಿಟ್ಟು ನಮಸ್ಕಾರ ಮಾಡಯ್ಯ" ಎಂದರೆ ಭಯಪಡುತ್ತಾನೆ. ಅಂತೆಯೇ ಜೀವನವೃಕ್ಷದ ಶಾಖೆಗಳಾದ ಇಂದ್ರಿಯಗಳ ಕೈಗೆ ಸಿಕ್ಕಿ ಒದ್ದಾಡುತ್ತಿರುವ ಜೀವವು ಭಗವಂತನು "ನನ್ನನ್ನು ಆಶ್ರಯಿಸು" ಎಂದು ಕರೆದರೂ ಅವುಗಳು ಕೈ ಬಿಡುವುದಕ್ಕೆ ಇಷ್ಟಪಡುವುದಿಲ್ಲ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. 

 

ಹೀಗೆ ಪೂರ್ಣಾಯುಸ್ಸು ಎಂದರೆ ನೂರಾರುವರ್ಷಗಳು ಪೂರ್ತಿಯಾಗಿ ಜೀವಂತವಾಗಿರುವುದಷ್ಟೇ ಅಲ್ಲದೇ  ಭಗವಂತ ಕೊಟ್ಟ ಈ ನಮ್ಮ ಶರೀರ ಯಂತ್ರವನ್ನು ಅದರ ನಿಜವಾದ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡು ಜೀವನದ ಸಹಜ ಲಕ್ಷ್ಯಗಳಾದ  ಧರ್ಮ, ಅರ್ಥ, ಕಾಮ ಮತ್ತು  ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಅನುಭವಿಸುವ ಸುಖದ ಜೀವನವು ಕೆಲವೇ ವರ್ಷವಿದ್ದರೂ ಅದು ಪೂರ್ಣಾಯುಷ್ಯವೇ. ಅದಿಲ್ಲದೇ ಇಂದ್ರಿಯ ಸುಖದ ಜೀವನವನ್ನು ಮಾತ್ರವೇ ಅನುಭವಿಸಿ ನೂರುವರ್ಷ ಬದುಕಿದರೂ ಅದು ಅಪೂರ್ಣ ಜೀವನವೇ ಆಗುತ್ತದೆ.


ಅಂತಹ ಮಹರ್ಷಿಪ್ರಣೀತವಾದ ಪೂರ್ಣಜೀವನದ ಕಡೆಗೆ ಹೆಜ್ಜೆಹಾಕುವ ಸದ್ಬುದ್ಧಿಯನ್ನು ಭಗವಂತ ನಮ್ಮೆಲ್ಲರಿಗೂ ಕೊಡಲಿ ಎಂದು ಪ್ರಾರ್ಥಿಸೋಣ.


ಸೂಚನೆ: 17/06/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.