Showing posts with label author_mythyliraghavan. Show all posts
Showing posts with label author_mythyliraghavan. Show all posts

Monday, November 27, 2023

ಭಗವಂತನನ್ನು ಎಬ್ಬಿಸಲೊಂದು ಹಬ್ಬ (Bhagavantanannu Ebbisalondu Habba)

ಶ್ರೀಮತಿ ಮೈಥಿಲಿ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯು ಉತ್ಥಾನದ್ವಾದಶಿಯೆಂಬುದಾಗಿ ಸಂಭ್ರಮದಿಂದ ಕೊಂಡಾಡಲ್ಪಡುತ್ತದೆ.
'ಉತ್ಥಾನ' ಎಂದರೆ ಎಬ್ಬಿಸುವುದು, ಎಚ್ಚರಗೊಳಿಸುವುದು. ಶಯನದ್ವಾದಶಿಯಿಂದ ನಾಲ್ಕುತಿಂಗಳಕಾಲ ಯೋಗನಿದ್ರೆಯಲ್ಲಿ ಪವಡಿಸಿರುವ ಕ್ಷೀರಾಬ್ಧಿನಾಥನನ್ನು ಎಚ್ಚರಗೊಳಿಸುವ ದಿನವಾದ್ದರಿಂದ ಈ ದಿನವು ಕ್ಷೀರಾಬ್ಧಿನಾಥವ್ರತ/ಪೂಜೆ ಎನಿಸಿಕೊಳ್ಳುತ್ತದೆ. ಶ್ರೀಮನ್ನಾರಾಯಣನು ತನ್ನ ನಿದ್ರಾ-ಮುದ್ರೆಯನ್ನು ಬಿಟ್ಟು ಎಚ್ಚರ-ಮುದ್ರೆಯನ್ನು ಭಕ್ತರಿಗೆ ತೋರುವ ದಿನವಾದ್ದರಿಂದ ಉತ್ಥಾನದ್ವಾದಶೀ ಎನಿಸಿಕೊಳ್ಳುತ್ತದೆ.

ಭಗವಂತನ ನಿದ್ರೆ:
ಭಗವಂತನು ನಾಲ್ಕು ತಿಂಗಳುಗಳು ನಿದ್ರಿಸುವುದಾದರೆ ಜಗದ್ವ್ಯಾಪಾರ ನಡೆಯುವುದು ಹೇಗೆಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಭಗವಂತನ ನಿದ್ರೆಯು ಪ್ರಾಕೃತರ ನಿದ್ರೆಯಂತೆ ಜಾಡ್ಯನಿದ್ರೆಯಲ್ಲ, ಅದು ಯೋಗನಿದ್ರೆ. ತನ್ನ ಯೋಗನಿದ್ರೆಯ ಕಾಲದಲ್ಲಿ ಜಗದ್ವ್ಯಾಪಾರ ಕಾರ್ಯವನ್ನು ಪ್ರಕೃತಿಮಾತೆಗೆ ವಹಿಸುತ್ತಾನೆ. ಆತನು ಸದಾ ಯೋಗದಲ್ಲೇ ಇರುವವನಾದರೂ ಈ ನಾಲ್ಕುತಿಂಗಳಕಾಲ ಯೋಗನಿದ್ರಾ'ಮುದ್ರೆಯನ್ನು' ಅನುಗ್ರಹಿಸುತ್ತಾನೆ. ಆತನ ನಿದ್ರಾಮುದ್ರೆಯನ್ನು ನೋಡಲು ಅಪೇಕ್ಷಿಸುವ ಭಕ್ತರಿಗಾಗಿ ಈ ಭಂಗಿಯಲ್ಲಿ ಕಂಗೊಳಿಸುತ್ತಿದ್ದು ಉತ್ಥಾನದ್ವಾದಶಿಯಂದು ಯೋಗನಿದ್ರೆಯಿಂದ ಅರಳಿದ ಅರಳುಕಂಗಳಿಂದ ಭಕ್ತರನ್ನು ಅನುಗ್ರಹಿಸುತ್ತಾನೆ.

ಕಾಲದ ಔಚಿತ್ಯ:
ಚಾತುರ್ಮಾಸ್ಯದ ನಾಲ್ಕು ತಿಂಗಳುಗಳು ಎಡೆಬಿಡದೆ ಮಳೆಯನ್ನು ಸುರಿಸುವ ಕಾಲ. ಹಂಸಗಳು ನಿರಂತರ ವರ್ಷವನ್ನು ತಡೆಯಲಾರದೆ ಮಾನಸಸರೋವರವನ್ನು ಸೇರುತ್ತವೆ ಎನ್ನುತ್ತಾರೆ. ಅಂತೆಯೇ ಪರಮಹಂಸರೂ ತಮ್ಮ ಹೃದಯಮಾನಸಸರೋವರವನ್ನು ಸೇರಿ ನಿದ್ರಾಮುದ್ರಾಭಿರಾಮನಾದ ಭಗವಂತನಲ್ಲಿ ರಮಿಸುತ್ತಾರೆ.
ಪಾಮರರಿಗೂ ಕೂಡ ಮಳೆಯಕಾರಣದಿಂದಾಗಿ ಹೊರವ್ಯಾಪಾರಗಳನ್ನು ಕಡಿಮೆಮಾಡಿ ಭಗವಂತನಲ್ಲಿ ವಿಶ್ರಾಂತಿಯನ್ನು ಪಡೆಯಲು ಪುಷ್ಟಿನೀಡುವ ಕಾಲ ಇದಾಗಿದೆ. ದ್ವಾದಶಿಯಂದು ಭಗವಂತನಿಗೆ ಸುಪ್ರಭಾತವನ್ನು ಹಾಡಿ ನಿದ್ರಾಮುದ್ರೆಯಿಂದ ಎಚ್ಚರಗೊಳಿಸಿ, ವಿಶೇಷಪೂಜೆಗಳನ್ನರ್ಪಿಸಿ, ಅನುಗೃಹೀತರಾಗಿ ಮುಂದಿನ ವ್ಯಾಪಾರಗಳನ್ನು ಆತನ ಸ್ಮರಣೆಯಲ್ಲಿ ಮಾಡಲು ಉದ್ಯುಕ್ತರಾಗಬೇಕೆನ್ನುವುದು ಇಲ್ಲಿಯ ಆಶಯ.

ಪೂಜಾಕಲ್ಪ:
ಉತ್ಥಾನದ್ವಾದಶೀ ಪೂಜೆಯನ್ನು ದೇಶದ ಬೇರೆಬೇರೆ ಭಾಗಗಳಲ್ಲಿ ವಿಸ್ತಾರವಾಗಿಯೂ, ಸಂಕ್ಷಿಪ್ತವಾಗಿಯೂ ನಾನಾ ರೀತಿಗಳಲ್ಲಿ ಆಚರಿಸುವುದುಂಟು. ಇಲ್ಲಿ ವಿಸ್ತಾರಗಳಿಗೆ ಹೋಗದೆ ಸಾಮಾನ್ಯವಾಗಿ ಕಂಡುಬರುವ ಕ್ರಮವನ್ನು ಗಮನಿಸುವುದಾದರೆ, ಭಗವಂತನಿಗೆ ಷೋಡಶೋಪಚಾರಗಳೊಂದಿಗೆ ವಿಶೇಷಪೂಜೆಯನ್ನು ಅರ್ಪಿಸುವುದರ ಜೊತೆಗೆ ತುಲಸೀ ವಿವಾಹವನ್ನೂ ಆಚರಿಸುವ ರೂಢಿಯಿದೆ. ತುಲಸೀ- ಧಾತ್ರಿಯರ(ನೆಲ್ಲಿಯ) ಪೂಜೆ, ತುಲಸೀವಿವಾಹ ಮುಂತಾದುದನ್ನು ಸಂಧ್ಯಾಕಾಲದಲ್ಲಿ ಮಾಡುವ ರೂಢಿಯೂ ಉಂಟು. ಅಂದು ಹೊಸ ನೆಲ್ಲಿಯಕಾಯಿನಿಂದ ಕೂಡಿದ ನೆಲ್ಲಿಯಕೊಂಬೆಯನ್ನು ತುಲಸೀಗಿಡದೊಡನೆ ಸೇರಿಸಿ ಮಧ್ಯದಲ್ಲಿ ಶ್ರೀಕೃಷ್ಣನನ್ನಿಟ್ಟು ಪೂಜಿಸುವುದು ರೂಢಿಯಲ್ಲಿದೆ. ನೆಲ್ಲಿಯಕಾಯನ್ನು ಬಟ್ಟಲಿನಂತೆ ಮಾಡಿ ಅದರಲ್ಲಿ ಹಸುವಿನತುಪ್ಪ ಅಥವ ಎಳ್ಳೆಣ್ಣೆಯನ್ನು ತುಂಬಿ ದೀಪವನ್ನು ಬೆಳಗಿಸುವ ಪದ್ಧತಿಯೂ ಉಂಟು.
ಇಲ್ಲಿ ತುಲಸೀ-ಧಾತ್ರಿಯರ ಪೂಜೆಯೆಂದಾಗ ಪೂಜಿಸುವುದು ಮರಗಿಡಗಳನ್ನಲ್ಲ, ಅದರಲ್ಲಡಗಿರುವ ದೇವಿಯನ್ನು ಎಂಬಂಶವು ಗಮನಾರ್ಹ.

ಧಾತ್ರಿಯ ವೈಶಿಷ್ಟ್ಯ:
`
ಧಾತ್ರೀ'-ಧರಿಸಿ, ಪೋಷಿಸುವವಳು. ಶ್ರೀಫಲಾ, ಆಮಲಕೀ, ಅಮೃತಾ, ರೋಚಿನಿ ಇತ್ಯಾದಿ ಇತರ ಹೆಸರುಗಳು ಅಮೃತತ್ತ್ವ, ರುಚಿಕರ, ವೀರ್ಯವೃದ್ಧಿ ಮುಂತಾದ ಇದರ ಗುಣಾತಿಶಯಗಳನ್ನು ತಿಳಿಸುತ್ತವೆ.
`ಧಾತ್ರಿಯು ತಾಯಿಯಂತೆ ಮನುಷ್ಯರಲ್ಲಿ ವಾತ್ಸಲ್ಯವನ್ನು ತೋರುತ್ತಾಳೆ. ಇದರ ನೀರಿನ ಪಾನ ಆಯುರ್ವೃದ್ಧಿಕರ. ಇದರಿಂದ  ಸ್ನಾನಮಾಡುವುದು ವಿಘ್ನಹಾರಕ. ಇದು ದಾರಿದ್ರ್ಯವನ್ನು ನಾಶಪಡಿಸಿ ಮೋಕ್ಷವನ್ನೇ ಕೊಡುತ್ತದೆ. ತುಲಸೀ-ಬಿಲ್ವಗಳಲ್ಲಿನ ಶ್ರೇಷ್ಠಗುಣಗಳೆಲ್ಲವೂ ಧಾತ್ರಿಯಲ್ಲಿಯೂ ಉಂಟು' ಎಂಬುದಾಗಿ ಶಾಸ್ತ್ರಗಳು ಕೊಂಡಾಡುತ್ತವೆ.

ಧಾತ್ರಿಯ ಅಧಿಷ್ಟಾತೃದೇವತೆಯು ಲಕ್ಷ್ಮೀ-ಪಾರ್ವತಿಯರ ವಿಭೂತಿಯಾಗಿ, ಜಗನ್ಮಾತೆಯ ಅಂಶಭೂತಳಾಗಿ, ಆನಂದಪ್ರದಳಾಗಿದ್ದಾಳೆ ಎಂಬ ಸತ್ಯಾರ್ಥವನ್ನು ಪುರಾಣಗಳು ಕಥಾರೂಪದಲ್ಲಿ ಹೀಗೆ ವರ್ಣಿಸುತ್ತವೆ- ಒಮ್ಮೆ ಲಕ್ಷ್ಮೀ-ಪಾರ್ವತಿಯರು ತಮ್ಮಿಂದಲೇ ಸೃಷ್ಟಿಯಾದ ಪದಾರ್ಥಗಳಿಂದ ಶಿವನನ್ನೂ, ವಿಷ್ಣುವನ್ನೂ ಪೂಜಿಸಲು ಇಚ್ಚಿಸಿದಾಗ ಅವರಿಬ್ಬರ ಕಂಗಳ ಆನಂದಭಾಷ್ಪವು ಭೂಮಿಯಲ್ಲಿಳಿದು ಅದರಿಂದ ನೆಲ್ಲಿಗಿಡವು ಹುಟ್ಟಿತು. ಶುದ್ದವಾದ(ಅಮಲವಾದ) ಜಲ(ಕ)ದಿಂದ ಹುಟ್ಟಿದ್ದರಿಂದ `ಆಮಲಕ'ವೆಂದೂ, ಆಗ ದೇವತೆಗಳ ಜಯಕಾರದಿಂದಾದ ಆನಂದವನ್ನು ಧರಿಸಿದ್ದರಿಂದ `ಧಾತ್ರೀ'ಯೆಂದೂ ಹೆಸರಾಯಿತು.
ಧಾತ್ರಿಯು ಆಧಿಬೌತಿಕ, ಆಧಿದೈವಿಕ, ಆಧ್ಯಾತ್ಮಿಕವೆಂಬ ಮೂರೂಕ್ಷೇತ್ರಗಳಿಗೂ ಪುಷ್ಟಿನೀಡುತ್ತದೆ.
ಆಧಿಭೌತಿಕಪ್ರಯೋಜನ:
ಇದು ಪ್ರಧಾನವಾಗಿ ತ್ರಿಧಾತುಗಳ ವೈಷಮ್ಯವನ್ನು ನೀಗಿಸಿ ಧಾತುಪ್ರಸನ್ನತೆಯನ್ನುಂಟುಮಾಡುತ್ತದೆ, ಅನೇಕ ರೋಗಗಳ ನಿವಾರಣೆಯನ್ನು ಮಾಡಿ ಆಯುರ್ವೃದ್ಧಿಯನ್ನು ನೀಡುತ್ತದೆ ಎಂಬುದಾಗಿ ಆಯುರ್ವೇದವು ಕೊಂಡಾಡುತ್ತದೆ.

ಆಧಿದೈವಿಕಪ್ರಯೋಜನ:
ಇದು ಶಿವ-ವಿಷ್ಣು ಇಬ್ಬರ ಪೂಜೆಗೂ ಯೋಗ್ಯವಾದದ್ದು. ಆಮಲಕದಿಂದ ಅವರನ್ನು ಪೂಜಿಸಿ ನೈವೇದ್ಯಮಾಡಿ ಪ್ರಸಾದರೂಪವಾಗಿ ಅದನ್ನು ಸೇವಿಸಿದಾಗ ಆಯಾದೇವತೆಗಳ ಪ್ರೀತಿಗೆ ಕಾರಣಾವಾಗುತ್ತದೆ. ನೆಲ್ಲಿಯಿಂದ ಸ್ನಾನ-ಪಾನಗಳು ನಮ್ಮೊಳಗೆ ಆ ದೇವತಾಕೇಂದ್ರಗಳನ್ನು ತೆರೆದು ಧ್ಯಾನಕ್ಕೆ ಪುಷ್ಟಿಯನ್ನು ನೀಡಿ ಉಪಾಸನೆಯ ಫಲಪ್ರಾಪ್ತಿಗೆ ಕಾರಣಾವಾಗುವುದು.

ಆಧ್ಯಾತ್ಮಿಕಪ್ರಯೋಜನ:
ನೆಲ್ಲಿಯ ಸೇವನೆಯು ಆತ್ಮಗುಣಗಳ, ಬುದ್ಧಿಯ, ಆರೋಗ್ಯದ, ದ್ರವ್ಯಗಳ-ದಾರಿದ್ರ್ಯವನ್ನು ನೀಗಿಸುತ್ತದೆ. ತನ್ಮೂಲಕ ಧಾತುಪ್ರಸನ್ನತೆಯನ್ನೇರ್ಪಡಿಸಿ ಸಮಾಧಿಸಿದ್ಧಿಯನ್ನುಂಟು ಮಾಡುತ್ತದೆ, ಭಗವತ್‌ಸಾಕ್ಷಾತ್ಕಾರ-ಮೋಕ್ಷಗಳಿಗೆ ಹೇತುವಾಗುತ್ತದೆ.  
ನೆಲ್ಲಿಯನ್ನು ಸೇವಿಸುವವರಿಗೆಲ್ಲಾ ಮುಕ್ತಿ ಎಂದರ್ಥವಲ್ಲ. ಭಗತ್ಸಾಕ್ಷಾತ್ಕಾರಕ್ಕಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ಶ್ರಮಿಸುವ ಸಾಧಕರ ಯೋಗಸಿದ್ಧಿಗೆ ಇದರ ಸೇವನೆಯು ಸಹಾಯವನ್ನು ನೀಡುತ್ತದೆ ಎಂಬಂಶವು ಇಲ್ಲಿ ಗ್ರಾಹ್ಯ. ನೆಲ್ಲಿ-ಹಸುವಿನತುಪ್ಪದ ಯೋಗದಿಂದ ಬೆಳಗುವ ದೀಪದ ದರ್ಶನ-ವಾಸನೆಗಳು ಪಾಪಪರಿಹಾರಕ-ಜ್ಞಾನಪ್ರದ. ತುಲಸಿಯು ಶ್ರೀಕೃಷ್ಣನಿಗೆ ಸಂಬಂಧಿಸಿದ ಕೇಂದ್ರಗಳನ್ನು ತೆರೆದು ಆತನ ಪೂಜೆಗೆ ಸಹಕರಿಸುತ್ತದೆ.
ಆದ್ದರಿಂದ ಯೋಗಮೂರ್ತಿಯಾದ ಭಗವಂತನ ಪೂಜೆಯಲ್ಲಿ ಧಾತ್ರಿ-ತುಲಸಿಗಳನ್ನು ಅಳವಡಿಸಲಾಗಿದೆ. ಹಬ್ಬಗಳ ಆಚರಣೆಯು ದೇಶದಾದ್ಯಂತ ಹರಡಿದ್ದರೂ ಅದು ಬಹುಪಾಲು ಯಾಂತ್ರಿಕವಾಗಿಯೇ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಶ್ರೀರಂಗಮಹಾಗುರುಗಳು `ಭಾರತೀಯಮಹರ್ಷಿಗಳ ಹೃದಯಭೂಮಿಕೆಯಿಂದ ಮೂಡಿಬಂದ ಹಬ್ಬಗಳ ಆಚರಣೆಯು ಅರ್ಥಹೀನವಲ್ಲ, ಇದರಲ್ಲಿ ವೈಜ್ಞಾನಿಕನೋಟವುಂಟು' ಎಂಬ ಮರ್ಮವನ್ನು ತಿಳಿಸಿಕೊಟ್ಟ ಮಹಾಯೋಗಿಗಳು.  ಈ ವಿಜ್ಞಾನವನ್ನರಿತು ಶ್ರದ್ಧೆಯಿಂದ  ಉತ್ತಾನದ್ವಾದಶೀಪೂಜೆಯನ್ನು ಆಚರಿಸಿ ಧನ್ಯರಾಗೋಣ.

ಸೂಚನೆ: 24/11/2023 ರಂದು ಈ ಲೇಖನ ವಿಜಯವಾಣಿಯ ಚಿಂತನ ದಲ್ಲಿ ಪ್ರಕಟವಾಗಿದೆ.

Thursday, March 9, 2023

ಭಾರತೀಯ ಸಂಸ್ಕೃತಿ ಮೌಢ್ಯವೋ, ವೈಜ್ಞಾನಿಕವೋ? (Bharatiya Sanskrrti Maudhyavo, Vaijnanikavo?)

ಶ್ರೀಮತಿ ಮೈಥಿಲಿ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಎಲ್ಲ ದೇಶಗಳಲ್ಲೂ ಅವರವರ ಮನಃಪರಿಪಾಕಾನುಸಾರವಾಗಿ ಸಂಸ್ಕೃತಿಯು ರೂಪುಗೊಂಡಿರುತ್ತದೆ. ಆ ಸಂಸ್ಕೃತಿ/ಮನಸ್ಸಿನ ಸ್ಥಿತಿಯು ನಡವಳಿಕೆಗಳಾಗಿ ಪರಿವರ್ತನೆಗೊಳ್ಳುವುದೇ ನಾಗರಿಕತೆಯೆನಿಸಿಕೊಳ್ಳುವುದು. ಇತರ ಸಂಸ್ಕೃತಿ-ನಾಗರಿಕತೆಗಳ ವಿಚಾರ ಹೇಗೇ ಇದ್ದರೂ ಭಾರತೀಯ  ಸಂಸ್ಕೃತಿಯ ಬಗೆಗೆ ಅನೇಕ ಆಕ್ಷೇಪಗಳು ಎದ್ದಿರುವುದು ಚಿರಪರಿಚಿತ.

ಪ್ರಧಾನಕಾರಣವೆಂದರೆ ಇಲ್ಲಿನ ವಿಚಾರಗಳಲ್ಲಿ ಎದ್ದುಕಾಣುವ ಮೌಢ್ಯ. ಈ ಸಂಸ್ಕೃತಿಯಿಂದ ಬೆಳೆದು ಬಂದಿರುವ ಬಹುಮಟ್ಟಿನ ಸಂಪ್ರದಾಯಗಳು/ಪದ್ಧತಿಗಳು, ವಿಧಿ-ನಿಷೇಧಗಳ ಪಟ್ಟಿರೂಪದಲ್ಲಿರುವ ಶಾಸ್ತ್ರಗಳು, ಆಚರಣೆಗಳು ಎಲ್ಲವೂ ಅರ್ಥಹೀನವಾಗಿಯೇ ಕಂಡುಬರುತ್ತವೆ. ಊಟಮಾಡಲೊಂದು ಸಮವಸ್ತ್ರ(Uniform)-ಪಂಚೆ, ಉತ್ತರೀಯ! ನೆಲದಮೇಲೆಯೇ ಕೂರಬೇಕಂತೆ! ಮಣೆ/ಚಾಪೆಯಂತೂ ಕಡ್ಡಾಯವಂತೆ. ಹೀಗೇಕೆ? ಟೇಬಲ್ ನ ಮೇಲಿಟ್ಟೋ, ನಿಂತಲ್ಲಿಯೋ, ಓಡಾಡುತ್ತಲೋ ತಿಂದರೆ ಬಡಿಸುವವರಿಗೂ ಶ್ರಮ ಕಡಿಮೆಯಾಗುವುದಲ್ಲವೇ? ಹೀಗೆ ತಿಂದರೆ ಅನ್ನ ಅರಗುವುದಿಲ್ಲವೇ? ರುಚಿಸುವುದಿಲ್ಲವೇ? ಪೂಜೆಗೆ ಸ್ನಾನ ಮಾಡಿ ಮಡಿವಸ್ತ್ರವನ್ನೇ ಉಡಬೇಕೆನ್ನುವುದೇಕೆ? ಹಾಗಿಲ್ಲದಿದ್ದರೆ ದೇವರು ಪೂಜೆಯನ್ನೊಪ್ಪುವುದಿಲ್ಲವೇ? ಹೀಗೆ  ಮೂಢನಂಬಿಕೆಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಇಂದಿನ ಜೀವನಶೈಲಿಗೆ-ಆಧುನಿಕಯುಗಕ್ಕೆ ಇವು ಪ್ರಸ್ತುತವಲ್ಲವೆಂದೇ ತೋರುತ್ತವೆ. ಆದ್ದರಿಂದ ಇದು ಮೌಢ್ಯವೆಂಬ ಆಪಾದನೆಯನ್ನು ತಳ್ಳಿಹಾಕುವಂತಿಲ್ಲ.

ಈ  ಸಂಸ್ಕೃತಿಯು ಇಂದಿಗೂ ಅಸಂಖ್ಯಾತ ಜನಮನವನ್ನಾಕರ್ಷಿಸುತ್ತಲಿರುವುದೂ ನಿಜವೇ. ಅಂತಹವರು ಇದರಿಂದ ರೂಪುಗೊಂಡ ಆಚಾರ-ವಿಚಾರಗಳನ್ನು ಪಾಲಿಸುತ್ತಿರುವುದನ್ನೂ ಕಾಣಬಹುದಾಗಿದೆ. ಆದ್ದರಿಂದ ಈ ಬಗೆಗೆ ವಿವೇಕಪೂರ್ಣವಾದ ವಿಮರ್ಶೆಯು ಸೂಕ್ತವೇ ಆಗಿದೆ.    


ಯಾವುದೇ ಕಾರ್ಯದ ಅಥವಾ ವಿಧಿ-ನಿಷೇಧಗಳ ಹಿಂದೆಯೂ ಸಾಧಿಸಬೇಕಾದ ಗುರಿಯೊಂದಿದ್ದರೆ ಮಾತ್ರವೇ ಅವುಗಳಿಗೆ ಬೆಲೆಯುಂಟು. ಇಲ್ಲದಿದ್ದರೆ ಅವೆಲ್ಲವೂ ಮೌಢ್ಯ-ವ್ಯರ್ಥ-ಅರ್ಥಹೀನವೆಂದೇ ಪರಿಗಣಿಸಲ್ಪಡುತ್ತವೆ. ವೈಜ್ಞಾನಿಕವೆಂದರೆ ಪ್ರಯೋಗ-ಪರೀಕ್ಷೆಗಳ ಮೂಲಕ ಸಿದ್ಧವಾಗುವಂತಹ-ಸಿದ್ಧಪಡಿಸಬಹುದಾದಂತಹ ಅಂಶಗಳು. ಈ ನಿಟ್ಟಿನಲ್ಲಿ ಭಾರತೀಯಸಂಸ್ಕೃತಿಯು ಮೌಢ್ಯವೇ-ವೈಜ್ಞಾನಿಕವೇ ಎಂಬುದನ್ನು ಪರೀಶೀಲಿಸಬೇಕಾಗಿದೆ.   


ಮೌಢ್ಯವೋ? ಅರ್ಥಪೂರ್ಣವೋ?

ಮಹರ್ಷಿಮನೋಮೂಲವಾಗಿ ಹೊರಬಂದ ಭಾರತೀಯಸಂಸ್ಕೃತಿಯನ್ನರಿಯಲು ಅವರ ಮನೋಧರ್ಮವನ್ನರಿಯುವುದು ಅವಶ್ಯಕವಾಗಿದೆ. ಶರೀರದೊಳಗಿನ ಸೂಕ್ಷ್ಮಾತಿಸೂಕ್ಷ್ಮವಾದ ಭಾಗಗಳನ್ನೂ ಆಧುನಿಕ ವಿಜ್ಞಾನಿಗಳು ಪ್ರಯೋಗಶಾಲೆಗಳಲ್ಲಿ ಕುಳಿತು  ಸೂಕ್ಷ್ಮದರ್ಶಕ ಯಂತ್ರಗಳ ಮೂಲಕ ಅನ್ವೇಷಿಸಿ ತಿಳಿಸುವಂತೆಯೇ ಮಹರ್ಷಿಗಳೂ ಅನ್ವೇಷಣೆಯನ್ನು ನಡೆಸಿದ್ದಾರೆ. ಅವರ ಶರೀರವೇ ಅವರ ಪ್ರಯೋಗಶಾಲೆ. ಉಪಕರಣಗಳು-ತೀವ್ರತಪೋಲಭ್ಯವಾದ ಜ್ಞಾನದೃಷ್ಟಿ-ಯೋಗದೃಷ್ಟಿ. ತಮ್ಮ ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂಸೆಳೆದು ಶರೀರದೊಳಗೆ ಯೋಗದೃಷ್ಟಿಯಿಂದ ಮಾತ್ರವೇ ಗೋಚರಿಸುವ ಅಂಶಗಳನ್ನು ಕಂಡರು. ಒಳಬೆಳಗುವ ದೇವತಾಶಕ್ತಿಗಳನ್ನೂ, ಅವುಗಳ ಸೃಷ್ಟಿಕಾರಕ-ಚೈತನ್ಯಪ್ರದ ಪರಮಾತ್ಮನನ್ನೂ ಕಂಡರು. ಅಲ್ಲೊದಗಿದ ಆನಂದಾನುಭವವು ಭೌತಿಕಪ್ರಪಂಚದಲ್ಲಿ ದೊರೆಯಬಹುದಾದ  ಸುಖದ ಪರಮಾವಧಿಗಿಂತಲೂ ಕೋಟಿಕೋಟಿಪಾಲು ಹೆಚ್ಚಿನದೆಂಬುದನ್ನು ಮನಗಂಡರು. ಅತ್ಯುನ್ನತಮಟ್ಟದ ಆನಂದಸಾಗರದಲ್ಲಿ ಮಿಂದು-ಮುಳುಗಿ-ವಿಹರಿಸಿದ ಅವರ ಮನಸ್ಸಿನ ಪರಿಪಾಕವೂ ಅಷ್ಟೇ ಉತ್ಕೃಷ್ಟವಾಗಿದ್ದಿತು. ಮಾನವಸಾಮಾನ್ಯರೆಲ್ಲರಿಗೂ  ಇಂತಹ ಆನಂದವು ಸಿಗಲೆಂಬ ಔದಾರ್ಯ ಅವರಲ್ಲಿ ಮೂಡಿಬಂದಿತು. 


ಲೋಕವೆಲ್ಲವೂ ತಾವೇರಿದ ಉನ್ನತಸ್ಥಿತಿಗೇರಿ ಆನಂದಿಸುವುದಲ್ಲದೆ, ಅಲ್ಲಿಂದ ಹೊರಪ್ರಪಂಚಕ್ಕಿಳಿದಾಗಲೂ ಮತ್ತೆ ಮೇಲೇರಲು ಅನೂಕೂಲಕರವಾಗಿ-ಅಡ್ಡಿತಾರದಂತಿರುವ ಹೊರಜೀವನಶೈಲಿಯೊಂದನ್ನು ರೂಪಿಸಿದರು. ಜೀವನದಲ್ಲಿ  ಅಂತ:ಪ್ರಪಂಚ-ಹೊರಪ್ರಪಂಚಗಳೆರಡರಲ್ಲೂ ತಂಗುತಡೆಯಿಲ್ಲದೆ ಸಂಚರಿಸಬಹುದಾದ ಹೆದ್ದಾರಿಯನ್ನು ನಿರ್ಮಿಸಿಕೊಡುವ  ಉದ್ದೇಶದಿಂದ ಕೂಡಿದ್ದರು. ಆತ್ಮಪ್ರಪಂಚದಿಂದ ಹೊರಟ ವಿಚಾರಗಳೇ ಭಾರತೀಯಸಂಸ್ಕೃತಿ-ನಾಗರಿಕತೆಗಳಾಗಿರುವುವು. ಇಂತಹ ಪರಮೋನ್ನತ ಉದ್ದೇಶದೊಡಗೂಡಿರುವ ಭಾರತೀಯಸಂಸ್ಕೃತಿಯು  ಅರ್ಥಹೀನ-ಮೌಢ್ಯ ಹೇಗಾದೀತು?


``ಮಹರ್ಷಿಗಳಿಂದ ಪ್ರಕಾಶಿತವಾದ-ಪ್ರವರ್ತಿತವಾದ ಸಂಸ್ಕೃತಿ-ನಾಗರಿಕತೆಗಳಲ್ಲಿ ಭುವಿಯಿಂದ ದಿವಿಯವರೆಗೂ ನಿರಾಯಾಸವಾಗಿ ಕರೆದುಕೊಂಡು ಹೋಗಿಬಿಡುವ ಸುಮಾರ್ಗವಿದೆ`` ಎಂಬ ಶ್ರೀರಂಗಮಹಾಗುರುಗಳ ಮಾತುಗಳು   ಸ್ಮರಣೀಯವಾಗಿವೆ. ನಮ್ಮ ಸಂಸ್ಕೃತಿ-ನಾಗರಿಕತೆಗಳ ಸರಿಯಾದ ಅರಿವಿಲ್ಲದಿರುವುದೇ ಅದರ ಮೇಲಿನ ದ್ವೇಷಕ್ಕೆ ಕಾರಣ. ಅದು ಸಂಸ್ಕೃತಿಯ ದೋಷವಲ್ಲ, ನಮ್ಮ ದೃಷ್ಟಿದೋಷ. ಅದನ್ನು ನಾವು ಸರಿಪಡಿಸಿಕೊಳ್ಳಬೇಕೆಂಬುದು ಅವರ ನಿರ್ಣಯವಾಗಿತ್ತು. 


ಸಂಸ್ಕೃತಿಯ ವೈಜ್ಞಾನಿಕತೆ 


ಒಂದು ಪ್ರಯೋಗವನ್ನು ಯಾವುದೇ ಕಾಲದಲ್ಲಿ ಯಾರೇ ನಡೆಸಿದರೂ ಒಂದೇ ಫಲಿತಾಂಶವು ಸಿಕ್ಕುವುದಾದರೆ ಅದು ವೈಜ್ಞಾನಿಕವೆನಿಸಿಕೊಳ್ಳುತ್ತದೆ. ಭಾರತೀಯಸಂಸ್ಕೃತಿಯ ವಿಚಾರವನ್ನು ಈ ಮಾನದಂಡದಿಂದ ಅಳೆಯುವುದಾದರೆ ಸಾವಿರಾರು ವರ್ಷಗಳಿಂದ ಅನೇಕಾನೇಕ ಋಷಿ-ಮಹರ್ಷಿಗಳು ತಪಸ್ಯೆಯಿಂದ ಕಂಡ ವಿಚಾರಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿರುವುದನ್ನು ಉಪನಿಷತ್ತು-ಪುರಾಣ-ಇತಿಹಾಸಗಳು ಸಾರುತ್ತಿವೆ. ಈ ಸನಾತನ-ಸದಾತನಸತ್ಯವನ್ನು ತಲುಪಲು ವಿಧಿಸಲ್ಪಟ್ಟಿರುವ ವಿಧಾನಗಳೂ ಅನೇಕ ಋಷಿ ಮುನಿಗಳಿಂದ ಸುದೃಢಗೊಳಿಸಲ್ಪಟ್ಟಿವೆ. 


ಇತ್ತೀಚೆಗೆ ಸಾಮಾಜಿಕಜಾಲತಾಣಗಳಲ್ಲೂ ನಮ್ಮ ಸಂಸ್ಕೃತಿಯನ್ನು ನಾವೇ ಅರಿಯದಿರುವುದೇ ಸಂಸ್ಕೃತಿನಾಶಕ್ಕೆ ಕಾರಣವೆಂಬ ಕೂಗು ಕೇಳಿಬರುವುದು ಸಂತಸದ ವಿಷಯವಾದರೂ ಇಂದಿನ ವೈಚಾರಿಕಪ್ರಪಂಚವು ಯಾವುದೇ ವಿಚಾರವಾದರೂ  ಅದರ `ಏನು?-ಏಕೆ?-ಹೇಗೆ?`ಗಳಿಗೆ ಉತ್ತರವನ್ನಪೇಕ್ಷಿಸುತ್ತದೆ. ಆದ್ದರಿಂದ ಭಾರತೀಯಸಂಸ್ಕೃತಿಯ ಯಾವುದೇ ಕ್ರಿಯೆ/ವಿಚಾರವನ್ನು   ಸಮಾಜದಲ್ಲಿ ಉಳಿಸಬೇಕಾದರೂ ಅವುಗಳಲ್ಲಿನ ವಿಜ್ಞಾನವನ್ನು ಸಮಗ್ರವಾಗಿ ಅರಿಯುವುದು ಅನಿವಾರ್ಯವೇ ಸರಿ.   


ಇಲ್ಲಿ ಶ್ರೀರಂಗಮಹಾಗುರುಗಳ ಅದ್ಭುತ ಕೊಡುಗೆಯು ಅತ್ಯಂತ ಪ್ರಸಕ್ತವಾಗಿದೆ. ಪ್ರತಿಯೊಂದು ಪದಾರ್ಥವೂ ತನ್ನ ಸ್ಪರ್ಶ-ಸೇವನೆ-ಆಘ್ರಾಣಗಳಿಂದ ನಮ್ಮ ಭೌತಿಕ-ದೈವಿಕ-ಆಧ್ಯಾತ್ಮಿಕಕ್ಷೇತ್ರಗಳ ಮೇಲೆ ಮಾಡುವ ಪರಿಣಾಮಗಳನ್ನು ನಾಡೀವಿಜ್ಞಾನದ ಮೂಲಕ ಅವರು ನಿಖರವಾಗಿ ಅಳೆದು ತೋರಿಸಿಕೊಟ್ಟರು. ಭಾರತೀಯಸಂಸ್ಕೃತಿಯ ಪ್ರಮುಖ ಅಂಶಗಳಾದ  ಉಪನಯನ-ವಿವಾಹಾದಿ ಷೋಡಶಸಂಸ್ಕಾರಗಳಲ್ಲಿನ ಕ್ರಿಯಾಕಲಾಪಗಳಲ್ಲಿ ಬಳಸಲ್ಪಡುವ ಪ್ರತಿಯೊಂದು ಪದಾರ್ಥದ ಧರ್ಮವನ್ನೂ ಪ್ರಾಯೌಗಿಕವಾಗಿ ನಿರೂಪಿಸಿ ಆಯಾ ಕರ್ಮಗಳಲ್ಲಿ ಅವುಗಳ ಬಳಕೆಯ ಸೂಕ್ತತೆಯನ್ನು ತೋರಿಸಿಕೊಟ್ಟರು. 


ಸಂಸ್ಕೃತಿಯ ಆಚರಣೆಗಳಲ್ಲಿನ ಪ್ರತಿಯೊಂದಂಶವನ್ನೂ ನಿಖರವಾಗಿ ಅಳೆದೇ ವಿಧಿಸಲಾಗಿದೆಯೆಂಬುದಕ್ಕೆ ಸೂಚನಾಮಾತ್ರವಾಗಿ  ಕೆಲವು ಉದಾಹರಣೆಗಳೆಂದರೆ, ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ದರ್ಭೆಯು ಸ್ಪರ್ಶಮಾತ್ರದಿಂದಲೇ ಮನಸ್ಸು ಆಧಿದೈವಿಕ -ಆಧ್ಯಾತ್ಮಿಕ ಕ್ಷೇತ್ರಗಳಿಗೆ ಪ್ರವೇಶಿಸಲು ಹೇಗೆ ಪುಷ್ಟಿ ನೀಡುವುದೆಂಬುದನ್ನು ನಾಡೀವಿಜ್ಞಾನದ್ವಾರಾ ನಿರೂಪಿಸಿದರು. ಋಷಿದೃಷ್ಟಿಯಲ್ಲಿ ಆಹಾರಸ್ವೀಕಾರವು ಹೊಟ್ಟೆ ತುಂಬುವ ಕೆಲಸವಷ್ಟೇ ಅಲ್ಲ. ಅದೊಂದು ಯಜ್ಞ. ಉದರಕ್ಕೆ ಕೊಡುವ ಆಹಾರವು ದಾಮೋದರನವರೆಗೂ ತಲುಪುವಂತಿರಬೇಕೆನ್ನುವ ಮಹಾಗುರುಗಳ ಮಾತನ್ನು ಸ್ಮರಿಸಬಹುದಾಗಿದೆ. ಆಹಾರಸ್ವೀಕಾರದಲ್ಲಿ ಮನಸ್ಸು, ಪ್ರಾಣಾಪಾನಗಳ ಸ್ಥಾನವನ್ನು ಮುಟ್ಟಿ ಅಲ್ಲಿಗೆ ಆಹುತಿಯನ್ನು ತಲುಪಿಸುವ ಕಾರ್ಯವು ಜರುಗುವುದರೊಂದಿಗೆ ಭಗವತ್ಸ್ಮರಣೆಯಿಂದ ಕೂಡಿರಬೇಕೆಂದಾಗ ಪ್ರಾಣಾಪಾನಗಳ ಮೇಲೆ ಹತೋಟಿಯಿರಬೇಕಾಗುತ್ತದೆ. ಇದನ್ನು ಸಾಧಿಸಲು ನೆಲದಮೇಲೆ ಕಾಲುಮಡಿಸಿಕೂರುವ ಭಂಗಿ, ಪಂಚೆ ಮುಂತಾದವುಗಳಿಂದಾಗುವ ಕಟ್ಟು(ಬಿಗಿತ)ಗಳು  ಸಹಕರಿಸುತ್ತವೆ. ಇದಕ್ಕೊಪ್ಪುವ ಧರ್ಮವುಳ್ಳ ಪದಾರ್ಥಗಳನ್ನಾಯ್ದು ಅವುಗಳಿಂದ ತಯಾರಿಸಿದ ಮಣೆ/ಚಾಪೆಗಳನ್ನೇ ಆಸನಕ್ಕೂ ವಿಧಿಸಲಾಗಿದೆ. ಹೀಗೆ ಎಲ್ಲ ಅಂಶಗಳೂ ಗುರಿಗೊಪ್ಪುವಂತೆ-ಅರ್ಥಪೂರ್ಣವಾದವುಗಳಾಗಿವೆ. 


ಕಾಲದ ಪ್ರಭಾವದಿಂದಾಗಿ ಮಹರ್ಷಿಪ್ರಣೀತವಾದ ವಿಧಿ-ವಿಧಾನಗಳಲ್ಲಾದ ಪ್ರಕ್ಷಿಪ್ತಗಳನ್ನು ಗುರುತಿಸಲು ಮೂಲದ ಅರಿವು ಅವಶ್ಯಕವೆಂಬುದನ್ನು ನೆನಪಿನಲ್ಲಿಡೋಣ. 


ಬಾಹ್ಯಾಂತರಿಕ್ಷಕ್ಕೆ ಹಾರುವವನ ಉಡುಪು-ಆಹಾರಸೇವನಾಕ್ರಮಗಳ ವೈಚಿತ್ರ್ಯವು ಬಾಹ್ಯಾಂತರಿಕ್ಷದ ಪರಿಚಯವಿಲ್ಲದವನಿಗೆ ನಗೆಪಾಟಲಾಗಿರುವುದಲ್ಲವೇ? ಅಂತೆಯೇ ಅಂತರಂಗಪ್ರಪಂಚದ ಪರಿಚಯವಿಲ್ಲದ ನಮಗೆ ಆ ಪ್ರಪಂಚಗಳ ಆಧಾರದ ಮೇಲೆ ನಿಂತಿರುವ ಭಾರತೀಯ ಸಂಸ್ಕೃತಿಯು  ಮೌಢ್ಯವೆಂದೆನಿಸಿದರೆ ಅದು ನಮ್ಮ ಆಜ್ಞಾನವೇ ಹೊರತು ಮಹರ್ಷಿಗಳ ತಪ್ಪಲ್ಲ. 


ಮಹರ್ಷಿಸಂಸ್ಕೃತಿಯ ವಿಜ್ಞಾನವನ್ನರಿತು ಶ್ರದ್ಧೆಯಿಂದ ಆಚರಿಸಿದಾಗ ಅವರು ಅನುಭವಿಸಿದ ಆನಂದವು ಇಂದೂ ನಮ್ಮ ಪಾಲಿನದಾಗುವುದು ನಿಶ್ಚಿತವೆಂಬುದು ಜ್ಞಾನಿಸಮ್ಮತವಾಗಿದೆ. ಕರ್ಮಗಳನ್ನು ಮರ್ಮವರಿತು ಆಚರಿಸಬೇಕೆಂಬ ಮಹಾಗುರುಗಳ ಸೂತ್ರವನ್ನು ಸ್ಮರಿಸಿ ಮಹರ್ಷಿಗಳಿಗೂ ಮಹರ್ಷಿಭಾರತಕ್ಕೂ ನಮನವನ್ನರ್ಪಿಸುತ್ತೇನೆ. 


ಸೂಚನೆ: 9/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Thursday, November 24, 2022

ಕಳ್ಳತನವೂ ಒಂದು ಕಲೆಯಾಗಬಹುದೇ?(Kallatanavu Ondu Kaleyagabahude?)

ಶ್ರೀಮತಿ ಮೈಥಿಲಿ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)

 

 

'ಕಲೆ' - ಸಾಮಾನ್ಯ ಅರ್ಥ 

ಯಾವುದೇ ಕೆಲಸವನ್ನೂ ಅಚ್ಚುಕಟ್ಟಾಗಿ-ಸಮರ್ಪಕವಾಗಿ ಮಾಡಿದರೆ, ಅದೊಂದು ಕಲೆಯಾಗುವುದೆಂಬುದು ಸಾಮಾನ್ಯವಾದ ಅಭಿಪ್ರಾಯ. ಹಾಗೆಂದರೆ ಕಳ್ಳತನವು  ಕಲೆಯಾಗುವುದು ಎಂದರೇನರ್ಥ? ಎಂದಿಗೂ ಯಾರಿಂದಲೂ ಪತ್ತೆಹಚ್ಚಲಾಗದಂತೆ ಅತ್ಯಮೂಲ್ಯವಸ್ತುವನ್ನು ಕದ್ದರೆ ಆ ಕಳ್ಳನನ್ನು ಕಲಾವಂತನೆನ್ನಬೇಕಾಗುವುದಲ್ಲವೇ? ಇದು ಕಳ್ಳರಿಗೆ, ಕಳ್ಳತನಕ್ಕೆ ಪ್ರೋತ್ಸಾಹವನ್ನು ನೀಡಿ ಸಮಾಜದ ವ್ಯವಸ್ಥೆಯನ್ನು ಹಾಳುಮಾಡುವ ಕಾರ್ಯವಾಗುವುದು! ಅಂದಮೇಲೆ ಕಳ್ಳತನವನ್ನು  'ಕಲೆ'ಯೆಂದು ಶ್ಲಾಘಿಸುವುದು ಯೋಗ್ಯವಲ್ಲ ಎಂಬುದು ಸಿದ್ಧ. ಆದರೆ ಜ್ಞಾನಿಗಳು ಕಳ್ಳತನವನ್ನೂ  ಕಲೆಯಾಗಿ ಭಾವಿಸಿರುವ ಸನ್ನಿವೇಶವುಂಟು ಎಂದರೆ ಅದೊಂದು ಒಗಟೇ ಸರಿ.    

 

ಲೋಕವ್ಯವಹಾರವನ್ನು ಗಮನಿಸಿದರೂ ಸಹ ಕಳ್ಳನನ್ನೂ, ಆತನು ಕದ್ದ  ಮಾಲನ್ನೂ ಹುಡುಕಹೊರಡುವ ಪೋಲೀಸನಿಗೆ  ಕಳ್ಳನ ಹೆಜ್ಜೆಗಳ ಅರಿವು ಅತ್ಯಾವಶ್ಯಕ. ಕಳ್ಳರು ತಮ್ಮ ಕಾರ್ಯಕ್ಕೆ ಎಂತೆಂತಹ ಉಪಾಯಗಳನ್ನು ಕೈಗೊಳ್ಳಬಹುದು, ನಂತರ  ತಪ್ಪಿಸಿಕೊಳ್ಳಲು  ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬೆಲ್ಲವುಗಳ ಅರಿವು ಆತನಿಗೆ ಇರಲೇಬೇಕು. ಅಂದರೆ ಕಳ್ಳನಂತೆಯೇ ಈತನೂ ಯೋಚಿಸಿ ಕಳ್ಳತನದ ಸೂಕ್ಷ್ಮ-ಮರ್ಮ  ವಿಧಾನಗಳನ್ನು ಗುರುತಿಸಿಕೊಂಡಿರಬೇಕಾಗುವುದು ಅನಿವಾರ್ಯ. ಅಂದರೆ ಪೋಲೀಸನೂ ಸಹ ಕಳ್ಳತನದ 'ಕಲೆ'ಯನ್ನು(art) ಕಲಿಯಲೇಬೇಕಾಗುತ್ತದೆ. ಅತ್ಯಮೂಲ್ಯವಾದ ಪದಾರ್ಥವನ್ನು ಯಾರಿಗೂ ತಿಳಿಯದಂತೆ ಕದಿಯುವವ ಹಾಗೂ ಆತನನ್ನು ಹಿಡಿಯುವವ ಇಬ್ಬರೂ ಕಳ್ಳತನದ ಕಲೆಯನ್ನು ಬಲ್ಲವರು ಎನ್ನಬೇಕಾಗುವುದು.   


ಜ್ಞಾನಿಗಳ ಮತದಲ್ಲಿ 'ಕಲೆ'

'ಕಲೆ'ಯೆಂದರೆ ಅಂಶ, ಭಾಗ ಎಂದರ್ಥ. ಅಂಶವು ತನ್ನ ಅಂಶಿಯೊಡನೆ ಸಂಬಂಧವನ್ನು ಉಳಿಸಿಕೊಂಡರೆ ಮಾತ್ರ ಅದಕ್ಕೆ ಉಳಿವು, "ಅಂಶ" ಎಂಬ ಹೆಸರು. ಅಂಶವಾದ ಕೈಯನ್ನು ಹಿಡಿದರೆ ಅಂಶಿಯಾದ ದೇಹವನ್ನೇ ತಲುಪಿದಂತೆ.  ದೇಹದ ಭಾಗವಾದ(ಅಂಶವಾದ) ಕೈ ಏನಾದರೂ ತನ್ನ ಅಂಶಿಯಾದ ದೇಹದ ಸಂಬಂಧವನ್ನು ಕಳೆದುಕೊಂಡುಬಿಟ್ಟರೆ ಆ ಕೈ ನಮ್ಮನ್ನು ದೇಹದೆಡೆ ಒಯ್ಯುವುದಿಲ್ಲವಷ್ಟೇ. ಜ್ಞಾನಿಸಮ್ಮತವಾದ ಕಲೆಗಳೆಲ್ಲವೂ ಭಗವಂತನಿಂದಲೇ ಅರಳಿ ಬಂದಿವೆಯೆಂಬುದು  ಅವರ ದಿವ್ಯದೃಷ್ಟಿ ಗೋಚರವಾದ ಸತ್ಯ. ಆದ್ದರಿಂದ ಅವುಗಳು ಆ ಮಹಾಪುರುಷನ ಅಂಶಗಳೇ ಎಂಬುದು ಅವರ ಸಿದ್ಧಾಂತ. ಆದ ಕಾರಣದಿಂದ  ನಮ್ಮನ್ನು ಭಗವಂತನೆಡೆಗೆ(ಅಂಶಿಯೆಡೆಗೆ) ಒಯ್ಯುವ ವಿಧಾನಗಳೆಲ್ಲವನ್ನೂ 'ಕಲೆಗಳು' ಎಂದೇ ಹೆಸರಿಸಿದ್ದಾರೆ.  ಅವರು ಹೊರಗೆಡಹಿದ ಕಲೆಗಳೆಲ್ಲವೂ ನಮ್ಮನ್ನು ತಮ್ಮ ಅಂಶಿಯಾದ ಭಗವಂತನೆಡೆಗೇ ಒಯ್ಯಬಲ್ಲವು ಎಂಬುದು ಅವರ ಅನುಭವವೇದ್ಯ ಸತ್ಯ. ಹೀಗಲ್ಲದೆ, ಕೇವಲ  ಅಚ್ಚುಕಟ್ಟಾಗಿ, ಸಮರ್ಪಕವಾಗಿ ಮಾಡಿದ ಮಾತ್ರಕ್ಕೇ ಯಾವ ಕಾರ್ಯವೂ 'ಕಲೆ'ಯೆಂಬ ಹೆಸರಿಗೆ ಜ್ಞಾನಿಗಳ ಮತದಲ್ಲಿ ಪಾತ್ರವಾಗಲಾರದು.  



ಕಳ್ಳತನವೆಂಬ 'ಕಲೆ'

"ಭಗವಂತನ ಸಾಕ್ಷಾತ್ಕಾರವು ಮನುಷ್ಯಮಾತ್ರರ ಜನ್ಮಸಿದ್ಧ ಹಕ್ಕು" ಎಂಬ ಶ್ರೀರಂಗಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸುವುದು ಉಚಿತ. ಇಂತಹ ಜನ್ಮಸಿದ್ಧವಾದ ಹಕ್ಕನ್ನು ಕೈಬಿಟ್ಟು, ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ವಿವೇಕವನ್ನು ಕಳೆದುಕೊಂಡ ನಾವು ಭಗವಂತನನ್ನು ಮರೆತು, ಲೌಕಿಕದಲ್ಲಿ ಮಾತ್ರವೇ ಮುಳುಗಿ, ಆನಂದಘನನಾದ ಪರಮಪುರುಷನನ್ನು ತಲುಪಬೇಕೆನ್ನುವುದನ್ನೂ ಮರೆತಿರುವೆವು. ಶಂಕರಭಗವತ್ಪಾದರ ಶ್ಲೋಕವೊಂದು  ಇಲ್ಲಿ ಉಲ್ಲೇಖಾರ್ಹವಾಗಿದೆ. 

ಅಂಧಸ್ಯ ಮೇ  ಹೃತ ವಿವೇಕಮಹಾಧನಸ್ಯ 

 ಚೋರೈ: ಮಹಾಬಲಿಭಿರಿಂದ್ರಿಯ ನಾಮಧೇಯೈ: |

ಮೋಹಾಂಧಕಾರ ಕುಹರೇ ವಿನಿಪಾತಿತಸ್ಯ  

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ ||


ಇಂದ್ರಿಯಗಳೆಂಬ ಮಹಾಬಲಿಷ್ಠರಾದ ಕಳ್ಳರು ನಮ್ಮಲ್ಲಿಯ ವಿವೇಕವೆಂಬ ಮಹಾಧನವನ್ನು ಕದ್ದುಬಿಟ್ಟಿದ್ದಾರೆ. ವಿವೇಕಹೀನನನ್ನು ಮೋಹವು ಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಅದೊಂದು ಹಾಳು ಬಾವಿಯೇ ಸರಿ. ಅದರೊಳಗೆ ಬಿದ್ದವನು ಮೇಲೇರುವುದಾದರೂ ಹೇಗೆ? ಆದ್ದರಿಂದ ' ಸ್ವಾಮೀ ಲಕ್ಷ್ಮೀನೃಸಿಂಹನೇ, ಕರಾವಲಂಬನ ನೀಡಿ ಕಾಯಪ್ಪ' ಎಂದು ಪ್ರಾರ್ಥಿಸಲು ಆದೇಶವನ್ನು ನೀಡುತ್ತಾರೆ ಆಚಾರ್ಯರು. 


ಲೌಕಿಕದ ವ್ಯವಹಾರದಲ್ಲಿ, ಕಳ್ಳನನ್ನು ಹಿಡಿಯಲು, ಕಳ್ಳನ ಹೆಜ್ಜೆಗಳನ್ನು ಅರಿಯಬೇಕು ಎನ್ನುವಂತೆ ಜೀವನದಲ್ಲಿಯೂ ಇಂದ್ರಿಯರೂಪರಾದ ಕಳ್ಳರ ಹೆಜ್ಜೆಗಳನ್ನರಿಯಬೇಕು. ಆ ಕಳ್ಳರಿಗೇ ಅರಿವಾಗದೆ  ಅವರು ನಮ್ಮಿಂದ ಕದ್ದ  ವಿವೇಕಧನವನ್ನು ಮತ್ತೆ ಕದ್ದು ಪಡೆದಾಗ ನಮ್ಮ ಜೀವನದ ಮೂಲ ಸ್ರೋತಸ್ಸಾದ ಭಗವಂತನನ್ನು ತಲುಪಬಹುದಾಗಿದೆ. ಆದ್ದರಿಂದ, ಅವುಗಳನ್ನು ಕಟ್ಟಿಹಾಕಿ, ವಿವೇಕಧನವನ್ನು ಮತ್ತೆ ಅವರಿಂದ ಕದಿಯುವ ಕಳ್ಳತನವೇ  ಜ್ಞಾನಿಗಳ ದೃಷ್ಟಿಯಲ್ಲಿ 'ಕಲೆ'ಯಾಗಿದೆ ಎಂಬ ಶ್ರೀರಂಗಮಹಾಗುರುಗಳ ವಿವರಣೆಯು ಇಲ್ಲಿ ಸ್ಮರಣೀಯ. ಈ  ಅರ್ಥದಲ್ಲಷ್ಟೇ 'ಕಳ್ಳತನ'ವನ್ನು ಕಲೆಗಳ ಗುಂಪಿಗೆ ಸೇರಿಸಲಾಗಿದೆಯೇ ಹೊರತು, ಲೌಕಿಕವಾದ ಧನ-ಸಂಪತ್ತುಗಳನ್ನು ದರೋಡೆ ಮಾಡಿ, ಕದಿಯುವುದನ್ನು ಕಲೆಯಾಗಿ ಸರ್ವಥಾ ಪರಿಗಣಿಸಿಲ್ಲ ಎಂಬುದನ್ನು ಮನಗಾಣಬೇಕಾಗಿದೆ.     


ವಿವೇಕಮಹಾಧನವೇ ನಮ್ಮನ್ನು ಭಗವಂತನೆಡೆಗೊಯ್ಯುವ ಮಹಾಸಾಧನವಾಗುತ್ತದೆ. ಅದನ್ನು ಇಂದ್ರಿಯರೂಪರಾದ ಕಳ್ಳರಿಂದ ಮತ್ತೆ ಕದಿಯುವ 'ಕಲಾ'ವಂತರಾಗಲು ಭಗವಂತನಲ್ಲಿ ಭಕ್ತಿಯಿಂದ ಮೊರೆಯಿಡುವುದೊಂದೇ ಸುಲಭೋಪಾಯ. ಅದಕ್ಕಾಗಿ ನೃಸಿಂಹನಲ್ಲಿ ಪ್ರಾರ್ಥಿಸೋಣ.


ಸೂಚನೆ: 24/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Wednesday, June 22, 2022

ವಿದ್ಯೆ ಮಾತ್ರವೇ ಇದ್ದರೆ ಸಾಲದು (Vidye Matrave Iddare Saladu)

 ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


ಬೃಹದ್ಯುಮ್ನನೆಂಬ ಅರಸನು ಪರಾವಸು, ಅರ್ವಾವಸುವೆಂಬ ವಿದ್ವಾಂಸರಾದ ಋಷಿಪುತ್ರರನ್ನು ಯಜ್ಞವನ್ನು ನಡೆಸಿಕೊಡಬೇಕೆಂದು ಪ್ರಾರ್ಥಿಸಿದನು. ಯಜ್ಞಕಾಲದ ಮಧ್ಯದಲ್ಲಿ ಕಾರಣಾಂತರದಿಂದ ಪರಾವಸುವಿಗೆ ಮನೆಗೆ ಹೋಗಿಬರುವ ಮನಸ್ಸಾಯಿತು. ಸಂಜೆಯವೇಳೆಗೆ ಆಶ್ರಮವನ್ನು ತಲುಪಿದ ಆತನಿಗೆ ಆಶ್ರಮದ ಬಾಗಿಲಲ್ಲಿ ಪ್ರಾಣಿಯೊಂದು ಹಾರಲು ಸಿದ್ಧವಾಗಿರುವಂತೆ ಕಂಡಿತು. ಗಾಬರಿಗೊಂಡ ಪರಾವಸುವು ಕೂಡಲೇ ಅದನ್ನು ಸಂಹರಿಸಲು ಕೈಯಲ್ಲಿದ್ದ ಆಯುಧವನ್ನೆಸೆದ. ಆದರೆ ಆಯುಧದಿಂದ ಹತವಾದದ್ದು ಪ್ರಾಣಿಯಾಗಿರಲಿಲ್ಲ, ಅವನ ತಂದೆಯಾದ ರೈಭ್ಯಮಹರ್ಷಿ! ಅನಿರೀಕ್ಷಿತ ಘಟನೆಯಿಂದ ದುಃಖಾಕ್ರಾಂತನಾದ ಆತನು ತಪ್ಪಿಗಾಗಿ ಪರಿತಪಿಸುತ್ತ, ಅಂತ್ಯಕ್ರಿಯೆಗಳನ್ನು ಮಾಡಿ ಮುಗಿಸಿದ. ಯಜ್ಞಕಾರ್ಯಕ್ಕೆ ತಡೆಯಾಗಬಾರದೆಂದೆಣಿಸಿದ ಆತನು ಸಹೋದರನ ಬಳಿಸಾರಿ "ನಾನು ಯಜ್ಞಕಾರ್ಯವನ್ನು ಮುಂದುವರಿಸುತ್ತೇನೆ. ಅರಿಯದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವನ್ನು ನನ್ನ ಪರವಾಗಿ ನೀನು ಮಾಡಿ ಬಾ" ಎಂದ. ಅರ್ವಾವಸುವು ಸಹೋದರನಿಗಾಗಿ ದೈಹಿಕ-ಮಾನಸಿಕ ಪ್ರಯಾಸಗಳಿಂದ ಕಠಿಣ ಪ್ರಾಯಶ್ಚಿತ್ತವನ್ನಾಚರಿಸಿ ಯಜ್ಞಶಾಲೆಗೆ ಹಿಂತಿರುಗಿದ. ಆದರೆ ಪ್ರಾಯಶ್ಚಿತ್ತವನ್ನು ತಾನೇ ಆಚರಿಸಲಿಲ್ಲವಾದ್ದರಿಂದ ಪರಾವಸುವು ಪಾಪಭಾಗಿಯಾದ. ತತ್ಪರಿಣಾಮವಾಗಿ ಅರ್ವಾವಸುವನ್ನು ನೋಡಿದೊಡನೆಯೇ ಪರಾವಸುವಿನಲ್ಲಿ ದುಷ್ಟಪ್ರವೃತ್ತಿ ತಲೆದೋರಿ ಅಲ್ಲಿದ್ದವರನ್ನು ಕುರಿತು "ಈತನು ತಂದೆಯನ್ನೇ ಕೊಂದ ಮಹಾಪಾಪಿ. ಇವನ ಉಪಸ್ಥಿತಿಯು ಯಜ್ಞಶಾಲೆಯ ಪಾವಿತ್ರ್ಯಕ್ಕೆ ಭಂಗವನ್ನುಂಟುಮಾಡುತ್ತದೆ" ಎಂದ! ನಿಜವನ್ನು ತಿಳಿಸಲು ಅರ್ವಾವಸುವು ಎಷ್ಟೇ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಬೇಸರಗೊಂಡಾತನು ವನಕ್ಕೆ ತೆರಳಿ ತಪೋಮಗ್ನನಾದ.  ದೇವತೆಗಳು ಪ್ರತ್ಯಕ್ಷವಾಗಿ ವರ ನೀಡುತ್ತೇವೆಂದಾಗ ಅವನು "ನನ್ನ ತಂದೆಯು ಜೀವಂತನಾಗಲಿ ಮತ್ತು ನನ್ನ ಸಹೋದರನಿಗೆ ಸದ್ಬುದ್ಧಿಯುಂಟಾಗಲಿ" ಎಂದು ಪ್ರಾರ್ಥಿಸಿದ!  ತನಗೆ ಕೇಡು ಬಯಸಿದವನಲ್ಲಿ ಕ್ಷಮೆತೋರುವುದಲ್ಲದೆ ಆತನ ಒಳಿತಿಗಾಗಿ ಪ್ರಾರ್ಥನೆ!  ಅದೆಷ್ಟು ಕ್ಷಮೆ! ದಯೆ!


ದಯೆ(ಸರ್ವಭೂತಗಳಲ್ಲೂ ಕರುಣೆ), ಕ್ಷಮೆ(ದೇಹ-ಮನಸ್ಸುಗಳಿಗೆ ದುಃಖವನ್ನುಂಟುಮಾಡಿದರೂ ಸಮಾಧಾನವಾಗಿಯೇ ವರ್ತಿಸುವುದು)-ಇವೆರಡೂ ಆತ್ಮನಿಗೆ ಸ್ವಭಾವವಾದ-ಸಹಜಗುಣಗಳ ಪಟ್ಟಿಯಲ್ಲಿ ಪ್ರಥಮಸ್ಥಾನ ವಹಿಸುವುವು. ಯೋಗಿಗಳಿಗೆ ಸಹಜವೂ, ಸಾಮಾನ್ಯರಿಗೆ ಅಭ್ಯಾಸದಿಂದ ಮಾತ್ರವೇ ಲಭ್ಯವೂ ಆದ ಆತ್ಮಗುಣಗಳ ಫಲ ಶಾಂತಿಸಮೃದ್ಧಿ-ಸಮಾಧಾನ; ಅನಾತ್ಮಗುಣಗಳ ಫಲ ಮನಃಪತನ.


ಶ್ರೀರಂಗಮಹಾಗುರುಗಳು ವಿದ್ಯೆಗೆ ಕೊಟ್ಟಿರುವ ವಿವರಣೆಯನ್ನು ಸ್ಮರಿಸುವುದಾದರೆ-ಜ್ಞಾನಕ್ಕೆ(ಭಗವಂತನೆಡೆಗೆ) ಒಯ್ಯುವುದೇ ವಿದ್ಯೆ. ಈ ನೇರದಲ್ಲಿ ವಿದ್ಯೆಯೆನಿಸುವ ವೇದ-ಶಾಸ್ತ್ರಾದಿಗಳ ಅಭ್ಯಾಸವು ಬುದ್ಧಿಯ  ಮಟ್ಟಕ್ಕೇ ಸೀಮಿತವಾಗದೆ ಮನಸ್ಸನ್ನೂ ಸಂಸ್ಕರಿಸುವಂತಾಗಬೇಕು. ಹಾಗಾದಾಗ ನಮ್ಮೊಳಗಿನ ಆತ್ಮಗುಣಗಳನ್ನರಳಿಸಿ ಭಗವಂತನೆಡೆ ಸಾಗಲು ಸಹಕರಿಸುವುದರಿಂದ ವಿದ್ಯಾಭ್ಯಾಸವು ಅರ್ಥವತ್ತಾಗುವುದು. ಜೀವನದಲ್ಲಿ ಯಶಸ್ವಿಯಾಗಲು ವಿದ್ಯೆ ಮಾತ್ರವೇ ಸಾಲದು, ಆತ್ಮಗುಣಗಳೂ ಅಗತ್ಯವಾದ್ದರಿಂದ ಅವುಗಳನ್ನೂ ಗಳಿಸಿ ಶಾಂತಿ-ಸಮೃದ್ಧವಾದ  ಬಾಳಾಟ ನಡೆಸೋಣ.


ಸೂಚನೆ: 22/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.     

Monday, June 20, 2022

ಸದ್ದಡಗಿದಾಗ ಸತ್ಯ ಹೊರಬೀಳುತ್ತದೆ (Saddadagidaga Satya Horabiluttade)


ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)



ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿರಾಮನು ತನ್ನ ಬುದ್ಧಿಚಾತುರ್ಯದಿಂದ ಅನೇಕ ಸಂದಿಗ್ಧಪರಿಸ್ಥಿತಿಗಳಲ್ಲಿ ರಾಜನನ್ನು ಪಾರುಮಾಡುತ್ತಿದ್ದ. 


ಒಮ್ಮೆ, ಬಹುಭಾಷಾಪ್ರವೀಣನಾದ ವ್ಯಕ್ತಿಯೊಬ್ಬ ವಿಜಯನಗರಕ್ಕೆ ಆಗಮಿಸಿದ. ರಾಜನನ್ನು ಕಂಡು ಸವಾಲೊಂದನ್ನು ಮುಂದಿಟ್ಟ. "ನಾನು ಅನೇಕ ಭಾಷೆಗಳಲ್ಲಿ ಅತಿಸರಳ-ಸುಲಭವಾಗಿ ಮಾತನಾಡಬಲ್ಲೆ. ಆದರೆ ನನ್ನ ಮಾತೃಭಾಷೆ ಯಾವುದೆಂಬುದನ್ನು ನಿಮ್ಮ ಆಸ್ಥಾನದಲ್ಲಿ ಯಾರಾದರೂ ಪತ್ತೆಹಚ್ಚಬಲ್ಲರೇ?" ಎಂದ.  ಆಸ್ಥಾನದ ಪಂಡಿತರನೇಕರು ಆತನನ್ನು ಬೇರೆಬೇರೆ ಭಾಷೆಗಳಲ್ಲಿ ಮಾತನಾಡಿಸಿದಾಗ ಆತನು ಎಲ್ಲ ಭಾಷೆಗಳನ್ನೂ ಮಾತೃಭಾಷೆಯಲ್ಲಿ ಮಾತನಾಡುವಷ್ಟೇ ಸರಳವಾಗಿ ಮಾತನಾಡಲಾಗಿ, ಅವರೆಲ್ಲರೂ ಬಂದವನ ಮಾತೃಭಾಷೆಯನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿ ವಿಫಲರಾದರು. ಆಗ ತೆನಾಲಿರಾಮನು ತನಗೆ ಎರಡು ದಿನಗಳ ಅವಕಾಶನೀಡಿದರೆ ಪತ್ತೆ ಹಚ್ಚುವುದಾಗಿ ತಿಳಿಸಿದ. ರಾಜನು ಅದಕ್ಕೊಪ್ಪಿ ಅತಿಥಿಗೆ ಉಳಿಯಲು ಬೇಕಾದ ವ್ಯವಸ್ಥೆಗಳನ್ನು ಮಾಡಿಸಿದ.


ಮರುದಿನ ತೆನಾಲಿರಾಮನು ಅತಿಥಿಯನ್ನು ಊರನ್ನು ಪರಿಚಯಿಸಲು, ಇಡೀ ದಿನ ಎಲ್ಲ ಕಡೆಗೂ ಸುತ್ತಾಡಿಸಿ ರಾತ್ರಿವೇಳೆಗೆ ಅತಿಥಿಗೃಹಕ್ಕೆ ಕರೆತಂದುಬಿಟ್ಟ. ಸುತ್ತಾಡಿ ಬಳಲಿದ್ದ ಅತಿಥಿಯು ಭೋಜನಾನಂತರ ಗಾಢನಿದ್ರೆಯಲ್ಲಿ ಮುಳುಗಿದ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಯಾರೋ ಹೊಡೆದಂತಾಗಿ ಬೆದರಿ ಜೋರಾಗಿ ಕೂಗಿಕೊಂಡ.  ಯಾರೂ ಸುತ್ತಮುತ್ತ ಕಾಣದೆ ಮತ್ತೆ ನಿದ್ರಿಸತೊಡಗಿದ. 


ಬೆಳಗ್ಗೆ ಆಸ್ಥಾನಕ್ಕೆ ಬಂದು ಕುಳಿತ. ಸಭೆಗೆ ಆಗಮಿಸಿದ ರಾಜನು ರಾಮನನ್ನು "ಪಂಡಿತನ ಪ್ರಶ್ನೆಗೆ ಉತ್ತರವೇನು? ವಿವರಿಸು" ಎಂದಾಗ ರಾಮನು ವಿನಯದಿಂದ ತಿಳಿಸಿದ- "ರಾಜ, ಈತನ ಮಾತೃಭಾಷೆ ಕನ್ನಡ."  ಅತಿಥಿಗೆ ಆಶ್ಚರ್ಯವೋ ಆಶ್ಚರ್ಯ!  ರಾಮನ ಉತ್ತರ ಸರಿಯೆಂದು ಒಪ್ಪಿದ. ರಾಮನು "ಎಷ್ಟೇ ಭಾಷೆಗಳನ್ನು ಕಲಿತಿದ್ದರೂ ಮನುಷ್ಯನು ಗಾಢನಿದ್ರೆಯಿಂದ ತಟ್ಟನೆ ಎದ್ದಾಗ  ಬುದ್ಧಿಯಿಂದ ಕಲಿತವುಗಳಾವುವೂ ಹೊರಬೀಳುವುದಿಲ್ಲ. ತನಗೆ ಸಹಜವಾದ ಮಾತೃಭಾಷೆಯೇ ಹೊರಬರುವುದು" ಎಂದು ಹೇಳಿ ಹಿಂದಿನ ರಾತ್ರಿ ನಡೆದ ಘಟನೆಗಳನ್ನು ತಿಳಿಸಿದ.


ಈ ಕಥೆಯ ಉಲ್ಲೇಖವು ಬಹುವಿಧವಾಗಿ ಕಂಡುಬಂದರೂ ಗಮನಿಸಬೇಕಾದ ಅಂಶವಿಷ್ಟೇ-ಬುದ್ಧಿಯು ವಿಶ್ರಮಿಸುತ್ತಿರುವ ಸನ್ನಿವೇಶದಲ್ಲಿ ಸಹಜವಾದದ್ದು  ತಾನಾಗಿಯೇ ಹೊರಬೀಳುತ್ತದೆ. 


ಕಥೆಯು ಸಾರುವ ಸತ್ಯವನ್ನು ಮುಂದುವರಿಸುವುದಾದರೆ, ಇಂದ್ರಿಯಪಾಶಕ್ಕೆ ಸಿಕ್ಕಿಬಿದ್ದಿರುವ ಜೀವಿಗಳು ಅವುಗಳ ಪ್ರಚೋದನೆಯಂತೆಯೇ ತಮ್ಮ ತಮ್ಮ ಇಚ್ಛೆಗಳನ್ನು ವ್ಯಕ್ತಪಡಿಸುತ್ತವೆ. ಧರ್ಮ-ಅರ್ಥ-ಕಾಮ-ಮೋಕ್ಷಗಳೇ(ಧರ್ಮ-ಮೋಕ್ಷಗಳಿಗೊಳಪಟ್ಟ ಅರ್ಥ-ಕಾಮಗಳು)  ಪ್ರತಿಜೀವಿಯ ಬಯಕೆ-ಪುರುಷಾರ್ಥಗಳು(ಪುರುಷ=ಜೀವಿ, ಅರ್ಥ=ಅಪೇಕ್ಷೆ) ಎಂಬುದು ಜ್ಞಾನಿಗಳ ಮಾತು. ಆದರೆ ಧರ್ಮ-ಮೋಕ್ಷಗಳ ಬಯಕೆ ಲೋಕಸಾಮಾನ್ಯವಾಗಿ ಕಂಡುಬರುವ ವಿಚಾರವೇನಲ್ಲ ಎಂಬುದು ಸಾಮಾನ್ಯ ಸತ್ಯ. ಅಂದಮೇಲೆ ಇವು ಪುರುಷಾರ್ಥಗಳೆನಿಸುವುದು ಹೇಗೆ? ಜೀವಿಯು ಮನೋಬುದ್ಧಿ-ಇಂದ್ರಿಯಗಳ ಕಟ್ಟನ್ನು ಬಿಡಿಸಿಕೊಂಡು  ಸ್ವತಂತ್ರವಾದಾಗ, ತನ್ನದೇ ಆದ ಇಚ್ಛೆಯನ್ನು ಹೊರಗಿಡುತ್ತದೆ. ಜ್ಞಾನಿಗಳು ಜೀವಿಯ  ಈ ಸಹಜವಾದ ಸ್ಥಿತಿಯನ್ನನುಭವಿಸಿ ಅಲ್ಲಿ ವ್ಯಕ್ತವಾದ ಜೀವಿಯ ಬಯಕೆಗಳನ್ನೇ ಪುರುಷಾರ್ಥಗಳೆಂಬುದಾಗಿ ಸಾರಿದ್ದಾರೆ. 


ಅಂತಹ ಪುರುಷಾರ್ಥಮಯ ಜೀವನವನ್ನು ಕೈಗೊಂಡಾಗ ಜೀವನಿಗೆ ನೆಮ್ಮದಿ-ಪರಮಾನಂದಗಳು ಲಭ್ಯ. "ಜೀವನವೆಂಬುದು 'ಜೀವ' ಇದ್ದರೆ ತಾನೇ?", "ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಜೀವ-ನ ಆಗುತ್ತದೆ" ಎಂಬ ಶ್ರೀರಂಗಮಹಾಗುರುಗಳ ವಾಣಿಯು ಜೀವನದಲ್ಲಿ ಪುರುಷಾರ್ಥ(ಜೀವದ ಬಯಕೆಯ) ಸಾಧನೆಯೇ ಪರಮಗುರಿಯೆನ್ನುವುದನ್ನು ಎತ್ತಿ ಸಾರುತ್ತಿದೆ. ಇಂತಹ ಅರ್ಥವತ್ತಾದ ಜೀವನವನ್ನು ನಡೆಸಲು ಪ್ರಯತ್ನಶೀಲರಾಗೋಣ; ಸಫಲತೆಯನ್ನು ಪಡೆದು ನಲಿಯೋಣ.


ಸೂಚನೆ: 19/06/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.



Tuesday, April 26, 2022

ಭಾರತೀಯ ನಾಟ್ಯಕಲೆಯ ವೈಶಿಷ್ಟ್ಯ(Bharatiya Natyakaleya Vaishistya)

 ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾಟ್ಯವೆನ್ನುವುದು ವಿಶ್ವದಾದ್ಯಂತ ನಾನಾರೀತಿಗಳಲ್ಲಿ  ಬೆಳೆದುಬಂದಿದೆ. ಬ್ರೇಕ್ಡಾನ್ಸ್, ಬಾಲ್ ಡಾನ್ಸ್ ಮುಂತಾದ ಅನೇಕ ನಟನಶೈಲಿಗಳು ಪ್ರಚಲಿತವಾಗಿವೆ. ವಿಶ್ವದ ಎಲ್ಲೆಡೆಗಳಲ್ಲಿಯೂ ಅವರವರದೇ ಆದ ಕ್ರಮಗಳು ಬೆಳೆದುಬಂದಿವೆ. ಸಾಮಾನ್ಯವಾಗಿ ಇವೆಲ್ಲದರ ಉದ್ದೇಶವೂ ತಮ್ಮ ಕಲಾನೈಪುಣ್ಯದ ಪ್ರದರ್ಶನದಿಂದ ಪ್ರೇಕ್ಷಕರಿಗೆ ಮನರಂಜನೆಯನ್ನುಂಟುಮಾಡುವುದೇ ಆಗಿದೆ. ಅಲ್ಲದೇ ಇದರ ಹಿಂಬದಿಯಲ್ಲಿ ನರ್ತಿಸುವವರ ಕೀರ್ತಿಕಾಮನೆ, ಧನಕಾಮನೆಗಳೂ ಇರುವುದುಂಟು.  ಇದು ಎಲ್ಲ ದೇಶಗಳಿಗೂ ಅನ್ವಯಿಸುವ ಸಾಮಾನ್ಯ ಅಂಶವೇ  ಆಗಿದೆ.  


ಭಾರತವೂ ಸಹ ತನ್ನದೇ ಆದ ನಾಟ್ಯಶೈಲಿಗಳನ್ನು ಬೆಳೆಸಿಕೊಂಡು ಬಂದಿದೆ. ಭಾರತದ ವಿವಿಧ ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ಭರತನಾಟ್ಯ, ಕಥಕ್ಕಳಿ, ಒಡಿಸ್ಸಿ, ಮೋಹಿನಿಯಾಟ್ಟಂ, ಕೂಚಿಪುಡಿ ಮುಂತಾದ ಪ್ರಧಾನವಾದ ಎಂಟು ಶೈಲಿಗಳನ್ನು ನೋಡಬಹುದಾಗಿದೆ.  ಪ್ರತಿಯೊಂದು ಶೈಲಿಯೂ ತಾಳಬದ್ಧವಾದ  ಅಭಿನಯಗಳ ಮೂಲಕ ನವರಸಗಳನ್ನು ಪ್ರದರ್ಶಿಸುವಲ್ಲಿ ಕೆಲವು ಅಂಶಗಳಿಗೆ ಹೆಚ್ಚು ಪ್ರಾಧಾನ್ಯವನ್ನು ನೀಡುತ್ತವೆ. ನಟ-ನರ್ತಕಿಯರ ಆಭರಣ ಅಲಂಕಾರಗಳು ಅವರ ಸೌಂದರ್ಯವನ್ನು ಹೆಚ್ಚಿಸುತ್ತ  ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತವೆ.

ನಾಟ್ಯದ ಮೂಲ     

ಒಬ್ಬ ವ್ಯಕ್ತಿಯು ಅತ್ಯಂತ ನೋವಿನಿಂದಲೋ ದುಃಖದಿಂದಲೋ ನರಳುವಾಗ ಆ ನೋವು ಮುಖ-ಅಂಗಾಂಗಗಳ ಮೇಲೆ ತನ್ನನ್ನು ಮುದ್ರಿಸಿಕೊಳ್ಳುವುದನ್ನು ಸಾಮಾನ್ಯ ಜೀವನದಲ್ಲಿ ನೋಡಬಹುದಾಗಿದೆ. ಅಂತೆಯೇ ಸಂತೋಷ-ಉಲ್ಲಾಸಗಳೂ ಸಹ ತಮ್ಮ ಭಾವವನ್ನು ವ್ಯಕ್ತಿಯ ದೇಹದ ಮೇಲೆ ಒತ್ತುತ್ತದೆಯೆನ್ನುವುದು ಸಾಮಾನ್ಯಜ್ಞಾನ. ತೊಟ್ಟಿಲ ಕೂಸೂ ಸಹ ಸಂತೋಷವಾದಾಗ ಕೈ-ಕಾಲುಗಳನ್ನು ಉತ್ಸಾಹದಿಂದ ಆಡಿಸುತ್ತಾ ನಗುತ್ತದೆ. ಅದರ ನಗು, ಕೈಕಾಲುಗಳ ಚಲನೆಯೇ ಸಂತೋಷದ ಮಟ್ಟವನ್ನು ಸೂಚಿಸುವಂತಿರುತ್ತದೆ. ಹೀಗೆ ವಯೋಧರ್ಮ, ಪ್ರಕೃತಿಧರ್ಮಗಳಿಗನುಗುಣವಾಗಿ ಮನಸ್ಸಿನಲ್ಲೇಳುವ ಭಾವಗಳು   ತಮ್ಮದೇ ಆದ ರೀತಿಯಲ್ಲಿ ತಮ್ಮನ್ನು ತೋರ್ಪಡಿಸಿಕೊಳ್ಳುತ್ತವೆ.  ಈ ಭಾವಗಳೂ, ಅವುಗಳು ಉಂಟುಮಾಡುವ ಮುಖ-ಅಂಗ ವಿನ್ಯಾಸಗಳೂ ಜನಸಾಮಾನ್ಯರಿಗೆ  ಸುಪರಿಚಿತವಾಗಿರುವುದರಿಂದ  ಆಯಾ ಭಂಗಿಗಳ ಅನುಕರಣೆಯು ನೋಡುಗರನ್ನು ಒಡನೆಯೇ ಅದರ ಭಾವದೆಡೆ ಎಳೆಯುತ್ತದೆ. ಮಾನವನ  ಮನಸ್ಸಿನಲ್ಲಿ ಮಾತ್ರವಲ್ಲದೆ ಪಶುಪಕ್ಷಿಗಳಲ್ಲಿ ಸುಳಿಯಬಹುದಾದ ವಿವಿಧ ಭಾವಗಳ ಅನುಕರಣೆಯೇ ನಾಟ್ಯವಾಗಿ ಮನರಂಜನೆಗೆ ವಿಷಯವಾಗುವುದು. ಆದ್ದರಿಂದ ಮನಸ್ಸೇ ನಾಟ್ಯಕ್ಕೆ ಮೂಲ ಎನ್ನುವುದು ಎಲ್ಲ  ನಾಟ್ಯಗಳಿಗೂ ಅನ್ವಯಿಸುವ  ಸತ್ಯ.   


ಭಾರತೀಯ ನಾಟ್ಯಕಲೆಯ ಮೂಲ 

ಮನರಂಜನೆಯೇ ನಾಟ್ಯದ ಪ್ರಯೋಜನವೆನ್ನುವುದಾದರೆ ಭಾರತೀಯವಾದ ನಾಟ್ಯಗಳಿಗೂ ಇತರ  ನಾಟ್ಯಗಳಿಗೂ ಪರಿಣಾಮದಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಹಾಗಿದ್ದಲ್ಲಿ ಭಾರತೀಯ ನಾಟ್ಯಕಲೆಯ ವೈಶಿಷ್ಟ್ಯವೇನು? ಸನಾತನಾರ್ಯ ಭಾರತಮಹರ್ಷಿಗಳಿಂದ ಬೆಳೆಸಲ್ಪಟ್ಟಿರುವ ಈ ಕಲೆಯ ವೈಶಿಷ್ಟ್ಯವನ್ನರಿಯಲು ಮಹರ್ಷಿಗಳ ಮನೋಭೂಮಿಕೆಯಲ್ಲಾಡಿದ ವಿಚಾರಗಳನ್ನು ತಿಳಿಯುವುದು ಆವಶ್ಯಕ. ಈ ನಿಟ್ಟಿನಲ್ಲಿ ಮಹರ್ಷಿಹೃದಯವೇದಿಗಳಾದ ಶ್ರೀರಂಗಮಹಾಗುರುಗಳು ನೀಡಿದ ವಿವರಣೆಯು ಉಲ್ಲೇಖಾರ್ಹವಾಗಿದೆ. 



ಮನಸ್ಸಿನಲ್ಲಾಡುವ ವಿಚಾರಗಳೆಲ್ಲವೂ ಇಂದ್ರಿಯಪ್ರಪಂಚದಿಂದ ಇಂದ್ರಿಯಗಳ ಮೂಲಕವೇ ಬರುವುವೆಂಬುದು ಸಾಮಾನ್ಯಜ್ಞಾನ. ಆದರೆ ಭಾರತೀಯಮಹರ್ಷಿಗಳು ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂಸೆಳೆದು ಮನಸ್ಸನ್ನು ಒಳಪ್ರಪಂಚದತ್ತ ತಿರುಗಿಸಿದರು. ಹಿಂದೆ ಬೆಳಗುವ ದೇವತಾಶಕ್ತಿಗಳನ್ನೂ, ಅವುಗಳಿಗೂ ಶಕ್ತಿಯನ್ನೀವ ಮನಸಸ್ಪತಿಯಾದ ಪರಮಪುರುಷನನ್ನು ಕಂಡರು. ಆ ದರ್ಶನಗಳಿಂದ ಅವರಲ್ಲಿ ಲ್ಲಿ ತುಂಬಿದ ದೈವೀರಸದ ಪರಮಾನಂದಭಾವವು  ಮುಂದೆ ಅವರ ಮನದುಂಬಿ  ತನ್ನದೇ ಆದ ರೀತಿಯಲ್ಲಿ ಮುಖ-ಅಂಗಾಂಗಗಳ ಮೇಲೆಯೂ ಪ್ರಕಟಗೊಂಡಿತು.  ಆ ಭಾವ-ಭಂಗಿಗಳು ಸುಸಂಸ್ಕಾರಿಗಳಾದ ನೋಡುಗರನ್ನು ಭಾವಮೂಲವಾದ ಒಳ ಅನುಭವಸ್ಥಾನಕ್ಕೆ ಕರೆದೊಯ್ಯುವುವೆಂಬುದನ್ನು  ಅರಿತ ಮಹರ್ಷಿಗಳು ಅವುಗಳನ್ನು ಚಿತ್ರ-ಶಿಲ್ಪಗಳ ಮೂಲಕ ಹೊರಗಿಟ್ಟರು. ಆ ಭಾವಗಳನ್ನೇ ನಾಟ್ಯದ ರೂಪದಲ್ಲಿ ತೋರಲು ನಾಟ್ಯಶಾಸ್ತ್ರವನ್ನೂ ತಂದರು. 

ಆದ್ದರಿಂದ ಭಾರತೀಯ ನಾಟ್ಯಕಲೆಯ ಮೂಲ ಮನಸ್ಸಲ್ಲ, ಮನಸ್ಸಿಗೂ ಹಿಂದಿರುವ ಶಕ್ತಿಗಳು. ಮನಸ್ಸು ಒಂದು ಮಾಧ್ಯಮವಷ್ಟೆ. 


ನಾಟ್ಯ -ಒಂದು ಕಲೆ 

'ಕಲೆ'ಯೆಂಬ ಪದವು ಅಂಶ(ಭಾಗ) ಎಂಬರ್ಥವನ್ನೊಳಗೊಂಡಿದೆ.  ಅಂಶವು ತನ್ನ ಮೂಲವಾದ ಪೂರ್ಣದೊಂದಿಗೆ ಸಂಬಂಧವನ್ನುಳಿಸಿಕೊಂಡಿದ್ದರೆ ಮಾತ್ರ ಅಂಶವೆನಿಸಿಕೊಳ್ಳುವುದು. ಅಂತೆಯೇ ನಾಟ್ಯವೂ  ತನ್ನ ಮೂಲವಾದ  ಮನಸಸ್ಪತಿಯೊಂದಿಗೆ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡಾಗ ಮಾತ್ರವೇ 'ಕಲೆ'ಯಾಗುವುದು.  "ಕಲೆಯು ನೆಲೆಯನ್ನು ಮುಟ್ಟಿಸುವಂತಿರಬೇಕು" ಎನ್ನುವ ಶ್ರೀರಂಗಮಹಾಗುರುಗಳ ಸೂತ್ರರೂಪವಾದ ಮಾತು ಇಲ್ಲಿ ಸ್ಮರಣೀಯ. 

ಕೇವಲ ಭಾವಾಭಿನಯ ಮಾತ್ರವಿದ್ದಾಗ ಅದು ನೃತ್ತವೆನಿಸಿಕೊಳ್ಳುತ್ತದೆ. ತಾಳ-ಲಯಬದ್ಧವಾದಾಗ ನೃತ್ಯವೆನಿಸುವುದು. ಸಂಗೀತದೊಡನೆ ಸಮ್ಮಿಲಿತವಾಗಿ ಭಾವ-ರಾಗ-ತಾಳಗಳಿಂದ ಕೂಡಿದಾಗ   ನಾಟ್ಯಕಲೆಯಾಗಿ ಜನಮನವನ್ನು ಆಕರ್ಷಿಸುತ್ತದೆ.  ದೈವೀಭಾವದಲ್ಲಿ ಮುಳುಗಿ ಅ ಭಾವವನ್ನು ಹೊರತರಬಲ್ಲ ನರ್ತಕ-ನರ್ತಕಿಯರ ನಾಟ್ಯವು  ಸುಸಂಸ್ಕೃತರಾದವರನ್ನು ಜೀವನದ ಒಳ ಸತ್ಯದತ್ತ ಅವಶ್ಯವಾಗಿ ಸೆಳೆಯಬಲ್ಲದು. ನಾಟ್ಯದೊಂದಿಗೆ ಸೇರುವ ಸಂಗೀತವೂ ಸಹ  ಭಾರತೀಯ ಸಂಸ್ಕೃತಿಯಲ್ಲಿ ಸೃಷ್ಟಿಮೂಲವಾದ ಪ್ರಣವದ ವಿಸ್ತಾರವೇ ಆಗಿದೆ. 

ತಕಾರ-ಲಕಾರಗಳು ಶಂಕರ-ಶಕ್ತಿಯರನ್ನು ಸೂಚಿಸುವುದರಿಂದ 'ತಾಳ'ವು ಆ ಶಿವ-ಶಿವೆಯರ ಸಮ್ಮೇಳನವನ್ನೇ ಸೂಚಿಸುತ್ತದೆಂಬುದು ಜ್ಞಾನಿಗಳ ನೋಟ. ಶಿವ-ಶಕ್ತಿಯರ, ಸೃಷ್ಟಿ-ಸ್ಥಿತಿ-ಲಯ ಲೀಲಾವಿಲಾಸಗಳನ್ನೇ ಅವರ ದಿವ್ಯನಾಟ್ಯವೆಂಬುದಾಗಿ ನಮ್ಮ  ಮಹರ್ಷಿಗಳು ಕಂಡಿದ್ದಾರೆ. ಆದ್ದರಿಂದ        ಬ್ರಹ್ಮಾಂಡವೇ  ಪರಮಾತ್ಮನ ನಾಟ್ಯರಂಗವೆಂಬ ಸತ್ಯಾರ್ಥವನ್ನು ಸಾರಿದರು.

ನಾಟ್ಯದ ಜೊತೆಗೂಡುವ ವೀಣಾ-ವೇಣು-ಮೃದಂಗಾದಿ ವಾದ್ಯಗಳ ನಾದಗಳು ಮಹರ್ಷಿಗಳ ಅಂತ:ಶ್ರವಣ ಗೋಚರವಾದ ದಶವಿಧ ನಾದಗಳ ಹೊರರೂಪಗಳೇ ಆಗಿವೆ. ಈ  ಹೊರ ನಾದಗಳೂ ನಮ್ಮನ್ನು ತಮ್ಮ ಒಳಮೂಲದತ್ತ ಸೆಳೆಯಬಲ್ಲವು.  ಆದ್ದರಿಂದ ಭಾವ-ರಾಗ-ತಾಳಗಳಿಂದ ಕೂಡಿ ಜನರನ್ನು ರಂಜಿಸುವ ನಾಟ್ಯಕಲೆಯು ತನ್ನ ಪ್ರತಿಯೊಂದು ಅಂಶದಿಂದಲೂ ಜನಮನವನ್ನು ಭಗವಂತನೆಡೆ ಸೆಳೆಯಬಲ್ಲದಾದ್ದರಿಂದ ಅದೊಂದು ಕಲೆಯೇ ಆಗುವುದೆಂಬುದು ಜ್ಞಾನಿಗಳ ತೀರ್ಮಾನವಾಗಿದೆ. 


ನಾಟ್ಯ-ಒಂದು ವೇದ 

ನಾಟ್ಯವು 'ನಾಟ್ಯವೇದ`ವೆಂದೂ ಪ್ರಸಿದ್ಧವಾಗಿದೆ. ಯಾವುದೇ ವೇದಮಂತ್ರಗಳೂ ಕಾಣಿಸಿಕೊಳ್ಳದಿರುವ ನಾಟ್ಯವನ್ನು ವೇದವೆನ್ನುವುದು ಸೂಕ್ತವೇ? ಜ್ಞಾನಿಗಳ ಮತದಲ್ಲಿ ವೇದವೆನ್ನುವುದು ಮಂತ್ರರಾಶಿಯನ್ನೊಳಗೊಂಡ ಸಾಹಿತ್ಯಮಾತ್ರವಲ್ಲ. ಸೃಷ್ಟಿಮೂಲಶಕ್ತಿ-ಭಗವಂತನೇ ಋಷಿದೃಷ್ಟಿಯಲ್ಲಿ 'ವೇದ' ಎಂಬುದಾಗಿದೆ. ಅತೀಂದ್ರಿಯ ಪ್ರಪಂಚದಿಂದಲೇ ಉಗಮವಾಗುವ, ಅಂತ:ಶ್ರವಣಗೋಚರವಾದ ಮಂತ್ರಗಳೂ ವೇದವೆಂದು ಕರೆಯಲ್ಪಟ್ಟುದು ಈ ಹಿನ್ನೆಲೆಯಿಂದಲೇ. (ಅವುಗಳನ್ನೇ ಪುಸ್ತಕದಲ್ಲಿ ಉಲ್ಲೇಖಿಸಿದಾಗ ಪುಸ್ತಕವೂ ವೇದವೆನಿಸುವುದು). ಈ ಮಂತ್ರಗಳನ್ನು ಶ್ರುತವಾದಂತೆಯೇ ಉಚ್ಚರಿಸಿದಾಗ ಅವು ತಮ್ಮ ಮೂಲವಾದ ದೈವೀಸ್ಥಾನಕ್ಕೇ ಪಠಿಸುವವರನ್ನೂ ಕೇಳುವವರನ್ನೂ ಏರಿಸಬಹುದು. ನಾಟ್ಯವೂ ವೇದದಂತೆಯೇ  ಅತೀಂದ್ರಿಯ  ಪ್ರಪಂಚದಲ್ಲೇ ಜನಿಸಿ, ವೇದದಂತೆಯೇ ಪರಂಜ್ಯೋತಿಯ ಕಡೆಗೆ ಜೀವಿಗಳನ್ನು ಕರೆದೊಯ್ಯಬಲ್ಲುದು. ಆದ್ದರಿಂದಲೇ "ಪರಾತ್ಮಾ ವೇದ್ಯತೇ ಯೇನ ಸ ವೇದೋ ವೇದ ಉಚ್ಯತೇ"(ಪರಮಾತ್ಮನನ್ನು ತಿಳಿಯಲು ಸಹಾಯಕವಾದುದೆಲ್ಲವೂ ವೇದವೇ)  ಎಂಬ ಆರ್ಷವಾಣಿಯಂತೆ ನಾಟ್ಯಕ್ಕೂ ವೇದವೆಂಬ ಹೆಸರು ಸೂಕ್ತವೇ ಆಗಿದೆಯೆಂಬ ಮಹಾಗುರುಗಳ ವಿವರಣೆಯನ್ನು ಸ್ಮರಿಸುತ್ತೇವೆ.  

   

ನಾಟ್ಯ-ಒಂದು ಯಜ್ಞ 

ಯಜ್ಞವೆಂದರೆ ದೇವತಾಪ್ರೀತಿಯನ್ನುಂಟು ಮಾಡುವ ಕ್ರಿಯೆ. ನಾಟ್ಯವು ಕಲೆಯೇ ಆಗುವ ಪಕ್ಷದಲ್ಲಿ ನರ್ತಕ-ನರ್ತಕಿಯರು ದೇವಭಾವಕ್ಕೇರಿ ಅದನ್ನು ತಮ್ಮ ಹೊರ ಅಂಗಾಂಗಗಳ ಮೂಲಕ ಹೊರತರುವ ಕ್ರಿಯೆಯಾಗುತ್ತದೆ. ಹೀಗೆ ದೈವೀಭಾವಕ್ಕೇರುವುದೇ ದೇವತಾಪ್ರೀತಿಕರವಾದದ್ದು. ಆದ್ದರಿಂದ ನಾಟ್ಯಕಲೆಯು ಯಜ್ಞವೇ ಸರಿ ಎಂಬುದು ಜ್ಞಾನಿಜನಸಮ್ಮತವಾದ ಮಾತಾಗಿದೆ. 

ದೇವಾದಿದೇವನಾದ ಪರಮಾತ್ಮನ ಭಾವಕ್ಕೇರಿದಾಗ ಅಲ್ಲಿ ಮೂಡಿಬರುವುದು ಶಾಂತರಸ. ಆತನಿಂದ ವಿಸ್ತಾರವಾದ ಶಕ್ತಿಗಳು ಮತ್ತು ಅವರ ವಿಲಾಸಗಳನ್ನು ತೋರಿಸುವಾಗ ಅಲ್ಲಿ ತ್ರಿಗುಣಗಳ ಪಾತ್ರವು ಸೇರುತ್ತದೆ. ತ್ರಿಗುಣಗಳೇ ಶೃಂಗಾರಾದಿ ರಸಗಳನ್ನೊಳಗೊಂಡ ಸಮಸ್ತ ಲೋಕವ್ಯಾಪಾರಗಳನ್ನೂ ಆವರಿಸಿವೆ. ಆದ್ದರಿಂದ ನಾಟ್ಯದಲ್ಲಿ ರಸಗಳೆಲ್ಲಕ್ಕೂ ಮೂಲವಾದ ಶಾಂತರಸದ ಅಭಿನಯದಿಂದ ಪ್ರಾರಂಭವಾಗಿ, ನವರಸಗಳನ್ನೂ ಪ್ರದರ್ಶಿಸಿ ಕೊನೆಗೆ ಶಾಂತರಸದಲ್ಲೇ ನಿಲ್ಲಿಸುವ ಪದ್ಧತಿಯಿದೆ. ಅಂದರೆ ಜನರಿಗೆ ಪರಿಚಿತವಾದ ರಸಗಳನ್ನೇ ತೋರುತ್ತಾ ಅವರನ್ನಾಕರ್ಷಿಸಿ ಮೆಲ್ಲಗೆ ಶಾಂತರಸದಲ್ಲಿ ನಿಲ್ಲಿಸುವ ಜಾಣ್ಮೆಯನ್ನು ಇಲ್ಲಿ ಕಾಣಬಹುದಾಗಿದೆ. ನಾಟ್ಯಂ ಭಿನ್ನರುಚೇರ್ಜನಸ್ಯ ಬಹುದಾಪ್ಯೇಕಂ  ಸಮಾರಾಧನಂ ಎಂದು ಮಹಾಕವಿ ಕಾಳಿದಾಸನು ಕೊಂಡಾಡುವಂತೆ ನಾನಾ ರಸಗಳಲ್ಲಿ ಅಭಿರುಚಿಯುಳ್ಳ  ಜನರೆಲ್ಲರನ್ನೂ ತೃಪ್ತಿಗೊಳಿಸುವ ಸಮಾರಾಧನೆಯೇ ಆಗಿದೆ. 

ಇಂದಿನ ಭಾರತೀಯ ನಾಟ್ಯಕಲೆಯು ಮನಮೋಹಕವಾಗಿ ಭಾವ-ಭಂಗಿಗಳನ್ನು ಪ್ರದರ್ಶಿಸುತ್ತಿರುವುದು ನಿಸ್ಸಂಶಯ. ಇದರೊಂದಿಗೆ ಯೋಗದೃಷ್ಟಿಯೂ ಸಮ್ಮಿಲಿತವಾದಾಗ ಇದು ನಿಜವಾದ ನಾಟ್ಯಕಲೆಯಾಗುವುದರಲ್ಲಿ ಸಂಶಯವಿಲ್ಲ. ಆ ಗುರಿಯತ್ತ ಇಂದಿನ ನಾಟ್ಯಕಲಾಭ್ಯಾಸವು ಸಾಗಲೆಂದು ಆಶಿಸೋಣ.


ಸೂಚನೆ: 21/04/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.

Sunday, March 27, 2022

ಘೋರಸಾಗರದಲ್ಲಿ ಆನಂದ ವಿಹಾರ! (Ghorasaagaradalli Anandavihaara!)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


ಅಪಾರವಾದ ಜಲರಾಶಿ, ಅಪ್ಪಳಿಸಿ ಆರ್ಭಟಿಸುವ ಅಲೆಗಳು, ತಳಕಾಣದಷ್ಟು ಆಳ, ಅಲ್ಲಿ ವಾಸಿಸುವ ಕ್ರೂರ ಜಲಜಂತುಗಳು-ಇಷ್ಟೆಲ್ಲ ಇರುವಾಗ ಸಾಗರವು  ಘೋರವಲ್ಲದೆ ಮತ್ತೇನು? ಜ್ಞಾನಿಗಳನೇಕರು ಸಾರುವುದು - ಈ ಸಂಸಾರವೂ  ಒಂದು ಬಲುಘೋರವಾದ ಸಾಗರವೇ. ತೃಷ್ಣೆ(ಆಸೆ)ಯೆಂಬ ದೊಡ್ಡ ಜಲರಾಶಿ. ಅದರಲ್ಲಿ ಭೋರ್ಗರೆಯುತ್ತಾ ಅಪ್ಪಳಿಸುವ ಮೋಹವೆಂಬ ಅಲೆಗಳು;  ಈ ಅಲೆಗಳನ್ನು ಮತ್ತೂ ಕೆರಳಿಸುವ ಮದನ(ಕಾಮ)ಮಹಾಮಾರುತ;  ನಕ್ರ(ಮೊಸಳೆ)ಗಳಂತೆ ಕರಾಳವಾದ  ಮಡದಿ, ಪುತ್ರ ಮುಂತಾದ  ಬಂಧುತ್ವ. ಈ ಅಭಿಪ್ರಾಯಗಳು ನೂರಕ್ಕೆ ನೂರರಷ್ಟು ಸತ್ಯ. ಮನಸ್ಸಿನಲ್ಲೇಳುವ ಆಸೆಗಳನ್ನು ಪೂರೈಸಿಕೊಳ್ಳಲೋಸುಗ ಅಲೆದಾಟ-ಪರದಾಟಗಳು, ಅಲೆಗಳಂತೆ ಒಂದರ ಹಿಂದೊಂದು ಪರಂಪರೆಯಾಗಿ ಬಂದೊದಗುವ ಕಷ್ಟ ಕಾರ್ಪಣ್ಯಗಳು, ತಾಪತ್ರಯಗಳು, ಭೌತಿಕ-ದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳಲ್ಲಿನ ದುಃಖಗಳು, ಮಡದಿ-ಮಕ್ಕಳಿಂದೊದಗುವ ಸಂಕಷ್ಟಗಳು, ಗೃಹಸ್ಥನ ಜೀವನವನ್ನು ಮುತ್ತಿಗೆ ಹಾಕುತ್ತವೆ. ನೆಮ್ಮದಿ ಗಳಿಸುವ ಬಗ್ಗೆ ಚಿಂತಿಸಲೂ ಅವಕಾಶವಿರುವುದಿಲ್ಲವಲ್ಲ? ಇಂತಿರುವಾಗ ಗೃಹಸ್ಥನು ಇದರಿಂದ ಪಾರಾಗಿ ಭಗವಂತನನ್ನು ಪಡೆದು ಸುಖಿಸುವುದೆಂದು? ಹೇಗೆ? ಇಷ್ಟಿದ್ದರೂ, ಭಾರತದಲ್ಲಿ ಅನೇಕ ಗೃಹಸ್ಥರು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಶಾಂತಿಯಿಂದ ಬದುಕಿ ಬಾಳಿದ ಕಥೆಗಳನ್ನು  ಕೇಳುತ್ತೇವೆ. ತಪಸ್ಯೆಯನ್ನಾಚರಿಸಿ ಬ್ರಹ್ಮಜ್ಞಾನಿಗಳಾಗಿಯೂ, ಬ್ರಹ್ಮರ್ಷಿಗಳಾಗಿಯೂ ಇದ್ದ ಅನೇಕರು ಗೃಹಸ್ಥರಾಗಿ ಲೌಕಿಕಸುಖಗಳಷ್ಟನ್ನೂ ಅನುಭವಿಸಿ, ಅನೇಕ ಮಕ್ಕಳನ್ನೂ ಪಡೆದವರಾಗಿದ್ದರು. ಚ್ಯವನ-ಸೌಭರಿ-ವಸಿಷ್ಠರೇ ಮುಂತಾದವರು ಇದಕ್ಕೆ ಉದಾಹರಣೆಗಳು. ನವ ವಧೂ-ವರರನ್ನು 'ವಸಿಷ್ಠ-ಅರುಂಧತಿಯರಂತೆ ಆದರ್ಶ ದಾಂಪತ್ಯವನ್ನೆಸಗಿ ಸುಖಿಸಿ' ಎಂದು ಆಶೀರ್ವದಿಸುವುದು ಸಂಪ್ರದಾಯ. ರಾಜಾಧಿರಾಜರನೇಕರು, ತಮ್ಮ  ಕುಟುಂಬದಷ್ಟೇ ಸಣ್ಣ ಸಂಸಾರವಲ್ಲದೇ, ದೊಡ್ಡ ಸಾಮ್ರಾಜ್ಯವನ್ನೇ ಆಳುತ್ತಾ, ಪ್ರಜೆಗಳೆಲ್ಲರನ್ನೂ ತಮ್ಮ  ಮಕ್ಕಳಂತೆ ಭಾವಿಸಿ ರಕ್ಷಿಸಿ, ಪೋಷಿಸುತ್ತಿದ್ದರು. ಇಷ್ಟೊಂದು ಅಂಟು-ಜವಾಬ್ದಾರಿಗಳೊಂದಿಗೆ ಅಪಾರವಾದ ಹೊಣೆಗಾರಿಕೆಯನ್ನು ಹೊತ್ತಿದ್ದ ಅವರು ವೃದ್ಧಾಪ್ಯದಲ್ಲಿ ಎಲ್ಲವನ್ನೂ ತಮ್ಮ ಪುತ್ರರಿಗೆ ಒಪ್ಪಿಸಿ ತಪೋನಿರತರಾಗುವಷ್ಟು ವೈರಾಗ್ಯಸಂಪನ್ನರೂ ಆಗಿ ಭಗವಂತನನ್ನು ತಲುಪುತ್ತಿದ್ದರು. 


ಇವರೆಲ್ಲರಿಗೂ ಸಂಸಾರವು ಸಾಗರವಾಗಿರಲಿಲ್ಲವೇ? ಅದು ಘೋರವಾಗಿರಲಿಲ್ಲ ಹೇಗೆ?  ಅವರಿಗೆ  ಲೌಕಿಕವಾದ ಸುಖಾನುಭವದೊಂದಿಗೆ ನೆಮ್ಮದಿ ಸಾಧಿಸುವುದು ಹೇಗೆ ಸಾಧ್ಯವಾಯಿತು? ಸಾಗರವು ಎಷ್ಟೇ ಘೋರವಾಗಿದ್ದರೂ ಸುರಕ್ಷಿತ ನೌಕೆಯೊಂದರಲ್ಲಿ ಕುಳಿತು  ವಿಹರಿಸಿದಾಗ  ಅದೆಷ್ಟು ಸೊಗಸು! ಎಷ್ಟು ಆನಂದ!  ಹಾಗೆ ವಿಹರಿಸುತ್ತಲೇ ದಡವನ್ನೂ ಸೇರಿಬಿಡಬಹುದಲ್ಲವೆ? ಅಂತೆಯೇ  ಭಾರತೀಯಮಹರ್ಷಿಗಳು ಈ ಸಂಸಾರಸಾಗರದಲ್ಲಿ ವಿಹರಿಸಿ ಸುಖವನ್ನು ಪಡೆಯುವುದರ ಜೊತೆಗೇ ಇದರ ಪಾರವನ್ನು ತಲುಪಲೂ, ಶಾಶ್ವತಸುಖ-ಶಾಂತಿಧಾಮವನ್ನು  ಹೊಂದಲೂ ಪುರುಷಾರ್ಥ(ಧರ್ಮ-ಅರ್ಥ-ಕಾಮ-ಮೋಕ್ಷ)ಮಯವಾದ ಜೀವನವೆಂಬ ಸುರಕ್ಷಿತ ನೌಕೆಯನ್ನು ತೋರಿದರು. ಈ ಜೀವನಕ್ಕೆ ಬೇಕಾದ ಶಿಕ್ಷಣವನ್ನು  ಬಾಲ್ಯದ ವಿದ್ಯಾಭ್ಯಾಸದಲ್ಲೇ ಪಡೆದು ಪಾರಂಗತರಾದ ನಂತರವೇ ಸಂಸಾರ ಜೀವನಕ್ಕೆ ಅನುಮತಿಯನ್ನು ನೀಡಲಾಗುತ್ತಿತ್ತು.  ಇದು ಮಹರ್ಷಿಗಳ ವಿದ್ಯಾ(ಶಿಕ್ಷಣ)ಪದ್ಧತಿಯ ವೈಶಿಷ್ಟ್ಯ.

ಧರ್ಮಮಯವಾದ ಜೀವನಕ್ಕೆ ಮೋಕ್ಷವೇ ಗುರಿಯಾದರೂ ಅಂತಹ ಜೀವನ ಸಾಗುವಾಗ ಅರ್ಥ-ಕಾಮಗಳು ತಾವಾಗಿಯೇ ಬಂದೊದಗುವ ಫಲಗಳಾಗುತ್ತವೆ.  ಈ ಗುರಿಯಿಲ್ಲದೆ ಅರ್ಥ-ಕಾಮಗಳ ಹಿಂದೆ ಬಿದ್ದರೆ, ಸುಮ್ಮನೆ ಸಮುದ್ರದಲ್ಲಿ ಧುಮುಕಿ, ತೊಳಲಾಡಿ ಮುಳುಗುವಂತಾಗುವುದು ನಮ್ಮ ಜೀವನ.


ಇಲ್ಲಿ ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಮಾತೊಂದು ಸ್ಮರಣೀಯ- "ಅರ್ಥ-ಕಾಮಗಳು ತುಂಟ ಹಸುವಿನಂತೆ. ಅದನ್ನು ಸುಮ್ಮನೆ ಕರೆಯಲು ಹೋದರೆ ಒದೆಯುತ್ತದೆ. ಆದರೆ ಅದರ ಕಾಲುಗಳನ್ನು ಧರ್ಮ-ಮೋಕ್ಷಗಳೆಂಬ ಕಂಬಗಳಿಗೆ ಕಟ್ಟಿ ಕರೆದರೆ ಅಮೃತವನ್ನೇ ಕರೆಯುತ್ತವೆ."   

ಕಾಮವೆಂಬುದನ್ನು ಹೀಗೆ ನಿಯಂತ್ರಿಸದಿದ್ದರೆ ಪುರುಷಾರ್ಥದ ಕಾಮವಾಗದೆ ಅರಿಷಡ್ವರ್ಗದಲ್ಲಿನ  ಕಾಮವಾಗುತ್ತದೆ. ಅದನ್ನೇ ಭಗವದ್ಗೀತೆಯಲ್ಲಿ ಕೃಷ್ಣನು "ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ------ವಿದ್ಯೈನಮಿಹ ವೈರಿಣಮ್" ಎಂಬುದಾಗಿ ಎಚ್ಚರಿಸಿದ್ದಾನೆ. ಇವೇ ನಮ್ಮನ್ನು ಸಾಗರದಲ್ಲಿ ಮುಳುಗಿಸುವುದು. ಮಡದಿ-ಮಕ್ಕಳನ್ನು ಭಗವಂತನು ತಮಗೊಪ್ಪಿಸಿದವರನ್ನಾಗಿ, ಭಗವಂತನ ಆಸ್ತಿಯಾಗಿ ಭಾವಿಸಿ ರಕ್ಷಿಸಿ-ಪೋಷಿಸಿದಾಗ ಅದು ಅವರಲ್ಲಿ ಪ್ರೀತಿಯನ್ನುಂಟುಮಾಡುವುದರ ಜೊತೆಗೆ  ಅಂಟಿಲ್ಲದೆ ವರ್ತಿಸಲೂ ಸಹಾಯವಾಗುವುದು.  ಜ್ಞಾನಿಗಳ ಈ ನಿರ್ದೇಶ ನಮಗೆ ಆದರ್ಶ.


ಸಂಸಾರ ಸಾಗರದಿಂದ ದಾಟಿಸಲು  ಮತ್ತೊಂದು ಸುಲಭೋಪಾಯವನ್ನು  ಭಕ್ತಶ್ರೇಷ್ಠರಾದ  ಕುಲಶೇಖರ ಆಳ್ವಾರರು  ಹೇಳುತ್ತಾರೆ. ಭಗವಂತನಲ್ಲಿ ನಿಶ್ಚಲವಾದ ಭಕ್ತಿಯೆಂಬ ನೌಕೆಯು ನಮ್ಮನ್ನು ಪಾರುಮಾಡುವ ಅದ್ಭುತ ಸಾಧನವಾಗಿದೆ. ಇಂತಹ ಭಕ್ತಿಗೆ ಬಲವನ್ನು ನೀಡುವುದು ಭಕ್ತರ, ಸಜ್ಜನರ ಸಹವಾಸ. 'ಸಜ್ಜನರ ಸಹವಾಸ ಹೆಜ್ಜೇನ ಸವಿದಂತೆ' ಅತ್ಯಂತ ಹಿತಕರ. ಅಂದಮೇಲೆ ಇಂತಹವರಿಗೆ ಜೀವನದಲ್ಲಿ ಕಷ್ಟಗಳೇ ಬರುವುದಿಲ್ಲ ಎನ್ನುವಂತಿಲ್ಲ. ಕಷ್ಟಗಳು ಬಂದಾಗ ಭಗವಂತನ ಸ್ಮರಣೆಯಿಂದ  ಅವನ್ನು ಎದುರಿಸುವ ಧೃತಿಯನ್ನು   ಹೊಂದುತ್ತಾರೆ. 


ಈ ಹಿತವೂ, ಮಧುರವೂ ಆದ ಸಾಧನದಿಂದಲೇ ರಾಜರ್ಷಿ-ಮಹರ್ಷಿಗಳು ಸುಖವನ್ನನುಭವಿಸಿ ಶಾಶ್ವತವಾದ ಶಾಂತಿ-ಸಮಾಧಾನ-ಆನಂದಗಳನ್ನು ಪಡೆದರು. ಅವರು ತಂದ ಪುರುಷಾರ್ಥಮಯ ಬಾಳಾಟ, ಸಜ್ಜನಸಹವಾಸಗಳೇ ನಮಗೆ ಆದರ್ಶ. 


ಸೂಚನೆ: 27/3/2022 ರಂದು ಈ ಲೇಖನ ವಿಜಯವಾಣಿಯ ಸುದಿನ ಯಲ್ಲಿ ಪ್ರಕಟವಾಗಿದೆ

Thursday, March 3, 2022

ಗೌರೀಶಂಕರ-ಕೈಲಾಸ ಶಿಖರಗಳಲ್ಲಿ ಶಿವನನ್ನು ಕಂಡವರ್ಯಾರು?(Gourishankara-Kailasa shikaragalalli Shivanannu kandavaryaaru?)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಕೈಲಾಸಪರ್ವತವೇ ಪರಶಿವನ ವಾಸಸ್ಥಾನವೆಂಬುದು ಸುಪ್ರಸಿದ್ಧ. ಅಲ್ಲಿ ಶಿವನು ಉಮೆಯೊಡನೆಯೂ, ಗಣೇಶ, ಸ್ಕಂದ ಹಾಗೂ ತನ್ನ ಭೂತಗಣಗಳೊಡನೆಯೂ ವಿರಾಜಿಸುತ್ತಾನೆ; ಆತನ ಗಣಗಳು ತಮ್ಮ ನೃತ್ಯ ಗೀತಗಳಿಂದ ಆತನನ್ನು ಸ್ತುತಿಸುತ್ತಿರುವರು ಎಂಬುದಾಗಿ ಪುರಾಣಗಳು ವರ್ಣಿಸುತ್ತವೆ. ಮಹಾದೇವನು ಹುಲಿ ಅಥವಾ ಆನೆಯ ಚರ್ಮವನ್ನು ಧರಿಸಿ ಧ್ಯಾನಮಗ್ನನಾಗಿರುವನೆಂಬ ವರ್ಣನೆಗಳನ್ನು ಸಹ ಕಾಣಬಹುದಾಗಿದೆ. 


ಅಂತೆಯೇ ಗೌರೀಶಂಕರ ಶಿಖರವೂ ಶಿವನ ಸ್ಥಾನ, ಪರಮಪವಿತ್ರ ಸ್ಥಳವೆಂದೂ ಪರಿಗಣಿಸಲ್ಪಡುತ್ತದೆ. ಅಲ್ಲಿ ಶಂಕರನು ಗೌರೀಸಮೇತನಾಗಿ ಬೆಳಗುತ್ತಿರುವನೆಂದೂ, ಈ ಕಾರಣದಿಂದಲೇ ಆ ಶಿಖರಕ್ಕೆ ಆ ನಾಮಧೇಯವನ್ನು ನೀಡಲಾಗಿದೆಯೆಂದೂ ಪ್ರತೀತಿಯಿದೆ. 


ಕೈಲಾಸಪರ್ವತವು ಟಿಬೆಟ್ಟಿನಲ್ಲಿನ ಹಿಮಾಲಯಪರ್ವತ ಶ್ರೇಣಿಗೆ ಸೇರಿರುವ ಶಿಖರ. ಇದರ ತಪ್ಪಲಿನಲ್ಲಿರುವ ಮಾನಸ ಸರೋವರವೂ ಸಹ ಪವಿತ್ರವಾದ ಸರೋವರವಾಗಿ ಪರಿಗಣಿಸಲ್ಪಡುತ್ತಿದೆ. ಈ ಸರೋವರ ಹಾಗೂ ಕೈಲಾಸ ಪರ್ವತ ಯಾತ್ರೆಗೆ ಪ್ರತಿವರ್ಷವೂ ಅನೇಕ ಜನರು ಹೋಗಿಬರುವುದು ಸುಪ್ರಸಿದ್ಧವಾಗಿದೆ.  ಕೈಲಾಸ ಪರ್ವತವು ಎಂತಹ ತಜ್ಞ ಪರ್ವತಾರೋಹಿಗೂ ಸವಾಲನ್ನೆಸಗುವಂತಿರುವ ಅತ್ಯಂತ ಕಡಿದಾದ ಹಿಮಭರಿತವಾದ ಶಿಖರ. ಯಾತ್ರಿಕರು ಅದನ್ನು ಪ್ರದಕ್ಷಿಣವಷ್ಟೇ ಮಾಡಬಲ್ಲರು. ಯಾರೂ ಅದರ ತುದಿಯನ್ನು ಮುಟ್ಟಿರುವುದು ತಿಳಿದುಬಂದಿಲ್ಲ. ಆದ್ದರಿಂದ ಮಹಾದೇವನು ತನ್ನ ಪರಿವಾರದೊಂದಿಗೆ ಅಲ್ಲಿ ವಿರಾಜಮಾನನಾಗಿರುವುದು ಪುರಾಣೋಕ್ತಿಯಾಗಿ ಮಾತ್ರವೇ ಉಳಿದಿದೆಯೇ ಹೊರತು ಕಣ್ಣಿನಿಂದ ನೋಡಿದವರಾರೂ ಇಲ್ಲ. 


ನೇಪಾಳಕ್ಕೆ ಸೇರಿರುವಂತಹ ಹಿಮಾಲಯಶ್ರೇಣಿಯ ಗೌರೀಶಂಕರ ಶಿಖರವನ್ನು ಅತ್ಯಂತ ಶ್ರಮದಿಂದ ಆರೋಹಣಮಾಡಿ ಅದರ ತುಟ್ಟತುದಿಯನ್ನು ಮುಟ್ಟಿದವರುಂಟು ಎಂಬುದಕ್ಕೆ ದಾಖಲೆಗಳಿವೆ. ಆದರೆ ಅಲ್ಲಿ ಏರಿದವರಾರೂ ಅಲ್ಲಿ ಗೌರಿಯನ್ನೋ ಶಂಕರನನ್ನೋ ಕಂಡೆವೆಂದು ತಿಳಿಸಿಲ್ಲ. ಆದ್ದರಿಂದ ಅದೂ ಸಹ ಬರೀ ನಂಬಿಕೆಯ ಮೇಲೆ ನಿಂತಿರುವ ಮಾತಷ್ಟೇ ಆಗಿದೆ. 


ಹಾಗಾದರೆ ಈ ಪರ್ವತ ಶಿಖರಗಳು ಮಹಾದೇವನ ವಾಸಸ್ಥಾನಗಳೆಂಬುದು ಪುರಾಣಕಾಲಕ್ಕೆ ಮಾತ್ರವೇ ಸೀಮಿತವೇ? ಅಲ್ಲಿಂದ ಮುಂದೆ ಶಿವನು ತನ್ನ ವಾಸಸ್ಥಾನವನ್ನು ಬದಲಾಯಿಸಿಬಿಟ್ಟನೇ? ಕೈಲಾಸವನ್ನು ಏರಿದವರೂ ಯಾರೂ ಇಲ್ಲ ಎಂದಮೇಲೆ  ಇದು ಪುರಾಣಕಾರರ ಕಲ್ಪನೆಯೇ? ಇದು ಮೂಢ ನಂಬಿಕೆಯಲ್ಲವೇ? ಎಂಬ ಪ್ರಶ್ನೆಗಳು ವಿಚಾರಪರರನ್ನು ಕಾಡಿದರೆ ಅಚ್ಚರಿಯೇನಿಲ್ಲ.  


   ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾದರೆ ಪುರಾಣಗಳ ಬಗೆಗೆ ಸರಿಯಾದ ತಿಳಿವಳಿಕೆ ಆವಶ್ಯಕವಾಗುತ್ತದೆ. ಇತರ ಕಥೆ-ಕಾದಂಬರಿಗಳನ್ನು ಓದುವಂತೆ ಪುಸ್ತಕಗಳಿಂದ ನಾವೇ ಓದಿ ತಿಳಿಯಹೊರಟಾಗ ಇಂತಹ ಅನೇಕ ಸಮಸ್ಯೆಗಳು ತಲೆದೋರುವುದು ಸಹಜವೇ ಆಗಿದೆ. ಪುರಾಣಗಳಲ್ಲಿ ಐತಿಹಾಸಿಕ ಘಟನೆಗಳಷ್ಟೇ ಅಲ್ಲದೆ ಅನೇಕ  ಜಟಿಲವಾದ ಸತ್ಯಗಳನ್ನೂ, ಅಂತರಂಗದ ದರ್ಶನಗಳನ್ನೂ ಕಥಾರೂಪದಲ್ಲಿ ಹೇಳಿರುವುದುಂಟು. ಇದು ಜಟಿಲವಾದ ವಿಚಾರಗಳನ್ನು ಸುಲಭವಾಗಿ ಲೋಕಕ್ಕೆ ಮನವರಿಕೆ ಮಾಡಲು ಜ್ಞಾನಿಗಳು ಕೈಗೊಂಡಿರುವ ಉಪಾಯ. ಆದ್ದರಿಂದಲೇ ಪುರಾಣಗಳನ್ನು ತತ್ತ್ವವರಿತ ಹಿರಿಯರಿಂದಲೇ ಕೇಳಿ ತಿಳಿಯಬೇಕೆನ್ನುವ ಮಾತಿದೆ. ಮಹಾಯೋಗಿಯೂ, ಮಹರ್ಷಿಹೃದಯವೇದಿಗಳೂ ಆದ ಶ್ರೀರಂಗಮಹಾಗುರುಗಳು ಈ ವಿಚಾರದಲ್ಲಿ ನೀಡಿದ ವಿವರಣೆಯನ್ನು ಇಲ್ಲಿ ಸ್ಮರಿಸುವುದು ಉಚಿತವಾಗಿದೆ.  


ಪ್ರಕೃತ ಮೇಲಿನ ಶಿಖರಗಳಲ್ಲಿ ಕಂಗೊಳಿಸುವ ಶಿವಮಹಾದೇವನು ಭೌತಿಕದೃಷ್ಟಿಗೆ ಗೋಚರಿಸುವವನಲ್ಲ. ದಿವ್ಯದೃಷ್ಟಿಗೆ-ಜ್ಞಾನದೃಷ್ಟಿಗೆ ಮಾತ್ರವೇ ಸಿಗುವವನು. ಯೋಗಿಗಳು ತಪಸ್ಯೆಯಿಂದ ತಮ್ಮ ಮನಸ್ಸು-ಪ್ರಾಣಗಳನ್ನು ಒಳಮುಖವಾಗಿಸಿ ಸುಷುಮ್ನೆಯೆಂಬ ನಾಡಿಯಲ್ಲಿ ಪ್ರವೇಶಿಸಿದಾಗ  ಸಮಾಧಿಯ ಉತ್ತುಂಗ ಶಿಖರದಲ್ಲಿ ಮಹಾದೇವನ ದರ್ಶನವನ್ನು ಮಾಡುತ್ತಾರೆ. ಆ ಸ್ಥಾನವೇ ಶಿವನ ಕೈಲಾಸ; ಅಲ್ಲಿ ಉಮಾ-ಮಹೇಶ್ವರನು ತನ್ನ ಗಣಗಳೊಂದಿಗೆ ವಿರಾಜಮಾನನಾಗಿರುವುದನ್ನು ದಿವ್ಯದೃಷ್ಟಿಯಿಂದ ದರ್ಶನಮಾಡಿದರು. ಇಂತಹ ಸಮಾಧಿಸ್ಥಿತಿಯಲ್ಲಿ ಮೈ ಮರಗಟ್ಟಿರುತ್ತದೆ. ತಾಪತ್ರಯಗಳೆಲ್ಲವೂ ಕಳೆದು ಅತ್ಯಂತ ತಂಪಾಗಿಡುವಂತಹ ಸ್ಥಿತಿ ಅದು. ಪರಮಸುಖವನ್ನೀಯುವ ಸ್ಥಿತಿ.

 

     ಇಂತಹ ಅದ್ಭುತ ಸುಖದತ್ತ ಲೋಕದ ಗಮನವನ್ನೂ ಸೆಳೆಯಲೋಸುಗ ಭಾರತೀಯಮಹರ್ಷಿಗಳು ಕೈಗೊಂಡಿರುವ ಪ್ರಾಯತ್ನಗಳನೇಕ. ಅವರು ಪ್ರಕೃತಿಯಲ್ಲಿ ಕೆಲವು ಜಾಗಗಳ ವಿಶೇಷಧರ್ಮಗಳನ್ನು ಗುರುತಿಸಿಕೊಂಡರು. ಮೇಲೆ ತಿಳಿಸಿರುವ ಶಿಖರಗಳು ಸಂಸ್ಕಾರಿಗಳ ಮನಸ್ಸನ್ನು ಹೆಚ್ಚು ಪ್ರಯತ್ನವಿಲ್ಲದೆಯೇ ಒಳಕೈಲಾಸದೆಡೆಗೆ-ಗೌರೀಶಂಕರನೆಡೆಗೆ ಸೆಳೆಯುವ ಧರ್ಮದಿಂದ ಕೂಡಿವೆಯೆಂಬುದು ಮಹರ್ಷಿಗಳ ಅನುಭವಕ್ಕೆ ಅರಿವಾದ ಸತ್ಯ. ಆದ್ದರಿಂದಲೇ ಸಮಾಧಿಯ ಉತ್ತುಂಗ ಶಿಖರವನ್ನು ಹೋಲುವ ಔನ್ನತ್ಯದಿಂದ ಕೂಡಿರುವ ಶಿಖರಗಳನ್ನು ಕೈಲಾಸ-ಗೌರೀಶಂಕರವೆಂದು ಹೆಸರಿಸಿದರು. ತಂಪು ಹಾಗೂ ಮೈ ಮರಗಟ್ಟುವ ಸ್ಥಿತಿಯನ್ನೂ ಸಹ ಈ ಹೊರ ಶಿಖರಗಳು ಮೂಡಿಸುತ್ತವೆಂಬುದು ಸಾಮಾನ್ಯಜ್ಞಾನ. ಸಮಾಧಿಯ ಹೊರ ಲಕ್ಷಣಗಳ ಹೋಲಿಕೆಗಳು ಈ ಹೊರ ಶಿಖರಗಳಲ್ಲೂ ಇರುವುದು ಇವುಗಳಿಗೆ ಒಳದರ್ಶನದ ಹೆಸರುಗಳನ್ನಿಡಲು ಪುಷ್ಟಿಯನ್ನು ನೀಡಿವೆಯೆನ್ನಬಹುದು. ಒಳಜ್ಞಾನವನ್ನು ಸಾಧಿಸಿದುದಲ್ಲದೆ ಅದರ ಗುರುತುಗಳು ಪ್ರಕೃತಿಯಲ್ಲಿ ಯಾವ ಯಾವ ಕಡೆ ಮೂಡಿಬಂದಿವೆಯೆನ್ನುವುದನ್ನು ಗುರುತಿಸುವ ವಿಜ್ಞಾನವನ್ನೂ ಅರಿತ ಮಹರ್ಷಿಗಳ ಮೇಧೆ ಅದೆಷ್ಟು ಅದ್ಭುತವಾದದ್ದು! 


ಹೀಗೆ ಜ್ಞಾನಿಗಳೂ, ಮಹಾಮೇಧಾವಿಗಳೂ, ಸರ್ವಲೋಕ ಹಿತೈಷಿಗಳೂ ಆದ ಮಹರ್ಷಿಗಳಿಗೆ ಮತ್ತೆ ಮತ್ತೆ ನಮ್ಮ ಹೃತ್ಪೂರ್ವಕ ನಮನಗಳು. ಅವರಂತೆ ಅಂತರ್ದೃಷ್ಟಿಯಿಂದ ನಾವು ಕೈಲಾಸ -ಗೌರೀಶಂಕರ ಶಿಖರಗಳನ್ನು ಕಾಣುವಂತಾಗಲಿ ಎಂದು ಪ್ರಾರ್ಥಿಸೋಣ.


ಸೂಚನೆ: 3/3/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.

 

Thursday, February 10, 2022

ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು (Tayi Mattu Tayinadu Svargakkinta Migilu)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)





"ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬುದು ಭಾರತದಲ್ಲಿ ಪ್ರಸಿದ್ಧವಾದ ಒಂದು ಘೋಷವಾಕ್ಯವಾಗಿದೆ - 'ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದವು'. ಇದು ತಾಯಿ-ತಾಯಿನಾಡಿನ ಮೇಲಿನ ಅಭಿಮಾನವನ್ನು ಸಾರುವ ಮಾತು. ಹೊತ್ತು-ಹೆತ್ತು-ಸಾಕಿದ ತಾಯಿ ಅಭಿಮಾನಕ್ಕೆ ಪಾತ್ರಳೆನ್ನುವುದು ನಿರ್ವಿವಾದವಾದದ್ದು. ಆದರೆ ತಾಯಿನಾಡಿಗೆ ಈ ಮಾತನ್ನು ಅನ್ವಯಿಸುವುದು ಹೇಗೆ? ವಿದೇಶಕ್ಕೆ ಹಾರಿ, ಅಲ್ಲಿಯೇ ನೆಲೆಸುವುದರಲ್ಲೇ ಜೀವನದ ಸಾರ್ಥಕ್ಯ ಅಡಗಿದೆಯೆಂದು ಭಾವಿಸುವ ಭಾರತದ ಇಂದಿನ ಪೀಳಿಗೆಗೆ ಇದು ಹಾಸ್ಯಾಸ್ಪದವಾಗಿ ತೋರಿದರೆ ಅಚ್ಚರಿಯೇನಿಲ್ಲ. ಅಮೇರಿಕಾ, ಯೂರೋಪಿನಂತಹ ದೇಶಗಳಲ್ಲಿ ದೊರಕುವ ಸುಖ-ಸೌಲಭ್ಯಗಳನ್ನು ಒಮ್ಮೆ ಅನುಭವಿಸಿದರೆ ಸಾಕು, ಭಾರತಕ್ಕೆ ಹಿಂದಿರುಗುವ ಮನಸ್ಸಾಗುವುದು ಕಷ್ಟಸಾಧ್ಯವೇ ಸರಿ.  ಆದ್ದರಿಂದ ಆ ದೇಶದವರು ತಮ್ಮ ನಾಡನ್ನು ಸ್ವರ್ಗಕ್ಕಿಂತಲೂ ಮಿಗಿಲಾಗಿ ಭಾವಿಸಿ ಪ್ರೀತಿಸುತ್ತೇವೆ ಎಂದರೆ ಅದು ಅರ್ಥವತ್ತಾಗುವುದು.  ನಮ್ಮ ದೇಶವನ್ನು ಸ್ವಲ್ಪ ಮಟ್ಟಿಗೆ "ನಮ್ಮದು" ಎಂಬ ಅಭಿಮಾನದಿಂದ ನೋಡ ಬಹುದಷ್ಟೇ. ಆದರೆ ಸ್ವರ್ಗಕ್ಕೆ ಹೋಲಿಸುವುದು ಅತಿಶಯೋಕ್ತಿಯೇ ಎನ್ನುವವರ   ಸಂಖ್ಯೆಯೇ  ಪ್ರಾಯಶಃ ಹೆಚ್ಚಾಗಿದೆಯೇನೋ.

ಯಾರೇ ಆಗಲಿ ತಮ್ಮ ರಾಷ್ಟ್ರವನ್ನು ತಾವು ಹುಟ್ಟಿದ ಭೂಮಿ ಎನ್ನುವ ಕಾರಣಕ್ಕಾಗಿ ಪ್ರೀತಿಸ ಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು, ಸಂಪನ್ಮೂಲಗಳನ್ನು ಕಂಡು ಹೆಮ್ಮೆಯಿಂದ ಪ್ರೀತಿಸಬಹುದು. ಇದು ವಿಶ್ವದ ಎಲ್ಲ ದೇಶಗಳಿಗೂ ಅನ್ವಯಿಸುವ ಮಾತಾಗಿದೆ. ಆದರೆ ಭಾರತೀಯ ಮಹರ್ಷಿಗಳು ರಾಷ್ಟ್ರಪ್ರೇಮದ ಬಗೆಗೆ ಹೊಂದಿದ್ದ ಅಭಿಪ್ರಾಯವೇನು? ಅವರು ತಮ್ಮ ರಾಷ್ಟ್ರವನ್ನು  ಪ್ರೀತಿಸಲು ಕಾರಣವೇನು? ಈ ವಿಚಾರಗಳನ್ನು ಅರಿತಾಗ ಭಾರತವು ಹೇಗೆ ಸ್ವರ್ಗಕ್ಕಿಂತಲೂ  ಮಿಗಿಲಾದೀತು ಎಂಬುದನ್ನು ಮನಗಾಣಬಹುದು.    

ಭಾರತದ ಮಹರ್ಷಿಗಳು ಅಂತರಂಗದಲ್ಲಿ ತಮ್ಮ ಯೋಗಭೂಮಿಯಲ್ಲಿ, ತಪೋಭೂಮಿಯಲ್ಲಿ

ಪರಮಾನಂದವನ್ನೀಯುವ ಪರಂಜ್ಯೋತಿಯನ್ನೂ ಅದರ ವಿಸ್ತಾರವನ್ನೂ ಕಂಡರು. ಅನೇಕ ದೈವಿಕ-ಆಧ್ಯಾತ್ಮಿಕ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಂಡರು. ಲೌಕಿಕವಾಗಿ ಭೌತಿಕ ಪದಾರ್ಥಗಳಿಂದ ಸಿಗಬಹುದಾದ ಆನಂದದ ಪರಮಾವಧಿಗಿಂತಲೂ ಕೋಟಿಕೋಟಿ ಪಾಲು ಹೆಚ್ಚಿನ ಆನಂದವನ್ನೂ, ನೆಮ್ಮದಿಯನ್ನೂ ತುಂಬುವ ಆ  ಒಳ ಸತ್ಯದ ಕಡೆ ಲೋಕವನ್ನೆಲ್ಲ ಸೆಳೆದು ಮನುಕುಲವನ್ನೇ ಪವಿತ್ರಗೊಳಿಸುವ ವಿಶಾಲ ಹೃದಯಾವುಳ್ಳವರಾಗಿದ್ದರು. ಆದ್ದರಿಂದಲೇ ಅವುಗಳ ಅಚ್ಚನ್ನು ಪರ್ವತಗಳು, ನದಿಗಳು, ವಿವಿಧ ಪ್ರಾಂತ್ಯಗಳು ಹೀಗೆ ದೇಶದ ಎಲ್ಲೆಡೆಯಲ್ಲೂ ಒತ್ತಿದರು. ಈ ದೇಶಕ್ಕೆ ಅವರಿಟ್ಟಿರುವ ಹೆಸರೇ ಅವರ ಮನಸ್ಸಿನ ಆಳವನ್ನು ಪ್ರತಿಬಿಂಬಿಸುತ್ತಿದೆ ಎನ್ನಬಹುದು.    

'ಭಾ'-ಒಳಬೆಳಗುವ ಪರಂಜ್ಯೋತಿ, ಪ್ರಕಾಶ; ರತ–ಆ ಜ್ಯೋತಿಯಲ್ಲಿ ರಮಿಸುವವರು: ಇಂತಹವರು ವಾಸಿಸುವ ದೇಶ ಎಂಬುದನ್ನು ಸೂಚಿಸುತ್ತದೆ ಭಾರತವೆಂಬ ಹೆಸರು. ಅಷ್ಟೇ ಅಲ್ಲದೆ ಅಂತಹ ಭಾರತರು ಲೋಕದ ಜೀವಿಗಳಿಗೆಲ್ಲ   ಅ ಜ್ಯೋತಿಯಲ್ಲಿ ರಮಿಸಲು ಪುಷ್ಟಿಯನ್ನು ನೀಡಿ ಅತ್ತ ಕೈತೋರಿದ ದೇಶವಿದು.  ಅಂತೆಯೇ ಈ  ದೇಶದ ವಿವಿಧ ಸ್ಥಳಗಳನ್ನು ಕಾಶಿ, ಕಾಂಚೀ, ಜಲಂಧರ ಮುಂತಾಗಿಯೂ, ನದಿಗಳನ್ನು ಗಂಗಾ, ಯಮುನಾ, ಸರಸ್ವತೀ ಮುಂತಾಗಿಯೂ ಹೆಸರಿಸಿದ್ದಾರೆ. ಇವೆಲ್ಲವೂ ಸಹ ಒಳಪ್ರಪಂಚದ ಹೊರ ನಕ್ಷೆಗಳೇ ಆಗಿವೆ. ಇದನ್ನು ಸೂಚಿಸುವ ಕೆಲವು ಉದಾಹರಣೆಗಳನ್ನು ಗಮನಿಸಬಹುದಾಗಿದೆ. 

ಮಹಾಮೇರುವೆಂಬ ಜ್ಞಾನರಜ್ಜು(ಬೆನ್ನು ಹುರಿ)ವಿನ ಉತ್ತುಂಗ ಸ್ಥಾನದಲ್ಲಿ ಪರಮಾತ್ಮನ ಸ್ಥಾನದಿಂದ ಉದ್ಭವಿಸುವ ಜ್ಞಾನಸ್ರೋತಸ್ಸು ಕೆಳಗೆ ಹರಿಯುತ್ತಾ  ಏಳಾಗಿ ಕವಲೊಡೆಯುವುದನ್ನು ತಮ್ಮ ಯೋಗಭೂಮಿಯಲ್ಲಿ ಈ ದೇಶದ ಜ್ಞಾನಿಗಳು ಕಂಡರು. ಹೊರಗೆ ಹಿಮಾಲಯದ ಉತ್ತುಂಗ ಸ್ಥಾನದಿಂದ ಉಗಮವಾಗಿ ಮುಂದೆ ಸಪ್ತಶಾಖೆಯಾಗಿ  ಹರಿಯುವ ನದಿಯು ಒಳಗೆ ಹರಿಯುವ  ಜ್ಞಾನಗಂಗೆಯನ್ನೇ ಹೋಲುವುದನ್ನು ಗುರುತಿಸಿದರು. ಆದ್ದರಿಂದ ಲೋಕಕ್ಕೆ ಒಳಗೆ ಹರಿಯುವ ಜ್ಞಾನಪ್ರವಾಹವನ್ನು ನೆನಪಿಸಲು ಅದರ ಪ್ರತೀಕವಾಗಿ ಕಂಡ ಹೊರ ನದಿಯನ್ನು ಗಂಗಾ ಎಂದು ಹೆಸರಿಸಿದರು.

ತಪೋಭೂಮಿಯಲ್ಲಿ ಸಂಚರಿಸುವಾಗ ಬೆನ್ನುಹುರಿಯ ಒಳಗೆ ಇಡಾ, ಪಿಂಗಳಾ ಎಂಬ ಎರಡು  ನಾಡಿಗಳು ಪ್ರಾಣಸಂಚಾರಕ್ಕೆ ಎಡೆಯಾಗಿರುವುದನ್ನೂ, ಅವೆರಡರ ಮಧ್ಯೆ ಇರುವ  ಸುಷುಮ್ನೆ(ಸರಸವತೀ)ಯೆಂಬ  ಮೂರನೆಯ ನಾಡಿಯನ್ನೂ ಗುರುತಿಸಿದರು. ಅವು ಮೂರೂ ಸೇರುವ ಪವಿತ್ರವಾದ-ತ್ರಿವೇಣಿ ಸಂಗಮಸ್ಥಾನವನ್ನೂ ಗುರುತಿಸಿದರು. ಅತ್ತ ಕಡೆ ಲೋಕದ ಗಮನವನ್ನು ಸೆಳೆಯಲು ಭಾರತದಲ್ಲಿ ಪ್ರಕೃತಿಯೇ ಒದಗಿಸಿಕೊಟ್ಟಿರುವಂತಹ    ಗಂಗಾ-ಯಮುನಾ-ಸರಸ್ವತಿಗಳ ಸಂಗಮಸ್ಥಾನವನ್ನು ಪವಿತ್ರವಾದ ತ್ರಿವೇಣೀಸಂಗಮವೆಂದು ಸಾರಿದರು.

ಇಡಾ ಭಾಗೀರಥೀ  ಪ್ರೋಕ್ತಾ ಪಿಂಗಳಾ ಯಮುನಾ ನದೀ  

ತಯೋರ್ಮಧ್ಯೇ ಸ್ಥಿತಾ ನಾಡೀ ಸುಷುಮ್ನಾಖ್ಯಾ ಸರಸ್ವತೀ

ಎಂಬ ವಾಣಿಯು ಇದನ್ನೇ ಸಾರುತ್ತಿದೆ.

ಮಹರ್ಷಿಗಳು ಯೋಗಮಾರ್ಗದಲ್ಲಿ ಸಾಗುತ್ತ ಜ್ಞಾನರಜ್ಜುವಿನ ಉನ್ನತಶಿಖರೋಪಾದಿಯ ಸ್ಥಾನದಲ್ಲಿ ಪಾರ್ವತೀ-ಪರಮೇಶ್ವರರನ್ನು ಸಾಕ್ಷಾತ್ಕರಿಸಿಕೊಂಡರು. ಆ ಊರ್ಧ್ವಸ್ಥಾನಕ್ಕೆ ಏರಲು ಪುಷ್ಟಿಯನ್ನು ನೀಡುತ್ತಾ ಒಳ ಔನ್ನತ್ಯವನ್ನು ಸೂಚಿಸುವ ಅತ್ಯುನ್ನತವಾದ ಶಿಖರವೊಂದನ್ನು ಹೊರಗೆ ಕಂಡಾಗ ಅದನ್ನು 'ಗೌರೀಶಂಕರ ಶಿಖರ' ಎಂಬುದಾಗಿ ಹೆಸರಿಸಿದರು. ಯಾವ ಸ್ಥಳವು ಯೋಗಮಾರ್ಗದಲ್ಲಿ ಹರಿಯಮಾರ್ಗಕ್ಕೂ ಅಂತೆಯೇ ಹರನಮಾರ್ಗಕ್ಕೂ ದ್ವಾರವಾಗಿದೆಯೋ ಆ ಸ್ಥಾನಕ್ಕೆ ಜೀವಿಯನ್ನು ಏರಿಸಬಲ್ಲ ಹೊರಗಡೆಯ ಸ್ಥಾನವೊಂದನ್ನು ಗುರುತಿಸಿದಾಗ ಅದನ್ನು ಹರಿದ್ವಾರ-ಹರದ್ವಾರ ಎಂಬುದಾಗಿ ಕರೆದರು.  ಮಾನಸಸರೋವರ, ಮಣಿಕರ್ಣಿಕಾ ಮುಂತಾದ ಹೆಸರುಗಳು ಸಹ ಒಳ ಸತ್ಯಗಳ ನಕ್ಷೆಗಳಾಗಿಯೇ ಗುರುತಿಸಲ್ಪಟ್ಟಿವೆ.   

      ಹೀಗೆ ಭಾರತದೇಶದಲ್ಲಿ ಪ್ರಕೃತಿಯೇ ಒದಗಿಸಿರುವ ಸನ್ನಿವೇಶಗಳಲ್ಲಿ ಅಂತರ್ದರ್ಶನದ ಗುರುತಾಗಿರುವವುಗಳನ್ನು ಒಳ ಸತ್ಯಗಳ ಹೆಸರಿನಿಂದಲೇ ಕರೆದು ಜನರನ್ನು ಅತ್ತಕಡೆ ಸೆಳೆಯುವ  ಉಪಾಯವನ್ನು ಮಾಡಿರುವರು.

      ಭಾರತದ ಪುಣ್ಯನದಿಗಳಾಗಲೀ ಪುಣ್ಯಕ್ಷೇತ್ರಗಳಾಗಲೀ ಒಳಸತ್ಯಗಳ ಪ್ರತೀಕಗಳಾಗಿರುವುದಷ್ಟೇ ಅಲ್ಲ. ಅ ನದಿಗಳಲ್ಲಿ  ವಿಧಿಪೂರ್ವಕವಾಗಿ ಅವಗಾಹನ ಮಾಡುವವರನ್ನು, ತೀರ್ಥಕ್ಷೇತ್ರಗಳಿಗೆ  ಯಾತ್ರೆಯನ್ನು ಕೈಗೊಂಡು ಅಲ್ಲಿನ ದೇವತಾಮೂರ್ತಿಗಳನ್ನು ವಿಧಿವತ್ತಾಗಿ ದರ್ಶನ ಮಾಡುವವರ ಮನಸ್ಸನ್ನೂ ಊರ್ಧ್ವಮುಖವಾಗಿ-ದೇವಭಾವಕ್ಕೇರಿಸುವ ಶಕ್ತಿಯಿಂದ ಕೂಡಿವೆ. ಇವು ಭೂಗುಣದಿಂದಲೂ, ಅನೇಕಕಾಲಗಳಿಂದ ಅನೇಕ ಋಷಿ-ಮಹರ್ಷಿಗಳ, ಸಾಧು-ಸಂತರ ಅವಗಾಹನ, ದರ್ಶನಗಳಿಂದ ತೀರ್ಥತ್ತ್ವವನ್ನು ಪಡೆದಿವೆಯೆಂಬುದು    

ಜ್ಞಾನಿಗಳ ಅಭಿಪ್ರಾಯವಾಗಿದೆ. 'ತೀರ್ಥೀಕುರ್ವಂತಿ ತೀರ್ಥಾನಿ ತೀರ್ಥಭೂತಾಹಿ ಸಾಧವ:' ಎಂಬ ಆರ್ಷವಾಣಿಯು ಇದನ್ನೇ ಸಾರುತ್ತದೆ.

      ಮೇಲಿನ ವಿಚಾರಗಳು ಬರಿಯ ಮಾತುಗಳಾಗಿ ಉಳಿಯದಂತೆ ಕ್ಷೇತ್ರಗಳ, ನದೀತೀರ್ಥಗಳ ಪಾವಿತ್ರ್ಯವನ್ನು ತಮ್ಮ ನಾಡೀವಿಜ್ಞಾನದ ದ್ವಾರ ನಿರೂಪಿಸಿದವರು ಶ್ರೀರಂಗಮಹಾಗುರುಗಳು. ತೀರ್ಥಗಳೂ-ಕ್ಷೇತ್ರಗಳೂ ನಮ್ಮ ಮನಸ್ಸಿನ ಮೇಲೆ ಮಾಡುವ ಅದ್ಭುತ ಪರಿಣಾಮಗಳನ್ನೂ ಸಹ ಈ ವಿಜ್ಞಾನದ ಮೂಲಕ ಅಳೆದು ತೋರಿಸುತ್ತಿದ್ದರು. ಯೋಗಭೂಮಿಯಲ್ಲಿ ಸಂಚರಿಸಿ ಒಳಸತ್ಯಗಳನ್ನು ಸಾಕ್ಷಾತ್ಕರಿಸಿಕೊಂಡಿರುವ ಸುಸಂಸ್ಕಾರಿಗಳು ಇಂದೂ ಸಹ ಇವುಗಳ ಪ್ರಭಾವವನ್ನು ಗುರುತಿಸ ಬಲ್ಲರು ಎಂಬುದು ಅವರ ನಿಲುವಾಗಿತ್ತು.

ಲೌಕಿಕಜೀವನದ ಏಳಿಗೆಗೆ ಬೇಕಾದ ಸಂಪತ್ತುಗಳಿಂದ ಮಾತ್ರವೇ ಅಳೆಯದೆ  ಜೀವನವನ್ನು ಸಾರ್ಥಕಗೊಳಿಸುವ ದೈವಿಕ-ಆಧ್ಯಾತ್ಮಿಕಸಂಪತ್ತುಗಳ ದೃಷ್ಟಿಯಿಂದಲೂ ಅಳೆದಾಗ  ಭಾರತದ ಹಿರಿಮೆಯು ಅರಿವಾಗುವುದರಲ್ಲಿ ಸಂಶಯವಿಲ್ಲ.  

      ಇತರ ದೇಶಗಳಲ್ಲಿ ಎಲ್ಲೂ ಮೂರು ನದಿಗಳು ಸಂಗಮಿಸುವುದಿಲ್ಲವೇ? ಪಾವನಗೊಳಿಸುವ ಸ್ಥಳಗಳು ಬೇರೆಲ್ಲೂ ಇಲ್ಲವೇ? ಎಂಬ ಪ್ರಶ್ನೆಗಳು ತರ್ಕಬದ್ಧವಾಗಿವೆ. ವಿದೇಶಗಳಲ್ಲಿ  ಇಂತಹ ಸನ್ನಿವೇಶಗಳು ಇಲ್ಲ ಎಂಬ ಅಭಿಪ್ರಾಯವಲ್ಲ. ಪ್ರಕೃತಿಯಲ್ಲಿ ಸೃಷ್ಟಿಸಹಜವಾಗಿರುವ ಪಾವಿತ್ರ್ಯವನ್ನೂ, ದೈವಿಕ-ಆಧ್ಯಾತ್ಮಿಕ ಸತ್ಯಗಳ ಹೋಲಿಕೆಯನ್ನೂ ಗುರುತಿಸಿ, ಅದನ್ನು ಲೋಕಕ್ಕೆ ಸಾರುತ್ತ  ಜನಮನವನ್ನು  ಅತ್ತ ಸೆಳೆಯುವ ಪ್ರಯತ್ನವು ಭಾರತದಲ್ಲಿ ನಡೆದಿರುವಂತೆ ಇನ್ನೆಲ್ಲೂ  ನಡೆದಿರುವುದು ಇತಿಹಾಸಗಳಲ್ಲಿ ಕಂಡುಬರುವುದಿಲ್ಲ ಎಂಬ ಬಲ್ಲವರ ಮಾತನ್ನು ಇಲ್ಲಿ ಸ್ಮರಿಸುತ್ತೇವೆ.

      ಹೀಗೆ ಜೀವನದಲ್ಲಿ ಧರ್ಮಾರ್ಥ-ಕಾಮ-ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸಿ ಧನ್ಯರಾಗಲು ಬೇಕಾದ ಪ್ರಕೃತಿಸಂಪತ್ತುಗಳನ್ನೂ, ಜ್ಞಾನಿಗಳು ರೂಪಿಸಿದ ರಾಷ್ಟ್ರವ್ಯವಸ್ಥೆಗಳನ್ನು   ಭಾರತದೇಶವು  ಹೊಂದಿದೆ. "ತಮ್ಮ ಸುಕೃತಗಳಿಂದ ಸ್ವರ್ಗಕ್ಕೇರಿದವರೂ ಕರ್ಮಫಲ ಮುಗಿದು ಮತ್ತೆ ಭೂಮಿಗೆ ಬರುವಾಗ ಭಾರತದಲ್ಲೇ ಜನ್ಮತಾಳೆಯುವಂತಾಗಲಿ ಎಂದು ಆಶಿಸುತ್ತಾರೆ. ದೇವತೆಗಳೂ ಸಹ ಪುರುಷಭಾವದಿಂದ ಭಾರತದಲ್ಲಿ ಜನಿಸಲು ಇಚ್ಛಿಸುವರು" ಎಂದು ಸಾರುವ ಗೀತವೊಂದು ಹೀಗಿದೆ.

ಗಾಯಂತಿ ದೇವಾ: ಕಿಲ ಗೀತಕಾನಿ  ಧನ್ಯಾಸ್ತು ತೇ ಭಾರತ ಭೂಮಿಭಾಗೇ  

ಸ್ವರ್ಗಾಪವರ್ಗಾಸ್ಪದ ಮಾರ್ಗಭೂತೇ ಭವಂತಿಭೂಯ: ಪುರುಷಾ: ಸುರತ್ವಾತ್  

        ಆದ್ದರಿಂದ ಜನ್ಮವಿತ್ತ ತಾಯಿಯು ಮಾತ್ರವಲ್ಲ, ಜನ್ಮಕ್ಕೆಡೆಯಾದ ತಾಯಿನಾಡು ಭಾರತವೂ ಸಹ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎಂಬ ಹೆಮ್ಮೆಯ ಮಾತು ಅತಿಶಯೋಕ್ತಿ ಅಲ್ಲ ಎಂಬುದಾಗಿ ಧೈರ್ಯವಾಗಿ ಸಾರಬಹುದಾಗಿದೆ. ಈ ಕಾರಣಕ್ಕಾಗಿ ನಮ್ಮ ಭಾರತವನ್ನು ಪ್ರೀತಿಸೋಣ ಎಂಬುದು ಮಹರ್ಷಿಗಳ ರಾಷ್ಟ್ರಪ್ರೇಮದ ತಿರುಳಾಗಿದೆ.

ಪ್ರೀತಿಯಿರುವೆಡೆಯಲ್ಲಿ ನಮ್ಮದಾದ ಜವಾಬ್ದಾರಿಯಿರುವುದು ಸಹಜವೇ ಆಗಿದೆ. ಭಾರತವನ್ನು ಪ್ರೀತಿಸುವುದು ಭಾವುಕತೆಯ ವಿಚಾರವಷ್ಟೇ ಆಗದೆ ಅದರ ಪಾವಿತ್ರ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆಯನ್ನೂ ತಿಳಿಯಬೇಕಾಗಿದೆ.   

ಇಲ್ಲಿ ಶ್ರೀರಂಗಮಹಾಗುರುಗಳ ವಾಣಿಯು ಸ್ಮರಣೀಯವಾಗಿದೆ. ಹೊರಗಡೆಯಿಂದ ನದಿಗಳ-ತೀರ್ಥಕ್ಷೇತ್ರಗಳ-ದೇವಾಲಯಗಳ ಶುಚಿತ್ವವನ್ನು ಉಳಿಸಿ-ರಕ್ಷಿಸಿಕೊಳ್ಳುವುದು ಒಂದಂಶವಾದರೆ ಮತ್ತೊಂದು ಅವುಗಳ ಪಾವಿತ್ರ್ಯದ ಬಗೆಗೆ ಪ್ರಜ್ಞೆಯನ್ನು ಮೂಡಿಸುವುದು. ಎರಡನೆಯ ಕೆಲಸಕ್ಕೆ ಜ್ಞಾನಿಗಳೇ ಅಧಿಕಾರಿಗಳಾಗಿದ್ದರೂ ಮೊದಲನೆಯದು ಎಲ್ಲರಪಾಲಿನ ಜವಾಬ್ದಾರಿಯಾಗಿದೆ. ಸುದೀರ್ಘಕಾಲದಿಂದ ಮರೆಯಾಗಿದ್ದ ಹೊರರಕ್ಷಣೆಯ ಪ್ರಜ್ಞೆಯು ಈಗ  ಮೂಡಿಬಂದಿದೆ. ಇದರಿಂದಲೇ ಗಂಗಾನದಿ-ಕಾಶೀಕ್ಷೇತ್ರಗಳ ಶುದ್ಧೀಕರಣ ಕೈಗೊಳ್ಳಲಾಗಿ ಅವುಗಳ ಪಾವಿತ್ರ್ಯವನ್ನು ಉಳಿಸುವ ಕಾರ್ಯವು  ಸಂಪನ್ನವಾಗುತ್ತಿರುವುದು ಅತ್ಯಂತ ಹರ್ಷದ ಸಂಗತಿ. ಈ ಹೊರ ಪಾವಿತ್ರ್ಯವು ಒಳ ಪ್ರಸನ್ನತೆಗೆ ಸಹಕಾರಿಯಾಗಲಿ ಎಂದು ಆಶಿಸೋಣ.  ಇಂತಹ ಪವಿತ್ರಭಾರತಕ್ಕೆ - ಮಹರ್ಷಿಭಾರತಕ್ಕೆ ಸದಾ ನಮ್ಮ ನಮನವಿರಲಿ.  

ಸೂಚನೆ: 10/2/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.