Tuesday, May 14, 2024

ತಪಸ್ಸಿನ ಉದ್ದೇಶವಾದರೂ ಏನಿರಬೇಕು ? (Tapassina Uddeshavadaru Enirabeku?)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ರಾಜಾವಿಶ್ವಾಮಿತ್ರರು ಋಷಿವಿಶ್ವಾಮಿತ್ರರಾದದ್ದಾದರೂ ಹೇಗೆ? ಸಂದರ್ಭ ಹೀಗಿದೆ. ಶಬಲೆ ಎಂಬ ಒಂದು ವಿಶೇಷವಾದ ಹಸು ವಸಿಷ್ಠರ ಆಶ್ರಮದಲ್ಲಿತ್ತು. ಅಲ್ಲಿಗೆ ಬಂದಿದ್ದ ರಾಜಾ ವಿಶ್ವಾಮಿತ್ರನಿಗೆ ಅದರ ಬಗ್ಗೆ ಆಸೆ ಹುಟ್ಟಿ ತಮಗೆ ಅದು ಬೇಕೆಂದರು. ವಸಿಷ್ಠರು ಕೊಡಲಾರೆಯೆಂದರು. ವಿಶ್ವಾಮಿತ್ರರು ಅದನ್ನು ಬಲವಂತವಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಆ ಹಸು ಸೃಷ್ಟಿಸಿದ ಸೈನ್ಯವು ರಾಜನ ಸೈನ್ಯವನ್ನು ಹತ್ತಿಕ್ಕಿತು. ವಿಶ್ವಾಮಿತ್ರರ ನೂರು ಮಕ್ಕಳು ವಸಿಷ್ಠರ ಮೇಲೆ ದಾಳಿ ಮಾಡಿದಾಗ, ಹುಂಕಾರಮಾತ್ರದಿಂದ ವಸಿಷ್ಠರು ಅವರೆಲ್ಲರನ್ನೂ ಬೂದಿಮಾಡಿದರು! ಅಷ್ಟೂ ಜನ ಮಕ್ಕಳನ್ನು ಕಳೆದುಕೊಂಡ ವಿಶ್ವಾಮಿತ್ರರು ಮಂಕಾದರು. ಅವರಲ್ಲಿ ನಿರ್ವೇದ(ಎಂದರೆ ಹತಾಶೆ) ಉಂಟಾಗಿ ತಮ್ಮ ರಾಜ್ಯವನ್ನು ಉಳಿದೊಬ್ಬ ಮಗನಿಗೆ ವಹಿಸಿ ಈಶ್ವರನನ್ನು ಕುರಿತು ತಪಸ್ಸು ಮಾಡಲು ಹೊರಟರು. ತಪಸ್ಸು ಫಲಿಸಿ, ಶಿವನು ಪ್ರತ್ಯಕ್ಷನಾದಾಗ ಸಂಪೂರ್ಣಧನುರ್ವೇದವನ್ನು - ಸಮಸ್ತ ರಹಸ್ಯಗಳೊಂದಿಗೂ ಅಸ್ತ್ರಗಳೊಂದಿಗೂ - ವರವಾಗಿ ಕೇಳಿ ಪಡೆದರು.

ಇದರಿಂದಾಗಿ ಅವರಿಗೆ ದರ್ಪವು ಹೆಚ್ಚಾಗಿ ಮತ್ತೆ ವಸಿಷ್ಠರ ವಿರುದ್ಧ ಸೇಡಿಗೆ ಹೊರಟರು. ಅವರು ಅಸ್ತ್ರಗಳ ಮಳೆಗರೆದು ವಸಿಷ್ಠರ ಆಶ್ರಮವನ್ನು ಸುಟ್ಟುಹಾಕಿದರು. ಅಲ್ಲಿದ್ದ ವಸಿಷ್ಠರ ಶಿಷ್ಯರು ಕಂಗೆಟ್ಟು ದಿಕ್ಕಾಪಾಲಾಗಿ ಓಡಿದರು. ಆಗ ವಸಿಷ್ಠರಿಗೆ ಕೋಪವುಕ್ಕಿಬಂದು, "ದುರಾಚಾರ, ಮೌಢ್ಯದಿಂದ ನೀನಿನ್ನು ಇಲ್ಲವಾಗುತ್ತೀಯೆ!" ಎಂದು ತಮ್ಮ ಬ್ರಹ್ಮದಂಡವನ್ನು ಎತ್ತಿಹಿಡಿದರು.


ವಿಶ್ವಾಮಿತ್ರರು ಪ್ರಯೋಗ ಮಾಡಿದ ಅಸ್ತ್ರಗಳನ್ನೆಲ್ಲ ಆ ಕಾಲದಂಡದಂತಿದ್ದ ಬ್ರಹ್ಮದಂಡವು ನುಂಗಿಹಾಕಿಬಿಟ್ಟಿತು. ಬೇರೆಲ್ಲ ಅಸ್ತ್ರಗಳಿರಲಿ, ಕೊನೆಗೆ ಬ್ರಹ್ಮಾಸ್ತ್ರವನ್ನೂ ಅದು ನುಂಗಿಹಾಕಿತು. ಆಗ ರುದ್ರಭಯಂಕರರಾಗಿ ಕಾಣುತ್ತಿದ್ದ ವಸಿಷ್ಠರನ್ನು ಕಂಡು ಲೋಕವೇ ತಲ್ಲಣಿಸಿಹೋಯಿತು. ಕೊನೆಗೆ ಮುನಿಗಳ ಪ್ರಾರ್ಥನೆಯನ್ನೂ ಸಾಂತ್ವನದ ಮಾತುಗಳನ್ನೂ ಕೇಳಿ ವಸಿಷ್ಠರು ಶಾಂತವಾದರು. ಪರಾಜಯವನ್ನೊಪ್ಪಿದ ವಿಶ್ವಾಮಿತ್ರರಿಗೆ ಬ್ರಹ್ಮಬಲವು ಕ್ಷಾತ್ರಬಲಕ್ಕಿಂತ ಬಹಳ ದೊಡ್ಡದೆಂದು ಮನವರಿಕೆಯಾಗಿ ಬ್ರಹ್ಮತ್ವ ಕೊಡುವ ತಪಸ್ಸನ್ನಾಚರಿಸುವೆ ಎಂದು ಹೊರಟುಬಿಟ್ಟರು.

ಮೊದಲೂ ವಿಶ್ವಾಮಿತ್ರರು ಈಶ್ವರನ್ನು ಕುರಿತು ಮಾಡಿದ್ದೂ ತಪಸ್ಸೇ, ಈಗ ಮಾಡಹೊರಟದ್ದೂ ತಪಸ್ಸೇ. ಮೊದಲೂ, ಮಕ್ಕಳನ್ನು ಕಳೆದುಕೊಂಡಾಗ, ಅವರಿಗೆ ವೈರಾಗ್ಯವೇ ಬಂದಿತ್ತು, ಈಗಲೂ, ಬ್ರಾಹ್ಮಬಲದೆದುರು ಕ್ಷಾತ್ರಬಲದ ನಿಷ್ಪ್ರಯೋಜಕತೆ ತಿಳಿದಾಗ, ಬಂದದ್ದೂ ವೈರಾಗ್ಯವೇ. ಆದರೆ ಎರಡಕ್ಕೂ ವ್ಯತ್ಯಾಸವಿಲ್ಲವೇ?


ಮೊದಲ ಸಂನಿವೇಶದಲ್ಲಿ ವಿಶ್ವಾಮಿತ್ರರಿಗೆ ಜೀವನದಲ್ಲಿ ಬೇಸರ ಹುಟ್ಟಿ, ರಾಜ್ಯವನ್ನು ಮಗನಿಗೊಪ್ಪಿಸಿ ಹೊರಟಿದ್ದರಾದರೂ, ಸೇಡಿನ ಬೆಂಕಿ ಬೂದಿಮುಚ್ಚಿದ ಕೆಂಡದಂತೆ ಅವರಲ್ಲಿ ಇನ್ನೂ ಜೀವಂತವಿತ್ತು. ಘೋರತಪಸ್ಸಾಚರಿಸಿ ಕೇಳಿದ್ದಾದರೂ ಏನನ್ನು? ಆ ಕೆಂಡಕ್ಕೆ ಗಾಳಿಯೂದಿ ಭಗ್ಗನೆ ಕಿಚ್ಚನ್ನೆಬ್ಬಿಸಲು ಬೇಕಾದ ಧನುರ್ವಿದ್ಯೆಯನ್ನು. ತಪಸ್ಸು ತಪ್ಪಲ್ಲ, ಸಂಪೂರ್ಣಧನುರ್ವಿದ್ಯೆ ಕೇಳಿದ್ದು ತಪ್ಪಲ್ಲ. ಆದರೆ ಕೇಳಿದ ಉದ್ದೇಶ ತಪ್ಪಾದ ದಿಕ್ಕಿನತ್ತ ಒಯ್ಯುವಂತಿದ್ದದ್ದು. ಎರಡನೆ ಬಾರಿ ಅವರಿಗೆ ನಿರ್ವೇದವುಂಟಾದಾಗ, ಈ ತಾಮಸಿಕಾಭಿಲಾಷೆ ಬಿಟ್ಟು, ಆತ್ಮೋನ್ನತಿಗಾಗಿ ತಪಸ್ಸನ್ನಾಚರಿಸಹೊರಟರು. ಶ್ರೀರಂಗಮಹಾಗುರುಗಳು ಹೇಳಿದ್ದಂತೆ, "ಪ್ರಕೃತಿಯು ಪ್ರಕೋಪಗೊಂಡರೆ ಮಾರಕವಸ್ತುವಾಗುತ್ತದೆ. ಅದೇ ಪ್ರಸನ್ನವಾಗಿ ನಿಂತರೆ ಕ್ಷಣಮಾತ್ರದಲ್ಲಿಯೇ ತಾರಕವಾಗುತ್ತದೆ." ಕ್ರೋಧ-ಮದ-ಮಾತ್ಸರ್ಯಗಳಿಂದ ವಿಶ್ವಾಮಿತ್ರರು ಮಾಡಿದ ತಪಸ್ಸೂ, ಅದರ ಫಲವೂ ದುರ್ದಿಶೆಯಿಂದಾಗಿ ಅವರ ದುರ್ದಶೆಗೆ ಕಾರಣವಾಯಿತು. ನಾವು ಘನಕಾರ್ಯವನ್ನು ಮಾಡಹೊರಟಿದ್ದಾಗಲೂ ಘನೋದ್ದೇಶದಿಂದ ಮಾಡಿದಾಗಲೇ ಸಾರ್ಥಕತೆ.

ಸೂಚನೆ: 14/5/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Sunday, May 12, 2024

ಯಕ್ಷ ಪ್ರಶ್ನೆ 89 (Yaksha prashne 89)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 88 ಮಾನವನಿಗೆ ಜಯಿಸಲು ಅಸಾಧ್ಯವಾದ ಶತ್ರು ಯಾರು?

ಉತ್ತರ - ಕ್ರೋಧ.  

ಕ್ರೋಧ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಯಕ್ಷನು ಅನೇಕ ಪ್ರಶ್ನೆಗಳನ್ನು ಕೇಳಿದ್ದಾನೆ. ಅದಕ್ಕೆ ಧರ್ಮರಾಜನು ಉತ್ತರವನ್ನೂ ಕೊಟ್ಟಿದ್ದಾನೆ. ಮತ್ತೆ ಅದೇ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಯನ್ನು ಕೇಳುತ್ತಿದ್ದಾನೆ. ಕೇಳಿದ್ದನ್ನೇ ಕೇಳುವುದು ಪುನರುಕ್ತಿಯಲ್ಲವೇ ? ಅಥವಾ ಯಕ್ಷನಿಗೆ ಪ್ರಶ್ನೆಯನ್ನು ಕೇಳಲು ಮತ್ತೆ ಉಳಿದಿಲ್ಲವೇ ? ಹಾಗಲ್ಲ. ಒಂದೇ ವಿಷಯ ಅಥವಾ ವಸ್ತುವಾದರೂ ಅದು ಅನೇಕ ರೀತಿಯಲ್ಲಿ ವಿವರಣೆಯನ್ನು ಅಪೇಕ್ಷೆಪಡುತ್ತದೆ. ಮತ್ತು ಅದು ಅನೇಕ ಮುಖವನ್ನು ಹೊಂದಿರುತ್ತದೆ ಕೂಡ. ಮತ್ತು ಕೆಲವೊಮ್ಮೆ ಒಂದೇ ವಿಷಯವನ್ನು ಅನೇಕ ಬಾರಿ ವಿಮರ್ಶಿಸಿದಾಗ ಅದು ದೃಢವಾಗಲೂಬಹುದು. ಹಾಗಾಗಿ ಇಂತಹ ಅನೇಕ ಪ್ರಯೋಜನಗಳಿಂದಲೇ ಈ ಪ್ರಶ್ನೆಯನ್ನು ಯಕ್ಷನು ಕೇಳಿರಬಹುದು ಎಂದು ನಾವು ಅಂದುಕೊಳ್ಳಬಹುದು. 

ಜೀವನದಲ್ಲಿ ಅನೇಕ ಬಾರಿ ಸೋಲುತ್ತೇವೆ. ಹಾಗೆಯೇ ಅನೇಕ ಬಾರಿ ಗೆಲ್ಲುತ್ತೇವೆ ಕೂಡ. ಆ ಸೋಲು ಮತ್ತು ಗೆಲುವುಗಳು ಕೆಲವೊಮ್ಮೆ ಕಠಿನವೂ ಆಗಬಹುದು ಅಥವಾ ಸುಲಭವೂ ಆಗಬಹುದು. ಅಥವಾ ಕೆಲವೊಮ್ಮೆ ಗೆಲ್ಲಲು ಆಗದೆಯೂ ಇರಬಹುದು, ಇನ್ನು ಕೆಲವೊಮ್ಮೆ ಗೆಲ್ಲಲು ಅತ್ಯಂತ ಕಷ್ಟವೂ ಆಗಬಹುದು. ಅಂತಹ ಗೆಲ್ಲಲು ಕಷ್ಟಸಾಧ್ಯವಾದ ಶತ್ರು ಯಾವುದು ಎಂಬುದು ಇಲ್ಲಿನ ಯಕ್ಷಪ್ರಶ್ನೆಯಾಗಿದೆ. ಅದಕ್ಕೆ ಉತ್ತರ 'ಕ್ರೋಧ' ಎಂಬುದು.

ಶತ್ರುಗಳಲ್ಲಿ ಅಂತಃಶತ್ರು ಹಾಗು ಬಹಿಃಶತ್ರು ಎಂಬುದಾಗಿ ಎರಡು ಬಗೆಯ ಶತ್ರುಗಳು ಇರುತ್ತಾರೆ. ಬಹಿರಂಗವಾಗಿ ಇರುವ ಶತ್ರುಗಳು ಹೊರಗಣ್ಣಿಗೆ ಕಾಣುವ ಆಕೃತಿರೂಪದಲ್ಲಿರುವ ಮೂರ್ತರೂಪರಾದ ಶತ್ರುಗಳಾಗಿರುತ್ತಾರೆ. ಅವರನ್ನು ಸದೆಬಡಿಯುವುದು ಅಥವಾ ನಿಯಂತ್ರಿಸುವುದು ಅಷ್ಟೇನೂ ಕಷ್ಟವಾಗಲಾರದು. ಅವರನ್ನು ಅಸ್ತ್ರ ಅಥವಾ ಶಸ್ತ್ರ ಮೊದಲಾದ ಸಾಧನಗಳಿಂದ ಜಯಿಸಲು ಸಾಧ್ಯ. ಆದರೆ ಅಂತಃಶತ್ರುಗಳು ನಮ್ಮ ಹೊರಗಣ್ಣಿಗೆ ಕಾಣಲಾರರು. ಅವರು ಅಮೂರ್ತರು. ಅವರನ್ನೇ ಕಾಮ ಕ್ರೋಧಾದಿ ಅರಿಷಡ್ವರ್ಗ ಎಂದೂ ಕರೆಯುತ್ತಾರೆ. ಇವುಗಳಲ್ಲಿ ಎರಡನೆಯ ಶತ್ರುವೇ ಕ್ರೋಧ. ಕ್ರೋಧವೆಂದರೆ ಸಿಟ್ಟು, ಕೋಪ, ಮರ್ಷ ಮೊದಲಾದ ಪದಗಳಿಂದ ಕರೆಯಲ್ಪಡುತ್ತದೆ. ಸಿಟ್ಟನ್ನು ಒಂದು ಅಗ್ನಿಯ ರೂಪದಲ್ಲಿ ಕಾಣುತ್ತೇವೆ. 'ಕೋಪಾಗ್ನಿಯು ಸುಟ್ಟಿತು' ಇತ್ಯಾದಿ ಕಾವ್ಯಮಯವಾದ ಭಾಷೆಯಲ್ಲಿ ಹೇಳುವುದೂ ಉಂಟು. ಇಂತಹ ಕ್ರೋಧಶಮನವೆಂಬುದು ದುಃಸಾಧ್ಯ ಅಥವಾ ಅತ್ಯಂತ ಕಷ್ಟ ಎಂಬುದಾಗಿ ಇಲ್ಲಿ ಧರ್ಮರಾಜನು ಹೇಳುತ್ತಾನೆ. ಕ್ರೋಧವು ಎಂತವನನ್ನೂ ಬಿಡುವುದಿಲ್ಲ. ಸಾಮಾನ್ಯನಿಗೆ ಕೋಪವು ಬಂದರೆ ಆತ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ. ಸಿಟ್ಟು ಬಂದರೆ ಎಂತಹ ಅವಿವೇಕ ಆವರಿಸುತ್ತದೆ ಎಂದರೆ ತನ್ನನ್ನೇ ಅಥವಾ 'ಕ್ರುದ್ಧಃ ಹನ್ಯಾತ್ ಗುರೂನಪಿ' ಎಂಬ ಮಾತಿನಂತೆ ತನ್ನ ಗುರುವನ್ನೇ ಕೊಲ್ಲಲೂಬಹುದು. ಅದು ಮನಸ್ಸನ್ನು ಹಾಳುಮಾಡುತ್ತದೆ. ಮನಸ್ಸಿನ ಸ್ತಿಮಿತತೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಆದರೆ ಸಾಧು ಸಂತರು ಕೋಪವನ್ನು ಅವರ ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲರು. ಅವರು ಬೇಕಾದಾಗ ಸಾತ್ತ್ವಿಕಕಾರ್ಯಕ್ಕೆ ಆ ಕೋಪವನ್ನು ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಅನೇಕ ಪುರಾಣಕಥೆಗಳನ್ನು ನೋಡಬಹುದು. ಅಂದರೆ ಕೋಪವು ಕೆಟ್ಟದ್ದೆಂದರ್ಥವಲ್ಲ. ಹಾಗಾದರೆ ಕೋಪವನ್ನು ತಡೆಯುವ ಬಗೆ ಹೇಗೆ? ಎಂದರೆ ಅದರ ಮೂಲವಾದ ಕಾಮವನ್ನು - ಬಯಕೆಯನ್ನು ನಿಯಂತ್ರಿಸಿಕೊಳ್ಳಬೇಕು ಅಷ್ಟೇ. ರಾಜಸಿಕ ಮತ್ತು ತಾಮಸಿಕ ಬಯಕೆಯನ್ನು ಬಿಟ್ಟು ಕೇವಲ ಸಾತ್ತ್ವಿಕವಾದ ಬಯಕೆಯನ್ನು ಮಾತ್ರ ಇಟ್ಟುಕೊಳ್ಳುತ್ತಾ ಬಂದರೆ ಕೋಪವು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತದೆ. 

ಸೂಚನೆ : 12/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 87 ನೆರವೇರಿತು ಯುಧಿಷ್ಠಿರನ ಪಟ್ಟಾಭಿಷೇಕ! (Vyasa Vikshita 87 Neraveritu Yudhishthirana Pattabhisheka!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




 

ಧೃತರಾಷ್ಟ್ರನು ವಿದುರನಿಗೆ ಹೇಳಿದನು: ಎಲ್ಲ ಪ್ರಮುಖರನ್ನೂ ಬಾಂಧವರನ್ನೂ ಕರೆಯೋಣವಾಗಲಿ! ಪುಣ್ಯಾಹವಾಚನವಾಗಲಿ! ಗೋಸಹಸ್ರದಾನವಾಗಲಿ!

 

ವಿದುರ, ಕಿರೀಟವನ್ನು ಅಂಗದಗಳನ್ನು ಹಸ್ತಾಭರಣವನ್ನು ಹಾರ-ಕುಂಡಲಗಳನ್ನು ಮುಂತಾದೆಲ್ಲವನ್ನೂ ತನ್ನಿ. ಗಂಗಾಜಲವನ್ನು ಶೀಘ್ರವಾಗಿ ತನ್ನಿ. ಯುಧಿಷ್ಠಿರನ ಮೇಲೆ ಪಟ್ಟಾಭಿಷೇಕಜಲವು ಸುರಿಯುವುದನ್ನು ಪುರಜನರೆಲ್ಲ ಕಾಣಲಿ! ಸರ್ವಾಭರಣಭೂಷಿತನೂ ದಿವ್ಯಚಾಮರಸೇವೆಯುಳ್ಳವನೂ ಸುವರ್ಣಮಣಿಗಳುಳ್ಳ ಶ್ವೇತಚ್ಛತ್ರದಿಂದ ಶೋಭಿತನೂ ಆದ ಅವನನ್ನು ನೋಡಲಿ! "ಜಯ" ಎಂಬ ಮಾತನ್ನು ದ್ವಿಜರೂ ಇತರ ನೃಪರೂ ಘೋಷಿಸುತ್ತಿರುವುದನ್ನು ನೋಡಿ ಸಂತೋಷಪಡಲಿ! ಸಂತುಷ್ಟವಾದ ಮನಸ್ಸಿನಿಂದ ಪುರಜನರು ಕೊಂಡಾಡಲಿ!

 

ತನ್ನ ರಾಜ್ಯವನ್ನು ನನಗಿತ್ತು ಪಾಂಡುವು ನನಗೆ ಉಪಕಾರಮಾಡಿದನಲ್ಲವೆ? ಅದಕ್ಕೆ ಪ್ರತಿಯಾಗಿ ಯುಧಿಷ್ಠಿರನಿಗೆ ರಾಜ್ಯವನ್ನು ಈಗ ಕೊಡಲಾಗುತ್ತಿದೆ - ಎಂದನು.

ಧೃತರಾಷ್ಟ್ರನ ಈ ಉಕ್ತಿಗೆ ಭೀಷ್ಮ-ದ್ರೋಣ-ಕೃಪರೂ ವಿದುರನೂ "ಸಾಧು ಸಾಧು!" (ಭಲೆ! ಭಲೆ!!) ಎಂದರು. ಕೃಷ್ಣನೂ ಹೇಳಿದನು: ಮಹಾರಾಜ, ಇದು ಸರಿಯಾಗಿದೆ. ಕೌರವರಿಗೆ ಕೀರ್ತಿಕರವಾಗಿದೆ. ನೀನು ಹೇಳಿದುದನ್ನು ಅಂತೆಯೇ ಈಗಲೇ ಪೂರೈಸಿಬಿಡುವುದೊಳಿತು - ಎಂದು. ಹೀಗೆ ಹೇಳಿದವನಾಗಿ, ಕೃಷ್ಣನು ಧೃತರಾಷ್ಟ್ರನನ್ನು ತ್ವರೆಗೊಳಿಸಿದನು. ಧೃತರಾಷ್ಟ್ರನು ಏನನ್ನು ಹೇಳಿದ್ದನೋ ಅದನ್ನು ಮಾಡಿಸಿಯೇಬಿಟ್ಟನು.

 

ಆ ಹೊತ್ತಿಗೆ ಶ್ರೀಕೃಷ್ಣದ್ವೈಪಾಯನರು (ಎಂದರೆ ವ್ಯಾಸರು) ಅಲ್ಲಿಗೆ ಆಗಮಿಸಿದರು. ಕೌರವರೂ ಅವರ ಮಿತ್ರರೂ ಅವರಿಗೆ ವಂದಿಸಿದರು. ಆಗ ಯುಧಿಷ್ಠಿರನಿಗೆ ಅಭಿಷೇಕವನ್ನು ಮಾಡಿದವರೆಂದರೆ ಕೃಪ, ದ್ರೋಣ, ಭೀಷ್ಮ, ಧೌಮ್ಯ, ವ್ಯಾಸ, ಹಾಗೂ ಕೇಶವ; ಅಲ್ಲದೆ ಬಾಹ್ಲೀಕ, ಸೋಮದತ್ತರು. ನಾಲ್ಕೂ ವೇದಗಳಲ್ಲಿ ಪಾರಂಗತರಾದವರೊಂದಿಗೆ ಇದು ನೆರವೇರಿತು.

 

ಅವರೆಲ್ಲರೂ ಯುಧಿಷ್ಠಿರನಿಗೆ ಆಶೀರ್ವಾದವನ್ನಿತ್ತರು - ಭೂಮಿಯನ್ನೆಲ್ಲ ಜಯಿಸಿ, ನರಶ್ರೇಷ್ಠರನ್ನು ತನ್ನ ವಶಕ್ಕೆ ತಂದುಕೊಂಡವನಾಗಿ, ರಾಜಸೂಯ ಮೊದಲಾದ ಯಜ್ಞಗಳನ್ನು ಮಾಡಿ, ಭೂರಿದಕ್ಷಿಣೆಯಿತ್ತು (ಭೂರಿ ಎಂದರೆ ಹೆಚ್ಚಾದ), ಅವಭೃಥಸ್ನಾನವನ್ನು ಮಾಡಿ, ಬಂಧುಗಳೊಂದಿಗೆ ಸಂತೋಷಪಡಲಿ - ಎಂಬ ಆಶೀರ್ವಾದಗಳೊಂದಿಗೆ ಅವರೆಲ್ಲರೂ ಯುಧಿಷ್ಠಿರನನ್ನು ಆದರಿಸಿದರು.

ಹೀಗೆ ಮೂರ್ಧಾಭಿಷಿಕ್ತನಾದ ಯುಧಿಷ್ಠಿರನು ಸರ್ವಾಭರಣಭೂಷಿತನಾಗಿ ಜಯಕಾರವನ್ನು ಸ್ವೀಕರಿಸುತ್ತಾ ಅಕ್ಷಯವಾದ ಧನವನ್ನು ಪ್ರದಾನಮಾಡಿದನು. ಮೂರ್ಧಾಭಿಷಿಕ್ತರಾದ ರಾಜರೆಲ್ಲರೂ ಯುಧಿಷ್ಠಿರನಿಗೆ ಪೂಜೆಯನ್ನು ಸಲ್ಲಿಸಿದರು. ಗಜರಾಜನನ್ನೇರಿ ಶ್ವೇತಚ್ಛತ್ರದಿಂದ ಶೋಭಿಸುವವನಾಗಿ ಅನೇಕಪ್ರಜೆಗಳಿಂದ ಅನುಸೃತನಾಗಿ ಕಂಗೊಳಿಸಿದನು - ದೇವತೆಗಳಿಂದ ಸುತ್ತುವರೆಯಲ್ಪಟ್ಟ ಮಹೇಂದ್ರನ ಹಾಗೆ. ಆಮೇಲೆ ಹಸ್ತಿನಾವತಿಯನ್ನು ಪ್ರದಕ್ಷಿಣೆಮಾಡಿದನು. ನಗರಜನರಿಂದ ಪೂಜಿತನಾಗಿ, ಬಳಿಕ ಪುರಪ್ರವೇಶವನ್ನು ಮಾಡಿದನು. ಬಂಧುಗಳು ಆತನನ್ನು ಅಭಿನಂದಿಸಿದರು.

ಆದರೆ ಗಾಂಧಾರಿಯ ಮಕ್ಕಳಾದ ಕೌರವರು ಇದನ್ನೆಲ್ಲ ಕಂಡು ಬಂಧುಗಳೊಂದಿಗೆ ಸಂಕಟಪಟ್ಟುಕೊಂಡರು. ಮಕ್ಕಳ ಶೋಕವನ್ನು ಧೃತರಾಷ್ಟ್ರನು ಅರಿತುಕೊಂಡನು. ಶ್ರೀಕೃಷ್ಣನೆದುರಿಗೇ ಹಾಗೂ ಕೌರವರ ಎದುರಿಗೇ ಈ ಮಾತುಗಳನ್ನಾಡಿದನು.

"ಯುಧಿಷ್ಠಿರನೇ, ನಿನಗೆ ರಾಜ್ಯಾಭಿಷೇಕವು ಉಂಟಾಗಿರುವುದಷ್ಟೆ. ಇದು ಜಿತಾತ್ಮರಲ್ಲದವರಿಗೆ (ಎಂದರೆ ಸಂಯಮರಹಿತರಿಗೆ) ದುಷ್ಪ್ರಾಪವಾದದ್ದು (ಪಡೆಯಲು ಅಶಕ್ಯವಾದದ್ದು). ನೀನು ಕೃತಕೃತ್ಯನಾಗಿದ್ದೀಯೇ. ಇಂದೇ ಹೊರಡು. ಆಯುಸ್, ಪುರೂರವಸ್, ನಹುಷ, ಯಯಾತಿ - ಇವರುಗಳೆಲ್ಲರೂ ಈ ಖಾಂಡವದಲ್ಲಿಯೇ ನಿವಾಸಮಾಡುತ್ತಿದ್ದರು, ನೃಪವರನೇ. ಎಲ್ಲ ಪೌರವರಿಗೂ (ಎಂದರೆ ಪುರುವಂಶದ ಅರಸರಿಗೂ) ಇದುವೇ ರಾಜಧಾನಿಯಾಗಿತ್ತು, ಮಹಾಭುಜನೇ. ಮುಂದಿನ ಕಾಲಕ್ಕೆ ಬುಧಪುತ್ರನ ಲೋಭದಿಂದಾಗಿ ಮುನಿಗಣಗಳೇ ಇದನ್ನು ಹಾಳುಗೆಡವುವಂತಾಯಿತು. ಆದ್ದರಿಂದ ನೀನು ಖಾಂಡವಪ್ರಸ್ಥಪುರವನ್ನೂ ರಾಷ್ಟ್ರವನ್ನೂ ಬೆಳೆಸು."


ಸೂಚನೆ : 12
/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 58 ಮುಕ್ತಿದಾಯಾಸ್ತು ಮಂಗಲಂ (Astaksari 58 – Muktidayastu Mangalam)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ರಾಮಾಯಣವು ಒಂದು ಅದ್ಭುತವಾದ ಕಥೆಯೆಂಬುದರಲ್ಲಿ ಸಂಶಯವಿಲ್ಲ. ಆದರೆ ಅದನ್ನು ಬರೀ ಕಥೆಯೆಂದು ಭಾರತೀಯ-ಪರಂಪರೆ ಗಣಿಸುವುದಿಲ್ಲ. ಮೂಲ-ವಾಲ್ಮೀಕಿರಾಮಾಯಣವನ್ನು ನಿತ್ಯವೂ ಒಂದಿಷ್ಟು ಪಠಿಸುವುದುಂಟು. ಆದರೆ ಪಠಿಸಲು ಪರಂಪರಾಗತವಾದ ಕ್ರಮವಿದೆ. ಅದನ್ನು ಪಾರಾಯಣವೆನ್ನುವರು. ಪಾರಾಯಣಕ್ರಮದಲ್ಲಿ ಆರಂಭದಲ್ಲಿ ಕೆಲವು ನಮಸ್ಕಾರ-ಶ್ಲೋಕಗಳನ್ನೂ, ಮುಗಿಸುವಾಗ ಕೆಲವು ಮಂಗಲ-ಶ್ಲೋಕಗಳನ್ನೂ, ಹೇಳುವುದುಂಟು; ಅವನ್ನು ಉಪಕ್ರಮ ಹಾಗೂ ಸಮಾಪನ ಎನ್ನುತ್ತಾರೆ.

ಸಮಾಪನದಲ್ಲಿ ರಾಮ-ಮಂಗಳಗಳನ್ನು ಹೇಳುವಲ್ಲಿ, ಜಟಾಯುವಿಗೆ ರಾಮನು ಮಾಡಿದ ಅನುಗ್ರಹವನ್ನು ಸ್ಮರಿಸುವ ಶ್ಲೋಕವೊಂದು ಕೆಲ ಸಂಪ್ರದಾಯಗಳಲ್ಲುಂಟು. ದಂಡಕಾರಣ್ಯದಲ್ಲಿ ವಾಸಮಾಡಿ, ರಾಕ್ಷಸರನ್ನು ಖಂಡಿಸಿ (ಎಂದರೆ ಸಂಹರಿಸಿ), ಗೃಧ್ರ-ರಾಜನಾದ ಭಕ್ತ-ಜಟಾಯುವಿಗೆ ಮುಕ್ತಿಯಿತ್ತವನಿಗೆ ಮಂಗಳವಾಗಲಿ – ಎನ್ನುತ್ತದೆ ಆ ಶ್ಲೋಕ: ಮುಕ್ತಿದಾಯಾಸ್ತು ಮಂಗಲಂ.

ಏನು ಜಟಾಯುವಿನ ವಿಶೇಷ? – ಎಂಬ ಪ್ರಶ್ನೆ ಸಹಜವಷ್ಟೆ. ಅರಣ್ಯಕಾಂಡದಲ್ಲಿ ನಾವು ಜಟಾಯುವನ್ನು ಕಾಣುತ್ತೇವೆ. ಮೊಟ್ಟಮೊದಲಿಗೆ ಆತನನು ಕಂಡಾಗ ರಾಮಲಕ್ಷ್ಮಣರಿಬ್ಬರೂ ಆತನನ್ನು ರಾಕ್ಷಸನೆಂದೇ ಭಾವಿಸಿದ್ದರು! ವೃದ್ಧ-ಜಟಾಯುವಿನ ಸೌಮ್ಯವೂ ಮಧುರವೂ ಆದ ಮಾತು ಆತನ ವಿಷಯದಲ್ಲಿ ಇವರಿಗೆ ಸಂತೋಷವುಂಟುಮಾಡಿತು. ದಶರಥನ ಸ್ನೇಹಿತನು ಆತನೆಂಬುದು ತಿಳಿಯಿತು. ತನ್ನ ವಂಶಾವಲಿಯನ್ನು ತಿಳಿಸಿದ ಆತ ತಾನಾಗಿ ಒಂದು ಮಾತನಾಡುತ್ತಾನೆ: ನೀವಿಬ್ಬರೂ ಹೊರಗೆ ಹೋಗಿರುವಲ್ಲಿ ಸೀತೆಯನ್ನು ರಕ್ಷಿಸುವೆನೆನ್ನುತ್ತಾನೆ. ತನ್ನ ಮಾತನ್ನುಳಿಸಿಕೊಳ್ಳಲೆಳಸುತ್ತಾನೆ ಕೂಡ.

ಇಷ್ಟಾಗಿಯೂ, ಮಾಯಾಮೃಗ-ಪ್ರಸಂಗದಲ್ಲಿ, ಮಾರೀಚ-ಸಂಹಾರವಾದ ಬಳಿಕ ರಾಮನು ಹಿಂತಿರುಗುತ್ತಾ, ಲಕ್ಷ್ಮಣನೊಬ್ಬನೇ ಬರುತ್ತಿರುವುದನ್ನು ಕಂಡು ಕಂಗಾಲಾಗುತ್ತಾನೆ. "ಏನು ಕೆಲಸ ಮಾಡಿದೆ? ಸೀತೆಯೊಬ್ಬಳನ್ನೇ ಬಿಟ್ಟು ಬರುವುದೇ?!" - ಎಂದು ಆಕ್ರೋಶದಿಂದ ಉದ್ಗರಿಸುತ್ತಾನೆ. ರಾಕ್ಷಸರು ಅವಳನ್ನು ತಿಂದುಹಾಕಿರಲಿಕ್ಕೂ ಸಾಕೆಂದುಕೊಳ್ಳುತ್ತಾನೆ. "ಹಾ ಸೀತೇ! ಹಾ ಲಕ್ಷ್ಮಣಾ!" –  ಎಂಬುದಾಗಿ ಮಾರೀಚನು ರಾಮನ ಧ್ವನಿಯಲ್ಲೇ ಕೂಗಿಕೊಂಡನಲ್ಲವೇ (ಮೊಟ್ಟಮೊದಲ ಡೀಪ್ ಫೇಕ್!)? ಅದರಿಂದ ಆಗ(ಗಿರ)ಬಹುದಾದ ಅನರ್ಥವನ್ನು ರಾಮನು ಊಹಿಸಿಕೊಳ್ಳುತ್ತಾನೆ: ತನ್ನ ಪ್ರಾಣದ ಪ್ರಶ್ನೆಯಿದು; ಅಥವಾ ಪ್ರಾಣಕ್ಕಿಂತ ಹೆಚ್ಚಾದವಳ ಜೀವಿತದ ಪ್ರಶ್ನೆಯಿದು!

ತೀವ್ರ-ಶೋಕಾವಿಷ್ಟರಾಗಿ ಸೀತಾನ್ವೇಷಣೆ ಮಾಡುತ್ತಿರುವಲ್ಲಿ ರಕ್ತ-ಸಿಕ್ತನಾದ ಜಟಾಯು ಕಾಣುತ್ತಾನೆ. ಆತನನ್ನು ಕಂಡು ರಾಮನು ಮೊದಲೆಂದುಕೊಳ್ಳುವುದೇ, "ಈ ರೂಪದಲ್ಲಿರುವುದು ಯಾವನೋ ರಾಕ್ಷಸನೇ ಸರಿ! ಸೀತೆಯನ್ನು ಈತನೇ ತಿಂದುಹಾಕಿ ಸುಖವಾಗಿ ನಿದ್ರಿಸುತ್ತಿರಬೇಕು! ಈತನನ್ನೀಗಲೇ ಸಂಹರಿಸಿಬಿಡುವೆ" – ಎಂಬುದಾಗಿ!

ಅಷ್ಟರಲ್ಲಿ ಜಟಾಯುವೇ ದೀನನಾಗಿ ಮಾತನಾಡಿ, ಸೀತೆಯನ್ನುಳಿಸಲಿಕ್ಕಾಗಿ ಸೆಣಸಿ ಹೆಣಗಿ ತಾನು ರೆಕ್ಕೆ ಕಳೆದುಕೊಂಡು ಬಿದ್ದಿರುವುದನ್ನೂ, ತನಗೆ ಕೊನೆಗಾಲವೀಗ ಬಂದಿರುವುದನ್ನೂ ತಿಳಿಸುತ್ತಾನೆ. "ಸೀತಾಪಹರಣ ಮಾಡಿದವನು ರಾವಣ, ದಕ್ಷಿಣದಿಕ್ಕಿಗಾತ ಸಾಗಿದ" - ಮುಂತಾದ ವಿವರಗಳನ್ನೂ ತಿಳಿಸುತ್ತಾನೆ. "ನಿನಗೆ ಸೀತೆ ಮತ್ತೆ ದೊರೆಯುವಳು" – ಎಂದು (ಮುಹೂರ್ತದ ಆಧಾರದ ಮೇಲೆ) ತಿಳಿಸಿ, ಅಸುನೀಗುತ್ತಾನೆ.

"ನನಗಾಗಿ ಪ್ರಾಣಬಿಟ್ಟ ಈ ಪಕ್ಷಿರಾಜನು ನನಗೆ ಮಹೋಪಕಾರವನ್ನು ಮಾಡಿದ್ದಾನೆ; ತಂದೆ ದಶರಥನೆಂತೋ ಈತನು ನನಗಂತೆಯೇ ಸರಿ: ಈತನಿಗೆ ಸಂಸ್ಕಾರವನ್ನು ಮಾಡಬೇಕು" – ಎನ್ನುತ್ತಾ ರಾಮನು ಹೀಗನುಗ್ರಹಿಸುತ್ತಾನೆ: "ಯಜ್ಞ-ಶೀಲರಿಗೆ ಯಾವ ಗತಿಯೋ, ರಣದಲ್ಲಿ ಹಿಂದಿರುಗದವರಿಗೆ ಯಾವ ಗತಿಯೋ ಆ ಗತಿಯನ್ನು – ಇದೋ ನನ್ನ ಆಣತಿಯಂತೆ – ನೀನು ಹೊಂದುವವನಾಗು!" ಜಟಾಯುವಿಗೆ ದಹನ-ಸಂಸ್ಕಾರವನ್ನು ಮಾಡುತ್ತಾನೆ; ಪಿತ್ರ್ಯ-ಮಂತ್ರಗಳನ್ನು ಜಪಿಸುತ್ತಾನೆ. ಗೋದಾವರಿಯಲ್ಲಿ ಜಲೋದಕವನ್ನು ಇಬ್ಬರೂ ಬಿಡುತ್ತಾರೆ. "ರಾಮನಿಂದಾದ ಸಂಸ್ಕಾರವು ಮಹರ್ಷಿಯೊಬ್ಬನಿಂದಾದ ಸಂಸ್ಕಾರದಂತೆ!" - ಎಂದು ವಾಲ್ಮೀಕಿ-ಮಹರ್ಷಿಗಳು ಇದನ್ನು ಚಿತ್ರಿಸಿದ್ದಾರೆ.

ವ್ಯಾಧಿಯು ಬಂದಾಗ ವೈದ್ಯರ ವಶಕ್ಕೆ ರುಗ್ಣನನ್ನು ಒಪ್ಪಿಸುತ್ತೇವೆ. ಅಂತೆಯೇ ಆಧಿನಿವಾರಣೆಗಾಗಿ ಜ್ಞಾನಿಯ ವಶಕ್ಕೆ ಒಪ್ಪಿಸುವುದುಂಟು. ಸಾರಾಂಶವಾಗಿ "ಚೈತನ್ಯಾಮೃತವನ್ನು ಕೊಡುವವರ ಉಡಿಗೆ ಚೇತನನನ್ನು ಒಪ್ಪಿಸಬೇಕು" ಎಂಬುದು ಶ್ರೀರಂಗಮಹಾಗುರುಗಳ ಸಾರವಾದ ವಾಣಿ.

ಪ್ರಕೃತ, ತನ್ನ ಮಾನವ-ವರ್ತನೆಯನ್ನು ಬದಿಗಿಟ್ಟು ದೈವ-ಭಾವದಲ್ಲಿ ನಿಂತು, ಪರಮಾನುಗ್ರಹವನ್ನೂ, ಜೊತೆಗೆ ಸಾಂಗೋಪಾಂಗವಾದ ಉತ್ತರ-ಕ್ರಿಯೆಯನ್ನೂ, ನೆರವೇರಿಸಿದ್ದಾನೆ ಶ್ರೀರಾಮ! ಆತನ ಕೃಪೆಗೆ ಪಾತ್ರನಾದ ಜಟಾಯುವು ಅದೆಷ್ಟು ಧನ್ಯ! ಆತನಿಗೆ ದೊರೆತ ಈ ಸದ್ಗತಿಯನ್ನು ಭಾವಿಸಿಯೇ, "ಮುಕ್ತಿದಾಯಾಸ್ತು ಮಂಗಲಂ" ಎಂದು ರಾಮನಿಗೆ ಮಂಗಳಾಶಾಸನವನ್ನು ಮಾಡುವುದು.

ನಮಗೆ ಆಪ್ತರಾದವರು ಮರಣಹೊಂದಿದಾಗ ಅವರಿಗೆ ನಾವು ಸದ್ಗತಿಯನ್ನು ಕೋರಿಯೇವು ಅಷ್ಟೆ. ಆದರೆ ರಾಮನು ಸದ್ಗತಿ-ಪ್ರದಾಯಕ: ಮುಕ್ತಿ-ಪ್ರದ, ಚೈತನ್ಯಾಮೃತದ ಬುಗ್ಗೆ.

ಹೀಗೆ ಈ ಪ್ರಸಂಗದಲ್ಲಿ, ಆರಂಭದಲ್ಲಿ ರಾಮನ ಮನುಷ್ಯತ್ವವೂ ಕೊನೆಯಲ್ಲಿ ಸಾಕ್ಷಾದ್-ದೈವತ್ವವೂ ಸುಭಗವಾಗಿ ಪ್ರತಿಪಾದಿತವಾಗಿವೆ, ವಾಲ್ಮೀಕಿ-ರಾಮಾಯಣದಲ್ಲಿ.

ಸೂಚನೆ: 11/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


Thursday, May 9, 2024

The greatness of Prasaada

Article by: Padmini Shrinivasan
Respond to (lekhana@ayvm.in)



Nadayogi Nadamuni’s grandson Yaamuna was a small boy. Foreseeing his last days, the great yogi, blessed his disciple Manakkaal Nambi with Yogavidya (the science of uniting internally with the indwelling Lord), instructing him to initiate his grandson at the most opportune time. The lad grew up to become a great scholar. Defeating the courtiers of the Pandya kings, he won half the kingdom based on a bet between the king and the queen, which he ruled righteously. Getting used to the comforts of a royal life, the rigour and ordained duties associated with the lineage of yogis faded away. 

Although Nambi was too eager to impart yogavidya, getting to meet the king was next to impossible. Initiating a ruse, offering a special herb to the Lord every day, he instructed the royal chefs to feed it to the king. The herb was presented to the Lord with an intention, that the person who consumes it must imbibe divine sentiments. Just as the king started to develop a taste for the herb, he stopped sending it. The king enquired his chefs and learnt that the person who brought it daily, was not coming anymore.  He sent a word to him and Nambi met the king, introducing himself as the disciple of the king’s grandfather. He added that he had the responsibility of handing over a great treasure passed on to him by his grandfather. The king immediately quipped “My grandfather was a recluse of a tall order. He did not possess any such treasure. Moreover being a king I have no need for any treasure now”. Nambi continued saying that the treasure was kept guarded without his knowledge and was much more precious than his kingdom. He added that before handing over the treasure he had couple of things to speak to him. Their mutual talk went on and on for a couple of days, with Nambi constantly reminding the king of his rich yogic lineage, while the king enquired on and off about the treasure. One fine day, Nambi broke the news that he could collect the treasure, in solitude and silence. The king who had no desire for wealth, desired to receive the treasure as a blessing of his elders.  Nambi took him to the holy island, Sriranga kshetra and pointing to the Lord reclining over Adisesha (serpent) at the Ranganaatha temple, remarked “There lies the treasure!!” All of the kings prior merits (samskaras) swelled to the fore, granting him an inner Yogic vision of the Lord. The king stood speechless in awe, looking at the deity!

Effect of naivedya-prasada:

In the human body, the tridoshas (vaata-pitta-shleshma) represent the power of the trinity Gods (Brahma, Vishnu, Maheshwara). The fundamental saptadhaatus (blood, muscle, bones etc..) energise the internal dynamics. When these three doshas as well as the seven dhaatus reach a state of equilibrium, a body state known in yogic parlance as dhaatusamyata occurs. 

As per vedic tradition, food must essentially be cooked as an offering to the Lord. The rules laid for this offering recommend foods which promote divine sentiments – saatvic character. The herb which was fed to the king possessed a special property of inducing a state of dhaatusamyata, in the person who consumed it. To pepper it, while offering the herb to the Lord, Nambi who had yogic powers, prayed and appealed that the Lord should impregnate his divinity into the herb. Such herb was fed to the king. 

In every human, the mind serves as a bridge between the external sense organs and the indwelling Lord as soul. Through yogavidya, starting from the physical plane, the mind can be made to flow right up to the soul and the same divine sentiment cascaded down up to the herb offered, then the mental plane of the chefs as well as that of the king. Nambi ensured that such a process brought about dhatuprasannata (a state in which divine bliss is experienced) through dhaatusaamyata. The maharshis of yore, discovered through deep penance that, a state of dhaatuprasannata, where all sense organs  are pulled inwards, enables a  vision of the Lord internally.   A caveat – not that everyone who consumes that herb will go through a similar experience!!!

The food consumed after naivedya- offering to Lord – is called a prasaada as it is ingrained with the benevolence of the Lord.  Such a prasaada is superior as it brings about happiness of the sense organs as well as the mind. It ensures the equilibrium of the basic body tissues (dhaatus). The king was able to receive a lofty treasure, none other than Sriranganidhi, due to the consumption of such a superior prasaada. 

 Let us all consume such a prasadam every day

Method of food preparation, purity of its ingredients, intentions of the person who cooks and serves, method of serving - all put together make an impact on the person who consumes it. Food offered to God, works as per its prior intentions and aids the process of uplifting in a spiritual plane. The inherent properties of the ingredients, too have their role to play. 

These days paucity of time is forcing us to eat out more often. Let us all try to curtail this habit and prepare food with good intentions and offer it to the Lord every day. By doing so, let us all inculcate devotion to the Lord through the consumption of such holy prasadam. An aphorism of Srirangamahaaguru is worthy of recollection at this point -“cooking food items (aduge in Kannada)  which bring home  Lord’s memory at every step (adigadige in Kannada- ingredient collection to preparation and ingestion) alone is to be considered as an ideal food preparation”.


Monday, May 6, 2024

ಯಕ್ಷ ಪ್ರಶ್ನೆ 88 (Yaksha prashne 88)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 87 ಆರ್ಜವ ಎಂದರೇನು ?

ಉತ್ತರ - ಸಮಚಿತ್ತತೆ.  

ಆರ್ಜವ ಎಂದರೆ ಋಜುತ್ವ, ನೇರವಾದ, ಸರಳವಾದ, ಪಾರದರ್ಶಕವಾದ, ಪ್ರಾಮಾಣಿಕವಾದ ಸ್ವಭಾವ. ಇದನ್ನೇ ಸಮಚಿತ್ತತೆ ಎಂದೂ ಕರೆಯುತ್ತಾರೆ. ಯಾರ ಚಿತ್ತ-ಮನಸ್ಸು ಸಮವಾಗಿರುವುದೋ ಅವರು ಸಮಚಿತ್ತರು. ಯಾವಾಗ ಮನಸ್ಸು ಸಮವಾದುದನ್ನು ಧರಿಸುವುದೋ ಆಗ ಅದನ್ನು ಸಮಚಿತ್ತ ಎಂದೂ, ಅಂತಹ ಮನಸ್ಸುಳ್ಳವರನ್ನು ಸಮಚಿತ್ತರು ಎಂದೂ ಕರೆಯಬಹುದು. ಅಂದರೆ ಈ ಎಲ್ಲಾ ವಿಶೇಷಣಗಳೂ ಅರ್ಥಪೂರ್ಣವಾಗಬೇಕಾದರೆ ಸಮ ಎಂಬ ಪದಾರ್ಥದ ಜ್ಞಾನವಾಗಬೇಕಾಗುತ್ತದೆ. ಹಾಗಾದರೆ ಸಮ ಎಂದರೇನು? 

'ನಿರ್ದೋಷಂ ಹಿ ಸಮಂ ಬ್ರಹ್ಮ, ಸಮತ್ವಂ ಯೋಗ ಉಚ್ಯತೇ" ಮುಂತಾದ ಕಡೆ ಸಮ ಎಂದರೆ ನಿರ್ದುಷ್ಟವಾದ ವಿಷಯ, ಯೋಗ ಎಂಬೆಲ್ಲಾ ವಿವರಣೆಯನ್ನು ಕಾಣಬಹುದು. ಈ ಪ್ರಚಂಚವು ಸೃಷ್ಟಿಯಾಗಬೇಕಾದರೆ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳು ಬೇಕು. ಅವುಗಳ ಯಾವುದೋ ಬಗೆಯ ಸೇರುವಿಕೆಯಿಂದ ಈ ಸೃಷ್ಟಿಯಾಗುತ್ತದೆ ಎಂದು ಶಾಸ್ತ್ರ ಸಾರುತ್ತದೆ. ಗುಣಗಳ ಸೇರುವುಕೆಯಿಂದ ದೋಷವು ಸಂಭವಿಸುತ್ತದೆ. ಯಾವುದು ಈ ಪ್ರಪಂಚಕ್ಕೆ ಮೂಲ ಕಾರಣವೋ ಅದು ದೋಷರಹಿತವಾದುದು. ಅಲ್ಲಿಂದ ಸೃಷ್ಟಿಯಾಗಿದೆ. ಅಂದರೆ ಪರಬ್ರಹ್ಮ ಎಂಬುದು ಯಾವುದುಂಟೋ ಅದನ್ನು 'ಸಮ' ಎಂದು ಕರೆಯಲಾಗಿದೆ. ಅದನ್ನು ಧರಿಸಿದ ಮನಸ್ಸನ್ನು ಸಮಚಿತ್ತ ಎಂದು ಕರೆದು, ಅಂತಹ ಪರಬ್ರಹ್ಮವನ್ನು ಧರಿಸಿದ ಮನಸ್ಸುಳ್ಳವರನ್ನು ಸಮಚಿತ್ತರು ಎಂದು ಕರೆಯುತ್ತಾರೆ. 

ಯೋಗಶಾಸ್ತ್ರವು ಯೋಗ ಎಂಬ ಪದದ ವಿವರಣೆಯನ್ನು 'ಯೋಗಃ ಚಿತ್ತವೃತ್ತಿನಿರೋಧಃ' ಎಂದು ಕೊಟ್ಟಿದೆ. ಮನಸ್ಸು  ಪರಬ್ರಹ್ಮವನ್ನು ಧರಿಸುವ ಸ್ಥಿತಿಯನ್ನೇ 'ಯೋಗ' ಎಂದು ಕರೆಯಲಾಗಿದೆ. ಇಂತಹ ಸ್ಥಿತಿಯನ್ನು ಸಂಪಾದಿಸುವ ಮಾರ್ಗವನ್ನೂ ಯೋಗ ಎಂದು ಕರೆದಿದ್ದಾರೆ. ಇದರ ಪರಿಣಾಮವಾಗಿ ಮನಸ್ಸು ಪಾರದರ್ಶಕವಾಗುತ್ತದೆ. ಮನಸ್ಸು ತಿಳಿಯಾಗುವುದನ್ನೇ ಪಾರದರ್ಶಕತೆ ಎನ್ನಬಹುದು. ಆಗ ಮನುಷ್ಯ ಸರಳ ಸ್ವಭಾವದವನಾಗುತ್ತಾನೆ. ಅವನಲ್ಲಿ ನೇರವಾದ ನಡೆನುಡಿಗಳು ಬರುತ್ತವೆ. ಆತ ಪ್ರಾಮಾಣಿಕನಾಗುತ್ತಾನೆ. ಪ್ರಮಾಣವನ್ನು ತಿಳಿದವನು ಪ್ರಾಮಾಣಿಕನಷ್ಟೇ. ಪ್ರಮಾಜ್ಞಾನವನ್ನು ಸಂಪಾದಿಸಿದವ ಪ್ರಾಮಾಣಿಕ. ಇದ್ದಿದ್ದನ್ನು ಇದ್ದ ಹಾಗೆ ತಿಳಿಯುವ ಪ್ರಮಾ. ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಪ್ರಾಮಾಣಿಕತೆ ಅಥವಾ ಸತ್ಯ. ಆದ್ದರಿಂದ ಅವನ ನುಡಿ ಪ್ರಾಮಾಣಿಕ, ಅವನ ಆಚಾರ ಪ್ರಾಮಾಣಿಕ, ಅವನಲ್ಲಿ ವಂಚನೆ ಅಥವಾ ಮೋಸಕ್ಕೆ ಆಸ್ಪದವಿರದು.  ಋಜು ಎಂದರೆ ವಕ್ರವಲ್ಲದ್ದು. ಇಂತವರನ್ನೇ ಸಜ್ಜನರು - ಸತ್ಪುರುಷರು - ಸಮದರ್ಶಿಗಳು - ಆಪ್ತರು  ಎಂದು ಕರೆಯುತ್ತಾರೆ. ಯಾರು ಆಪ್ತರು - ಸಮದರ್ಶಿಗಳು? ಎಂಬುದಕ್ಕೆ ಶ್ರೀರಂಗಮಹಾಗುರುಗಳು ಈ ಶ್ಲೋಕವನ್ನು ಉದ್ಧರಿಸಿ ಹೇಳುತ್ತಿದ್ದರು. "ರಜಸ್ತಮೋಭ್ಯಾಂ ನಿರ್ಮುಕ್ತಾಃ ತಪೋಜ್ಞಾನಬಲೇನ ಯೇ…. ಇತ್ಯಾದಿಯಾಗಿ. ತಮ್ಮ ತಪಸ್ಸು ಮತ್ತು ಜ್ಞಾನಗಳ ಬಲದಿಂದ ರಜಸ್ಸು ಮತ್ತು ತಮಸ್ಸಿನಿಂದ ಪಾರಾದವರು; ಯಾರಿಗೆ ಮೂರು ಕಾಲದಲ್ಲಿಯೂ ತಡೆಯಿಲ್ಲದೆ ನಿರ್ಮಲವಾದ ಜ್ಞಾನ ಪ್ರಕಾಶ ಗೋಚರಕ್ಕೆ ಬರುತ್ತಿರುವುದೋ ಅಂತವರು ಆಪ್ತರು; ಅವರೇ ಶಿಷ್ಟರು; ಅವರೇ ವಿಬುದ್ಧರು; ಅವರ ಮಾತುಗಳು ಸಂದೇಹಕ್ಕೆಡೆಯಾಗದ ಸತ್ಯಗಳು; ಅಸತ್ಯಕ್ಕೆ ಕಾರಣವಾದ ರಜಸ್ತಮೋದೋಷರಹಿತರೋ ಅವರು ಅಸತ್ಯವನ್ನು ಹೇಗೆ ಆಡಿಯಾರು!? ಎಂದು.    

ಸೂಚನೆ : 5/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 86 ಮತ್ತೆ ಬಂದರು ಪಾಂಡವರು ಹಸ್ತಿನಾವತಿಗೆ ವೈಭವದಿಂದ ! (Vyaasa Vikshita - 86 Matte Bandaru Paṇḍavaru Hastinavatige Vaibhavadinda !)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ದುಃಖಾರ್ತಳಾಗಿ ಶೋಕಿಸಿದ ಕುಂತಿಗೆ ಪ್ರಣಿಪಾತವನ್ನು ಮಾಡಿ (ಎಂದರೆ ಬಗ್ಗಿ ನಮಸ್ಕರಿಸಿ), ದುಃಖಿಸಬೇಡಮ್ಮಾ - ಎನ್ನುತ್ತಾ ವಿದುರನು ಹೇಳಿದನು. "ಯದುವಂಶದ ನಾರಿ, ಶೋಕಿಸಬೇಡ. ನಿನ್ನ ಮಕ್ಕಳು ಮಹಾಬಲಶಾಲಿಗಳು. ಅವರು ನಿಶ್ಚಯವಾಗಿಯೂ ಹಾಳಾಗರು. ಸ್ವಲ್ಪವೇ ಕಾಲದಲ್ಲಿ ಅವರು ಸ್ವರಾಜ್ಯಸ್ಥರಾಗುವರು. ಎಲ್ಲ ಬಂಧುಗಳೊಂದಿಗೂ ಸೇರಿಕೊಳ್ಳುವರು" ಎಂದನು.


ಆಮೇಲೆ ಮಹಾತ್ಮನಾದ ದ್ರುಪದನ ಅನುಮತಿಯಂತೆ, ಪಾಂಡವರು, ಕೃಷ್ಣ ಹಾಗೂ ವಿದುರರು ಕುಂತೀ-ದ್ರೌಪದೀ-ಸಮೇತರಾಗಿ ಸುಖವಾಗಿ ವಿಹರಿಸುತ್ತಾ ಹಸ್ತಿನಾವತಿಯನ್ನು ಸೇರಿದರು. ದ್ರುಪದನಾದರೂ ಗಜಸಹಸ್ರ-ರಥಸಹಸ್ರ-ಅಶ್ವಸಹಸ್ರ-ದಾಸದಾಸೀಸಹಸ್ರಾದಿಗಳನ್ನು ಬಳುವಳಿಯಾಗಿತ್ತು ಕಳುಹಿಸಿಕೊಟ್ಟನು. ಸಾಕ್ಷಾದ್ ಧೃಷ್ಟದ್ಯುಮ್ನನೇ ದ್ರೌಪದಿಯ ಕೈಹಿಡಿದು ನಡೆಸಿದನು.


ವೀರರಾದ ಪಾಂಡವರು ಬಂದ ಸಮಾಚಾರವು ರಾಜಾ ಧೃತರಾಷ್ಟ್ರನನ್ನು ಮುಟ್ಟಿತು. ಅವರನ್ನು ಬರಮಾಡಿಕೊಳ್ಳಲೆಂದು ಕೌರವರನ್ನು ಕಳುಹಿಸಿದನು - ವಿಕರ್ಣ, ಮಹಾಧನುರ್ಧರ ಚಿತ್ರಸೇನ, ವಿಶಿಷ್ಟಧನುಸ್ಸಂಪನ್ನನಾದ ದ್ರೋಣ, ಗೌತಮವಂಶದ ಕೃಪಾಚಾರ್ಯ - ಇವರುಗಳೆಲ್ಲರೂ ಬಂದಿದ್ದರು. ಅವರಿಂದ ಸುತ್ತುವರೆಯಲ್ಪಟ್ಟ ಪಾಂಡವರು, ವೀರರೂ ಮಹಾಬಲರೂ ಆಗಿ ಶೋಭಿಸುತ್ತಿದ್ದವರಾಗಿ, ಹಸ್ತಿನಾಪುರಿಯನ್ನು ಮೆಲ್ಲಮೆಲ್ಲನೆ ಪ್ರವೇಶಿಸಿದರು.


ಪಾಂಡವರು ಬಂದುದನ್ನು ಕೇಳುತ್ತಲೇ ನಗರಜನರು ಕುತೂಹಲಭರಿತರಾದರು. ಊರನ್ನು ಅಲಂಕರಿಸಿದರು. ಎಲ್ಲೆಲ್ಲೂ ಹೂಚೆಲ್ಲಿ ನೀರನ್ನು ಸಿಂಪಡಿಸಿದರು. ದಿವ್ಯಧೂಪಗಳನ್ನು ಹಚ್ಚಿದರು. ನಾನಾಲಂಕಾರಗಳಿಂದ ಕೂಡಿದುದೂ ಉತ್ತುಂಗವಾದ ಬಾವುಟಗಳ ಮೇಲೆ ಹೂಮಾಲೆಗಳುಳ್ಳದ್ದೂ ಆದ ಆ ಪುರವು ಅಪ್ರತಿಮವಾಗಿ ಬೆಳಗಿತು. ಶಂಖಭೇರೀನಾದಗಳೇನು, ನಾನಾವಾದ್ಯಗಳ ಧ್ವನಿಗಳೇನು - ಇವೆಲ್ಲದರಿಂದಲೂ ಊರಿಗೆ ಊರೇ ಬೆಳಗಿತು!


ಇನ್ನು ನರವ್ಯಾಘ್ರರಾದ ಪಾಂಡವರು ಪುರಜನರೊಂದಿಗೆ ಮಾತನಾಡಿಕೊಂಡು ಬರುತ್ತಾ ಹೃದಯಂಗಮವಾದ ಅವರ ಹಲವಾರು ಮಾತುಗಳನ್ನು ಕೇಳಿಸಿಕೊಂಡರು. ಅವರುಗಳ ಮಾತುಗಳು ಹೀಗಿದ್ದವು: ಇದೋ ಯುಧಿಷ್ಠಿರನು ಬರುತ್ತಿದ್ದಾನೆ; ಈ ಪುರುಷವ್ಯಾಘ್ರನು ತನ್ನವರನ್ನು ಹೇಗೋ ಹಾಗೆಯೇ ತನ್ನ ದಾಯಾದರನ್ನೂ ಕಾಪಾಡತಕ್ಕವನು. ಈತನು ಬಂದದ್ದರಿಂದಾಗಿ, ಜನಪ್ರಿಯನಾದ ಪಾಂಡುಮಹಾರಾಜನೇ ಕಾಡಿನಿಂದ ಹಿಂದಿರುಗಿಬಂದಂತಾಗಿದೆ. ನಮಗೆಲ್ಲ ಪ್ರಿಯವನ್ನುಂಟುಮಾಡಲೆಂದೇ ಹಾಗೆ ಬಂದಿರುವಂತಿದೆ. ವೀರರಾದ ಕುಂತೀಪುತ್ರರು ಮತ್ತೆ ನಗರಕ್ಕೆ ಬಂದಿರುವರೆಂದರೆ, ನಮಗೆ ಇದಕ್ಕಿಂತಲೂ ಮತ್ತಿನ್ನಾವ ಪ್ರಿಯವನ್ನು ಮಾಡಲಾದೀತಯ್ಯಾ? ನಾವು ಹಿಂದೆಂದಾದರೂ ದಾನವಿತ್ತಿದ್ದರೆ, ಹೋಮಮಾಡಿದ್ದರೆ, ತಪಸ್ಸನ್ನೇನಾದರೂ ಮಾಡಿದ್ದರೆ, ಪಾಂಡವರಿದೇ ನಗರದಲಿ ನೂರುವರ್ಷಗಳ ಕಾಲ ನಿಲ್ಲಲಿ!


ಬಳಿಕ ಆ ಪಾಂಡವರು ಧೃತರಾಷ್ಟ್ರನಿಗೂ ಭೀಷ್ಮನಿಗೂ ಇನ್ನು ಬೇರೆ ವಂದನೀಯರಿಗೂ ಪಾದಾಭಿವಂದನವನ್ನು ಮಾಡಿದರು. ಪುರಜನರೆಲ್ಲರೊಂದಿಗೆ ಕುಶಲಪ್ರಶ್ನವನ್ನು ಮಾಡಿದರು. ಹಾಗೂ ಧೃತರಾಷ್ಟ್ರನ ಅಪ್ಪಣೆಯಂತೆ ವ್ಯವಸ್ಥಿತವಾಗಿದ್ದ ರಾಜವೇಶ್ಮಗಳೊಳಗೆ ಸೇರಿಕೊಂಡರು. ಕೆಲಕಾಲ ವಿಶ್ರಾಂತಿಯನ್ನು ಪಡೆದುಕೊಂಡರು. ಧೃತರಾಷ್ಟ್ರನೂ ಭೀಷ್ಮನೂ ಆಮೇಲೆ ಪಾಂಡವರನ್ನು ಬರಮಾಡಿಕೊಂಡರು.


ಆಮೇಲೆ ಧೃತರಾಷ್ಟ್ರನು ಹೇಳಿದನು: ಯುಧಿಷ್ಠಿರ, ನಾನೀಗ ಹೇಳುವ ವಿಷಯವನ್ನು ಪಾಂಡವರೊಂದಿಗೆ ಕೇಳಿಸಿಕೋ. ನಿಮ್ಮೊಳಗೆ ಮತ್ತೆ ಕಲಹವಾಗದಿರಲಿ: ಅದಕ್ಕಾಗಿ ಖಾಂಡವಪ್ರಸ್ಥದಲ್ಲಿ ಹೋಗಿ ನೆಲೆಸಿರಿ. ನೀವಲ್ಲಿ ವಾಸಿಸುತ್ತಿರುವಾಗ ನಿಮಗಾರೂ ಬಾಧೆಕೊಡಲಾರರು. ದೇವತೆಗಳನ್ನು ಇಂದ್ರನು ಹೇಗೋ ಹಾಗೆ ನಿಮ್ಮನ್ನು ಅರ್ಜುನನು ಅಲ್ಲಿ ರಕ್ಷಿಸುವವನಾಗುವನು. ಅರ್ಧರಾಜ್ಯವನ್ನು ಸ್ವೀಕರಿಸಿ ನೀವು ಖಾಂಡವಪ್ರಸ್ಥವನ್ನು ಸೇರಿಕೊಳ್ಳಿರಿ.


ಅಲ್ಲದೆ, ವಿದುರನನ್ನು ಸಂಬೋಧಿಸಿ ಹೇಳಿದನು: ವಿದುರ, ಪಟ್ಟಾಭಿಷೇಕದ ಸಂಭಾರಗಳನ್ನು (ಎಂದರೆ ಸಾಮಗ್ರಿಗಳನ್ನು) ತೆಗೆದುಕೊಂಡು ಬಾ. ಈಗಲೇ ಯುಧಿಷ್ಠಿರನನ್ನು ಪಟ್ಟಾಭಿಷಿಕ್ತನನ್ನಾಗಿ ಮಾಡುತ್ತೇನೆ – ಎಂದನು.


ಸೂಚನೆ : 5/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಭಾರತೀಯ - ವಿವಾಹಕ್ಕೊಂದು ಹಿನ್ನೆಲೆ (Bharatiya - Vivahakkondu Hinnele)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)





ಸಾಮಾನ್ಯವಾಗಿ ಎಲ್ಲಾ ಕಡೆ "ಹುಟ್ಟು ಸಹಜ, ಸಾವು ತನ್ನಿಷ್ಟ" ಎಂದು ಹೇಳುವುದನ್ನು ನಾವು ಕಾಣಬಹುದು. ಹಾಗಾದರೆ ಒಳ್ಳೆಯ ಕುಲದಲ್ಲಿನ ಹುಟ್ಟಿನ ಗುಟ್ಟೇನು? ಎಂಬುದನ್ನು ನಾವಿಂದು ಮರೆತಂತಿದೆ. ಆದರೆ ನಮ್ಮ ಋಷಿ ಮಹರ್ಷಿಗಳು, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ಹುಟ್ಟಿನ ಬಗ್ಗೆ ಬಹಳವಾದ ಮಹತ್ವವನ್ನು ಕೊಟ್ಟಿರುವುದನ್ನು ಕಾಣಬಹುದು. ಇನ್ನೊಂದು ಮಾತು ಕೂಡ ಇಲ್ಲದಿಲ್ಲಾ; "ಮನುಷ್ಯ ಎಲ್ಲಿ ಬೇಕಾದರೂ ಹುಟ್ಟಬಹುದು, ಹುಟ್ಟು ಅವನ ಮುಂದಿನ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ; ಹುಟ್ಟಿದ ಅನಂತರದಲ್ಲಿ ಅವನು ಪಡೆಯುವಂತಹ ವಿದ್ಯೆ, ಸಂಸ್ಕಾರ, ಪರಿಸರ ಮೊದಲಾದವುಗಳಿಂದ ಅವನು ತನ್ನ ಮಾನವೀಯ ಮೌಲ್ಯಗಳನ್ನು ಪಡೆದು ಉತ್ತಮನಾಗುತ್ತಾನೆ" ಎಂಬುದಾಗಿ. ಅಂದರೆ ಹುಟ್ಟು ಅನ್ನುವಂಥದ್ದು ಬರಡಾಗಿ ಇರುವಂತದ್ದು; ಹುಟ್ಟಿದ ಅನಂತರದಲ್ಲಿ ಆ ಬರುಡುತನಕ್ಕೆ ಕೊಡುವ ಸಂಸ್ಕಾರವು ಒಂದಷ್ಟು ಜೀವ ತುಂಬಿಸುವಂತಹ ಕೆಲಸ ಮಾಡುತ್ತದೆ ಎಂಬ ವಿಷಯವನ್ನು ಕೂಡ ನಾವು ಈ ವಾದಗಳ ಹಿನ್ನೆಲೆಯಲ್ಲಿ ಕಾಣಬಹುದು. ಆದರೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಈ ಹುಟ್ಟಿಗೆ ಇಷ್ಟೇ ವಿವರಣೆಯೋ ಅಥವಾ ಇದಕ್ಕಿಂತ ಏನಾದರೂ ಹೆಚ್ಚಿನ ವಿವರಣೆ ಉಂಟೇ? ಎಂಬುದನ್ನು ನಾವು ಒಮ್ಮೆ ವಿಮರ್ಶಿಸೋಣ.


ಒಬ್ಬ ಒಳ್ಳೆಯ ಮನುಷ್ಯನ ಲಕ್ಷಣವನ್ನು ಹೇಳುವಾಗ 'ಸತ್ಕುಲಪ್ರಸೂತ, ಅಭಿಜಾತ, ಕುಲೀನ, ಅಭಿಜನ, ಕುಲಶ್ರೇಷ್ಠ ಎಂಬಿತ್ಯಾದಿ ವಿಶೇಷಣಗಳನ್ನು ಕೂಡ ನಾವು ಕಾಣುತ್ತೇವೆ. ಅಂದರೆ ಅವನು ಯಾವ ಕುಲದಲ್ಲಿ ಹುಟ್ಟಿದ್ದಾನೆ? ಅವನ ವಂಶವಾಹಿನಿ ಯಾವುದು? ವಂಶದ ಹಿನ್ನೆಲೆ ಏನು? ಯಾವೆಲ್ಲ ಉತ್ತಮ ಗುಣಗಳನ್ನು ಅವನು ಪಡೆದುಕೊಂಡು ಹುಟ್ಟಿದ್ದಾನೆ? ಇತ್ಯಾದಿ ಅನೇಕ ಅಂಶಗಳನ್ನು ಜೊತೆಯಲ್ಲಿ ಸೇರಿಸಿಕೊಂಡು ಈ 'ಸತ್ಕುಲಪ್ರಸೂತ - ಒಳ್ಳೆಯ ವಂಶದಲ್ಲಿ ಹುಟ್ಟಿದವನು' ಎಂಬ ವಿವರಣೆಯನ್ನು ಕೂಡ ನಾವು ಕಾಣುತ್ತೇವೆ. ಅಂದರೆ ಇಲ್ಲಿ ಹುಟ್ಟಿದ ಮೇಲೆ ಕಾಣುವ ಗುಣವಿಶೇಷತೆಗಳಿಗೆ ಅವನ ಹುಟ್ಟಿನ ಹಿಂದಿರುವ ಅಂಶಗಳೇ ಕಾರಣ ಎಂಬುದನ್ನು ನಾವು  ಕಾಣಬಹುದು. ಹುಟ್ಟು ಗುಣವನ್ನು ನಿರ್ಧರಿಸುವುದಿಲ್ಲ ಎಂಬಂತಿದ್ದರೆ ಇಂಥ ವಿಶೇಷಗುಣಗಳು ಏಕೆ ಬರುತ್ತಿದ್ದವು? ಎಂಬುದು ಇಲ್ಲಿ ಪ್ರಶ್ನೆಗೆ ವಿಷಯ. ಅಂದರೆ ಹುಟ್ಟಿನಲ್ಲೇ ಆತ ತನ್ನ ವಂಶದಲ್ಲಿರುವಂತಹ ಅನೇಕ ಗುಣಗಳನ್ನು ಹೊತ್ತುಕೊಂಡು ಬರುತ್ತಾನೆ ಎಂಬುದನ್ನು ನಾವು ಇಲ್ಲಿ ಊಹಿಸಬಹುದು. ನಮ್ಮ ಸಂಪ್ರದಾಯದಲ್ಲಿ ಜನ್ಮಾಂತರಗಳನ್ನು ಒಪ್ಪುತ್ತೇವೆ. ಅಂದರೆ ಹಿಂದಿನ ಜನ್ಮದಲ್ಲಿ ಅವನು ಯಾವ ಪುಣ್ಯ ಪಾಪ ಕರ್ಮಗಳನ್ನು ಮಾಡಿರುವನೋ, ಅದಕ್ಕನುಗುಣವಾದ ಹುಟ್ಟು ಸಂಭವಿಸುತ್ತದೆ ಎಂಬುದಾಗಿ. ಅಲ್ಲದೆ ಈ ಹುಟ್ಟಿನಲ್ಲಿ ಪಡೆದ ಶರೀರಕ್ಕೆ ಅವನ ಹಿಂದಿನ ಅಂದರೆ, ತಂದೆ, ತಾಯಿ, ಅಜ್ಜ, ಮುತ್ತಜ್ಜ  ಮೊದಲಾದವರ ಅನೇಕ ಗುಣಗಳನ್ನು ಕೂಡ ಪಡೆದುಕೊಂಡು ಹುಟ್ಟುವುದನ್ನು ನಾವು ಕಾಣುತ್ತೇವೆ. ಒಂದು ಮಗು ಹುಟ್ಟಿದಾಗ ಮಗುವನ್ನು ನೋಡಿ 'ತಂದೆಯಂತೆ ಇದ್ದಾನೆ, ತಾಯಿಯಂತೆ ಇದ್ದಾನೆ, ಅಜ್ಜನಂತೆ ಇದ್ದಾನೆ' ಹೀಗೆಲ್ಲ  ಆ ಮಗುವನ್ನು ವಿಶ್ಲೇಷಿಸುವುದು ಉಂಟು. ಅಂದರೆ ಹುಟ್ಟೇ ಅನೇಕ ಗುಣಗಳಿಗೆ ಕಾರಣವಾಗುವಂತದು ಎಂಬುದೂ ಅಷ್ಟೇ ನಿಜ. ಒಬ್ಬ ವ್ಯಕ್ತಿಯನ್ನು ಅಥವಾ ವ್ಯಕ್ತಿಯ ವ್ಯಕ್ತಿತ್ವವನ್ನು ತೀರ್ಮಾನಿಸುವಾಗ ಅವನು ಯಾವ ಕುಲದಲ್ಲಿ ಹುಟ್ಟಿದ? ಎಂಬುದು ಕೂಡ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ. ರಾಮನ ವಂಶ ಅಥವಾ ಮಹಾಭಾರತದಲ್ಲಿನ ಕೌರವ ಪಾಂಡವರ ವಂಶ ಇಲ್ಲಿ ಒಂದು ವಂಶವಾಹಿನಿಯನ್ನು ನಾವು ನೋಡಬಹುದು. ಆ ವಂಶದ ಹಿರಿಕರಲ್ಲಿ ಯಾವೆಲ್ಲ ಗುಣವಿಶೇಷಗಳು ಇರುತ್ತವೆಯೋ ಅವೆಲ್ಲವೂ ಮುಂದಿನ ಸಂತತಿಯಲ್ಲಿ ಸಂಕ್ರಾಂತವಾಗುತ್ತವೆ ಎಂಬುದು ಇದರ ಹಿಂದಿರುವ ವಿಷಯ. ಹಾಗಾಗಿ ಈ ವಿಷಯವನ್ನು ಆಧರಿಸಿ ವಿವಾಹವನ್ನು ಒಂದು ಸಂಸ್ಕಾರವನ್ನಾಗಿ ವಿಧಿಸಲಾಗಿದೆ. ವಿವಾಹವು ಎರಡು ಕುಲಗಳ ನಡುವೆ ಸಂಬಂಧವನ್ನು ಬೆಸೆಯುವ ಸಾಧನ. ಎರಡು ಕುಲದ ಗಂಡು ಮತ್ತು ಹೆಣ್ಣು ಇವೆರಡು ಒಟ್ಟಾದಾಗ ಮುಂದೆ ಸಂತತಿ ಬರುತ್ತದೆ. ಈ ಎರಡು ವಂಶಗಳಲ್ಲಿ  ಯಾವೆಲ್ಲ ಗುಣದೋಷಗಳು ಇರುತ್ತವೆಯೋ ಅವು ಮುಂದಿನ ಸಂತತಿಯಲ್ಲಿ ಬರುತ್ತವೆ. ಗುಣಗಳಿದ್ದರೆ ಗುಣಗಳು ಬರಬಹುದು; ದೋಷಗಳಿದ್ದರೆ ದೋಷಗಳು ಬರಬಹುದು. ದೋಷ ಎಂದರೆ ವಿಕಾರ. ಗುಣ ಎಂದರೆ ನಿರ್ವಿಕಾರ. ವಿವಾಹದ ಉದ್ದೇಶವೂ ನಿರ್ವಿಕಾರವಾದ ಸಂತತಿಯ ಲಾಭ. ನಿರ್ವಿಕಾರವಾದ ಸಂತತಿ ಆಗಬೇಕಾದರೆ ಆ ಕುಲದಲ್ಲಿ ದೋಷಗಳು ಇರಬಾರದು. ಯಾವ ಕುಲದಲ್ಲಿ ದೋಷಗಳು ಅತ್ಯಲ್ಪತವಾಗಿರುತ್ತವೆಯೋ ಅಂತಹ ಕುಲವನ್ನು 'ಸತ್ಕುಲ' ಎಂಬುದಾಗಿ ಹೇಳಿ, ಅಂತಹ ಕುಲದಲ್ಲಿ ಹುಟ್ಟಿದ ವ್ಯಕ್ತಿಯನ್ನು 'ಸತ್ಕುಲಪ್ರಸೂತ, ಅಭಿಜಾತ' ಮೊದಲಾದಂತಹ ವಿಶೇಷಣಗಳಿಂದ ಗುರುತಿಸುವುದು ನಮ್ಮ ಸಂಸ್ಕೃತಿಯಾಗಿದೆ. ಇದೇ ವಿವಾಹದ ಹಿಂದಿರುವ ಅತಿ ಮುಖ್ಯವಾದ ಅಂಶ. ಈ ಅಂಶವನ್ನು ಇಟ್ಟುಕೊಂಡು ವಿವಾಹವನ್ನು ಅತ್ಯಂತ ಪ್ರಮುಖವಾದ ಸಂಸ್ಕಾರ ಎಂಬುದಾಗಿ ಹೇಳಲಾಗಿದೆ.


ಸೂಚನೆ:  05/05/2024 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Friday, May 3, 2024

ದಾನಕ್ಕೊಂದು ಪರಮಾದರ್ಶ (Danakkondu Paramadarsa)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಸೋದರರಾದ  ಅಷ್ಟಕ,  ಪ್ರತರ್ದನ,  ವಸುಮನಸ,  ಮತ್ತು  ಶಿಬಿ  ದೇವರ್ಷಿ ನಾರದರಲ್ಲಿ  ಪ್ರಶ್ನಿಸುತ್ತಾರೆ.  


"ನಾವು  ನಾಲ್ಕೂ  ಜನ ನಮಗೆ  ತಿಳಿದಿದ್ದಷ್ಟು ಧರ್ಮಮಾರ್ಗದಲ್ಲಿಯೇ  ರಾಜ್ಯಭಾರ  ನಡೆಸಿದ್ದೇವೆ.  ಯಾರಿಗೂ  ನೋವಾಗದಂತೆ  ನಡೆದುಕೊಂಡಿದ್ದೇವೆ.  ಅದರಿಂದ ನಮಗೆ  ಸ್ವರ್ಗಪ್ರಾಪ್ತಿಯಾಗುವುದು ನಿಸ್ಸಂಶಯ.  ಆದರೆ   ಸ್ವರ್ಗವೂ  ಕೂಡ  ನಿತ್ಯಶಾಶ್ವತವೇನೂ  ಅಲ್ಲ.  ಸತ್ಕರ್ಮದ  ಫಲಗಳೆಲ್ಲಾ  ಕಡಿಮೆಯಾಗುತ್ತಿದ್ದಂತೆಯೇ  ನಾವೆಲ್ಲರೂ  ಸ್ವರ್ಗದಿಂದ  ಚ್ಯುತರಾಗುತ್ತೇವೆ.  ನಮ್ಮಲ್ಲಿ  ಯಾರು  ಮೊದಲು  ಸ್ವರ್ಗದಿಂದ  ಕೆಳಗೆ  ಬೀಳುತ್ತೇವೆ ?"  ಎಂಬುದಾಗಿ. 


ನಾರದರ ಉತ್ತರ - "ನಿಮ್ಮ  ನಾಲ್ಕು  ಜನರಲ್ಲಿ  ಅಷ್ಟಕ  ಮೊದಲು  ಚ್ಯುತನಾಗುತ್ತಾನೆ".  ಕಾರಣ- " ಒಮ್ಮೆ  ಅವನೊಡನೆ ಹೋಗುತ್ತಿದ್ದಾಗ  ಬೇರೆ  ಬೇರೆ  ಬಣ್ಣದ  ಸಾವಿರಾರು  ಹಸುಗಳನ್ನು  ನಾನು  ನೋಡಿದೆ.  ನಾನು  ಅವನನ್ನು  ಇದು  ಯಾರದ್ದು  ಎಂದು  ಕೇಳಿದೆ.  ಆಗ  ಅಷ್ಟಕ -  "ಸ್ವಾಮಿ,  ಇವೆಲ್ಲವೂ  ನನ್ನದೇ  ಆಗಿತ್ತು,  ಈಗ ಬ್ರಾಹ್ಮಣರಿಗೆ  ದಾನ  ಕೊಟ್ಟುಬಿಟ್ಟಿದ್ದೇನೆ"  ಎಂದನು.  ಅವನು  ಕೊಟ್ಟ  ದಾನದಲ್ಲಿ  ಇನ್ನೂ  "ನನ್ನದು"  ಎಂಬ ಭಾವ  ಇಟ್ಟುಕೊಂಡಿದ್ದ್ದರಿಂದ ದಾನದಲ್ಲಿ  ದೋಷ  ಬಂತು.  ಹಾಗಾಗಿ  ಇವನು  ಸ್ವರ್ಗದಿಂದ  ಮೊದಲು  ಚ್ಯುತನಾಗುತ್ತಾನೆ."  ಎಂದು  ಹೇಳಿದರು.  


ಹಾಗೆಯೇ "ಪ್ರತರ್ದನ  ಎರಡನೆಯವನು"  ಎಂದರು ನಾರದರು. ಕಾರಣ-  "ಅವನು ದಾನಶೀಲ,  ಆದರೂ  ಅವನು  ಒಮ್ಮೆ  ನನ್ನನ್ನು  ರಥದಲ್ಲಿ  ಕರೆದುಕೊಂಡು  ಹೋಗುತ್ತಿದ್ದ.  ಆಗ  ಒಬ್ಬ  ಬ್ರಾಹ್ಮಣ  ಬಂದು - "ನನಗೆ  ಒಂದು  ರಥದ  ಕುದುರೆ ಬಹಳ  ಶೀಘ್ರವಾಗಿ ಬೇಕಾಗಿದೆ."  ಎಂದನು.   ತ್ವರೆ  ಮಾಡಿ  ನನಗೆ  ದಾನ  ಕೊಡುತ್ತೀಯಾ"  ಎಂದು  ಕೇಳುತ್ತಾನೆ.   ಅದಕ್ಕೆ  ಪ್ರತರ್ದನನು  "ಸರಿ,  ನಾನು  ರಾಜಧಾನಿಗೆ  ಹಿಂತಿರುಗಿದ  ನಂತರ  ದಾನ  ಕೊಡುತ್ತೇನೆ.  ಆಗಬಹುದೇ"  ಎಂದು  ಕೇಳುತ್ತಾನೆ.  ಆಗ  ಬ್ರಾಹ್ಮಣನು  "ಇಲ್ಲ,  ನನಗೆ  ಈಗಲೇ  ಬೇಕೆಂದು"  ಒತ್ತಾಯ  ಮಾಡಿದಮೇಲೆ  ಇವನು  ಕುದುರೆಯನ್ನು  ಕೊಡುತ್ತಾನೆ.  ಸ್ವಲ್ಪದೂರ  ಹೋದಾಗ  ಮತ್ತೊಬ್ಬ, ಹೀಗೇ ನಾಲ್ಕೂ ಜನ ಬ್ರಾಹ್ಮಣರು ಒಂದೊಂದೂ ಕುದುರೆ ಕೇಳಿದಾಗಲೂ  "ವಾಪಸ್ಸು  ಹೋಗಿ  ಕೊಡಬಹುದೇ  ಎಂದು  ಪ್ರಶ್ನೆ  ಕೇಳಿ ನಂತರ ಕೊಡುತ್ತಾನೆ. ದಾನದಲ್ಲೊಂದು ಹಿಡಿತ. ಅಂದರೆ,   ಕೇಳಿದ  ತಕ್ಷಣ  ರಾಜನು  ಯೋಚನೆ  ಮಾಡದೇ  ಕೊಟ್ಟುಬಿಡಬೇಕು  ಎನ್ನುವ  ನಿಯಮವನ್ನು ತಪ್ಪಿದ್ದರಿಂದ  ಎರಡನೆಯವನಾಗಿ  ಸ್ವರ್ಗದಿಂದ  ಕೆಳಗಿಳಿಯುತ್ತಾನೆ.  


ವಸುಮನಸನು ಮೂರನೆಯವನಾಗಿ  ಕೆಳಗಿಳಿಯುತ್ತಾನೆ ಎನ್ನುತ್ತಾರೆ. ಅವನ  ಸಮಸ್ಯೆ  ಏನು?  ಎಂದರೆ  ಅವನೂ  ಕೂಡ  ಧರ್ಮಾತ್ಮನೇ  ಸರಿ.  ಅವನು  ಅನೇಕ  ಯಜ್ಞಗಳನ್ನು, ಅನೇಕ  ಧರ್ಮಕಾರ್ಯ, ಗೋಸಂರಕ್ಷಣೆಗಳನ್ನು  ಮಾಡಿದ್ದ.       ಅದರ ಫಲವಾಗಿ , ಅವನಿಗೆ  ದೇವತೆಗಳು  ದಿವ್ಯವಾದ ದೇವಲೋಕದ  ಒಂದು  ಪುಷ್ಪರಥವೊಂದನ್ನು  ಕೊಟ್ಟು  ಸ್ವಸ್ತಿವಾಚನ  ಮಾಡುತ್ತಾ,  ನಿನಗೆ  ಒಳ್ಳೆಯದಾಗಲೀ  ಎಂದು  ಹೇಳುತ್ತಿರುವ  ಸಮಯದಲ್ಲಿ  ನಾರದರು  ಅಲ್ಲಿಗೆ  ಬರುತ್ತಾರೆ.  ವಸುಮನಸನು  ನಾರದರಿಗೆ  -.  "ಸ್ವಾಮೀ,  ನೀವೇ  ಇದಕ್ಕೆ  ಯೋಗ್ಯರು,  ಯೋಗ್ಯರಾಗಿ  ಬಂದಿದ್ದೀರಿ  ನೀವು,  ಈಗ  ದಾನವನ್ನು  ಸ್ವೀಕರಿಸಿ.  ಎಂದು  ಸಮರ್ಪಿಸಿದನು. ಹೀಗೆ ಎರಡನೆಯ ಬಾರಿ ದೇವತೆಗಳಿಂದ ಬಂದ ಪುಷ್ಪರಥವನ್ನೂ ದಾನ ಮಾಡುತ್ತಾನೆ.ಆದರೆ ಹೀಗೆಯೇ  ಮೂರನೇಬಾರಿಯೂ ಅತ್ಯದ್ಭುತವಾದ  ಪುಷ್ಪರಥ ದೊರೆತಾಗಲೂ ಪೂಜ್ಯ   ನಾರದರು   "ನಿನಗೆ  ಇದರಿಂದ  ಶ್ರೇಯೋಭಿವೃದ್ಧಿಯುಂಟಾಗಲಿ  ಎಂದು  ಸ್ವಸ್ತಿವಾಚನ  ಮಾಡುತ್ತಾರೆ.  ಈಗ  ಮಾತ್ರ  ಅವನು  ದಾನ  ಕೊಡಲು  ಹಿಂಜರಿದುಬಿಡುತ್ತಾನೆ.  " ತಮ್ಮ  ಸ್ವಸ್ತಿವಾಚನ  ತುಂಬಾ ಚೆನ್ನಾಗಿತ್ತು"  ಎಂದು  ಹೇಳಿ  ಮೃದುವಾಗಿ  ಮಾತನಾಡಿ  ಕಳುಹಿಸಿಬಿಡುತ್ತಾನೆ. ಪದಾರ್ಥದ ಮೇಲಿನ ಅಂಟು  ಅವನ  ದಾನದಲ್ಲಿ  ಹಿಡಿತ  ತರಿಸಿತು.  ಆ  ಕಾರಣದಿಂದಾಗಿ  ಅವನು  ಮೂರನೆಯವನಾಗಿ  ಸ್ವರ್ಗದಿಂದ  ಕೆಳಗೆ  ಬೀಳುತ್ತಾನೆ  ಎಂದರು.


ಇನ್ನು  ಉಳಿದವನು  ಶಿಬಿ. ಉಳಿದ  ರಾಜಕುಮಾರರು  ನಾರದರನ್ನು  ಕುರಿತು  "ನಾರದರೇ  ನೀವು  ಮತ್ತು  ಶಿಬಿ  ಇಬ್ಬರೂ  ಏಕಕಾಲದಲ್ಲಿ  ಸ್ವರ್ಗಪ್ರವೇಶ  ಮಾಡಿದರೆ  ನಿಮ್ಮಿಬ್ಬರಲ್ಲಿ  ಯಾರು  ಮೊದಲು  ಸ್ವರ್ಗದಿಂದ  ಚ್ಯುತರಾಗಿ ಕೆಳಗೆ  ಬೀಳುತ್ತಾರೆ?"  ಎಂದು  ಪ್ರಶ್ನಿಸುತ್ತಾರೆ.  ನಾರದರು  ಸ್ವಲ್ಪವೂ  ಹಿಂಜರಿಯದೇ  "ನಾನೇ  ಮೊದಲು  ಕೆಳಗೆ  ಬರುತ್ತೇನಪ್ಪಾ.  ಶಿಬಿಯಷ್ಟು  ದೊಡ್ಡವನಲ್ಲ  ನಾನು." ಎಂದರು.  ಎಲ್ಲರಿಗೂ  ಬಹಳ ಆಶ್ಚರ್ಯವಾಯಿತು.  ದೇವರ್ಷಿಗಳು, ತ್ರಿಕಾಲಜ್ಞರು, ತ್ರಿಲೋಕಸಂಚಾರಿಗಳಾದ  ನಾರದರೇ  ಹೀಗೆ  ಹೇಳಿದರಲ್ಲಾ  ಎಂದು.  ಆಗ  ನಾರದರು ಹೇಳುತ್ತಾರೆ-


"ಶಿಬಿ  ಮಹಾರಾಜನು  ರಾಜ್ಯವಾಳುತ್ತಿದ್ದಾಗ  ಒಬ್ಬ  ಬ್ರಾಹ್ಮಣನು  ಅತಿಥಿಯಾಗಿ  ಬರುತ್ತಾನೆ.  ರಾಜನು  ಅವರ  ಭೋಜನಕ್ಕಾಗಿ  ವಿಚಾರಿಸಲು  ಆ ಬ್ರಾಹ್ಮಣನು  "ನಿನ್ನ  ಮಗನನ್ನು  ಕೊಂದು  ಅವನ  ಮಾಂಸವನ್ನು  ನನಗೆ  ಭೋಜನಾತಿಥ್ಯವಾಗಿ  ಕೊಡಬೇಕು  ಎಂದನು.  ಶಿಬಿಯು ಸ್ವಲ್ಪವೂ  ವಿಚಲಿತನಾಗಲಿಲ್ಲ,  ವಿವರ್ಣನಾಗಲಿಲ್ಲ.  ಅವರು  ಹೇಳಿದಂತೆ  ತನ್ನ  ಮಗನ  ಮಾಂಸದಿಂದ  ಬ್ರಾಹ್ಮಣರಿಗೆ  ಭೋಜನಮಾಡಿಸಲೆಂದು  ಆ ಭೋಜನಪಾತ್ರೆಯನ್ನು  ತಲೆಯಮೇಲಿಟ್ಟುಕೊಂಡು  ಆ  ಬ್ರಾಹ್ಮಣನಿರುವ  ಸ್ಥಳಕ್ಕೆ  ಹೊರಡುತ್ತಾನೆ.  ಆ  ವೇಳೆಗೆ  ಈ  ಬ್ರಾಹ್ಮಣನು  ರಾಜನ  ಅಂತಃಪುರಕ್ಕೆ ಬೆಂಕಿ  ಹಚ್ಚಿಬಿಡುತ್ತಾನೆ.  ಆ  ಬೆಂಕಿಯು  ಅರಮನೆ,   ಗೋಶಾಲೆ,  ಗಜಶಾಲೆಗಳಿಗೆಲ್ಲಾ  ವಿಸ್ತರಿಸಿಬಿಡುತ್ತದೆ.  ಇಷ್ಟೆಲ್ಲಾ ಆ ಬ್ರಾಹ್ಮಣನಿಂದ ಆದರೂ   ಶಿಬಿಚಕ್ರವರ್ತಿಯು  ಸ್ವಲ್ಪವೂ   ವಿಚಲಿತನಾಗಲಿಲ್ಲ,  ಅವನಿಗೆ ಕೋಪವೂ  ಬರಲಿಲ್ಲ.  ಅವನು ವಿನಮ್ರನಾಗಿ  ಬ್ರಾಹ್ಮಣನನ್ನು  ಕುರಿತು-  ಭೋಜನವನ್ನು   ಸ್ವೀಕರಿಸಬೇಕೆಂದು  ವಿನಂತಿಸಿಕೊಂಡನು.  ಆ  ಬ್ರಾಹ್ಮಣನು  ರಾಜನನ್ನು  ಇನ್ನೂ  ಪರೀಕ್ಷೆಮಾಡಲು  "ಅದನ್ನು  ನೀನೇ  ತಿನ್ನು"  ಎಂದನು.  ಆಗಲೂ  ರಾಜನು  ಸಮಾಹಿತ ಮನಸ್ಕನಾಗಿದ್ದು ಬ್ರಾಹ್ಮಣನ ಆಜ್ಞೆಯನ್ನು ಪಾಲಿಸಲು  ಸಿದ್ಧನಾದನು.  ತಕ್ಷಣ  ಆ  ಬ್ರಾಹ್ಮಣನು  ಸಂತೋಷಗೊಂಡು ರಾಜನನ್ನು  ತಡೆದು  ಪ್ರೀತಿಯಿಂದ  "ಎಲೈ  ರಾಜನೇ,  ನೀನು  ಕೋಪವನ್ನು  ಜಯಿಸಿದ  ಮಹಾಶೂರ. ದಾನ  ಕೊಡದೇ  ಇರಬಹುದಾದಂತಹ  ಯಾವುದನ್ನೂ  ನೀನು  ಉಳಿಸಿಕೊಂಡಿಲ್ಲ.  ಪತ್ನೀ,  ಪುತ್ರರು,  ರಾಜ್ಯ,  ಧನ,  ಕನಕ,  ತನು,  ಮನ  ಇವೆಲ್ಲವನ್ನೂ  ದಾನಮಾಡಲು  ಸಿದ್ಧವಾಗಿರುವೆಯಲ್ಲಾ!  ನಿನ್ನದು  ಎಂಥಹ  ಶ್ರೇಷ್ಠವಾದ  ವ್ಯಕ್ತಿತ್ವ!  ಎಂದು  ಹೇಳಿ  ಅಂತಃಕರಣಪೂರ್ವಕವಾಗಿ  ಅವನನ್ನು  ಆಶೀರ್ವದಿಸುತ್ತಾನೆ.  ಸತ್ತ ಮಗನೂ ಬದುಕುತ್ತಾನೆ ಎಂಬ ಕಥೆ ಬೇರೆ. 


ದಾನಮಾಡುವಾಗ  ಅಥವಾ  ಭಗವಂತನಲ್ಲಿ  ಸಮರ್ಪಣೆ  ಮಾಡುವಾಗ  ನಮ್ಮ  ಮನೋಧರ್ಮವು  ಹೇಗಿರಬೇಕು  ಎನ್ನುವುದನ್ನು  ನಿರ್ದೇಶನ  ಮಾಡುವಂತಹ ಒಂದು  ಕಥೆ.


ಶ್ರೀರಂಗಮಹಾಗುರುಗಳ ಮಾತೊಂದು ಸ್ಮರಣೀಯ-"ಐಶ್ವರ್ಯ  ಎನ್ನುವ  ಒಂದು  ಪದವೇ  ಈಶ್ವರನನ್ನು  ಜೊತೆಯಲ್ಲಿಟ್ಟುಕೊಂಡಿದೆಯಪ್ಪಾ.  ಈಶ್ವರ  ಎನ್ನುವ  ಪದದಿಂದಲೇ  ಈ  ಐಶ್ವರ್ಯ  ಎನ್ನುವ  ವಿಷಯ  ಬಂದಿದೆ.  ಅವನ  ಜಗತ್ತಿನಲ್ಲಿ  ಏನೇನಿದೆಯೋ  ಅವೆಲ್ಲಾ  ಅವನೇ  ಕೊಟ್ಟಿರುವಂಥಹುದು.  ಅವನು  ಕೊಟ್ಟಿದ್ದನ್ನು  ಅವನಿಗೇ  ಕೊಡುವುದೇ  ಐಶ್ವರ್ಯದ  ಒಂದು  ಸದುಪಯೋಗವಾದಂತೆ.  ದೈವ  ಕೊಟ್ಟಿದ್ದನ್ನು  ದೈವಕ್ಕೇ  ಉಪಯೋಗಿಸಬೇಕು.  ಅದೇ  ಸಮರ್ಪಣೆ"  .  ದಾನ  ಮಾಡುವಾಗ  ತನ್ನದು  ಎಂದು  ಯಾವ    ಅಂಟನ್ನೂ  ಇಟ್ಟುಕೊಳ್ಳಬಾರದು  ಎಂಬ  ಮಾತನ್ನು  ಅವರು  ಹೇಳುತ್ತಿದ್ದರು.


ಅಷ್ಟಕನ  ದಾನದಲ್ಲಿ  ತನ್ನದೆಂಬ  ಒಂದು  ಅಂಟು  ಇದ್ದೇ  ಇದೆ.  ಹೀಗಾಗಿ  "ಇದಂ  ನ  ಮಮ"  ಎಂದು  ಬಾಯಲ್ಲಿ  ಹೇಳಿದರೂ  ಕೂಡ  ಒಳ  ಮನಸ್ಸಿನಲ್ಲಿ  ಇದೆಲ್ಲಾ  ನನ್ನದಾಗಿತ್ತು  ಎನ್ನುವ  ಒಂದು  ಅಂಟು. ಉಳಿದವರದ್ದೂ ಹೀಗೇ. ಈ  ಬಗೆಯ  ಅಂಟು  ಇದ್ದರೆ  ಅದು ದಾನವಾಗದು. ಆದರೆ  ಶಿಬಿಯದು  ಅಂಟಿಲ್ಲದ ದಾನ .  "ಎಲ್ಲ  ಐಶ್ವರ್ಯವೂ  ಭಗವಂತನದೇ.  ಈಗ  ನನ್ನ  ಸುಪರ್ದಿಗೆ  ಬಂದಿದೆ  ಎಂದ  ಕಾರಣಕ್ಕೆ  ಇದು  ನನ್ನದಲ್ಲ,  ನಾನು  ಕೇವಲ  ನಿಮಿತ್ತ  ಮಾತ್ರನಾಗಿದ್ದೇನೆ.  ವ್ಯಾವಹಾರಿಕವಾಗಿ  ಈಗ  ಅದು  ನನಗೆ  ಸಂಬಂಧಪಟ್ಟಿದೆ  ಎಂದರೂ  ಸಹ  ಯಾರ  ಮೂಲಕ  ಬಂದು  ನೀನೂ  ಏನೇನು  ಕೇಳುತ್ತೀಯೋ  ಅದನ್ನೆಲ್ಲಾ  ನಿನಗೆ  ಸಮರ್ಪಣೆ  ಮಾಡುವುದು  ನನ್ನ  ಹೆಚ್ಚುಗಾರಿಕೆಯಲ್ಲ,  ಹೊಣೆಗಾರಿಕೆ,  ಕರ್ತವ್ಯ.  ದಾನ  ಮಾಡುವಾಗ  ನಮ್ಮ  ಮನಸ್ಸು  ಹೇಗಿರಬೇಕು  ಎನ್ನುವುದಕ್ಕೆ  ಶಿಬಿ  ಚಕ್ರವರ್ತಿಯು  ಪರಮಾದರ್ಶ.  

ನಾವು  ಯಜ್ಞ,  ಯಾಗಗಳನ್ನು ಮಾಡುವಾಗ- "ಇಷ್ಟೆಲ್ಲಾ   ಖರ್ಚುಮಾಡಿ    ಮಾಡಿದೆ,  ಎಂಬುದಾಗಿ  ಹೊಗಳಿಕೊಳ್ಳುತ್ತಲೇ  ಇರುತ್ತೇವೆ.  ಆದರೆ  "ಎಲ್ಲವೂ  ಭಗವಂತನಿಂದ  ಬಂದಿದ್ದು,  ಅವನಿಗೇ  ಸಮರ್ಪಣೆಯಾಗುತ್ತಿದೆ."  ಎಂಬ  ಭಾವ  ನಮಗಿರುವುದಿಲ್ಲ.  ನಮ್ಮದೆಂಬ ಆ ಭಾರದಿಂದ  ಭಾರವಾದ  ಜೀವನ  ಮಾಡುತ್ತೇವೆ. ನಾವು  ಹಗುರವಾಗಿ  ಮೇಲಿನ  ಲೋಕಕ್ಕೆ  ಹೋಗಲು  ತಯಾರಾಗುವುದೇ  ಇಲ್ಲ.  ಶಿಬಿ ಚಕ್ರವರ್ತಿಯಂತಹ  ಒಂದು  ಸಮಾಹಿತ  ಮನಸ್ಕತೆ  ಅಂದರೆ  "ಎಲ್ಲವೂ ಭಗವಂತನಿಗೆ  ಸಮರ್ಪಿತ"  ಎನ್ನುವ  ಮನೋಭಾವ ನಮ್ಮದಾಗಬೇಕು  ಎನ್ನುವುದೇ  ಈ  ಕಥೆಯ   ಆದರ್ಶ. ನಮಗೆಲ್ಲರಿಗೂ ದಾನದ  ಆ  ಭಗವದರ್ಪಣ  ಬುದ್ಧಿಯನ್ನು  ಭಗವಂತನು  ಅನುಗ್ರಹಿಸಲಿ  ಎಂದು  ಪ್ರಾರ್ಥಿಸೋಣ.


ಸೂಚನೆ:  02/05/2024 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.