ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
ಒಮ್ಮೆ ಸೋದರರಾದ ಅಷ್ಟಕ, ಪ್ರತರ್ದನ, ವಸುಮನಸ, ಮತ್ತು ಶಿಬಿ ದೇವರ್ಷಿ ನಾರದರಲ್ಲಿ ಪ್ರಶ್ನಿಸುತ್ತಾರೆ.
"ನಾವು ನಾಲ್ಕೂ ಜನ ನಮಗೆ ತಿಳಿದಿದ್ದಷ್ಟು ಧರ್ಮಮಾರ್ಗದಲ್ಲಿಯೇ ರಾಜ್ಯಭಾರ ನಡೆಸಿದ್ದೇವೆ. ಯಾರಿಗೂ ನೋವಾಗದಂತೆ ನಡೆದುಕೊಂಡಿದ್ದೇವೆ. ಅದರಿಂದ ನಮಗೆ ಸ್ವರ್ಗಪ್ರಾಪ್ತಿಯಾಗುವುದು ನಿಸ್ಸಂಶಯ. ಆದರೆ ಸ್ವರ್ಗವೂ ಕೂಡ ನಿತ್ಯಶಾಶ್ವತವೇನೂ ಅಲ್ಲ. ಸತ್ಕರ್ಮದ ಫಲಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ ನಾವೆಲ್ಲರೂ ಸ್ವರ್ಗದಿಂದ ಚ್ಯುತರಾಗುತ್ತೇವೆ. ನಮ್ಮಲ್ಲಿ ಯಾರು ಮೊದಲು ಸ್ವರ್ಗದಿಂದ ಕೆಳಗೆ ಬೀಳುತ್ತೇವೆ ?" ಎಂಬುದಾಗಿ.
ನಾರದರ ಉತ್ತರ - "ನಿಮ್ಮ ನಾಲ್ಕು ಜನರಲ್ಲಿ ಅಷ್ಟಕ ಮೊದಲು ಚ್ಯುತನಾಗುತ್ತಾನೆ". ಕಾರಣ- " ಒಮ್ಮೆ ಅವನೊಡನೆ ಹೋಗುತ್ತಿದ್ದಾಗ ಬೇರೆ ಬೇರೆ ಬಣ್ಣದ ಸಾವಿರಾರು ಹಸುಗಳನ್ನು ನಾನು ನೋಡಿದೆ. ನಾನು ಅವನನ್ನು ಇದು ಯಾರದ್ದು ಎಂದು ಕೇಳಿದೆ. ಆಗ ಅಷ್ಟಕ - "ಸ್ವಾಮಿ, ಇವೆಲ್ಲವೂ ನನ್ನದೇ ಆಗಿತ್ತು, ಈಗ ಬ್ರಾಹ್ಮಣರಿಗೆ ದಾನ ಕೊಟ್ಟುಬಿಟ್ಟಿದ್ದೇನೆ" ಎಂದನು. ಅವನು ಕೊಟ್ಟ ದಾನದಲ್ಲಿ ಇನ್ನೂ "ನನ್ನದು" ಎಂಬ ಭಾವ ಇಟ್ಟುಕೊಂಡಿದ್ದ್ದರಿಂದ ದಾನದಲ್ಲಿ ದೋಷ ಬಂತು. ಹಾಗಾಗಿ ಇವನು ಸ್ವರ್ಗದಿಂದ ಮೊದಲು ಚ್ಯುತನಾಗುತ್ತಾನೆ." ಎಂದು ಹೇಳಿದರು.
ಹಾಗೆಯೇ "ಪ್ರತರ್ದನ ಎರಡನೆಯವನು" ಎಂದರು ನಾರದರು. ಕಾರಣ- "ಅವನು ದಾನಶೀಲ, ಆದರೂ ಅವನು ಒಮ್ಮೆ ನನ್ನನ್ನು ರಥದಲ್ಲಿ ಕರೆದುಕೊಂಡು ಹೋಗುತ್ತಿದ್ದ. ಆಗ ಒಬ್ಬ ಬ್ರಾಹ್ಮಣ ಬಂದು - "ನನಗೆ ಒಂದು ರಥದ ಕುದುರೆ ಬಹಳ ಶೀಘ್ರವಾಗಿ ಬೇಕಾಗಿದೆ." ಎಂದನು. ತ್ವರೆ ಮಾಡಿ ನನಗೆ ದಾನ ಕೊಡುತ್ತೀಯಾ" ಎಂದು ಕೇಳುತ್ತಾನೆ. ಅದಕ್ಕೆ ಪ್ರತರ್ದನನು "ಸರಿ, ನಾನು ರಾಜಧಾನಿಗೆ ಹಿಂತಿರುಗಿದ ನಂತರ ದಾನ ಕೊಡುತ್ತೇನೆ. ಆಗಬಹುದೇ" ಎಂದು ಕೇಳುತ್ತಾನೆ. ಆಗ ಬ್ರಾಹ್ಮಣನು "ಇಲ್ಲ, ನನಗೆ ಈಗಲೇ ಬೇಕೆಂದು" ಒತ್ತಾಯ ಮಾಡಿದಮೇಲೆ ಇವನು ಕುದುರೆಯನ್ನು ಕೊಡುತ್ತಾನೆ. ಸ್ವಲ್ಪದೂರ ಹೋದಾಗ ಮತ್ತೊಬ್ಬ, ಹೀಗೇ ನಾಲ್ಕೂ ಜನ ಬ್ರಾಹ್ಮಣರು ಒಂದೊಂದೂ ಕುದುರೆ ಕೇಳಿದಾಗಲೂ "ವಾಪಸ್ಸು ಹೋಗಿ ಕೊಡಬಹುದೇ ಎಂದು ಪ್ರಶ್ನೆ ಕೇಳಿ ನಂತರ ಕೊಡುತ್ತಾನೆ. ದಾನದಲ್ಲೊಂದು ಹಿಡಿತ. ಅಂದರೆ, ಕೇಳಿದ ತಕ್ಷಣ ರಾಜನು ಯೋಚನೆ ಮಾಡದೇ ಕೊಟ್ಟುಬಿಡಬೇಕು ಎನ್ನುವ ನಿಯಮವನ್ನು ತಪ್ಪಿದ್ದರಿಂದ ಎರಡನೆಯವನಾಗಿ ಸ್ವರ್ಗದಿಂದ ಕೆಳಗಿಳಿಯುತ್ತಾನೆ.
ವಸುಮನಸನು ಮೂರನೆಯವನಾಗಿ ಕೆಳಗಿಳಿಯುತ್ತಾನೆ ಎನ್ನುತ್ತಾರೆ. ಅವನ ಸಮಸ್ಯೆ ಏನು? ಎಂದರೆ ಅವನೂ ಕೂಡ ಧರ್ಮಾತ್ಮನೇ ಸರಿ. ಅವನು ಅನೇಕ ಯಜ್ಞಗಳನ್ನು, ಅನೇಕ ಧರ್ಮಕಾರ್ಯ, ಗೋಸಂರಕ್ಷಣೆಗಳನ್ನು ಮಾಡಿದ್ದ. ಅದರ ಫಲವಾಗಿ , ಅವನಿಗೆ ದೇವತೆಗಳು ದಿವ್ಯವಾದ ದೇವಲೋಕದ ಒಂದು ಪುಷ್ಪರಥವೊಂದನ್ನು ಕೊಟ್ಟು ಸ್ವಸ್ತಿವಾಚನ ಮಾಡುತ್ತಾ, ನಿನಗೆ ಒಳ್ಳೆಯದಾಗಲೀ ಎಂದು ಹೇಳುತ್ತಿರುವ ಸಮಯದಲ್ಲಿ ನಾರದರು ಅಲ್ಲಿಗೆ ಬರುತ್ತಾರೆ. ವಸುಮನಸನು ನಾರದರಿಗೆ -. "ಸ್ವಾಮೀ, ನೀವೇ ಇದಕ್ಕೆ ಯೋಗ್ಯರು, ಯೋಗ್ಯರಾಗಿ ಬಂದಿದ್ದೀರಿ ನೀವು, ಈಗ ದಾನವನ್ನು ಸ್ವೀಕರಿಸಿ. ಎಂದು ಸಮರ್ಪಿಸಿದನು. ಹೀಗೆ ಎರಡನೆಯ ಬಾರಿ ದೇವತೆಗಳಿಂದ ಬಂದ ಪುಷ್ಪರಥವನ್ನೂ ದಾನ ಮಾಡುತ್ತಾನೆ.ಆದರೆ ಹೀಗೆಯೇ ಮೂರನೇಬಾರಿಯೂ ಅತ್ಯದ್ಭುತವಾದ ಪುಷ್ಪರಥ ದೊರೆತಾಗಲೂ ಪೂಜ್ಯ ನಾರದರು "ನಿನಗೆ ಇದರಿಂದ ಶ್ರೇಯೋಭಿವೃದ್ಧಿಯುಂಟಾಗಲಿ ಎಂದು ಸ್ವಸ್ತಿವಾಚನ ಮಾಡುತ್ತಾರೆ. ಈಗ ಮಾತ್ರ ಅವನು ದಾನ ಕೊಡಲು ಹಿಂಜರಿದುಬಿಡುತ್ತಾನೆ. " ತಮ್ಮ ಸ್ವಸ್ತಿವಾಚನ ತುಂಬಾ ಚೆನ್ನಾಗಿತ್ತು" ಎಂದು ಹೇಳಿ ಮೃದುವಾಗಿ ಮಾತನಾಡಿ ಕಳುಹಿಸಿಬಿಡುತ್ತಾನೆ. ಪದಾರ್ಥದ ಮೇಲಿನ ಅಂಟು ಅವನ ದಾನದಲ್ಲಿ ಹಿಡಿತ ತರಿಸಿತು. ಆ ಕಾರಣದಿಂದಾಗಿ ಅವನು ಮೂರನೆಯವನಾಗಿ ಸ್ವರ್ಗದಿಂದ ಕೆಳಗೆ ಬೀಳುತ್ತಾನೆ ಎಂದರು.
ಇನ್ನು ಉಳಿದವನು ಶಿಬಿ. ಉಳಿದ ರಾಜಕುಮಾರರು ನಾರದರನ್ನು ಕುರಿತು "ನಾರದರೇ ನೀವು ಮತ್ತು ಶಿಬಿ ಇಬ್ಬರೂ ಏಕಕಾಲದಲ್ಲಿ ಸ್ವರ್ಗಪ್ರವೇಶ ಮಾಡಿದರೆ ನಿಮ್ಮಿಬ್ಬರಲ್ಲಿ ಯಾರು ಮೊದಲು ಸ್ವರ್ಗದಿಂದ ಚ್ಯುತರಾಗಿ ಕೆಳಗೆ ಬೀಳುತ್ತಾರೆ?" ಎಂದು ಪ್ರಶ್ನಿಸುತ್ತಾರೆ. ನಾರದರು ಸ್ವಲ್ಪವೂ ಹಿಂಜರಿಯದೇ "ನಾನೇ ಮೊದಲು ಕೆಳಗೆ ಬರುತ್ತೇನಪ್ಪಾ. ಶಿಬಿಯಷ್ಟು ದೊಡ್ಡವನಲ್ಲ ನಾನು." ಎಂದರು. ಎಲ್ಲರಿಗೂ ಬಹಳ ಆಶ್ಚರ್ಯವಾಯಿತು. ದೇವರ್ಷಿಗಳು, ತ್ರಿಕಾಲಜ್ಞರು, ತ್ರಿಲೋಕಸಂಚಾರಿಗಳಾದ ನಾರದರೇ ಹೀಗೆ ಹೇಳಿದರಲ್ಲಾ ಎಂದು. ಆಗ ನಾರದರು ಹೇಳುತ್ತಾರೆ-
"ಶಿಬಿ ಮಹಾರಾಜನು ರಾಜ್ಯವಾಳುತ್ತಿದ್ದಾಗ ಒಬ್ಬ ಬ್ರಾಹ್ಮಣನು ಅತಿಥಿಯಾಗಿ ಬರುತ್ತಾನೆ. ರಾಜನು ಅವರ ಭೋಜನಕ್ಕಾಗಿ ವಿಚಾರಿಸಲು ಆ ಬ್ರಾಹ್ಮಣನು "ನಿನ್ನ ಮಗನನ್ನು ಕೊಂದು ಅವನ ಮಾಂಸವನ್ನು ನನಗೆ ಭೋಜನಾತಿಥ್ಯವಾಗಿ ಕೊಡಬೇಕು ಎಂದನು. ಶಿಬಿಯು ಸ್ವಲ್ಪವೂ ವಿಚಲಿತನಾಗಲಿಲ್ಲ, ವಿವರ್ಣನಾಗಲಿಲ್ಲ. ಅವರು ಹೇಳಿದಂತೆ ತನ್ನ ಮಗನ ಮಾಂಸದಿಂದ ಬ್ರಾಹ್ಮಣರಿಗೆ ಭೋಜನಮಾಡಿಸಲೆಂದು ಆ ಭೋಜನಪಾತ್ರೆಯನ್ನು ತಲೆಯಮೇಲಿಟ್ಟುಕೊಂಡು ಆ ಬ್ರಾಹ್ಮಣನಿರುವ ಸ್ಥಳಕ್ಕೆ ಹೊರಡುತ್ತಾನೆ. ಆ ವೇಳೆಗೆ ಈ ಬ್ರಾಹ್ಮಣನು ರಾಜನ ಅಂತಃಪುರಕ್ಕೆ ಬೆಂಕಿ ಹಚ್ಚಿಬಿಡುತ್ತಾನೆ. ಆ ಬೆಂಕಿಯು ಅರಮನೆ, ಗೋಶಾಲೆ, ಗಜಶಾಲೆಗಳಿಗೆಲ್ಲಾ ವಿಸ್ತರಿಸಿಬಿಡುತ್ತದೆ. ಇಷ್ಟೆಲ್ಲಾ ಆ ಬ್ರಾಹ್ಮಣನಿಂದ ಆದರೂ ಶಿಬಿಚಕ್ರವರ್ತಿಯು ಸ್ವಲ್ಪವೂ ವಿಚಲಿತನಾಗಲಿಲ್ಲ, ಅವನಿಗೆ ಕೋಪವೂ ಬರಲಿಲ್ಲ. ಅವನು ವಿನಮ್ರನಾಗಿ ಬ್ರಾಹ್ಮಣನನ್ನು ಕುರಿತು- ಭೋಜನವನ್ನು ಸ್ವೀಕರಿಸಬೇಕೆಂದು ವಿನಂತಿಸಿಕೊಂಡನು. ಆ ಬ್ರಾಹ್ಮಣನು ರಾಜನನ್ನು ಇನ್ನೂ ಪರೀಕ್ಷೆಮಾಡಲು "ಅದನ್ನು ನೀನೇ ತಿನ್ನು" ಎಂದನು. ಆಗಲೂ ರಾಜನು ಸಮಾಹಿತ ಮನಸ್ಕನಾಗಿದ್ದು ಬ್ರಾಹ್ಮಣನ ಆಜ್ಞೆಯನ್ನು ಪಾಲಿಸಲು ಸಿದ್ಧನಾದನು. ತಕ್ಷಣ ಆ ಬ್ರಾಹ್ಮಣನು ಸಂತೋಷಗೊಂಡು ರಾಜನನ್ನು ತಡೆದು ಪ್ರೀತಿಯಿಂದ "ಎಲೈ ರಾಜನೇ, ನೀನು ಕೋಪವನ್ನು ಜಯಿಸಿದ ಮಹಾಶೂರ. ದಾನ ಕೊಡದೇ ಇರಬಹುದಾದಂತಹ ಯಾವುದನ್ನೂ ನೀನು ಉಳಿಸಿಕೊಂಡಿಲ್ಲ. ಪತ್ನೀ, ಪುತ್ರರು, ರಾಜ್ಯ, ಧನ, ಕನಕ, ತನು, ಮನ ಇವೆಲ್ಲವನ್ನೂ ದಾನಮಾಡಲು ಸಿದ್ಧವಾಗಿರುವೆಯಲ್ಲಾ! ನಿನ್ನದು ಎಂಥಹ ಶ್ರೇಷ್ಠವಾದ ವ್ಯಕ್ತಿತ್ವ! ಎಂದು ಹೇಳಿ ಅಂತಃಕರಣಪೂರ್ವಕವಾಗಿ ಅವನನ್ನು ಆಶೀರ್ವದಿಸುತ್ತಾನೆ. ಸತ್ತ ಮಗನೂ ಬದುಕುತ್ತಾನೆ ಎಂಬ ಕಥೆ ಬೇರೆ.
ದಾನಮಾಡುವಾಗ ಅಥವಾ ಭಗವಂತನಲ್ಲಿ ಸಮರ್ಪಣೆ ಮಾಡುವಾಗ ನಮ್ಮ ಮನೋಧರ್ಮವು ಹೇಗಿರಬೇಕು ಎನ್ನುವುದನ್ನು ನಿರ್ದೇಶನ ಮಾಡುವಂತಹ ಒಂದು ಕಥೆ.
ಶ್ರೀರಂಗಮಹಾಗುರುಗಳ ಮಾತೊಂದು ಸ್ಮರಣೀಯ-"ಐಶ್ವರ್ಯ ಎನ್ನುವ ಒಂದು ಪದವೇ ಈಶ್ವರನನ್ನು ಜೊತೆಯಲ್ಲಿಟ್ಟುಕೊಂಡಿದೆಯಪ್ಪಾ. ಈಶ್ವರ ಎನ್ನುವ ಪದದಿಂದಲೇ ಈ ಐಶ್ವರ್ಯ ಎನ್ನುವ ವಿಷಯ ಬಂದಿದೆ. ಅವನ ಜಗತ್ತಿನಲ್ಲಿ ಏನೇನಿದೆಯೋ ಅವೆಲ್ಲಾ ಅವನೇ ಕೊಟ್ಟಿರುವಂಥಹುದು. ಅವನು ಕೊಟ್ಟಿದ್ದನ್ನು ಅವನಿಗೇ ಕೊಡುವುದೇ ಐಶ್ವರ್ಯದ ಒಂದು ಸದುಪಯೋಗವಾದಂತೆ. ದೈವ ಕೊಟ್ಟಿದ್ದನ್ನು ದೈವಕ್ಕೇ ಉಪಯೋಗಿಸಬೇಕು. ಅದೇ ಸಮರ್ಪಣೆ" . ದಾನ ಮಾಡುವಾಗ ತನ್ನದು ಎಂದು ಯಾವ ಅಂಟನ್ನೂ ಇಟ್ಟುಕೊಳ್ಳಬಾರದು ಎಂಬ ಮಾತನ್ನು ಅವರು ಹೇಳುತ್ತಿದ್ದರು.
ಅಷ್ಟಕನ ದಾನದಲ್ಲಿ ತನ್ನದೆಂಬ ಒಂದು ಅಂಟು ಇದ್ದೇ ಇದೆ. ಹೀಗಾಗಿ "ಇದಂ ನ ಮಮ" ಎಂದು ಬಾಯಲ್ಲಿ ಹೇಳಿದರೂ ಕೂಡ ಒಳ ಮನಸ್ಸಿನಲ್ಲಿ ಇದೆಲ್ಲಾ ನನ್ನದಾಗಿತ್ತು ಎನ್ನುವ ಒಂದು ಅಂಟು. ಉಳಿದವರದ್ದೂ ಹೀಗೇ. ಈ ಬಗೆಯ ಅಂಟು ಇದ್ದರೆ ಅದು ದಾನವಾಗದು. ಆದರೆ ಶಿಬಿಯದು ಅಂಟಿಲ್ಲದ ದಾನ . "ಎಲ್ಲ ಐಶ್ವರ್ಯವೂ ಭಗವಂತನದೇ. ಈಗ ನನ್ನ ಸುಪರ್ದಿಗೆ ಬಂದಿದೆ ಎಂದ ಕಾರಣಕ್ಕೆ ಇದು ನನ್ನದಲ್ಲ, ನಾನು ಕೇವಲ ನಿಮಿತ್ತ ಮಾತ್ರನಾಗಿದ್ದೇನೆ. ವ್ಯಾವಹಾರಿಕವಾಗಿ ಈಗ ಅದು ನನಗೆ ಸಂಬಂಧಪಟ್ಟಿದೆ ಎಂದರೂ ಸಹ ಯಾರ ಮೂಲಕ ಬಂದು ನೀನೂ ಏನೇನು ಕೇಳುತ್ತೀಯೋ ಅದನ್ನೆಲ್ಲಾ ನಿನಗೆ ಸಮರ್ಪಣೆ ಮಾಡುವುದು ನನ್ನ ಹೆಚ್ಚುಗಾರಿಕೆಯಲ್ಲ, ಹೊಣೆಗಾರಿಕೆ, ಕರ್ತವ್ಯ. ದಾನ ಮಾಡುವಾಗ ನಮ್ಮ ಮನಸ್ಸು ಹೇಗಿರಬೇಕು ಎನ್ನುವುದಕ್ಕೆ ಶಿಬಿ ಚಕ್ರವರ್ತಿಯು ಪರಮಾದರ್ಶ.
ನಾವು ಯಜ್ಞ, ಯಾಗಗಳನ್ನು ಮಾಡುವಾಗ- "ಇಷ್ಟೆಲ್ಲಾ ಖರ್ಚುಮಾಡಿ ಮಾಡಿದೆ, ಎಂಬುದಾಗಿ ಹೊಗಳಿಕೊಳ್ಳುತ್ತಲೇ ಇರುತ್ತೇವೆ. ಆದರೆ "ಎಲ್ಲವೂ ಭಗವಂತನಿಂದ ಬಂದಿದ್ದು, ಅವನಿಗೇ ಸಮರ್ಪಣೆಯಾಗುತ್ತಿದೆ." ಎಂಬ ಭಾವ ನಮಗಿರುವುದಿಲ್ಲ. ನಮ್ಮದೆಂಬ ಆ ಭಾರದಿಂದ ಭಾರವಾದ ಜೀವನ ಮಾಡುತ್ತೇವೆ. ನಾವು ಹಗುರವಾಗಿ ಮೇಲಿನ ಲೋಕಕ್ಕೆ ಹೋಗಲು ತಯಾರಾಗುವುದೇ ಇಲ್ಲ. ಶಿಬಿ ಚಕ್ರವರ್ತಿಯಂತಹ ಒಂದು ಸಮಾಹಿತ ಮನಸ್ಕತೆ ಅಂದರೆ "ಎಲ್ಲವೂ ಭಗವಂತನಿಗೆ ಸಮರ್ಪಿತ" ಎನ್ನುವ ಮನೋಭಾವ ನಮ್ಮದಾಗಬೇಕು ಎನ್ನುವುದೇ ಈ ಕಥೆಯ ಆದರ್ಶ. ನಮಗೆಲ್ಲರಿಗೂ ದಾನದ ಆ ಭಗವದರ್ಪಣ ಬುದ್ಧಿಯನ್ನು ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
ಸೂಚನೆ: 02/05/2024 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.