Monday, December 8, 2025

ವ್ಯಾಸ ವೀಕ್ಷಿತ 165 ಜರಾಸಂಧ-ಪ್ರತಾಪ, ಹಂಸ-ಡಿಂಭಕರ ವಿಚಿತ್ರ ಮರಣ! (Vyaasa Vikshita 165)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುಧಿಷ್ಠಿರನು ಮಾಡಬೇಕೆಂದಿರುವ ರಾಜಸೂಯ ಯಾಗಕ್ಕೆ ಯಾರು ಹಿತರು, ಯಾರಲ್ಲ? - ಎಂಬುದನ್ನು ಆತನಿಗೆ ತಿಳಿಸಿಕೊಡುತ್ತಾ ಶ್ರೀಕೃಷ್ಣನು ಹೇಳಿದ ಮಾತು: "ಜರಾಸಂಧನ ಭಯದಿಂದಾಗಿಯೇ ಮತ್ಸ್ಯದೇಶದ ರಾಜರು ದಕ್ಷಿಣ ದಿಕ್ಕಿನತ್ತ ಓಡಿಹೋಗಿದ್ದಾರೆ., ಪಂಚಾಲದೇಶದ ರಾಜರಂತೂ ಸ್ವರಾಜ್ಯವನ್ನು ತೊರೆದು ದಿಕ್ಕಾಪಾಲಾಗಿ ಓಡಿಹೋಗಿರುವರು.

ಇದೆಲ್ಲಾ ಆಗಿ ಕೆಲಕಾಲಾನಂತರ, ಕಂಸನು ಯಾದವರನ್ನೆಲ್ಲಾ ಕಂಗೆಡಿಸಿ ಜರಾಸಂಧನ ಇಬ್ಬರು ಪುತ್ರಿಯರನ್ನು ಮದುವೆಯಾದನು. ಒಬ್ಬಳ ಹೆಸರು ಅಸ್ತಿ, ಮತ್ತೊಬ್ಬಳು ಪ್ರಾಪ್ತಿ. ವ್ಯರ್ಥಮತಿಯಾದ ಆ ಕಂಸನು, ಈ ಜರಾಸಂಧನ ಬಲದ ಮೇರೆಗೇ ತನ್ನ ಜ್ಞಾತಿಗಳನ್ನೇ ಪರಾಭವಗೊಳಿಸಿ ಅವರೆಲ್ಲರಿಗಿಂತಲೂ ತಾನೇ ಹೆಚ್ಚೆಂದು ಕುಳಿತನು. ಇದುವೇ ಆತನ ಮಹಾಪಚಾರ.

ಭೋಜರಾಜವಂಶಕ್ಕೆ ಸೇರಿದ ವೃದ್ಧರನೇಕರನ್ನು ದುರಾತ್ಮನಾದ ಕಂಸನು ಬಹಳ ಪೀಡಿಸಿದ್ದ. ಎಂದೇ ಅವರು ಆತಂಕಗೊಂಡು, ತಮ್ಮ ಆತ್ಮೀಯ ಬಂಧುಗಳಿಗೆ ರಕ್ಷಣೆ ಬೇಕೆಂದು ನಮ್ಮಲ್ಲಿಗೆ ಬಂದು ಕೋರಿದರು. ಆಗಲೇ ಬಲರಾಮನೊಂದಿಗೆ ನಾನು ಹೋಗಿ ಜ್ಞಾತಿಕಾರ್ಯವನ್ನು ಮಾಡಿದುದು: ಕಂಸ ಮತ್ತು ಸುನಾಮ - ಇವರಿಬ್ಬರನ್ನು ನಾನೂ ಬಲರಾಮನೂ ಕೊಂದೆವು.

ಕಂಸಭಯವೇನೋ ಹೋಯಿತು. ಆದರೆ ಪ್ರತೀಕಾರ ಮಾಡಬೇಕೆಂದು ಜರಾಸಂಧನು ಸನ್ನದ್ಧನಾಗತೊಡಗಿದನು. ಆಗಲೇ ಆ ಹದಿನೆಂಟು ಮಂದಿ ರಾಜರೊಂದಿಗೆ ಮಂತ್ರಾಲೋಚನೆಯನ್ನು ನಾವು ಮಾಡಿದುದು: "ಶತ್ರುಘಾತಕವಾದ ಮಹಾಸ್ತ್ರಗಳಿಂದ ಯುದ್ಧಮಾಡಿದರೂ, ಮುನ್ನೂರು ವರ್ಷಗಳ ಸತತವಾಗಿ ಸೆಣಸಿದರೂ ಈ ಜರಾಸಂಧನ ಸೈನ್ಯವನ್ನು ನಾವು ನಾಶಮಾಡಲಾರೆವು".

ನಾವು ಹಾಗೆಂದುಕೊಳ್ಳಲು ಕಾರಣವೆಂದರೆ ಜರಾಸಂಧನಿಗೆ ಇಬ್ಬರು ಮಿತ್ರರಿದ್ದರು. ಹಂಸ ಎಂದೊಬ್ಬ, ಡಿಂಭಕ ಎಂದು ಮತ್ತೊಬ್ಬ. ಬಲದಲ್ಲಿ ಇಬ್ಬರೂ ದೇವತೆಗಳಿಗೆ ಸಮಾನರು. ಯಾವುದೇ ಶಸ್ತ್ರದಿಂದಲೂ ಸಾಯಿಸಲಾಗದವರು ಅವರಿಬ್ಬರೂ. ಜರಾಸಂಧನೂ ಸೇರಿದರೆಂದರೆ ಮೂರು ಲೋಕಗಳನ್ನೂ ಗೆಲ್ಲಬಲ್ಲವರೇ ಸರಿ. ಇದು ಕೇವಲ ನನ್ನ ಅಭಿಪ್ರಾಯವಾಗಿರಲಿಲ್ಲ, ಉಳಿದ ರಾಜರ ಅಭಿಪ್ರಾಯವೂ ಆಗಿತ್ತು.

ಈ ಸಂದರ್ಭದಲ್ಲಿ ಅವರಿಬ್ಬರ ಸಾವು ಹೇಗೆ ಇದ್ದಕ್ಕಿದ್ದಂತೆ ನಡೆದುಹೋಯಿತೆಂಬುದನ್ನು ಕೇಳು. ಹಂಸ ಎಂದೇ ಹೆಸರುಳ್ಳ ಮತ್ತೂ ಒಬ್ಬ ರಾಜನಿದ್ದ. ಹದಿನೆಂಟು ದಿನಗಳ ಕಾಲ ಅವನೊಡನೆ ಹೋರಾಡಿ ಬಲರಾಮನು ಆತನನ್ನು ಸಂಹರಿಸಿದ.

"ಹಂಸರಾಜನು ಸತ್ತ" ಎಂಬ ಈ ಸಮಾಚಾರವನ್ನು ಯಾರೋ ಹೇಳಿದರು, ಡಿಂಭಕನಿಗೆ. ಆ ಡಿಂಭಕನೋ, ಸತ್ತದ್ದು ತನ್ನ ಆಪ್ತನಾದ ಹಂಸನೆಂದೇ ಭಾವಿಸಿಕೊಂಡುಬಿಟ್ಟ! ಅದರಿಂದಾಗಿ ಆತನಿಗೆ ಅತೀವ ದುಃಖವಾಯಿತು. ಆ ದುಃಖಭರದಲ್ಲಿ ಆತ ಯಮುನೆಯಲ್ಲಿ ಬಿದ್ದು ಪ್ರಾಣ ಬಿಟ್ಟ, ಹಂಸನಿಲ್ಲದೆ ತಾನು ಬದುಕಿರಲಾರೆ - ಎಂಬ ಖೇದದಿಂದ.

ಡಿಂಭಕನು ಹಾಗೆ ತನಗಾಗಿ ಸತ್ತನೆಂಬುದನ್ನು ಕೇಳಿದ ಹಂಸನಿಗೂ ದುಃಖವು ಉಕ್ಕಿಬಂದಿತು.  ಆ ಖೇದದಲ್ಲಿ ತಾನೂ ಅದೇ ಯಮುನೆಯಲ್ಲೇ ಬಿದ್ದು ಪ್ರಾಣತೊರೆದ. ಹಂಸ-ಡಿಂಭಕರಿಬ್ಬರೂ ಸತ್ತರೆಂಬುದನ್ನು ಕೇಳಿದ ಜರಾಸಂಧನಿಗೂ ಪರಮಖೇದವಾಯಿತು. ನಿರುತ್ಸಾಹನಾಗಿ ತನ್ನ ರಾಜಧಾನಿಗೆ ಹಿಂದಿರುಗಿ ಬಂದ.

ಜರಾಸಂಧನು ಹೀಗೆ ಹಿಂದಿರುಗಿದುದು ನಮಗೆ ಗೊತ್ತಾಯಿತು. ಅದರಿಂದಾಗಿ ನಾವೆಲ್ಲರೂ ಆನಂದಭರಿತರಾಗಿ ಮತ್ತೆ ಮಥುರೆಯಲ್ಲೇ ವಾಸ ಮಾಡತೊಡಗಿದೆವು. ಆದರೆ ಅದು ಬಹುಕಾಲ ನಿಲ್ಲಲಿಲ್ಲ.

ಜರಾಸಂಧನ ಮಗಳು ತನ್ನ ತಂದೆಯ ಬಳಿಗೆ ಹೋಗಿ, ತನ್ನ ಗೋಳನ್ನು ಹೇಳಿಕೊಂಡಳು.

ಸೂಚನೆ : 7/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 43 (Prasnottara Ratnamalike 43)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೪೩ಈ ಜಗತ್ತು ಯಾರಿಂದ ಗೆಲ್ಲಲ್ಪಟ್ಟಿದೆ

ಸತ್ಯದಲ್ಲಿ ನೆಲೆನಿಂತ ಸಹನಶೀಲ ಪುರುಷನಿಂದ.

ಈ ಪ್ರಶ್ನೆಯು ತುಂಬಾ ಸ್ವಾರಸ್ಯದಿಂದ ಕೂಡಿದೆ. ಏಕೆಂದರೆ ಒಂದು ಜಗತ್ತನ್ನು ಗೆಲ್ಲುವುದು ಎಂದರೇನು? ಮತ್ತು ಅದು ಸಹನಶೀಲ ಪುರುಷನಿಂದ ಗೆಲ್ಲುವುದು ಎಂದರೇನು? ಎಂಬ ಈ ಎರಡು ಪ್ರಧಾನವಾದ ವಿಷಯ ಇದಕ್ಕೆ ಕಾರಣ. ಹಾಗಾಗಿ ಇಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು - ಒಬ್ಬ ಸತ್ಯದಲ್ಲಿ ನೆಲೆ ನಿಂತ ಪುರುಷ ಎಂದರೆ ಅವನಲ್ಲಿರುವ ಗುಣ ಸ್ವಭಾವಗಳೇನು? ಅವು ಅವನ ನಡವಳಿಕೆಯಲ್ಲಿ ಹೇಗೆ ಪ್ರತಿಫಲಿಸುತ್ತವೆ? ಸತ್ಯದಲ್ಲಿ ನೆಲೆಯಲ್ಲುವಿಕೆಯಿಂದ ಈ ಜಗತ್ತಿಗೆ ಆಗುವ ಪರಿಣಾಮಗಳೇನು? ಇದರಿಂದ ಜಗತ್ತಿಗೆ ಹೇಗೆ ಅನುಕೂಲವಾಗುತ್ತದೆ? ಜಗತ್ತು ಇದರಿಂದ ಹೇಗೆ ನಿಲ್ಲಲು ಸಾಧ್ಯ? ಎಂಬಿತ್ಯಾದಿ ಪೂರಕ ಸಂಗತಿಗಳನ್ನು ಇದರ ಜೊತೆಗೆ ಚಿಂತಿಸಬೇಕಾಗಿದೆ. 

ಸತ್ಯ ಎಂದರೆ ಯಾವುದು ಸರ್ವವಿಧದಲ್ಲೂ, ಸರ್ವಕಾಲದಲ್ಲೂ ಏಕರೂಪವಾಗಿರುತ್ತದೆಯೋ, ವಿಕಾರವನ್ನು ಹೊಂದುವುದೇ ಇಲವೋ ಅಂತಹದ್ದು. ಅಂದರೆ ಪರಬ್ರಹ್ಮ ಮಾತ್ರ ಸತ್ಯ. ಇದು ಎಂದೂ, ಯಾವುದೇ ಕಾರಣಕ್ಕೂ ವಿಕಾರವನ್ನು ಹೊಂದುವುದಿಲ್ಲ. ಆದ್ದರಿಂದ ಇಂತಹ ಸತ್ಯದಲ್ಲಿ ನೆಲೆನಿಲ್ಲುವವನು ಅವನು ಸತ್ಪುರುಷನೇ ಆಗಿರಬೇಕು. ಅಂದರೆ ಅವನು ಸಹನಶೀಲನೇ ಆಗಿರುತ್ತಾನೆ. ಅವನಲ್ಲಿ ಯಾವುದೇ ವಿಧವಾದ ಮಾನಸಿಕ ಕ್ಷೋಭೆಯು ಇರುವುದಿಲ್ಲ ಎಂದರ್ಥ. ಹಾಗಾಗಿ ಅವನು ಎಲ್ಲಿರುವನೋ, ಆ ಸುತ್ತಮುತ್ತಲಿನ ಪರಿಸರವೆಲ್ಲವೂ ಶಾಂತಿ, ನೆಮ್ಮದಿ, ಅಹಿಂಸೆ ಮೊದಲಾದ ಗುಣಗಳಿಂದ ಕೂಡಿರುತ್ತದೆ. ಇವು ತಾನೆ ಸುಖದ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಸಹಕಾರಿ ಸಾಮಗ್ರಿಗಳು!. ಇವುಗಳು ಮಾತ್ರ ಆ ವ್ಯಕ್ತಿಯ ಅಥವಾ ಆ ಸಮಾಜದ ಶಾಂತಿಯ ತಾಣಕ್ಕೆ ಕಾರಣೀಭೂತವಾಗುತ್ತವೆ!. ಹಾಗಾಗಿ ಒಬ್ಬ ಸತ್ಪುರುಷನು ಅಥವಾ ಜ್ಞಾನಿಯು ಎಲ್ಲಿರುವನೋ ಅಲ್ಲಿ ಸಹಜವಾಗಿಯೇ ಮಳೆ-ಬೆಳೆಗಳು ಎಲ್ಲವೂ ಸಮೃದ್ಧವಾಗಿ ಆಗುತ್ತವೆ ಎಂಬುದಾಗಿ ನಾವು ಪುರಾಣ, ಇತಿಹಾಸ ಕಥೆಗಳಲ್ಲಿ ನಾವು ಕೇಳುತ್ತೇವೆ. ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನು ಅಂತಹ ಅತ್ಯಂತ ಪ್ರಭಾವಿಯಾದ, ಸತ್ಯನಿಷ್ಠನಾದ ಮಹರ್ಷಿಯಾಗಿದ್ದನು. ಅವನು ಎಲ್ಲೆಲ್ಲಿ ಹೋಗುತ್ತಾನೋ ಅಲ್ಲೆಲ್ಲವೂ ಅತಿವೃಷ್ಟಿ ಅನಾವೃಷ್ಟಿಗಳು ದೂರಸರಿದು ಸುವೃಷ್ಟಿಯಾಗಿ ಆ ದೇಶ ಸುಭಿಕ್ಷೆಯಿಂದ ಕೊಡಿರುತ್ತಿತ್ತು ಎಂಬುದಾಗಿ ರಾಮಾಯಣದಲ್ಲಿ ಆ ಕಥೆಯನ್ನು ನಾವು ನೋಡುತ್ತೇವೆ. ಒಬ್ಬ ರಾಜನಾದವನ ಕರ್ತವ್ಯವೆಂದರೆ ಪ್ರಜೆಗಳು ಸತ್ಯದಲ್ಲಿ ಅಂದರೆ ಭಗವಂತನ ವಿಷಯದಲ್ಲಿ ಶ್ರದ್ಧೆ ಹೊಂದಿದವರಾಗಿರಬೇಕು. ಆಸ್ತಿಕ್ಯಬುದ್ಧಿಯುಳ್ಳವರಾಗಿರಬೇಕು. ಅದಕ್ಕೆ ರಾಜನಾದನು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದನು. ಇದಕ್ಕೆ ವಿರೋಧಿಯಾದವರನ್ನು ಹತ್ತಿಕ್ಕುತ್ತಿದ್ದನು. ಸತ್ಯನಿಷ್ಠರಾದ ಮಹಾಪುರುಷರು ತಮಗೆ ಬಂದ ಕಷ್ಟವನ್ನು ಸಹಿಸಿಕೊಂಡು ಜಗತ್ತಿನ ಒಳಿತಿಗೆ ಚಿಂತಿಸುವವರಾಗಿರುತ್ತಿದ್ದರು. ಇಂತಹ ಸತ್ಯನಿಷ್ಠರ ಅನೇಕ ಚರಿತ್ರಗಳನ್ನು ನಾವು ಇತಿಹಾಸ ಪುಟಗಳಲ್ಲಿ ಕಾಣಬಹುದು. ಇಂಥವರು ಇದ್ದಾಗ ತಾನೇ ಮಳೆ ಬೆಳೆಗಳೆಲ್ಲವೂ ಚೆನ್ನಾಗಿ ಆಗಿ ಜೀವಿಗಳಿಗೆ ಬೇಕಾದ ಆಹಾರವು ಸಕಾಲದಲ್ಲಿ ಸಾಕಷ್ಟು ದೊರೆತು, ಭೂತಕೋಟಿಯು ಸಮೃದ್ಧವಾದ ಜೀವನವನ್ನು ಮಾಡಲು ಅನುಕೂಲವಾಗುತ್ತದೆ. ಜಗತ್ತಿನ ಸಮೃದ್ಧಿಯ ಕ್ಷಣ ಅದೇ ತಾನೇ!. ಜಗತ್ತಿನ ಸಮೃದ್ಧಿಯ ಇರುವಿಕೆ ಅಂದರೆ ಇದು. ಆಗ ಜಗತ್ತು ಗೆದ್ದಂತೆ ಎಂಬುದಾಗಿ ನಾವು ಭಾವಿಸಬಹುದು.

ಸೂಚನೆ : 7/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವಿವೇಕಿಯ ಲಕ್ಷಣವೇನು? (Vivekiya Laksanavenu?)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ನೀನು ಕಾಡಿಗೆ ಹೋಗು - ಎಂಬ ಮಾತನ್ನು ರಾಮನಿಗೆ ಹೇಳಿದ್ದು ಕೈಕೇಯಿ, ದಶರಥನಲ್ಲ! ರಾಮಾಯಣದ ಒಂದು  ದೊಡ್ಡ ದಯನೀಯ ಪರಿಸ್ಥಿತಿಯಿದು. ರಾಮನೋ ಆಗ  ಯುವರಾಜನಾಗಲು ಅನುವಾಗುತ್ತಿದ್ದ.  ಏಕಾಏಕಿ ಬಂದಿತು, ಅರಣ್ಯವಾಸದ ಆದೇಶ!  ಪಟ್ಟೆಪೀತಾಂಬರ ಧರಿಸುವವನಿಗೆ ನಾರುಮಡಿಯ ವಸ್ತ್ರಗಳು. ಹೀಗಿದ್ದಾಗಲೂ ಸ್ವಲ್ಪವೂ ವಿಚಲಿತನಾಗಲಿಲ್ಲ ರಾಮ.

ಆದರೆ ಅಂತಃಪುರದಲ್ಲೇ ಹಾಹಾಕಾರವೆದ್ದಿತು!  ಹೆತ್ತ ತಾಯಿಗಿತ್ತ ಗೌರವವನ್ನೇ ಬೇರೆಲ್ಲರಿಗೂ ಕೊಡುತ್ತಿದ್ದವನಿಗೆ ಹೀಗಾಯಿತಲ್ಲ ! - ಎಂದು  ರಾಜಸ್ತ್ರೀಯರು ಮರುಗಿದರು; ದಶರಥನನ್ನೇ ಹಳಿದರು. ಮೊದಲು ಕೌಸಲ್ಯೆಯನ್ನು ಕಂಡು ವಿಷಯ ತಿಳಿಸಲು ಹೋದ, ರಾಮ. ಅವಳೋ ಅವನ  ಶ್ರೇಯಸ್ಸಿಗಾಗಿ ಹೋಮ-ಪೂಜೆಗಳಲ್ಲಿ ತೊಡಗಿದ್ದಳು.  ಅಭಿಷೇಕವು ನಿಂತಿದೆಯಷ್ಟೇ ಅಲ್ಲ; ದಂಡಕಾರಣ್ಯಕ್ಕೆ ತಾನು ಹೋಗಬೇಕಾಗಿ ಬಂದಿದೆ - ಎಂಬುದಾಗಿ  ಆಜ್ಞೆಯಾಗಿದೆ - ಎಂಬುದನ್ನು ಆಕೆಗೆ ತಿಳಿಸಿದ ರಾಮ. ಅದನ್ನು ಕೇಳಿ ತತ್ತರಿಸಿಹೋದಳು, ಕುಸಿದುಬಿದ್ದಳವಳು. ತನ್ನ ಭಾಗ್ಯವನ್ನು ಹಳಿದುಕೊಂಡು ರೋದಿಸಿದಳು. ದಶರಥನಿಂದ ತಾನನುಭವಿಸಿದ ಅಸಡ್ಡೆಯನ್ನು ನೆನೆದು ಅತ್ತಳು. ತಾನು ಕೈಕೇಯಿಯ ದಾಸಿಯೆಂಬಂತಾಗುತ್ತದೆ - ಎಂದು ಬೇಸರಿಸಿದಳು. ಮಗನ ಮುಖವನ್ನು ನೋಡಿಕೊಂಡಿದ್ದು, ಕೈಕೇಯಿಯ ಸಿಡುಕನ್ನೂ ಸವತಿಯರ ನಿಂದೆಯನ್ನೂ ಸಹಿಸಿಕೊಳ್ಳಬಹುದಾಗಿತ್ತೇನೋ. ಆದರಿದೋ ಈಗ ಅವನೂ ವನವಾಸಕ್ಕೆ ತೆರಳಲಿದ್ದಾನೆ! ತಾನೇಕೆ ಸತ್ತುಹೋಗುವುದಿಲ್ಲವೆಂದು ಗೋಳಿಟ್ಟಳು!

ಅದನ್ನು ಕಂಡ ಲಕ್ಷ್ಮಣನು ತಂದೆಯ ತೀರ್ಮಾನವನ್ನು ಧಿಕ್ಕರಿಸಿದ. ರಾಜ್ಯಾಧಿಕಾರವನ್ನು ಬಲದಿಂದ ನಿನ್ನ ಕೈಗೆ ತೆಗೆದುಕೊಂಡುಬಿಡು - ಎಂದು ಆಕ್ರೋಶದಿಂದ ಹೇಳಿದ, ರಾಮನಿಗೆ! ವಿರೋಧಿಸುವವರನ್ನು ಅಗತ್ಯ ಬಂದಲ್ಲಿ  ತಾನು ಕೊಲ್ಲುವುದಾಗಿಯೂ ಹೇಳಿದ. ಅಣ್ಣನ ಸಾಮರ್ಥ್ಯ-ಗುಣ-ಯೋಗ್ಯತೆಗಳಲ್ಲಿ ಅಂತಹ ನಂಬಿಕೆ ಅವನಿಗೆ! ಕೌಸಲ್ಯೆಯೂ ರಾಮನಿಗೆ ಕಾಡಿಗೆ ಹೋಗದಂತೆ ಕೇಳಿಕೊಂಡಳು. ತನ್ನನ್ನಗಲಿದರೆ ತನಗೆ ಪ್ರಾಣಹೋಗುವುದೆಂದೂ ಹೇಳಿದಳು.

ಪರಿಸ್ಥಿತಿ ಹೀಗೆಲ್ಲ ಇದ್ದರೂ, ರಾಮನ ನಿಲುವೇ ಬೇರೆಯಾಗಿತ್ತು. ಎಷ್ಟಾದರೂ  ಧರ್ಮವನ್ನರಿತವನು ಮತ್ತು ಅನುಪಮವಾದ ಸ್ಪಷ್ಟತೆ ಇದ್ದವನು, ರಾಮ. ತಾನು ಮಾಡಹೊರಟಿರುವ ಪಿತೃವಾಕ್ಯಪರಿಪಾಲನವು ನಿಶ್ಚಯವಾಗಿಯೂ ಧರ್ಮಸಂಮತವಾದದ್ದೇ - ಎಂಬುದನ್ನು ತಾಯಿಗೂ ಲಕ್ಷ್ಮಣನಿಗೂ ತಿಳಿಯಹೇಳಿದ. ಜನರೆಷ್ಟೇ ಬೆಂಕಿಯ ಕೊಳ್ಳಿಗಳಿಂದ ದೂರಸರಿಸಲು ಯತ್ನಿಸಿದರೂ ಅದು ತನ್ನ ಹಾದಿಯನ್ನು ಬಿಡುವುದಿಲ್ಲ! ಅದೇ ರೀತಿಯಲ್ಲಿಯೇ, ರಾಮನೂ ತನ್ನ ನಿರ್ಣಯವನ್ನು ಬದಲಿಸಲಿಲ್ಲ - ಎಂದು ವಾಲ್ಮೀಕಿಗಳು ವರ್ಣಿಸುತ್ತಾರೆ!

ಮನೋವೈಜ್ಞಾನಿಕವಾಗಿ ಇಲ್ಲಿಯ ಸನ್ನಿವೇಶವನ್ನು ವಿಶ್ಲೇಷಿಸೋಣ. ಮೊದಲಿಗೆ ಅಂತಃಪುರದ ರಾಜಸ್ತ್ರೀಯರ ತೀವ್ರ ದುಃಖ. ಅವರಿಗೆ ರಾಮನ ವಿಷಯವಾಗಿ ಇದ್ದ ಪ್ರೀತಿಯೇ ಅದರ ಕಾರಣ.

ಇನ್ನು ಕೌಸಲ್ಯೆ. ಆಕೆಯ ದುಃಖವಂತೂ ಸಹಜವೇ.  ತನ್ನ ಮಗ ಯುವರಾಜನಾಗುವ ಸಂತೋಷ ಅವಳಿಗೆ ಈವರೆಗಿತ್ತು; ಜೊತೆಗೆ ತನಗೂ ಅದರಿಂದಾಗಿ ಹೆಚ್ಚು ಗೌರವದ ನಿರೀಕ್ಷೆಯೂ ಇತ್ತು; ಹಾಗೆಂದು ಅವಳೇ ಹೇಳಿಕೊಂಡಿದ್ದಾಳೆ. ಈಗಾದ ಆಘಾತದಿಂದಾಗಿ ಅವಳೊಳಗಿದ್ದ ನೋವುಗಳು ಹೊರಬಂದವು: ಪಟ್ಟಮಹಿಷಿಯೇ ಆಗಿದ್ದಿರಬಹುದು, ಕೌಸಲ್ಯೆ. ಆದರೆ ಸವತಿಯರಿಂದಾಗಿ, ಮುಖ್ಯವಾಗಿ ಕೈಕೇಯಿಯಿಂದಾಗಿ, ಗಂಡನ ಸ್ನೇಹಾದರಗಳನ್ನು ಕಳೆದುಕೊಂಡಿದ್ದ ಅವಳಿಗೆ, ರಾಮನ ಕಾರಣದಿಂದಾಗಿ ಅವು ಸಿಕ್ಕಂತಾಗಿತ್ತು. ಈಗಂತೂ ಕೈಗೆ ಬಂದದ್ದು ಬಾಯಿಗೆ ಬರದೇ ಹೋದಂತಾಯಿತು. ರಾಮನು ದೂರವಾಗುವನೆಂಬ ಮುಖ್ಯವಾದ ದುಃಖವಿದ್ದರೂ, ಈ ನೋವುಗಳೂ ಜೊತೆಗೇ ಆಕೆಗೆ ಇದ್ದವು.

ಲಕ್ಷ್ಮಣನಿಗೆ ದುಃಖವಲ್ಲ, ರೋಷವೇ ಉಕ್ಕಿತ್ತು. ಮೊದಲೇ ಕ್ಷತ್ತ್ರಿಯ, ಜೊತೆಗೆ ಎಳೆಯ ರಕ್ತ; ತಂದೆಯ ಬಗ್ಗೆಯೇ ಅವನಿಗೆ ಕೋಪ. ಕೈಕೇಯಿಯ ಬಗ್ಗೆಯಂತೂ ಉರಿಗೋಪ; ಭರತನ ಬಗ್ಗೆಯೂ ಸಂದೇಹವೇ! ಕೋಪದ ಮಾತುಗಳನ್ನು ಸ್ವಲ್ಪ ದುಡುಕಿನಿಂದಲೇ ಆಡಿದ ಲಕ್ಷ್ಮಣ.

ಇವಕ್ಕೆಲ್ಲ  ವಿರುದ್ಧವಾದದ್ದು  ರಾಮನ ಪ್ರತಿಕ್ರಿಯೆ: ಯುವರಾಜನಾಗದಿರುವುದರ ಬಗ್ಗೆ ಅವನಿಗೆ ದುಃಖವಾಗುವುದಿರಲಿ, ಮನಸ್ಸು ಕೂಡ ಒಂದಿಷ್ಟೂ ಕಲಕಲಿಲ್ಲ! ತಂದೆ ಕೊಟ್ಟ ಮಾತನ್ನು ಉಳಿಸುವುದೇ ತನ್ನ ಧರ್ಮ - ಎಂಬ ನಿಶ್ಚಿತಮತಿ ಅವನಿಗಿತ್ತು. ತಾಯಿ, ಲಕ್ಷ್ಮಣ, ಸೀತೆ ಮುಂತಾದವರಿಗೆಲ್ಲ ಬಹಳವೇ ದುಃಖವಾಗುವುದು - ಎಂದು ತಿಳಿದೂ, ತನ್ನ ನಿಶ್ಚಯದಿಂದ ಕದಲಲಿಲ್ಲ, ರಾಮ. ರಾಮನಿಗೆ ಈ ಸ್ಪಷ್ಟತೆ ಇದ್ದದ್ದರಿಂದಲೇ ಕೌಸಲ್ಯೆಗೂ ತನ್ನ ದುಃಖವನ್ನು ಮೀರಲು ಸಾಧ್ಯವಾಯಿತು; ಲಕ್ಷ್ಮಣನು ದುಡುಕು-ಕ್ರೋಧಗಳಿಂದ ತಪ್ಪು ಹೆಜ್ಜೆ ಇಡುವುದು ತಪ್ಪಿತು.

ಶ್ರೀರಂಗಮಹಾಗುರುಗಳು ನಚಿಕೇತನ ಬಗ್ಗೆ ಹೇಳಿದ ಮಾತು ಇಲ್ಲಿ ರಾಮನಿಗೆ ಚೆನ್ನಾಗಿ ಅನ್ವಯವಾಗುತ್ತದೆ. "ಎಷ್ಟೇ ಉದ್ವೇಗ, ಆಕ್ರೋಶಗಳಿಂದ ಅವನತ್ತ ಹರಿಹಾಯ್ದರೂ ಶಾಂತಚಿತ್ತದಿಂದಲೇ ಅದನ್ನು ಸ್ವೀಕರಿಸಿ, ವಿಚಾರದೃಷ್ಟಿಯಿಂದಲೇ ಸತ್ಯದತ್ತ ಎದುರಾಳಿಯ ಮನ ಸೆಳೆದು, ಕೊನೆಗೆ ಅವನಲ್ಲಿಯೂ ವಿವೇಕವನ್ನು ಮೂಡಿಸುತ್ತಿದ್ದ ಅವನ ವಿಚಾರನೈಪುಣ್ಯ ಅಸಾಧಾರಣವಾದುದು!" 

ಇಂತಹ ಸಮಚಿತ್ತತೆ ಸರ್ವರಿಗೂ ಅನುಕರಣಯೋಗ್ಯವಲ್ಲವೇ?

ಸೂಚನೆ: 4/12//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 85 ಕನಸಿನಲಿ ಕಂಡೆ ತುಲಸೀ-ಭೂಷಿತನ ಆಲಿಂಗನವನ್ನು! (Krishakarnamrta 85)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಕೃಷ್ಣನನ್ನು ಸ್ವಪ್ನದಲ್ಲಿ ಕಂಡಿದ್ದಾನೆ, ಲೀಲಾಶುಕ. ಕೃಷ್ಣನ ಆಭರಣವೇನು, ಅಲಂಕಾರವೇನು, ವಸ್ತ್ರವೇನು, ಶರೀರವೇನು! - ಕಂಡಿದುದೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾನೆ.

ಕೃಷ್ಣನಿಗೆ ಭೂಷಣವಾಗಿರುವುದು ತುಲಸೀ, ಎಂದರೆ ತುಳಸೀ-ಮಾಲೆ. ಅದೂ ಎಂತಹುದು? ತರುಣ-ತುಲಸೀ. ಎಂದರೆ ಹೊಸದಾಗಿ ತಂದು ಕಟ್ಟಲಾಗಿರುವಂತಹುದು. ಹಾಗಿರುವ ತುಲಸೀಹಾರ. ಅಲ್ಲಿಯ ತುಲಸೀ-ದಳಗಳಲ್ಲಿ ತೋರುವ ಮಾರ್ದವ-ಹೊಳಪುಗಳು ಅದರಲ್ಲಿ ತುಂಬಿರುವ ಚೈತನ್ಯವನ್ನು ಸೂಚಿಸುತ್ತದೆ.

ಅಲ್ಲದೆ, ತನ್ನ ಅಲಂಕಾರವಾಗಿ ಆತನು ನವಿಲುಗರಿಯನ್ನು ಧರಿಸಿದ್ದಾನೆ. ಹೀಗೆ ನವಿಲಿನ ಪಿಂಛವು ಆತನಿಗೆ ಚೂಡವಾಗಿದೆ. ಚೂಡ ಅಥವಾ ಅವಚೂಡವೆಂದರೆ ತಲೆಯ ಮೇಲಿನ ಆಭರಣ. ಅದು ಸಹ ಘನ-ಶ್ಯಾಮವೇ.

ಘನವೆಂದರೆ ಮೋಡವಾದ್ದರಿಂದ, ಅದರ ಹಾಗಿನ ಶ್ಯಾಮ-ವರ್ಣವೇ ಆ ಆಭರಣಕ್ಕೂ. ಮತ್ತು ಅದನ್ನು ಸಿಕ್ಕಿಸಿರುವುದು ತನ್ನ ವೇಣೀ-ಮೂಲದಲ್ಲಿ, ಎಂದರೆ ಜಡೆಯ ಆರಂಭದೆಡೆಯಲ್ಲಿ. ಜುಟ್ಟಿನ ತುದಿಯಲ್ಲಿ ಸುಮ್ಮನೆ ಸಿಕ್ಕಿಸಿದರೆ ನಿಂತುಬಿಡುವುದೇ ನವಿಲುಗರಿ? ಕುಣಿದರೂ ಉದುರಬಾರದೆಂದರೆ ಕೇಶಾರಂಭದೆಡೆಗೇ ಭದ್ರವಾಗಿ ಸೇರಿಸಿ ಕಟ್ಟಿರಬೇಕು, ಅಲ್ಲವೇ? ಆದುದರಿಂದ ವೇಣಿಯ, ಎಂದರೆ ಜಡೆಯ, ಮೂಲ-ಸ್ಥಾನಕ್ಕೇ ಅದನ್ನು ಸಿಕ್ಕಿಸಿರುವುದು.

ಆಭರಣವಾಯಿತು, ಅಲಂಕಾರವಾಯಿತು. ಇನ್ನು ಆತನ ವಸನವು ಹೇಗಿದೆ? ವಸನವೆಂದರೆ ವಸ್ತ್ರ. ಆತನು ಧರಿಸಿರುವುದು ಸ್ನಿಗ್ಧ-ಪೀತಾಂಬರವನ್ನು. ಸ್ನಿಗ್ಧವೆಂದರೆ ಹೊಳಪಿನಿಂದ ಕೂಡಿರುವುದು. ಆತನ ಮೈಮೇಲೆ ಅದು ಹೇಗೆ ತೋರುತ್ತದೆ? ನೀಲ-ಮೇಘವನ್ನು ಬಳಸಿದ ವಿದ್ಯುಲ್ಲೇಖೆಯ ಹಾಗೆ.

ವಿದ್ಯುತ್ ಎಂಬ ಪದವನ್ನು ಎಲೆಕ್ಟ್ರಿಸಿಟಿ ಎಂಬರ್ಥದಲ್ಲಿ ತಾನೆ ಬಳಸುತ್ತೇವೆ? ಆದರೂ, ವಿದ್ಯುತ್ ಎಂಬುದು ಮೂಲತಃ ಸಂಸ್ಕೃತ-ಪದ. ಮಿಂಚು ಎಂದೇ ಅದರ ಅರ್ಥ. ತಟಿತ್, ಸೌದಾಮನೀ, ವಿದ್ಯುತ್ - ಇವೆಲ್ಲ ಪರ್ಯಾಯ-ವಾಚಿಗಳೇ. ವಿದ್ಯುಲ್ಲೇಖೆಯೆಂದರೆ ಮಿಂಚಿನ ರೇಖೆ. ಲೇಖಾ-ರೇಖಾ-ಪದಗಳಿಗೆ ಒಂದೇ ಅರ್ಥ. "ರ-ಲಯೋರ್ ಅಭೇದಃ".

ಕಪ್ಪುಮೋಡದ ಹಿನ್ನೆಲೆಯಲ್ಲಿ ತೋರುವ ಮಿಂಚು ಹಳದಿಬಣ್ಣವುಳ್ಳದ್ದೆಂಬಂತೆ ತೋರುತ್ತದೆ. ಕರಿಯ ಕೃಷ್ಣನ ಮೈಮೇಲಿನ ಹಳದಿ ಹೊದಿಕೆಗೆ, ಇದಕ್ಕಿಂತಲೂ, ಎಂದರೆ ಮೋಡದ ಮೇಲಿನ ಮಿಂಚಿನ ಬಳ್ಳಿಗಿಂತಲೂ, ಉತ್ತಮವಾದ ಹೋಲಿಕೆಯಿರಲಾರದು.

ಇನ್ನು ಕೃಷ್ಣನ ಮೈಕಟ್ಟೇ ಹೇಗಿದೆಯೆಂದೆಂಬುದನ್ನು ಹೇಳಬೇಕಲ್ಲವೇ? ಅದಕ್ಕೊಂದು ಸೂಚಕವಾಗಿ ಆತನ ತೋಳನ್ನೇ ಚಿತ್ರಿಸಿದ್ದಾನೆ, ಕವಿ. ಮರಕತ-ಮಣಿ ಎಂದರೆ ಪಚ್ಚೆಮಣಿ. ಪಚ್ಚೆಮಣಿಯ ಸ್ತಂಭದಂತೆ ಗಂಭೀರವಾಗಿದೆ, ಎಂದರೆ ಭವ್ಯವಾಗಿದೆ, ಆತನ ತೋಳು. ಆತನ ತೋಳು ಹಾಗಿದೆಯೆಂದರೆ ಆತನ ಇಡೀ ಶರೀರವನ್ನೇ ಉಪಲಕ್ಷಿಸಿದಂತೆ. ಸ್ತಂಭ-ಗಂಭೀರವೆಂಬ ಪದವೇ, ಆ ತೋಳುಗಳಲ್ಲಿ ಕಾಣುವ ಪೌರುಷ, ಮಾಂಸಲತ್ವ, ಹೊಳಪು – ಇವೆಲ್ಲವನ್ನೂ ಸೂಚಿಸುವುದೇ ಸರಿ!

ಈ ಶ್ಲೋಕದಲ್ಲಿ ಲೀಲಾಶುಕನು ತೋಳನ್ನೇ ಏಕೆ ಚಿತ್ರಿಸಿದ? ಕೃಷ್ಣನ ಕ್ರಿಯೆಯನ್ನು ವರ್ಣಿಸಬೇಕಾಗಿತ್ತಲ್ಲವೇ? ಅದಕ್ಕಾಗಿ ತೋಳಿನ ಬಣ್ಣನೆ. ಏನು ಕೆಲಸ ತೋಳಿಗೆ? ಪ್ರೀತಿಯಿಂದ ಮಾಡಿಕೊಳ್ಳುವ ಆಲಿಂಗನವೇ ಕೆಲಸ. ಯಾರನ್ನು ಆಲಿಂಗಿಸಿಕೊಂಡಂತೆ ಬಿದ್ದಿದೆ, ಈತನಿಗೆ ಕನಸು?

ಇಲ್ಲಿಯೇ ಇರುವುದು ಕವಿಯ ಜಾಣ್ಮೆ. "ಮಾಂ" ಎನ್ನುತ್ತಾನೆ, ಕವಿ.

ಮತ್ತೇನು, ಮತ್ತಾರನ್ನು? ಲಕ್ಷ್ಮಿಯನ್ನೇ. 'ಮಾ' ಎಂದರೆ ಇಂದಿರೆಯೇ. "ಇಂದಿರಾ ಲೋಕಮಾತಾ ಮಾ" ಎನ್ನುತ್ತದೆ, ಅಮರಕೋಶ, ಲಕ್ಷ್ಮೀ-ಪರ್ಯಾಯಗಳಲ್ಲಿ.

ವಿಷ್ಣುವು ಮಾ-ಧವನೆಂದರೆ ಲಕ್ಷ್ಮೀ-ಪತಿ. ಹೀಗೆ ಲಕ್ಷ್ಮೀಪತಿಯು ಲಕ್ಷ್ಮಿಯನ್ನು ಆಲಿಂಗಿಸಿಕೊಂಡಿರುವುದನ್ನು ಕಂಡಿದ್ದಾನೆ, ಕವಿ. ಭಗವಂತ-ಭಗವತಿಯವರು ಒಟ್ಟಿಗೇ ಕುಳಿತಿರುವುದನ್ನು ಚಿತ್ರಿಸಿದ್ದಾನೆ.

ಜಗನ್ಮಾತಾ-ಪಿತೃಗಳು ಪತಿ-ಪತ್ನಿಯರ ಪ್ರೇಮಕ್ಕೂ ಆದರ್ಶ-ಭೂತರು. ಆದುದರಿಂದ ಅವರು ಪರಸ್ಪರಾಲಿಂಗನದಲ್ಲಿರುವರೆಂಬ ವರ್ಣನೆಯನ್ನುಕವಿಗಳು ಕಾವ್ಯದಲ್ಲಿ ತಂದಿರುವರು. ತದನುಗುಣವಾಗಿ ಶಿಲ್ಪಿಗಳು ಅದನ್ನೇ ಶಿಲ್ಪದಲ್ಲೂ ತಂದಿರುವರು. ಕವಿ-ಕಲಾವಿದರು ಏಕತತ್ತ್ವವನ್ನು ಏಕರೂಪವಾಗಿಯೇ ತಂದರೆ ಅಚ್ಚರಿಯೇನಿಲ್ಲ.

ಇಂತಹ ಶಿಲ್ಪಗಳ ಆಶಯವನ್ನು ವಿವರಿಸುವ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳು ಹೀಗೆ ಸ್ಪಷ್ಟಪಡಿಸಿದ್ದಾರೆ. ತನ್ನ ಮನದನ್ನೆಯು ತನ್ನ ದಿವ್ಯಭಾವದಿಂದ ಜಾರದಿರಲೆಂಬ ಆಶಯವೇ ಆ ಆಲಿಂಗನದಲ್ಲಿದೆ. ಅಂತಹ ದಿವ್ಯಭಾವವನ್ನು ಅಶ್ಲೀಲವೆಂದು ಕಾಣುವುದು ಮೂರ್ಖತನವೇ ಸರಿ. ಎಂದೇ ತನ್ನ ಅರ್ಧವೇ ಆದವಳನ್ನು ಹಾರ್ದವಾಗಿ ಆಲಿಂಗಿಸಿಕೊಂಡಿರುವುದನ್ನು ನೋಡಿದೊಡನೆ ತೋರುವುದೆಂದರೆ ಆತನ ತೋಳೇ. ಎಂದೇ ಅದನ್ನೇ ಕವಿಯು ಚಿತ್ರಿಸಿರುವುದು ಸಹಜವೇ ಆಗಿದೆ.

ಇದಲ್ಲದೆ, "ಮಾಂ" ಎನ್ನುವುದಕ್ಕೆ ಬೇರೊಂದು ಅರ್ಥವೂ ಇದೆ. ಆ ಅರ್ಥವೂ ಯುಕ್ತವೇ. ವ್ಯಾಕರಣ-ದೃಷ್ಟ್ಯಾ "ಅಸ್ಮದ್" ಶಬ್ದದ ದ್ವಿತೀಯಾವಿಭಕ್ತಿಯ ಏಕವಚನದ ರೂಪವೇ "ಮಾಮ್" ಎಂಬುದು. ಅದರ ಅರ್ಥ, "ನನ್ನನ್ನು" ಎಂದು. ಹೀಗೆ ಕೃಷ್ಣನು ತನ್ನನ್ನೇ ಆಲಿಂಗಿಸಿಕೊಂಡಿರುವ ಕನಸನ್ನೇ ಕಂಡಿದ್ದಾನೆ, ಲೀಲಾಶುಕ.

ಇಂತಹ ಅದ್ಭುತವಾದ ಕನಸನ್ನು ಕಂಡಿರುವ ಲೀಲಾಶುಕನೇ ಧನ್ಯ. ಏಕೆಂದರೆ ಇಂತಹ ಕನಸುಗಳು ಎಲ್ಲರಿಗೂ ಬಂದುಬಿಡುವುದಿಲ್ಲ. ಕನಸಿನಲ್ಲಿ ಭಗವಂತ-ಭಗವತಿಯರನ್ನು ಕಾಣುವುದಾಗಲಿ, ಭಗವಂತನು ತನ್ನನ್ನು ಆಲಿಂಗಿಸಿಕೊಂಡಿರುವಂತೆ ಕಾಣುವುದಾಗಲಿ ದುರ್ಲಭವೇ ಸರಿ.

ಯಾರ ಮನಸ್ಸು ಆಧ್ಯಾತ್ಮಿಕವಾಗಿ ಮುಂದುವರೆದಿರುವುದೋ, ಯಾರ ಪ್ರಾಣದಲ್ಲಿ ದಿವ್ಯಸಂಚಾರವು ತಲೆದೋರಿರುವುದೋ, ಅಂತಹವರಿಗೇ ಇಂತಹ ಕನಸುಗಳು ಸಂಭವಿಸುವುದು. ಹೀಗೆ ಇಂತಹ ಸ್ವಪ್ನಗಳು ಆಧ್ಯಾತ್ಮಿಕ-ಪ್ರಗತಿಯ ಸೂಚಕವಾದವುಗಳೂ ಹೌದು.

ಸಂತರು ಹೇಳುವರಲ್ಲವೇ? "ಜಾಗತ ರಾಮ ಸೋವತ ರಾಮ, ಸಪನೇಮೇ ದೇಖೋ ಹಿ ರಾಮ ಹೀ ರಾಮ! " ಎಂದು? ಅಂತಹ ಭಾವಕ್ಕೆ ಇಲ್ಲಿಯ ಮಾತುಗಳು ಸಂವಾದಿಯಾಗಿವೆ.

ಹೀಗೆ, ಮಾಂ – ಎಂಬುದರ ಬದಲು, ರಮಾಂ – ಎಂದೋ, ಇಂದಿರಾಂ ಎಂದೋ, ಪದವನ್ನು ಬಳಸಿದ್ದಲ್ಲಿ ಛಂದಸ್ಸೂ ಒಪ್ಪುತ್ತಿರಲಿಲ್ಲ, ಈ ಸೊಬಗೂ ಬರುತ್ತಿರಲಿಲ್ಲ, ಈ ಶ್ಲೇಷವೇ ಹೊಮ್ಮುತ್ತಿರಲಿಲ್ಲ.  

ಮಾಂ ಎಂಬ ಪದವನ್ನೇ ಬಳಸಿ, ಅತ್ತ ಲಕ್ಷ್ಮಿಯನ್ನೂ ಇತ್ತ ತನ್ನನ್ನೂ ಸೂಚಿಸುವಂತಾಗಿಸಿರುವುದು ಕವಿಯ ಅಧ್ಯಾತ್ಮ-ಭಾವ-ದರ್ಶಿಯಾದ ಚಮತ್ಕಾರವಾಗಿ ಅತ್ಯಂತ ಶೋಭಾಕರವಾಗಿದೆ.

ಹೀಗೆ ಭಗವಂತನ ಆಶ್ಲೇಷದ ಸಂದರ್ಭದಲ್ಲಿ, ಎಂದರೆ ಆಲಿಂಗನದ ಸಂದರ್ಭದಲ್ಲಿ, ಕವಿಯು ಶ್ಲೇಷವನ್ನು ಪ್ರಯೋಗಿಸಿರುವುದು ಅದ್ಭುತವಾಗಿದೆ.

ಅನೇಕ ಕವಿಗಳು ಒಳ್ಳೆಯ ಶ್ಲೇಷ ತರಿಸಲು ಬಹಳ ಕ್ಲೇಶಪಡುವುದುಂಟು. ಆದರೆ ಇಲ್ಲಿ ಬಂದಿರುವ ಅನಾಯಾಸವಾದ ಶ್ಲೇಷಾಲಂಕಾರವು ಲೀಲಾಶುಕನ ಕವಿತೆಗೇ ಒಂದು ಅಲಂಕಾರವಾಗಿದೆ. ಎಷ್ಟಾದರೂ ಶ್ಲೇಷಕ್ಕೆ ಮೆರುಗು ಬರುವುದು ಅದರ ಸಹಜತೆಯಿಂದ, ಅನಾಯಾಸತೆಯಿಂದ.

ಜೊತೆಗೇ, ಸಹಜವೂ ಸರಲವೂ ಆದ ಅನುಪ್ರಾಸವನ್ನು ಬರಿಸಿರುವುದೂ ಕವಿಯ ಹೆಗ್ಗಳಿಕೆಯೇ. ಹೀಗೆ ಶ್ಲೇಷವನ್ನು ಶ್ರಮವಿಲ್ಲದೆಯೇ, ಮತ್ತು ಸಂದರ್ಭಕ್ಕೆ ಬಲು ಚೆನ್ನಾಗಿ ಹೊಂದಿಕೊಳ್ಳುವಂತಹ ಬಗೆಯಲ್ಲಿಯೇ, ಪ್ರಯೋಗ ಮಾಡಿರುವ ಕವಿಗೆ ಸಹೃದಯರೆಲ್ಲರೂ ವಂದಿಸಬೇಕಾದದ್ದು ಸಹಜವೇ ಆಗಿದೆ. ಇಂತಹ ಅನೇಕ ಶ್ಲೋಕರತ್ನಗಳನ್ನು ರಚಿಸಿಕೊಟ್ಟಿರುವ ಲೀಲಾಶುಕನಿಗೆ ನಮ್ಮ ವಂದನೆಗಳು.

ವೇಣೀ-ಮೂಲೇ ವಿರಚಿತ-ಘನ-ಶ್ಯಾಮ-ಪಿಂಛಾವಚೂಡೋ /

ವಿದ್ಯುಲ್ಲೇಖಾ-ವಲಯಿತ ಇವ ಸ್ನಿಗ್ಧ-ಪೀತಾಂಬರೇಣ |

ಮಾಂ ಆಲಿಂಗನ್ ಮರಕತ-ಮಣಿ-ಸ್ತಂಭ-ಗಂಭೀರ-ಬಾಹುಃ /

ಸ್ವಪ್ನೇ ದೃಷ್ಟಃ ತರುಣ-ತುಲಸೀ-ಭೂಷಣೋ ನೀಲ-ಮೇಘಃ ||

ಸೂಚನೆ : 6/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.