ಕಟಿಬಂಧ-ಕಂಕಣಬಂಧಗಳ ಮರ್ಮ
"ಇಂದಿನ ಮಕ್ಕಳಿಗೆ ಹತ್ತು ನಿಮಿಷದ ಮೇಲೆ ಮನಸ್ಸು ಒಂದು ಕಡೆ ನಿಲ್ಲುವುದೇ ಇಲ್ಲ" - ಎಂದು ಹಿರಿಯರು ಬೇಜಾರುಮಾಡಿಕೊಳ್ಳುವುದನ್ನು ನೋಡುತ್ತಿರುತ್ತೇವೆ. ಚಿಕ್ಕವರದ್ದೇನು, ದೊಡ್ಡವರ ಮನಸ್ಸೂ ಅಷ್ಟೇ. ಎಷ್ಟೋ ಕೆಲಸಗಳನ್ನು ಉತ್ಸಾಹದಿಂದ ಆರಂಭಮಾಡುತ್ತೇವೆ; ಸ್ವಲ್ಪಕಾಲಕ್ಕೇ ಉತ್ಸಾಹ ಕ್ಷೀಣಿಸುತ್ತದೆ. "ಈ ಕಾರ್ಯವನ್ನು ಸಾಧಿಸಲಾರೆ" ಎಂಬ 'ಆತ್ಮವಿಶ್ವಾಸ'ವು ಹೊಮ್ಮುತ್ತದೆ! ಆರಂಭಮಾಡಿದ್ದನ್ನು ಕೈಬಿಡುವುದು, ಮತ್ತೊಂದನ್ನು ಕೈಗೆ ತೆಗೆದುಕೊಳ್ಳುವುದು, ಅದರಲ್ಲಿಯೂ ಸೋಲನುಭವಿಸುವುದು: ಬಹುಮಂದಿಯ ಕಥೆಯೇ ಇದು!
ಮನಸ್ಸನ್ನು ಚಂಚಲಗೊಳಿಸುವ ಸಾಧನಗಳೋ ಇಂದಂತೂ ಹತ್ತು ಹಲವು! ಮೊಬೈಲ್ ಒಂದೇ ಸಾಕು. ಇಂಟರ್ನೆಟ್ ಇದ್ದುಬಿಟ್ಟರೆ ತುಂಬಾ ಕೆಲಸಗಳು ಸಾಧಿತವಾಗಿಬಿಡುತ್ತವೆ - ಎಂಬುದೆಷ್ಟು ನಿಜವೋ, ಅದರಿಂದಾಗಿ ಹತ್ತಾರು ಕಾರ್ಯಗಳು ಹದಗೆಟ್ಟವು - ಎನ್ನುವುದೂ ಅಷ್ಟೇ ನಿಜ. ನಮ್ಮ ಮನಸ್ಸನ್ನು ಅಂತರ್ಜಾಲವು ಜಾಲಾಡಿ, ಹತ್ತು ನಿಮಿಷದಲ್ಲಿ ನೂರಾರು ವಿಷಯಗಳತ್ತ ಸೆಳೆದುಹಾಕಿಬಿಡಬಲ್ಲುದು!
ಒಂದು ಕೆಲಸವನ್ನು ಹಿಡಿದರೆ ಅದು ಮುಗಿಯುವ ತನಕ ನಮ್ಮ ಮನಸ್ಸು ಒಂದೇ ರೀತಿಯಲ್ಲಿ ಇರಲು ತಕ್ಕಮಟ್ಟಿಗಾದರೂ ಏನನ್ನಾದರೂ ಮಾಡಲಾದೀತೇ? - ಎಂಬುದೇ ಪ್ರಶ್ನೆ.
ಮನಸ್ಸಿನ ಧೃತಿಯ ಬಗ್ಗೆ ನಾನಾವಿಧವಾದ ಪ್ರಯೋಗಗಳನ್ನು ಸಾವಿರಾರುವರ್ಷಗಳಿಂದ ಮಾಡಿರುವವರು ನಮ್ಮ ಪೂರ್ವಿಕರು, ಭಾರತೀಯರು; ವಾಸ್ತವವಾಗಿ ನಮ್ಮ ಋಷಿಮುನಿಗಳು. ಹಾಗಿದ್ದರೆ, ಅವರು ಈ ಬಗ್ಗೆ ಏನಾದರೂ ಚಿಂತನವನ್ನು ಮಾಡಿರುವರೇ? ಕಾರ್ಯಪದ್ಧತಿಗಳನ್ನು ರೂಪಿಸಿರುವರೇ? - ಎಂದು ಕೇಳಿಕೊಳ್ಳಬೇಕಾದುದು ಸಹಜವಷ್ಟೆ?
ಪಾಶ್ಚಾತ್ತ್ಯಸಂಸ್ಕೃತಿಗೆ ನಾವಿಂದು ಮಾರುಹೋಗಿದ್ದೇವೆ; ನಮ್ಮ ಜೀವನಶೈಲಿಯೆಲ್ಲಾ ಅವರ ಪರಿಯ ಪಡಿಯಚ್ಚಾಗಿಹೋಗಿದೆ; ಅವರನ್ನು 'ಕಾಪಿ' ಮಾಡುವುದರಲ್ಲೇ ಸಾರ್ಥಕ್ಯವನ್ನು ಕಾಣುವಂತಾಗಿದೆ ನಮ್ಮ ಪಾಪಿಜೀವನ! ನಮ್ಮ ಭಾಷೆ ಕೂಡ ಕುಲಗೆಡುತ್ತಿದೆ - ಎನ್ನುವಷ್ಟು ಪರಿಸ್ಥಿತಿ ಹದಗೆಟ್ಟಿದೆಯಲ್ಲವೇ?
ಸಂಸ್ಕೃತಿಯೊಂದು ಹಾದುಬಂದ ಮಾರ್ಗದ ಅಚ್ಚುಗಳನ್ನು ಬಹುಮಟ್ಟಿಗೆ ಪಟ್ಟಾಗಿ ಕಾಪಿಟ್ಟುಕೊಂಡಿರುವುದೆಂದರೆ ಅದರ ಮಂದಿಯ ಭಾಷೆಯೇ ಸರಿ. ನಮ್ಮ ಭಾಷೆಯನ್ನೇ ಕೇಳಿಕೊಂಡರೆ ನಮ್ಮ ಋಷಿಗಳು ಕಂಡುಕೊಂಡ ಸತ್ಯಗಳ ಬಗ್ಗೆ ಕೆಲವು ಸುಳಿವುಗಳು ಸಿಕ್ಕಾವು.
ಯಾವುದೇ ಕೆಲಸವನ್ನು ಒಬ್ಬರು ಪಟ್ಟುಹಿಡಿದು ಏಕನಿಷ್ಠೆಯಿಂದ ಮಾಡುತ್ತಿದ್ದರೆ, ಅವರ ಬಗ್ಗೆ ನಾವು "ಅವರು ಆ ಕೆಲಸಕ್ಕೇ ಟೊಂಕಕಟ್ಟಿ ನಿಂತಿರುವವರು" ಎನ್ನುವೆವು. "ಸೊಂಟಕಟ್ಟಿ ನಿಂತಿದ್ದಾರೆ" ಎಂಬ ಮಾತಿನಂತೆಯೇ, "ಪಣತೊಟ್ಟು, ಬದ್ಧಕಂಕಣರಾಗಿ" ಮಾಡುತ್ತಿದ್ದಾರೆ - ಎನ್ನುವ ಮಾತನ್ನೂ ಬಳಸುವುದುಂಟು. ಏನು ಇವೆಲ್ಲ ಪಟ್ಟು-ಕಟ್ಟು-ತೊಟ್ಟುಗಳ ಗುಟ್ಟು?
ಇವುಗಳ ಮರ್ಮವನ್ನು ಬಿಡಿಸಿಕೊಟ್ಟವರು ಯೋಗಜ್ಞರಾದ ಶ್ರೀರಂಗಮಹಾಗುರುಗಳು. ಮನೆಯಲ್ಲಿ ಏನೇ ಹೋಮ-ಹವನಗಳಿರಲಿ, ಯಾವುದೇ ವ್ರತವು ಜರುಗಲಿ, ಮೊಟ್ಟಮೊದಲ ಹೆಜ್ಜೆಯೆಂದರೆ ಇವೇ ಅಲ್ಲವೇ?: ಸೊಂಟಕ್ಕೆ ಪಟ್ಟಿಕಟ್ಟು, ಕೈಗೆ ಕಂಕಣಕಟ್ಟು. ದಸರೆಯ ಆರಂಭವಾದರೂ ಪಾಡ್ಯದಂದು ಮಹಾರಾಜರ ಕಂಕಣಬಂಧದಿಂದಲೇ ಅಲ್ಲವೇ? ವ್ರತ-ಪರ್ಯವಸಾನದ ಪರ್ಯಂತವೂ ಕಂಕಣವನ್ನು ಕಳಚದ ಕಟ್ಟುನಿಟ್ಟು!
ಹಿಡಿದ ಕೆಲಸವನ್ನು ಧೃತಿಗೆಡದೆ ಸಾಧಿಸಲು ಈ ಕ್ರಮಗಳು ತುಂಬ ಉಪಯೋಗಿ: ನಿರ್ದಿಷ್ಟಸ್ಥಾನಗಳಲ್ಲಿ ದೇಹಬಂಧವನ್ನು ಮಾಡಿಕೊಂಡಲ್ಲಿ, ಆವಶ್ಯಕವಾದ ಮನೋಬಂಧವನ್ನು ಮಾಡಿಕೊಳ್ಳಲು ಅನುಕೂಲವೇರ್ಪಡುವುದು – ಎಂಬ ಯೋಗವಿದ್ಯೆಯ ಈ ಮುಖ್ಯಮರ್ಮವನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು. ವಿವಾಹಾದಿ-ಶುಭಕರ್ಮಗಳಾಗಲಿ, ಶ್ರಾದ್ಧಾದಿ-ಪುಣ್ಯಕರ್ಮಗಳಾಗಲಿ, ದರ್ಭನಿರ್ಮಿತವಾದ 'ಪವಿತ್ರ'ವನ್ನು ಬೆರಳಿಗೆ ತೊಟ್ಟೇ ಕಾರ್ಯಾರಂಭವಲ್ಲವೇ? ಅಲ್ಲಿಯೂ ಇದೇ ತತ್ತ್ವವೇ.
ಸೊಂಟಕಟ್ಟಿ ನಿಂತಲ್ಲಿ, ಸುಲಭಕ್ಕೆ ಮನಸ್ಸು ಕೆಳಕ್ಕೆ ಜಾರದು. ನಮ್ಮ ದೇಶದ ವೇಷಭೂಷಣಗಳ ಇತಿಹಾಸವನ್ನು ಎಚ್ಚರವಾಗಿ ನೋಡಿದರಂತೂ, ಸಿಂಧು-ಸರಸ್ವತೀ-ಸಂಸ್ಕೃತಿಯ ಕಾಲದಿಂದ ಇಂದಿನವರೆವಿಗೂ (ಸ್ತ್ರೀ-ಪುರುಷರ ಕಚ್ಚೆಪಂಚೆ-ವೀರಗಚ್ಚೆಗಳಲ್ಲೂ ಸ್ಫುಟವಾಗಿ ಗೋಚರವಾಗುವಂತೆ) ಸೊಂಟಕ್ಕೆ ಕಟ್ಟುಕಟ್ಟುವ ಪದ್ಧತಿ ಅನುಸ್ಯೂತವಾಗಿ ನಡೆದುಬಂದದ್ದೇ. (ಪಾಶ್ಚಾತ್ತ್ಯರಲ್ಲೋ, ಎಂದಿನಿಂದಲೂ ಇಳಿಬಿಡುವ ಅಂಗಿಗಳೇ ಸಾಧಾರಣ; ಅಲ್ಲದೆ, ಬೆಲ್ಟೊಂದನ್ನು ಸುತ್ತಿಕೊಳ್ಳುವುದಷ್ಟರಿಂದ, ಕಟಿಬಂಧದಿಂದಾಗುವ ಪರಿಣಾಮವು ಖಂಡಿತವಾಗಿಯೂ ಆಗದು!)
ಹೀಗಾಗಿ, "ಈ ಪವಿತ್ರಕಾರ್ಯಕ್ಕಾಗಿ ಸೊಂಟಕಟ್ಟಿ ನಿಂತಿದ್ದೇನೆ" ಎನ್ನುವುದು ಯಾವುದೇ ನಿಷ್ಠಾವಂತ ಸಾಧಕನ ಒಂದು ಸಲ್ಲಕ್ಷಣ. ಅದರ ಸಂಸ್ಕೃತರೂಪವಾದ "ಕಾರ್ಯಾಯ ಬದ್ಧಾ ಕಟೀಯಂ" ಎಂಬೀ ಉಕ್ತಿಯು, ದೇಶಭಕ್ತಿಯನ್ನು ಬೆಳಸಲೆಳಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯಪ್ರಾರ್ಥನೆಯ ಒಂದು ನಲ್ನುಡಿ: "ಭಗವಂತನೇ, ನಿನ್ನದೇ ಕಾರ್ಯಕ್ಕಾಗಿ ಇದೋ ಸೊಂಟಕಟ್ಟಿದ್ದೇವೆ"!
ಸತ್ಕಾರ್ಯಕ್ಕಾಗಿಯೇ ಕಟಿಬದ್ಧರಾದವರಿಗೆ, ಅದನ್ನು ಪೂರೈಸಲೋಸುಗ ಅಜಯ್ಯವಾದ ಶಕ್ತಿಯನ್ನೇ ದಯಪಾಲಿಸುವ ಭಗವಂತನ ಶುಭಾಶೀರ್ವಾದವು ಇದ್ದೇ ಇರುವುದಲ್ಲವೇ?
ಸೂಚನೆ : 22/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.