Showing posts with label author_soumyapradeep. Show all posts
Showing posts with label author_soumyapradeep. Show all posts

Tuesday, December 17, 2024

ದಾಂಪತ್ಯವೆಂಬ ಅವಿಚ್ಛಿನ್ನ ಅನುಬಂಧ (Dampatyavemba Avicchinna Anubandha)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)



ಜಗದಾದಿ ದಂಪತಿಗಳಾದಂತಹ ಲಕ್ಷ್ಮೀನಾರಾಯಣರು ರಾವಣಸಂಹಾರವನ್ನು ನಿಮಿತ್ತವಾಗಿಸಿಕೊಂಡು, ಮನುಕುಲಕ್ಕೆ ಆದರ್ಶ ಜೀವನದ  ಶಿಕ್ಷಣಕ್ಕಾಗಿ ತ್ರೇತಾಯುಗದಲ್ಲಿ ಸೀತಾರಾಮರ ರೂಪದಲ್ಲಿ ಭುವಿಯಲ್ಲಿ ಅವತರಿಸುತ್ತಾರೆ. ರಾಮನು ದಶರಥನ ಪುತ್ರನಾಗಿ ಜನಿಸಿದರೆ, ಸೀತೆಯು ಭೂಮಿಸುತೆಯಾಗಿ ಜನಕನಿಗೆ ಪುತ್ರಿಯಾಗಿ ದೊರಕುತ್ತಾಳೆ. ಜನಕ ಮಹಾರಾಜನು ಸೀತಾ ಸ್ವಯಂವರವನ್ನು ಏರ್ಪಡಿಸಿದಾಗ ಶ್ರೀರಾಮಚಂದ್ರನು ಸೀತೆಯನ್ನು ವರಿಸುತ್ತಾನೆ. ಜನಕ ಮಹಾರಾಜನು, ಪಾಣಿಗ್ರಹಣದ ಸಂದರ್ಭದಲ್ಲಿ ಸೀತೆಯ ಹಸ್ತವನ್ನು ರಾಮನ ಹಸ್ತದ ಮೇಲೆ ಇಟ್ಟು, ನನ್ನ ಮಗಳಾದ ಸೀತೆಯು ಇನ್ನು ಮುಂದೆ ಛಾಯೆಯಂತೆ ಸದಾಕಾಲ ನಿನ್ನ ಜೊತೆಯಲ್ಲಿಯೇ ಇರುತ್ತಾಳೆ, ನಿನ್ನನ್ನೇ ಅನುಸರಿಸುತ್ತಾಳೆ ಎಂಬುದಾಗಿ ಹೇಳುತ್ತಾನೆ. ಅಂತಯೇ ಸೀತೆಯು ಕೂಡ ಸದಾಕಾಲ ಪತಿಯ ಸಾನಿಧ್ಯದಲ್ಲಿಯೇ ಇರಲು ಬಯಸುತ್ತಾಳೆ. ಶ್ರೀರಾಮನು ವನವಾಸಕ್ಕೆ ಹೋಗಬೇಕಾದ ಸಂದರ್ಭದಲ್ಲಿಯೂ ಅರಮನೆಯ ಸೌಖ್ಯವನ್ನು ತೊರೆದು ಅವನನ್ನೇ ಅನುಸರಿಸುತ್ತಾಳೆ. ವಿಧಿವಶಾತ್ ರಾವಣನಿಂದ ಸೀತೆಯು ಅಪಹರಿಸಲ್ಪಟ್ಟು ಲಂಕೆಯಲ್ಲಿ ಇದ್ದಾಗಲೂ,ಶ್ರೀರಾಮಚಂದ್ರ ಸೀತಾಮಾತೆಯರು ಭೌತಿಕವಾಗಿ ದೂರವಾಗಿದ್ದರೂ ಅವರ ಮನಸ್ಸು, ಅವರ ಹೃದಯಗಳು ಒಂದಾಗಿಯೇ ಇರುತ್ತದೆ.  ಲೋಕಾಪವಾದದಿಂದ ಶ್ರೀರಾಮನು ಅಯೋಧ್ಯೆಯ ರಾಜನಾಗಿ ಸೀತೆಯನ್ನು ತ್ಯಜಿಸಬೇಕಾಗಿ ಬಂದಾಗಲೂ ಸೀತಾರಾಮರ ಮನಸ್ಸು ,ಹೃದಯಗಳು ಒಂದಾಗಿಯೇ ಇರುತ್ತವೆ. ಭೌತಿಕವಾದ ಅಗಲುವಿಕೆ ಅನ್ನುವುದು ಅವರಿಬ್ಬರ ಮನಸ್ಸನ್ನು ಬೇರ್ಪಡಿಸುವುದಿಲ್ಲ. ಸೀತೆಯು ತನ್ನ ಅವತಾರವನ್ನು ಮಂಗಳ ಮಾಡುವ ಸಂದರ್ಭದಲ್ಲಿ ನನಗೆ ಜನ್ಮ ಜನ್ಮದಲ್ಲಿಯೂ ಶ್ರೀ ರಾಮನೇ ಪತಿಯಾಗಬೇಕು ಆದರೆ ವಿರಹ ಅನ್ನುವುದು ಇರಬಾರದು ಎಂಬುದಾಗಿಯೇ ಬಯಸಿ ತಾನು ಬಂದ ನೆಲೆಯನ್ನು ಸೇರಿಕೊಳ್ಳುತ್ತಾಳೆ. ಅವರಿಬ್ಬರದು ಸರ್ವಕಾಲಕ್ಕೂ ಆದರ್ಶವಾದ, ಅವಿಚ್ಛಿನ್ನವಾದ (ಬೇರ್ಪಡುವಿಕೆ ಇಲ್ಲದ) ದಾಂಪತ್ಯ.

 ಕಾಲಕಾಲಕ್ಕೆ ಧರ್ಮ ಪ್ರತಿಷ್ಠಾಪನೆಗೆ ಭಗವಂತನು ಭೂಮಿಗೆ ಇಳಿದು ಬಂದಾಗ ಅವನ ಮನದನ್ನೆಯಾದ ಭಗವತಿಯೂ ಕೂಡ ಇಳಿದು ಬಂದು ಅವನ ಕಾರ್ಯಗಳಿಗೆ ಸಹಕಾರವನ್ನು ನೀಡುತ್ತಾಳೆ.

 ವಧೂ - ವರರು ವಿವಾಹವೆಂಬ ಸಂಸ್ಕಾರವನ್ನು ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ದಂಪತಿ ಗಳಾಗುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರ ಮನಸ್ಸುಗಳು, ಹೃದಯಗಳು ಒಂದಾಗಿ ಧರ್ಮ,ಅರ್ಥ, ಕಾಮ ಎಂಬ ಮೂರೂ ಪುರುಷಾರ್ಥಗಳನ್ನು ಒಟ್ಟಿಗೆ ಸಂಪಾದಿಸಿ ಮೋಕ್ಷದವರೆಗೂ ಜೊತೆ ಜೊತೆಯಾಗಿ ಸಾಗಬೇಕು ಎನ್ನುವುದೇ ಭಾರತೀಯ ವಿವಾಹ ಪದ್ಧತಿಯ ಪ್ರಧಾನ ಧ್ಯೇಯವಾಗಿದೆ. ಹಾಗಾದಾಗಲೇ ಅವರು ವಿವಾಹ ಸಂಸ್ಕಾರವನ್ನು ಪಡೆದುದ್ದಕ್ಕೆ ಸಾರ್ಥಕತೆ.

 ವಿವಾಹವನ್ನು ಒಂದು ಸಂಸ್ಕಾರ ಎಂಬುದಾಗಿ ಕರೆದಿದ್ದಾರೆ, ಸಂಸ್ಕಾರ ಎಂದರೆ ಶುದ್ದಿಗೊಳಿಸುವ ಪ್ರಕ್ರಿಯೆ. ನಮ್ಮ ಇಂದ್ರಿಯಗಳು, ಮನಸ್ಸು, ಬುದ್ಧಿ, ಎಲ್ಲವನ್ನೂ ಶುದ್ಧಿಗೊಳಿಸಿ ಅಂತಿಮವಾಗಿ ಆತ್ಮನನ್ನು ಮೂಲ ನೆಲೆಯಾದ ಪರಮಾತ್ಮನೆಡೆಗೆ ಕೊಂಡೊಯ್ಯುವುದೇ ಸಂಸ್ಕಾರದ ಉದ್ದೇಶ. ವಿವಾಹದ ಮಂತ್ರಗಳು ಮತ್ತು ವಿವಾಹದಲ್ಲಿ ನಡೆಯುವ ವಿಧಿ ವಿಧಾನಗಳೆಲ್ಲವೂ ಅದನ್ನೇ ಸಾರುತ್ತಿವೆ.

ವರನು ಜ್ಞಾನ ಸಂಪಾದನೆಗೆ ಕಾಶಿಯಾತ್ರೆಗೆ ಹೊರಟ ಸಂದರ್ಭದಲ್ಲಿ, ವಧುವಿನ ಕಡೆಯವರು ಅವನನ್ನು ತಡೆದು ನೀನೊಬ್ಬನೇ ಜ್ಞಾನಿಯಾದರೆ ಸಾಲದು, ನಮ್ಮಲ್ಲಿ ನಿನಗೆ ಅನುರೂಪವಾದ ಕನ್ಯೆಯೊಬ್ಬಳಿದ್ದಾಳೆ, ಅವಳನ್ನು ವರಿಸಿ ಆ ಮಾರ್ಗದಲ್ಲಿ ಕೊಂಡೊಯ್ದು, ನಿನ್ನಂತಯೇ ಜ್ಞಾನಿಯಾದ ಸಂತತಿಯನ್ನು ಲೋಕಕ್ಕೆ ನೀಡಬೇಕು ಎಂಬುದಾಗಿ ಹೇಳಿ ಅವನೊಂದಿಗೆ ವಿವಾಹವನ್ನು ಮಾಡಿಕೊಡುತ್ತಾರೆ.

 ವಿವಾಹದ ಸಂಕಲ್ಪವೇ ಹಿಂದಿನ ಹತ್ತು ತಲೆಮಾರು, ಮುಂದಿನ ಹತ್ತು ತಲೆಮಾರು, ತಾನು ಎಂಬ ಇಪ್ಪತ್ತೊಂದು ಕುಲದ ಉದ್ಧಾರಕ್ಕಾಗಿಯೂ ಭಗವಂತನ ಸಾಲೋಕ್ಯ,  ಸಾಯುಜ್ಯ ಮೊದಲಾದ ಅಂಶಗಳು ಸಿದ್ಧಿಸುವುದಕ್ಕಾಗಿಯೂ ಈ ವಿವಾಹವನ್ನು ಮಾಡಿಕೊಳ್ಳುತ್ತೇನೆ ಎಂಬುದಾಗಿದೆ.

 ಕನ್ಯಾದಾನ ಮಾಡುವ ಸಂದರ್ಭದಲ್ಲಿ, ವರನನ್ನು ನಾರಾಯಣ ಸ್ವರೂಪನೆಂದು ಭಾವಿಸಿ, ವಧುವನ್ನು ಲಕ್ಷ್ಮೀ ಸ್ವರೂಪಳೆಂದು  ಭಾವಿಸಿ, ಜಗದಾದಿ ದಂಪತಿಗಳ ಸ್ಮರಣೆಯಲ್ಲಿಯೇ ಆ ಕ್ರಿಯೆಯನ್ನು ಮಾಡುವ ಪದ್ಧತಿ ಬಂದಿದೆ. ಪ್ರತಿಯೊಬ್ಬ ಪುರುಷನಲ್ಲಿಯೂ ಪರಮಾತ್ಮನ ಅಂಶ ಹಾಗೂ ಸ್ತ್ರೀಯಲ್ಲಿ ಪರಾಪ್ರಕೃತಿಯ ಅಂಶ ಇರುವುದರಿಂದಲೇ ಈ ರೀತಿಯ ಪದ್ಧತಿಯನ್ನು ಮಹರ್ಷಿಗಳು ರೂಪಿಸಿ ಕೊಟ್ಟಿದ್ದಾರೆ.

 ಅಗ್ನಿಪ್ರದಕ್ಷಿಣೆಯನ್ನು ಮಾಡುವಾಗ ಅಗ್ನಿಯನ್ನು ಪರಮಾತ್ಮ ಸ್ವರೂಪನೆಂದು ಭಾವಿಸಿ ವಧೂ-ವರರಿಬ್ಬರೂ ಪರಮಾತ್ಮನಿಂದ ಹೊರಟ ನಮ್ಮ ಜೀವನ ಪ್ರಕೃತಿಯಲ್ಲಿ ಅವನ ಸ್ಮರಣೆಯೊಂದಿಗೇ ಸಾಗಿ ಮತ್ತೆ ಹೋಗಿ ಅವನಲ್ಲಿಯೇ ಸೇರಿಕೊಳ್ಳಲಿ ಎಂಬ ಭಾವದಿಂದ ಪ್ರದಕ್ಷಿಣೆಯನ್ನು ಮಾಡುತ್ತಾರೆ. ಹೀಗೆಯೇ ದಾಂಪತ್ಯ ಎನ್ನುವುದು ದೀರ್ಘಕಾಲದ, ಜನ್ಮ ಜನ್ಮದಲ್ಲೂ ಮುಂದುವರೆಯುವ ಅವಿಚ್ಛಿನ್ನವಾದ ಅನುಬಂಧ. "ಇದು ಕೇವಲ ಹೆಣ್ಣು-ಗಂಡು ಕೂಡಿಸುವುದಲ್ಲಪ್ಪ ದಿವಿಭುವಿಗಳನ್ನೇ ಕೂಡಿಸುವ ಕೆಲಸವಾಗಿದೆ" ಎಂಬ ಮಾತನ್ನು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಹೀಗೆ ಭುವಿಯಲ್ಲಿ ನಡೆಯುವ ವಿವಾಹ ದಿವಿಯವರೆಗೂ ನಮ್ಮನ್ನು ಕೊಂಡೊಯ್ಯುವುದಕ್ಕೆ ಸಹಕಾರಿಯಾಗುವಂತಹದ್ದು. ಸತಿಪತಿಗಳಿಬ್ಬರೂ ವಿವಾಹದ ಉದ್ದೇಶವನ್ನು ಅರಿತು ತಮ್ಮ ತಮ್ಮ ಜವಾಬ್ದಾರಿಯ ಜೊತೆಗೆ ಸಂಸಾರವನ್ನು ನಡೆಸಿದಾಗ ಆ ಸಂಸ್ಕಾರ ಫಲಪ್ರದವಾಗುತ್ತದೆ.

 ಇಂದು ವಿವಾಹ ಎನ್ನುವುದು ಕೇವಲ ಬಾಹ್ಯವಾದ ಆಡಂಬರದ ಕಾರ್ಯಕ್ರಮವಾಗಿ ಪರಿಣಮಿಸಿದೆ. ಅದರಲ್ಲಿ ಬರುವ ಮಂತ್ರಗಳ ಅಥವಾ ವಿಧಿ ವಿಧಾನದ ಅಂತ:ಸತ್ವವನ್ನು ಅರಿಯುವ ಕಡೆಗೆ ಗಮನವೇ ಇಲ್ಲವಾಗಿದೆ. ಕೇವಲ ಇಂದ್ರಿಯ ಸೌಖ್ಯವೇ ಮುಖ್ಯವಾಗಿದೆ. ಹಾಗಾಗಿ ಅದು ಸತ್ವಹೀನವಾಗಿ ವೈವಾಹಿಕ ಜೀವನದಲ್ಲಿ ವಿಚ್ಛಿತ್ತಿ (ಒಡಕು) ಅನ್ನುವಂತಹದ್ದು ಸಾಮಾನ್ಯವಾಗಿ ಬಿಟ್ಟಿದೆ.

ವಿವಾಹ ಸಂಸ್ಕಾರಕ್ಕೆ ಒಳಪಡುವ ಎಲ್ಲಾ ವಧೂ - ವರರು ವಿವಾಹದ ಮೂಲ ಉದ್ದೇಶ ಏನು? ನಮ್ಮಿಬ್ಬರ ಜವಾಬ್ದಾರಿಯ ವ್ಯಾಪ್ತಿ ಎಲ್ಲಿಯವರೆಗೂ ಇರುತ್ತದೆ? ಎಂಬುದನ್ನು ಅರಿತು, ಅದನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಸಂಸಾರವನ್ನು ನಡೆಸುತ್ತಾ ಬಂದಾಗ ಐಹಿಕ ಸುಖದ ಜೊತೆಗೆ ಪಾರಮಾರ್ಥಿಕ ಸುಖ ಅನ್ನುವಂತಹ ದೊಡ್ಡ ಲಾಭವನ್ನೂ ಪಡೆಯಬಹುದು. ಜಗನ್ಮಾತಾ ಪಿತೃಗಳ ದಾಂಪತ್ಯವನ್ನು ಆದರ್ಶವಾಗಿಟ್ಟುಕೊಂಡು ಭುವಿಯಿಂದ ದಿವಿಗೆ ಕೊಂಡೊಯ್ಯುವಂತಹ ಅವಿಚ್ಛಿನ್ನವಾದ ದಾಂಪತ್ಯವನ್ನು ಎಲ್ಲರೂ ಬಯಸುವಂತಾಗಲಿ.

ಸೂಚನೆ : 14/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, September 28, 2024

ಪುಸ್ತಕ ಪರಿಚಯ ಭಾರತೀಯ ಹಬ್ಬಗಳು

ಲೇಖಕರು : ಶ್ರೀ ಶ್ರೀ  ರಂಗಪ್ರಿಯ ಶ್ರೀ ಶ್ರೀ :  

ಪ್ರತಿಕ್ರಿಯಿಸಿರಿ (lekhana@ayvm.in)




ಭಾರತೀಯ ಹಬ್ಬಗಳು 

 ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವ  ಅತಿಮುಖ್ಯವಾದ ಮತ್ತು ಅತ್ಯಂತ ಪರಿಚಿತವಾದ ವಿಷಯ. ಹಬ್ಬಗಳು ಜೀವನದಲ್ಲಿನ ವಿಶಿಷ್ಟವಾದ ಸಂತೋಷದ ಸಂದರ್ಭಗಳು. ಬಂಧು-ಬಳಗ, ಇಷ್ಟಮಿತ್ರರು  ಒಂದೆಡೆಯಲ್ಲಿ ಸೇರುವುದು, ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಸೇವಿಸುವುದು, ಆಡುವುದು, ಪಾಡುವುದು ಮನಸೋ ಇಚ್ಛೆ ಮಾತನಾಡುವುದು ಇತ್ಯಾದಿ ರೂಪಗಳಲ್ಲಿ ಇಂದ್ರಿಯಗಳ ಆನಂದವನ್ನು ಅನುಭವಿಸುತ್ತಾ ಜೀವನದ ಕಷ್ಟ ಕಾರ್ಪಣ್ಯಗಳನ್ನು ಮರೆಯುವುದು. ಇದು ಸಾಮಾನ್ಯವಾಗಿ ಎಲ್ಲಾ ದೇಶ, ಜನಾಂಗ ಸಂಸ್ಕೃತಿಗಳಿಗೆ ಸೇರಿದ ಜನರು ಹಬ್ಬಗಳನ್ನು ಆಚರಿಸುವ ವಿಧಾನವಾಗಿದೆ.

  ಆದರೆ ನಮ್ಮ ಭಾರತೀಯ ಮಹರ್ಷಿ ದೃಷ್ಟಿಯಲ್ಲಿ ಹಬ್ಬಗಳ ಆಚರಣೆಯ ಉದ್ದೇಶ ಇಷ್ಟು ಮಾತ್ರಕ್ಕೆ ಸೀಮಿತವಾಗಿಲ್ಲ. ನಮ್ಮ ಹಬ್ಬಗಳ ಕಾಲ, ಆಚರಣೆಯ ವಿಧಾನ ಇವುಗಳ ಒಳ ಮರ್ಮವನ್ನೂ ಅವುಗಳ ಹಿಂದೆ ಅಡಗಿರುವ ವಿಜ್ಞಾನವನ್ನೂ ಶ್ರೀರಂಗಮಹಾಗುರುಗಳ ಪದತಲದಲ್ಲಿ ಕುಳಿತು ಅರಿತ  ಪೂಜ್ಯರಾದಂತಹ ಶ್ರೀ ಶ್ರೀರಂಗಪ್ರಿಯ ಶ್ರೀಗಳು ಈ ವಿಚಾರಗಳನ್ನು ಸವಿಸ್ತಾರವಾಗಿ ಭಾರತೀಯ ಹಬ್ಬ ಹರಿದಿನಗಳು ಎಂಬ ಗ್ರಂಥದ ಮೂಲಕ ಲೋಕಕ್ಕೆ ಅನುಗ್ರಹಿಸಿದ್ದಾರೆ. ಸಾಮಾನ್ಯ ಓದುಗರ ಅನುಕೂಲಕ್ಕಾಗಿ ಅದರಲ್ಲಿನ ಸಾರಭೂತವಾದ, ದೈನಂದಿನ ಆಚರಣೆಗೆ ಅತ್ಯಾವಶ್ಯಕವಾದ ವಿಷಯಗಳನ್ನು ಮಾತ್ರ ಸಂಗ್ರಹಿಸಿ  'ಭಾರತೀಯರ ಹಬ್ಬಗಳು' ಎಂಬ ಕಿರು ಹೊತ್ತಗೆಯ ರೂಪದಲ್ಲಿ  ಪ್ರಸ್ತುತಗೊಳಿಸಲಾಗಿದೆ.   ಹಬ್ಬಗಳನ್ನು ಅದರ ಮರ್ಮದೊಂದಿಗೆ ಅರಿತು ಆಚರಿಸಲು ಈ ಹೊತ್ತಿಗೆಯು ದಾರಿದೀಪವಾಗಿದೆ. 


  ಭಾರತೀಯ ಹಬ್ಬಗಳನ್ನು ಆಚರಿಸುವ ಕಾಲ ಅತ್ಯಂತ ಅರ್ಥಪೂರ್ಣವಾಗಿದೆ, ಪರಮಾತ್ಮನ ಮತ್ತು ಅವನದೇ ಅಂಗಗಳಾದ ದೇವತೆಗಳನ್ನು ಆರಾಧಿಸಿ, ದೇವತಾ ಪ್ರಸನ್ನತೆಯನ್ನು ಸಂಪಾದಿಸಲು ಪ್ರಕೃತಿಮಾತೆಯೇ ವಿಶೇಷವಾಗಿ ಕೆಲವೊಂದು ಕಾಲಘಟ್ಟವನ್ನು ದಯಪಾಲಿಸಿರುವುದೂಂಟು. ಆ ಕಾಲಘಟ್ಟವನ್ನೇ ಪರ್ವ ಅಥವಾ ಹಬ್ಬ ಎಂಬುದಾಗಿ ಕರೆಯುತ್ತಾರೆ. ಅವುಗಳ ಸ್ವರೂಪವನ್ನು ತಪಸ್ಸ್ಯೆಯ ದೃಷ್ಟಿಯಿಂದ ಕಂಡುಕೊಂಡು ನಮಗೆ ಬೋಧಿಸಿದವರು ಮಹರ್ಷಿಗಳು. ಅವರು ಭಗವಂತನ ಅನುಗ್ರಹದಿಂದ ಅವನ ಕಾಲರೂಪವಾದ ಶರೀರವನ್ನು ಅದರ ಅಂಗೋಪಾಂಗಗಳೊಡನೆ ಚೆನ್ನಾಗಿ ಅರ್ಥ ಮಾಡಿಕೊಂಡರು. ಹಾಗೆಯೇ  ಜೀವಿಗಳು  ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು  ಹೊಂದಲು ಅನುಗುಣವಾಗಿ  ಪರಮ ಕರುಣೆಯಿಂದ  ಲೋಕಕ್ಕೆ  ಹಬ್ಬಗಳ ಆಚರಣೆಯ ವಿಧಾನಗಳನ್ನು ಉಪದೇಶಿಸಿದರು. ಅವುಗಳಲ್ಲಿ ಇಂದ್ರಿಯತೃಪ್ತಿ ಮತ್ತು ಆತ್ಮತೃಪ್ತಿ ಎರಡೂ ಸೇರಿಕೊಂಡಿದೆ. ಪಂಚಭಕ್ಷ್ಯ ಪರಮಾನ್ನಗಳ ಸೇವನೆಯೂ ಉಂಟು. ಆದರೆ ಆ ಪದಾರ್ಥಗಳಿಗೆ ಕೇವಲ ಜಿಹ್ವೆ ಮತ್ತು ಉದರಗಳ ಸಂತೃಪ್ತಿಯಲ್ಲಿಯೇ ಪೂರ್ಣತೆ ದೊರಕುವುದಿಲ್ಲ. "ಅಂದು ಸೇವಿಸುವ ಆಹಾರ, ಪಾನೀಯಗಳು ಕೇವಲ ಉದರತೃಪ್ತಿಯಲ್ಲಿ ನಿಲ್ಲದೇ ದಾಮೋದರನ ಸಂತೃಪ್ತಿಯಲ್ಲಿ ವಿಶ್ರಾಂತಿ ಹೊಂದಬೇಕು9" ಎಂದು ಶ್ರೀರಂಗಮಹಾಗುರುಗಳು ಅಪ್ಪಣೆ ಕೊಡಿಸುತ್ತಿದ್ದರು. ಉದಾಹರಣೆಗೆ, 


  1. ಗಣಪತಿ ಹಬ್ಬದಂದು ಗಣಪತಿಗೆ ವಿಶೇಷವಾಗಿ ನೈವೇದ್ಯ ಮಾಡುವ `ಮೋದಕ` ಎನ್ನುವ ಪದಕ್ಕೆ  'ಆನಂದವನ್ನು ಉಂಟು ಮಾಡುವ ಪದಾರ್ಥ' ಎಂದು ಅರ್ಥ. ಆ ಪದಾರ್ಥವನ್ನು ಸರಿಯಾದ ದ್ರವ್ಯಗುಣ ಯೋಗದಿಂದ ಸಿದ್ಧಪಡಿಸಿ ಗಣಪತಿಗೆ ನಿವೇದನೆ ಮಾಡಿ ಪ್ರಸಾದ ಭಾವನೆಯಿಂದ ಸ್ವೀಕರಿಸಿದರೆ ಇಂದ್ರಿಯಕ್ಕೆ ಸಂತೋಷ ಮಾತ್ರವಲ್ಲದೇ ನಮ್ಮ ದೇಹದಲ್ಲಿ ಗಣಪತಿ ದೇವತೆಯ ಪ್ರಸನ್ನತೆ ವಿಶೇಷವಾಗಿ ಹರಿದು ಸರ್ವದೇವತಾ ಮೂಲನಾದ ಪರಮಾತ್ಮನ ಆನಂದವೂ ಈ ದೇಹದಲ್ಲಿ ಬೆಳಗುವುದಕ್ಕೆ ಸಹಾಯವಾಗುತ್ತದೆ. 

  2. ಶ್ರೀರಾಮನು ಎಲ್ಲರ ಹೃದಯದಲ್ಲಿ ಸದಾ ರಮಿಸುತ್ತಿರುವ ಪರಮಾತ್ಮ ಸ್ವರೂಪ, ರಾಮದೇವರ ದರ್ಶನಕ್ಕೆ ಅನುಕೂಲವಾದ ಸಮಯ ಪ್ರಕೃತಿಯಲ್ಲಿ ಯಾವಾಗ ಕೂಡಿ ಬರುತ್ತದೆ ಎಂಬುದನ್ನು ಜ್ಞಾನಿಗಳು ಅಂತರ್ದೃಷ್ಟಿಯಿಂದ ಕಂಡುಕೊಂಡು ಆ ಕಾಲವನ್ನು ರಾಮನವಮೀ ಎಂದು ಕರೆದಿದ್ದಾರೆ. 

  3. ಹೀಗೆ ಭಾರತೀಯವಾದ ಪ್ರತಿಯೊಂದು ಹಬ್ಬಗಳನ್ನೂ ಕೂಡ ಅವುಗಳ ಅಂತ:ಸತ್ವವನ್ನು  ಅರಿತು, ಜ್ಞಾನಿಗಳಿಂದ ವಿಹಿತವಾದ ದ್ರವ್ಯ ಮತ್ತು ಕಾಲದೊಂದಿಗೆ ಆಚರಿಸುತ್ತಾ ಬಂದಾಗ ಪುರುಷಾರ್ಥಮಯವಾದ ಪರಿಪೂರ್ಣ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು.


ಹಾಗೆಯೇ ಇನ್ನಿತರ ಹಬ್ಬಗಳಾದ ಹನುಮಜ್ಜಯಂತೀ, ನಾಗರ ಪಂಚಮೀ, ವರಮಹಾಲಕ್ಷ್ಮೀ ವ್ರತ, ಕೃಷ್ಣ ಜನ್ಮಾಷ್ಟಮೀ ಉತ್ಥಾನ ದ್ವಾದಶೀ, ಗೌರೀ ಹಬ್ಬ, ನವರಾತ್ರಿ, ದೀಪಾವಳಿ, ಮಕರ ಸಂಕ್ರಾಂತಿ, ರಥಸಪ್ತಮಿ ಇತ್ಯಾದಿ  ಅನೇಕ ಹಬ್ಬಗಳ ವಿವರಗಳನ್ನೂ ಗ್ರಂಥ ಪುಂಜವು ಒಳಗೊಂಡಿದೆ. 


ಹತ್ತು ಕೈಪಿಡಿಗಳು
ಒಟ್ಟು ಪುಟಗಳು : 424
ಮೌಲ್ಯ : ₹ 625 /-

ಸೂಚನೆ : 28/09/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ




Friday, June 7, 2024

ಸಂಪತ್ತಿನ ಸದ್ವಿನಿಯೋಗ ಯಾವಾಗ ? (Sampattina Sadviniyoga Yavaga?)


ಲೇಖಕರು; ವಿದುಷಿ ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)




ಶ್ರೀಕೃಷ್ಣ ಮತ್ತು ಸುದಾಮರು ಬಾಲ್ಯ ಸ್ನೇಹಿತರು. ಸಾಂದೀಪನಿ ಮಹರ್ಷಿಗಳ ಗುರುಕುಲದಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡಿದವರು. ಅವರಿಬ್ಬರ ಗುರುಕುಲವಾಸ ಪೂರ್ಣವಾದ ಬಳಿಕ ಶ್ರೀಕೃಷ್ಣನು ದ್ವಾರಕೆಗೆ ಹಿಂತಿರುಗುತ್ತಾನೆ. ಸುದಾಮನು ತನ್ನ ಸ್ವಗೃಹಕ್ಕೆ ತೆರಳುತ್ತಾನೆ. ಶ್ರೀಕೃಷ್ಣನು ದ್ವಾರಕೆಯಲ್ಲಿ ಅರಮನೆಯ ವಾಸದಲ್ಲಿರುತ್ತಾನೆ. ಸುದಾಮನಾದರೋ ಅತ್ಯಂತ ಬಡವ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಅವನದು.

ಸುದಾಮನ ಹೆಂಡತಿಗೆ ಶ್ರೀಕೃಷ್ಣನು ತನ್ನ ಪತಿಯ ಪ್ರಿಯಮಿತ್ರ ಎಂಬುದು ತಿಳಿದಿರುತ್ತದೆ. ಅವಳು ಒಮ್ಮೆ ಪತಿಯನ್ನು ಕುರಿತು ತಾವು ದ್ವಾರಕೆಗೆ ಹೋಗಿ  ಕೃಷ್ಣನ ಸಹಾಯವನ್ನು ಕೇಳಬಹುದಲ್ಲವೇ ? ಅದರಿಂದ ನಮ್ಮ ಪರಿಸ್ಥಿತಿ  ಸುಧಾರಿಸಬಹುದು ಎಂಬುದಾಗಿ ಸೂಚಿಸುತ್ತಾಳೆ.  ಸುದಾಮನಿಗೆ ತಮ್ಮ ದಾರಿದ್ರ್ಯವನ್ನು ಅವನಲ್ಲಿ ಅರಿಕೆ ಮಾಡಿಕೊಳ್ಳುವುದು ಇಷ್ಟವಿಲ್ಲದಿದ್ದರೂ ಪತ್ನಿಯ ಪ್ರೇರೇಪಣೆಯಿಂದ ದ್ವಾರಕೆಗೆ ಬರುತ್ತಾನೆ.

 ಶ್ರೀಕೃಷ್ಣನು ಸುದಾಮನ ಆಗಮನದ ವಾರ್ತೆಯನ್ನು ತಿಳಿದು ಅತ್ಯಂತ ಸಂತೋಷಗೊಂಡವನಾಗಿ ಅವನನ್ನು ಆತ್ಮೀಯವಾಗಿ ಎದುರುಗೊಂಡು ಪ್ರೀತಿಯಿಂದ ಸತ್ಕಾರವನ್ನು ಮಾಡುತ್ತಾನೆ. ಅವನ  ಆದರಪೂರ್ಣವಾದ ಸತ್ಕಾರದಿಂದ ಸುದಾಮನ ಮನಸ್ಸು ಆನಂದದಿಂದ ತುಂಬಿ ಹೋಗುತ್ತದೆ. ಶ್ರೀಕೃಷ್ಣ ಪರಮಾತ್ಮನ ಸಾನಿಧ್ಯ ಸೌಖ್ಯದಲ್ಲಿ ಅವನಿಗೆ ತನ್ನ ಕಷ್ಟ ಪರಂಪರೆ ನೆನಪಾಗುವುದೇ ಇಲ್ಲ!. ಅವನು ತನ್ನ ಆಗಮನದ ಕಾರಣವನ್ನೇ ಮರೆತುಬಿಡುತ್ತಾನೆ. ಸರ್ವಾಂತರ್ಯಾಮಿಯಾದ ಶ್ರೀಕೃಷ್ಣನಿಗೆ ಸುದಾಮನ ಮನದಾಳದ ಬಯಕೆ ತಿಳಿಯದೇ ಇರುತ್ತದೆಯೇ ? ಸುದಾಮನು ಕೆಲವು ದಿನಗಳು  ಕೃಷ್ಣನ ಜೊತೆಯಲ್ಲಿಯೇ ಇದ್ದು ನಂತರ ತನ್ನೂರಿಗೆ ಹೊರಡುತ್ತಾನೆ. ದಾರಿಯಲ್ಲಿ ಬರುವಾಗ ಅವನಿಗೆ ತನ್ನ ದಾರಿದ್ರ್ಯದ ನೆನಪಾಗಿ ತಾನು ಕೇಳಬೇಕೆಂದುಕೊಂಡಿದ್ದನ್ನು ಕೃಷ್ಣನ ಬಳಿ ಕೇಳಲೇ ಇಲ್ಲವಲ್ಲ ಎಂದು ಯೋಚಿಸುತ್ತಾನೆ. ಆದರೆ ತನ್ನ ಮನೆಯ ಹತ್ತಿರ ಬಂದಾಗ ಸುದಾಮನಿಗೆ ಆಶ್ಚರ್ಯ ಕಾದಿರುತ್ತದೆ. ತನ್ನ ಗುಡಿಸಲು ಇರುವ ಜಾಗದಲ್ಲಿ ಭವ್ಯವಾದ ಬಂಗಲೆ ನಿರ್ಮಿತವಾಗಿರುತ್ತದೆ, ಮನೆಯು ಧನ ಧಾನ್ಯದಿಂದ ತುಂಬಿರುತ್ತದೆ, ಹೆಂಡತಿ ಮಕ್ಕಳು ಹೊಸ ಬಟ್ಟೆ,ಆಭರಣಗಳನ್ನು ತೊಟ್ಟುಕೊಂಡು ಓಡಾಡುತ್ತಿರುತ್ತಾರೆ. ಇವೆಲ್ಲವೂ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ಎಂಬುದು ಅವನಿಗೆ ಸ್ಪಷ್ಟವಾಗುತ್ತದೆ.  ತನಗೆ ಸಂಪತ್ತನ್ನು ಅನುಗ್ರಹಿಸಿರುವ ಶ್ರೀ ಕೃಷ್ಣನನ್ನು ಕೃತಜ್ಞತೆಯಿಂದ ಸ್ಮರಿಸಿ,  ಸದ್ಗೃಹಸ್ಥನಾಗಿ, ಭಗವಂತನಿಂದ ಕೊಡಲ್ಪಟ್ಟ ಸಂಪತ್ತನ್ನು  ಭಗವಂತನ ಸ್ಮರಣೆಯೊಂದಿಗೆ ಸದ್ವಿನಿಯೋಗಮಾಡುತ್ತಾ ಸುಖ, ಶಾಂತಿಯಿಂದ ಜೀವನವನ್ನು ನಡೆಸುತ್ತಾನೆ.

 ಈ ಸೃಷ್ಟಿಯಲ್ಲಿ ಭೌತಿಕವಾದ ಸಂಪತ್ತು ಅನ್ನುವುದು ಎಲ್ಲರಿಗೂ, ಎಲ್ಲಾ ಕಾಲದಲ್ಲಿಯೂ ಒಂದೇ ತರಹ ಇರುವುದಿಲ್ಲ. ಅವರವರ ಪೂರ್ವಕೃತ ಕರ್ಮಕ್ಕನುಗುಣವಾಗಿ, ಪರಿಶ್ರಮಕ್ಕನುಗುಣವಾಗಿ, ಅದೃಷ್ಟದ ಮೇರೆಗೆ ಬದಲಾಗುತ್ತಾ ಇರುತ್ತದೆ. ಸಂಪತ್ತಿರುವೆಡೆ ಸುಖ ಶಾಂತಿ ನೆಲೆಸಿರುತ್ತದೆ ಎಂಬುದೂ ಇಲ್ಲ. ಭಗವಂತನಿಂದ ದಯಪಾಲಿಸಲ್ಪಟ್ಟ ಸಂಪತ್ತನ್ನು ಯಾವ ರೀತಿ ಉಪಯೋಗಿಸಿದಾಗ ಅದು ನಮ್ಮ ಭೌತಿಕ ಜೀವನವನ್ನು ಸುಖಮಯವಾಗಿಸಿ, ಮನಸ್ಸಿಗೆ ಶಾಂತಿಯನ್ನು ನೀಡುವ ಪಾರಮಾರ್ಥಿಕ ಜೀವನಕ್ಕೂ ಪೋಷಕವಾಗಬಲ್ಲದು ಎಂಬ ಅರಿವು ಅವಶ್ಯಕ.

ಭಗವಂತನನ್ನು ಮರೆಸುವ ಸಂಪತ್ತು ವಿಪತ್ತೇ ಆಗುತ್ತದೆ. "ಒಂದು ದ್ರವ್ಯವೂ ಇದ್ದು ಅದರ ಸರಿಯಾದ ವಿನಿಯೋಗವೆಂದರೆ ಪರಮ ಯೋಗದಲ್ಲಿ ಮುಕ್ತಾಯವಾಗುವುದು" ಎಂಬ ಶ್ರೀರಂಗಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ.
 
ಭಗವಂತನ ಸ್ಮರಣೆಯೊಂದಿಗೆ ಧರ್ಮ ಸಮ್ಮತವಾಗಿ ಸಂಪತ್ತನ್ನು ತಾನೂ ಅನುಭವಿಸಿ,  ಸತ್ಕಾರ್ಯಕ್ಕೆ ಅದನ್ನು ವಿನಿಯೋಗ ಮಾಡುತ್ತಾ ಬಂದಾಗ ಅದು ಪರಮಯೋಗದಲ್ಲಿ ನಮ್ಮನ್ನು ನೆಲೆ ನಿಲ್ಲಿಸಲು ಸಹಕಾರಿಯಾಗುವುದರೊಂದಿಗೆ ಆ ಸಂಪತ್ತಿನ ಸಾರ್ಥಕವಾದ ಬಳಕೆಯಾದಂತಾಗುತ್ತದೆ.

ಸೂಚನೆ: 07/06/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, February 19, 2024

ಫಲಪ್ರಾಪ್ತಿಗೆ ಬೇಕು ಪ್ರಯತ್ನಶೀಲತೆ (Phalapraptige Beku prayatnasilate)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)




 

ಪರಮೇಶ್ವರನ ಪತ್ನಿಯಾದಂತಹ ಸತೀದೇವಿಯು ದಕ್ಷಪ್ರಜಾಪತಿಯ ಮಗಳು. ಪರಶಿವನ ಮಹಿಮೆಯನ್ನು ಅರಿಯದ, ದರ್ಪದಿಂದ ಅಂಧನಾದ ದಕ್ಷ ಪ್ರಜಾಪತಿಯು ಅಳಿಯನಾದ ಪರಶಿವನನ್ನು ಅಗೌರವದಿಂದ ಕಾಣುತ್ತಿರುತ್ತಾನೆ. ಒಮ್ಮೆ ದಕ್ಷಪ್ರಜಾಪತಿಯು ಒಂದು ದೊಡ್ಡ ಯಾಗವನ್ನು ಮಾಡುತ್ತಿರುತ್ತಾನೆ. ತಂದೆಯ ಮನೆಯಿಂದ ಆಹ್ವಾನ ಬಾರದಿದ್ದರೂ ತವರುಮನೆಯ ಮೇಲಿನ ಪ್ರೀತಿಯಿಂದ ಸತೀದೇವಿಯು ಆ ಯಾಗಕ್ಕೆ ಆಗಮಿಸುತ್ತಾಳೆ. ಆಗ ದಕ್ಷಪ್ರಜಾಪತಿಯು ಅವಳ ಮುಂದೆ ಪರಶಿವನನ್ನು ನಿಂದಿಸುವಂತಹ  ಮಾತುಗಳನ್ನು ಆಡುತ್ತಾನೆ. ಪತಿನಿಂದೆಯನ್ನು ಕೇಳಿ ಅತ್ಯಂತವಾಗಿ ದುಃಖಿತಳಾದ ಸತೀದೇವಿಯು ಯೋಗಾಗ್ನಿಯಿಂದ ತನ್ನ ದೇಹವನ್ನು ಭಸ್ಮಗೊಳಿಸಿ ಪ್ರಾಣತ್ಯಾಗ ಮಾಡುತ್ತಾಳೆ.


ಆ ಸತೀದೇವಿಯೇ ಮುಂದಿನ ಜನ್ಮದಲ್ಲಿ ಪರ್ವತರಾಜನ ಮಗಳಾಗಿ ಜನಿಸಿ ಪಾರ್ವತೀ ಎಂಬುದಾಗಿ ಕರೆಯಲ್ಪಡುತ್ತಾಳೆ. ಪಾರ್ವತಿಯು ಬಾಲ್ಯಾವಸ್ಥೆಯಲ್ಲಿರುವಾಗ ಒಮ್ಮೆ ದೇವರ್ಷಿ ನಾರಾದರು ಪರ್ವತರಾಜನ ಮನೆಗೆ  ಆಗಮಿಸುತ್ತಾರೆ. ತ್ರಿಕಾಲ ಜ್ಞಾನಿಗಳಾದ ಅವರು ಪಾರ್ವತಿಯನ್ನು ನೋಡಿ ಇವಳು ಪರಶಿವನ ಪತ್ನಿಯಾಗುತ್ತಾಳೆ ಎಂಬ ಮಾತನ್ನು  ಹೇಳುತ್ತಾರೆ. ಪಾರ್ವತಿಯನ್ನು ವರಿಸುವುದು ಪರಶಿವನೇ ಎಂಬುದು ಸ್ವತಃ ಸಿದ್ಧ, ವಿಧಿಲಿಖಿತ. ಏಕೆಂದರೆ ಅವರಿಬ್ಬರೂ ಜಗದಾದಿ ದಂಪತಿಗಳು, ವಿವಾಹವೆಂಬುದು ಜನ್ಮ ಜನ್ಮದ ಅನುಭಂದ.   ತಾನು ಪರಮೇಶ್ವರನನ್ನು ವಿವಾಹವಾಗುವುದು ನಿಶ್ಚಿತ ಎಂಬುದನ್ನು ಪಾರ್ವತಿಯು ತಿಳಿದಿದ್ದರೂ, ಆ ಫಲ ಕೈಗೂಡಲು ಪರಮೇಶ್ವರನಿಗೆ ಪ್ರಿಯವಾದ ತಪಸ್ಸನ್ನು ಆಚರಿಸಲು ಮುಂದಾಗುತ್ತಾಳೆ, ಆ ನಿಟ್ಟಿನಲ್ಲಿ ಪ್ರಯತ್ನಶೀಲಳಾಗುತ್ತಾಳೆ. ಜಗನ್ಮಾತೆಯ ಈ ನಡೆ ಲೋಕಕ್ಕೆ ಪರಮಾದರ್ಶವಾಗಿದೆ, ಫಲವನ್ನು ಪಡೆಯಲು ಅವಶ್ಯಕವಾಗಿ ಇರಲೇಬೇಕಾದ ಪ್ರಯತ್ನಶೀಲತೆಯನ್ನು ಎತ್ತಿ ಸಾರುತ್ತಿದೆ. ಪ್ರತಿಯೊಂದು ಜೀವಿಯೂ ಜನ್ಮತಾಳುವಾಗಲೇ ಇಂತಿಂತಹ ಫಲಗಳನ್ನು ಹೊಂದಲೇಬೇಕು ಎಂಬುದು ವಿಧಿಲಿಖಿತ, ಹಾಗೆಂದು ಆ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ಸುಮ್ಮನೆ ಕಾಲಹರಣ ಮಾಡಿದರೆ ಫಲದ ಪ್ರಾಪ್ತಿಯಗುವುದಿಲ್ಲ.


ಮಲಗಿ ನಿದ್ರಿಸುತ್ತಿರುವ ಸಿಂಹದ ಬಾಯಿಯೊಳಗೆ ಮೃಗಗಳು ತಾವಾಗಿಯೇ ಬಂದು ಬೀಳುವುದಿಲ್ಲ ಎಂಬ ಸುಭಾಷಿತ ಪ್ರಸಿದ್ಧವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ದೈವಬಲ ಹಾಗೂ ಪುರುಷಪ್ರಯತ್ನ ಎರಡಕ್ಕೂ ಅತ್ಯಂತ ಮಹತ್ವವನ್ನು ನೀಡಿದ್ದಾರೆ." ದೈವಾನುಗ್ರಹ ಪುರುಷಪ್ರಯತ್ನಗಳು ರಥದ ಚಕ್ರಗಳಂತೆ. ಹೇಗೆ ಎರಡು ಚಕ್ರಗಳೂ ಒಟ್ಟಿಗೆ ಉರುಳಿದಾಗ ಮಾತ್ರ ರಥವು ಮುನ್ನಡೆಯುವುದೋ ಅಂತಯೇ ದೈವಾನುಗ್ರಹದ ಜೊತೆಯಾಗಿ ಪುರುಷ ಪ್ರಯತ್ನವೂ ಇದ್ದಾಗ ಮಾತ್ರ ಜೀವನರಥವು ಸುಗಮವಾಗಿ ಸಾಗುವುದು, ಕಾರ್ಯಸಿದ್ಧಿಯಾಗುವುದು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಸ್ಮರಣೀಯವಾಗಿದೆ.


ಪ್ರತಿಯೊಂದು ಜೀವಿಯೂ ಭಗವಂತನಿಂದ ಹೊರಟು ಪ್ರಕೃತಿಗೆ ಇಳಿದು ತಮ್ಮ ತಮ್ಮ ಕರ್ಮಕ್ಕನುಗುಣವಾದ ಐಹಿಕ ಫಲಗಳನ್ನು ಪಡೆದಾಗ ಮಾತ್ರ ಜೀವನ ಪೂರ್ಣವಾಗುವುದಿಲ್ಲ. ತನ್ನ ಮೂಲಸ್ಥಾನವಾದ ಭಗವಂತನನ್ನು ಮತ್ತೆ ಹೋಗಿ ಸೇರುವುದು ಜೀವಿಯ ಪರಮಫಲ. ಆ ಫಲವನ್ನು ಹೊಂದಲು ಭಗವಂತನ ಕೃಪೆ, ಸದ್ಗುರುವಿನ ಅನುಗ್ರಹ ಇವುಗಳನ್ನೆಲ್ಲ ಸಂಪಾಡಿಸಿಕೊಂಡು, ಅದಕ್ಕನುಗುಣವಾಗಿ ಸಾಧನೆ ಮಾಡುವುದು ಪುರುಷಪ್ರಯತ್ನವಾಗಿದೆ. ಹಾಗಾಗಿ ದೈವಬಲದ ಜೊತೆಗೆ ಪುರುಷಪ್ರಯತ್ನವನ್ನೂ ಇಟ್ಟುಕೊಂಡು ಜೀವನದಲ್ಲಿ ಐಹಿಕ ಸುಖ ಹಾಗೂ ಪಾರಮಾರ್ಥಿಕ ಸುಖ ಎರಡನ್ನೂ ಅನುಭವಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ.


ಸೂಚನೆ: 19/2/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.


Friday, January 5, 2024

ಭಗವತ್ಸೇವೆಗೆ ಇರಬೇಕಾದ ಭಾವಶುದ್ಧಿ - ಅದರ ಫಲ (Bhagavatsevege Irabekada Bhavasuddhi - Adara Phala)

ಲೇಖಕರು :  ಸೌಮ್ಯಾ ಪ್ರದೀಪ್  ಎ. ಜೆ.

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀ ಮದ್ರಾಮಾಯಣದ ಪ್ರಸಂಗ,ಆಂಜನೇಯನು ಸೀತಾನ್ವೇಷಣೆ ಎಂಬ ಪವಿತ್ರ ಕಾರ್ಯಕ್ಕಾಗಿ ಸಮುದ್ರವನ್ನು ಹಾರಿ ಲಂಕೆಗೆ ಹೋಗುತ್ತಾನೆ. ಅಲ್ಲಿ ಅಶೋಕವನದಲ್ಲಿರುವ ಸೀತಾಮಾತೆಯನ್ನು ಸಂದರ್ಶಿಸುತ್ತಾನೆ. ಅಲ್ಲಿಂದ ಹೊರಟು ಶ್ರೀರಾಮನ ಬಳಿಗೆ ಬಂದು ಸೀತಾಮಾತೆಯನ್ನು ಭೇಟಿಮಾಡಿದ ಶುಭ ಸಮಾಚಾರವನ್ನು ತಿಳಿಸುತ್ತಾನೆ. ದುಷ್ಟ ರಾವಣನೊಂದಿಗೆ ಯುದ್ಧ ಮಾಡಿ ಸೀತೆಯನ್ನು ಕರೆತರಲು ಶ್ರೀರಾಮನ ಆದೇಶದಂತೆ ಸುಗ್ರೀವನ ನೇತೃತ್ವದಲ್ಲಿ ಸೈನ್ಯ ಸಿದ್ಧವಾಗುತ್ತದೆ. ಮೊದಲಿಗೆ, ಸಮುದ್ರದ ಮಧ್ಯದಲ್ಲಿರುವ ಲಂಕಾನಗರಿಯನ್ನು ತಲುಪಲು ಸಮುದ್ರಕ್ಕೆ ಸೇತುವೆಯನ್ನು ನಿರ್ಮಾಣ ಮಾಡುವ ಕಾರ್ಯ ಆರಂಭವಾಗುತ್ತದೆ. ಸಮುದ್ರಕ್ಕೆ ಸೇತುವೆಯನ್ನು ಕಟ್ಟುವುದು ಕ್ಲಿಷ್ಟಕರವಾದ ಕಾರ್ಯವಾದರೂ ರಾಮನಾಮ ಸ್ಮರಣೆಯೊಂದಿಗೆ ಆ ಅಧ್ಭುತವಾದ ಕಾರ್ಯ ಆರಂಭವಾಗುತ್ತದೆ. 


ಆ ಕಾರ್ಯಕ್ಕೆ ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳೂ ತಮ್ಮ ತಮ್ಮ ಶಕ್ತಿಯ ಅನುಸಾರ ಸಹಕಾರ ಮಾಡುತ್ತವೆ. ಅಳಿಲು, ಇರುವೆ ಮುಂತಾದ ಚಿಕ್ಕ ಪುಟ್ಟ ಪ್ರಾಣಿಗಳೂ ಕೂಡ  ಸೇತುವೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಹೊತ್ತು ತಂದುಕೊಡುತ್ತವೆ, ಅತ್ಯಂತ ಉತ್ಸಾಹದಿಂದ ಆ ಕಾರ್ಯದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ. ಅಂತಹ ಬೃಹತ್ತಾದ ಸೇತುವೆ ಕಟ್ಟಲು ಅವುಗಳು ತಂದು ಕೊಡುವ ಸಾಮಗ್ರಿಗಳು ಅತ್ಯಲ್ಪವಾದರೂ ರಾಮಕಾರ್ಯಕ್ಕೆ ಸಹಕರಿಸಬೇಕು, ಶ್ರೀರಾಮನ ಸೇವೆ ಮಾಡಬೇಕು ಎಂಬ ಅವುಗಳ ಮನಸ್ಸಿನ ಭಾವನೆ ಅತ್ಯಂತ ಮಹತ್ತರವಾದುದ್ದು. ಹದಿನಾಲ್ಕು ಲೋಕಗಳಿಗೆ ಒಡೆಯನಾದ ಶ್ರೀರಾಮನಿಗೆ ಸಮುದ್ರಕ್ಕೆ ಸೇತುವೆ ಕಟ್ಟುವುದು  ಹಾಗೂ ರಾವಣನ ಸಂಹಾರ ಅನ್ನುವಂತಹದ್ದು ಕ್ಷಣಮಾತ್ರದ ಕಾರ್ಯವಾದರೂ ರಾಮಾವತಾರದ ಸಂಕಲ್ಪದಂತೆಯೇ, ಸಾಮಾನ್ಯ ಮಾನವನಂತೆಯೇ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಾನೆ. ಸೇವಾ ಸೌಭಾಗ್ಯವನ್ನು ಕರುಣಿಸಿ, ತನ್ನನ್ನು ನಂಬಿದ ಜೀವಿಗಳ ಉದ್ಧಾರಕ್ಕಾಗಿಯೇ ಮೂಲ ನೆಲೆಯಿಂದ ಇಳಿದು ಬಂದ ದೇವನಲ್ಲವೇ ಅವನು! ಶುದ್ಧವಾದ ಮನಸ್ಸಿನಿಂದ ತನ್ನ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಪ್ರತಿಯೊಂದು ಜೀವಿಗಳ ಮೇಲೂ ಅನುಗ್ರಹ ದೃಷ್ಟಿಯನ್ನು ಹರಿಸುತ್ತಾನೆ. ಅಳಿಲಿನ ಬೆನ್ನಮೇಲೆ ತನ್ನ ಅಮೃತಹಸ್ತವನ್ನು ಸ್ಪರ್ಶಸಿ ಅನುಗ್ರಹಿಸಿದನೆಂಬುದು ಲೋಕಪ್ರಸಿದ್ಧವಲ್ಲವೇ.  "ಭಗವಂತನ ಪರಿವಾರವಾಗಿ ಕರಡಿಯೇ ಬರಲಿ, ಕಪಿಯೇ ಆಗಲಿ, ಶಿಂಗಳೀಕವೇ ಆಗಲಿ, ಅವಕ್ಕೆಲ್ಲಾ ಭಗವತ್ಕಾರ್ಯದಲ್ಲಿ ಪಾತ್ರ ಉಂಟು. ಭಗವಂತನವರಾಗಿ ಬಂದಾಗ, ಅವರ ಕಪಿತ್ವ, ಕರಡಿತನ ಎಲ್ಲಾ ಮರೆಯಾಗಿ ಬಿಡುತ್ತದೆ." ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ. 


 'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ' ಎಂಬ ಭಗವದ್ವಾಣಿಯಂತೆ ಅತ್ಯಲ್ಪವಾದರೂ ಶುದ್ಧವಾದ ಮನಸ್ಸಿನಿಂದ, ಭಗವದರ್ಪಣ ಭಾವದಿಂದ ಮಾಡಿದ ಧರ್ಮಕಾರ್ಯಗಳು ಭಗವಂತನ ಕಾರ್ಯಗಳೇ. ಅಂತಹ ಕಾರ್ಯಗಳು ಎಂದಿಗೂ ವಿಫಲವಾಗದೇ ಮಾಡಿದವರನ್ನು ಮಹತ್ತಾದ ವಿಪತ್ತಿನಿಂದ ಪಾರು ಮಾಡುವ ಸಾಧನಗಳೇ ಆಗಿವೆ. ಸಂಸಾರ ಸಾಗರವನ್ನು ದಾಟಿಸಿ ಭಗವಂತನಲ್ಲಿ ಜೀವಿಗಳನ್ನು ಒಂದುಗೂಡಿಸುವಲ್ಲಿ ಸಹಕರಿಸುವ ಸಾಧನಗಳೇ ಆಗಿರುತ್ತವೆ.


 ಸರ್ವಶಕ್ತನಾದ ಭಗವಂತನಿಗೆ ತನ್ನೆಲ್ಲ ಕಾರ್ಯಗಳನ್ನೂ ಮಾಡುವ ಸಾಮರ್ಥ್ಯವಿದ್ದರೂ ಜೀವಿಗಳನ್ನು ನಿಮಿತ್ತವಾಗಿರಿಸಿಕೊಂಡು ಅವುಗಳಲ್ಲಿ ಶಕ್ತಿಯನ್ನು ತುಂಬಿಸಿ ಆ ಕಾರ್ಯದಲ್ಲಿ ತೊಡಗಿಸುತ್ತಾನೆ, ಅವುಗಳ ಮನಸ್ಸನ್ನು ತನ್ನೆಡೆಗೆ ಹರಿಯುವಂತೆ ಮಾಡುತ್ತಾನೆ. ಕಾಲ ಕಾಲದಲ್ಲಿ, ಯುಗ ಯುಗದಲ್ಲಿ ಭಗವಂತನು ವ್ಯಕ್ತನಾಗಿಯೂ, ಅವ್ಯಕ್ತನಾಗಿಯೂ ತಾನು ಸಂಕಲ್ಪಿಸಿದ ಕಾರ್ಯವನ್ನು ನಡೆಸುತ್ತಲೇ ಇರುತ್ತಾನೆ. ಅಂತಹ ಭಗವತ್ಕಾರ್ಯದಲ್ಲಿ ನಮ್ಮ ಮನೋಬುದ್ಧಿಗಳನ್ನು ಪ್ರೆರೇಪಿಸಿ, ತೊಡಗಿಸಿ ನಮ್ಮ ಜೀವನವನ್ನೂ ಪಾವನವನ್ನಾಗಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ: 4/1/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Saturday, November 4, 2023

ಪಂಚಕನ್ಯೆಯರು - ಉಪಸಂಹಾರ (Panncakanyeyaru - Upasanhara)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)



 

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ l ಪಂಚಕನ್ಯಾ: ಸ್ಮರೇನ್ನಿತ್ಯo ಮಹಾಪಾತಕ ನಾಶನಮ್ ll ಎಂಬ ಪ್ರಸಿದ್ಧ ಶ್ಲೋಕದ ಬಗ್ಗೆ ಚಿಂತಿಸಿದ್ದೇವೆ. ವಿವಾಹಿತರಾದ ಅಹಲ್ಯಾ ಮುಂತಾದವರು ಹೇಗೆ ಕನ್ಯಾ ಎಂಬ ಪದಕ್ಕೆ ಅರ್ಹರಾಗಿ ಪ್ರಾತಃಸ್ಮರಣೀಯರಾಗಿದ್ದಾರೆ,ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ.


ಕನ್ಯಾ ಎಂದರೆ ಆತ್ಮ ದೀಪ್ತಿಯಿಂದ ಬೆಳಗುವವರು. ಅಹಲ್ಯಾದಿಗಳು ಹೇಗೆ ತಮ್ಮಲ್ಲಿ ಆತ್ಮ ಪ್ರಕಾಶವನ್ನು ತುಂಬಿಕೊಂಡು ಪರಮಾತ್ಮನ ಅನುಗ್ರಹಕ್ಕೆ ಸದಾ ಪಾತ್ರರಾಗಿದ್ದರು ಎಂಬುದನ್ನು ಅವರುಗಳ ಜೀವನ ಚರಿತ್ರೆಯ ಮೇಲೆ ಒಂದು ನೋಟವನ್ನು ಹರಿಸಿ ಗಮನಿಸಿದ್ದೇವೆ. ಅವರುಗಳನ್ನು ಹೇಗೆ ಸ್ಮರಿಸಿಕೊಂಡರೆ ನಮ್ಮ ಜೀವನ ಪಾವನವಾಗುತ್ತದೆ ಎಂಬುದನ್ನು ಇನ್ನೊಮ್ಮೆ ಗಮನಿಸಿ ಈ ಲೇಖನವನ್ನು ಸಂಪನ್ನಗೊಳಿಸಬೇಕಾಗಿದೆ.


 ಪಾತಕ ಎಂದರೆ ಪತನ, ಅಥವಾ ಮೇಲಿನಿಂದ ಕೆಳಕ್ಕೆ ಬೀಳಿಸುವುದು ಎಂಬುದಾಗಿ ಅರ್ಥ. ಯಾವ ಯಾವ ಕಾರ್ಯಗಳು ನಮ್ಮನ್ನು ನಮ್ಮ ಸ್ಥಾನದಿಂದ ಕೆಳಕ್ಕೆ ಬೀಳಿಸುತ್ತವೆಯೋ ಅಂತಹ ಕಾರ್ಯಗಳೆಲ್ಲವೂ ಪಾತಕಗಳೇ. ಅವು ಭೌತಿಕ , ದೈವಿಕ  ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿರಬಹುದು. ಪ್ರತಿಯೊಬ್ಬರೂ ಈ ಮೂರೂ ಕ್ಷೇತ್ರಗಳಲ್ಲೂ ಶುದ್ಧವಾದ ಜೀವನವನ್ನೂ ನಡೆಸಿ ದಿನದಿಂದ ದಿನಕ್ಕೆ ಏಳಿಗೆಯನ್ನು ಹೊಂದಬೇಕಾದುದು ಆದರ್ಶ. ಯಾವ ನಮ್ಮ ಕಾರ್ಯಗಳು ಆ ಮೂರೂ ಕ್ಷೇತ್ರಗಳ ಏಳಿಗೆಯನ್ನು ಕುಂಠಿತಗೊಳಿಸಿ  ನಮ್ಮ ಅಧ:ಪತನಕ್ಕೆ ಕಾರಣವಾಗುತ್ತವೆಯೋ ಅವೇ ಪಾಪಕಾರ್ಯಗಳು. ನಿತ್ಯ ಜೀವನದಲ್ಲಿ ನಮಗೆ ತಿಳಿದೋ ತಿಳಿಯದೆಯೋ ಅಂತಹ ಕಾರ್ಯಗಳು ನಮ್ಮಿಂದ ಆಗುತ್ತಲೇ ಇರುತ್ತವೆ. ಅಂತಹ ಪಾಪ ಕಾರ್ಯಗಳ ನಿವಾರಣೆಗೆ ಭಗವಂತನ ಸ್ಮರಣೆಯೇ ಮಹೌಷಧವಾಗಿದೆ. ನೇರವಾಗಿ ಭಗವಂತನ ಸ್ಮರಣೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಭಕ್ತರ ಅಥವಾ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಂತಹವರ ಸ್ಮರಣೆಯೂ ಸಹಕಾರಿಯಾಗಬಲ್ಲದು. ಏಕೆಂದರೆ ಅಂತಹವರ ಸ್ಮರಣೆಯೂ ನಮ್ಮನ್ನು ಭಗವಂತನ ಸ್ಮರಣೆಯಲ್ಲಿಯೇ ನಿಲ್ಲಿಸುತ್ತದೆ ಎಂಬುದನ್ನು ಈ ಪಂಚಕನ್ಯೆಯರ ಜೀವನ ಚರಿತ್ರೆಯಿಂದ ಅರಿಯಬಹುದು.


 ಅಹಲ್ಯೆಯು ಕ್ಷಣಕಾಲ ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡ ಪರಿಣಾಮ ಪತಿದ್ರೋಹದಂತಹ ಮಹಾಪಾತಕವೇ ಅವಳಿಂದ ಎಸಗಲ್ಪಟ್ಟಿತು. ಆ ಕಾರ್ಯವು ಅವಳನ್ನು ಅವಳ ಸ್ಥಾನದಿಂದ ಪತನಗೊಳಿಸಿತು. ಆದರೆ ಪತಿಯಾದ ಗೌತಮರು ನೀಡಿದ ಶಾಪ ಮತ್ತೆ ಪುನಃ ಅವಳನ್ನು ಮೇಲಕ್ಕೆ ಏರಿಸಿ ಮೊದಲಿಗಿಂತಲೂ ಉನ್ನತವಾದ ಸ್ಥಿತಿಯನ್ನೇ ದೊರಕಿಸಿತು. ಅಹಲ್ಯೆಯು ತನ್ನಿಂದಾದ ಪಾಪಕಾರ್ಯಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಂಡು,ಸಾಮಾನ್ಯರಿಗೆ ಅಲಭ್ಯವಾದ,ಸಾಕ್ಷಾತ್ ಶ್ರೀರಾಮಚಂದ್ರನ ದರ್ಶನವನ್ನೇ ಪಡೆದು ಕೃತಾರ್ಥಳಾದಳು. ಅವಳ ಜೀವನ ಚರಿತ್ರೆಯು ನಮಗೆ ಪಾಠವಾಗಿದೆ. ಯಾವುದೇ ಸಮಯದಲ್ಲಿ ಬೇಕಾದರೂ ಮನಸ್ಸು ಸ್ಥಿರತೆಯನ್ನು ಕಳೆದುಕೊಳ್ಳಬಹುದು ಆದ್ದರಿಂದ ಸದಾಕಾಲ ಜಾಗರೂಕರಾಗಿರಬೇಕು ಇಂದ್ರಿಯನಿಗ್ರಹವನ್ನು ಎಂತಹ ಸಮಯದಲ್ಲಿಯೂ ಕಳೆದುಕೊಳ್ಳಬಾರದು. ಶ್ರೀರಾಮಚಂದ್ರನ ದೃಷ್ಟಿಪಾತದಿಂದ ಪರಮಪವಿತ್ರಳಾದ ಅಹಲ್ಯೆಯ ಸ್ಮರಣೆಯು ನಮ್ಮನ್ನು ಶ್ರೀರಾಮನ ಸ್ಮರಣೆಯಲ್ಲಿಯೇ ನಿಲ್ಲಿಸುವುದರಿಂದ ಅವಳ ಸ್ಮರಣೆ ಅತ್ಯಂತ ಶ್ರೇಷ್ಠವಾಗಿದೆ.


ದ್ರೌಪದಿಯು ಮಹಾ ಪತಿವ್ರತೆ, ಸಾಕ್ಷಾತ್ ಶ್ರೀಕೃಷ್ಣನ ಪ್ರೀತಿಗೆ ಪಾತ್ರಳಾಗಿ ಅವನಿಂದ ತಂಗಿ ಎಂದು ಕರೆಸಿಕೊಂಡ ಮಹಿಮಾನ್ವಿತಳು. ಪತಿಯಂದಿರ ಬಗ್ಗೆ ಅವಳಿಗಿದ್ದ ನಿಷ್ಠೆ ಅವಳನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿಸುವಂತಹದ್ದು. ಜೀವನದಲ್ಲಿ ಎದುರಾದ ಕಷ್ಟಗಳನ್ನು, ಅವಮಾನಗಳನ್ನು ದಿಟ್ಟತನದಿಂದ ಎದುರಿಸಿದ ಧೀರ ನಾರೀ ದ್ರೌಪದಿ. ಅವಳ ಸ್ಮರಣೆಯಿಂದ ಅಂತಹ ಧೃತಿ ನಮ್ಮಲ್ಲೂ ಜಾಗೃತವಾಗುತ್ತದೆ. ಹಾಗೆಯೇ ಪರಮಾತ್ಮನನ್ನು ಅತ್ಯಂತ ಶುದ್ಧ ಹೃದಯದಿಂದ ಭಾವಿಸುತ್ತಾ, ಆಪದ್ಬಾಂಧವ ಗೋವಿಂದನೊಬ್ಬನೇ ಎಂಬುದಾಗಿ ನಂಬಿ, ಅವನ ನಾಮ ಸ್ಮರಣೆಯಿಂದಲೇ ಕ್ಲಿಷ್ಟಕರವಾದ ಪರಿಸ್ಥಿತಿಯಿಂದ ತನ್ನನ್ನು ತಾನು ರಕ್ಷಿಸಿಕೊಂಡಳು. ಅಂತಹ ದ್ರೌಪದಿಯ ಸ್ಮರಣೆ ನಮ್ಮ ಮನಸ್ಸನ್ನು ಗೋವಿಂದನ ಸ್ಮರಣೆಯಲ್ಲಿಯೇ ನಿಲ್ಲಿಸಿ ನಮ್ಮ ಪಾತಕಗಳು ನಾಶವಾಗುತ್ತವೆ.

ಸೀತಾಮಾತೆಯನ್ನು ಸ್ಮರಣೆಮಾಡಿಕೊಳ್ಳುವುದೂ ಒಂದೇ, ಶ್ರೀರಾಮಚಂದ್ರನನ್ನು ಸ್ಮರಣೆ ಮಾಡಿಕೊಳ್ಳುವುದೂ ಒಂದೇ. ಅವರಿಬ್ಬರೂ ಒಂದೇ ತತ್ವದ ಎರಡು ಮುಖಗಳು. ಶ್ರೀರಾಮ ಪರಮಾತ್ಮಸ್ವರೂಪನಾದರೆ ಸೀತಾಮಾತೆ ಶುದ್ಧ ಪ್ರಕೃತಿ ಸ್ವರೂಪಿಣಿ. ಸೀತಾಮಾತೆಯ ಸ್ಮರಣೆಯಿಂದ ನಮ್ಮೆಲ್ಲರ ಪ್ರಕೃತಿ ಶುದ್ಧವಾಗಿ ಪರಮಾತ್ಮನ ದರ್ಶನಕ್ಕೆ ಯೋಗ್ಯತೆಯನ್ನು ಪಡೆದುಕೊಳ್ಳುತ್ತದೆ.


"ಸ್ತ್ರೀತ್ವವನ್ನು ಧರಿಸಿ ಪರಮಪುರುಷನಿಗೆ ನರ, ನಾರಾಯಣ ಎರಡು ರೂಪಗಳಲ್ಲಿಯೂ ಭಾರ್ಯೆಯಾಗಿ ತ್ರಿಧಾಮದಲ್ಲಿಯೂ ಗೃಹಿಣಿಯಾಗಿದ್ದಾಳೆ ಸೀತೆ". ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಅಂತಹ ಸೀತಾಮಾತೆಯ ಸ್ಮರಣೆಯಿಂದ ನಮ್ಮ ಸಕಲ ಪಾಪಗಳೂ ನಿವಾರಣೆಯಾಗಿ ಪರಮಪುರುಷನ ಅನುಗ್ರಹಧಾರೆ ನಮ್ಮ ಮೇಲೆ ಹರಿಯುತ್ತದೆ ಎಂಬುದು ನಿತ್ಯಸತ್ಯ.


ವಾನರಕುಲ ಸಂಜಾತೆಯಾದ ತಾರಾ ಭಗವಂತನ ಮಹಿಮೆಯನ್ನು ಚೆನ್ನಾಗಿ ಬಲ್ಲವಳಾಗಿದ್ದಳು ಹಾಗೂ ಅದರ ಬಗ್ಗೆ ಪತಿಗೂ ತಿಳುವಳಿಕೆಯನ್ನು ನೀಡುತ್ತಿದ್ದಳು. ಅಂತೆಯೇ ರಾವಣನ ಪತ್ನಿಯಾದ ಮಂಡೋದರಿಯೂ ಕೂಡ ಪರಮ ಸಾತ್ವಿಕಳಾಗಿ ಬೆಳಗಿದವಳು.ಶ್ರೀರಾಮನ ಮೂಲ ಸ್ವರೂಪ ಹಾಗೂ ಅವನ ಅವತಾರ ಮಹಿಮೆಯನ್ನು ಅರಿತು ಭಗವಂತನನ್ನು ಅನನ್ಯ ಭಾವದಿಂದ ಸ್ತುತಿಸಿದವಳು. ಹೀಗೆ ಈ ಪಂಚಕನ್ಯೆಯರು ತಮ್ಮಲ್ಲಿ ಪರಮಾತ್ಮ ಪ್ರಕಾಶವನ್ನು ತುಂಬಿಕೊಂಡು ಕನ್ಯಾ ಪದಕ್ಕೆ ಅನ್ವರ್ಥರಾಗಿ ತಾವೂ ಬೆಳಗಿ ಲೋಕವನ್ನೂ ಬೆಳಗಿಸಿದವರು. ಈ ಪಂಚಕನ್ಯೆಯರ ಸ್ಮರಣೆ ನಮ್ಮ ಮನೋ ಬುದ್ಧಿಗಳನ್ನು ಪರಮಾತ್ಮನ ಸ್ಮರಣೆಯಲ್ಲಿರಿಸಿ ನಮ್ಮ ಜೀವನಗಳನ್ನು ಪಾವನಗೊಳಿಸುವುದು ನಿಶ್ಚಿತ.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 4/11/2023 ರಂದು ಪ್ರಕಟವಾಗಿದೆ.

Monday, October 30, 2023

ಮನೋನಿಗ್ರಹವನ್ನು ಸಾಧಿಸಿ ಜೀವನವು ಭಗವನ್ಮಯವಾಗಲು ಮಂಡೋದರಿಯ ಸ್ಮರಣೆ (Manonigrahavannu Sadhisi Jivanavu Bhagavanmayavagalu Mandodariya Smarane)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ಪಂಚಕನ್ಯೆಯರಲ್ಲಿ ಐದನೆಯವಳು ಮಂಡೋದರೀ. ಮಯಾಸುರ ಎಂಬ ದಾನವ ರಾಜನ ಮಗಳು, ರಾಕ್ಷಸ ರಾಜನಾಗಿ, ಲಂಕಾಧಿಪತಿಯಾಗಿದ್ದ ರಾವಣನ ಜ್ಯೇಷ್ಠ ಪತ್ನಿ. ಅಪ್ರತಿಮ ಪರಾಕ್ರಮಿಯಾದ, ದೇವಾಸುರರ ಯುದ್ಧದಲ್ಲಿ ಇಂದ್ರನನ್ನೇ ಜಯಿಸಿ ಇಂದ್ರಜಿತ್ ಎಂಬ ಹೆಸರು ಪಡೆದ ಮೇಘನಾದನ ತಾಯಿ. ಅವಳಿಗೆ ಅತಿಕಾಯ ಮತ್ತು ಅಕ್ಷಯ ಕುಮಾರ ಎಂಬ ಇನ್ನಿಬ್ಬರು ಪರಕ್ರಾಮಿಗಳಾದ ಮಕ್ಕಳೂ ಇದ್ದರು. ಮಂಡೋದರಿಯು ಶಿವನ ವರಪ್ರಸಾದದಿಂದ ಜನಿಸಿದವಳು ಎಂಬ ಉಲ್ಲೇಖವೂ ಇದೆ. ಮಂಡೋದರಿ ಅಸುರನ ಮಗಳಾಗಿದ್ದರೂ, ದುಷ್ಟ ರಾವಣನ ಕೈ ಹಿಡಿದರೂ ಅತ್ಯಂತ ನೀತಿವಂತೆಯಾಗಿ ಬಾಳಿದವಳು. ಅಧರ್ಮಿಗಳ ನಡುವೆ ಇದ್ದರೂ ತಾನು ಅಧರ್ಮವನ್ನು ಅಂಟಿಸಿಕೊಳ್ಳದೇ ಸದಾ ಧರ್ಮಿಷ್ಠಳಾಗಿ ಜೀವನ ನಡೆಸಿದವಳು. ಸುತ್ತಮುತ್ತಲೂ ಧರ್ಮಕ್ಕೆ ವಿರೋಧವಾದ ವಾತಾವರಣ ಇದ್ದರೂ, ತನ್ನ ತನಕ್ಕೆ ಎಂದಿಗೂ ಧಕ್ಕೆ ತಂದುಕೊಳ್ಳದೇ ಕೆಸರಿನಲ್ಲಿ ಕಮಲ ಅರಳುವಂತೆ ಅರಳಿದವಳು. ರಾಕ್ಷಸರ ಮಧ್ಯೆ ಇದ್ದರೂ ದೈವೀಭಾವವನ್ನು ತನ್ನಲ್ಲಿ ಬೆಳಸಿಕೊಂಡು, ಭಗವನ್ಮಯವಾದ ಬಾಳಾಟವನ್ನೇ ನಡೆಸಿ ಬದುಕನ್ನು ಬೆಳಗಿಸಿ ಕೊಂಡವಳು.

ಆಂಜನೇಯನು ಸೀತಾನ್ವೇಷಣೆಗಾಗಿ ಲಂಕೆಯನ್ನು ಪ್ರವೇಶಿಸಿ ಎಲ್ಲೆಡೆಯೂ ಸೀತಾಮಾತೆಯನ್ನು ಹುಡುಕುತ್ತಾ ರಾವಣನ ಅಂತಃಪುರವನ್ನು ಪ್ರವೇಶಿಸುತ್ತಾನೆ. ಅಲ್ಲಿ ದಿವ್ಯವಾದ ಮುಖಕಾಂತಿಯಿಂದ ಬೆಳಗುತ್ತಿರುವ ಮಂಡೋದರಿಯನ್ನು ನೋಡಿ ಸೀತಾಮಾತೆಯನ್ನು ಕಂಡೆ ಎಂಬುದಾಗಿ ಕ್ಷಣಕಾಲ ಭ್ರಮೆಗೆ ಒಳಗಾಗುತ್ತಾನೆ. ಆದರೆ ಸೀತೆಯು ಇಂತಹ ಜಾಗದಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ಮನಗಂಡು ಪುನಃ ಬೇರೆಡೆಗೆ ತೆರಳುತ್ತಾನೆ. ಮಂಡೋದರಿಯು ಸೀತಾಮಾತೆಯಂತೆಯೇ ಅನುಪಮವಾದ,ಅಲೌಕಿಕ ಸೌಂದರ್ಯವನ್ನು ಹೊಂದಿದ್ದವಳು, ಮಹಾ ಪತಿವ್ರತೆ. ಪತಿಯ ಬಗ್ಗೆ ಅತ್ಯಂತ ಅನುರಾಗವನ್ನು ಹೊಂದಿದವಳು. ಪತಿಯಾದ ರಾವಣನು ಕಾಮ ಮತ್ತು ಕ್ರೋಧಕ್ಕೆ ವಶನಾಗಿ, ಅಧರ್ಮದ ಹಾದಿಯನ್ನು ತುಳಿದಾಗ ಅವನಲ್ಲಿ ಧರ್ಮಪ್ರಜ್ಞೆ ಮೂಡಿಸಿ, ಸನ್ಮಾರ್ಗಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಾಳೆ. ಅನೇಕ ಬಾರಿ ಅವನ ದುಶ್ಚರಿತವನ್ನು ನಿವಾರಿಸಲು ಪ್ರಯತ್ನಿಸಿ ವಿಫಲಳಾಗುತ್ತಾಳೆ. ಇಂದ್ರಿಯಗಳಿಗೆ ದಾಸನಾಗಿ ದುಷ್ಕಾಮ ಪ್ರವೃತ್ತನಾದ ರಾವಣನಿಗೆ ಅವಳ ಧರ್ಮಯುಕ್ತವಾದ ಮಾತುಗಳು ರುಚಿಸುವುದಿಲ್ಲ. ಶ್ರೀರಾಮನ ಹಾಗೂ ಸೀತಾಮಾತೆಯ ಮಹಿಮೆಯನ್ನು ಅರಿತವಳಾಗಿದ್ದಳು. ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ಪತಿಯ ಕಾರ್ಯವನ್ನು ಸಂಪೂರ್ಣವಾಗಿ ಧಿಕ್ಕರಿಸುತ್ತಾಳೆ. ಸಮಸ್ತರಿಂದಲೂ ಪೂಜಾರ್ಹಳಾದ ಸೀತೆಯನ್ನು ಅಪಹರಣ ಮಾಡಿ ಸ್ವತಃ ಮೃತ್ಯುವನ್ನು ಬರಮಾಡಿಕೊಳ್ಳುತ್ತಿರುವೆ ಎಂದು ಎಚ್ಚರಿಕೆ ನೀಡುತ್ತಾಳೆ. ಮಹಾಲಕ್ಷ್ಮಿ ಸ್ವರೂಪಳಾದ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿ ಅವನಲ್ಲಿ ಶರಣಾಗತಿಯನ್ನು ಹೊಂದುವುದು ಸರ್ವರೀತಿಯಿಂದಲೂ ಶ್ರೇಯಸ್ಕರ ಎಂಬ ಮಾತನ್ನು ಬಾರಿ ಬಾರಿಗೂ ಹೇಳುತ್ತಾಳೆ. ಆದರೆ ಅಧರ್ಮಿಯಾದ ರಾವಣನು ಶ್ರೀರಾಮನೊಂದಿಗೆ ಯುದ್ಧ ಮಾಡಿ ಅವನ ಬಾಣದಿಂದ ಪ್ರಹರಿಸಲ್ಪಟ್ಟು ಹತನಾಗುತ್ತಾನೆ. ಆಗ ತನ್ನ ಮಾತನ್ನು ನಿರ್ಲಕ್ಷಿಸಿ ರಾಮನೊಂದಿಗೆ ಯುದ್ಧ ಮಾಡಿ ಪ್ರಾಣವನ್ನು ತೊರೆದ ಪತಿಯನ್ನು ಕುರಿತು ದುಃಖತಪ್ತಳಾಗಿ ಅವಳು ಆಡುವ ಮಾತುಗಳಿಂದ ಶ್ರೀರಾಮನ ಬಗ್ಗೆ ಅವಳಿಗಿದ್ದ ಅರಿವು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ಶ್ರೀರಾಮನನ್ನು ಕುರಿತು ಅವಳಾಡುವ ಕೆಲ ಮಾತುಗಳು ರಾಮಾಯಣದಲ್ಲಿ ಹೀಗೆ ಉಲ್ಲೇಖವಾಗಿದೆ- ಶ್ರೀರಾಮನು ಮಹಾಯೋಗಿಯು. ಸನಾತನನಾದ ಪರಮಾತ್ಮನು. ಅವನಿಗೆ ಆದಿ, ಮಧ್ಯ ಅಂತ್ಯಗಳಾವುವೂ ಇಲ್ಲ. ಅವನು ಮಹತೋ ಮಹೀಯನು. ಅಜ್ಞಾನದಿಂದ ಆಚೆ ಇರುವವನು. ಸಮಸ್ತರನ್ನೂ ಧರಿಸಿರುವ ಪರಮೇಶ್ವರನು.ಕೈಗಳಲ್ಲಿ ಶಂಖ ಚಕ್ರ ಗದೆಗಳನ್ನು ಹಿಡಿದಿರುವವನು. ನಿತ್ಯವೂ ಮಹಾಲಕ್ಷ್ಮಿಯೊಡನೆ ವಿಹರಿಸುವವನು. ಸಮಸ್ತಲೋಕಗಳಿಗೂ ಅಧೀಶ್ವರನಾಗಿರುವವನು. ಸತ್ಯ ಪರಾಕ್ರಮಿಯಾದ ಭಗವಾನ್ ಮಹಾವಿಷ್ಣುವೇ ಲೋಕಗಳ ಹಿತಾರ್ಥವಾಗಿ ಸಾಕ್ಷಾತ್ತಾಗಿ ಮನುಷ್ಯ ರೂಪವನ್ನು ಧರಿಸಿ ವಾನರರೂಪಿಗಳಾಗಿರುವ ದೇವತೆಗಳಿಂದ ಪರಿವೃತನಾಗಿ ನಿನ್ನನ್ನು ಸಂಹರಿಸಿದ್ದಾನೆ. ಎಂಬುದಾಗಿ ಮೃತನಾದ ಪತಿಯ ಮುಂದೆ ಶ್ರೀರಾಮನನ್ನು ಸ್ತುತಿಸುತ್ತಾಳೆ. ಪತಿಯ ವಿಯೋಗವಾದಾಗಲೂ ಭಗವಂತನ ಸ್ವರೂಪವನ್ನು ಅರಿತು, ಈ ರೀತಿಯಾಗಿ ಭಾವಿಸಿ ಸ್ತುತಿಸುವುದಕ್ಕೆ ಜ್ಞಾನಿಗಳಿಂದ ಅಥವಾ ಭಕ್ತ ಶ್ರೇಷ್ಠರಿಂದ ಮಾತ್ರ ಸಾಧ್ಯ. ಅಂತಹವರ ಸಾಲಿಗೆ ಮಂಡೋದರಿಯೂ ಸೇರುತ್ತಾಳೆ. ಹಾಗಾಗಿಯೇ ಮಂಡೋದರಿಯು ಪೂಜ್ಯಳು ಮತ್ತು ಪ್ರಾತಃ ಸ್ಮರಣೀಯಳು.

ಮಂಡೋದರಿಯ ಮನೋನಿಗ್ರಹ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ನಮ್ಮ ಸುತ್ತಲೂ ನಮ್ಮ ಮನಸ್ಸಿಗೆ ಅನುಕೂಲವಾದ ವಾತಾವರಣವಿದ್ದಾಗ ನಮ್ಮ ಅಂತರಂಗದ ಹಾಗೂ ಬಾಹ್ಯವಾದ ಸಾಧನೆಗೆ ನಮ್ಮನ್ನು ತೊಡಗಿಸಿಕೊಳ್ಳಲು ಸುಲಭವಾಗುತ್ತದೆ. ಅದೇ ಸಂಪೂರ್ಣವಾಗಿ ವಿರುದ್ಧವಾದ ವಾತಾವರಣವಿದ್ದರೆ ಆ ಸಾಧನೆಗಳಿಂದ ವಿಮುಖರಾಗುವ ಸಂಭವವೇ ಅಧಿಕವಾಗಿರುತ್ತದೆ.ಮಂಡೋದರಿಯು ತಮೋಗುಣ ಪೂರಿತರಾದ ರಾಕ್ಷಸರ ನಡುವೆ ಇದ್ದರೂ ಸಾತ್ವಿಕಳಾಗಿ ಬಾಳಿದವಳು. ಆ ಸಾತ್ವಿಕತೆಯನ್ನು ಉಳಿಸಿಕೊಳ್ಳಲು ನಿತ್ಯವೂ ಭಗವತ್ ಚಿಂತನೆ ಹಾಗೂ ಆರಾಧನೆಗಳ ಮೂಲಕ ಪರಿಶ್ರಮ ಪಡಲೇಬೇಕಾಗುತ್ತದೆ.ಅತ್ಯಂತ ದುಷ್ಟನಾಗಿ, ಸದಾ ಭಗವದ್ ವಿರೋಧಿ ಕಾರ್ಯಗಳನ್ನೇ ಮಾಡುವಂತಹ ಪತಿಯನ್ನು ಪಡೆದರೂ, ಆ ಪತಿಯಲ್ಲಿಯೇ ಎಲ್ಲೆಡೆಯಲ್ಲಿಯೂ ಬೆಳಗುವ ಪರಮಾತ್ಮನನ್ನು ಕಂಡು ಆರಾಧಿಸಿ ಮಹಾಪತಿವ್ರತೆ ಎನಿಸಿಕೊಳ್ಳುತ್ತಾಳೆ. ಉತ್ತಮ ಗುಣವಂತನಾದ ಪತಿಯ ಸೇವೆಯನ್ನು ಸಕಲ ರೀತಿಯಿಂದಲೂ ಮಾಡಿ ಪಾತಿವ್ರತ್ಯವನ್ನು ಸಂಪಾದಿಸಿಕೊಳ್ಳುವುದಕ್ಕಿಂತ, ದುಷ್ಟಗುಣಗಳಿಂದ ಕೂಡಿದ ಪತಿಯನ್ನು ಪಡೆದಾಗ ಪಾತಿವ್ರತ್ಯವನ್ನು ಸಂಪಾದಿಸಿಕೊಳ್ಳುವುದು ಅತ್ಯಂತ ಕಷ್ಟಸಾಧ್ಯ. ಆದರೆ ಮಂಡೋದರಿಯು ಅದನ್ನು ಸಾಧಿಸಿದ್ದಳು.

ಸ್ತ್ರೀಯರಿಗೆ ಪಾತಿವ್ರತ್ಯಕ್ಕಿಂತ ಮಿಗಿಲಾದ ತಪಸ್ಸು ಇನ್ನೊಂದಿಲ್ಲ ಎಂಬುದನ್ನು ಶಾಸ್ತ್ರಗಳು ಕೊಂಡಾಡುತ್ತವೆ. ಏಕೆಂದರೆ ಪಂಚಾಗ್ನಿ ಮುಂತಾದ ಮಹಾತಪಸ್ಸುಗಳಿಂದ ಸಾಧಿಸಬಹುದಾದ ಮನೋನಿಗ್ರಹವನ್ನು, ಪಾತಿವ್ರತ್ಯದಿಂದ ಸ್ತ್ರೀಯರು ಸಂಸಾರದಲ್ಲಿದ್ದುಕೊಂಡೇ ಸಾಧಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಅಂತಹ ತಪಸ್ಸನ್ನು ಅವಳು ಸಾಧಿಸಿದ್ದರಿಂದ ಶ್ರೀರಾಮನ ಗುಣಗಳನ್ನು, ಅವನ ಸ್ವರೂಪವನ್ನು ಅವಳಿಂದ ಅರಿಯಲು ಸಾಧ್ಯವಾಯಿತು. ಅಂತಹ ಮಂಡೋದರಿಯ ಸ್ಮರಣೆಯಿಂದ ನಮ್ಮ ಪಾಪಗಳೂ ದೂರವಾಗುತ್ತವೆ. ಅವಳಂತೆಯೇ ಮನೋನಿಗ್ರಹವನ್ನು ಸಾಧಿಸಿ ಜೀವನವನ್ನು ಭಗವನ್ಮಯವನ್ನಾಗಿ ಮಾಡಿಕೊಳ್ಳುವುದಕ್ಕೆ ಮಂಡೋದರಿಯ ಸ್ಮರಣೆ ಅತ್ಯಂತ ಸಹಕಾರಿ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 7/10/2023 ರಂದು ಪ್ರಕಟವಾಗಿದೆ.

Sunday, October 22, 2023

ಪರಮಾತ್ಮನ ಸ್ವರೂಪವನ್ನು ಅರಿತ ಶುದ್ಧಪ್ರಕೃತೆ ತಾರಾ (Paramatmana Svarupavannu Arita Suddhaprakr̥te Tara)

 

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ತಾರಾ ವಾನರರ ರಾಜ ವಾಲಿಯ ಹೆಂಡತಿ, ಸುಷೇಣನೆಂಬ ವಾನರಶ್ರೇಷ್ಠನ ಮಗಳು,ವಾನರರಲ್ಲಿ ಪರಕ್ರಮಿಯಾದ ಅಂಗದನ ತಾಯಿ. ಶ್ರೀಮದ್ ರಾಮಾಯಣದಲ್ಲಿ ವಾಲಿಯ ಕಥೆ ಅತ್ಯಂತ ಪ್ರಸಿದ್ಧವಾಗಿದೆ. ಇಂದ್ರನ ಪುತ್ರನಾದ ವಾಲಿಯು ಮಹಾ ಬಲಿಷ್ಠ. ಅವನು ತನ್ನ ತಮ್ಮನಾದ ಸುಗ್ರೀವನ ಮೇಲಿನ ತಪ್ಪು ಗ್ರಹಿಕೆಯಿಂದ ಅವನನ್ನು ಸದಾಕಾಲ ದ್ವೇಷಿಸುತ್ತಾ, ಸಂಹರಿಸಲು ಯತ್ನಿಸುತಿದ್ದ. ಸುಗ್ರೀವನ ಎಲ್ಲಾ ಸಂಪತ್ತನ್ನೂ , ಕಡೆಗೆ ಅವನ ಪತ್ನಿಯಾದ ರುಮೆಯನ್ನೂ ಕೂಡ ಬಲವಂತವಾಗಿ ಅಪಹರಿಸಿದ್ದ. ಸುಗ್ರೀವನು ವಾಲಿಯ ಕ್ರೋಧಕ್ಕೆ ಹೆದರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಋಷ್ಯಮೂಕ ಎಂಬ ಪರ್ವತದಲ್ಲಿ ವಾಸವಾಗಿದ್ದ. ಆ  ಪ್ರದೇಶಕ್ಕೆ ಋಷಿ ಶಾಪದ ಕಾರಣದಿಂದ ವಾಲಿಯ ಆಗಮನಕ್ಕೆ ನಿಷೇಧವಿತ್ತು. ವಾಲಿಯ ಪತ್ನಿ ತಾರಾ ನೀತಿವಂತೆ, ಧರ್ಮಜ್ಞೆ. ಅವಳು ಅನೇಕ ಬಾರಿ ಹಿತವಚನಗಳ ಮೂಲಕ ಪತಿಯ ತಪ್ಪು ನಡುವಳಿಕೆಗಳನ್ನು ತಿದ್ದಲು ಪ್ರಯತ್ನಿಸುತ್ತಲೇ ಇದ್ದಳು. ಆದರೂ ವಾಲಿಯು ಕ್ರೋಧದಿಂದ ಅಂಧನಾಗಿ ತನ್ನ ಹಠವನ್ನು ಮುಂದುವರಿಸಿ ಸುಗ್ರೀವನಿಗೆ ತೊಂದರೆ ಕೊಡುತ್ತಲೇ ಇದ್ದ. ಅಂತಹ ಸಂದರ್ಭದಲ್ಲಿ ಋಷ್ಯಮೂಕ ಪರ್ವತಕ್ಕೆ ಶ್ರೀರಾಮ ಹಾಗೂ ಲಕ್ಷ್ಮಣರ ಆಗಮನವಾಗುತ್ತದೆ. ಶ್ರೀರಾಮ ಹಾಗೂ ಸುಗ್ರೀವರ ಭೇಟಿಯಾಗುತ್ತದೆ. ಸುಗ್ರೀವನು ವಾಲಿಯ ದುಷ್ಟತನವನ್ನು ವಿವರಿಸಿ ವಾಲಿಯ ಸಂಹಾರಕ್ಕೆ ಸಹಾಯ ಮಾಡುವಂತೆ ಶ್ರೀರಾಮನಲ್ಲಿ ವಿನಂತಿಸಿಕೊಳ್ಳುತ್ತಾನೆ. ಅಂತೆಯೇ ಶ್ರೀರಾಮನೂ ಕೂಡ ಅಧರ್ಮಿಯಾದ ವಾಲಿಯನ್ನು ಸಂಹರಿಸಲು ಸಂಕಲ್ಪಿಸುತ್ತಾನೆ.


 ವಾಲಿ ಮತ್ತು ಸುಗ್ರೀವರ ಯುದ್ಧದಲ್ಲಿ ಶ್ರೀರಾಮನ ಬಾಣದ ಪ್ರಹಾರಕ್ಕೆ ತುತ್ತಾಗಿ ಮರಣಶಯ್ಯೆಯಲ್ಲಿರುವ ವಾಲಿಯನ್ನು ಕಂಡು ತಾರೆಯು ಅತ್ಯಂತ ದುಃಖಪಡುತ್ತಾಳೆ. ಶ್ರೀರಾಮನನ್ನು ಕುರಿತು ಅನೇಕ ವಿಧವಾಗಿ ದುಃಖಭರಿತವಾದ ಮಾತುಗಳನ್ನು ಆಡುತ್ತಾಳೆ. ಅವಳ ಮಾತುಗಳಲ್ಲಿ ಪತಿಯ ಬಗ್ಗೆ ಅವಳಿಗಿರುವ ಅನುರಾಗ, ಶ್ರೀರಾಮನ ಮೇಲಿನ ಭಕ್ತಿ ಎಲ್ಲವೂ ವ್ಯಕ್ತವಾಗುತ್ತದೆ. ಶಾಸ್ತ್ರವಾಕ್ಯಗಳನ್ನು ಒಳಗೊಂಡಂತಹ ಅವಳ ಮಾತು ಅವಳಲ್ಲಿದ್ದ ಶಾಸ್ತ್ರ ಜ್ಞಾನವನ್ನು, ಬುದ್ಧಿ ಪರಿಪಕ್ವತೆಯನ್ನು ತಿಳಿಸುತ್ತದೆ. ಶ್ರೀರಾಮನ ಸಂಪೂರ್ಣ ಜೀವನ ಚರಿತ್ರೆಯ  ಹಾಗೂ ಅವನ ಮೂಲ ಸ್ವರೂಪದ ಅರಿವು ಅವಳಿಗೆ ಇತ್ತು ಎಂಬುದು ಅವಳ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.


 ಪತಿಯಾದ ವಾಲಿಯು ಮಧ್ಯರಾತ್ರಿಯಲ್ಲಿ ಸುಗ್ರೀವನ ಯುದ್ಧದ ಕರೆಗೆ ಓಗೊಟ್ಟು ಆವೇಶ ಭರಿತನಾಗಿ ಯುದ್ಧಕ್ಕೆ ಸಿದ್ಧನಾಗಿ ನಿಂತಾಗ ಇದು ಯುದ್ಧಕ್ಕೆ ಹೋಗುವ ಸಮಯವಲ್ಲ, ಸುಗ್ರೀವನನ್ನು ಮೊದಲಿನಂತೆ ತಿಳಿಯಬೇಡ ಅವನಿಗೆ ಈಗ ಶ್ರೀರಾಮನೆಂಬ ಮಹಾಪುರುಷನ ಬೆಂಬಲ ದೊರಕಿದೆ. ನೀನು ನಿನ್ನ ತಮ್ಮನೊಂದಿಗಿನ ವೈರವನ್ನು ತ್ಯಜಿಸಿ ಅವನೊಂದಿಗೆ ಮೈತ್ರಿಯನ್ನು ಸಂಪಾದಿಸಿಕೋ ಅದು ನಮ್ಮ ಇಡೀ ವಾನರ ಸಂಕುಲಕ್ಕೆ ಹಿತಕರವಾದದ್ದು ಎಂಬ ಯುಕ್ತಿಯುಕ್ತವಾದ ಮಾತುಗಳನ್ನಾಡುತ್ತಾಳೆ. ಆದರೆ ವಾಲಿಯ ಅಂತ್ಯ ಸಮೀಪಿಸಿರುವುದರಿಂದ ತಾರೆಯ ಸಮಯೋಚಿತವಾದ ಮಾತುಗಳು ಅವನಿಗೆ ಹಿಡಿಸುವುದಿಲ್ಲ.


 ಶ್ರೀರಾಮನ ಬಾಣದ ಪ್ರಹಾರಕ್ಕೆ ತುತ್ತಾಗಿ ಮೂರ್ಛೆಗೊಂಡಿರುವ ಪತಿಯನ್ನು ಕಂಡು ಸಾಧ್ವಿಯಾದ ತಾರೆಯು ಆರ್ತವಾಗಿ ವಿಲಪಿಸುತ್ತಾಳೆ. ಪತಿಯ ಶೌರ್ಯ ಪರಾಕ್ರಮಗಳನ್ನು ಹಾಗೂ ಇಂದು ಅವನಿಗೆ ಬಂದಿರುವ ದೈನ್ಯಸ್ಥಿತಿಯನ್ನು ನೆನೆದು ಅತಿಯಾಗಿ ಶೋಕಿಸುತ್ತಾಳೆ. ಪತಿಯೊಡನೆ ಸಹಗಮನ ಮಾಡಲು ಸಿದ್ಧಳಾಗುತ್ತಾಳೆ. ಆಗ ಆಂಜನೇಯನೇಯನು ಅವಳನ್ನು ಕುರಿತು ಸಾಂತ್ವನದ ಮಾತುಗಳನ್ನು ಹೇಳಿ, ಪುತ್ರನಾದ ಅಂಗದನನ್ನು ನೋಡಿಕೊಳ್ಳುವ ಕರ್ತವ್ಯವನ್ನು ನೆನಪಿಸುತ್ತಾನೆ.


 ಅಂತ್ಯಕಾಲ ಸಮೀಪಸುತ್ತಿರುವ ವಾಲಿಗೆ ಶ್ರೀರಾಮನ ದಯೆಯಿಂದ ಸುಬುದ್ಧಿ ಉಂಟಾಗುತ್ತದೆ. ಸುಗ್ರೀವನ ಮೇಲೆ ತಾನು ಎಸಗಿದ ಅಪರಾಧ ತಪ್ಪು ಎಂಬ ಭಾವನೆ ಉಂಟಾಗುತ್ತದೆ. ಸುಗ್ರೀವನನ್ನು ಕರೆದು ಸ್ನೇಹಯುಕ್ತವಾದ ಮಾತುಗಳನ್ನು ಆಡುತ್ತಾನೆ. ತಾರೆ ಹಾಗೂ ಅಂಗದನ ರಕ್ಷಣೆಯ ಜವಾಬ್ದಾರಿಯನ್ನು ವಹಿಸುತ್ತಾನೆ. ತಾರೆಯ ಬಗ್ಗೆ ವಾಲಿಯು ಆಡುವ ಮಾತುಗಳು ಅವಳ ಶ್ರೇಷ್ಠತೆಯನ್ನು ನಮಗೆ ತಿಳಿಸುತ್ತದೆ.


ವಾಲಿಯು ತಾರೆಯನ್ನು ಕುರಿತು ಆಡಿದ ಕೆಲವೊಂದು ಮಾತುಗಳು ಹೀಗಿವೆ, ತಾರೆಯು ಸಾಮಾನ್ಯರಿಂದ ತಿಳಿಯಲು ಅಸಾಧ್ಯವಾದ ಸೂಕ್ಷ್ಮವಾದ ವಿಷಯಗಳನ್ನು ನಿರ್ಣಯಿಸಿ ಹೇಳುವುದರಲ್ಲಿಯೂ, ವಿಧ ವಿಧವಾದ ಉತ್ಪಾತಗಳ ಫಲಾಫಲಗಳನ್ನು ತಿಳಿದು ಹೇಳುವುದರಲ್ಲಿಯೂ ವಿಶೇಷವಾದ ತಿಳುವಳಿಕೆಯನ್ನು ಹೊಂದಿದ್ದಾಳೆ. ಅವಳು ಯೋಚಿಸಿ ನಿರ್ಧಾರಪೂರ್ವಕವಾಗಿ ಹೇಳುವ ವಿಷಯವು ಯಾವ ರೀತಿಯಲ್ಲಿಯೂ ವತ್ಯಾಸವಾಗುವುದೇ ಇಲ್ಲ. ವಾಲಿಯ ಈ ಮಾತುಗಳಿಂದ ತಾರೆಯ ವ್ಯಕ್ತಿತ್ವದ ಔನ್ನತ್ಯ ತಿಳಿಯುತ್ತದೆ. ಅಂದಿನ ಕಾಲದಲ್ಲಿ ಶ್ರೀರಾಮನ ಸ್ವಸ್ವರೂಪದ ಬಗ್ಗೆ ಅರಿವನ್ನು ಹೊಂದಿದ್ದ ಕೆಲವೇ ಕೆಲವರಲ್ಲಿ ತಾರೆಯೂ ಒಬ್ಬಳು ಎಂಬುದನ್ನು ರಾಮಾಯಣವು ತಿಳಿಸುತ್ತದೆ. ವಾಲಿಯ ಮರಣದ ನಂತರ ಶೋಕಮಗ್ನಳಾಗಿ ಪ್ರಾಣತ್ಯಾಗ ಮಾಡಲು ನಿರ್ಧರಿಸಿದ ತಾರೆಯನ್ನು ಶ್ರೀರಾಮನು ಹಿತಕರವಾದ ಮಾತುಗಳಿಂದ ಸಾಂತ್ವನ ಪಡಿಸುತ್ತಾನೆ. ವಾಲಿಯ ನಿಧನದ ನಂತರ ವಾನರ ಕುಲದಲ್ಲಿ ಅಂದಿನ ವಾನರರ ಸಾಮಾಜಿಕ ನಿಯಮಕ್ಕೆ ಅನುಗುಣವಾಗಿ ಸುಗ್ರೀವನನ್ನು ಮದುವೆಯಾಗಿ ಅವನ ರಕ್ಷಣೆಯಲ್ಲಿ ಜೀವನ ನಡೆಸುತ್ತಾಳೆ.


ಶ್ರೀರಾಮನ ಅವತಾರ ಕಾಲದಲ್ಲಿ ಅವನ ಸ್ವರೂಪವನ್ನು ಅರಿತು ಅದರ ಬಗ್ಗೆ ಪತಿಗೆ ಅರಿವನ್ನು ಮೂಡಿಸಲು ಪ್ರಯತ್ನಿಸಿದ ಮಹಾತ್ಮಳು ತಾರಾ. ಪರಮಾತ್ಮನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಕೃತಿಶುದ್ಧತೆ, ತಪಸ್ಯೆಯ ದೃಷ್ಟಿ ಬೇಕು. ಅವುಗಳನ್ನು ಮೌನವಾಗಿ ಸಂಪಾದಿಸಿಕೊಂಡಿದ್ದಂತಹ ಪವಿತ್ರಾತ್ಮಳು ತಾರಾ. ಅಂತಹ ತಾರೆಯನ್ನು ಅವಳ ಸದ್ಗುಣಗಳೊಂದಿಗೆ ಸ್ಮರಣೆ ಮಾಡಿಕೊಂಡಾಗ ನಮ್ಮ ಪಾಪಗಳೂ ನಾಶವಾಗಿ ಜೀವನ ಪವಿತ್ರವಾಗುವುದರಲ್ಲಿ ಸಂದೇಹವಿಲ್ಲ.


ಸೂಚನೆ : 21/10/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Tuesday, October 10, 2023

ಆತ್ಮದೀಪ್ತಿಯ ಪ್ರಕಾಶದಿಂದ ಬೆಳಗಿದ ಸೀತಾಮಾತೆ (Atmadiptiya Prakasadinda Belagida Sitamate)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ಪಂಚಕನ್ಯೆಯರಲ್ಲಿ ಒಬ್ಬಳಾಗಿ ಪ್ರಾತ:ಸ್ಮರಣೀಯಳಾದ ಸೀತಾಮಾತೆಯ ಬಗ್ಗೆ ಅನುಸಂಧಾನ ಮಾಡೋಣ. ಮಹಾಕವಿ ಕಾಳಿದಾಸನು ರಘುವಂಶವೆಂಬ ಮಹಾಕಾವ್ಯವನ್ನು ರಚಿಸುವ ಮೊದಲು ವಿನಯದಿಂದ ಹೀಗೆ ಹೇಳುತ್ತಾನೆ, "ಮಹಾಸಮುದ್ರವನ್ನು ಒಂದು ಸಣ್ಣ ದೋಣಿಯಿಂದ ದಾಟಲು ಪ್ರಯತ್ನಿಸುತ್ತಿದ್ದೇನೆ. ಮಹಾಸಮುದ್ರವನ್ನು ದಾಟಲು ದೋಣಿಯು ಹೇಗೆ ಅಸಮರ್ಥವೋ ಹಾಗೆಯೇ ರಘುವಂಶದ ಚರಿತೆಯನ್ನು ಹೇಳುವ ಪ್ರಯತ್ನವೂ ನನ್ನ ಸಾಮರ್ಥ್ಯಕ್ಕೆ ಮೀರಿದ ವಿಷಯ. ಆದರೂ ಚಾಪಲ್ಯದಿಂದ ನನ್ನ ಪಾವಿತ್ರ್ಯಕ್ಕಾಗಿ ಹೇಳಲು ಹೊರಟಿದ್ದೇನೆ" ಎಂದು.

ಹಾಗೆಯೇ ಸೀತಾಮಾತೆಯ ಬಗ್ಗೆ ಹೇಳಲು ಪ್ರಯತ್ನಿಸುವುದೂ ಕೂಡ ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷಯ. ಅವಳು ಪರಮಪುರುಷನ ಶಕ್ತಿಸ್ವರೂಪಿಣಿಯಾಗಿದ್ದು, ಅವನ ಆಶಯಕ್ಕೆ ಅನುಗುಣವಾಗಿ ಸೃಷ್ಟಿಯನ್ನು ಬೆಳೆಸುವ ಪ್ರಕೃತಿಸ್ವರೂಪಿಣಿ. ಭಗವಂತನು ಲೋಕಕಲ್ಯಾಣಕ್ಕಾಗಿ ಶ್ರೀರಾಮನಾಗಿ ಅವತರಿಸಿದಾಗ ಭಗವತಿಯೂ ಕೂಡ ಅವನ ಸತ್ಯ ಸಂಕಲ್ಪಕ್ಕೆ ಸಹಕಾರಿಣಿಯಾಗಿದ್ದು ಭುವಿಗೆ ಇಳಿದು ಬಂದು ಸೀತೆಯಾಗಿ, ಸಮಸ್ತ ಸ್ತ್ರೀ ಸಂಕುಲಕ್ಕೆ ಮಾತ್ರವಲ್ಲದೇ ಮಾನವತೆಗೇ ಆದರ್ಶಪ್ರಾಯಳಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತಾಳೆ. 

ಅವಳ ಜೀವನ ಚಿಂತನೆಯೇ ನಮ್ಮ ಜೀವನವನ್ನು ಪಾವನವಾಗಿಸುತ್ತದೆ. ಮಿಥಿಲಾಧಿಪತಿಯಾದ ಜನಕಮಹಾರಾಜನು ಒಮ್ಮೆ ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಭೂಮಿಯನ್ನು ಬೇಧಿಸಿಕೊಂಡು ಬಂದ ಹೆಣ್ಣುಮಗುವನ್ನು ನೋಡಿ ವಿಸ್ಮಿತನಾಗುತ್ತಾನೆ. ವಾತ್ಸಲ್ಯಭರಿತನಾಗಿ ಆ ಮಗುವನ್ನು ಎತ್ತಿಕೊಂಡು ನನ್ನ ಮಗಳು ಎಂಬುದಾಗಿ ಉದ್ಘೋಷಿಸುತ್ತಾನೆ. ಅದೇ ಸಮಯದಲ್ಲಿ ಅವನ ಮಾತನ್ನೇ ಪುಷ್ಟೀಕರಿಸುವಂತಹ ಅಶರೀರವಾಣಿಯು ಮೊಳಗುತ್ತದೆ. ಸಾಕ್ಷಾತ್ ಮಹಾಲಕ್ಷ್ಮಿಯನ್ನೇ ಮಗಳಾಗಿ ಪಡೆದ ಕಾರಣ ಅವನ ರಾಜ್ಯವು ಸಕಲವಿಧವಾದ ಸಂಪತ್ತುಗಳಿಂದ ತುಂಬಿ ಶೋಭಿಸುತ್ತದೆ.

ಅನುಪಮ ಸ್ತ್ರೀರತ್ನಳಾದ, ದಿವ್ಯ ತೇಜಸ್ಸಿನಿಂದ ಬೆಳಗುತ್ತಿರುವ ಸೀತೆಗೆ ವಿವಾಹಕಾಲ ಸನ್ನಿಹಿತವಾಗುತ್ತದೆ. ಆಗ ಜನಕಮಹಾರಾಜನು ತನ್ನ ಮಗಳು ಮಹಾಪುರುಷನಿಂದ ಮಾತ್ರವೇ ವರಿಸಲ್ಪಡತಕ್ಕವಳು ಎಂಬುದನ್ನು ಅರಿತು ಅದಕ್ಕೆ ಅನುಗುಣವಾಗಿ ಸ್ವಯಂವರವನ್ನು ಯೋಜಿಸುತ್ತಾನೆ. ಅನೇಕ ರಾಜ ಮಹಾರಾಜರಿಂದ ಕಿಂಚಿತ್ತೂ ಅಲುಗಾಡಿಸಲು ಸಾಧ್ಯವಾಗದ ದೈವದತ್ತವಾದ ಶಿವಧನುಸ್ಸನ್ನು ಶ್ರೀರಾಮಚಂದ್ರನು ಲೀಲಾಜಾಲವಾಗಿ ಎತ್ತಿ ಭೇಧಿಸಿ ಸ್ವಯಂವರದಲ್ಲಿ ತನ್ನ ಆತ್ಮಶ್ರೀಯಾದಂತಹ ಸೀತೆಯನ್ನು ವರಿಸುತ್ತಾನೆ. ಲೋಕ ಮಂಗಳಕರವಾದ ಸೀತಾ - ರಾಮರ ಕಲ್ಯಾಣ ಸಂಪನ್ನವಾಗುತ್ತದೆ. ಸೀತೆಯು ತನ್ನ ಪತಿಯೊಂದಿಗೆ, ಪರಿಜನರೊಂದಿಗೆ ಅಯೋಧ್ಯೆಯಲ್ಲಿ ಸಂತೋಷದಿಂದ ಇರುತ್ತಾಳೆ. ಸಹಜವಾಗಿಯೇ ತನ್ನಲ್ಲಿ ನೆಲೆಯೂರಿರುವ ಉತ್ತಮ ಗುಣಗಳಿಂದ ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರಳಾಗಿರುತ್ತಾಳೆ. ಅಂತಹ ಸಮಯದಲ್ಲಿ ಊಹಿಸಲೂ ಸಾಧ್ಯವಾಗದಂತಹ ಅತ್ಯಂತ ಕ್ಲಿಷ್ಟಕರವಾದ ಸಂದರ್ಭವೊಂದು ಬರುತ್ತದೆ. ಪತಿಗೆ ಪಟ್ಟಾಭಿಷೇಕ, ತಾನು ಮಹಾರಾಣಿಯ ಸ್ಥಾನವನ್ನು ಅಲಂಕರಿಸಬೇಕು, ಎಂಬುದಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಪತಿಯು ರಾಜ್ಯವನ್ನು ತೊರೆದು ವನವಾಸಕ್ಕೆ ಹೊರಡಬೇಕಾಗುತ್ತದೆ. ಆಗ ಕಿಂಚಿತ್ತೂ ಮನಸ್ಸಿನ ಸ್ಥೈರ್ಯ ಕಳೆದುಕೊಳ್ಳದೇ ಶ್ರೀರಾಮನಿಗೆ ತಕ್ಕ ಪತ್ನಿಯಾಗಿ, ಪತಿಯ ಮಾರ್ಗವನ್ನೇ ಅನುಸರಿಸಿ ಹೊರಡುತ್ತಾಳೆ.

ಸುಕುಮಾರಿಯಾಗಿ ಅರಮನೆಯ ವಾಸದಲ್ಲಿದ್ದವಳು ವನವಾಸದ ಕ್ಲೇಶಗಳನ್ನೆಲ್ಲಾ ಸಹಿಸಿಕೊಳ್ಳುತ್ತಾಳೆ. ಪತಿಯ ಸೇವೆಯನ್ನು ಮಾಡುತ್ತಾ ಹಾಗೂ ತಮ್ಮ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿ ಬಂದಂತಹ ಲಕ್ಷ್ಮಣನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ವನವಾಸದಲ್ಲಿ ಸಂತೋಷವಾಗಿಯೇ ಕಾಲವನ್ನು ಕಳೆಯುತ್ತಾಳೆ. ಹಾಗಿರುವಾಗ ದುಷ್ಟ ರಾವಣನ ಆಗಮನವಾಗಿ ಅವನಿಂದ ಅಪಹರಿಸಲ್ಪಟ್ಟು ಲಂಕೆಯ ಅಶೋಕವನದಲ್ಲಿ ಪತಿ ವಿರಹದ ಶೋಕವನ್ನು, ರಾವಣನ ಕ್ರೌರ್ಯವನ್ನು ಅನುಕ್ಷಣವೂ ಅನುಭವಿಸುತ್ತಾ ಕಾಲ ಕಳೆಯಬೇಕಾದಂತಹ ಪ್ರಸಂಗ ಬರುತ್ತದೆ. ರಾವಣನು ಅವಳನ್ನು ಮೋಹಗೊಳಿಸಲು ಒಡ್ಡಿದ ಯಾವ ಪ್ರಲೋಭನೆಗಾಗಲೀ, ಬೆದರಿಸಲು ಮಾಡಿದ ಕುತಂತ್ರಗಳಿಗಾಗಲೀ, ಧೃತಿಗೆಡದೇ ಅನವರತವೂ ಪತಿಯನ್ನೇ ನೆನೆಯುತ್ತಾ ಅವನ ಆಗಮನದ ನಿರೀಕ್ಷೆಯಲ್ಲಿಯೇ ಪ್ರತಿಕ್ಷಣವನ್ನೂ ಕಳೆಯುತ್ತಿರುತ್ತಾಳೆ. ಕ್ಷಣಮಾತ್ರದಲ್ಲಿ ರಾವಣನನ್ನು ದಹಿಸುವಂತಹ ಪಾತಿವ್ರತ್ಯ,ತಪ:ಶಕ್ತಿ ಅವಳಲ್ಲಿ ಇದ್ದರೂ ಅದನ್ನು ತನ್ನಲ್ಲೇ ಅಡಗಿಸಿಟ್ಟುಕೊಂಡು, ರಾವಣ ಸಂಹಾರದ ಕೀರ್ತಿ ಪತಿಯಾದ ಶ್ರೀರಾಮನಿಗೇ ಸಲ್ಲಬೇಕು ಎಂಬ ಆಶಯದಿಂದ ಸಹನೆಯಿಂದ ಕಾಯುತ್ತಾಳೆ. ರಾವಣ ಸಂಹಾರದ ನಂತರ, ಸೀತೆ ಪರಮ ಪಾವನೆ ಎಂಬುದಾಗಿ ಶ್ರೀರಾಮನ ಅಂತರಾತ್ಮಕ್ಕೆ ತಿಳಿದಿದ್ದರೂ ಸಹ ಅವನು ಆದರ್ಶ ರಾಜನೂ ಆಗಿದ್ದರಿಂದ ,ಅವಳನ್ನು ಆ ಕ್ಷಣದಲ್ಲಿ ಅವನಿಂದ ಸ್ವೀಕರಿದೇ ಅವಳ ಪಾವಿತ್ರ್ಯದ ಪರೀಕ್ಷೆಯನ್ನು ನಿರೀಕ್ಷಿಸಬೇಕಾಗುತ್ತದೆ. ಪತಿಯ ಮನೋರಥವನ್ನು ಅರಿತ ಸೀತೆ ಲಕ್ಷ್ಮಣನಿಗೆ ಅಗ್ನಿಯನ್ನು ಸಿದ್ಧಪಡಿಸಲು ಹೇಳುತ್ತಾಳೆ. ಕಾಯಾ, ವಾಚಾ, ಮನಸಾ ಸದಾಕಾಲ ನಾನು ಧರ್ಮಜ್ಞನಾದ ನನ್ನ ಪತಿಯನ್ನೇ ಅನುಸರಿಸಿದ್ದಾದರೆ ನೀನು ನನ್ನನ್ನು ಕಾಪಾಡು ಎಂಬುದಾಗಿ ಅಗ್ನಿದೇವನನ್ನು ಪ್ರಾರ್ಥಿಸಿ ಅಗ್ನಿಯನ್ನು ಪ್ರವೇಶಿಸುತ್ತಾಳೆ. ಸೀತಾಮಾತೆಯ ಸಂಸರ್ಗದಿಂದ ಅಗ್ನಿದೇವನು ಇನ್ನಷ್ಟು ಪವಿತ್ರನಾಗುತ್ತಾನೆ. ಅವನು ಸಮಸ್ತ ದೇವತೆಗಳ ಹಾಗೂ ಅಲ್ಲಿ ನೆರೆದವರ ಸಮ್ಮುಖದಲ್ಲಿ ಸೀತೆಯನ್ನು ಪರಮ ಪಾವನೆ ಎಂದು ಘೋಷಿಸಿ ರಾಮನಿಗೆ ಒಪ್ಪಿಸುತ್ತಾನೆ.

ಆನಂತರ ಶ್ರೀರಾಮನ ಪಟ್ಟದ ರಾಣಿಯಾಗುತ್ತಾಳೆ. ಆದರೆ ಕಷ್ಟಗಳ ಪರಂಪರೆ ಮುಂದುವರೆಯುತ್ತಲೇ ಹೋಗುತ್ತದೆ. ಮೂಢಮತಿಯುಳ್ಳ ಅಯೋಧ್ಯೆಯ ಕೆಲ ಪ್ರಜೆಗಳ ಸಲುವಾಗಿ, ಅಯೋಧ್ಯೆಯ ರಾಜನಾಗಿ ರಾಮನು ಸೀತೆಯನ್ನು ಪರಿತ್ಯಾಗ ಮಾಡುವಂತಹ ಕಠೋರ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಮಹಾಮಾತೆಯ ಸಾನಿಧ್ಯದಲ್ಲಿ ಇರುವ ಸೌಭಾಗ್ಯ ವನ್ನು ಅಯೋಧ್ಯೆಯ ಪ್ರಜೆಗಳು ಕಳೆದುಕೊಳ್ಳುತ್ತಾರೆ. ಆದರೂ ವಾತ್ಸಲ್ಯಮಯಿಯಾದ ಸೀತೆ ಅವರ ಮೇಲೆ ಕ್ರೋಧ ದೃಷ್ಟಿಯನ್ನು ಬೀರುವುದಿಲ್ಲ, ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ, ಜಗನ್ಮಾತೆಯಲ್ಲವೇ ಅವಳು, ಅವಳ ಮಮತೆಗೆ ಎಣೆ ಎಲ್ಲಿದೆ? ವಾಲ್ಮೀಕಿಗಳ ಆಶ್ರಮದಲ್ಲಿ ಕುಶ ಲವರನ್ನು ಸಂಸ್ಕಾರದಿಂದ ಬೆಳೆಸಿ ಬ್ರಹ್ಮಜ್ಞಾನದ ಜೊತೆಗೆ ಕ್ಷಾತ್ರತೇಜಸ್ಸನ್ನು ತುಂಬಿ ಪತಿಗೆ ಒಪ್ಪಿಸಿ ತಾನು ಬಂದ ನೆಲೆಯನ್ನು ಸೇರಿಕೊಳ್ಳುತ್ತಾಳೆ. ಆದರ್ಶ ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ ಸದಾ ಆತ್ಮದೀಪ್ತಿಯ ಪ್ರಕಾಶದಿಂದ ಬೆಳಗಿದ ಸೀತಾಮಾತೆಯ ಸ್ಮರಣೆಯು ನಮ್ಮ ಪಾಪಗಳನ್ನು ದೂರಮಾಡಿ ಅತಿಶಯವಾದ ಪಾವನತ್ವವನ್ನು ಕೊಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.

ಸೂಚನೆ : 07/10/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಮಹಾ ಮಹಿಮಳಾದ ದ್ರೌಪದೀ (Maha Mahimalada Draupadi)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತದಲ್ಲಿ ದ್ರೌಪದಿಯದು ಅತ್ಯಂತ ಪ್ರಮುಖವಾದ ಪಾತ್ರ. ತನ್ನ ಸೌಂದರ್ಯದಿಂದ, ಬುದ್ಧಿಮತ್ತೆಯಿಂದ, ಸಹನಶೀಲತೆಯಿಂದ, ಪಾತಿವ್ರತ್ಯದಿಂದ ಲೋಕದ ಗೌರವಾದರಗಳಿಗೆ ಪಾತ್ರಳಾಗಿದ್ದವಳು. ಅವಳ ಸ್ಮರಣೆಯಿಂದ ನಮ್ಮ ಪಾತಕಗಳು ಹೇಗೆ ನಾಶವಾಗುತ್ತವೆ ಎಂಬುದನ್ನು ಅವಳ ಜೀವನದ ಮೇಲೆ ಒಂದು ನೋಟ ಹರಿಸಿ ತಿಳಿಯಲು ಪ್ರಯತ್ನಿಸೋಣ. ಪಾಂಚಾಲ ದೇಶದ ರಾಜ ದೃಪದ. ಅವನು ದ್ರೋಣರ ಮೇಲಿನ ದ್ವೇಷದಿಂದ ಅವರನ್ನು ಸಂಹರಿಸುವ ಪುತ್ರ ಬೇಕೆಂದು ಯಜ್ಞ ಮಾಡಿದಾಗ ದೃಷ್ಟದ್ಯುಮ್ನನ ಜೊತೆಗೆ ಯಜ್ಞಕುಂಡದಿಂದ ಉದ್ಭವಿಸಿ ಬಂದವಳು ದ್ರೌಪದೀ. ಅಗ್ನಿಯಂತೆ ಸದಾ ದೇದೀಪ್ಯಮಾನಳಾಗಿದ್ದವಳು. ಅಂತಹ ದ್ರೌಪದಿಯನ್ನು ಅರ್ಜುನನು ಸ್ವಯಂವರದಲ್ಲಿ ಗೆಲ್ಲುತ್ತಾನೆ. ಆದರೆ ಅವಳನ್ನು ವಿವಾಹವಾಗುವುದು ಕೇವಲ ಅರ್ಜುನನಲ್ಲ, ಭಗವಾನ್ ವೇದವ್ಯಾಸರ ಸಮ್ಮುಖದಲ್ಲಿ, ಶ್ರೀ ಕೃಷ್ಣಪರಮಾತ್ಮನ ಸಮ್ಮತಿಯ ಮೇರೆಗೆ ಯುಧಿಷ್ಠಿರ ಮುಂತಾದ ಪಂಚಪಾಂಡವರೂ ದ್ರೌಪದಿಯನ್ನು ವರಿಸುತ್ತಾರೆ.ಈ ರೀತಿಯ ಲೋಕ ವಿಭಿನ್ನವಾದ ವಿವಾಹದ ನಡೆಗೆ ಅವಳ ಪೂರ್ವ ವೃತ್ತಾಂತ ಕಾರಣವಾಗಿದೆ. ಪ್ರತಿಯೊಬ್ಬರ ಜೀವನವೂ ಕೂಡ ಅವರವರ ಪೂರ್ವ ಕರ್ಮಕ್ಕನುಗುಣವಾಗಿ ಮುಂದೆ ರೂಪಿತವಾಗುತ್ತಾ ಹೋಗುತ್ತದೆ ಎಂಬುದು ಜ್ಞಾನಿಗಳ ಒಮ್ಮತ. ಐವರು ಪತಿಯಂದಿರನ್ನು ಹೊಂದುವುದಕ್ಕೆ ಕಾರಣವಾದ ದ್ರೌಪದಿಯ ಜನ್ಮ ವೃತ್ತಾಂತದ ಕಡೆಗೆ ಗಮನ ಹರಿಸೋಣ.


ದ್ರೌಪದಿಯು ಸ್ವರ್ಗ ಶ್ರೀ: ಅಂದರೆ ದೇವಲೋಕದ ಸಂಪತ್ತು, ಆ ಸಂಪತ್ತೇ ಮೂರ್ತ ರೂಪವನ್ನು ತಾಳಿ ದ್ರೌಪದಿಯಾಗಿ ಭುವಿಗೆ ಬಂದಿರುವುದು. ಒಮ್ಮೆ ದೇವತೆಯರ ಪತ್ನಿಯರಿಗೆ ತಮ್ಮ ತಮ್ಮ ಒಂದೊಂದು ಅಂಶವನ್ನು ಸೇರಿಸಿ ಒಂದು ರೂಪವನ್ನು ಪಡೆದು ಭಗವಂತನ ಸೇವೆಯನ್ನು ಮಾಡಬೇಕು ಎಂಬುದಾಗಿ ಇಚ್ಛೆ ಉಂಟಾಗುತ್ತದೆ. ಅದೇ ಸಮಯಕ್ಕೆ ಭಗವಂತನ ಸಂಕಲ್ಪದಂತೆ ಯಮ, ವಾಯು,ಇಂದ್ರ ಮತ್ತು ಅಶ್ವಿನಿ ದೇವತೆಗಳು ತಮ್ಮ ತಮ್ಮ ಅಂಶದೊಂದಿಗೆ ಭೂಮಿಯಲ್ಲಿ ಜನ್ಮ ತಾಳಬೇಕಾಗುತ್ತದೆ ಅವರೇ ಪಂಚಪಾಂಡವರು. ಸ್ವರ್ಗ ಶ್ರೀಯು ಮೊದಲು ಒಬ್ಬ ಋಷಿಪುತ್ರಿಯಾಗಿ ಜನ್ಮ ತಾಳುತ್ತಾಳೆ ಅಪ್ರತಿಮ ಸೌಂದರ್ಯವಿದ್ದರೂ ಅವಳಿಗೆ ಅನುರೂಪನಾದ ಪತಿ ಸಿಗದ ಕಾರಣ ಮಹಾದೇವನನ್ನು ಕುರಿತು ಕಠಿಣವಾದ ತಪಸ್ಸನ್ನು ಮಾಡುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿ ಮಹಾದೇವ ಪ್ರತ್ಯಕ್ಷನಾದಾಗ ಸಕಲಗುಣ ಪರಿಪೂರ್ಣನಾದ ಪತಿಯನ್ನು ದಯಪಾಲಿಸು ಎಂಬುದಾಗಿ ಐದು ಬಾರಿ ಕೇಳುತ್ತಾಳೆ, ಪರಿಣಾಮ ಶಿವನು ನಿನ್ನ ಪ್ರಾರ್ಥನೆಯಂತೆ ನೀನು ಐವರು ಪತಿಯಂದಿರನ್ನು ಹೊಂದುವೆ. ಆದರೆ ಇನ್ನೊಂದು ದೇಹವನ್ನು ಪಡೆದಾಗ ಅದು ಸಿದ್ಧಿಸುವುದು ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಅವಳೇ ಇಂದಿನ ಜನ್ಮದಲ್ಲಿ ದ್ರೌಪದಿಯಾಗಿ ಜನಿಸುತ್ತಾಳೆ. ಅವಳು ಅವಳ ಜನ್ಮ ವೃತ್ತಾಂತಕ್ಕೆ ಅನುಗುಣವಾಗಿ ಅಂತೆಯೇ ಭಗವಂತನ ಸಂಕಲ್ಪಕ್ಕೆ ಅನುಗುಣವಾಗಿ ಐವರು ಮಂದಿ ಪತಿಯರನ್ನು ಪಡೆಯುತ್ತಾಳೆ. ಹಾಗಾಗಿ ಇದು ಕೇವಲ ದ್ರೌಪದಿಗೆ ಮಾತ್ರ ಹೊಂದುವ ವಿಶೇಷ ಧರ್ಮ. ಪ್ರತಿಯೊಬ್ಬರ ಜೊತೆಗೆ ಇರುವಾಗಲೂ ಆಯಾಯ ದೇವತಾ ಭಾವವನ್ನು ತುಂಬಿಕೊಂಡು ಸಂಸಾರವನ್ನು ನಡೆಸಿ ಪಾತಿವ್ರತ್ಯವನ್ನು ಸದಾ ಕಾಪಾಡಿಕೊಂಡ ಮಹಾ ಮಹಿಮಳು ದ್ರೌಪದೀ. ಶ್ರೀ ಕೃಷ್ಣ ಪರಮಾತ್ಮನಿಂದ ತನಗೆ ಅತ್ಯಂತ ಪ್ರಿಯಳಾದ ತಂಗಿ ಎಂಬುದಾಗಿ ಭಾವಿಸಲ್ಪಟ್ಟವಳು. ಪರಮಾತ್ಮನಿಗೆ ತಲುಪುವಂತೆ ಪ್ರಾರ್ಥನೆ ಮಾಡುವ ವಿಧಾನವನ್ನು ಚೆನ್ನಾಗಿ ಬಲ್ಲವಳು. ಹಾಗಾಗಿಯೇ ಆಪತ್ತಿನ ಸಂದರ್ಭದಲ್ಲಿ ಪರಮಾತ್ಮನಿಂದಲೇ ನೇರವಾಗಿ ರಕ್ಷಣೆಯನ್ನು ಪಡೆದುಕೊಂಡವಳು.


ಪತಿಯಂದಿರ ಬಗ್ಗೆ ಅತ್ಯಂತ ನಿಷ್ಠೆ ಹಾಗೂ ಭಕ್ತಿಯನ್ನು ಹೊಂದಿ ಪತಿಸೇವೆಯೇ ಪರಮಾತ್ಮನ ಸೇವೆ ಎಂದು ಭಾವಿಸಿ ಅವರು ವನವಾಸಕ್ಕೆ ಹೊರಡುವಾಗ ತಾನು ತವರಿಗೆ ಹೋಗಿ ಅರಮನೆಯ ಸೌಖ್ಯವನ್ನು ಅನುಭವಿಸಲಿಲ್ಲ. ತನ್ನ ಮಕ್ಕಳನ್ನು ಮಾತ್ರ ಪಾಂಚಾಲಕ್ಕೆ ಕಳುಹಿಸಿ ತಾನು ವನವಾಸದ ಕ್ಲೇಶಕ್ಕೆ ಸಿದ್ಧಳಾಗಿ ಪಾಂಡವರ ಜೊತೆಗೆ ಅಷ್ಟೂ ಕಾಲವೂ ಸಹಧರ್ಮಿಣಿಯಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತಾಳೆ. ಪಾಂಡವರಿಗೂ ಕೂಡ ಅವಳನ್ನು ಕಂಡರೆ ಅತ್ಯಂತ ಪ್ರೀತಿ ಮತ್ತು ಗೌರವ. ಕೃಷ್ಣ ಪರಮಾತ್ಮನ ಅಷ್ಟ ಮಹಿಷಿಯರಲ್ಲಿ ಒಬ್ಬಳಾದ ಸತ್ಯಭಾಮೆಯು ಪಾಂಡವರು ವನವಾಸದಲ್ಲಿರುವ ಕಾಲದಲ್ಲಿ, ಪತಿಯ ಜೊತೆಗೆ ಅವರಿದ್ದೆಡೆಗೆ ಬಂದು ದ್ರೌಪದಿಯನ್ನು ಭೇಟಿಯಾಗಿ ಕುಶಲ ಸಮಾಚಾರವನ್ನು ವಿಚಾರಿಸುತ್ತಾಳೆ. ಹಾಗೆಯೇ ಅವರಿಬ್ಬರೂ ಮಾತುಕತೆ ನಡೆಸುತ್ತಿರುವಾಗ ಕುತೂಹಲದಿಂದ ದ್ರೌಪದಿಯನ್ನು ಹೀಗೆ ಪ್ರಶ್ನಿಸುತ್ತಾಳೆ, ನಿನ್ನನ್ನು ನಿನ್ನ ಪತಿಯಂದಿರು ಅಷ್ಟು ಪ್ರೀತಿಯಿಂದ ಕಾಣುತ್ತರಲ್ಲಾ ಅದು ಹೇಗೆ ಸಾಧ್ಯವಾಯಿತು? ನೀನೇನಾದರೂ ಮಂತ್ರಗಳ ಅಥವಾ ಮೂಲಿಕೆಗಳ ಸಹಾಯವನ್ನು ಪಡೆದಿದ್ದೇಯೇ ಹೇಗೆ? ನನಗೂ ತಿಳಿಸು ಎಂಬುದಾಗಿ. ಆಗ ಪತಿಯ ಪ್ರೀತಿಗೆ ಪಾತ್ರವಾಗುವುದಕ್ಕೆ ಕಾರಣವಾಗುವುದು ನಮ್ಮ ಅಂತರಂಗವೇ ಹೊರತು ಬಾಹ್ಯವಾದ ಅವಲಂಬನೆ ಅಲ್ಲ ಎಂಬುದನ್ನು ತಿಳಿಯಪಡಿಸಿ, ಪತಿಯಂದಿರ ನಿಶ್ಚಲ ಪ್ರೇಮಕ್ಕೆ ಕಾರಣವಾದಂತಹ ತನ್ನ ಗುಣಗಳನ್ನು ವಿವರಿಸುತ್ತಾಳೆ. ಸತ್ಯಭಾಮೆಗೆ ಆಗ ದ್ರೌಪದಿಯು ಕೇವಲ ಅಪ್ರತಿಮ ರೂಪಸಂಪನ್ನೆ ಮಾತ್ರವಲ್ಲ ಅಪರಿಮಿತ ಗುಣಸಂಪನ್ನೆಯೂ ಹೌದು ಎಂಬುದು ಮನವರಿಕೆ ಆಗುತ್ತದೆ.ದ್ರೌಪದಿ ವ್ಯಾವಹಾರಿಕ ವಿಷಯದಲ್ಲಿಯೂ ಅತ್ಯಂತ ಜಾಣ್ಮೆಯನ್ನು ಹೊಂದಿರುತ್ತಾಳೆ, ರಾಜ್ಯಕೋಶದ ಬಗ್ಗೆ ಸಂಪೂರ್ಣವಾದ ಅರಿವು ಅವಳಿಗೆ ಇರುತ್ತದೆ.


ದ್ರೌಪದಿಯ ಪಾತಿವ್ರತ್ಯಕ್ಕೆ ಅನೇಕ ಬಾರಿ ಭಂಗ ಬರುವಂತಹ ಪ್ರಸಂಗಗಳು ಎದುರಾದರೂ ಅವುಗಳನ್ನೆಲ್ಲ ಧೀರತನದಿಂದ ಎದುರಿಸಿ ಪಾಂಡವರಿಗೆ ತಕ್ಕ ಪತ್ನಿಯಾಗಿಯೇ ಕೊನೆಯವರೆಗೂ ಇರುತ್ತಾಳೆ. ಶ್ರೀಕೃಷ್ಣನ ಮೇಲಿನ ಅನನ್ಯ ಭಕ್ತಿಯಿಂದ ಹಾಗೂ ಪಾತಿವ್ರತ್ಯವೆಂಬ ತಪಸ್ಸಿನಿಂದ ದ್ರೌಪದಿಯ ಆತ್ಮದೀಪ್ತಿಯು ಸದಾ ಬೆಳಗಿ ಕನ್ಯಾ ಎಂಬ ಪದಕ್ಕೆ ಅನ್ವರ್ಥಳಾಗಿರುತ್ತಾಳೆ.ಅಂತಹ ಪರಮ ಪಾವನೆಯಾದ ದ್ರೌಪದಿಯ ಸ್ಮರಣೆ ನಮಗೆ ಅತ್ಯಂತ ಪುಣ್ಯಪ್ರದವಾಗಿದೆ.


ಸೂಚನೆ : 07/10/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.


Saturday, September 30, 2023

ಪರಮ ಪಾವನೆಯಾದ ಅಹಲ್ಯಾ (Parama Pavaneyada Ahalya)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಪಂಚಕನ್ಯೆಯರಲ್ಲಿ ಮೊದಲಿಗೆ ನಾವು ಸ್ಮರಣೆ ಮಾಡಬೇಕಾದವಳು ಅಹಲ್ಯಾ. ಅವಳು ಗೌತಮ ಮಹರ್ಷಿಗಳ ಪತ್ನೀ. ಗೌತಮರು ಸಪ್ತರ್ಷಿಗಳಲ್ಲಿ ಒಬ್ಬರು. ಅಹಲ್ಯೆಯು ಅಂತರಂಗ ಹಾಗೂ ಬಾಹ್ಯ ಸೌಂದರ್ಯಕ್ಕೆ ಪ್ರಸಿದ್ಧಳಾಗಿದ್ದವಳು. ಇಂದ್ರನು ಅವಳನ್ನು ವರಿಸಬೇಕು ಎಂದು ಇಚ್ಛಿಸಿದ್ದ, ಆದರೆ ಬ್ರಹ್ಮದೇವರ ಆಶಯಂತೆ ಮಹರ್ಷಿ ಗೌತಮರನ್ನು ವಿವಾಹವಾಗಿ ಅವರ ಸಹಧರ್ಮಿಣಿ ಆಗುತ್ತಾಳೆ. ಸುಕುಮಾರಿಯಾಗಿ ಬೆಳೆದರೂ ಪತಿಯ ತಪೋಮಯವಾದ ಜೀವನಕ್ಕೆ ಹೊಂದಿಕೊಂಡು ಅವರ ಪ್ರೀತಿಗೆ ಪಾತ್ರಳಾಗಿದ್ದಳು. ಇಂದ್ರ ಅವಳನ್ನು ಮೊದಲಿನಿಂದಲೂ ಬಯಸುತ್ತಿದ್ದ. ಒಮ್ಮೆ ಗೌತಮರು ಆಶ್ರಮದಲ್ಲಿ ಇಲ್ಲದ ಸಮಯವನ್ನು ನೋಡಿ ತಾನೇ ಗೌತಮ ಋಷಿಗಳ ರೂಪವನ್ನು ಧರಿಸಿ ಅಹಲ್ಯೆಯ ಮುಂದೆ ಬಂದು, ಸರಸೋಕ್ತಿಗಳನ್ನಾಡಿ ಅಹಲ್ಯೆಯ ಮನಸ್ಸನ್ನು ಸೂರೆಗೊಂಡ. ಅಹಲ್ಯೆಗೆ ಇವನು ತನ್ನ ಪತಿ ಅಲ್ಲ, ದೇವೇಂದ್ರನೇ ತನ್ನ ಪತಿಯ ರೂಪವನ್ನು ಧರಿಸಿ ಬಂದಿದ್ದಾನೆ ಎಂಬುದಾಗಿ ಅನುಮಾನ ಬಂದರೂ, ಕ್ಷಣಕಾಲ ತನ್ನ ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡು ತನ್ನ ಪಾತಿವ್ರತ್ಯಕ್ಕೆ ಭಂಗ ತಂದುಕೊಂಡಳು. ಆ ಸಮಯದಲ್ಲಿ ಆಶ್ರಮಕ್ಕೆ ಆಗಮಿಸಿದ ಗೌತಮರಿಗೆ ಅಲ್ಲಿ ನಡೆದ ಅಧರ್ಮದ ಅರಿವಾಗಿ ಇಂದ್ರ ಹಾಗೂ ಅಹಲ್ಯೆ ಇಬ್ಬರಿಗೂ ಶಾಪವನ್ನು ಕೊಟ್ಟರು. ಇಂದ್ರನಿಗೆ ಅವನ ತಪ್ಪಿಗೆ ಅನುಗುಣವಾಗಿ ಅಂಗಹೀನನಾಗು ಎಂಬ ಶಾಪವಾದರೆ, ಅಹಲ್ಯೆಗೆ ಅವಳಿಂದ ಆದ ಪಾಪ ಕೃತ್ಯಕ್ಕೆ ಅನೇಕ ಸಾವಿರ ವರ್ಷಗಳ ಕಾಲ ಅದೃಶ್ಯಳಾಗಿ ಆಶ್ರಮದ ಪರಿಸರದಲ್ಲಿ ತಪಸ್ಯೆಯನ್ನು ಆಚರಿಸು ಎಂಬುದಾಗಿ. ಅವಳ ತಪಸ್ಯೆಯು ಪರಿಪಕ್ವವಾಗಿ ದೋಷಗಳೆಲ್ಲವೂ ತೊಳೆದು ಹೋದಾಗ ಈ ಜಾಗಕ್ಕೆ ಶ್ರೀರಾಮಚಂದ್ರನ ಪಾದಸ್ಪರ್ಶವಾಗುತ್ತದೆ ಅಂದಿಗೆ ಅವಳ ಶಾಪದ ಅವಧಿ ಮುಗಿಯುತ್ತದೆ. ಶ್ರೀರಾಮಚಂದ್ರನ ದೃಷ್ಟಿಪ್ರಸಾದದಿಂದ ಪವಿತ್ರಳಾಗಿ ನೀನು ಪುನಃ ನನ್ನನ್ನು ಸೇರುವೆ, ಎಂಬುದಾಗಿ. ಕಲ್ಲಾಗಿ ಹೋಗು ಎಂಬುದಾಗಿಯೂ ಶಪಿಸಿರುವುದರ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ತ್ರಿಕಾಲ ಜ್ಞಾನಿಗಳಾಗಿದ್ದ ಪತಿಯ ಶಾಪದಂತೆಯೇ ಅಹಲ್ಯೆಯು ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ, ಅದೃಶ್ಯಳಾಗಿ ಅಪವಿತ್ರಳಾದ ತನ್ನನ್ನು ಶುದ್ಧಿ ಪಡಿಸಿಕೊಂಡು ಪುನಃ ಮೊದಲಿನಂತೆಯೇ ಪರಿಶುದ್ಧಳಾಗಲು ತಪಸ್ಯೆಯಲ್ಲಿ ನಿರತಳಾಗುತ್ತಾಳೆ. ತಪಸ್ಸು ಎಂದರೆ ಸುಡುವುದು ಎಂದೇ ಅರ್ಥ. ಯಾವ ಕಾರ್ಯದಿಂದ ತನ್ನ ದೋಷಗಳೆಲ್ಲವೂ ಸುಟ್ಟು ಪಾಪಗಳೆಲ್ಲವೂ ನಾಶವಾಗುತ್ತದೆಯೋ ಅಂತಹ ಕಾರ್ಯವೇ ತಪಸ್ಸು. ಅಹಲ್ಯೆಯು ಅಂತಹ ತಪಸ್ಸನ್ನು ಅನೇಕ ಸಾವಿರ ವರ್ಷಗಳವರೆಗೆ ಆಚರಿಸಿದ ಪರಿಣಾಮ ಅವಳಿಂದ ಆದ ಪಾಪವೆಲ್ಲವೂ ದಹಿಸಲ್ಪಟ್ಟು ಶ್ರೀರಾಮಚಂದ್ರನ ದರ್ಶನಕ್ಕೆ ಯೋಗ್ಯತೆಯನ್ನು ಪಡೆದುಕೊಳ್ಳುತ್ತಾಳೆ. ಶ್ರೀರಾಮನು ಲಕ್ಷ್ಮಣ ಸಮೇತನಾಗಿ ವಿಶ್ವಾಮಿತ್ರರ ಜೊತೆಗೆ ಗೌತಮ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸಿದೊಡನೆಯೇ, ಅವನ ಪಾದ ಸ್ಪರ್ಶದಿಂದ  ಅದೃಶ್ಯಳಾಗಿದ್ದ ಅಹಲ್ಯೆಯು ದಿವ್ಯವಾದ ತೇಜಸ್ಸಿನಿಂದ ಲೋಕದ ಕಣ್ಣಿಗೆ ಕಾಣಿಸಿಕೊಳ್ಳುತ್ತಾಳೆ. 

ಶ್ರೀರಾಮ ಹಾಗೂ ಲಕ್ಷ್ಮಣರು ಅಹಲ್ಯೆಯ ಪಾದಗಳಿಗೆ ನಮಸ್ಕರಿಸುತ್ತಾರೆ. ಯಾರ ನಾಮ ಸ್ಮರಣೆಯಿಂದ ಸಮಸ್ತ ಪಾಪಗಳೂ ಭಸ್ಮವಾಗುತ್ತವೆಯೋ ಅಂತಹ ಶ್ರೀರಾಮಚಂದ್ರಪ್ರಭುವೇ ಅವಳಿಗೆ ನಮಸ್ಕರಿಸಿದ ಅಂದ ಮೇಲೆ ಅವಳ ತಪಸ್ಸಿನ ಪ್ರಭಾವ ಅದರಿಂದಾದ ಪಾವಿತ್ರ್ಯ  ಎಷ್ಟು ಎಂಬುದು ಊಹೆಗೂ ನಿಲುಕದ ವಿಷಯ. ಅವಳು ತನ್ನಿಂದ ಆದ ಪಾಪಕ್ಕೆ ಪ್ರಾಯಶ್ಚಿತ್ತ ಹೊಂದಿ ತಪಸ್ಯೆಯ ಮೂಲಕ ಅತ್ಯಂತ ಪರಿಶುದ್ಧಳಾಗಿ ಶ್ರೀರಾಮಚಂದ್ರನ ಗೌರವಕ್ಕೆಪಾತ್ರಳಾಗುತ್ತಾಳೆ. ಆ ಸಮಯಕ್ಕೆ ಸರಿಯಾಗಿ ಗೌತಮ ಮಹರ್ಷಿಗಳೂ  ಅಲ್ಲಿಗೆ ಬರುತ್ತಾರೆ. ಅಹಲ್ಯೆಯೊಂದಿಗೆ ಯಥಾವಿಧಿಯಾಗಿ ಶ್ರೀರಾಮ ಲಕ್ಷ್ಮಣರ ಸತ್ಕಾರ ಮಾಡುತ್ತಾರೆ. ಅಹಲ್ಯೆಯು ಪುನಃ ಗೌತಮ ಮಹರ್ಷಿಗಳೊಂದಿಗೆ ಪರಿಶುದ್ಧವಾದ ಜೀವನವನ್ನು ಪ್ರಾರಂಭಿಸಿ  ಪರಮ ಪತಿವ್ರತೆಯಾಗಿ ಬೆಳಗುತ್ತಾಳೆ. ಅವಳ ಕಠಿಣವಾದ ತಪಸ್ಯೆ ಹಾಗೂ ಶ್ರೀರಾಮಚಂದ್ರನ ಸಂದರ್ಶನದ ಫಲವಾಗಿ ಅವಳಲ್ಲಿದ್ದ ಕೊಳೆಯೆಲ್ಲವೂ ತೊಳೆದು ಹೋಗಿ ಅವಳು ಒಂದು ನೂತನ, ಪವಿತ್ರತಮವಾದ ಜನ್ಮವನ್ನೇ ಪಡೆದು ಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುತ್ತಾಳೆ. ಅಹಲ್ಯೆಯ ಮನಸ್ಸು ಒಂದು ಕ್ಷಣ ಸ್ಥಿರತೆಯನ್ನು ಕಳೆದುಕೊಂಡ ಪರಿಣಾಮ ಅವಳಿಂದ ಪತಿದ್ರೋಹದಂತಹ ಮಹಾಪಾತಕವೇ ನಡೆಯಿತು. ಆದರೆ ಪತಿಯೂ , ಬ್ರಹ್ಮರ್ಷಿಯೂ ಆದ ಗೌತಮರು ಅವಳಿಗೆ ನೀಡಿದ ಶಾಪ ಅವಳಿಗೆ ವರವಾಗಿಯೇ ಪರಿಣಮಿಸಿತು. ಮಹಾತ್ಮರ ಶಾಪವೂ ಅನುಗ್ರಹದಂತೆಯೇ ಕೆಲಸ ಮಾಡಿ ಪತಿತರಾದ ಜೀವಿಗಳ ಉದ್ಧಾರಕ್ಕೆ ಕಾರಣವಾಗುತ್ತದೆ. ಅವರು ನೀಡಿದ ಶಿಕ್ಷೆ ಕೇವಲ punishment ಅಲ್ಲ. ನೀನು ನಾಶವಾಗಿ ಹೋಗು ಎಂಬುದಾಗಿಯೋ ಅಥವಾ ಅವಳಿಗೆ ಅಧೋಗತಿಯನ್ನು ಉಂಟುಮಾಡುವ ಇನ್ಯಾವುದೇ ಶಾಪವನ್ನು ಅವರು ನೀಡಲಿಲ್ಲ. ವಿವಾಹವೆಂದರೆ ಪತಿ ಪತ್ನಿಕೇವಲ ಭೌತಿಕವಾಗಿ ಜೊತೆಗೆ ಬಾಳುವುದಷ್ಟೇ ಅಲ್ಲ. ಅವರಿಬ್ಬರ ಮನಸ್ಸುಗಳು ಹೃದಯಗಳು ಒಂದಾಗಿ ದೈವಿಕ ಹಾಗೂ ಅಧ್ಯಾತ್ಮಿಕ ಜೀವನದಲ್ಲಿಯೂ ಒಟ್ಟಿಗೆ ಹೆಜ್ಜೆಯನ್ನು ಇಡಬೇಕಾದ ಸಂಸ್ಕಾರ. ಪತಿಯಾದವನು ಪತ್ನಿಯನ್ನು ಎಲ್ಲ ರೀತಿಯಿಂದಲೂ ಉದ್ಧಾರ ಮಾಡಬೇಕು. ತಾನು ಭಗವನ್ಮಾರ್ಗದಲ್ಲಿ ನಡೆದು ಅವಳನ್ನೂ ನಡೆಸಿ ಮೂಲಸ್ಥಾನವಾದ ಭಗವಂತನ ನೆಲೆಗೆ ಕೊಂಡೊಯ್ಯುವ ಕರ್ತವ್ಯ ಪತಿಯದ್ದೇ ಆಗಿರುತ್ತದೆ. ಹಾಗಾಗಿ ಗೌತಮರು ಅಹಲ್ಯೆಗೆ ಗುರುವಿನ ಸ್ಥಾನದಲ್ಲಿದ್ದುಕೊಂಡು ಅವಳಿಗೆ ನೀಡಿದ ಶಿಕ್ಷೆ ಅಥವಾ ಶಾಪ, ಶಿಕ್ಷಾ - ವಿದ್ಯೋಪಾದಾನೇ ಎಂಬಂತೆ ಅವಳಿಗೆ ನೀಡಿದ ಶಿಕ್ಷಣವೇ ಆಗಿದೆ. ಬಾಹ್ಯ ದರ್ಶನದ ಯೋಗ್ಯತೆಯನ್ನು ಕಳೆದುಕೊಂಡಿದ್ದ ಅವಳು ಪತಿಯ ಶಾಪದಂತೆ ಅದೃಶ್ಯಳಾಗುತ್ತಾಳೆ.

ತಪಸ್ಯೆಯಿಂದ ಅತ್ಯಂತ ಪರಿಶುದ್ಧಳಾದ ಅಹಲ್ಯೆಯನ್ನು ಶ್ರೀರಾಮಚಂದ್ರನೇ ಮೊದಲು ಸಂದರ್ಶಿಸಿ ಅವಳಿಗೆ ಪರಮ ಪಾವನತ್ವವನ್ನು ತಂದು ಕೊಡುತ್ತಾನೆ. ಪಾಪ ಕಳೆದ ಮೇಲೂ ಅಂತಹವರನ್ನು ಹಿಂದಿನ ಪಾಪದ ದೃಷ್ಟಿಯಿಂದಲೇ ನೋಡಿದರೆ ಹಾಗೆ ನೋಡಿದವರಿಗೆ ಪಾಪ ಬರುತ್ತದೆ ಎಂದು ಶ್ರೀರಂಗಪ್ರಿಯ ಸ್ವಾಮಿಗಳು ಹೇಳಿದ್ದು ಇಲ್ಲಿ ಸ್ಮರಣೀಯ. ಪರಮ ಪಾವನೆಯಾದ ಅಂತಹ ಅಹಲ್ಯೆಯ ಸ್ಮರಣೆಯಿಂದ ನಮ್ಮ ಪಾತಕಗಳೂ ನಾಶವಾಗಿ ನಮಗೂ ಪಾವಿತ್ರ್ಯ  ಉಂಟಾಗುವುದರಲ್ಲಿ ಸಂಶಯವಿಲ್ಲ.

ಸೂಚನೆ : 30/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Sunday, September 24, 2023

ದೇವಾಲಯಕ್ಕೆ ಹೋಗುವುದರಿಂದ ದೊರಕುವ ಲಾಭವೇನು? (Devalayakke Hoguvudarinda Dorakuva Labhavenu?)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)





ಇತ್ತೀಚೆಗೆ ನಡೆದ ಒಂದು ಘಟನೆ, ನಮ್ಮ ನಾಡಿನ ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆಯೊಂದು ಅದ್ಭುತವಾದ ಸಾಧನೆಯನ್ನು ಮಾಡಿ ವಿಶ್ವದ ಪ್ರಶಂಸೆಗೆ ಪಾತ್ರವಾಯಿತು. ಆ ಸಂಸ್ಥೆಯ ಪ್ರಮುಖರೊಬ್ಬರು ಆ ಸಾಧನೆಯ ನಂತರ ಒಂದು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಅವರ ದೇವಾಲಯದ ಭೇಟಿಯ ಕುರಿತಾದ ಪತ್ರಕರ್ತರೊಬ್ಬರ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರವನ್ನು ನೀಡುತ್ತಾರೆ, ನಾನು ಬಾಹ್ಯವಾದ ವಸ್ತುಗಳ ಬಗ್ಗೆ ಅರಿಯಲು ವಿಜ್ಞಾನವನ್ನು(Science) ಅವಲಂಬಿಸಿದ್ದೇನೆ, ಹಾಗೆಯೇ ಅಂತರಂಗದ ಅರಿವಿಗೆ ದೇವಾಲಯಕ್ಕೆ ಬರುತ್ತೇನೆ.
ಸಾಮಾನ್ಯವಾಗಿ ಜನರು ಯಾವ ಯಾವ ಕಾರಣಕ್ಕಾಗಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂಬುದಾಗಿ ವಿಚಾರಮಾಡುವುದಾದರೆ, ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಜೀವನದಲ್ಲಿ ಯಾವುದಾದರೂ ಕ್ಲೇಶಕ್ಕೆ ಸಿಲುಕಿದಾಗ ಅದನ್ನು ಪರಿಹಾರ ಮಾಡು ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸಲು ಭೇಟಿ ಕೊಡುವುದಿದೆ, ಇನ್ನು ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ತಾವು ಓದಿದ ವಿಷಯವೇ ಪರೀಕ್ಷೆಯಲ್ಲಿ ಬರಲಿ ಎಂಬುದನ್ನು ಬೇಡುವುದಕ್ಕೋ ಅಥವಾ ಪರೀಕ್ಷಾ ಭಯ ನಿವಾರಣೆಗೋ ಭೇಟಿ ಕೊಡುತ್ತಾರೆ. ಹಾಗೆಯೇ ಕೆಲವರು ತಮ್ಮ ದಿನಚರಿಯಲ್ಲಿ ಹತ್ತಿರದ ದೇವಾಲಯಗಳಿಗೆ ಹೋಗುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ, ಪ್ರವಾಸದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿರುವ ದೇವಾಲಯಗಳಿಗೆ ಹೋಗಿ ಬರುವುದಿದೆ. ಇನ್ನು ಕೆಲವರು ದೇವಾಲಯಗಳ ಕಲಾವಿನ್ಯಾಸವನ್ನು ವೀಕ್ಷಿಸಿ ಆನಂದಿಸಲು ಭೇಟಿ ನೀಡುತ್ತಾರೆ. ಹಾಗೆಯೇ ಮನಸ್ಸಿಗೆ ಶಾಂತಿ ಸಮಾಧಾನವನ್ನರಸಿ ದೇವಸ್ಥಾನಕ್ಕೆ ಹೋಗುವವರ ಸಂಖ್ಯೆಯೂ ಹೇರಳವಾಗಿಯೇ ಇದೆ. ಇತ್ಯಾದಿಯಾಗಿ ಅನೇಕ ಕಾರಣಗಳಿಗಾಗಿ ದೇವಾಲಯಕ್ಕೆ ಭೇಟಿಕೊಡುವುದನ್ನು ನಮ್ಮ ಸುತ್ತ ಮುತ್ತಲೂ ಕಾಣುತ್ತೇವೆ. ದೇವಾಲಯಕ್ಕೆ ಹೋಗುವುದರಿಂದ ಈ ಎಲ್ಲ ಲಾಭಕ್ಕಿಂತ ಮಿಗಿಲಾದ ಇನ್ನೊಂದು ಪರಮ ಲಾಭವನ್ನು ಪಡೆಯಬಹುದು, ಅದೇ ಅಂತರಂಗದ ಅರಿವು ಎಂಬುದನ್ನು ಜ್ಞಾನಿಗಳು ಸಾರಿದ್ದಾರೆ.

ಅಂತರಂಗದ ಅರಿವು ಎಂದರೇನು? ದೇವಾಲಯಗಳಿಗೆ ಹೋಗುವುದರಿಂದ ಅದನ್ನು ಹೇಗೆ ಪಡೆಯಬಹುದು? ದೇವಾಲಯಗಳು ಹೀಗೆಯೇ ಇರಬೇಕು ಎಂದು ನಕ್ಷೆಯನ್ನು ರಚಿಸಿ, ಶಿಲ್ಪಿಗಳ ಮೂಲಕ ಅದನ್ನು ನಿರ್ಮಾಣ ಮಾಡಿಸಿ, ಅಲ್ಲಿಗೆ ಹೋಗಿ ಬರುವ ಪದ್ಧತಿಯನ್ನು ತಂದವರು ಯಾರು? ಎಂದರೆ ನಮ್ಮ ಭಾರತೀಯ ಮಹರ್ಷಿಗಳು. ಮಹರ್ಷಿಗಳು ತಮ್ಮ ತಪಸ್ಯೆಯಿಂದ ಅಂತರಂಗದ ದ್ವಾರವನ್ನು ತೆರೆಸಿಕೊಂಡು, ಮನಸ್ಸನ್ನು ಒಳಮುಖವಾಗಿ ಹರಿಸಿದರು. ತಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನ ದರ್ಶನವನ್ನು ಮಾಡಿ ಅಪರಿಮಿತವಾದ ಆನಂದವನ್ನು, ಶಾಂತಿಯನ್ನು ಅನುಭವಿಸಿದರು. ಈ ದೇಹವೇ ಒಂದು ದೇವಾಲಯ ಅಂದರೆ ದೇವನಿರುವ ಸ್ಥಾನ ಎಂಬುದನ್ನು ಮನಗಂಡರು. ಅದನ್ನು ಲೋಕಕ್ಕೆ ಅರ್ಥ ಮಾಡಿಸಿ ಎಲ್ಲರೂ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟು ತಮ್ಮೊಳಗಿರುವ ಭಗವಂತನ ದರ್ಶನ ಮಾಡಿ ಆ ಸೌಖ್ಯವನ್ನು ಅನುಭವಿಸಲೇ ಬೇಕು ಆಗಲೇ ಪ್ರತಿಯೊಬ್ಬರ ಜೀವನಕ್ಕೆ ಸಾರ್ಥಕತೆ ದೊರೆಯುವುದು ಎಂಬುದಾಗಿ ಭಾವಿಸಿದರು. ಲೋಕದ ಮನಸ್ಸನ್ನು ಅತ್ತ ತಿರುಗಿಸಲು ಭಾರತೀಯ ಸಂಸ್ಕೃತಿಯನ್ನು ರೂಪಿಸಿ ಕೊಟ್ಟರು. ಆ ಸಂಸ್ಕೃತಿಯ ಒಂದು ಅಂಗವೇ ನಮ್ಮ ದೇವಾಲಯಗಳು ಹಾಗೂ ಅಲ್ಲಿನ ಶಿಲ್ಪಗಳು.

ಮಹರ್ಷಿಗಳು ತಮ್ಮ ದೇಹದಲ್ಲಿಯೇ ದೇವನನ್ನು ದರ್ಶಿಸಿದ್ದರಿಂದ, ಆ ದೇಹವನ್ನೇ ಹೋಲುವ ಒಂದು ಪ್ರತಿಕೃತಿ ( model) ಯನ್ನು ದೇವಾಲಯದ ರೂಪದಲ್ಲಿ ರಚನೆ ಮಾಡಿಸಿದರು. ನಮ್ಮ ದೇಶದಲ್ಲಿರುವ ಅನೇಕ ಆದರ್ಶವಾದ ದೇವಾಲಯಗಳು ಮಾನವ ದೇಹದ ಪ್ರತೀಕವೇ ಆಗಿವೆ. ಆಗಮಶಾಸ್ತ್ರದ ಆಧಾರದ ಮೇಲೆ ರಚಿತವಾಗಿರುವ ದೇವಾಲಯಗಳಲ್ಲಿ ನಮ್ಮ ದೇಹದಲ್ಲಿರುವ ಅಂಗಗಳನ್ನೇ ಹೋಲುವ ಸ್ಥಾನಗಳಿದ್ದು, ನಾವು ನಮ್ಮ ಮನಸ್ಸನ್ನು ಹಿಮ್ಮುಖವಾಗಿ ತಿರುಗಿಸಿ ಹೇಗೆ ಸಂಚಾರ ಮಾಡಿದಾಗ ದೇವನ ದರ್ಶನ ಪಡೆಯಬಹುದು ಎಂಬುದಕ್ಕೆ ನಕ್ಷೆಯೇ ಆಗಿದೆ ಈ ದೇವಾಲಯಗಳು. ಉದಾಹರಣೆಗೆ ದೇವಾಲಯದಲ್ಲಿ ದೇವತಾಮೂರ್ತಿಯನ್ನು ಜ್ಞಾನಿಗಳಿಂದ ಪ್ರಾಣಪ್ರತಿಷ್ಠೆ ಮಾಡಿಸಿ ಸ್ಥಾಪಿಸಿರುವ ಗರ್ಭಗೃಹವು ದೇವಾಲಯದ ಶಿರ:ಪ್ರದೇಶ ಎಂದು ಕರೆಸಿಕೊಳ್ಳುತ್ತದೆ. ಹಾಗೆಯೇ ಮುಂದಿನ ಭಾಗಗಳು ಕಂಠ, ಹೃದಯ ಮೊದಲಾಗಿ ಮಾನವ ದೇಹದ ಅವಯವಗಳ ಹೆಸರನ್ನೇ ಹೊತ್ತಿವೆ. ನಮ್ಮ ದೇಹದಲ್ಲಿಯೂ ಪರಮಾತ್ಮನು ಬೆಳಗುವುದು ಶಿರಸ್ಸಿನ ಸಹಸ್ರಾರ ಚಕ್ರದಲ್ಲಿ. ಸಾಧಕರು ಮನಸ್ಸನ್ನು ಹಿಮ್ಮುಖವಾಗಿಸಿ ಕ್ರಮ ಕ್ರಮವಾಗಿ ಸಾಗಿ ಅವರವರ ಪ್ರಕೃತಿ ಧರ್ಮಕ್ಕೆ ಅನುಗುಣವಾಗಿ ಅನೇಕ ದೇವತೆಗಳ ದರ್ಶನ ಪಡೆದು ಅಂತಿಮವಾಗಿ ಪರಮಾತ್ಮನ ದರ್ಶನ ಪಡೆಯುತ್ತಾರೆ ಎಂಬುದನ್ನು ಅನುಭವಿಗಳು ಉಲ್ಲೇಖಸಿದ್ದಾರೆ. ಅದರ ಪ್ರತಿಬಿಂಬದಂತೆಯೇ ದೇವಾಲಯಗಳ ರಚನೆಯೂ ಮಾಡಲ್ಪಟ್ಟಿದೆ. ಆ ಹೊರ ದೇವಾಲಯವನ್ನು ಪ್ರವೇಶಿಸಿ ಸಾಗುವಾಗ ಈ ಎಲ್ಲ ಅಂಶಗಳೂ ಮನಸ್ಸಿಗೆ ಬಂದರೆ ನಮ್ಮ ಅಂತರಂಗದ ದ್ವಾರವೂ ತೆರೆಯಲು ಅನುಕೂಲವಾಗುತ್ತದೆ. ಅಂತೆಯೇ ದೇವಾಲಯದ ಗರ್ಭಗೃಹದ ಮುಂದೆ ಬಿಳಿ, ಕೆಂಪು ಮತ್ತು ಕಪ್ಪು ಹೀಗೆ ಮೂರು ಬಣ್ಣಗಳ ತೆರೆಯನ್ನು ಸರಿಸಿ ದೇವನ ದರ್ಶನ ಮಾಡಿಸುತ್ತಾರೆ. ಆ ಮೂರು ಬಣ್ಣಗಳು ನಮ್ಮೊಳಗಿನ ಸತ್ವ, ರಜಸ್ಸು ಮತ್ತು ತಮಸ್ಸುಗಳೆoಬ ಮೂರು ಗುಣಗಳ ಪ್ರತೀಕ, ಆ ಮೂರು ಗುಣಗಳನ್ನು ದಾಟಿದಾಗ, ತ್ರಿಗುಣಾತೀತನಾದ ಪರಮಾತ್ಮನ ದರ್ಶನವಾಗುತ್ತದೆ ಎಂಬುದೇ ಇದರ ಮರ್ಮ. ಸಂಕ್ಷಿಪ್ತವಾಗಿ ಕೆಲವು ಅಂಶಗಳನ್ನು ನೆನಪಿಸಿಕೊಂಡದ್ದಾಗಿದೆ. ಹೀಗೆ ಎಲ್ಲಾ ರೀತಿಯಿಂದಲೂ ಭಾರತೀಯ ದೇವಾಲಯಗಳು ನಮ್ಮ ಅಂತರಂಗವನ್ನೇ ಸ್ಮರಣೆಗೆ ತರುವಂತೆ, ಅಂತರಂಗದ ಅರಿವನ್ನು ಮೂಡಿಸಿ ನಮ್ಮೊಳಗಿರುವ ದೇವನ ದರ್ಶನ ಮಾಡಿಸಲು ಸಹಕಾರಿಯಾಗಿವೆ. ಭೂಮಿಯಲ್ಲಿ ವೈಕುಂಠವನ್ನು ನೆನಪಿಗೆ ತರಲು ಜ್ಞಾನಿಗಳು ಮೆಮೊರಿ ಹಾಲ್ (ಸ್ಮಾರಕ ಮಂದಿರ) ಕಟ್ಟಿದರು. ಆ ಮೆಮೊರಿ ಹಾಲ್ ಗಳೇ ನಮ್ಮ ದೇಶದ ದೇವಾಲಯಗಳು. ನಾವು ಆ ದೇವಾಲಯದಲ್ಲಿ ಪ್ರವೇಶಿಸಿದರೆ ಅದರ ಪ್ಲಾನ್ ನಲ್ಲಿ ಅದು ಒಂದು ಯಾನವಾಗಿ, ವಿಮಾನವಾಗಿ ನಮ್ಮನ್ನು ವೈಕುಂಠದವರಿಗೂ ಏರಿಸುವ ವಿಷಯವಿರುವುದು ತಿಳಿದು ಬರುತ್ತದೆ ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ. ಈ ರೀತಿಯಾಗಿ ಮಹರ್ಷಿಗಳು ಆಮೂಲಾಗ್ರ ದೃಷ್ಟಿಯಿಂದ ರಚಿಸಲ್ಪಟ್ಟ ದೇವಾಲಯಗಳನ್ನು ಆ ಭಾವನೆಯಿಂದ ಸಂದರ್ಶಿಸಿ ಅವುಗಳ ಅಂತಸ್ಸತ್ಯವನ್ನು ಅರಿತು ಪರಮ ಲಾಭವನ್ನು ಪಡೆಯಬೇಕಾಗಿದೆ.

ಸೂ
ಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Sunday, September 17, 2023

ಪ್ರಾತಃ ಸ್ಮರಣೀಯರಾದ ಪಂಚಕನ್ಯೆಯರು (Pratah Smaraniyarada Panncakanyeyaru Pratah Smaraniyarada Pancakanyeyaru)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)





ಪೀಠಿಕೆ

ನಾವು ಪ್ರತಿನಿತ್ಯವೂ ಪಠಣ ಮಾಡುವಂತಹ ಶ್ಲೋಕಗಳಲ್ಲಿ ಪ್ರಸಿದ್ಧವಾದ ಶ್ಲೋಕ-

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾl
ಪಂಚಕನ್ಯಾ: ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಅಹಲ್ಯಾ, ದ್ರೌಪದೀ, ಸೀತಾ, ತಾರಾ ಹಾಗೆಯೇ ಮಂಡೋದರೀ , ಈ ಐದು ಮಂದಿ ಕನ್ಯೆಯರನ್ನು ನಿತ್ಯವೂ ಸ್ಮರಣೆ ಮಾಡಿಕೊಂಡರೆ ಮಹಾಪಾತಕಗಳು (ಪಾಪಗಳು) ನಾಶವಾಗುತ್ತವೆ, ಎಂದು. ಈ ಐವರ ಬಗ್ಗೆ ಒಂದು ಸಂಕ್ಷಿಪ್ತವಾದ ಪರಿಚಯ ಮಾಡಿಕೊಳ್ಳುವುದಾದರೆ, ಅಹಲ್ಯಾ, ಗೌತಮ ಮಹರ್ಷಿಗಳ ಪತ್ನೀ, ದ್ರೌಪದೀ ದೃಪದರಾಜನ ಮಗಳು, ಯಜ್ಞಕುಂಡದಿಂದ ಜನಿಸಿ ಬಂದವಳು, ಪಂಚಪಾಂಡವರ ಪತ್ನೀ. ಸೀತಾ, ಜನಕ ಮಹಾರಾಜನ ಪುತ್ರಿ, ಜನಕ ಮಹಾರಾಜನು ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಆ ಭೂಮಿಯಲ್ಲಿ ಅವನಿಗೆ ದೊರಕಿದವಳು. ಜಾನಕಿ, ಮೈಥಿಲೀ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವವಳು, ಶ್ರೀರಾಮಚಂದ್ರನ ಅರ್ಧಾoಗಿನಿ. ತಾರಾ, ವಾನರ ರಾಜನಾಗಿದ್ದ ವಾಲಿಯ ಹೆಂಡತಿ ಮತ್ತು ಮಂಡೋದರೀ ರಾಕ್ಷಸರಾಜನಾದ ರಾವಣನ ಪತ್ನೀ.

ಈ ಶ್ಲೋಕದ ಬಗ್ಗೆ ಕೆಲವೊಂದು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮೊದಲನೆಯದು, ಕನ್ಯೆ ಎಂದರೆ ಸಾಮಾನ್ಯವಾಗಿ ಮದುವೆ ಆಗದ ಹೆಣ್ಣು ಮಗಳು ಎನ್ನುವ ರೂಡಿ ಇದೆ. ಆದರೆ ಈ ಐದು ಮಂದಿಯರಿಗೂ ವಿವಾಹವಾಗಿದೆ, ಗೃಹಿಣಿಯರು, ಇವರನ್ನು ಹೇಗೆ ಕನ್ಯೆಯರು ಎಂಬ ಶಬ್ಧದಿಂದ ಕರೆಯಬಹುದು ? ಹಾಗಾಗಿ ಈ ಶ್ಲೋಕಕ್ಕೆ, ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ l ಪಂಚಕo ನಾ ಸ್ಮರೇ ನಿತ್ಯಂ ಮಹಾಪಾತಕ ನಾಶನಮ್ ll

ಎಂಬ ಬದಲಾವಣೆಯನ್ನು ಮಾಡಿಕೊಂಡು ಪಠಣ ಮಾಡುವ ರೂಢಿಯೂ ಬಂದಿದೆ. ಈ ಐದು ಮಂದಿಯರನ್ನು ನಾ ಅಂದರೆ ಮನುಷ್ಯನಾದವನು ಸ್ಮರಣೆ ಮಾಡಿಕೊಂಡರೆ ಪಾಪಗಳು ನಾಶವಾಗುತ್ತವೆ,ಎಂಬುದಾಗಿ. ಇಲ್ಲಿ ಕನ್ಯಾ ಎಂಬ ಪದವನ್ನೇ ಉಪಯೋಗಿಸಿಲ್ಲ. ಹಾಗೆಯೇ ಮೇಲ್ನೋಟಕ್ಕೆ ನೋಡಿದಾಗ ಸೀತೆ ಮತ್ತು ಮಂಡೋದರಿಯನ್ನು ಹೊರತುಪಡಿಸಿ ಉಳಿದವರ ನಡೆ ಲೋಕದ ದೃಷ್ಟಿಯಿಂದ ಅಷ್ಟು ಆದರ್ಶವಾಗಿದ್ದಂತೆ ತೋರುವುದಿಲ್ಲ, ಕೆಲವೊಂದು ದೋಷವನ್ನು ಹೊತ್ತುಕೊಂಡಂತೆ ಭಾಸವಾಗುತ್ತದೆ, ಇವರ ಸ್ಮರಣೆಯಿಂದ ನಮ್ಮ ಪಾಪಗಳು ಹೇಗೆ ದೂರವಾಗುತ್ತವೆ ? ಉದಾಹರಣೆಗೆ ಅಹಲ್ಯೆ ತನ್ನ ಪತಿಯಾದಂತಹ ಗೌತಮರು ಆಶ್ರಮಲ್ಲಿ ಇಲ್ಲದಿರುವ ಸಮಯದಲ್ಲಿ ಪತಿ ವೇಷಧಾರಿಯಾದಂತಹ ಇಂದ್ರನ ಕಾಮಕ್ಕೆ ವಶವಾದಳು, ದ್ರೌಪದಿಗೆ ಐದು ಮಂದಿ ಪತಿಯರು ಇದು ಲೋಕದ ನಡೆಗಿಂತ ವಿಭಿನ್ನವಾಗಿದೆ, ಹಾಗೆಯೇ ವಾಲಿಯ ಪತ್ನಿಯಾದಂತಹ ತಾರಾ ವಾಲಿಯ ನಿಧನದ ನಂತರ ಸುಗ್ರೀವನ ಜೊತೆಗೆ ಅವನ ಅಂತ:ಪುರದಲ್ಲಿಯೇ ಇರುತ್ತಾಳೆ, ಇವರುಗಳ ಚರಿತ್ರೆ ಈ ರೀತಿಯ ಕೆಲವೊಂದು ವೈಚಿತ್ರ್ಯದಿಂದ ಕೂಡಿದೆ. ಸೀತೆಯಂತೂ ಪರಮ ಪಾವನೆ, ಜಗನ್ಮಾತೆ. ಅವಳ ಸ್ಮರಣಮಾತ್ರದಿಂದಲೇ ನಮ್ಮಲ್ಲಿ ಪಾವನತ್ವ ಉಂಟಾಗುವುದು ನಿಶ್ಚಿತ. ಹಾಗಾಗಿ ಸೀತೆಯನ್ನು ಇವರ ಗುಂಪಿಗೆ ಸೇರಿಸಿರುವುದು ಸರಿಯೇ? ಮತ್ತು ಮಂಡೋದರಿಗೆ ರಾವಣನ ಪತ್ನಿ ಎಂಬುದೊಂದು ಕಪ್ಪುಚುಕ್ಕೆ ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲಿ ಸೀತೆಯಂತೆಯೇ ಪವಿತ್ರಳು, ಮಹಾಪತಿವ್ರತೆ. ಪತಿಯನ್ನು ಸನ್ಮಾರ್ಗಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನೇ ಪಟ್ಟಿದ್ದಾಳೆ. ಅವಳನ್ನೂ ಸಹ ಇವರ ಗುಂಪಿಗೆ ಸೇರಿಸಿ, ಇವರೊಂದಿಗೆ ಸ್ಮರಣೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಹೊಂದುತ್ತದೆ? ಇತ್ಯಾದಿಯಾಗಿ ಸಂದೇಹ ಮೂಡುವುದು ಸಹಜ. ಇವರುಗಳ ಜೀವನದ ಬಗ್ಗೆ ಪರಿಪೂರ್ಣವಾದ ನೋಟ ಇಲ್ಲದೇ ಇರುವಾಗ ಇಂತಹ ಪ್ರಶ್ನೆಗಳು ಮೂಡುತ್ತವೆ.

ಮೊದಲನೆಯದಾಗಿ ಕನ್ಯೆ ಎಂಬ ಪದದ ಅರ್ಥ ಏನು ಎಂಬುದನ್ನು ನೋಡೋಣ. ಕನ್ಯಾ ಎಂಬ ಪದ ಸಂಸ್ಕೃತ ಭಾಷೆಯ ಪದ, ಕನಿ ದೀಪ್ತೌ ಎಂಬುದು ಇದರ ಮೂಲರೂಪ. ವಿಶೇಷ ದೀಪ್ತಿ ಹೊಂದಿರುವವರು, ಎಂಬುದಾಗಿ ಅರ್ಥ. ದೀಪ್ತಿ ಎಂದರೆ ಪ್ರಕಾಶ, ಬೆಳಕು ಎಂಬುದಾಗಿ. ವಿಶೇಷವಾದ ಪ್ರಕಾಶವನ್ನು ಹೊಂದಿರುವವರೇ ಕನ್ಯೆಯರು. ಯಾವುದದು ವಿಶೇಷ ಪ್ರಕಾಶ ಎಂದರೆ ಎಲ್ಲೆಲ್ಲೂ ಬೆಳಗುತ್ತಿರುವ, ಜ್ಞಾನಿಗಳಿಗೆ ಅಂತರಂಗದ ಸಾಧನೆಯಿಂದ ಗೋಚರವಾಗುವ ಆಧ್ಯಾತ್ಮ ಪ್ರಕಾಶ. ಸೂರ್ಯ, ಚಂದ್ರಾದಿ ಎಲ್ಲಾ ಪ್ರಕಾಶಗಳಿಗೂ ಬೆಳಕನ್ನು ಹರಿಸುವ ಪರಮಾತ್ಮ ಪ್ರಕಾಶ. ಅಂತಹ ಪ್ರಕಾಶವನ್ನು ತನ್ನಲ್ಲಿ ಹೊಂದಿ ಬೆಳಗುವಳೇ ಕನ್ಯಾ. "ಸ್ತ್ರೀಯರಿಗೆ ವಿವಾಹವಾದ ಮೇಲೆ ಸಂಸಾರ ಜೀವನದಿಂದ ವಿಶಿಷ್ಟ ದೀಪ್ತಿಯು ಮರೆಯಾಗುತ್ತದೆ. ಈ ಅಹಲ್ಯಾದಿಗಳು ವಿವಾಹಿತರಾದರೂ ಇತರರಂತೆ ಅವರಿಗೆ ವಿಶೇಷವಾದ ದೀಪ್ತಿ-ಪ್ರಕಾಶವು ಉಳಿದೇ ಇತ್ತು. ಇದೇ ಅವರ ಹಿರಿಮೆ ಎಂದು ಭಾವಿಸಿದಾಗ, ಅವರ ಆತ್ಮದೀಪ್ತಿಯ ಕಡೆಗೆ ಗಮನ ಸೆಳೆಯುವಂತಾದರೆ ಪಂಚಕನ್ಯೆಯರು ಸದಾ ಸ್ಮರಣೀಯರೇ ಆಗುವವರು" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ. ಮಹರ್ಷಿಗಳಿಂದ ಲೋಕಕ್ಕೆ ಕೊಡಲ್ಪಟ್ಟ ಈ ಶ್ಲೋಕದ ಒಳ ಅರ್ಥ ಹಾಗೂ ಈ ಐದು ಮಂದಿ ಸ್ತ್ರೀರತ್ನರ ಮಹಿಮೆಯನ್ನು ಜ್ಞಾನಿಗಳಿಂದ ತಿಳಿಯಲ್ಪಟ್ಟಾಗ ಸಂಶಯಕ್ಕೆ ಆಸ್ಪದವಿರುವುದಿಲ್ಲ. ಈ ಅಹಲ್ಯಾ ಮುಂತಾದವರಲ್ಲಿ ಹೇಗೆ ಆ ವಿಶೇಷವಾದ ಆತ್ಮಪ್ರಕಾಶ, ವಿಶಿಷ್ಟವಾದ ಕಾಂತಿಯನ್ನು ನೀಡಿತ್ತು? ಹೇಗೆ ಅವರು ಪ್ರಾತಃ ಸ್ಮರಣೀಯರಾಗಿದ್ದಾರೆ? ಅವರನ್ನು ಹೇಗೆ ಸ್ಮರಣೆ ಮಾಡಿಕೊಂಡರೆ ನಮ್ಮ ಪಾಪಗಳು ನಾಶವಾಗುತ್ತವೆ? ಎಂಬುದನ್ನು ಒಬ್ಬೊಬ್ಬರ ಜೀವನದ ವಿಶೇಷತೆಗಳ ಮೇಲೂ ನಮ್ಮ ನೋಟವನ್ನು ಹರಿಸಿ ಮುಂದಿನ ಸಂಚಿಕೆಗಳಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಸೂಚನೆ : 17/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.