Saturday, September 28, 2024

ಪುಸ್ತಕ ಪರಿಚಯ ಭಾರತೀಯ ಹಬ್ಬಗಳು

ಲೇಖಕರು : ಶ್ರೀ ಶ್ರೀ  ರಂಗಪ್ರಿಯ ಶ್ರೀ ಶ್ರೀ :  

ಪ್ರತಿಕ್ರಿಯಿಸಿರಿ (lekhana@ayvm.in)




ಭಾರತೀಯ ಹಬ್ಬಗಳು 

 ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವ  ಅತಿಮುಖ್ಯವಾದ ಮತ್ತು ಅತ್ಯಂತ ಪರಿಚಿತವಾದ ವಿಷಯ. ಹಬ್ಬಗಳು ಜೀವನದಲ್ಲಿನ ವಿಶಿಷ್ಟವಾದ ಸಂತೋಷದ ಸಂದರ್ಭಗಳು. ಬಂಧು-ಬಳಗ, ಇಷ್ಟಮಿತ್ರರು  ಒಂದೆಡೆಯಲ್ಲಿ ಸೇರುವುದು, ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಸೇವಿಸುವುದು, ಆಡುವುದು, ಪಾಡುವುದು ಮನಸೋ ಇಚ್ಛೆ ಮಾತನಾಡುವುದು ಇತ್ಯಾದಿ ರೂಪಗಳಲ್ಲಿ ಇಂದ್ರಿಯಗಳ ಆನಂದವನ್ನು ಅನುಭವಿಸುತ್ತಾ ಜೀವನದ ಕಷ್ಟ ಕಾರ್ಪಣ್ಯಗಳನ್ನು ಮರೆಯುವುದು. ಇದು ಸಾಮಾನ್ಯವಾಗಿ ಎಲ್ಲಾ ದೇಶ, ಜನಾಂಗ ಸಂಸ್ಕೃತಿಗಳಿಗೆ ಸೇರಿದ ಜನರು ಹಬ್ಬಗಳನ್ನು ಆಚರಿಸುವ ವಿಧಾನವಾಗಿದೆ.

  ಆದರೆ ನಮ್ಮ ಭಾರತೀಯ ಮಹರ್ಷಿ ದೃಷ್ಟಿಯಲ್ಲಿ ಹಬ್ಬಗಳ ಆಚರಣೆಯ ಉದ್ದೇಶ ಇಷ್ಟು ಮಾತ್ರಕ್ಕೆ ಸೀಮಿತವಾಗಿಲ್ಲ. ನಮ್ಮ ಹಬ್ಬಗಳ ಕಾಲ, ಆಚರಣೆಯ ವಿಧಾನ ಇವುಗಳ ಒಳ ಮರ್ಮವನ್ನೂ ಅವುಗಳ ಹಿಂದೆ ಅಡಗಿರುವ ವಿಜ್ಞಾನವನ್ನೂ ಶ್ರೀರಂಗಮಹಾಗುರುಗಳ ಪದತಲದಲ್ಲಿ ಕುಳಿತು ಅರಿತ  ಪೂಜ್ಯರಾದಂತಹ ಶ್ರೀ ಶ್ರೀರಂಗಪ್ರಿಯ ಶ್ರೀಗಳು ಈ ವಿಚಾರಗಳನ್ನು ಸವಿಸ್ತಾರವಾಗಿ ಭಾರತೀಯ ಹಬ್ಬ ಹರಿದಿನಗಳು ಎಂಬ ಗ್ರಂಥದ ಮೂಲಕ ಲೋಕಕ್ಕೆ ಅನುಗ್ರಹಿಸಿದ್ದಾರೆ. ಸಾಮಾನ್ಯ ಓದುಗರ ಅನುಕೂಲಕ್ಕಾಗಿ ಅದರಲ್ಲಿನ ಸಾರಭೂತವಾದ, ದೈನಂದಿನ ಆಚರಣೆಗೆ ಅತ್ಯಾವಶ್ಯಕವಾದ ವಿಷಯಗಳನ್ನು ಮಾತ್ರ ಸಂಗ್ರಹಿಸಿ  'ಭಾರತೀಯರ ಹಬ್ಬಗಳು' ಎಂಬ ಕಿರು ಹೊತ್ತಗೆಯ ರೂಪದಲ್ಲಿ  ಪ್ರಸ್ತುತಗೊಳಿಸಲಾಗಿದೆ.   ಹಬ್ಬಗಳನ್ನು ಅದರ ಮರ್ಮದೊಂದಿಗೆ ಅರಿತು ಆಚರಿಸಲು ಈ ಹೊತ್ತಿಗೆಯು ದಾರಿದೀಪವಾಗಿದೆ. 


  ಭಾರತೀಯ ಹಬ್ಬಗಳನ್ನು ಆಚರಿಸುವ ಕಾಲ ಅತ್ಯಂತ ಅರ್ಥಪೂರ್ಣವಾಗಿದೆ, ಪರಮಾತ್ಮನ ಮತ್ತು ಅವನದೇ ಅಂಗಗಳಾದ ದೇವತೆಗಳನ್ನು ಆರಾಧಿಸಿ, ದೇವತಾ ಪ್ರಸನ್ನತೆಯನ್ನು ಸಂಪಾದಿಸಲು ಪ್ರಕೃತಿಮಾತೆಯೇ ವಿಶೇಷವಾಗಿ ಕೆಲವೊಂದು ಕಾಲಘಟ್ಟವನ್ನು ದಯಪಾಲಿಸಿರುವುದೂಂಟು. ಆ ಕಾಲಘಟ್ಟವನ್ನೇ ಪರ್ವ ಅಥವಾ ಹಬ್ಬ ಎಂಬುದಾಗಿ ಕರೆಯುತ್ತಾರೆ. ಅವುಗಳ ಸ್ವರೂಪವನ್ನು ತಪಸ್ಸ್ಯೆಯ ದೃಷ್ಟಿಯಿಂದ ಕಂಡುಕೊಂಡು ನಮಗೆ ಬೋಧಿಸಿದವರು ಮಹರ್ಷಿಗಳು. ಅವರು ಭಗವಂತನ ಅನುಗ್ರಹದಿಂದ ಅವನ ಕಾಲರೂಪವಾದ ಶರೀರವನ್ನು ಅದರ ಅಂಗೋಪಾಂಗಗಳೊಡನೆ ಚೆನ್ನಾಗಿ ಅರ್ಥ ಮಾಡಿಕೊಂಡರು. ಹಾಗೆಯೇ  ಜೀವಿಗಳು  ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು  ಹೊಂದಲು ಅನುಗುಣವಾಗಿ  ಪರಮ ಕರುಣೆಯಿಂದ  ಲೋಕಕ್ಕೆ  ಹಬ್ಬಗಳ ಆಚರಣೆಯ ವಿಧಾನಗಳನ್ನು ಉಪದೇಶಿಸಿದರು. ಅವುಗಳಲ್ಲಿ ಇಂದ್ರಿಯತೃಪ್ತಿ ಮತ್ತು ಆತ್ಮತೃಪ್ತಿ ಎರಡೂ ಸೇರಿಕೊಂಡಿದೆ. ಪಂಚಭಕ್ಷ್ಯ ಪರಮಾನ್ನಗಳ ಸೇವನೆಯೂ ಉಂಟು. ಆದರೆ ಆ ಪದಾರ್ಥಗಳಿಗೆ ಕೇವಲ ಜಿಹ್ವೆ ಮತ್ತು ಉದರಗಳ ಸಂತೃಪ್ತಿಯಲ್ಲಿಯೇ ಪೂರ್ಣತೆ ದೊರಕುವುದಿಲ್ಲ. "ಅಂದು ಸೇವಿಸುವ ಆಹಾರ, ಪಾನೀಯಗಳು ಕೇವಲ ಉದರತೃಪ್ತಿಯಲ್ಲಿ ನಿಲ್ಲದೇ ದಾಮೋದರನ ಸಂತೃಪ್ತಿಯಲ್ಲಿ ವಿಶ್ರಾಂತಿ ಹೊಂದಬೇಕು9" ಎಂದು ಶ್ರೀರಂಗಮಹಾಗುರುಗಳು ಅಪ್ಪಣೆ ಕೊಡಿಸುತ್ತಿದ್ದರು. ಉದಾಹರಣೆಗೆ, 


  1. ಗಣಪತಿ ಹಬ್ಬದಂದು ಗಣಪತಿಗೆ ವಿಶೇಷವಾಗಿ ನೈವೇದ್ಯ ಮಾಡುವ `ಮೋದಕ` ಎನ್ನುವ ಪದಕ್ಕೆ  'ಆನಂದವನ್ನು ಉಂಟು ಮಾಡುವ ಪದಾರ್ಥ' ಎಂದು ಅರ್ಥ. ಆ ಪದಾರ್ಥವನ್ನು ಸರಿಯಾದ ದ್ರವ್ಯಗುಣ ಯೋಗದಿಂದ ಸಿದ್ಧಪಡಿಸಿ ಗಣಪತಿಗೆ ನಿವೇದನೆ ಮಾಡಿ ಪ್ರಸಾದ ಭಾವನೆಯಿಂದ ಸ್ವೀಕರಿಸಿದರೆ ಇಂದ್ರಿಯಕ್ಕೆ ಸಂತೋಷ ಮಾತ್ರವಲ್ಲದೇ ನಮ್ಮ ದೇಹದಲ್ಲಿ ಗಣಪತಿ ದೇವತೆಯ ಪ್ರಸನ್ನತೆ ವಿಶೇಷವಾಗಿ ಹರಿದು ಸರ್ವದೇವತಾ ಮೂಲನಾದ ಪರಮಾತ್ಮನ ಆನಂದವೂ ಈ ದೇಹದಲ್ಲಿ ಬೆಳಗುವುದಕ್ಕೆ ಸಹಾಯವಾಗುತ್ತದೆ. 

  2. ಶ್ರೀರಾಮನು ಎಲ್ಲರ ಹೃದಯದಲ್ಲಿ ಸದಾ ರಮಿಸುತ್ತಿರುವ ಪರಮಾತ್ಮ ಸ್ವರೂಪ, ರಾಮದೇವರ ದರ್ಶನಕ್ಕೆ ಅನುಕೂಲವಾದ ಸಮಯ ಪ್ರಕೃತಿಯಲ್ಲಿ ಯಾವಾಗ ಕೂಡಿ ಬರುತ್ತದೆ ಎಂಬುದನ್ನು ಜ್ಞಾನಿಗಳು ಅಂತರ್ದೃಷ್ಟಿಯಿಂದ ಕಂಡುಕೊಂಡು ಆ ಕಾಲವನ್ನು ರಾಮನವಮೀ ಎಂದು ಕರೆದಿದ್ದಾರೆ. 

  3. ಹೀಗೆ ಭಾರತೀಯವಾದ ಪ್ರತಿಯೊಂದು ಹಬ್ಬಗಳನ್ನೂ ಕೂಡ ಅವುಗಳ ಅಂತ:ಸತ್ವವನ್ನು  ಅರಿತು, ಜ್ಞಾನಿಗಳಿಂದ ವಿಹಿತವಾದ ದ್ರವ್ಯ ಮತ್ತು ಕಾಲದೊಂದಿಗೆ ಆಚರಿಸುತ್ತಾ ಬಂದಾಗ ಪುರುಷಾರ್ಥಮಯವಾದ ಪರಿಪೂರ್ಣ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು.


ಹಾಗೆಯೇ ಇನ್ನಿತರ ಹಬ್ಬಗಳಾದ ಹನುಮಜ್ಜಯಂತೀ, ನಾಗರ ಪಂಚಮೀ, ವರಮಹಾಲಕ್ಷ್ಮೀ ವ್ರತ, ಕೃಷ್ಣ ಜನ್ಮಾಷ್ಟಮೀ ಉತ್ಥಾನ ದ್ವಾದಶೀ, ಗೌರೀ ಹಬ್ಬ, ನವರಾತ್ರಿ, ದೀಪಾವಳಿ, ಮಕರ ಸಂಕ್ರಾಂತಿ, ರಥಸಪ್ತಮಿ ಇತ್ಯಾದಿ  ಅನೇಕ ಹಬ್ಬಗಳ ವಿವರಗಳನ್ನೂ ಗ್ರಂಥ ಪುಂಜವು ಒಳಗೊಂಡಿದೆ. 


ಹತ್ತು ಕೈಪಿಡಿಗಳು
ಒಟ್ಟು ಪುಟಗಳು : 424
ಮೌಲ್ಯ : ₹ 625 /-

ಸೂಚನೆ : 28/09/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ